ಚಿಂತನೆಗಳ ಮೂಲಕ ಪ್ರೇರಣೆ

ಡಿವಿಜಿ, ಮಾಸ್ತಿ, ತೇಜಸ್ವಿ, ಅನಂತಮೂರ್ತಿ, ಲಂಕೇಶ್, ಸುಬ್ಬಣ್ಣ, ಡಿ.ಆರ್. ನಾಗರಾಜ, ಬರಗೂರು ಇವರು ಕನ್ನಡದಲ್ಲಿ ಹೆಚ್ಚು ಪ್ರಭಾವ ಬೀರಿದ ಸಂಸ್ಕೃತಿ ಚಿಂತಕರು. ನಾಗರಾಜ ಅವರನ್ನು ಹೊರತು ಪಡಿಸಿದರೆ, ಹೆಚ್ಚಿನವರು ಶಂ.ಬಾ.ಜೋಶಿ, ಕಲುಬುರ್ಗಿ, ಚಿದಾನಂದಮೂರ್ತಿ, ಸುಬ್ಬಣ್ಣ ಅವರಂತೆ ಸ್ವತಃ ಸಾಂಸ್ಕೃತಿಕ ಅಧ್ಯಯನ ಕೈಗೊಂಡು ಮಾದರಿಗಳನ್ನು ನಿರ್ಮಿಸಿದವರಲ್ಲ. ತಮ್ಮ ಚಿಂತನೆಗಳಿಂದ ಸಾಂಸ್ಕೃತಿಕ ವಾಗ್ವಾದದ ವಾತಾವರಣವನ್ನು ರೂಪಿಸಿದವರು. ಆಲೋಚನ ಕ್ರಮಗಳ ಮೇಲೆ ಪ್ರಭಾವ ಬೀರಿದವರು. ತಮ್ಮ ಪ್ರಾಸಂಗಿಕ ಚಿಂತನೆಗಳ ಮೂಲಕ ಹೊಸ ಹೊಸ ತಲೆಮಾರಿನ ಅಧ್ಯಯನ ಕಾರರಿಗೆ ಪ್ರೇರಣೆ ಕೊಟ್ಟವರು. ನಟರಾಜ ಹುಳಿಯಾರ್ ಅವರ ಒಂದು ಟಿಪ್ಪಣಿಯನ್ನು ಇಲ್ಲಿ ಉಲ್ಲೇಖಿಸಬಹುದು:

ಡಿ.ಆರ್.ನಾಗರಾಜ್ ಅವರ ಜೊತೆ ಅಡ್ಡಾಡುತ್ತಾ ನನ್ನ ರಿಸರ್ಚಿಗೆ ಸಂಬಂಧಪಟ್ಟದ್ದೇನನ್ನೋ ಚರ್ಚಿಸುತ್ತಿರುವಾಗ ಇದ್ದಕ್ಕಿದ್ದಂತೆ ಅವರು ರೈತರು: ಒಂದು ರಾಜಕೀಯ ಟಿಪ್ಪಣಿ ವಾದದ ಸ್ವರೂಪವೇನೆಂಬುದನ್ನೂ, ಅದು ರೈತಸಂಘದ ನವಫ್ಯೂಡಲ್ವಾದವನ್ನು ಮುರಿಯಲೆತ್ನಿಸುವ ರೀತಿಯನ್ನೂ ವಿವರಿಸಿದ ಬೆಳದಿಂಗಳ ರಾತ್ರಿ ನನಗಿನ್ನೂ ಚೆನ್ನಾಗಿ ನೆನಪಿದೆ. ಟಿಪ್ಪಣಿ ಬರೆದ ಲಂಕೇಶ್ ಹಾಗೂ ಅದನ್ನು ಅದ್ಬುತವಾಗಿ ವಿಶ್ಲೇಷಿಸಿದ ಡಿಆರ್. ಇಬ್ಬರ ಬಗ್ಗೆಯೂ ಅವತ್ತು ನನ್ನಲ್ಲಿ ಕೃತಜ್ಞತೆ ಮತ್ತು ಅಪಾರ ಹೆಮ್ಮೆ ಮೂಡಿತು. ನಾವು ನಾಯಕರನ್ನು ನೋಡಬೇಕಾದ ರೀತಿಯ ಬಗ್ಗೆ ನನಗೆ ಅಂದು ದೊರೆತ ಸ್ಪಷ್ಟತೆ ಕರ್ನಾಟಕ ನೂರಾರು ತರುಣ ತರುಣಿಯರಿಗೂ ಇಂಥ ಟಿಪ್ಪಣಿಗಳಿಂದ ದೊರೆತಿರಬಹುದು. ಮತೀಯವಾದ ಹಾದಿ ತಪ್ಪಿಸಿದ ಜನರ ಮನಃಪರಿವರ್ತನೆಯನ್ನೇ ಮನಸ್ಸಿನಲ್ಲಿಟ್ಟುಕೊಂಡು ಬರೆದ ಇಟ್ಟಿಗೆ ಪವಿತ್ರವಲ್ಲ ; ಜೀವ ಪವಿತ್ರ  ರೀತಿಯ ಲೇಖನಗಳು ಇವುಗಳಲ್ಲೆಲ್ಲ ಕಾಣುವ ಸಾಂಸ್ಕೃತಿಕ ವಿಶ್ಲೇಷಣೆಗಳು ಎಂದೂ ಮುಕ್ಕಾಗದಂತಿವೆ (ಲಂಕೇಶ್, ೧೯೯೧).

ಶೈಕ್ಷಣಿಕ ಶಿಸ್ತಿಗೊಳಪಟ್ಟು ಯಾವುದೇ ಸಾಂಸ್ಕೃತಿಕ ಅಧ್ಯಯನ ಮಾಡದ ಚಿಂತಕರು ಬೀರುವ ಪ್ರಭಾವವನ್ನು ಸೂಚಿಸುತ್ತಿರುವ ಕಾರಣಕ್ಕೆ ಈ ಉಲ್ಲೇಖವು ಮಹತ್ವದ್ದಾಗಿದೆ. ಲಂಕೇಶರಿಗೆ ಹೋಲಿಸಿದರೆ ಅನಂತಮೂರ್ತಿ ಹಾಗೂ ತೇಜಸ್ವಿಯವರ ಚಿಂತನೆಗಳು ಕನ್ನಡದಲ್ಲಿ ಹೆಚ್ಚು ವಾಗ್ವಾದ ಹುಟ್ಟಿಸಿದವು. ಆದರೂ ಮೂರ್ತಿಯವರ ಪ್ರಭಾವ ಹೊಸ ತಲೆಮಾರಿನವರ ಮೇಲೆ ಕಡಿಮೆ. ಇದಕ್ಕೆ ಒಂದು ಕಾರಣ, ಅವರ ಈಚಿನ ಸಂಸ್ಕೃತಿ ಚಿಂತನೆಗಳಿಗೆ ರಾಜಕೀಯ ಕ್ರಿಯಾಶೀಲತೆಯ ಮುಖ ಕಡಿಮೆ ಆಗಿರುವುದು; ಗಾಂಧಿವಾದದ ಒಲವು ಸಾಂಪ್ರದಾಯಕ ಸಮಾಜದತ್ತ ಸೆಳೆದುಬಿಡುವುದೂ ಇರಬಹುದು; ಮಾರ್ಕ್ಸ್‌ವಾದಿ ಪ್ರೇರಣೆಗಳನ್ನು ಸೂಕ್ಷ್ಮವಾಗಿ ನಿರಾಕರಿಸುವ ಕೆಲಸವೂ ಇರಬಹುದು. ಇವರಿಗೆ ಹೋಲಿಸಿದರೆ, ಜಿ. ರಾಜಶೇಖರ, ಕೆ.ವಿ.ಸುಬ್ಬಣ್ಣ, ಬರಗೂರು, ಲಂಕೇಶ್, ತೇಜಸ್ವಿ ಚಿಂತನೆಗಳಿಗೆ ಸಾಮಾಜಿಕ ಕ್ರಿಯಾಶೀಲತೆಯ ಮುಖ ಹೆಚ್ಚು.

