ಕನ್ನಡಲ್ಲಿ ನಡೆದುಬಂದ ದಾರಿ

ಜಾನಪದೀಯ, ಚಾರಿತ್ರಿಕ, ಸಾಹಿತ್ಯಕ, ರಾಜಕೀಯ, ಸಾಮಾಜಿಕ ಅಧ್ಯಯನಗಳು ಹೋಗಿ ಎಲ್ಲವೂ ‘ಸಾಂಸ್ಕೃತಿಕ ಅಧ್ಯಯನ’ ಆಗುವತ್ತ ನಡೆದಿವೆ. ಕಳೆದು ೨೦ ವರುಷಗಳಿಂದ ನಮ್ಮ ರಾಜ್ಯದ ವಿಶ್ವವಿದ್ಯಾಲಯಗಳ ಮಾನವಿಕ ಹಾಗೂ ಸಮಾಜವಿಜ್ಞಾನದ ಕ್ಷೇತ್ರಗಳಲ್ಲಿ ನಡೆದಿರುವ ಪಿ.ಎಚ್‌ಡಿ. ಸಂಶೋಧನೆಗಳ ಪಟ್ಟಿ ಕಂಡರೆ, ಸಾಂಸ್ಕೃತಿಕ ಪರಿಭಾಷೆಯು ಎಷ್ಟು ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ ಎಂದು ತಿಳಿಯುತ್ತದೆ. ಈ ಪರಿಭಾಷೆ ಸಂಶೋಧನೆಗಳಲ್ಲಿ ಮಾತ್ರವಲ್ಲ, ಸಾಹಿತ್ಯ ವಿಮರ್ಶೆಯಲ್ಲಿ ಕೂಡ ಪ್ರವೇಶಿಸಿದೆ. ತಮ್ಮ ಸಾಹಿತ್ಯ ವಿಮರ್ಶೆಯು ಕೇವಲ ಸಾಹಿತ್ಯಕವಾಗಿಲ್ಲ, ಅದು ಬಹುಶಿಸ್ತೀಯವಾಗಿದೆ, ಸಾಮಾಜಿಕ ಬದಲಾವಣೆಗಳ ಬಗ್ಗೆ ಕಾಳಜಿ ಉಳ್ಳದ್ದಾಗಿದೆ ಎಂದು ಸೂಚಿಸಲು, ‘ಸಾಂಸ್ಕೃತಿಕ ವಿಮರ್ಶೆ’ ಎಂದು ಕರೆದುಕೊಳ್ಳುವಂತೆಯೂ ತೋರುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಪ್ರಕಟವಾಗಿರುವ ಹೆಚ್ಚಿನ ಪುಸ್ತಕಗಳು ‘ಸಂಸ್ಕೃತಿ’, ‘ಸಾಂಸ್ಕೃತಿಕ’ ಹೆಸರನ್ನುಳ್ಳವಾಗಿದೆ. ಇದನ್ನು ನೋಡುವಾಗ, ‘ಸಾಂಸ್ಕೃತಿಕ’ ಎಂಬುದು, ಜ್ಞಾನಶೋಧ ಮಾಡುವಲ್ಲಿ ಸಿಕ್ಕ ಉಪಯುಕ್ತವಾದ ಹೊಸವಿಧಾನ ಎಂಬುದಕ್ಕಿಂತ, ತಮ್ಮ ಅಧ್ಯಯನವನ್ನು ಸಮಕಾಲೀನ ಎಂದು ತೋರಲು ಬಂದಿರುವ ಜನಪ್ರಿಯ ವಿಶೇಷಣವಾಗಿರುವ ಸಂಶಯವೂ ಬರುತ್ತದೆ.

ಪಶ್ಚಿಮದಲ್ಲೂ ಸಾಂಸ್ಕೃತಿ ಪರಿಭಾಷೆ ಬಹಳ ಕಾಲದತನಕ ಜನಪ್ರಿಯ ಆಗಿರಲಿಲ್ಲ. ೧೮ ಹಾಗೂ ೧೯ ನೇ ಶತಮಾನಗಳಲ್ಲಿ ಶ್ರೀರಂಗಪಟ್ಟಣದಲ್ಲಿದ್ದು ಸ್ಥಳೀಯ ಸಮಾಜದ ಅಧ್ಯಯನ ಮಾಡಿದ ಫ್ರೆಂಚ್ ಪಾದ್ರಿ ಅಬ್ಬೆ ದುಬಾಯಿ, ತನ್ನ ಅಧ್ಯಯನಕ್ಕೆ “ಹಿಂದೂ ಮ್ಯಾನರ್ಸ್, ಕಸ್ಟಮ್ಸ್ ಅಂಡ್ ಸೆರೆಮೊನೀಸ್” ಎಂದು ಕರೆದುಕೊಳ್ಳುತ್ತಾನೆ. ‘ಹಿಂದೂ ಸಂಸ್ಕೃತಿ’ ಎಂದು ಹೇಳುವುದಿಲ್ಲ. ೧೯ನೇ ಶತಮಾನದಲ್ಲಿ ಬ್ರಿಟಿಶರು ಮಾಡಿಸಿದ ಮೊದಲ ಘಟ್ಟದ ಜಾತಿ/ಬುಡಕಟ್ಟು ಅಧ್ಯಯನಗಳನ್ನು ‘ಸಾಂಸ್ಕೃತಿಕ’ ಎಂದು ಕರೆಯುವುದಿಲ್ಲ. ಕನ್ನಡದಲ್ಲಿ ೨೦ನೇ ಶತಮಾನದ ಮೊದಲ ಘಟ್ಟದಲ್ಲಿ ಕನ್ನಡದಲ್ಲಿ ಸಂಸ್ಕೃತಿ ಚರ್ಚೆ ನಡೆಯಿತು. ಆದರೆ ‘ಸಾಂಸ್ಕೃತಿಕ’ ಎಂದುಕೊಂಡು ಅಧ್ಯಯನ ಮಾಡಿರುವುದು ಕಡಿಮೆ. ಬಿ. ಎಸ್. ಗದ್ದಗಿಮಠ ಅವರು ಜನಪದ  ಗೀತೆಗಳ ಮೇಲೆ ಮಾಡಿದ ತಮ್ಮ ಪಿ. ಎಚ್.ಡಿ. ಅಧ್ಯಯನಕ್ಕೆ “ಕನ್ನಡ ಜಾನಪದ ಗೀತೆಗಳು” (೧೯೬೩) ಎಂದಷ್ಟೆ ಕರೆಯುತ್ತಾರೆ; ಜೀ.ಶಂ.ಪರಮಶಿವಯ್ಯ ಅವರು ತಮ್ಮ “ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು” ಕುರಿತು ಅಧ್ಯಯನ ಮಾಡಿದಾಗಲೂ ಸಂಸ್ಕೃತಿ/ಸಾಂಸ್ಕೃತಿಕ ಪರಿಭಾಷೆಯನ್ನು ತರುವುದಿಲ್ಲ. ಕನ್ನಡದ ಪಿ.ಎಚ್‌ಡಿ. ನಿಬಂಧಗಳಿಗೆ ಮಿತಿಗೊಳಿಸಿ ಹೇಳುವುದಾದರೆ, ‘ಒಂದು ಅಧ್ಯಯನ’ ಎಂಬ ಸ್ಥೂಲ ವಿಶೇಷಣ ಬಳಕೆಯಲ್ಲಿತ್ತು. ನಂತರ ಸಾಹಿತ್ಯಕ, ಸಮಗ್ರ, ತೌಲನಿಕ, ವಿಮರ್ಶಾತ್ಮಕ, ಪರಿಕಲ್ಪನಾತ್ಮಕ ಮುಂತಾದ ವಿಶೇಷಣಗಳನ್ನು ಬಳಸಿ ಅಧ್ಯಯನಗಳನ್ನು ಮಾಡಲಾಯಿತು. ನಂತರ ಸಾಂಸ್ಕೃತಿಕ ಅಧ್ಯಯನ ಮಾಡುವುದು ಸಾಮಾನ್ಯವಾಯಿತು. ಕನ್ನಡದಲ್ಲಿ ಸಾಂಸ್ಕೃತಿಕ ಅಧ್ಯಯನ, ಸಾಂಸ್ಕೃತಿಕ ನೋಟ, ಸಾಂಸ್ಕೃತಿಕ ಮುಖಾಮುಖಿ, ಸಾಂಸ್ಕೃತಿಕ ವಿಶ್ಲೇಷಣೆ, ಸಾಂಸ್ಕೃತಿಕ ದಾಖಲಾತಿ ಎಂಬ ಅನೇಕ ರೂಪಗಳಲ್ಲಿ ಬಳಕೆಯಾಗುತ್ತಿರುವ ಈ ಪರಿಭಾಷೆ ಬಹಳ ಜನಪ್ರಿಯವಾಯಿತು.

