ಹುಡುಕಾಟ ನಿಂತಿಲ್ಲ

ಮಾಸ್ತಿಯವರ “ಕರ್ನಾಟಕದ ಜನತೆಯ ಸಂಸ್ಕೃತಿ” (೧೯೩೨)ಯ ಲೆಕ್ಕ ಹಿಡಿದರೆ, ಕನ್ನಡ ಸಾಂಸ್ಕೃತಿಕ ಅಧ್ಯಯನಗಳಿಗೆ ಮುಕ್ಕಾಲು ಶತಮಾನವಾಗಿದೆ. ಈ ನಡುವೆ ಎಷ್ಟೋ ಅಧ್ಯಯನಗಳು ನಡೆದು, ಪ್ರಕಟವಾಗಿವೆ, ಹಲವು ಸಂಸ್ಕೃತಿ ವ್ಯಾಖ್ಯೆಗಳು, ಸಾಂಸ್ಕೃತಿಕ ಅಧ್ಯಯನದ ವಿಧಾನಗಳು ಹುಟ್ಟಿವೆ, ಬದಲಾಗಿವೆ. ವಾಗ್ವಾದಗಳು ಎದ್ದಿವೆ, ಬೆಳೆದಿವೆ. ಇವೆಲ್ಲವೂ ವಿಭಿನ್ನ ಕಾಲಘಟ್ಟಗಳ, ವರ್ಗಗಳ, ಸಿದ್ಧಾಂತಗಳ ಆಶೋತ್ತರಗಳನ್ನು ಪ್ರತಿನಿಧಿಸುತ್ತ ಕರ್ನಾಟಕದ ಸಾಮಾಜಿಕ ರಾಜಕೀಯ ಚರಿತ್ರೆಯನ್ನು ಪರೋಕ್ಷವಾಗಿ ಹೇಳಲು ಹವಣಿಸಿವೆ. ಈಚೆಗೆ ಸಾಂಸ್ಕೃತಿಕ ಪರಿಕಲ್ಪನೆ ಹಾಗೂ ಅಧ್ಯಯನಗಳಲ್ಲಿ ಹೊಸ ಆಯಾಮಗಳು ಕಾಣಿಸಿಕೊಂಡಿವೆ. ಇವುಗಳ ಹಿಂದೆ ಕೆಲವು ಮುಖ್ಯ ಚಾರಿತ್ರಿಕ ಒತ್ತಡಗಳು ಕೆಲವ ಮಾಡಿವೆ. ಅವೆಂದರೆ, ಜಾತಿಸಮುದಾಯಗಳಲ್ಲಿ ನಡೆದಿರುವ ಸಂಘಟನೆ, ಕೋಮುವಾದ ಹಾಗೂ ಅದಕ್ಕೆ ಹುಟ್ಟುತ್ತಿರುವ ಪ್ರತಿರೋಧಗಳು, ಜಾಗತೀಕರಣ ಮತ್ತು ಅದಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳು, ಪ್ರಾದೇಶೀಕ ಅಸಮಾನತೆಯಿಂದ ಹುಟ್ಟಿತ್ತಿರುವ ಹೊಸ ಆಶೋತ್ತರಗಳು, ಪ್ರಾದೇಶಿಕ ಆಶೋತ್ತರಗಳೆಂದರೆ, ಕನ್ನಡ ಭಾಷೆಯ ಸ್ಥಾನಮಾನದ ಪ್ರಶ್ನೆ, ತುಳು ಕೊಡವ ಅಕಾಡೆಮಿಗಳು, ಕೊಡಗು ರಾಜ್ಯಕ್ಕೆ ಬೇಡಿಕೆ, ಕರ್ನಾಟಕ ವಿಮೋಚನ ರಂಗದಂತಹ ಸಂಘಟನೆಯ ಹುಟ್ಟು, ಉತ್ತರ ಹಾಗೂ ಹೈದರಾಬಾದು ಕರ್ನಾಟಕಗಳಿಗೆ ಪ್ರತ್ಯೇಕ ರಾಜ್ಯವಾಗುವ ಕನಸು ಮೊಳೆತಿರುವುದು ಇತ್ಯಾದಿ. ಇವು ಸದ್ಯದ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಮುಖ್ಯವಾದ ಚಲನೆಗಳನ್ನು ಎಬ್ಬಿಸಿರುವ ಚಾರಿತ್ರಿಕ ಒತ್ತಡಗಳು. ಇವೆಲ್ಲ ‘ಸಾಂಸ್ಕೃತಿಕ ಅಧ್ಯಯನ’ ಎಂಬ ಶೈಕ್ಷಣಿಕ ಚಟುವಟಿಕೆಯ ಸ್ವರೂಪವನ್ನು ಅಂತಿಮವಾಗಿ ನಿಯಂತ್ರಿಸುತ್ತಿವೆ.

ಆದರೆ ಇಷ್ಟು ದೀರ್ಘಕಾಲದ ಬಳಿಕವೂ ಸಾಂಸ್ಕೃತಿಕ ಅಧ್ಯಯನಗಳ ಸ್ವರೂಪ ಖಚಿತತೆ ಪಡೆದಿಲ್ಲ. ಖಚಿತತೆಯಿಲ್ಲ ಎನ್ನುವುದನ್ನು ಬರಿ ದೋಷವಾಗಿ ನೋಡಬೇಕಿಲ್ಲ. ತಾತ್ವಿಕ ಖಚಿತತೆ ಎನ್ನುವುದು ಒಮ್ಮೆಗೆ ಸರ್ವಮಾನ್ಯವಾದ ಒಂದು ಖಾಯಂ ವ್ಯಾಖ್ಯಾನ ಪಡೆದುಕೊಳ್ಳುವ ರೂಪಸಿದ್ಧಿಯಲ್ಲ. ಅದು ನಿರಂತರ ಬದಲಾಗುತ್ತಿರುವ ಜಾಗತಿಕ ಹಾಗೂ ಸ್ಥಳೀಯ ಸನ್ನಿವೇಶಗಳನ್ನು ಬೆನ್ನಟ್ಟುತ್ತ, ಬದಲಾಗುತ್ತಿರುವ ಬದುಕನ್ನು ಅರಿಯುವುದಕ್ಕಾಗಿ ಪಡೆದುಕೊಳ್ಳಬೇಕಾದ ಜ್ಞಾನವಾಗಿದೆ. ಇದು ವರ್ತಮಾನದ ವಿದ್ಯಮಾನಗಳಿಗೆ ಜೀವಂತವಾಗಿ ನಿರಂತರವಾಗಿ ಸ್ಪಂದಿಸುವ ಪ್ರಕ್ರಿಯೆಯಲ್ಲಿ ದಕ್ಕುವಂತಹದು. ಕನ್ನಡದಲ್ಲಿ ಈ ಬಗೆಯ ತಾತ್ವಿಕ ಪರಿಣತಿ ಪಡೆಯುವುದು ಕಷ್ಟವಾಗಿದೆ. ಇದಕ್ಕೆ ಕಾರಣಗಳು ಹಲವು:

ಒಂದು: ಅಧ್ಯಯನಕಾರರು ತಂತಮ್ಮ ಸಿದ್ಧಾಂತಗಳನ್ನು ಇಟ್ಟುಕೊಂಡು, ತಂತಮ್ಮ ಕ್ಷೇತ್ರ ಅಥವಾ ಜ್ಞಾನಶಿಸ್ತುಗಳಿಂದ ಪ್ರವೇಶಿಸಿ, ಒಟ್ಟಿಕಗೆ ಕೆಲಸ ಮಾಡುತ್ತಿರುವುದು. ಎರಡು: ಕೆಳಜಾತಿಯಿಂದ ಬಂದ ವಿದ್ವಾಂಸರಲ್ಲಿ ಸಾಂಸ್ಕೃತಿಕ ಅಧ್ಯಯನ ಎಂಬ ಪರಿಕಲ್ಪನೆಯು ತಮ್ಮ ರಾಜಕೀಯ ಸಾಮಾಜಿಕ ಆಶಯಗಳನ್ನು ಪ್ರತಿನಿಧಿಸುವ ವೇದಿಕೆ ಎಂಬ ಆಶಯವಿದ್ದು, ಅದಕ್ಕೆ ಬೇಕಾದ ಅನುಭವ ಸಂಪನ್ನತೆಯೂ ಇದ್ದು, ಈ ಆಶಯ ಹಾಗೂ ಅನುಭವಗಳಿಗೆ ಸೇರಬೇಕಾದ ಅಧ್ಯಯನದ ವಿಧಾನ ಹಾಗೂ ತಾತ್ವಿಕ ಸ್ಪಷ್ಟತೆಗಳ ಇಲ್ಲದಿರುವುದು. ಹೀಗಾಗಿಯೇ ಹೆಚ್ಚಿನ ‘ಸಾಂಸ್ಕೃತಿಕ ಅಧ್ಯಯನಗಳು’ ಮಾಹಿತಿ ತುಂಬಿಕೊಂಡಿರುವ ದಾಸ್ತಾನು ಮಳಿಗೆಗಳಂತೆ ತೋರುತ್ತವೆ. ಕನ್ನಡದಲ್ಲಿ ಏಕಕಾಲಕ್ಕೆ ಮಾಹಿತಿ ಮೂಟೆಗಳಂತಹ ಸಾಂಸ್ಕೃತಿಕ ಅಧ್ಯಯನಗಳೂ “ಅಲ್ಲಮಪ್ರಭು ಮತ್ತು ಶೈವಪ್ರತಿಭೆ” ಯಂತಹ ಉನ್ನತಮಟ್ಟದ ಬೌದ್ಧಿಕ ಜಿಜ್ಞಾಸೆಯ ಕೃತಿಗಳೂ ಪ್ರಕಟವಾಗುತ್ತಿವೆ. ಹೆಚ್ಚಿನ ಅಧ್ಯಯನಗಳು ಅಧ್ಯಯನದಲ್ಲಿ ಎದುರಾಗುವ ತಾತ್ವಿಕ ವೈರುಧ್ಯಗಳನ್ನು ನಿಭಾಯಿಸಲು ಕಷ್ಟಪಡುತ್ತಿವೆ. ಇದಕ್ಕೆ ಒಂದು ಉದಾಹರಣೆಯೆಂದರೆ, ಚೆನ್ನಣ್ಣ ವಾಲೀಕಾರರ “ಹೈದರಾಬಾದ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ” (೧೯೯೮). ಇದು ಅಧ್ಯಯನ ವಿಧಾನದಲ್ಲಿ ಇರಬೇಕಾದ ತಾತ್ವಿಕ ಪರಿಣತಿ ಕಂಡುಕೊಳ್ಳುವ ಅಗತ್ಯವನ್ನು ಹೇಳುತ್ತಿದೆ. ತಾತ್ವಿಕ ಪರಿಣತಿ ಎಂದರೆ, ಯಾಕಾಗಿ ಅಧ್ಯಯನ ಮಾಡಬೆಕು ಎಂಬ ಸೈದ್ಧಾಂತಿಕ ಆಶಯವು, ಏನನ್ನು ಅಧ್ಯಯನ ಮಾಡಬೇಕು ಎಂಬ ವಸ್ತುವಿನ ಆಯ್ಕೆಯೂ, ಹೇಗೆ ಮಡಬೇಕೆಂಬ ಅಧ್ಯಯನ ವಿಧಾನವೂ ಅರ್ಥಪೂರ್ಣವಾಗಿ ಏಕೀಭವಿಸುವುದು. ಅನುಭವ ಸಮೃದ್ಧಿ ಮತ್ತು ಶ್ರಮಪಡುವಿಕೆ ಇರುವ ನಮ್ಮ ಅಧ್ಯಯನಕಾರರು ಈ ತಾತ್ವಿಕ ಪರಿಣತಿಯನ್ನು ಪಡೆದುಕೊಳ್ಳುವ ಹಾದಿಯಲ್ಲಿದ್ದಾರೆ.

ಚಾರಿತ್ರಿಕ ಪ್ರನಾರಚನೆಗಳ ಸುಗ್ಗಿ

ಸಾಂಸ್ಕೃತಿಕ ಅಧ್ಯಯನಗಳು ಜನಪ್ರಿಯತೆ ಪಡೆಯುತ್ತಿದ್ದಂತೆ, ಮಾಹಿತಿ ಸಂಗ್ರಹಿಸುವ ಮಾನವಶಾಸ್ತ್ರೀಯ ಅಥವಾ ಚರಿತ್ರೆಯ ಪುನರ್‌ನಿರ್ಮಾಣದ ಕೆಲಸಗಳು ಅನೇಕ ಕ್ಷೇತ್ರಗಳಲ್ಲಿ ಶುರುವಾಗಿವೆ. ಉದಾ: ಕೋಶಗಳ ನಿರ್ಮಾಣ. ನೀಲಗಾರ, ಮೈಲಾರ, ಮಾದೇಶ್ವರ ಮುಂತಾದ ದೈವ ಸಂಪ್ರದಾಯಗಳನ್ನು ಆಧರಿಸಿದ ಸಾಂಸ್ಕೃತಿಕ ಪದಕೋಶಗಳನ್ನು ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿತು. ಹಲವಾರು ಜನಪದ ಮಹಾಕಾವ್ಯಗಳು ಪ್ರಕಟವಾಗಿದ್ದು, ಅವನ್ನು ಸಾಂಸ್ಕೃತಿಕ ಅಧ್ಯಯನಕ್ಕೆ ಒಳಪಡಿಸಲಾಗುತ್ತಿರುವುದು ಇದಕ್ಕೆ ಪೂರಕವಾಗಿದೆ. ಈ ಕೋಶಗಳ ಹಿಂದಿನ ಆಶಯವು, ಗತಕಾಲದ ಜೀವನವನ್ನು ಸಿಕ್ಕ ಆಕರ ಬಳಸಿ ಪುನಾರಚಿಸುವ ಚಾರಿತ್ರಿಕ ನೆಲೆಯದು. ಡಿ.ಎಲ್.ನರಸಿಂಹಾಚಾರ್, ಕಲಬುರ್ಗಿ, ಚಿದಾನಂದಮೂರ್ತಿ ಅವರು ಸೃಷ್ಟಿಸಿರುವ ಮೂಲ ಶೋಧನೆ ಅಥವಾ ಆಕರ ನಿರ್ಮಾಣ ಮಾದರಿಯು ಇಲ್ಲಿ ಮುಂದುವರೆದಿದೆ. ಇದು ಮಾನವ ಶಾಸ್ತ್ರೀಯ, ಗ್ರಾಮೀಣ, ಜಾನಪದ ಆಯಾಮವನ್ನು ಪಡೆದು, ‘ಸಾಂಸ್ಕೃತಿಕ’ ಎಂಬ ಹೊಸರೂಪದಲ್ಲಿ ವಿಸ್ತರಣೆಗೊಳಗಾಗುತ್ತಿದೆ. ಇದಕ್ಕೆ ಈಚೆಗೆ ಬಂದ “ಗ್ರಾಮೀಣ ಸಂಸ್ಕೃತಿ ಸಂದರ್ಭಕೋಶ” (ಶಿವರಾಮಯ್ಯ, ೨೦೦೧) ಒಂದು ಉದಾಹರಣೆ. ಕೋಶಕಾರರು ಪ್ರಾಚೀನ ಕನ್ನಡ ಸಾಹಿತ್ಯ ಗ್ರಂಥಗಳಲ್ಲಿ ಕಾಣಬರುವ ಸಾಂಸ್ಕೃತಿಕ ವಿಶಿಷ್ಟ ನುಡಿಗಟ್ಟುಗಳನ್ನು ಪುನಾರಚಿಸಿದ್ದಾರೆ. ಈ ‘ಸಾಂಸ್ಕೃತಿಕ’ ಕೋಶಗಳ ಉದ್ದೇಶ, ಗತಕಾಲವನ್ನು ಪುನಾರಚಿಸುವುದರ ಜತೆಗೆ, ಗ್ರಾಮೀಣ ಹಿಂದುಳಿದ, ದಲಿತ ಲೋಕಗಳ ಮತ್ತು ಶೈಕ್ಷಣಿಕ ಚರ್ಚೆಗೆ ಒಳಗಾಗದ ಪಂಥ – ಮತ -ಸಮುದಾಯಗಳ ಬಗ್ಗೆ ಗಮನವನ್ನು ಸೆಳೆಯುವುದು. ಸಾಮಾಜಿಕ ಆರ್ಥಿಕವಾಗಿ ಹಿಂದುಳಿದ ಲೋಕಗಳಲ್ಲಿರುವ ಸಂಸ್ಕೃತಿ ವಿಶಿಷ್ಟವಾದ ಜೀವನ ವಿವರಗಳನ್ನು ದಾಖಲಾತಿ ಮಾಡುವುದೇ ಅಧ್ಯಯನ ಎಂಬುದು ಇನ್ನೂ ಆಳವಾಗಿ ಬೇರುಬಿಟ್ಟ ನಂಬಿಕೆಯಾಗಿದೆ. ಮಾಹಿತಿ ತಂತ್ರಜ್ಞಾನದಂತಹ ತಾಂತ್ರಿಕ ಬೆಳವಣಿಗೆಗಳು ಮಾಹಿತಿ ಸಂಗ್ರಹಣೆಯನ್ನು ಒಂದು ಜ್ಞಾನಶಿಸ್ತಿನ ಮಟ್ಟಕ್ಕೂ ಏರಿಸಿಬಿಟ್ಟಿವೆ. ಜಾಗತೀಕರಣದ ರಾಜಕಾರಣಕ್ಕೂ ಮಾಹಿತಿಗಳು ಬೇಕು. ಇದರಿಂದ ಮಾಹಿತಿ ಸಂಗ್ರಹಿಸುವ ಮತ್ತು ಮಾಹಿತಿ ನಿರ್ವಚಿಸುವ ‘ಸಾಂಸ್ಕೃತಿಕ’ ಅಧ್ಯಯನಗಳು ಮತ್ತಷ್ಟು ಉಮೇದಿನಿಂದ ನಡೆಯುವ ಸಾಧ್ಯತೆಗಳಿವೆ. ಯಾವಾಗ ದಾಖಲಾತಿಯು ಮುಖ್ಯ ಚಟುವಟಿಕೆ ಆಗುತ್ತದೆಯೊ, ಸಂಗ್ರಹಿಸಿದ ಮಾಹಿತಿಯನ್ನು ಅಧ್ಯಯನಕಾರರು ತಾವೇ ವಿಶ್ಲೇಷಿಸಲು ಹಿಂಜರಿಕೆ ತೋರುತ್ತಾರೊ, ಆಗೆಲ್ಲ ತಾತ್ವಿಕ ಆಕೃತಿಗಳನ್ನು ನಿರ್ಮಿಸುವ ಕೆಲಸ ಹಿಂದೆ ಬೀಳುತ್ತದೆ. ಅಧ್ಯಯನಗಳು ದಾಖಲಾತಿಯಲ್ಲೇ ನಿಂತು ಬೌದ್ಧಿಕ ಪರಾವಲಂಬನೆಯತ್ತ ಸರಿಯುತ್ತವೆ. ಈ ಸಾಧ್ಯತೆಯು ದೂರ ಪರಿಣಾಮದಲ್ಲಿ ಸಮುದಾಯಗಳನ್ನು ರಾಜಕೀಯ ದಾಸ್ಯಕ್ಕೆ ಅಣಿಮಾಡಬಲ್ಲವು. ಮಾಹಿತಿಯು ರಾಜಕೀಯ ನಿಯಂತ್ರಣ ಮಾಡಬಯಸುವ ಅಧಿಕಾರಸ್ಥರಿಗೆ ಯಾವತ್ತೂ ಪ್ರಬಲ ಅಸ್ತ್ರವಾಗುವ ಪಾತ್ರ ನಿರ್ವಹಿಸಿದೆ.