ಲಂಕೇಶ್, ತೇಜಸ್ವಿ, ಅನಂತಮೂರ್ತಿ ಅವರ ಚಿಂತನೆಗಳು ಕನ್ನಡ ವೈಚಾರಿಕ ಪ್ರಜ್ಞೆಯನ್ನು ಜೀವಂತವಾಗಿಟ್ಟಿವೆ. ವರ್ತಮಾನದ ಸಮಾಜವನ್ನು ಅರಿಯಲು ಮತ್ತು ವಿಶ್ಲೇಷಿಸಲು ಅವರ ಚಿಂತನೆಗಳು ನೆರವಾಗಿವೆ. ಆದರೆ ಕನ್ನಡದಲ್ಲಿ ನಡೆಯುವ ಅಕಡಮಿಕ್ ಕ್ಷೇತ್ರದ ಅಧ್ಯಯನಗಳ ಮೇಲೆ ಈಗಲೂ ಗಾಢ ಪ್ರಭಾವ ಇರಿಸಿಕೊಂಡಿರುವ ಹಾಗೂ ತಮ್ಮ ಅಧ್ಯಯನಗಳ ಮೂಲಕ ಮಾದರಿ ನಿರ್ಮಿಸಿರುವವರಲ್ಲಿ ಕಲುಬುರ್ಗಿ, ಚಿದಾನಂಮೂರ್ತಿ, ಡಿ.ಆರ್.ನಾಗರಾಜ ಮುಖ್ಯರು. ವಿಶ್ವವಿದ್ಯಾಲಯಗಳಲ್ಲಿ ಬಹುಕಾಲ ಪ್ರಾಧ್ಯಾಪಕರಾಗಿ, ತಮ್ಮ ವಿದ್ಯಾರ್ಥಿಗಳ ಮೂಲಕ ಸಂಶೋಧನೆ ಕೆಲಸ ಮಾಡಿರುವುದು ಇದಕ್ಕೆ ಕಾರಣವಿರಬೇಕು.

ಅನುಯಾಯಿಗಳಿಲ್ಲದ ಮಾದರಿಗಳು

ಚಿದಾನಂದಮೂರ್ತಿ ಹಾಗೂ ಕಲಬುರ್ಗಿ ಅವರ ಅಧ್ಯಯನ ವಿಧಾನಗಳ ಪ್ರಭಾವ ಕನ್ನಡದಲ್ಲಿ ವ್ಯಾಪಕವಾಗಿರಲು ಕಾರಣ-೧ ಅವರು ವಿಶ್ವವಿದ್ಯಾಲಯಗಳಂಥ ಪ್ರಭಾವಶಾಲಿ ಸಂಸ್ಥೆಗಳಲ್ಲಿ ಇದ್ದುದು. ೨. ಗತಕಾಲವನ್ನುಜ ಪುನಾರಚಿಸುವ ಅಧ್ಯಯನ ವಿಧಾನವು ನಮ್ಮ ರಾಜಕಾರಣದ ಸಂದರ್ಭದಲ್ಲಿ ಪ್ರಾಮುಖ್ಯತೆ ಪಡೆದಿದ್ದುದು. ಇವರಿಗೆ ಹೋಲಿಸದರೆ, ಸಾಂಸ್ಕೃತಿಕ ಅಧ್ಯಯನಗಳನ್ನು ಒಂದು ನಿರ್ದಿಷ್ಟ ತತ್ವದರ್ಶನವನ್ನು ಕಾಣಲು, ಜೀವಮಾನವಿಡೀ ಬೆನ್ನುಹತ್ತಿದ್ದ, ಕನ್ನಡದ ದೊಡ್ಡ ಸಂಸ್ಕೃತಿ ಚಿಂತಕರೂ ಶೋಧಕರೂ ಆದ ಶಂಬಾ ಜೋಶಿಯವರ ಪ್ರಭಾವ ಅಷ್ಟು ವ್ಯಾಪಕವಾಗಿಲ್ಲ. ಅಧ್ಯಯನವನ್ನು ಒಂದು ತಾತ್ವಿಕ ಮೌಲ್ಯಗಳ ಶೋಧವನ್ನಾಗಿ ಮಾಡಿಕೊಂಡು ಸುದೀರ್ಘವಾದ ಬೌದ್ಧಿಕ ಪಯಣ ಮಾಡಿದ ಶಂಬಾ, ಅನುಯಾಯಿಗಳಿಲ್ಲದ ಗುರುವಿನಂತೆ ಕಾಣುತ್ತಾರೆ. ಆದರೆ ಅವರ ಅಧ್ಯಯನ ವಿಧಾನದ ಮುಂದುವರಿಕೆಯಾಗಿ ಎಸ್.ಎಸ್.ಹಿರೇಮಠ, ಬಸವರಾಜ ಕಲ್ಗುಡಿ ಮುಂತಾದ ಕೆಲವರನ್ನು ಹೆಸರಿಸಬಹುದು. ಆದರೂ ಶಂಬಾ ಏಕಾಂಗಿಯಾಗಿ ಕಾಣುತ್ತಾರೆ.

ಅವರ ಪ್ರಭಾವ ವ್ಯಾಪಕವಾಗದಿರಲೂ ಅಥವಾ ಅವರು ತಮ್ಮ ಅಧ್ಯಯನದಲ್ಲಿ ಎತ್ತಿದ ಪ್ರಶ್ನೆಗಳನ್ನು ಮುಂದುವರೆಸಲು ಅನೇಕ ತಾತ್ವಿಕ ಹಾಗೂ ಶೈಕ್ಷಣಿಕ ಕಷ್ಟಗಳಿದ್ದಂತೆ ಕಾಣುತ್ತದೆ. ಸ್ವಂತ ಆಸಕ್ತಿಯಿಂದ ಸಂಸ್ಕೃತಿ ಶೋಧಕರಾದ ಜೋಶಿಯವರು ವಿಶ್ವವಿದ್ಯಾಲಯಗಳಂಥ ಪ್ರಭಾವಶಾಲಿ ಜಾಗಗಳಲ್ಲಿ ಇರಲಿಲ್ಲ. ಅವರ ಅಭಿವ್ಯಕ್ತಿಯ ವಿಧಾನವು ಸುಲಭವಾಗಿ ಅನುಸರಣೀಯ ವಾಗಿರಲಿಲ್ಲ. ಕ್ಲಿಷ್ಟವಾಗಿತ್ತು. ಅವರ ಮಾನವಧರ್ಮ ಹುಡುಕುವ ಪ್ರಮೇಯಗಳು ಅಖಿಲ ಭಾರತೀಯ ಸಂಸ್ಕೃತ ಆಕರಗಳ ದೊಡ್ಡ ಸಾಗರದಲ್ಲಿ ಹೊಕ್ಕಬಿಟ್ಟವು. ಗತಕಾಲವನ್ನು ಕುರಿತು ಅವರು ನಿಷ್ಠುರ ವಿಮರ್ಶಕ ನಿಲುವನ್ನು ತಳೆದುಬಿಟ್ಟರು. ಕೊನೆಯ ಕಾರಣ, ಬಹುಶಃ ಮುಖ್ಯ. ಕನ್ನಡ ಸಂಶೋಧನೆಗಳಲ್ಲಿ ಈಗಲೂ ಚರಿತ್ರೆ ಕುರಿತು ಪ್ರಧಾನ ನಿಲುವೆಂದರೆ, ಗತಕಾಲದ ವೈಭವೀಕರಣದ್ದು ಹಾಗೂ ರಾಜಕೀಯ ಚರಿತ್ರೆಯನ್ನು ಸಂಸ್ಕೃತಿ ಎಂದು ಭಾವಿಸುವಂತಹದು. ಆದರೆ ಶಂಬಾ ಗತವನ್ನು ರಾಜಕೀಯ ಪ್ರಭುತ್ವಗಳ ನೆಲೆಯಲ್ಲಿ ನೋಡುವುದಿಲ್ಲ. ಅವರ ಅಧ್ಯಯನಗಳು ಕ್ಲಾಸಿಕಲ್ ಚರಿತ್ರೆಯನ್ನು ಬಲಗೊಳಿಸುವ ವಿಧಾನವನ್ನು ನಿರಾಕರಿಸುತ್ತವೆ. ಅವರು ವೈದಿಕಬ್ರಾಹ್ಮಣ ರಚನೆಗಳ ಮೇಲೆ ಕಟುವಾದ ವಿಮರ್ಶಾತ್ಮಕ ನಿಲುವನ್ನು ತಳೆದರು. ಹೀಗಾಗಿ ಅವರು ಕರ್ನಾಟಕದ ಮುಂದಿನ ಸಾಂಸ್ಕೃತಿಕ ಅಧ್ಯಯನಕಾರರ ಮೇಲೆ ಚಿದಾನಂದಮೂರ್ತಿ ಅಥವಾ ಕಲುಬುರ್ಗಿಯವರಂತೆ ಗಾಢಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಕನ್ನಡದಲ್ಲಿ ವಿಮರ್ಶೆಯಿಲ್ಲದೆ ವೈಭವೀಕರಿಸುವ ದನಿಯಲ್ಲಿ ಚರಿತ್ರೆಯನ್ನು ಗ್ರಹಿಸುವ ಸಾಂಸ್ಕೃತಿಕ ಅಧ್ಯಯನ ವಿಧಾನ ಈಗಲೂ ರೂಢವಾಗಿದೆ. ಶಂಬಾ ಜೋಶಿಯವರ ರೀತಿಯಲ್ಲಿ ಸಾಂಪ್ರದಾಯಕ ಗ್ರಹಿಕೆಗಳಿಗೆ ಪ್ರಿಯವಾಗದ ಪ್ರಮೇಯಗಳಲ್ಲಿ ವಿಮರ್ಶಾತ್ಮಕ ಅಧ್ಯಯನ ಮಾಡಿದ ಕಪಟರಾಳ ಕೃಷ್ಣರಾವ್, ಸೇಡಿಯಾಪು ಕೃಷ್ಣಭಟ್ಟ ಅವರು ಕೂಡ ಉತ್ತರಾಧಿಕಾರಿಗಳಿಲ್ಲದ ತತ್ವಚಿಂತಕರಂತೆ ತೋರುತ್ತಾರೆ.

