ಕನ್ನಡದ ಪ್ರಮುಖ ಸಂಸ್ಕೃತಿ ಚಿಂತನೆಗಳನ್ನು ಮಾಸ್ತಿ, ಡಿವಿಜಿ, ದೇವುಡು, ಶಂಬಾ, ಅನಂತಮೂರ್ತಿ, ಬರಗೂರು, ಡಿ.ಆರ್.ನಾಗರಾಜ ಹೀಗೆ ವ್ಯಕ್ತಿ ಆಧರಿತ ಘಟ್ಟಗಳಲ್ಲಿ ವಿಂಗಡಿಸಬಹುದು. ಆದರೆ ಸಂಸ್ಕೃತಿಯ ಬಗ್ಗೆ ಯಾರು ಅರ್ಥೈಸಲಾಗುತ್ತಿದೆ ಎನ್ನುವುದಕ್ಕಿಂತ, ಚರಿತ್ರೆಯ ಯಾವ ಕಾಲಘಟ್ಟದಲ್ಲಿ ನಿಂತು ಏನನ್ನು ಅರ್ಧೈಸಲಾಗುತ್ತಿದೆ ಎನ್ನುವುದು ಮುಖ್ಯ. ಈ ಹಿನ್ನೆಲೆಯಿಂದ ಕನ್ನಡ ಸಂಸ್ಕೃತಿ ಚಿಂತನೆಯನ್ನು ವಸಾಹತುಶಾಹಿ ಘಟ್ಟ, ಸ್ವಾತಂತ್ರ್ಯಾ ನಂತರದ ಘಟ್ಟ, ಏಕೀಕರಣ ನಂತರದ ಘಟ್ಟ, ನಿರ್ವಸಾಹತೀಕರಣ ಘಠ್ಟ, ಜಾಗತೀಕರಣದ ಘಟ್ಟ ಎಂದು ಗುರುತಿಸಲು ಸಾಧ್ಯವಿದೆ. ಆದರೆ ಈ ಕಾಲಘಟ್ಟಗಳೂ ಕನ್ನಡದ ಸಂಸ್ಕೃತಿ ಚಿಂತನೆಯನ್ನು ಸಮರ್ಪಕವಾಗಿ ಪ್ರತಿನಿಧಿಸುವುದಿಲ್ಲ, ಇದರಿಂದ ಸಂಸ್ಕೃತಿ ಚರ್ಚೆಯ ಸ್ವರೂಪವನ್ನು ನಿರ್ಧರಿಸುವ ಚಿಂತನಾಕ್ರಮದ ಹಿನ್ನೆಲೆಯಲ್ಲಿ ಉದಾರವಾದಿ, ಪರಿಷ್ಕರಣವಾದಿ, ವಿಚಾರಣವಾದಿ, ನಿರ್ವಸಾಹತುವಾದಿ, ಶೂದ್ರವಾದಿ, ದಲಿತವಾದಿ, ಎಡವಾದಿ, ಆಧುನಿಕೋತ್ತರವಾದಿ ಎಂದು ವಿಂಗಡಭೆ ಮಾಡಿಕೊಂಡು ನೋಡಲು ಯತ್ನಿಸಬಹುದು. ಇದು ಕೆಲಮಟ್ಟಿಗೆ ವ್ಯಕ್ತಿ ಹಾಗೂ ಚಾರಿತ್ರಿಕ ಕಾಲಘಟ್ಟಗಳ ಪರಿಮಿತಿಯನ್ನು ಮೀರುವ ವಿಂಗಡಣೆ. ಇಷ್ಟಾದರೂ ಈ ಘಟ್ಟಗಳು ಅನುಕ್ರಮವಾಗಿ ಬರುತ್ತವೆ ಎಂದು ಭಾವಿಸುವಂತಿಲ್ಲ. ಒಂದು ಘಟ್ಟದೊಳಗೆ ಇನ್ನೊಂದು ಘಟ್ಟವು ನುಸುಳುತ್ತದೆ. ಒಂದು ಘಟ್ಟದ ಚಿಂತಕ ಇನ್ನೊಂದರಲ್ಲೂ ಕಾಣಿಸುತ್ತಾರೆ.

ಉದಾರವಾದಿ ಘಟ್ಟ

ಈ ಘಟ್ಟದ ಪ್ರಮುಖ ಚಿಂತಕರೆಂದರೆ ಮಾಸ್ತಿ. ಮಾಸ್ತಿಯವರ ಪ್ರಕಾರ ಸಂಸ್ಕೃತಿಯೆಂದರೆ, ಒಂದು ಬಗೆಯ ಸಭ್ಯತೆ ಮತ್ತು ಶಿಷ್ಟಾಚಾರ. ಈ ಸಭ್ಯತೆ ಅಥವಾ ಸಂಸ್ಕಾರವು ಗ್ರಾಮೀನ ಜನರಲ್ಲಿಯೂ ಇರುವುದು ಸಾಧ್ಯ. ಇದಕ್ಕೆ ಅವರು ಕೊಡುವ ನಿದರ್ಶನ ಸ್ವಾರಸ್ಯಕರವಾಗಿದೆ.

ನಾನು ಒಂದು ಸಲ ಮಲೆನಾಡಿನಲ್ಲಿ ಸುತ್ತುತ್ತ ಒಂದು ಹಳ್ಳಿಗೆ ಹೋದೆ. ಕಾಡು ಹಳ್ಳಿಯಲ್ಲಿ ಮಧ್ಯೆ ಒಂದು ದೊಡ್ಡ ಮನೆ. ಇದು ಯಾರದೆಂದು. ಚೆನ್ನೇಗೌಡನದು ಎಂದೋ ಏನೋ ಹೆಸರು ಹೇಳಿದರು. ನಾವು ಮಾತನಾಡುವುದನ್ನು ಕೇಳಿ ಮನೆಯ ಮುದುಕಿ ಹೊರಗೆ ಬಂದರು. ಒಂದೆರಡು ಮಾತಾದ ಮೇಲೆ ಇದು ಚೆನ್ನೇಗೌಡರ ಮನೆಯೇ?” ಎಂದೆ. “ಹೌದು”. “ಚೆನ್ನೇಗೌಡರು ಎಲ್ಲಿ?” ಶಿವನಪುರಿಗೆ ಹೋಗ್ಯಾರೆ.” ನನಗೆ ಅರ್ಥವಾಗಲಿಲ್ಲ. ನಾನು ಶಿವನಪುರಿ ಎಲ್ಲಿದೆ?” ಎಂದೆ. ಹತ್ತಿರ ಇದ್ದವರು ಚೆನ್ನೇಗೌಡ ತೀರಿಹೋಗಿದ್ದಾರೆಂದು ತಿಳಿಸಿದರು. ನಾನು ಅಯ್ಯೋ ಪಾಪಎಂದು ನಿಮ್ಮ ಮಾತು ತಿಳಿಯಲಿಲ್ಲಮ್ಮಾಎಂದೆ. ಮುದುಕಿ ಅಯ್ಯೋ ನನ್ನಪ್ಪ. ಏನು ಮಾತು ತಿಳಿಯೋಕೆ ಬಿಡಿ. ಅವರು ಹೋಗಿ ಹತ್ತುವರ್ಷ ಆಯಿತುಎಂದರು. “ಶಿವನಪುರಿಗೆ ಹೋಗಿದಾರೆ!” ಮತ್ತೆ ನೋಡುವ ಭರವಸೆ ಉಂಟು ಎಂದು ಅರ್ಥಕಾಣುತ್ತದೆ. ಅರ್ಥ ಆಕೆಯ ಮನಸ್ಸಿನಲ್ಲಿತ್ತೆ ಎಂದು ಸಂದೇಹ ಅವಶ್ಯಕವಿಲ್ಲ. ಮಾತು ಹುಟ್ಟಿ ಅರ್ಥ ಬರಲಿಲ್ಲ. ಅರ್ಥವಿದ್ದದ್ದರಿಂದ ಮಾತು ಬಂತು (೧೯೩೨:೧೧).

ಇಲ್ಲಿರುವ ಗುಣಗ್ರಾಹಿ ಆಯ್ಕೆಯ ವಿಧಾನವು ಗಮನಾರ್ಹ. ಚಾರಿತ್ರಿಕವಾಗಿ ವಸಾಹತುಶಾಹಿ ಕಾಲದಲ್ಲಿ ಈ ವಿಧಾನದ ಅಗತ್ಯವು ಇತ್ತೆಂದು ಅರ್ಥ ಮಾಡಿಕೊಳ್ಳಬಹುದು. ಆದರೆ ಈ ಸಂಸ್ಕೃತಿ ವ್ಯಾಖ್ಯೆಯ ಸಮಾಜದ ಯಾವಯಾವ ಸಂಗತಿಗಳನ್ನು ತನ್ನ ತೆಕ್ಕೆಯ ಹೊರಗುಳಿಸುತ್ತದೆ ಎಂದಬ ಪ್ರಶ್ನೆ ಮಾತ್ರ ಉಳಿಯುತ್ತದೆ. ಮಾಸ್ತಿಯವರ ವಿಧಾನವೆಂದರೆ, ಭಾರತೀಯ ಸಂಸ್ಕೃತಿಯ ವಿಶಾಲ ಹಂದರ ರೂಪಿಸಿ, ಅದರೊಳಗೆ ಕರ್ನಾಟಕದ ವಿವರಗಳನ್ನು ಅಳವಡಿಸುವುದು. ಈ ವಿವರಗಳು ಕನ್ನಡ ಭಾಷೆ, ಸಾಹಿತ್ಯ ಹಾಗೂ ಜನಪದ ಜಗತ್ತಿನವಾದರೂ, ಹಂದರದ ಕೇಂದ್ರ ಮಾತ್ರ ವೈದಿಕ ಸಂಸ್ಕೃತಿಯದು, ಮಾಸ್ತಿಯವರು ‘ಜನದ ಒಟ್ಟು ಎಲ್ಲಾ ಅನುಭವದಿಂದ ಅವರ ಮನಸ್ಸಿನಲ್ಲಿ ಉಂಟಾಗಿರುವ ಪರಿಣಾಮ’ ಸಂಸ್ಕೃತಿ ಎಂದು ಹೇಳುತ್ತಾರೆ. ಆದರೆ ವಿಶ್ಲೇಷಣೆಯಲ್ಲಿ ಅವರು ಮಂಡಿಸುವುದೆಲ್ಲ ಉಚ್ಚವರ್ಗವು ಸಭ್ಯ ಶ್ರೇಷ್ಠ ಎಂದು ಭಾವಿಸುವ ಆಚಾರ ವಿಚಾರಗಳು. ಜೀವನದಲ್ಲಿರುವ ಶಿಷ್ಟ ಉದಾರ ಮಾನವತಾವಾದಿ ನಿದರ್ಶನಗಳನ್ನು ಹೆಕ್ಕಿ ಸಂಸ್ಕೃತಿಯ ಕಲ್ಪನೆಯನ್ನು ಕಟ್ಟುವುದೆ ಅದನ್ನು ಸಾಮಾಜಿ ಆರ್ಥಿಕ ನೆಲೆಗಳಿಂದ ದೂರುಗೊಳಿಸುವ ಕೆಲಸ.