ಬಹುಶಃ ಕನ್ನಡದಲ್ಲಿ ಬಹುಶಿಸ್ತೀಯ ಎಂಬರ್ಥದಲ್ಲಿ ‘ಸಾಂಸ್ಕೃತಿಕ ಅಧ್ಯಯನ’ದ ಪರಂಪರೆಯನ್ನು ಶುರುಮಾಡಿದ್ದು ಚಿದಾನಂದಮೂರ್ತಿ ಅವರ “ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ” (೧೯೬೬) ಎನ್ನಬಹುದು. ನಂತರ ಬಹುಶಿಸ್ತೀಯ ಅಧ್ಯಯನ ವಿಧಾನ ಹಾಗೂ ನಾಡಿನ ಆಯ್ದ ಜನರ ಆಯ್ದ ಚಟುವಟಿಕೆಗಳೇ ಸಂಸ್ಕೃತಿ ಎಂಬ ಗ್ರಹಿಕೆಯಲ್ಲಿ ಈ ಪರಿಭಾಷೆ ಚರಿತ್ರೆ, ಶಾಸನಶಾಸ್ತ್ರ, ಜಾನಪದ ಹಾಗೂ ಭಾಷಾಶಾಸ್ತ್ರಗಳಲ್ಲಿ ಜನಪ್ರಿಯವಾಯಿತು. ಚಿದಾನಂದಮೂರ್ತಿ ಮಾರ್ಗದರ್ಶನದಲ್ಲಿ ಪಿ.ವಿ.ನಾರಾಯಣ “ವಚನಸಾಹಿತ್ಯ: ಸಾಂಸ್ಕೃತಿಕ ಅಧ್ಯಯನ” (೧೯೭೫) ಮಾಡಿದರು. ಇದು ಬಹುಶಃ ಕನ್ನಡ ಸಾಹಿತ್ಯಕ ಕ್ಷೇತ್ರಕ್ಕೆ ಸಾಂಸ್ಕೃತಿಕ ಎಂಬ ಪರಿಭಾಷೆ ಪ್ರವೇಶಿಸಿದ ಮೊದಲ ಉದಾಹರಣೆ ಇರಬೇಕು. ಜಾನಪದದವರು. ‘ಸಾಂಸ್ಕೃತಿಕ’ ಎಂದು ಬಳಸಿದ್ದು ೮೦ರ ದಶಕದ ಬಳಿಕವೇ. (ನಂ. ತಪಸ್ವೀಕುಮಾರ್ ಅವರ “ಕನ್ನಡ ಜನಪದ ಗೀತೆಗಳ ಸಾಂಸ್ಕೃತಿಕ ಅಧ್ಯಯನ” (೧೯೮೧).

ಈ ಚರ್ಚೆ ಕೇವಲ ‘ಸಾಂಸ್ಕೃತಿಕ’ ಪರಿಭಾಷೆಯ ಬಳಕೆಗೆ ಸಂಬಂಧಿಸಿದ್ದು. ಅನ್ವಯಿಕವಾಗಿ ಈ ಪರಿಭಾಷೆ ಬಳಸದೆಯೂ ಕೆಲವು ಅಧ್ಯಯನಗಳ ಬಹುಶಿಸ್ತೀಯವಾಗಿರಬಹುದು. ಅಂತೆಯೇ ಈ ಪರಿಭಾಷೆ ಬಳಸಿಯೂ ಏಕಶಿಸ್ತೀಯ ಅಧ್ಯಯನ ಆಗಿರಬಹುದು. ಚರಿತ್ರೆಯ ಹೆಚ್ಚಿನ ಅಧ್ಯಯನಕಾರರು, ಗತಕಾಲದ ಜೀವನದ ವಿವರಗಳನ್ನು ಚಾರಿತ್ರಿಕವಾಗಿ ಅನೇಕ ಶಾಸ್ತ್ರಗಳ ಬೆಂಬಲದೊಂದಿಗೆ ಹುಡುಕಾಟ ಮಾಡುವುದನ್ನೂ ಹಾಗೂ ಅವುಗಳ ಪುನಾರಚನೆ ಮಾಡುವುದನ್ನು ‘ಸಾಂಸ್ಕೃತಿಕ ಅಧ್ಯಯನ’ ಎಂದು ಪರಿಭಾವಿಸಿದಂತೆ ತೋರುವುದು.

ಈ ಮಾದರಿಯ ‘ಸಾಂಸ್ಕೃತಿಕ ಅಧ್ಯಯನ’ಗಳ ಜನಪ್ರಿಯತೆಗೆ ಕಾರಣಗಳೆಂದರೆ, ೧. ಅದು ಬಳಸಿದ ಚರಿತ್ರೆಯ ಪುನಾರಚನ ವಿಧಾನ. ೨. ಅದರ ಬಹುಶಿಸ್ತೀಯ. ೩. ನಾಗಭೂಷಣಸ್ವಾಮಿ ಅವರು ಹೇಳುವಂತೆ, “ವಿಶ್ವವಿದ್ಯಾಲಯಗಳು ಬೌದ್ಧಿಕ ಅಧ್ಯಯನದ ಶಿಸ್ತಿಗೆ ಎಂಪಿರಿಕಲ್ ಮಾದರಿ ತೀರಿ ಅನುಕೂಲಕರವಾಗಿ ಒದಗುವುದು” (ಕನವಳ್ಳಿ, ೧೯೯೮:೨೩೩) ಕನ್ನಡದಲ್ಲಿ ಚಾರಿತ್ರಿಕ ಪುನಾರಚನಾ ವಾದಿಯೂ ಮಾಹಿತಿ ಪ್ರಧಾನವೂ ಆದ ಈ ಸಂಶೋಧನ ವಿಧಾನ, ಆಕರಶೋಧದ ಹೆಸರಲ್ಲಿ ವಿಶೇಷವಾಗಿ ನಡೆಯಿತು. ಈಗಲೂ ಸಾಂಸ್ಕೃತಿಕ ಅಧ್ಯಯನ ಎಂಬ ಮಾದರಿಯಲ್ಲಿ ಮುಖ್ಯವಾಗಿ ಇರುವುದು ಈ ಮಾಹಿತಿ ಶೋಧವೇ. ಎಂ.ಎಂ. ಕಲುಬುರ್ಗಿ ಅವರ ಹಾಗೂ ಅವರ ಮಾದರಿಯ ಅನುಸರಿಸಿ ನಡೆದಿರುವ ಬಹುತೇಕ ‘ಸಾಂಸ್ಕೃತಿಕ ಅಧ್ಯಯನ’ಗಳು ಚಾರಿತ್ರಿಕ ಮಾಹಿತಿ (ಆಕರ) ಶೋಧಿಸುವ ಕೆಲಸ ಮಾಡುತ್ತವೆ.

ಕನ್ನಡ ಅಧ್ಯಯನಗಳ ಪ್ರೇರಣೆಗಳು

ಕನ್ನಡದಲ್ಲಿ ಮಾಡಲಾದ/ಮಾಡುತ್ತಿರುವ ಸಾಂಸ್ಕೃತಿಕ ಅಧ್ಯಯನಗಳ ಸಾಮಾಜಿಕ ರಾಜಕೀಯ ಪ್ರೇರಣೆಗಳನ್ನು ಹೀಗೆ ಗುರುತಿಸಬಹುದು: ಪುನರುಜ್ಜೀವನ ಧಾರೆ; ಮಾನವಧರ್ಮ ಹುಡುಕಾಟದ ಧಾರೆ; ಗತಕಾಲದ ಪುನಾರಚನೆಯ ಧಾರೆ; ಸಾಮಾಜಿಕ ಹಕ್ಕಿನ ಧಾರೆ; ಮಾರ್ಕ್ಸ್‌ವಾದಿ ಧಾರೆ; ಸಂವೇದನೆಯ ಧಾರೆ; ದೇಶೀಸಂಸ್ಕೃತಿಯ ಧಾರೆ.

. ಪುನರುಜ್ಜೀವನ ಧಾರೆ

ಆಂಗ್ಲರಾಳುವಾಗ ಭಾರತದಲ್ಲಿ ಆಧುನಿಕ ಶಿಕ್ಷಣ ಪಡೆದು ಎಚ್ಚರಗೊಂಡ ಉಚ್ಚವರ್ಗಗಳ ಪ್ರತಿಕ್ರಿಯೆಯಾಗಿ ಸಂಸ್ಕೃತಿ ಚಿಂತನೆ ಶುರುವಾಯಿತು. ವಸಾಹತುಶಾಹಿ ಆಧುನಿಕತೆಯ ಸವಲತ್ತುಗಳನ್ನು ಪಡೆಯುತ್ತಲೆ ಅದರ ರಾಜಕಾರಣ ವಿರೋಧಿಸುವ ಹಾಗೂ ತಮ್ಮ ‘ಸಂಸ್ಕೃತಿ’ ಯಾವುದೆಂದು ಹುಡುಕಿಕೊಳ್ಳುವ ಅಗತ್ಯ ಈ ವರ್ಗಗಳಿಗೆ ಉಂಟಾಯಿತು. ಆಗ ಅವರಿಗೆ ಕಂಡಿದ್ದು ಇಂಗ್ಲೆಂಡಿನ ಔದ್ಯಮಿಕ ಪರಿಸರದ ಟೀಕಾಕಾರನಾಗಿದ್ದ ಆರ್ನಲ್ಡನ ವ್ಯಾಖ್ಯೆ. ಇದರ ಮೂಲಕ ತಮ್ಮ ವರ್ಗದ ಮೌಲ್ಯಗಳನ್ನು ಸಂಸ್ಕೃತಿ ಎಂದು ಹೇಳುತ್ತ ಸಾಂಪ್ರದಾಯಕ ಸಮಾಜದ ರಚನೆಗಳನ್ನು ಸಮರ್ಥಿಸಿ ಕೊಳ್ಳುವ ಕೆಲಸವನ್ನು ಈ ಚಿಂತಕರು ಆರಂಭಿಸಿದರು. ಇವರಲ್ಲಿ ಡಿವಿಜಿ, ಮಾಸ್ತಿ, ದೇವುಡು ಮುಖ್ಯರು. ಈ ಮೂವರಲ್ಲೂ ಬ್ರಾಹ್ಮಣವಾದಿ ಚಿಂತನೆಯಿದೆ. ಮಾಸ್ತಿ ಕೊಂಚ ಉದಾರವಾದಿ ನಿಲುವನ್ನು ಪ್ರತಿನಿಧಿಸಿದರೆ, ಡಿವಿಜಿ ಹಾಗೂ ಸಂಪ್ರದಾಯವಾದಿ ನಿಲುವಿನವರು. ಸಂಸ್ಕೃತಿಯ ಭಾಗವಾಗಿ ಜಾತಿಭೇದ ಇರಬೇಕು ಎಂದು ಕೊನೆಯ ಇಬ್ಬರೂ ಮುಲಾಜಿಲ್ಲದೆ ಹೇಳುತ್ತಾರೆ. ಡಿವಿಜಿ ಹೆಚ್ಚಾಗಿ ಸಂಸ್ಕೃತಿ ಪರಂಪರೆಗೆ ಹೋದರೆ, ಮಾಸ್ತಿ ಹಾಗೂ ದೇವುಡು ಅವರು ಕನ್ನಡ ಜಾನಪದ ನೆಲೆಯನ್ನು ಚರ್ಚೆಗೆ ಒಳಪಡಿಸುತ್ತಾರೆ.

. ಮಾನವಧರ್ಮ ಹುಡುಕಾಟದ ಧಾರೆ

ನವೋದಯ ಕಾಲಘಟ್ಟದಲ್ಲಿಯೇ ಒಂದು ಧಾರೆ ವೈಚಾರಿಕವಾಗಿ ಭಾರತೀಯ ಸಮಾಜ ಮತ್ತು ಚರಿತ್ರೆಗಳನ್ನು ವಿಮರ್ಶಿಸುವ ಹಾಗೂ ಭವಿಷ್ಯದಲ್ಲಿ ಸಮಾಜವಾದಿ ಸಮಾಜದ ಕನಸನ್ನು ಕಾಣುವ ಯತ್ನ ಮಾಡಿತು. ಅದರ ಪ್ರತಿನಿಧಿ ಶಂಬಾ ಜೋಶಿ. ಮೊದಲ ಘಟ್ಟದಲ್ಲಿ ಅವರು ಕನ್ನಡ ಮಾತಾಡುವ ಸಮುದಾಯಗಳ ಭಾಷೆ, ದೈವ, ಕಸುಬುಗಳ ಹುಡುಕಾಟವನ್ನು ಶುರುಮಾಡಿದರು. ನಂತರ ಮಾನವಶಾಸ್ತ್ರೀಯ ಚಿಂತನೆಗಳಿಂದ ಮಾನವತಾವಾದಿ ಧರ್ಮದ ಹುಡುಕಾಟಕ್ಕಾಗಿ ತಮ್ಮ ತಾತ್ವಿಕತೆ ರೂಪಿಸಿಕೊಂಡರು. ಇದಕ್ಕಾಗಿ ಅವರು ವೇದಗಳಲ್ಲಿರುವ ಸಮುದಾಯ ಪರ ಚಿಂತನೆಗಳನ್ನು ಬಳಸಿಕೊಂಡರು.

ಶಂಬಾರ ಮಾದರಿಯಲಿ ಅಧ್ಯಯನಗಳನ್ನು ಚರಿತ್ರೆಗೆ ಸಂಬಂಧಿಸಿದಂತೆ ಕೆಲವರು ಮುಂದುವರೆಸುತ್ತಿರುವರು. ಅವರಲ್ಲಿ ರಾಜಾರಾಮ ಹೆಗಡೆಯವರು ಒಬ್ಬರು. ಅವರವು ಜರ್ಮನಿಯ ಸಮುದಾಯ ಸಂಸ್ಕೃತಿಗಳ ಅಧ್ಯಯನಕಾರ ಗುಂಥೆರ್ ಸೊಂಥಮೈರ್ (೧೯೩೪-೧೯೯೨) ಪ್ರೇರಣೆಯಿಂದ ಮಾಡಲಾಗಿರುವ ಅಧ್ಯಯನಗಳು. ಮೈಲಾರ ಪರಂಪರೆಯ ಮೇಲೆ ಕೆಲಸ ಮಾಡಿದ ಬಿಳಿಮಲೆ ಅವರೂ ಸೊಂಥಮೈರ್ ಅಧ್ಯಯನಗಳಿಂದ ಪ್ರೇರಣೆ ಪಡೆದವರು. ಸಾಮಾನ್ಯವಾಗಿ ಜಾನಪದ ನೆಲೆಯ ಅಧ್ಯಯನಗಳನ್ನು ಮಾಡುವವರಿಗೆ ಸೊಂಥಮೈರ್ ಮಾದರಿ ಮುಖ್ಯವಾಗಿ ಕಾಣುತ್ತದೆ.

. ಗತಕಾಲದ ಪುನಾರಚನೆಯ ಧಾರೆ

ಭಾರತವು ಸ್ವತಂತ್ರಗೊಂಡ ಮೇಲೆ, ಕರ್ನಾಟಕವೂ ಏಕೀಕರಣಗೊಂಡ ಬಳಿಕ, ೧೯೬೦-೭೦ರ ದಶಕದಲ್ಲಿ ಕರ್ನಾಟಕದ ಗತಕಾಲವನ್ನು ಸಾಂಸ್ಕೃತಿಕವಾಗಿ ಶೋಧಿಸುವ ಒಂದು ಧಾರೆ ಶುರುವಾಯಿತು. ಇದು ಕೆಲಮಟ್ಟಿಗೆ ಅಕಡೆಮಿಕ್ ವಲಯಕ್ಕೆ ಸೇರಿತ್ತು. ತಿಪ್ಪೇರುದ್ರಸ್ವಾಮಿಯವರ “ಕರ್ಣಾಟಕ ಸಂಸ್ಕೃತಿ ಸಮೀಕ್ಷೆ” ಚಿದಾನಂದಮೂರ್ತಿ ಅವರ “ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ” ಇವೆರಡೂ ಚಾರಿತ್ರಿಕ ಪುನಾರಚನ ಮಾದರಿಯ ಅಧ್ಯಯನಗಳು. ಈ ಮಾದರಿ ಸಂಶೋಧನೆಯಲ್ಲಿ ಬಹಳ ಜಪ್ರಿಯವಾಯಿತು. ಚಿದಾನಂದಮೂರ್ತಿ ಜಾನಪದದಲ್ಲೂ ಸಂಶೋಧನೆ ಮಾಡಿದರು. ಅಲ್ಲೂ ಗತಕಾಲವೊಂದು ಹೇಗಿತ್ತು ಎಂದು ವರ್ತಮಾನಕ್ಕೆ ಕಟ್ಟಿತೋರುವ ವಿಧಾನವೇ ನಿರತವಾಗಿದೆ. ಅವರ ‘ನೆಯ್ಯಿಳಿಸುವುದು’ ಲೇಖನ ಇದಕ್ಕೆ ಉದಾಹರಣೆ (“ಹೊಸತು ಹೊಸತು” ೧೯೯೩); ವಿಚಿತ್ರವೆಂದರೆ, ಶಾಸನಗಳ ಅಧ್ಯಯನದಲ್ಲಿ ವ್ಯವಸ್ಥೆಯ ಪರವಾದ ಹಾಗೂ ಸಾಂಸ್ಕೃತಿಕ ವೈಭವೀಕರಣದ ನಿಲುವನ್ನು ತೆಗೆದುಕೊಳ್ಳುವ ಇವರು, “ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ” (೧೯೮೫) ಕೃತಿಯಲ್ಲಿ ಸಾಮಾಜಿಕ ವಿಮರ್ಶೆಯ ನಿಲುವನ್ನು ತಳೆಯುತ್ತಾರೆ. ಇದನ್ನು ಕಂಡಾಗ ಅಧ್ಯಯನ ವಸ್ತುಗಳೂ ಅಧ್ಯಯನಕಾರರನ್ನು ನಿರ್ದಿಷ್ಟ ನಿಲುವು ತಳೆಯಲು ಒತ್ತಾಯಿಸುತ್ತವೆ ಅನಿಸುತ್ತದೆ. ಆದರೆ ಅಧ್ಯಯನಕಾರರು ಪೂರ್ವಗ್ರಹೀತ ನಿಲುವನ್ನು ತಳೆದೇ ವಿಷಯವನ್ನು ಗ್ರಹಿಸುವುದೂ ಇದೆ. ಇದೇ ಲೇಖಕರು ಈಚೆಗೆ ಪ್ರಕಟಿಸಿದ “ವೀರಶೈವಧರ್ಮ: ಭಾರತೀಯ  ಸಂಸ್ಕೃತಿ” (೨೦೦೦) ಪುಸ್ತಕವು, ಅವರು ಉಚ್ಚವರ್ಗಗಳ ಪರವಾದ ನಿಲುವು ತಳೆದಿರುವುದನ್ನು ಸೂಚಿಸುತ್ತದೆ. ಅದು ಸಮಕಾಲೀನ ಬಲಪಂಥೀಯ ರಾಜಕಾರಣಕ್ಕೆ ಪ್ರಯೋಜನವಾಗಲೆಂದು ಉದ್ದೇಶಪೂರ್ವಕವಾಗಿ ತಳೆದ ನಿಲುವು. ಈ ಅಧ್ಯಯನದಲ್ಲಿ ಹುಡುಕಾಟದ ಬದಲಾಗಿ ಮೊಕದ್ದಮೆ ಗೆಲ್ಲುವ ವಕೀಲಿ ಗುಣವಿದೆ. ಅಧ್ಯಯನಕಾರರು ಸಮಕಾಲೀನ ಸನ್ನಿವೇಶಕ್ಕೆ ತಕ್ಕನಾಗಿ ವಿಭಿನ್ನ ನಿಲುವನ್ನು ತಳೆಯುವುದುಂಟು. ಇದರ ಕಾರಣಗಳನ್ನು ಅಧ್ಯಯನಕಾರರಲ್ಲಿ ಮಾತ್ರವಲ್ಲ, ಸುತ್ತಲಿನ ಪರಿಸರದಲ್ಲಿ ಆಗುತ್ತಿರುವ ಪರಿವರ್ತನೆಗಳಲ್ಲಿ ಕಾಣಬೇಕು. ಸಾಂಸ್ಕೃತಿಕ ಅಧ್ಯಯನಗಳು ಈ ಕಾರಣಕ್ಕೆ ಎಂದೂ ಕೇವಲ ಅಕಡೆಮಿಕ್ ಅಲ್ಲ.

