ಪರಿಭಾಷೆಪರಿಕಲ್ಪನೆ

ಸಾಮಾಜಿಕ, ಆರ್ಥಿಕ ರಾಜಕೀಯ, ಸಾಹಿತ್ಯ, ಭಾಷಿಕ, ಅಧ್ಯಯನಗಳು ಬಹುಶಿಸ್ತೀಯತೆಯನ್ನು ರೂಢಿಸಿಕೊಂಡ ಗುರುತಾಗಿ ‘ಸಾಂಸ್ಕೃತಿಕ’ ಎಂಬ ಪರಿಭಾಷೆಯನ್ನು ಬಳಸತೊಡಗಿದವಷ್ಟೆ. ಆದರೂ ಅವಕ್ಕೆ ಈ ಪರಿಭಾಷೆ ಸಾಲದಾಯಿತು. ಅವು ನಮ್ಮ ಸಮಾಜದ ವಿಶಿಷ್ಟವೂ ಸಂಕೀರ್ಣವೂ ಆದ ವಿದ್ಯಮಾನಗಳನ್ನು ವಿವರಿಸಲು ಅನೇಕ ವಿಸ್ತರಣ ಪರಿಭಾಷೆಗಳನ್ನು ಸೃಷ್ಟಿಸಿಕೊಂಡವು: ಸಾಂಸ್ಕೃತಿಕ ನಾಯಕರು, ಸಂಸ್ಕೃತಿ ವಿಮರ್ಶೆ, ಸಾಂಸ್ಕೃತಿ ಅನನ್ಯತೆ, ಪ್ರಾದೇಶಿಕ ಸಂಸ್ಕೃತಿ, ಸಾಂಸ್ಕೃತಿಕ ಪಠ್ಯ, ಸಾಂಸ್ಕೃತಿಕ ಅನುಸಂಧಾನ, ಸಾಂಸ್ಕೃತಿಕ ಸಂಘರ್ಷ, ಸಾಂಸ್ಕೃತಿಕ ಯಜಮಾನಿಕೆ, ಸಾಂಸ್ಕೃತಿಕ ಜಾಗತೀಕರಣ, ಸಾಂಸ್ಕೃತಿಕ ಕಾವ್ಯಮೀಮಾಂಸೆ ಮುಂತಾದವು. ರಾಜಕೀಯ ಸಂಘಟನೆಗಳು ಕೂಡ ತಂತಮ್ಮ ಅಜೆಂಡಗಳನ್ನು ಅಡಗಿಸಲು ಸಾಂಸ್ಕೃತಿಕ ಎಂಬ ಪರಿಭಾಷೆಯನ್ನು ಬಳಸಲಾರಂಭಿಸಿದವು. ಅವುಗಳಲ್ಲಿ ಕೋಮುವಾದಿ ರಾಜಕಾರಣವು ಸೃಷ್ಟಿಮಾಡಿರುವ ‘ಸಾಂಸ್ಕೃತಿಕ ರಾಷ್ಟ್ರೀಯತೆ’ ಎಂಬುದು ಒಂದು. ಸಾಂಸ್ಕೃತಿಕ ನಷ್ಟ. ಸಾಂಸ್ಕೃತಿಕ ಅನಾಹುತ, ಸಾಂಸ್ಕೃತಿಕ ದಾಸ್ಯ – ಇವು ವಿಭಿನ್ನ ಬಗೆಯ ವಿದ್ಯಮಾನಗಳನ್ನು ವಿಶ್ಲೇಷಿಸಲು ಸಾಂಸ್ಕೃತಿಕ ಅಧ್ಯಯನಗಳಲ್ಲಿ ರೂಪುಗೊಂಡವು. ‘ಸಾಂಸ್ಕೃತಿಕ ಅತ್ಯಾಚಾರ’ ‘ಸಾಂಸ್ಕೃತಿಕ ವಿಲನ್’ ಎಂಬ ಪರಿಭಾಷೆಯ ಬಳಕೆಯೂ ಆಗಿದೆ. ಈ ಪರಿಭಾಷೆಗಳು ಅಧ್ಯಯನಗಳಲ್ಲಿ ರೂಪುಗೊಂಡ ಬೇರೆ ಬೇರೆ ವಿಧಾನ ಹಾಗೂ ದೃಷ್ಟಿಕೋನಗಳನ್ನು ಸಂಕೇತಿಸುತ್ತವೆ. ಇವು ಮೂಲತಃ ನಮ್ಮ ಸಮಾಜವನ್ನು ಅಧ್ಯಯನ ಮಾಡಲೆಂದು ರೂಪುಗೊಂಡು ಪರಿಭಾಷೆಗಳು. ಇವನ್ನು ಬಳಸಿ ಸಾಹಿತ್ಯ, ಭಾಷೆಗಳನ್ನು ವಿಶ್ಲೇಷಿಸಲೂ ಯತ್ನಿಸಲಾಗಿದೆ.

ಮುಂದೆ ಈ ವಿಸ್ತರಣ ಪರಿಭಾಷೆಗಳೂ ಸಾಲಲಿಲ್ಲ. ಆಗ ಇನ್ನೊಂದು ಹೆಜ್ಜೆ ಮುನ್ನಡೆದು ಕೆಲವು ಪರಿಕಲ್ಪನೆಗಲು ನಿರ್ಮಾಣವಾದವು. ಪರಿಭಾಷೆಗಳು ಸೀಮಿತ ಅರ್ಥವನ್ನು ಸಂಕೇತಿಸುತ್ತವೆ. ಪರಿಕಲ್ಪನೆಗಳು ಅಧ್ಯಯನಕಾರರು ಬಯಸುವ ಅರ್ಥಪರಂಪರೆಯನ್ನು ಗರ್ಭೀಕರಿಸಿಕೊಂಡಿರುತ್ತವೆ. ಸಾಂಸ್ಕೃತಿಕ ಓದು ಎಂಬುದು ಪರಿಭಾಷೆ. ಸಂಸ್ಕೃತೀಕರಣ, ಪ್ರತಿಸಂಸ್ಕೃತಿ – ಇವು ಪರಿಕಲ್ಪನೆಗಳೂ. ಪರಿಭಾಷೆಗಳೂ ನಿತ್ಯ ಬಳಕೆಯ ಭಾಷೆಗೆ ಬಂದು ಸೇರಿಬಿಡುತ್ತವೆ. ಆದರೆ ಪರಿಕಲ್ಪನೆಗಳು ವಿಶಿಷ್ಟವಾದ ಸೈದ್ಧಾಂತಿಕ ಅರ್ಥಸ್ತರಗಳನ್ನು ಒಳಗೊಂಡಿರುತ್ತವೆ. ಸಾಮಾನ್ಯವಾಗಿ ಇವು ಕೆಲವು ವಿಶಿಷ್ಟ ವಿದ್ಯಮಾನಗಳು ವಿಶ್ಲೇಷಿಸಲು ಅಧ್ಯಯನಕಾರರು ಉದ್ದೇಶಪೂರ್ವಕವಾಗಿ ಸೃಷ್ಟಿಸುವ ರೂಪಕಗಳಿದ್ದಂತೆ. ಈ ಹಿನ್ನೆಲೆಯಲ್ಲಿ ಕನ್ನಡದ ಕೆಲವು ಸಾಂಸ್ಕೃತಿಕ ಪರಿಕಲ್ಪನೆಗಳನ್ನು ಸ್ಥೂಲವಾಗಿ ಪರಿಚಯಿಸಬಹುದು.

ಸಂಸ್ಕೃತೀಕರಣ

ಇದು ಪ್ರಸಿದ್ಧ ಸಮಾಜಶಾಸ್ತ್ರಜ್ಞ ಎಂ.ಎನ್.ಶ್ರೀನಿವಾಸ (೧೯೧೬-೯೯) ಅವರು ಸೃಷ್ಟಿಸಿದ ಪರಿಕಲ್ಪನೆ. ಅವರು ಭಾರತದ ಜಾತಿಸಮಾಜವನ್ನು ಅಧ್ಯಯನ ಮಾಡುತ್ತ, ಕೆಳಜಾತಿಗಳಲ್ಲಿ ನಡೆಯುತ್ತಿರುವ ಸಾಮಾಜಿಕ ಮೇಲ್ ಚಲನೆಗಳನ್ನು ಗುರುತಿಸಲು ಈ ಪರಿಕಲ್ಪನೆ (೧೯೬೨) ಬಳಸಿದರು. ಅವರ ಪ್ರಕಾರ ಮಧ್ಯಮಸ್ತರದಲ್ಲಿ ಬರುವ ಶೂದ್ರಜಾತಿಗಳು ತಂತಮ್ಮ ಪರಿಸರದಲ್ಲಿರುವ ಮೇಲುಜಾತಿಗಳ ಆಚಾರ ವಿಚಾರಗಳನ್ನು ತಾವೂ ಶ್ರೇಷ್ಠರಾಗುವ ಆಶಯದಲ್ಲಿ ಅನುಕರಿಸುತ್ತಿವೆ. ಇದುವೇ ‘ಸಂಸ್ಕೃತೀಕರಣ’ (Sanskritization). ಈ ಪರಿಕಲ್ಪನೆಯನ್ನು ಬಳಸಿ ಅನೇಕ ಸಾಮಾಜಿಕ ಅಧ್ಯಯನ ನಡೆದವು. ಇದು ಹಲವಾರು ದಶಕಗಳ ಕಾಲ ತೀವ್ರವಾದ ಪರವಿರೋಧ ಚರ್ಚೆಯನ್ನು ಹುಟ್ಟುಹಾಕಿತು.