ಪರಿಷ್ಕರಣವಾದಿ ಘಟ್ಟ

ಮಾಸ್ತಿಯವರಂತೆ ಡಿವಿಜಿ ಕೂಡ ತಮ್ಮ ಕಾಲದ ಪ್ರಭಾವಶಾಲಿ ಚಿಂತಕರು. ಅವರು ಬರೆದ “ಸಂಸ್ಕೃತಿ” (೧೯೫೩) ಎಂಬ ಚಿಕ್ಕ ಕೃತಿ, ಕನ್ನಡ ಚಿಂತನೆಯ ಮೇಲೆ ಬಹಳ ಪ್ರಭಾವ ಬೀರಿತು. ಡಿವಿಜಿ ಈ ಕೃತಿಯನ್ನು ಭಾರತ ಬ್ರಿಟಿಶರಿಂದ ಬಿಡುಗಡೆಗೊಂಡ ಬಳಿಕ ಬರೆದರು. ಈ ಮಾಹಿತಿಯು ಅವರ ಸಂಸ್ಕೃತಿ ಕಲ್ಪನೆಯನ್ನು ಚಾರಿತ್ರಿಕ ಸಂದರ್ಭದಲ್ಲಿಟ್ಟು ನೋಡಲು ಅಗತ್ಯವಾಗಿದೆ. ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಬಂದ ಸರಕಾರದ ರೀತಿನೀತಿಗಳು ಡಿವಿಜಿ ಅವರನ್ನು ಸಾಕಷ್ಟು ಕಂಗೆಡಿಸಿದ್ದವು. ಇದಕ್ಕೆ ಅವರ ‘ಸಂಸ್ಕೃತಿ ಮತ್ತು ಸರ್ಕಾರ’ ಅಧ್ಯಾಯ ಸಣ್ಣ ಸೂಚನೆ ನೀಡುತ್ತದೆ. “ನಮ್ಮ ರಾಜಕೀಯ ಸಂಕಲ್ಪವು ಸರ್ವೋದ್ಧಾರ. ನಮ್ಮ ದೀಕ್ಷೆ ಸರ್ವಸಮತೆ. ಸಾರ್ವಜನಿಕ ಹೆಸರಿನಲ್ಲಿ ಎಲ್ಲರೂ ಎಲ್ಲರ ಮೇಲೂ ಒತ್ತಾಯ ಹಾಕುತ್ತಿರಬೇಕು… ಇದು ನಮ್ಮ ರಾಷ್ಟ್ರದ ಮುಖ್ಯ ನಾಯಕರ ಪ್ರತಿಜ್ಞೆಯಾದಲ್ಲಿ ವ್ಯಕ್ತಿಸ್ವಾತಂತ್ರ್ಯಕ್ಕೆ ಸ್ಥಳವೆಲ್ಲಿ? ಸಂಸ್ಕೃತಗೆ ಬೆಲೆಯೆಲ್ಲಿ?” (೧೯೨೮:೫೧೯) ಎಂದು ಅವರು ಆಕ್ರೋಶದಿಂದ ಬರೆಯುತ್ತಾರೆ. ಇಲ್ಲೊಂದು ಬಗೆಯ ಹತಾಶೆಯೂ ಇದೆ. ಇವರ ಪ್ರೇರಕನಾದ ಆರ್ನಲ್ಡನಿಗೂ ಸಮಕಾಲೀನ ಇಂಗ್ಲೆಂಡ್ ಸಮಾಜದ ಬೆಳವಣಿಗೆಗಳ ಬಗ್ಗೆ ಇಂತಹುದೇ ಹತಾಶೆಯಿತ್ತು. ಕನ್ನಡದಲ್ಲಿ ಶಿವರಾಮ ಕಾರಂತ ಹಾಗೂ ಗೋಪಾಲಕೃಷ್ಣ ಅಡಿಗರನ್ನೂ ಒಳಗೊಂಡಂತೆ ಅನೇಕರಿಗೆ ೧೯೪೭ರ ನಂತರದ ಭಾರತದ ಪ್ರಜಾಪ್ರಭುತ್ವವೂ ಸರಕಾರದ ಸಾರ್ವಜನಿಕ ನೀತಿಗಳೂ ವಿಚಿತ್ರ ಅಸಹನೆಯನ್ನು ಉಂಟುಮಾಡಿದ್ದವು. ಡಿವಿಜಿಯವರ ಸಂಸ್ಕೃತಿ ಚಿಂತನೆಗೂ ಹೊಸಭಾರತದಲ್ಲಿ ಉಚ್ಚವರ್ಗದ ಹಿತಾಸಕ್ತಿಗಳನ್ನು ಆದರ್ಶ ಮೌಲ್ಯಗಳ ಹೆಸರಲ್ಲಿ ಕಾಪಾಡಿಕೊಳ್ಳುವುದಕ್ಕೂ ಸಂಬಂಧವಿದೆ. ಅವರ ಪ್ರಕಾರ “ಒಂದು ವಸ್ತು ಅಥವಾ ಒಂದು ವರ್ತನೆ ಹೇಗಿದ್ದರೆ ನಮ್ಮ ಜೀವಿತದ ಪರಮೋದ್ದೇಶ ಸಿದ್ಧಿಯು ನಮಗೆ ಹತ್ತಿರ ಹತ್ತಿರವಾದೀತೋ ಅದೇ ‘ಒಳ್ಳೆಯದು’. ಅದೇ ಹಿತ. ಅದೇ ಔಚಿತ್ಯ. ಅದೇ ಸಾಧುತೆ. ಆ ಒಳ್ಳೆಯದನ್ನು ಕಂಡುಕೊಳ್ಳುವ ಪ್ರಯತ್ನವೇ. ಆ ಹಿತವನ್ನು ಹುಡುಕುವುದೇ-ಸಂಸ್ಕೃತಿ” (೧೯೮೭:೫೧೭), ಇದು ಅರ್ನಲ್ಡನ”.. “Culture being a pursuit of our total perfection by means of getting to know, on all matters which most concern us, the best which has been thought and said in the world” ಹೇಳಿಕೆಯ ಪ್ರತಿಬಿಂಬ.

ಈ ವ್ಯಾಖ್ಯೆ ಹುಟ್ಟಿಸುವ ಪ್ರಶ್ನೆಯೆಂದರೆ, ‘ನಮ್ಮ ಜೀವಿತ’ ಎಂದರೆ ಯಾರ ಜೀವಿತ?’ ಒಳ್ಳೆಯದು’ ಎಂದರೆ ಯಾರಪಾಲಿಗೆ? ಒಳ್ಳೆಯ ಕೆಟ್ಟ ಇವೆಲ್ಲ ಸಾಪೇಕ್ಷ ಸಂಗತಿಗಳು. ಯಾರು ಸಂಸ್ಕೃತಿಯ ಅರ್ಥವನ್ನು ನೀಡುತ್ತಾರೆ ಅವರು ಸಹಜವಾಗಿ ತಮಗೆ ಬೇಕಾದ ‘ಒಳ್ಳೆಯ’ದನ್ನು ಮಾತ್ರ ಸಂಸ್ಕೃತಿ ಎಂದು ಠರಾವು ಮಾಡುತ್ತಾರೆ. ಈ ಅರ್ಥವನ್ನು ನೀಡುವವರು ಯಾಉದೇ ಸಮಾಜದಲ್ಲಿ ಸಾಮಾನ್ಯವಾಗಿ ಅಧಿಕಾರಸ್ಥರು, ಗಂಡಸರು. ಹೀಗಾಗಿ ಇಂತಹ ವ್ಯಾಖ್ಯೆ ಸಹಜವಾಗಿ ಉಚ್ಚವರ್ಗಗಳ ಜೀವನ ಮೌಲ್ಯಗಳಿಗೆ ಬದ್ಧವಾಗುತ್ತದೆ. ಡಿವಿಜಿ ಒಂದು ಕಡೆ ಹೀಗೆ ಬರೆಯುತ್ತಾರೆ: “ಪ್ರಕೃತಿಸಿದ್ಧವಾದ ಪದಾರ್ಥವನ್ನು ಮನುಷ್ಯ ವಿವೇಕದಿಂದ ಸೊಗಸುಗೊಳಿಸಿದರೆ ಅದು ಸಂಸ್ಕೃತಿ. ಕಾಡುಬತ್ತ ಪ್ರಕೃತಿ. ಪಟ್ಟಸೋಮನಹಳ್ಳಿಯ ಸಣ್ಣನೆಲ್ಲು ಸಂಸ್ಕೃತಿ: ಬತ್ತ ಪ್ರಕೃತಿ. ಅಕ್ಕಿ ಸಂಸ್ಕೃತಿ; ಅಕ್ಕಿ ಪ್ರಕೃತಿ. ಅನ್ನ ಪರಮಾನ್ನ ಚಿತ್ರಾನ್ನ ಪೊಂಗಲುಗಳು ಸಂಸ್ಕೃತಿ; ಕಲ್ಲು ಬಂಡೆ ಪ್ರಕೃತಿ. ಮನೆಯ ಅಂಗಳದಲ್ಲಿ ಹಾಸಿರುವ ಚಪ್ಪಡಿ ಸಂಸ್ಕೃತಿ; ಅಮೃತಶಿಲೆ ಪ್ರಕೃತಿ. ಶಿಲ್ಪಿಕೊರೆದ ವಿಗ್ರಹ ಸಂಸ್ಕೃತಿ” (೧೯೮೭:೬೦೫). ಇಲ್ಲಿ ಡಿವಿಜಿ ಅವರ ಪ್ರಕಾರ ‘ಒಳ್ಳೆಯದು’ ಎಂಬುದು ಪರಿಷ್ಕರಣಗೊಂಡ ಸಂಗತಿ. ಈ ಪರಿಷ್ಕರಣ ನಂತರ ಉಳಿಯುವ ಸಾರ ಮಾತ್ರ ವೈದಿಕವೂ ಸಂಪ್ರದಾಯವಾದಿಯೂ ಆಗಿರುತ್ತದೆ.

ಸಂಸ್ಕೃತಿಯನ್ನು ವೈದಿಕ ಕೇಂದ್ರದಲ್ಲಿ ಮತ್ತು ಸಂಪ್ರದಾಯವಾದಿಯಾಗಿ ಮಂಡಿಸುವವರಲ್ಲಿ ದೇವುಡು ಅವರೂ ಒಬ್ಬರು. “ಮಾನವನ ಕಾರ್ಯಪ್ರಪಂಚಲದಲಿ ಆತನ ಮನೋವಿಕಾಸದ ಸ್ಥಿತಿಯು ಪದೆಪದೇ ತೋರಿಬರುತ್ತದೆ. ಹಾಗೆ ತೋರಿಬರುವ  ಮನೋವಿಕಾಸವನ್ನೇ ನಾವು ಸಂಸ್ಕೃತಿಯೆನ್ನುವುದು” (೧೯೩೫:೨). “ಸಂಸ್ಕೃತಿಯೆಂಬುದು ಮಾನವನಿಗೂ ಮೃಗಕ್ಕೂ ಇರುವ ಅಂತರವನ್ನು ತೋರಿಸಿಕೊಡುವ ಅಂತಸ್ಸತ್ವ… ಮಾನವ ಕಾರ್ಯ ಪ್ರಪಂಚದಲ್ಲಿ ಕಾಣಬರುವ ಮನಸ್ಸಿನ ಬೆಳವಣಿಗೆಯನ್ನು, ಅಥವಾ ಬೆಳೆದ ಮನಸ್ಸಿನ ಸ್ಥಿತಿಯನ್ನು ತೋರಿಸುವ ಭಾವನೆ ಸಂಸ್ಕೃತಿ” (೧೯೩೫:೧೪) ಎಂದು ದೇವುಡು ಹೇಳುತ್ತಾರೆ. ಮನಸ್ಸಿನ ವಿಕಾಸವೆಂದಾಗ ಸಂಸ್ಕೃತಿಯು ದೈಹಿಕ ದುಡಿಮೆಯ ಲೋಕದೊಂದಿಗೆ ಸಂಬಂಧಗೊಳ್ಳುವುದಿಲ್ಲ. ಸಮಾಜದಲ್ಲಿರುವ ಹಸಿವು, ಬಡತನ, ಅಸಮಾನತೆ, ಕ್ರೌರ್ಯಗಳನ್ನು ಸಂಸ್ಕೃತಿ ಚರ್ಚೆಯ ಕಕ್ಷೆಯೊಳಗೆ ಬರುವುದಿಲ್ಲ.

ಗಮನಾರ್ಹ ಸಂಗತಿ ಎಂದರೆ, ಮಾಸ್ತಿ, ಡಿವಿಜಿ, ದೇವುಡು ಅವರು ಸಂಸ್ಕೃತಿಯನ್ನು ಗತಕಾಲದ ಚರಿತ್ರೆಯಲ್ಲಿ ಮಾತ್ರ ಹುಡುಕದೆ ಸಮಕಾಲೀನ ಬದುಕಿನಲ್ಲೂ ಕಾನಲೆತ್ನಿಸುವುದು. ಅವರು ಗತಕಾಲದ ಮಾತಾಡಿದರೂ ರಾಜಕೀಯ ಚರಿತ್ರೆಗೆ ಹೋಗಿ, ಅಲ್ಲಿನ ಸುವರ್ಣಯುಗದಲ್ಲಿ ಸಂಸ್ಕೃತಿಯನ್ನು ಕಾಣುವುದಕ್ಕೆ ಹಳಹಳಿಸುವುದಿಲ್ಲ.

ವಿಚಾರವಾದಿ ಘಟ್ಟ

ಕನ್ನಡದಲ್ಲಿ ಡಿವಿಜಿ, ಮಾಸ್ತಿ, ದೇವುಡು ಅವರಿಗೆ ಭಿನ್ನವಾದ ಸಂಸ್ಕೃತಿ ಚಿಂತನೆಯನ್ನು ಮೊದಲಿಗೆ ಮಂಡಿಸಿದವರು ಶಂ.ಬಾ. ಜೋಶಿ, ಶಿವರಾಮ ಕಾರಂತ ಹಾಗೂ ಶ್ರೀರಂಗರು. ಈ ಮೂವರು ನಾಸ್ತಿಕ ಮಾನವತಾವಾದಿಗಳು, ವಿಚಾರವಾದಿ ಮನೋಧರ್ಮದವರು. ಶಂಬಾರವರು ಕನ್ನಡ – ಕರ್ಣಾಟಗಳ ಹೆಸರಲ್ಲೇ ಅಧ್ಯಯನ ಶುರುಮಾಡಿದರು. ಅವರ ಅಧ್ಯಯನಗೊಳಗಿನ ಆಶಯಗಳು ಉಚ್ಚವರ್ಗಗಳ ರಾಜಕಾರಣಕ್ಕೆ ಪೂರಕವಾಗಿರಲಿಲ್ಲ. ಇದಕ್ಕೆ ಅವರು ಅಧ್ಯಯನಕ್ಕೆ ಆರಿಸಿಕೊಂಡ ಸಾಮಗ್ರಿಯೂ ಒಂದು ಕಾರಣ. ಶಂಬಾ ಅವರು ಸಾಂಸ್ಕೃತಿಕ ಶೋಧಕ್ಕೆ ಕನ್ನಡ ಸಾಹಿತ್ಯ ಕಲೆ ನೈತಿಕಮೌಲ್ಯಗಳನ್ನು ಬಿಟ್ಟು, ಕನ್ನಡಿಗ ಸಮುದಾಯಗಳ ಭಾಷೆ, ದೈವಾಚರಣೆ, ಆರ್ಥಿಕ ಸಾಮಾಜಿಕ ಚಟುವಟಿಕೆ, ವಲಸೆಗಳನ್ನು ಆರಿಸಿಕೊಂಡರು. ಏಕೀಕರಣಗೊಂಡ ರಾಜಕೀಯ ಕರ್ನಾಟಕಕ್ಕೆ ಸಾಂಸ್ಕೃತಿಕ ಇತಿಹಾಸವನ್ನು ಕಟ್ಟಿಕೊಡುವ ಉದ್ದೇಶವೂ ಅವರಿಗಿತ್ತು.