. ಸಾಮಾಜಿಕ ಹಕ್ಕಿನ ಧಾರೆ

ಕರ್ನಾಟಕದ ಸಾಮಾಜಿಕ ರಾಜಕಾರಣದಲ್ಲಿ ೭೦ರ ದಶಕದಲ್ಲಿ ಹಲವು ವಿದ್ಯಮಾನಗಳು ಎಚ್ಚೆತ್ತ ದಲಿತರ ಹಾಗೂ ಕೆಳಸ್ತರದವರ ಚಿಂತನೆ ಅಧ್ಯಯನಗಳನ್ನು ಹುಟ್ಟುಹಾಕಿದವು. ಆಗ ಜಾನಪದ ಹಾಗೂ ಸಾಹಿತ್ಯಕ ಅಧ್ಯಯನಗಳಿಗೆ ಹೊಸತಲೆಮಾರಿನ ಅಧ್ಯಯನಕಾರರು ಪ್ರವೇಶಿಸಿದರು. ಅವರು ಅಂಬೇಡ್ಕರ್, ಲೋಹಿಯಾ, ಪರಿಯಾರ್, ಮಾರ್ಕ್ಸ್ – ಈ ನಾಲ್ಕು ತತ್ವದರ್ಶನಗಳಿಂದ ಪ್ರೇರಣೆ ಪಡೆದವರಾಗಿದ್ದರು. ದಲಿತರಲ್ಲಿ ಸಹಜವಾಗಿ ಅಂಬೇಡ್ಕರ್ ಪ್ರೇರಣೆ ಹೆಚ್ಚು. ಮ.ನ. ಜವರಯ್ಯ ಹಾಗೂ ಬಿ.ಎಂ.ಪುಟ್ಟಯ್ಯ ಅವರು ಕೆಳವರ್ಗದ ವಚನಕಾರರ ಮೇಲೆ ಮಾಡಿರುವ ಅಧ್ಯಯನಗಳು ದಲಿತ ದೃಷ್ಟಿಯ ಸಾಂಸ್ಕೃತಿಕ ಅಧ್ಯಯನಕ್ಕೆ ಒಂದು ಉದಾಹರಣೆ. ಸಾಂಸ್ಕೃತಿಕ ಅಧ್ಯಯನದ ದಲಿತ ಮಾದರಿಯು ಕನ್ನಡದಲ್ಲಿ ತುಂಬ ಸಂಕೀರ್ಣವಾಗಿದೆ.

. ಮಾರ್ಕ್ಸ್ವಾದಿ ಧಾರೆ

ಕನ್ನಡದ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಸಾಂಪ್ರದಾಯಕ ಮಾರ್ಕ್ಸ್‌ವಾದಿಗಳ ಪಾತ್ರ ಕಡಿಮೆ. ದಲಿತ ಹಾಗೂ ಕೆಳಸ್ತರದ ನೆಲೆಯಿಂದ ಬಂದ ಮಾರ್ಕ್ಸ್‌ವಾದಿಗಳ ಪಾತ್ರ ಹೆಚ್ಚು. ಮಾರ್ಕ್ಸ್‌ವಾದಿ ಹಿನ್ನೆಲೆಯ ಎಸ್.ಎಸ್. ಹಿರೇಮಠ, ಸಿದ್ಧಲಿಂಗಯ್ಯ, ಬರಗೂರು, ಎಸ್. ಶಿವಾನಂದ, ಮೊದಲಘಟ್ಟದ ಡಿ. ಆರ್. ನಾಗರಾಜ್ – ಎಲ್ಲರ ಅಧ್ಯಯನಗಳು ದಲಿತ ಹಾಗೂ ಕೆಳಜಾತಿಗಳ ಪರವಾದ ರಾಜಕಾರಣದಿಂದ ರೂಪಾಂತರ ಪಡೆದವು. ಸಿದ್ಧಲಿಂಗಯ್ಯನವರು ಗ್ರಾಮದೇವತೆಗಳ ಮೇಲೆ ಮಾಡಿರುವ ಅಧ್ಯಯನದಲ್ಲಿ (೧೯೯೭) ಮಾರ್ಕ್ಸ್‌ವಾದಿ ನೆಲೆಯನ್ನು ಗುರುತಿಸುವುದು ಕಷ್ಟ. ಏಕಕಾಲಕ್ಕೆ ದಲಿತಾನುಭವ ಹಾಗೂ ಮಾರ್ಕ್ಸ್‌ವಾದಿ ವಿಚಾರಧಾರೆಯಿಂದ ಅವರು ಸಂಸ್ಕೃತಿ ವಿಶ್ಲೇಷಣೆಗೆ ಪ್ರವೇಶಿಸುತ್ತಾರೆ. ಮಾನವಶಾಸ್ತ್ರದ ‘ಎ ಕಲ್ಚರ್’ ಪರಿಕಲ್ಪನೆಯ ಪ್ರೇರಣೆಯಿಂದ ಸಮಕಾಲೀನ ರಾಜಕೀಯ ಆಶಯಗಳನ್ನು ತುಂಬಿ ಉಪಸಂಸ್ಕೃತಿ ಪರಿಕಲ್ಪನೆ ರೂಪಿಸಿದ ಬರಗೂರರು ಈ ಬಗೆಯ ರೂಪಾಂತರಗೊಂಡ ಚಿಂತಕರಲ್ಲಿ ಒಬ್ಬರು. ಶಂ.ಬಾ. ಜೋಶಿ, ಡಿ.ಡಿ.ಕೋಸಾಂಬಿ, ದೇವೀಪ್ರಸಾದ್ ಚಟ್ಟೋಪಾಧ್ಯಾಯ ಅವರ ಮಾದರಿಯಲ್ಲಿ ಸಾಂಸ್ಕೃತಿಕ ಅಧ್ಯಯನ ಮಾಡಿದವರಲ್ಲಿ ಎಸ್.ಎಸ್. ಹಿರೇಮಠ, ಬಂಜಗೆರೆ ಜಯಪ್ರಕಾಶ್ ಅವರು ಮುಖ್ಯರು.

