ಈ ಪುಸ್ತಕದ ಪ್ರತಿಗಳೆಲ್ಲ ಮುಗಿದಿವೆಯೆಂದೂ ಇದಕ್ಕೆ ತುಂಬಾ ಬೇಡಿಕೆಯಿದೆಯೆಂದೂ ಇದಕ್ಕಾಗಿ ಎರಡನೆಯ ಮುದ್ರಣ ಮಾಡಬೇಕಾಗಿದೆಯೆಂದೂ ಅಕಾಡೆಮಿಯ ರಿಜಿಸ್ಟ್ರಾರರಾದ ಶ್ರೀ ಮಲ್ಲಿಕಾರ್ಜುನ ಅವರು ಬಹಳ ಹಿಂದೆಯೇ ತಿಳಿಸಿದ್ದರು. ಕೆಲವು ಪರೀಕ್ಷೆಗಳಿಗೆ ಇದನ್ನು ಪಠ್ಯಪುಸ್ತಕವನ್ನಾಗಿಯೂ ಮಾಡಲಾಗಿದೆ ಎಂದು ಕೂಡ ತಿಳಿಯಿತು. ಮರುಮುದ್ರಣ ಆಗುವುದಾದರೆ, ಕೆಲವು ಪರಿಷ್ಕಾರಗಳನ್ನು ಮಾಡಬೇಕು ಎಂದು ನನ್ನ ಮನಸ್ಸಲ್ಲಿತ್ತು. ಆದರೆ ಬೇರೆ ಬೇರೆ ಕೆಲಸಗಳ ಒತ್ತಡದಲ್ಲಿ ಈ ಕಾರ್ಯವನ್ನು ಕೂಡಲೇ ಮಾಡಿಕೊಡಲು ನನಗೆ ಸಾಧ್ಯವಾಗಲಿಲ್ಲ. ಈಗ ಸಾಧ್ಯವಾಗುತ್ತಿದೆ. ಇದನ್ನು ಬಳಸಿದ ಮತ್ತು ಬಳಸುತ್ತಿರುವ ಸಂಶೋಧಕ ಮಿತ್ರರಿಗೂ ಈ ಪರಿಷ್ಕೃತ ಮುದ್ರಣ ಮಾಡುತ್ತಿರುವ ಸಾಹಿತ್ಯ ಅಕಾಡೆಮಿಗೂ ನನ್ನ ಕೃತಜ್ಞತೆಗಳು.

ಈ ಸಂದರ್ಭದಲ್ಲಿ ಒಂದು ಆತಂಕವನ್ನು ಹೇಳಿಕೊಳ್ಳಬೇಕು ಅನಿಸುತ್ತಿದೆ. ಅದು ಕನ್ನಡದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಅಧ್ಯಯನಗಳನ್ನು ಕುರಿತದ್ದು. ನವ್ಯದ ಸಂದರ್ಭದಲ್ಲಿ ಪ್ರಚಲಿತಗೊಂಡ ಕೃತಿನಿಷ್ಠ ವಿಮರ್ಶೆಯು ತನ್ನ ಅತಿಗೆ ಹೋಗಿ, ಕೃತಿಯು ನಿರ್ಮಾಣವಾದ ಮತ್ತು ಅದು ಸಂವಹನಗೊಳ್ಳುತ್ತಿರುವ ಸಾಂಸ್ಕೃತಿಕ ಸನ್ನಿವೇಶಗಳನ್ನು ಕತ್ತರಿಸಿಬಿಟ್ಟಿತ್ತು. ಈ ಮಿತಿಯನ್ನು ಮೀರಲು ನಂತರ ಬಂದ ದಲಿತ ಬಂಡಾಯ ಚಳುವಳಿಯು, ಕೃತಿಯನ್ನು ಅದು ಹುಟ್ಟಿದ ಮತ್ತು ಸಂವಹನವಾಗುವ ಸಾಂಸ್ಕೃತಿಕ ಸನ್ನಿವೇಶದ ಜತೆಗಿಟ್ಟು ನೋಡಲು ಆರಂಭಿಸಿತು. ಮುಂದೆ ಇದು ಕೃತಿಯನ್ನು ಸೂಕ್ಷ್ಮವಾಗಿ ಆಪ್ತವಾಗಿ ಓದುವುದನ್ನು ಮತ್ತು ವಿಶ್ಲೇಷಣೆಗೆ ಒಳಪಡಿಸುವುದನ್ನೇ ಅಮುಖ್ಯ ಮಾಡುವತ್ತ ಚಲಿಸಿಬಿಟ್ಟಿತ್ತು. ಕೃತಿಯನ್ನು ಸಾಂಸ್ಕೃತಿಕವಾಗಿ ಅಧ್ಯಯನ ಮಾಡುವುದು ಎಂದರೆ, ಬೇರೆಬೇರೆ ಜ್ಞಾನಶಿಸ್ತುಗಳಿಂದ ಪಡೆದ ತಿಳಿವಳಿಕೆಯನ್ನು ಕೃತಿಯ ಚರ್ಚೆಯಲ್ಲಿ ಉಪಯುಕ್ತವಾಗುವಂತೆ ಬಳಸುವುದು, ಕೃತಿಯನ್ನು ಕೇವಲ ಕಲಾತ್ಮಕ ಮೌಲ್ಯಕ್ಕೆ ಒಳಪಡಿಸದೆ ಇರುವುದು. ಇದು ನನ್ನ ಅತಿಯಲ್ಲಿ ಕೃತಿಯ ಸಾರಾಂಶ, ಆಶಯ ಮತ್ತು ಧೋರಣೆಯ ಜತೆ ಮಾತ್ರ ಚರ್ಚೆ ಎನ್ನುವಂತಾಗಿದೆ. ಈ ಆಶಯ ಮತ್ತು ಧೋರಣೆಗಳು ಯಾವ ರೂಪದಲ್ಲಿ ಅಭಿವ್ಯಕ್ತವಾಗಿವೆಯೊ ಆ ರೂಪವನ್ನು, ಅಂದರೆ ಕೃತಿಯ ಭಾಷೆ ಶೈಲಿ ಕಥನಕ್ರಮ ಇತ್ಯಾದಿಗಳನ್ನು ಬಿಟ್ಟುಕೊಡಲಾಗುತ್ತಿದೆ. ಕೃತಿಯನ್ನು ದಾಖಲೆಯ ಹಾಗೆ ಸಮಾಜಶಾಸ್ತ್ರೀಯ ವಿವರಣೆಗೆ ಒಂದು ಆಕರವಾಗಿ ಬಳಸಲಾಗುತ್ತಿದೆ. ವಿಚಿತ್ರವೆಂದರೆ, ಇದನ್ನು ಮಾಡುತ್ತಿರುವವರಲ್ಲಿ ಹೆಚ್ಚಿನವರು ಸಾಹಿತ್ಯದ ವಿದ್ಯಾರ್ಥಿಗಳ. ದಲಿತ ಬಂಡಾಯ ಸಾಹಿತ್ಯದ ವ್ಯಾಖ್ಯೆಯು ಹುಟ್ಟಿಸಿದ ಸರಳೀಕೃತ ಮಾದರಿಗಳಿವು. ಈ ವಿಧಾನದಲ್ಲಿ ಸಾಹಿತ್ಯ ಕೃತಿಗಳನ್ನು ಸಾಂಸ್ಕೃತಿಕ ವಿಶ್ಲೇಷಣೆಗೆ ಒಳಪಡಿಸುವುದಾದರೆ, ಅಧ್ಯಯನವು ಬಹು ಬೇಗ ಅಸೂಕ್ಷ್ಮತೆಗೆ ಹೋಗುವುದು. ಕೃತಿಯನ್ನು ಕೇವಲ ಸಾಹಿತ್ಯಕವಲ್ಲದ ನೆಲೆಯಲ್ಲಿ ನೋಡುವ ಅಗತ್ಯವಿದೆ, ನಿಜ. ಹಾಗೆಂದು ಅದರ ಆಕೃತಿಯನ್ನೇ ಸೂಕ್ಷ್ಮವಾಗಿ ಅನುಸಂಧಾನ ಮಾಡಬೇಕಾಗಿಲ್ಲ ಎನ್ನುವ ಧೋರಣೆಯು, ಒಂದು ಬಗೆಯ ಅಸಾಂಸ್ಕೃತಿಕ ಅಧ್ಯಯನ ಆಗುತ್ತದೆ. ಇದು ಕೊನೆಗೊಳ್ಳಲಿ ಎಂದು ಹಾರೈಸುತ್ತೇನೆ.

ರಹಮತ್ ತರೀಕೆರೆ