ಪಿ.ಎಚ್ಡಿ. ಅಧ್ಯಯನಗಳ ಬರಡುತನ

ಶಂಬಾ ಹಾಗೂ ಕಪಟರಾಳರು ಸಾಂಸ್ಥಿಕ ಬಲಗಳಿಲ್ಲದೆ ತಮ್ಮ ಶ್ರಮ ಶ್ರದ್ಧೆಗಳಿಂದ ವಿದ್ವಾಂಸರಾದವರು. ನೌಕರಿ ಪದವಿಗಳ ಹಂಗಿಲ್ಲದೆ, ತಮಗೆ ಕಾಡುವ ವಿಷಯವನ್ನು ಮುಂದಿಟ್ಟು ಕೊಂಡು, ಒಂದು ತಥ್ಯದರ್ಶನಕ್ಕಾಗಿ ಅಧ್ಯಯನ ಮಾಡಿದವರು. ಕನ್ನಡದಲ್ಲಿ ಹೀಗೆ ಅರಿವಿನ ಹುಡುಕಾಟದ ಹುಚ್ಚಿನಿಂದ ಅಧ್ಯಯನ ನಡೆಸಿದವರು ಕಡಿಮೆ ಡಿ.ಆರ್.ನಾಗರಾಜ ಅವರ “ಅಲ್ಲಮಪ್ರಭು ಮತ್ತು ಶೈವಪ್ರತಿಭೆ”ಯಲ್ಲಿ (೧೯೯೯) ಇಂತಹ ಹುಡುಕಾಟವಿದೆ. ಸುಬ್ಬಣ್ಣನವರ “ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು” (೨೦೦೧) ಕೃತಿಯಲ್ಲಿ ಇಂತಹ ಕಾಣ್ಕೆಯ ತವಕವಿದೆ. ಎಸ್.ಎಸ್.ಹಿರೇಮಠ ಅವರ ಕರ್ನಾಟಕದ ದಲಿತ ಸಂಸ್ಕೃತಿಗಳ ಶೋಧದಲ್ಲಿ ಇಂತಹ ಜರೂರಿದೆ. ಸಾಂಸ್ಕೃತಿಕ ತುರ್ತು ಮತ್ತು ಹುಡುಕಾಟದ ಹುಚ್ಚು ಅಧ್ಯಯನಗಳಿಗೆ ಒಂದು ರೀತಿಯ ದಾರ್ಶನಿಕ ತೀವ್ರತೆಯನ್ನು ಒದಗಿಸುತ್ತದೆ.

ಆದರೆ ಕನ್ನಡದಲ್ಲಿ ಹೆಚ್ಚಿನ ಸಾಂಸ್ಕೃತಿಕ ಅಧ್ಯಯನಗಳು ಪಿ.ಎಚ್‌ಡಿ. ಮುಂತಾದ ಪದವಿಗಾಗಿ ಮಾಡಿದಂತಹವು. ಪದವಿಗಾಗಿ ಮಾಡುವ ಅಧ್ಯಯನಗಳಲ್ಲಿ ಹುಡುಕಾಟದ ತುರ್ತು ಇರುವುದಿಲ್ಲ ಎನ್ನಲಾಗದು. ಕನ್ನಡದ ಅನೇಕ ಶ್ರೇಷ್ಠ ಅಧ್ಯಯನಗಳು ಪಿ.ಎಚ್‌ಡಿ. ಪದವಿಯ ನಿಬಂಧಗಳು. ಆದರೂ ಅವುಗಳ ಸಂಖ್ಯೆ ಕಡಿಮೆ. ಹೆಚ್ಚಿನ ಅತ್ಯುತ್ತಮ ಸಾಂಸ್ಕೃತಿಕ ಅಧ್ಯಯನಗಳು ಪಿ.ಎಚ್‌ಡಿ. ಪ್ರಬಂಧಗಳಾಚೆ ಇವೆ. ಅರ್ಥಪೂರ್ಣ ಅಧ್ಯಯನ ಮಾಡುವ ಎಷ್ಟೊ ಜನ ತಮ್ಮ ಲೇಖನಗಳನ್ನು ಕೃತಿರೂಪದಲ್ಲಿ ಪ್ರಕಟಿಸಲು ಉತ್ಸಾಹ ತೋರುವುದಿಲ್ಲ. ಆದರೆ ಪ್ರಕಟವಾದ ಅವರ ಬರೆಹಗಳು ಅತ್ಯುತ್ತಮ ಸಾಂಸ್ಕೃತಿಕ ಅಧ್ಯಯನದ ಮಾದರಿಗಳಾಗಿವೆ. ಅರಿವಿನ ದಾಹ, ಶೋಧಿಸುವ ಛಲ, ಸಾಮಾಜಿಕ ಕಾಳಜಿಗಳಿಲ್ಲದ ಎಷ್ಟೋ ಗೊಡ್ಡು ಪಿ.ಎಚ್‌ಡಿ. ಪ್ರಬಂಧಗಳಿಗೆ ಹೋಲಿಸಿದರೆ, ಜಿ. ರಾಜಶೇಖರ, ಕೆ.ವಿ.ಸುಬ್ಬಣ್ಣ, ನೀಲಗಂಗಯ್ಯ ಪೂಜಾರ ಮುಂತಾದವರು ಪ್ರಾಸಂಗಿಕವಾಗಿ ಬರೆದ ಬಿಡಿ ಲೇಖನಗಳು ಮಹತ್ವದವಾಗಿ ಕಾಣುತ್ತವೆ.

ಪ್ರಭಾವ ಪ್ರೇರಣೆಗಳ ಮರುಹುಟ್ಟು

ಕನ್ನಡದಲ್ಲಿ ಯಾರ್ಯಾರ ಅಧ್ಯಯನಗಳ ಮೇಲೆ ಯಾವ್ಯಾವ ಚಿಂತಕರೆ, ಸಿದ್ಧಾಂತಗಳ ಹಾಗೂ ಅಧ್ಯಯನ ಮಾದರಿಗಳ ಪ್ರಭಾವವಿದೆ ಎಂದು ಕಂಡುಹಿಡಿವ ಕೆಲಸ ಮಾಡಬಹುದು. ಉದಾ: ಮಾಸ್ತಿಯವರ ಮೇಲೆ ಆರ್ನಲ್ಡನ ಪ್ರಭಾವ; ಕಾರಂತ ಹಾಗೂ ಪುಣೇಕರ ಮೇಲೆ ಆನಂದ ಕುಮಾರಸ್ವಾಮಿ ಪ್ರಭಾವ; ಎಸ್.ಎಸ್.ಹಿರೇಮಠ ಅವರ ಮೇಲೆ ಚಟ್ಟೋಪಾಧ್ಯಾಯ, ಡಿ.ಡಿ.ಕೋಸಾಂಬಿ ಹಾಗೂ ಶಂಬಾರ ಪ್ರಭಾವ – ಹೀಗೆ. ಆದರೆ ಇದು ಕಷ್ಟದ ಕೆಲಸ. ಪ್ರಭಾವಗಳ ಯಾಂತ್ರಿಕ ಪಟ್ಟಿಮಾಡಿದರೆ ಯಾವ ಪ್ರಯೋಜನವೂ ಇಲ್ಲ. ನಿರ್ದಿಷ್ಟ ಚಿಂತಕರನ್ನು ಅಧ್ಯಯನಕಾರರು ಓದಿರಬಹುದು. ಉಲ್ಲೇಖಿಸಿರಲೂಬಹುದು. ಆದರೆ ಪ್ರಭಾವ ಪಡೆದಿದ್ದಾರೆ ಎಂದು ಹೇಳುವಂತಿಲ್ಲ. ಪ್ರಭಾವಗಳು ವಿಚಿತ್ರವಾಗಿರುತ್ತವೆ. ಅಧ್ಯಯನಕ್ಕೆ ಎಲ್ಲೋ ಒಂದು ಪ್ರಾಸಂಗಿಕ ಹೇಳಿಕೆ, ಒಂದು ಪುಟ್ಟ ಲೇಖನ ಪ್ರೇರಣೆ ನೀಡಿರಬಹುದು. ಡಿ.ಆರ್.ನಾಗರಾಜರ ಒಂದು ಸೂಚನೆ ಕೇಳಿ, ಶೆಲ್ಡನ್ ಪೋಲಾಕನ ‘ದಿ ಕಾಸ್ಮೊಪಾಲಿಟನ್ ವರ್ನಾಕುಲರ್’ ಎಂಬ ಬರೆಹವನ್ನು ಓದಿ, ತಮಗೆ “ಕವಿರಾಜಮಾರ್ಗ”ದ ಮೇಲೆ ಚಿಂತನೆ ಮಾಡಲು ಪ್ರೇರಣೆ ದೊರೆಯಿತು ಎಂದು ಸುಬ್ಬಣ್ಣ ಹೇಳುತ್ತಾರೆ: “ಬಹಳ ವ್ಯಾಪಕವಾದ ಪಾಂಡಿತ್ಯ ಮತ್ತು ಪ್ರಖರ ಪ್ರತಿಭೆಯ ಒಳನೋಟಗಳಿಂದ ದಟ್ಟವಾಗಿರುವ ಈ ಬರಹವನ್ನು ಕನ್ನಡಿಗರು ಓದಲೇಬೇಕು ಮಾತ್ರವಲ್ಲ, ನಮ್ಮದೇ ಇತಿಹಾಸದ ಅತ್ಯುಪಯುಕ್ತ ಅಂಶಗಳನ್ನು ಗುರುತಿಸಿ ಕಾಣಿಸಿದ್ದಕ್ಕಾಗಿ ಆತನಿಗೆ ಕೃತಜ್ಞನಾಗಿರಬೇಕು. ಆತನ ಲೇಖನವನ್ನೋದಿದ ಮೇಲೆ, ನನ್ನ ಚಿಂತನೆಗಳಿಗೆ ಸ್ಥೈರ್ಯವು ದೊರಕಿದಂತಾಯಿತು” (೨೦೦೧:೮೯).