. ಸಂವೇದನೆಯ ಧಾರೆ

ಕನ್ನಡದಲ್ಲಿ ೮೦ರ ದಶಕದ ಬಳಿಕ ದಲಿತ, ಮಹಿಳಾ, ಮುಸ್ಲಿಂ ಎಂಬ ಸಂವೇದನೆಯ ನೆಲೆಯ ಸಾಂಸ್ಕೃತಿಕ ಚರ್ಚೆಗಳು ಶುರುವಾದವು. ಇವು ಜಾತಿ, ಲಿಂಗ, ಧರ್ಮಗಳ ನೆಲೆಯವಾಗಿದ್ದವು. ಇವು ದಮನಿತ ಸಮುದಾಯಗಳು ತಮ್ಮ ಹಕ್ಕಿಗಾಗಿ ಹೋರಾಡುವ ಆಶಯವುಳ್ಳವು. ವಿಜಯಾ ದಬ್ಬೆ, ಎಚ್.ಎಸ್.ಶ್ರೀಮತಿ, ಬಿ.ಎನ್.ಸುಮಿತ್ರಾಬಾಯಿ, ಎನ್.ಗಾಯತ್ರಿ, ಕೇಶವಶರ್ಮ, ಸ. ಉಷಾ, ಸಿ.ಎನ್.ರಾಮಚಂದ್ರನ್ ಮುಂತಾದವರು ಸ್ತ್ರೀವಾದಿ ನೆಲೆಯಿಂದ ಚಿಂತನೆ, ಅಧ್ಯಯನ ಮಾಡುತ್ತಿರುವರು. ಇವರು ಜಗತ್ತಿನ ಅನೇಕ ಸ್ತ್ರೀವಾದಿ ಚಿಂತನೆಗಳ ಪ್ರೇರಣೆ ಪಡೆದು, ಕನ್ನಡ ಸಾಹಿತ್ಯ, ಸಮಾಜ, ಚರಿತ್ರೆಗಳ ಮೂಲಕ ಹೊಸದೊಂದು ಅಧ್ಯಯನಕ್ರಮಕ್ಕೆ ತೊಡಗಿರುವವರು. ಕನ್ನಡದ ಸ್ತ್ರೀವಾದಿ ಚಿಂತಕರು ಮೂಲದಲ್ಲಿ ಯಾವ್ಯಾವ ಚಿಂತನೆಗಳನ್ನು ಅಭ್ಯಾಸ ಮಾಡಿದ್ದಾರೆ ಎಲ್ಲಿಂದ ಪ್ರೇರಣೆ ಪಡೆದಿದ್ದಾರೆ ಎಂದು ಪಟ್ಟಿಮಾಡುವುದು ಅನುಪಯುಕ್ತ. ಅವರು ಹೊರಗಿನಿಂದ ಎಷ್ಟೇ ತಾತ್ವಿಕ ಪ್ರೇರಣೆ ಪಡೆದಿದ್ದರೂ, ವರ್ತಮಾನ ಸಮಾಜದ ಅನುಭವ ಮತ್ತು ಗತಕಾಲದ ಚರಿತ್ರೆಗಳೇ ಅವರನ್ನು ಸ್ತ್ರೀವಾದಿಗಳಾಗಿಸಿವೆ. ಕನ್ನಡದ ಸ್ತ್ರೀವಾದಿ ಸಾಂಸ್ಕೃತಿಕ ಅಧ್ಯಯನಗಳಿಗೆ ನಮ್ಮ ಸ್ತ್ರೀವಾದಿ ಲೇಖಕರು ಬರೆದ ಕತೆ-ಕವನ-ಕಾದಂಬರಿಗಳು ತಾತ್ವಿಕ ಚಿಂತನೆಗಳ ಹಾಗೆಯೇ ಹಾದಿತೋರಿಸಿವೆ. ದಲಿತರು ಹಾಗೂ ಮಹಿಳೆಯರು ತಮ್ಮ ಅನುಭವಗಳನ್ನು ಶೋಧಿಸಿಕೊಳ್ಳುವ ಪರಿಯೇ ಸಾಂಸ್ಕೃತಿಕವಾದುದು. ಕನ್ನಡದ ಜನಪದ ಮಹಾಕಾವ್ಯಗಳಲ್ಲಿ ಮಹಿಳೆಯರನ್ನು ಕುರಿತು ನಡೆದಿರುವ, ಅದರಲ್ಲೂ ಕರಾವಳಿ ಪ್ರಾಂತ್ಯದ ತುಳುವಿನಲ್ಲಿರುವ ಸಿರಿಪಾಡ್ದನ ಕುರಿತು ನಡೆದಿರುವ ಚರ್ಚೆಗಳು ಇಲ್ಲಿ ಉಲ್ಲೇಖಾರ್ಹ. ವಿಶೇಷ ಎಂದರೆ ಇಲ್ಲಿ ಮುಸ್ಲಿಂ ಮಹಿಳೆಯ ಲೋಕಗಳು ಪ್ರವೇಶಿಸಿರುವುದು. ಇದಕ್ಕೆ ಹೋಲಿಸಿದರೆ, ದಲಿತ ಮಹಿಳಾ ಲೋಕಗಳ ಪ್ರವೇಶ ಕಡಿಮೆಯಿದೆ.

ಕನ್ನಡದಲ್ಲಿ ಮಹಿಳೆಯರು ಹಾಗೂ ದಲಿತರು ತಂತಮ್ಮ ಅನುಭವಲೋಕಗಳಿಂದ ಬರೆಯಲು ಶುರುಮಾಡಿದಾಗ, ಅದಕ್ಕೆ ಮುಸ್ಲಿಂ ಸಂವೇದನೆಯ ಧಾರೆಯೂ ಕೂಡಿತು. ಇಲ್ಲಿ ‘ಮುಸ್ಲಿಂಲೋಕ’ ಎಂದಾಗ ಕನ್ನಡದಲ್ಲಿ ಅಭಿವ್ಯಕ್ತಿ ಮಾಡುವ ಲೇಖಕರ ಮೂಲಕ ವ್ಯಕ್ತವಾಗುತ್ತಿರುವ ಲೋಕ ಎಂದಷ್ಟೆ ಅರ್ಥ. ದಲಿತ ಮತ್ತು ಮಹಿಳಾ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಇರುವಂತೆ, ಇಲ್ಲಿ ಕೂಡ ಅನುಭವ ವಿಶ್ಲೇಷಣೆಯೇ ಮುಖ್ಯ ವಿಧಾನ. ಈ ಅಧ್ಯಯನಗಳಲ್ಲಿ ಎರಡು ಮುಖ್ಯ ನೆಲೆಗಳಿವೆ: ೧. ಮುಸ್ಲಿಂ ಪುರೋಹಿತಶಾಹಿ ಪುರುಷಪ್ರಧಾನ ಜಗತ್ತಿನ ವಿಶ್ಲೇಷಣೆ. ೨. ಕೋಮುವಾದ ವಿರೋಧಿಸುವಿಕೆ. ಜಿ. ರಾಜಶೇಖರ, ರಂಜಾನ ದರ್ಗಾ, ಸಾರಾ ಅಬೂಬಕರ್, ಫಕೀರ್ ಮಹಮ್ಮದ್ ಕಟ್ಪಾಡಿ, ಕೆ. ಫಣಿರಾಜ್ ಇವರು ಈ ಲೋಕದ ಸಾಂಸ್ಕೃತಿಕ ಇಕ್ಕಟ್ಟುಗಳ ಬಗ್ಗೆ ಚಿಂತನೆ ಮಾಡಿರುವರು. ದಲಿತ, ಮಹಿಳಾ, ಮುಸ್ಲಿಂ, ಬುಡಕಟ್ಟು – ಇವು ಸ್ವರೂಪದಲ್ಲಿ ಜಾತಿ, ಲಿಂಗ, ಧರ್ಮ, ಸಮುದಾಯಗಳ ನೆಲೆಗಳಾದರೂ ಪ್ರಜ್ಞೆಯಲ್ಲಿ ಪ್ರಗತಿಪರ ಧಾರೆಯೊಳಗೆ ಬಂದು ಕೂಡುತ್ತವೆ. ಈ ವಿಶಾಲ ಪ್ರಗತಿಪರ ಧಾರೆಯೊಳಗೆ ಕೂಡಿಕೊಳ್ಳಲು ಈ ಸಂವೇದನೆಯ ಅಧ್ಯಯನಗಳು ಯತ್ನಿಸಿವೆ.

