ಅರ್ಥದ ಎಳೆದಾಟ

‘ನಮ್ಮ ಸಂಸ್ಕೃತಿ ಪರಂಪರೆಗಳು ಭವ್ಯವಾದವು. ಪುರಾತನವಾದವು, ಜಾಗತೀಕರಣದಿಂದ ಅವುಗಳ ಮೇಲೆ ಆಕ್ರಮಣವಾಗುತ್ತಿದೆ, ನಾವು ಅವನ್ನು ರಕ್ಷಿಸಬೇಕು’ – ಇಂಥ ಮಾತುಗಳನ್ನು ನಾವು ಸಾಮಾನ್ಯವಾಗಿ ಕೇಳುತ್ತೇವೆ. ಇವನ್ನು ಧಾರ್ಮಿಕ ನಾಯಕರು, ರಾಜಕಾರಣಿಗಳು ಮಾತ್ರವಲ್ಲ, ವಿದ್ವಾಂಸರೂ ಆಡುತ್ತಾರೆ. ಈ ಮಾತುಗಳನ್ನು ಕೇಳುವಾಗ ‘ಸಂಸ್ಕೃತಿ’ಯ ಬಗ್ಗೆ ತಟ್ಟನೆ ಮನಸ್ಸಿನಲ್ಲಿ ಮೂಡುವ ಭಾವವೆಂದರೆ – ಸಂಸ್ಕೃತಿ ಎಂಬುದು ನಮ್ಮ ಧರ್ಮದ ಅಥವಾ ದೇಶದ ಒಂದು ಸಾಂಕೇತಿಕ ಗುರುತು (ಐಡೆಂಟಿಟಿ), ಅದು ಪವಿತ್ರವೂ ಪ್ರಾಚೀನವೂ ಆದುದು, ಹಿರೀಕರಿಂದ ಬಂದಿದ್ದು, ನಾವದನ್ನು ಅದರಿಸಬೇಕು, ಅನುಸರಿಸಬೇಕು, ಮಾತ್ರವಲ್ಲ ಅದನ್ನು ಅನ್ಯರ ಆಕ್ರಮಣಗಳಿಂದ ರಕ್ಷಿಸಬೇಕು – ಇತ್ಯಾದಿ.

ಇವೆಲ್ಲ ‘ಸಂಸ್ಕೃತಿ’ ಪರಿಕಲ್ಪನೆಗೆ ಇರುವ ಸಾಮಾನ್ಯವೂ ಜನಪ್ರಿಯವೂ ಆದ ಅರ್ಥದಿಂದ ಹುಟ್ಟಿದ ಅಭಿಪ್ರಾಯಗಳು. ಆದರೆ ಇವು ಸಂಸ್ಕೃತಿಗಿರುವ ಅನೇಕ ಅರ್ಥಗಳಲ್ಲಿ ಒಂದನ್ನು ಮಾತ್ರ ಪ್ರತಿನಿಧಿಸುತ್ತವೆ. ಸಾಂಸ್ಕೃತಿಕ ಅಧ್ಯಯನಗಳಿಗೆ ಬಂದರೆ ಈ ಮೇಲಿನ ಜನಪ್ರಿಯ ಅರ್ಥಗಳು ಮುಖ್ಯವಾಗುವುದಿಲ್ಲ. ಈ ಅರ್ಥಗಳನ್ನು ನಂಬಿದವರಿಗೆ ‘ಕರ್ನಾಟಕದ ದೇವಾಲಯಗಳು : ಒಂದು ಸಾಂಸ್ಕೃತಿಕ ಅಧ್ಯಯನ’ ಎಂದಾಗ ಸಮಸ್ಯೆ ಆಗುವುದಿಲ್ಲ. ‘ಕನ್ನಡ ಬೈಗುಳಗಳು : ಒಂದು ಸಾಂಸ್ಕೃತಿಕ ಅಧ್ಯಯನ’  ಅಥವಾ ‘ಪ್ರಾಚೀನ ಕರ್ನಾಟಕದ ವೇಶ್ಯಾವಾಟಿಕೆಗಳು : ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯ ಬಂದಾಗ ಗಾಬರಿಯಾಗುತ್ತದೆ. ಸಂಗೀತ ಸಾಹಿತ್ಯ ಧರ್ಮ ಕಲೆ ಮುಂತಾದವನ್ನು ಸಂಸ್ಕೃತಿಯ ಚೌಕಟ್ಟಿನಲ್ಲಿ ಹೀಗೆ ನೋಡುವುದು ನಮಗೆ ಅಭ್ಯಾಸವಾಗಿದೆ. ಆದರೆ ನೈತಿಕವಾಗಿ ‘ಕೇಡು’ಗಳೆಂದು ತಿಳಿಯಲಾಗಿರುವ ಬೈಗುಳ, ವೇಶ್ಯಾವಾಟಿಕೆ, ಅಸ್ಪೃಶ್ಯತೆ ಇವನ್ನೆಲ್ಲ ಸಂಸ್ಕೃತಿಯ ಹೆಸರಲ್ಲಿ ಚರ್ಚಿಸುವುದು ಹೇಗೆ ಎಂದು ಗೊಂದಲ ಹುಟ್ಟುತ್ತದೆ. ಇದಕ್ಕೆಲ್ಲ ಕಾರಣ, ಸಂಸ್ಕೃತಿಯನ್ನು ‘ಹಿರೀಕರು ಮಾಡಿದ ಪವಿತ್ರ ಆದರ್ಶಮೌಲ್ಯಗಳ ಸಾಧನೆ’ ಎಂಬ ಭಾವನಾತ್ಮಕ ಮತ್ತು ಏಕರೂಪೀ ಅರ್ಥದಲ್ಲಿ ಗ್ರಹಿಸಿರುವುದೇ ಆಗಿದೆ.

ಆದರೆ ಸಂಸ್ಕೃತಿಗೆ ಈ ಮೊದಲು ಕಾಣಿಸಿದ ಜನಪ್ರಿಯ ಅರ್ಥದಿಂದ ಹಿಡಿದು, ಸಂಕೀರ್ಣವಾದ ತಾತ್ವಿಕ ಅರ್ಥಗಳವರೆಗೆ ಅನೇಕ ಸ್ತರಗಳಿವೆ. ಈ ಸ್ತರಗಳಿಗೆ ಬೇರೆ ಬೇರೆ ಜ್ಞಾನಕ್ಷೇತ್ರಗಳಲ್ಲಿ ಅವುಗಳದೇ ಆದ ಆಯಾಮಗಳಿವೆ. ಈ ಅರ್ಥಸ್ತರಗಳೂ ಅವುಗಳ ಆಯಾಮಗಳೂ ನಿರಂತರ ಬದಲಾಗುತ್ತಾ ಬಂದಿವೆ. ಆದ್ದರಿಂದ ಸಾಂಸ್ಕೃತಿಕ ಅಧ್ಯಯನಗಳ ಚರ್ಚೆಗೆ ಮೊದಲು, ‘ಸಂಸ್ಕೃತಿ’ ಶಬ್ದದ ಅರ್ಥವನ್ನೂ ಚರಿತ್ರೆಯನ್ನೂ ತಿಳಿಯುವುದು ಅಗತ್ಯವಾಗಿದೆ. ಕನ್ನಡದಲ್ಲಿ ‘ಸಂಸ್ಕೃತಿ’ ಎಂಬುದು ಕೊನೇ ಪಕ್ಷ ಏಳು ಅರ್ಥಗಳಲ್ಲಿ ಬಳಕೆಯಾಗುತ್ತದೆ. ಈ ಕೆಳಗಿನ ವ್ಯಾಕ್ಯಗಳನ್ನು ಗಮನಿಸಬೇಕು:

ಅ) ‘ಕರ್ನಾಟಕದ ಸಿದ್ದಿಯರಿಗೆ ಆಫ್ರಿಕನ್ ಮೂಲದ ತಮ್ಮ ಸಂಸ್ಕೃತಿಯನ್ನು ಪರಿಸರದ ಅನ್ಯ ಸಂಸ್ಕೃತಿಗಳ ಪ್ರಭಾವದಿಂದ ತಪ್ಪಿಸಿ ದ್ವೀಪದಂತೆ ಇರಿಸಿಕೊಳ್ಳಲು ಸಾಧ್ಯವಾಗಲಿಲ್ಲ’. ಈ ವಾಕ್ಯದಲ್ಲಿ ಸಂಸ್ಕೃತಿ ಎಂದರೆ ಜೀವನಕ್ರಮ ಎಂದರ್ಥ.

ಆ) ‘ಪಾಶ್ಯಾತ್ಯ ಜೀವನ ಕ್ರಮವು ಹೊಸ ತಲೆಮಾರಿನ ಯುವಕರನ್ನು ಸಂಸ್ಕೃತಿಹೀನರನ್ನಾಗಿ ಮಾಡಿದೆ’. ಇಲ್ಲಿ ಸಂಸ್ಕೃತಿ ಎಂಬುದು ನಾವು ಮನ್ನಿಸುವ ಯಾವುದೋ ಒಂದು ಸಭ್ಯ ಸಂಸ್ಕಾರ, ಮೌಲ್ಯಪ್ರಜ್ಞೆ.

ಇ) ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’. ಇಲ್ಲಿ ಸಾಂಸ್ಕೃತಿಕ ಎಂದರೆ, ಸಾಹಿತ್ಯಕ, ಸಾಮಾಜಿಕ, ಭಾಷಿಕ, ಆರ್ಥಿಕ ರಾಜಕೀಯ ಮುಂತಾಗಿ ಬಹುಶಿಸ್ತೀಯವಾದ ಆಯಾಮಗಳಲ್ಲಿ ಪರಿಶೀಲನೆ ಮಾಡುವುದು ಎಂಬ ಗ್ರಹಿಕೆಯಿದೆ.

ಈ) ‘ಗೂಂಡಾ ಸಂಸ್ಕೃತಿಯು ಈಗ ಮಹಾನಗರಗಳ ಜೀವನದ ಅಂಗವಾಗಿ ಹೋಗಿದೆ’ ಎಂಬಲ್ಲಿ ಸಂಸ್ಕೃತಿ ಶಬ್ದವು ಸಾಮಾಜಿಕವಾಗಿ ನೆಲೆಗೊಂಡಿರುವ ವರ್ತನೆ, ಸಹಜ ಸ್ವಭಾವ ಎಂಬರ್ಥದಲ್ಲಿ ಬಳಕೆಯಾಗುತ್ತದೆ.

ಉ) ‘ಸರಕಾರವು ಒಂದು ಸೂಕ್ತವಾದ ಸಾಂಸ್ಕೃತಿಕ ನೀತಿಯನ್ನು ಹೊಂದಿಲ್ಲ’ ಎನ್ನುವಲ್ಲಿ, ಸಂಸ್ಕೃತಿಯ ಅರ್ಥವು ಸಾಹಿತ್ಯ, ಸಂಗೀತ, ನಾಟಕ, ನೃತ್ಯ, ಇತ್ಯಾದಿ ಕಲೆಗಳನ್ನು ಕುರಿತ ಚಟುವಟಿಕೆ ಎಂದಾಗಿದೆ.

ಊ) ‘ನಮ್ಮ ಲೇಖಕರು ತಮ್ಮ ಸಾಂಸ್ಕೃತಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿದೆ’ – ಇಲ್ಲಿ ಸಾಂಸ್ಕೃತಿಕ ಎಂದರೆ, ಸಾಮಾಜಿಕ ಎಂದರ್ಥ.

