ಅರ್ಥನಿರ್ಣಯದ ಕಷ್ಟ

ಸಾಂಸ್ಕೃತಿಕ ಅಧ್ಯಯನಗಳ ಪರಿಶೀಲನೆಗೆ ಮೊದಲು, ‘ಸಾಂಸ್ಕೃತಿಕ’ ಹಾಗೂ ‘ಅಧ್ಯಯನ’ ಶಬ್ದಗಳ ಕುರಿತು ಪರಿಕಲ್ಪನಾತ್ಮಕ ಚರ್ಚೆ ಮಾಡುವ ಅಗತ್ಯವಿದೆ.

ಸಂಸ್ಕೃತಿ ಅಧ್ಯಯನಕಾರ ರೇಮಂಡ್ ವಿಲಿಯಮ್ಸನ ಪ್ರಕಾರ ‘ಇಂಗ್ಲಿಷಿನಲ್ಲಿ ಅರ್ಥನಿರ್ಣಯ ಮಾಡಲು ಅತ್ಯಂತ ಕಷ್ಟವೊಡ್ಡಿರುವ ಎರಡು ಮೂರು ಶಬ್ದಗಳಲ್ಲಿ ‘ಸಂಸ್ಕೃತಿ’ಯೂ ಒಂದು. ಇದು ವಿಭಿನ್ನ ಜ್ಞಾನಶಿಸ್ತುಗಳ ವಾಗ್ವಾದಗಳಲ್ಲಿ ಉನ್ನತ ಮಟ್ಟದ ಚಿಂತನಾ ವಿಧಾನಗಳಲ್ಲಿ ಬಳಕೆಯಾಗುವ ಒಂದು ಪರಿಕಲ್ಪನೆಯಾಗಿದೆ. ಇದರಿಂದ ಅರ್ಥನಿರ್ಣಯದ ಕಷ್ಟ ಮತ್ತು ಮತ್ತಷ್ಟು ಹೆಚ್ಚಾಗಿದೆ’ (೧೯೭೬:೮೭). ಟಿ. ಎಸ್. ಎಲಿಯಟ್ ಕೂಡ ತನ್ನ ಕಾಲದಲ್ಲಿ ಕಲ್ಚರ್ ಎಂಬ ಶಬ್ದವು ಅನೇಕ ಅರ್ಥಗಳಲ್ಲಿ ಬಳಕೆಯಾಗುತ್ತಿದ್ದುದನ್ನು ದಾಖಲಿಸುತ್ತಾನೆ (೧೯೪೮:೩). ಈ ಕಷ್ಟ ಕನ್ನಡದ ಮಟ್ಟಿಗೂ ನಿಜ. ಸಂಸ್ಕೃತಿಯ ವ್ಯಾಖ್ಯಾನಗಳಲ್ಲಿ ಬಹಳ ವೈವಿಧ್ಯವಿದೆ. ಪ್ರತಿ ವ್ಯಾಖ್ಯಾನವೂ ತನ್ನದೆ ಆದ ಸೈದ್ಧಾಂತಿಕ ಆಶಯವನ್ನು ಹೊಂದಿದೆ. ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎಂಬುದು ಅಧ್ಯಯನಕಾರರಿಗೆ ಸಮಸ್ಯೆ ಉಂಟುಮಾಡಿದೆ. ಪ್ರಚಲಿತ ವ್ಯಾಖ್ಯೆಗಳಲ್ಲಿ ಒಂದನ್ನು ಆಯ್ದುಕೊಳ್ಳಬೇಕು; ಇಲ್ಲವೆ ತಮಗೆ ಬೇಕಾದ ಹೊಸ ವ್ಯಾಖ್ಯೆ ರೂಪಿಸಿಕೊಳ್ಳಬೇಕು. ಎರಡರಲ್ಲಿ ಮೊದಲ ಹಾದಿಯನ್ನು ತುಳಿದವರೇ ಹೆಚ್ಚು. ಈ ನಡುವೆ ತಮ್ಮ ಅಧ್ಯಯನಗಳನ್ನು ‘ಸಾಂಸ್ಕೃತಿಕ’ ಎಂದು ಕರೆದುಕೊಂಡರೂ, ಈ ಪರಿಭಾಷೆಯನ್ನು ಯಾವರ್ಥದಲ್ಲಿ ಬಳಸಿದೆ ಎಂದು ವಿವರಿಸುವ ಗೋಜಿಗೆ ಹೋಗದವರೂ ಉಂಟು.

‘ಸಾಂಸ್ಕೃತಿಕ’ ಪದದ ಅರ್ಥವ್ಯಾಪ್ತಿ ಏನು? ‘ಸಂಸ್ಕೃತಿ’ ವಿಷಯದಲ್ಲಿ ಇರುವ ತಾತ್ವಿಕ ಗೊಂದಲಗಳೇ ಇಲ್ಲೂ ಇವೆ. ವಿಭಿನ್ನ ಜ್ಞಾನಶಿಸ್ತುಗಳು ‘ಸಂಸ್ಕೃತಿ’ ಪರಿಕಲ್ಪನೆಯನ್ನು ತಂತಮ್ಮ ಅರ್ಥಗಳಲ್ಲಿ ಬಳಸುತ್ತಿವೆ. ಮಾತ್ರವಲ್ಲ, ಒಂದೇ ಶಿಸ್ತಿಗೆ ಸೇರಿದ ಅಧ್ಯಯನಗಳಲ್ಲೂ ‘ಸಾಂಸ್ಕೃತಿಕ’ ಪದವನ್ನು ಒಂದರ್ಥದಲ್ಲಿ ಬಳಸಿಲ್ಲ. ಪರಿಭಾಷೆಯಲ್ಲಿ ಖಚಿತತೆ ಇರದಿರುವುದು ಅಧ್ಯಯನಗಳಲ್ಲಿ ಒಂದು ತಾತ್ವಿಕವಾದ ತೊಡಕು. ಈ ತೊಡಕು ‘ಸಾಂಸ್ಕೃತಿಕ’ ಪದಬಳಕೆಯಲ್ಲಿ ಚೆನ್ನಾಗಿ ವ್ಯಕ್ತವಾಗುತ್ತದೆ. ಕನ್ನಡದ ವಿಭಿನ್ನ ಬರವಣಿಗೆಗಳಿಂದ ಆರಿಸಿತೆಗೆದಿರುವ ಈ ಕೆಳಗಿನ ನಿದರ್ಶನಗಳನ್ನು ಗಮನಿಸಬಹುದು:

i. “ಕಲೆ ಸಂಗೀತ ಮುಂತಾದ ಸಾಂಸ್ಕೃತಿಕ ವೈಭವಗಳಿಂದ ಅಗ್ನೇಯ ಏಷಿಯಾ ಮುಂತಾದ ಕಡೆಗಳಲ್ಲಿ ಭಾರತೀಯ ಸಂಸ್ಕೃತಿ ಹರಡಿದಾಗ ಭಾರತದಲ್ಲಿದ್ದುದು ಬೌದ್ಧಧರ್ಮ ಎಂಬುದು ಅತ್ಯಂತ ಗಮನಾರ್ಹ.”

ii. “ಕರ್ನಾಟಕ ಸರ್ಕಾರದ ಸಂಸ್ಕೃತಿ ಇಲಾಖೆಯು ಕನ್ನಡ ಸಾಹಿತ್ಯ ಪರಿಷತ್ತು, ರಂಗಾಯಣ, ನೀನಾಸಂ ಮೊದಲಾದ ಕನ್ನಡದ ಎಂಟು ಸಾಂಸ್ಕೃತಿಕ ಸಂಸ್ಥೆಗಳಿಗೆ ಅನುದಾನ ಸಂಹಿತೆಯನ್ನು ರದ್ದು ಮಾಡಿ, ಸಹಾಯದ ಪ್ರಮಾಣವನ್ನು ಕಡಿತ ಮಾಡಿರುವ ವರದಿ ಪತ್ರಿಕೆಗಳಲ್ಲಿ ಬಂದಿದೆ”.

iii. “ಬರೆಹಗಾರ ಕಲಾವಿದರ ಒಕ್ಕೂಟವು ಸಾಂಸ್ಕೃತಿಕ ಕ್ಷೇತ್ರದಲ್ಲಿ ಒಂದು ವರ್ಗದವರ ಹಿಡಿತವಿರುವುದನ್ನು ವಿರೋಧಿಸುವ ಚಳುವಳಿ ಮಾಡುವ ಪ್ರಣಾಳಿಕೆಯನ್ನು ಹೊಂದಿದೆ”

iv. “…ಅಕಾಡೆಮಿಯು ನಾಡಿನ ಎಲ್ಲ ಬಗೆಯ ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ತುಂಬು ಹಂಬಲವನ್ನುಳ್ಳ ಸಾಂಸ್ಕೃತಿಕ ಸಂಸ್ಥೆಯಾಗಿದೆ.”

v. “ಪರೋಕ್ಷವಾಗಿ ಮಾರಿಹಬ್ಬಗಳು ದಲಿತರ ಚಾರಿತ್ರಿಕ, ಸಾಂಸ್ಕೃತಿಕ, ಸಾಮಾಜಿಕ ವಿಕಸನದ ದಾಖಲೆಗಳಂತೆ ಕಂಡುಬರುತ್ತವೆ.”

vi. “ಮೊದಲು ಕೇವಲ ಸಾಹಿತ್ಯ ಸೃಷ್ಟಿಗೆ ಮತ್ತು ಸಾಹಿತ್ಯ ವಿಮರ್ಶೆಗೆ ಸೀಮಿತವಾಗಿದ್ದ ಪತ್ರಿಕೆ, ೧೯೭೪-೭೫ರ ನಂತರದ ಘಟ್ಟದಲ್ಲಿ ಸಾಹಿತ್ಯ ಸೃಷ್ಟಿಗೆ ಮೂಲ ಪರಿಕರವೂ ಕಣ್ನೆಲೆಯೂ ಆದ ಸಮಕಾಲೀನ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಆಗುಹೋಗುಗಳಿಗೆ ಬಿಂಬವಾಯಿತು..”

vii. “..ಈ ಗ್ರಂಥಮಾಲೆಯು ಕೇವಲ ಪುಸ್ತಕಗಳನ್ನು ಪ್ರಕಟಿಸುವ ಒಂದು ಪ್ರಕಾಶನ ಸಂಸ್ಥೆ ಮಾತ್ರ ಎಂತಾಗದೆ, ಒಂದು ಸಾಂಸ್ಕೃತಿಕ ಚಳುವಳಿಯಾಗಿ ಬೆಳೆಯಬೇಕೆನ್ನುವ ಆದರ್ಶವಿದೆ.”

viii. “ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಐಕ್ಯಮತ್ಯವನ್ನು ಕುರಿತು ಮಾತನಾಡುವವರಿಗೆ, ನಾವು ರಾಜಕೀಯ ಮತ್ತು ಆರ್ಥಿಕ ಐಕ್ಯಮತ್ಯ ಮಾತ್ರವಲ್ಲ, ಸಾಂಸ್ಕೃತಿಕ ಮತ್ತು ಧಾರ್ಮಿಕ ಐಕ್ಯಮತ್ಯಕ್ಕಾಗಿ ನಿಂತಿದ್ದೇವೆ ಎಂದು ಹೇಳುತ್ತೇವೆ.”

ಈ ಉಲ್ಲೇಖಗಳಲ್ಲಿ ‘ಸಾಂಸ್ಕೃತಿಕ’ ಶಬ್ದವು ಪ್ರಯೋಗವಾಗಿರುವ ರೀತಿಯನ್ನು ಗಮನಿಸಿದರೆ ಆದು ಧಾರಣೆ ಮಾಡಿರುವ ಅರ್ಥಗಳು ಇವು:

ಸಾಂಸ್ಕೃತಿಕ ಎಂದರೆ, ಸಾಹಿತ್ಯ, ಸಂಗೀತ, ಚಿತ್ರ ಇತ್ಯಾದಿ ಕಲೆಗಳಿಗೆ ಸಂಬಂಧಿಸಿದುದು. ಅದು ಧಾರ್ಮಿಕ, ರಾಜಕೀಯ, ಆರ್ಥಿಕ, ಸಾಹಿತ್ಯಕ ಮುಂತಾದ ಆಯಾಮಗಳಿಗಿಂತ ಬೇರೆಯಾದುದು (i ರಿಂದ ii) ; ಅದು ಜನಾಭಿಪ್ರಾಯವನ್ನು ರೂಪಿಸುವ ಪತ್ರಿಕೆ, ರೇಡಿಯೊ, ಸಾಹಿತ್ಯ, ಸಿನಿಮಾ ಇತ್ಯಾದಿ ಮಾಧ್ಯಮಗಳಿಗೆ ಸಂಬಂಧಿಸಿದುದು (iii) ; ಅದು ಸಮುದಾಯಗಳ ಜೀವನವಿಶಿಷ್ಟ ವಿವರಗಳಿಗೆ ಸಂಬಂಧಿಸಿದ ಲೋಕ. ಇಲ್ಲಿ ಸಮುದಾಯ ವಿಶಿಷ್ಟವಾದ ಸಾಹಿತ್ಯ, ಸಂಗೀತ, ಕಲೆಗಳ ಜತೆಗೆ ಅದರ ಊಟ, ಉಡುಗೆ, ತೊಡುಗೆ, ಆಚರಣೆಗಳೂ ಇವೆ (iv ರಿಂದ v); ಸಂಸ್ಕೃತಿಯು ಮಾನಸಿಕವಾಗಿ ನಮ್ಮ ಆಲೋಚನ ಕ್ರಮವನ್ನು ಜನಪರವಾದ ದಿಕ್ಕಲ್ಲಿ ಬದಲಾಯಿಸುವ ತಾತ್ವಿಕತೆ (vi ರಿಂದ vii) ; ಅದು ಧಾರ್ಮಿಕ ಆದರ್ಶ ಹಾಗೂ ಮೌಲ್ಯಗಳಿಗೆ ಸಂಬಂಧಿಸಿದುದು (viii).

