ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾಗುತ್ತಿರುವ ಈ “ಸಾಹಿತ್ಯ ಪಾರಿಭಾಷಿಕ ಮಾಲೆ”ಗೆ ಪ್ರೇರಣೆ ದೊರೆತಿದ್ದು ಜಾನ್ ಡಿ. ಜಂಪ್ ಅವರ ಸಂಪಾದಕತ್ವದಲ್ಲಿ ಮೆಥುಯಿನ್ ಪ್ರಕಾಶನದವರು ಇಂಗ್ಲಿಷಿನಲ್ಲಿ ಹೊರತರುತ್ತಿರುವ ‘ಕ್ರಿಟಿಕಲ್ ಈಡಿಯಂ’ ಮಾಲೆಯ ಪುಸ್ತಕಗಳಿಂದ. ಕನ್ನಡದಲ್ಲಿ ವಿಮರ್ಶೆ ಪರಿಭಾಷೆ ಇನ್ನೂ ನಿಶ್ಚಿತ ಸ್ವರೂಪವನ್ನು ಪಡೆದುಕೊಂಡಿಲ್ಲ. ಅನೇಕ ಪರಿಕಲ್ಪನೆಗಳ ಅರ್ಥವ್ಯಾಪ್ತಿ ಸ್ಪಷ್ಟವಾಗಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಪ್ರಬುದ್ಧ ವಿಮರ್ಶೆ ಪ್ರಕಟವಾಗುತ್ತಿದ್ದರೂ ವಿಮರ್ಶೆಗೆ ಸಂಬಂಧಿಸಿದ ಮೂಲಭೂತ ಸಾಮಗ್ರಿ ತಕ್ಕ ಪ್ರಮಾಣದಲ್ಲಿ ಬಂದಿಲ್ಲ. ಈ ಅವಶ್ಯಕತೆಯನ್ನು ಪೂರೈಸುವ ದೃಷ್ಟಿಯಿಂದ ಈ ಮಾಲೆಯ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಆದರೆ ಈ ಮಾಲೆಯಲ್ಲಿ ಪ್ರಕಟವಾಗುತ್ತಿರುವ ಪುಸ್ತಕಗಳು ಯಾವುದೇ ರೀತಿಯಲ್ಲಿ ಇಂಗ್ಲಿಷ್ ಮಾಲೆಯ ಪುಸ್ತಕಗಳ ಅನುವಾದವಾಗಲಿ, ಅನುಕರಣವಾಗಲಿ ಅಲ್ಲ; ಎಲ್ಲ ರೀತಿಯಿಂದಲೂ ಇವು ಸ್ವತಂತ್ರ ಕೃತಿಗಳು.

ಈ ಮಾಲೆಯ ಪುಸ್ತಕಗಳ ವಿಷಯಗಳನ್ನು ಕನ್ನಡ ಸಾಹಿತ್ಯದ ಪ್ರಸ್ತುತತೆಯ ದೃಷ್ಟಿಯಿಂದ ಆಯ್ಕೆ ಮಾಡಲಾಗಿದೆ. ಕೆಲವು ವಿಷಯಗಳಂತೂ ಕನ್ನಡಕ್ಕೆ ಮಾತ್ರ ವಿಶಿಷ್ಟವಾದುವು. ಎಲ್ಲ ಪುಸ್ತಕಗಳಿಗೂ ಕನ್ನಡ ಸಾಹಿತ್ಯವೇ ದೃಷ್ಟಿಕೋನದ ಕೇಂದ್ರವಾಗಿದೆ. ಅನೇಕ ವಾದಗಳಿಗೂ ಪರಿಕಲ್ಪನೆಗಳಿಗೂ ಪಾಶ್ಚಾತ್ಯ ಸಾಹಿತ್ಯವೇ ಮೂಲವಾಗಿದ್ದರೂ, ಅವು ಕನ್ನಡಕ್ಕೆ ಬಂದ ಸಂದರ್ಭ, ಪಡೆದ ಬದಲಾವಣೆ, ನಡೆದ ಹೊಂದಾಣಿಕೆಗಳನ್ನು ಇಲ್ಲಿ ಮುಖ್ಯವಾಗಿ ಗಮನಿಸಲಾಗಿದೆ. ಉದಾಹರಣೆಗೆ, ‘ರೊಮ್ಯಾಂಟಿಸಿಜಂ’ ಎಂಬ ಪರಿಕಲ್ಪನೆ ಪಶ್ಚಿಮದಿಂದ ಬಂದುದಾದರೂ, ಅದು ಕನ್ನಡ ನವೋದಯದಲ್ಲಿ ಪಡೆದುಕೊಂಡ ಸ್ವರೂಪವೇ ಬೇರೆಯಾಗಿದೆ. ಇದೇ ಮಾತನ್ನು ‘ನವ್ಯತೆ’, ‘ವಾಸ್ತವತಾವಾದ’, ‘ಎಪಿಕ್ ರಂಗಭೂಮಿ’, ‘ಅಸಂಗತ’ ಇತ್ಯಾದಿಗಳ ಬಗೆಗೂ ಹೇಳಬಹುದು. ಸಂಸ್ಕೃತಿಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾದ ಈ ಅಂಶದ ಮೇಲೆ ಈ ಪುಸ್ತಕಗಳಲ್ಲಿ ಹೆಚ್ಚಿನ ಒತ್ತು ಬಿದ್ದಿದ್ದರೆ ಅದು ಸಹಜವೇ ಆಗಿದೆ. ಆಧುನಿಕ ಕನ್ನಡ ಸಾಹಿತ್ಯವೆಲ್ಲ ಪಶ್ಚಿಮದ ಅನುಕರಣೆ ಎಂಬ ತಪ್ಪು ಕಲ್ಪನೆ ಇದರಿಂದ ತಕ್ಕಮಟ್ಟಿಗಾದರೂ ಕಡಿಮೆಯಾದೀತು ಎಂದು ನಮ್ಮ ನಂಬಿಕೆ.