ಎ) ಕನ್ನಡದಲ್ಲಿ ಚರಿತ್ರೆಗೆ ಸಂಬಂಧಿಸಿದ ಪಠ್ಯಪುಸ್ತಕಗಳು ‘ಕರ್ನಾಟಕ ಸಂಸ್ಕೃತಿ’ ‘ಭಾರತೀಯ ಸಂಸ್ಕೃತಿ’ ಎಂಬ ತಲೆಬರಹಗಳಲ್ಲಿ ಪ್ರಕಟವಾಗುತ್ತದೆ. ಇಲ್ಲಿ ಸಂಸ್ಕೃತಿ ಎಂದರೆ ಚರಿತ್ರೆ ಎಂಬ ಸೂಚನೆಯಿದೆ.

ಇವನ್ನೆಲ್ಲ ಗಮನಿಸಿದರೆ ‘ಸಂಸ್ಕೃತಿ’ ಎಂಬುದಕ್ಕೆ ನಾವು ರಕ್ಷಿಸಿಕೊಳ್ಳಬೇಕಾದ ನಮ್ಮ ಪ್ರಾಚೀನರ ಪರಂಪರೆ ಎಂಬ ಜನಪ್ರಿಯ ಅರ್ಥ ಮಾತ್ರವಲ್ಲ. ಸಭ್ಯತೆ, ಜೀವನಕ್ರಮ, ಸಹಜಸ್ವಭಾವ, ಬಹುಶಿಸ್ತೀಯತೆ, ಕಲಾಜಗತ್ತಿಗೆ ಸಂಬಂಧಿಸಿದ್ದು, ಸಾಮಾಜಿಕವಾದುದು, ಇತಿಹಾಸ ಮುಂತಾದ ಅರ್ಥಗಳೂ ಇವೆಯೆಂದು ಗೊತ್ತಾಗುತ್ತದೆ. ಇಷ್ಟೊಂದು ಅರ್ಥಗಳಲ್ಲಿ ಬಳಕೆಯಾಗುತ್ತಿರುವ ಈ ಶಬ್ದದ ನಿಜವಾದ ಅರ್ಥವೇನು? ಈ ಶಬ್ದ ಯಾವಾಗ ಕನ್ನಡದಲ್ಲಿ ಬಳಕೆಗೆ ಬಂದಿತು? ಇಂಗ್ಲಿಷಿನಲ್ಲಿ ಯಾವರ್ಥದಲ್ಲಿ ಬಳಕೆಯಾಗುತ್ತದೆ? ಇದರ ಚರಿತ್ರೆ ತಿಳಿಯಬೇಕು.

ವ್ಯಾಪಕ ಬಳಕೆ

೨೦ನೇ ಶತಮಾನದ ಬೌದ್ಧಿಕ ಚರ್ಚೆಗಳಲ್ಲಿ ಅಪಾರವಾಗಿ ಬಳಕೆಯಾದ ಶಬ್ದಗಳಲ್ಲಿ ಸಂಸ್ಕೃತಿಯೂ ಒಂದು. ಈ ಶಬ್ದವನ್ನು ಬಳಸಿಕೊಂಡು ಹುಟ್ಟಿರುವ ವಿವಿಧ ಪರಿಭಾಷೆಗಳನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ. ಧರ್ಮಗಳ ಹೆಸರ ಜತೆ ಸೇರಿಸಿ ಹಿಂದೂ ಸಂಸ್ಕೃತಿ, ಇಸ್ಲಾಂ ಸಂಸ್ಕೃತಿ ಎಂಬ ಪರಿಕಲ್ಪನೆಗಳು ಹುಟ್ಟಿವೆ. ಜಾತಿ ಬುಡಕಟ್ಟುಗಳಿಗೆ ಹೊಂದಿಸಿ ಸಿದ್ದಿಯರ ಸಂಸ್ಕೃತಿ, ದಲಿತ ಸಂಸ್ಕೃತಿ ಎಂಬ ಪರಿಕಲ್ಪನೆಗಳು ಹುಟ್ಟಿವೆ. ಜರ್ಮನ್ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಎಂಬ ದೇಶವಾಚಿಕಗಳಲ್ಲಿ ಇದು ಬಳಕೆಯಾಗಿದೆ. ಮರಾಠಿ ಸಂಸ್ಕೃತಿ, ಕನ್ನಡ ಸಂಸ್ಕೃತಿ ಇವು ಭಾಷಾವಾಚಿಕಗಳು. ಬಂಗಾಳ ಅಥವಾ ಕರ್ನಾಟಕ ಸಂಸ್ಕೃತಿ ಎಂಬಲ್ಲಿ ಇದು ಪ್ರಾಂತ್ಯವಾರು ಪರಿಭಾಷೆಯಾಗಿದೆ. ನಗರ ಇಲ್ಲವೆ ಗ್ರಾಮೀಣ ಸಂಸ್ಕೃತಿ ಎನ್ನುವುದುಂಟು. ಪರ್ಯಾಯ ಸಂಸ್ಕೃತಿ, ಉಪಸಂಸ್ಕೃತಿ, ಪ್ರತಿಸಂಸ್ಕೃತಿ – ಹೀಗೆ ಬೇರೆ ಬೇರೆ ಆಶಯ ಪ್ರಧಾನವಾದ ಸೈದ್ಧಾಂತಿಕ ಪರಿಕಲ್ಪನೆಗಳು ಸೃಷ್ಟಿಯಾಗಿವೆ. ಕುವೆಂಪು ‘ಸಂಸ್ಕೃತಿ ಕ್ರಾಂತಿ’ ಎಂಬ ಪರಿಕಲ್ಪನೆ ಬಳಸುತ್ತಾರೆ. ಸಿದ್ದಲಿಂಗಯ್ಯನವರ “ಹೊಲೆಮಾದಿಗರ ಹಾಡು” ಹಿನ್ನುಡಿಯಲ್ಲಿ ‘ಸ್ಥಗಿತ ಸಂಸ್ಕೃತಿ’ ಎಂಬ ಪರಿಕಲ್ಪನೆಯ ಪ್ರಯೋಗವಿದೆ. ಲೆನಿನ್ ದುಡಿವ ವರ್ಗದ ಸಂಸ್ಕೃತಿ, ಕಾರ್ಮಿಕರ ಅಂತಾರಾಷ್ಟ್ರೀಯ ಸಂಸ್ಕೃತಿ ಎಂಬ ಪರಿಕಲ್ಪನೆಗಳ ಚರ್ಚೆ ಮಾಡುತ್ತಾನೆ (೧೯೬೭). ಸಮಾಜವಾದಿ ಸಂಸ್ಕೃತಿ, ಬಂಡವಾಳಶಾಹಿ ಸಂಸ್ಕೃತಿ, ಪ್ರಜಾಪ್ರಭುತ್ವವಾದಿ ಸಂಸ್ಕೃತಿ ಎಂಬ ಪರಿಭಾಷೆಯನ್ನು ಮಾವೊ ಬಳಸುತ್ತಾನೆ. ಕೃಷಿಸಂಸ್ಕೃತಿ, ಪುಸ್ತಕಸಂಸ್ಕೃತಿ, ಸಿನಿಮಾಸಂಸ್ಕೃತಿ, ಯುದ್ಧಸಂಸ್ಕೃತಿ, ಹಿಪ್ಪಿಸಂಸ್ಕೃತಿ, ಬಾಂಬ್ ಸಂಸ್ಕೃತಿ – ಇತ್ಯಾದಿ ಪರಿಭಾಷೆಗಳೂ ಪರಿಕಲ್ಪನೆಗಳೂ ಹುಟ್ಟಿವೆ. ಅಡಿಗರು ತಮ್ಮ ಒಂದು ಕವನದಲ್ಲಿ ‘ಬೊಗಳೆ ಸಂಸ್ಕೃತಿ’ ಎಂಬ ಪದವನ್ನು ಬಳಸುತ್ತಾರೆ. ದಲಿತ ಸಂಘರ್ಷ ಸಮಿತಿಯು ಒಂದು ಕಡೆ ಮಾಡಿದ್ದ ಗೋಡೆಬರೆಹದಲ್ಲಿ “ಅವ್ವ ಸಂಸ್ಕೃತಿಯ ಬಿ ಕೃಷ್ಣಪ್ಪನವರಿಗೆ ಜಯವಾಗಲಿ” ಎಂದಿತ್ತು.

‘ಸಂಸ್ಕೃತಿ’ ಶಬ್ದ ಬಳಸಿಕೊಂಡು ಹಲವಾರು ಆಶಯಗಳಲ್ಲಿ ಪರಿಭಾಷೆಗಳೂ ಪರಿಕಲ್ಪನೆಗಳೂ ಹುಟ್ಟುತ್ತಿವೆ. ಈ ಬೆಳವಣಿಗೆ ಸಂಸ್ಕೃತಿಯ ಅರ್ಥವೈವಿಧ್ಯವನ್ನು ವಿಸ್ತರಿಸಿಬಿಟ್ಟಿದೆ. ಮೇಲೆ ಉಲ್ಲೇಖಿಸಿದ ಹೆಚ್ಚಿನ ವಿಶೇಷಣಗಳಲ್ಲಿ ಸಂಸ್ಕೃತಿ ಶಬ್ದವು ಗುಣಸೂಚಕವಾಗಿದೆ. ಉದಾ. ನಗರ ಸಂಸ್ಕೃತಿ ಎಂದರೆ ನಗರಕ್ಕೆ ವಿಶಿಷ್ಟವಾದ ಗಡಿಬಿಡಿ, ಯಾಂತ್ರಿಕತೆ, ನಾಜೂಕುತನ ಇತ್ಯಾದಿ ಗುಣಲಕ್ಷಣಗಳನ್ನು ಒಳಗೊಂಡಿದೆ ಎಂದರ್ಥ. ಸಂಸ್ಕೃತಿ ಪರಿಕಲ್ಪನೆಯ ಈ ಬಹುರೂಪೀ ಅರ್ಥಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಬಳಕೆಯಾಗುತ್ತಿರುವ ‘ಸಾಂಸ್ಕೃತಿಕ ಅಧ್ಯಯನ’ದ ಅರ್ಥವೂ ಸೇರಿದೆ.