‘ಸಾಂಸ್ಕೃತಿಕ’ ಪದಕ್ಕೆ ಇರುವ ಈ ಬಹುಅರ್ಥಗಳು, ಅರ್ಥವೈವಿಧ್ಯವನ್ನು ಮಾತ್ರವಲ್ಲ, ಅರ್ಥ ಖಚಿತತೆ ಇಲ್ಲದಿರುವ ಸಂಕೇತವೂ ಹೌದು. ಈ ಮಾತನ್ನು ಇನ್ನಷ್ಟು ಸ್ಪಷ್ಟಪಡಿಸಬಹುದು. ಅಧ್ಯಯನಗಳಲ್ಲಿ ನಿರ್ದಿಷ್ಟ ಶಾಸ್ತ್ರದ ಅಥವಾ ಜ್ಞಾನಶಿಸ್ತಿನ ಹೆಸರನ್ನು ಸೂಚಿಸಿ ಅಧ್ಯಯನ ಮಾಡುವ ಪದ್ಧತಿ ಮೊದಲಿಂದಲೂ ಇದೆಯಷ್ಟೆ. ಉದಾ: ಚಾರಿತ್ರಿಕ ಅಧ್ಯಯನ, ಸಾಮಾಜಿಕ ಅಧ್ಯಯನ. ಇದೇ ರೀತಿಯಲ್ಲಿ ಸಾಹಿತ್ಯಕ, ಮನಶ್ಯಾಸ್ತ್ರೀಯ, ಭಾಷಿಕ, ಜಾನಪದೀಯ ಅಧ್ಯಯನಗಳು. ಇವು ನಿರ್ದಿಷ್ಟ ಶಿಸ್ತಿನ ಒಮ್ಮಗ್ಗುಲನ್ನು ಸೂಚಿಸುವ ಪರಿಭಾಷೆಗಳು. ಅಂದರೆ ಸಮಾಜ, ರಾಜಕಾರಣ, ಧರ್ಮ, ಸಾಹಿತ್ಯ, ಮನಃಶಾಸ್ತ್ರ, ಭಾಷಾಶಾಸ್ತ್ರಗಳ ಆಯಾಮ ಸೂಚಕ ಪರಿಭಾಷೆಗಳಾಗಿ ಈ ವಿಶೇಷಣಗಳು ಬಂದಿವೆ. ಇವಕ್ಕೆ ಒಂದು ಪರಿಚಿತ ಅರ್ಥವಿದೆ. ಸಮಸ್ಯೆ ಇರುವುದು ‘ಸಾಂಸ್ಕೃತಿಕ’ ಎನ್ನುವ ವಿಶೇಷಣದಲ್ಲಿ. ಯಾಕೆಂದರೆ, ಒಂದು ವಿಷಯದ ಬಹು ಮಗ್ಗುಲುಗಳನ್ನು ವಿವರಿಸುವಾಗ ‘ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ಆಯಾಮಗಳಲ್ಲಿ ಇದನ್ನು ಅಧ್ಯಯನ ಮಾಡುವ ಅಗತ್ಯವಿದೆ’ ಎಂಬ ವ್ಯಾಕ್ಯಗಳನ್ನು ಸಾಮಾನ್ಯವಾಗಿ ಕಾಣುತ್ತೇವೆ. ಇಂತಹ ವಾಕ್ಯಗಳಲ್ಲಿ ಸೇರಿಕೊಂಡಿರುವ ‘ಸಾಂಸ್ಕೃತಿಕ’ ವಿಶೇಷಣದ ಅರ್ಥವೇನು? ಇದು ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಹಿತ್ಯಕ, ಧಾರ್ಮಿಕ, ಇತ್ಯಾದಿ ಎಲ್ಲ ಜ್ಞಾನಶಿಸ್ತುಗಳ ಆಯಾಮಗಳನ್ನು ಒಳಗೊಳ್ಳುವ ವಿಶಾಲ ಪರಿಕಲ್ಪನೆಯಾಗಿ ಇರುವುದಾಗಿದ್ದರೆ, ಆಗ ಹಲವಾರು ಜ್ಞಾನಸೂಚಕ ಶಬ್ದಗಳ ಅಗತ್ಯವಿಲ್ಲ. ಅವುಗಳ ಬದಲಾಗಿ ‘ಸಾಂಸ್ಕೃತಿಕ’ ಎಂಬ ಪರಿಭಾಷೆಯೊಂದು ಸಾಕು. ಆದರೆ ಇಲ್ಲಿ ಹಾಗಾಗುತ್ತಿಲ್ಲ. ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಹಿತ್ಯಕ ಇವುಗಳ ಜತೆಯಲ್ಲೇ, ಇವುಗಳಿಗಿಂತ ಬೇರೆಯಾದ ಇನ್ನೊಂದು ಆಯಾಮ ಇದೆ ಎಂಬರ್ಥದಲ್ಲಿ, ‘ಸಾಂಸ್ಕೃತಿಕ’ ವಿಶೇಷಣ ಬಂದು ಕೂರುತ್ತಿದೆ. ಇದು ನೋಡಲು ಸಣ್ಣ ಸಮಸ್ಯೆಯಂತೆ ಕಾಣುತ್ತದೆ. ಆದರೆ ಪರಿಣಾಮದಲ್ಲಿ ಇದು ಗಂಭೀರವಾದ ತಾತ್ವಿಕ ಗೊಂದಲವಾಗಿದೆ. ಯಾಕೆಂದರೆ ಇದು ‘ಸಾಂಸ್ಕೃತಿಕ’ದ ಅರ್ಥ ಯಾವುದು ಎಂಬ ಬಗ್ಗೆ ಅರ್ಥಸ್ಪಷ್ಟತೆ ಇಲ್ಲದಿರುವುದನ್ನು ಸೂಚಿಸುತ್ತಿದೆ. ಒಂದೊಮ್ಮೆ ಇದರೊಳಗೆ ರಾಜಕಾರಣ, ಸಮಾಜ, ಧರ್ಮ, ಸಾಹಿತ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಯಾವ ಆಯಾಮಗಳು ಇಲ್ಲ ಎಂದಾದರೆ, ಅದು ಸೂಚಿಸುತ್ತಿರುವ ನಿಜವಾದ ಆಯಾಮವಾದರೂ ಯಾವುದು? ಇದು ಇತರೆ ಜ್ಞಾನಶಿಸ್ತುಗಳನ್ನು ಸೂಚಿಸುವ ಶಬ್ದಗಳ ಜತೆ, ನಿರ್ದಿಷ್ಟ ಅರ್ಥವಿಲ್ಲದೆ ಹೆಚ್ಚುವರಿಯಾಗಿ ಸೇರಿಕೊಳ್ಳುತ್ತಿದೆ. ಕೆಲವೊಮ್ಮೆ ಸಾಂಸ್ಕೃತಿಕ ಎಂಬುದು ಎಲ್ಲವನ್ನೂ ಬಾಚಿಕೊಳ್ಳುವ ಒಂದು ದೊಡ್ಡ ಬಲೆಯಂತಹ ಪರಿಕಲ್ಪನೆಯಾಗಿ ಬಳಕೆಯಾಗುತ್ತಿರುವಂತಿದೆ. ಈ ಕೆಳಗಿನ ಉದಾಹರಣೆ ಗಮನಿಸಿ:

ಜನಪದವೆಂಬುದು ಒಂದು ಸಾಂಸ್ಕೃತಿಕ ವಿಚಾರವಾಗಿದ್ದು, ಅದರಲ್ಲಿ ಭೌತಿಕ, ಅಭೌತಿಕ ಆಲೋಚನೆಗಳ ಹಾಗೂ ಅವುಗಳ ಬಾಯಿಮಾತಿನ ಸಂಪ್ರದಾಯದ ಅಭಿವ್ಯಕ್ತಿಯ ಸಾಹಿತ್ಯ, ಹೀಗೆ ಜನಪದ ಜೀವನದ ಎಲ್ಲ ವೈಲಕ್ಷಣ್ಯಗಳನ್ನು ಒಳಗೊಳ್ಳುತ್ತದೆ. ಅಲ್ಲದೆ ಸಾಂಪ್ರದಾಯಿಕ ಕಲೆ ಕೈಗಾರಿಕೆಗಳೂ ಸೇರಿಕೊಳ್ಳುತ್ತವೆ. ಜನಪದ ಸಾಹಿತ್ಯ, ಕಲೆ, ಸಂಗೀತ, ಶಿಲ್ಪ, ನಂಬಿಕೆ ಸಂಪ್ರದಾಯ ಆಚರಣೆ, ಉಡುಗೆ, ತೊಡುಗೆ, ಆಹಾರ, ಊಟ, ವಸತಿ ಮೊದಲಾದ ಅನಂತ ಮುಖಗಳು ಜನಪದ ಸಂಸ್ಕೃತಿಗಿವೆ. ಇವೆಲ್ಲವನ್ನು ಒಳಗೊಂಡ ಅಧ್ಯಯನವೇ ಸಾಂಸ್ಕೃತಿಕ ಅಧ್ಯಯನ (ಗೊಳಸಂಗಿ, ೧೯೯೭:).

ಮೇಲಿನ ವಿವರಣೆಯನ್ನು ಕಂಡರೆ, ಸಾಂಸ್ಕೃತಿಕ ಎಂಬುದು ಸಮಗ್ರತೆಯ ಹೆಸರಲ್ಲಿ ಎಲ್ಲವನ್ನು ಸೇರಿಸುವ ಒಂದು ದೊಡ್ಡ ಹೋಲ್ಡಾಲ್ ಪರಿಕಲ್ಪನೆಯಾಗಿದೆ. ಈ ಸಮಸ್ಯೆ ‘ಸಂಸ್ಕೃತಿ’ ಶಬ್ದಕ್ಕೂ ಇದೆ. ಕಲುಬುರ್ಗಿಯವರು ತಮ್ಮ ಸಂಶೋಧನೆಯು “ಕನ್ನಡ ಸಂಶೋಧನೆ, ಸಂಸ್ಕೃತಿ, ಶಾಸನ, ಜಾನಪದ, ನಾಮವಿಜ್ಞಾನ, ಸಮಾಜವಿಜ್ಞಾನ ಇತ್ಯಾದಿ ಹೊಸಹೊಸ ಕ್ಷೇತ್ರಗಳನ್ನು ಅಳವಡಿಸಿಕೊಳ್ಳುತ್ತ ಬಂದಿದೆ” ಎನ್ನುತ್ತಾರೆ (೧೯೮೮:ಮುನ್ನುಡಿ). ಇಲ್ಲಿ ‘ಸಂಸ್ಕೃತಿ’ ಎಂದರೆ ಯಾವ ಕ್ಷೇತ್ರ? ಸಾಹಿತ್ಯವೇ? ಸ್ಪಷ್ಟವಾಗುವುದಿಲ್ಲ. ‘ಸಂಸ್ಕೃತಿ’ ಶಬ್ದದ ಅರ್ಥನಿಷ್ಕರ್ಷೆ ಮಾಡುತ್ತ ಡಿವಿಜಿಯವರು ಈ ಸಮಸ್ಯೆಯ ಮೇಲೆ ಬಹುಹಿಂದೆಯೇ ಬೆರಳಿಟ್ಟಿದ್ದರು. “ಅರ್ಥ ನಿರ್ಬಂಧಕ್ಕೆ ಸಿಕ್ಕದಿರುವುದೇ ಅದರ ವಿಶೇಷ ಗುಣವೆಂದು ಕೆಲಮಂದಿಗೆ ಎನ್ನಿಸಿದರೂ ಎನ್ನಿಸಬಹುದು. ಅದು ಹಾಗೆ ‘ಮೊಗುಂ’ ಆಗಿರುವುದರಿಂದ, ಅದನ್ನು ಯಾರು ಬೇಕಾದರೂ ಯಾವ ಪ್ರಸಂಗದಲ್ಲಾದರೂ ವಾಕ್ಯದ ಭರ್ತಿಗಾಗಿ ಉಪಯೋಗಿಸಿಕೊಳ್ಳಬಹುದಾಗಿದೆ” (೧೯೫೩:೫೧೩). ನಿಜ, ಉದ್ದಕ್ಕೂ ಈ ‘ಸಂಸ್ಕೃತಿ’ ‘ಸಾಂಸ್ಕೃತಿಕ’ ಪರಿಕಲ್ಪನೆಗಳು ಸಡಿಲವಾದ ಅಸ್ಪಷ್ಟ ಅರ್ಥಗಳಲ್ಲಿಯೇ ಬಳಕೆಯಾಗುತ್ತ ಬಂದಂತಿವೆ. ಕನ್ನಡದ ಸಮಾಜ ಶಾಸ್ತ್ರೀಯ ಹಾಗೂ ಮಾನವಿಕ ಅಧ್ಯಯನಗಳಲ್ಲಿ ಸಾಮಾನ್ಯವಾಗಿ ಕಾಣುವ ಈ ಪರಿಭಾಷಾಗೊಂದಲವು, ‘ಸಂಸ್ಕೃತಿ’ ಪರಿಕಲ್ಪನೆ ಇನ್ನೂ ಖಚಿತ ಆಗದಿರುವುದರ ಪರಿಣಾಮವಾಗಿದೆ.