ಇದು ಏಕಮುಖಿ ಸಾಮಾಜಿಕ ಪ್ರಕ್ರಿಯೆಯನ್ನು ಹೇಳುತ್ತಿದೆ. ಉಚ್ಚಜಾತಿಗಳು ಯಾರಿಂದಲೂ ಸಾಂಸ್ಕೃತಿಕ ಸ್ವೀಕಾರ ಮಾಡುತ್ತಿಲ್ಲವೇ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರವಾಗಿ ಶ್ರೀನಿವಾಸ್ ಭಾರತದ ಉಚ್ಚಜಾತಿಗಳು ಕೂಡ ಹೇಗೆ ಪಾಶ್ಚಾತ್ಯೀಕರಣಗೊಳ್ಳುತ್ತಿವೆ ಎಂದು ಹೇಳಿ, ತಮ್ಮ ಸಿದ್ಧಾಂತದ ವಿಸ್ತರಣೆ ಮಾಡಿದರು. ಆದರೂ ಉಚ್ಚಜಾಗಿಗಳಲ್ಲಿ ದಲಿತರು ಕೆಳಜಾತಿಗಳ ಅನೇಕ ಆಚರಣೆಗಳು ಇರುವುದನ್ನು ಗುರುತಿಸಲು ಈ ಪರಿಕಲ್ಪನೆಗೆ ಸಾಧ್ಯವಾಗಲಿಲ್ಲ. ಒಂದು ಸಾಂಸ್ಕೃತಿಕ ಸಂಕೇತವು ಒಂದು ಜಾತಿಸಮುದಾಯದಿಂದ ಇನ್ನೊಂದು ಜಾತಿಸಮುದಾಯಕ್ಕೆ ಯಾಕೆ ಹೋಗುತ್ತದೆ, ಅದರ ಹಿಂದಿನ ಆರ್ಥಿಕ ರಾಜಕೀಯ ಒತ್ತಡ ಯಾವುದು ಎಂಬ ಆಗುಹೋಗುಗಳ ಹಿಂದಿನ ಶಕ್ತಿರಾಜಕಾರಣವನ್ನು ವಿವರಿಸಲು ಈ ಪರಿಕಲ್ಪನೆಗೆ ಸಾಧ್ಯವಾಗಲಿಲ್ಲ.

ಸಾಹಿತ್ಯ ಸಂಸ್ಕೃತಿ

ಇದು ಇಂಗ್ಲಿಷಿನಲ್ಲಿರುವ ‘ಲಿಟರರಿ ಕಲ್ಚರ್’ ಎಂಬುದರ ಅನುವಾದ. ಸಾಹಿತ್ಯಕ್ಕೆ ಸಂಬಂಧಿಸಿದ ವಾಗ್ವಾದಗಳ ಸಂಕಥವನ್ನು ‘ಸಾಹಿತ್ಯ ಸಂಸ್ಕೃತಿ’ ಎಂದು ಕರೆಯಲಾಗುತ್ತದೆ. ಇದನ್ನು ಕನ್ನಡದಲ್ಲಿ ಡಿ. ಆರ್. ನಾಗರಾಜ ಅವರು ಹೆಚ್ಚಾಗಿ ಬಳಸುತ್ತಾರೆ. ಅವರ ಪ್ರಕಾರ “ಸಾಹಿತ್ಯ ಸಂಸ್ಕೃತಿ ಎನ್ನುವುದು ಕೃತಿ, ಪಠ್ಯ, ಲೇಖಕ, ಕೃತಿಯ ಉತ್ಪಾದನೆಯ ಪರಿಸರ, ಓದುಗ, ಆಶಯ, ಸೈದ್ಧಾಂತಿಕ ನೆಲೆಗಟ್ಟು, ಚಾರಿತ್ರಿಕ ಪರಿಸರ ಇವೆಲ್ಲವನ್ನೂ ಒಳಗೊಂಡ ಸಂಕೀರ್ಣ ಶಕ್ತಿ. ಸಾಹಿತ್ಯ ಸಂಸ್ಕೃತಿಯು ಸಾಹಿತ್ಯವನ್ನು ನಿಯಂತ್ರಿಸಲು ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತದೆ. ಏಕೆಂದರೆ ಅದು ಯಾವುದನ್ನು ಸಾಹಿತ್ಯ ಎಂದು ಕರೆಯುತ್ತದೋ ಅದು ಮಾತ್ರ ಸಾಹಿತ್ಯವಾಗುತ್ತದೆ. ವ್ಯಾಖ್ಯೆಯೊಂದರ ಮೂಲಕ ಆಕೃತಿಯನ್ನು ನಿರ್ದಿಷ್ಟಗೊಳಿಸುವುದೇ ಸಾಹಿತ್ಯ ಸಂಸ್ಕೃತಿಯ ಮುಖ್ಯ ಕೆಲಸ. ಆದರೆ, ಓದುಗರ ಅದೃಷ್ಟವಿರಬೇಕು; ಈ ಸಾಹಿತ್ಯ ಸಂಸ್ಕೃತಿಗಳ ಸರ್ವಾಧಿಕಾರತ್ವನ್ನು ಮೀರಿ ಸಾಹಿತ್ಯದ ವ್ಯಾಖ್ಯೆ ಬದಲಾಗುತ್ತ ಬರುತ್ತದೆ” (೧೯೯೯:೪೮-೪೯).

ಕನ್ನಡದಲ್ಲಿ ‘ಸಾಹಿತ್ಯ ಸಂಸ್ಕೃತಿ’ ಪರಿಕಲ್ಪನೆಯ ಬಳಕೆ ಶುರುವಾಗಿದೆ. ‘… ಇಲ್ಲಿನ ಲೇಖನಗಳನ್ನು ಓದುತ್ತ ಹೋದಂತೆ ನಾವು ಕನ್ನಡ ಸಾಹಿತ್ಯ ಸಂಸ್ಕೃತಿಯೊಂದಿಗೆ ಘನಿಷ್ಠವಾದ ಒಂದು ಸಂಬಂಧವನ್ನು ಸ್ಥಾಪಿಸಿಕೊಳ್ಳುತ್ತಾ ಸಾಗುತ್ತೇವೆ; ಸಾಹಿತ್ಯ ಸಂಸ್ಕೃತಿಯ ಅರಿವನ್ನು ಒಳಗೊಳ್ಳುತ್ತಾ ನಡೆಯುತ್ತೇವೆ’ ಮುಂತಾದ ಮಾತುಗಳನ್ನು ಗಮನಿಸಬಹುದು. ಕನ್ನಡದ “ಸಾಹಿತ್ಯ ಸಂಸ್ಕೃತಿ”, “ಕೃತಿಸಂಸ್ಕೃತಿ” ಎಂಬ ವಿಮರ್ಶಾ ಲೇಖನ ಸಂಕಲನಗಳ ಹೆಸರುಗಲು ಸಾಹಿತ್ಯಕತೆಯನ್ನೇ ಪ್ರಧಾನ ಕಾಳಜಿಯನ್ನಾಗಿ ಮಾಡಿಕೊಂಡಿರುವುದನ್ನು ಸೂಚಿಸುತ್ತಿರಬಹುದು; ಸಾಹಿತ್ಯಕ ಚಟುವಟಿಕೆಗಳು ಸಾಂಸ್ಕೃತಿಕ ಅಧ್ಯಯನಗಳಲ್ಲಿ ಲಗತ್ತಿಸುವ ಚರಿತ್ರೆ, ಸಮಾಜ, ರಾಜಕಾರಣದ ಆಯಾಮಗಳನ್ನು ಒಳಗೊಳ್ಳಲು ಬಯಸದ ಒಂದು ವಿಧಾನವನ್ನು ಸೂಚಿಸುತ್ತಿರಬಹುದು. ಆದರೆ ‘ಸಾಹಿತ್ಯ ಸಂಸ್ಕೃತಿ’ ಎಂಬುದನ್ನು ನಾಗರಾಜ ಅವರು ಸಾಹಿತ್ಯದ ವಿದ್ಯಮಾನಗಳನ್ನು ನಿಯಂತ್ರಿಸಲು ಯತ್ನಿಸುವ ಒಂದು ವ್ಯವಸ್ಥೆ ಎಂಬರ್ಥದಲ್ಲಿ ಬಳಸುತ್ತಾರೆ. ಇದನ್ನು ಅವರು ಸಂಸ್ಕೃತಿ ಎಂಬ ಪರಿಭಾಷೆ ಬಳಸಿ ತತ್ವೀಕರಿಸುತ್ತಾರೆ. ಸಾಹಿತ್ಯಕ ಚಿಂತನೆಯನ್ನೆ ಒಂದು ತತ್ವಶಾಸ್ತ್ರೀಯವಾದ ಹುಡುಕಾಟಕ್ಕೆ ತೊಡಗಿಸುವುದನ್ನು ಸಾಹಿತ್ಯ ಸಂಸ್ಕೃತಿ ಎನ್ನುವುದಾದರೆ, ಕರ್ತಕೋಟಿಯವರ ಈಚಿನ ಚಿಂತನೆಗಳು ಸಾಹಿತ್ಯ ಸಂಸ್ಕ್ರತಿಯ ಅತ್ಯುತ್ತಮ ನಿದರ್ಶನಗಳು.

