ಕನ್ನಡದ ಸಾಂಸ್ಕೃತಿಕ ಅಧ್ಯಯನಗಳಿಗೆ ಕೆಲವು ವಿಶೇಷ ಚಹರೆ ಅಥವಾ ಲಕ್ಷಣಗಳಿವೆ. ಈ ಲಕ್ಷಣಗಳು ಅಧ್ಯಯನಕಾರರ ವೈಯಕ್ತಿಕ, ಸಾಮಾಜಿಕ ಹಿನ್ನೆಲೆಯಿಂದ ಅಥವಾ ಅವರು ನಂಬಿರುವ ಸಿದ್ಧಾಂತದಿಂದ ಮಾತ್ರ ಬಂದವಲ್ಲ. ಇವು ಅನೇಕ ಚಾರಿತ್ರಿಕ ಒತ್ತಡಗಳಿಂದ ಬಂದಂತಹವು. ಇಂತಹ ಕೆಲವನ್ನು ಇಲ್ಲಿ ಗುರುತಿಸಬಹುದು.

ಬಹುರೂಪಿ ವೈವಿಧ್ಯ

ಮೊದಲಿಗೆ ಎದ್ದುಕಾಣುವುದು ಸಾಂಸ್ಕೃತಿಕ ಅಧ್ಯಯನಗಳ ವೈವಿಧ್ಯ. ವಸ್ತುಗಿನ ಆಯ್ಕೆಯಿಂದ ಹಿಡಿದು ಅಧ್ಯಯನಕಾರರು  ಅನುಸರಿಸಿದ ಅಧ್ಯಯನ ವಿಧಾನದವರೆಗೆ ಇದು ಹರಡಿದೆ. ಇದು ಸಾಂಸ್ಕೃತಿಕ ಅಧ್ಯಯನ ಮಾಡಲು ಇರುವ ವಿಷಯಗಳ ಬಾಹುಳ್ಯವನ್ನೊ ಅಧ್ಯಯನಕಾರರ ತಾತ್ವಿಕ ಸಾಮಾಜಿಕ ಬಹುತ್ವವನ್ನೊ, ನಮ್ಮ ಸಮಾಜದ ಸಂಕೀರ್ಣತೆಯನ್ನೊ ಹೇಳುತ್ತಿರಬಹುದು. ತುಳು, ಕೊಡವ ಮುಂತಾದ ಪ್ರಾದೇಶಿಕ ಸಂಸ್ಕೃತಿಗಳ ಅಧ್ಯಯನ, ವಿಭಿನ್ನ ಪರಿಕಲ್ಪನೆಗಳ ಮೂಲಕ ಸಾಹಿತ್ಯದ ಅಧ್ಯಯನ, ಜಾನಪದ ಅಧ್ಯಯನ, ಆಧುನಿಕ ಲೇಖಕರನ್ನು ಕುರಿತ ವಿಶ್ಲೇಷಣೆ, ಮಂಟೆಸ್ವಾಮಿ, ಮಾದೇಶ್ವರ, ಮೈಲಾರ ಮುಂತಾದ ದೈವಪರಂಪರೆಯ ಮೇಲಿನ ಅಧ್ಯಯನ, ಸೂಫಿನಂತರು, ತತ್ವಪದಕಾರರನ್ನು ಕುರಿತ ಅಧ್ಯಯನಗಳು, ಮಹಿಳಾ ಅಧ್ಯಯನಗಳು, ದಲಿತ ಅಧ್ಯಯನಗಳು, ಗ್ರಾಮದೇವತೆಗಳ ಅಧ್ಯಯನಗಳು, ಉಪಸಂಸ್ಕೃತಿ ಅಧ್ಯಯನಗಳು, ಸಾಮಾಜಿಕ ಭಾಷಾಶಾಸ್ತ್ರದ ಅಧ್ಯಯನಗಳು, ಕನ್ನಡ ವಿಶ್ವವಿದ್ಯಾಲಯದ ‘ಪ್ರಾಚೀನ ಕೃತಿಗಳ ಸಾಂಸ್ಕೃತಿಕ ಮುಖಾಮುಖಿ’ ಸರಣಿಯ ಪುಸ್ತಕಗಳು -ಎಲ್ಲವೂ ಕನ್ನಡದ ಸಾಂಸ್ಕೃತಿಕ ಅಧ್ಯಯನಗಳ ವಿಭಿನ್ನ ಮಾದರಿ ಹಾಗೂ ವೈವಿಧ್ಯವನ್ನು ಸೂಚಿಸುತ್ತಿವೆ. ಇವುಗಳ ಹಿಂದೆ ಹೋಗಿ, ಒಂದೊಂದಕ್ಕೂ ಸೈದ್ಧಾಂತಿಕ ಹಿನ್ನೆಲೆಗಳನ್ನು ಶೋಧಿಸುವ ಕೆಲಸವನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗಿದೆ. ಆದರೆ ಸೈದ್ಧಾಂತಿಕ ಹಿನ್ನೆಲೆಗಳನ್ನು ಲೇಬಲ್ಲಿನಂತೆ ಅಂಟಿಸುವಂತಿಲ್ಲ.

ಸಾಂಸ್ಕೃತಿಕ ವಿಧಾನದ ಜನಪ್ರಿಯತೆ?

‘ಸಾಂಸ್ಕೃತಿಕ ಅಧ್ಯಯನ’ ಎಂಬ ಪರಿಭಾಷೆ ಈಗ ಜನಪ್ರಿಯವಾಗಿದೆ. ಈ ಜನಪ್ರಿಯತೆ ಬಂದಿರುವುದು ಇದರ ವಿಧಾನದ ಉಪಯುಕ್ತತೆಯಿಂದಲೊ ಹುಸಿತೋರಿಕೆಗೂ ಹೇಳುವುದು ಕಷ್ಟ. ಕಳೆದ ಒಂದು ದಶಕದಿಂದ ಪ್ರಕಟವಾಗಿರುವ ಪುಸ್ತಕಗಳನ್ನು ನೋಡಿದರೆ, ಸಾಂಸ್ಕೃತಿಕ ಪರಿಭಾಷೆ ವ್ಯಾಪಕವಾಗಿ ಬಳಕೆಯಾಗಿರುವುದು ಗೊತ್ತಾಗುತ್ತದೆ. ಸುಮಾರು ೫೦ರಷ್ಟು ಪುಸ್ತಕಗಳು ತಮ್ಮ ಶೀರ್ಷಿಕೆಯಲ್ಲೇ ಸಂಸ್ಕೃತಿ ಅಥವಾ ಸಾಂಸ್ಕೃತಿಕ ವಿಶೇಷಣವನ್ನು ಧಾರಣ ಮಾಡಿವೆ. ಪರಿಭಾಷೆಯ ಜನಪ್ರಿಯತೆ ಕೆಲವೊಮ್ಮೆ ಫ್ಯಾಶನ್ನಿನಂತೆ ಕೂಡ ಇರಬಲ್ಲದು. ಅಗತ್ಯವಿರಲಿ ಇಲ್ಲದಿರಲಿ, ಸಾಂಸ್ಕೃತಿಕ ಪರಿಭಾಷೆಯನ್ನು ಜೋಡಿಸುವುದು ಈಚೆಗೆ ಪಿಎಚ್.ಡಿ. ಸಂಶೋಧನೆಗಳಲ್ಲಿ ಸಾಮಾನ್ಯವಾಗಿದೆ. ಕೆಲವು ಎನ್.ಜಿ.ಓ.ಗಳಿಗೆ ಸಾಂಸ್ಕೃತಿಕ ಪರಿಭಾಷೆಯು ಹುಸಿವಿದ್ವತ್ತಿನ ಪರಿಭಾಷೆಯಾಗಿದೆ. ಇಂಥ ಅಧ್ಯಯನಗಳು ‘ಸಾಂಸ್ಕೃತಿಕ’ ಎಂದು ತಲೆಬರೆಹದಲ್ಲಿ ಘೋಷಿಸಿಕೊಂಡಿವೆ. ಇವಕ್ಕೆ ಬೇಕಾದ ಬಹುಶಿಸ್ತೀಯ ಪರಿಶೀಲನೆಯ ಸಿದ್ಧತೆಯಾಗಲಿ ರಾಜಕೀಯ ಪ್ರಜ್ಞೆಯಾಗಲೀ ಇರುವುದು ಕಡಿಮೆ. ಹೆಚ್ಚಿನ ಅಧ್ಯಯನಗಳು ಮಾಹಿತಿಯನ್ನು ಹೆಕ್ಕಿ, ಗತಕಾಲದ ಸಾಮಾಜಿಕ ಜೀವನವನ್ನು ಪುನಾರಚಿಸುವ ಕೆಲಸ ಮಾಡುತ್ತವೆ. ಇವುಗಳ ನಡುವೆಯೂ ಸಾಂಸ್ಕೃತಿಕವಾಗಿ ಅಧ್ಯಯನ ಮಾಡಬೇಕೆಂಬ ಒತ್ತಡ ನಮ್ಮ ಗಂಭೀರ ಲೇಖಕರಲ್ಲಿ, ಹೊಸಕ್ರಮವನ್ನು ಹುಡುಕುವ ದೃಷ್ಟಿಕೋನವಾಗಿ ಕಾಣಿಸುತ್ತಿದೆ. ಕೆಳಗಿನ ಒಂದು ಉದಾಹರಣೆ ಕುತೂಹಲಕರವಾಗಿದೆ.