ಪರಿಕಲ್ಪನಾತ್ಮಕ ಗೊಂದಲ

“ಸಂಸ್ಕೃತಿ ಎಂಬ ಶಬ್ದವನ್ನು ನಾವು ಸುಲಭವಾಗಿ ಉಪಯೋಗಿಸುತ್ತಿರುವಂತೆ, ಅದರ ಅರ್ಥವನ್ನು ಅಷ್ಟು ಸುಲಭವಾಗಿ ವಿವರಿಸಲಾರೆ. ಬ್ರಿಟಿಶರ ಸಂಪರ್ಕವುಂಟಾದ ಬಳಿಕ ಆ ಶಬ್ದದ ಉಪಯೋಗ ಹೆಚ್ಚಾಗಿದೆಯೆಂದು ಹೇಳುತ್ತಾರೆ. ಆ ಶಬ್ದವು ಬಹುವಿಶಾಲವಾದ ಅರ್ಥದಲ್ಲಿ ಬಳಸಲ್ಪಡುತ್ತಿರುವುದರಿಂದ ಅದರ ಅರ್ಥವನ್ನು ವಿವರಿಸುವುದು ಬಿಗಿಯಾಗಿದೆ” ಎಂದು ಸಿಂಪಿ ಲಿಂಗಣ್ಣನವರು ಹೇಳುತ್ತಾರೆ (೧೯೬೭:೧). ಸಂಸ್ಕೃತಿಯ ವ್ಯಾಖ್ಯೆ ಸಮಸ್ಯಾತ್ಮಕ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಅದನ್ನು ತಾತ್ವಿಕವಾಗಿ ಬಿಡಿಸುವ ಬೌದ್ಧಿಕ ಕಷ್ಟಕ್ಕೆ ಇಳಿವವರು ಕಡಿಮೆ. ಸಿಂಪಿಯವರು ಬಹುಜನ ಸಮ್ಮತವಾಗಿರುವ ಡಿವಿಜಿ ವ್ಯಾಖ್ಯೆಯನ್ನು ಒಪ್ಪಿಕೊಂಡು, ಅದರ ಪ್ರಕಾರ ಭಾರತೀಯ ಸಂಸ್ಕೃತಿಯ ವಿಶ್ಲೇಷಣೆಗೆ ನಿರಾಳವಾಗಿ ತೊಡಗಿಬಿಡುತ್ತಾರೆ. ಕಾರಂತರಲ್ಲೂ ಸಂಸ್ಕೃತಿ ವಿಷಯದಲ್ಲಿ ತಾತ್ವಿಕ ಗೊಂದಲಗಳಿವೆ. ಅವರು ಆನಂದ ಕುಮಾರಸ್ವಾಮಿಯವರ ಪ್ರಭಾವಕ್ಕೆ ಒಳಗಾಗಿ ಲಲಿತಕಲೆಗಳನ್ನು ಅಧ್ಯಯನದ ಪ್ರಮುಖ ಆಕರವನ್ನಾಗಿ ಮಾಡಿಕೊಂಡರು. ಆದರೂ, ಸಮುದಾಯ ಅಧ್ಯಯನಗಳ ಬಗ್ಗೆ ಅವರಿಗೆ ಆಸಕ್ತಿಯಿತ್ತು. ಹೀಗಾಗಿ ಮಾನವಶಾಸ್ತ್ರೀಯ ವ್ಯಾಖ್ಯೆಯನ್ನೂ ಇಟ್ಟುಕೊಂಡರು. ಇವರೆಡೂ ಕೂಡಿದಾಗ ಬರುವ ತಾತ್ವಿಕ ವೈರುಧ್ಯಗಳನ್ನು ಬಗೆಹರಿಸಿಕೊಳ್ಳಲಿಲ್ಲ. ಶಂಬಾ ಜೋಶಿಯವರು ಮೂಲತಃ ತಮ್ಮ ಸಾಂಸ್ಕೃತಿಕ ಅಧ್ಯಯನಗಳನ್ನು ಸಮುದಾಯಗಳ ಆರ್ಥಿಕ ಚಟುವಟಿಕೆ, ದೈವರಾಧನೆ, ಭಾಷೆ, ಸಂಕೇತ ಮುಂತಾದ ಪರಿಕರಗಳನ್ನು ಇಟ್ಟುಕೊಂಡು ಮಾಡಿದವರು. ಆದರೆ ಅವರೂ ಸಂಸ್ಕೃತಿ ಎಂದರೆ ಮನಸ್ಸಿನ ಸಂಸ್ಕಾರ ಎಂಬ ವಾದವನ್ನು ಪೂರ್ತಿಯಾಗಿ ಕೈಬಿಡಲಿಲ್ಲ.

ಕನ್ನಡದ ಸಾಂಸ್ಕೃತಿಕ ಅಧ್ಯಯನಗಳಿಗೆ ಪ್ರಸಿದ್ಧ ಮಾದರಿಯಾಗಿರುವ ಚಿಂದಾನಂದಮೂರ್ತಿ ಅವರ “ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ”ವನ್ನು ಗಮನಿಸಬೇಕು. ಸಂಸ್ಕೃತಿ ಕುರಿತ ವ್ಯಾಖ್ಯಾನಗಳನ್ನೆಲ್ಲ ಚರ್ಚೆ ಮಾಡಿ, ಶಾಸನಗಳಂತಹ ಸಾಮಾಜಿಕ, ರಾಜಕೀಯ, ಆರ್ಥಿಕ ಆಕರಗಳ ಅಧ್ಯಯನಕ್ಕೆ ಬೇಕಾದ ಹಾದಿಕೊಡುವ, ಸಮಾಜ ಜೀವನದ ಸಮಗ್ರತೆಯನ್ನು ಒಳಗೊಳ್ಳುವ ಮಾನವಶಾಸ್ತ್ರೀಯ ವ್ಯಾಖ್ಯೆಯನ್ನು ಅವರು ಆರಿಸಿಕೊಳ್ಳೂತ್ತಾರೆ (೧೯೬೬:೭). “ಸಂಸ್ಕೃತಿ ಎಂದರೆ ಒಂದು ಸಮಾಜದ ಜೀವನ ವಿಧಾನ. ಅದರ ಆಚಾರ ವ್ಯವಹಾರಳು, ಅದರ ಸಂಸ್ಥೆಗಳು, ಆಲೋಚನಾ ವಿಧಾನಗಳು” ಎಂದು ಅಧ್ಯಯನಕ್ಕೆ ಒಂದು ವ್ಯಾಖ್ಯೆ ರೂಪಿಸಿಕೊಳ್ಳುತ್ತಾರೆ. ಆದರೆ ಕಲೆಗಳನ್ನು ಕುರಿತು ಚರ್ಚೆಯನ್ನು ಅನುಬಂಧದಲ್ಲಿ ಕೊಡುತ್ತಾರೆ. ಇದರಿಂದ ಕಲೆಗಳು “ಸಮಾಜದ ಜೀವನ”ಕ್ಕೆ ಸೇರಿದವಲ್ಲ ಎಂಬ ಅರ್ಥ ಬರುತ್ತದೆ. ಅವರು ಜನರೇ  ಚರಿತ್ರೆಯ ನಿರ್ಮಾಪಕರು ಎಂದು ಸೈದ್ಧಾಂತಿಕ ಹೇಳಿಕೆಯನ್ನು ಮಾಡುತ್ತಾರೆ. ಆದರೆ ಶಾಸನಗಳ ವಿಶ್ಲೇಷಣೆಯಲ್ಲಿ ಪ್ರಭುಗಳೇ ಚರಿತ್ರೆಯ ನಿರ್ಮಾಪಕರು ಎಂಬ ಧ್ವನಿ ಹೊರಡುತ್ತದೆ. ಅವರ “ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ” “ಕರ್ನಾಟಕ ಸಂಸ್ಕೃತಿ” ಕೃತಿಗಳಲ್ಲೂ, ಜನರೆ ಸಂಸ್ಕೃತಿ ನಿರ್ಮಾಪಕರು ಎಂದು ಮಾತಿದೆ. ಆದರೆ ಅನ್ವಯದಲ್ಲಿ ಆಳುವ ವ್ಯವಸ್ಥೆಯ ಸಾಮಾಜಿಕ, ರಾಜಕೀಯ, ಆರ್ಥಿಕ ರಚನೆಗಳ ವೈಭವೀಕರಣವಿದೆ.

ಈ ವೈರುಧ್ಯಕ್ಕೆ ಒಂದು ಕಾರಣ, ಅಧ್ಯಯನಕ್ಕೆ ಆರಿಸಿಕೊಳ್ಳುವ ವಸ್ತು ಅಧಿಕಾರಸ್ಥರ ಬದುಕಿಗೆ ಸಂಬಂಧಿಸಿದ್ದು, ಬಳಸಿಕೊಳ್ಳುವ ಆಕರಗಳೂ ಪ್ರಭುತ್ವದ ದಾಖಲೆಗಳಾದ ಶಾಸನಗಳು, ತಾತ್ವಿಕವಾಗಿ ಒಪ್ಪಿಕೊಂಡಿದ್ದು ‘ಜನತೆಯ ಸಮಗ್ರ  ಜೀವನವಿಧಾನವೇ ಸಂಸ್ಕೃತಿ’ ಎಂಬ ಸಮುದಾಯ ಪರವಾದ ವಾಖ್ಯೆ. ಹೀಗಾಗಿ ಅವರದು ಘೋಷಿತವಾಗಿ ಸಾಂಸ್ಕೃತಿಕ ಅಧ್ಯಯನ, ವಾಸ್ತವದಲ್ಲಿ ಪ್ರಭುತ್ವಪರ ವಾದ ರಾಜಕೀಯ ಚರಿತ್ರೆಯ ಪುನಾರಚನೆ. ಇಂಥ ದ್ವಂದ್ವಗಳು ‘ಸಾಂಸ್ಕೃತಿಕ’ ಪರಿಕಲ್ಪನೆ ತಾತ್ವಿಕ ಖಚಿತತೆಯಿಲ್ಲದೆ ಬಳಕೆಯಾಗುತ್ತಿರುವ ಪರಿಸ್ಥಿತಿಯನ್ನು ಸೂಚಿಸುತ್ತವೆ.