ಚಾರಿತ್ರಿಕ ಒತ್ತಾಯಗಳು

ಕನ್ನಡದಲ್ಲಿ ಸಂಸ್ಕೃತಿಯ ವ್ಯಾಖ್ಯೆ ಹಾಗೂ ಸಾಂಸ್ಕೃತಿಕ ಅಧ್ಯಯನಗಳ ಹುಡುಕಾಟಗಳು ಕಾಲಕಾಲಕ್ಕೆ ಬದಲಾಗುತ್ತ ಬಂದಿವೆ. ಇದಕ್ಕೆ ಕಾರಣ ಚಾರಿತ್ರಿಕವಾಗಿ ಬದಲಾಗುತ್ತ ಬಂದು ಸಾಮಾಜಿಕ, ರಾಜಕೀಯ, ಆರ್ಥಿಕ ಪರಿಸ್ಥಿತಿಗಳಲ್ಲಿದೆ. ಸಂಸ್ಕೃತಿ ವ್ಯಾಖ್ಯೆಗೂ  ಸಾಂಸ್ಕೃತಿಕ ಅಧ್ಯಯನದ ಸ್ವರೂಪಕ್ಕೂ ನೇರ ಸಂಬಂಧವಿದೆ. ಇದರಿಂದ, ಸಂಸ್ಕೃತಿ ವ್ಯಾಖ್ಯೆ ಬದಲಾದಂತೆ ‘ಸಾಂಸ್ಕೃತಿಕ ಅಧ್ಯಯನ’ಗಳ ವ್ಯಾಖ್ಯೆಗಳೂ ಬದಲಾಗುತ್ತ ಬಂದಿವೆ. ಸಂಸ್ಕೃತಿ ಪರಿಭಾಷೆಯು ೨೦ನೇ ಶತಮಾನದಲ್ಲಿ ಕೊನೆಯ ಪಕ್ಷ ನಾಲ್ಕು ಸಲ ಅರ್ಥಪರಿವರ್ತನೆ ಕಂಡಿದೆ. ಪರಿವರ್ತನೆ ಎಂದರೆ ನಿರಂತರವಾಗಿ ಅರ್ಥವಿಸ್ತರಣೆಗೆ ಒಳಗಾಗುವುದು, ಹೊಸಹೊಸ ಆಯಾಮಗಳನ್ನು ಒಳಗೊಳ್ಳುತ್ತ ಬೆಳೆಯುವುದು. ಎಂತಲೇ ಸಂಸ್ಕೃತಿ ಅಧ್ಯಯನಗಳಲ್ಲಿ ಕಳೆದ ೨೫ವರ್ಷಗಳ ಹಿಂದೆ ಕಾಣಿಸಿಕೊಳ್ಳುವ ಮತ್ತು ಈಗ ಕಾಣಿಸಿಕೊಳ್ಳುತ್ತಿರುವ ಚರ್ಚೆಗಳಲ್ಲಿ ಅಪಾರ ವ್ಯತ್ಯಾಸಗಳಿವೆ. ನಿಜವೇನೆಂದರೆ, ಈಗ ನಾವು ಯಾವ್ಯಾವನ್ನು ಕರ್ನಾಟಕದ ಸಂಸ್ಕೃತಿಯ ಚರ್ಚೆಯಲ್ಲಿ ಸೇರಿಸುತ್ತಿದ್ದೇವೆಯೋ ಆ ಸಂಗತಿಗಳು ಕರ್ನಾಟಕದ ಬದುಕಲ್ಲಿ ಹಿಂದೆಯೂ ಇದ್ದವು. ಅವು ಆಗಿನವರೆಗೆ ಸಂಸ್ಕೃತಿ ಚರ್ಚೆಯ ಭಾಗವಾಗಿಸಬೇಕು ಅನಿಸಲಿಲ್ಲ. ಇದಕ್ಕೆ ಕಾರಣ, ಅವರಿಗೆ ಈ ಕುರಿತು ತಿಳಿವಳಿಕೆ ಇರಲಿಲ್ಲ. ಇದ್ದರೂ ಅದನ್ನು ಕರ್ನಾಟಕ ಸಂಸ್ಕೃತಿಯ ಭಾಗವಾಗಿ ಒಪ್ಪಿಕೊಳ್ಳಲು ಬೇಕಾದ ಮನಸ್ಥಿತಿ ನಿರ್ಮಾಣವಾಗಿರಲಿಲ್ಲ. ತಿಳಿವಳಿಕೆ ಇರಲಿಲ್ಲ ಎಂಬುದು ಮಾಹಿತಿಯ ಪ್ರಶ್ನೆ. ಒಪ್ಪಲು ಮನಸ್ಥಿತಿಯಿರಲಿಲ್ಲ ಎಂಬುದು ದೃಷ್ಟಿಕೋನದ ಪ್ರಶ್ನೆ. ಈ ಮಾಹಿತಿ ಹಾಗೂ ದೃಷ್ಟಿಕೋನಗಳು ಅಂತಿಮವಾಗಿ ಸಂಸ್ಕೃತಿ ವ್ಯಾಖ್ಯೆ ಬದಲಾಗಲು, ವಿಸ್ತರಣೆಯಾಗಲು, ಬಹುರೂಪಿಯಾಗಲು ಒತ್ತಡ ನಿರ್ಮಿಸಿದವು. ಇದರಿಂದ ‘ಸಾಂಸ್ಕೃತಿಕ’ ಎಂಬ ಕಕ್ಷೆಯಲ್ಲಿ ಈತನಕ ಚರ್ಚೆಗೆ ಒಳಗಾಗದ ಲೋಕಗಳೆಲ್ಲ ಒಳನುಗ್ಗ ತೊಡಗಿದವು.

ಇದು ಹೊಸ ಮಾಹಿತಿಯ ಪ್ರವೇಶ ಮಾತ್ರವಾಗಿರದೆ, ಹೊಸ ದೃಷ್ಟಿಕೋನದ ಪ್ರವೇಶ ಕೂಡ ಆಯಿತು. ಹೊಸ ದೃಷ್ಟಿಕೋನದಿಂದ ನಮ್ಮ ಜತೆಯಲ್ಲೇ ಇದ್ದ ಸಾಮಾನ್ಯವಾದ ಸಂಗತಿಗಳು ತಮ್ಮ ಅಂತಃಸ್ವತ್ವದ ಮೂಲಕ ದರ್ಶನವಾಗತೊಡಗಿದವು. ಉದಾ: ಕರ್ನಾಟಕದ ಸಂಸ್ಕೃತಿ ಚರ್ಚೆಯಲ್ಲಿ, ಮಂಟೇಸ್ವಾಮಿ, ಮಲೆಮಾದೇಶ್ವರ, ಮೈಲಾರ ಮಹಾಕಾವ್ಯಗಳನ್ನೋ, ಸಾವಳಗಿ, ಕೊಡೇಕಲ್, ತಿಂತಿಣಿ, ಶಿರಹಟ್ಟಿ, ಬಂದೇನವಾಜ ಪರಂಪರೆಗಳನ್ನೋ ತರಲಾಗುತ್ತಿದೆ. ಕರ್ನಾಟಕ ಸಂಸ್ಕೃತಿಯ ಚರ್ಚೆಯಲ್ಲಿ ಕನ್ನಡದ ಮಾತ್ರವಲ್ಲ ಕರ್ನಾಟಕದ ಜನಭಾಷೆಗಳಾದ ಕೊಡವ, ಕೊಂಕಣಿ, ಉರ್ದು, ತುಳು, ಲಂಬಾಣಿ, ಬ್ಯಾರಿ ಭಾಷೆಗಳಲ್ಲಿ ಹುಟ್ಟುತ್ತಿರುವ ಸಾಹಿತ್ಯವನ್ನೂ ಪ್ರಸ್ತಾಪಿಸಲಾಗುತ್ತಿದೆ. ಮಾಹಿತಿಯಾಗಿ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಹೊಸ ಲೋಕಗಳ ಜತೆಗೆ ಅವನ್ನು ಕುರಿತ ಒಪಿಗೆಗಳೂ ಪ್ರವೇಶಿಸಿದವು. ಆ ಲೋಕಗಳಲ್ಲಿ ಜೀವಚೈತನ್ಯವನ್ನು ಕಾಣುವ ದೃಷ್ಟಿಕೋನ ಮೂಡಿತು. ಇದಕ್ಕೆ ಕಾರಣ ನಮ್ಮ ಸಮಾಜದ ಬೇರೆಬೇರೆ ಸಮುದಾಯಗಳ ಎಚ್ಚೆತ್ತ ಪ್ರಜ್ಞಾವಂತರು ಸಾಂಸ್ಕೃತಿಕ ರಾಜಕಾರಣಕ್ಕೆ ಪ್ರವೇಶ ಪಡೆದಿದ್ದು. ಚರ್ಚೆಗಳಲ್ಲಿ ಸಮುದಾಯಗಳ ಜೀವನಲೋಕಗಳು ಮಾಹಿತಿಯಾಗಿ ವಿಶ್ಲೇಷಣೆಯಾಗಿ ಮಾತ್ರ ಹಾಜರಾಗಲಿಲ್ಲ. ತಮ್ಮ ಸಾಮಾಜಿಕ ರಾಜಕೀಯ ಹಕ್ಕುಮಂಡನೆಯ ಅಜೆಂಡವನ್ನು ಅದರೊಳಗೆ ತಂದು ಸೇರಿಸಿದವು.