ಬಸವರಾಜ ಕಲ್ಗುಡಿ ತಮ್ಮ ವಚನಕಾರರ ಮೇಲಿನ ಅಧ್ಯಯನವನ್ನು “ಮಧ್ಯಕಾಲೀನ ಭಕ್ತಿ ಮತ್ತು ಅನುಭಾವ ಸಾಹಿತ್ಯ ಹಾಗೂ ಚಾರಿತ್ರಿಕಪ್ರಜ್ಞೆ” ಎಂಬ ಹೆಸರಲ್ಲಿ (೧೯೮೮) ಪ್ರಕಟಿಸಿದ್ದರು. ಇದರ ಎರಡನೇ ಆವೃತ್ತಿಯ ಸಂದರ್ಭದಲ್ಲಿ “ಅನುಭಾವ: ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ” (೧೯೯೭) ಎಂದು ಬದಲಾಯಿಸಿದರು. ತಲೆಬರೆಹ ಬದಲಾವಣೆ ಮತ್ತು ಪುಸ್ತಕದ ಪರಿಷ್ಕರಣೆಗೂ ಲೇಖಕರು ಕಾರಣ ಕೊಡುತ್ತಾರೆ. ಅದರ ಸಾರಾಂಶ ಇದು: ‘ಪಶ್ಚಿಮದ ಚಿಂತನೆಗಳು ಏಕಘನಾಕೃತಿಯ ಜೀವನವನ್ನು ಮೋಹಿಸುವಂತೆ ಮಾಡುತ್ತಿದ್ದು, ಚರಿತ್ರೆಯನ್ನು ಒಂದು ನಿರ್ಜೀವ ಗತವನ್ನಾಗಿ ಮಂಡಿಸಲು ಒತ್ತಾಯಿಸುತ್ತಿವೆ. ಒಂದು ಭಾಷಿಕ ಸಂಸ್ಕೃತಿಯು ತನ್ನನ್ನು ಪ್ರಸ್ತುತ ಗೊಳಿಸಿಕೊಳ್ಳಲು ಮಾಡುವ ಪ್ರಯತ್ನವನ್ನು ಅರಿಯಬೇಕಿದೆ. ಇದಕ್ಕಾಗಿ ಈಗಿರುವ ಸಾಂಪ್ರದಾಯಿಕ ಚರಿತ್ರೆಯ ವ್ಯಾಖ್ಯಾನವನ್ನೇ ಬದಲಿಸಿ ನೋಡಬೇಕಿದೆ. ಅಂದರೆ ಚರಿತ್ರೆಯನ್ನು ಸಂಸ್ಕೃತಿಯ ಗತಿಶೀಲ ಅಂಶವೆಂದೂ ಸಂಸ್ಕೃತಿ ಕಥನವೆಂದೂ ತಿಳಿಯಬೇಕಿದೆ. ಇದರಿಂದ ನಮ್ಮ ವರ್ತಮಾನದ ಸಂವರ್ಧನೆಗಾಗಿ ಗತವನ್ನು ಅರಿಯುವುದು ಮುಖ್ಯಕ್ರಿಯೆ ಎಂಬ ಹೊಸ ಚಾರಿತ್ರಿಕ ಪ್ರಜ್ಞೆ ಹುಟ್ಟುತ್ತದೆ’ (೧೯೯೭:ಮುನ್ನುಡಿ).

ಸಾಹಿತ್ಯದ ಪ್ರಶ್ನೆಯನ್ನು ಸಂಸ್ಕೃತಿಯ ಪ್ರಶ್ನೆಯನ್ನಾಗಿ ಗ್ರಹಿಸುವುದು ಮತ್ತು ಈ ಕೇಂದ್ರಕ್ಕೆ ಬದುಕಿನ ಬೇರೆಬೇರೆ ಆಯಾಮಗಳ ಜೋಡಿಸುತ್ತಾ ಚರ್ಚೆ ಮಾಡುವುದು ಇಲ್ಲಿನ ಆಶಯವಾಗಿದೆ. ಈ ಬದಲಾವಣೆ ಸತ್ಯವನ್ನು ಶೋಧಿಸಲು ಒಂದು ಶಿಸ್ತಿನ ಹಾದಿ ಸಾಲದು ಎಂಬ ಅರಿವಿನ ಭಾಗವಾಗಿಯೂ ಬಂದಂತಿದೆ. ಇಲ್ಲಿ ಗಮನಿಸಬೇಕಾದ್ದು ಮೂರು ಸಂಗತಿಗಳು: ೧. ಪುಸ್ತಕದ ಶೀರ್ಷಿಕೆಯಲ್ಲಿ ಮೊದಲಿದ್ದ ‘ಚಾರಿತ್ರಿಕ ಪ್ರಜ್ಞೆ’ ಎಂಬುದು ಹೋಗಿ ‘ಸಾಂಸ್ಕೃತಿಕ ಸಮಸ್ಯೆ’ ಎಂಬ ಪದ ಸೇರ್ಪಡೆಯಾಗಿರುವುದು. ೨. ಚರಿತ್ರೆಯ ಕಲ್ಪನೆಯಲ್ಲಿ ಉಂಟಾಗಿರುವ ಮೂಲಭೂತ ಬದಲಾವಣೆ ಮತ್ತು ಅದನ್ನು ವ್ಯಕ್ತಪಡಿಸಲು ಲೇಖಕರು ಬಳಸಿಕೊಳ್ಳುತ್ತಿರುವ ಸಾಂಸ್ಕೃತಿಕ ಪರಿಭಾಷೆ. ೩. ೧೯೮೮ ಹಾಗೂ ೧೯೯೭ರ ನಡುವಿನ ಕಾಲದ ಅಂತರ. ಇದು ಕನ್ನಡದ ಅಧ್ಯಯನಗಳಲ್ಲಿ ಉಂಟಾಗಿರುವ ಸಾಂಸ್ಕೃತಿಕ ಅಧ್ಯಯನ ವಿಧಾನದ ಒಲವನ್ನು ಸೂಚಿಸುತ್ತಿದೆ. ಇಲ್ಲಿ ಅಧ್ಯಯನವನ್ನು ವಸಾಹತುಶಾಹಿ ಪಶ್ಚಿಮದ ವೈಚಾರಿಕ ಆಕೃತಿಗಳಿಂದಲೂ ತಪ್ಪಿಸಿ ಜನಪರವೂ ಸಮಕಾಲೀನವೂ ಆದ ಭೂಮಿಕೆಗೆ ಎಳೆತರಲು ಲೇಖಕರು ‘ಸಾಂಸ್ಕೃತಿಕ’ ಪರಿಭಾಷೆ  ಬಳಸಿರುವಂತಿದೆ. ಆದರೆ, ಕೃತಿಯ ಶೀರ್ಷಿಕೆಯಲ್ಲಿ ‘ಸಾಂಸ್ಕೃತಿಕ’ ವಿಶೇಷಣ ಸೇರಿಸುವುದಕ್ಕೂ, ಕೃತಿಯ ಒಳಗಡೆ ಸಾಂಸ್ಕೃತಿಕ ಅಧ್ಯಯನ ವಿಧಾನವನ್ನು ಅಳವಡಿಸುವುದಕ್ಕೂ ವ್ಯತ್ಯಾಸವಿದೆ.

ಯಾವುದು ಸಾಂಸ್ಕೃತಿಕ?

ಕಳೆದ ೧೫ ವರ್ಷಗಳಿಂದ ಕನ್ನಡದಲ್ಲಿ ಸಾಹಿತ್ಯ ವಿಮರ್ಶೆ, ಸಂಶೋಧನೆ, ವಿಶ್ಲೇಷಣೆ, ಕೋಶರಚನೆ ಮುಂತಾದ ಚಟುವಟಿಕೆಗಳೆಲ್ಲ ಸಾಂಸ್ಕೃತಿಕ ಅಧ್ಯಯನದ ವಿಶಾಲ ತೆಕ್ಕೆಯಲ್ಲಿ ಬಂದು ಸೇರಲು ಹಾತೊರೆಯುತ್ತಿವೆ. ಈ ಪ್ರಕ್ರಿಯೆಯಲ್ಲಿ ಯಾವುದು ಸಾಹಿತ್ಯ ವಿಮರ್ಶೆ, ಯಾವುದು ಚಾರಿತ್ರಿಕ ಸಂಶೋಧನೆ ಅಥವಾ ಸಾಮಾಜಿಕ ಅಧ್ಯಯನ – ಎಂದು ಖಚಿತವಾಗಿ ಗುರುತಿಸಲು ಕಷ್ಟವಾಗುವಂತೆ ಸರಹದ್ದು ಮಸುಕಾಗುತ್ತಿವೆ. ಇಂತಹ ಮಸುಕಿನಲ್ಲೇ ‘ಸಾಂಸ್ಕೃತಿಕ ಅಧ್ಯಯನಗಳು’ ರೂಪಪಡೆಯುತ್ತಿವೆ. ಸಾಹಿತ್ಯಕ ಅಧ್ಯಯನಗಳ ಬಗ್ಗೆ ಹೇಳುವುದಾದರೆ, ಸಾಹಿತ್ಯ ವಿಮರ್ಶೆಯು ‘ವೈಚಾರಿಕ ಚಿಂತನೆ’ಯಾಗಿ, ‘ಸಾಂಸ್ಕೃತಿಕ ಬರೆಹ’ವಾಗಿ ರೂಪಾಂತರ ಪಡೆಯುತ್ತಿವೆ. ಈ ‘ಸಾಂಸ್ಕೃತಿಕ ಬರೆಹ’ಕ್ಕೂ ಕನ್ನಡದ ರಾಜಕೀಯ ಸಾಮಾಜಿಕ ಚಿಂತನ ಬರೆಹಗಳಿಗೂ ಇರುವ ರೇಖೆಗಳು ಅಳಿದುಹೋಗುತ್ತಿವೆ. ಈ ಸನ್ನಿವೇಶದಲ್ಲಿ ‘ಸಾಂಸ್ಕೃತಿಕ ಅಧ್ಯಯನ’ ಎಂದು ಹೇಳಿಕೊಳ್ಳದೆ ಅರ್ಥಪೂರ್ಣವಾದ ಸಾಂಸ್ಕೃತಿಕ ಅಧ್ಯಯನ ಮಾಡುವವರೂ, ಸಾಂಸ್ಕೃತಿಕ ಎಂದು ಘೋಷಿಸಿ ಕೊಂಡು ಸಾಂಪ್ರದಾಯಕ ಅಧ್ಯಯನ ಮಾಡುವವರೂ ಇದ್ದಾರೆ. ಮೊದಲ ಗುಂಪಿನಲ್ಲಿ “ಕರ್ನಾಟಕ ಸಂಸ್ಕೃತಿ ಸಂಶೋಧನೆ” (೧೯೭೦) ಬರೆದ ಕಪಟರಾಳ ಕೃಷ್ಣರಾವ್ ಹಾಗೂ “ಲೌಕಿಕ ಅಲೌಕಿಕ” ಕೃತಿಯ ರಾಜಾರಾಮ ಹೆಗಡೆಯವರು ಸೇರುತ್ತಾರೆ. ಹೆಗಡೆಯವರ ಬಲಿಯ ಆರಾಧನೆ ಹಾಗೂ ತಿಮ್ಮಪ್ಪ ರಂಗನಾಥರನ್ನು ಕುರಿತ ಲೇಖನಗಳು ಅತ್ಯುತ್ತಮ ಸಾಂಸ್ಕೃತಿಕ ಅಧ್ಯಯನಗಳು.