ನಿಜವಾಗಿಯೂ ಅಧ್ಯಯನಕಾರರಿಗೆ ಸಂಸ್ಕೃತಿಯ ಪರಿಕಲ್ಪನಾತ್ಮಕ ಸ್ಪಷ್ಟತೆಯ ಅಗತ್ಯವಿದೆಯೇ? ಅಧ್ಯಯನಕಾರರು ಒಪ್ಪಿಕೊಳ್ಳುವ ಪರಿಕಲ್ಪನೆ, ಅಧ್ಯಯನಕ್ಕೆ ಬಳಸುವ ಆಕರ, ಮಾಡುವ ವಿಶ್ಲೇಷಣೆ ಹಾಗೂ ತಲುಪುವ ತೀರ್ಮಾನಗಳನ್ನು ಹೇಗೆ ನಿಯಂತ್ರಿಸುತ್ತದೆ  ಎಂಬುದು ಕುತೂಹಲಕರ ವಿಷಯ. ಡಿವಿಜಿ ಹಾಗೂ ಮಾಸ್ತಿಯವರು ಪ್ರಸಿದ್ಧಿಗೊಳಿಸಿದ ಸಂಸ್ಕೃತಿ ಪರಿಕಲ್ಪನೆಯ ಪ್ರಭಾವದಲ್ಲಿ ಇದಕ್ಕೆ ನಿದರ್ಶನಗಳು ಸಿಗುತ್ತವೆ. ಡಿವಿಜಿಯವರ ಪ್ರಕಾರ ಸಂಸ್ಕೃತಿ ಎಂಬುದು ಸಜ್ಜನರಲ್ಲಿ ಹುಟ್ಟುವ ಸಜ್ಜನಿಕೆ. ಅವರು ಸಂಸ್ಕೃತಿಯನ್ನು ‘ಸಂಸ್ಕಾರ’ ಎಂದು ಸರಾಗವಾಗಿ ಹೇಳಿಬಿಡುತ್ತಾರೆ. ಈ ಸಂಸ್ಕಾರವು ಆಯಾ ವ್ಯಕ್ತಿಯ ವಿಶಿಷ್ಟತೆ ಎನ್ನುತ್ತಾರೆ. ಇದು ಬಡವರಲ್ಲೂ ಹಳ್ಳಿಗರಲ್ಲೂ ಇರಬಹುದು ಎಂದು ಔದಾರ್ಯ ಪ್ರಕಟಿಸುತ್ತಾರೆ.

ಆದರೆ ಸಂಸ್ಕೃತಿ ವ್ಯಾಖೆಗೂ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಯಾರು ಯಾವ ಸ್ಥಾನದಲ್ಲಿ ಯಾವ ಕೆಲಸ ಮಾಡುತ್ತಿದ್ದಾರೆ, ಎಷ್ಟು ಮಾಡುತ್ತಿದ್ದಾರೆ, ಯಾವ ಅವಸ್ಥೆಯಲ್ಲಿದ್ದಾರೆ ಎಂಬುದಕ್ಕೂ ಯಾವ ಸಂಬಂಧವೂ ಇಲ್ಲ. ಈ ವ್ಯಾಖ್ಯೆಯಲ್ಲಿ ದುಡಿಯುವ ಕೆಳಸ್ತರದ ಸಮುದಾಯಗಳ ಬದುಕಿನ ವಿವರಗಳು ಬರುವುದಿಲ್ಲ. ನಮ್ಮ ಸಮಾಜದ ಜಾತಿಪದ್ಧತಿ, ಅಸ್ಪೃಶತೆ, ಸಂಪತ್ತಿನ ವಿತರಣೆ, ಮಹಿಳೆಯರ ನೋವು, ಬಡವರ ಹಸಿವು, ಮುಖ್ಯವಾಗುವುದಿಲ್ಲ. ಇಡೀ ಸಮಾಜವನ್ನು ಗ್ರಹಿಸಲು ಅದರ ಬೆಳವಣಿಗೆಗಳನ್ನು ವಿಮರ್ಶಿಸಲು ಮತ್ತು ಮೌಲ್ಯಮಾಪನ ಮಾಡಲು ಸಂಸ್ಕೃತಿಯ ಈ ಗ್ರಹಿಕೆ ತಡೆಯೊಡ್ಡುತ್ತದೆ. ಲೋಕದ ಕೆಲವು ಸಂಗತಿಗಳಿಗೆ ಕುರುಡಾಗುವಂತೆ ಮಾಡುತ್ತದೆ. ಅಂತಿಮವಾಗಿ ಸಾಮಾಜಿಕ ಆರ್ಥಿಕ ರಾಜಕೀಯ ಸೌಲಭ್ಯಗಳನ್ನು ಪಡೆದು ಬದುಕುವ ವರ್ಗಗಳ ಜೀವನ ವಿವರಗಳನ್ನು, ಅವರ ಔದಾರ್ಯ, ಪ್ರಾಮಾಣಿಕತೆ, ಸಹನೆ, ಜ್ಞಾನ, ಸಾಹಿತ್ಯಪ್ರೀತಿ, ಕಲಾಭಿರುಚಿಗಳನ್ನು ಸಂಸ್ಕಾರ ಎಂದು ಬಣ್ಣಿಸುತ್ತದೆ. ಆಗ ದೊರೆಯೊಬ್ಬನು ಕಟ್ಟಿಸುವ ಗುಡಿ, ಅಗ್ರಹಾರಕ್ಕೆ ಕೊಡುವ ದಾನ, ಕವಿಗಳಿಗೀವ ಬಹುಮಾನ ಸಂಸ್ಕೃತಿ ಪ್ರೇಮವಾಗುತ್ತದೆ. ಇದಕ್ಕಾಗಿ ಅವನು ಪ್ರಜೆಗಳ ಮೇಲೆ ಹಾಕಿದ ತೆರಿಗೆ, ಮಾಡಿದ ಯುದ್ಧ ಲೆಕ್ಕಕ್ಕೆ ಬರುವುದಿಲ್ಲ. ಇಂತಹ ಸಂಸ್ಕೃತಿ ಪರಿಕಲ್ಪನೆಯನ್ನು ಒಪ್ಪಿಕೊಂಡ ಸಾಂಸ್ಕೃತಿಕ ಅಧ್ಯಯನಗಳು ವಿಶಾಲ ಸಮುದಾಯದ ಅಧ್ಯಯನಗಳಾಗುವುದು ಕಷ್ಟ.

೨೦ನೇ ಶತಮಾನದ ಮೊದಲ ಘಟ್ಟದಲ್ಲಿ ಈ ಗ್ರಹಿಕೆಯ ಅನೇಕ ‘ಅಧ್ಯಯನ’ಗಳನ್ನು ಕಾಣಬಹುದು. ಅವುಗಳಲ್ಲಿ ಅರೆಸತ್ಯ, ಉತ್ಪ್ರೇಕ್ಷೆ, ಮರೆಮಾಚುವಿಕೆ ಕಾಣುತ್ತದೆ. ಬೆಟಗೇರಿ ಕೃಷ್ಣಶರ್ಮ ಅವರ “ನಮ್ಮ ಸಂಸ್ಕೃತಿ ಪರಂಪರೆ” (೧೯೬೯) ಕೃತಿಯಲ್ಲಿ ಕೂಡ ಗ್ರಾಮೀಣ ಸಂಸ್ಕೃತಿಯ ದಟ್ಟ ವಿವರಗಳಿವೆ. ಈ ವಿವರಗಳನ್ನು ಎಚ್ಚರಿಕೆಯಿಂದ ಆಯ್ದು ಮಂಡಿಸಲಾಗಿದೆ. ಇಲ್ಲಿ ಗ್ರಾಮೀಣ ಬದುಕಿನಲ್ಲಿ ಇರುವ ಜಾತಿಮತಗಳ ಕ್ರೌರ್ಯವಾಗಲಿ. ಆಸ್ತಿಯ ಕ್ರೌರ್ಯವಾಗಲಿ, ಅನೈತಿಕತೆ ಬಡತನ ದಾರಿದ್ರ್ಯ ದೇವದಾಸಿ ಪದ್ಧತಿಗಳ ಪ್ರಸ್ತಾಪವಾಗಲಿ ಇಲ್ಲ. ಎಲ್ಲವೂ ಸ್ವರ್ಗದ ನಂದನವನಗಳು.

ಎಚ್. ತಿಪ್ಪೇರುದ್ರಸ್ವಾಮಿ ಅವರ “ಕರ್ಣಾಟಕ ಸಂಸ್ಕೃತಿ ಸಮೀಕ್ಷೆ” (೧೯೬೮) ಕೃತಿಯನ್ನು ಸಂಸ್ಕೃತಿ ವ್ಯಾಖ್ಯೆಗಳ ಬಲಿಪಶು ಎನ್ನಬಹುದು. ಸಂಸ್ಕೃತಿಯನ್ನು ಅಂತರಂಗದ ಕೃಷಿಗೆ ಸಂಬಂಧಿಸಿದ್ದು ಎಂದು ನಂಬಿದ್ದರಿಂದ ಅಧ್ಯಯನ ತಪ್ಪು ಹಾದಿ ಹಿಡಿಯುತ್ತದೆ ಎನ್ನಲು ಈ ಕೃತಿ ಸಾಕ್ಷಿ. ಇದರಲ್ಲಿ ‘ಶಾಸನಗಳಲ್ಲಿ ಸಂಸ್ಕೃತಿ’ ಎಂಬ ಅಧ್ಯಾಯವಿದೆ. ಅಲ್ಲಿ ನಮ್ಮ ರಾಜರಲ್ಲಿದ್ದ ಧಾರ್ಮಿಕ ಸಹನೆಯನ್ನು ವಿವರಿಸುತ್ತಾ, ಜೈನರಿಗೂ ವೈಷ್ಣವರಿಗೂ ಉಂಟಾದ ವೈಮನಸ್ಸನ್ನು ವಿಜಯನಗರದ ದೊರೆ ಬುಕ್ಕರಾಯನು ಬಗೆಹರಿಸಿದ ಶಾಸನವನ್ನೂ ಲೇಖಕರು ವಿಶ್ಲೇಷಿಸುತ್ತಾರೆ (೧೯೬೮:೨೭೧). ಅವರ ಪ್ರಕಾರ ಇದು ಸರ್ವಧರ್ಮ ಸಮನ್ವಯದ ಉದಾಹರಣೆ. (ವಾಸ್ತವದಲ್ಲಿ ಬುಕ್ಕರಾಯನ ಶಾಸನವು ಅಧಿಕಾರಸ್ಥರಾದ ವೈಷ್ಣವರು ಜೈನರಿಗೆ ಮಾಡಿರುವ ಕಿರುಕುಳವನ್ನು ಸೂಚಿಸುತ್ತದೆ. ಈ ಕಿರುಕುಳ ನಿವಾರಣೆಗಾಗಿ ಜೈನರು ಶ್ರವಣಬೆಳಗೊಳದಲ್ಲಿರುವ ‘ವೈಷ್ಣವ ಅಂಗರಕ್ಷಣೆ’ಗಾಗಿ ಇಪ್ಪತ್ತಾಳನ್ನು ಇಟ್ಟು ಅವರ ಖರ್ಚಿಗೆ ಮನೆಗೊಂದು ಹಣ ತೆರಿಗೆ ಕೊಡಬೇಕಾಯಿತು. ಇದನ್ನು ಸೋತವರಿಗೆ ಮಾಡಲಾದ ಶಿಕ್ಷೆ ಎಂದು ಕೆಲವು ಚರಿತ್ರೆಕಾರರು ಹೇಳುತ್ತಾರೆ. ನೋಡಿ: ಶೆಟ್ಟರ್:೨೦೦೧) ನಂತರ “ಶತ್ರುವಿನಂತೆ ಆಕ್ರಮಣದಲ್ಲಿಯೇ ತೊಡಗಿದ್ದ ಮುಸ್ಲಿಂ ಧರ್ಮ”ಕ್ಕೂ ಮಸೀದಿ ಕಟ್ಟಿಸಿಕೊಟ್ಟಿರುವ ಶಾಸನವನ್ನೂ ಉಲ್ಲೇಖಿಸುತ್ತಾರೆ. ಕೊನೆಗೆ “ಇದೆಲ್ಲವನ್ನೂ ನೋಡಿದರೆ ಕನ್ನಡನಾಡಿಗೆ ‘ಸರ್ವಧರ್ಮ ಸಮನ್ವಯಭೂಮಿ’ ಎಂಬ ಹೆಸರು ಸಾರ್ಥಕವೆನಿಸುತ್ತದೆ” ಎಂಬ ತೀರ್ಮಾನಕ್ಕೆ ಬರುತ್ತಾರೆ. ಆದರೆ ಧಾರ್ಮಿಕ ವಿದ್ವೇಷದ ನೂರರು ಉದಾಹರಣೆಗಳು ಇದೇ ಕರ್ನಾಟಕದಲ್ಲಿವೆ. ಈ ಮಾಹಿತಿ ‘ನನ್ನನ್ನು ಏನು ಮಾಡುವೆ?’ ಎಂದು ಅಧ್ಯಯನಕಾರನ ಮುಂದೆ ಸವಾಲಾಗಿ ನಿಲ್ಲುತ್ತದೆ. ಅದಕ್ಕೆ ಲೇಖಕರು “ಅಲ್ಲೊಮ್ಮೆ ಇಲ್ಲೊಮ್ಮೆ ಧಾರ್ಮಿಕ ಅಸಹನೆಯ ಮಾತುಗಳು ಕಿವಿಗೆ ಬೀಳದೆ ಇಲ್ಲ. ಮಾನವ ಸಹಜವಾದ ದೌರ್ಬಲ್ಯದಿಂದ ಅಂತಹ ವ್ಯಾಜ್ಯಗಳೂ ಸ್ಪರ್ಧೆಗಳೂ ನಡೆದಿವೆ. ಆದರೆ ಅವುಗಳನ್ನು ಮೆಟ್ಟಿನಿಲ್ಲುವ ವಿಶಾಲತೆ ಕುಶಲತೆ ನಮ್ಮ ರಾಜರುಗಳಲ್ಲಿ ಕಂಡುಬಂದಿದೆ. ನಾಡಿನ ಹಿರಿಯರಲ್ಲಿ ಕಂಡುಬಂದಿದೆ. ಧರ್ಮಗುರುಗಳಲ್ಲಿ ಕಂಡುಬಂದಿದೆ” ಎಂದು ಹುಸಿ ಸಮರ್ಥನೆ ಕೊಡುತ್ತಾರೆ (೧೯೬೮:೧೫೦). ಧಾರ್ಮಿಕ ವ್ಯಾಜ್ಯಗಳ ಹಿಂದೆ ರಾಜಕೀಯ ಅಧಿಕಾರ ಸ್ಥಾನಕ್ಕೆ ಹತ್ತಿರವಿದ್ದು ಸಂಪತ್ತನ್ನು ಅನುಭವಿಸುವ ಆರ್ಥಿಕ ರಾಜಕಾರಣವಿತ್ತದೆ. ಇದನ್ನು ಮಾನವಸಹಜ ದೌರ್ಬಲ್ಯ ಎಂದು ಹಾರಿಕೆಯ ವಿವರಣೆ ನೀಡುತ್ತಾರೆ. ವಿಜಯನಗರದ ರಾಜಕೀಯ ಚರಿತ್ರೆ ಬರೆಯುವಾಗ ಕೃಷ್ಣದೇವರಾಯನನ್ನು ‘ಹಿಂದೂ ಸಂಸ್ಕೃತಿ ಕಂಡಿರುವ ರಾಜತ್ವದ ಆದರ್ಶಕ್ಕೆ ಈತ ಒಳ್ಳೆಯ ಉದಾಹರಣೆ’ ಎಂದು ಶುರುಮಾಡುತ್ತಾರೆ. ಕೃಷ್ಣದೇವಾರಾಯನು ಮಂತ್ರಿ ತಮ್ಮ ರಸನ ಕಣ್ಣು ಕೀಳಿಸುವ ಪ್ರಸಂಗ ಬಂದಾಗ “ಇದು ನಿಜವಾಗಿದ್ದರೆ ಅತ್ಯಂತ ವಿಷಾದಕರ ಘಟನೆಯೇ ಸರಿ. ಯಾರಿಂದ ತನ್ನ ಕಣ್ಣುಗಳನ್ನುಳಿಸಿಕೊಂಡು ಕೃಷ್ಣದೇವರಾಯ ಪಟ್ಟಕ್ಕೆ ಬಂದಿದ್ದನೋ ಅವರ ಕಣ್ಣುಗಳನ್ನು ಕೊನೆಯಲ್ಲಿ ತಾನೇ ಕೀಳಿಸುವಂತಾದುದು ವಿಧಿಯ ವಿಕಟಾಟ್ಟಹಾಸ’ ಎಂದು ಶೋಕಿಸುತ್ತಾರೆ (೧೯೬೮:೧೫೧).

