ಕನ್ನಡದ ಸಂಸ್ಕೃತಿ ಚಿಂತನೆ ಹಾಗೂ ಸಾಂಸ್ಕೃತಿಕ ಅಧ್ಯಯನಗಳ ಹಿನ್ನೆಲೆಯಲ್ಲಿರುವ ಸಂಸ್ಕೃತಿ ಚಿಂತಕರು ನಾನಾ ದೇಶಭಾಷೆಗಳಿಗೂ ಕಾಲಘಟ್ಟಗಳಿಗೂ ಸಂಬಂಧ ಪಟ್ಟವರು. ಹೆಚ್ಚಿನವರು ಯೂರೋಪಿಯನವರು. ಅವರಲ್ಲಿ ರಾಜಕೀಯ ಸಾಮಾಜಿಕ ಚಿಂತಕರು, ತತ್ವಶಾಸ್ತ್ರಿಗಳು, ಮಾನವಶಾಸ್ತ್ರಜ್ಞರು ಇದ್ದಾರೆ. ಎಂತಲೇ ಸಾಂಸ್ಕೃತಿಕ ಅಧ್ಯಯನಗಳು ಮೂಲಭೂತವಾಗಿ ಸಾಮಾಜಿಕ ರಾಜಕೀಯ ವಿಚಾರ ಪ್ರಣಾಳಿಕೆಗಳನ್ನು ಒಳಗೊಂಡಿರುವುದು. ಕನ್ನಡ ಚಿಂತಕರ ಮುಖ್ಯ ಲಕ್ಷಣವೆಂದರೆ – ಹೆಚ್ಚಿನವರು ಸಾಹಿತ್ಯ ಕ್ಷೇತ್ರದಿಂದ ಬಂದವರು. ಕನ್ನಡ ಸಂಸ್ಕೃತಿ ಚಿಂತನೆ ಸಾಮಾಜಿಕವಾಗಿ ಉಚ್ಚಜಾತಿಯ ಚಿಂತಕರಿಂದ ಶುರುವಾಗಿದೆ. ನಂತರದ ಘಟ್ಟಗಳಲ್ಲಿ ಕೆಳಸ್ತರದಿಂದ ಚಿಂತಕರು ಪ್ರವೇಶ ಮಾಡುತ್ತಾ ಬಂದಿದ್ದಾರೆ. ಕನ್ನಡದ ಸಂಸ್ಕೃತಿ ಚಿಂತನೆ ಹಾಗೂ ಸಾಂಸ್ಕೃತಿಕ ಅಧ್ಯಯನಗಳ ಮೇಲೆ ಪ್ರಭಾವ ಚೆಲ್ಲಿರುವ ವಿದ್ವಾಂಸರನ್ನು ಬಿಡಿಬಿಡಿಯಾಗಿ ನೋಡುವುದಕ್ಕಿಂತ, ಅವರು ಪ್ರತಿನಿಧಿಸುವ ಚಿಂತನೆಯ ಧಾರೆಯೊಳಗಿಟ್ಟು ನೋಡುವುದು ಉಪಯುಕ್ತ. ಚಿಂತನೆಯ ತಾತ್ವಿಕ ಸ್ವರೂಪದ ಆಧಾರದ ಮೇಲೆ ಇವರನ್ನು ನೈತಿಕ ಆದರ್ಶವಾದಿಗಳು, ಮಾನವಶಾಸ್ತ್ರದವರು, ಮಾರ್ಕ್ಸ್‌ವಾದಿಗಳು, ಸಮಾಜಶಾಸ್ತ್ರಜ್ಞರು, ಪೌರ್ವಾತ್ಯವಾದಿಗಳು, ಸ್ತ್ರೀವಾದಿಗಳು, ವಸಾಹತೋತ್ತರ ಚಿಂತಕರು, ಆಧುನಿಕೋತ್ತರ ಚಿಂತಕರು ಎಂದು ವಿಂಗಡಿಸಬಹುದು.

ನೈತಿಕ ಆದರ್ಶವಾದಿಗಳು

ಇಂಗ್ಲೆಂಡಿನ ಮ್ಯಾಥ್ಯೂ ಆರ್ನಲ್ಡ್ (೧೮೨೨-೧೮೮೮) ಒಬ್ಬ ನೈತಿಕ ಆದರ್ಶವಾದಿ ಸಂಸ್ಕೃತಿ ಚಿಂತಕ. ಪಶ್ಚಿಮದ ಸಂಸ್ಕೃತಿ ಚಿಂತಕರು ಇವನನ್ನು ವಿಮರ್ಶಿಸದೆ ಮುಂದಡಿ ಇಡುವುದಿಲ್ಲ. ಡಿವಿಜಿಯವರಿಂದ ಹಿಡಿದು ಕುವೆಂಪು ತನಕ, ಕನ್ನಡದ ಬಹುತೇಕ ಸಂಸ್ಕೃತಿ ಚಿಂತಕರ ಮೇಲೆ ಈತನ ಗಾಢಪ್ರಭಾವವಿದೆ. ಇವನ ಪ್ರಸಿದ್ಧ ಕೃತಿಯ ಹೆಸರು “ಕಲ್ಚರ್ ಅಂಡ್ ಆನಾರ್ಕಿ” (೧೮೫೯); ಕವಿಯೂ ಶಿಕ್ಷಣ ತಜ್ಞನೂ ಆಗಿದ್ದ ಆರ್ನಲ್ಡ್, ತನ್ನ ಕಾಲದ ಇಂಗ್ಲೆಂಡಿನ ಸಾಮಾಜಿಕ ಸನ್ನಿವೇಶಗಳಿಗೆ ಪ್ರತಿಕ್ರಿಯಿಸುತ್ತ ತನ್ನ ಚಿಂತನೆ ಮಂಡಿಸಿದನು. ಆಗ ಇಂಗ್ಲೆಂಡು ಕೈಗಾರಿಕಾ ಕ್ರಾಂತಿ ಮಾಡಿಕೊಂಡು, ಯಾಂತ್ರಿಕ ಬದುಕಿಗೆ ಒಳಗಾಗಿ, ಆಫ್ರಿಕಾ ಏಶಿಯಾ ಖಂಡದ ದೇಶಗಳನ್ನು ವಸಾಹತುಗಳಾಗಿ ಹಿಡಿದುಕೊಂಡು, ಸಂಕ್ರಮಣಾವಸ್ಥೆಯಲ್ಲಿತ್ತು. ಅವನ ಪ್ರಕಾರ ಸಂಸ್ಕೃತಿ ಎಂದರೆ, ಜಗತ್ತಿನಲ್ಲಿ ಈವರೆಗಿನ ಅತ್ಯುತ್ತಮವಾದ ಆದರ್ಶಗಳ ಚಿಂತನೆ ಮತ್ತು ಬೋಧೆ; ಅದು ಮಾನವರ ಅಂತರಂಗಕ್ಕೆ ಸಂಬಂಧಿಸಿದುದು ಹಾಗೂ ಪರಿಪೂರ್ಣತ್ವ ಸಾಧಿಸುವತ್ತ ಕರೆದೊಯ್ಯುವಂತಹದು. ಇಂತಹ ಸಂಸ್ಕೃತಿಯನ್ನು ವಿಲಾಸಿಗಳಾದ ಹಣವಂತರು ನಿರ್ಮಿಸಲಾರರು ಲೌಕಿಕಸಂಪತ್ತು ಗಳಿಸುವಲ್ಲಿ ಮುಳುಗಿರುವ ಮಧ್ಯಮವರ್ಗದವರು ಕಟ್ಟಲಾರರು. ಇನ್ನು ಹೊಟ್ಟೆಪಾಡಿಗಾಗಿ ದಿನನಿತ್ಯ ಹೋರಾಡುವ ಕೆಲಸಗಾರಿಂದ ಸಾಧ್ಯವೇ ಇಲ್ಲ. ಹೀಗಾಗಿ ಇಂಗ್ಲೆಂಡ್ ಸಮಾಜ ಒಂದು ಬಗೆಯ ಅರಾಜಕ ಸನ್ನಿವೇಶದಲ್ಲಿದೆ. ಇಂತಹ ಹೊತ್ತಲ್ಲಿ ಜ್ಞಾನಶಕ್ತಿ ಮತ್ತು ನೈತಿಕ ಆದರ್ಶ ಕೂಡಿದ ಒಂದು ಧೀಮಂತ ಮನೋಧರ್ಮವನ್ನು ಬೆಳೆಸುವ ಅಗತ್ಯವಿದೆ. ಮನೋಧರ್ಮವೇ ಸಂಸ್ಕೃತಿ.

ಈ ವ್ಯಾಖ್ಯೆಯನ್ನು ಒಪ್ಪಿಕೊಂಡಿದ್ದ ಮಾಸ್ತಿ ಹಾಗೂ ಡಿವಿಜಿಯವರು ಕನ್ನಡದ ಪ್ರತಿಷ್ಠಿತ ಲೇಖಕರಾಗಿದ್ದರಿಂದ, ಇವರ ಮೂಲಕ ೨೦ನೇ ಶತಮಾನದ ಮೊದಲ ಘಟ್ಟದ ಕನ್ನಡದ ಬಹುತೇಕ ಲೇಖಕರ ಮೇಲೆ ಆರ್ನಲ್ಡ್ ಆವರಿಸಿಕೊಂಡನು. ಈಗಲೂ ಕನ್ನಡದಲ್ಲಿ ಸಾಮಾನ್ಯ ಬಳಕೆಯಲ್ಲಿರುವ ಗ್ರಹಿಕೆ ಆರ್ನಲ್ಡನ ಪಳೆಯುಳಿಕೆಯಾಗಿದೆ.

ಕನ್ನಡ ನವ್ಯಕವಿಗಳಿಗೆ ಮುಖ್ಯ ಪ್ರೇರಣೆ ನೀಡಿದ ಪ್ರಸಿದ್ಧ ಕವಿ ಟಿ.ಎಸ್.ಎಲಿಯಟ್ (೧೮೮೫-೧೯೬೫) ಸಾಂಸ್ಕೃತಿಕ ಅಧ್ಯಯನಗಳ ಮೇಲೂ ಚಿಂತಕನಾಗಿ ಪ್ರಭಾವ ಹಾಕಿದವನು. ಈತನ “ನೋಟ್ಸ್ ಟುವರ್ಡ್ಸ್ ದಿ ಡೆಫಿನಿಶನ್ ಆಫ್ ಕಲ್ಚರ್” (೧೯೪೫) ಸಂಸ್ಕೃತಿ ಚಿಂತನೆ ನಡೆಸುವ ಕೃತಿಯಾಗಿದೆ. ಎಲಿಯಟ್ ಪ್ರಕಾರ “ಒಂದು ಪ್ರದೇಶದಲ್ಲಿ ವಾಸಿಸುತ್ತಿರುವ ಒಂದು ಜನಾಂಗದ ಸಮಗ್ರ ಜೀವನ ವಿಧಾನವೇ ಸಂಸ್ಕೃತಿ”; ಸಮಗ್ರ ಜೀವನ ವಿಧಾನವೆಂದರೂ ಅದರಲ್ಲಿ ಶ್ರೇಷ್ಠ  (high) ಹಾಗೂ ಶ್ರೇಷ್ಠವಲ್ಲದ ಸಂಸ್ಕೃತಿ ಸ್ತರಗಳಿವೆ. ಇವು ಆರೋಗ್ಯಕರ ಸಮಾಜಕ್ಕೆ ಅಗತ್ಯ’ (೧೯೪೮:೮೦) ‘ಹುಟ್ಟಿನಿಂದ ಸಾವಿನತನಕ’ ಇರುವ ಒಂದು ಸಮುದಾಯದ ಜೀವನ ವಿಧಾನಗಳನ್ನು ಸಂಸ್ಕೃತಿ ವ್ಯಾಖ್ಯೆಗೆ ಒಳಪಡಿಸುವ ಹಂತದವರೆಗೆ, ಎಲಿಯಟ್ ಮಾನವಶಾಸ್ತ್ರಿಗಳ ಅಭಿಪ್ರಾಯವನ್ನು ಒಪ್ಪುತ್ತಾನೆ. ಇಲ್ಲಿ ಅವನು ಆರ್ನಲ್ಡನ ಗ್ರಹಿಕೆಯ ಅನೇಕ ಮಿತಿಗಳನ್ನು ದಾಟುತ್ತಾನೆ. ಆದರೆ ಶ್ರೇಷ್ಠ ಸಂಸ್ಕೃತಿ ಎಂದು ಶ್ರೇಣೀಕರಣ ಮಾಡುವ ಮೂಲಕ ಮತ್ತೆ ಆದರ್ಶವಾದಕ್ಕೆ ಸಿಲುಕುತ್ತಾನೆ. ಕೊನೆಗೆ ಉನ್ನತ ಆದರ್ಶಗಳನ್ನು ಪ್ರೇರಿಸಬಲ್ಲ ಒಂದು ವಿಶ್ವಮಾನ್ಯ ಧರ್ಮದ ಪ್ರತಿಪಾದನೆಗಾಗಿ ಇಡೀ ಸಂಸ್ಕೃತಿ ಚರ್ಚೆಯನ್ನು ಮಣಿಸಿಬಿಡುತ್ತಾನೆ. ಎಲಿಯಟ್ಟನ ಚಿಂತನೆಗಳನ್ನು ಶಂಬಾ ಜೋಶಿಯವರು ತಮ್ಮ “ಭಾಷೆ ಮತ್ತು ಸಂಸ್ಕೃತಿ” (೧೯೭೫) ಕೃತಿಯಲ್ಲಿ ವಿಮರ್ಶಿಸುತ್ತಾರೆ. ಎಲಿಯಟ್ ಸಂಸ್ಕೃತಿಯನ್ನು ಮಾನವ ಬದುಕಿನ ಎಲ್ಲ ಸಂಗತಿಗಳಿಗೆ ಅಳವಡಿಸುವುದನ್ನು ಅವರು ‘ಮಾನವಧರ್ಮ’ದ ಲಕ್ಷಣ ಎಂದು ಭಾವಿಸುತ್ತಾರೆ. ಆದರೆ ಸಂಸ್ಕೃತಿಯನ್ನು ಧರ್ಮದ ಜತೆಗೆ ಸಮೀಕರಣ ಮಾಡುವುದನ್ನು ಅವರು ಒಪ್ಪುವುದಿಲ್ಲ. ಜಗತ್ತಿನಲ್ಲಿ ಯಾವ ಧರ್ಮವೂ ಉನ್ನತಾದರ್ಶಗಳನ್ನು ಭರಿಸಿಕೊಳ್ಳುವಂತಹ ಸ್ಥಿತಿಯಲ್ಲಿ ಇಲ್ಲ ಎಂಬುದು ಶಂಬಾರ ನಂಬಿಕೆ. ಎಲಿಯಟ್ಟನು ತನ್ನ ಸಂಸ್ಕೃತಿಚಿಂತನೆ ಮೂಲಕ ಮೃತ್ಯುಪಂಥವಾದ ಕ್ರೈಸ್ತಧರ್ಮವನ್ನು ಸಮರ್ಥಿಸುತ್ತಾನೆ ಎಂಬುದು ಅವರ ಆಕ್ಷೇಪ (೧೯೯೯:೫೮೩).