ಕೋಮುವಾದದ ಪರಿಣಾಮವಾಗಿ

ಭಾರತದಲ್ಲಿ ೧೯೯೦ ದಶಕದ ನಂತರ ಕೋಮುವಾದ ಹಾಗೂ ಮೂಲಭೂತವಾದಗಳು ಗರಿಗೆದರಿದವು. ಕೋಮುವಾದಿ ರಾಜಕಾರಣವು ‘ಮುಸ್ಲಿಮರು ಸಾಂಸ್ಕೃತಿಕವಾಗಿ ಅನ್ಯರು, ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಅನುಸರಿಸುವವರಲ್ಲ’ ಎಂಬ ವಾದವನ್ನು ಸಾಂಸ್ಕೃತಿಕ ರಾಷ್ಟ್ರೀಯತೆ ಎಂಬ ಪರಿಕಲ್ಪನೆಯಲ್ಲಿ ಮಂಡಿಸಲಾರಂಭಿಸಿತು. ‘ಇಡೀ ಭಾರತಕ್ಕೆ ಒಂದು ಪ್ರಾಚೀನ ಪರಂಪರೆ, ಸಂಸ್ಕೃತಿ ಇದೆ. ಅದರಲ್ಲಿ ನಿರ್ದಿಷ್ಟ ಸಾಂಸ್ಕೃತಿಕ ನಾಯಕರು ಇದ್ದಾರೆ. ಉದಾಹರಣೆಗೆ, ರಾಮ. ಕೆಲವು ಗ್ರಂಥಗಳಿವೆ. ಉದಾ: ವೇದಗಳು. ಆದರೆ ಈ ಪರಂಪರೆಯನ್ನು ವಿದೇಶದಿಂದ ಬಂದ ಧರ್ಮವನ್ನು ಅನುಸರಿಸುವ ಧಾರ್ಮಿಕ ಸಮುದಾಯಗಳು ಮನ್ನಿಸುವುದಿಲ್ಲ. ಅವರು ನಮ್ಮ ಸಂಸ್ಕೃತಿಗೆ ಬಾಹಿರರು’- ಇದು ಸಾಂಸ್ಕೃತಿಕ ರಾಷ್ಟ್ರೀಯತೆಯ ತರ್ಕ. ಸೂಕ್ಷ್ಮವಾಗಿ ಗಮನಿಸಿದರೆ, ಈ ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ಉಚ್ಚವರ್ಗದ ಮೌಲ್ಯಗಳ ತುಂಬಿರುವುದು ಕಾಣುತ್ತದೆ. ಇದರಲ್ಲಿ ಇಸ್ಲಾಂ ಕ್ರೈಸ್ತ ಇರಲಿ, ಬೌದ್ಧ ಮತ್ತು ದಲಿತ ಸಂಸ್ಕೃತಿಗಳೂ ಇಲ್ಲ. ಮೂಲತಃ ರಾಜಕೀಯ ಉದ್ದೇಶದಿಂದ ಕಟ್ಟಿರುವ ಈ ವಾದದ ಪ್ರಭಾವವು ಪರೋಕ್ಷವಾಗಿ ಕೆಲವು ಮತೀಯವಾದಿ ಚರಿತ್ರಕಾರರಲ್ಲಿ ಇದೆ. ಅದು ಈಗ ಚಿದಾನಂದಮೂರ್ತಿ (೨೦೦೨) ಮುಂತಾದವರ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಕಾಣಿಸುತ್ತಿದೆ.