ಅರಮನೆಯಲ್ಲಿ ನಡೆಯುವ ಕ್ರೌರ್ಯಗಳಿಗೆ ಗಾಢವಾದ ರಾಜಕೀಯ ಕಾರಣಗಳಿರುತ್ತವೆ. ಆ ಅರಮನೆ ಬಿಜಾಪುರದ ಆದಿಲಶಾಹಿಯದೊ, ಕೊಡಗಿನ ಚಿಕವೀರರಾಜೇಂದ್ರನದೂ ಇರಬಹುದು. ಅವನ್ನು ರಾಜಕೀಯವಾಗಿ ವಿಶ್ಲೇಷಿಸಬೇಕು. ಇದರ ಬದಲು ನೈತಿಕಶೋಕ ವ್ಯಕ್ತಪಡಿಸುವುದು ಅಧ್ಯಯನದಲ್ಲಿ ವ್ಯಕ್ತಿನಿಷ್ಠೆಯ ದೋಷ. ನೈತಿಕ ಆದರ್ಶವೇ ಸಂಸ್ಕೃತಿ ಎಂದು ನಂಬಿದ್ದು, ಸದ್ಗುಣಗಳನ್ನೇ ಹೆಕ್ಕಿಕೊಂಡು ನಮ್ಮದು ಭವ್ಯಸಂಸ್ಕೃತಿ ಎಂಬ ವೈಭವೀಕರಿಸುವುದು ಈ ದೋಷಕ್ಕೆ ಕಾರಣ.

ಬಹುಶಿಸ್ತೀಯತೆಯ ಅರ್ಥದಲ್ಲಿ

ಸದ್ಯಕ್ಕೆ ಕನ್ನಡದಲ್ಲಿ ‘ಸಂಸ್ಕೃತಿ’ ಎನ್ನುವುದು ಹಲವು ಚಾರಿತ್ರಿಕ ಘಟ್ಟಗಳನ್ನು ದಾಟಿಕೊಂಡು, ‘ಸಮುದಾಯಗಳ ಸಮಗ್ರ ಜೀವನ ವಿಧಾನ’ ಎಂಬ ಮಾನವಶಾಸ್ತ್ರೀಯ ಅರ್ಥದಲ್ಲಿ ನಿಂತಂತಿದೆ. ‘ಸಾಂಸ್ಕೃತಿಕ’ ಎನ್ನುವುದುಅನೇಕ ಪರಿಕಲ್ಪನಾತ್ಮಕ ಮಜಲುಗಳನ್ನು ದಾಟಿ, ಬಹುಶಿಸ್ತೀಯವಾದ ಅಧ್ಯಯನ ವಿಧಾನ ಎಂಬರ್ಥಕ್ಕೆ ನಿಂತಂತಿದೆ. ಎರಡೂ ಪರಿಕಲ್ಪನೆಗಳು ತಮ್ಮ ಹಿಂದಿನ ಸೀಮಿತ ಏಕರೂಪಿ ಅರ್ಥವನ್ನು ಬಿಟ್ಟು ಬಹುಮುಖಿ ಅರ್ಥದತ್ತ ಪಯಣಿಸಿವೆ. ಮೊದಲನೆಯದು ವಸ್ತುವಿನ ಆಯ್ಕೆಗೆ ಸಂಬಂಧಿಸಿದ್ದರೆ, ಎರಡನೆಯದು ಅದನ್ನು ನೋಡುವ ದೃಷ್ಟಿಕೋನಕ್ಕೆ ಸೇರಿದೆ. ‘ಸಾಂಸ್ಕೃತಿಕ ಅಧ್ಯಯನ’ ಎಂಬುದು ಇವೆರಡೂ ನೆಲೆಗಳು ಅರ್ಥಪೂರ್ಣವಾಗಿ ಕೂಡಿರುವ ದೃಷ್ಟಿಕೋನ ಹಾಗೂ ಅಧ್ಯಯನ ವಿಧಾನ. ಒಂದು ಊರಿನ ಸಾಂಸ್ಕೃತಿಕ ಅಧ್ಯಯನ ಎಂದರೆ, ೧. ತಾತ್ವಿಕವಾಗಿ ಅದರ ಬದುಕಿನ ಸಮಸ್ತ ಸಂಗತಿಗಳೂ ಸೇರುತ್ತವೆ (ವಾಸ್ತವದಲ್ಲಿ ಸಮಸ್ತ ಸಂಗತಿಗಳನ್ನು ಅಧ್ಯಯನಕ್ಕೊಳಪಡಿಸಲು ಸಾಧ್ಯವಿಲ್ಲ ಎಂಬುದು ಬೇರೆ ಪ್ರಶ್ನೆ). ೨. ಆ ಸಂಗತಿಗಳನ್ನು ವಿಶ್ಲೇಷಿಸಲು ನೆರವಾಗುವ ಎಲ್ಲ ಜ್ಞಾನಶಿಸ್ತುಗಳನ್ನು ಬಳಸಿ, ಪರಿಶೀಲಿಸಬೇಕಾಗುತ್ತದೆ. ಇದೊಂದು ಬಗೆಯಲ್ಲಿ ಪಾರ್ಶ್ವಿಕತೆಯನ್ನು ಬಿಟ್ಟು ಸಮಗ್ರತೆಯತ್ತ ಚಲಿಸುವ ಪರಿಕಲ್ಪನೆ; ಜ್ಞಾನದ ಪಯಣಕ್ಕೆ, ‘ನಿಜ’ದ ಶೋಧಕ್ಕೆ ಸಿಗುವ ಎಲ್ಲವನ್ನು ಬಳಸುವ ಬೌದ್ಧಿಕ ಸಮಾಜವಾದಿ ತತ್ವ.

ಒಂದು ವಸ್ತುವಿನ ಅಧ್ಯಯನ ಮಾಡುವಾಗ ಬಹುಜ್ಞಾನಗಳ ಮೂಲಕ ಬೆಳಕು ಹಾಯಿಸಿದರೆ, ಅದರ ಸಮಸ್ತ ಆಯಾಮಗಳು ಪ್ರಕಟವಾಗುತ್ತವೆಯೇ? ಸಮಸ್ತ ಆಯಾಮಗಳು ಪ್ರಕಟವಾಗಬೇಕು ಎಂಬುದು ಒಂದು ಆದರ್ಶ. ಬಹು ಆಯಾಮಗಳು ಎಂಬುದು ಬಹುಶಃ ಸರಿ. ಉದಾ: ಭಾಷೆಯಂತಹ ವಿಷಯವನ್ನು ಭಾಷಾಶಾಸ್ತ್ರೀಯ ದೃಷ್ಟಿಯಿಂದ ನೋಡುವ ಒಂದು ವಿಧಾನವಿದೆ. ಆದರೆ ಕನ್ನಡ ಭಾಷೆಗೆ ಪ್ರಾದೇಶಿಕ, ಧಾರ್ಮಿಕ, ರಾಜಕೀಯ, ಆರ್ಥಿಕ, ಹಾಗೂ ಲಿಂಗ ಜಾತಿ ಇತ್ಯಾದಿ ಆಯಾಮಗಳಿವೆ. ಹೀಗಿದ್ದು, ಭಾಷೆಯನ್ನು ಈ ಹಲವು ಜ್ಞಾನಶಿಸ್ತುಗಳಿಂದ ಸಿಗುವ ತಿಳಿವಳಿಕೆಯ ಮೂಲಕ ಏಕಕಾಲಕ್ಕೆ ಅಧ್ಯಯನ ಮಾಡುವುದರಿಂದ ಸಹಜವಾಗಿ ಹೆಚ್ಚಿನ ‘ಸತ್ಯ’ಗಳು (ಸತ್ಯ ಎಂಬುದು ಸಾಪೇಕ್ಷವಾದುದು) ತಿಳಿಯುತ್ತವೆ. ಇದು ಒಂದು ಶಾಸ್ತ್ರದ ಮೂಲಕ ಮಾಡುವ ಅಧ್ಯಯನಕ್ಕಿಂತ ಹೆಚ್ಚಿನ ಉಪಯುಕ್ತತೆಯನ್ನು ಉಳ್ಳದ್ದು. ಇದೇ ರೀತಿ ಶಾಸನ, ಚರಿತ್ರೆ, ಸಮಾಜ, ಮಹಿಳೆ, ಧರ್ಮ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಆಯಾ ಜ್ಞಾನಶಿಸ್ತುಗಳ ಮೂಲಕ ನೋಡುವ ಪದ್ಧತಿಯೊಂದು ಬೌದ್ಧಿಕ ಚಟುವಟಿಕೆಗಳಲ್ಲಿ ಮೊದಲಿಂದಲೂ ಇದೆ. ಇದಕ್ಕೆ ಅನುಸಾರವಾಗಿ ವಿಶ್ವವಿದ್ಯಾಲಯಗಳಲ್ಲಿ ಪ್ರತ್ಯೇಕ ವಿಭಾಗಗಳು ಏರ್ಪಟ್ಟಿವೆ. ಒಂದು ವಸ್ತುವನ್ನು ನಿರ್ದಿಷ್ಟ ಶಾಸ್ತ್ರದ ವಿಧಾನಗಳ ಮೂಲಕ ನೋಡುವುದರಿಂದ ಆಳವಾದ ಪರಿಣತವಾದ ತಿಳಿವಳಿಕೆ ಸಿಗುತ್ತದೆ ನಿಜ. ನಮ್ಮ ಜ್ಞಾನಶಾಸ್ತ್ರಗಳೂ ಒಮ್ಮಗ್ಗಲಿಂದ ಒಂದು ವಿಷಯವನ್ನು ಅರಿಯುವ ಪಾರ್ಶ್ವಿಕ ದೃಷ್ಟಿಕೋನ ಪ್ರದರ್ಶಿಸುತ್ತವೆ. ಹೀಗಾಗಿ ಹೆಚ್ಚಿನ ಮಗ್ಗುಲುಗಳನ್ನು ವ್ಯಾಪಿಸುವಂಥ ಬಹುಶಿಸ್ತೀಯವಾದ ದೃಷ್ಟಿಯನ್ನು ಹಾಯಿಸಲು ಒಂದು ಪರಿಕಲ್ಪನೆಯ ಜರೂರಿ ಇತ್ತು. ಇದರ ಜತೆಗೆ ಅಧ್ಯಯನಕ್ಕೆ ಎತ್ತಿಕೊಳ್ಳುವ ಯಾವುದೆ ವಸ್ತು, ನಮ್ಮ ಸಾಮಾಜಿಕ ಸಂದರ್ಭದಲ್ಲಿ ಬಹು ಆಯಾಮಗಳನ್ನು ಗರ್ಭೀಕರಿಸಿಕೊಂಡಿರುತ್ತದೆ. ಹೀಗಿರುವಾಗ ಒಂದು ಆಯಾಮದಲ್ಲಿ ನೋಡುವುದರಿಂದ ಸಿಗುವ ತಿಳಿವಳಿಕೆಗೆ ಮಿತಿ ಒದಗುವುದು ಸಹಜ. ಈ ಮಿತಿಯನ್ನು ಮೀರಲು ಬಹುಶಿಸ್ತೀಯ ಅಧ್ಯಯನ ವಿಧಾನವು ಒಂದು ಪರಿಕಲ್ಪನೆಯಾಗಿ, ಒಂದು ಸಾಂಸ್ಕೃತಿಕ ಪರಿಭಾಷೆಯಾಗಿ ಹೊಮ್ಮುತ್ತಿದೆ. ಇದನ್ನು ಒಪ್ಪಿಕೊಳ್ಳುವುದು ಸದ್ಯಕ್ಕೆ ಉಚಿತವೂ ಆಗಿದೆ.