ಅಧ್ಯಯನಗಳಲ್ಲಿ ಸಾಂಸ್ಕೃತಿಕ ಎಂಬ ಪರಿಭಾಷೆಯ ಪ್ರವೇಶಕ್ಕೂ, ಈ ಪರಿಭಾಷೆಯು ಬಹುಶಿಸ್ತೀಯ ಎಂಬರ್ಥದಲ್ಲಿ ಬಳಕೆಯಾಗಿರುವುದಕ್ಕೂ, ಕರ್ನಾಟಕ ಸಮಾಜದ ಹಲವಾರು ನಿರ್ಲಕ್ಷಿತ ಸ್ತರಗಳಿಂದ ಜನ ಆಗಮಿಸಿ, ತಮ್ಮ ರಾಜಕೀಯ ಆಶೋತ್ತರ ಹಾಗೂ ಲೋಕದೃಷ್ಟಿಗಳನ್ನು ಮಂಡಿಸುತ್ತಿರುವುದಕ್ಕೂ ಆಂತರಿಕ ಸಂಬಂಧವಿದೆ. ಬ್ರಿಟಿಶರ ಕಾಲದಲ್ಲಿ ಸಾಂಸ್ಕೃತಿಕ ವಿಶ್ಲೇಷಣೆಗಳಿಗೆ ದೇಶದ ಸಂಸ್ಕೃತಿಯ ‘ಶ್ರೇಷ್ಠ’ ಸಂಗತಿಗಳನ್ನು ಆರಿಸಿ ಅವುಗಳನ್ನು ಮಂಡಿಸುವುದು ಮುಖ್ಯವಾಗಿತ್ತು. ೧೯೪೭ರ ಬಳಿಕ ಬೇರೆ ಬೇರೆ ಸಮುದಾಯಗಳು ಅಧಿಕಾರದಲ್ಲಿ ಹಿಸ್ಸೆ ಪಡೆಯಲು ತಂತಮ್ಮ ಜಾತಿ ಸಮುದಾಯಗಳ ಹಿರಿಮೆ ಪ್ರಾಚೀನತೆ ಹಿಂದುಳಿವಿಕೆಯನ್ನು ಮುಖ್ಯವಾಗಿ ಮಾಡಿಕೊಂಡು ಜನಾಂಗದ, ಜಾತಿಯ ಸಾಂಸ್ಕೃತಿಕ ಅಧ್ಯಯನಗಳು ನಡೆದವು; ೧೯೭೦ರ ದಶಕದ ಬಳಿಕ ಮಹಿಳೆ, ದಲಿತ, ಕೆಳಜಾತಿ, ಮುಸ್ಲಿಂ ಹಾಗು ಬುಡಕಟ್ಟು ಲೋಕಗಳನ್ನು ಪ್ರತಿನಿಧಿಸುವ ಸಾಂಸ್ಕೃತಿಕ ಅಧ್ಯಯನಗಳು ಕಾಣಿಸಿದವು; ಜಾಗತೀಕರಣದ ಸಂದರ್ಭದಲ್ಲಿ, ಅಮೆರಿಕೀಕರಣದ ಆತಂಕ ಆವರಿಸಿದ್ದು, ಸಾಂಸ್ಕೃತಿಕ ಅಧ್ಯಯನಗಳಲ್ಲಿ ದೇಶೀವಾದವು ಪ್ರಮುಖವಾಗಿ ಕಾಣಿಸುತ್ತಿದೆ. ಕಳೆದ ೧೫ ವರುಷಗಳಿಂದ ಭಾರತದಲ್ಲಿ ಕೋಮುವಾದವು ತೀವ್ರವಾಗಿ ಬೆಳೆಯುತ್ತಿದ್ದು, ಇದಕ್ಕೂ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಧಾರ್ಮಿಕವಾಗಿ ಸಾಮರಸ್ಯ ಸಾರುವ ಪಂಥ ಹಾಗೂ ಸಂತರನ್ನು ಕುರಿತು ಸಂಕರ ಸಂಸ್ಕೃತಿಯ ಅಧ್ಯಯನಗಳು ನಡೆಯುತ್ತಿರುವುದಕ್ಕೂ ಒಳಸಂಬಂಧ ಏರ್ಪಟ್ಟಿದೆ.

ಆದ್ದರಿಂದಲೇ ‘ಸಂಸ್ಕೃತಿ’ ಪರಿಕಲ್ಪನೆಯಲ್ಲಿ ನಡೆಯುತ್ತಿರುವುದು ಜ್ಞಾನದ ಅಥವಾ ಶೈಕ್ಷಣಿಕವಾದ ಚರ್ಚೆಯಲ್ಲ; ಸಾಮಾಜಿಕ, ರಾಜಕೀಯ ದೃಷ್ಟಿಕೋನಗಳ ಮಂಡನೆ. ಸಂಸ್ಕೃತಿಯ ವಿಭಿನ್ನ ವ್ಯಾಖ್ಯೆಗಳು ರಾಜಕೀಯ ಸಾಮಾಜಿಕ ರಾಜಕಾರಣದ ವ್ಯಾಖ್ಯೆಗಳೆ. ‘ಸಾಂಸ್ಕೃತಿಕ’ ಎಂಬುದು ಕೂಡ ತಾತ್ವಿಕ ರಾಜಕೀಯ ಸಾಮಾಜಿಕ ನಿಲುವುಗಳನ್ನು ಗರ್ಭೀಕರಿಸಿಕೊಂಡಿರುವ ಒಂದು ಸಂಕೀರ್ಣ ಪರಿಭಾಷೆ. ಇದಕ್ಕೆ ದೊರಕುತ್ತಿರುವ ಅರ್ಥವಿಸ್ತರಣೆ ಅಥವಾ ಅರ್ಥ ಬದಲಾವಣೆಗಳು ಸಮಾಜದಲ್ಲಿ ನಡೆಯುವ ಚಲನೆಗಳನ್ನು ಆಧರಿಸಿವೆ.

ಎರಡು ಆಕ್ಷೇಪಗಳು

ಕನ್ನಡದ ಈಚಿನ ಅಧ್ಯಯನಗಳಲ್ಲಿ ‘ಸಂಸ್ಕೃತಿ’, ‘ಸಾಂಸ್ಕೃತಿಕ’ ಎಂಬ ಪರಿಭಾಎ ಬಳಸುವುದರ ಬಗ್ಗೆ ಕನ್ನಡದ ಇಬ್ಬರು ವಿದ್ವಾಂಸರು ಆತಂಕ ವ್ಯಕ್ತಮಾಡುತ್ತಾರೆ. ಅವು ಹೀಗಿವೆ:

ಅ) ಸಾಂಸ್ಕೃತಿಕ ಓದು ಎನ್ನುವಾಗ ನನ್ನಲ್ಲಿ ಹುಟ್ಟುವ ಇನ್ನೊಂದು ದೊಡ್ಡ ಆತಂಕವೆಂದರೆ, ಒಂದು ಬಗೆಯ ವಿಶಿಷ್ಟ ಬಗೆಯ ಓದನ್ನು ಎತ್ತಿ ಹೇಳುವ ಮೂಲಕ ನಾವು ಇನ್ನಿತರ ಬಗೆಯ ಓದುಗಳನ್ನು ನಿರಾಕರಿಸಿದಂತಲ್ಲವೆ, ಓದಿನ ಸಮಗ್ರತೆಯನ್ನು ನಿಯಂತ್ರಿಸಿದಂತಲ್ಲವೆ, ಎನ್ನುವುದು. ‘ಸಾಂಸ್ಕೃತಿ ಎಂಬ ಶಬ್ದಸರ್ವಗ್ರಾಹಿ’ಯಾದದ್ದು ಎನ್ನುವ ಸಮಾಧಾನ ಹೇಳುವ ವರಿರಬಹುದು. ಆಗಲೂ ಓದು ಎಂಬುದಷ್ಟೇ ಸಾಕಾಗುತ್ತದಲ್ಲ? ಅದಕ್ಕೆ ವಿಶೇಷಣ ಯಾತಕ್ಕೆ? ಇಂಥ ವಿಂಗಡಣೆಯ ಕ್ರಮಗಳು ಪಶ್ಚಿಮದಲ್ಲಿ ರೂಢಿಯಾಗಿರುವಂಥವು. ವಿಶ್ಲೇಷಣೆಯ ವಿಧಾನದಿಂದ ಜ್ಞಾನವನ್ನು ಗ್ರಹಿಸಲು ಪ್ರಯತ್ನಿಸುವುದು ಸಾಮಾನ್ಯವಾಗಿ ಪಶ್ಚಿಮದ ಜಾಯಮಾನ. ಹಾಗಾಗಿ ಬಹುಶಃ ಅವರು ವಿಶ್ಲೇಷಣ ವಿಭಾಗವನ್ನೇ ‘ವಿದ್ವದಧ್ಯಯನದ (ಅಕಡಮಿಕ್) ಕ್ರಮ’ ಎಂದು ಪರಿಗಣಿಸುತ್ತಾರೆ. ಪೌರ್ವಾತ್ಯರ ಜಾಯಮಾನವು ಪ್ರಾಯಃ ಬೇರೆ ರೀತಿಯದು. ಅದು ಧ್ಯಾನಸ್ಥಿತಿಯಲ್ಲಿ , ಸಮ್ಯಗ್ ದರ್ಶನ ಪಡೆದುಕೊಳ್ಳಲು ಪ್ರಯತ್ನಿಸುವ ವಿಧಾನ. ಕೆ.ವಿ.ಸುಬ್ಬಣ್ಣ (ತರೀಕೆರೆ, ೨೦೦೦:).