ವಿಶೇಷವೆಂದರೆ, ಸಂಸ್ಕೃತಿ ಪರಿಭಾಷೆಯು ಜನಪ್ರಿಯ ಹಾಗೂ ಶೈಕ್ಷಣಿಕವಾದ ಅರ್ಥಗಳ ಜತೆಗೆ, ರಾಜಕಾರಣದಲ್ಲೂ ನಿರ್ದಿಷ್ಟ ಅರ್ಥಗಳಲ್ಲಿ ಬಳಕೆಯಾಗುತ್ತಿರುವುದು. ಅದರಲ್ಲಿ ಮೊದಲನೆಯದು, ಕಾರ್ಯಕ್ರಮಗಳಿಗೆ ಸಂಬಂಧಿಸಿದ್ದು. ಸರಕಾರದಲ್ಲಿ  ಸಂಸ್ಕೃತಿ ಇಲಾಖೆ ಇದ್ದು, ಅದು ಕೋಟ್ಯಂತರ ಹಣವನ್ನು ‘ಸಾಂಸ್ಕೃತಿಕ’ ಎಂದು ತಾನು ಭಾವಿಸಿರುವ ಬಾಬತ್ತುಗಳಿಗೆ ಖರ್ಚು ಮಾಡುತ್ತದೆ. ಉದಾ. ‘ಹಂಪಿ ಉತ್ಸವ’ದಂಥ ಕಾರ್ಯಕ್ರಮ ಮೂಲಕ ತಾನು ನಾಡಿನ ಸಾಂಸ್ಕೃತಿಕ ಪರಂಪರೆಯ ಪೋಷಣೆ ಮಾಡುತ್ತಿದ್ದೇನೆ ಎಂದು ಅದು ತೋರಿಸಿಕೊಳ್ಳುತ್ತದೆ. ಎರಡನೆಯದಾಗಿ, ‘ಸಂಸ್ಕೃತಿ’ ಎಂಬುದು ಭಾರತದ ಬಲಪಂಥೀಯ ರಾಜಕಾರಣದಲ್ಲಿ ಒಂದು ಪರಿಭಾಷೆಯಾಗಿರುವುದು. ‘ಸಾಂಸ್ಕೃತಿಕ ರಾಷ್ಟ್ರೀಯತೆ’ ಎಂಬ ಪರಿಕಲ್ಪನೆಯ ದೇಶಭಕ್ತಿಯನ್ನು ಹುಟ್ಟಿದ ಧರ್ಮದ ಆಧಾರದ ಮೇಲೆ ನಿರ್ಧರಿಸುತ್ತದೆ. ಹೀಗೆ ಸಂಸ್ಕೃತಿಯು ಭಾವುಕ ಅರ್ಥದಿಂದ ಹಿಡಿದು ಶೈಕ್ಷಣಿಕ ಚಟುವಟಿಕೆಗಳಲ್ಲಿರುವ ಅಧ್ಯಯನ ವಿಧಾನದ ವಿಶೇಷಣವಾಗಿ, ಗುಣಸೂಚಕ ಅರ್ಥದಿಂದ ಹಿಡಿದು ಕೋಮುರಾಜಕಾರಣದಲ್ಲಿ ಜನರನ್ನು ವಿಭಜಿಸುವ ಮಾಪಕವಾಗಿ ಬಳಕೆಯಾಗುತ್ತಿದೆ. ಇಷ್ಟು ವ್ಯಾಪಕವೂ ವಿಭಿನ್ನವೂ ಆದ ಅರ್ಥಗಳಲ್ಲಿ ಬಳಕೆಯಾಗುತ್ತಿರುವ ಈ ಶಬ್ದದ ಮೂಲ ಯಾವುದು? ಪರಿಭಾಷೆಯಾಗಿ ಇದು ನಡೆದು ಬಂದ ಹಾದಿ ಯಾವುದು? ಈ ಚರಿತ್ರೆ ಕುತೂಹಲಕರವಾಗಿದೆ.

ಸಂಸ್ಕೃತಿ ಎಂಬುದು ಇದೆಯೇ?

ಮೊದಲನೆಯ ಪ್ರಶ್ನೆ ಎಂದರೆ, ‘ಸಂಸ್ಕೃತಿ’ ಎಂಬುದು ನಿಜವಾಗಿ ಇದೆಯೇ? ತಾತ್ವಿಕ ಉತ್ತರ ಕೊಡುವುದಾದರೆ, ಸಂಸ್ಕೃತಿ ಎನ್ನುವಂತಹ ಒಂದು ಸಂಗತಿ ವಾಸ್ತವದಲ್ಲಿ ಇಲ್ಲ. ‘ಪರಂಪರೆ’ ‘ನಾಗರಿಕತೆ’ ಮುಂತಾದವುಗಳಂತೆ ಇದೂ ಒಂದು ಬೌದ್ಧಿಕ ರಚನೆ; ನಾವು ತುಂಬಿದ ಅರ್ಥವನ್ನು ಪಡೆದುಕೊಂಡು ಬಳಕೆಯಾಗುತ್ತಿರುವ ಪರಿಭಾಷೆ. ಎಂತಲೇ ಜನಸಾಮಾನ್ಯರ ನಿಘಂಟಿನಲ್ಲಿ ಈ ಶಬ್ದವಿಲ್ಲ. ‘ನಿಮ್ಮ ಜಾತಿ ಧರ್ಮ ಯಾವುದು?’ ಎಂದು ಕೇಳಿದರೆ ಜನ ಸಲೀಸಾಗಿ ಉತ್ತರಿಸುತ್ತಾರೆ. ‘ನಿಮ್ಮ ಸಂಸ್ಕೃತಿ ಯಾವುದು?’ ಎಂದರೆ ತಡಬಡಾಯಿಸುತ್ತಾರೆ. ಯಾಕೆಂದರೆ ಜಾತಿಮತಗಳು ಸಾಮಾಜಿಕ ವಾಸ್ತವ. ‘ಸಂಸ್ಕೃತಿ’ ಎಂಬುದು ಬೌದ್ಧಿಕ ಚರ್ಚೆ ಮಾಡುವವರು ಬಳಸುವ ಒಂದು ಪರಿಭಾಷೆ. ಸಂಸ್ಕೃತಿ ಶಬ್ದವನ್ನು ಪರಿಭಾಷೆಯಾಗಿ ಬಳಸುತ್ತಿರುವ ವಿದ್ವಾಂಸರಲ್ಲೂ ಈ ಕುರಿತು ಖಚಿತ ಉತ್ತರವಿಲ್ಲ. ಸಿಕ್ಕರೂ ಅವುಗಳಲ್ಲಿ ಏಕಾಭಿಪ್ರಾಯವಿಲ್ಲ. ಹಾಗೆ ಕಂಡರೆ, ಕನ್ನಡದಲ್ಲಿ ಸಂಸ್ಕೃತಿಗೆ ಒಂದು ಸಂವಾದಿಯಾದ ಶಬ್ದವೇ ಇಲ್ಲ. ಇರುವ ‘ಸಂಸ್ಕೃತಿ’ ಎಂಬ ಶಬ್ದ ಸಂಸ್ಕೃತದ್ದು. ಕನ್ನಡದ ಸಂಸ್ಕೃತಿ ಚಿಂತಕರಲ್ಲಿ ಪ್ರಮುಖರಾದ ಡಿವಿಜಿಯವರು “ಪುರಾತನ ಗ್ರಂಥಗಳಲ್ಲಿ ಎಲ್ಲಿಯೂ ಅದರ ಪ್ರಯೋಗ ಬಹಳ ಬಳಕೆಯಲ್ಲಿಲ್ಲ… ಸಂಸ್ಕೃತನ ಗುಣಸಂಪತ್ತು ಸಂಸ್ಕೃತಿ. ಈ ಅರ್ಥದಲ್ಲಿ ಸಂಸ್ಕೃತಿ ಶಬ್ದ ಕನ್ನಡದಲ್ಲಿ ಈಗ ಹದಿನೈದು ಇಪ್ಪತ್ತು ವರ್ಷಗಳಿಂದ ಈಚೆಗೆ ಹೆಚ್ಚಾಗಿ ರೂಢಿಗೆ ಬರುತ್ತಿದೆ” ಎಂಬ ಸಂಗತಿಯನ್ನು ಗಮನಿಸಿದ್ದರು (೧೯೮೭:೫೧೫). ಸಂಸ್ಕೃತಿ’ ಶಬ್ದದ ಅರ್ಥಕ್ಕೆ ವ್ಯಾಖ್ಯಾನ ಹುಡುಕಲು ಯತ್ನಿಸಿದ ಟಿ. ಎಸ್. ಎಲಿಯಟನಿಗೆ ಕೂಡ ತನ್ನ ಕಾಲದಲ್ಲಿ ಈ ಶಬ್ದವು ಅರ್ಥಖಚಿತೆ ಇಲ್ಲದೆ ಬಳಕೆಯಾಗುತ್ತಿರುವುದು ಗಮನಕ್ಕೆ ಬಂದಿತ್ತು. ಅವನಿಗೆ ಸಂಸ್ಕೃತಿ ಶಬ್ದಕ್ಕೆ ಖಚಿತ ವ್ಯಾಖ್ಯಾನ ಹುಡುಕಲು ಪ್ರಚೋದನೆ ಕೊಟ್ಟಿದ್ದು, ಯುನೆಸ್ಕೋ ತನ್ನ ಧ್ಯೇಯೋದ್ದೇಶಗಳನ್ನು ಸಾರುವ ಪ್ರಣಾಳಿಕೆಯಲ್ಲಿ ಕಾಣಿಸಿಕೊಂಡ ‘ಸಾಂಸ್ಕೃತಿಕ’ ಎಂಬ ಶಬ್ದ. ಎಲಿಯಟ್ ‘ಒಂದು ಶಬ್ದ  ದುರುಪಯೋಗ ಆಗುವ ತನಕ ಅದರ ವ್ಯಾಖ್ಯಾನ ಮಾಡುವ ಒತ್ತಡವೇ ಬೀಳುವುದಿಲ್ಲ’ ಎನ್ನುತ್ತಾನೆ (೧೯೪೮:೧೩).

ಸಂಸ್ಕೃತಿಶಬ್ದದ ಚರಿತ್ರೆ

‘ಸಂಸ್ಕೃತಿ’ ಎಂಬ ಶಬ್ದವು ‘ಸಂಸ್ಕೃತ’, ‘ಸಂಸ್ಕಾರ’ ಮುಂತಾದ ಶಬ್ದಗಳು ಹುಟ್ಟಿದ ಮೂಲದಿಂದಲೇ ಹುಟ್ಟಿದೆ. ಸಂಸ್ಕೃತ ಅಥವಾ ಸಂಸ್ಕಾರ ಎಂದರೆ, ಸುಧಾರಿಸಿದ, ನಯಗೊಳಿಸಿದ, ಪವಿತ್ರಗೊಳಿಸಿದ, ಪರಿಶುದ್ಧಗೊಳಿಸಿದ, ಶ್ರೇಷ್ಠವಾದ ಮುಂತಾದ ಅರ್ಥಗಳಿವೆ. ಈ ಅರ್ಥಗಳ ಹಿನ್ನೆಲೆಯನ್ನು ಗಮನಿಸಿದರೆ, ಇಲ್ಲಿ ಕಚ್ಚಾತನದಿಂದ ಬೇರ್ಪಡಿಸುವ, ಸುಧಾರಿಸುವ, ಶ್ರೇಣೀಕರಿಸುವ ಮತ್ತು ಪವಿತ್ರೀಕರಿಸುವ ಕ್ರಿಯೆಗಳು ಮುಖ್ಯವಾಗಿವೆ. ‘ಸಂಸ್ಕೃತ’ ಎಂಬ ಪದವೂ ಪ್ರಾಕೃತಕ್ಕೆ (ಪ್ರಕೃತಿಗೆ) ಭಿನ್ನವಾದುದು, ವ್ಯಾಕರಣ ಶುದ್ಧವಾದುದು ಎಂಬರ್ಥಗಳನ್ನು ಒಳಗೊಂಡಿರುವುದು ಗಮನಾರ್ಹ. ಒಟ್ಟಿನಲ್ಲಿ ಶುದ್ಧೀಕರಿಸುವ ಮತ್ತು ಸಂಸ್ಕರಿಸುವ ಕ್ರಿಯೆ ಇವೆಲ್ಲ ಶಬ್ದಗಳ ಹಿನ್ನೆಲೆಯಲ್ಲಿದೆ.