ಬಹುಶಿಸ್ತೀಯ ಎಂಬುದನ್ನು ಬಹುಸ್ತರೀಯ ಎಂದು ಕೂಡ ವ್ಯಾಖ್ಯಾನಿಸಬಹುದು. ಉದಾ: ಸಾಹಿತ್ಯಕ ಅಧ್ಯಯನಗಳಲ್ಲಿ ಅಕಡೆಮಿಕ್ ಚಟುವಟಿಕೆಗಳಲ್ಲಿ ಪ್ರಚಲಿತವಾಗಿರುವ ಸೀಮಿತ ನೆಲೆಯ ಕೃತಿನಿಷ್ಠವಾದ ಸಾಹಿತ್ಯಕ ಪರಿಶೀಲನೆಗಿಂತ ಭಿನ್ನವಾದ ಅನುಸಂಧಾನವನ್ನು ಸಾಂಸ್ಕೃತಿಕ ಎಂದು ಭಾವಿಸಲಾಗುತ್ತಿದೆ. ಬೇಂದ್ರೆ ಕಾವ್ಯಕ್ಕೆ ಸಾಹಿತ್ಯಾಧ್ಯಯನದಲ್ಲಿ ಪಳಗಿದ ಓದುಗರ ಓದಿನಷ್ಟೆ, ಅಂತಹ ತರಬೇತಿಯಿಲ್ಲದ ಬೇರೆ ಕ್ಷೇತ್ರದಲ್ಲಿರುವ ಓದುಗರ ಪ್ರತಿಕ್ರಿಯೆಗೂ ಮಹತ್ವವಿದೆ. ಆದರೆ ಅಕೆಡೆಮಿಕ್ ವಲಯದಲ್ಲಿರುವ ಸಾಹಿತ್ಯ ಓದಿನ ಮಾದರಿಯು ಇತರೆ ಮುಖಾಮುಖಿಯ ಕ್ರಮಗಳನ್ನು ಅಸಾಹಿತ್ಯಕ ಎಂದು ನಿರಾಕರಿಸುತ್ತದೆ. ಮ್ಮ ಸಮಾಜದ ಹಲವಾರು ಮನಸ್ಸುಗಳು ಒಂದು ಕೃತಿಗೆ ಮುಖಾಮುಖಿ ಮಾಡುವ ಸಾಧ್ಯತೆಯನ್ನು ಸ್ಥಾಪಿಸುವ ಅಗತ್ಯವಿದೆ ಈ ಹಿನ್ನೆಲೆಯಲ್ಲಿ ‘ಸಾಂಸ್ಕೃತಿಕ’ವಿ ಬಹುಸ್ತರೀಯ, ಬಹುಶಿಸ್ತೀಯ, ಬಹುಕೇಂದ್ರಿತ, ಬಹುಸಂವೇದನೆಗಳ ಅಧ್ಯಯನ ವಿಧಾನವಾಗಿದೆ. ಇದು ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಇತ್ಯಾದಿ ಎಲ್ಲ ಆಯಾಮಗಳನ್ನೂ ಒಳಗೊಂಡ ಸಂಯುಕ್ತ ಪರಿಭಾಷೆಯಾಗಿದೆ. ಇದು ಸಾಹಿತ್ಯಕ ಓದಿನ ಏಕರೂಪತೆ ಹಾಗೂ ಯಜಮಾನಿಕೆಗಳನ್ನು ದಾಟಬಲ್ಲ, ಬಹುಶಿಸ್ತೀಯ ನೆಲೆಗಳನ್ನು ಒಳಗೊಳ್ಳಬಲ್ಲ, ಬಹುಸ್ತರದ ಓದುಗರನ್ನು ಒಪ್ಪಬಲ್ಲ ಪರಿಭಾಷೆಯಾಗುವುದು ಅಗತ್ಯವೂ ಇದೆ. ವಿಶ್ವವಿದ್ಯಾಲಯಗಳಲ್ಲಿ ವೃತ್ತಿಪರ ಸಂಶೋಧಕರಾಗಿ ಪ್ರಾಧ್ಯಾಪಕರು ಮಾಡಿರುವ ಎಷ್ಟೋ ‘ಸಾಂಸ್ಕೃತಿಕ’ ಬರಡು ಅಧ್ಯಯನಗಳ ಮುಂದೆ, ಓದುಬರೆಹಕ್ಕೆ ಹೊರತಾದ ಕೆಲಸದಲ್ಲಿರುವವರು ಮಾಡುವ ಅಧ್ಯಯನಗಳು ಕೆಲವೊಮ್ಮೆ ಒಳನೋಟಗಳಿಂದಲೂ ಜೀವಂತಿಕೆಯಿಂದಲೂ ಕೂಡಿರುತ್ತವೆ.

ಈಚೆಗೆ ‘ಸಾಂಸ್ಕೃತಿ’ ಎನ್ನುವ ಹೆಸರುಳ್ಳ ಬೆರಳೆಣಿಕೆಯ ಅಧ್ಯಯನಗಳಲ್ಲಿ ಈ ಬಗೆಯ ಖಚಿತತೆ ಬರುತ್ತಿದೆ. ಉದಾ: ಕನ್ನಡದ ಮೊದಲ ಘಟ್ಟದ ಕಾದಂಬರಿಗಳನ್ನು ಕುರಿತು ಶಿವರಾಮ ಪಡಿಕ್ಕಲ್ ಅವರು ಮಾಡಿರುವ ಅಧ್ಯಯನ. ಇದು ಅತ್ಯುತ್ತಮ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಒಂದಾಗಿದೆ. ಇಲ್ಲಿ ಸಾಂಸ್ಕೃತಿಕ ಎಂಬ ಪರಿಭಾಷೆಯನ್ನು ಖಚಿತವಾದ ಅರ್ಥದಲ್ಲಿ ಬಳಸಲಾಗಿದೆ. ಮೊದಲ ಕಾದಂಬರಿ ದಕ್ಷಿಣ ಕನ್ನಡದಲ್ಲಿ ಮೂಡಿಬಂದದ್ದಕ್ಕೆ ಕಾರಣವಾದ “ಕರ್ನಾಟಕದ ಸಾಂಸ್ಕೃತಿಕ ಸನ್ನಿವೇಶ”ವನ್ನು ಲೇಖಕರು ವಿವರಿಸುತ್ತ, ಹೇಗೆ ಟಿಪ್ಪು ಪತನಾನಂತರ ೧೯ನೇ ಶತಮಾನದಲ್ಲಿ ದಕ್ಷಿಣ ಕನ್ನಡದಲ್ಲಿ ಕ್ರೈಸ್ತ ಮಿಶನರಿಗಳು ತಮ್ಮ ಶೈಕ್ಷಣಿಕ ಔದ್ಯಮಿಕ ಚಟುವಟಿಕೆಯನ್ನು ಶುರುಮಾಡಿದರು, ಅಲ್ಲಿದ್ದ ವ್ಯಾಪಾರಿ ಸಮುದಾಯವಾದ ಸಾರಸ್ವತರು ಹೇಗೆ ಇದರ ಪ್ರಯೋಜನ ಪಡೆದು ಆಧುನಿಕತೆಯನ್ನು ಮೈಗೂಡಿಸಿಕೊಂಡರು ಎಂಬ ಚಿತ್ರಗಳನ್ನು ಕಟ್ಟಿಕೊಡುತ್ತಾರೆ. ಇದು ನಿಜವಾಗಿಯೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಆಯಾಮಗಳುಳ್ಳ ಸನ್ನಿವೇಶ. ಇದನ್ನು ಅವರು ಸರಿಯಾಗಿಯೇ ‘ಸಾಂಸ್ಕೃತಿಕ ಸನ್ನಿವೇಶ’ ಎಂಬ ವಿಶಾಲ ಪರಿಭಾಷೆಯಲ್ಲಿ ಗುರುತಿಸುತ್ತಾರೆ. “೧೯೨೦ರ ತನಕವೂ ದಕ್ಷಿಣಕನ್ನಡ ಜಿಲ್ಲೆಯ ಧಾರ್ಮಿಕ ಸಾಮಾಜಿಕ ಆರ್ಥಿಕ ಶೈಕ್ಷಣಿಕ ರಂಗದಲ್ಲಿ ಇವರು (ಕ್ರೈಸ್ತ ಮಿಶನರಿಗಳು) ಕ್ರಿಯಾಶೀಲ ಪಾತ್ರವನ್ನು ವಹಿಸಿದರು” (೨೦೦೧:೪೮) ಎನ್ನುವಲ್ಲಿ  ‘ಸಾಂಸ್ಕೃತಿಕ’ ಎನ್ನುವ ಪರಿಭಾಷೆಯನ್ನು ಬಳಸುವುದಿಲ್ಲ ಎನ್ನುವುದು ಗಮನಾರ್ಹ. ಇದು ಪರಿಕಲ್ಪನಾತ್ಮಕ ಖಚಿತತೆಯ ಸಂಕೇತ. ಯಾವಾಗಲೂ ಪರಿಭಾಷೆಯ ಭಾಷಾ ಬಳಕೆಯಲ್ಲಿರಬೇಕಾದ ಹೊಣೆಗಾರಿಕೆ ಸಂಗತಿ ಮಾತ್ರವಲ್ಲ. ಅದು ಅಧ್ಯಯನಗಳಲ್ಲಿ ಅಗತ್ಯವಾಗಿ ಇರಬೇಕಾದ ತಾತ್ವಿಕ ಸ್ಪಷ್ಟತೆ.