ಮಾರ್ಕ್ಸ್ವಾದಿಗಳು

ಮಾರ್ಕ್ಸ್‌ವಾದವು ಮೂಲತಃ ಒಂದು ರಾಜಕೀಯ ಆರ್ಥಿಕ ತತ್ವಜ್ಞಾನ. ಸಂಸ್ಕೃತಿ ಕುರಿತಂತೆ ಅದು ಪ್ರತ್ಯೇಕ ಚಿಂತನೆಯನ್ನೇನೂ ಮಂಡಿಸುವುದಿಲ್ಲ. ಆದರೆ ಆರ್ಥಿಕ ವ್ಯವಸ್ಥೆಯ ಬಗ್ಗೆ ಚರ್ಚಿಸುವಾಗ, ಪ್ರಾಸಂಗಿಕವಾಗಿ ಸಂಸ್ಕೃತಿಯನ್ನು ಕುರಿತು ಚರ್ಚಿಸುತ್ತದೆ. ಅದರ ಸಂಸ್ಕೃತಿ ಪರಿಕಲ್ಪನೆಯನ್ನು ಹೋಗೆ ಸಂಗ್ರಹಿಸಬಹುದು:

‘ಮಾನವರು ತಮ್ಮ ಮೂಲಭೂತ ಆವಶ್ಯಕತೆಗಳಾದ ಆಹಾರ, ವಸತಿ, ಆಶ್ರಯಗಳಿಗಾಗಿ ಪ್ರಕೃತಿಯ ಜತೆ ಸೆಣೆಸುತ್ತ, ಅದನ್ನು ಪಳಗಿಸುತ್ತ, ಉತ್ಪಾದನೆಯ ಉಪಕರಣಗಳನ್ನು ನಿರ್ಮಿಸಿದರು. ಈ ಉಪಕರಣದ ಶೋಧವು ಚಾರಿತ್ರಿಕವಾಗಿ ಕ್ರಾಂತಿಕಾರವಾಗಿತ್ತು. ಇದರಿಂದ ದೇಹಶ್ರಮ ಕಡಿಮೆಯಾಗಿ, ವಿರಾಮ ಸಿಕ್ಕು, ಬುದ್ಧಿಶಕ್ತಿ ಹೆಚ್ಚು ಕೆಲಸಮಾಡತೊಡಗಿತು. ಅವರು ಆಲೋಚನೆ ಜೀವಿಗಳಾದರು. ಹೀಗಾಗಿ ಅವರ ಪ್ರಜ್ಞೆಯು ಅವರು ಪರಿಸರದಲ್ಲಿ ಉತ್ಪಾದನೆಗಾಗಿ ನಡೆಸುತ್ತಿದ್ದ ಚಟುವಟಿಕೆಗಳ ಭಾಗವಾಯಿತು. ಮಾನವಪ್ರಜ್ಞೆಯನ್ನು ರೂಪಿಸಲು ಕಾರಣವಾಗಿರುವ ಆರ್ಥಿಕ ಚಟುವಟಿಕೆಗಳ ಈ ಭೌತಿಕ ಪರಿಸರವೇ ಮೂಲರಚನೆ (ಬೇಸ್ ಸ್ಟ್ರಕ್ಚರ್); ಇದರ ಅಡಿಪಾಯದ ಮೇಲೆ ಕಲೆ, ಸಾಹಿತ್ಯ, ತತ್ವಚಿಂತನೆ, ಧಾರ್ಮಿಕ ಆಚರಣೆ, ಬೌದ್ಧಿಕ ವಿಚಾರ, ನೈತಿಕಮೌಲ್ಯ, ತತ್ವಶಾಸ್ತ್ರ ಇತ್ಯಾದಿಗಳ ಲೋಕ ರೂಪುಗೊಳ್ಳುತ್ತದೆ. ಇದೇ ಮೇಲುರಚನೆಯಾದ (ಸೂಪರ್ ಸ್ಟ್ರಕ್ಚರ್) ಸಂಸ್ಕೃತಿ. ಇದು ಮೂಲರಚನೆಯ ಪ್ರತಿಬಿಂಬ ಆಗಿರುವುದರಿಂದ, ಅಲ್ಲಾಗುವ ಬದಲಾವಣೆ, ಇಲ್ಲೂ ಪರಿಣಾಮ ತರುತ್ತದೆ. ಆದ್ದರಿಂದ ಸಂಸ್ಕೃತಿಯನ್ನು ಮೂಲರಚನೆಯ ಸಂಬಂಧವಿಲ್ಲದೆ, ಸ್ವಾಯತ್ತ ಸಂಗತಿಯಾಗಿ ಚರ್ಚಿಸಬಾರದು’.

ಮಾರ್ಕ್ಸ್‌ವಾದದ ಕಲ್ಪನೆಯಲ್ಲಿ ಸಂಸ್ಕೃತಿಯು ಪ್ರಜ್ಞೆಯ ಜಗತ್ತಿಗೆ ಸಂಬಂಧಿಸಿದ್ದು, ಅದಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ. ಎಂತಲೇ ಸಾಂಪ್ರದಾಯಕ ಮಾರ್ಕ್ಸ್‌ವಾದಿಗಳು ಸಾಮಾಜಿಕ, ಆರ್ಥಿಕ, ರಾಜಕೀಯ ನೆಲೆಯ ಚರ್ಚೆಯನ್ನು ‘ಸಾಂಸ್ಕೃತಿಕ’ವೆಂಬ ಹೆಸರಲ್ಲಿ ಮಾಡುವುದಿಲ್ಲ. ಕ್ರಿಸ್ಟೋಫರ್ ಕಾಡ್‌ವೆಲ್‌ನ “ಸ್ಟಡೀಸ್ ಇನ್ ಡೈಯಿಂಗ್ ಕಲ್ಚರ್” (೧೯೩೮) ಇದಕ್ಕೆ ಒಳ್ಳೆಯ ನಿದರ್ಶನ. ಕಾಡ್‌ವೆಲ್ ಇಂಗ್ಲಿಷಿನ ನಾಟಕದ ಒಂದು ಪಾತ್ರ, ಕಾದಂಬರಿಯ ನಾಯಕ ಕಲ್ಪನೆ, ಆಂಗ್ಲ ಲೇಖಕರ ಕಲೆಯ ಕಲ್ಪನೆ, ಫ್ರಾಯ್ಡನ ಮನಶ್ಯಾಸ್ತ್ರ ಮುಂತಾದ ಸಂಗತಿಗಳನ್ನು ಇಟ್ಟುಕೊಂಡು, ಇವು ಹೇಗೆ ಬೂರ್ಜ್ವಾ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ ಎಂದು ವಿಶ್ಲೇಷಿಸುತ್ತಾನೆ. ತನ್ನ ವಿಶ್ಲೇಷಣೆಯಲ್ಲಿ ಅವನು ‘ಸಂಸ್ಕೃತಿ’ ಪದವನ್ನೇ ಬಳಸುವುದಿಲ್ಲ: ತನ್ನ ಅಧ್ಯಯನವನ್ನು ‘ಸಾಂಸ್ಕೃತಿಕ’ ಎಂದೂ ಕರೆದು ಕೊಳ್ಳುವುದಿಲ್ಲ. ಸಾಹಿತ್ಯ ತತ್ವಶಾಸ್ತ್ರ ಕಲೆ ಧರ್ಮ ಇತ್ಯಾದಿಯನ್ನು ಆರ್ಥಿಕ ರಾಜಕಾರಣದ (ಪೊಲಿಟಿಕಲ್ ಎಕಾನಮಿ) ನೆಲೆಯಿಂದ ವಿಶ್ಲೇಷಿಸುತ್ತಾನೆ. ವಾಸ್ತವದಲ್ಲಿ ಅವನ ನಿಧನದ ಬಳಿಕ ಪ್ರಕಟವಾದ ಈ ಕೃತಿಗೆ ಈಗಿರುವ ಹೆಸರನ್ನು ಕೊಡಲಾಯಿತು.

ಮ್ಯಾರ್ಕ್ಸ್‌ವಾದವೆಂದರೆ ಮಾರ್ಕ್ಸ್ ಪ್ರತಿಪಾದಿಸಿದ ತತ್ವಪ್ರಣಾಲಿ ಮಾತ್ರವಲ್ಲ. ಅವನ ನಂತರ ಬಂದ ಹಲವಾರು ಮಾರ್ಕ್ಸ್‌ವಾದಿಗಲೂ ಕಾಲಕಾಲಕ್ಕೆ, ಅವನ ಮೂಲಭೂತ ತತ್ವಕ್ಕೆ ಮಾಡಿದ ಸೃಜನಶೀಲ ವಿಸ್ತರಣೆಯೂ ಮಾಕ್ಸ್‌ವಾದವೇ. ಮುಂಬಂದ ಅನೇಕರು ಮೂಲ ಮಾರ್ಕ್ಸ್‌ವಾದದ ಸಂಸ್ಕೃತಿ ಗ್ರಹಿಕೆಯ ಮೇಲೆ ಗಂಭೀರ ಭಿನ್ನಭಿಪ್ರಾಯ ಮಂಡಿಸಿದರು. ಸಮಾಜದಲ್ಲಿ ನಿರ್ಣಾಯಕ  ಪರಿವರ್ತನೆಗಳು ಸಾಧ್ಯವಾಗುವುದು, ಮೂಲ ರಚನೆಯಲ್ಲಿ ಉಂಟಾಗುವ ಬದಲಾವಣೆಗಳಿಂದ, ನಿಜ. ಆದರೆ ಈ ಬದಲಾವಣೆಯ ಪ್ರಕ್ರಿಯೆಯಲ್ಲಿ ಸಂಸ್ಕೃತಿಯದು ಕೇವಲ ಅಧೀನ ಪಾತ್ರ ಎಂಬುದನ್ನು ಒಪ್ಪಲಾಗದು. ಸಂಸ್ಕೃತಿ ಕುರಿತ ಸಾಂಪ್ರದಾಯಕ ಮಾರ್ಕ್ಸ್‌ವಾದದ ಈ ಪರಿಕಲ್ಪನೆಯು ಆರ್ಥಿಕ ವಿಧಿವಾದವನ್ನು (Economic Determinism)ಪ್ರತಿನಿಧಿಸುತ್ತದೆ. ಇದು ಅಸೂಕ್ಷ್ಮ ಪರಿಕಲ್ಪನೆಯಾಗಿದ್ದು, ಸಮಕಾಲೀನ ಸಮಾಜದ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಲ್ಲ. ಪ್ರಜ್ಞೆಯ ಭಾಗವೆಂದು ಭಾವಿಸಲಾಗಿರುವ ಸಂಸ್ಕೃತಿಯ, ಪರಿಸರದ ಮೇಲೆ ಮಾಡುವ ಪ್ರಭಾವವನ್ನು ಕುರಿತು ಬೇರೆಯದೇ ತಾತ್ವಿಕ ವಿಶ್ಲೇಷಣೆ ಮಾಡಬೇಕು ಎಂದವರು ಪ್ರತಿಪಾದಿಸಿದರು. ಅವರು ಮಾರ್ಕ್ಸ್‌ನ ಮೂಲಗ್ರಹಿಕೆಯನ್ನು ತಿರಸ್ಕರಿಸದೆ, ಅದನ್ನು ತಮ್ಮ ಕಾಲದ ಅಗತ್ಯ ಅನುಭವಗಳ ಮೂಲಕ ಅರ್ಥಪೂರ್ಣವಾಗಿ ಬೆಳೆಸಿದರು. ಇವರಲ್ಲಿ ಇಟಲಿಯ ರಾಜಕೀಯ ಚಿಂತಕ ಅಂಟೋನಿಯೋ ಗ್ರಾಂಶಿ ಹಾಗೂ ಇಂಗ್ಲೆಂಡಿನ ಪ್ರಭಾವಶಾಲಿ ರಾಜಕೀಯ ಚಿಂತಕ ರೇಮಂಡ್ ವಿಲಿಯಮ್ಸ್ ಮುಖ್ಯರು. ಇವರಿಂದ ಮಾರ್ಕ್ಸ್‌ವಾದಿ ಸಾಂಸ್ಕೃತಿಕ ಅಧ್ಯಯನಗಳು ಹೊಸದಿಸೆ ಪಡೆದುಕೊಂಡವು.

ಗ್ರಾಂಶಿ (೧೮೯೧-೧೯೩೭) ಚಿಂತನೆಯ ಮುಖ್ಯ ಅಂಶಗಳಿವು: ‘ಸಂಸ್ಕೃತಿಯನ್ನು ಅಧೀನ ಪರಿಕಲ್ಪನೆ ಎನ್ನುವುದು ನಿಜವಲ್ಲ. ಅದು ಸಮಾಜವನ್ನು ಬದಲಾಯಿಸುವ ಚಾರಿತ್ರಿಕ ಶಕ್ತಿಗಳ ಜತೆ ಅಂತರ್‌ಸಂಬಂಧ ಹೊಂದಿದೆ. ಅದಕ್ಕೆ ಮೂಲರಚನೆಯನ್ನು ರೂಪಿಸುವ ಸೈದ್ಧಾಂತಿಕ ಶಕ್ತಿಯಿದೆ. ರಾಜಕೀಯ ಅಧಿಕಾರದ ಬೆಂಬಲ ಪಡೆದು ಯಜಮಾನಿಕೆ ನಡೆಸುವ ವರ್ಗಗಳಿರುವ ಸಮಾಜದಲ್ಲಿ, ಸಂಸ್ಕೃತಿಯು ಅಧಿಕಾರ ಪ್ರಕ್ರಿಯೆಯ ಭಾಗವಾಗಿರುತ್ತದೆ. ಇಂತಹ ಸಮಾಜದಲ್ಲಿ ಬಹುಸಂಖ್ಯಾತ ದುಡಿವ ಸಮುದಾಯಗಳ ಮೇಲೆ, ಅಧಿಕಾರಸ್ಥರು ಎರಡು ಬಗೆಯಲ್ಲಿ ಯಜಮಾನಿಕೆ ನಡೆಸುತ್ತಾರೆ. ಒಂದು, ಬಲಪ್ರಯೋಗದಿಂದ, ಎರಡನೆಯದು ದುಡಿವ ಜನರ ಮನಸ್ಸನ್ನೂ ತಮ್ಮ ಪರವಾಗಿ ಬದಲಿಸಿಕೊಳ್ಳುವ ಮೂಲಕ, ಎರಡನೆಯ ಈ ವಿಧಾನವು ಬಹಳ ಪರಿಣಾಮಕಾರಿಯಾದುದು. ಸಮಾಜಗಳು ಆರ್ಥಿಕತೆಯ ಮೇಲೆ ಮಾತ್ರವಲ್ಲ. ನೈತಿಕ ಮೌಲ್ಯಗಳು ಮೇಲೂ ನಿಂತಿವೆ. ಇದರಿಂದ ಅಧಿಕಾರಸ್ಥ ವರ್ಗಗಳು ಜನರ ಆಲೋಚನ ಕ್ರಮವನ್ನು ಬದಲಿಸುವ ಅಥವಾ ಅವರ ಆಲೋಚನಕ್ರಮದಲ್ಲಿ ತಮ್ಮ ಆಶಯಗಳನ್ನು ಬೆರೆಸುವ ಮೂಲಕ ಯಜಮಾನಿಕೆ ಉಳಿಸಿಕೊಳ್ಳುವ ತಂತ್ರ ಮಾಡುತ್ತವೆ. ಇದೇ ಸಾಂಸ್ಕೃತಿಕ ಯಜಮಾನಿಕೆ (Cultural Hegemony). ಆಗ ಮೂಲರಚನೆ ಬದಲಾದರೂ ಮೇಲುರಚನೆಯಾದ ಸಂಸ್ಕೃತಿಯು ಉಳ್ಳವರ ಪರವಾಗಿಯೇ ಉಳಿದಿರುತ್ತದೆ. ಹೀಗೆ ಬದಲಾಗದೆ ಉಳಿದ ತತ್ವವಿಚಾರ ಕಲೆ ಸಾಹಿತ್ಯ ಕಾನೂನುಗಳನ್ನು ಕ್ರಾಂತಿಕಾರಕಗೊಳಿಸಬೇಕು. ಇದರ ವಿರುದ್ಧವಾಗಿ ಜನರ ಪ್ರಜ್ಞೆಯನ್ನು ಬದಲಾಯಿಸಲು ಕ್ರಾಂತಿಕಾರಿ ವಿಚಾರಗಳ ಅಗತ್ಯವಿದೆ. ಪ್ರತಿಸಂಸ್ಕೃತಿ ರೂಪಿಸುವ ಬುದ್ಧಿಜೀವಿಗಳು ಯಾವತ್ತೂ ತಮ್ಮ ವಿಚಾರಗಳ ಮೂಲಕ ಆಳುವವರ್ಗದ ಸಂಸ್ಕೃತಿಯನ್ನು ನಾಶಗೊಳಿಸಬೇಕು’ (ಫಣಿರಾಜ್:೨೦೦೩:೪೦-೬೭). ಗ್ರಾಂಶಿಯ ಈ ವಾದವನ್ನು ‘ಸಾಂಸ್ಕೃತಿಕ ಮಾರ್ಕ್ಸ್‌ವಾದ’ ಎಂದು ಕರೆಯಲಾಗುತ್ತದೆ.

ಸಂಸ್ಕೃತಿಯನ್ನು ಅದು ಬರಿಯ ಮೇಲುರಚನೆ ಎಂಬ ಗ್ರಹಿಕೆಯಾಚೆ ತೆಗೆದುಕೊಂಡು ಹೋಗಿ, ಅರ್ಥವಿಸ್ತರಣೆ ಮಾಡಿದವರಲ್ಲಿ ರೇಮಂಡ್ ವಿಲಿಯಮ್ಸ್ (೧೯೨೧-೧೯೮೮) ಕೂಡ ಮುಖ್ಯನು. ಸಂಸ್ಕೃತಿ ಪರಿಕಲ್ಪನೆಯು ಸಮಕಾಲೀನ ಚಿಂತನೆಯಲ್ಲಿ ಹಾಗೂ ಸಮಾಜದ ಅನೇಕ ಕ್ಷೇತ್ರಗಳಲ್ಲಿ ಒಂದು ಪ್ರಭಾವಶಾಲಿ ಪರಿಕಲ್ಪನೆಯಾಗ ಬಳಕೆಯಾಗುತ್ತಿರುವುದನ್ನು ವಿಲಿಯಮ್ಸ್ ಗಮನಿಸಿದನು. ಅದನ್ನು ವರ್ತಮಾನದ ಚಲನಶೀಲ ಸನ್ನಿವೇಶಗಳನ್ನು ವಿಶ್ಲೇಷಿಸುವಂತೆ ಮರುರೂಪಿಸಿದನು. ಇದಕ್ಕಾಗಿ ೧೮-೧೯ನೇ ಶತಮಾನದ ಇಂಗ್ಲೆಂಡಿನ ಚಿಂತಕರು ಬಳಸಿದ ಸಂಸ್ಕೃತಿ ಪರಿಕಲ್ಪನೆಗಳನ್ನೆಲ್ಲ ಚಾರಿತ್ರಿಕ ಸಮೀಕ್ಷೆಗೆ ಒಳಪಡಿಸಿದನು. “ಕಲ್ಚರ್ ಅಂಡ್ ಸೊಸೈಟಿ” (೧೯೫೮) ಅವನ ಪ್ರಸಿದ್ಧ ಕೃತಿ.