ಬಹುಶಿಸ್ತೀಯತೆಯ ಸಮಸ್ಯೆ

ಸಾಂಸ್ಕೃತಿಕ ಅಧ್ಯಯನಗಳ ಮುಖ್ಯ ಲಕ್ಷಣ ಅವುಗಳ ಬಹುಶಿಸ್ತೀಯ ಅಧ್ಯಯನ ವಿಧಾನ. ಇಲ್ಲಿ ಬಹುಶಿಸ್ತೀಯತೆಯು ಏಕಶಿಸ್ತು ಕೊಡುವ ಒಮ್ಮುಖ ತಿಳಿವಳಿಕೆಯಿಂದ ಬಿಡುಗಡೆ ಪಡೆಯಲು ಹುಟ್ಟಿದ ಹೊರದಾರಿ. ಆದ್ದರಿಂದಲೇ ಅದು ಸಾಂಸ್ಕೃತಿಕ ಅಧ್ಯಯನಗಳ ಮುಖ್ಯ ಲಕ್ಷಣವಾಯಿತು. ಆದರೆ ಬಹುಶಿಸ್ತೀಯತೆಯ ಈ ಕಾರಣವು ಒಂದು ಸಮಸ್ಯೆಯೂ ಆಗಿದೆ. ಹೇಗೆಂದರೆ, ಬಹುಶಿಸ್ತೀಯ ವಿಧಾನವು ಅಪಾರ ಸಿದ್ಧತೆಯನ್ನು ನಿರೀಕ್ಷಿಸುತ್ತದೆ. ಸಮಾಜಶಾಸ್ತ್ರ, ಚರಿತ್ರೆ, ತತ್ವಶಾಸ್ತ್ರ, ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳ ವಿದ್ವತ್ ಪ್ರವೇಶ ಬೇಡುತ್ತದೆ. ಎಷ್ಟು ಸಿದ್ಧತೆ ಮಾಡಿಕೊಂಡರೂ ನಿರ್ದಿಷ್ಟ ಜ್ಞಾನಶಿಸ್ತಿನಲ್ಲೆ ಪಳಗಿದವರ ಪರಿಣತಿ ಬರುವುದು ಕಷ್ಟ. ಇದರಿಂದ ಬಹುಶಿಸ್ತೀಯ ರೂಪದ ಸಾಂಸ್ಕೃತಿಕ ವಿಧಾನದಿಂದ ಕೆಲವೊಮ್ಮೆ ಮೇಲ್ಪದರ ತಿಳಿವಳಿಕೆಯಿಂದ ನಿಭಾಯಿಸುವ ಸಂಭವಗಳು ಹೆಚ್ಚಿವೆ. ಡಿ.ಆರ್.ನಾಗರಾಜ ಅವರ ಅಧ್ಯಯನಗಳಲ್ಲಿ ಇರುವ ತತ್ವಶಾಸ್ತ್ರೀಯ ತಿಳಿವಿನ ಬಗ್ಗೆ ಇಂತಹ ಪ್ರಶ್ನೆಗಳನ್ನು ಪಾದೇಕಲ್ಲು ನರಸಿಂಹಭಟ್ಟ ಎತ್ತುತ್ತಾರೆ (ತರೀಕೆರೆ:೨೦೦೦:೪೫).

ನೀಗದ ಗೊಂದಲ

ಕನ್ನಡದಲ್ಲಿ ಸಾಂಸ್ಕೃತಿಕ ಅಧ್ಯಯನಗಳಿಗೆ ಅರ್ಧ ಶತಮಾನಕ್ಕಿಂತಲೂ ಕಡಿಮೆ ಚರಿತ್ರೆಯಿದೆ. ಆದರೂ ಸಾಂಸ್ಕೃತಿಕ ಅಧ್ಯಯನಗಳಲ್ಲಿ ವೈವಿಧ್ಯ ಮತ್ತು ವಿಪುಲತೆಯಿದೆ. ಆದರೆ ‘ಸಂಸ್ಕೃತಿ’, ‘ಸಾಂಸ್ಕೃತಿಕ’ ಶಬ್ದಗಳಿಗೆ ಪರಿಕಲ್ಪನಾತ್ಮಕ ಸ್ಪಷ್ಟತೆಯಿನ್ನೂ ದಕ್ಕಿಲ್ಲ. ಅಧ್ಯಯನಗಳಲ್ಲಿ ತೊಡಗಿರುವವರು ವಿಭಿನ್ನ ತಲೆಮಾರಿನವರು, ವಿಭಿನ್ನ ಸಾಮಾಜಿಕ ಸ್ತರದವರು, ವಿಭಿನ್ನ ಸೈದ್ಧಾಂತಿಕ ನೆಲೆಯವರು. ಗೊಂದಲಕ್ಕೆ ಕಾರಣ ಇದಲ್ಲ. ನಿಜವಾದ ಕಾರಣ, ‘ಸಂಸ್ಕೃತಿ’ ಸಾಂಸ್ಕೃತಿಕ’ ಪರಿಕಲ್ಪನೆಗಳ ಬಗ್ಗೆ, ಅಧ್ಯಯನಕಾರರಲ್ಲಿ ಗಂಭೀರವೂ ತೀವ್ರವೂ ಆದ ವಾಗ್ವಾದಗಳು ನಡೆಯದಿರುವುದು. ಇದು ಕನ್ನಡದಲ್ಲಿ ತತ್ವಶಾಸ್ತ್ರೀಯ ಚಿಂತನೆಯ ಕೊರತೆಯನ್ನು ಸೂಚಿಸುತ್ತದೆ. ಹೆಚ್ಚಿನ ಅಧ್ಯಯನಕಾರರು ತಮ್ಮ ಆಯ್ಕೆಯ ವಸ್ತುವಿಗೆ ಮತ್ತು ಬಳಸುವ ಆಕರಗಳಿಗೆ ಸೂಕ್ತವಾದ ಅಧ್ಯಯನ ವಿಧಾನ ಹಾಗೂ ತಾತ್ವಿಕತೆ ಯಾವುದು, ತಾವು ಬದುಕುತ್ತಿರುವ ಪರಿಸರಕ್ಕೂ ಈ ಅಧ್ಯಯನಗಳಿಗೂ ಯಾವ ಬಗೆಯ ಸಂಬಂಧ – ಎಂಬ ಪ್ರಶ್ನೆಗಳನ್ನು ತೀವ್ರವಾಗಿ ಮುಖಾಮುಖಿ ಮಾಡುವುದಿಲ್ಲ. ಪ್ರಚಲಿತವಾಗಿರುವ ಒಂದು ಸಂಸ್ಕೃತಿ ವ್ಯಾಖ್ಯೆಯನ್ನೊ ಸಾಂಸ್ಕೃತಿಕ ಅಧ್ಯಯನ ವಿಧಾನವನ್ನೊ ಹಿಡಿದು ಅಧ್ಯಯನ ಶುರುಮಾಡುತ್ತಾರೆ. ಈ ಬೌದ್ಧಿಕ ಆಲಸ್ಯವು ಕನ್ನಡದ ಮುಖ್ಯ ಸಮಸ್ಯೆ.

ಕನ್ನಡದಲ್ಲಿ ಸಾಂಸ್ಕೃತಿಕ ಅಧ್ಯಯದ ಹೆಸರಲ್ಲಿ ಧಾರ್ಮಿಕ, ಚಾರಿತ್ರಿಕ, ಜಾನಪದ, ಸಮಾಜಶಾಸ್ತ್ರೀಯ, ಮಾನವಶಾಸ್ತ್ರೀಯ ಹಾಗೂ ಸಾಹಿತ್ಯಕ ಅಧ್ಯಯನಗಳನ್ನು ಮಾಡಲಾಗುತ್ತಿದೆ. ‘ಸಾಂಸ್ಕೃತಿಕ’ ಎನ್ನುವುದು ಈ ವಿಭಿನ್ನ ಶಾಸ್ತ್ರಗಳಿಗೆ ಒಂದೇ ಪರಿಕಲ್ಪನೆಯಾಗಿ ಒದಗುತ್ತದೆಯೊ, ಆಯಾ ಶಾಸ್ತ್ರಕ್ಕೆ ಅನುಸಾರವಾಗಿ ರೂಪಾಂತರವಾಗುತ್ತದೆಯೊ? ಈ ಬಗ್ಗೆ ಖಚಿತತೆಯಿಲ್ಲ. ಮೂಲಭೂತವಾಗಿ ಸಾಂಸ್ಕೃತಿಕ ಅಥವಾ ಸಂಸ್ಕೃತಿ ಎಂಬ ಪರಿಭಾಷೆ/ಪರಿಕಲ್ಪನೆಗಳಿಗೆ ಖಚಿತ ಅರ್ಥವೇ ನಿರ್ಣಯವಾಗಿಲ್ಲ. ಅರ್ಥನಿರ್ಣಯ ಆಗಬೇಕೆಂದೂ ಇಲ್ಲ. ಕೆಲವೊಮ್ಮೆ ಅದು ತಕ್ಷಣ ಆಗುವುದೂ ಇಲ್ಲ. ಆದರೆ ಅಧ್ಯಯನಕಾರರು ಅರ್ಥದ ಜಿಜ್ಞಾಸೆಗೆ ಇಳಿಯದಿರುವುದು ಮಾತ್ರ ದೋಷ. ಬಳಸುವ ಪರಿಭಾಷೆಗಳಿಗೆ ತಂತಮ್ಮ ಅರ್ಥನೀಡಿಕೊಂಡು ಅಧ್ಯಯನ ಮಾಡುವ ಪದ್ಧತಿ ಹಿಂದಿನಿಂದಲೂ ಕನ್ನಡದಲ್ಲಿದೆ. ಆದರೆ ಸಂಸ್ಕೃತಿ ಶಬ್ದಕ್ಕೆ ವ್ಯಾಖ್ಯೆಯ ನಿಘಂಟಿನಲ್ಲಿ ಪೂರ್ತಿಯಾಗಿ ಸಿಗದಿರುವುದು, ಸಿಗುವ ಅರ್ಥಕ್ಕೂ ಬಳಕೆಯಲ್ಲಿರುವ ಅರ್ಥಕ್ಕೂ ಸಂಬಂಧವಿಲ್ಲದಂತೆ ಅರ್ಥ ನಿರಂತರವಾಗಿ ಬದಲಾಗುತ್ತಿರುವುದು, ಈ ಅರ್ಥವು ನಮ್ಮ ಸಾಮಾಜಿಕ ರಾಜಕೀಯ ಧಾರ್ಮಿಕ ತಾತ್ವಿಕ ನಂಬಿಕೆಯ ಭಾಗವಾಗಿರುವುದು ಹಾಗೂ ರಾಜಕಾರಣದ ಪರಿಭಾಷೆ ಆಗಿರುವುದು. ಸಮಸ್ಯೆಯ ಜಟಿಲತೆಗೆ ಕಾರಣವಾಗಿದೆ. ಇಂತಹ ಸನ್ನಿವೇಶದಲ್ಲಿ ಪರಿಭಾಷೆಗಳನ್ನು ಯಾವರ್ಥದಲ್ಲಿ ಬಳಸುತ್ತಿದ್ದೇವೆ ಎಂದು ಖಚಿತಪಡಿಸಿಯೇ ಅಧ್ಯಯನಕಾರರು ಮುಂದಕ್ಕೆ ಹೋಗಬೇಕು. ಇಲ್ಲವಾದರೆ ತಾತ್ವಿಕ ಅರಾಜಕತೆ ಉಂಟಾಗುತ್ತದೆ. ಅಂಥ ಅರಾಜಕ ವಾತಾವರಣ ನಮ್ಮ ಅಧ್ಯಯನಗಳಲ್ಲಿ ವ್ಯಾಪಕವಾಗಿದೆ.