ಸಾಂಸ್ಕೃತಿಕ ಅಧ್ಯಯನವು ಈಗ ಜ್ಞಾನಶೋಧನೆಯಲ್ಲಿ ಉಪಯುಕ್ತತೆಯ ಹಂತದಿಂದ ಜನಪ್ರಿಯಗೊಳ್ಳುವ ಹಂತಕ್ಕೆ ದಾಟಿದೆ. ತಮ್ಮ ಅಧ್ಯಯನವು ಪಾರ್ಶ್ವಿಕವಲ್ಲ, ಅದು ತಾತ್ವಿಕ ವಿಶಾಲತೆಯನ್ನು ಹೊಂದಿದೆ ಎಂಬುದನ್ನು ಸೂಚಿಸಲು ‘ಸಾಂಸ್ಕೃತಿಕ’ ವಿಶೇಷಣ ಬಳಸಲಾಗುತ್ತಿದೆ. ಸಮಾಜದ ಎಲ್ಲ ಗುಂಪುಗಳನ್ನು, ಬದುಕಿನ ಎಲ್ಲ ಚಟುವಟಿಕೆಗಳನ್ನು, ತಿಳಿವಿನ ಎಲ್ಲ ಮಗ್ಗುಲುಗಳನ್ನು ಒಳಗೊಳ್ಳುವಂತಹ, ಒಂದು ವಿಶಾಲ ಪರಿಕಲ್ಪನೆಯಾಗಿ ಅರ್ಥ ಖಚಿತತೆಯತ್ತ ಸಾಗುತ್ತಿದೆ. ಈ ವಿಶೇಷಣವನ್ನು ಇಟ್ಟುಕೊಂಡು, ಸಾಂಸ್ಕೃತಿಕ ಓದು, ಸಾಂಸ್ಕೃತಿಕ ಅಧ್ಯಯನ, ಸಾಂಸ್ಕೃತಿಕ ಮುಖಾಮುಖಿ, ಸಾಂಸ್ಕೃತಿಕ ನೋಟ ಎಂಬ ಪರಿಕಲ್ಪನೆಗಳು ಚಾಲ್ತಿಗೆ ಬರುತ್ತಿವೆ. ಈ ಬಹುಶಿಸ್ತೀಯತೆಯ ಅರ್ಥವು, ಮೇಲೆ ಹೇಳಿದಂತೆ, ಕೇವಲ ಶೈಕ್ಷಣಿಕ ಅಗತ್ಯವಾಗಿ ಬಂದಿದ್ದಲ್ಲ. ನಮ್ಮ ಸಾಮಾಜಿಕ ರಚನೆಯಲ್ಲಿ ಸಮಾಜ, ರಾಜಕಾರಣ, ಧರ್ಮ, ಸಾಹಿತ್ಯ, ಆರ್ಥಿಕತೆ ಇವು ಒಂದಕ್ಕೊಂದು ಸೇರಿಕೊಂಡಂತೆ ಇರುವುದು. ಆದರೆ ಇವನ್ನು ಬೇರೆಬೇರೆಯಾಗಿ ಒಂದಕ್ಕೊಂದು ಸಂಬಂಧವಿಲ್ಲ ಎಂಬಂತೆ ಪಾಶ್ಚಾತ್ಯ ಜ್ಞಾನಶಿಸ್ತುಗಳು ನೋಡುತ್ತಿದ್ದವು. ಇದರಿಂದ ಮುಕ್ತವಾಗಲು ನಡೆಸುವ ಯತ್ನಗಳು ಕೂಡ ‘ಸಾಂಸ್ಕೃತಿಕ’ ಪರಿಭಾಷೆಯನ್ನು ವಿಶಾಲ ಅರ್ಥದಲ್ಲಿ ಬಳಸಲು ಮುಖ್ಯ ಕಾರಣವಾಗಿದೆ. ‘ಸಾಂಸ್ಕೃತಿಕ’ ಎಂಬುದು ಬಹುಕಿನ ಹಲವು ಆಯಾಮಗಳನ್ನು ಅಖಂಡವಾಗಿ ಹಿಡವ ಪರಿಭಾಷೆಯಾಗಿ ಬಳಕೆ ಅಗುತ್ತಿರುವುದನ್ನು ಕನ್ನಡದಲ್ಲಿ ಕಾಣಬಹುದು.

ಅಧ್ಯಯನ ಎಂದರೇನು?

ಅಧ್ಯಯನ ಎಂದರೇನು? ಸಂಶೋಧನೆಯೇ? ವಿಮರ್ಶೆಯೇ? ಚಿಂತನೆಯೇ? ಮಾಹಿತಿ ಮಂಡನೆಯೆ? ವಿಶ್ಲೇಷಣೆಯೇ- ಎಂದೆಲ್ಲ ಪ್ರಶ್ನೆಗಳಿವೆ. ‘ಸಂಶೋಧನೆ’ (Research) ಎಂಬುದು ಕನ್ನಡದಲ್ಲಿ ಹುಡುಕಾಟ ಎಂಬ ಅರ್ಥದಲ್ಲಿ ಬಳಕೆಯಾಗುತ್ತಿದೆ. ಮಾಹಿತಿ ಸಂಗ್ರಹ ಮತ್ತು ಅದರ ವಿಶ್ಲೇಷಣೆ ಇಲ್ಲಿನ ಪ್ರಧಾನ ಚಟುವಟಿಕೆ. ‘ವಿಮರ್ಶೆ’ ಎನ್ನುವುದನ್ನು ಸಾಮಾನ್ಯವಾಗಿ ಸಾಹಿತ್ಯ ವಿಶ್ಲೇಷಣೆಯಲ್ಲಿ ಬಳಸುತ್ತೇವೆ. ಮೌಲ್ಯಮಾಪನ ಕ್ರಿಯೆ ಇಲ್ಲಿ ಮುಖ್ಯ. ‘ಚಿಂತನೆ’ ಶಬ್ದವನ್ನು ಆಲೋಚನೆಗಳಿಗೆ ಸಂಬಂಧಿಸಿದಂತೆ ಬಳಸಲಾಗುತ್ತದೆ. ತರ್ಕ ಮತ್ತು ತತ್ವಶಾಸ್ತ್ರ ಇಲ್ಲಿ ಪ್ರಧಾನ, ಒಂದು ವಸ್ತುವನ್ನು ಆರಿಸಿಕೊಂಡು ಕ್ರಮಬದ್ಧ ಅಧ್ಯಯನ ಮಾಡುವುದಲ್ಲ. ಹಾಗಾದರೆ ಸಂಶೋಧನೆಯಲ್ಲಿ ವಿಶ್ಲೇಷಣೆ, ವಿಮರ್ಶೆಯಲ್ಲಿ ಸಂಶೋಧನೆ-ಚಿಂತನೆ, ಚಿಂತನೆಯಲ್ಲಿ ಮೌಲ್ಯಮಾಪನ ಕ್ರಿಯೆ ಇರುವುದಿಲ್ಲವೇ? ಮೇಲಿನ ಎಲ್ಲ ಚಟುವಟಿಕೆಗಳಲ್ಲಿ ಮಾಹಿತಿ ಮಂಡನೆ ಇರುವುದಿಲ್ಲವೇ? ವಾಸ್ತವದಲ್ಲಿ ಸಂಶೋಧನೆ, ವಿಮರ್ಶೆ, ಚಿಂತನೆ ಇವಕ್ಕೆಲ್ಲ ಕನ್ನಡದಲ್ಲಿ ನಿಗದಿ ಮಾಡಿದ ಗಡಿಗಳಿವೆ. ಆದರೆ ಈ ಗಡಿಗಳು ಕಲಸಿಕೊಳ್ಳುತ್ತವೆ, ಗಡಿಗಳು ಕಲಸಿಕೊಳ್ಳುವುದೇ ಈಗಿನ ಅಧ್ಯಯನಗಳ ಪ್ರಧಾನ ಲಕ್ಷಣ. ಅದಕ್ಕಾಗಿ ಮೇಲಿನ ಸಮಸ್ತ ಬೌದ್ಧಿಕ ಚಟುವಟಿಕೆಗಳನ್ನು ಒಳಗೊಳ್ಳುವ ವಿಶಾಲ ಪರಿಕಲ್ಪನೆಯಾಗಿ ‘ಅಧ್ಯಯನ’ ಎಂಬುದನ್ನು ಬಳಸಲಾಗುತ್ತಿದೆ. ಇದು ಉಚಿತವೂ ಆಗಿದೆ; ‘ಅಧ್ಯಯನ’ ಎಂದರೆ ಸಾಂಪ್ರದಾಯಕ ಅರ್ಥದಲ್ಲಿ ಸಂಶೋಧನೆ ಮಾತ್ರವಲ್ಲ. ಇದರಲ್ಲಿ ಸಾಹಿತ್ಯ ವಿಮರ್ಶೆ, ಸಂಶೋಧನೆ ಹಾಗೂ ಚಿಂತನೆಗಳೂ ಸೇರುತ್ತವೆ. ಪುಸ್ತಕ ವಿಮರ್ಶೆ ಮತ್ತು ಸಾಂಸ್ಕೃತಿಕ ಪದಕೋಶಗಳ ರಚನೆ ಕೂಡ ಸಾಂಸ್ಕೃತಿಕ ಅಧ್ಯಯನದ ಭಾಗವಾಗಿ ನಡೆಯುತ್ತಿದೆ. ಈ ‘ಅಧ್ಯಯನ’ಗಳು ಲೇಖನರೂಪಿ ಆಗಿರಬಹುದು, ಗ್ರಂಥರೂಪಿ ಆಗಿರಬಹುದು. ಒಟ್ಟಿನಲ್ಲಿ ಯಾವುದಾದರೂ ವಸ್ತುವನ್ನು ಇಟ್ಟುಕೊಂಡು ನಡೆಸಿದ ಜ್ಞಾನಪ್ರಧಾನವಾದ ಚಟುವಟಿಕೆಗಳೆಲ್ಲವೂ ಅಧ್ಯಯನ ಎಂದು ಇಲ್ಲಿ ಪರಿಭಾವಿಸಬಹುದು.

ಪಶ್ಚಿಮದಲ್ಲಿ ನಡೆದುಬಂದ ದಾರಿ

ಪಶ್ಚಿಮದ ಅಧ್ಯಯನಗಳಲ್ಲೂ ‘ಸಂಸ್ಕೃತಿ’ ‘ಸಾಂಸ್ಕೃತಿಕ’ ಕುರಿತ ತಾತ್ವಿಕ ಗೊಂದಲಗಳಿದ್ದು, ಈ ಬಗ್ಗೆ ಮೊದಲ ಬಾರಿಗೆ ತಲೆಕೆಡಿಸಿಕೊಂಡು, ಅರ್ಥ ಖಚಿತತೆ ಒದಗಿಸುವ ಕೆಲಸ ಮಾಡಿದವನು ರೆಮಂಡ್ ವಿಲಿಯಮ್ಸ್, ಅದಕ್ಕೆ ಮುನ್ನ ವಿಲಿಯಮ್ಸ್ ಇಂಗ್ಲೆಂಡಿನಲ್ಲಿ ಸಂಸ್ಕೃತಿ ಪರಿಕಲ್ಪನೆ ಬಳಕೆಯಾಗುತ್ತ ಬಂದ ಇಡೀ ಚರಿತ್ರೆಯನ್ನು ಪರಿಶೀಲಿಸುತ್ತಾನೆ. ಮೊದಲು ಈ ಪರಿಕಲ್ಪನೆಯು ವಿಜ್ಞಾನದಲ್ಲಿ ಬೆಳೆಯುವಿಕೆ, ಸಾಕುವಿಕೆಗಳ ಅರ್ಥ ಪಡೆದಿತ್ತು. ಅಲ್ಲಿಂದ ಆರ್ನಲ್ಡನ ಕೈಯಲ್ಲಿ ‘ಸಭ್ಯ ಸಮಾಜ ಸಾಧಿಸಬೇಕಾದ ನೈತಿಕ ಮೌಲ್ಯಗಳು’ ಎಂಬರ್ಥ ಪಡೆಯಿತು. ನಂತರ ಸಾಹಿತ್ಯ ಚಿತ್ರಕಲೆಗಳ ಜಗತ್ತನ್ನು ಸೂಚಿಸುವ ಪರಿಭಾಷೆಯಾಯಿತು. ಮುಂದೆ ಸಮುದಾಯವೊಂದರ ಸಮಗ್ರ ಜೀವನ ವಿವರಗಳು ಎಂಬ ಮಾನವಶಾಸ್ತ್ರೀಯ ಅರ್ಥದಲ್ಲಿ ಬಳಕೆಯಾಗತೊಡಗಿತು. ಇನ್ನೂ ಮುಂದೆ ಸಂಸ್ಕೃತಿಯು ಆರ್ಥಿಕ, ಸಾಮಾಜಿಕ, ರಾಜಕೀಯ ಪರಿಸ್ಥಿತಿಯನ್ನು ಕನ್ನಡಿಸುವ ವಿಚಾರ ಪ್ರಣಾಳಿಕೆ ಎಂಬರ್ಥವನ್ನು ಪಡೆಯಿತು. ಇವೆಲ್ಲ ಒಂದಾದ ನಂತರ ಒಂದಾಗಿ ಬಂದ ಹಂತಗಳಲ್ಲ. ಏಕಕಾಲಕ್ಕೆ ಇವೆಲ್ಲ ಅರ್ಥಗಳೂ ಒಟ್ಟಿಗೆ ಇರುವ ಹಂತವೂ ಇದೆ. ಪ್ರತಿಯೊಂದು ಅರ್ಥಕ್ಕೂ ಆಯಾ ಕಾಲದ ಚಾರಿತ್ರಿಕ ಒತ್ತಡಗಳು ಕಾರಣವಾಗಿರುವುದು ಮಾತ್ರ ಸತ್ಯ.