ಸಂಸ್ಕೃತಿಯ ವ್ಯಾಖ್ಯೆ ವಿಷಯದಲ್ಲಿ ಶಂಬಾರ ಮೊದಲ ಘಟ್ಟದ ಹೇಳಿಕೆಗಳು ತಾತ್ವಿಕ ಹೊಯ್ದಾಟದಲ್ಲಿವೆ. “ಆ ವ್ಯಕ್ತಿಯಲ್ಲಿ ಎಳ್ಳನಿತೂ ಸಂಸ್ಕೃತಿ ಇಲ್ಲ ಎಂಬ ಮಾತಿನಲ್ಲಿ ಸಂಸ್ಕೃತಿಯು ಬಾಹ್ಯವಸ್ತು ವಿಶೇಷವಾಗಿರದೆ, ಅಂತರಂಗದ ಸಂಸ್ಕಾರವಾಗುತ್ತದೆ. ಹೀಗೆ ಸಂಸ್ಕೃತಿಯು ಅಂತರಂಗದ ಭಾವ-ಬುದ್ಧಿಗೆ ಸಂಬಂಧಿಸಿದೆ; ಇದೇ ಮೇರೆಗೆ, ಈ ಸುಸಂಸ್ಕೃತ ಭಾವ-ಬುದ್ಧಿಯಿಂದ ನಿರ್ಮಿತ ವಸ್ತು-ವಿಷಯಗಳೂ ಸಂಬಂಧಿಸಿದೆ. ಮಾನವನ ಭಾವ-ಬುದ್ಧಿಯ ಕೈವಾಡದಿಂದಾಗಿ ‘ನವತರಂ’ ‘ಕಲ್ಯಾಣತರಂ’ ರೀತಿಯಲ್ಲಿ ಮಾರ್ಪಟ್ಟ ಪ್ರಕೃತಿಯೇ, ಸಂಸ್ಕೃತಿ” ಎಂದು ಅವರು ಹೇಳುತ್ತಾರೆ. (೧೯೯೯ ಸಂ.೩:೨೧೬).

ಇದು ಡಿವಿಜಿಯವರ ಅರ್ಥವಿವರಣೆಗೆ ಸಮೀಪವಾಗಿದೆ. ಸಂಸ್ಕೃತಿಯನ್ನು ಸಮುದಾಯದ ಜೀವನ ವಿವರಗಳು ಎಂಬರ್ಥದಲ್ಲಿ ಗ್ರಹಿಸಿ ಸಂಶೋಧನೆಗೈದ ಶಂಬಾ, ತಮ್ಮ ಕಾಲದಲ್ಲಿ ಪ್ರಭಾವಶಾಲಿಯಾಗಿದ್ದ ಸಂಸ್ಕೃತಿ ಎಂದರೆ ‘ಅಂತರಂಗದ ಅಭಿವ್ಯಕ್ತಿ’ ಎಂಬ ಭಾವನವಾದಿ ವ್ಯಾಖ್ಯೆಯನ್ನು ಆಂಶಿಕವಾಗಿ ಒಪ್ಪಿಕೊಳ್ಳುತ್ತಾರೆ. ಆದರೆ ಅಂತರಂಗದ ಭಾವದ ಜತೆಗೆ ಬುದ್ಧಿಯ ಜಗತ್ತಿಗೂ ಲಗತ್ತಿಸಿ ಎಚ್ಚರಿಕೆಯಿಂದ ಸಮತೋಲವನ್ನೂ ಸಾಧಿಸುತ್ತಾರೆ. ಈ ಸಮತೋಲನದ ತರ್ಕವನ್ನು ವಿಸ್ತರಿಸಿಕೊಂಡು, ಮಾನವ ಸಮಾಜದ ಚಾರಿತ್ರಿಕ ವಿಕಾಸಕ್ಕೆ ಉಪಾಯವಾಗಿ ಜೋಡಿಸುತ್ತಾರೆ. ‘ಆದಿಮಾನವರ ಪ್ರಾಕೃತಿಕ ಬದುಕು ಅವರ ಪ್ರಜ್ಞಾಪ್ರಾತಿಭ ದೃಷ್ಟಿಯಿಂದ ಸಂಸ್ಕೃತಿಯಾಯಿತು… ಮಾನವರಿಗೆ ಸಂಕೇತಗಳ ಮೂಲಕ ಗ್ರಹಿಸುವ ಶಕ್ತಿಯೂ ಇದೆ. ಇದಕ್ಕೆ ಕಾರಣ ಸುಪ್ತ ಪ್ರಜ್ಞೆಯಲ್ಲಿರುವ ಶಕ್ತಿ. ಇದುವೆ ಮಾನವರನ್ನು ಪ್ರಾಣಿಗಳಿಂದ ಬೇರ್ಪಡಿಸುವ ಶಕ್ತಿ. ಇದು ನಿಸರ್ಗದ ಅಂಶವೂ ಮಾನವ ಪ್ರತಿಭೆಯೂ ಸೇರಿ ಆದುದು. ಇದೇ ವಾನರನು ನರನಾದ ಪ್ರಕ್ರಿಯೆ. ಇದೇ ‘ಪ್ರಜ್ಞಾಪ್ರಾತಿಭ ಶಕ್ತಿ’ (೧೯೯೯ ಸಂ.೪:೫೮೩).

ಶಂಬಾರವರು ಕಲಾಕೇಂದ್ರಿತ ಸಂಸ್ಕೃತಿ ವ್ಯಾಖ್ಯೆಯನ್ನು ಒಪ್ಪುವುದಿಲ್ಲ. ಅವರ ಪ್ರಕಾರ “ಸಂಸ್ಕೃತಿಯು ಸಾಹಿತ್ಯ, ಸಂಗೀತ, ಕಲೆಗಳ ಮಟ್ಟಿಗೇ ಸೀಮಿತವಿಲ್ಲ. ಆಚಾರ-ವಿಚಾರ ಅನುಸಂಧಾನದಲ್ಲಿ, ಆ ಜನದ ಸಂಸ್ಕಾರ, ಸಂಸ್ಕೃತಿಯ ಸ್ವರೂಪವು ತಿಳಿಯುತ್ತದೆ. ಭಾಷೆ ಮೈಪಡೆದುದು ಜನರ ನಡೆವಳಿ ಮತ್ತು ನುಡಿವಳಿಗಳ ಹಿನ್ನೆಲೆಯಲ್ಲಿಯೇ. ಭಾಷೆಯ ಮೂಲಕ, ಆ ಭಾಷಿಕರ ಸಂಸ್ಕೃತಿಯ ಇತಿಹಾಸ ಮತ್ತು ಆ ಸಂಸ್ಕೃತಿಯ ಸ್ವರೂಪ ಬೆಳಕಿನಲ್ಲಿ ಬರುವುದು ಇದೇ ಕಾರಣದಿಂದ” (೧೯೯೯ ಸಂ.೪:೮೫೩). ಇಲ್ಲಿರುವ ಆಚಾರ-ವಿಚಾರ, ನಡೆವಳಿ-ನುಡಿವಳಿ ಎಂಬ ಜೋಡಿಶಬ್ದಗಳು, ಸಮುದಾಯದ ಭಾಷೆ ಹಾಗೂ ಜೀವನ ವಿವರಗಳನ್ನು ಸಂಸ್ಕೃತಿಯ ವ್ಯಾಪ್ತಿಯಲ್ಲಿ ತರುತ್ತಿವೆ.

ಶಂಬಾರವರು ಸಂಸ್ಕೃತಿ ವ್ಯಾಖ್ಯೆಯನ್ನು ಒಮ್ಮೆ ನಿರ್ಮಿಸಿಕೊಂಡವರಲ್ಲ. ನಿರಂತರವಾಗಿ ಶೋಧಿಸುತ್ತ ಬಂದವರು. ಆವರ ಮೊದಲಿನ ವ್ಯಾಖ್ಯೆಗೆ ಹೋಲಿಸಿದರೆ, ನಂತರದ್ದು ಹೆಚ್ಚು ತಾತ್ವಿಕ ಖಚಿತತೆಯಿಂದ ಕೂಡಿದೆ. ‘ನಡೆವಳಿ ಮತ್ತು ನುಡಿವಳಿಯೇ ಸಂಸ್ಕೃತಿ’ ಎಂದು ಹೇಳಿದರೂ, ಅವರ ಸಂಸ್ಕೃತಿ ವ್ಯಾಖ್ಯೆ, ಕಲಾಕೇಂದ್ರಿತ, ಮಾನವಶಾಸ್ತ್ರೀಯ ಹಾಗೂ ಭೌತವಾದಿ ಸಂಸ್ಕೃತಿ ವ್ಯಾಖ್ಯೆಗಳ ವಿಚಿತ್ರ ಸಂಗಮವೆನ್ನಬಹುದು. ಈ ಕಾರಣಕ್ಕೆ ಶಂಬಾರವರನ್ನು ಸಂಸ್ಕೃತಿ ಚಿಂತಕ ಎನ್ನುವುದಕ್ಕಿಂತ ಸಾಂಸ್ಕೃತಿಕ ಅಧ್ಯಯನಕಾರಕ ಎನ್ನುವುದು ಉಚಿತ. ಅವರ ‘ಸಂಸ್ಕೃತಿ’ ಚಿಂತನೆಗಳನ್ನು ಕಾಣದ ಖಚಿತತೆ ಸಾಂಸ್ಕೃತಿಕ ಅಧ್ಯಯನಗಳಲ್ಲಿದೆ.

ಕಾರಂತರು ತಮ್ಮ ಕಾಲದಲ್ಲಿದ್ದ ನೈತಿಕಮೌಲ್ಯವಾದಿ ಹಾಗೂ ಗತಕಾಲದ ರಾಜಕೀಯ ಚರಿತ್ರೆಯನ್ನು ವೈಭವೀಕರಿಸುವ ಎರಡು ಸಂಸ್ಕೃತಿ ಕಲ್ಪನೆಗಳನ್ನು ನಿರಾಕರಿಸುತ್ತಾರೆ. ಹಾಗೆಯೆ ಎಡಪಂಥೀಯರಂತೆ ಸಂಸ್ಕೃತಿಯನ್ನು ದುಡಿಮೆಯ ಜಗತ್ತಿಗೂ ಲಗತ್ತಸುವುದಿಲ್ಲ. ಬದಲಾಗಿ, ನಿತ್ಯಬದುಕಿನ ಸಮಸ್ತ ಆಚರಣೆಗಳ ಭಾಗವೆಂದು ಭಾವಿಸುತ್ತಾರೆ. “ಒಂದು ಸಮಾಜದ ನಂಬಿಕೆ ಆದರ್ಶ ಯೋಚನೆ ಮೊದಲಾದವು ಪರಂಪರೆಯಿಂದ ಒಂದು ಸ್ತಿಮಿತಕ್ಕೆ ಬಂದು, ಆ ಬಳಗಕ್ಕೆ ಸೇರುವ ವ್ಯಕ್ತಿಗಳ ದಿನಚರಿಯಲ್ಲಿ ಮಾತು, ಮಂತ್ರ, ತಂತ್ರ (rite), ಶಿಷ್ಟಾಚಾರಗಳಲ್ಲಿ ವ್ಯಕ್ತವಾಗುವ ಬಗೆಯನ್ನು ನಾವು ‘ಸಂಸ್ಕೃತಿ’ ಎಂದು ತಿಳಿಯಬೇಕಾಗಿದೆ” (ಮಲ್ಯ, ೧೯೯೪ ಸಂ.೨:೨೮೪) ಎಂಬ ಅವರ ಹೇಳಿಕೆಯನ್ನು ಗಮನಿಸಬಹುದು. ಇಲ್ಲಿರುವುದು ಮಾನವಶಾಸ್ತ್ರದ ಸಾಂಪ್ರದಾಯಕ ಗ್ರಹಿಕೆಯಾದರೂ ಕಾರಂತರು ಸಂಸ್ಕೃತಿಯಲ್ಲಿ ಕಲೆಗಳ ಪಾತ್ರವನ್ನು ಪ್ರಮುಖವೆಂದು ಭಾವಿಸುತ್ಥಾರೆ. “ಮಾನವನ ಜೀವನ ಸ್ವಭಾವತಃ ಭಾವಜೀವನವಾದುದರಿಂದ ತನ್ನ ಮನಸ್ಸಿನ ಸಂಸ್ಕಾರಕ್ಕೆ ತಕ್ಕಂತೆ ಆಯಾಯ ಕಾಲದ ಮನಸ್ಸಿನ ಭಾವಬಿಂಬಗಳಿಗೆ ರೂಪವನ್ನು ಕೊಡುತ್ತಲೇ ಬಂದಿದೆ. ಮನುಷ್ಯ ಸಂಸ್ಕೃತಿ ಬೆಳದು ಬಂದುದು ಇಂಥ ಚಟುವಟಿಕೆಗಳಿಂದಲೇ. ನಾಗರಿಕತೆಗಳು ಶ್ರೇಷ್ಠವೆನಿಸಿಕೊಂಡದ್ದು ಅವುಗಳಿಂದಲೇ. ಆದುದರಿಂದಲೇ ಕಲೆಗಳಿಗೂ ಸಂಸ್ಕೃತಿಗೂ ಅತಿನಿಕಟವಾದ ಸಂಬಂಧವನ್ನು ಕಾಣುತ್ತೇವೆ”  (ಮಲ್ಯ, ೧೯೯೪ ಸಂ.೨ :೨೫೯) ಹೀಗೆ ಕಾರಂತರು ಮಾನವಶಾಸ್ತ್ರ ಹಾಗೂ ಸೌಂದರ್ಯ ಮೀಮಾಂಸೆಗಳು ಸೇರಿದ ವಿಶಿಷ್ಟ ಸಂಸ್ಕೃತಿ ಗ್ರಹಿಕೆ. ಅವರೊಬ್ಬ ವಾಸ್ತವವಾದಿಯೂ ಆಗಿದ್ದರಿಂದ, ಅವರ ಸಂಸ್ಕೃತಿ ಚಿಂತನೆ ಮತೀಯ ಮೌಲ್ಯಗಳಿಗೆ ಸಿಲುಕಲಿಲ್ಲ. ‘ಯಾವ ಆದರ್ಶವೇ ಇರಲಿ, ಅದು ನಿತ್ಯ ಜೀವನದಲ್ಲಿ ವ್ಯಕ್ತವಾಗುವ ಬಗೆಯ ಸಂಸ್ಕೃತಿ’ ಎಂದು ಅವರು ದೃಢವಾಗಿ ಭಾವಿಸಿದ್ದರು.