ಕೆಲವರು ಕೈಗೆ ಸಿಕ್ಕ ಸಂಸ್ಕೃತಿ ವ್ಯಾಖ್ಯೆಯನ್ನು ಹಿಡಿದು, ಅದಕ್ಕೆ ತಮ್ಮನ್ನು ಒಪ್ಪಿಸಿಕೊಂಡು, ಅದಕ್ಕೆ ತಕ್ಕ ವಿಶ್ಲೇಷಣೆಗಳನ್ನು ಜೋಡಿಸುತ್ತಾರೆ. ಮತ್ತೆ ಕೆಲವರು ಯಾವುದೋ ಚಾರಿತ್ರಿಕ ಸಾಮಾಜಿಕ ಕಾಲದ ಸಂದರ್ಭದಲ್ಲಿ ಹುಟ್ಟಿಕೊಂಡ ಮಾದರಿಯನ್ನು ಕುರುಡಾಗಿ ಒಪ್ಪುವುದನ್ನು ನಿರಾಕರಿಸುತ್ತಾರೆ. ಹಿಂದಿನವರ ವ್ಯಾಖ್ಯೆಗಳನ್ನು ವಿಮರ್ಶಿಸುತ್ತ, ತಮ್ಮದೇ ಆದ ಸಂಸ್ಕೃತಿ ಪರಿಕಲ್ಪನೆಯನ್ನೂ ಸಾಂಸ್ಕೃತಿಕ ಅಧ್ಯಯನದ ವಿಧಾನವನ್ನೂ ಕಟ್ಟಿಕೊಳ್ಳುತ್ತಾರೆ. ತಮ್ಮ ಅಗತ್ಯಕ್ಕೆ ಬೇಕಾದಂತೆ ರೂಪಾಂತರ ಮಾಡಿಕೊಳ್ಳುತ್ತಾರೆ. ಸಂಸ್ಕೃತಿ ಚಿಂತನೆಗಳು ತಾವು ಹುಟ್ಟುವ ಕಾಲ, ದೇಶ, ಸನ್ನಿವೇಶಗಳಿಂದ ಬಳಕೆಯಾಗುವ ಈ ಕ್ರಿಯೆಯೇ ಸೋಜಿಗ. ಇದು ಸಿದ್ಧಾಂತಕ್ಕೂ (theory) ಆನ್ವಯಿಕತೆಗೂ (application) ಇರುವ ವಿಚಿತ್ರ ಸಂಬಂಧ. ಎಷ್ಟೆಂದರೂ ಅನ್ಯ ತಾತ್ವಿಕ ಪ್ರಭಾವಗಳು ಪ್ರೇರಣೆಗಳು ನಡೆಯಲು ದಿಕ್ಕುತೋರಿಸಬಲ್ಲವು. ಆದರೆ ದಾರಿಯನ್ನು ನಮ್ಮ ನೆಲದ ಮೇಲೆ ನಾವು ನಡೆದೇ ಹುಡುಕಿ ಕೊಳ್ಳಬೇಕು. ಕಡೆಗೂ ಅಮೂರ್ತ ತತ್ವಗಳನ್ನು ಅನ್ವಯಿಸಿ ವಿಶ್ಲೇಷಣೆಯಾಗುವುದು ನಮ್ಮ ಮೂರ್ತ ಪರಿಸರವೆ. ಈ ಪ್ರತಿಕ್ರಿಯೆಯಲ್ಲಿ ದಾರಿತೋರಲೆಂದು ಬಂದ ತತ್ವವೇ ಬದಲಾಗಬಹುದು. ಈ ಬದಲಾವಣೆಯಲ್ಲಿ ಹೊಸ ತತ್ವವೂ ಹುಟ್ಟಿಕೊಳ್ಳಬಹುದು. ಸ್ವೀಕರಿಸಿದ ತತ್ವವನ್ನು ತಮ್ಮ ಚಾರಿತ್ರಿಕ ಸನ್ನಿವೇಶಕ್ಕೆ ಜೋಡಿಸಿಕೊಂಡು, ವರ್ತಮಾನವನ್ನು ಗ್ರಹಿಸಲು ಹೊಸ ದೃಷ್ಟಿಕೋನವನ್ನು ಮರುಸೃಷ್ಟಿಸಿಕೊಳ್ಳುವುದು ಸರಳ ಕೆಲಸವಲ್ಲ. ಈ ಮರುಸೃಷ್ಟಿಯಲ್ಲಿ ಅಧ್ಯಯನಕಾರರ ಸಾಮಾಜಿಕ ಅನುಭವ, ತಾತ್ವಿಕ ನಂಬಿಕೆ, ವರ್ತಮಾನದ ಬಿಕ್ಕಟ್ಟು, ಭವಿಷ್ಯದ ಕಣಸು ಎಲ್ಲವೂ ಒತ್ತಡವಾಗಿ ಕೆಲಸ ಮಾಡುತ್ತವೆ.