ಪಶ್ಚಿಮದ ಸಂಸ್ಕೃತಿ ಚಿಂತನೆ ಹಾಗೂ ಸಾಂಸ್ಕೃತಿಕ ಅಧ್ಯಯನಗಳನ್ನು ನೈತಿಕ ಆದರ್ಶವಾದಗಳ ಆರ್ನಲ್ಡ್‌ವಾದಿ ಚಿಂತನೆಯ ಘಟ್ಟ; ಸಮುದಾಯಗಳ ಸಮಗ್ರ ಜೀವನ ವಿಧಾನವನ್ನು ಸೂಚಿಸುವ ಮಾನವಶಾಸ್ತ್ರೀಯ ಚಿಂತನೆಯ ಘಟ್ಟ; ಆರ್ಥಿಕ ರಾಜಕಾರಣದ ಪ್ರತಿಬಿಂಬವಾಗಿ ಸಂಸ್ಕೃತಿಯನ್ನು ಕಾಣುವ ಮಾರ್ಕ್ಸ್‌ವಾದಿ ಚಿಂತನೆ; ಸಂಸ್ಕೃತಿಗೂ ಸ್ವಾಯತ್ತತೆಯಿದೆ, ಅಧಿಕಾರದ ಕೇಂದ್ರವಿದೆ, ಅದು ಆರ್ಥಿಕ ರಾಜಕಾರಣಗಳ ಸಮೀಕರಣವನ್ನು ಬದಲಿಸಬಲ್ಲ ಸಂಗತಿ ಎಂದು ನಂಬುವ ಆಧುನಿಕೋತ್ತರವಾದಿ ಚಿಂತನೆಗಳ ಘಟ್ಟ ಎಂಬ ನಾಲ್ಕು ನೆಲೆಗಳಲ್ಲಿ ಕ್ರೋಢೀಕರಿಸಬಹುದು.

ಅ) ಆರ್ನಲ್ಡನ ಸಂಸ್ಕೃತಿ ವ್ಯಾಖೆಯ ೧೯ನೇ ಶತಮಾನದ ಇಂಗ್ಲೆಂಡಿನ ಸಾಮಾಜಿಕ, ಆರ್ಥಿಕ ಬೆಳವಣಿಗೆಗಳಿಗೆ ಕಂಗೆಟ್ಟ ಮಧ್ಯಮವರ್ಗದ ನೈತಿಕವಾದ ಪ್ರತಿಕ್ರಿಯೆಯಾಗಿತ್ತು. ಆರ್ನಲ್ಡ್ ಹೇಳುವ ಶ್ರೇಷ್ಠಮೌಲ್ಯಗಳ ವ್ಯಾಖ್ಯೆ ವಾಗ್ವಾದಕ್ಕೆ ಒಳಗಾಯಿತು. ನಂತರ ಬಂದ ಮಾನವಶಾಸ್ತ್ರದವರು ಹಾಗೂ ಮಾರ್ಕ್ಸ್‌ವಾದಿ ಚಿಂತಕರು ಇದನ್ನು ಕಟುವಾಗಿ ವಿಮರ್ಶಿಸಿದರು.

ಆ) ಸಂಸ್ಕೃತಿಗೆ ಮಾನವಶಾಸ್ತ್ರಿಯ ಅರ್ಥ ಬರಲು ಕಾರಣ ಯೂರೋಪು ಮತ್ತು ಅದರ ವಸಾಹತುಶಾಹಿ ರಾಜಕಾರಣ. ಮುಖ್ಯವಾಗ ಬ್ರಿಟಿಶರು ಏಶಿಯಾ ಆಫ್ರಿಕಾ ಖಂಡಗಳನ್ನು ವಶಪಡಿಸಿಕೊಂಡ ಮೇಲೆ, ಅವನ್ನು ದೀರ್ಘಕಾಲ ಹಿಡಿದಿಟ್ಟುಕೊಂಡು ಆಳಲು ತಕ್ಕ ಸಿದ್ಧತೆ ಮಾಡಿಕೊಳ್ಳಬೇಕಾಯಿತು. ಅದಕ್ಕಾಗಿ ಅವರಿಗೆ ಸ್ಥಳೀಯ ಜನರ ವರ್ತನೆ, ಆಲೋಚನ ಕ್ರಮಗಳನ್ನು ತಿಳಿಯುವ ಜರೂರು ಬಿತ್ತು. ಇದನ್ನು ಆಯಾ ಸಮಾಜಗಳ ಜೀವನಪದ್ಧತಿಗಳ ಮೂಲಕವೇ ಅರಿಯಬೇಕಾಗಿತ್ತು. ಹೀಗಾಗಿ ಅವರು ಮಾನವಶಾಸ್ತ್ರ ಎಂಬ ಶಾಸ್ತ್ರವನ್ನು ರೂಪಿಸಿ ‘ದೇಶೀ’ ‘ಅನಾಗರಿಕ’ (ethnic) ಎನ್ನಲಾದ ಸಮುದಾಯಗಳ ಮಾಹಿತಿ ಸಂಗ್ರಹಿಸಲಾರಂಭಿಸಿದರು. ಆಗಲೇ ಸಮುದಾಯಗಳ ಕಲೆ, ನಂಬಿಕೆ, ಆಚರಣೆಗಳು ಸಂಸ್ಕೃತಿಯ ಕಕ್ಷೆಗೆ ಬಂದಿದ್ದು. ಅದನ್ನು ಸಾಂಸ್ಕೃತಿಕ ಮಾನವಶಾಸ್ತ್ರ ಎಂದು ಕರೆಯಲಾಯಿತು. ಇ.ಬಿ.ಟೇಲರ್, ಕ್ರೋಬರ್, ಫ್ರೇಜರ್, ಲೆವಿಸ್ಟ್ರಾಸ್ ಮುಂತಾದ ಮಾನವಶಾಸ್ತ್ರಜ್ಞರ ದೊಡ್ಡ ಪರಂಪರೆ ಈ ಶಾಸ್ತ್ರವನ್ನು ಬೆಳಿಸಿತು. ಮಾನವಶಾಸ್ತ್ರದ ವ್ಯಾಖ್ಯೆಯ ಪ್ರಕಾರ, ಸಂಸ್ಕೃತಿಯಲ್ಲಿ ಉನ್ನತ ಅಥವಾ ಕೀಳು ಎಂಬ ತಾರತಮ್ಯವಿಲ್ಲ. ಅವು ಆಯಾ ವರ್ಗಗಳ ಮೌಲ್ಯಕಲ್ಪನೆಯ ತೀರ್ಮಾನಗಳಾಗಿದ್ದು, ಸಮುದಾಯಗಳ ಜೀವನವಿಧಾನದಲ್ಲಿ ಬರುವ ಎಲ್ಲ ನಂಬಿಕೆ, ಆಚರಣೆ, ಸಾಧನೆಗಳು ಸಂಸ್ಕೃತಿಯಾಗುತ್ತದೆ. ವ್ಯಂಗ್ಯವೆಂದರೆ ತಾತ್ವಿಕವಾಗಿ ತಾರತಮ್ಯ ವಿರೋಧಿಯಾದ ಈ ಶಾಸ್ತ್ರವು ವಾಸ್ತವದಲ್ಲಿ ಬಳಕೆಯಾಗಿದ್ದು, ತಾವಾಳುವ ದೇಶಗಳ ಸಮುದಾಯ ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಪರಿಗಣಿಸದ ರಾಜಕಾರಣಕ್ಕೆ.

ಇ) ಸಂಸ್ಕೃತಿಯ ಬದುಕಿನ ಮೂಲಭೂತ ಚಟುವಟಿಕೆಯಾದ ಉತ್ಪಾದನೆಯ ಪರಿಸರದ ಪ್ರತಿಬಿಂಬ ಎಂದು ಹೇಳಿದ ಮಾರ್ಕ್ಸ್‌ವಾದದ ಕಲ್ಪನೆಯನ್ನು ಪ್ರಶ್ನಿಸಿ, ವಿಮರ್ಶಿಸಿ, ವಿಸ್ತರಿಸುವ ಕೆಲಸವನ್ನು ಯೂರೋಪಿನ ರಾಜಕೀಯ ಚಿಂತಕರು, ಸಂಸ್ಕೃತಿ ಚಿಂತಕರು, ಸಾಹಿತ್ಯ ವಿಮರ್ಶಕರು ಮಾಡಿದರಷ್ಟೆ. ಆಂಟೋನಿಯೋ ಗ್ರಾಂಶಿ, ರೇಮಂಡ್ ವಿಲಿಯಮ್ಸ್, ಜಾರ್ಜ್ ಲುಕಾಕ್ಸ್ ಮುಂತಾದವರಿಂದ ಉಂಟಾದ ಈ ಸೈದ್ಧಾಂತಿಕ ಮಧ್ಯಪ್ರವೇಶ ಬಹಳ ಪರಿಣಾಮಕಾರಿ ಯಾಗಿತ್ತು. ಇದರಿಂದ ಸಂಸ್ಕೃತಿ ಚಿಂತನೆ ಹಾಗೂ ಸಾಂಸ್ಕೃತಿಕ ಅಧ್ಯಯನಗಳು ಹೊಸ ಅರ್ಥ ಪಡೆದು ಮತ್ತೊಂದು ಘಟ್ಟ ಪ್ರವೇಶಿಸಿದವು.

ಈ) ಮುಂದೆ ಸಂರಚನೋತ್ತರವಾದಿಗಳು, ಸಂಜ್ಞಾಶಾಸ್ತ್ರಜ್ಞರು, ತತ್ವಜ್ಞಾನಿಗಳು ಸೇರಿ ರೂಪಿಸಿದ ಆಧುನಿಕೋತ್ತರವಾದವು ಸಾಂಸ್ಕೃತಿಕ ಅಧ್ಯಯನಗಳಲ್ಲಿ ಕ್ರಾಂತಿಕಾರಕ ಪರಿಣಾಮವನ್ನು ಬೀರಿತು. ಇದರಲ್ಲಿ ಸಸೂರ್, ಫುಕೊ, ಡೆರಿಡಾ ಪ್ರಮುಖರು.

ಹೀಗೆ ಪಶ್ಚಿಮದಲ್ಲಿ ಸಂಸ್ಕೃತಿ ಕುರಿತ ಚಿಂತನೆಯ ಧಾರೆಗಳು ೨೦೦ ವರ್ಷಗಳ ಕಾಲ ಹರಿದು ಬಂದವು. ಹಿಂದಿನ ಸಾಂಸ್ಕೃತಿಕ ಚಿಂತನೆಗಳ ಮೇಲೆ ನಂತರ ಬಂದ ಚಿಂತಕರು ವಿಮರ್ಶೆ ಮಾಡುತ್ತ, ವಾಗ್ವಾದವನ್ನು ಬೆಳೆಸುವ ಪರಂಪರೆ ಪಶ್ಚಿಮದ ತತ್ವಶಾಸ್ತ್ರದಲ್ಲಿದೆ. ಈ ವಾಗ್ವಾದರೂಪಿ ಪರಂಪರೆಯ ಮುಖ್ಯ ಲಕ್ಷಣಗಳು ಮೂರು. ೧. ಸಾಂಸ್ಕೃತಿಕ ಚರ್ಚೆಗಳಲ್ಲಿ ಸಮಾಜಶಾಸ್ತ್ರಜ್ಞರು, ಮಾನವ ಶಾಸ್ತ್ರಜ್ಞರು, ತತ್ವಶಾಸ್ತ್ರಜ್ಞರು, ಸಾಹಿತ್ಯದವರು ಹೆಚ್ಚು ಪ್ರಮುಖ ಪಾತ್ರ ವಹಿಸಿರುವುದು. ೨. ೨೦ನೇ ಶತಮಾನದ ಯಾವುದೇ ಸಂಸ್ಕೃತಿ ಚಿಂತನೆಯು ಮಾರ್ಕ್ಸ್‌ವಾದದ ಜತೆ ಅನುಸಂಧಾನ ಮಾಡದೆ, ಸಂಸ್ಕೃತಿ ಚರ್ಚೆಗಳನ್ನು ಮಾಡಲು ಆಗಿಲ್ಲದಿರುವುದು. ಈ ಅನುಸಂಧಾನವು ಸಮ್ಮತಿ, ಸಂಘರ್ಷ ಅಥವಾ ವಿಸ್ತರಣೆ ರೂಪದಲ್ಲಿದೆ. ೩. ಈ ಚಿಂತನೆಯಲ್ಲಿ ಅಮೆರಿಕ ಯೂರೋಪುಗಳ ಹಲವಾರು ದೇಶದ ಹಲವಾರು ಶಿಸ್ತಿನ ಚಿಂತಕರು ಭಾಗವಹಿಸಿರುವುದು.