ವಿಸ್ಮೃತಿ

‘ವಿಸ್ಮೃತಿ’ ಎನ್ನುವ ಪದದಲ್ಲಿ ಸಂಸ್ಕೃತಿ ಎಂಬ ಶಬ್ದ ಇಲ್ಲವಾದರೂ ಅದು ಮೂಲತಃ ಒಂದು ಸಾಂಸ್ಕೃತಿಕ ಪರಿಕಲ್ಪನೆಯೇ. ಇದನ್ನು ಡಿ.ಆರ್. ನಾಗರಾಜ ಬಳಕೆಗೆ ತಂದರು. ಇದಕ್ಕೆ ಪ್ರೇರಣೆ ಬಹುಶಃ ಗಣೇಶ್ ಎನ್. ದೇವಿ ಅವರು ಬರೆದಿರುವ “ಆಮ್ಮೇಸಿಯಾ ಅಂಡ್ ಆಫ್ಟರ್” ಪುಸ್ತಕದ ಚಿಂತನೆಗಳು. ಇಂಗ್ಲಿಷ್ ಅಧ್ಯಾಪಕರಾಗಿದ್ದ ದೇವಿಯವರು ಇಂಗ್ಲಿಷ್ ಮಾಧ್ಯಮದ ಮೂಲಕ ಬೌದ್ಧಿಕ ಚಟುವಟಿಕೆ ಮಾಡುವ ಭಾರತದ ಬುದ್ಧಿಜೀವಿಗಳು ಹೇಗೆ ತಮ್ಮ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ, ಸಾಹಿತ್ಯ, ಸಾಮಾಜಿಕ ಆಚರಣೆಗಳಲ್ಲಿರುವ ಶ್ರೀಮಂತವಾದ ಪರಂಪರೆಗೆ ಹೊರತಾಗಿರುತ್ತಾರೆ ಹಾಗೂ ಪಾಶ್ಚಿಮಾತ್ಯ ಚಿಂತನೆಗಳ ಕುರುಡು ಅನುಯಾಯಿಗಳಾಗಿರುತ್ತಾರೆ ಎಂಬುದನ್ನು ವಿವರಿಸುತ್ತಾರೆ. ನಾಗರಾಜ ಅವರ ‘ವಿಸ್ಮೃತಿ’ ಚಿಂತನೆಯಲ್ಲೂ ಪಶ್ಚಿಮದ ಕುರುಡು ಅನುಸರಣೆಯನ್ನು ಬಿಟ್ಟುಕೊಡುವ ತೀವ್ರತೆಯಿದೆ. ಸ್ಥಳೀಯ ಜ್ಞಾನಪರಂಪರೆಗಳ ಜತೆ ಆಪ್ತವಾದ ಅನುಸಂಧಾನ ಮಾಡುವ ಮೂಲಕ, ಹೊಸಹೊಸ ಸಾಂಸ್ಕೃತಿಕ ಪರ್ಯಾಯಗಳನ್ನು ನಿರ್ಮಿಸಿಕೊಳ್ಳುವ ಆಶಯವಿದೆ. ಈ ಪರ್ಯಾಯಗಳನ್ನು ಪಡೆದುಕೊಳ್ಳಲು ಮರೆವಿಗೆ ಸಂದಿರುವ ದೇಶೀಯ ಜ್ಞಾನ ಪರಂಪರೆಗಳನ್ನು ಆಧುನಿಕ ಮನಸ್ಸಿನಿಂದ ಮುಖಾಮುಖಿ ಮಾಡಬೇಕು ಎನ್ನುವುದು ಅವರ ವಾದ:

ಸಮಾಜಗಳಿಗೆ ವಿಚಿತ್ರ ಮರೆವು ಆವರಿಸುತ್ತದೆ. ಅದರಲ್ಲೂ ತಾನೂ ಚಿಂತಿಸುತ್ತಿದ್ದ, ಪ್ರತಿಕ್ರಿಯಿಸುತ್ತಿದ್ದ, ಭಾವಿಸುತ್ತಿದ್ದ ಕ್ರಮಗಳು ಮರೆತು ಹೋಗುವುದು ದೊಡ್ಡ ದುರಂತವೇ ಸರಿ. ವಸಾಹತುಶಾಹಿ ನಂತರ ಭಾರತೀಯ ಸಮಾಜಕ್ಕೆ ಈ ರೀತಿಯ ವಿಸ್ಮೃತಿ ಈಗ ಆವರಿಸಿಬಿಟ್ಟಿದೆ. ನಮ್ಮ ಸಮಾಜದೊಳಗೆ ಅಂತರ್ಗತವಾಗಿದ್ದ ವೈವಿಧ್ಯಮಯ ವೈಚಾರಿಕ ರಚನೆಗಳು ಮರೆತು ಹೋಗಿರುವುದರಿಂದ, ಈಗ ಲಭ್ಯವಿರುವ ಚಿಂತನಕ್ರಮಗಳು ಪೂರ್ಣವಾಗಿ ಪಶ್ಚಿಮಮುಖಿಯಾಗಿ ಬಿಟ್ಟಿವೆ. ನಮ್ಮನ್ನು ಕಾಡುತ್ತಿರುವ ಬಿಕ್ಕಟ್ಟುಗಳನ್ನು ಅವುಗಳ ಮೂಲಕ ಸಮಗ್ರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ‘ಅಕ್ಷರಚಿಂತನ’ದ ಪ್ರಮುಖ ಗುರಿ ಈ ವೈಚಾರಿಕ ವಿಸ್ಮೃತಿಯನ್ನು ದಾಟುವುದೇ ಆಗಿದೆ (ಅಕ್ಷರಚಿಂತನ ಕೃತಗಳಿಗೆ ಬರೆದ ಪ್ರಣಾಳಿಕೆಯ ಮಾತು, ೧೯೯೯೫).

ವಿಸ್ಮೃತಿ ಪರಿಕಲ್ಪನೆಯ ಹಿನ್ನೆಲೆಯಲ್ಲಿ ‘ಅಕ್ಷರಚಿಂತನ’ ಹೆಸರಿನಲ್ಲಿ ಅನೇಕ ಪುಸ್ತಕಗಳು ಬಂದವು. ಪ್ರಧಾನ ಸಂಪಾದಕರಾಗಿ ನಾಗಾರಾಜ್ ಅವಕ್ಕೆ ವಿದ್ವತ್‌ಪೂರ್ಣ ಹಿನ್ನುಡಿಗಳನ್ನು ಬರೆದರು. ಈ ಪುಸ್ತಕಗಳು ಪಶ್ಚಿಮದ ಚಿಂತನಾಕ್ರಮವನ್ನು ವಿಮರ್ಶಿಸುವ ಹಾಗೂ ಪರ್ಯಾಯ ಒದಗಿಸುವ ಜಗತ್ತಿನ ವಿಭಿನ್ನ ಜ್ಞಾನಮೀಮಾಂಸೆ, ತತ್ವಪರಂಪರೆ, ಅನುಭಾವ ಪಂಥಗಳನ್ನು ಕುರಿತಾಗಿವೆ.

ಆದರೆ ‘ವಿಸ್ಮೃತಿ’ ಪರಿಕಲ್ಪನೆ ಕನ್ನಡದಲ್ಲಿ ವಾಗ್ವಾದಕ್ಕೆ ಒಳಗಾಯಿತು. ‘ವಿಸ್ಮೃತಿ’ ಎನ್ನುವುದು ಮೂಲತಃ ಒಂದು ನಕಾರಾತ್ಮಕ ಪದ. ಮರೆವು ಕವಿದಿರುವುದು ಸಾಮಾನ್ಯ ಜನರಿಗೊ ವಿದ್ವಾಂಸರಿಗೊ? ಸಮುದಾಯಗಳು ತಮ್ಮ ಚಲನಶೀಲ ಜೀವನ ಕ್ರಮಕ್ಕೆ ಅನಿವಾರ್ಯವೂ ಉಪಯುಕ್ತವೂ ಅಲ್ಲದ ಎಷ್ಟೋ ಸಂಗತಿಗಳನ್ನು ಬಿಟ್ಟುಕೊಡುತ್ತವೆ. ಅವುಗಳ ಜಾಗದಲ್ಲಿ ಹೊಸ ಸಂಗತಿಗಳನ್ನು ಬರಮಾಡಿಕೊಳ್ಳುತ್ತವೆ. ಈ ಬಿಟ್ಟು ಕೊಡುವಿಕೆ ಚಾರಿತ್ರಿಕವಾಗಿ ವಿಶ್ಲೇಷಿಸಬೇಕಾದ ಸಂಗತಿಯೆ ಹೊರತು ವಿಸ್ಮೃತಿಯಲ್ಲ. ವಿಸ್ಮೃತಿ ಪರಿಕಲ್ಪನೆಯು ನಮ್ಮ ಸಮಾಜದ ಉಚ್ಚವರ್ಗಗಳು ತಮ್ಮ ಧಾರ್ಮಿಕ ಪುನರುತ್ಥಾನವಾದವನ್ನು ಮಂಡಿಸುವ ಹುನ್ನಾರವಾಗುವ ಸಾಧ್ಯತೆಯಿದೆ – ಎಂದು ವಿಮರ್ಶೆ ಬಂದಿತು. ಈ ಆತಂಕಕ್ಕೆ ಸಮರ್ಥನೆಯಂತೆ ಅಕ್ಷರಚಿಂತನೆ ಮಾಲೆಯ ಕೆಲವು ಕೃತಿಗಳು ವೈದಿಕಯುಗದ ಪುನರುತ್ಥಾನವಾದಿ ಆಲೋಚನೆಯನ್ನು ಬಿಡೆಯಿಲ್ಲದೆ ಮಂಡಿಸಿದವು. ಸರಣಿಯಲ್ಲಿ ಕೆಲವು ಉಪಯುಕ್ತವಾದ ಚಿಂತನೆಗಳು ಪ್ರಕಟವಾದವು. ಆದರೂ ವಿಸ್ಮೃತಿ ಪರಿಕಲ್ಪನೆಯು ಕನ್ನಡದ ಸಾಂಸ್ಕೃತಿಕ ಅಧ್ಯಯನಗಳನ್ನು ವಿಶೇಷವಾಗಿ ಪ್ರಭಾವಿಸಲಿಲ್ಲ.