ವಿಲಿಯಮ್ಸ್‌ನ ಪ್ರಕಾರ ಸಂಸ್ಕೃತಿಯ ಆರ್ಥಿಕವಾದ ತಳರಚನೆಗೆ ಅಧೀನವಾದ ಮೇಲುರಚನೆಯಲ್ಲ. ನೈತಿಕ ಮೌಲ್ಯಗಳ ರಾಶಿಯೂ ಅಲ್ಲ. ಅದು ನಿತ್ಯದ ಬದುಕಿಗೆ ಸಂಬಂಧಿಸಿದ ಒಂದು ಸಾಮಾನ್ಯ ಸಂಗತಿ (‘ಕಲ್ಚರ್ ಈಸ್ ಆರ್ಟಿನರಿ’). ಸಂಸ್ಕೃತಿಯ ಸಮಾಜದ ಸಮಗ್ರ ಜೀವನ ವಿಧಾನ. ಅದಕ್ಕೆ ರಾಜಕೀಯ ವ್ಯಾಖ್ಯಾನಗಳಿಂದ ಉಂಟಾಗುವ ಸಾಮಾಜಿಕ ಪ್ರಕ್ರಿಯೆಗಳ ನೆಲೆಯಿದೆ. ಅದಕ್ಕೆ ಎರಡು ಅರ್ಥಗಳಿವೆ ೧. ಸಮುದಾಯದ ಎಲ್ಲರಿಗೂ ನಿತ್ಯಜೀವನದಲ್ಲಿ ಪರಿಚಿತವಿರುವ ಅರ್ಥ. ೨. ಇನ್ನೂ ತಿಳಿಯದೆ ಹೊಸದಾಗಿ ಹುಟ್ಟಲಿರುವ ಅರ್ಥ. ಇವೆರಡೂ ಅರ್ಥಗಳೂ ಎಲ್ಲ ಮಾನವ ಸಮಾಜಗಳಲ್ಲಿ, ಆ ಸಮಾಜಗಳ ಎಲ್ಲರ ಮನಸ್ಸಿನಲ್ಲಿ ಸಂಭವಿಸುವ ಸಾಮಾನ್ಯ ಪ್ರಕ್ರಿಯೆ. ಇವುಗಳ ಮೂಲಕವೆ ನಾವು ಸಂಸ್ಕೃತಿಯ ಸ್ವರೂಪವನ್ನು ನೋಡಬೇಕು.

ವಿಲಿಯಮ್ಸ್‌ನ ಈ ಸಂಸ್ಕೃತಿ ಸಿದ್ಧಾಂತವು ಸಮಾಜದ ಸಮಸ್ತ ಸಂಗತಿಗಳನ್ನು ತಾರತಮ್ಯ ಮಾಡದೆ ಸಮಾನ ದೃಷ್ಟಿಯಿಂದ ನೋಡಲು ಪ್ರೇರಿಸುತ್ತದೆ. ಅವನ ಪ್ರಕಾರ, “ಎಲ್ಲ ಬಗೆಯ ಬರೆಹಗಳೂ ಅರ್ಥ ಮತ್ತು ಮೌಲ್ಯವನ್ನು ಹೊಂದಿವೆ”. ಈ ಚಿಂತನೆಯ ಎರಡು ಸಂಗತಿಗಳೆಂದರೆ, ಬದುಕಿನ ಸಣ್ಣಪುಟ್ಟ ಸಂಗತಿಯನ್ನು ಗಂಭೀರವಾಗಿ ಪರಿಗಣಿಸುವುದು ಹಾಗೂ ಬಹುಶಿಸ್ತೀಯ ನೆಲೆಯಿಂದ ಸಂಸ್ಕೃತಿಯನ್ನು ನೋಡುವುದು.

ರಶಿಯಾದ ಪ್ರಸಿದ್ಧ ಕಮ್ಯುನಿಸ್ಟ್ ರಾಜಕಾರಣಿಯಾದ ಲೆನಿನ್ (೧೮೭೦-೧೯೨೪) ರಾಷ್ಟ್ರೀಯ ಸಂಸ್ಕೃತಿ, ದುಡಿಯುವ ಜನರ ಸಂಸ್ಕೃತಿ, ಬೂರ್ಶ್ವಾಸಂಸ್ಕೃತಿ ಮುಂತಾದ ಪರಿಕಲ್ಪನೆಗಳನ್ನು ಚರ್ಚಿಸುತ್ತಾನೆ. ಅವನು ಮೂಲರಚನೆಯನ್ನು ಸೂತ್ರದಂತೆಯೂ ಮೇಲುರಚನೆ (ಅಥವಾ ಪರಿಸರ ಮತ್ತು ಪ್ರಜ್ಞೆ) ಗಳನ್ನು ಸೂತ್ರವಾಡಿಸಿದಾಗ ಆಡುವ ಬೊಂಬೆಯಂತೆಯೂ ಮಂಡಿಸುವುದಿಲ್ಲ. ಅವೆರಡೂ ಕೆಲಸ ಮಾಡುವ ಪ್ರಕ್ರಿಯೆಯನ್ನು ವಿವರಿಸುತ್ತ ಸಂಸ್ಕೃತಿಯನ್ನು ಸಮಗ್ರವಾದ ಪರಿಕಲ್ಪನೆಯಾಗಿಯೇ ಬಳಸುತ್ತಾನೆ (೧೯೬೭:೧೬೭). ಇವುಗಳ ನಡುವಿನ ಸಂಬಂಧವನ್ನು ಮತ್ತಷ್ಟು ಸಮಗ್ರವಾಗಿ ವಿವೇಚಿಸಿದವನು, ಚೀನಾದ ಮಾವೊ ತ್ಸೆ ತುಂಗ್ (೧೮೯೩:೧೯೭೬). ತತ್ವಶಾಸ್ತ್ರಜ್ಞನೂ ರಾಜಕಾರಣಿಯೂ ಆಗಿದ್ದ ಮಾವೋ ಸಂಸ್ಕೃತಿ ಪರಿಕಲ್ಪನೆಗೆ ತನ್ನ ರಾಜಕಾರಣದ ಮೂಲಕ ಹೊಸ ಆಯಾಮವನ್ನೆ ನೀಡಿದನು. ಸಂಸ್ಕೃತಿಯು ಒಂದು ಸಮಾಜದ ರಾಜಕಾರಣ ಹಾಗೂ ಆರ್ಥಿಕತೆಗಳ ಸೈದ್ಧಾಂತಿಕ ಪ್ರತಿಬಿಂಬ ಎನ್ನುವಾಗ, ಮಾವೋ ಮೂಲ ಮಾರ್ಕ್ಸ್‌ವಾದಿಯೇ. ಅವನ ಪ್ರಕಾರ ಸಂಸ್ಕೃತಿ ಎಂದರೆ, ಮನುಷ್ಯರ ಮನಸ್ಸಿನಲ್ಲಿ ಆಲೋಚನೆಗಳನ್ನು ಹುಟ್ಟುಹಾಕಬಲ್ಲ ವಿಚಾರ, ಸಾಹಿತ್ಯ, ಧರ್ಮ, ಕಲೆ, ಆಚರಣೆಗಳ ಮೊತ್ತ. ಆದರೆ ಮಾವೋ ಮುಂದುವರೆದು ‘ಸಾಂಸ್ಕೃತಿಕ ಕ್ರಾಂತಿ’ ‘ಸಾಂಸ್ಕೃತಿಕ ಸೈನ್ಯ’ ಇತ್ಯಾದಿ ಹೊಸ ಪರಿಕಲ್ಪನೆಗಳನ್ನು ರೂಪಿಸಿ, ರಾಜಕೀಯ ಕಾರ್ಯಕ್ರಮಗಳಾಗಿ ಜಾರಿಮಾಡುತ್ತಾನೆ. ಈ ಮೂಲಕ ಸಂಸ್ಕೃತಿಯನ್ನು ಅದು ಹುಟ್ಟುವ ಪರಿಸರದ ಆರ್ಥಿಕ, ಸಾಮಾಜಿಕ, ರಾಜಕಾರಣದ ಜತೆ ಮತ್ತಷ್ಟು ಗಾಢವಾಗಿ ಬೆಸೆಯುತ್ತಾನೆ.

‘ಸಾಂಸ್ಕೃತಿಕ ಕ್ರಾಂತಿ’ ಎಂದರೆ, ಜನರ ಮನಸ್ಸಿನಲ್ಲಿರುವ ಸಾಮಾಜಿಕ, ರಾಜಕೀಯ, ಆರ್ಥಿಕ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುವ ವಿಚಾರಗಳನ್ನು ಅರ್ಥಪೂರ್ಣವಾಗಿ ಬದಲಾಯಿಸುವ ಮತ್ತು ಜನಾಭಿಪ್ರಾಯ ರೂಪಿಸುವ ಸೈದ್ದಾಂತಿಕ ಆಂದೋಲನ. ಚೀನಾದಲ್ಲಿ ಸ್ಥಾಪನೆಯಾಗುತ್ತಿದ್ದ ಸಮಾಜವಾದಿ ಸಮಾಜ ವ್ಯವಸ್ಥೆಯ ಚಿಗುರನ್ನು ಚಿವುಟಲು, ಕಮ್ಯುನಿಸ್ಟ್ ಪಕ್ಷದೊಳಗೇ ವಿರೋಧಿಶಕ್ತಿಗಳು ನಿರತವಾಗಿದ್ದವು. ಅವನ್ನು ಅಡಗಿಸಲು ಮತ್ತು ಪಕ್ಷದ ವಿಚಾರಗಳಲ್ಲಿ ಕ್ರಾಂತಿಕಾರಕ ಚೈತನ್ಯ ತುಂಬಲು, ಮಾವೋ ೧೯೬೬ರಲ್ಲಿ ‘ಸಾಂಸ್ಕೃತಿಕ ಕ್ರಾಂತಿ’ ಶುರುಮಾಡಿದ. ‘ಪ್ರತಿಗಾಮಿಗಳು ತಾವು ನೆಲೆಗೊಳ್ಳಲು, ಸಿದ್ಧಾಂತಗಳನ್ನು ರೂಪಿಸಬಲ್ಲ ‘ಮೇಲುರಚನೆ’ಯನ್ನು ಅಂದರೆ ಸಾಹಿತ್ಯ, ನಾಟಕ, ಸಿನಿಮಾ, ಸಂಗೀತ, ಪತ್ರಿಕೆ, ರೇಡಿಯೊ, ಪುಸ್ತಕ, ಅಕೆಡಮಿಕ್ ಸಂಶೋಧನೆ, ಶಾಲೆಯ ಪಠ್ಯಕ್ರಮಗಳನ್ನು ವಶಪಡಿಸಿಕೊಳ್ಳುತ್ತಾರೆ. ಯಾಕೆಂದರೆ ಇವು ಜನರ ಆಲೋಚನಾಕ್ರಮವನ್ನು ರೂಪಿಸುತ್ತವೆ. ಆದ್ದರಿಂದ ಜನರಲ್ಲಿ ಕ್ರಾಂತಿಕಾರಕ ಆಲೋಚನಾಕ್ರಮ ಹುಟ್ಟುಹಾಕಬೇಕಾದರೆ ‘ಮೇಲುರಚನೆ’ಯನ್ನೂ ಮಾರ್ಕ್ಸ್‌ವಾದಿಗಳು ವಶಪಡಿಸಿಕೊಳ್ಳಬೇಕು ಮತ್ತು ಬದಲಾಯಿಸಬೇಕು’. ಇದು ಅವನ ಸಾಂಸ್ಕೃತಿಕ ಕ್ರಾಂತಿಯ ಗುರಿಯಾಗಿತ್ತು (೧೯೬೦:೫೮) ಮಾವೋ ‘ಚೀನಾ ದೇಶವು ಸಮಾಜವಾದಿ ಸಂಸ್ಕೃತಿ’ಯತ್ತ ಮುನ್ನಡೆಯಬೇಕು ಎಂದು ಹೇಳುವಾಗ, ಸಂಸ್ಕೃತಿ ಶಬ್ದವನ್ನು ಕೇವಲ ವಿಚಾರಗಳ ಸಂಕೇತವಾಗಿ ಗ್ರಹಿಸುವುದಿಲ್ಲ.  ಈ ವಿಚಾರಗಳನ್ನೂ ಒಳಗೊಂಡಂತೆ ಸಮಾಜದ ಆರ್ಥಿಕ ರಾಜಕಾರಣದ ಮೂಲಭೂತ ರಚನೆಯನ್ನೂ ಬದಲಾಯಿಸಬೇಕು ಎಂಬ ವಿಶಾಲ ಅರ್ಥದಲ್ಲಿ ಬಳಸುತ್ತಾನೆ.

ಮಾರ್ಕ್ಸ್‌ವಾದದ ಈ ಸಂಸ್ಕೃತಿ ವ್ಯಾಖ್ಯೆಗಳು ಅನೇಕ ಅಧ್ಯಯನಗಳಲ್ಲಿ ಅನ್ವಯಗೊಂಡಿವೆ. ಸಾಕಿ ಅವರ “ಮೇಕಿಂಗ್ ಹಿಸ್ಟರಿ: ಕರ್ನಾಟಕಾಸ್ ಪೀಪಲ್ಸ್ ಅಂಡ್ ದೆರ್ ಪಾಸ್ಟ್” (೧೯೯೮) ಕೃತಿಯ ಮೊದಲ ಪುಟದಲ್ಲಿಯೇ ಭೌತಿಕ ಪರಿಸರದ ಮೂಲರಚನೆಯ ಪ್ರಜ್ಞೆಯ ಮೇಲು ರಚನೆಯನ್ನು ಪ್ರಭಾವಿಸುವ ಕುರಿತ ಕಾರ್ಲ್‌ಮಾರ್ಕ್ಸ್‌ನ ಪ್ರಸಿದ್ಧ ಹೇಳಿಕೆಯ ಉಲ್ಲೇಖವಿದೆ. ಇದು ಸಾಂಕೇತಿಕವಾಗಿದೆ. ಭಾರತದ ಪ್ರಾಚೀನ ಭೌತವಾದಿ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದ ಚಿಂತಕರಾದ ದೇವಿಪ್ರಸಾದ ಚಟ್ಟೋಪಾಧ್ಯಾಯ ಅವರು ಭಾರತದ ಭೌತವಾದಿಗಳ್ನು ಕುರಿತ ತಮ್ಮ ಅಧ್ಯಯನ “ಲೋಕಾಯತ”ದಲ್ಲಿ (೧೯೫೯) ಸಂಸ್ಕೃತಿ ಶಬ್ದವನ್ನು ಹೆಚ್ಚಾಗಿ ಬಳಸುವುದಿಲ್ಲ. ಕನ್ನಡದಲ್ಲಿ ಮಾರ್ಕ್ಸ್‌ವಾದಿ ಚಿಂತಕರೂ ಸಾಹಿತ್ಯ ವಿಮರ್ಶಕರೂ ಮೊದಲ ಘಟ್ಟದಲ್ಲಿ ಸಾಂಸ್ಕೃತಿಕ ಪರಿಭಾಷೆಯನ್ನು ಬಳಸುವುದಿಲ್ಲ. ಬರಗೂರರ ಮೊದಲ ಕೃತಿಯ ಹೆಸರು “ಸಾಹಿತ್ಯ ಮತ್ತು ರಾಜಕಾರಣ” (೧೯೮೧). ಇದು ಸಂಪ್ರದಾಯಕ ಮಾರ್ಕ್ಸ್‌ವಾದವನ್ನು ತೀವ್ರವಾಗಿ ಅನುಸರಿಸಿದ ಅಥವಾ ಕನ್ನಡದಲ್ಲಿ ಸಂಸ್ಕೃತಿ ಪರಿಕಲ್ಪನೆಯಿನ್ನೂ ವ್ಯಾಪಕವಾಗಿ ಬಳಕೆಗೆ ಬಂದಿರದ ಪರಿಣಾಮವಿರ ಬಹುದು. ಆದರೆ ನಂತರದ ಬರಗೂರರ ಎಲ್ಲ ಪುಸ್ತಕಗಳು ‘ಸಂಸ್ಕೃತಿ’ ಶಬ್ದವನ್ನು ತಮ್ಮ ತಲೆಬರೆಹದಲ್ಲಿಯೇ ಇಟ್ಟುಕೊಂಡು ಪ್ರಕಟವಾದವು.

ಮೊದಲು ಸಂಸ್ಕೃತಿಯ ಮೇಲುರಚನೆಗೆ ಅಧೀನವಾದುದು ಎಂಬ ಗ್ರಹಿಕೆ; ನಂತರ ಸಂಸ್ಕೃತಿಗೂ ಒಂದು ಸ್ವಾಯತ್ತ ಅಸ್ತಿತ್ವವಿದೆ ಎಂಬ ವಾದ; ನಂತರ ಯಾವುದೂ ಯಾವುದಕ್ಕೂ ಅಧೀನವಲ್ಲ, ಎರಡೂ ಸ್ತರಗಳು ಸಂದರ್ಭಕ್ಕೆ ಅನುಸಾರವಾಗಿ ಪರಸ್ಪರ ಪ್ರಭಾವ ಬೀರುತ್ತವೆ, ಇದನ್ನು ಆಯಾ ಸಂದರ್ಭವೇ ನಿರ್ಧರಿಸುತ್ತದೆ, ಇವನ್ನೆಲ್ಲ ಸಾಪೇಕ್ಷವಾಗಿ ಗಮನಿಸಬೇಕು ಎಂಬ ತಿಳಿವಳಿಕೆ – ಹೀಗೆ ಮೂರು ಘಟ್ಟಗಳಲ್ಲಿ ಮಾರ್ಕ್ಸ್‌ವಾದಿ ಸಂಸ್ಕೃತಿ ಚರ್ಚೆ ಬೆಳೆದುಬಂದಿತು. ಕೊನೆಯ ಎರಡು ವಿಸ್ತರಣಾ ಚಿಂತನೆಗಳನ್ನು ಮಂಡಿಸಿದರು ಮಾರ್ಕ್ಸ್‌ವಾದವನ್ನು ಸೈದ್ಧಾಂತಿಕವಾಗಿ ವಿಮರ್ಶಿಸುವ ವಿಭಿನ್ನ ಧಾರೆಗೆ ಸೇರಿದರು.