ಬೇರೊಂದು ಚಾರಿತ್ರಿಕ ಸನ್ನಿವೇಶದಲ್ಲಿ ಹುಟ್ಟಿದ ಸಂಸ್ಕೃತಿ ವ್ಯಾಖ್ಯೆಯನ್ನು ನಂಬಿ ಅದರ ನಿರ್ದೇಶನದಲ್ಲಿ ಅಧ್ಯಯನ ಮಾಡುವವರು, ಯಾರ ವ್ಯಾಖ್ಯೆಗೂ ತಲೆಗೊಡದೆ ಸಿಕ್ಕ ಮಾಹಿತಿಗಳನ್ನು ತಾವು ನಂಬಿದ ಸಿದ್ಧಾಂತದ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವವರು, ಪರಸ್ಪರ ವಿರುದ್ಧವಾದ ಸಂಸ್ಕೃತಿ ವ್ಯಾಖ್ಯೆಗಳನ್ನು ಒಂದೇ ಅಧ್ಯಯನದಲ್ಲಿ ಬಳಸುತ್ತ ವೈರುಧ್ಯವನ್ನು ನಿರ್ಮಿಸಿಕೊಳ್ಳುವವರು – ಹೀಗೆ ಮೂರು ಮಾದರಿಗಳು ಕನ್ನಡದಲ್ಲಿವೆ. ಇರುವ ಸಂಸ್ಕೃತಿ ಕಲ್ಪನೆ ಹಾಗೂ ಸಾಂಸ್ಕೃತಿಕ ಅಧ್ಯಯನ ವಿಧಾನಗಳನ್ನು ಚಾರಿತ್ರಿಕವಾಗಿ ಪರಿಶೀಲಿಸಿ, ವಿಮರ್ಶಿಸಿ, ಹೊಸಹೊಸ ಅಧ್ಯಯನ ವಿಧಾನಗಳನ್ನು ರೂಪಿಸುವವರು ಕಡಿಮೆ. ಅಧ್ಯಯನಕಾರರು ಯಾವ ವಿಷಯದ ಮೇಲೆ ಅಧ್ಯಯನ ಮಾಡುತ್ತಾರೆ, ಎಷ್ಟು ಶ್ರಮ ಹಾಕುತ್ತಾರೆ ಅಥವಾ ಸಾಮಾಜಿಕ ಕಾಳಜಿ ತೋರುತ್ತಾರೆ ಎನ್ನುವುದು ಅಷ್ಟು ಮುಖ್ಯವಲ್ಲ, ಯಾವ ಅಧ್ಯಯನ ವಿಧಾನ ರೂಪಿಸಿಕೊಳ್ಳುತ್ತಾರೆ ಎನ್ನುವುದು ಬಹಳ ಮುಖ್ಯ. ಲೋಕವು ತಾನು ಇರುವಂತೆ ಮಾತ್ರ ಕಾಣುವುದಿಲ್ಲ. ನಾವು ನೋಡುವಂತೆಯೂ ‘ಕಾಣಿಸು’ತ್ತದೆ. ಅಧ್ಯಯನ ವಿಧಾನದ ಚರ್ಚೆಯ ಅಧ್ಯಯನಕಾರರ ನೋಡುವಿಕೆಯನ್ನು ರೂಪಿಸುವ ತಾತ್ವಿಕತೆಗೆ ಸಂಬಂಧಿಸಿದುದು.

ಹೆಚ್ಚಿನ ಸಾಂಸ್ಕೃತಿಕ ಅಧ್ಯಯನಕಾರರಿಗೆ ‘ಸಂಸ್ಕೃತಿ’ ಪರಿಕಲ್ಪನೆಯು, ತಾನು ಹುಟ್ಟಿದ ಚಾರಿತ್ರಿಕ ಸಂದರ್ಭದ ಅರ್ಥ ಹಾಗೂ ಲೋಕದೃಷ್ಟಿಯಳನ್ನು ಹೊಂದಿದೆ, ಅದು ಕಾಲಕಾಲಕ್ಕೆ ಬದಲಾಗುತ್ತ ಬಂದಿದ್ದು, ಮುಂದೆಯೂ ಬದಲಾಗುವಂತಹದು ಎಂಬ ಪ್ರಾಥಮಿಕ ಸಂಗತಿಯೇ ಮನವರಿಕೆ ಆದಂತಿಲ್ಲ. ಕೆಲವರಿಗೆ ‘ಸಾಂಸ್ಕೃತಿಕ’ ಪದವನ್ನು ಯಾವರ್ಥದಲ್ಲಿ ಬಳಸುತ್ತೇವೆ ಎಂದು ಸ್ಪಷ್ಟೀಕರಣ ನೀಡುವುದು ಅಗತ್ಯವೆನಿಸಿಲ್ಲ. ಅದು ಅರ್ಥ ನಿರ್ಣಯಗೊಂಡ ಸಂಗತಿ ಎಂಬಂತೆ ನಿರಾಳವಾಗಿ ಬಳಸುತ್ತ ಹೋಗುತ್ತಾರೆ. ಇಂತಹ ಅಧ್ಯಯನಗಳಲ್ಲಿ ಸಾಂಸ್ಕೃತಿಕ ಎನ್ನುವುದು ಔಪಚಾರಿಕವಾಗಿ ಲಗತ್ತಾಗಿರುವ ವಿಶೇಷದಂತೆ, ಸಂಶೋಧನೆಯಲ್ಲಿರುವ ಅಲಂಕಾರದಂತೆ ಭಾಸವಾಗುವುದು.

ಜನಪ್ರಿಯ ಸಂಸ್ಕೃತಿ ಕುರಿತು

ಸಾಂಸ್ಕೃತಿಕ ಅಧ್ಯಯನ ವಿಧಾನವು ಒಂದು ಮೂಲತ: ಲೋಕದೃಷ್ಟಿ. ಅದರ ಪ್ರಕಾರ ಸಂಸ್ಕೃತಿ ಚರ್ಚೆಯಲ್ಲಿ ಬದುಕಿಗೆ ಸಂಬಂಧಿಸಿದ ಯಾವ ವಿದ್ಯಮಾನವು ಅಮುಖ್ಯವಲ್ಲ. ವಸ್ತುವಿನ ಆಯ್ಕೆಯಲ್ಲಿ ತಾರತಮ್ಯವಿಲ್ಲ. ಬದಲಾಗಿ ಅಧಿಕಾರಸ್ಥರ ಕಣ್ಣಲ್ಲಿ ಕ್ಷುದ್ರಮಾನಿಸುವ ಸಂಗತಿ, ಸಾಂಸ್ಕೃತಿಕ ಚರ್ಚೆಯಲ್ಲಿ ಮತ್ತಷ್ಟು ಮುಖ್ಯವಾಗುತ್ತದೆ. ಈ ನಂಬಿಕೆಯಿಂದ ಸಾಂಸ್ಕೃತಿಕ ಅಧ್ಯಯನಗಳಲ್ಲಿ ನಿರ್ಲಕ್ಷಿತ ಕ್ಷೇತ್ರಗಳಲ್ಲಿ ನಡೆದ ಅಧ್ಯಯನಗಳತ್ತ ಗಮನ ಹರಿಸಿ, ಅಂಚಿನಲ್ಲಿದ್ದು ನಿರ್ಲಕ್ಷ್ಯಕ್ಕೊಳಗಾಗಿರುವ ಸಂಗತಿಗಳನ್ನು ಉದ್ದೇಶಪೂರ್ವಕ ಮಹತ್ವಕೊಟ್ಟು ಅಧ್ಯಯನ ಮಾಡುವುದು ತಾತ್ವಿಕವಾಗಿ ಆಧುನಿಕೋತ್ತರ ಚಿಂತನೆಗಳ ಒಂದು ಗುಣ. ಇದರಿಂದ ಪಶ್ಚಿಮದಲ್ಲಿ ಪರಿಸರವಾದ, ಮಹಿಳಾವಾದ, ಬುಡಕಟ್ಟು ಸಂಸ್ಕೃತಿಗಳು, ಪಾಪ್ ಕಲ್ಚರ್‌ಗಳ ಅಧ್ಯಯನಗಳು ಗರಿಗೆದರಿ ನಡೆದವು. ಕನ್ನಡದಲ್ಲಿ ೭೦ ಮತ್ತು ೮೦ರ ದಶಕಗಳಲ್ಲಿ ಹೊಮ್ಮಿದ ದಲಿತಪರ ಸಾಮಾಜಿಕ ದೃಷ್ಟಿಕೋನದ ಫಲವಾಗಿ ಸಹಜವಾಗಿಯೇ ನಿರ್ಲಕ್ಷಿತ ಸಂಗತಿಗಳ ಮೇಲೆ ಶ್ರದ್ಧೆತೋರುವ ದೃಷ್ಟಿಕೋನ ಹೊಮ್ಮಿತು. ಇದು ಕೇವಲ ಅಧ್ಯಯನ ಕ್ಷೇತ್ರದಲ್ಲಿ ಮೂಡಲಿಲ್ಲ. ಬಡವರ, ದಲಿತರ, ಮಹಿಳೆಯರ ಹಾಗೂ ಕಾಡಿನ ಲೋಕಗಳನ್ನು ಶೋಧಿಸುತ್ತ ಕತೆಕವಿತೆಗಳ ಕ್ಷೇತ್ರದಲ್ಲೂ ಮೂಡಿತು. ವೈದೇಹಿಯವರ ‘ಅಕ್ಕು’ ಅಥವಾ ಕುಂವಿಯವರ ‘ಎಲುಗನೆಂಬ ಕೊರಚನೂ’ ಕತೆಗಳು, ತೇಜಸ್ವಿಯವರ ಪರಿಸರದ ಬರೆಹಗಳು, ದೇವನೂರರ “ಕುಸುಮಬಾಲೆ” – ಇವೆಲ್ಲ ತಾತ್ವಿಕವಾಗಿ ಸಬಾಲ್ಟರ್ನ್ ದೃಷ್ಟಿಕೋನದವು. ಚರಿತ್ರ ಲೇಖನಕಾರ್ಯದಲ್ಲಿ ಸ್ಥಳೀಯ/ಪ್ರಾದೇಶಿಕ ಇತಿಹಾಸ ಅಧ್ಯಯನ ಮಾಡಬೇಕು ಎಂಬ ಕಲ್ಪನೆ ಮೂಡಿತು. ಪ್ರಾಚೀನ ಪಠ್ಯಗಳಲ್ಲಿ ‘ಅಶುದ್ಧ’ವೆನಿಸಿದ ಪಾಠಗಳನ್ನು, ‘ಹೆಚ್ಚಿನ’ ವಚನಗಳನ್ನು ಕುರಿತು ಕುತೂಹಲ ಹುಟ್ಟಿತು. ಹೀಗೆ ನಾನಾ ರೂಪದಲ್ಲಿ ಕನ್ನಡ ಸಾಂಸ್ಕೃತಿಕ ಅಧ್ಯಯನಗಳಲ್ಲಿ ತಳಸ್ತರದ ಲೋಕಗಳು ಪ್ರವೇಶಿಸಿದವು.