ಹಾಗಿಲ್ಲದಿದ್ದರೆ ೧೯ನೇ ಶತಮಾನದ ಇಂಗ್ಲೆಂಡಿನ ಚಾರಿತ್ರಿಕ ಸಂದರ್ಭಕ್ಕೆ ಪ್ರತಿಕ್ರಿಯಿಸುತ್ತ ಆರ್ನಲ್ಡನು ಮಾಡಿದ ಚಿಂತನೆ, ೨೦ನೇ ಶತಮಾನದ ಕರ್ನಾಟಕದ ಡಿವಿಜಿ, ಮಾಸ್ತಿಯವರಲ್ಲಿ ಮರುಹುಟ್ಟು ಪಡೆಯುತ್ತಲೇ ಇರಲಿಲ್ಲ. ೨೦ನೇ ಶತಮಾನದ ಮೊದಲ ಘಟ್ಟದಲ್ಲಿ ಕರ್ನಾಟಕದ ರಾಜಕೀಯ ಸಾಮಾಜಿಕ ಪರಿಸ್ಥಿತಿಗಳ ಜತೆ ಆರ್ನಲ್ಡ್ ಚಿಂತನೆ ಸೇರಿ, ಡಿವಿಜಿ – ಮಾಸ್ತಿಯವರ ಸಂಸ್ಕೃತಿ ಚಿಂತನೆ ರೂಪುಗೊಂಡಿತು. ಅಂದರೆ ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ಪಡೆದು, ಆಧುನಿಕತೆಯ ಪ್ರವಾಹದಲ್ಲಿ ಈಜುತ್ತಿದ್ದ ಉಚ್ಚಜಾತಿಯ ಮಧ್ಯಮವರ್ಗಕ್ಕೆ, ಪರಕೀಯ ಆಡಳಿತದಲ್ಲಿ ಅಥವಾ ಹೊಸದಾಗಿ ಸ್ವಾತಂತ್ರ್ಯ ಪಡೆದ ದೇಶದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಆಶಯ ಆತಂಕಗಳು ಹುಟ್ಟಿದ್ದವು. ಇದರ ಅಭಿವ್ಯಕ್ತಿಗೆ ಆರ್ನಲ್ಡನ ಸಂಸ್ಕೃತಿ ವ್ಯಾಖ್ಯೆ ಒಂದು ವೇದಿಕೆ ಒದಗಿಸುವಂತೆ ಕಸಿಗೊಂಡಿತು. ಟಿ. ಎಸ್. ಎಲಿಯಟನು ೧೯೪೮ರಲ್ಲಿ ಕಟ್ಟಿದ ಸಂಸ್ಕೃತಿಯ ವ್ಯಾಖ್ಯೆಯನ್ನು ‘ಅಂಗೀಕರಿಸುತ್ತೇವೆ’ ಎಂದು ಹೊರಡುವ ಚಿದಾನಂದಮೂರ್ತಿ, ಶಾಸನಗಳ ಮೂಲಕ ಕರ್ನಾಟಕದ ರಾಜಕೀಯ ಇತಿಹಾಸವನ್ನು ಪುನಾರಚಿಸಿ, ಊಳಿಗಮಾನ್ಯ ಮೌಲ್ಯಗಳನ್ನು ತುಂಬುವಾಗ, ಅಮೆರಿಕನ್ ಚಿಂತಕನ ವ್ಯಾಖ್ಯೆ ಹೊಸ ಅವತಾರ ತಳೆಯುತ್ತದೆ, ೨೦ನೇ ಶತಮಾನದ ಫ್ರಾನ್ಸ್ ದೇಶದ ಬೋಯಸನ ‘ಎ ಕಲ್ಚರ್’ ಎಂಬ ಅನನ್ಯತೆ ಸೂಚಕವಾದ ವ್ಯಾಖ್ಯೆಯನ್ನು ಇಟ್ಟುಕೊಂಡು, ಕರ್ನಾಟಕದಲ್ಲಿ ೯೦ರ ದಶಕದಲ್ಲಿ ಸಾಮಾಜಿಕ ನ್ಯಾಯದ ಆಶಯವುಳ್ಳ ಉಪಸಂಸ್ಕೃತಿಯನ್ನು ಬರಗೂರರು ರೂಪಿಸುತ್ತಾರೆ. ಕೆಳಜಾತಿಯ ವರ್ಗಗಳಿಂದ ಶಿಕ್ಷಣ ಪಡೆದು, ಸರಕಾರಿ ನೌಕರಿಗಳಿಸಿ, ಪ್ರಜ್ಞಾವಂತ ಮಧ್ಯಮವರ್ಗದ ನಾಯಕತ್ವವು ತನ್ನ ಸಮುದಾಯಗಳ ಸಾಮಾಜಿಕ ರಾಜಕೀಯ ಹಕ್ಕುಮಂಡನೆಯ ಭಾಗವಾಗಿ, ಸಂಸ್ಕೃತಿ ಪರಿಕಲ್ಪನೆಯನ್ನು ಮಂಡಿಸುತ್ತದೆ. “ ಬದಲಾಗದ ಭೂತಕ್ಕೆ ತಳ್ಳಲ್ಪಟ್ಟಿರುವ ಉಪಸಂಸ್ಕೃತಿಯು ಪ್ರಧಾನನೆಲೆಗೆ ಬರುವ ಮೂಲಕ ಸಮಾನ ಸಮಾಜದ ಆಶಯಕ್ಕೆ ಪೂರಕವಾಗುವ ಪ್ರಕ್ರಿಯೆ ಮುಖ್ಯವಾದುದು. ಈ ಪ್ರಕ್ರಿಯೆಯಲ್ಲಿ ಉಪಸಂಸ್ಕೃತಿಗಳ ಜೀವನವಿಧಾನ ವರ್ತಮಾನದ ಹೊಸಬಣ್ಣ ಪಡೆದು ಪ್ರಧಾನವಾಗಬೇಕು. ಪ್ರಧಾನ ಸಂಸ್ಕೃತಿಯ ನೆಲೆಗಳನ್ನು ತಾನು ತುಂಬುತ್ತ ಮತ್ತೆ ನಿರ್ಲಕ್ಷಿತ ನೆಲೆಗಳನ್ನು ಹುಟ್ಟುಹಾಕಬಾರದು. ಬಹುಸಂಸ್ಕೃತಿಗಳ ಸಮಾನ ಅಸ್ತಿತ್ವದಲ್ಲಿ ಅಧಿಕಾರ ಹಂಚಿಕೊಳ್ಳಬೇಕು” ಎಂದು ಬರಗೂರರು ಹೇಳುತ್ತಾರೆ (೧೯೯೯೪:೧೬೬). ಕರ್ನಾಟಕದ ಸಮಕಾಲೀನ ರಾಜಕೀಯ ಆಶಯಗಳಿಗೆ ಬೋಯಸನ ವ್ಯಾಖ್ಯೆ ಮರುಹುಟ್ಟು ಪಡೆಯುತ್ತದೆ. ಈ ಮರುಹುಟ್ಟು ಅಥವಾ ರೂಪಾಂತರಗಳು ಸಾಂಸ್ಕೃತಿಕ ಅಧ್ಯಯನಗಳಲ್ಲಿ ಸಹಜವಾಗಿ ಸಂಭವಿಸುತ್ತವೆ. ‘ಅವಳ ತೊಡಿಗೆ ಇವಳಿಗಿಟ್ಟು ಹಾಡುವ ಕ್ರಿಯೆ’ಯಲ್ಲಿ ಹೊಸ ರಾಗಗಳೇ ಹುಟ್ಟಿಬಿಡುತ್ತವೆ. ಹಾಗೆ ಹೊಸರಾಗ ಹುಟ್ಟಿಸಿಕೊಳ್ಳದ ಅಧ್ಯಯನಕಾರರು ಕೊಟ್ಟ ಕುದುರೆಯನ್ನು ಏರಲರಿಯದೆ ಹಲ್ಲಣವನ್ನು ಹೊತ್ತು ತಿರಗುವವರಂತೆ ಕಾಣುತ್ತಾರೆ.

ಶಂಬಾ ಜೋಶಿಯವರು ಆರ್ನಲ್ಡನ ಸಂಸ್ಕೃತಿ ಕಲ್ಪನೆಯನ್ನು ನಿರಾಕರಿಸುತ್ತಾ “ಪರಿಪೂರ್ಣತೆಯೇ ಗುರುತು (A Persuit of total perfection) ಎಂದು ಪ್ರತಿಪಾದಿಸಿರುವ ಆರ್ನಲ್ಡನು, ‘ಸಂಸ್ಕೃತಿ’ ಸ್ವರೂಪವನ್ನೇ ಗಮನಿಸಿಲ್ಲ. ಸಂಸ್ಕೃತಿಯ ಪರಿಪೂರ್ಣ ಫಲಶೃತಿ (Finished producet) ಸ್ವರೂಪದ್ದಲ್ಲ; ಪ್ರಕಿಯಾ (process) ಸ್ವರೂಪದ್ದೂ ಆಗಿದೆ ಎಂಬ ಮೂಲಭೂತ ವಿಚಾರವನ್ನೇ ಕಡೆಗಣಿಸಿರುವುದು ದುರ್ದೈವವದ  ಸಂಗತಿ” ಎಂದು ಹೇಳುತ್ತ, ವಿಮರ್ಶೆ ಬೆಳೆಸುತ್ತಾರೆ (೨೦೦೧:೮೯). ಇದು ಆರ್ನಲ್ಡನನ್ನು ವಿಮರ್ಶೆಯಿಲ್ಲದೆ ಸ್ವೀಕರಿಸಿದ ಡಿವಿಜಿ – ಮಾಸ್ತಿಯವರ ಮೇಲೆ ಮಾಡಿದ ಪರೋಕ್ಷ ಟೀಕೆಯೂ ಆಗಿದೆ. ಹೀಗೆ ಹಿರೀಕರ ವ್ಯಾಖ್ಯಾನಗಳನ್ನು ವಿಮರ್ಶಿಸುವ ಮೂಲಕ ಕನ್ನಡದಲ್ಲಿ ಹೊಸಹೊಸ ಪರಿಕಲ್ಪನೆ ಮತ್ತು ಅಧ್ಯಯನ ವಿಧಾನಗಳನ್ನು ರೂಢಿಸಿಕೊಂಡು ಬರಲಾಗಿದೆ. ಯಾವಾಗಲೂ ವಾಗ್ವಾದಗಳ ಮೂಲಕ ಹೊಸ ವಿಧಾನಗಳ ಶೋಧಮಾಡುವ ಅಧ್ಯಯನಕಾರರು ತಮ್ಮ ಪರಿಸರಕ್ಕೆ ಹೆಚ್ಚು ಬದ್ಧರಾಗುವ ಸಾಧ್ಯತೆಗಳಿವೆ.