ಆ) ಇತ್ತೀಚೆಗೆ ಸಾಂಸ್ಕೃತಿಕ ಒತ್ತಡ, ಸಾಂಸ್ಕೃತಿಕ ಮುಖಾಮುಖಿ ಅನ್ನೋ ಪದಗಳು ಕೇಳಿದ ಕೂಡಲೆ ಭಯ ಆಗೋಕೆ ಶುರು ಆಗುತ್ತೆ. ಯಾಕೆಂದರೆ ಸಂಸ್ಕೃತಿ ಅನ್ನುವ ಪದ ಮತ್ತು ಅದರ ಪರಿಕಲ್ಪನೆಯೇ ಒಂದು ರೀತಿಯಲ್ಲಿ ಆಧುನಿಕ ಕಾಲದಲ್ಲಿ ಎರವಲು ಪಡೆದದ್ದು. ಆ ಪದ ಬಂದಾಗಲೆಲ್ಲ ನನಗೆ ಒಂದು ದೊಡ್ಡ ವೆಸ್ಟ್ರನ್ ಹೆಜಮನಿ ಬಂದು ಹೀಗೆ ಮಾತಾಡಬೇಕು ಅಂತ ಹೇಳ್ತದೆ ಬಸವರಾಜ ಕಲ್ಗುಡಿ (ನುಗಡೋಣಿ, ೨೦೦೨:೧೭)

ಕನ್ನಡದ ಇಬ್ಬರು ವಿದ್ವಾಂಸರು ಸಂಸ್ಕೃತಿ ಅಥವಾ ಸಾಂಸ್ಕೃತಿಕ ಪರಿಭಾಷೆಗಳ ಬಳಕೆಯ ಬಗ್ಗೆ ಹೀಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಆತಂಕದ ಹಿಂದೆ ಎರಡು ಕಾರಣಗಳಿವೆ. ಮೊದಲನೆಯದು, ಈ ಸಂಸ್ಕೃತಿ/ಸಾಂಸ್ಕೃತಿಕ ಎನ್ನುವುದು ಪಶ್ಚಿಮದ ಓದಿನ ಅಧ್ಯಯನದ ವಿಧಾನಕ್ಕೆ ಸಂಬಂಧಿಸಿದ್ದು; ನಮ್ಮ ಓದಿನ ವಿಧಾನ ಬೇರೆಯೇ ಇದೆ. ಎರಡನೆಯದು, ಈ ಪರಿಭಾಷೆಗಳು ಇತರೆ ಓದಿನ ಕ್ರಮಗಳನ್ನು ನಿರಾಕರಿಸಿ ತಾವೇ ಯಜಮಾನಿಕೆಯ ವಿಧಾನಗಳಾಗಿ ಪ್ರತಿಷ್ಠಾಪನೆಗೊಳ್ಳಬಹುದು. ಈ ಆತಂಕಗಳಲ್ಲಿ ಕೆಲಮಟ್ಟಿಗೆ ನಿಜವಿದೆ. ಆದರೆ ಇಲ್ಲಿ ಎರಡು ಪ್ರತಿ ಪ್ರಶ್ನೆಗಳನ್ನು ಎತ್ತಬಹುದು.

೧) ಸುಬ್ಬಣ್ಣನವರು ಹೇಳುವ ‘ಧ್ಯಾನಸ್ಥ’ ಪೌರ್ವಾತ್ಯ ಓದಿನ ಕ್ರಮ ಎಂಬುದು ನಿಜವಾಗಿಯೂ ಭಾರತವನ್ನು ಒಳಗೊಂಡು ಪೂರ್ವದೇಶಗಳಲ್ಲಿ ಇದೆಯೇ? “ಮಂಟೆಸ್ವಾಮಿ ಕಾವ್ಯ”ವನ್ನು ಅದರ ಭಕ್ತರು ಆಚರಣೆಗಳಲ್ಲಿ ಆಲಿಸುವಾಗ ಈ ‘ಧ್ಯಾನಸ್ಥ’ಸ್ಥಿತಿ ಇರಬಹುದು. ಆದರೆ ಪಶ್ಚಿಮದಿಂದ ಆಗಮಿಸಿದ ಪ್ರಕಾರಗಳಲ್ಲಿ ಬೆಳೆದು ಮುದ್ರಣಯಂತ್ರಗಳ ಮೂಲಕ ಪ್ರಕಟವಾಗಿ, ಆಧುನಿಕ ಶಿಕ್ಷಣ ಪಡೆದವರ ಚಟುವಟಿಕೆಯಾಗಿರುವ ಸಾಹಿತ್ಯದ ಓದಿನಲ್ಲಿ ‘ಧ್ಯಾನಸ್ಥ ಸ್ಥಿತಿಯಲ್ಲಿ ಸಮ್ಯಗ್ ದರ್ಶನ ಪಡೆದುಕೊಳ್ಳುವ ಸ್ಥಿತಿ’ ಎಷ್ಟು ಇದೆ? ಮೂಲತಃ ಈ ಧ್ಯಾನಸ್ಥ ಸ್ಥಿತಿಯ ಓದುವಿಕೆಯು ಕೃತಿಕೇಂದ್ರಿತವಾದುದು. ಓದುವಿಕೆ ಅಥವಾ ಗ್ರಹಿಸುವಿಕೆಯನ್ನು ಅಪಾರ ಎಚ್ಚರ ಪ್ರಜ್ಞೆಯ ಕ್ರಿಯೆಯನ್ನಾಗಿ ಮಾಡಿಕೊಂಡು, ವಾಗ್ವಾದಗಳನ್ನು ಏರ್ಪಡಿಸಿಕೊಂಡು, ಈ ಲೋಕವನ್ನು ಗ್ರಹಿಸುವ ಹಾಗೂ ತಮ್ಮ ವಿಮೋಚನೆಗೆ ಬೇಕಾದ ಪ್ರಜ್ಞೆಯನ್ನು ಪಡೆದುಕೊಳ್ಳುವ ಸಮುದಾಯಗಳಿಗೆ ಈ ಧ್ಯಾನಸ್ಥಿತಿ ಮುಖ್ಯವಾಗುತ್ತದೆಯೋ ಅಥವಾ ಪಶ್ಚಿಮದ್ದು ಎನ್ನಲಾಗುವ ವಿಶ್ಲೇಷಣ ಪ್ರಧಾನವಾದ ಮುಖಾಮುಖಿ ಮುಖ್ಯವಾಗುತ್ತದೆಯೊ? ಕುಮಾರವ್ಯಾಸ ಭಾರತ ಅಥವಾ ಬೇಂದ್ರೆ ಕಾವ್ಯಕ್ಕೆ ಕುರ್ತಕೋಟಿಯವರು ಬರೆಯುವ ವಿಮರ್ಶೆ ಧ್ಯಾನಸ್ಥ ಸ್ಥಿತಿಯದಾಗಿರಬಹುದು. ಆದರೆ ಕುವೆಂಪು  ಕಾದಂಬರಿಗಳಿಗೆ ದೇವಯ್ಯ ಹರವೆಯವರೊ, ಬಿ.ಕೃಷ್ಣಪ್ಪನವರೊ ಬರೆಯುವ ವಿಮರ್ಶೆ ಧ್ಯಾನಸ್ಥ ಸ್ಥಿತಿಯದಾಗಿರಲು ಸಾಧ್ಯವೇ? ಇಲ್ಲವಾದರೆ ಯಾಕೆ?

೨) ಸಂಸ್ಕೃತಿ ಪರಿಕಲ್ಪನೆ ಕನ್ನಡದಲ್ಲಿ ಅಥವಾ ಭಾರದಲ್ಲಿ ಮೂಡಲು ಪಶ್ಚಿಮದಲ್ಲಿ ನಡೆದ ಕಲ್ಚರ್ ಕುರಿತ ವಾಗ್ವಾದಗಳು ಪ್ರೇರಣೆ ನೀಡಿರುವುದು ನಿಜ, ಆದರೆ ಹಾಗೆಂದು ಅವುಗಳ ನಕಲಲ್ಲ. ಅವನ್ನು ಅಂಧಾನುಸರಣೆ ಮಾಡಿದಾಗ, ಅವು ಯಜಮಾನಿಕೆ ನಡೆಸುತ್ತವೆ. ಅವನ್ನು ನಮ್ಮ ಸಂದರ್ಭಕ್ಕೆ ಪುನರ್ ವ್ಯಾಖ್ಯಾನಿಸಿಕೊಂಡು, ಮರುಸೃಷ್ಟಿಸಿಕೊಂಡು ದುಡಿಸುತ್ತಿರುವಾಗ ಅವು ಸಂಗಾತಿಗಳಂತೆ ದುಡಿಯುತ್ತವೆ. ಹೀಗಿರುವಾಗ ಅವುಗಳ ಬಳಕೆಯೇ ಆತಂಕದಾಯಕವಲ್ಲ, ಅವುಗಳನ್ನು ಯಾರು, ಯಾಕಾಗಿ ಹೇಗೆ ಬಳಸುತ್ತಿರುವರು ಎಂಬುದೇ ಮುಖ್ಯ.

* * *