ಸಂಸ್ಕೃತಿ ಚರ್ಚೆಯನ್ನು ಶ್ರಮಲೋಕದ ಮೂಲಕ ಮಾಡುವವರಲ್ಲಿ ಎಲ್.ಶ್ರೀಕಂಠಯ್ಯ ಅವರೂ ಒಬ್ಬರು. “ಪ್ರಬುದ್ಧ ಕರ್ಣಾಟಕ”ದಲ್ಲಿ ಸಂಸ್ಕೃತಿ ಕುರಿತು ಇವರು ಬರೆದ ಲೇಖನಗಳು, ಅವರೊಬ್ಬ ಭೌತವಾದಿ ಸಂಸ್ಕೃತಿ ಚಿಂತಕರೆಂದು ಸೂಚಿಸುತ್ತವೆ. “ಮಾನವ ಸಮಾಜಗಳು, ಸಾಹಿತ್ಯ, ಕಲೆ, ಸಂಗೀತ, ಭಾಷೆ, ಉಪಕರಣಗಳು, ರೀತಿನೀತಿಗಳು ಮತ್ತು ಇವುಗಳನ್ನು ಪ್ರತಿಬಿಂಬಿಸುವ ಜನಜೀವನ, ಇದೇ ಸಂಸ್ಕೃತಿ” (೧೯೫೪:೮೭) ಎನ್ನುವ ಶ್ರೀಕಂಠಯ್ಯ, ಸಂಸ್ಕೃತಿಯನ್ನು ಆರ್ಥಿಕ, ರಾಜಕೀಯ, ಸಾಮಾಜಿಕ, ಕಲೆ, ಜ್ಞಾನ ಎಲ್ಲವನ್ನು ಒಳಗೊಂಡಿರುವ ಪರಿಕಲ್ಪನೆಯನ್ನಾಗಿ ವ್ಯಾಖ್ಯಾನಿಸುತ್ತಾರೆ. ಇಲ್ಲಿ ಸಂಸ್ಕೃತಿಯನ್ನು ಕೆಲವು ವಿಶಿಷ್ಟ ವ್ಯಕ್ತಿಗಳ ವೈಯಕ್ತಿಕ ಸಾಧನೆ ಎಂಬ ಗ್ರಹಿಕೆಯ ನಿರಾಕರಿಸಿ, ಅದು ಇಡೀ ಮಾನವ ಸಮಾಜದ ಒಂದು ಘಟ್ಟವು ಪಡೆದ ಅನುಭವ ಜ್ಞಾನವೆಂದು ತಿಳಿಯಲಾಗುತ್ತದೆ ಸಂಸ್ಕೃತಿಯನ್ನು ಕೇವಲ ಕಲೆ ಅಥವಾ ನೈತಿಕಮೌಲ್ಯ ಎಂದಾಗಲೀ, ಸಂಪ್ರದಾಯವಾದಿ ಮಾರ್ಕ್ಸ್‌ವಾದಿಗಳಂತೆ ಮೇಲುರಚನೆ ಎಂದಾಗಲೀ ಗ್ರಹಿಸದೆ, ಇವೆರಡೂ ಲೋಕಗಳನ್ನು ಒಟ್ಟಿಗೆ ಸೇರಿಸಲಾಗುತ್ತದೆ.

ಕನ್ನಡದ ವಿಚಾರವಾದಿ ಸಂಸ್ಕೃತಿ ಚಿಂತಕರ ವಿಶಿಷ್ಟತೆಯೆಂದರೆ, ಸಂಸ್ಕೃತಿಯನ್ನು ಗತಕಾಲಕ್ಕೆ, ಧರ್ಮಕ್ಕೆ ಸೇರ್ಪಡೆ ಮಾಡದಿದ್ದುದು. ಆದರೆ ಶ್ರೀರಂಗ, ಕಾರಂತ, ಶಂಬಾ, ಶ್ರೀಕಂಠಯ್ಯ ಮುಂತಾದವರ ವಿಚಾರವಾದಿ ಸಂಸ್ಕೃತಿ ಚಿಂತನೆಗಳು, ಮಾಸ್ತಿ, ಡಿವಿಜಿಯವರ ಚಿಂತನೆಗಳಷ್ಟು ಆಗ ಜನಪ್ರಿಯವಾಗಲಿಲ್ಲ. ಇದಕ್ಕೆ ಕೆಲವು ಚಾರಿತ್ರಿಕ ಕಾರಣಗಳಿವೆ.

ನಿರ್ವಸಾಹತೀಕರಣವಾದಿ ಅಥವಾ ವಸಾಹತೋತ್ತರವಾದಿ ಘಟ್ಟ

ಕರ್ನಾಟಕ ಚಿಂತನೆಯ ಇತಿಹಾಸವೆಂದರೆ, ವಿವಿಧ ಸಮುದಾಯಗಳು ಅಥವಾ ಗುಂಪುಗಳು ಎಚ್ಚೆತ್ತ ಘಟ್ಟಗಳು ನಿರಂತರವಾಗಿ ಬರುವುದು. ಅದರಲ್ಲಿ ೬೦ರ ದಶಕದಲ್ಲಿ ಉಚ್ಚಜಾತಿಯ ಪ್ರಜ್ಞಾವಂತರಿಗೆ ಬಂದ ಎಚ್ಚರದ ಘಟ್ಟವೂ ಒಂದು. ಪಾಶ್ಚಿಮಾತ್ಯ ಪ್ರಭಾವಕ್ಕೆ ತನ್ನನ್ನು ಅತಿಯಾಗಿ ತೆರೆದುಕೊಂಡು, ಅದು ತಪ್ಪೆಂದು ಅನಿಸಿ, ಒಂದು ಬಗೆಯ ಜ್ಞಾನೋದಯದ ಮನಸ್ಥಿತಿಯಲ್ಲಿದ್ದ  ಈ ವರ್ಗಕ್ಕೆ ಎರಡು ಸಂಗತಿಗಳಿಂದ ಬಿಡುಗಡೆ ಪಡೆಯಬೇಕಿನಿಸಿತು. ಒಂದು, ಸನಾತನವಾದಿಯಾದ ಬ್ರಾಹ್ಮಣವಾದದಿಂದ. ಎರಡು, ಅತಿಯಾಗಿ ಪಾಶ್ಚಾತ್ಯೀಕರಣಗೊಳ್ಳುತ್ತಿದ್ದ ವಿಚಾರ ಕ್ರಮಗಳಿಂದ. ಇಂತಹ ಇಬ್ಬದಿಯ ಬಿಡುಗಡೆಗಾಗಿ ಏಕಕಾಲಕ್ಕೆ ಇದು ಬ್ರಾಹ್ಮಣ ಹಿಂದೂ ಹಾಗೂ ಯೂರೋಪು ಎರಡನ್ನೂ ವಿಮರ್ಶಿಸಬೇಕಾಯಿತು. ಸ್ಥಳೀಯ ಬದುಕಿನಲ್ಲಿ ಬೇರುಬಿಡಬೇಕಾಯಿತು. ಇಂತಹ ಸಂಕೀರ್ಣ ಅವಸ್ಥೆಯಲ್ಲಿ ಸಂಸ್ಕೃತಿ ಚಿಂತನೆ ಮಾಡಿದವರಲ್ಲಿ ಯು.ಆರ್.ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗರು ಮುಖ್ಯರು. ಮೂರ್ತಿಯವರ ‘ಇಂಗ್ಲಿಷ್ ಬ್ರಾಹ್ಮಣ ಕನ್ನಡ ಶೂದ್ರ’ ಪರಿಕಲ್ಪನೆ ಈ ದಿಸೆಯಲ್ಲಿ ಹುಟ್ಟಿತು. ಅವರ “ಪೂರ್ವಾಪರ” ಕೃತಿಯು ಈ ಬಗೆಯ ಬಿಡುಗಡೆಯ ತಲ್ಲಣವನ್ನು ಪ್ರತಿನಿಧಿಸುತ್ತದೆ. ಕನ್ನಡದಲ್ಲಿ ತೀವ್ರವಾದ ವಾಗ್ವಾದ ಹುಟ್ಟಿಸುವ ಅನಂತಮೂರ್ತಿ ಒಬ್ಬ ಕನ್ನಡದ ಪ್ರಮುಖ ಸಂಸ್ಕೃತಿ ಚಿಂತಕರು.

ನಂತರ ಅವರ ಚಿಂತನೆಯಲ್ಲಿ ಕೆಲ ಪರಿವರ್ತನೆಗಳಾದವು. ಸಂಸ್ಕೃತಿ ಕುರಿತ ಅವರ ಎರಡು ಹೇಳಿಕೆಗಳನ್ನು ಗಮನಿಸಬೇಕು: “ಸಂಸ್ಕೃತಿ ಎಂದರೆ ಬುದ್ಧಿಯ ಅತ್ಯುತ್ತಮ ಮಟ್ಟದಲ್ಲಿ ಪ್ರೇರಕಶಕ್ತಿಗಳಾಗಿ ಕೆಲಸಮಾಡುವ ವಿಚಾರಗಳಲ್ಲದೆ ನಿತ್ಯದ ಆಚರಣೆಯಲ್ಲಿ ಜೀವನವನ್ನು ರೂಪಿಸುತ್ತಿರುವ ನಡೆನುಡಿ” (೧೯೭೧:೧೬೦). “ಆರ್ನಲ್ಡ್ ಮತ್ತು ಡಿವಿಜಿಯವರು ಸಂಸ್ಕೃತಿ ಶಬ್ದವನ್ನು ಶ್ರೇಷ್ಠವಾದ, ಅಂದರೆ ಯಾವುದು ಇರಬೇಕಾದದ್ದು ಎಂಬ ಅರ್ಥದಲ್ಲಿ ಬಳಸುತ್ತಾರೆ. ಆದರೆ ನಾನು ಈ ಪದವನ್ನು ಈವರೆಗೆ ಬಳಸಿರುವುದು ಆಂಥ್ರೋಪಾಲಜಿಯಲ್ಲಿ ಬಳಸಿದಂತೆ; ಜನರ ನಂಬಿಕೆ ನಡಾವಳಿಗಲ್ಲಿ ದೈನಿಕಗಳಲ್ಲಿ ವ್ಯಕ್ತವಾಗಿಯೂ ಇಂಗಿತವಾಗಿಯೂ ಕಾಣುವುದೆಲ್ಲವೂ ಸಂಸ್ಕೃತಿ ಎಂಬ ಅರ್ಥವಲ್ಲಿ” (೧೯೯೦:೧೦೬).