ಈ ವಿದ್ಯಮಾನಗಳು ಸಹಜವಾಗಿ ಪ್ರತಿವಾಧಗಳನ್ನೂ ಹುಟ್ಟಿಸಿದವು. ಇವು ದಮನಿತ ಧಾರ್ಮಿಕ ಸಮುದಾಯಗಳ ‘ಸಂವೇದನೆ’ಯ ಸಾಂಸ್ಕೃತಿಕ ಗುರುತಿನ ಪ್ರಶ್ನೆಯಾಗಿ ಮೈತಳೆದವು. ಕೋಮುವಾದಿ ತರ್ಕಕ್ಕೆ ಪ್ರತಿಯಾಗಿ ಭಾರತೀಯ ಸಂಸ್ಕೃತಿಯಲ್ಲಿ ಮುಸ್ಲಿಮರ ಮತ್ತು ಇಸ್ಲಾಮಿನ ಪಾಲನ್ನು ವಿಶ್ಲೇಷಿಸುವ, ಧಾರ್ಮಿಕ ನೆಲೆಯ ಉದಾರವಾಗಿ ಸಾಂಸ್ಕೃತಿಕ ಅಧ್ಯಯನಗಳು ಬರತೊಡಗಿದವು. ಕನ್ನಡದ ಸಾಂಸ್ಕೃತಿಕ ಅಧ್ಯಯನಗಳಿಗೆ ಹೊಸ ಜಿಗಿತ ಕೊಟ್ಟ ಈ ಬೆಳವಣಿಗೆಯು ಅನೇಕ ರೂಪಗಳಲ್ಲಿ ಕಾಣಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಸೂಫಿಗಳು, ತತ್ವಪದಕಾರರು ಹಾಗೂ ಮೊಹರಂ ಪದಗಳ ಮೇಲಿನ ಅಧ್ಯಯನಗಳನ್ನು ನೋಡಬೇಕು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ‘ಮುಸ್ಲಿಂ ಜಾನಪದ’ ಎಂಬ ಹೆಸರಲ್ಲಿ ವಿಚಾರ ಸಂಕಿರಣವನ್ನು (೧೯೯೬) ನಡೆಸಿತು; “ನಮ್ಮ ಮುಸ್ಲಿಂ ಹಿನ್ನೆಲೆಯ ಜನಪದ ಕತೆಗಳು” (ಸಂ. ಎಂ. ಎಸ್. ಶೇಖರ್) ಎಂಬ ಪುಸ್ತಕ (೨೦೦೧) ಪ್ರಕಟಿಸಿತು. ಇಲ್ಲಿರುವ ‘ನಮ್ಮ ಮುಸ್ಲಿಂ’ ಎಂಬ ಪದವನ್ನು ಗಮನಿಸಬೇಕು. “ಸ್ವಾತಂತ್ರ್ಯ ಚಳುವಳಿಯಲ್ಲಿ ಮುಸ್ಲಿಮರ ಪಾತ್ರ” ಎಂಬ ಪುಸ್ತಕಗಳು ಬಂದವು. ಶಿರಹಟ್ಟಿ ಫಕೀರೇಶ, ಕೊಡೇಕಲ್ಲು ಬಸವಣ್ಣ, ಸಾವಳಗಿ ಶಿವಯೋಗಿ, ತಿಂತಿಣಿ ಮೋನಪ್ಪ ಮುಂತಾದ ಸಂತರ ಧಾರ್ಮಿಕ ಸಾಮರಸ್ಯ ಪರಂಪರೆಯನ್ನು ಕುರಿತು ಅಧ್ಯಯನಗಳು ೯೦ರ ದಶಕದ ಕೊನೆಯಲ್ಲಿ ಪ್ರಕಟವಾದವು. ಇವು ಕೋಮುವಾದ ಹರಡುವ ಮಿಥ್ಯೆಗಳಿಗೆ ಕೊಟ್ಟ ಉತ್ತರ ರೂಪಗಳಂತಿವೆ.

ದಲಿತ ಪರಂಪರೆಯ ಶೋಧ

ಮುಸ್ಲಿಂ ಸಮುದಾಯದಲ್ಲಿ ಕೋಮುವಾದ ಹುಟ್ಟಿಸಿದ ಆತಂಕ ಹಾಗೂ ಮುಸ್ಲಿಂ ಪುರೋಹಿತಶಾಹಿ ಹುಟ್ಟಿಸಿದ ಮೂಲಭೂತವಾದಿ ನಿರ್ಬಂಧಗಳು, ಧಾರ್ಮಿಕ ಸಂವೇದನೆಯ ಅಧ್ಯಯನಗಳನ್ನು ಪ್ರೇರಿಸಿದರೆ, ದಲಿತ ಸಂವೇದನೆಯ ಪ್ರೇರಣೆಗಳು ಬೇರೆ ರೀತಿಯಲ್ಲಿವೆ. ೭೦ರ ದಶಕದಿಂದಲೇ ದಲಿತಪ್ರಜ್ಞೆಯ ವೈಚಾರಿಕತೆ ಬಂದಿತು. ತಮ್ಮನ್ನು ದಮನಿಸಿರುವ ವ್ಯವಸ್ಥೆಯ ವಿರುದ್ಧ ಸಂಘಟನೆ ಹಾಗೂ ಹೋರಾಟಕ್ಕೆ ಬೇಕಾದ ಅರಿವನ್ನು ಪಡೆಯುವುದು ಈ ವೈಚಾರಿಕತೆಯ ಮೊದಲಘಟ್ಟ. ಈ ವೈಚಾರಿಕತೆಯು ದಲಿತ ಸಂಸ್ಕೃತಿಯ ಸಂವೇದನೆಯ ಪ್ರಶ್ನೆಯಾಗಿದ್ದು ಎರಡನೆಯ ಘಟ್ಟ. (ಈ ಘಟ್ಟಗಳನ್ನು ದೇವನೂರರ “ದ್ಯಾವನೂರು” ಹಾಗೂ “ಕುಸುಮಬಾಲೆ” ಕಾದಂಬರಿಗಳಲ್ಲಿ ಕ್ರಮವಾಗಿ ಕಾಣಬಹುದು. ದಲಿತರಲ್ಲಿ ಹಾಗೂ ಕೆಳಸ್ತರದವರಲ್ಲಿ ಹುಟ್ಟಿದ ಮೊದಲ ಘಟ್ಟದ ವೈಚಾರಿಕತೆಯು, ಸಂಘರ್ಷಮುಖಿಯಾದ ರಾಜಕೀಯ ಪ್ರಜ್ಞೆ ಬೆಳೆಸಿತು. ಎರಡನೆಯ ಘಟ್ಟದ ದಲಿತ ಸಂವೇದನೆಯು ಚಿಂತನೆ ಮತ್ತು ಜಿಜ್ಞಾಸೆಯನ್ನು ಮೂಡಿಸಿತು. ದಲಿತ ಚಿಂತಕರು. ‘ಆಧುನಿಕ ವೈಚಾರಿಕತೆ ಮೂಲಕ ಮಾಡುವ ಹೋರಾಟವು ನಮ್ಮನ್ನು ಪೂರ್ಣವಾಗಿ ಬಿಡುಗಡೆ ಮಾಡದು. ಅದು ಶತ್ರುವನ್ನು ವಿಶ್ಲೇಷಿಸುತ್ತ ಹುಟ್ಟುವ ತಂತ್ರಗಾರಿಕೆ. ಈ ರಾಜಕಾರಣವು ಸಾಂಸ್ಕೃತಿಕ ಆಯಾಮವಿಲ್ಲದೆ ಅನೈತಿಕವಾಗುತ್ತದೆ ಮತ್ತು ಅರ್ಥಪೂರ್ಣ ಆಗುವುದಿಲ್ಲ. ರಾಜಕೀಯ ಎಚ್ಚರಕ್ಕೆ ಸಮುದಾಯದ ಸಾಂಸ್ಕೃತಿಕ ಲೋಕಗಳ ಜತೆಗಿನ ಆಪ್ತವಾ ಸಂಬಂಧ ಬೇಕು. ಅದಕ್ಕಾಗಿ ಸಮುದಾಯಗಳ ಚೈತನ್ಯಶೀಲ ನಂಬಿಕೆ ಆಚರಣೆಗಳ ಜಗತ್ತನ್ನು ಆವಾಹನೆ ಮಾಡಬೇಕು’ ಎಂದು ಅವರು ಭಾವಿಸತೊಡಗಿದರು. ಇದಕ್ಕಾಗಿ ದಲಿತ ಸಾಂಸ್ಕೃತಿಕ ಪರಂಪರೆಯನ್ನು ಕಂಡುಕೊಳ್ಳಲು ಗಂಭೀರ ಯತ್ನ ಶುರುವಾಯಿತು. ದಲಿತ ಕೆಳಸ್ತರದ ಸಮುದಾಯಗಳ ಸಂಸ್ಕೃತಿಯು ಉಚ್ಚಜಾತಿಗಳ ಅಸಮಾನತಾವಾದಿ ಸಂಸ್ಕೃತಿಗಿಂತಲೂ ಜನಪರವೂ ವಿಶಾಲತೆಯಿಂದಲೂ ಕೂಡಿದೆ, ಎಂಬ ಆತ್ಮವಿಶ್ವಾಸ ಈ ಹುಡುಕಾಟದಲ್ಲಿತ್ತು. ಕೆ.ರಾಮಯ್ಯ (“ಸಿಂಧ್‌ಮಾದಿಗರ ಸಂಸ್ಕೃತಿ”, ೧೯೯೩) ಹಾಗೂ ಎಸ್.ಎಸ್. ಹಿರೇಮಠ  ೦ (“ದಲಿತಸಂಸ್ಕೃತಿ”, ೨೦೦೧) ಬಿಳಿಮಲೆ (“ದಲಿತಸಂಸ್ಕೃತಿ”) ಬೋರಲಿಂಗಯ್ಯ (“ವಿಸ್ಮೃತಿ ಮತ್ತು ಸಂಸ್ಕೃತಿ”, ೨೦೦೧) ಮುಂತಾದವರು ದಲಿತ ಮತ್ತು ಬುಡಕಟ್ಟು ಸಂಸ್ಕೃತಿ ಮೇಲೆ ಮಾಡಿರುವ ಅಧ್ಯಯನಗಳನ್ನು ಇಲ್ಲಿ ಉಲ್ಲೇಖಿಸಬೇಕು.