ಸಾಂಸ್ಕೃತಿಕ ಬಹುತ್ವ

ಭಾರತವು ಬಹುಸಾಂಸ್ಕೃತಿಕ ದೇಶ. ಅನೇಕ ಭಾಷೆ, ಪ್ರಾಂತ್ಯಗಳು, ಹಲವು ಜಾತಿ, ಧರ್ಮಗಳು ಇದ್ದು, ಈ ಕಾರಣಕ್ಕಾಗಿಯೇ ಹಲವು ಬಗೆಯ ಆಚರಣೆ, ನಂಬಿಕೆ, ಉಡಿಗೆ ತೊಡಿಗೆಗಳು ಇವೆ. ಏಕರೂಪಿಯಾದ ಜೀವನಕ್ರಮ ಎಂಬುದು ಭಾರತದಲ್ಲಿ ಮೊದಲಿನಿಂದಲೂ ಇಲ್ಲ. ಇದೊಂದು ನಮ್ಮ ದೇಶಕ್ಕೆ ವಿಶಿಷ್ಟವಾದ ವೈವಿಧ್ಯ ಎಂಬ ವಾದಗಳಿವೆ. ಇದನ್ನು ಸಾಂಸ್ಕೃತಿಕ ಬಹುತ್ವ ಅಥವಾ ಸಾಂಸ್ಕೃತಿಕ ಅನೇಕತೆ (ಕಲ್ಚರಲ್ ಪ್ಲೂರಲಿಸಂ) ಎಂದೂ ಕರೆಯಲಾಗುತ್ತದೆ. ಈ ಬಹುತ್ವವು ಒಂದು ಸಮುದಾಯ, ಜಾತಿ, ಧರ್ಮ ಅಥವಾ ಪ್ರದೇಶದ ಸಂಸ್ಕೃತಿಗೆ ಮಾತ್ರ ಮೀಸಲಲ್ಲ. ಪ್ರತಿಯೊಂದು ಸಂಗತಿಯೂ ತನ್ನ ಜತೆಯಲ್ಲಿ ಇರುವದರ ಪ್ರಭಾವಕ್ಕೆ ಒಳಗಾಗಿಯೇ ತೀರುತ್ತದೆ. ಸಾಮಾನ್ಯವಾಗಿ ಜನ ತಮ್ಮ ಮನೆಮಾತಿನ ಜತೆ ಪರಿಸರದ ಭಾಷೆಗಳನ್ನು ಕಲಿಯುತ್ತಾರೆ. ತಮ್ಮ ಮತದ ಹಬ್ಬಗಳನ್ನು ಮಾತ್ರವಲ್ಲ, ಇತರೆ ಮತಗಳ ದೈವಗಳಿಗೂ ನಡೆದುಕೊಳ್ಳುತ್ತಾರೆ. ಕರ್ನಾಟಕ ಎಷ್ಟೋ ಹಳ್ಳಿಗಲ್ಲಿ ಮೊಹರಂ ಆಚರಣೆಯು ಕೇವಲ ಮುಸ್ಲಿಮರದಾಗಿಲ್ಲ. ಅದು ತನ್ನ ಧಾರ್ಮಿಕ ಗಡಿಯನ್ನು ದಾಟಿ ಇಡೀ ಊರಹಬ್ಬವಾಗಿದೆ. ಇದು ಭಾರತದ ಸಾಂಸ್ಕೃತಿಕ ವಿಶೇಷತೆ. ಇದು ಎಲ್ಲ ಧರ್ಮದವರಿಗೂ ಜಾತಿಯವರಿಗೂ ಅನ್ವಯವಾಗುತ್ತದೆ. ಇದನ್ನು ಸಾಂಸ್ಕೃತಿಕ ಬಹುತ್ವದ ಅಪೂರ್ವ ಗುಣ ಎನ್ನಲಾಗುತ್ತದೆ.

ಈ ಪರಿಕಲ್ಪನೆಯ ಪ್ರಕಾರ ಕೋಮುವಾದ, ಧಾರ್ಮಿಕ ಮೂಲಭೂತವಾದಗಳು ಪ್ರತಿವಾದಿಸುವ ಏಕಸಂಸ್ಕೃತಿಯು ಅವಾಸ್ತವಿಕ. ಮಾತ್ರವಲ್ಲ, ಅಪಾಯಕಾರಿ ಕೂಡ. ಈ ಅಪಾಯವನ್ನು ಮುಖಾಮುಖಿ ಮಾಡಲು ಸಾಂಸ್ಕೃತಿಕ ಬಹುತ್ವದ ಪರಿಕಲ್ಪನೆಯನ್ನು ಬಳಸಲಾಗುತ್ತದೆ. ಈ ದಿಸೆಯಲ್ಲಿ ಅನೇಕ ಬಹುಸಾಂಸ್ಕೃತಿಕ ಸಮುದಾಯಗಳ ಅಧ್ಯಯನಗಳನ್ನು ಮಾಡಲಾಗಿದೆ. ಪಿಂಜಾರರ ಮತ್ತು ಸೂಫಿಸಂತರ ಅಧ್ಯಯನಗಳು ಇಂತಹವು. ಕರ್ನಾಟಕದಲ್ಲಿ ಶಿರಹಟ್ಟಿ, ಕೊಡೇಕಲ್, ತಿಂತಿಣಿ ಮೌನಪ್ಪ, ಸಾವಳಗಿ ಮುಂತಾದ ಪರಂಪರೆಗಳನ್ನು ಸಾಂಸ್ಕೃತಿಕ ಬಹುತ್ವದ ನೆಲೆಯಲ್ಲೂ ಅಧ್ಯಯನ ಮಾಡಲಾಗಿದೆ. ಇದನ್ನು ಧಾರ್ಮಿಕ ಸಾಮರಸ್ಯ ಎಂಬ ಪರಿಭಾಷೆಯಲ್ಲಿ ಕರೆಯಲಾಗುತ್ತದೆ. ಸಾಮರಸ್ಯ ಎಂಬುದು ಸಾಂಸ್ಕೃತಿಕ ಬಹುತ್ವದ ಸಹಜತೆಯನ್ನು ಸರಳೀಕರಿಸುತ್ತದೆ. ಯಾಕೆಂದರೆ ಸಾಮರಸ್ಯದಲ್ಲಿ ಸರಳವಾಗಿ ಎರಡು ಅಥವಾ ಹಲವು ಸಂಗತಿಗಳು ಮಿಲನವಾಗುವ ರೀತಿಯಿರುತ್ತದೆ. ಸಾಂಸ್ಕೃತಿಕ ಬಹುತ್ವದಲ್ಲಿ ಈ ಮಿಲನವು ಸ್ನೇಹ ಮತ್ತು ಸಂಘರ್ಷಗಳ ಚಾರಿತ್ರಿಕ ಪರಿಣಾಮವಾಗಿರುತ್ತದೆ. ಈ ಅರಿವನ್ನು ಕುವೆಂಪು ಅವರು ಅಬ್ಬಾಸ್ ಷೂಸ್ತ್ರಿಯವರ ‘ಇಸ್ಲಾಂ ಸಂಸ್ಕೃತಿ’ (೧೯೪೮) ಕೃತಿಗೆ ಬರೆದ ಪ್ರಸ್ತಾವನೆಯಲ್ಲಿ ಅದ್ಬುತವಾಗಿ ಪ್ರಕಟಿಸುತ್ತಾರೆ.