ಕನ್ನಡದ ಮಾರ್ಕ್ಸ್‌ವಾದಿ ಅಧ್ಯಯನಗಳನ್ನು ಗಾಢವಾಗಿ ಪ್ರಭಾವಿಸಿದ ಭಾರತೀಯ ಮಾರ್ಕ್ಸ್‌ವಾದಿ ವಿದ್ಯಾಂಸರಲ್ಲಿ. ದೇವಿಪ್ರಸಾದ ಚಟ್ಟೋಪಾಧ್ಯಾಯ, ಡಿ.ಡಿ. ಕೋಸಾಂಬಿ, ರೋಮಿಲಾ ಥಾಪರ್ ಮುಖ್ಯರು. ಇವರು ಪ್ರಾಚೀನ ಭಾರತದ ಚರಿತ್ರೆ, ಧರ್ಮ ಹಾಗೂ ಸಮಾಜಗಳನ್ನು ಮಾರ್ಕ್ಸ್‌ವಾದಿ ನೆಲೆಯಿಂದ ಸಾಂಸ್ಕೃತಿಕ ಅಧ್ಯಯನ ಮಾಡಲು ಅಡಿಪಾಯ ಹಾಕಿಕೊಟ್ಟವರು. ಅದರಲ್ಲೂ ಡಿ.ಡಿ.ಕೋಸಾಂಬಿಯವರ “ಮಿತ್ ಅಂಡ್ ರಿಯಾಲಿಟಿ”ಯ ಚಿಂತನೆಗಳ ಪರಿಣಾಮ ವ್ಯಾಪಕವಾದುದು.

ಪೌರ್ವಾತ್ಯವಾದಿಗಳೂ

೨೦ನೇ ಶತಮಾನದ ಪ್ರಥಮ ಘಟ್ಟದಲ್ಲಿ ಪೌರ್ವಾತ್ಯವಾದಿ (ಓರಿಯಂಟಲಿಸ್ಟ್) ಚಿಂತಕರಾದ ಆನಂದ ಕುಮಾರಸ್ವಾಮಿ, ಭಾರತೀಯ ಸಂಸ್ಕೃತಿಯ ಸಮರ್ಥಕ ಚಿಂತಕರೆಂದೇ ಹೆಸರಾಗಿದ್ದಾರೆ. ಅವರ ಚಿಂತನೆಗಳು ಅವರು “ಡ್ಯಾನ್ಸ್ ಆಫ್ ದಿ ಶಿವ” ಕೃತಿಯಲ್ಲಿ ಪ್ರಕಟವಾಗಿದೆ. ‘ಭಾರತವನ್ನೂ ಒಳಗೊಂಡಂತೆ ಪೌರ್ವಾತ್ಯ ರಾಷ್ಟ್ರಗಳು ಕಲೆ, ತತ್ವಜ್ಞಾನ, ಸಾಹಿತ್ಯಗಳಲ್ಲಿ ಅಗಾಧ ಸಾಧನೆ ಮಾಡಿವೆ. ಈ ಸಾಧನೆಯು ವಸಾಹತುಶಾಹಿಯಾಗುವ ಮುಂಚಿನ ಯೂರೋಪು ಮಾಡಿದ ಸಾಧನೆಗೆ ಸಮನಾದುದು. ರಾಜಕೀಯವಾಗ ಏಶ್ಯಾವನ್ನು ಗೆದ್ದು ಅಳಲಾರಂಭಿಸಿದ ಬಳಿಕ ಯೂರೋಪಿಗೆ ಸಾಂಸ್ಕೃತಿಕ ಅಹಂಕಾರ ತುಂಬಿಕೊಂಡಿತು. ಇದರಿಂದ ಅದಕ್ಕೆ ಪೂರ್ವ ದೇಶಗಳಿಂದ ಏನನ್ನೂ ಕಲಿಯಲಾಗಲಿಲ್ಲ. ಇದಕ್ಕೆ ಪೂರಕವಾಗಿ ಪಾಶ್ಚಾತ್ಯ ಸಂಸ್ಕೃತಿಯನ್ನು ಕುರುಡು ವ್ಯಾಮೋಹದಿಂದ ಕಲಿತ ಏಶಿಯನರು, ತಮ್ಮ ದೇಶದ ಶ್ರೀಮಂತ ಸಂಸ್ಕೃತಿಯ ಪರಂಪರೆಯ ಬಗ್ಗೆ ಏನೂ ಅರಿಯದ ಕುರುಡಾಗಿದ್ದಾರೆ’ – ಎಂಬುದು ಅವರ ವಾದ. ಈ ವಾದವು ಬ್ರಿಟಿಶರ ವಿರುದ್ಧ ವಸಾಹತುಶಾಹಿ ಆಳ್ವಿಕೆ ವಿರುದ್ಧ ಚಳುವಳಿಗಳು ನಡೆಯುತ್ತಿದ್ದ ಹೊತ್ತಲ್ಲಿ, ರಾಷ್ಟ್ರೀಯವಾದಿ ಸ್ವಾಭಿಮಾನ ಹುಟ್ಟಲು ಪ್ರೇರಕವಾಯಿತು. ಇದಕ್ಕೆ ಬೆಂಬಲವಾಗಿ ಯೂರೋಪಿನ ಪೌರ್ವಾತ್ಯವಾದಿ ಕೆಲವು ಚಿಂತಕರು ಒದಗಿಬಂದರು.

ಮುಂದೆ ಪೌರ್ವಾತ್ಯವಾದದ ದೋಷಗಳ ಮೇಲೆ ಎಡ್ವರ್ಡ್ ಸೈದ್ ಪ್ರಖರ ಚಿಂತನೆಯನ್ನು ಮಂಡಿಸಿದನು. ಪ್ಯಾಲಿಸ್ತೈನ್ ಮೂಲದ ಅಮೆರಿಕನ್ ಚಿಂತಕನಾದ ಸೈದನ “ಓರಿಯಂಟಲಿಸಂ” (೧೯೭೮) ಅರಬ್ ಜಗತ್ತುಗಳ ಮೇಲೆ ಯೂರೋಪು ಕಟ್ಟಿರುವ ಮಿತ್‌ಗಳನ್ನು ವಿಶ್ಲೇಷಿಸುವ ಕೃತಿ. ಇದರ ಪ್ರಕಾರ ಪಶ್ಚಿಮದ ದೇಶಗಳು ಪೂರ್ವದೇಶಗಳನ್ನು ಆಕ್ರಮಿಸಿಕೊಂಡು ರಾಜಕೀಯವಾಗಿ ಆಳ್ವಿಕೆ ನಡೆಸುತ್ತ, ಅವನ್ನು ಕುರಿತು ಕಟ್ಟಿದ ಸಂಕಥನವೇ ಪೌರ್ವಾತ್ಯವಾದ. ಈ ಸಂಕಥನವು, ಪೂರ್ವದೇಶಗಳು ಗತಕಾಲದಲ್ಲಿ ಪಶ್ಚಿಮಕ್ಕೆ ಭಿನ್ನವೂ ವಿಶಿಷ್ಟವೂ ಆದ ಸಂಸ್ಕೃತಿ ಹೊಂದಿದ್ದವು ಎಂದು ವೈಭವೀಕರಿಸುತ್ತದೆ. ಆದರೆ ಆಳದಲ್ಲಿ ತನ್ನ ರಾಜಕೀಯ ಹಿತಾಸಕ್ತಿಗಳನ್ನು ಈ ಸಂಕಥನ ಸಾಧಿಸುತ್ತದೆ. ಎದು ವಸಾಹತುಶಾಹಿ ಲೂಟಿ ಹಾಗೂ ದಬ್ಬಾಳಿಕೆಗಳಿಂದ ಇತರೆಡೆಗೆ ಗಮನ ಸೆಳೆಯಲು ಬಳಸಿದ ತಂತ್ರ. ಈ ಚಿಂತನೆಯನ್ನು ಒಪ್ಪಿಕೊಂಡುಬಿಟ್ಟರೆ, ಪೂರ್ವದ ದೇಶಗಳು ತಮ್ಮ ವರ್ತಮಾನ ಹಾಗೂ ಭವಿಷ್ಯಗಳಿಗೆ ತಕ್ಕಂತೆ ಸಮಾಜ, ರಾಜಕಾರಣ, ಚರಿತ್ರೆಗಳನ್ನು ವ್ಯಾಖ್ಯಾನಿಸಿಕೊಳ್ಳುವುದರಿಂದ ವಂಚಿತವಾಗುತ್ತವೆ ಎಂದು ಪೌರ್ವಾತ್ಯವಾದದ ಆರ್ಥಿಕ ರಾಜಕಾರಣವನ್ನು ಸೈದ್ ವಿಶ್ಲೇಷಿಸಿದನು.

ಭಾರತದಲ್ಲಿ ಗತಕಾಲದ ಭವ್ಯಸಂಸ್ಕೃತಿಯ ಬಗ್ಗೆ ಉಬ್ಬಿನಿಂದ ವಾದ ಮಂಡಿಸುವ ಹಾಗೂ ಪಶ್ಚಿಮವನ್ನು ಉಗ್ರವಾಗಿ ವಿರೋಧಿಸುವ ಎಲ್ಲ ಚಿಂತನೆಗಳಲ್ಲಿ ಪೌರ್ವಾತ್ಯವಾದಿ ಸಂಸ್ಕೃತಿ ಚಿಂತನೆಯ ನೆರಳುಗಳಿವೆ. ಅದರಲ್ಲೂ ಕನ್ನಡದ ಅನೇಕ ಸಂಸ್ಕೃತಿ ಚಿಂತಕರ ಮೇಲೆ ಕುಮಾರಸ್ವಾಮಿ ಚಿಂತನೆಗಳ ಪ್ರಭಾವವಿದೆ. ಈ ಪ್ರಭಾವ ಪಡೆದವರಲ್ಲಿ ಶಂಕರ ಮೊಕಾಶಿ ಪುಣೇಕರರು ಒಬ್ಬರು. ಅವರ ‘ಸೃಜನಶೀಲತೆ ಮತ್ತು ಪರಿಪೂರ್ಣ ಸಂಸ್ಕೃತಿ’, ‘ಸ್ವಾತಂತ್ರ್ಯ ಪೂರ್ವ ಹೊಸಗನ್ನಡಸಾಹಿತ್ಯ’ (೧೯೮೧) ಎಂಬ ಲೇಖನಗಳಲ್ಲಿ ಯೂರೋಪಿನ ಕಟುವಾದ ಟೀಕೆಯೂ ಭಾರತೀಯ ಸಂಸ್ಕೃತಿಯ ಸಮರ್ಥನೆಯೂ ಇದೆ. ಭಾರತೀಯ ಸಂಸ್ಕೃತಿಯನ್ನೂ ಪಶ್ಚಿಮಕ್ಕೆ ಎದುರಾಳಿಯಾಗಿಟ್ಟು, ಅದರ ವಿಶೇಷತೆಗಳನ್ನು ಸಮರ್ಥಿಸುವ ಈ ಚಿಂತನೆಯಲ್ಲಿ ಕೆಲವು ಮೂಲಭೂತ ಸಮಸ್ಯೆಗಳಿವೆ. ಅವೆಂದರೆ, ಭಾರತದ ಅಸ್ಪೃಶ್ಯತೆ, ಜಾತಿಪದ್ಧತಿ, ಸತಿಪದ್ಧತಿ, ಮತೀಯ ಕ್ರೌರ್ಯದ ನೆನಪುಗಳಿಗೆ ಮೌನವಾಗಿರುವುದು; ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ವೈದಿಕ ಪರಂಪರೆಗೆ ಸೇರಿದ ವೇದ, ಉಪನಿಷತ್ತು, ಅಭಿಜಾತ ಮಹಾಕಾವ್ಯ, ಶಿಲ್ಪಕಲೆ, ಚಿತ್ರಕಲೆಗಳ ಮೂಲಕ ಗುರುತಿಸುವುದು. ಜಾನಪದ ಹಾಗೂ ಕೆಳಜಾತಿಗಳ ಲೋಕಕ್ಕೆ ಬಾರದಿರುವುದು. ಈ ದೃಷ್ಟಿಕೋನ ಪಶ್ಚಿಮದ ಅಹಂಕಾರದ ವಿರುದ್ಧ ಸಮರ ಸಾರಿ ಸ್ವಾಭಿಮಾನ ಪಡೆಯಲು ಹಾಗೂ ವಸಾಹತುಶಾಹೀಕರಣ ಉಂಟುಮಾಡುವ ಗುಲಾಮಿ ಮನೋಭಾವದಿಂದ ಹೊರಬರಲು ಕೊಂಚ ನೆರವಾಗಿರಬಹುದು. ಆದರೆ ತಮ್ಮ ಉನ್ನತ ಸ್ಥಾನಮಾನ ಕಳೆದುಹೋಗುತ್ತಿರುವ ಪ್ರತಿಷ್ಟಿತ ವರ್ಗಗಳು ಹಾಗೂ ವೈದಿಕ ಸಂಸ್ಕೃತಿಯ ಪುನರುಜ್ಜೀವನವಾದಿಗಳು ಇದರ ಪ್ರಯೋಜನ ಪಡೆದರು ಎಂಬುದನ್ನು ಮರೆವಂತಿಲ್ಲ.

ಕನ್ನಡದ ಮೊದಲ ಘಟ್ಟದ ಸಾಂಸ್ಕೃತಿಕ ಚಿಂತನೆಗಳಲ್ಲಿ, ಅದರಲ್ಲೂ ಕಳೆದುಹೋದ ಚರಿತ್ರೆಯಲ್ಲಿ ನಮ್ಮ ಸಾಂಸ್ಕೃತಿಕ ಹಿರಿಮೆಯನ್ನು ಕಾಣಬಯಸುವ ಅಧ್ಯಯನಗಳಲ್ಲಿ, ಈ ನಿಲುವಿನ ಕೈವಾಡವಿದೆ. ಇದನ್ನು ಅನಕೃ ಸಂಪಾದಿಸಿದ “ಭಾರತೀಯ ಸಂಸ್ಕೃತಿ” ಗ್ರಂಥದಲ್ಲೂ ಶ್ರೀಕಂಠಶಾಸ್ತ್ರಿಯವರ “ಭಾರತೀಯ ಸಂಸ್ಕೃತಿ” ಕೃತಿಯಲ್ಲೂ ಕಾಣಬಹುದು. ಮೇಲ್ವರ್ಗಗಳ ಜೀವನಕ್ಕೆ ಸಂಬಂಧಿಸಿದ ವಿವರಗಳನ್ನು ಆಧರಿಸುವ ಈ ನಿಲುವು, ಭಾರತೀಯ ಚರಿತ್ರೆಯ ಪುನಾರಚನೆಯಲ್ಲಿ ವ್ಯಾಪಕವಾಗಿ ಕೆಲಸ ಮಾಡಿತು. ಅದರಲ್ಲೂ ವಿಜಯನಗರದ ಚರಿತ್ರೆ ಕುರಿತ ಅಧ್ಯಯನಗಳಲ್ಲಿ ಇದರ ಪಾತ್ರ ಬಹುದೊಡ್ಡದು. ಕುತೂಹಲಕ್ಕೆ ಅನಕೃ ಅವರು ಬರೆದ ‘ವಿಜಯನಗರದ ಸಂಸ್ಕೃತಿ’ ಲೇಖನವನ್ನು ಗಮನಿಸಿಬಹುದು. ಇದು ರಾಜಕೀಯ ಪ್ರಭುತ್ವವನ್ನು ಜನರ ನೆಲೆಯಿಂದ ರಾಜಕೀಯ ಆರ್ಥಿಕ ಆಯಾಮಾಗಳಲ್ಲಿ ಪರಿಶೀಲಿಸುವುದಿಲ್ಲ. ಬದಲಿಗೆ ಪ್ರಭುತ್ವಗಳು ಸಾಹಿತ್ಯ, ಸಂಗೀತ, ಕಲೆಗಳಿಗೆ ಕೊಟ್ಟ ಪ್ರೋತ್ಸಾಹದ ಉದಾಹರಣೆಗಳ ಮೂಲಕ ವಿಶ್ಲೇಷಿಸುತ್ತದೆ. ಇದುವೇ ಈ ದೃಷ್ಟಿಕೋನದ ದೊಡ್ಡ ಮಿತಿ, ಭಾರತೀಯ ಸಮಾಜದ ನಿಷ್ಠುರ ವಿಮರ್ಶೆಯಿಂದಲೇ ಸಾಮಾಜಿಕ ನ್ಯಾಯ ಪಡೆಯ ಬಯಸುವ ಸಮುದಾಯಗಳಿಗೆ ಈ ವಿಧಾನ ಸಹಜವಾಗಿಯೇ ಒಪ್ಪಿಗೆಯಾಗಲಿಲ್ಲ.