ಸಾಂಸ್ಕೃತಿಕ ಗುರುತಿನ ಪ್ರಶ್ನೆ

ಪಾಶ್ಚಾತ್ಯ ಆಧುನಿಕ ಸಂಸ್ಕೃತಿ, ಅಮೆರಿಕೀಕರಣ ಮುಂತಾದ ‘ಅನ್ಯಸಂಸ್ಕೃತಿ’ಯ ಆಕ್ರಮಣದಿಂದ ನಮ್ಮ ಸಂಸ್ಕೃತಿ ಪರಂಪರೆ ನಾಶವಾಗುತ್ತದೆ ಎಂಬ ಹಾಹಾಕಾರ ಉಚ್ಚಜಾತಿಗಳಲ್ಲೂ ಇದೆ. ಇದರ ದ್ವಂದ್ವವೆಂದರೆ, ಭಾರತದ ಮಧ್ಯಮವರ್ಗವು ತನ್ನ ಕನಸಿನ ಲೋಕವಾದ ಅಮೆರಿಕೆಗೆ ಮಕ್ಕಳನ್ನು ಕಳಿಸುವ ಯತ್ನಮಾಡುತ್ತಲೇ, ಅದು ನಮ್ಮ ಧರ್ಮ ಸಂಸ್ಕೃತಿ ಪರಂಪರೆಗಳಿಂದ ಕಿತ್ತು ಪಾಶ್ಚಾತ್ಯ ಆಂಗ್ಲ ಕ್ರೈಸ್ತ ವಿದೇಶೀ ಆಶ್ಲೀಲ ಸಂಸ್ಕೃತಿಗೆ ಜೋಡಿಸಬಹುದು ಎಂದು ಆತಂಕಪಡುವುದು. ಸಂಸ್ಕೃತಿಯ ಅನುಸಂಧಾನವು ದಲಿತರಿಗೆ ತಮ್ಮ ದಮನಾವಸ್ಥೆಯಿಂದ ಮೇಲೇರುವ ಏಣಿಯಾಗಬೇಕೆಂಬ ಆಶಯವಾದರೆ, ಇಲ್ಲಿ ಅದು ಆಧುನಿಕತೆಯ ಭಾಗವಾಗಿದ್ದೂ ಸಾಂಕೇತಿಕವಾಗಿ ಉಳಿಸಿಕೊಳ್ಳಬೇಕಾದ ಧಾರ್ಮಿಕ ಸತ್ವಾವಾಗಿದೆ. ಹೀಗಾಗಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿಕೊಳ್ಳಬೇಕು ಎಂಬ ಮನೋಭಾವ ಮುಖ್ಯವಾಗಿ ಭಾರತದ ಉಚ್ಚಜಾತಿಯ ಮಧ್ಯಮ ವರ್ಗಗಳಿಲ್ಲಿ ಹುಟ್ಟಿದೆ. ಇದಕ್ಕೆ ಧಾರ್ಮಿಕ ಪುನರುತ್ಥಾನವಾದ ಆಯಾಮವೂ ಇದ್ದು, ಸಂಪ್ರದಾಯಗಳನ್ನು ರಕ್ಷಿಸಿಕೊಳ್ಳುವ ಮನೋಭಾವವಾಗುತ್ತಿದೆ. ಈ ಮನೋಭಾವದ ಇನ್ನೊಂದು ಕೊನೆಯು ಆಕ್ರಮಣಶೀಲ ಕೋಮುವಾದವಾಗಿ ಕಾಣಿಸಿಕೊಳ್ಳುತ್ತಿದೆ. ವಸಾಹತುಶಾಹಿ ಆಧುನಿಕತೆ ಭಾರತದೊಳಕ್ಕೆ ಪ್ರವೇಶಿಸುವಾಗ ಇಂತಹದೇ ಆತಂಕದ ನಾಟಕ ಶುರುವಾಗಿತ್ತು. ಇದನ್ನು ಮಾಸ್ತಿಯವರ “ಕನ್ನಡ ಜನತೆಯ ಸಂಸ್ಕೃತಿ” (೧೯೩೨) ಅಭಿನಯಿಸಿದೆ. ಚರಿತ್ರೆಯ ಚಕ್ರವು ತಿರುಗಿ, ಇದೇ ನಾಟಕ ಮತ್ತೆ ರಂಗಕ್ಕೆ ಬಂದಂತಿದೆ.

ಆದರೆ ಕರ್ನಾಟಕದ ಅಲ್ಪಸಂಖ್ಯಾತ ಪಂಗಡವಾದ ಸಂಕೇತಿಗಳ ಬ್ರಾಹ್ಮಣರ ಸಾಂಸ್ಕೃತಿಕ ಅಧ್ಯಯನವು ಮೇಲಿನ ಆತಂಕದ ಭಾಗವೆನಿಸುವುದಿಲ್ಲ. ಅದು ವಿಶಾಲ ಬ್ರಾಹ್ಮಣ ಸಮಾಜದಲ್ಲಿದ್ದೂ, ತನ್ನ ಪಂಗಡದ ವಿಶಿಷ್ಟ ಗುರುತು ಮಸುಕಾಗಿ ಹೋಗುತ್ತಿರುವ ಆತಂಕದಿಂದ ಹುಟ್ಟಿದಂತಿದೆ. ಇಲ್ಲಿ ಆಧುನಿಕತೆಯ ಬಗೆಗಿನ ಗುಮಾನಿಯಿಂದ ಆತ್ಮರಕ್ಷಕತೆ ಬಂದಿದೆ. ದಲಿತ ಕೆಳಜಾತಿಗಳ ಸಂಸ್ಕೃತಿಗಳ ಅಧ್ಯಯನಗಳಿಗೆ ಗುರುತು ಕಳೆದುಹೋಗುವ ಆತಂಕಕ್ಕಿಂತ, ಒಂದು ಪರಂಪರೆಯನ್ನು ಕಟ್ಟಿಕೊಂಡು ಅದನ್ನು ಆಧುನಿಕತೆ-ವೈಚಾರಿಕತೆಗಳ ಜತೆ ಬೆಸೆಯುವ ತವಕಗಳಿವೆ.