ಉಪಸಂಸ್ಕೃತಿ

ಮಾನವ ಸಮಾಜ ಇರುವ ಕಡೆಯೆಲ್ಲ ಸಂಸ್ಕೃತಿ ಇರುತ್ತದೆ. ಯಾಕೆಂದರೆ ಸಂಸ್ಕೃತಿ ಎಂಬುದು ಮನುಷ್ಯ ಸಮಾಜದ ಮುಖ್ಯ ಲಕ್ಷಣ ಆದರೆ ಈ ಸಂಸ್ಕೃತಿಯ ಏಕರೂಪಿಯಾಗಿರುವುದಿಲ್ಲ. ಅದರ ವಿನ್ಯಾಸಗಳು ವಿಭಿನ್ನವಾಗಿರುತ್ತವೆ. ಒಂದೊಂದು ಪ್ರದೇಶಕ್ಕೂ ಜನಾಂಗಕ್ಕೂ ಅದರದೇ ಆದ ವಿಶಿಷ್ಟತೆ ಇರುತ್ತದೆ. ಇದೊಂದು ವೈರುಧ್ಯವೂ ಹೌದು, ವಾಸ್ತವವೂ ಹೌದು. ಇದನ್ನು ‘ವಿಶಿಷ್ಟವಾದೊಂದು ಸಂಸ್ಕೃತಿ’ ಎನ್ನಬಹುದು. ಈ ಪರಿಕಲ್ಪನೆಯನ್ನು ಫ್ರಾನ್ಜ್ ಬೋಯಸ್ (೧೯೨೭) ಎಂಬ ಮಾನವಶಾಸ್ತ್ರಜ್ಞ ಮಂಡಿಸಿದನು. ಇದರ ಪ್ರೇರಣೆಯಿಂದ ಬರಗೂರು ರಾಮಚಂದ್ರಪ್ಪ ಅವರು ‘ಉಪಸಂಸ್ಕೃತಿ’ ಪರಿಕಲ್ಪನೆ ರೂಪಿಸಿದರು. ಅವರ ಪ್ರಕಾರ ಮನುಷ್ಯ ಸಂಸ್ಕೃತಿಯು ರೂಪುಗೊಳ್ಳುವಾಗ ವಿವಿಧ ಕಾರಣಗಳಿಂದ ವಿಂಗಡಣೆಗೊಳಗಾದ ಮನುಷ್ಯ ಸಮಾಜ, ತನ್ನ ವಿಭಜಿತ ನೆಲೆಗಳಿಗನುಗುಣವಾಗಿ ವಿಭಿನ್ನ ಸಂಸ್ಕೃತಿಗಳನ್ನು ರೂಪಿಸಿಕೊಳ್ಳುತ್ತ ಬಂದಿದೆ. ಇದುವೆ ‘ಉಪಸಂಸ್ಕೃತಿ’. ಆದರೆ ಅಧಿಕಾರಸ್ಥ ಸಂಸ್ಕೃತಿಯು ತಾನು ರೂಪಿಸಿದ್ದೆ ನಿಜವಾದ ಸಂಸ್ಕೃತಿ ಎಂದು ಹೇಳುತ್ತದೆ. “ಪ್ರಧಾನ ಸಂಸ್ಕೃತಿಯು ಯಾವುದೇ ಒಂದು ದೇಶ-ಪ್ರದೇಶದ ಜೀವನ ವಿಧಾನವಾಗಿರುವಾಗ ಇದಕ್ಕೆ ಹೊರತಾಗಿ ಅಥವಾ ಪ್ರಧಾನ ನೆಲೆಯಿಂದ ನಿರ್ಲಕ್ಷಿತವಾಗಿ ಬದುಕುತ್ತಿರುವ ಸಂಸ್ಕೃತಿಗಳು ‘ಉಪಸಂಸ್ಕೃತಿ’ ಪರಿಕಲ್ಪನೆಗೆ ಬರುತ್ತವೆ” (೧೯೯೯೪:೧೮೩).

ಈ ಪರಿಕಲ್ಪನೆ ಕೂಡ ವಾಗ್ವದಕ್ಕೆ ಒಳಗಾಯಿತು. ‘ಉಪ’ ಎಂದು ಗುರುತಿಸುವ ಮೂಲಕ ತನ್ನನ್ನು ತಾನೇ ಕೆಳಹಂತದಲ್ಲಿ ಇರಿಸಿಕೊಳ್ಳುವ ಈ ಕ್ರಮವು, ‘ಪ್ರಧಾನ ಸಂಸ್ಕೃತಿ’ ಒಂದನ್ನು ತಾನೇ ಮಾನ್ಯಮಾಡಿದಂತೆ ಆಗುವುದಿಲ್ಲವೇ ಎಂದು ಪ್ರಶ್ನಿಸಲಾಯಿತು. ಉಪಸಂಸ್ಕೃತಿ ಎಂದು ಕರೆಯಲಾಗುವ ಈ ಸಂಸ್ಕೃತಿಗಳು ಈ ನಾಡಿನ ಮೂಲನಿವಾಸಿಗಳಿಗೆ ಸೇರಿದವು. ಆದ್ದರಿಂದ ಇವನ್ನು ‘ಮೂಲಸಂಸ್ಕೃತಿ’ಗಳು ಎಂದು ಯಾಕೆ ಕರೆಯಬಾರದು ಎಂಬ ಪ್ರತಿವಾದಗಳು ಮಂಡನೆಯಾದವು.

ಪ್ರತಿಸಂಸ್ಕೃತಿ

ನಮ್ಮ ಸಮಾಜದ ದುಡಿಯುವ ವರ್ಗದ ಬದುಕಿನಲ್ಲಿ ಅನೇಕ ಬಗೆಯ ನಂಬಿಕೆಗಳಿವೆ. ಅನೇಕ ಆಚರಣೆಗಳಿವೆ. ಅವುಗಳಲ್ಲಿ ಕೆಲವು ಯಜಮಾನಿಕೆ ಮಾಡುವ ವ್ಯವಸ್ಥೆಯ ಆಲೋಚನೆಗಳನ್ನು ಒಪ್ಪಿಕೊಂಡವು. ಆದರೆ ಇನ್ನೂ ಕೆಲವು ವ್ಯವಸ್ಥೆಯ ಆಲೋಚನೆಗೆ ತೀವ್ರ ಪ್ರತಿರೋಧವನ್ನು  ಒಡ್ಡುವಂತಹವು. ಮಾತ್ರವಲ್ಲ, ಬದಲಿಯಾದ ಲೋಕದೃಷ್ಟಿಯನ್ನು ಮಂಡಿಸುವಂತಹವು. ಇಂತಹ ಆಶಯ ಮತ್ತು ಆಲೋಚನೆಗಳು ಸಮುದಾಯಗಳ ನಂಬಿಕೆ ಆಚರಣೆಗಳಲ್ಲಿ, ಅವುಗಳ ಸಾಹಿತ್ಯ ಕಲೆಗಳ ಅಭಿವ್ಯಕ್ತಿಯಲ್ಲಿ ಪ್ರಕಟವಾಗುತ್ತ ಬಂದಿವೆ. ಇವು ಅವರ ಆಲೋಚನಕ್ರಮವನ್ನು ರೂಪಕಾತ್ಮಕವಾಗಿ ಪ್ರತಿನಿಧಿಸುವಂತಹವು. ಇವು ಅವರ ದೈನಿಕ ಬದುಕಿನ ಹೋರಾಟದಲ್ಲೂ ಅವರನ್ನು ಚೈತನ್ಯಶೀಲವಾಗಿ ಇಟ್ಟಿರುವ ಸಂಗತಿಗಳು. ಇವನ್ನು ಆಧುನಿಕ ವೈಚಾರಿಕತೆ ಹಾಗೂ ರಾಜಕೀಯ ಪ್ರಜ್ಞೆಯೊಂದಿಗೆ ಕೂಡಿಸಿ, ಆಧುನಿಕ ಸಮಾಜದ ಸಮಸ್ಯೆಗಳನ್ನು ಮುಖಾಮುಖಿ ಮಾಡಲು ಬಳಸುವ, ಹೊಸ ಸಮಾಜವಾದಿ ಸಮಾಜವನ್ನು ಕಟ್ಟುವ ಪ್ರಯತ್ನ ಮಾಡಬಹುದು. ಇದನ್ನು ಪ್ರತಿಸಂಸ್ಕೃತಿ ಎಂದು ಕರೆಯಬಹುದು. ಇದು ಏಕಕಾಲಕ್ಕೆ ಜನಸಮುದಾಯಗಳ ಸಾಂಸ್ಕೃತಿಕ ಅಭಿವ್ಯಕ್ತಿಗಳ ಹಾಗೂ ಆಧುನಿಕ ಸಮಾಜವಾದಿ ರಾಜಕಾರಣದ ಏಕಕಾಲಿಕ ಅನುಸಂಧಾನದ ಹಾದಿ. ಇಂತಹ ಪರಿಕಲ್ಪನೆಯ ಮೂಲಕ ಕನ್ನಡ ಸಾಹಿತ್ಯ ಹಾಗೂ ಜಾನಪದವನ್ನು ವಿಶ್ಲೇಷಿಸುವ ಯತ್ನಗಳು ಕನ್ನಡದಲ್ಲಿ ನಡೆದವು (ತರೀಕೆರೆ, ೧೯೯೬).