ಇಷ್ಟಾದರೂ ಸಾಂಸ್ಕೃತಿಕ ಅಧ್ಯಯನಗಳು ಪ್ರತಿಷ್ಠಿತವಾಗಿರುವ ವಿಷಯಗಳ ಮೇಲೆ ಅಧ್ಯಯನ ಮಾಡುವ ಕ್ಲಾಸಿಕಲ್ ಪ್ರವೃತ್ತಿಯಿಂದ ಬಿಡಿಸಿಕೊಂಡಿಲ್ಲ. ‘ಜನಪ್ರಿಯ ಸಂಸ್ಕೃತಿ’ ಎನ್ನಲಾಗುವ ಕ್ಯಾಸೆಟ್ಟು, ಸಿನಿಮಾ, ಸಿನಿಮಾಹಾಡು, ನಟರು, ಕಂಪನಿ ನಾಟಕ, ಜನಪ್ರಿಯ ಕಾದಂಬರಿ, ಪತ್ತೇದಾರಿ ಸಿನಿಮಾ, ಚುಟುಕು ಸಾಹಿತ್ಯ, ಹನಿಗವನ – ಇವುಗಳ ಬಗ್ಗೆ ಗಂಭೀರ ಅಧ್ಯಯನಗಳು ನಡೆದಿಲ್ಲ. ಇವು ಆಧುನಿಕ ಸಂಸ್ಕೃತಿಯ ಬಹಳ ಮುಖ್ಯ ಆಯಾಮಗಳು. ಜನಪ್ರಿಯ ಸಿನಿಮಾಗಳಿಗೆ ದುಡಿವ ಸಮುದಾಯಗಳ ಜೀವನದಲ್ಲಿ ವಿಶಿಷ್ಟ ಸ್ಥಾನವಿದೆ. ಆದರೆ ತಮಿಳಿನ ಎಂಜಿಆರ್ ಸಿನಿಮಾಗಳ ಬಗ್ಗೆ ಅಧ್ಯಯನ ನಡೆದಂತೆ ನಮ್ಮಲ್ಲಿ ನಡೆದಿಲ್ಲ. ಈ ಹೊತ್ತು ಮಲೆಮಾದೇಶ್ವರನ ಮೇಲಿನ ಕಾವ್ಯಕ್ಕಿಂತ ಸಿನಿಮಾವನ್ನು ಬಹಳ ಜನ ನೋಡಿದ್ದಾರೆ. ಅವನ ಮೇಲೆ ಬಂದಿರುವ ಕ್ಯಾಸೆಟ್ಟುಗಳನ್ನು ಬಹಳ ಜನ ಕೇಳುತ್ತಾರೆ. ಜಾತ್ರೆಗಳಲ್ಲಿ ಮಾರಾಟವಾಗುವ ಭಕ್ತಿಗೀತೆಗಳ ಕ್ಯಾಸೆಟ್ಟುಗಳೂ ಹೇಗೆ ಬಳಕೆಯಾಗುತ್ತವೆ ಎಂಬ ಬಗ್ಗೆ ಅಧ್ಯಯನ ನಡೆದಿಲ್ಲ. ಜನಪ್ರಿಯ ಕಾದಂಬರಿಗಳ ಓದುಗರು ಯಾರು ಮತ್ತು ಯಾಕೆ? ಕರ್ನಾಟಕದಲ್ಲಿ ದರ್ಗಾಸಂಸ್ಕೃತಿ ಯಾಕೆ ಜಾತ್ಯತೀತವಾಗಿದೆ? ಕರ್ನಾಟಕದ ಯಾವವರ್ಗದ ಜನ ಯಾಕಾಗಿ ಶಬರಿಮಲೆಗೆ ಹೋಗುತ್ತಾರೆ? ಇಂತಹ ಪ್ರಶ್ನೆಗಳನ್ನು ಎತ್ತಿಕೊಂಡಿಲ್ಲ. ನಿಜ ಹೇಳಬೇಕೆಂದರೆ, ಕನ್ನಡದಲ್ಲಿ ಜನಪ್ರಿಯ ಸಂಸ್ಕೃತಿಯ ಅಧ್ಯಯನಗಳು ಶುರುವಾಗಬೇಕಿದೆ.

ಇದಕ್ಕೆ ಜನಪ್ರಿಯ ಸಂಸ್ಕೃತಿ (Popular culture) ಕುರಿತು ಇರುವ ಪ್ರತಿಷ್ಠಿತ ದೃಷ್ಟಿಕೋನವೂ ಒಂದು ಕಾರಣ. ಜನಪ್ರಿಯ ಸಂಸ್ಕೃತಿಯ ಬಗ್ಗೆ ಗಂಭೀರ ಪರಿಶೀಲನೆಯ ಅಗತ್ಯವನ್ನು ಮೊದಲಿಂದಲೂ ಪ್ರತಿಪಾದಿಸುತ್ತ ಬಂದವರಲ್ಲಿ ಪುಣೇಕರರು ಒಬ್ಬರು. ಅವರ ಪ್ರಕಾರ ಕನ್ನಡ ಚಿಂತಕರಲ್ಲಿ ಇರುವ ಪಾಶ್ಚಾತ್ಯರ ಪ್ರತಿಷ್ಠಿತ (ಎಲ್ಯೆಟ್) ಬುದ್ಧಿಜೀವಿ ದೃಷ್ಟಿಕೋನದಿಂದ ನಮ್ಮ ಸಂಸ್ಕೃತಿ ಈ ಮುಖವನ್ನು ಗಂಭೀರವಾಗಿ ಪರಿಗಣಿಸಲು ಆಗುತ್ತಿಲ್ಲ (೧೯೮೧:೧೦೦). ಕನ್ನಡ ಅಧ್ಯಯನಗಳ ಈ ಪರಿಮಿತಿಯನ್ನು ಮೀರಲೆಂದೊ ಏನೋ, ಡಿ.ಆರ್. ನಾಗರಾಜ ಅವರು ಒಂದು ಉದ್ದೇಶಪೂರ್ವಕ ಪ್ರಯತ್ನ ಮಾಡಿದರು. ಇದನ್ನು ಅವರ “ಸಾಹಿತ್ಯ ಕಥನ”ದಲ್ಲಿರುವ ‘ಅಧಿಕಾರ ವಿಘಟನೆಯ ಆತಂಕಮಯ ಮತ್ತು ಹಾಸ್ಯಮಯ ರೂಪಗಳು-ಜನಪ್ರಿಯ ಸಿನಿಮಾಗಳ ಕಲಾಮೀಮಾಂಸೆ’ ಲೇಖನದಲ್ಲಿ ನೋಡಬಹುದು. ಮುನ್ನುಡಿಯಲ್ಲಿ ನಾಗರಾಜ ಅವರು ಹೀಗೆ ಟಿಪ್ಪಣಿ ಮಾಡುತ್ತಾರೆ:

ಶಿಷ್ಟ ಮತ್ತು ಜನಪ್ರಿಯಗಳೆಂಬ ವ್ಯತ್ಯಾಸಗಳು ಸದೃಢ ಮತ್ತು ಸಾರ್ವಕಾಲಿಕ ಎಂಬ ಇನ್ನೊಂದು ವಿಕಲ್ಪವೂ ಕನ್ನಡ ಪ್ರತಿಭೆಗೆ ಸಾಕಷ್ಟು ಹಾನಿಮಾಡಿದೆ. ಕನ್ನಡ ಚಿಂತನೆಯನ್ನು ಸೀಮಿತಗೊಳಿಸಿರುವ ಸಂಗತಿ ಎಂದರೆ ಆಧುನಿಕರಲ್ಲಿ ಜನಪ್ರಿಯ ಕಲಾರೂಪಗಳ ಬಗ್ಗೆ ಬೇರೂರಿರುವ ತಾತ್ಸಾರ. ಅದರಲ್ಲೂ ನವ್ಯಸಾಹಿತ್ಯದ ನಂತರ ರೀತಿಯ ಅನಾದರ ಹೆಚ್ಚಾಯಿತು. ಜನಪ್ರಿಯ ಸಿನಿಮಾ, ಜನಪ್ರಿಯ ಸಂಸ್ಕೃತಿ, ಜನಪ್ರಿಯ ಸಾಹಿತ್ಯಗಳ ಬಗ್ಗೆ ಕನ್ನಡ ಸಂಸ್ಕೃತಿ ಗಂಭೀರ ಗಮನ ಕೊಟ್ಟೇ ಇಲ್ಲ. ಕನ್ನಡ ಜನರ ಅನುಭವಲೋಕದ ಅತ್ಯಂತ ಮುಖ್ಯ ಅಂಶಗಳು ಅಭಿವ್ಯಕ್ತಿಯಾಗಿರುವುದು ಜನಪ್ರಿಯ ಸಾಂಸ್ಕೃತಿಕ ಪ್ರಕಾರಗಳಲ್ಲಿಯೇ. ಶ್ರದ್ಧೆಯಿಂದಲೇ ನಾನು ಪ್ರಸ್ತುತ ಕೃತಿಯಲ್ಲಿ ಜನಪ್ರಿಯ ಸಿನೆಮಾಗಳ ಕಲಾ ಮೀಮಾಂಸೆಯನ್ನೇ ಕುರಿತ ದೀರ್ಘ ಅಧ್ಯಯನದ ದೊಡ್ಡ ಭಾಗವೊಂದನ್ನು ಸೇರಿಸಿದ್ದೇನೆ. ಲೇಖನದ ಶ್ರೀಮದ್ ಗಾಂಭೀರ್ಯ ಕಂಡು ನಮ್ಮ ಪಂಡಿತರು ಅಣಕಿಸಿಯಾರು! (೧೯೯೯:).