ಜಾಗತೀಕರಣ ಆತಂಕ

ಜಾಗತೀಕರಣ ಆತಂಕವು ಸಮಾಜ ವಿಜ್ಞಾನದವರಿಗಿಂತ ಸಾಹಿತ್ಯ ಮುಂತಾದ ಮಾನವಿಕ ಕ್ಷೇತ್ರದ ಚಿಂತಕರನ್ನೇ ಹೆಚ್ಚಾಗಿ ಕಾಡಿಸುತ್ತಿರುವಂತಿದೆ. ‘ಜಾಗತೀಕರಣವು ಸಾಂಸ್ಕೃತಿಕವಾಗಿ ಏಕರೂಪಿ, ಆಕ್ರಮಣಕಾರಿ. ಅದು ಸಾಂಸ್ಕೃತಿಕ ವೈವಿಧ್ಯವುಳ್ಳ ನಮ್ಮ ಬಹುರೂಪಿ ಸಂಸ್ಕೃತಿಯನ್ನು ನಾಶಮಾಡುತ್ತದೆ’ – ಇದು ಆತಂಕದ ಸಾರಾಂಶ; ‘ನಮ್ಮ ಮೂಲ/ದೇಶೀ ಸಂಸ್ಕೃತಿಯು ಹಳ್ಳಿಯ ಬದುಕು, ದೇಶೀಭಾಷೆ, ಕುಲಕಸುಬು, ಸಂಪ್ರದಾಯ, ಹಬ್ಬ, ಆಚರಣೆಗಳಲ್ಲಿದೆ. ಸಾಂಸ್ಕೃತಿಕ ವಿನಾಶದಿಂದ ಉಳಿಯಬೇಕಾದರೆ, ನಮ್ಮ ಈ ಸಂಸ್ಕೃತಿಯನ್ನು ಮುಂದೊಡ್ಡಬೇಕು’ – ಇದು ಆತಂಕಕ್ಕೆ ಪರ್ಯಾಯ. ಅನಂತಮೂರ್ತಿ, ಚಂದ್ರಶೇಖರ ಕಂಬಾರ ಅವರು ಈ ಆತಂಕವನ್ನು ಪ್ರತಿಪಾದಿಸುತ್ತಿರುತ್ತಾರೆ. ಮತ್ತೆ ಕೆಲವರು  ಜಾಗತೀಕರಣಕ್ಕೆ ಪರ್ಯಾಯವಾಗಿ ಅನುಭಾವವಾದವನ್ನು ಮಂಡಿಸುವುದುಂಟು. ಇದಕ್ಕೆ ಮಂಟೆಸ್ವಾಮಿ ಪರಂಪರೆ, ಸೂಫಿಗಳು, ತತ್ವಪದಕಾರರ ಅಧ್ಯಯನಗಳ ಪ್ರೇರಣೆ ಇರಬಹುದು. ಈ ಆತಂಕ ಎಷ್ಟು ನಿಜ, ಈ ಪರ್ಯಾಯಗಳು ಎಷ್ಟು ವಾಸ್ತವಿಕ- ಎನ್ನುವುದು ಬೇರೆ ಚರ್ಚೆ. ಕಷ್ಟವಿರುವುದು, ಈ ಆತಂಕ ಮತ್ತು ಪರ್ಯಾಯಗಳು ಸಂಸ್ಕೃತಿ ಚರ್ಚೆಯಲ್ಲಿ ಉಂಟುಮಾಡಿರುವ ಸಮಸ್ಯೆಗಳದ್ದು. ಈ ಸಮಸ್ಯೆಯ ಸಮುದಾಯ ಅಧ್ಯಯನಗಳಲ್ಲಿ ಇದೆ. ಜಾನಪದ ಅಧ್ಯಯನಗಳಲ್ಲಿ ಆಧುನಿಕ ನಾಗರಿಕತೆಯ ಬಗೆಗೆ ಮೊದಲಿಂದಲೂ ಇದ್ದ ಅನುಮಾನಗಳು ಈಗ ಜಾಗತೀಕರಣ ಆತಂಕಗಳ ರೂಪದಲ್ಲಿ ಮತ್ತಷ್ಟು ತೀವ್ರವಾಗಿವೆ.

ಮೊದಲನೆಯ ವೈರುಧ್ಯ ಎಂದರೆ, ಈ ಸಂಸ್ಕೃತಿಯ ರಕ್ಷಣೆಗೆ ಅನಕ ಸಲ ಬೌದ್ಧಿಕ, ಆರ್ಥಿಕ ಮತ್ತು ಸಾಂಸ್ಥಿಕ ಸಹಾಯಗಳು ‘ವಿದೇಶ’ಗಳಿಂದಲೇ ಆಗಮಿಸುತ್ತಿರುವುದು. ವಿಶ್ವವಿದ್ಯಾಲಯಗಳಲ್ಲಿ ನಿರ್ಲಕ್ಷಿತ ಅಧ್ಯಯನ ಶಾಖೆಯಾಗಿದ್ದ ಜಾನಪದವು. ಜಾಗತೀಕರಣದ ಹೊತ್ತಲ್ಲಿ ಎಲ್ಲಿಲ್ಲದ ಬೇಡಿಕೆಯ ವಿಷಯವಾಗಿ, ವಿದೇಶಿ ಫೌಂಡೇಶನ್ನುಗಳಿಂದ ದೇಣಿಗೆ ಪಡೆಯುತ್ತಿದೆ. ಜಾನಪದ ವಿದ್ವಾಂಸರು ವಿದೇಶಗಳಿಗೆ ಹೋಗಿಬರುತ್ತಿದ್ದಾರೆ. ಪಶ್ಚಿಮದ ಆಕ್ರಮಣ, ನಮ್ಮ ಸಂಸ್ಕೃತಿಯ ನಾಶದ ಭಯ, ನಮ್ಮ ಸಂಸ್ಕೃತಿಯ ರಕ್ಷಣೆ, ರಕ್ಷಣೆಗಾಗಿ ಮತ್ತು ಪಶ್ಚಿಮದತ್ತ ಮುಖ, ಪಶ್ಚಿಮದ ಚಿಂತನೆ ಮತ್ತು ಹಣ – ಇದೊಂದು ನಿಗೂಢ ಚಕ್ರ. ನಿಜವಾದ ಪ್ರಶ್ನೆ ಹಣ ಹಾಗೂ ವಿದೇಶಿ ಪ್ರವಾಸಗಳದ್ದಲ್ಲ. ಈ ಮೂಲಕ ನಡೆಯುತ್ತಿರುವ ಜಾನಪದದ ಸಾಂಸ್ಕೃತಿಕ ಅಧ್ಯಯನಗಳ ಹಿಂದಿನ ತಾತ್ವಿಕತೆ ಯಾವುದು? ಇವು ಯಾರಿಗಾಗಿ ನಡೆಯುತ್ತಿವೆ? ಇದರಿಂದ ನಮ್ಮ ಸಮಾಜಕ್ಕೆ ಯಾವ ಬಗೆಯ ಪ್ರಯೋಜನ? ಇಂಥ ಪ್ರಶ್ನೆಗಳನ್ನು ಎತ್ತಬೇಕಿದೆ. ನಾಶವಾಗಲು ಆತಂಕ ಹುಟ್ಟಿಸುವ ಆತ್ಮರಕ್ಷಣಾ ಮನೋಭಾವವು, ನಮ್ಮ ಭಾಷೆ, ಸಮಾಜ, ರಾಜಕಾರಣ, ಜಾನಪದ, ಸಾಹಿತ್ಯ, ಕಲೆ, ಧರ್ಮಗಳ ಅಧ್ಯಯನವನ್ನು ವಿಮರ್ಶೆಯಿಲ್ಲದೆ ಮಾಡಲು ಒತ್ತಾಯಿಸುತ್ತದೆ. ಅಂತಹದೊಂದು ವಿಮರ್ಶಾಹೀನತೆ ಇಂದು ಸಮುದಾಯ ಅಧ್ಯಯನಗಳಲ್ಲಿ ತಲೆಹಾಕುತ್ತಿದೆ. ಇದು ಬೆಳೆದು ಬಡವರು, ಆಶಿಕ್ಷಿತರು, ಹಳ್ಳಿಗರು, ಸಾಮಾಜಿಕವಾಗಿ ಹಿಂದುಳಿದವರು ಮಾತ್ರ ಜಾಗತೀಕರಣದಿಂದ ನಮ್ಮ ಸಂಸ್ಕೃತಿಯನ್ನು ರಕ್ಷಿಸಬಲ್ಲರು ಎಂಬ ತರ್ಕಕ್ಕೂ ಹೋಗುತ್ತಿದೆ.