ಸಿದ್ಧಾಂತ ಮತ್ತು ಆನ್ವಯಿಕತೆ

ಸಾಂಸ್ಕೃತಿಕ ಅಧ್ಯಯನಕಾರರಲ್ಲಿ ಮೂರು ಬಗೆಯವರಿದ್ದಾರೆ: ೧. ಕೇವಲ ಸಂಸ್ಕೃತಿಯ ವ್ಯಾಖ್ಯೆಯನ್ನು ರೂಪಿಸುವವರು. ಅವರು ತಮ್ಮ ವ್ಯಾಖ್ಯೆಯ್ನು ಅನ್ವಯಮಾಡಿ ಅಧ್ಯಯನ ಮಾಡುವ ಹೊಣೆ ಹೊರುವುದಿಲ್ಲ. ೨. ಅನ್ಯರು ರೂಪಿಸಿದ ವ್ಯಾಖ್ಯೆಗಳಲ್ಲಿ ತಮಗೆ ಸರಿಕಂಡುದನ್ನು ಆರಿಸಿಕೊಂಡು ಆನ್ವಯಿಕ ಅಧ್ಯಯನ ಮಾಡುವವರು. ಇಲ್ಲಿ ತಾವೇ ತಮ್ಮ ವಸ್ತುವಿನ ಜತೆ ಗುದ್ದಾಡುತ್ತ ಹೊಸ ವ್ಯಾಖ್ಯೆಯನ್ನು ರೂಪಿಸಿಕೊಳ್ಳುವ ಅಥವಾ ತಾವು ಆರಿಸಿಕೊಂಡ ವ್ಯಾಖ್ಯೆಗೆ ವಿಮರ್ಶೆ ಮಾಡುತ್ತ ಅದನ್ನು ವಿಸ್ತರಿಸುವ ಹೊಣೆಗಾರಿಕೆ ಇರುವುದಿಲ್ಲ. ೩. ವ್ಯಾಖ್ಯೆಯನ್ನು ರೂಪಿಸುತ್ತಲೇ ಅಧ್ಯಯನ ಮಾಡುವವರು ಹಾಗೂ ಅಧ್ಯಯನ ಮಾಡುತ್ತಲೇ ವ್ಯಾಖ್ಯೆಯನ್ನು ರೂಪಿಸುವವರು. ಇವುಗಳಲ್ಲಿ ಮೂರನೆಯ ವಿಧಾನ ಪ್ರಬುದ್ಧವೂ ಹೊಣೆಗಾರಿಕೆಯದೂ ಆದುದು. ಈ ಹಿನ್ನೆಲೆಯಲ್ಲಿ ಕನ್ನಡದ ಜಾನಪದ ಕ್ಷೇತ್ರದ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಕಾಣಿಸುವ ವಿದೇಶಿ ಸಿದ್ಧಾಂತಗಳ ಬಗೆಗಿನ ಸಾಮಾನಯ್ ವಾಗ್ವಾದವನ್ನು ಗಮನಿಸಬಹುದು.

“ಈಗ ಜಾನಪದ ಆಲೋಚನಕ್ರಮವೇ ಬದಲಾಗಿದೆ. ಪಾಶ್ಚಿಮಾತ್ಯರ ಸಿದ್ಧಾಂತಗಳು ಅಳತೆಗಳು ನಮಗೆ ಮಾರ್ಗದರ್ಶನ ನೀಡಿರುವುದು ನಿಜ. ಆದರೆ ಅವುಗಳೊಳಗೆ ‘ನಾವೆಂಬುವರು’ ಇಲ್ಲದಿರುವುದು ನಮ್ಮನ್ನು ದಿಗ್‌ಭ್ರಾಂತಗೊಳಿಸಿದೆ.” (೧೯೯೮:ಲೇಖಕನ ಮಾತು). ಇದು ಹಿ.ಶಿ. ರಾಮಚಂದ್ರೇಗೌಡರ ಪ್ರಶ್ನೆ. ಕನ್ನಡ ಜಾನಪದ ಅಧ್ಯಯನಗಳನ್ನು ಸಮಾಜವಾದಿ ದೃಷ್ಟಿಕೋನ ಹಾಗೂ ಕರ್ನಾಟಕ ಸಂಸ್ಕೃತಿಯ ಭಾಗವಾಗಿ ಮಾಡಬೇಕೆನ್ನುವ ಇವರು, ಜಾನಪದ ಅಧ್ಯಯನಕ್ಕೆ ವಿದೇಶಿ ತತ್ವಗಳ ಪ್ರಸ್ತುತತೆಯನ್ನು ಕುರಿತು ಮತ್ತೆ ಮತ್ತೆ ಈ ಪ್ರಶ್ನೆಯನ್ನು ಎತ್ತುತ್ತಾರೆ.

ಅಂಬಳಿಕೆ ಹಿರಿಯಣ್ಣ ಅವರು ಜಾನಪದ ಸಿದ್ಧಾಂತಗಳ ಚರ್ಚೆಮಾಡುವ ತಮ್ಮ ಕೃತಿಯ ಮುನ್ನುಡಿಯಲ್ಲಿ ಹೇಳುವ ಮಾತಿದು: “ ಪ್ರಚಲಿತವಿರುವ ಸಿದ್ಧಾಂತಗಳ ಬಗೆಗೆ, ಈ ಹೊತ್ತು, ಅಲ್ಲಲ್ಲಿ ಅಪಸ್ವರಗಳು ಕೇಳಿಬರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ… ಸಿದ್ಧಾಂತಗಳ ಕುರುಡು ಆನ್ವಯಿಕತೆ ಸರಿಯಲ್ಲ – ಇದು ಯಾರೂ ಒಪ್ಪಬಹುದಾದ ಮಾತು. ಆದರೆ ಸೈದ್ಧಾಂತಿಕ ವಿಚಾರಗಳನ್ನು ಸರಿಯಾಗಿ ಗ್ರಹಿಸದೆ ವಾದಕ್ಕಾಗಿ ಅತಾರ್ಕಿಕವಾದ ಮಂಡಿಸುವವರನ್ನೂ ಯಾರೂ ಸಮರ್ಥಿಸಲಾಗುವುದಿಲ್ಲ. ಜಾನಪದ, ಇಂದು ಇತರೆ ಎಲ್ಲ ಮಾನವಿಕ ವಿಷಯಗಳಂತೆ, ಒಂದು ಸಾರ್ವತ್ರಿಕ ಜ್ಞಾನಕ್ಷೇತ್ರ; ಗಂಭೀರ ಅಧ್ಯಯನ ಶಿಸ್ತುಗಳಲ್ಲಿ ಒಂದು. ಅದನ್ನು ಕುರಿತು ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆದಿರುವ ಮತ್ತು ನಡೆಯಲಿರುವ ಸಂಶೋಧನೆ ಜಗತ್ತಿನ ಎಲ್ಲ ಭಾಗಗಳಿಗೂ ಸಾರ್ವತ್ರಿಕವಾಗಿ ಅನ್ವಯಗೊಳ್ಳುವುದು ಸ್ವಾಭಾವಿಕ. ಕನ್ನಡ ಜಾನಪದವನ್ನು ಕನ್ನಡ ಸಂಸ್ಕೃತಿಯ ಸಂದರ್ಭದಲ್ಲಿ ಚರ್ಚೆಗೆ ಎತ್ತಿಕೊಳ್ಳುವ, ಅದನ್ನು ವಿಸ್ತಾರ ನೆಲೆಯಲ್ಲಿ ಅರ್ಥೈಸಬೇಕಾಗಿರುವ ಈ ಹೊತ್ತಿನಲ್ಲಿ, ನಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ಗುರುತಿಸಿಕೊಳ್ಳಲು ನಮ್ಮ ಜಾನಪದವನ್ನು ಲೋಕದೃಷ್ಟಿಯಿಂದ ವಿವೇಚಿಸುವ ಜರೂರು ಬಹಳವಿದೆ ಎಂಬುದನ್ನು ಸಂಬಂಧಿಸಿದವರು ಇನ್ನಾದರೂ ಮನಗಂಡರೆ ಈ ಜ್ಞಾನಕ್ಷಿತಿಜ ವಿಸ್ತರಿಸುವುದರಲ್ಲಿ ಸಂಶಯವಿಲ್ಲ” (ಅಂಬಳಿಕೆ: ೨೦೦೧:ಅರಿಕೆ)