ವಾಕ್ಯದ ಕೊನೆಯಲ್ಲಿರುವ ವ್ಯಂಗ್ಯವು ಸ್ವತಃ ಪಂಡಿತರಾದ ಲೇಖಕರು ತಮ್ಮ ಲೇಖನಕ್ಕೆ ಬರಬಹುದಾದ ಪ್ರತಿಕ್ರಿಯೆಗೆ ಕೊಟ್ಟುಕೊಂಡ ಪೂರ್ವಭಾವಿ ರಕ್ಷಣೆಯಂತಿದೆ. ಇದು ಸಹ ಜನಪ್ರಿಯ ಸಂಸ್ಕೃತಿಯ ಬಗ್ಗೆ ಕನ್ನಡದಲ್ಲಿ ಅಧ್ಯಯನಗಳು ಮುಜುಗರಗಳನ್ನೇ ಮುರಿದುಕೊಂಡಿಲ್ಲ ಎನ್ನುವುದರ ದ್ಯೋತಕವಾಗಿದೆ.

ಸಮಾಜವಿಜ್ಞಾನದವರು ಕಡಿಮೆ?

ಕನ್ನಡದ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಸಾಹಿತ್ಯದವರೇ ಹೆಚ್ಚಾಗಿ ಕಾಣಿಸುತ್ತಾರೆ. ಸಮಾಜ ವಿಜ್ಞಾನ ಕ್ಷೇತ್ರದ ಚರಿತ್ರೆ, ಸಮಾಜಶಾಸ್ತ್ರ, ತತ್ವಶಾಸ್ತ್ರ, ಅರ್ಥಶಾಸ್ತ್ರದವರು ಕಡಿಮೆ. ಇದಕ್ಕೆ ಕಾರಣ, ಹೆಚ್ಚಿನವರು ಕನ್ನಡದಲ್ಲಿ ಬರೆಯುವುದಿಲ್ಲ ಎಂಬುದೊ ಸಾಂಸ್ಕೃತಿಕ ಅಧ್ಯಯನಗಳಿಗೆ ಬೇಕಾದ ದೃಷ್ಟಿಕೋನವೇ ಅಲ್ಲಿ ಪ್ರವೇಶಿಸಿಲ್ಲ ಎನ್ನುವುದೊ? ಸಮಾಜವಿಜ್ಞಾನಿಗಳಲ್ಲಿ ದೊಡ್ಡ ಹೆಸರು ಮಾಡಿದ ಎಂ.ಎನ್.ಶ್ರೀನಿವಾಸ್ ಮುಂತಾದವರು ಕನ್ನಡದಲ್ಲಿ ಬರೆಯದಂತಹ ಒಂದು ಮಾದರಿ ಹಾಕಿಕೊಟ್ಟರೇ? ಇವೆಲ್ಲ ಊಹೆಗಳು.

ಕನ್ನಡದಲ್ಲಿ ಸಮಾಜವಿಜ್ಞಾನದ ಹಲವು ಅಧ್ಯಯನಗಳು ಬಂದಿವೆ. ಆದರೆ ಅವು ಈಗ ನಾವು ಗ್ರಹಿಸುವ ಅರ್ಥದಲ್ಲಿ ಸಾಂಸ್ಕೃತಿಕ ಅಲ್ಲ. ಉದಾ: ಸಮಾಜ ವಿಜ್ಞಾನದ ಜೋಗನ್ ಶಂಕರ್ ಅವರು ಕರ್ನಾಟಕದ ಜೋಗತಿಯವರ ಮೇಲೆ ಮಾಡಿರುವ ಅಧ್ಯಯನಗಳು, ಹಿರೇಮಲ್ಲೂರ ಈಶ್ವರನ್ ಅವರ ಲಿಂಗಾಯತ ಅಧ್ಯಯನಗಳು. ಇವೆಲ್ಲ ಸಾಂಪ್ರದಾಯಕ ಸಮಾಜಶಾಸ್ತ್ರೀಯ ವಿಧಾನದಲ್ಲಿ ಹುಟ್ಟಿದವು. ನಮ್ಮ ವಿಶ್ವವಿದ್ಯಾಲಯಗಳಲ್ಲಿ ಮಾನವಶಾಸ್ತ್ರ ವಿಭಾಗಗಳಿವೆ. ಅಲ್ಲಿ ಸಾಂಸ್ಕೃತಿಕ ಮಾನವಶಾಸ್ತ್ರವನ್ನು ಕಲಿಸಲಾಗುತ್ತಿದೆ. ಆದರೂ ಅಲ್ಲಿಂದ ಸಾಂಸ್ಕೃತಿಕ ಅಧ್ಯಯನಗಳಲ್ಲಿ ದೊಡ್ಡ ಸಾಧನೆಗಳು ಕಾಣಿಸುತ್ತಿಲ್ಲ. ಕನ್ನಡ ಸಾಹಿತ್ಯದವರು ಜಾನಪದ ಅಧ್ಯಯನ ಮಾಡುತ್ತ ಮಾನವಶಾಸ್ತ್ರದ ಶಿಸ್ತನ್ನು ಬಳಸಿಕೊಂಡರು. ಆದರೆ ಮಾನವಶಾಸ್ತ್ರದವರು ಕರ್ನಾಟಕ ಜಾನಪದ ಅಧ್ಯಯನಗಳನ್ನು ಇನ್ನೂ ಕೈಗೆತ್ತಿಕೊಳ್ಳಲು ಆಗಿಲ್ಲ. ಇದ್ದುದರಲ್ಲಿ ಚರಿತ್ರೆ ಹಾಗೂ ಅರ್ಥಶಾಸ್ತ್ರದ ಕಡೆಯಿಂದ ಕೆಲವು ಅಧ್ಯಯನಗಳು ಬರುತ್ತಿವೆ. ಟಿ.ಆರ್. ಚಂದ್ರಶೇಖರ ಅವರು ಮಹಿಳಾ ನೆಲೆಯಿಂದ ನಡೆಸಿರುವ ಅಭಿವೃದ್ಧಿ ಅಧ್ಯಯನಗಳನ್ನು, ದೇಶೀವಾದಿ ಅರ್ಥಶಾಸ್ತ್ರಜ್ಞ ಎನ್ನಲಾಗುವ ಮುರಾರಿ ಬಲ್ಲಾಳರ ಬರೆಹಗಳನ್ನು, ಎಸ್.ಚಂದ್ರಶೇಖರ್ ಅವರ ಚರಿತ್ರೆಯ ವ್ಯಾಖ್ಯಾನಗಳನ್ನು ಇಲ್ಲಿ ಉಲ್ಲೇಖಿಸಬಹುದು. ಚರಿತ್ರೆಯವರು ಸಾಂಸ್ಕೃತಿಕ ಅಧ್ಯಯನ ಕೈಗೊಳ್ಳಲು ಕನ್ನಡದಲ್ಲಿ ದೀರ್ಘ ಪರಂಪರೆಯಿದೆ. ಕರ್ನಾಟಕದ ಚರಿತ್ರೆ ಹಾಗೂ ಸಾಹಿತ್ಯ ಅಧ್ಯಯನಗಳಲ್ಲಿ ಡಿ.ಎಲ್. ನರಸಿಂಹಾಚಾರ್, ಚಿದಾನಂದಮೂರ್ತಿ, ಎಂ.ಎಂ.ಕಲುಬುರ್ಗಿ, ಶೇಷಶಾಸ್ತ್ರಿ, ಎಚ್.ಎಸ್.ಗೋಪಾಲರಾವ್, ಬಸವರಾಜ ಕಲ್ಗುಡಿ ಮುಂತಾದವರು ಮೊದಲಿಂದಲೂ ಮಾಡಿಕೊಂಡು ಬಂದಿರುವರು. ಸಾಂಸ್ಕೃತಿಕ ಅಧ್ಯಯನಗಳಲ್ಲಿ ಈಗ ಮುಖ್ಯವಾದ ಕೆಲಸ ಮಾಡುತ್ತಿರುವ ಚರಿತ್ರೆಯ ಕೆಲವು ವಿದ್ವಾಂಸರು ಸಾಹಿತ್ಯಕ ಅಧ್ಯಯನಗಳಲ್ಲಿ ಬಹಳ ಪ್ರವೇಶ ಪಡೆದವರು ಎಂಬುದು ಗಮನಾರ್ಹ. ಇದಕ್ಕೆ ರಾಜಾರಾಮ ಹೆಗಡೆ ಹಾಗೂ ಎಸ್. ಚಂದ್ರಶೇಖರ್ ಅವರ ಅಧ್ಯಯನಗಳು ನೆನಪಾಗುತ್ತಿವೆ. ಚಂದ್ರಶೇಖರ್ ಅವರ “ಸಾಹಿತ್ಯ ಮತ್ತು ಚರಿತ್ರೆ”ಯಲ್ಲಿ ಸಾಹಿತ್ಯ ಸಂಬಂಧಿ ಲೇಖನಗಳೇ ಹೆಚ್ಚಿವೆ. ಇದಕ್ಕೆ ಸಾಹಿತ್ಯ ಚಿಂತಕ ಕಿ. ರಂ. ನಾಗರಾಜ ಮುನ್ನುಡಿ ಬರೆದಿರುವುದು ಮಾರ್ಮಿಕವಾಗಿದೆ. ಮುನ್ನುಡಿಯಲ್ಲಿ ನಾಗರಾಜ ಅವರು “ಇಲ್ಲಿನ ಲೇಖನಗಳು ಐತಿಹಾಸಿಕ ಕಾಲಘಟ್ಟಗಳಿಗೆ ಮಾತ್ರ ಪ್ರತಿಕ್ರಿಯಿಸುವುದಿಲ್ಲ. ಮಿಗಿಲಾಗಿ ಒಂದು ಕಾಲಘಟ್ಟದ ಸಮಸ್ಯೆ. ಪ್ರಶ್ನೆಗಳು ವರ್ತಮಾನದ ಮುಖ್ಯ ಸಾಂಸ್ಕೃತಿಕ ಪ್ರಶ್ನೆಗಳಾಗಿರುವುದರಿಂದ ಕೂಡ ಇಲ್ಲಿನ ಲೇಖನಗಳಿಗೆ ಮಹತ್ವ ಒದಗಿ ಬಂದಿದೆ. ಈ ಲೇಖನಗಳೂ ಲೇಖಕರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಬದ್ಧತೆಯನ್ನೂ ಪ್ರತಿಬಿಂಬಿಸುತ್ತಿವೆ” ಎನ್ನುತ್ತಾರೆ (ಚಂದ್ರಶೇಖರ್, ೧೯೯೧).