ಎರಡನೆಯ ವೈರುಧ್ಯವೆಂದರೆ, ಸಂಸ್ಕೃತಿ ನಾಶವಾಗುತ್ತಿದೆ ಎಂಬ ಆತಂಕ ವ್ಯಕ್ತವಾಗುತ್ತಿರುವುದು ಜನಪದರ ಲೋಕಗಳಿಂದಲ್ಲ, ನಗರದ ಮಧ್ಯಮ ವರ್ಗದಿಂದ, ಮಧ್ಯಮವರ್ಗದ ಹಿತಾಸಕ್ತಿಗಳು ಸಾಂಸ್ಕೃತಿಕ ಅಧ್ಯಯನಗಲ್ಲಿರುವ ಸೈದ್ಧಾಂತಿಕ ಪರಿಮಿತಿಗಳಿಗೆ ಕಾರಣವಾಗುತ್ತಿವೆ. ಮಧ್ಯಮವರ್ಗವು ನಗರದ ಯಾಂತ್ರಿಕ ಬದುಕಿನಿಂದ ಬಸವಳಿದು ಮನಸ್ಸಿಗೂ ಶಾಂತಿಗಾಗಿಯೂ ತಾನು ಬಿಟ್ಟುಬಂದ ಜೀವನ ವಿಧಾನಕ್ಕಾಗಿಯೂ ಜಾನಪದದತ್ತ ನೋಡುತ್ತಿದೆ. ಇದರಿಂದ ಮೂರ್ತವಾದ ರಾಜಕೀಯ – ಆರ್ಥಿಕ- ಸಾಮಾಜಿಕ ವಿದ್ಯಮಾನಗಳು ಕೂಡ, ಅಸ್ಪಷ್ಟವೂ ಅಮೂರ್ತವೂ ಆದ ‘ಸಾಂಸ್ಕೃತಿಕ’ ಸಮಸ್ಯೆಗಳಾಗಿ ಪರಿವರ್ತನೆಯಾಗುತ್ತಿವೆ. ಅಮೂರ್ತ ಪರಿಭಾಷೆ ಹಾಗೂ ತಾತ್ವಿಕ ಅಸ್ಪಷ್ಟತೆಗಳು ರಾಜಕೀಯ ಕ್ರಿಯಾಹೀನತೆಗೆ ಕರೆದೊಯ್ಯುತ್ತವೆ. ಸಂಸ್ಕೃತಿಯನ್ನು ಜನರ ನಿತ್ಯ ಬದುಕಿನ ಕಷ್ಟಸುಖಗಳ ಹೊರಗೆ, ಅವರ ಹಾಡು, ಹಸೆ, ಕಲೆ, ಸಾಹಿತ್ಯ, ಕುಣಿತ, ಊಟ, ಉಡುಗೆ, ದೈವಾಚರಣೆಗಳಲ್ಲಿ ಹುಡುಕುವುದರಿಂದ ಕೂಡ, ಈ ಸಮಸ್ಯೆ ನಿರ್ಮಾಣವಾಗುತ್ತಿರಬಹುದು. ಇದರಿಂದಲೇ ಜಾಗತೀಕರಣವು ನಮ್ಮ ರೈತರ ಸಾವಿಗೆ ಕಾರಣವಾಗಿರುವ ಪ್ರಶ್ನೆಗಿಂತ, ನಮ್ಮ ಸಾಂಪ್ರದಾಯಕ ಊಟ, ಉಡುಗೆ, ಹಬ್ಬಗಳನ್ನು ಕಿತ್ತುಕೊಳ್ಳುತ್ತದೆ ಎಂಬ ಆರ್ತತೆ ಹೆಚ್ಚಾಗಿರುವುದು. ಹೀಗೆ ಸಂಸ್ಕೃತಿರಕ್ಷಕ ಅಧ್ಯಯನಗಳು ಜನಪದರ ನಿಜವಾದ ತಲ್ಲಣಗಳ ವಿರುದ್ಧ ದಿಕ್ಕಲ್ಲಿ ನಿಂತಿರುವಂತೆ ತೋರುತ್ತಿದೆ.

. ಎನ್ಜಿಓ ಆಸಕ್ತಿಗಳು

ಜಾಗತೀಕರಣದಿಂದ ದೇಶೀ ಸಂಸ್ಕೃತಿಗಳ ನಾಶವೆಂಬ ಆತಂಕದ ಒಂದು ಪರಿಣಾಮವು ಬಗೆಬಗೆಯ ಸಾಂಸ್ಕೃತಿಕ ಅದ್ಯಯನಗಳಿಗೆ ಕಾರಣವಾಗಿದೆ. ಹಿಂದುಳಿದ ಸಮುದಾಯಗಳ ಸಾಂಸ್ಕೃತಿಕ ಸಿರಿ ಮತ್ತು ವೈವಿಧ್ಯವನ್ನು ದಾಖಲಿಸುವ ಯೋಜನೆಯೂ ಅದರಲ್ಲಿ ಸೇರಿದೆ. ಈ ಕೆಲಸದಲ್ಲಿ ಅನೇಕ ಎನ್.ಜಿ.ಓ.ಗಳು ತೊಡಗಿಕೊಂಡಿವೆ. ಇವು ದಲಿತರ, ಮಹಿಳೆಯರ, ಬುಡಕಟ್ಟುಗಳ, ಮುಸ್ಲಿಮರ ಹಾಗೂ ಕ್ರೈಸ್ತರ ಸಮಸ್ಯೆಗಳನ್ನು ‘ಸಾಂಸ್ಕೃತಿಕ ಗುರುತು’, ‘ಸಾಂಸ್ಕೃತಿಕ ಅಸ್ತಿತ್ವ’ ಮುಂತಾದ ಪರಿಭಾಷೆಯಲ್ಲಿ ವಿಶ್ಲೇಷಿಸುತ್ತಿವೆ. ಸ್ಥಳೀಯ ಜನಾಂಗೀಯ ಬುಡಕಟ್ಟುಗಳ ಸಾಂಸ್ಕೃತಿಕ ವಿಶಿಷ್ಟತೆ – ವೈವಿಧ್ಯಗಳ ರಕ್ಷಣೆಗೆಂದು ಮಾಹಿತಿ ಸಂಗ್ರಹ ಹಾಗೂ ಅಧ್ಯಯನಗಳನ್ನು ಕೈಗೊಳ್ಳು ಹಣ ಮತ್ತು ಅಧ್ಯಯನ ತಾತ್ವಿಕತೆಯನ್ನು ಹಂಚುತ್ತಿವೆ. ಎನ್‌ಜಿಓಗಳ ಹೆಸರುಗಳು ಕೂಡ ಸಾಂಸ್ಕೃತಿಕ ಪರಿಭಾಷೆಯಲ್ಲಿರುತ್ತವೆ. ಅವು ಜಾಗತೀಕರಣದ ಸನ್ನಿವೇಶದಲ್ಲಿಯೇ, ಸಂಸ್ಕೃತಿಯ ಬಹುರೂಪಿ ಹುಡುಕಾಟವನ್ನು ಅಥವಾ ದಲಿತ ಮುಸ್ಲಿಂ ಮಹಿಳಾ ಗಿರಿಜನ ಮುಂತಾದ ಚಿಕ್ಕಚಿಕ್ಕ ಸಮುದಾಯಗಳ ಸಾಂಸ್ಕೃತಿಕ ಅನನ್ಯತೆಯನ್ನು ಯಾಕೆ ದೊಡ್ಡ ಪ್ರಶ್ನೆ ಮಾಡಿಕೊಂಡಿವೆ? ಅವುಗಳ ಹಣಕಾಸು ಹಾಗೂ ಸಿದ್ಧಾಂತಗಳ ಮೂಲಗಳಂತೆಯೇ ಅವರ ಚಟುವಟಿಕೆಗಳು ಕೂಡ ಸಂಶಯಾಸ್ಪದವಾಗಿವೆ. ಇವು ಸಾಂಸ್ಕೃತಿಕ ಅಧ್ಯಯನದ ಹೆಸರಲ್ಲಿ ಬಡದೇಶಗಳ ಸಮಾಜದಲ್ಲಿ ನಡೆಯುವ ಸೂಕ್ಷ್ಮಸ್ತರದ ಮಾಹಿತಿ ಸಂಗ್ರಹಿಸಿ, ದೇಣಿಗೆ ಕೊಡುವ ದೇಶಗಳಿಗೆ ಕಳಿಸಿಕೊಡುತ್ತವೆ ಎಂಬ ಗಂಭೀರ ಆಪಾದನೆಯಿದೆ. ಇವು ನಡೆಸುವ ಚಟುವಟಿಕೆಗಳಲ್ಲಿ ನೂರಾರು ತರುಣರು ಅದರಲ್ಲೂ ದಲಿತರೂ ಮಹಿಳೆಯರೂ ಕೆಲಸ ಮಾಡುತ್ತಿರುವರು. ಇದರಿಂದ ಹೊಸ ತಲೆಮಾರು ಸಾಮಾಜಿಕ ಹೋರಾಟದ ಪ್ರಶ್ನೆಯನ್ನು ಕೈಬಿಟ್ಟು, ಸಂಸ್ಕೃತಿ ವಿಶಿಷ್ಟತೆಯನ್ನು ರಕ್ಷಿಸಿಕೊಳ್ಳುವುದಕ್ಕೆ ಇಳಿದಂತಾಗಿದೆ. ಸಾಂಸ್ಕೃತಿಕ ಅನನ್ಯತೆಯ ಹೆಸರಲ್ಲಿ ದಲಿತ, ಮಹಿಳೆ, ಅಲ್ಪಸಂಖ್ಯಾತ, ಬುಡಕಟ್ಟು ಎಂಬ ಸಮುದಾಯಗಳು ತುಂಡುದ್ವೀಪಗಳಾಗಿ ಬಿಡುವ ಸಾಧ್ಯತೆಯೂ ಇದೆ.

