‘ಸಾಹಿತ್ಯ ಪಾರಿಭಾಷಿಕ ಮಾಲೆ’ಯ ಇಪ್ಪತ್ತನೆಯ ಪುಸ್ತಕವಿದು. ಈ ಮಾಲೆ ಪ್ರಾರಂಭವಾಗಿ ಹದಿನೆಂಟು ವರ್ಷಗಳೇ ಕಳೆದಿವೆ. ಒಂದು ಯೋಜನೆಯನ್ನು ರೂಪಿಸುವುದು, ಅದನ್ನು ಕಾರ್ಯರೂಪಕ್ಕೆ ತರುವುದು, ಸಕಾಲಕ್ಕೆ ಯೋಜನೆಯನ್ನು ಪೂರ್ಣಗೊಳಿಸುವುದು ಇದು ಸಾಂಸ್ಥಿಕ ಕೆಲಸವೇ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಈ ಯೋಜನೆ ನಾವು ಯೋಚಿಸಿದಷ್ಟು, ಕಾಲಮಿತಿಯಲ್ಲಿ ಪೂರ್ಣಗೊಳ್ಳುವುದಿಲ್ಲ ಎನಿಸಿದೆ. ಪಾರಿಭಾಷಿಕ ಮಾಲೆಗೆ ಬರೆಯುವುದು ಅಷ್ಟು ಸುಲಭದ ಕೆಲಸವೇನೂ ಅಲ್ಲ. ಈ ಕಾರ್ಯ ನಿರ್ವಹಿಸುವವರಿಗೆ ಶಾಸ್ತ್ರೀಯ ಜ್ಞಾನವೂ ಬೇಕು, ಪ್ರಾಯೋಗಿಕವಾದ ವ್ಯಾಸಂಗವೂ ಬೇಕು. ಅದರಿಂದಾಗಿ ತಾವು ಗುರುತಿಸಿದ ಲೇಖಕರಿಂದ ಒಂದು ಕೃತಿ ಸಿದ್ಧವಾಗಿ ಬರುವುದು ವಿಲಂಬವಾಗುತ್ತದೆ.

೨೦೦೫ ರಿಂದ ೨೦೦೮ರ ಈ ಮೂರು ವರ್ಷಗಳ ಅವಧಿಯಲ್ಲಿ ಈ ಮಾಲೆಯಲ್ಲಿ ಬಹಳ ಬೇಡಿಕೆಯಿದ್ದ ಸ್ತ್ರೀವಾದ, ಬಂಡಾಯ – ದಲಿತ ಸಾಹಿತ್ಯ, ವಸಾಹತೋತ್ತರ ಚಿಂತನೆ, ಸಾಹಿತ್ಯ ವಿಮರ್ಶೆ – ಈ ನಾಲ್ಕು ಪುಸ್ತಕಗಳನ್ನು ಪುನರ್ ಮುದ್ರಿಸಲಾಗಿದೆ.

‘ಸಾಂಸ್ಕೃತಿಕ ಅಧ್ಯಯನ’ ಕೃತಿಯನ್ನು ಬರೆದುಕೊಟ್ಟ ಡಾ. ರಹಮತ್ ತರೀಕೆರೆ ಅವರು ಈ ಕೃತಿಯ ಪುನರ್ ಮುದ್ರಣಕ್ಕೆ ಅನುಮತಿ ನೀಡುವುದರ ಜೊತೆಗೆ ಪರಿಷ್ಕರಿಸಿ ತಾವೇ ಆಸ್ಥೆ ವಹಿಸಿ ಡಿಟಿಪಿ ಮಾಡಿಸಿ ಕಳಿಸಿದ್ದಾರೆ. ಅವರ ಅಧ್ಯಯನ ತುಂಬ ವ್ಯಾಪಕವಾಗಿದ್ದು, ವಿವರಣೆ, ವಿಶ್ಲೇಷಣೆ ಕೂಡ ಅರ್ಥಪೂರ್ಣವಾಗಿವೆ. ನಮ್ಮ ವಿನಂತಿಯನ್ನು ಮನ್ನಿಸಿ ತುಂಬ ಪರಿಶ್ರಮವಹಿಸಿ ಇಂಥ ಮೌಲಿಕ ಕೃತಿಯನ್ನು ರಚಿಸಿಕೊಟ್ಟ ಡಾ. ರಹಮತ್ ತರೀಕೆರೆ ಅವರಿಗೆ ಹಾಗೂ ಮುದ್ರಣ ಕಾರ್ಯ ನಿರ್ವಹಿಸಿದ ಮೆ|| ಭಾಗ್ಯಂ ಬೈಂಡಿಂಗ್ ವರ್ಕ್ಸ್‌ನ ಮಾಲೀಕರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ನಮ್ಮ ಕೃತಜ್ಞತೆಗಳು.

ಡಾ. ಗೀತಾ ನಾಗಭೂಷಣ
ಮಾರ್ಚ್ ೨೦೦೮