ಶಿವರಾಮ ಕಾರಂತರ ಸಂಸ್ಕೃತಿ ಚಿಂತನೆಗಳ ಮೇಲೆಯೂ ಕುಮಾರಸ್ವಾಮಿ ಅವರ ಪ್ರಭಾವವಿದೆ. ಸಂಸ್ಕೃತಿ ಚರ್ಚೆಗೆ ಅವರು ಚಿತ್ರಕಲೆ, ವಾಸ್ತುಶಿಲ್ಪ, ಮೂರ್ತಿಶಿಲ್ಪಗಳನ್ನು ಆಧರಿಸುವುದರಲ್ಲಿ ಇದನ್ನು ಕಾಣಬಹುದು. ‘ಕಲೆ ಮತ್ತು ಸಂಸ್ಕೃತಿ’ ಸಂಸ್ಕೃತಿಯ ಕೆನೆಯಾಗಿ ಕಲೆ’ (ಮಲ್ಯ, ೧೯೯೪) ಮುಂತಾದ ಅವರ ಲೇಖನಗಳ ಹೆಸರುಗಳೂ ಇದಕ್ಕೆ ಪೂರಕವಾಗಿವೆ. ಯೂರೋಪಿನ ಕಲಾಸಾಧನೆಯನ್ನು ಕಾರಂತರು ಮತ್ತೆಮತ್ತೆ ಬೆರಗಿನಿಂದ ಚರ್ಚಿಸುತ್ತಾರೆ. ಯಕ್ಷಗಾನದಲ್ಲಿ ಅವರು ಮಾಡಿದ ಪ್ರಯೋಗಗಳ ಹಿಂದೆಯೂ ಪೌರ್ವಾತ್ಯವಾದಿ ಚಿಂತನೆಯ ನೆರಳಿದೆ. ಕಾರಂತರು ಕಲೆಗಳ ಮೂಲಕ ಸಂಸ್ಕೃತಿಯನ್ನು ಹುಡುಕುವ ವಿಷಯದಲ್ಲಿ ಕುಮಾರಸ್ವಾಮಿಯವರಿಂದ ಪ್ರೇರಣೆ ಪಡೆದರೂ, ಭಾರತೀಯ ಸಮಾಜವನ್ನು ವಿಮರ್ಶೆಯಿಲ್ಲದೆ ನೋಡುವ ಪೌರ್ವಾತ್ಯವಾದಿ ನಿಲುವಿನಿಂದ ದೂರ ಉಳಿದರು. ಪುಣೇಕರರ ಹಾಗೆ ವೈದಿಕ ಪರಂಪರೆಯಲ್ಲಿ ಸಂಸ್ಕೃತಿಯ ಸಾರ ಹುಡುಕುವುದನ್ನು ನಾಸ್ತಿಕ ವಿಚಾರವಾದಿಯಾದ ಅವರು ಮಾಡಲಿಲ್ಲ. ಜತೆಗೆ ಕಾರಂತರು ಸಾಂಸ್ಕೃತಿಕ ಮಾನವಶಾಸ್ತ್ರದ ಅಧ್ಯಯನಗಳ ಮಾದರಿಗಳನ್ನು ಅನುಸರಿಸಿದರು. ಇದನ್ನು ಅವರ ಸಂಸ್ಕೃತಿ ಕುರಿತ ಲೇಖನಗಳಲ್ಲಿ ಗುರುತಿಸಬಹುದು (ಮಲ್ಯ, ೧೯೯೪).

೨೦ನೇ ಶತಮಾನದ ಕೊನೆಯ ಹಂತದಲ್ಲಿ ಅನೇಕ ಭಾರತಶಾಸ್ತ್ರದ ಚಿಂತಕರು (ಇಂಡಾಲಜಿಸ್ಟರು) ಕರ್ನಾಟಕದಲ್ಲೂ ಕೆಲಸ ಮಾಡಿದರು. ಅವರಲ್ಲಿ ಜರ್ಮನಿಯ ಗುಂಥೆರ್ ಸೊಂಥಮೈರ್ (೧೯೩೪-೧೯೯೨) ಒಬ್ಬನು. ಸೊಂಥೈಮರ್ ಜರ್ಮನಿಯಿಂದ ಭಾರತದ ಅಧ್ಯಯನಕ್ಕೆ ಬಂದ ಆಧುನಿಕ ವಿದ್ವಾಂಸರಲ್ಲಿ ಪ್ರಮುಖನು. ಕರ್ನಾಟಕ ಮಹಾರಾಷ್ಟ್ರಗಳಲ್ಲಿ ಇರುವ ಮೈಲಾರ ಖಂಡೋಬಾ ಪರಂಪರೆಗಳ ಮೇಲೆ ಅಧ್ಯಯನ ಮಾಡಿದವನು. “ಪ್ಯಾಸ್ಟೊರಲಿಸ್ಟ್ ಡೈಟೀಸ್ ಆಫ್ ವೆಸ್ಟರ್ನ್ ಇಂಡಿಯಾ” ಅವನ ಪ್ರಸಿದ್ಧ ಪುಸ್ತಕ. ಕನ್ನಡದ ಸಾಂಸ್ಕೃತಿಕ ಅಧ್ಯಯನಕಾರರಾದ ಪುರುಷೋತ್ತಮ ಬಿಳಿಮಲೆ, ರಾಜಾರಾಂ ಹೆಗಡೆ ಅವರ ಅಧ್ಯಯನಗಳಲ್ಲಿ ಇವರ ಪ್ರಭಾವವಿದೆ. ಹೆಗಡೆಯವರು ತಮ್ಮ “ಲೌಕಿಕ ಅಲೌಕಿಕ: ಭಾರತೀಯ ಇತಿಹಾಸಲ್ಲಿ ಪ್ರಭುತ್ವ ರಚನೆ ಮತ್ತು ಮತಸಂಪ್ರದಾಯಗಳು” ಕೃತಿಯನ್ನು ಸೊಂಥಮೈರ್‌ಗೆ ಅರ್ಪಿಸಿರುವುದು ಸಾಂಕೇತಿಕವಾಗಿದೆ. ಆದರೆ ಕೊಂಚ ಹಳೆಗಾಲದ ವಿದ್ವಾಂಸರಾದ ಎಂ.ಬಿ.ನೇಗಿನಹಾಳರು ತಮ್ಮ “ಮೈಲಾರ-ಖಂಡೋಬಾ: ಒಂದು ಸಾಂಸ್ಕೃತಿಕ ಅಧ್ಯಯನ”ದಲ್ಲಿ ಮರಾಠಿ ಸಂಶೋಧಕರಾದ ರಾ.ಚಿಂ. ಢೇರೆ ಹಾಗೂ ಜಿ.ಎಚ್. ಖರೆ ಅವರ ಸಂಶೋಧನೆಗಳ ನೆರವನ್ನು ಪಡೆಯುತ್ತಾರೆ. ಶಂ.ಬಾ. ಜೋಶಿ ಹಾಗೂ ಚಿದಾನಂದಮೂರ್ತಿಯವರ ಪ್ರೇರಣೆ ಪಡೆಯತ್ತಾರೆ. ಆದರೆ ಸೊಂಥಮೈರನನ್ನು ಚರ್ಚೆ ಮಾಡುವುದಿಲ್ಲ (ಪ್ರಸ್ತಾವನೆ:೧೯೯೨). ಇದಕ್ಕೆ ಕಾರಣ ತಲೆಮಾರಿನ ಅಂತರವಿರಬಹುದು.

ಮಾನವಶಾಸ್ತ್ರಜ್ಞರು

ಕರ್ನಾಟಕದ ಸಮಾಜಶಾಸ್ತ್ರ ಹಾಗೂ ಜಾನಪದ ಅಧ್ಯಯನಕಾರರು ಪಶ್ಚಿಮದ ಅನೇಕ ಸಾಂಪ್ರದಾಯಕ ಮಾನವಶಾಸ್ತ್ರಜ್ಞರ ಪ್ರಭಾವಕ್ಕೆ ಒಳಗಾದವರು. ಅವರಲ್ಲಿ ಇ.ಬಿ. ಟೇಲರ್, ಕ್ರೋಬರ್, ರೂತ್ ಬೆನಡಿಕ್ಟ್, ಹರ್‌ಸ್ಕೋವಿಟ್ಸ್, ಫ್ರಾನ್ಜ್ ಬೋಅಸ್ ಪ್ರಮುಖರು. ಸಾಂಸ್ಕೃತಿಕ ಮಾನವಶಾಸ್ತ್ರವು ವಿಶ್ವವಿದ್ಯಾಲಯಗಳಲ್ಲಿ ಪಠ್ಯಕ್ರಮವಾಗಿದ್ದು, ಹೆಚ್ಚಿನ ಜಾನಪದ ವಿದ್ವಾಂಸರು ಅದನ್ನು ಶಾಸ್ತ್ರೀಯವಾಗಿ ಕಲಿತಿದ್ದು ಇವರ ಪ್ರಭಾವಕ್ಕ ಒಂದು ಕಾರಣ. ಮಾನವಶಾಸ್ತ್ರವು ಸಾಂಸ್ಕೃತಿಕ ಮಾನವಶಾಸ್ತ್ರವಾಗಿ ರೂಪಾಂತರಗೊಂಡ ಬಳಿಕ, ಅದನ್ನು ‘ಸಾಂಸ್ಕೃತಿಕ ಅಧ್ಯಯನ’ ಮಾಡುವವರು ಹೆಚ್ಚಾಗಿ ಬಳಸತೊಡಗಿದರು. ಫ್ರಾನ್ಜ್ ಬೋಅಸನ ‘ಕಲ್ಚರ್-ಎ ಕಲ್ಚರ್’ ಪರಿಕಲ್ಪನೆಯ ಮೂಲಕ ಬರಗೂರರು ಉಪಸಂಸ್ಕೃತಿ ಪರಿಕಲ್ಪನೆಯ ರೂಪಿಸಿದರು. ಶೈಕ್ಷಣಿಕ ಅಧ್ಯಯನದ ಭಾಗವಾಗಿ ಚಿಂತನೆಗಳು ಪ್ರಭಾವ ಬೀರಿದಾಗ ಉಂಟಾಗುವ ಮಿತಿಗಳು ಇಲ್ಲಿವೆ. ಜತೆಗೆ ಸಮಾಕಾಲೀನ ರಾಜಕಾರಣದ ತುರ್ತಿನಿಂದು ಶೈಕ್ಷಣಿಕ ಶಿಸ್ತಿನ ಮಿತಿಗಳನ್ನೂ ಮೀರುವಿಕೆಯೂ ಇವೆ.

ಇ.ಬಿ. ಟೇಲರ್ (೧೯೩೨-೯೨) ಮೂಲತಃ ಬುಡಕಟ್ಟುಗಳ ಮೇಲೆ ಅಧ್ಯಯನ ವಿಧಾನಗಳನ್ನು ರೂಪಿಸಿದವನು. ಅವನ ಪ್ರಸಿದ್ಧ ಪುಸ್ತಕ “ಪ್ರಿಮಿಟಿವ್ ಕಲ್ಚರ್” (೧೮೭೧) ಪ್ರಕಾರ, ಸಂಸ್ಕೃತಿ ಎಂದರೆ, ಸಮುದಾಯದಲ್ಲಿ ಅದರ ಸದಸ್ಯರು ಪಡೆದುಕೊಳ್ಳುವ ಸಮಸ್ತ ತಿಳಿವಳಿಕೆ-ನಂಬಿಕೆ-ಆಚರಣೆ ನೀತಿಗಳ ಮೊತ್ತ. ಸಮಗ್ರತೆಯ ಈ ವ್ಯಾಖ್ಯೆಯ ಸಹಜವಾಗಿ ಸಂಸ್ಕೃತಿಯಲ್ಲಿ ಮೇಲುಕೀಳುಗಳನ್ನು ಅಥವಾ ಹಿಂದುಳಿದ ಮುಂದುವರೆದ ವಿಂಗಡಣೆಗಳನ್ನು ನಿರಾಕರಿಸುತ್ತದೆ. ಎಲ್ಲ ಸಮುದಾಯಗಳ ನಂಬಿಕೆ-ಆಚರಣೆಗಳನ್ನು ಮೌಲ್ಯರಹಿತವಾಗಿ ಸಮಾನವಾಗಿ ನೋಡಲು ಪ್ರೇರಿಸುತ್ತದೆ. ಆದ್ದರಿಂದ ಈ ವ್ಯಾಖ್ಯೆ ಯಜಮಾನ ಸಂಸ್ಕೃತಿಯ ವಿರುದ್ಧ ಹಿಂದುಳಿದ ಸಮುದಾಯಗಳಿಂದ ಬಂದ ಚಿಂತಕರಿಗೆ ತಂತಮ್ಮ ಸಂಸ್ಕೃತಿಯನ್ನು ಮೌಲೀಕರಿಸಲು ಒಂದು ಸೈದ್ಧಾಂತಿಕ ಜಿಗಿತ ಕೊಟ್ಟಿತು. ಜಾನಪದದವರೂ ಕೆಳವರ್ಗಗಳಿಂದ ಬಂದ ಚಿಂತಕರೂ ಕರ್ನಾಟಕದಲ್ಲಿ ಈ ಮಾನವಶಾಸ್ತ್ರೀಯ ಸಂಸ್ಕೃತಿ ವ್ಯಾಖ್ಯೆಯನ್ನು ಆಸ್ಥೆಯಿಂದ ಸ್ವೀಕರಿಸಿದರು. ಕರ್ನಾಟಕದ ಅನೇಕ ಸಮಾಜಶಾಸ್ತ್ರಜ್ಞರು ಮತ್ತು ಮಾನವಶಾಸ್ತ್ರಜ್ಞರು ಮಾಡುವ ಸಾಂಸ್ಕೃತಿಕ ಅಧ್ಯಯನಗಳು ಟೇಲರರ ಮಾದರಿಯವು.

ಟೇಲರನ ನಂತರ ಘಟ್ಟದಲ್ಲಿ ಪ್ರಭಾವ ಬೀರಿದ ವಿದ್ವಾಂಸರಲ್ಲಿ ಜನಪದರ ಮಂತ್ರವಿದ್ಯೆ, ಪುರಾಣ, ಧರ್ಮಗಳ ಮೇಲೆ “ಗೋಲ್ಡನ್ ಬೋ” ಸಂಪುಟಗಳನ್ನು ರಚಿಸಿದ ಫ್ರೇಜರ್ ಒಬ್ಬ. ದಕ್ಷಿಣ ಅಮೆರಿಕೆಯ ಪುರಾಣಗಳ ಮೇಲೆ ಅಧ್ಯಯನ ಮಾಡಿದ ಫ್ರೆಂಚ್ ಮಾನವಶಾಸ್ತ್ರಜ್ಞ ಲೆವಿಸ್ಟ್ರಾಸ್ ಮತ್ತೊಬ್ಬ. ಕರ್ನಾಟಕದ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಲೆವಿಸ್ಟ್ರಾಸನ ಪ್ರಭಾವ ಕಡಿಮೆ. ೮೦ರ ದಶಕದಿಂದ ಕನ್ನಡದ ಸಾಂಸ್ಕೃತಿಕ ರಾಜಕಾರಣಕ್ಕೆ ಪ್ರವೇಶಿಸಿದ ಕೆಳಸ್ತರದ ವಿದ್ವಾಂಸರಿಗೆ ಸಮಾಜವನ್ನು ಅರಿಯುವುದಕ್ಕಿಂತ ಅದರ ಜತೆ ಸಂಘರ್ಷಿಸುವ ಮತ್ತು ಪರಿವರ್ತಿಸುವ ತತ್ವಜ್ಞಾನಗಳ ಅಗತ್ಯವೆನಿಸಿರಬೇಕು. ಹೀಗಾಗಿ ರಚನಾವಾದಿಯಾದ ಲೆವಿಸ್ಟ್ರಾಸನ ಚಿಂತನೆಗಳು ಹೆಚ್ಚಿನ ಪ್ರಭಾವ ಬೀರಲಿಲ್ಲವೆನಿಸುತ್ತದೆ. ನಮ್ಮ ಜಾನಪದ ವಿದ್ವಾಂಸರು ಲೆವಿಸ್ಟ್ರಾಸನ ಚಿಂತನೆಗಳನ್ನು ಪರಿಚಯಿಸುವ ಲೇಖನಗಳನ್ನು ಬರೆದರು. ಅವು ಶೈಕ್ಷಣಿಕ ಅಗತ್ಯವನ್ನು ಪೂರೈಸುವ ಮಟ್ಟಕ್ಕೆ ನಿಂತವೇ ಹೊರತು, ಕರ್ನಾಟಕದ ಅಧ್ಯಯನಗಳಲ್ಲಿ ಆನ್ವಯಿಕವಾಗಿ ಬಳಕೆಯಾಗಿದ್ದು ಕಡಿಮೆ.