ನಂತರದ ಒಂದು ಘಟ್ಟದಲ್ಲಿ ‘ಸಂಸ್ಕೃತಿ’ ಎಂದರೆ ‘ಸಮುದಾಯ ಒಂದರ ಸಮಗ್ರ ಜೀವನ ವಿಧಾನಗಳ ಮೊತ್ತ’ ಎಂಬ ವ್ಯಾಖ್ಯೆ ಪ್ರವೇಶಿಸಿತು. ಇದು ಮಾನವಶಾಸ್ತ್ರೀಯ ಅಧ್ಯಯನಗಳಿಂದ ಹುಟ್ಟಿಬಂದುದಾಗಿತ್ತು. ಸಮುದಾಯವೊಂದರ ಜೀವನ ವಿಧಾನ ಎಂದರೆ, ಉಡುವ ಬಟ್ಟೆ, ಉಣ್ಣುವ ಊಟ, ಆಡುವ ಮಾತು, ಮಾಡುವ ಆಚರಣೆ, ನಂಬಿದ ನಂಬಿಕೆ ಮುಂತಾಗಿ ಇಡೀ ಬದುಕಿನ ವಿವರಗಳನ್ನು ಒಳಗೊಳ್ಳುತ್ತದೆ. ಸಮಸ್ಯೆ ಎಂದರೆ, ಜನಾಂಗ ಅಥವಾ ಸಮುದಾಯದ ವ್ಯಾಖ್ಯಾನದ್ದು. ಸಾಮಾನ್ಯವಾಗಿ ಸಂಸ್ಕೃತಿಯನ್ನು ಆಡುವ ಭಾಷೆ, ಹುಟ್ಟಿದ ಜಾತಿ, ಅನುಸರಿಸುವ ಧರ್ಮ, ವಾಸಿಸುವ ಪ್ರದೇಶ ಈ ಆಧಾರಗಳಲ್ಲಿ ನೋಡಲಾಗುತ್ತದೆ. ಈ ನಾಲ್ಕು ಆಧಾರಗಳಲ್ಲಿ ಏಕರೂಪಿಯಾದ ಜೀವನ ವಿಧಾನವುಳ್ಳ ಯಾವುದೇ ಸುಮುದಾಯವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಜಾತಿ, ಧರ್ಮಗಳ ಆಧಾರದಲ್ಲಿ ಅತ್ಯಂತ ಸಂಘಟಿತವಾಗಿರುವ ಯಾವುದೇ ಒಂದು ಸಮುದಾಯವನ್ನು ಪರಿಶೀಲಿಸಿದರೂ, ಅದರಲ್ಲೇ ವರ್ಗಭಿನ್ನತೆಗಳು, ಒಳಪಂಗಡಗಳು, ಪ್ರಾದೇಶಿಕ ವ್ಯತ್ಯಾಸಗಳು, ನಗರ-ಗ್ರಾಮೀಣ ಅಂತರಗಳು ಇವೆ. ಇವು ಭಾಷೆ, ಊಟ, ಉಡುಪು, ದೈವ, ಕೊಡುಕೊಳು, ಆಚರಣೆ, ನಂಬಿಕೆಗಳಲ್ಲಿ ಅಸಂಖ್ಯ ವೈವಿಧ್ಯವನ್ನು ಸೃಷ್ಟಿಸಿವೆ. ಮಾತ್ರವಲ್ಲ, ಅವುಗಳ ಒಳಗೆ ಸಂಘರ್ಷಗಳೂ ಇವೆ. ಉದಾಹರಣೆಗೆ, ದಲಿತರ ಎಡಗೈ ಬಲಗೈ ಜಗಳಗಳನ್ನು ಕಂಡರೆ, ‘ದಲಿತ ಸಂಸ್ಕೃತಿ’ ಎಂಬುದು ಏಕರೂಪಿಯಾದ ಪರಿಕಲ್ಪನೆಯಲ್ಲ ಎಂದು ಗೊತ್ತಾಗುತ್ತದೆ. ‘ಮುಸ್ಲಿಂ ಸಂಸ್ಕೃತಿ’ ಎಂದಾಗಲೂ ಅಷ್ಟೆ. ಸುನ್ನಿ, ಶಿಯಾ, ಬ್ಯಾರಿ, ನದಾಫ, ನವಾಯಿತ-ಹೀಗೆ ಪದರುಗಳ ಲೋಕವೊಂದು ತೆರೆದುಕೊಳ್ಳುತ್ತದೆ. ಬ್ರಾಹ್ಮಣರಲ್ಲಿ ಎಷ್ಟೊಂದು ಪಂಗಡಗಳಿವೆ? ಸ್ಮಾರ್ತರಲ್ಲಿಯೇ ಶಿವಳ್ಳಿ, ಹವ್ಯಕ, ಹೊಯ್ಸಳ ಕರ್ನಾಟಕ ಎಂದೆಲ್ಲ ಬೆಡಗುಗಳಿವೆ. ಅಖಿಲ ಭಾರತೀಯವೂ ತಕ್ಕಮಟ್ಟಿಗೆ ಸಂಘಟಿತವೂ ಆಗಿರುವ ಜಾತೀಯ, ಧಾರ್ಮಿಕ ಸಮುದಾಯಗಳ ಕತೆಯೇ ಹೀಗಿದೆ. ಇನ್ನು ಸಡಿಲವಾಗಿ ಕಟ್ಟಿರುವ ಭಾರತೀಯ ಸಂಸ್ಕೃತಿ, ಕನ್ನಡ ಸಂಸ್ಕೃತಿ, ಹಿಂದು ಸಂಸ್ಕೃತಿ ಎಂಬ ಪರಿಕಲ್ಪನೆಗಳನ್ನು ಸರ್ವ ಸಾಮಾನ್ಯವಾದ ಜೀವನಕ್ರಮದ ಮೂಲಕ ಕಲ್ಪಿಸಿಕೊಳ್ಳುವುದೇ ಸಾಧ್ಯವೇ ಇಲ್ಲ. ಸಂಸ್ಕೃತಿಗೆ ಮಾನವಶಾಸ್ತ್ರವು ಕೊಟ್ಟಿರುವ ವ್ಯಾಖ್ಯಾನವು ಭಾರತದ ಸಮಾಜಿಕ ಸಂದರ್ಭದಲ್ಲಿ ಛಿದ್ರವಾಗುತ್ತದೆ.

ಸಂಸ್ಕೃತಿ ಶಬ್ದಕ್ಕೆ ‘ಮಾನಸಿಕ ಪಕ್ವತೆ’, ‘ಒಂದು ದೇಶದ ಅಥವಾ ಜನಾಂಗದ ಮಾನಸಿಕ ಸಾಧನೆ’ ಎಂಬ ಅರ್ಥಗಳನ್ನು ನಿಘಂಟುಗಳು ಕೊಡುತ್ತವೆ (ಕಸಾಪ ಕನ್ನಡ ನಿಘಂಟು, ಸಂ.೮,೧೯೮೫:೮೨೭೩). ಆದರೆ ಈ ಅರ್ಥಗಳೆಲ್ಲ ಈಚೆಗೆ ಸೇರಿದಂತಹವು. ಕಿಟೆಲ್ ತನ್ನ ನಿಘಂಟು ರಚಿಸಿದಾಗ (೧೮೯೪) ‘ಸಂಸ್ಕೃತಿ’ ಶಬ್ದಕ್ಕೆ ಈ ಯಾವ ಅರ್ಥಗಳೂ ಇರಲಿಲ್ಲ. ಅವನು ‘ಸಂಸ್ಕಾರ’ ಎಂದಷ್ಟೆ ದಾಖಲಿಸುತ್ತಾನೆ. ‘ಸಂಸ್ಕಾರ’ಕ್ಕೆ ಶುದ್ಧೀಕರಿಸುವ, ಪವಿತ್ರೀಕರಿಸುವ ಅರ್ಥಗಳನ್ನು ಕೊಡುತ್ತಾನೆ. ಎಲ್ಲೂ ಕೂಡ ‘ಸಂಸ್ಕೃತಿ’ಗೆ ಒಂದು ಸಮುದಾಯದ ಜೀವನಕ್ರಮಗಳ ಮೊತ್ತ’ ಎಂದರ್ಥ ನೀಡುವುದಿಲ್ಲ. ಇದಕ್ಕೆ ಕಾರಣ ಸ್ಪಷ್ಟವಾಗಿದೆ. ಅವನ ಕಾಲಕ್ಕೆ ಕನ್ನಡದಲ್ಲಿ ‘ಸಂಸ್ಕೃತಿ’ ಶಬ್ದವು ಈಗಿನ ಅರ್ಥಗಳಲ್ಲಿ ಬಳಕೆಯಾಗುತ್ತಿರಲಿಲ್ಲ.

‘ಸಂಸ್ಕೃತಿ’ಗೆ ಇಂಗ್ಲಿಷಿನ ಸಂವಾದಿ ಪದವಾಗಿರುವ ‘ಕಲ್ಚರ್’ನದೂ ಇದೇ ಕತೆ. ‘ಕಲ್ಚರ್’ ಎಂಬುದು ಲ್ಯಾಟಿನ್ ಭಾಷೆಯ ‘ಕಲ್ಟ್’ ಅಥವಾ ‘ಕಲ್ಟಸ್’ ಎಂಬ ಶಬ್ದದಿಂದ ಬಂದಿದೆ. ಈ ಶಬ್ದಗಳಿಗೆ ಮೂಲದಲ್ಲಿ ಭೂಮಿದೈವದ ಆರಾಧನೆ, ಪೈರು ಬೆಳೆವುದು ಎಂಬ ಅರ್ಥಗಳಿವೆ. ಈಗಲೂ ಧಾರ್ಮಿಕ ಪಂಥಗಳಿಗೆ ಬಳಕೆಯಾಗುವ ‘ಕಲ್ಟ್’ ಎಂಬ ಶಬ್ದದಲ್ಲಿ ಪೂಜೆ ಆಚರಣೆಗಳಿವೆ. ಇದು ಪೂಜೆಯಂತಹ ಆಚರಣೆಗೂ ಕೃಷಿಗೂ ಪ್ರಾಚೀನ ಕಾಲದಲ್ಲಿ ಇದ್ದ ಸಂಬಂಧದ ಸಂಕೇತ. ಕೃಷಿ ಮಾಡುವಿಕೆಗೆ ಸಂಬಂಧಿಸಿದ ಈ ಶಬ್ದವನ್ನು ಬಳಸಿಕೊಂಡು ಸಾಗುವಳಿ, ವ್ಯವಸಾಯ (ಅಗ್ರಿಕಲ್ಚರ್), ಮೀನುಸಾಕಣೆ, ರೇಶ್ಮೆ, ಜೇನು ಮುಂತಾದ ಹುಳು ಸಾಕಣೆ (ಸೆರಿಕಲ್ಚರ್) ಮಾಡುವ ಪದಗಳು ಹುಟ್ಟಿಕೊಂಡವು. ತಳಿವಿಜ್ಞಾನ ಹಾಗೂ ಸಸ್ಯಶಾಸ್ತ್ರಗಳು ಈಗಲೂ ‘ಕಲ್ಚರ್’ ಶಬ್ದವನ್ನು ಇದೇ ಅರ್ಥದಲ್ಲಿ ಬಳಸುತ್ತಿವೆ.