ಭಾರತೀಯ ಸಂಸ್ಕೃತಿ

ಕನ್ನಡ ಸಂಸ್ಕೃತಿ ಚಿಂತನೆಯ ಒಂದು ಲಕ್ಷಣವೆಂದರೆ, ಅದು ಸಂಸ್ಕೃತಿ ಪರಿಕಲ್ಪನೆಯ ಬಗ್ಗೆ ಮಾತ್ರ ವಾಗ್ವಾದ ಮಾಡಿಕೊಂಡು ಬಂದಿಲ್ಲ. ಭಾರತೀಯ ಹಾಗೂ ಕರ್ನಾಟಕ ಸಂಸ್ಕೃತಿಗಳ ಪರಿಕಲ್ಪನೆಗಳ ಬಗ್ಗೆಯು ವಾಗ್ವಾದ ಮಾಡಿಕೊಂಡು ಬಂದಿದೆ. ಒಂದು ರಾಷ್ಟ್ರದ ಹೆಸರಲ್ಲಿ ಸಂಸ್ಕೃತಿಯನ್ನು ಗುರುತಿಸಲು ಯತ್ನಿಸಿದರೆ, ಮತ್ತೊಂದು ಪ್ರದೇಶದ ಹೆಸರಲ್ಲಿ ಗುರುತಿಸಲು  ಯತ್ನಿಸುತ್ತದೆ. ವಾಸ್ತವದಲ್ಲಿ ಇವೆರಡೂ ರಚನೆಗಳು; ಆದರೆ ಇವನ್ನು ಬಳಸುವವರು ತಮಗೆ ಬೇಕಾದ ಅರ್ಥವನ್ನು ತುಂಬಿಕೊಳ್ಳುವಂತಹವು. ಇವು ವಿಭಿನ್ನ ವರ್ಗ ಮತ್ತು ಸಮುದಾಯಗಳ ರಾಜಕೀಯ ಸೈದ್ಧಾಂತಿಕ ಆಶಯಗಳನ್ನು ಪ್ರತಿನಿಧಿಸುತ್ತ ಬಂದಿವೆ. ಈ ಕಾರಣಕ್ಕೆ ಇವು ರಾಜಕೀಯ ಪರಿಕಲ್ಪನೆಗಳೂ ಆಗಿವೆ. ಕರ್ನಾಟಕ ಸಂಸ್ಕೃತಿಗೆ ಹೋಲಿಸಿದರೆ, ಭಾರತೀಯ ಸಂಸ್ಕೃತಿ ಪರಿಕಲ್ಪನೆಯು ಅಧಿಕಾರಸ್ಥ ವರ್ಗಗಳ ಆಲೋಚನಕ್ರಮ, ಜೀವನಕ್ರಮ, ಇಷ್ಟಾನಿಷ್ಟಗಳನ್ನು ಪ್ರತಿನಿಧಿಸಿಕೊಂಡು ಬಂದಿದೆ. ೨೦ನೇ ಶತಮಾನದಲ್ಲಿ ಇದರ ಸ್ವರೂಪವನ್ನು ಗಮನಿಸಿದರೆ, ಇದು ವೈದಿಕಹಿಂದೂ ನೆಲೆಯ ಜೀವನ ವಿವರಗಳನ್ನುಳ್ಳ ಪರಿಕಲ್ಪನೆಯನ್ನಾಗಿ ಮಂಡಿಸಲು ಬಳಕೆಯಾಗಿರುವುದೇ ಹೆಚ್ಚು. ಇದನ್ನು ಎಸ್. ಶ್ರೀಕಂಠಶಾಸ್ತ್ರಿ ಅವರ “ಭಾರತೀಯ ಸಂಸ್ಕೃತಿ” (೧೯೫೪), ಅನಕೃ ಸಂಪಾದಿಸಿದ “ಭಾರತೀಯ ಸಂಸ್ಕೃತಿ ದರ್ಶನ” (೧೯೫೬) ಕೃತಿಗಳು ರುಜುವಾತು ಪಡಿಸುತ್ತವೆ. ಪ್ರಗತಿಶೀಲ ಲೇಖಕರೆನಿಸಿಕೊಂಡಿದ್ದ ಅನಕೃ ಕೂಡ ರಾಷ್ಟ್ರೀಯವಾದಿ ಚಿಂತನೆ ವಸಾಹತುಶಾಹಿ ಕಾಲಘಟ್ಟದಲ್ಲಿ ರಚಿಸಿಕೊಂಡ ವೈದಿಕಹಿಂದೂ ನೆಲೆಯಲ್ಲಿಯೇ ಭಾರತೀಯ ಸಂಸ್ಕೃತಿಯನ್ನು ವ್ಯಾಖ್ಯಾನಿಸಿದ್ದಾರೆ. ಅನ್ಯಧರ್ಮಗಳ ಬಗ್ಗೆ ಪ್ರಸ್ತಾಪವಿದ್ದರೂ ಅದು ಸಾಂಕೇತಿಕ  ಪ್ರಾತಿನಿಧ್ಯದಲ್ಲಿ ಬರುತ್ತದೆ. ವಿಚಿತ್ರ ಎಂದರೆ ಕುವೆಂಪು ಕೂಡ ಭಾರತೀಯ ಸಂಸ್ಕೃತಿಯ ವ್ಯಾಖ್ಯೆಯನ್ನು ವೈದಿಕ ಕೇಂದ್ರದಲ್ಲಿಯೇ ಮಾಡುವುದು (ಮುನ್ನುಡಿ, ಶ್ರೀಕಂಠಶಾಸ್ತ್ರಿ, ೧೯೫೪). “ಕರ್ಣಾಟಕ ಸಂಸ್ಕೃತಿ ಸಮೀಕ್ಷೆ” ಕೃತಿಯಲ್ಲಿ ಎಚ್.ತಿಪ್ಪೇರುದ್ರಸ್ವಾಮಿಯವರು ಬರೆದ ಮೊದಲ ಅಧ್ಯಾಯದ ಹೆಸರು ‘ಭಾರತೀಯ ಸಂಸ್ಕೃತಿ’. ಅದರಲ್ಲಿ ಅವರು ಭಾರತೀಯ ಸಂಸ್ಕೃತಿಯನ್ನು ವೈದಿಕಬ್ರಾಹ್ಮಣ ಕೇಂದ್ರದಲ್ಲಿ ವ್ಯಾಖ್ಯಾನಿಸುತ್ತಾರೆ. ಕನ್ನಡದಲ್ಲಿ ಈ ಅಭ್ಯಾಸಕ್ಕೆ ಈಚಿನ ಸಾಕ್ಷಿ ಎಂದರೆ ಚಿದಾನಂದಮೂರ್ತಿಯವರ “ವೀರಶೈವ ಧರ್ಮ: ಭಾರತೀಯ ಸಂಸ್ಕೃತಿ”. ಇದರಲ್ಲಿ ಅವರು ಹೇಗೆ ವೀರಶೈವ ಧರ್ಮವು ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ ಎಂದು ಪ್ರತಿಪಾದಿಸುತ್ತಾರೆ. ಈ ಪ್ರತಿಪಾದನೆಯಲ್ಲಿ ಕೊನೆಗೂ ಅವರು ಲಿಂಗಾಯತ ಧರ್ಮದ ವಿಶಿಷ್ಟತೆಯನ್ನು ಗುರುತಿಸುವುದಕ್ಕೆ ಬದಲಾಗಿ, ಅದು ಹೇಗೆ ಸಂಸ್ಕೃತ ವೈದಿಕ ವಾಙ್ಮಯದಿಂದ ಭಿನ್ನವಲ್ಲ ಎಂಬುದನ್ನು ಪ್ರತಿಪಾದಿಸಲು ಯತ್ನಿಸಿದ್ದಾರೆ.

ಆದರೆ ವೈದಿಕ ಅಥವಾ ಬ್ರಾಹ್ಮಣ ಕೇಂದ್ರದ ಮೂಲಕ ‘ಭಾರತೀಯ ಸಂಸ್ಕೃತಿ’ಯನ್ನು ವ್ಯಾಖ್ಯಾನಿಸುವುದನ್ನು ವಿರೋಧಿಸುವ ಒಂದು ವೈಚಾರಿಕ ಧಾರೆ ಮೊದಲಿನಿಂದಲೂ ಕನ್ನಡದಲ್ಲಿದೆ. ‘ಭಾರತೀಯ’ ಎಂಬ ವಿಶಾಲ ಪರಿಕಲ್ಪನೆಯ ಹಿಂದೆ ಉಚ್ಚವರ್ಗಗಳು ತಮ್ಮನ್ನು ಅಡಗಿಸಿಕೊಳ್ಳುತ್ತವೆ ಎಂದು ಇದು ಭಾವಿಸುತ್ತದೆ. ಇದಕ್ಕೆ ಅನಂತಮೂರ್ತಿ ಹಾಗೂ ತೇಜಸ್ವಿ ಅವರ ನಡುವೆ ನಡೆದ ಒಂದು ವಾಗ್ವಾದವು ಪ್ರಾತಿನಿಧಿಕವಾಗಿದೆ. ‘ಭಾರತೀಯ ಸಂಸ್ಕೃತಿ ಮತ್ತು ಲೇಖಕ’ ಎಂಬ ಲೇಖನದಲ್ಲಿ ಅನಂತಮೂರ್ತಿ ಅವರು, ಕುವೆಂಪು ಅವರನ್ನು ವಿಶ್ಲೇಷಿಸುತ್ತ “ಬ್ರಾಹ್ಮಣ ಧರ್ಮದ ಹೊರಗೆ ಹುಟ್ಟಿ ಪ್ರಕೃತಿಗೆ ಹತ್ತಿರವಾಗಿ ಬೆಳೆದ ಇವರಿಗೆ, ಈವತ್ತಿಗೂ ನಮ್ಮ ಸಂಸ್ಕೃತಿಯ ಬಗ್ಗೆ ರೋಷ ಹೊಗೆಯಾಡುತ್ತಿರುವುದನ್ನು ಕಾಣಬಹುದು” ಎಂದು ಬರೆದರು (೧೯೯೪:೧೯೯). ಇದಕ್ಕೆ ಪ್ರತಿಕ್ರಿಯೆಯಾಗಿ ತೇಜಸ್ವಿಯವರು ‘ಕರ್ನಾಟಕ ಸಂಸ್ಕೃತಿ ವಿಶ್ಲೇಷಣೆ’ ಎಂಬ ಲೇಖನ ಬರೆದರು. ತೇಜಸ್ವಿಯವರ ಪ್ರಕಾರ ಅನಂತಮೂರ್ತಿಯವರ ಲೇಖನದಲ್ಲಿ ‘ನಮ್ಮ’ ಎಂದರೆ ಬ್ರಾಹ್ಮಣ ಸಂಸ್ಕೃತಿ ಎಂದರ್ಥ. ಆದರೆ ಫ್ರೆಂಚ್ ಇಟಾಲಿಯನ್ ಜರ್ಮನ್ ಸಂಸ್ಕೃತಿಗಳಂತೆ ಭಾರತೀಯ ಸಂಸ್ಕೃತಿ ಎಂಬುದೊಂದು ವಾಸ್ತವದಲ್ಲಿ ಇಲ್ಲ. ಆದ್ದರಿಂದ ‘ಭಾರತೀಯ ಸಂಸ್ಕೃತಿ’ ಎಂದಾಗಲೆಲ್ಲ ಅದು ಬ್ರಾಹ್ಮಣ ವೈದಿಕ ಸಂಸ್ಕೃತಿ ಎಂದೇ ಅರ್ಥವಾಗುತ್ತದೆ ಎಂದು ಹೇಳುತ್ತ, “ಆದ್ದರಿಂದಲೇ ಭಾರತದಲ್ಲಿನ ಸಂಸ್ಕೃತಿಗಳನ್ನು ನಾವು ಅರಿಯ ಹೊರಟಾಗ ಭಾರತೀಯ ಸಂಸ್ಕೃತಿ ಎಂಬ ಪದವನ್ನು ನಾವು ಅಖೈರಾಗಿ ಉಚ್ಚಾಟಿಸಬೇಕಾಗುತ್ತದೆ” ಎಂಬ ನಿಲುವಿಗೆ ಬರುತ್ತಾರೆ (೧೯೭೪:೮೭). ಪೋಲಂಕಿ ರಾಮಮೂರ್ತಿ ಅವರು ಕೂಡ ವೈದಿಕ/ಬ್ರಾಹ್ಮಣ ಸಂಸ್ಕೃತಿಯನ್ನು ಉಪಾಯವಾಗಿ ಹೇಳಲು ಬಳಕೆಯಾಗುತ್ತಿರವು ಭಾರತೀಯ ಸಂಸ್ಕೃತಿ ಪರಿಕಲ್ಪನೆಯನ್ನು ತಮ್ಮ ‘ಭಾರತೀಯ ಸಂಸ್ಕೃತಿ: ಅಂತರಂಗ ಬಹಿರಂಗ’ ಎಂಬ ಲೇಖನದಲ್ಲಿ ವಿಮರ್ಶೆಗೆ ಒಳಪಡಿಸುತ್ತಾರೆ (೧೯೯೪).