ಈ ಪುಸ್ತಕಗಳು ಸಾಮಾನ್ಯ ಸಾಹಿತ್ಯಾಸಕ್ತರಿಂದ ಹಿಡಿದು ಕನ್ನಡ ಎಂ.ಎ. ಮಟ್ಟದ ವಿದ್ಯಾರ್ಥಿಗಳಿಗೂ ಉಪಯುಕ್ತವಾಗುವಂತೆ ಪರಿಚಯಾತ್ಮಕವಾಗಿರಬೇಕೆಂದು ನಮ್ಮ ಉದ್ದೇಶ. ಆದರೆ ಅನೇಕ ಸಂದರ್ಭಗಳಲ್ಲಿ ಬರವಣಿಗೆ ಈ ಸೀಮಿತ ಉದ್ದೇಶವನ್ನು ದಾಟಿ ಪ್ರಬುದ್ಧ ಸಾಹಿತ್ಯಾಭ್ಯಾಸಿಗಳ ಚರ್ಚೆಗೂ ಯೋಗ್ಯವಾಗುವಷ್ಟು ಮುಂದೆ ಹೋಗಿದೆ. ಲೇಖಕರು ತಮ್ಮ ಸ್ವತಂತ್ರ ವಿಚಾರಗಳನ್ನೂ, ಒಳನೋಟಗಳನ್ನೂ, ಆಳವಾದ ಅಭ್ಯಾಸವನ್ನೂ ಒದಗಿಸಿ ಈ ಪುಸ್ತಕಗಳ ಮೌಲ್ಯವನ್ನು ಹೆಚ್ಚಿಸಿದ್ದಾರೆ.

೮೦-೧೦೦ ಪುಟಗಳ ಮಿತಿಯಲ್ಲಿ ವಿಷಯ ಆದಷ್ಟು ಸಮಗ್ರವಾಗಿ ಮತ್ತು ಅಡಕವಾಗಿ ಬರುವಂತಾಗಬೇಕೆಂಬುದು ಈ ಯೋಜನೆಯ ಒಂದು ಮುಖ್ಯ ಅಂಶ. ಆದರೆ ಪುಟಸಂಖ್ಯೆಯ ಮಿತಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿಲ್ಲ. ವಿಷಯದ ವ್ಯಾಪ್ತಿಯನ್ನು ಅವಲಂಬಿಸಿ ಕೆಲವು ಪುಸ್ತಕಗಳು ಗಾತ್ರದಲ್ಲಿ ದೊಡ್ಡವೂ ಆಗಿವೆ.