ಕನ್ನಡದಲ್ಲಿ ಸಮಾಜವಿಜ್ಞಾನದ ವಿದ್ವಾಂಸರು ಮಾಡುತ್ತಿರುವ ‘ಸಾಂಸ್ಕೃತಿಕ’ ಅಧ್ಯಯನಗಳಿಗೆ ಅವರ ಸಾಹಿತ್ಯಕ ಸಂಪರ್ಕವು ಒಂದು ಕಾರಣವೇ? ಇದು ನಿಜವಾದರೆ, ಸಾಹಿತ್ಯಕ ನೆಲೆಯಿಂದಲೇ ಸಾಂಸ್ಕೃತಿಕ ಅಧ್ಯಯನಗಳು ಪುಟಿದೇಳುತ್ತಿರುವ ಸಂಗತಿ ದೃಢಪಡುತ್ತದೆ. ಸಾಹಿತ್ಯಕ ಸಹವಾಸದಿಂದ ಮೂಡಿರುವ ಸಮಾಜಶಾಸ್ತ್ರಜ್ಞರ ‘ಸಾಂಸ್ಕೃತಿಕ’ ಅಧ್ಯಯನಗಳಲ್ಲಿ ಯಾವ ಶಕ್ತಿ ಅಥವಾ ಮಿತಿ ಬಂದಿದೆ ಎನ್ನುವುದನ್ನು ಇನ್ನೂ ತಿಳಿಯಬೇಕಿದೆ. ಆದರೆ ಶಾಸ್ತ್ರಶಿಸ್ತುಗಳ ನಡುವಣ ಕಂದರಗಳನ್ನು ದಾಟದ ಯಾರೂ ಅರ್ಥಪೂರ್ಣ ಸಾಂಸ್ಕೃತಿಕ ಅಧ್ಯಯನಗಳನ್ನು ಮಾಡಲು ಸಾಧ್ಯವಿಲ್ಲ ಎಂಬುದು ಮಾತ್ರ ಸತ್ಯ.

ಸಾಂಸ್ಕೃತಿಕ ಅಧ್ಯಯನಗಳು ಯಾವಾಗಲೂ ವಿದ್ವಾಂಸರನ್ನು ತಂತಮ್ಮ ಸಾಂಪ್ರದಾಯಕ ಗಡಿಗಳನ್ನು ತ್ಯಜಿಸಿ ಬರಲು ಆಹ್ವಾನಿಸುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಸಾಹಿತ್ಯ ಕ್ಷೇತ್ರದಿಂದ ಸಮಾಜವಿಜ್ಞಾನದ ಶಿಸ್ತುಗಳಿಗೆ ನುಗ್ಗಿದವರೇ ಹೆಚ್ಚು. ಹಾಗಾದರೆ ತಮ್ಮ ಶಿಸ್ತುಗಳು ವಿಧಿಸಿರಬಹುದಾದ ಗಡಿದಾಟಲು, ಅವು ಒಡ್ಡಿರಬಹುದಾದ ಬೌದ್ಧಿಕ ನಿರ್ಬಂಧಗಳಿಂದ ಹೊರಬರಲು ಸಮಾಜ ವಿಜ್ಞಾನದವರು ಹಿಂಜರಿಯುತ್ತಿದ್ದಾರೆಯೇ? ಒಟ್ಟಿನಲ್ಲಿ ಸಾಹಿತ್ಯದ ಲೋಕದಿಂದ ವಲಸೆ ಬಂದ ವಿದ್ವಾಂಸರೇ ಇವತ್ತು ಜಾನಪದ ಶಾಸನ, ಜಾನಪದ, ಬುಡಕಟ್ಟು, ಭಾಷಾಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚು ಅಧ್ಯಯನಗಳನ್ನು ಮಾಡಿರುವರು. ಎಂ.ಎಂ.ಕಲುಬುರ್ಗಿ, ಚಿದಾನಂದಮೂರ್ತಿ, ಬಸವರಾಜ ಕಲ್ಗುಡಿ, ಕೆ.ವಿ.ನಾರಾಯಣ, ಎಸ್.ಎಸ್.ಹಿರೇಮಠ, ಕೆ.ವಿ.ಸುಬ್ಬಣ್ಣ, ಎಚ್.ಎಸ್.ಶಿವಪ್ರಕಾಶ್, ಜಿ.ರಾಜಶೇಖರ, ಕುರ್ತಕೋಟಿ, ವಿವೇಕ ರೈ, ಡಿ.ಆರ್.ನಾಗರಾಜ, ಬರಗೂರು ರಾಮಚಂದ್ರಪ್ಪ, ಕೆ.ಜಿ.ನಾಗರಾಜಪ್ಪ, ಹಿ.ಚಿ.ಬೋರಲಿಂಗಯ್ಯ, ಪುರುಷೋತ್ತಮ ಬಿಳಿಮಲೆ, ಹಿ.ಶಿ. ರಾಮಚಂದ್ರೇಗೌಡ, ರಾಜೇಂದ್ರ ಚೆನ್ನಿ ಮುಂತಾದವರು ಚರಿತ್ರೆ, ಶಾಸನಶಾಸ್ತ್ರ, ಭಾಷಾವಿಜ್ಞಾನ, ಧರ್ಮ, ತತ್ವಶಾಸ್ತ್ರ, ಜಾನಪದ, ಬುಡಕಟ್ಟು ಮುಂತಾದ ಕ್ಷೇತ್ರಗಳಲ್ಲಿ ಮಾಡಿರುವ ಅಧ್ಯಯನಗಳನ್ನು ಉಲ್ಲೇಖಿಸಬೇಕು. ಕನ್ನಡದ ದಾರ್ಶನಿಕನಾದ ಅಲ್ಲಮಪ್ರಭುವನ್ನು ಕರ್ನಾಟಕದ ತತ್ವಶಾಸ್ತ್ರದವರು ಗಂಭೀರವಾಗಿ ಪರಿಗಣಿಸಿಲ್ಲವೆಂದೇ, ನಾಗರಾಜ ಅವರು ಮಾಡಿರುವ ತತ್ವಶಾಸ್ತ್ರೀಯ ಮತ್ತು ಸಾಂಸ್ಕೃತಿಕ ಅಧ್ಯಯನವಾದ “ಅಲ್ಲಮಪ್ರಭು ಮತ್ತು ಶೈವಪ್ರತಿಭೆ” ಮತ್ತಷ್ಟು ಮಹತ್ವದ್ದಾಗಿ ಕಾಣುತ್ತಿರಬಹುದು.

ಹೊಸತಲೆಮಾರಿನ ಹಂಬಲ?

ಕನ್ನಡದ ಸಾಂಸ್ಕೃತಿಕ ಅಧ್ಯಯನಗಳ ಹಿಂದಿರುವ ತಾತ್ವಿಕ ಹಿನ್ನೆಲೆಯಾಗಿ ಕೆಲವು ಶೈಕ್ಷಣಿಕ ಸಂಗತಿಗಳ ಪ್ರಭಾವವನ್ನು ಗುರುತಿಸಬಹುದು. ಅಂಚಿಗೆ ಸರಿದ ಸಂಗತಿಗಳ ಮೇಲೆ ಅಧ್ಯಯನ ಮಾಡುವಂತೆ ಉತ್ತೇಜಿಸುವ ಆಧುನಿಕೋತ್ತರ ಚಿಂತನೆಗಳ ಪ್ರಭಾವ ಕನ್ನಡದಲ್ಲಿ ನಿಜವಾಗಿ ಎಷ್ಟು? ಹೇಳುವುದು ಕಷ್ಟ. ನಿಜವಾದ ಪ್ರಭಾವವು ಕರ್ನಾಟಕದ ಸಾಮಾಜಿಕ ರಾಜಕೀಯ ನೆಲೆಯಿಂದಲೇ ಬಂದಿದೆ. ಹೇಗೆಂದರೆ, ನಮ್ಮ ಸಮಾಜದ ವಿಭಿನ್ನ ಸ್ತರ, ವರ್ಗ, ಧರ್ಮ, ಜನ, ಅದರಲ್ಲೂ ಹಿಂದುಳಿದ ಸಮುದಾಯದ ಜನ, ರಾಜಕೀಯ ಎಚ್ಚರ ಪಡೆದುಕೊಂಡು ಸಾಂಸ್ಕೃತಿಕ ರಾಜಕಾರಣದಲ್ಲಿ ಪ್ರವೇಶಿಸಿದರು. ಈ ಪ್ರವೇಶದ ಬಳಿಕ ಲೋಕವನ್ನು ಗ್ರಹಿಸಲು ಕೇವಲ ಭಾಷಾಶಾಸ್ತ್ರೀಯ, ಸಾಹಿತ್ಯಕ, ಚಾರಿತ್ರಿಕ, ರಾಜಕೀಯವಾದ ದೃಷ್ಟಿಕೋನಗಳು ಕೃತಕ ಅನಿಸಿದವು. ಅವರ ಅನುಭವ, ಸಂವೇದನೆ, ಅಭಿಪ್ರಾಯ, ನೋಟಗಳನ್ನು ಭರಿಸಲು ಈ ಹಿಂದಿನ ಏಕಶಿಸ್ತೀಯ ಅಧ್ಯಯನಗಳು ಸಾಲದಾದವು. ಈ ಹೊಸ ಪ್ರವೇಶ ಪಡೆದ ತಲೆಮಾರಿನ ಆಶೋತ್ತರಗಳನ್ನು ಧಾರಣಮಾಡಲು ‘ಸಾಂಸ್ಕೃತಿಕ ಅಧ್ಯಯನ’ ಎಂಬುದು ಉಪಯುಕ್ತ ವಿಧಾನವಾಯಿತು.