ತನ್ನ ಹುಟ್ಟಿನ ಮೂಲದಲ್ಲಿ ‘ಕಲ್ಚರ್’ ಶಬ್ದಕ್ಕೆ ಈಗ ಬಳಸುತ್ತಿರುವ ಅರ್ಥಗಳಿರಲಿಲ್ಲ ಎನ್ನುವುದನ್ನು ಈ ಮಾಹಿತಿ ಸೂಚಿಸುತ್ತದೆ. ಇದಕ್ಕಿದ್ದ ‘ಬೆಳೆಯುವ’ ಎಂಬರ್ಥದ ಜತೆಗೆ ಮೊದಲ ಹಂತದಲ್ಲಿ ‘ಶ್ರೇಷ್ಠ ಜೀವನಾದರ್ಶ’ ಎಂಬರ್ಥ ಸೇರಿತು. ನಂತರ ಸಾಹಿತ್ಯ, ಸಂಗೀತ, ಚಿತ್ರಕಲೆಗೆ ಸಂಬಂಧಿಸಿದ ಅರ್ಥಗಳು ಸೇರಿಕೊಂಡವು. ನಂತರ ಸಮುದಾಯದ ಸಮಸ್ತ ಜೀವನ ವಿವರಗಳು ಎಂಬರ್ಥ ಸೇರಿತು. ಗಮನಾರ್ಹ ಸಂಗತಿಯೆಂದರೆ, ಇಂಗ್ಲಿಷು ಹಾಗೂ ಭಾರತೀಯ ಭಾಷೆಗಳಲ್ಲಿ ‘ಸಂಸ್ಕೃತಿ’ ಹಾಗೂ ‘ಕಲ್ಚರ್’ ಎಂಬ ಶಬ್ದಗಳು, ತಮ್ಮ ಭಾಷಿಕ ಮೂಲದಲ್ಲಿ ಬೇರೆಬೇರೆ ಅರ್ಥಗಳನ್ನೇ ಹೊಂದಿರುವುದು. ಒಂದೆಡೆ ಬೆಳೆಯುವುದು ಎಂದರ್ಥವಿದೆ. ಮತ್ತೊಂದೆಡೆ ಶುದ್ಧೀಕರಿಸುವುದು ಎಂಬರ್ಥವಿದೆ. ಎರಡೂ ಕಡೆಯ ಮೂಲಗಳಲ್ಲಿ ‘ನಮ್ಮ ಪ್ರಾಚೀನರ ಜೀವನ ಸಾಧನೆ’ ಎಂಬರ್ಥವಿಲ್ಲ.

ಇದೊಂದು ರಚನೆ?

ಮೇಲಿನ ವಿವರಣೆಯಿಂದ ನಾಲ್ಕು ಸಂಗತಿಗಳು ಖಚಿತವಾಗುತ್ತವೆ.

ಅ) ‘ಸಂಸ್ಕೃತಿ’ ಎಂಬುದು ಮೂಲತಃ ಒಂದು ರಚನೆ (construct), ಬೌದ್ಧಿಕವಾಗಿ ರೂಪಿಸಿಕೊಂಡ ಒಂದು ಪರಿಕಲ್ಪನೆ.

ಆ) ಈ ಶಬ್ದ ಅಥವಾ ಪರಿಭಾಷೆ ಬಳಕೆಗೆ ಬಂದಿದ್ದು ೧೯ನೇ ಶತಮಾನದಲ್ಲಿ. ಈ ಬಳಕೆಗೆ ಹೆಚ್ಚೆಂದರೆ ಎರಡು ಶತಮಾನದ ಇತಿಹಾಸವಿದೆ. ಕನ್ನಡದಲ್ಲಿ ಸುಮಾರು ೮೦ ವರ್ಷಗಳ ಇತಿಹಾಸವಿದೆ. ೨೦ನೇ ಶತಮಾನದ ಕೊನೆಯ ಭಾಗದಿಂದ ಇದರ ಬಳಕೆ ಬಹಳ ಹೆಚ್ಚಾಯಿತು.

ಇ) ‘ಸಂಸ್ಕೃತಿ’ ಎಂಬ ಶಬ್ದ ಕೇಳಿದಾಗ ಮನಸ್ಸಿನಲ್ಲಿ ಮೂಡುವ ‘ಧಾರ್ಮಿಕ ಆದರ್ಶಗಳು’, ‘ಗತಕಾಲದಲ್ಲಿ ಪೂರ್ವಜರು ಮಾಡಿದ ಸಾಧನೆ’ ಇತ್ಯಾದಿ ಜನಪ್ರಿಯ ಮತ್ತು ಭಾವನಾತ್ಮಕ ಅರ್ಥಗಳ ಜತೆಯಲ್ಲೇ, ಅನೇಕ ಕಾಲಘಟ್ಟಗಳಲ್ಲಿ ಇದು ಬೇರೆಬೇರೆ ಅರ್ಥಗಳನ್ನು ಪಡೆದುಕೊಳ್ಳುತ್ತ ಬಂದಿದೆ. ‘ಸಾಂಸ್ಕೃತಿಕ ಅಧ್ಯಯನ’ದ ವಿಷಯಕ್ಕೆ ಬಂದರೆ, ಸದ್ಯಕ್ಕೆ ಇದು ಬಹುಶಿಸ್ತೀಯ ಪರಿಶೀಲನೆ ಎಂಬರ್ಥದಲ್ಲಿ ಚಾಲ್ತಿಯಲ್ಲಿದೆ. ಈ ಅರ್ಥಾಂತರ ಈಗಲೂ ನಿಂತಿಲ್ಲ. ಮುಂದೆಯೂ ನಿರಂತರವಾಗಿ ನಡೆಯುವಂತಹದ್ದು.

ಈ) ‘ಸಂಸ್ಕೃತಿ’ ಶಬ್ದವು ಇಂಗ್ಲಿಷಿನ ‘ಕಲ್ಚರ್’ ಎಂಬುದಕ್ಕೆ ಪರ್ಯಾಯವಾಗಿ ಭಾರತದಲ್ಲಿ ೨೦ನೇ ಶತಮಾನದಲ್ಲಿ ರೂಪುಗೊಂಡ ಪರ್ಯಾಯ ಪದ. ಆದರೆ ಪಶ್ಚಿಮದಲ್ಲಿ ‘ಕಲ್ಚರ್’ ಪಡೆದುಕೊಂಡ ಎಲ್ಲ ಬದಲಾವಣೆಗಳನ್ನು ಇದು ಪಡೆದುಕೊಳ್ಳಲಿಲ್ಲ. ಪಶ್ಚಿಮದಲ್ಲಿ – ಪೈರಿನ ಬೆಳೆವಿಕೆ ಅಥವಾ ಕೀಟಸಾಕಣೆ; ನೈತಿಕ ಆದರ್ಶಗಳು; ಸಾಹಿತ್ಯ, ಚಿತ್ರ, ಸಂಗೀತಾದಿ ಕಲೆಗಳ ಲೋಕ; ನಿರ್ದಿಷ್ಟ ಸಮುದಾಯ ವಿಶಿಷ್ಟ ಜೀವನ ವಿವರಗಳು; ಅಧ್ಯಯನಗಳಲ್ಲಿ ಬಹುಶಿಸ್ತೀಯ ಪರಿಶೀಲನೆ- ಎಂಬ ಐದು ಹಂತಗಳಲ್ಲಿ ಇದು ಅರ್ಥಗಳನ್ನು ಪಡೆದುಕೊಂಡು ಬಂದಂತೆ ಕಾಣುತ್ತದೆ. ಭಾರತದಲ್ಲಿ ಸಂಸ್ಕೃತಿ ಶಬ್ದವು ‘ಬೆಳೆವಿಕೆ’ ಎನ್ನುವ ಅರ್ಥದ ಘಟ್ಟವನ್ನು ಕಾಣಲೇ ಇಲ್ಲ. ಡಿವಿಜಿಯವರ ಪ್ರಕಾರ ಸಂಸ್ಕೃತಿ ಎಂದರೆ ಬೆಳೆಯುವಿಕೆಯ ಕ್ರಿಯೆಯೇ ಅಲ್ಲ. ಬೆಳೆವಿಕೆಯು ಪ್ರಕೃತಿ. ಸಂಸ್ಕೃತಿಯೆಂಬುದು ಪ್ರಕೃತಿಯಿಂದ ಸಂಸ್ಕರಣಗೊಂಡ ಸಾರ (೧೯೮೭:೬೦೫).

ಕನ್ನಡದಲ್ಲಿ ‘ಸಂಸ್ಕೃತಿ’ ಶಬ್ದದ ಬಳಕೆಯ ಶುರುವಾಗುವುದೇ ಪರಿಷ್ಕರಣ ಎಂಬ ನೈತಿಕ ಆದರ್ಶವಾದಿ ಅರ್ಥದ ಘಟ್ಟದಿಂದ. ಇದಕ್ಕೆ ಕರ್ನಾಟಕದ ಸಾಮಾಜಿಕ ಚರಿತ್ರೆಯಲ್ಲಿ ಒಂದು ಕಾರಣವಿದೆ. ಅದೆಂದರೆ-ಇವನ್ನು ಮೊದಲಿಗೆ ತಿಳಿಸಿದವರು ಮೇಲುಜಾತಿ ಲೇಖಕರು. ಭಾಷಿಕವಾಗಿ ಒಂದು ಶಬ್ದ ಮೂಲದಲ್ಲಿ ಯಾವ ಅರ್ಥವನ್ನು ಒಳಗೊಂಡಿತ್ತೋ, ಅದೇ ಅರ್ಥದಲ್ಲಿ ಮುಂದೆ ಬಳಕೆಯಾಗಬೇಕು ಎಂದೇನಿಲ್ಲ. ಭಾಷಾಶಾಸ್ತ್ರದ ಪ್ರಕಾರ ಅರ್ಥಗಳು ನಿರಂತರವಾಗಿ ಬದಲಾಗುತ್ತಿರುತ್ತವೆ. ಆದರೆ ಒಂದು ಶಬ್ದಕ್ಕೆ ಅರ್ಥಗಳು ಯಾಕೆ ಬದಲಾಗುತ್ತವೆ? ಹಳೆ ಅರ್ಥಗಳು ಬಿಟ್ಟುಹೋಗದೆ ಹೊಸ ಅರ್ಥಗಳು ಹೇಗೆ ಸೇರುತ್ತವೆ? ಈ ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕು. ಉತ್ತರ ಹುಡುಕುತ್ತ ಹೋದರೆ, ಅರ್ಥಬದಲಾವಣೆಯ ಹಿನ್ನೆಲೆಯಲ್ಲಿ ಸಾಮಾಜಿಕವಾಗಿ ಕೆಲವು ಮೂಲಭೂತ ಬದಲಾವಣೆಗಳು ನಡೆದಿರುವುದು, ಈ ಬದಲಾವಣೆಗಳು ಆಲೋಚನ ಕ್ರಮದಲ್ಲೂ ಬದಲಾವಣೆ ತಂದಿರುವುದು ಹಾಗೂ ತತ್ಪರಿಣಾಮವಾಗಿ ಶಬ್ದಕ್ಕೆ ಹೊಸ ಅರ್ಥಗಳು ಬಂದಿರುವುದು ಗೊತ್ತಾಗುತ್ತದೆ.