ಮೊದಲ ಉಲ್ಲೇಖದಲ್ಲಿ ಪ್ರಶ್ನೆಯಿದೆ. ಎರಡನೇ ಉಲ್ಲೇಖದ ಉತ್ತರಿಸುವ ರೀತಿಯಿದೆ. ಇವು ಪರಸ್ಪರ ನಡೆದ ಪ್ರಶ್ನೋತ್ತರ ಎಂದೇನೂ ಭಾವಿಸಬೇಕಿಲ್ಲ. ಆದರೆ ಈ ಪ್ರಾತಿನಿಧಿಕ ಉಲ್ಲೇಖಗಳು ಅನೇಕ ಅಧ್ಯಯನ ಕ್ಷೇತ್ರಗಳಲ್ಲಿರುವ ವಾಗ್ವಾದಗಳ ಸ್ವರೂಪವನ್ನು ಸೂಚಿಸುತ್ತಿವೆ. ಪ್ರಶ್ನೆಯೆಂದರೆ, ನಿರ್ದಿಷ್ಟ ತತ್ವವು ದೇಶಿಯೋ ವಿದೇಶಿಯೋ ಎಂಬುದಲ್ಲ. ಅದು ಕರ್ನಾಟಕದ ಸಾಂಸ್ಕೃತಿಕ ಅಧ್ಯಯನಗಳಿಗೆ ಅರ್ಥಪೂರ್ಣ ವಿಸ್ತರಣೆ ಒದಗಿಸುತ್ತಿದೆಯೇ ಇಲ್ಲವೇ ಎಂಬುದು. ಅಂಬಳಿಕೆಯವರ ಮಾತುಗಳಲ್ಲಿ ಜಗತ್ತಿನ ಸಿದ್ಧಾಂತಗಳನ್ನು ಕನ್ನಡಕ್ಕೆ ಪರಿಚಯಿಸುವ ಉದ್ದೇಶ ಸರಿಯಾಗಿದೆ. ಆದರೆ “ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆದಿರುವ ಮತ್ತು ನಡೆಯಲಿರುವ ಸಂಶೋಧನೆ ಜಗತ್ತಿನ ಎಲ್ಲ ಭಾಗಗಳಿಗೂ ಸಾರ್ವತ್ರಿಕವಾಗಿ ಅನ್ವಯಗೊಳ್ಳುವುದು ಸ್ವಾಭಾವಿಕ” ಎಂಬ ನಿಲುವು ಚರ್ಚಾಸ್ಪದವಾಗಿದೆ. ಸಿದ್ಧಾಂತಗಳಿಗೆ ತಮ್ಮ ಕಾಲ-ದೇಶ-ಸಮಾಜಗಳನ್ನು ಮೀರುವ ಗುಣವಿದೆಯಾದರೂ, ಅವು ಆಯಾ ಸಂದರ್ಭಕ್ಕೆ ಮರುಹುಟ್ಟು ಪಡೆಯದೆ ಅರ್ಥಪೂರ್ಣವಾಗಿ ಅನ್ವಯವಾಗುವುದಿಲ್ಲ. ಸಿದ್ಧಾಂತಗಳು ಯಾವ ಚಾರಿತ್ರಿಕ/ಸಾಂಸ್ಕೃತಿಕ ಸಂದರ್ಭದಲ್ಲಿ ಹುಟ್ಟುತ್ತಿವೆ. ಅವುಗಳ ಹಿಂದಿನ ರಾಜಕಾರಣ ಏನು – ಎಂದು ಪ್ರಶ್ನೆ ಹಾಕಿಕೊಳ್ಳದೆ, ಸಿದ್ಧಾಂತಗಳಿಗೆ ಇರುವ ಅಧಿಕಾರದ ಅಹಂಕಾರವನ್ನು ಅರಿಯದೆ ಅಧ್ಯಯನ ಮಾಡುವುದು ಹೇಗೆ ಸಾಧ್ಯ? ಯಾಕೆ ಅಮೆರಿಕನ್  ಅಥವಾ ಯೂರೋಪಿನ ಜಾನಪದ ಅಧ್ಯಯನಗಳಿಗೆ ಭಾರತೀಯ ವಿದ್ವಾಂಸರು ಸಿದ್ಧಾಂತಗಳನ್ನು ರೂಪಿಸಿಕೊಡಲಾಗಿಲ್ಲ ಎಂದು ಯೋಚಿಸಿದರೆ, ಸಿದ್ಧಾಂತಗಳು ಎಲ್ಲಿಂದ ಬರುತ್ತಿವೆ, ಅವನ್ನು ಯಾರು ಕೇವಲ ಸ್ವೀಕರಿಸುವ ಕೆಲಸ ಮಾಡುತ್ತಿದ್ದಾರೆ – ಎಂಬ ಸಂಗತಿ ತಿಳಿಯುತ್ತದೆ. ಜ್ಞಾನವು ರಾಜಕೀಯ ಆರ್ಥಿಕ ಅಧಿಕಾರದ ಶ್ರೇಣಿಕರಣದ ಭಾಗವಾಗಿಯೇ ಇದೆ. ಈ ಎಚ್ಚರವಿದಿದ್ದರೆ, ನಮ್ಮ ಜಾನಪದ ಮಾಹಿತಿಗಳಿಂದಲೇ ನಾವು ಸಿದ್ಧಾಂತಗಳನ್ನು ಹುಟ್ಟಿಸಿಕೊಳ್ಳಬಹುದಾದ ಬೌದ್ಧಿಕ ಸವಾಲನ್ನು ಎತ್ತಿಕೊಳ್ಳಲು ಆಗುವುದಿಲ್ಲ. ಸಾಂಸ್ಕೃತಿಕ ಅಧ್ಯಯನಗಳಲ್ಲಿ ಕನ್ನಡದ ತುರ್ತು ಅಗತ್ಯವಿಲ್ಲದೆ ಬಂದು ಸುರಿಯುವ ಸಿದ್ಧಾಂತಗಳು ಒಂದೋ ಯಾಂತ್ರಿಕವಾಗಿ ಅನ್ವಯಗೊಳ್ಳುತ್ತವೆ. ಇಲ್ಲವೇ ಬಳಸುವವರಿಲ್ಲದೆ ಅನಾಥವಾಗಿ ಉಳಿಯುತ್ತವೆ.

ಕನ್ನಡೇತರ ಅಧ್ಯಯನಗಳು

ಕರ್ನಾಟಕ ಭಾಷೆ, ಸಮಾಜ, ಧರ್ಮ, ಸಾಹಿತ್ಯ, ಚರಿತ್ರೆ, ಜಾನಪದ ಕುರಿತು ಹೆಚ್ಚಿನ ಸಾಂಸ್ಕೃತಿಕ ಅಧ್ಯಯನಗಳು ಕನ್ನಡದಲ್ಲಿ ನಡೆಯುತ್ತಿವೆ. ಆದರೆ ಕರ್ನಾಟಕವನ್ನು ಒಳಗೊಂಡತೆ, ಭಾರತದಲ್ಲಿಯೂ ಕರ್ನಾಟಕ ಅಧ್ಯಯನಗಳು ನಡೆದಿವೆ, ನಡೆಯುತ್ತಿವೆ. ಕೆಲವನ್ನು ಕನ್ನಡಿಗರೇ ಇಂಗ್ಲಿಷನಲ್ಲಿ ಮಾಡಿರುವುದು ಇದೆ. ಉದಾ: ಕನ್ನಡದ ನಾಲ್ಕು ಚಿಂತಕರ ಮೇಲೆ ವಿಶ್ಲೇಷಣೆ ಮಾಡಿರುವ ಕೆ.ರಾಘವೇಂದ್ರರಾಯರ “ಇಮ್ಯಾಜಿಂಗ್ ಅನ್ ಇಮ್ಯಾಜಿನಬಲ್ ಕಮ್ಯುನಿಟೀಸ್” (೨೦೦೦). ಕನ್ನಡದ ಸಾಂಸ್ಕೃತಿಕ ಅಧ್ಯಯನಗಳಿಗಿಂತ ಕನ್ನಡೇತರ ಭಾಷೆಯಲ್ಲಿ ನಡೆಯುವ ಅಧ್ಯಯನಗಳು ಎಲ್ಲಿ ಭಿನ್ನವಾಗುತ್ತವೆ? ಕನ್ನಡ ಅಧ್ಯಯನಗಳ ಜತೆ ಇವು ಕೊಟ್ಟು ಪಡೆದಿರುವ ಪ್ರೇರಣೆ ಪ್ರಭಾವಗಳು ಎಂತಹವು? ಈ ಬಗ್ಗೆ ಹೇಳುವುದು ಕಷ್ಟದ ಸಂಗತಿ. ಇಂಗ್ಲಿಷಿನಲ್ಲಿ ನಡೆಯುವ ಅಧ್ಯಯನಗಳ ಮಾಹಿತಿಯನ್ನು ಹೇಗೋ ದೊರಕಿಸಿಕೊಳ್ಳಬಹುದು. ಆದರೆ ಮರಾಠಿ, ತಮಿಳು, ತೆಲುಗು, ಮಲೆಯಾಳ ಮುಂತಾದ ನಮ್ಮ ನೆರೆಯ ಭಾಷೆಗಳಲ್ಲಿ ನಡೆಯುವ ಅಧ್ಯಯನಗಳ ಮಾಹಿತಿ ಸುಲಭವಾಗಿ ಸಿಗುವುದಿಲ್ಲ. ಅವು ಕನ್ನಡಕ್ಕೆ ಅನುವಾದಗೊಂಡರೆ ಮಾತ್ರ ಈ ಕೊಡುಕೊಳುವಿನ ಸ್ವರೂಪವನ್ನು ಕಂಡು ಹಿಡಿವುದು ಸುಲಭ. ಈಗೀಗ ಮರಾಠಿಯ ರಾ.ಚಿಂ.ಢೇರೆ ಅವರ ಸಾಂಸ್ಕೃತಿಕ ಅಧ್ಯಯನಗಳು ಕನ್ನಡಕ್ಕೆ ಅನುವಾದವಾಗಿ ಬರುತ್ತಿವೆ. ಅವು ಕನ್ನಡದ ಸಾಂಸ್ಕೃತಿಕ ಅಧ್ಯಯನಗಳನ್ನು ಹೇಗೆ ಪ್ರಭಾವಿಸುತ್ತವೆ? ನಾಳೆಗಳೇ ಉತ್ತರಿಸಬೇಕು.