ಸಮಾಜಶಾಸ್ತ್ರಜ್ಞರು

ಕರ್ನಾಟಕದ ಹೊಸ ತಲೆಮಾರಿನ ಸಾಂಸ್ಕೃತಿಕ ಅಧ್ಯಯನಗಳ ಮೇಲೆ ತೀವ್ರ ಪ್ರಭಾವ ಬೀರಿದವರು. ಸಮಾಜವಿಜ್ಞಾನಿಗಳು. ರಾಜಕೀಯ ಚಿಂತಕರಾದ ಮಾರ್ಕ್ಸ್, ಗಾಂಧಿ, ಅಂಬೇಡ್ಕರ್, ಲೋಹಿಯಾ ಮುಂತಾದವರು, ಕರ್ನಾಟಕದ ಅನೇಕ ನೆಲೆಯ ಚಿಂತನೆ ಹಾಗೂ ಅಧ್ಯಯನಗಳಿಗೆ ಪ್ರೇರಕರಾಗಿದ್ದಾರೆ. ಇವರ ಜತೆಗೆ ಭಾರತೀಯ ಜಾತಿಸಮಾಜದ ಮೇಲೆ “ಹೋಮೊ ಹೈರಾರ್ಕಿಸ್” ಕೃತಿ ರಚಿಸಿದ ಫ್ರೆಂಚ್ ಸಮಾಜಶಾಸ್ತ್ರಜ್ಞ ಲೂಯಿಸ್ ಡುಮೋನ ಹೆಸರನ್ನು ಸೇರಿಸಬಹದು. ಭಾರತೀಯ ಸವರ್ಣೀಯ ಸಮಾಜದ ಮೇಲಿನ ಇವನ ವಿಶ್ಲೇಷಣೆಗಳು ವಿಮರ್ಶಾತ್ಮಕವಾಗಿವೆ. ಎಂತಲೇ ಇವು ದಲಿತ-ಕೆಳಜಾತಿ ಚಿಂತಕರಿಗೆ ಆಕರ್ಷಕವಾಗಿ ಕಂಡವು. ಕನ್ನಡದ ಸಾಂಸ್ಕೃತಿಕ ಅಧ್ಯಯನಗಳ ಮೇಲಿನ ಡುಮೋ ಪ್ರಭಾವಕ್ಕೆ ಹೋಲಿಸಿದರೆ, ಎಂ. ಎನ್. ಶ್ರೀನಿವಾಸ್ ಮುಂತಾದ ಕರ್ನಾಟಕದ ಸಮಾಜಶಾಸ್ತ್ರಜ್ಞರ ಚಿಂತನೆ ಅಥವಾ ಅಧ್ಯಯನ ಮಾದರಿಗಳು, ಹೆಚ್ಚು ಪ್ರಭಾವ ಬೀರಲಿಲ್ಲ. ಇದು ಕುತೂಹಲಕರ, ಇದಕ್ಕೆ ಒಂದು ಕಾರಣ, ಶ್ರೀನಿವಾಸರ ಚಿಂತನೆಗಳು ಸಂರಚನವಾದಿ ಸಮಾಜಶಾಸ್ತ್ರಕ್ಕೆ ಸೇರಿದ್ದುದು. ಸಂರಚನಾವದಿ ಚಿಂತನೆ ಸಮಾಜದ ರಚನೆಗಳನ್ನು ಯಥಾಸ್ಥಿತಿಯಲ್ಲಿಟ್ಟು ವಿವರಿಸುತ್ತದೆ. ಅವುಗಳ ಒಳಗಿರುವ ಸಂಘರ್ಷ ಹಾಗೂ ಚಲನಶೀಲತೆಗಳು ಬಗ್ಗೆ ಮೌನತಾಳುತ್ತದೆ. ಎರಡನೆಯದಾಗಿ, ಶ್ರೀನಿವಾಸರ ಚಿಂತನೆಗಳು ೭೦ರ ದಶಕದಿಂದ ಶುರುವಾದ ಸಾಮಾಜಿಕ ರಾಜಕೀಯ ನ್ಯಾಯದ ಭಾಗವಾಗಿ ಶುರುವಾದ ಅಧ್ಯಯನಗಳಿಗೆ ಪೂರಕವಾಗಿರಲಿಲ್ಲ. ಅವರು ಕೊಡಗಿನ ಸಮಾಜವನ್ನು ಅಧ್ಯಯನ ಮಾಡುತ್ತ ಮಂಡಿಸಿದ ಸಂಸ್ಕೃತೀಕರಣದ ಪರಿಕಲ್ಪನೆ ಜಾಗತಿಕ ಮಟ್ಟದಲ್ಲೇನೊ ಪ್ರಖ್ಯಾತವಾಯಿತು. ಆದರೆ ಕರ್ನಾಟಕದ ಅಧ್ಯಯನಗಳಲಿ ಅದು ದೊಡ್ಡ ಪ್ರಭಾವ ಬೀರಿದಂತೆ ಕಾಣುವುದಿಲ್ಲ. ಅವರ ಸುಪ್ರಸಿದ್ಧ ಹಳ್ಳಿ ಗ್ರಾಮಾಧ್ಯಯನವಾದ “ರಿಮೆಂಬರ್‌ಡ್ ವಿಲೇಜ್” ಕೃತಿ ಕೂಡ ಕನ್ನಡಕ್ಕೆ ಅನುವಾದವಾಲಿಲ್ಲ. ಇವೆಲ್ಲಕ್ಕೂ ಶ್ರೀನಿವಾಸರ ಆಲೋಚನಕ್ರಮಗಳಿಗೂ ಸಂಬಂಧ ಇದ್ದಿರಬಹುದು. ಅವರ ಸಾಂಸ್ಕೃತಿಮ ಪರಿಕಲ್ಪನೆಗಳಿಗೆ ಕನ್ನಡದಲ್ಲಿ ಅನುಯಾಯಿಗಳು ಹುಟ್ಟದಿದ್ದರೂ, ಅವರ ಪ್ರಮೇಯಗಳು ವಾಗ್ವಾದಕ್ಕೆ ಒಳಗಾದವು. ಕನ್ನಡದ ಅಧ್ಯಯನಕಾರರು ಅವನ್ನು ಕಟುಟೀಕೆಗೆ ಒಳಪಡಿಸಿದರು. ಆದರೆ ಟೀಕಿಸಿದವರು ಕರ್ನಾಟಕ ಸಮಾಜವನ್ನು ಅಧ್ಯಯನ ಮಾಡಲು, ಪರ್ಯಾಯ ಪರಿಕಲ್ಪನೆಗಳನ್ನು ರೂಪಿಸಲಿಲ್ಲ.

ಕನ್ನಡದ ಸಮಾಜಶಾಸ್ತ್ರಜ್ಞರು ಸಾಂಸ್ಕೃತಿಕ ಅಧ್ಯಯನಗಳಿಗೆ ಹೊಸ ತಾತ್ವಿಕೆಯನ್ನು ಇನ್ನೂ ಕಾಣಿಸಬೇಕಾಗಿದೆ. ಹಿರೇಮಲ್ಲೂರ ಈಶ್ವರನ್ ಅವರು ಲಿಂಗಾಯತ ಅಧ್ಯಯನಳನ್ನು ಮಾಡಿದರು. ಅವು ಸಮಾಜಶಾಸ್ತ್ರೀಯ ನೆಲೆಯಲ್ಲಿಯೇ ನಿಂತವು. ಕೆ. ರಾಘವೇಂದ್ರರಾವ್ ಅವರು ಈಚೆಗೆ ಕನ್ನಡದ ಚಿಂತಕರಾದ ಪಂಡಿತ ತಾರಾನಾಥ, ಹರ್ಡೇಕರ ಮಂಜಪ್ಪ, ಆಲೂರು ವೆಂಕಟರಾವ್ ಡಿವಿಜಿ ಅವರ ಮೇಲೆ ಬರೆದ “ಇಮ್ಯಾಜಿನಿಂಗ್ ಅನ್ ಇಮ್ಯಾಜಿನಬಲ್ ಕಮ್ಯುನಿಟೀಸ್” ಒಂದು ಗಮನಾರ್ಹ ಅಧ್ಯಯನ. ರಾಘವೇಂದ್ರರಾಯರೂ ಕನ್ನಡದಲ್ಲಿ ಬರೆಯಲಿಲ್ಲ. ಚಿಂತಕರು ಯಾವ ಭಾಷೆಯಲ್ಲಿ ಬರೆಯುತ್ತಾರೆ ಎನ್ನುವುದಕ್ಕೂ ಅವು ಕನ್ನಡದ ಅಧ್ಯಯನಗಳಲ್ಲಿ ಬಳಕೆಯಾಗುವುದಕ್ಕೂ ಹತ್ತಿರದ ಸಂಬಂಧವಿದೆ.

ವಸಾಹತೋತ್ತರ ಚಿಂತಕರು

ಯೂರೋಪು-ಅಮೆರಿಕಾಗಳು ೧೮-೨೦ನೇ ಶತಮಾನಗಳಲ್ಲಿ ಆಫ್ರಿಕಾ, ಏಶಿಯಾ ಹಾಗೂ ದಕ್ಷಿಣ ಅಮೆರಿಕೆಯ ನೂರಾರು ದೇಶಗಳನ್ನು ವಸಾಹತು ಮಾಡಿಕೊಂಡು ಆಳಿದವಷ್ಟೆ. ಎರಡನೆಯ ಮಹಾಯುದ್ಧದ ಬಳಿಕ, ಇವು ಒಂದೊಂದಾಗಿ ವಸಾಹತು ಆಳ್ವಿಕೆಯಿಂದ ಬಿಡುಗಡೆಯೂ ಆದವು. ಆದರೆ ವಸಾಹತುಶಾಹಿ ಆಳ್ವಿಕೆ ಮಾಡಿದ ಘೋರ ಪರಿಣಾಮಗಳು ಆ ದೇಶಗಳ ಸಮಾಜ, ಭಾಷೆ, ಸಾಹಿತ್ಯ ಮತ್ತು ಚಿಂತನಾಕ್ರಮಗಳಲ್ಲಿ ಆಳವಾಗಿ ಉಳಿದುಬಿಟ್ಟವು. ಇವು ಆಯಾ ದೇಶಗಳು ತಮ್ಮನ್ನು ತಾವು ನೋಡಿಕೊಳ್ಳುವ ದೃಷ್ಟಿಯನ್ನೆ ತಿರುಚಿಬಿಟ್ಟಿದ್ದವು. ಇದರ ಪರಿಣಾಮಗಳನ್ನು ವಸಾಹತೋತ್ತರ ಚಿಂತನೆ ಪರಿಶೀಲಿಸುತ್ತದೆ. ಪ್ರಸಿದ್ಧ ವಸಾಹತೋತ್ತರವಾದಿ ಚಿಂತಕನಾದ ಎಡ್ವರ್ಡ್ ಸೈದ್ ತನ್ನ “ಕಲ್ಚರ್ ಅಂಡ್ ಇಂಪೀರಿಯಲಿಸಂ” (೧೯೯೩) ಕೃತಿಯಲ್ಲಿ ಇದನ್ನೆಲ್ಲ ವಿಶ್ಲೇಷಿಸುತ್ತಾನೆ. ಇದರಲ್ಲಿ ಭಾರತವನ್ನು ಒಳಗೊಂಡಂತೆ ಇಡೀ ಪೂರ್ವದೇಶಗಳನ್ನು ಹಾಗೂ ಜಗತ್ತನ್ನು ಕುರಿತು ಆಮೆರಿಕ ಮತ್ತು ಯೂರೋಪುಗಳ ಸಾಮ್ರಾಜ್ಯಶಾಹಿ ದೇಶಗಳು ಕಟ್ಟಿರುವ ಕಥನವನ್ನು ಕುರಿತ ವಿಸ್ತಾರ ಚರ್ಚೆಯಿದೆ. ಸಾಮ್ರಾಜ್ಯಶಾಹಿ ದೇಶಗಳು ಸಂಸ್ಕೃತಿಯಂತಹ ಭಾವನಾತ್ಮಕ ವಿಷಯವನ್ನೂ ತಮ್ಮ ಆರ್ಥಿಕ ರಾಜಕಾರಣಕ್ಕೆ ಹೇಗೆ ಬಳಸುತ್ತವೆ ಎನ್ನುವುದನ್ನು ಸೈದ್ ವಿವರಿಸುತ್ತಾನೆ. ಫ್ರಾಂಜ್ ಫ್ಯಾನನ್ ರಚಿಸಿದ “ರೆಚೆಡ್ ಆಫ್ ಅರ್ತ್” ವಸಾಹತುಶಾಹಿ ಆಳ್ವಿಕೆಯು ಹೇಗೆ ತಾನು ಆಳುವ ದೇಶಗಳ ಸಾಂಸ್ಕತಿಕ ಜಗತ್ತನ್ನು ವಿರೂಪಗೊಳಿಸುತ್ತದೆ ಎಂಬುದನ್ನು ವಿವರಿಸುವ ಇನ್ನೊಂದು ಕೃತಿ. ಆಫ್ರಿಕದವರಾಗಿ ಇಂಗ್ಲಿಷಿನಲ್ಲಿ ಬರೆವ ಲೇಖಕರಾದ ಚಿನುವಾ ಅಚಿಬೆ, ವೊಲೆ ಸೋಯೆಂಕಾ, ಗೂಗಿ ವಾ ಥಿಯಾಂಗೊ ಮುಂತಾದವರು ವಸಾಹತೋತ್ತರ ಚಿಂತನೆಗೆ ದೊಡ್ಡ ಕಾಣಿಕೆ ಕೊಟ್ಟರು. ಕೀನ್ಯಾದ ಗೂಗಿ ವಸಾಹತುಶಾಹಿ ಪರಿಣಾಮಗಳು ಆಫ್ರಿಕನ್ ಸಂಸ್ಕೃತಿಯನ್ನು ವಿರೂಪಗೊಳಿಸಿರುವ ಬಗ್ಗೆ ಹಾಗೂ ಅದರಿಂದ ಹೊರಬರುವ ಬಗ್ಗೆ ತನ್ನ “ಡಿ ಕಲೊನೈಜಿಂಗ್ ದಿ ಮೈಂಡ್” (೧೯೮೬)ನಲ್ಲಿ ಬಹುತೀಕ್ಷ್ಣವಾದ ಚಿಂತನೆ ನಡೆಸಿದ್ದಾನೆ. ಇದು ತಾನು ಇಂಗ್ಲಿಷಿನಲ್ಲಿ ಬರೆವ ಕೊನೇ ಪುಸ್ತಕ ಎಂದು ಗೂಗಿ ಘೋಷಿಸಿದನು.

ಭಾರತದ ವಿಶ್ವವಿದ್ಯಾಲಯಗಳಲ್ಲಿ ಕಾಮನ್‌ವೆಲ್ತ್ (ಬ್ರಿಟನ್ನಿನ ಆಳ್ವಿಕೆಗೆ ಒಳಪಟ್ಟಿದ್ದ) ದೇಶಗಳ ಅಧ್ಯಯನಗಳ ಶುರುವಾದವು. ಇದರಿಂದ ವಸಾಹತೋತ್ತರ ಆಫ್ರಿಕನ್ ಸಾಹಿತ್ಯ ಚಿಂತನೆಗಳು, ಭಾರತೀಯ ಸಾಹಿತ್ಯವನ್ನು ಪ್ರವೇಶಿಸಿದವು. ದಲಿತ ಲೇಖಕರು, ಆಫ್ರಿಕದ ಕಪ್ಪು ಚಳುವಳಿ ಹಾಗೂ ಸಾಹಿತ್ಯಗಳ ಜತೆ ಅನುಸಂಧಾನ ಮಾಡಿದರು. ವಸಾಹತುಶಾಹಿಯ ಸಮಾನ ಕ್ರೌರ್ಯ ಹಾಗೂ ಬಿಡುಗಡೆಯ ಅನುಭವಗಳೆರಡನ್ನೂ ಕಂಡ ದೇಶಗಳು ತಮ್ಮ ಅನುಭವ ಮತ್ತು ಚಿಂತನೆಗಳನ್ನು ವಿನಿಮಯ ಮಾಡಿಕೊಂಡವು. ವಸಾಹತೋತ್ತರವಾದವು ಮತ್ತಷ್ಟು ಗಟ್ಟಿಗೊಂಡಿತು.