ಹೆಚ್ಚಿನ ಅಧ್ಯಯನಕಾರರು ‘ಸಂಸ್ಕೃತಿ’ ಶಬ್ದವನ್ನು ನಿರ್ದಿಷ್ಟ ಅರ್ಥವಿಲ್ಲದೆ ಬಳಸುತ್ತಾರೆ. ವಿಚಿತ್ರ ಎಂದರೆ, ಸಂಸ್ಕೃತಿ ಚಿಂತಕರೆಂದು ಖ್ಯಾತರಾದ ಕೆಲವರು ಈ ಶಬ್ದವನ್ನೇ ಬಳಸುವುದಿಲ್ಲ. ಉದಾ. ರಾಜಕಾರಣಿಯೂ ಸಂಸ್ಕೃತಿ ಚಿಂತಕರೂ ಆದ ರಾಮಮನೋಹರ ಲೋಹಿಯಾ ಅವರ ಬರೆಹಗಳಲ್ಲಿ ‘ಸಂಸ್ಕೃತಿ’ ಎಂಬ ಶಬ್ದದ ಬಳಕೆಯೇ ಇಲ್ಲ! ಅವರ ಮಹತ್ವದ ಚಿಂತನೆಯುಳ್ಳ ‘ಸೌಂದರ್ಯ ಮತ್ತು ಮೈಬಣ್ಣ’ ಲೇಖನದಲ್ಲೂ ಇಲ್ಲ. ಅಂಬೇಡ್ಕರ್ ಕೂಡ ‘ಸಂಸ್ಕೃತಿ’ ಪರಿಕಲ್ಪನೆಯನ್ನು ಬಳಸುವುದು ಕಡಿಮೆ. ಗಾಂಧಿ ತಮ್ಮ “ಹಿಂದ್‌ಸ್ವರಾಜ್” (೧೯೦೮)ನಲ್ಲಿ ‘ಸಭ್ಯತೆ’ ಎಂಬ ಶಬ್ದವನ್ನು ಸಂಸ್ಕೃತಿ ಎಂಬರ್ಥದಲ್ಲಿ ಬಳಸುತ್ತಾರೆ. ಆದರೆ ಆರೆಸ್ಸೆಸ್ ಚಿಂತಕರಾದ ಗೋಳವಾಳ್ಕರ್ ಅವರಲ್ಲ ಸಂಸ್ಕೃತಿ ಎಂಬ ಶಬ್ದವು, ಉಚ್ಚಜಾತಿಗಳು ಒಪ್ಪಿರುವ ಜೀವನಮೌಲ್ಯಗಳು ಎಂಬರ್ಥದಲ್ಲಿ ಬಳಕೆಯಾಗುತ್ತದೆ. ಈ ಅರ್ಥವು ‘ಹಿಂದೂ’ ಎಂಬ ವಿಶಾಲ ಪರಿಕಲ್ಪನೆಯಲ್ಲಿ ಭಾರತದ ಸಾವಿರಾರು ಜಾತಿಯ ಜನರನ್ನು ತೆಕ್ಕೆಗೆ ತೆಗೆದುಕೊಳ್ಳುವ ಹಾಗೂ ಇಸ್ಲಾಂ ಕ್ರೈಸ್ತ ಮತಗಳಿಗೆ ಎದುರಾಳಿಗಳನ್ನಾಗಿ ನಿಲ್ಲಿಸುವ ರಾಜಕಾರಣವನ್ನು ಒಳಗೊಂಡಿದೆ.

ಹೀಗೆ ‘ಸಂಸ್ಕೃತಿ’ ಶಬ್ದವು ತನ್ನ ಚರಿತ್ರೆಯುದ್ದಕ್ಕೂ ಪಡೆದುಕೊಂಡು ಬಂದ ಅರ್ಥಗಳನ್ನು ಹಾಗೂ ಅದು ಬಳಕೆಯಾದ ರೀತಿಯನ್ನು ಕಾಣುವಾಗ, ಅದೊಂದು ಸಾಮಾಜಿಕ, ರಾಜಕೀಯ, ಆರ್ಥಿಕ ವಿಚಾರಗಳನ್ನು ಹೇಳಲು ಸಜ್ಜುಗೊಂಡ ಪರಿಭಾಷೆ ಎಂದು ಗೊತ್ತಾಗುತ್ತದೆ. ಎಂತಲೆ ಈ ಶಬ್ದವು ಆಧುನಿಕ ಕಾಲದ ಒಂದು ಪರಿಕಲ್ಪನೆ ಮತ್ತು ರಚನೆಯಾಗಿರುವುದು. ಇದಕ್ಕೆ ಸರ್ವಸಮ್ಮತವಾದ ಒಂದು ಅರ್ಥವೆಂಬುದು ಇಲ್ಲ. ಹಾಗೆಂದು ಇದನ್ನು ನಮ್ಮ ಬೌದ್ಧಿಕ ಚರ್ಚೆಗಳಿಂದಲಾಗಲಿ ರಾಜಕಾರಣದಿಂದಲಾಗಲಿ ಹೊರಹಾಕಲು ಸಾಧ್ಯವಿಲ್ಲ. ಹಾಕಬೇಕಾದ ಅಗತ್ಯವೂ ಇಲ್ಲ. ಬದಲಿಗೆ ಇದು ಯಾವ್ಯಾವ ಅರ್ಥಗಳಲ್ಲಿ ಬಳಕೆಯಾಗುತ್ತಿದೆ. ನಾವು ಯಾವ ಅರ್ಥದಲ್ಲಿ ಇದನ್ನು ಬಳಸುತ್ತಿದ್ದೇವೆ ಎಂಬ ತಿಳಿವಳಿಕೆ ಮತ್ತು ತಾತ್ವಿಕ ಖಚಿತತೆ ಇರಬೇಕು ಆಗ ನಮ್ಮ ಸಂಸ್ಕೃತಿ ಚಿಂತನೆಯನ್ನು ಮಂಡಿಸುವುದು ಹಾಗೂ ಮತ್ತೊಬ್ಬರ ಚಿಂತನೆಗಳ ಜತೆ ವಾಗ್ವಾದ ಬೆಳೆಸುವುದು ಸುಲಭ. ಇಷ್ಟು ಪ್ರಾಥಮಿಕ ಪರಿಶೀಲನೆಯ ಹಿನ್ನೆಲೆಯಲ್ಲಿ ‘ಸಂಸ್ಕೃತಿ’ ಎಂದರೆ ಸದ್ಯಕ್ಕೆ ಈ ಕೆಳಕಂಡಂತೆ ಅರ್ಥ ಕೊಟ್ಟು ಇದನ್ನು ಬಳಸಬಹುದು:

ಅ) ‘ಸಂಸ್ಕೃತಿ’ ಎಂಬುದು ಒಂದು ಸಮುದಾಯ ಬದುಕುವ, ಆಲೋಚಿಸುವ ಸಮಸ್ತ ಆಯಾಮಗಳನ್ನು ಒಳಗೊಳ್ಳುವ ಒಂದು ಪರಿಭಾಷೆ.

ಆ) ‘ಸಮುದಾಯ’ ಎಂದಾಗ ಒಂದು ಗುಂಪಲ್ಲ. ಹಲವಾರು ಗುಂಪುಗಳಿರುತ್ತವೆ. ಈಯೆಲ್ಲ ಗುಂಪುಗಳ ನಂಬಿಕೆ ಆಚರಣೆಗೂ ಒಟ್ಟು ಸೇರಿಯೇ ಅದರ ಸಂಸ್ಕೃತಿ.

ಇ) ಇದೇ ರೀತಿ ಇಡೀ ನಾಡಿಗೆ ಏಕರೂಪಿಯಾದ ಒಂದು ಸಂಸ್ಕೃತಿ ಇರುವುದಿಲ್ಲ. ಅದರೊಳಗೆ ಪ್ರಾದೇಶಿಕ, ಜಾತೀಯ, ಧಾರ್ಮಿಕ, ಬುಡಕಟ್ಟಿನ ರೂಪಗಳಿರುತ್ತವೆ. ಭಾರತದಂತಹ ದೇಶದಲ್ಲಿ ಇದು ಸಹಜ. ಇದನ್ನು ಸಂಸ್ಕೃತಿಯ ಬಹುರೂಪಿ ಗುಣ ಎನ್ನಬಹುದು.

ಈ) ನಾಡಿನ ಈ ಬಹುರೂಪಿ ಸಂಸ್ಕೃತಿಗಳ ಒಳಗೆ ಬಹುಕಾಲದಿಂದಲೂ ಕೊಡುಕೊಳು ನಡೆಯುತ್ತ ಬಂದಿದೆ. ನಾಡಿನ ಒಳಗಿನಿಂದ ಮಾತ್ರವಲ್ಲ, ಹೊರಗಿಂದಲೂ ಕೊಡುಕೊಳು ನಡೆದಿವೆ. ಈ ಕೊಡುಕೊಡೆಗಳಿಗೆ ಅನೇಕ ಚಾರಿತ್ರಿಕ ಕಾರಣಗಳಿವೆ. ಸಾಮಾಜಿಕ, ರಾಜಕೀಯ, ಆರ್ಥಿಕವಾದ ಚಲನೆಗಳು ಕಾರಣವಾಗಿವೆ. ಆದ್ದರಿಂದ ‘ಶುದ್ಧ’ ‘ಮೂಲ’ ಸಂಸ್ಕೃತಿ ಎಂಬುದು ಇರಲು ಸಾಧ್ಯವಿಲ್ಲ. ಸಂಸ್ಕೃತಿಯು ಸದಾ ಸಂಕರರೂಪಿ. ಈ ಸಂಕರವು ಅದರ ಚಲನಶೀಲತೆಯ ಸಂಕೇತ. ಇದನ್ನು ಸಾಂಸ್ಕೃತಿಕ ಬಹುತ್ವ ಎಂದು ಕರೆಯಬಹುದು.

ಉ) ಸಂಸ್ಕೃತಿ ಎಂಬುದು ಹಿಂದೆ ಹಿರೀಕರು ಕಟ್ಟಿಟ್ಟುಹೋದ ಬುತ್ತಿಯಲ್ಲ. ಅದು ಉದ್ದಕ್ಕೂ ಬದಲಾಗುತ್ತ ಬಂದಿದ್ದು, ನಮ್ಮ ಕಾಲದಲ್ಲಿ ನಿರ್ದಿಷ್ಟ ರೂಪದಲ್ಲಿ ಅಸ್ತಿತ್ವದಲ್ಲಿದೆ. ನಮ್ಮ ಬದುಕಿನಂತೆ ಸಾಧ್ಯವಿಲ್ಲ. ಇದಕ್ಕೆ ಪ್ರತಿತಲೆಮಾರು ಕೂಡ ತನ್ನದನ್ನು ಕೂಡಿಸಿ ರೂಪಾಂತರ ಮಾಡುತ್ತ ಹೋಗುತ್ತದೆ.

ಊ) ಸಂಸ್ಕೃತಿಯಲ್ಲಿ ತರತಮ ಎಂಬುದಿಲ್ಲ. ನೈತಿಕವಾಗಿ ಕೆಟ್ಟ-ಒಳ್ಳೆಯ, ವಿಕಾಸದ ದೃಷ್ಟಿಯಿಂದ ಹಿಂದುಳಿದ-ಮುಂದುವರೆದ, ಶ್ರೇಣೀಕರಣದ ನೆಲೆಯಿಂದ ಮೇಲು-ಕೀಳು ಎಂಬ ಪರಿಭಾಷೆಯಲ್ಲಿ ಇದನ್ನು ಅಳೆಯಲು ಸಾಧ್ಯವಿಲ್ಲ. ಸಮುದಾಯಗಳ ಎಲ್ಲ ಬಗೆಯ ನಂಬಿಕೆ, ಆಚರಣೆಗಳನ್ನು ಸಂಸ್ಕೃತಿ ಎಂದು ಒಪ್ಪಿಕೊಳ್ಳಬೇಕು.