ಕೆಲವೊಮ್ಮೆ ಪಿ.ಎಚ್‌ಡಿ. ಪದವಿಗಾಗಿಯೋ ಸಾಂಸ್ಥಿಕ ಯೋಜನೆಗಾಗಿಯೋ ನಡೆವ ಕರ್ನಾಟಕದ ಮೇಲಿನ ಅಧ್ಯಯನಗಳು ಪ್ರಕಟವಾಗುವುದಿಲ್ಲ. ಅವು ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿಯೇ ಇರುತ್ತವೆ. ಪ್ರಕಟವಾಗದ ಹೊರತು ಅವದ ತಿಳಿವಳಿಕೆ ಸುಲಭವಾಗಿ ಲಭ್ಯವಾಗುವುದಿಲ್ಲ. ಇಷ್ಟು ಇಕ್ಕಟ್ಟುಗಳ ಹೊರತಾಗಿಯೂ ಕೆಲವು ಅಧ್ಯಯನಗಳೂ ಪ್ರಕಟವಾಗಿವೆ. ಉದಾ: ಕರ್ನಾಟಕದ ಮೈಲಾರ ಪರಂಪರೆಯ ಮೇಲೆ ಸೊಂಥಮೈರ್ ಅವರು ಮಾಡಿದ ಅಧ್ಯಯನ, ಕರ್ನಾಟಕದ ಲಜ್ಜಾಗೌರಿಯನ್ನು ಕುರಿತು ಮರಾಠಿಯ ರಾ.ಚಿಂ. ಢೇರೆ ಅವರು ಮಾಡಿದ ಅಧ್ಯಯನ.

ಇಂಗ್ಲಿಷಿನಲ್ಲಿ ನಡೆದಿರುವ ಎಲ್ಲ ಅಧ್ಯಯನಗಳು ಸಾಂಸ್ಕೃತಿಕ ಅಧ್ಯಯನಗಳಲ್ಲ. ಹೆಚ್ಚಿನವು ತಂತಮ್ಮ ಶಿಸ್ತಿನ ಹಿನ್ನೆಲೆಯಲ್ಲಿ ನಡೆದಂತಹವು. ಏಪ್ಸೀನ್ ಅವರು ಮಂಡ್ಯದ ಹಳ್ಳಿಗಳ ಮೇಲೆ ಮಾಡಿದ ಅಧ್ಯಯನವು (“ವಿಲೇಜ್ ವಾಯ್ಸಸ್”) ಒಂದು ಸಮಾಜಶಾಸ್ತ್ರೀಯ ಅಧ್ಯಯನ. ಸಾಂಸ್ಕೃತಿಕ ಅಧ್ಯಯನಕ್ಕೆ ಸೂಕ್ತವಾಗಿದ್ದ ಸಮಾಧಿಮರಣ ವಿಷಯದ ಮೇಲೆ ರಚಿತವಾಗಿರುವ ಷ. ಶೆಟ್ಟರ್ ಅವರ “ಇನ್‌ವೈಟಿಂಗ್ ಡೆತ್” ಕೃತಿಯು ಸಾಂಪ್ರದಾಯಕವಾದ ಚಾರಿತ್ರಿಕ ವಿಧಾನದಲ್ಲಿಯೇ ಇದೆ. ಬಿಜಾಪುರದ ಸೂಫಿಗಳ ಮೇಲೆ ಅಮೆರಿಕೆಯ ಈಟನ್ನನ ಅಧ್ಯಯನವು (“ಸೂಫೀಸ್ ಆಫ್ ಬಿಜಾಪುರ”) ಮೂಲತಃ ಚಾರಿತ್ರಿಕ ಅಧ್ಯಯನವಾದರೂ, ಅಲ್ಲಿ ಚರಿತ್ರೆಯ ಸಾಂಪ್ರದಾಯಕ ವಿಧಾನವನ್ನು ದಾಟುವ ಕ್ರಮವಿದೆ. ಡಿ.ಆರ್.ನಾಗರಾಜ ಅವರು ಕರ್ನಾಟಕದ ದಲಿತ ಚಳುವಳಿ ಕುರಿತು ಒಂದು ಅಧ್ಯಯನ ಮಾಡಿದರು (“ಫ್ಲೇಮಿಂಗ್ ಫೀಟ್”) ಜರ್ಮನಿಯ ಶೌದನ್ ರಚಿಸಿದ ವಚನಕಾರರ ಮೇಲಿನ ಅಧ್ಯಯನ “ರೆವ್ಯೂಲೂಶನ್ ಆಫ್ ದಿ ಮಿಸ್ಟಕ್ಸ್” ಸಾಮಾಜಿಕ ಅಧ್ಯಯನವಾಗಿದೆ.

ಇಂಗ್ಲಿಷಿನಲ್ಲಿ ಮಾಡಲಾಗುವ ಅಧ್ಯಯನಗಳ ಪ್ರಭಾವವು ಕನ್ನಡದ ಅಧ್ಯಯನಗಳ ಮೇಲೆ ವ್ಯಾಪಕವಾಗಿಲ್ಲ. ಇದಕ್ಕೆ ಮೊದಲನೇ ಕಾರಣ, ಅವು ಇಂಗ್ಲಿಷಿನಲ್ಲಿರುವುದು. ಎರಡನೆಯದಾಗಿ, ಕರ್ನಾಟಕದ ಮೇಲೆ ಕನ್ನಡ ಹಾಗೂ ಇಂಗ್ಲಿಷಿನಲ್ಲಿ ನಡೆಯುವ ಸಾಂಸ್ಕೃತಿಕ ಅಧ್ಯಯನಗಳಲ್ಲಿ ತಾತ್ವಿಕವಾಗಿ ಒಂದು ಸೂಕ್ಷ್ಮವಾದ ವ್ಯತ್ಯಾಸವಿದೆ. ಅದೆಂದರೆ, ಇಂಗ್ಲಿಷಿನಲ್ಲಿ ಬರೆಯುವಾಗ ಭಾರತದ ಅಥವಾ ಜಗತ್ತಿನ ಓದುಗರು ಕಣ್ಣೆದುರು ಇರುತ್ತಾರೆ. ಇದರಿಂದ ಅವು ವಿವರಪ್ರಧಾನ ಆಗುತ್ತವೆ. ಕರ್ನಾಟಕದ ಸಂಸ್ಕೃತಿ ಉದಾತ್ತವಾದುದು ಎಂದು ತೋರಿಸಿಕೊಳ್ಳುವ ಮನೋಧರ್ಮ ಅಲ್ಲಿ ನಿರತವಾಗಿರುತ್ತದೆ. ಅಲ್ಲಿ ಒಂದು ಬಗೆಯ ಉದಾರವಾದಿ ನಿಲುವು, ಉತ್ಪ್ರೇಕ್ಷೆಯ ದನಿ, ನಿಷ್ಠುರ ವಿಮರ್ಶೆಯ ಗೈರುಹಾಜರಿಗಳನ್ನು ಅಲ್ಲಿ ಕಾಣುತ್ತೌಎ. ಇದಕ್ಕೆ ಡಿ. ಆರ್. ನಾಗರಾಜ ಅವರ “ಫ್ಲೇಮಿಂಗ್ ಫೀಟ್” ಪುಸ್ತಕ ಸಾಕ್ಷಿ. ಇದೇ ಸಾಂಸ್ಕೃತಿಕ ಅಧ್ಯಯನಗಳೂ ಪರಿಸರದ ಭಾಷೆಯಾದ ಕನ್ನಡದಲ್ಲಿ ನಡೆದಾಗ, ಅಲ್ಲಿ ಪ್ರಾಥಮಿಕ ವಿವರಗಳನ್ನು ಹೇಳುವ ಅಗತ್ಯವಿರುವುದಿಲ್ಲ. ಅನಗತ್ಯವಾದ ಆತ್ಮಪ್ರಶಂಸೆಯ ದನಿಗೆ ಬದಲಾಗಿ ನಿಷ್ಠುರ ಆತ್ಮವಿಮರ್ಶೆಯ ದನಿ ಮುಖ್ಯವಾಗಿರುತ್ತದೆ.

* * *