ಮೊದಲನೆಯ ಹೇಳಿಕೆಯಲ್ಲಿ ಮೌಲ್ಯಪ್ರಜ್ಞೆ ಹಾಗೂ ಮಾನವಶಾಸ್ತ್ರೀಯ ವ್ಯಾಖ್ಯೆಗಳನ್ನು ಬೆರೆಸಿದ ಗ್ರಹಿಕೆಯಿದೆ. ಎರಡನೆಯದಲ್ಲಿ, ಮೌಲ್ಯಪ್ರಜ್ಞೆಯ ಆಯಾಮವನ್ನು ಬಿಟ್ಟುಕೊಟ್ಟು, ಮಾನವಶಾಸ್ತ್ರೀಯ ವ್ಯಾಖ್ಯಾನವಷ್ಟೇ ಇದೆ. ಇದು ಸಂಸ್ಕೃತಿ ಗ್ರಹಿಕೆಯು ಒಬ್ಬ ಚಿಂತಕರಲ್ಲೆ ಪಡೆಯುವ ಬದಲಾವಣೆಯನ್ನು ಸೂಚಿಸುತ್ತಿದೆ. ಈ ಬದಲಾವಣೆ ವ್ಯಕ್ತಿವಾದದಿಂದ ಸಮುದಾಯ ವಾದದತ್ತ ಮುಖಮಾಡಿದೆ ಎಂಬುದು ಗಮನಾರ್ಹ. ಅನಂತಮೂರ್ತಿ ಅವರ “ಬೆತ್ತಲೆಪೂಜೆ ಯಾಕೆ ಕೂಡದು?” (೧೯೯೬) ಪುಸ್ತಕದಲ್ಲಿ ಕೂಡ ಪಶ್ಚಿಮದ ವಿಚಾರ ಕ್ರಮಗಳಿಂದ ಬಿಡುಗಡೆಯಾಗುವ ಹಾದಿಗಳ ಹುಡುಕಾಟವಿದೆ. ಈ ಕೃತಿಯ ಹೆಸರಲ್ಲಿರುವ ಹಠದ ದನಿಯನ್ನು ಗಮನಿಸಬೇಕು.

ಶೂದ್ರವಾದಿ ಘಟ್ಟ

ಕನ್ನಡದಲ್ಲಿ ೭೦ರ ದಶಕದ ಬಳಿಕ ಆಧುನಿಕ ಶಿಕ್ಷಣದ ಮೂಲಕ ಎಚ್ಚರ ಪಡೆದುಕೊಂಡು ಶೂದ್ರಜಾತಿಗಳ ಅನೇಕ ಜನರು, ಈ ದೇಶದ ಚರಿತ್ರೆ, ಕಲೆ, ಸಾಹಿತ್ಯ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ತಮ್ಮ ಪ್ರಾತಿನಿಧ್ಯ ಏನಿದೆ ಎಂಬ ವಿಮರ್ಶಾತ್ಮಕ ಹಾಗೂ ಹಕ್ಕುಸಾಧನೆಯ ಪ್ರಶ್ನೆ ಎತ್ತತೊಡಗಿದರು. ಇದಕ್ಕೆ ೬೦ರ ದಶಕದಲ್ಲಿ ಲೋಹಿಯಾವಾದದ ಪ್ರಭಾವದಿಂದ ಹುಟ್ಟಿಕೊಂಡ ಸಮಾಜವಾದಿ  ಚಟುವಟಿಕೆಗಳು, ಬಸವಲಿಂಗಪ್ಪನವರು ಕನ್ನಡ ಸಾಹಿತ್ಯವನ್ನು ಬೂಸಾ ಎಂದು ಕರೆದ ಪ್ರಕರಣ, ‘ಬರೆಹಗಾರ ಮತ್ತು ಕಲಾವಿದರ ಒಕ್ಕೂಟ’ದ ಸಮಾವೇಶ ಮುಂತಾದ ಚಟುವಟಿಕೆಗಳು ಪ್ರೇರಕವಾಗಿದ್ದವು. ಈಯೆಲ್ಲ ವಿದ್ಯಮಾನಗಳ ಹಿಂದೆ ಒಂದಲ್ಲ ಒಂದು ಬಗೆಯಲ್ಲಿ ಕುವೆಂಪು ಇದ್ದರು. ಕುವೆಂಪು, ಡಿವಿಜಿಯವರಂತೆ ಸಂಸ್ಕೃತಿ ಚಿಂತಕರಲ್ಲ. ಆದರೆ ಅವರ ವೈಚಾರಿಕತೆ ಅನೇಕರಿಗೆ ಸಂಸ್ಕೃತಿಯನ್ನು ಕೆಳಜಾತಿ ಸಮುದಾಯಗಳ ಪರವಾಗಿ ಗ್ರಹಿಸಲು ನೆರವಾಯಿತು. ಅವರು ಶ್ರೀಕಂಠಶಾಸ್ತ್ರಿಗಳ “ಭಾರತೀಯ ಸಂಸ್ಕೃತಿ”ಗೆ ಮುನ್ನುಡಿ ಬರೆಯುವಾಗ ಸಂಸ್ಕೃತಿಯನ್ನು ವೈದಿಕ ಕೇಂದ್ರಿತ ವಿಶಾಲ ಭಿತ್ತಿಯಲ್ಲಿ ಆದರ್ಶವಾದಿಯಾಗಿಯೇ ಗ್ರಹಿಸಿದ್ದರು. ಆದರೆ ೧೯೭೪ರ ಹೊತ್ತಿಗೆ, ‘ಸಂಸ್ಕತಿ’ ಪರಿಕಲ್ಪನೆಯನ್ನು ಸಮಾಜ ಎಂಬರ್ಥದಲ್ಲಿಯೇ ಬಳಸತೊಡಗಿದರು. ಅವರು ‘ಕರ್ನಾಟಕ ಬರೆಹಗಾರ ಮತ್ತು ಕಲಾವಿದರ ಒಕ್ಕೂಟ’ವನ್ನು ಉದ್ಘಾಟನೆ ಮಾಡುತ್ತ ಮಾಡಿದ ಐತಿಹಾಸಿಕ ಭಾಷಣ (೧೯೭೪) ಹೆಸರು ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’. ಇಲ್ಲಿ ‘ಸಂಸ್ಕೃತಿ ಕ್ರಾಂತಿ’ ಎಂದರೆ ಸಾಮಾಜಿಕ ಕ್ರಾಂತಿ ಎಂದೇ ಅರ್ಥ.

ಸಂಸ್ಕೃತಿಯನ್ನು ಸಮಾಜಕೇಂದ್ರದಲ್ಲಿ ಗ್ರಹಿಸಿದ ಇನ್ನೊಬ್ಬ ಚಿಂತಕರೆಂದರೆ, ಪೂರ್ಣಚಂದ್ರ ತೇಜಸ್ವಿ. ಅವರು ಅನಂತಮೂರ್ತಿಯವರ ‘ಭಾರತೀಯ ಸಂಸ್ಕೃತಿ ಮತ್ತು ಲೇಖಕ’ ಲೇಖನಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಬರೆದ ‘ಕರ್ನಾಟಕ ಸಂಸ್ಕೃತಿ ವಿಶ್ಲೇಷಣೆ’ (೧೯೭೪) ಎಂಬ ಲೇಖನವು ಅವರ ಶೂದ್ರವಾದಿ ಚಿಂತನೆಯನ್ನು ಒಳಗೊಂಡಿದೆ. ಈ ಲೇಖನ ‘ಕರ್ನಾಟಕ ಬರೆಹಗಾರ ಮತ್ತು ಕಲಾವಿದರ ಒಕ್ಕೂಟ’ ಉದ್ಘಾಟನೆಯಾದ ದಿನಗಳಲ್ಲೇ ಪ್ರಕಟವಾಯಿತ ಎಂಬುದು ಮಾರ್ಮಿಕ. ಶೂದ್ರ ಚರಿತ್ರೆ ಮತ್ತು ಪರಂಪರೆಗಳನ್ನು ಹುಡುಕಿ ಕಟ್ಟಿಕೊಳ್ಳುವ ತವಕ, ಅದರ ರಭಸದಲ್ಲಿ ಎಲ್ಲ ಬ್ರಾಹ್ಮಣವಾದಿ ನಿಲುವುಗಳನ್ನು ಕೆಡಹುವ ಬಿರುಸು – ಎರಡೂ ಗುಣಗಳು ಅದರಲ್ಲಿವೆ. ಇದಕ್ಕೆ ಅನಂತಮೂರ್ತಿ ಲೇಖನವು ಒಂದು ಪ್ರಚೋದನೆಯಾಗಿ ಒದಗಿದಂತಿದೆ. ಅನಂತಮೂರ್ತಿ ಲೇಖನದೊಳಗಿನ ಕುವೆಂಪು ಕುರಿತ ಟೀಕೆಗೆ ಉತ್ತರಿಸುತ್ತ ತೇಜಸ್ವಿಯವರು ಕರ್ನಾಟಕ ಸಂಸ್ಕೃತಿಯನ್ನು ವ್ಯಾಖ್ಯಾನಿಸುತ್ತಾರೆ. “ಕನ್ನಡ ಸಾಹಿತ್ಯ ಚರಿತ್ರೆ ಎಂದರೆ, ಸಂಸ್ಕೃತಿ ಚರಿತ್ರೆ ಎಂದರೆ, ಇನ್ನೇನೂ ಆಗಿರದೆ, ಇಡೀ ಶೂದ್ರ ಸಮುದಾಯದ ಮೂಲಕ ಅನುಭವನಗಳು ನಿಧಾನವಾಗಿ ಪ್ರಜ್ಞಾಗಮ್ಯವಾಗುತ್ತ ಅಭಿವ್ಯಕ್ತಿಯನ್ನು ಸಾಧಿಸಿಕೊಳ್ಳುತ್ತ ಬಂದುದರ ಚರಿತ್ರೆ” ಎಂದು ಘೋಷಿಸುತ್ತಾರೆ. ಹಾಗೆ ಕಂಡರೆ ತೇಜಸ್ವಿಯವರ ಈ ಚಿಂತನೆಯು ಅವರ “ಅಬಚೂರಿನ ಪೋಸ್ಟಾಫೀಸು” ಕಥಾಸಂಕಲನದ ಮುನ್ನುಡಿಯಲ್ಲಿ (‘ಹೊಸ ದಿಗಂತದೆಡೆಗೆ’) ವ್ಯಕ್ತಿವಾಗಿತ್ತು. ಸಾಹಿತ್ಯವನ್ನು ಸಾಮಾಜಿಕ ಹೊಣೆಗಾರಿಕೆಯ ಜತೆ ತಳುಕಿಹಾಕಿ ನೋಡುವ ಈ ಮುನ್ನುಡಿಯು ಮುಂದೆ ಸಾಹಿತ್ಯಕ ಅಧ್ಯಯನಗಳು ಸಾಂಸ್ಕೃತಿಕ ಹೆಸರಲ್ಲಿ ಸಾಮಾಜಿಕ ರಾಜಕೀಯ ಸ್ವರೂಪ ಧಾರಣೆ ಮಾಡಲು ಪರೋಕ್ಷವಾಗಿ ಪ್ರೇರಕವಾಯಿತು.

ದಲಿತವಾದ ಘಟ್ಟ

ಅಂಬೇಡ್ಕರ್ ‘ಸಂಸ್ಕೃತಿ’ ಶಬ್ದವನ್ನು ಅಪರೂಪಕ್ಕೆ ಬಳಸುತ್ತಾರೆ. ಆದರೆ ಅದನ್ನು ಭಾರತೀಯ ಸಮಾಜ ವಿಶ್ಲೇಷಣೆಗೆ ಬೇಕಾದ ಒಂದು ತಾತ್ವಿಕ ಪರಿಕಲ್ಪನೆಯಾಗಿ ರೂಪಿಸುವುದಿಲ್ಲ. ಅವರ ಸಾಮಾಜಿಕ, ರಾಜಕೀಯ ಉದ್ದೇಶಕ್ಕೆ ಹಾಗೆ ರೂಪಿಸುವುದು ಸಾಧ್ಯವೂ ಇರಲಿಲ್ಲ. ಅಂಬೇಡ್ಕರ್ ಚಿಂತನೆಗಳ ಪ್ರಭಾವ ಕನ್ನಡದ ಅಧ್ಯಯನಗಳ ಮೇಲಾಗಿದೆ. ಬಿ. ಕೃಷ್ಣಪ್ಪನವರು ಕುವೆಂಪು ಅವರನ್ನು ಕುರಿತು ‘ಪುರೋಹಿತಶಾಹಿಯಿಂದ ಶೂದ್ರಶಾಹಿಗೆ’ ಲೇಖನ ಬರೆದರು. ಅನಂತರ ದೇವನೂರ ಮಹಾದೇವ, ಸಿದ್ಧಲಿಂಗಯ್ಯ, ಅರವಿಂದ ಮಾಲಗತ್ತಿ, ಮ.ನ. ಜವರಯ್ಯ, ಎಸ್.ಎಸ್. ಹಿರೇಮಠ, ಕೆ. ರಾಮಯ್ಯ, ಮೊಗಳ್ಳಿ ಗಣೇಶ ಮುಂತಾದವರು ದಲಿತ ಚಿಂತನೆಯನ್ನು ಬೆಳೆಸಿದರು. ಸಮಕಾಲೀನ ಹಾಗೂ ಗತಕಾಲದ ಘಟನೆ ಹಾಗೂ ಪಠ್ಯಗಳನ್ನು ದಲಿತ ದೃಷ್ಟಿಕೋನದಿಂದ ವಿಶ್ಲೇಷಿಸುವ ಒಂದು ಚಿಂತನಾ ಪರಂಪರೆಯನ್ನೆ ಇವರು ಆರಂಭಿಸಿದರು. ದಲಿತ ದೃಷ್ಟಿಕೋನದಿಂದ ದಲಿತ ವಚನಕಾರರನ್ನು ಕುರಿತು ಮ.ನ. ಜವರಯ್ಯ ಮಾಡಿದ ಅಧ್ಯಯನ, ಪ್ರಾಚೀನ ಕನ್ನಡ ಸಾಹಿತ್ಯ ಕೃತಿಗಳನ್ನು ವಿಶ್ಲೇಷಿಸುವ ಅರವಿಂದ ಮಾಲಗತ್ತಿಯವರ ಲೇಖನಗಳು, ಜಾನಪದವನ್ನು ವ್ಯಾಖ್ಯಾನಿಸುವ ಮೊಗಳ್ಳಿ ಅವರ ಪ್ರಯತ್ನಗಳು ಉಲ್ಲೇಖರ್ಹವಾಗಿವೆ,