ಕನ್ನಡದಲ್ಲಿ ಇನ್ನೊಂದು ಧಾರೆಯಿದೆ. ಇದು ಭಾರತೀಯ ಸಂಸ್ಕೃತಿಯನ್ನು ಹೀಗೆ ಪರ ವಿರೋಧವಾದ ಸೈದ್ಧಾಂತಿಕ ಆಶಯಗಳಲ್ಲಿ ವಿಶ್ಲೇಷಿಸುವುದಿಲ್ಲ. ಬದಲಾಗಿ ಎಲ್ಲ ಸಮುದಾಯಗಳ ಪಾತ್ರವೂ ಇರುವ ಒಂದು ಉದಾರವಾದಿ ಪರಿಕಲ್ಪನೆಯನ್ನಾಗಿ ಮಂಡಿಸುತ್ತದೆ. ಉದಾ: ಸಿಂಪಿ ಲಿಂಗಣ್ಣ ಅವರ “ಭಾರತೀಯ ಸಂಸ್ಕೃತಿಯ ಸಂಘಟನೆ” (೧೯೬೭). ಜೈನ ಬೌದ್ಧ ಇಸ್ಲಾಂ ಮುಂತಾದ ಧರ್ಮಗಳ ಕಾಣಿಕೆಯೂ ಭಾರತೀಯ ಸಂಸ್ಕೃತಿಯಲ್ಲಿ ಕೂಡಿದೆ ಎಂದು ಅವರು ಅದರ ವ್ಯಾಪ್ತಿಯನ್ನು ವಿಸ್ತರಿಸುತ್ತಾರೆ.

ಕರ್ನಾಟಕ ಸಂಸ್ಕೃತಿ

ಇದನ್ನು ಸಾಮಾನ್ಯವಾಗಿ ಭಾರತೀಯ ಸಂಸ್ಕೃತಿಯೆಂಬ ಮರದ ಕೊಂಬೆಯಂತೆ, ಅಥವಾ ಭಾರತೀಯ ಸಂಸ್ಕೃತಿ ತಾಯಿಯ ಮಗಳಂತೆ ಚಿತ್ರಿಸಿಕೊಂಡು ಬರಲಾಗಿದೆ. ತಾಯಿಮಗಳ ರೂಪಕದಲ್ಲಿರುವ ಈ ಸಂಬಂಧ ಸ್ಥಾಪನೆ ಕುವೆಂಪು ಅವರ ‘ಭಾರತ ಜನನಿಯ ತನುಜಾತೆ’ ಎಂಬ ಪದ್ಯದಿಂದ ಶುರುವಾಗುತ್ತದೆ. ತಿಪ್ಪೇರುದ್ರಸ್ವಾಮಿ ತಮ್ಮ ಪುಸ್ತಕದಲ್ಲಿ ‘ಭಾರತೀಯ ಸಂಸ್ಕೃತಿ’ ಅಧ್ಯಾಯದ ಬಳಿಕ ‘ಕರ್ನಾಟಕ ಸಂಸ್ಕೃತಿ ಸಮೀಕ್ಷೆ’ ಆರಂಭಿಸುವುದು ಕೂಡ ಈ ದೃಷ್ಟಿಕೋನದ ಫಲ. ದೇವುಡು ಅವರು “ಕರ್ಣಾಟಕ ಸಂಸ್ಕೃತಿ” (೧೯೩೫) ಕೃತಿಯಲ್ಲಿ ಕರ್ನಾಟಕದ ಸಂಸ್ಕೃತಿಗೂ ಭಾರತೀಯ ಸಂಸ್ಕೃತಿಗೂ ಇರುವ ವ್ಯತ್ಯಾಸ ವಿವರಿಸುತ್ತಾರೆ. ಆದರೆ ಅವು ಅಭಿನ್ನ ಎಂಬ ಸಾಮರಸ್ಯಕ್ಕೆ ಒತ್ತುಕೊಡುತ್ತಾರೆ. ಭಾರತದ ವಿಮೋಚನೆಗೂ ಕರ್ನಾಟಕದ ಏಕೀಕರಣಕ್ಕೂ ಏಕಕಾಲಕ್ಕೆ ಪ್ರಯತ್ನಗಳು ನಡೆಯುತ್ತಿದ್ದ ಕಾಲವದಾಗಿತ್ತು ಎಂಬುದನ್ನು ನೆನೆದರೆ, ಈ ಸಾಮರಸ್ಯವಾದದ ಅರ್ಥಗೊತ್ತಾಗುತ್ತದೆ. ಈ ವಿಷಯದಲ್ಲಿ ಆಲೂರು ವೆಂಕಟರಾಯರು ಕೊಂಚ ಭಿನ್ನ. ಅವರು ತಮ್ಮ “ಕರ್ನಾಟಕತ್ವದ ವಿಕಾಸ”ದಲ್ಲಿ (೧೯೫೭) ಕರ್ನಾಟಕತ್ವವನ್ನು (ಅಂದರೆ ಕರ್ನಾಟಕ ಸಂಸ್ಕೃತಿಯನ್ನು) ಭಾರತತ್ವದ ಸಹಪರಿಕಲ್ಪನೆಯನ್ನಾಗಿ ಮಂಡಿಸುತ್ತಾರೆ. ಆದರೆ ತೇಜಸ್ವಿಯವರು ಕರ್ನಾಟಕ ಸಂಸ್ಕೃತಿಯನ್ನು ಭಾರತೀಯವಾದುದರ ಎದುರಾಳಿ ಪರಿಕಲ್ಪನೆಯನ್ನಾಗಿ ಮಂಡಿಸುತ್ತಾರೆ. ಕನ್ನಡ ಸಂಸ್ಕೃತಿ, ಕರ್ನಾಟಕ ಸಂಸ್ಕೃತಿ ಎಂಬ ಪರಿಕಲ್ಪನೆಗಳನ್ನು ಕನ್ನಡದಲ್ಲಿ ಮಾಸ್ತಿಯವರಿಂದ ಶುರುಮಾಡಿ, ಚಿದಾನಂದಮೂರ್ತಿ ತನಕ ಅನೇಕರು ಮಂಡಿಸಿದ್ದಾರೆ. ಅವೆಲ್ಲವೂ ಚರಿತ್ರೆಯನ್ನು ನೋಡುವ ದೃಷ್ಟಿಕೋನದ ಭಿನ್ನಭಿನ್ನ ಪಾಠಗಳಂತಿವೆ. ಆದರೆ ಶಂ.ಬಾ. ಜೋಶಿ (“ಕರ್ಣಾಟ ಸಂಸ್ಕೃತಿಯ ಪೂರ್ವಪೀಠಿಕೆ”), ಎಸ್.ಎಸ್. ಹಿರೇಮಠ (“ಕರ್ನಾಟಕ ಸಂಸ್ಕೃತಿ ಪರಂಪರೆ-ಜಾತ್ರೆಗಳು/ಹಬ್ಬಗಳು”), ಕಪಟರಾಳ ಕೃಷ್ಣರಾವ್ (“ಕರ್ನಾಟಕ ಸಂಸ್ಕೃತಿ ಸಂಶೋಧನೆ”) ಅವರು ಮಂಡಿಸುವ ವ್ಯಾಖ್ಯಗಳು ಸಮುದಾಯಗಳ ಜೀವನ ವಿವರಗಳಿಂದ ಕೂಡಿದವು. ಅನಂತಮೂರ್ತಿಯವರ ‘ಭಾರತೀಯ ಸಂಸ್ಕೃತಿ’ ಪರಿಕಲ್ಪನೆಗೆ ಪ್ರತಿಕ್ರಿಯಿಸುತ್ತ ತೇಜಸ್ವಿ ಬರೆದ ‘ಕರ್ನಾಟಕ ಸಂಸ್ಕೃತಿ ವಿಶ್ಲೇಷಣೆ’ ಲೇಖನವು ಈ ವಾಗ್ವಾದವನ್ನು ಮತ್ತಷ್ಟು ಮೂರ್ತವಾದ ಶೂದ್ರಪ್ರಜ್ಞೆಯ ಭಾಗವಾಗಿಸಿತು. ಹೀಗೆ ಸಂಸ್ಕೃತಿ ಪರಿಕಲ್ಪನೆಯಂತೆಯೇ ಭಾರತೀಯ ಹಾಗೂ ಕರ್ನಾಟಕ ಸಂಸ್ಕೃತಿ ಚಿಂತನೆಗಳು ತಾತ್ವಿಕ ರೂಪಿಯಾದ ವಾಗ್ವಾದಗಳಾಗಿವೆ. ಈ ವಾಗ್ವಾದಗಳಲ್ಲಿನ ಭಿನ್ನಭಿಪ್ರಾಯಗಳು ಮೂಲತಃ ರಾಜಕೀಯ ಸಾಮಾಜಿಕವಾದ ಭಿನ್ನ ದೃಷ್ಟಿಕೋನಗಳೇ ಆಗಿವೆ.