ಎ) ಸಂಸ್ಕೃತಿ ಪರಿಕಲ್ಪನೆ ಮೂಲತಃ ಒಂದು ರಾಜಕೀಯ, ಆರ್ಥಿಕ, ಸಾಮಾಜಿಕವಾದ ಲೋಕದೃಷ್ಟಿಯನ್ನು ಸೂಚಿಸುವ ಸೈದ್ಧಾಂತಿಕ ಪರಿಭಾಷೆ. ಅದನ್ನು ಧಾರ್ಮಿಕವಾಗಿ ಪವಿತ್ರವೆಂಬ ಭಾವನೆಯಲ್ಲಿ ಬಳಸುವಾಗಲೂ ಅದು ನಿರ್ದಿಷ್ಟ ರಾಜಕೀಯ, ಆರ್ಥಿಕ, ಸಾಮಾಜಿಕ ಚಿಂತನೆಯನ್ನು ಒಳಗೊಂಡಿರುತ್ತದೆ. ಆದ್ದರಿಂದ ಸಂಸ್ಕೃತಿಯು ರಾಜಕಾರಣದ ಗುಪ್ತಭಾಷೆಯಾಗಿದೆ. ಇಲ್ಲಿ ರಾಜಕಾರಣ ಎಂದರೆ, ಸಾಮಾಜಿಕ ಆರ್ಥಿಕವಾದ ತಾತ್ವಿಕತೆಯಾಗಿದೆ.

ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಅಧ್ಯಯನ

ಇಲ್ಲಿಯೆ ಸಂಸ್ಕೃತಿ ಚಿಂತನೆ ಹಾಗು ಸಾಂಸ್ಕೃತಿಕ ಅಧ್ಯಯನಗಳ ವ್ಯತ್ಯಾಸವನ್ನು ಸ್ಪಷ್ಟಪಡಿಸಬೇಕು. ಸಂಸ್ಕೃತಿ ಪರಿಕಲ್ಪನೆ ಕುರಿತು ತಾತ್ವಿಕವಾಗಿ ಚಿಂತನೆ ಮಾಡುವುದು, ಅದರ ಅರ್ಥವನ್ನು ವಿವಿಧ ಉದಾಹರಣೆಗಳ ಮೂಲಕ ನಿರೂಪಿಸುವುದು, ಇದರ ಬಗ್ಗೆ ಪ್ರಕಟವಾಗಿರುವ ಇತರರ ಚಿಂತನೆಗಳ ಜತೆ ವಾಗ್ವಾದ ನಡೆಸುವುದು – ಇವೆಲ್ಲವನ್ನು ವಿಶಾಲ ಅರ್ಥದಲ್ಲಿ ‘ಸಂಸ್ಕೃತಿ ಚಿಂತನೆ’ ಎಂದು ಕರೆಯಬಹುದು. ಉದಾ: ಡಿವಿಜಿ ಅವರ “ಸಂಸ್ಕೃತಿ” (೧೯೫೩) ಪುಸ್ತಕ ಇದನ್ನು ಮಾಡುತ್ತದೆ; ಯಾವುದಾದರೂ ವಿಷಯ ಆರಿಸಿಕೊಂಡು, ಅದನ್ನು ‘ಸಾಂಸ್ಕೃತಿಕ’ ಎಂದು ಪ್ರಚಲಿತವಾಗಿರುವ ಒಂದು ಅಧ್ಯಯನ ವಿಧಾನದ ಮೂಲಕ ವಿಶ್ಲೇಷಿಸುವುದನ್ನು ‘ಸಾಂಸ್ಕೃತಿಕ ಅಧ್ಯಯನ’ ಎನ್ನಬಹುದು. ಉದಾ: ಚಿದಾನಂದಮೂರ್ತಿ ಅವರ “ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ” (೧೯೬೬). ಚಾರಿತ್ರಿಕವಾಗಿ ಮೊದಲು ಶುರುವಾಗಿದ್ದು ಸಂಸ್ಕೃತಿ ಚಿಂತನೆ. ನಂತರ ಬಂದದ್ದು ಸಾಂಸ್ಕೃತಿಕ ಅಧ್ಯಯನಗಳು. ಆದರೆ ಇವೆರಡರ ನಡುವಣ ವ್ಯತ್ಯಾಸಗಳು ಕಡ್ಡಾಯ ಹಾಗೂ ಅನುಕ್ರಮವಲ್ಲ. ಸಾಂಸ್ಕೃತಿಕ ಅಧ್ಯಯನ ಮಾಡುತ್ತಲೆ ಸಂಸ್ಕತಿ ಚಿಂತನೆ ರೂಪು ತಳೆಯಬಹುದು. ಪರಿಕಲ್ಪನಾತ್ಮಕವಾಗಿ ಸಂಸ್ಕೃತಿ ಚಿಂತನೆ ಮಾಡುವವರು ಅಧ್ಯಯನ ಮಾಡದೆಯೂ ಇರಬಹುದು. ಮ್ಯಾಥ್ಯೂ ಆರ್ನಲ್ಡ್, ಡಿವಿಜಿ ಇವರು ಮುಖ್ಯವಾಗಿ ಸಂಸ್ಕೃತಿ ಚಿಂತಕರು. ನಿರ್ದಿಷ್ಟ ವಿಷಯ ಆರಿಸಿಕೊಂಡು ಕ್ರಮಬದ್ಧವಾದ ಸಾಂಸ್ಕೃತಿಕ ಅಧ್ಯಯನ ಮಾಡಿದವರಲ್ಲ. ಆದರೂ ಅವರ ಗ್ರಹಿಕೆಗಳು ಬಹಳ ಅಧ್ಯಯನಕಾರರ ಮೇಲೆ ಪ್ರಭಾವ ಬೀರಿದವು. ಡಿ.ಆರ್.ನಾಗರಾಜ, ಶಂ.ಬಾ.ಜೋಶಿ ಇವರು ಸಂಸ್ಕೃತಿ ಚಿಂತಕರೂ ಹೌದು, ಸಾಂಸ್ಕೃತಿಕ ಅಧ್ಯಯನಕಾರರೂ ಹೌದು. ಇಂಗ್ಲೆಂಡಿನ ರೇಮಂಡ್ ವಿಲಿಯಮ್ಸ್ ಒಬ್ಬ ಸಂಸ್ಕೃತಿ ಅಧ್ಯಯನಕಾರ; ಕ್ರಿಸ್ಟೊಫರ್ ಕಾಡ್‌ವೆಲ್ ಕೂಡ ಸಾಂಸ್ಕೃತಿಕ ಅಧ್ಯಯನಕಾರ. ಸಂಸ್ಕೃತಿಗೆ ವ್ಯಾಖ್ಯೆ ರೂಪಿಸುವ ಚಿಂತಕರು ಹಾಗೂ ಮತ್ತೊಬ್ಬರು ರೂಪಿಸಿದ ವ್ಯಾಖ್ಯೆಗೆ ಮಾಹಿತಿಗೆ ಅನ್ವಯಿಸಿ ವಿಶ್ಲೇಷಣೆ ಮಾಡುವ ಸಾಂಸ್ಕೃತಿಕ ಅಧ್ಯಯನಕಾರರು ಎಂಬ ವಿಂಗಡಣೆ ಪಶ್ಚಿಮದಲ್ಲಿದೆ. ಕನ್ನಡದಲ್ಲಿಲ್ಲ. ನಮ್ಮಲ್ಲಿ ಸಂಸ್ಕೃತಿ ಚಿಂತನೆ ಹಾಗೂ ಸಾಂಸ್ಕೃತಿಕ ಅಧ್ಯಯನಗಳು ಸಾಮಾನ್ಯವಾಗಿ ಒಟ್ಟಿಗೆ ಬರುತ್ತವೆ. ಮಾಸ್ತಿ ಹಾಗೂ ದೇವುಡು ಸಾಂಸ್ಕೃತಿಕ ಅಧ್ಯಯನಕಾರರು. ಆದರೆ ಜತೆಯಲ್ಲೇ ಸಂಸ್ಕೃತಿ ಚಿಂತನೆ ಕೂಡ ಮಾಡುತ್ತಾರೆ. ಇದು ಕನ್ನಡದ ವಿಶೇಷತೆ. ಇವರಿಗೆ ಹೋಲಿಸಿದರೆ, ಡಿವಿಜಿ ಕೇವಲ ಸಂಸ್ಕೃತಿ ಚಿಂತಕರು. ಇದು ಸಂಸ್ಕೃತಿ ಚಿಂತನೆ ಹಾಗೂ ಸಾಂಸ್ಕೃತಿಕ ಅಧ್ಯಯನಗಳ ನಡುವಣ ಭಿನ್ನತೆ ಹಾಗೂ ಸಂಬಂಧದ ಸಂಕೀರ್ಣ ಸ್ವರೂಪ.

ಇಲ್ಲಿ ಎರಡು ಪ್ರಶ್ನೆ ಹುಟ್ಟುತ್ತವೆ. ಮೊದಲನೆಯದು, ‘ಸಂಸ್ಕೃತಿ’ ಕುರಿತ ತಾತ್ವಿಕ ಪರಿಕಲ್ಪನೆಗಳು ‘ಸಾಂಸ್ಕೃತಿಕ ಅಧ್ಯಯನ’ಗಳನ್ನು ಮಾಡುವಾಗ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತವೆ? ಹೆಚ್ಚಿನ ಅಧ್ಯಯನಕಾರರು ತಮ್ಮದೇ ಆದ ಸಂಸ್ಕೃತಿ ವ್ಯಾಖ್ಯೆಯನ್ನು ರೂಪಿಸಿಕೊಳ್ಳುವುದಿಲ್ಲ. ಕಣ್ಣೆದುರಿರುವ ಸಂಸ್ಕೃತಿ ಚಿಂತನೆಗಳನ್ನು ಪರಿಶೀಲಿಸಿ, ತಮಗೆ ಸರಿಕಂಡ ಒಂದನ್ನಾರಿಸಿಕೊಂಡು, ಅದರ ನಿರ್ದೇಶನದಲ್ಲಿ ಅಧ್ಯಯನ ಮಾಡುತ್ತಾರೆ. ಉದಾಹರಣೆ ಚಿದಾನಂದಮೂರ್ತಿ ಅವರ ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ವನ್ನು ಗಮನಿಸಬೇಕು. ಅವರು ಇದರಲ್ಲಿ ಆರ್ನಲ್ಡ್, ಎಮರ್ಸನ್, ರವೀಂದ್ರನಾಥ ಟಾಗೂರ್, ಟಿ.ಎಸ್. ಎಲಿಯಟ್ ಮುಂತಾದ ಚಿಂತಕರ ಅಭಿಪ್ರಾಯಗಳನ್ನು ಚರ್ಚೆಗೆ ಎತ್ತಿಕೊಳ್ಳುತ್ತಾರೆ. ಅವನ್ನು ವ್ಯಕ್ತಿಗತ ವಿಕಾಸ ಸೂಚಿಸುವ ಹಾಗೂ ಸಾಮುದಾಯಕ ಜೀವನವನ್ನು ಒಳಗೊಳ್ಳುವ ವ್ಯಾಖ್ಯೆಗಳು ಎಂದು ಎರಡು ನೆಲೆಗಳಲ್ಲಿ ವಿಂಗಡಿಸುತ್ತಾರೆ. ಚರ್ಚೆಯ ಕೊನೆಗೆ ‘ಮೇಲಿನ ಎರಡು ವಿವರಣೆಗಳಲ್ಲಿ ಎರಡನೆಯ ವಿವರಣೆಯನ್ನು ನಾವು ಅಂಗೀಕರಿಸಿದ್ದೇವೆ’ ಎಂದು ಹೇಳಿ, “ಪ್ರಾಚೀನ ಕನ್ನಡಿಗರ ‘ಸಂಸ್ಕೃತಿ’ಯನ್ನು ಎತ್ತಿ ತೋರಿಸತಕ್ಕಂತಹ, ಅವರ ಬದುಕಿನ ರೀತಿ, ಅವರ ಧರ್ಮಗಳು, ಆರ್ಥಿಕ ವ್ಯವಸ್ಥೆ, ಜಾತಿನೀತಿಗಳು, ಅವರ ಬಾಳನ್ನು ಹಿಡಿದು ನಡೆಯಿಸಿದ ಮೌಲ್ಯಗಳು, ಒಟ್ಟಿನಲ್ಲಿ ಅವರ ಜೀವನ ವಿಧಾನಗಳನ್ನು ನಿರೂಪಿಸುವುದು ನಮ್ಮ ಗುರಿ” ಎಂದು ತಮ್ಮ ಸಾಂಸ್ಕೃತಿಕ ಅಧ್ಯಯನಕ್ಕೆ ಪೀಠಿಕೆ ಹಾಕಿಕೊಳ್ಳುತ್ತಾರೆ (೧೯೬೬:೭) ಇದು ಸಂಸ್ಕೃತಿ ಚಿಂತನೆಗಳನ್ನು ಸಾಂಸ್ಕೃತಿಕ ಅಧ್ಯಯನಕಾರರು ಬಳಸಿಕೊಳ್ಳುವ ಒಂದು ವಿಧಾನ.