ಅಂಬೇಡ್ಕರ್ ಚಿಂತನೆಗಳ ಪ್ರಖರ ವೈಚಾರಿಕತೆಯಲ್ಲಿ ಎದುರಾಳೀಯಾದ ಬ್ರಾಹ್ಮಣ ಚಿಂತನೆಯ ವಿಮರ್ಶೆಯಿದೆ. ಆದರೆ ದಲಿತ ಸಂಸ್ಕೃತಿಯನ್ನು ಶೋಧಿಸುವ ದಾರಿಗಳಿಲ್ಲ. ದಲಿತ ಸಂಸ್ಕೃತಿಯ ಒಳಗಿನ ಚೈತನ್ಯ ಶೀಲ ಜಗತ್ತುಗಳನ್ನು ಶೋಧಿಸಬಯಸುವ ದಲಿತ ಚಿಂತನೆಗೆ ಅಂಬೇಡ್ಕರ್ ವೈಚಾರಿಕತೆ ಸಾಕಾಗಲಿಲ್ಲ. ಹೀಗಾಗಿ ದಲಿತ ಚಿಂತನೆ ತನ್ನ ಸಂಸ್ಕೃತಿ, ಪರಂಪರೆಯನ್ನು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಇತರೆ ತಾತ್ವಿಕತೆಗಳ ಜತೆ ಕೊಡುಕೊಳು ಮಾಡಿ ಹೊಸಹುಟ್ಟನ್ನು ಪಡೆಯತೊಡಗಿತು. ಅದಕ್ಕೆ ತನ್ನ ಅನುಭವ ಜಗತ್ತು ಹಾಗೂ ವರ್ತಮಾನದ ಒತ್ತಡಗಳೇ ಅದಕ್ಕೆ ಮುಖ್ಯ ಪ್ರೇರಣೆಗಳಾದವು. ಉಪಸಂಸ್ಕೃತಿ ಮಾಲೆಯಲ್ಲಿ ಕೆ.ರಾಮಯ್ಯ (“ಸಿಂಧ್ ಮಾದಿಗರ ಸಂಸ್ಕೃತಿ”) ಅವರು ಮಾಡಿದ ಅಧ್ಯಯನ ಈ ದಿಸೆಯ ಮುಖ್ಯ ಸಾಧನೆ. ಈ ಕೃತಿ ಮಾನವಶಾಸ್ತ್ರೀಯ ವಿಧಾನದಾಚೆ ಹೋಗಿ, ಕೆಲವು ರಾಜಕೀಯ ಸಾಮಾಜಿಕ ಪ್ರಶ್ನೆಗಳನ್ನು ಎತ್ತುತ್ತದೆ. ದಲಿತ ಸಂಸ್ಕೃತಿಗಳನ್ನು ಆಧುನಿಕ ಸಂವೇದನೆಯಲ್ಲಿ ಹೇಗೆ ಸ್ವವಿಮರ್ಶೆ ಹಾಗೂ ಆಪ್ತತೆಯಲ್ಲಿ ನೋಡಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಇದು ಉಪಸಂಸ್ಕೃತಿ ಪ್ರಣಾಳಿಕೆಯನ್ನು ವಿಮರ್ಶಿಸುತ್ತ, ಅದನ್ನೆ ವಿಸ್ತರಿಸಲು ಯತ್ನಿಸಿದೆ. ಈಚೆಗೆ ದಲಿತ ಸಂಸ್ಕೃತಿಯನ್ನು ಮಾರ್ಕ್ಸ್‌ವಾದಿ ನೆಲೆಗಳಿಂದ ಚಾರಿತ್ರಿಕ ಹಾಗೂ ತತ್ವಶಾಸ್ತ್ರೀಯ ನೆಲೆಯಲ್ಲಿ ಶೋಧಿಸುತ್ತಿರುವ ಎಸ್.ಎಸ್. ಹಿರೇಮಠ ಅವರ ಯತ್ನಗಳನ್ನು ಇಲ್ಲಿ ನೆನೆಯಬೇಕು.

ಎಡವಾದಿ ಘಟ್ಟ

೭೦ರ ನಂತರ ಕನ್ನಡದಲ್ಲಿ ದಲಿತ ಹಾಗೂ ಕೆಳಜಾತಿ ಸಮೂಹದಿಂದ ಹಲವಾರು ಬುದ್ಧಿಜೀವಿಗಳು, ಲೇಖಕರು, ರಾಜಕೀಯ ಚಿಂತಕರು ಹೊರಹೊಮ್ಮಿದರು. ಇವರ ಹೊಮ್ಮುವಿಕೆಗೆ ಕರ್ನಾಟಕದ ಅನೇಕ ರಾಜಕೀಯ ಸಾಮಾಜಿಕ ವಿದ್ಯಮಾನಗಳು ಕಾರಣವಾಗಿದ್ದವು. ಇವರಲ್ಲಿ ಮಾರ್ಕ್ಸ್‌ವಾದಿಗಳೂ ಲೋಹಿಯಾವಾದಿಗಳೂ ಅಂಬೇಡ್ಕರ್‌ವಾದಿಗಳೂ ಇದ್ದರು. ಬರೆಹಗಾರ ಮತ್ತು ಕಲಾವಿದರ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ಬಂಡಾಯ ಸಾಹಿತ್ಯ ಸಂಘಟನೆಗಳು ಈ ಎಚ್ಚೆತ್ತ ಘಟ್ಟಕ್ಕೆ ಸಾಂಸ್ಕೃತಿಕ  ವೇದಿಕೆಗಳಾದವು. ದಲಿತ, ಹಿಂದುಳಿದ ಜಾತಿ ಪರವಾದ ಚಿಂತನೆ ಹಾಗೂ ಮಾರ್ಕ್ಸ್‌ವಾದಿಗಳ ಮಿಲನದಿಂದ ಕನ್ನಡದಲ್ಲಿ ಒಂದು ಹೊಸ ಪ್ರಗತಿಪರ ವೈಚಾರಿಕತೆ ಉದ್ಭವವಾಯಿತು. ಅದನ್ನು ವಿಶಾಲ ನೆಲೆಯಲ್ಲಿ ಎಡಪಂಥೀಯ ಚಿಂತನೆ ಎನ್ನಬಹುದು. ಇದರ ಮುಖ್ಯ ಆಸಕ್ತಿ ಸಾಹಿತ್ಯವಾಗಿದ್ದರೂ, ಸಾಹಿತ್ಯಕ ಚಟುವಟಿಕೆಗಳನ್ನು ತನ್ನ ಸಾಮಾಜಿಕ, ರಾಜಕೀಯ ಚಿಂತನೆಗಳ ಪ್ರಸಾರಕ್ಕೆ ಬಳಸಿಕೊಂಡಿತು. ಈ ಬೆಳವಣಿಗೆಗಳು ಸಾಹಿತ್ಯ, ಕಲೆ, ಸಮಾಜ, ರಾಜಕಾರಣ ಎಲ್ಲವನ್ನು ವಿಶ್ಲೇಷಿಸಲು ಒಂದು ಮಾದರಿ ರೂಪಿಸಿದವು. ಸಾಂಸ್ಕೃತಿಕ ಅಧ್ಯಯನಗಳು ಸಮಾಜದ ಕೆಳಸ್ತರದ ದೃಷ್ಟಿಕೋನ ಧಾರಣೆ ಮಾಡಲು ಇದು ಸಹಾಯಕವಾಯಿತು. ವಚನ, ಶಾಸನ, ರಾಜಕೀಯ ಚರಿತ್ರೆ, ಪ್ರಾಚೀನ ಸಾಹಿತ್ಯ ಹಾಗೂ ಜಾನಪದಗಳನ್ನು ಈ ದೃಷ್ಟಿಕೋನದಿಂದ ವಿಶ್ಲೇಷಿಸಲು ಆರಂಭಿಸಲಾಯಿತು. ಮೊದಲ ಘಟ್ಟದಲ್ಲಿ ಡಿ.ಆರ್. ನಾಗರಾಜ, ನಂತರದ ಘಟ್ಟದಲ್ಲಿ ಸಿದ್ಧಲಿಂಗಯ್ಯ, ಬರಗೂರು, ಬಿ. ಕೃಷ್ಣಪ್ಪ, ಎಸ್. ಶಿವಾನಂದ, ಚಂಪಾ, ಎಸ್. ಎಸ್. ಹಿರೇಮಠ, ಬಿಳಿಮಲೆ ಮುಂತಾದವರು ಈ ದಿಸೆಯಲ್ಲಿ ಕೆಲಸ ಮಾಡಿದರು. ವಿಶೇಷವೆಂದರೆ ಮೊದಲ ಘಟ್ಟದಲ್ಲಿ ಇವರು ಮಾಡಿದ ಚಿಂತನೆ ಹಾಗೂ ಅಧ್ಯಯನಗಳಲ್ಲಿ ಸಾಂಸ್ಕೃತಿಕ ಪರಿಭಾಷೆ ಇಲ್ಲ. ಬದಲಿಗೆ ರಾಜಕೀಯ ಸಾಮಾಜಿಕ ಪರಿಭಾಷೆ ಇದೆ. ಈ ಪರಿಭಾಷಾ ಬದಲಾವಣೆಯು ಕನ್ನಡದ ಅಧ್ಯಯನಗಳಲ್ಲಾದ ಮೂಲಭೂತ ಪಲ್ಲಟವೊಂದನ್ನು ಸೂಚಿಸುತ್ತಿದೆ:

ಬಂಡಾಯ ಸಾಹಿತ್ಯ ಸಂಘಟನೆಯ ಹುಟ್ಟು ಈ ವಿಶಾಲ ಎಡವಾದಿ ಚಿಂತನೆಯ ಒಂದು ಪರಿಣಾಮವಾಗಿತ್ತು. ಇದು ೮೦ರ ದಶಕದ ನಂತರ ಆರಂಭವಾದ ಸಾಂಸ್ಕೃತಿಕ ಅಧ್ಯಯನಗಳ ಹಿಂದಿರುವ ಪ್ರೇರಕ ಶಕ್ತಿಗಳಲ್ಲಿ ಒಂದಾಯಿತು. ಬಂಡಾಯ ಸಾಹಿತ್ಯ ಸಂಘಟನೆಯ ಮೊದಲ ಸಮ್ಮೇಳನ ೧೯೨೯ ರಲ್ಲಿ ನಡೆಯಿತು. ಆಗ ‘ನಮ್ಮ ನೆಲೆ’ ಹೆಸರಲ್ಲಿ ಸಂಘಟನೆಯ ಪ್ರಣಾಳಿಕೆ ಬಿಡುಗಡೆಯಾಯಿತು. ಅದರಲ್ಲಿ ಸಾಂಸ್ಕೃತಿಕ ಪರಿಕಲ್ಪನೆಯ ಉಲ್ಲೇಖವಿದೆ. ಈ ಪರಿಕಲ್ಪನೆಯು ಸಾಮಾಜಿಕ, ರಾಜಕೀಯ, ಸಾಹಿತ್ಯಕ ಮೂರೂ ಕ್ಷೇತ್ರಗಳನ್ನು ಏಕಕಾಲಕ್ಕೆ ಹಿಡಿಯುವ ಯತ್ನಿಸುತ್ತದೆ:

ಎಲ್ಲ ವಾಮಪಂಥೀಯರ ಸಾಂಸ್ಕೃತಿಕ ಒಗ್ಗಟ್ಟು ಈಗ ಅತ್ಯಂತ ಮುಖ್ಯವಾದ್ದು. ಈ ದಿಕ್ಕಿನಲ್ಲಿ ಬಂಡಾಯ ಸಾಹಿತ್ಯ ಚಳುವಳಿಯು ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ವ್ಯಾಪಕವಾಗಿ ಹಬ್ಬುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಶೋಷಿತ ಜನತೆಯ ಪರವಾದ ನಿಲುವುಗಳನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಗೊಳಿಸುವುದು ನಮ್ಮ ಮುಖ್ಯ ಗುರಿಗಳಲ್ಲೊಂದಾಗಬೇಕು. ನಮ್ಮ ಹೋರಾಟ ಪ್ರಧಾನವಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದ್ದು. ದೇಶದ ರಾಜಕೀಯ ಮತ್ತು ಸಾಂಸ್ಕೃತಿಕ ಸಂದರ್ಭಗಳು ಪರಸ್ಪರ ಸಂಬಂಧವುಳ್ಳವು ಎಂಬ ನಿಲುವಿನಿಂದ ಹೊರಟದ್ದು… ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮ್ಮೆಲ್ಲರ ಶತ್ರುಗಳನ್ನು ಗುರುತಿಸಿಕೊಳ್ಳಬೇಕು… ನಮ್ಮದು ಪ್ರಧಾನವಾಗಿ ಸಾಂಸ್ಕೃತಿಕ ಚಳುವಳಿ. ಆದ್ದರಿಂದ ನಮ್ಮ ಆಶಯಗಳನ್ನೊಳಗೊಂಡ ಸೃಜನಶೀಲ ಸಾಹಿತ್ಯ ಹೆಚ್ಚೆಚ್ಚು ಸೃಷ್ಟಿಯಾಗಬೇಕು. ಮುಖ್ಯವಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಶೋಷಿತ ಜನತೆಯ ಪರವಾದ ಅಭಿಪ್ರಾಯಗಳನ್ನು ರೂಪಿಸಬೇಕು (ಚಂಪಾ, ೧೯೭೯:೪).