ಪರಿಕಲ್ಪನೆಗಳ ಸಾವು

ಕನ್ನಡದಲ್ಲಿ ಅನಂತಮೂರ್ತಿಯವರ ‘ಜೀರ್ಣಾಗ್ನಿ’, ಗಿರಡ್ಡಿ ಗೋವಿಂದರಾಜ ಅವರ ‘ಸಾತತ್ಯ’, ಬಿಳಿಮಲೆ ಅವರ ‘ಶಿಷ್ಟಪರಿಶಿಷ್ಟ’ ಮುಂತದ ಪರಿಕಲ್ಪನೆಗಳು ಕಾಣಿಸಿಕೊಂಡಿವೆ. ಇವು ಕನ್ನಡದ ಸಾಂಸ್ಕ್ರತಿಕ ವಾಗ್ವಾದಕ್ಕೆ ಒಂದು ಖದರನ್ನು ಕೊಟ್ಟಿವೆ. ಅದರ ತಾತ್ವಿಕ ಆಯಾಮಗಳನ್ನು ತೀವ್ರವಾಗಿಸಿವೆ. ಮೇಲಿನ ವಾಗ್ವಾದ ಹಾಗೂ ಪರಿಕಲ್ಪನೆಗಳು, ಸಂಸ್ಕೃತಿಯೆಂಬುದು ಮೂಲತಃ ರಾಜಕೀಯವಾದುದು ಎಂಬುದನ್ನು ಮತ್ತೆಮತ್ತೆ ರುಜುವಾತು ಮಾಡುತ್ತವೆ. ಈ ಪರಿಕಲ್ಪನೆಗಳು ಶೈಕ್ಷಣಿಕವಾಗಿ ಸಮಾಜವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಕೆಲವು ವಿಶಿಷ್ಟ ವಿಧಾನವನ್ನು ಕೊಡುತ್ತವೆ. ಹೊಸನೋಟ ಪಡೆಯಲು ದೃಷ್ಟಿಕೋನಗಳನ್ನು ಒದಗಿಸುತ್ತವೆ. ಇದರಿಂದ ಸಾಹಿತ್ಯ, ಭಾಷೆ, ಧರ್ಮ, ತತ್ವಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಮತ್ತಷ್ಟು ತೀವ್ರವಾಗಿ, ಖಚಿತವಾಗಿ ಗ್ರಹಿಸಲು ಸಹಾಯಕವಾಗುತ್ತದೆ. ಇದು ಸಾಂಸ್ಕೃತಿಕ ಅಧ್ಯಯನಗಳಲ್ಲಿ ಪರಿಕಲ್ಪನೆಗಳಿಂದಾಗುವ ದೊಡ್ಡ ಪ್ರಯೋಜನ.

ಕಾಲಕಳೆದಂತೆ ಪರಿಕಲ್ಪನೆಗಳಿಗೆ ಅವು ಹುಟ್ಟಿದ ಹೊಸತರಲ್ಲಿದ್ದ ದಾರ್ಶನಿಕ ತೀವ್ರತೆ, ರಾಜಕೀಯವಾದ ಉಪಯುಕ್ತತೆಗಳು ನಂತರ ಉಳಿಯುವುದಿಲ್ಲ. ಅವು ಹಳತಾಗುತ್ತವೆ. ೧೯೭೦ರ ದಶಕಗಳಲ್ಲಿ ‘ಸಂಸ್ಕೃತೀಕರಣ’ ಪರಿಕಲ್ಪನೆಗೆ ಭಾರೀ ಸ್ವಾಗತ ಸಿಕ್ಕಿತು. ಭಾರತೀಯ ಸಮಾಜವನ್ನು ಅರ್ಥಮಾಡಿಕೊಳ್ಳಲು ಸಿಕ್ಕ ಕೈದೀವಿಗೆ ಎಂಬಂತೆ ಅದನ್ನು ವಿದ್ವಾಂಸರು ಬಳಸಿದರು. ಆದರೆ ನಂತರ ಅದರ ಮೇಲೆ ಭಿನ್ನಾಭಿಪ್ರಾಯ ಶುರುವಾದವು. ಸ್ವತಃ ಶ್ರೀನಿವಾಸ್ ಅವರೇ ಅದನ್ನು ಪರಿಷ್ಕರಿಸಿದರು. ಆದರೂ ೧೯೯೦ರ ದಶಕದಲ್ಲಿ ಈ ಪರಿಕಲ್ಪನೆ ತೀವ್ರವಾದ ವಿಮರ್ಶೆಗೆ ಗುರಿಯಾಯಿತು. ಇದಕ್ಕೆ ಸರಳವಾದ ಕಾರಣವೆಂದರೆ, ಪರಿಕಲ್ಪನೆಗೆ ಸಿಗದಂತೆ ಸಾಹಿತ್ಯ ಸಮಾಜವು ಬದಲಾವಣೆ ಆಗಿರುವುದು. ಆಗ ಇದೇ ಪರಿಕಲ್ಪನೆಗಳಿಗೆ ಹೊಸ ಅರ್ಥಧಾರಣೆಯ ಅಗತ್ಯ ಉಂಟಾಗುತ್ತದೆ. ಅವನ್ನು ಬಿಟ್ಟುಕೊಟ್ಟು ಹೊಸ ಪರಿಕಲ್ಪನೆ ಹುಟ್ಟಿಸಿಕೊಳ್ಳಬೇಕಾಗುತ್ತದೆ. ಅಧ್ಯಯನಗಳು ಯಾವಾಗಲೂ ಹೊಸಹೊಸ ಪರಿಕಲ್ಪನೆಗಳನ್ನು ಹುಟ್ಟಿಸುತ್ತ, ಬಳಸುತ್ತ, ವಿಸರ್ಜಿಸುತ್ತ ಬಂದಿವೆ. ಈ ಪ್ರಕ್ರಿಯೆಯು ಬದಲಾಗುತ್ತಿರುವ ಸಮಾಜದ ಜತೆ ತಮ್ಮನ್ನು ಬದಲಿಸಕೊಳ್ಳುವ ಅಧ್ಯಯನ ವಿಧಾನಗಳ ಚಲನಶೀಲತೆಗೆ ಸಂಕೇತ. ಈ ಅರ್ಥದಲ್ಲಿ ಪರಿಕಲ್ಪನೆಗಳಿಗೆ ಸಾವಿದೆ. ಈ ಸಾವು ಹೊಸಹುಟ್ಟಿಗೆ ಅನಿವಾರ್ಯವೂ ಹೌದು. ಡಿ. ಆರ್. ನಾಗರಾಜ ಅವರ ‘ಹಳೆಯ ವಿಕಲ್ಪಗಳಿಂದ ಬಿಡುಗಡೆಯ ಆಸೆ’ಯು ಪರಿಕಲ್ಪನೆಗಳ ಸಾವಿಗೆ ಇನ್ನೊಂದು ನಿದರ್ಶನ. ವಾಸ್ತವವಾಗಿ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಪರಿಕಲ್ಪನೆಗಳನ್ನು ಕಳಚಿ ಬಿಸಾಡುವ ಪ್ರಕ್ರಿಯೆಗಿಂತ, ಅವನ್ನು ಸೀಳಿಕೊಂಡು ಹೊಸ ರೂಪಧಾರಣೆ ಮಾಡುವ ಕ್ರಿಯೆಯೇ ಅರ್ಥಪೂರ್ಣ. ಇದು ಪರಿಷ್ಕರಣೆಯಲ್ಲ. ಆಗ ಪರಿಕಲ್ಪನೆಗಳು ಕೇವಲ ಸಾಯುವುದಿಲ್ಲ, ಚಲನಶೀಲವಾದ ಮರುಹುಟ್ಟನ್ನೂ ಪಡೆಯುತ್ತವೆ.

* * *