ಈ ವಿಧಾನವು ಅಧ್ಯಯನಗಳಿಗೆ ಸಾಹಿತ್ಯಕ, ಸಾಮಾಜಿಕ, ರಾಜಕೀಯ ಎಂಬ ತುಂಡು ಗ್ರಹಿಕೆಗಳಿಂದ ಬಿಡಿಸಿ, ಸಮಗ್ರತೆ ಕೊಡುವ ಕೆಲಸವನ್ನು ಕೆಲಮಟ್ಟಿಗೆ ಮಾಡಿತು. ಇದರ ಫಲವಾಗಿ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಪಂಥಗಳು, ಅನುಭಾವಿಗಳು, ಮುಸ್ಲಿಂ, ಮಹಿಳೆ ಹಾಗೂ ದಲಿತಲೋಕದ ಸಂಗತಿಗಳು ಪ್ರಧಾನ ವಸ್ತುವಾಗಿ ಬಂದವು. ಬುಡಕಟ್ಟು ಲೋಕದ ಮೇಲೆ ಕಳೆದ ೧೦ ವರುಷಗಳಲ್ಲಿ ನಡೆದ ಅಧ್ಯಯನಗಳು ಅಪೂರ್ವವಾಗಿವೆ. ಇವುಗಳ ಹಿಂದೆ ಹೊಸತಲೆಮಾರಿನ ಜನರ ಹಲವಾರು ಆಶೋತ್ತರಗಳ ಒತ್ತಾಸೆಯಿದೆ.

ಸಂಘರ್ಷದ ಗುಪ್ತ ಪರಿಭಾಷೆ?

ಅಧ್ಯಯನಗಳಲ್ಲಿ ‘ಸಾಂಸ್ಕೃತಿಕ’ ಎಂಬುದು ಕೆಲವೊಮ್ಮೆ ವರ್ಗಸಂಘರ್ಷದ ಕಾರ್ಯಸೂಚಿ ಪರಿಭಾಷೆಯಂತೆ ತೋರುತ್ತದೆ. ಇದು ಸಾಮಾಜಿಕ ಸಮಾನತೆ, ರಾಜಕೀಯ ಅಧಿಕಾರ ಹಾಗೂ ಆರ್ಥಿಕ ಹಕ್ಕುಗಳ ಚರ್ಚೆ ಮಾಡುವ ವಿಶಾಲ ಪರಿಭಾಷೆಯಂತಿದೆ. ರಾಜಕೀಯ ಪ್ರಜ್ಞೆ ಪಡೆದ ಕೆಳಜಾತಿ/ವರ್ಗಗಳಿಗೆ ಇದು ಹೋರಾಟದ ತಾತ್ವಿಕ ಸಿದ್ಧತೆಯಂತಿದೆ. ಎಸ್.ಎಸ್.ಹಿರೇಮಠ ಅವರು “ದಲಿತ ಸಂಸ್ಕೃತಿ” ಕೃತಿಯಲ್ಲಿ ಹೇಳುವುದನ್ನು ಇಲ್ಲಿ ಕಾಣಿಸಬಹುದು:

ಚರಿತ್ರೆಯುದ್ಧಕ್ಕೂ ಕೀಳುಜನ, ಹೀನರು, ಅಸ್ಪೃಶ್ಯರು ಎಂಬ ಅನವಶ್ಯಕ ಅವಹೇಳನಕ್ಕೆ ತುತ್ತಾಗಿ, ಅಪಮಾನದಿಂದ ಬೇಯುತ್ತಿರುವ ಜನಕುಲವು, ಎದೆಯುಬ್ಬಿಸಿ ಸವರ್ಣೀಯರ ಮುಖಕ್ಕೆ ಹೊಡೆದಂತೆ ಹೇಳುವಂಥ ಅದ್ಭುತ ಸಂಸ್ಕೃತಿ ಪರಂಪರೆಯನ್ನು ಹೊಂದಿರುವುದು ಎಂಥ ಸಂಭ್ರವನ್ನುಂಟು ಮಾಡಲಾರದು? ಅದು ದಲಿತರ ವಿಮೋಚನೆಯ ತತ್ವಕ್ಕೆ ಸಮರ್ಥ ಅಡಿಪಾಯವನ್ನು ಒದಗಿಸುತ್ತದೆ. ಸ್ವಾಭಿಮಾನದಿಂದ ತಲೆ ಎತ್ತಲು ನ್ಯಾಯಯುತ ಸಮರ್ಥನೆಯನ್ನು ನೀಡುತ್ತದೆ. ದಲಿತೇತರರ ಆವರೆಗಿನ ಅಪರಾಧಕ್ಕೆ ಪಾಪಕೃತ್ಯಕ್ಕೆ ತಕ್ಕ ಪಾಠವನ್ನು ಕಲಿಸುತ್ತದೆ. ಅತ್ಯಂತ ಕೆಳಗೆ ತುಳಿಯಲ್ಪಟ್ಟವರೇ ಹಿಂದೊಂದು ಕಾಲದಲ್ಲಿ ಅತ್ಯಂತ ಉನ್ನತಮಟ್ಟದಲ್ಲಿದ್ದು ಆಗಿನೆಲ್ಲ ಜನಕುಲಗಳಿಗೆ ವಿವಿಧ ಬಗೆಯ ಜ್ಞಾನವನ್ನು ನೀಡಿದರೆಂದು ಸಾಭೀತು ಮಾಡುತ್ತದೆ (೨೦೦೧:).

ಇದನ್ನು ನೋಡುವಾಗ ಕನ್ನಡ ಸಾಂಸ್ಕೃತಿಕ ಅಧ್ಯಯನಗಳು ವರ್ಗಸಂಘರ್ಷದ ಗುಪ್ತ ಭಾಷೆಯಂತಿವೆ. ವೈರುಧ್ಯವೆಂದರೆ ಕೆಲವೆಡೆ ಇದೇ ‘ಸಾಂಸ್ಕೃತಿಕ’ ಪರಿಭಾಷೆಯು ವರ್ಗಸಂಘರ್ಷದ ಪ್ರಶ್ನೆಯನ್ನು ನಿರಾಕರಿಸುವ ಪರಿಭಾಷೆಯೂ ಆಗಿದೆ. ಇದನ್ನು ಆಧುನಿಕೋತ್ತರ ಚಿಂತನೆಗಳ ಪ್ರಭಾವುಳ್ಳ ಅಧ್ಯಯನಗಳಲ್ಲಿ ಕಾಣಬಹುದ. ಸಾಂಸ್ಕೃತಿಕ ಅಧ್ಯಯನಗಳಿಗೆ ಆಧುನಿಕೋತ್ತರ ಚಿಂತನೆಗಳು ಬೌದ್ಧಿಕ ಸಮರ್ಥನೆ ಕೊಡುತ್ತಿವೆ. ಇಂತಹ ಅಧ್ಯಯನಗಳಲ್ಲಿ ಹೆಚ್ಚು ತೊಡಗಿರುವವರು ವರ್ಗ ಪರಿಭಾಷೆಯನ್ನು ನಿರಾಕರಿಸುವ ಎನ್.ಜಿ.ಓ.ದವರು. ಹೀಗೆ ಸಾಂಸ್ಕೃತಿಕ ಅಧ್ಯಯನಗಳು ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ ಹರಿಯುತ್ತಿರುವ ವಿಚಿತ್ರ ಪರಿಸ್ಥಿತಿಯಿದೆ.

ಸೋಜಿಗವೆಂದರೆ, ಮೊದಲ ಹಂತದ ಮಾಸ್ತಿ, ಡಿವಿಜಿ, ದೇವುಡು ಅವರ ಸಂಸ್ಕೃತಿ ಚಿಂತನೆ ಹಾಗೂ ಅಧ್ಯಯನಗಳು ಕೂಡ, ಸಂಘರ್ಷದ ಪ್ರಶ್ನೆಯನ್ನು ನಿರಾಕರಿಸಿದಂತಹವು. ಮಾತ್ರವಲ್ಲ, ಅವು ಊಳಿಗಮಾನ್ಯ ಮೌಲ್ಯಗಳನ್ನು ಒಪ್ಪುವ ಕೆಲಸವನ್ನೂ ಮಾಡಿದಂತಹದವು. ಡಿವಿಜಿಯವರ ಸಂಸ್ಕೃತಿ ವ್ಯಾಖ್ಯೆಗೆ ಗಂಭೀರ ವಿಮರ್ಶೆಗಳು ಬಂದಿದ್ದೆ ೭೦ರ ದಶಕದ ಚಿಂತಕರಿಂದ ಹಾಗೂ ಅಧ್ಯಯನಕಾರರಿಂದ, ಸಂಸ್ಕೃತಿಯನ್ನು ‘ಅಂತರಂಗದ ಸಂಸ್ಕಾರ’ ಎಂದು ಹೇಳುವುದ ‘ಸಾಮಾಜಿಕ, ಆರ್ಥಿಕ ಮತ್ತು ಅಧಿಕಾರ ವಲಯಗಳ ಶಕ್ತಿಕೇಂದ್ರದಿಂದ ಹೊರಹೊಮ್ಮುವ ಪರಿಭಾಷೆ’ ಎಂದು ಇವರು ವಿಮರ್ಶಿಸಿದರು. (ಬರಗೂರು, ೧೯೯೪:೧೦೬) ಡಿವಿಜಿ ವ್ಯಾಖ್ಯೆ ವಿಮರ್ಶೆಗೆ ಒಳಗಾಗಲು ಕಾರಣ, ಅದು ಸುಪ್ತವಾಗಿ ಪ್ರತಿನಿಧಿಸುವ ಆಲೋಚನೆಗಳು ಒಂದು ವರ್ಗದ ಸಾಮಾಜಿಕ ರಾಜಕೀಯ ಆಲೋಚನೆಗಳಾಗಿರುವುದು. ಅವುಗಳ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸುವಾಗ ಮತ್ತು ಅವಕ್ಕೆ ಪರ್ಯಾಯ ಮಂಡಿಸುವಾಗ, ಮೂಲ ಪರಿಕಲ್ಪನೆಯನ್ನು ವಿಮರ್ಶೆ ಮತ್ತು ನಿರಾಕರಣೆಗೆ ಗುರಿಪಡಿಸುವುದು ಅನಿವಾರ್ಯ. ಈ ಸಂಗತಿಯು ಸಂಸ್ಕೃತಿಯ ವ್ಯಾಖ್ಯಾನಗಳು ಅಂತಿಮವಾಗಿ ರಾಜಕೀಯ ಸಾಮಾಜಿಕ ಚಿಂತನೆಗಳೇ ಆಗಿರುವುದನ್ನು ಸೂಚಿಸುತ್ತದೆ. ಹೀಗೆ ಸಂಸ್ಕೃತಿಯ ಚರ್ಚೆ ಮತ್ತು ಸಾಂಸ್ಕೃತಿಕ ಅಧ್ಯಯನಗಳು ಏಕಕಾಲಕ್ಕೆ ಎರಡೂ ಪಕ್ಷದವರಿಂದ ಸಂಘರ್ಷಹೀನ ಮತ್ತು ಸಂಘರ್ಷವಾದಿ ಉದ್ದೇಶಗಳಿಗೆ ಬಳಕೆಯಾಗುತ್ತಿರುವ ವಿಚಿತ್ರ ಸನ್ನಿವೇಶವಿದೆ.