ಇಲ್ಲಿ ಸಾಂಸ್ಕೃತಿಕ ಒಗ್ಗಟ್ಟು, ಸಾಂಸ್ಕೃತಿಕ ಕ್ಷೇತ್ರ, ಸಾಂಸ್ಕೃತಿಕ ಸಂದರ್ಭ, ಸಾಂಸ್ಕೃತಿಕ ಚಳುವಳಿ ಎಂಬ ಪರಿಕಲ್ಪನೆಗಳ ಬಳಕೆಯಾಗಿವೆ. ಆದರೂ ಸಾಂಸ್ಕೃತಿಕ ಎಂಬುದರ ಅರ್ಥ ಖಚಿತವಾಗುವುದಿಲ್ಲ. ಅದು ಸಾಹಿತ್ಯವನ್ನು ಒಳಗೊಂಡಂತೆ ಸಾಮಾಜಿಕ ರಾಜಕೀಯ ಕ್ಷೇತ್ರಗಳಿಗೂ ಸಂಬಂಧಪಟ್ಟಿದ್ದು ಎಂದು ಅರಿವಾಗುತ್ತದೆ. ಕನ್ನಡದಲಿ ಕುವೆಂಪು ನಂತರ ‘ಸಾಂಸ್ಕೃತಿಕ’ ಎಂಬ ಪದವು ದಮನಿತ ಸಮುದಾಯಗಳ ಆಶೋತ್ತರಗಳನ್ನು ರಾಜಕಾರಣದಲ್ಲಿ ಪ್ರತಿನಿಧಿಸುವ ಪರಿಭಾಷೆಯಾಗತೊಡಗಿದ್ದು ಇಲ್ಲಿಂದ ಎನ್ನಬಹುದು.

ಆಧುನಿಕೋತ್ತರವಾದಿ ಘಟ್ಟ

೨೦ನೇ ಶತಮಾನದ ಕೊನೇ ದಶಕದ ಚಿಂತನೆಯನ್ನು ಪ್ರೇರಿಸಿದ ಪ್ರಮುಖ ವಿದ್ಯಮಾನವೆಂದರೆ, ಬಲಿಷ್ಠ ದೇಶಗಳ ಹೊಸ ರಾಜಕೀಯ ಅರ್ಥಶಾಸ್ತ್ರದ ಭಾಗವಾಗಿ ಬಂದ ಜಾಗತೀಕರಣ. ಇದು ಅನೇಕ ಬಗೆಯ ಪ್ರತಿರೋಧ ಮತ್ತು ಪರ್ಯಾಯಗಳ ಹುಡುಕಾಟಗಳಿಗೆ ಕಾರಣಾಯಿತು. ಈ ಸಂದರ್ಭದಲ್ಲಿ ಮುಂಚೂಣಿಗೆ ಬಂದ ಚಿಂತನೆ ಪೋಸ್ಟ್‌ಮಾಡರ್ನಿಸಂ. ಹಿಂದೆ ಸೂಚಿಸಿದಂತೆ ಇದರ ಒಂದು ಲಕ್ಷಣವೆಂದರೆ, ಸಮಸ್ತ ಬೃಹತ್ ಮತ್ತು ಸ್ಥಾಪಿತ ರಚನೆಗಳನ್ನು ಪ್ರಶ್ನಿಸುವುದು ಹಾಗೂ ಅಪ್ರತಿಷ್ಠಿತವಾದುದನ್ನು ಮನ್ನಿಸುವುದು. ಇದನ್ನು ಕೇಂದ್ರ ಹಾಗೂ ಅಂಚು ಎಂಬ ಪರಿಭಾಷೆಯಲ್ಲಿ ವಿವರಿಸುತ್ತದೆ. ಕೆಳಗಿನ ಒಂದು ವಿಶ್ಲೇಷಣೆಯು ಇದರ ತಾತ್ವಿಕ ಸ್ವರೂಪವನ್ನು ಸೂಚಿಸುತ್ತದೆ: “ಪ್ರತಿಯೊಮದು ಸಾಂಸ್ಕೃತಿಕ ಕಾಲಘಟ್ವೂ ತನಗೆ ಪ್ರಿಯವಾದ ಮೈಲುಕಲ್ಲುಗಳನ್ನು ವರ್ಗೀಕರಣಗಳನ್ನು ನಿರ್ಮಿಸಿಕೊಂಡು ಆ ಮೂಲಕ ಕನ್ನಡ ನಾಟಕ ಕನ್ನಡ ರಂಗಭೂಮಿ – ಇತ್ಯಾದಿ ಭೂಪಟಗಳನ್ನು ಮರುಹೊಂದಾಣಿಕೆ ಮಾಡಿಕೊಳ್ಳುತ್ತಿರುತ್ತದೆ. ಈ ಶತಮಾನದ ಕನ್ನಡ ನಾಟಕದ ಕಥಾನಕದಲ್ಲಿ -’ಅಶ್ವತ್ಥಾಮನ್’, ‘ಶೂದ್ರತಪಸ್ವಿ’, ‘ತುಘಲಕ್’, ‘ಜೋಕುಮಾರಸ್ವಾಮಿ’ ಮೊದಲಾದ ನಾಟಕಗಳು ಬೇರೆಬೇರೆ ಕಾಲಧೋರಣೆಗಳ ಸಂದರ್ಭದಲ್ಲಿ ಇಂತ ಮೈಲುಗಲ್ಲುಗಳಾಗಿ ಕಾಣಿಸಿಕೊಂಡಿವೆ. ಹಾಗೆಯೇ ಕನ್ನಡ ರಂಗಭೂಮಿಯಲ್ಲಿ ಗುಬ್ಬಿಕಂಪನಿ, ಬಿ.ವಿ.ಕಾರಂತ ಮೊದಲಾದ ಮೈಲುಗಲ್ಲುಗಳಿದ್ದಾವೆ. ಇಂಥ ಪ್ರತಿಯೊಂದು ಮೈಲಿಗಲ್ಲು ಮತುತ ಅ ಮೂಲಕ ಉದ್ಭವಿಸುವ ವರ್ಗೀಕರಣ – ಇವು ಆಯಾಕಾಲದ ತಾತ್ವಿಕ ಪ್ರಸ್ಥಾನಗಳೂ ಹೌದು. ವಸಾಹತೋತ್ತರ ಪರಿಭಾಷೆಯ ಇದನ್ನೇ ಇನ್ನೂ ವಿಶಾಲಾರ್ಥದಲ್ಲಿ ಡಿಸ್‌ಕೋರ್ಸ್‌ಗಳೆಂದು ಕರೆಯುತ್ತದೆ. ಇಂಥ ತಾತ್ವಿಕ ಪ್ರಸ್ಥಾನಗಳಿಗೆ ಒಂದೊಂದು ದೃಷ್ಟಿವ್ಯಾಪ್ತಿ – ದೃಷ್ಟಿವೈಶಾಲ್ಯ ಇರುವಂತೆಯೇ ಇವುಗಳಿಗೆ ದೃಷ್ಟಿದೋಷ -ದೃಷ್ಟಿಮಾಂದ್ಯಗಳೂ ಇದ್ದಾವೆ. ಪ್ರಸ್ತುತ ಕನ್ನಡದಲ್ಲಿ ಚಾಲ್ತಿಯಲಿರುವ ಇಂಥ ತುಘಲಕ್ ಕೇಂದ್ರಿತ ಪ್ರಸ್ಥಾನಕ್ಕಿರುವ ದೃಷ್ಟಿಮಾಂದ್ಯವನ್ನು ಪರಿಶೀಲಿಸುವುದು ಈ ಬರೆಹಗಳ ಕಾರ್ಯಕ್ರಮಗಳಲ್ಲೊಂದು (ಪ್ರಸ್ತಾವನೆ, ಅಕ್ಷರ:೧೯೯೮).

ಇಲ್ಲಿ ಪ್ರಧಾನವೆಂದು ಪ್ರತಿಷ್ಠಾಪಿತವಾಗಿರುವ ರಚನೆಗಳನ್ನು ಪ್ರಶ್ನಿಸುತ್ತ ಅಂಚಿನ ಸಂಗತಿಗಳನ್ನು ಮುಟ್ಟುವ ತವಕವಿರುವುದನ್ನು ಗಮನಿಸಬೇಕು. ಇಲ್ಲಿ ಪ್ರಾಸಂಗಿಕವಾಗಿ ‘ವಸಾಹತೋತ್ತರ ಪರಿಭಾಷೆ’ ಎಂಬ ಮಾತೂ ಬಂದಿದೆ. ಕನ್ನಡದಲ್ಲಿ ಸಂಸ್ಕೃತಿ ಚಿಂತನೆಯು ಒಂದು ಎಳೆ ಇತ್ತೀಚೆಗೆ ವಸಾಹತೋತ್ತರ ಮತ್ತು ಆಧುನಿಕೋತ್ತರದತ್ತ ಹೊರಳುತ್ತಿದೆ. ಇದು ಜಾಗರೀಕರಣದ ಪರಿಣಾಮವೊ ಜಾಗತೀಕರಣಕ್ಕೆ ಪ್ರತಿಕ್ರಿಯೆಯೊ ಹೇಳುವುದು ಕಷ್ಟ.

ಪ್ರಭಾವಗಳ ಚರ್ಚೆಯಲ್ಲಿ ಸರಳೀಕರಣ

ಯಾವುದೇ ಚಿಂತನೆಗಳು ನಮ್ಮ ಸಂಸ್ಕೃತಿ ಚಿಂತನೆ ಅಥವಾ ಸಾಂಸ್ಕೃತಿಕ ಅಧ್ಯಯನಗಳ ಮೇಲೆ ಪ್ರಭಾವ ಬೀರಿದ ಬಗ್ಗೆ ಚರ್ಚಿಸುವಾಗ ಒಂದು ಸ್ಪಷ್ಟನೆ ಕೊಡಲೇಬೇಕು. ಅದೆಂದರೆ, ಹೊರಗಿನ ಸಿದ್ಧಾಂತಗಳಿಂದ ನಮ್ಮ ಸಂಸ್ಕೃತಿ ಚಿಂತಕರು ಹಾಗೂ ಸಾಂಸ್ಕೃತಿಕ ಅಧ್ಯಯನಕಾರರು ಪ್ರಭಾವ ಪಡೆದರು ಎಂಬುದು ಸರಳೀಕರಿಸಿದ ಹೇಳಿಕೆಯಾಗುತ್ತದೆ. ವಾಸ್ತವವಾಗಿ ಅಧ್ಯಯನಗಳಲ್ಲಿ ಹೊರ ಒಳ ಭೇದಗಳು ಅಳಿದು, ಹೊಸತೊಂದು ಹುಟ್ಟುವ ಪ್ರಕ್ರಿಯೆ ಸಂಭವಿಸುತ್ತದೆ. ಈ ಹುಟ್ಟುವ ವಿಧಾನ ಸಂಕೀರ್ಣವಾಗಿರುತ್ತದೆ. ಆದ್ದರಿಂದ ಕನ್ನಡದ ನಿರ್ದಿಷ್ಟ ಸಂಸ್ಕೃತಿ ಚಿಂತನೆ ಅಥವಾ ಸಾಂಸ್ಕೃತಿಕ ಅಧ್ಯಯನದಲ್ಲಿ ಇಂತಿಂತಹವರ ಪ್ರಭಾವವಿದೆ ಎಂದು ಗುರುತಿಸುವುದು ಸುಲಭದ ಕೆಲಸವಲ್ಲ.