ವಸಾಹತುಶಾಹಿ ಚಿಂತನಕ್ರಮಗಳು ಭಾರತೀಯರ ಪ್ರಜ್ಞೆಯನ್ನು ಪ್ರವೇಶಿಸಿ, ಅವರ ದೃಷ್ಟಿಕೋನವನ್ನು ನಿಯಂತ್ರಿಸುವ ಬಗ್ಗೆ ಗಂಭೀರ ಚಿಂತನೆ ಮಾಡಿಕೊಂಡು ಬಂದವರಲ್ಲಿ ಪುಣೇಕರ ಹಾಗೂ ಅನಂತಮೂರ್ತಿ ಮುಖ್ಯರು. ಮೂರ್ತಿಯವರ “ಪೂರ್ವಾಪರ” ಹಾಗೂ “ಬೆತ್ತಲೆಪೂಜೆ ಯಾಕೆ ಕೂಡದು?” ಕೃತಿಗಳು ಈ ಚಿಂತನೆಯನ್ನು ಒಳಗೊಂಡಿವೆ. ವಸಾಹತೋತ್ತರ ಚಿಂತನೆಯ ಒಂದು ಮುಖ ಕನ್ನಡದಲ್ಲಿ ಪಶ್ಚಿಮದ ವಿರೋಧಿಯಾದ ದೇಶೀವಾದದಲ್ಲಿ ವ್ಯಕ್ತವಾಗುತ್ತದೆ. ಗಿರಡ್ಡಿ ಗೋವಿಂದರಾಜ ಅವರ ‘ಸಾತತ್ಯ’ ಪರಿಕಲ್ಪನೆ, ಕೆ.ವಿ.ನಾರಾಯಣ ಅವರ ‘ಕನ್ನಡಿಗಳು ಇನ್ನು ಸಾಕು’ ಲೇಖನ ಇದಕ್ಕೆ ಉದಾಹರಣೆ. ಭಾರತದಲ್ಲಿ ಆಶೀಶ್ ನಂದಿ, ಗಣೇಶ್ ಎನ್. ದೇವಿ ಮುಂತಾದವರು ಪ್ರಮುಖ ವಸಾಹತೋತ್ತರ ಚಿಂತಕರು. ದೇವಿ “ಆಫ್ಟರ್ ಆಮ್ನೇಸಿಯಾ” (೧೯೯೨) ಕೃತಿಯನ್ನು ರಚಿಸಿದರು. ಇದರಲ್ಲಿ ಹೇಗೆ ಪಶ್ಚಿಮದ ಲೋಕದೃಷ್ಟಿಯು ನಮ್ಮ್ನು ಆಕ್ರಮಿಸಿಕೊಂಡಿದೆ ಹಾಗೂ ನಮ್ಮ ಸ್ಥಳೀಯ ಭಾಷಿಕ, ಪ್ರಾದೇಶಿಕ ಅನುಭವಗಳಿಂದಲೂ ಜ್ಞಾನ ಪರಂಪರೆಗಳಿಂದಲೂ ಪರಕೀಯ ಮಾಡಿ ನಮ್ಮನ್ನು ರಕ್ತಹೀನವಾಗಿಸಿದೆ ಎಂಬ ವಿಶ್ಲೇಷಣೆಯಿದೆ. ಡಿ.ಆರ್.ನಾಗರಾಜ ಅವರ ಸಂಪಾದಕತ್ವದಲ್ಲಿ ಪ್ರಕಟವಾದ ‘ಅಕ್ಷರ ಚಿಂತನಮಾಲೆ’ ಕೃತಿಸರಣಿಯ ಹಿಂದೆ ಇರುವ ‘ವಿಸ್ಮೃತಿ’ ಪರಿಕಲ್ಪನೆಯು ಒಂದು ಪ್ರಮುಖ ವಸಾಹತೋತ್ತರ ಚಿಂತನೆಯಾಗಿದೆ. (ವಿಸ್ಮೃತಿ ಎನ್ನುವುದು ಆಮ್ನೇಸಿಯಾ ಶಬ್ದದ ಅನುವಾದ). ಪ್ರಣಾಳಿಕೆಯಲ್ಲಿ ನಾಗರಾಜ ಹೀಗೆ ಹೇಳುತ್ತಾರೆ:

ವಸಾಹತುಶಾಹಿ ನಂತರ ಭಾರತೀಯ ಸಮಾಜಕ್ಕೆ ರೀತಿಯ ವಿಸ್ಮೃತಿ ಈಗ ಆವರಿಸಿಬಿಟ್ಟಿದೆ. ನಮ್ಮ ಸಮಾಜದೊಳಗೆ ಅಂತರ್ಗತವಾಗಿದ್ದ ವೈವಿಧ್ಯಮಯ ವೈಚಾರಿಕ ರಚನೆಗಳು ಮರೆತುಹೋಗಿರುವುದರಿಂದ, ಈಗ ಲಭ್ಯವಿರುವ ಚಿಂತನಕ್ರಮಗಳು ಪೂರ್ಣವಾಗಿ ಪಶ್ಚಿಮಮುಖಿಯಾಗಿ ಬಿಟ್ಟಿವೆ. ನಮ್ಮನ್ನು ಕಾಡುತ್ತಿರುವ ಬಿಕ್ಕಟ್ಟುಗಳನ್ನು ಅವುಗಳ ಮೂಲಕ ಸಮಗ್ರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ‘ಅಕ್ಷರಚಿಂತನ ಪ್ರಮುಖ ಗುರಿ ವೈಚಾರಿಕ ವಿಸ್ಮೃತಿಯನ್ನು ದಾಟುವುದೇ ಆಗಿದೆ (೧೯೯೩: ಪ್ರಣಾಳಿಕೆ).

ಆದರೆ ಇದೇ ವಸಾಹತುಶಾಹಿ ಆಧುನಿಕತೆಯ ಭಾಗವಾಗಿ ಬಂದ ವೈಜ್ಞಾನಿಕತೆ, ವೈಚಾರಿಕತೆಗಳನ್ನು ತಮ್ಮ ಸಮಾಜವನ್ನು ವಿಶ್ಲೇಷಿಸಲು ಹಾಗೂ ವರ್ತಮಾನವನ್ನು ಮುಖಾಮುಖಿ ಮಾಡಲು ಬೇಕಾದ ಎಚ್ಚರಕ್ಕಾಗಿ ದಲಿತ ಹಾಗೂ ಕೆಳಜಾತಿಯ ಲೇಖಕರು ಬಳಸಿಕೊಂಡರು. ಇವರು ಅಂಬೇಡ್ಕರ್ ಅವರಂತೆ ವಸಾಹತುಶಾಹಿ ಗೈದ ಸಾಂಸ್ಕೃತಿಕ ನಷ್ಟಗಳ ಬಗ್ಗೆ ದುಃಖವನ್ನಾಗಲೀ ಟೀಕೆಯನ್ನಾಗಲೀ ಪ್ರಕಟಿಸಲಿಲ್ಲ. ಹೀಗಾಗಿ ಎಲ್ಲದಕ್ಕೂ ಪಶ್ಚಿಮವನ್ನೇ ಬೆರಳುಮಾಡಿ ತೋರುವ ವಸಾಹತೋತ್ತರವಾದವು ಅಥವಾ ಅದರ ಹಿನ್ನೆಲೆಯ ಸಾಂಸ್ಕೃತಿಕ ಅಧ್ಯಯನಗಳು, ಒಂದು ಬಗೆಯಲ್ಲಿ ಉಚ್ಚವರ್ಗದ ತಲ್ಲಣಗಳು ಭಾಗವಾಗಿಯೇ ಉಳಿದವು ಇದೊಂದು ವಿಚಿತ್ರ ಸಂಗತಿ.

ಆಧುನಿಕೋತ್ತರ ಚಿಂತಕರು

ಯೂರೋಪು, ಅಮೆರಿಕಗಳಲ್ಲಿ ೨೦ನೇ ಶತಮಾನದ ಮೊದಲಾರ್ಧದಲ್ಲಿ ಟಿ.ಎಸ್.ಎಲಿಯಟ್, ಕಾಫ್ಕಾ, ಎಜ್ರಾ ಪೌಂಡ್ ಮುಂತಾದವರು ತಮ್ಮ ಹಿಂದಿನ ವಿಕ್ಟೋರಿಯನ್ ಯುಗದ ಸಾಹಿತ್ಯಕ ಚಿಂತನೆಗಳಿಗೆ ವಿರುದ್ಧವಾಗಿ ರೂಪಿಸಿದ ಒಂದು ಪಂಥವೇ ಮಾಡರ್ನಿಸಂ. ಇದರ ಹೆಸರು ‘ಮಾಡರ್ನಿಸಂ’ ಎಂದಿದ್ದರೂ, ಇದು ಆಧುನಿಕ ನಾಗರಿಕತೆ ಮತ್ತು ಅದರ ಯಾಂತ್ರಿಕತೆಯ ಕಟುವಿಮರ್ಶೆ ಮಾಡುತ್ತದೆ. ಇದರ ಇನ್ನೊಂದು ಲಕ್ಷಣವೆಂದರೆ, ವ್ಯಕ್ತಿಪ್ರಜ್ಞೆಗೆ ಮಹತ್ವ ಕೊಡುವುದು. ನಾವು ಏನನ್ನು ನೋಡುತ್ತೇವೆ ಎನ್ನುವುದಕ್ಕಿಂತ ಹೇಗೆ ನೋಡುತ್ತೇವೆ ಎನ್ನುವುದು ಮುಖ್ಯ ಎಂದು ಇದು ಭಾವಿಸುತ್ತದೆ. ಕನ್ನಡ ನವ್ಯ ಸಾಹಿತ್ಯದ ಕೆಲವು ತಾತ್ವಿಕ ದೃಷ್ಟಿಕೋನಗಳು ಇಲ್ಲಿಂದ ಮೂಡಿದವು. ಈ ಚಿಂತನೆಗೆ ಪ್ರತಿಕ್ರಿಯೆಯಾಗಿ ೮೦ರ ದಶಕದಲ್ಲಿ ಆಧುನಿಕೋತ್ತರವಾದವು  ಹುಟ್ಟಿತು. ಆಧುನಿಕೋತ್ತರವಾದ ಎಂಬುದು ಏಕಾಕಾರದ ಒಂದು ತತ್ವವಲ್ಲ. ಇದು ಅನೇಕ ತತ್ವಗಳ ಗುಚ್ಛ. ಇದರ ಚಿಂತಕರು ಹಲವರು. ಇವರು ಬೇರೆಬೇರೆ ದೇಶಗಳಿಗೆ, ಜ್ಞಾನಶಿಸ್ತುಗಳಿಗೆ ಹಾಗೂ ಕಾಲಘಟ್ಟಗಳಿಗೆ ಸಂಬಂಧಿಸಿದವರು. ಇವರಲ್ಲಿ ಡೆರಿಡಾ ಎಂಬ ತತ್ವಚಿಂತಕ, ಮಿಶೆಲ್ ಫುಕೋ (೧೯೨೬-೮೪) ಎಂಬ ತತ್ವಜ್ಞಾನಿ, ಸಸೂರ್ ಎಂಬ ಭಾಷಾಶಾಸ್ತ್ರಜ್ಞ ಮುಖ್ಯರು. ಆಧುನಿಕೋತ್ತರ ಚಿಂತನೆಯಲ್ಲಿ ವಸಾಹತೋತ್ತರವಾದ, ರಚನಾವಾದ, ರಚನೋತ್ತರವಾದಗಳ ಅನೇಕ ಎಳೆಗಳು ಮುಂದುವರೆದವು. ಇದರಲ್ಲಿ ಕೆಲವು ಮಾರ್ಕ್ಸ್‌ವಾದಿಗಳ ಕೊಡುಗೆಯೂ ಇದೆ. ಇದೊಂದು ಸಂಕರರೂಪದ ತತ್ವಜ್ಞಾನ. ಇದರ ತಾತ್ವಿಕ ನಿಲುವುಗಳು ಯೂರೋಪಿನಲ್ಲಿ ಸಾಂಸ್ಕೃತಿಕ ಅಧ್ಯಯನಗಳಿಗೆ ಹೊಸದಿಕ್ಕನ್ನು ಕೊಟ್ಟವು. ಇದರ ತಾತ್ವಿಕತೆಯನ್ನು ಹೀಗೆ ಸಂಗ್ರಹಿಸಬಹುದು:

ಸತ್ಯ, ಚರಿತ್ರೆ, ಪರಂಪರೆ ಎನ್ನುವುದು ವಾಸ್ತವದಲ್ಲಿ ಇಲ್ಲ. ಅದನ್ನು ಬೇರೆಬೇರೆಯವರು ತಮಗೆ ಬೇಕಾದಂತೆ ಕಟ್ಟಿಕೊಂಡಿದ್ದಾರೆ; ಹೀಗೆಯೇ ಶಬ್ದ ಅಥವಾ ಪಠ್ಯಕ್ಕೆ ಅರ್ಥಗಳು ಕೂಡ ಕಟ್ಟಿಕೊಳ್ಳುವುದರಿಂದ ಹುಟ್ಟಿಕೊಳ್ಳುತ್ತವೆ. ಜನ ತಮ್ಮ ನಿತ್ಯಜೀವನದ ಸಾಮಾನ್ಯ ಚಟುವಟಿಕೆಗಳಲ್ಲಿ ಲೋಕದ ಕಣ್ಣಲ್ಲಿ ಕ್ಷುದ್ರ ಎನಿಸುವ ಸಂಗತಿಗಳಲ್ಲಿ ತೊಡಗಿದ್ದಾರೆ. ವಾಸ್ತವದಲ್ಲಿ ಅವರು ಮೂಲಕ ತಮ್ಮ ಗುರುತುಗಳನ್ನು ಹುಡುಕುತ್ತ ಇರುತ್ತಾರೆ. ಆದ್ದರಿಂದ ಲೋಕದಲ್ಲಿ ಯಾವ ಸಣ್ಣಪುಟ್ಟ ಸಂಗತಿಗಳೂ ಅಮುಖ್ಯವಲ್ಲ. ಯಾವುದೋ ಬೃಹತ್ತಾದ ಚಾರಿತ್ರಿಕ ಒತ್ತಡವೊಂದು ಲೋಕವನ್ನು ಬದಲಾಯಿಸುತ್ತದೆ ಎಂದು ಭಾವಿಸುವುದು ವ್ಯರ್ಥ. ಇದರಿಂದ ಸಣ್ಣಪುಟ್ಟ ಕಿರುಲೋಕಗಳಿಗೆ ಜೀವನದಲ್ಲಿ ಮಹತ್ವವೇ ಇಲ್ಲದಂತಾಗುತ್ತದೆ. ಯಾವುದನ್ನು ಚರಿತ್ರೆಯಲ್ಲಿ ಮುಖ್ಯ’ ‘ಪ್ರಧಾನಎಂದುಕೊಂಡು ಬರಲಾಗಿದೆಯೋ ಅದರ ಬದಲಿಗೆ, ಚರಿತ್ರೆಯಲ್ಲಿ ನಿರ್ಲಕ್ಷಿತವಾದ ಸಂಗತಿಗಳ ಮೂಲಕ ಲೋಕವನ್ನು ಗ್ರಹಿಸುವುದು ಮುಖ್ಯ. ಬೃಹತ್ತಿಗಿಂತ ಕಿರಿದು ಮುಖ್ಯ ಕೇಂದ್ರಕ್ಕಿಂತ ಪರಿಧಿ ಮುಖ್ಯ. ಇಡಿಗಿಂತ ಬಿಡಿ ಮುಖ್ಯ. ಜಾಗತಿಕ ಪರಿಭಾಷೆಗಳ ಮೂಲಕ ಲೋಕದ ವಿದ್ಯಾಮಾನಗಳನ್ನು ನೋಡುವುದರಿಂದ ಹೆಚ್ಚು ಪ್ರಯೋಜನವಿಲ್ಲ. ಸ್ಥಳೀಯ ಸಂಗತಿಗಳು ವಾಸ್ತವದಲ್ಲಿ ದಿನನಿತ್ಯದ ನಮ್ಮ ಗ್ರಹಿಕೆಗಳನ್ನು ರೂಪಿಸುತ್ತಿರುತ್ತವೆ. ವ್ಯಕ್ತಿಯು ಬದುಕುವ ಭೌತಿಕ ಪರಿಸರ ಅವನ ಪ್ರಜ್ಞೆಯ ಮೇಲೆ ಮಾಡುವ ಪರಿಣಾಮಕ್ಕಿಂತ ವ್ಯಕ್ತಿಗಳು ತಮ್ಮ ಪ್ರಜ್ಞೆಯ ಮೂಲಕ ಪರಿಸರವನ್ನು ಹೇಗೆ ಗ್ರಹಿಸುತ್ತಾರೆ ಎನ್ನುವುದು ಮುಖ್ಯ.

ಈ ವಾದವನ್ನು ಕಂಡರೆ, ಆಧುನಿಕೋತ್ತರ ಚಿಂತನೆಗೆ ಸ್ಥಳೀಯತೆ, ಬಿಡಿವ್ಯಕ್ತಿ ಅಥವಾ ಘಟನೆಗಳ ಕಿರುಗುಂಪುಗಳ ಅಸ್ಮಿತೆಯ (ಐಡೆಂಟಿಟಿ) ರಾಜಕಾರಣ ಹೆಚ್ಚು ಮುಖ್ಯ. ಯಜಮಾನಿಕೆಗೊಂಡ, ಅಧಿಕೃತಗೊಂಡ ಪರಿಕಲ್ಪನೆಗಳನ್ನು ಪ್ರಶ್ನಿಸುವುದು ಅಥವಾ ಸತ್ಯವನ್ನು ನಿರಂತರ ಬದಲಾವಣೆಗಳಲ್ಲಿ ಶೋಧಿಸುವುದು ಮುಖ್ಯ ಎಂದು ತಿಳಿಯುತ್ತದೆ. ಇದು ಕುವೆಂಪು ಹೇಳುವಂತೆ ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವಲ್ಲ ಎಂಬ ಸಮಾಜವಾದಿ ದರ್ಶನವನ್ನು ನೆನಪಿಸುತ್ತದೆ. ಕನ್ನಡದಲ್ಲಿ ಆಧುನಿಕೋತ್ತರವಾದವು ಸಾಂಸ್ಕೃತಿಕ ಅಧ್ಯಯನಗಳಲ್ಲಿ ಪ್ರವೇಶ ಪಡೆದಿರುವ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಡಿ.ಆರ್.ನಾಗರಾಜ ಅವರ ಇತ್ತೀಚಿನ ಬರವಣಿಗೆಯಲ್ಲಿ ಇದರ ಪ್ರೇರಣೆಯ ಎಳೆಗಳಿದ್ದವು. ಆದರೆ ಅವರು ತಮ್ಮ ಕೆಳಜಾತಿ ದಲಿತ ಪರವಾದ ಅಂಬೇಡ್ಕರ್, ಗಾಂಧಿ, ಪೆರಿಯಾರ್ ಹಾಗೂ ಮಾರ್ಕ್ಸ್‌ವಾದಿ ತರಬೇತಿಯಿಂದ, ಈ ಪ್ರಭಾವವು ಸೊಕ್ಕದಂತೆ ನಿಯಂತ್ರಿಸಿಕೊಳ್ಳುತ್ತಿದ್ದರು. ಈ ಚಿಂತನೆಯ ಪ್ರಭಾವವನ್ನು, ಕುರ್ತಕೋಟಿ ಯವರ ಈಚಿನ ಬರೆಹಗಳಲ್ಲಿ ಅದರಲ್ಲೂ ಅವರ ಅರ್ಥ ಹಾಗೂ ಶಬ್ದದ ಚರ್ಚೆಗಳಲ್ಲಿ ಹಾಗೂ ರಾಜೇಂದ್ರ ಚೆನ್ನಿಯವರ ಈಚಿನ ಸಾಹಿತ್ಯ ಚಿಂತನೆಯಲ್ಲಿ (೨೦೦೩) ಕಾಣಬಹುದು.