ಮಾಲೆಯಲ್ಲಿ ಸೇರಿರುವ ವಿಷಯಗಳು ಒಂದೇ ರೀತಿಯವಾಗಿಲ್ಲ. ಕೆಲವು ಸಾಹಿತ್ಯ ವಾದಗಳು, ಕೆಲವು ಪರಿಕಲ್ಪನೆಗಳು, ಕೆಲವು ಸಾಹಿತ್ಯ ಪ್ರಕಾರಗಳು. ವಿಷಯಗಳ ವೈವಿಧ್ಯ ಮತ್ತು ಭಿನ್ನ ಸ್ವರೂಪಗಳಿಂದಾಗಿ ಈ ಪುಸ್ತಕ ರಚನಾಕ್ರಮದಲ್ಲಿ ಏಕರೂಪತೆ ಇಲ್ಲ. ಆದರೂ ಪ್ರತಿಯೊಂದರಲ್ಲಿ ವ್ಯಾಖ್ಯೆ, ಸ್ವರೂಪ, ಸಾಮಾಜಿಕ ಸಂದರ್ಭ, ತಾತ್ವಿಕ ಹಿನ್ನೆಲೆ, ಮುಖ್ಯ ವೈಶಿಷ್ಟ್ಯಗಳು, ಪಶ್ಚಿಮದಲ್ಲಿ ಬೆಳೆದು ಬಂದ ರೀತಿ, ಕನ್ನಡದಲ್ಲಿ ಬಂದಾಗ ನಡೆದ ಹೊಂದಾಣಿಕೆ, ಮುಖ್ಯ ಸಾಹಿತ್ಯ ಕೃತಿಗಳಲ್ಲಿ ಅವುಗಳ ಅಭಿವ್ಯಕ್ತಿ – ಈ ಕ್ರಮವನ್ನು, ಸ್ಥೂಲವಾಗಿ ಇರಿಸಿಕೊಂಡಿದೆ. ಪಶ್ಚಿಮದ ಪರಿಕಲ್ಪನೆಗಳಿಗೆ ಸಂವಾದಿಯಾದ ಭಾರತೀಯ ಸಾಹಿತ್ಯ ಮೀಮಾಂಸೆಯಲ್ಲಿಯ ಪರಿಕಲ್ಪನೆಗಳೊಂದಿಗೆ ತುಲನೆಯೂ ಇದೆ. ವಿಷಯ ನಿರೂಪಣೆ ಆದಷ್ಟು ವಸ್ತುನಿಷ್ಠವಾಗಿರುವಂತೆ ನೋಡಿಕೊಳ್ಳಲಾಗಿದೆ.

ಪಾರಿಭಾಷಿಕ ಶಬ್ದಗಳ ಬಳಕೆಯಲ್ಲಿ ನಮ್ಮಲ್ಲಿ ಬಹಳಷ್ಟು ಗೊಂದಲವಿದೆ. ಒಂದೇ ಇಂಗ್ಲಿಷ್ ಶಬ್ದಕ್ಕೆ ಕನ್ನಡದಲ್ಲಿ ಅನೇಕ ಸಮಾನಾರ್ಥಕ ಶಬ್ದಗಳು ಬಳಕೆಗೆ ಬಂದಿವೆ. ಬೇರೆಬೇರೆ ಲೇಖಕರು ಬೇರೆ ಬೇರೆ ಶಬ್ದಗಳನ್ನು ಬಳಸುತ್ತಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ಒಬ್ಬರೇ ಲೇಖಕರು ಬೇರೆಬೇರೆ ಕಡೆ ಬೇರೆಬೇರೆ ಶಬ್ದಗಳನ್ನು ಬಳಸಿರುವದೂ ಇದೆ. ಈ ಸಮಸ್ಯೆಯನ್ನು ಕೊನೆಯದಾಗಿ ಪರಿಹರಿಸುವ ಮಹತ್ವಾಕಾಂಕ್ಷೆಯೇನೂ ಈ ಮಾಲೆಗೆ ಇಲ್ಲ. ಆದರೂ ಸಾಧ್ಯವಾದಷ್ಟು ಏಕರೂಪತೆ ತರುವ ಪ್ರಯತ್ನ ಮಾಡಲಾಗಿದೆ. ಅಗತ್ಯ ಬಿದ್ದಕಡೆ ಬಳಕೆಯಲ್ಲಿರುವ ಇತರ ಪರ್ಯಾಯ ಶಬ್ದಗಳನ್ನೂ ಸೂಚಿಸಲಾಗಿದೆ. ಅಪರಿಚಿತ ಮತ್ತು ಹೊಸದಾಗಿ ರೂಪಿಸಿದ ಶಬ್ದಗಳಿಗೆ ಕಂಸಿನಲ್ಲಿ ಮೂಲರೂಪ ಕೊಡಲಾಗಿದೆ. ಅನುಬಂಧದಲ್ಲಿಯ ‘ಪಾರಿಭಾಷಿಕ ಪದಸೂಚಿ’ಯನ್ನು ಗಮನಿಸಬೇಕು.