ಅಧ್ಯಯನಗಳಲ್ಲಿ ನಿರ್ದಿಷ್ಟ ಚಿಂತನೆಂi ಪ್ರಭಾವ ಎಂದರೆ, ಅದು ಅಧ್ಯಯನಕಾರರ ಜಾತಿ, ಮತ, ನಂಬಿದ ಸಿದ್ಧಾಂತ ಮತ್ತು ವರ್ಗಹಿತಾಸಕ್ತಿಗಳ ಜತೆ ಸೇರಿ ಹೊಸ ರೂಪಧಾರಣೆ ಮಾಡುವುದೇ ಆಗಿರುತ್ತದೆ. ಪ್ರಭಾವವು ರೆಡಿಮೇಡ್ ಉಡುಪನ್ನು ಕೊಂಡು ಉಟ್ಟಂತಲ್ಲ. ಬಟ್ಟೆಕೊಟ್ಟು ನಮ್ಮ ದೇಹಕ್ಕೆ ತಕ್ಕಂತೆ ನಾವೇ ಹೊಲಿದುಕೊಂಡಂತೆ. ಯಾವ ಸಂವೇದನಶೀಲ ಅಧ್ಯಯನಕಾರರೂ ನಿರ್ದಿಷ್ಟ ಪ್ರಭಾವಕ್ಕೆ ಸಂಪೂರ್ಣವಾಗಿ ತೆತ್ತುಕೊಂಡು ದೃಷ್ಟಿಕೋನ ಪಡೆದುಕೊಳ್ಳುವುದಿಲ್ಲ. ತಾವು ಪ್ರೇರಣೆ ಪಡೆದಿರುವ ತಾತ್ವಿಕತೆಯನ್ನು ಒಪ್ಪುತ್ತಲೇ ಅದರ ಜತೆ ವಿಮರ್ಶಾತ್ಮಕವಾಗಿ ಒಡನಾಡುತ್ತ, ತಮ್ಮದೇ ಆದ ವಿಧಾನ ಹಾಗೂ ದೃಷ್ಟಿಕೋನವನ್ನು ಎಚ್ಚರಿಕೆಯಿಂದ ರಚಿಸಿಕೊಳ್ಳುತ್ತಾರೆ. ಡಿ. ಆರ್. ನಾಗರಾಜ್ ತಮ್ಮ “ಸಾಹಿತ್ಯ ಕಥನ” (೧೯೯೬) ಹಾಗೂ “ಸಂಸ್ಕೃತಿ ಕಥನ” (೨೦೦೨) ಗಳಲ್ಲಿ ವಸಾಹತೋತ್ತರ ಚಿಂತಕ ಎಡ್ವರ್ಡ್ ಸೈದ್, ಆಶೀಶ್‌ನಂದಿ ಚಿಂತನೆಗಳ ಜತೆ ಇಂತಹ ವಿಮರ್ಶಾತ್ಮಕ ಒಡನಾಟ ಮಾಡುತ್ತಾರೆ. ಇದಕ್ಕೆ ಬೇಕಾದ ಚಿಂತನೆಯನ್ನು ತಮ್ಮ ಮಾರ್ಕ್ಸ್‌ವಾದದ ಹಳೆಯ ತರಬೇತಿಯಿಂದಲೂ ಕನ್ನಡದ ಸಾಹಿತ್ಯದಿಂದಲೂ ಕರ್ನಾಟಕದ ಸಾಮಾಜಿಕ ರಾಜಕೀಯ ಚರಿತ್ರೆಯಿಂದಲೂ ಅವರು ಪಡೆದುಕೊಳ್ಳುತ್ತಾರೆ. ಎಸ್. ಎಸ್. ಹಿರೇಮಠ ಅವರು ಮಾರ್ಕ್ಸ್‌ವಾದಿ ಯಾದರೂ ಅಂಬೇಡ್ಕರ್ ಚಿಂತನೆಗಳಿಂದಲೂ ಆಧುನಿಕ ಸಮಾಜವಿಜ್ಞಾನಿಗಳಿಂದಲೂ ಪ್ರೇರಣೆ ತೆಗೆದುಕೊಳ್ಳುತ್ತಾರೆ. ಶಂಬಾ ಕೂಡ ವೇದಗಳಿಂದ ಹಿಡಿದು ಆಧುನಿಕ ಮಾನವಶಾಸ್ತ್ರ ಹಾಗೂ ಸಂಕೇತಶಾಸ್ತ್ರಗಳಿಂದ ಪ್ರೇರಣೆ ಪಡೆಯುತ್ತಾರೆ. ಒಂದು ಬಾವಿಯ ನೀರನ್ನು ನೆಚ್ಚುವ ಬದಲು ಹಲವು ಧಾರೆಗಳ ನದಿಯ ನೀರನ್ನು ಹಾಯಿಸಿಕೊಳ್ಳುವ ಗುಣವಿದು. ಒಬ್ಬ ಚಿಂತಕನ ಅಥವಾ ಒಂದು ಸಿದ್ಧಾಂತದ ಪ್ರಭಾವವಿಲ್ಲಿದೆ ಎಂದು ಗುರುತಿಸುವುದು ಕನ್ನಡದ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಯಾವಾಗಲೂ ಕಷ್ಟ ಮಾತ್ರವಲ್ಲ ವ್ಯರ್ಥ ಕೂಡ.

ಶಂ.ಬಾ. ಜೋಶಿ, ಕಲುಬುರ್ಗಿ, ಚಿದಾನಂದಮೂರ್ತಿ, ನಾಗರಾಜ, ಲಂಕೇಶ್, ಅನಂತಮೂರ್ತಿ, ಬರಗೂರು, ಮುಂತಾದವರು ಕನ್ನಡದ ಸಾಂಸ್ಕೃತಿಕ ಅಧ್ಯಯನಗಳ ಮೇಲೆ ಪ್ರಭಾವ ಬೀರಿರುವ ಪ್ರಮುಖ ಚಿಂತಕರು. ಇವರಲ್ಲಿ ಹೆಚ್ಚಿನವರು ಸಾಹಿತ್ಯ ಕ್ಷೇತ್ರದವರು. ಇವರಿಗೆ ಹೋಲಿಸಿದರೆ, ಎಂ.ಎನ್.ಶ್ರೀನಿವಾಸ್ ಮುಂತಾದ ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜಶಾಸ್ತ್ರಜ್ಞರ ಮಾದರಿ ಕರ್ನಾಟಕದ ಅಧ್ಯಯನಗಳಲ್ಲಿ ಕಡಿಮೆ ಕಾಣಬರುತ್ತದೆ.

ಅನ್ವಯಿಕತೆಯೇ ಮಾನದಂಡ

ಯಾವುದೇ ಪರಿಭಾಷೆ ಅಥವಾ ಪರಿಕಲ್ಪನೆಗೆ ಚಾರಿತ್ರಿಕವಾಗಿ ಬಂದ ಅರ್ಥದ ಛಾಯೆಯೊಂದು ಇರುತ್ತದೆ. ಆದರೆ ಅದು ಕಾಲ-ಪ್ರದೇಶ-ಸಂದರ್ಭಗಳಿಗೆ ತಕ್ಕ ರೂಪಾಂತರ-ಅರ್ಥಾಂತರ ಆಗುತ್ತದೆ. ಅದಕ್ಕೆ ಆಯಾ ಕಾಲದ ತಲೆಮಾರುಗಳು ತಮ್ಮ ಅಗತ್ಯದ ಅರ್ಥವನ್ನು ತುಂಬಿ ಹೊಸಕಲ್ಪನೆಗಳನ್ನಾಗಿ ಮಾಡಿಕೊಳ್ಳುತ್ತವೆ. ಈ ಕಾರಣದಿಂದ ‘ಸಂಸ್ಕೃತಿ’, ‘ಸಾಂಸ್ಕೃತಿಕ’ ಪರಿಕಲ್ಪನೆಗಳನ್ನು ಪಶ್ಚಿಮದಲ್ಲಿ ಅವಕ್ಕಿರುವ ಅರ್ಥಗಳಿಗಿಂತ ಭಿನ್ನವಾದ ಅರ್ಥಗಳಲ್ಲಿ ನಾವು ಬಳಸುತ್ತಿರುವುದು. ಅಧ್ಯಯನಕಾರರು ತಾವು ಬಳಸುವ ಅರ್ಥದ ಬಗ್ಗೆ ಪರಿಕಲ್ಪನಾತ್ಮಕ ಸ್ಪಷ್ಟತೆಯನ್ನು ಪಡೆದಿರುವುದು. ಕರ್ನಾಟಕದ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಇರುವ ದೊಡ್ಡ ಕೊರತೆಯಾಗಿದೆ.

ಈ ಕೊರತೆಗಳ ನಡುವೆಯೇ ‘ಸಾಂಸ್ಕೃತಿಕ’ ಎಂಬುದು ಬಹುಶಿಸ್ತೀಯ ಸೂಚಕ ಪರಿಕಲ್ಪನೆಯಾಗಿ ಒಪ್ಪಿತವಾಗುತ್ತಿದೆ. ಅಂದರೆ ಸಾಹಿತ್ಯ, ಸಮಾಜಶಾಸ್ತ್ರ, ಚರಿತ್ರೆ, ಜಾನಪದ, ಬುಡಕಟ್ಟು ಇತ್ಯಾದಿ ಮಾನವಿಕ ಹಾಗೂ ಸಮಾಜವಿಜ್ಞಾನ ಕ್ಷೇತ್ರದ ಅಧ್ಯಯನ ವಿಧಾನಗಳು ಅರ್ಥಪೂರ್ಣವಾಗಿ ಅಗತ್ಯಕ್ಕೆ ತಕ್ಕಂತೆ ಮಿಲನವಾಗುವುದು. ಮುಖ್ಯ ಮಾತೆಂದರೆ, ಆರಿಸಿಕೊಂಡಿರುವ ವಸ್ತು ಸಾಂಸ್ಕೃತಿಕ ಅಧ್ಯಯನಕ್ಕೆ ಸೂಕ್ತವಾಗಿ ಇರಬಹುದು. (ವಾಸ್ತವವಾಗಿ, ಸಾಂಸ್ಕೃತಿಕ ಅಧ್ಯಯನಕ್ಕೆ ಸಲ್ಲದ ವಸ್ತು ಯಾವುದೂ ಇಲ್ಲ. ಜಾಹಿರಾತುಗಳು, ವಾಹನಗಳ ಮೇಲೆ ಬರೆಯುವ ಸೂಕ್ತಿಗಳು, ಕ್ರೈಂಪತ್ರಿಕೆಗಳು, ಸಿನಿಮಾನಟರು, ಜನಪ್ರಿಯ ಸಿನಿಮಾಗಳು – ಇವುಗಳ ಮೇಲೆಲ್ಲ ಸಾಂಸ್ಕೃತಿಕ ಅಧ್ಯಯನಗಳು ಆಗಿವೆ.) ಅಧ್ಯಯನಕಾರರು ತಮ್ಮದು ‘ಸಾಂಸ್ಕೃತಿಕ ಅಧ್ಯಯನ’ ಎಂದು ಘೋಷಿಸಿಕೊಂಡಿರಬಹುದು. ಆದರೆ ಅದನ್ನು ಅಧ್ಯಯನ ಮಾಡಿರುವ ವಿಧಾನ ಸಾಂಸ್ಕೃತಿಕವಾದುದೇ ಅಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಯಾಕೆಂದರೆ, ಅಧ್ಯಯನಕಾರರು ‘ಸಾಂಸ್ಕೃತಿಕ’ ಎಂದು ಹೇಳಿಕೊಂಡು ಏಕಶಿಸ್ತೀಯ ವಿಧಾನದಲ್ಲಿ ಕೆಲಸ ಮಾಡಿರುವ ಸಾಧ್ಯತೆಯಿದೆ. ‘ಸಾಂಸ್ಕೃತಿಕ’ ಎಂದು ಹೇಳಿಕೊಳ್ಳದೆಯೂ ಅರ್ಥಪೂರ್ಣವಾದ ಸಾಂಸ್ಕೃತಿಕ ಅಧ್ಯಯನ ನಡೆಸಿರಬಹುದಾದ ಸಾಧ್ಯತೆಯೂ ಇದೆ. ಈ ಕಾರಣಕ್ಕೆ ಆಯಾ ಕ್ಷೇತ್ರದಲ್ಲಿ ಶಾಸ್ತ್ರೀಯವಾಗಿ ಕಲಿತವರು ಮಾಡುವ ಅಧ್ಯಯನಗಳೇ ‘ಸಾಂಸ್ಕೃತಿಕ ಅಧ್ಯಯನ’ ಎಂದಾಗಬೇಕಿಲ್ಲ. ಬೇರೆ ಕ್ಷೇತ್ರದ ವಿದ್ವಾಂಸರೂ ತಮ್ಮದಲ್ಲದ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡುತ್ತಿರಬಹುದು. ಸಾಂಸ್ಕೃತಿಕ ಅಧ್ಯಯನ ಎಂಬುದೇ ಬಹುಶಿಸ್ತನ್ನು ಬಳಸಿಕೊಂಡು ಮಾಡುವ ಅಧ್ಯಯನ ಆಗಿರುವುದರಿಂದ. ಯಾರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ ಎನ್ನುವುದು ಪ್ರಶ್ನೆಯೇ ಅಲ್ಲ. ಮಾಡುತ್ತಿರುವ ಅಧ್ಯಯನ ಸಾಂಸ್ಕೃತಿಕವೆ ಅಲ್ಲವೇ ಎನ್ನುವುದು ಮುಖ್ಯ.

* * *