ಆಧುನಿಕೋತ್ತರ ಚಿಂತನೆಗಳ ಮೇಲೆ ಕೆಲವು ಗಂಭೀರ ಪ್ರಶ್ನೆಗಳನ್ನು ಅದರ ಟೀಕಾಕಾರರು ಎತ್ತುತ್ತಾರೆ. ಮೊದಲನೆಯದಾಗಿ, ಇದು ನನಗೆ ಕಂಡ ಸತ್ಯವೆ ಅಂತಿಮ ಎಂಬ ವ್ಯಕ್ತಿ ವಿಶಿಷ್ಟವಾದವನ್ನು ಬೆಳೆಸುತ್ತದೆ. ಇದು ತನ್ನ ಅತಿಯಲ್ಲಿ, ಎಲ್ಲರೂ ತಂತಮ್ಮ ಸತ್ಯಗಳಿಗೆ ಅಂಟಿಕೊಂಡು ದ್ವೀಪಗಳಾಗಿಬಿಡುವ, ತಂತಮ್ಮ ದೃಷ್ಟಿಗಳಿಗೆ ಬದ್ಧವಾಗಿ ಛಿದ್ರವಾಗುವ ಅರಾಜಕ ಹಂತಕ್ಕೆ ಒಯ್ಯಬಹುದು. ಎಲ್ಲರೂ ಸಮಾನ ಕಾರಣಕ್ಕಾಗಿ ಕೂಡುವ, ಮತ್ತೊಬ್ಬರ ದೃಷ್ಟಿಕೋನದ ಜತೆ ಕೊಡುಕೊಳೆ ಮಾಡುತ್ತ ಲೋಕಪರಿವರ್ತನೆ ಮಾಡುವ ಸಾಧ್ಯತೆಯನ್ನೇ ಇದು ಕಳೆದುಹಾಕಬಹುದು. ಎರಡನೆಯದಾಗಿ, ಈ ಚಿಂತನೆಯು ಸಾಮಾಜಿಕ ಸಂಘಟನೆ ಮಾಡಿಕೊಂಡು ಜಾತಿ/ಪ್ರದೇಶ/ಭಾಷೆಗಳ ಹೆಸರಲ್ಲಿ ರಾಜಕಾರಣ ಮಾಡುವ ಪ್ರಯತ್ನಗಳನ್ನು ಐಡೆಂಟಿಟಿ ಹೆಸರಲ್ಲಿ ತತ್ವೀಕರಿಸಿ ನ್ಯಾಯಬದ್ಧ ಗೊಳಿಸುತ್ತದೆ. ಕನ್ನಡದಲ್ಲಿ ಶುರುವಾಗಿರುವ ಸ್ತ್ರೀ, ದಲಿತ, ಮುಸ್ಲಿಂ ಇತ್ಯಾದಿ ಸಂವೇದನವಾದಿ/ ಅಸ್ಮಿತಾವಾದಿ ಸಾಂಸ್ಕೃತಿಕ ಅಧ್ಯಯನಗಳನ್ನು ತಾತ್ವಿಕವಾಗಿ ಬೆಂಬಲಿಸುವ, ಅವಕ್ಕೆ ಸೈದ್ಧಾಂತಿಕ ನೆಲೆ ಒದಗಿಸುತ್ತದೆ. ಮೂರನೆಯದಾಗಿ, ಇದು ಸಮುದಾಯವಾದಿ, ವರ್ಗವಾದಿ ಚಿಂತನೆಗಳನ್ನು ಅಮುಖ್ಯಗೊಳಿಸಬಹುದು. ಇದೊಂದು ಬಗೆಯಲ್ಲಿ ಮಾರ್ಕ್ಸ್‌ವಾದೀ ಲೋಕದೃಷ್ಟಿಗೆ ಪ್ರತಿರೋಧವಾಗಿ ಮೂಡಿದ ಚಿಂತನೆ. ಸಂಸ್ಕೃತಿಯನ್ನು ಸಾಂಪ್ರದಾಯಿಕ ಮಾರ್ಕ್ಸ್‌ವಾದವು ಆರ್ಥಿಕ ರಾಜಕಾರಣಕ್ಕೆ ಕೇವಲ ಅಧೀನಲೋಕ ಎಂದುದಕ್ಕೆ ಪ್ರತಿಯಾಗಿ ಇದು ಸಾಂಸ್ಕೃತಿಕ ಲೋಕಕ್ಕೆ ಹೆಚ್ಚು ಆದ್ಯತೆ ನೀಡುತ್ತದೆ. ಸಾಂಸ್ಕೃತಿಕ ಸಂಗತಿಗಳು ಯಾಕೆ ಮೂಲರಚನೆಯನ್ನು ಬದಲಿಸಬಾರದು ಎಂದು ಕೇಳುತ್ತದೆ. ಹೀಗಾಗಿ ನಮ್ಮ ಸಮಾಜದ ಚಿಕ್ಕಪುಟ್ಟ ಗುಂಪುಗಳ ಆಲೋಚನಕ್ರಮ, ಅವುಗಳ ಸಾಂಸ್ಕೃತಿಕ ಲೋಕ, ಅಲ್ಲಿನ ಜೀವನವಿಶಿಷ್ಟತೆ ಇವುಗಳ ಅಧ್ಯಯನ ಇಲ್ಲಿ ಮುಖ್ಯವಾಗುತ್ತದೆ. ಎಂತಲೇ ಮಾರ್ಕ್ಸ್‌ವಾದದ ಸೈದ್ಧಾಂತಿಕ ಶಕ್ತಿಯನ್ನು ಕುಗ್ಗಿಸಲು ಜಾಗತೀಕರಣ ಶಕ್ತಿಗಳು ಈ ಆಧುನಿಕೋತ್ತರ ಚಿಂತನೆಗಳನ್ನು ಬೌದ್ಧಿಕ ಲೋಕದಲ್ಲಿ ಪ್ರಸಾರ ಮಾಡುತ್ತಿವೆ ಎಂಬ ಅನುಮಾನಗಳೂ ವ್ಯಕ್ತವಾಗಿವೆ.

ಕನ್ನಡದಲ್ಲಿ ಈಗಾಗಲೇ ಅನೇಕ ಮಾರ್ಕ್ಸ್‌ವಾದಿ ಚಿಂತಕರು ತಮಗೆ ಅರಿಯದೆ ಇಂತಹ ಐಡೆಂಟಿಟಿ ಅಧ್ಯಯನಗಳಿಗೆ ಇಳಿದಿದ್ದಾರೆ. (ಉದಾ: ಎಸ್.ಎಸ್.ಹಿರೇಮಠ ಅವರ ದಲಿತ ಸಂಸ್ಕೃತಿ ಅಧ್ಯಯನಗಳು). ಇದಕ್ಕೆ ಆಧುನಿಕೋತ್ತರ ಚಿಂತನೆಗಳೇ  ಕಾರಣವಲ್ಲ. ಕರ್ನಾಟಕದ ಸಾಮಾಜಿಕ ಚಲನೆಗಳು ಸಹ ಕಾರಣ. ಉದಾ: ದಲಿತ ಎಂಬುದು ಈಗ ಹೋಳಾಗಿ ಅದರಲ್ಲಿ ಎಡಗೈ (ಮಾದಿಗ)-ಬಲಗೈ (ಮಾದಿಗ) ಎಂಬ ಸಾಮಾಜಿಕ ಭಿನ್ನತೆಯ ಪ್ರಶ್ನೆ ರಾಜಕೀಯವಾಗಿ ಎದ್ದಿದೆ. ಈ ಭಿನ್ನತೆಯನ್ನು ಅನುಸರಿಸಿ ಸಾಂಸ್ಕೃತಿಕ ಅಧ್ಯಯನಗಳು ಕನ್ನಡದಲ್ಲಿ ನಡೆದಿವೆ. ಸಮಾಜವನ್ನು ತುಣುಕುಗಳ ಮೂಲಕ ಗ್ರಹಿಸುವ ತತ್ವಜ್ಞಾನವು ತುಂಬ ಆಕರ್ಷಕವಾಗಿದೆ. ಇದು ಕೆಲವು ಜ್ಞಾನಕ್ಷೇತ್ರಗಳಲ್ಲಿ ಅಧ್ಯಯನದ ಹೊಸ ದಿಕ್ಕುಗಳನ್ನು ತೆರೆದಿದೆ. ಪರಿಸರವಾದ ಇದರಲ್ಲಿ ಒಂದು. ಪ್ರಪಂಚವನ್ನು ಮನುಷ್ಯಕೇಂದ್ರಿತವಾಗಿ ನೋಡುವ ಪರಿಸರವಾದವನ್ನು, ಮನುಷ್ಯೇತರ ಜೀವಿಗಳ ನೆಲೆಯಿಂದ ನೋಡುವ ಮೂಲಕ ದೃಷ್ಟಿಕೋನ ಪಲ್ಲಟ ಮಾಡುತ್ತದೆ.

ಸ್ತ್ರೀವಾದಿಗಳು

ಸಾಂಸ್ಕೃತಿಕ ಅಧ್ಯಯನಗಳ ಮುಖ್ಯ ಶಾಖೆಗಳಲ್ಲಿ ಸ್ತ್ರೀ ವಾದಿ ಸಾಂಸ್ಕೃತಿಕ ಅಧ್ಯಯನಗಳು ಒಂದು. ಕೆಲವು ಸ್ತ್ರೀವಾದಿಗಳು ಆಧುನಿಕೋತ್ತರ ಚಿಂತನೆಯಿಂದ ಪ್ರೇರಣೆ ಪಡೆದವರು. ಎಲ್ಲ ಅಪ್ರಧಾನ, ಅಧಿಕಾರರಹಿತ, ಅಂಚಿನ ಸಂಗತಿಗಳ ದೃಷ್ಟಿಕೋನವನ್ನು ಮಾನ್ಯಮಾಡುವ ಆಧುನಿಕೋತ್ತರವಾದದ ಚಿಂತನೆಯಿಂದ ಸ್ತ್ರೀವಾದವೂ ಶಕ್ತಿ ಪಡೆಯಿತು. ಆದರೆ ಸ್ತ್ರೀವಾದ ಎನ್ನುವಂತಹದ್ದು ಏಕರೂಪಿ ತತ್ವಜ್ಞಾನವಲ್ಲ. ಅಲ್ಲಿ ಮಾರ್ಕ್ಸ್‌ವಾದಿಗಳಿದ್ದಾರೆ. ಅಮೆರಿಕನ್, ಫ್ರೆಂಚ್ ಸ್ತ್ರೀವಾದಗಳಿವೆ. ಆಫ್ರಿಕನರ ಕಪ್ಪು ಸ್ತ್ರೀವಾದ ಇದೆ. ವಿಶೇಷವೆಂದರೆ ಸಾಂಸ್ಕೃತಿಕ ಸ್ತ್ರೀವಾದವೂ ಇದೆ.

ಸಾಂಸ್ಕೃತಿಕ ಸ್ತ್ರೀವಾದದ ಪ್ರಕಾರ, ಹೆಣ್ಣಿಗೊಂದು ಸ್ವಭಾವವಿದೆ. ಸೃಜನಶೀಲ ಚೈತನ್ಯವಿದೆ. ಅದು ಅವಳು ಹೆಣ್ಣಾಗಿರುವುದರಿಂದಲೇ ಬಂದುದು. ಅದು ಲಿಂಗಭೇದದಿಂದ ಉಂಟಾಗಿರುವ ಪುರುಷ ಸಮಾಜದ ರಾಜಕಾರಣದ ಆಚೆ ಇರುವ ಜೈವಿಕ ಸಂಗತಿ. ಇದು ಆಕೆಯ ದೈಹಿಕ ಜೈವಿಕ ರಚನೆಯಲ್ಲಿ ವ್ಯಕ್ತವಾಗುತ್ತಿದೆ. ಜೀವವೊಂದಕ್ಕೆ ಜನ್ಮ ನೀಡಲಾರದ ಪುರುಷ ತನ್ನ ಬಂಜೆತನದ ಅಸಹಾಯಕತೆಯನ್ನು ಹೆಣ್ಣಿನ ಮೇಲಿನ ಸೇಡಾಗಿ ತೀರಿಸಿಕೊಳ್ಳುತ್ತಾನೆ. ಹೆಣ್ಣು ತನ್ನಲ್ಲಿರುವ ಜೀವಚೈತನ್ಯವನ್ನು ಆತ್ಮ ವಿಶ್ವಾಸದಿಂದ ಶೋಧಿಸಿ, ಪರಂಪರೆಯಾಗಿ ಕಟ್ಟಿಕೊಳ್ಳಬೇಕು. ಇದು ಸಾಧ್ಯವಾದರೆ ಪುರುಷರ ಹಿಡಿತದಿಂದ ಬಿಡುಗಡೆಯಾಗುವುದು ಸುಲಭ. ಈ ವಾದದ ಪ್ರತಿಪಾದಕಿ ಮೇರಿ ಡಾಲಿ.

ಜಗತ್ತಿನ ಪ್ರಮುಖ ಸ್ತ್ರೀವಾದಿ ಚಿಂತಕರೆಂದರೆ, ಸಿಮನ್ ದಬೋವಾ ಹಾಗೂ ಕೇಟ್ ಮಿಲ್ಲೆಟ್. ಭಾರತದಲ್ಲಿ ಮಧುಕೀಶ್ವರ್ ವಿಶಿಷ್ಟವಾದ ಸ್ತ್ರೀವಾದಿ ಚಿಂತಕಿ. ಸ್ತ್ರೀಯರ ಜ್ವಲಂತ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸುವ ಮಧುಕೀಶ್ವರ್, ಸಂಸ್ಕೃತಿ ಪರಿಭಾಷೆಯನ್ನೆ ಉಪಯೋಗಿಸುವುದಿಲ್ಲ. ಸಾಂಸ್ಕೃತಿಕ ಪರಿಭಾಷೆಯ ನಮ್ಮ ಸಮಾಜದ ಜ್ವಲಂತ ಸಮಸ್ಯೆಗಳನ್ನು ಅವುಗಳ ಆರ್ಥಿಕ ರಾಜಕಾರಣದ ಸಮೇತ ಗ್ರಹಿಸಲು ತೊಡಕಾಗುತ್ತದೆ ಎಂದು ಅವರು ಭಾವಿಸಿದಂತಿದೆ. ಹೆಣ್ಣಿನ ಸಮಸ್ಯೆಗಳನ್ನು ಪುರುಷಸಮಾಜದ ನೆಲೆಯಿಂದ ವಿಶ್ಲೇಷಿಸುವ ಮಧುಕೀಶ್ವರ್, ಅವನ್ನು ಮುಸ್ಲಿಂ ದಲಿತ ಎಂಬ ವಿಭಾಗಗಲ್ಲಿ ಕೂಡ ನೋಡಬಯಸುವುದಿಲ್ಲ. ಅವರ ಲೇಖನಗಳು ಕನ್ನಡಕ್ಕೆ ಬಂದಿವೆ. ಕನ್ನಡದಲ್ಲಿ ಸ್ತ್ರೀವಾದಿ ಚಿಂತನೆಗಳನ್ನು ಅನುವಾದಿಸಿಕೊಳ್ಳುವಾಗ  ನಾವು ಅನ್ಯಪ್ರಭಾವ ಪಡೆಯುತ್ತಿದ್ದೇವೆ ಎಂಬ ಯಾವ ಅಳುಕು ಇಲ್ಲದೆ, ತಮ್ಮ ಅಕ್ಕತಂಗಿಯರ ಅನುಭವ ಪಡೆದುಕೊಳ್ಳುವಂತೆ ಒಂದು ಬಗೆಯ ತಾತ್ವಿಕ ತಾದಾತ್ಮ್ಯವಿದೆ, ಆಪ್ತತೆಯಿದೆ.

* * *