ಸಾಧ್ಯವಿದ್ದಷ್ಟೂ, ಇಂಗ್ಲಿಷಿನ ಉದ್ದೃತ ಭಾಗಗಳನ್ನು ಕನ್ನಡದಲ್ಲಿ ಅನುವಾದಿಸಿ ಕೊಟ್ಟಿದೆ. ಇಲ್ಲವೆ ಆ ಮಾತುಗಳ ಚರ್ಚೆಯಲ್ಲಿ ಅರ್ಥ ಸ್ಪಷ್ಟವಾಗುವಂತೆ ಮಾಡಲಾಗಿದೆ.

ಕೊನೆಯಲ್ಲಿ ಅಭ್ಯಾಸಸೂಚಿಯೊಂದು ಇದ್ದು, ಅವರಲ್ಲಿ ಆಯಾ ಪುಸ್ತಕದಲ್ಲಿ ಉದ್ಧರಿಸಿದ ಇಲ್ಲವೆ ಚರ್ಚಿಸಿದ ಎಲ್ಲ ಆಕರ ಗ್ರಂಥಗಳ ಸಂಪೂರ್ಣ ವಿವರಗಳನ್ನು ನೋಡಬಹುದು. ಇದರಲ್ಲಿ ಪ್ರಾಥಮಿಕ ಮೂಲಗಳನ್ನು ಅಥವಾ ಸೃಜನಶೀಲ ಕೃತಿಗಳನ್ನು ಸೇರಿಸಿಲ್ಲ. ಆದರೆ ಆಯಾ ವಿಷಯವನ್ನು ಕುರಿತು ಹೆಚ್ಚಿನ ಅಭ್ಯಾಸಕ್ಕೆ ಉಪಯುಕ್ತವಾದ ಗ್ರಂಥಗಳನ್ನು ಇದರಲ್ಲಿಯೇ ಸೇರಿಸಲಾಗಿದೆ.

೧೯೯೦ರಲ್ಲಿ ಆರಂಭವಾದ ಈ ಮಾಲೆಯ ಪುಸ್ತಕಗಳಿಗೆ ಓದುಗರಿಂದ ಬಂದ ಉತ್ಸಾಹದ ಪ್ರತಿಕ್ರಿಯೆಯೇ ಇದರ ಉಪಯುಕ್ತತೆಗೆ ಸಾಕ್ಷಿಯಾಗಿದೆ. ಕೆಲವು ಪುಸ್ತಕಗಳು ಈಗಾಗಲೇ ನಾಲ್ಕನೆಯ ಮುದ್ರಣವನ್ನು ಕಂಡಿರುವುದು ಒಂದು ವಿಶೇಷವೆಂದೇ ಹೇಳಬೇಕು.

ಈ ಮಾಲೆಗೆ ಇದೀಗ ಡಾ. ರಹಮತ್ ತರೀಕೆರೆಯವರ “ಸಾಂಸ್ಕೃತಿಕ ಅಧ್ಯಯನ” ಹೊಸದಾಗಿ ಸೇರ್ಪಡೆಯಾಗುತ್ತಿದೆ. ಕನ್ನಡದಲ್ಲಿ ಬಹುಮುಖಿಯಾಗಿ ಸಂಸ್ಕೃತಿಯ ಅಧ್ಯಯನಗಳು ನಡೆಯುತ್ತಿದ್ದರೂ, ಅವಕ್ಕೊಂದು ಸೈದ್ಧಾಂತಿಕ ನಿರ್ವಚನ ಸಿಕ್ಕಿರಲಿಲ್ಲ. ವಸಾಹತೋತ್ತರ ಚಿಂತನೆಗಳ ಹಿನ್ನೆಲೆಯಲ್ಲಿ ಇಂಥದೊಂದು ಚರ್ಚೆ ಅಗತ್ಯವಾಗಿತ್ತು. ಅದನ್ನು ಸಮರ್ಥವಾಗಿ ವ್ಯಾಪಕ ಅಧ್ಯಯನದಿಂದ ತುಂಬಿಕೊಟ್ಟ ಡಾ. ತರೀಕೆರೆಯವರಿಗೆ ನಾನು ಕೃತಜ್ಞ.

– ಗಿರಡ್ಡಿ ಗೋವಿಂದರಾಜ