ಎರಡನೇ ಪ್ರಶ್ನೆ, ಅಧ್ಯಯನಕಾರರು ತಾವು ಶೈಕ್ಷಣಿಕವಾಗಿ ಒಪ್ಪಿಕೊಳ್ಳುವ ‘ಸಂಸ್ಕೃತಿ’ ಗ್ರಹಿಕೆಗೆ ಅನುಸಾರವಾಗಿಯೇ ಅಧ್ಯಯನ ಮಾಡುತ್ತಾರೆಯೇ? ಇದನ್ನು ಹೇಳುವುದು ಕಷ್ಟ. ಯಾಕೆಂದರೆ, ಚಿದಾನಂದಮೂರ್ತಿ ಆರಿಸಿಕೊಂಡ ವಿಷಯ, ಬಳಸುವ ಆಕರ, ನಂಬಿರುವ ಸಿದ್ಧಾಂತ, ಇಟ್ಟುಕೊಂಡ ಉದ್ದೇಶ-ಇವು ಅಧ್ಯಯನವನ್ನು ನಿರ್ದಿಷ್ಟ ದಿಕ್ಕಿಗೆ ಎಳೆದುಕೊಂಡು ಹೋಗುತ್ತವೆ. ಉದಾಹರಣೆಗೆ ಅಧ್ಯಯನಕಾರರು ಒಂದು ಜನಸಮುದಾಯದ ಸಮಗ್ರ ಜೀವನ ವಿಧಾನವೆ ಸಂಸ್ಕೃತಿ ಎಂಬ ವ್ಯಾಖ್ಯೆಯನ್ನು ಒಪ್ಪಿಕೊಂಡಿರಬಹುದು. ಆದರೆ ತಮ್ಮ ಅಧ್ಯಯನದಲ್ಲಿ ಆಳುವವರ್ಗದ ಚರಿತ್ರೆಯನ್ನು ಪ್ರತಿನಿಧಿಸುವ ಶಾಸನಗಳನ್ನು ಇಟ್ಟುಕೊಂಡು, ಇದೇ ನಾಡಿನ ಸಾಂಸ್ಕೃತಿಕ ಇತಿಹಾಸ ಎಂದು ಹೇಳತೊಡಗುತ್ತಾರೆ. ಆಗ ಇಟ್ಟುಕೊಂಡ ವ್ಯಾಖ್ಯೆಗೂ ಮಾಡುವ ವಿಶ್ಲೇಷಣೆಗೂ ಸಂಬಂಧ ಏರ್ಪಡುವುದಿಲ್ಲ. ಕೆಲವೊಮ್ಮೆ ಅಧ್ಯಯನಕಾರರು ಘೋಷಿತವಾಗಿ ಒಪ್ಪಿದ ಸಂಸ್ಕೃತಿ ವ್ಯಾಖ್ಯೆಗೆ ಕುರುಡುನಿಷ್ಠೆ ತೋರುತ್ತ  ತಮ್ಮ ಮಾಹಿತಿ ಹಾಗೂ ವಿಶ್ಲೇಷಣೆಗಳನ್ನೆಲ್ಲ ಅದರ ಚೌಕಟ್ಟಿಗೆ ಹೊಂದಿಸುತ್ತ ಹೋಗಬಹುದು. ಸಾಮಾನ್ಯವಾಗಿ ಅಂತರಧರ್ಮಿಯ ಕೊಡುಕೊಳೆ ನಡೆದಿರುವ ಒಂದು ಪಂಥವನ್ನು ಅಧ್ಯಯನ ಮಾಡುವವರು, ಸೈದ್ಧಾಂತಿಕವಾಗಿ ಜನಪ್ರಿಯವಾಗಿರುವ ಮತೀಯ ಗ್ರಹಿಕೆಗಳಿಂದ ಬಿಡಿಸಿಕೊಂಡಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಘೋಷಿತವಾಗಿ ಒಪ್ಪಿಕೊಂಡ ಸಂಸ್ಕೃತಿ ವ್ಯಾಖ್ಯೆಗೂ ವಾಸ್ತವದಲ್ಲಿ ಅನುಸರಿಸಿದ ಅಧ್ಯಯನ ವಿಧಾನಕ್ಕೂ ನಡುವೆ ಬಿರುಕು ಕಾಣಿಸುತ್ತವೆ; ಅಧ್ಯಯನಕ್ಕೆ ಆರಿಸಿಕೊಂಡ ವಸ್ತುವಿಗೂ ಅದನ್ನು ವಿಶ್ಲೇಷಣೆಯಲ್ಲಿ ಬಿಂಬಿಸುತ್ತಿರುವುದಕ್ಕೂ ನಡುವೆ ಬಿರುಕುಗಳು ಕಾಣಿಸುತ್ತದೆ.

ಕನ್ನಡದ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಇಂಥ ಅನೇಕ ವೈರುಧ್ಯಗಳು ಇವೆ. ಪ್ರಸಿದ್ಧ ಸಾಂಸ್ಕೃತಿಕ ಶೋಧಕರಾದ ಶಂ.ಬಾ.ಜೋಶಿ ಅವರಲ್ಲೂ ಈ ಸಮಸ್ಯೆಯಿದೆ. ಸಂಸ್ಕೃತಿಯ ವ್ಯಾಖ್ಯೆ ಬಂದಾಗ, ಅವರು ಕಲಾಕೇಂದ್ರಿತ ಸಂಸ್ಕೃತ ವ್ಯಾಖ್ಯೆಯನ್ನು ತಾತ್ವಿಕವಾಗಿ ಒಪ್ಪಿಕೊಳ್ಳುವಂತೆ ತೋರುತ್ತಾರೆ. ಆದರೆ ವಾಸ್ತವವಾಗಿ ತಮ್ಮ ಅಧ್ಯಯನದಲ್ಲಿ ಸಾಹಿತ್ಯ, ಚಿತ್ರಕಲೆ, ಮುಂತಾದ ಕಲ್ಪನಾ ಪ್ರಧಾನವಾದ ಕಲಾಭಿವ್ಯಕ್ತಿಗಳನ್ನು ಆಕರವಾಗಿ ಬಳಸಿಕೊಳ್ಳುವುದಿಲ್ಲ. ಇದಕ್ಕೆ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ ಉಪಸಂಸ್ಕೃತಿ ಅಧ್ಯಯನಗಳಲ್ಲೂ ಉದಾಹರಣೆಗಳಿವೆ. ಕೆಲವು ವಿದ್ವಾಂಸರು ‘ಸಮುದಾಯದ ಸಮಗ್ರ ಜೀವನ ವಿವರಗಳೇ ಸಂಸ್ಕೃತಿ’ ಎಂಬ ಮಾನವಶಾಸ್ತ್ರೀಯ ವ್ಯಾಖ್ಯೆಯಿಂದ ಶುರುಮಾಡುತ್ತಾರೆ. ನಂತರ ಪ್ರತಿಷ್ಠಿತ ವರ್ಗಗಳ ಜೀವನ ಮೌಲ್ಯಗಳ ದೃಷ್ಟಿಯಿಂದ ಬುಡಕಟ್ಟು ಸಮುದಾಯದ ಆಚರಣೆಗಳನ್ನು ‘ನೀಚ’ ಎಂದು ನೈತಿಕ ಮೌಲ್ಯಮಾಪನ ಮಾಡುತ್ತಾರೆ. ಇದು ಅಧ್ಯಯನದ ವಸ್ತು, ಒಪ್ಪಿಕೊಂಡ ಸಂಸ್ಕೃತಿ ಪರಿಕಲ್ಪನೆ ಹಾಗೂ ಅಧ್ಯಯನಕ್ಕೆ ಅನುಸರಿಸಿದ ವಿಧಾನ-ಇವುಗಳ ನಡುವೆ ಗಂಭೀರ ತಾತ್ವಿಕ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಈ ಬಿಕ್ಕಟ್ಟು ಸಂಸ್ಕೃತಿ ಚಿಂತನೆ ಹಾಗೂ ಸಾಂಸ್ಕೃತಿಕ ಅಧ್ಯಯನಗಳ ನಡುವೆ ಇರುವ ದೊಡ್ಡ ಸಮಸ್ಯೆ. ತಾತ್ವಿಕ ಎಚ್ಚರವುಳ್ಳವರು ಮಾತ್ರ ಪ್ರಚಲಿತವಿರುವ ಸಾಂಸ್ಕೃತಿಕ ಪರಿಕಲ್ಪನೆಗಳನ್ನು ವಿಮರ್ಶೆ ಮಾಡದೆ ಒಪ್ಪಿ ಕೊಳ್ಳುವುದಿಲ್ಲ. ಸಾಧ್ಯವಾದರೆ ಎಲ್ಲವನ್ನು ಪರೀಕ್ಷಿಸಿ ತಮ್ಮದೇ ಆದ ಹೊಸ ವ್ಯಾಖ್ಯೆಯನ್ನೂ ಅಧ್ಯಯನ ವಿಧಾನವನ್ನೂ ಕಟ್ಟಿಕೊಳ್ಳುತ್ತಾರೆ.

ಸಾಂಸ್ಕೃತಿಕ ಅಧ್ಯಯನಗಳಲ್ಲಿ ಮೇಲ್ಕಾಣಿಸಿದ ಸಮಸ್ಯೆ ಮತ್ತು ಸಾಧ್ಯತೆಗಳನ್ನು ಮತ್ತಷ್ಟು ಅರಿಯಬೇಕಾದರೆ, ಪ್ರಚಲಿತದಲ್ಲಿರುವ ಸಂಸ್ಕೃತಿ ಚಿಂತನೆಗಳನ್ನೂ ಅವುಗಳ ಹಿಂದಿನ ಸೈದ್ಧಾಂತಿಕ ಗ್ರಹಿಕೆ ಹಾಗೂ ಚಾರಿತ್ರಿಕ ಹಿನ್ನೆಲೆಗಳನ್ನೂ ಪರಿಶೀಲಿಸುವ ಜರೂರು ಇದೆ.

* * *