ಜಗತ್ತಿನ ಬಲಿಷ್ಠ ರಾಷ್ಟ್ರಗಳ ಪ್ರತಿಷ್ಠಾನಗಳು ಸಾಂಸ್ಕೃತಿಕ ಚಟುವಟಿಕೆಗಳಿಗೆ ನೆರವು ನೀಡುವುದಕ್ಕೆ ಹಳೆಯ ಚರಿತ್ರೆಯೇ ಇದೆ. ಅಮೆರಿಕೆಯ ಪೋರ್ಡ್ ಪ್ರತಿಷ್ಠಾನ ಭಾರತದಲ್ಲಿ ಸಾಂಸ್ಕೃತಿಕ ಚಟುವಟಿಕೆ ಮಾಡುತ್ತಿರುವ ಸಂಸ್ಥೆಗಳಿಗೆ ವಿಶೇಷವಾದ ಧನಸಹಾಯ ಮಾಡುತ್ತಿದೆ. ಸಂಸ್ಕೃತಿ ವೈವಿಧ್ಯ ರಕ್ಷಣೆಗಾಗಿ ಅದು ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಪದವಿ ಕಾಲೇಜುಗಳಲ್ಲಿ ಜಾರಿಕೊಟ್ಟಿರುವ ‘ಕ್ಯಾಂಪಸ್ ಡೈವರ್ಸಿಟಿ ಇನಿಶಿಯೇಟಿವ್’ ಯೋಜನೆ ಇದರಲ್ಲೊಂದು. ಸಾಹಿತ್ಯ, ನಾಟಕ, ಸಂಗೀತ, ಸಿನಿಮಾ ಮುಂತಾದ ಕಲೆಗಳನ್ನು ಕುರಿತು ಚಟುವಟಿಕೆ ಹಮ್ಮಿಕೊಳ್ಳುತ್ತ ಬಂದಿರುವ ಹೆಗ್ಗೋಡಿನ ‘ನೀನಾಸಂ’ ಮೊದಲ ಹಂತದಲ್ಲಿ ಪೋರ್ಡ್ ಪ್ರತಿಷ್ಠಾನದಿಂದ ನೆರವನ್ನು ಪಡೆಯಿತು. ಉಡುಪಿಯ ಪ್ರಾದೇಶಿಕ ರಂಗಕಲೆಗಳ ಕೇಂದ್ರವು (ಆರ್.ಆರ್.ಸಿ.) ಇಂತಹ ಇನ್ನೊಂದು ಸಂಸ್ಥೆ. ಹೆಗ್ಗೋಡಿನ ಅಕ್ಷರ ಪ್ರಕಾಶನವು ‘ಅಕ್ಷರ ಚಿಂತನಮಾಲೆ’ಯ ಪುಸ್ತಕಗಳನ್ನು ಅಮೆರಿಕೆಯ ರಾಕ್‌ಫೆಲರ್ ಪೌಂಡೇಶನ್ ಸಹಾಯದಿಂದ ಪ್ರಕಟಿಸಿತು. ಇಂತಹ ಅನೇಕ ಸರಕಾರೇತರ ಸಂಸ್ಥೆಗಳು ಇವೆ. ಇವು ಸರಕಾರದಿಂದಲೂ ಅನುದಾನ ಪಡೆಯುತ್ತವೆ. ಆರ್.ಆರ್.ಸಿ.ಯು ಕರ್ನಾಟಕ ವಿವಿಧ ವಿಶ್ವವಿದ್ಯಾಲಯಗಳಲ್ಲಿರುವ ವಿದ್ವಾಂಸರನ್ನು, ಸಂಶೋಧಕರನ್ನು ಸೇರಿಸಿ, ಜಾನಪದ ಮತ್ತು ಭಾಷೆಗಳ ಕ್ಷೇತ್ರಗಳಲ್ಲಿ ಅಧ್ಯಯನ ಮಾಡಲು ತರಬೇತಿಯನ್ನು ಕೊಡುತ್ತದೆ. ಈ ತರಬೇತಿಯ ಸೈದ್ಧಾಂತಿಕ ಸ್ವರೂಪ ಯಾವುದು? ಈ ವಿದ್ವಾಂಸರ ಸಾಂಸ್ಕೃತಿಕ ಅಧ್ಯಯನಗಳ ಸ್ವರೂಪ ಯಾವುದು? ಇದರ ಪರಿಣಾಮವೇನು? ಈ ಬಗ್ಗೆ ಸರಿಯಾದ ವಿಶ್ಲೇಷಣೆ ನಡೆದಿಲ್ಲ.

ಆಧುನಿಕೋತ್ತರ ಚಿಂತನೆಗಳ ಬೀಸು

ಸಾಂಸ್ಕೃತಿಕ ಅಧ್ಯಯನಗಳನ್ನು ಮಾಡುತ್ತಿರುವವರಲ್ಲಿ ಆಧುನಿಕೋತ್ತರ (ಪೋಸ್ಟ್ ಮಾಡರ್ನಿಸ್ಟ್) ಚಿಂತಕರು ಹೆಚ್ಚು. ಇವರ ಚಿಂತನೆಗಳು ಭಾರತದ ಬೌದ್ಧಿಕ ವಲಯದಲ್ಲಿ ವಿಶೇಷವಾದ ಪ್ರವೇಶ ಪಡೆದುಕೊಳ್ಳುತ್ತಿವೆ. ಸಾಂಪ್ರದಾಯಕ ಮಾರ್ಕ್ಸ್‌ವಾದದ ಸಂಸ್ಕೃತಿ ಗ್ರಹಿಕೆಯನ್ನು ಆಧುನಿಕೋತ್ತರವಾದಗಳು ಒಪ್ಪುವುದಿಲ್ಲ. ಆರ್ಥಿಕ ಚಟುವಟಿಕೆಗಳ ಮೂಲರಚನೆಯೇ ಕಲೆ, ನಂಬಿಕೆ, ಆಚರಣೆ, ಜನರ ಆಲೋಚನ ಕ್ರಮಗಳ ಸಾಂಸ್ಕೃತಿಕ ಲೋಕವನ್ನು ನಿರ್ಧರಿಸುವುದಿಲ್ಲ. ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಸಾಂಸ್ಕೃತಿಕ ಲೋಕವೂ ಆರ್ಥಿಕ ರಾಜಕಾರಣವನ್ನು ರೂಪಿಸಬಲ್ಲದು; ಆರ್ಥಿಕ ನೆಲೆಯ ಮೇಲೆಯೇ ಸಮಾಜವನ್ನು ನೋಡುವ ಮಾರ್ಕ್ಸ್‌ವಾದಿ ಪರಿಭಾಷೆಗೆ ಕೆಲವು ಸಾಂಸ್ಕೃತಿಕ ಸೂಕ್ಷ್ಮತೆಗಳು ದಕ್ಕುವುದಿಲ್ಲ. ತಾತ್ವಿಕವಾಗಿ ಈ ಲೋಕದ ಪ್ರತಿಯೊಂದು ತುಣಿಕಿಗೂ ಅದರದೇ ಆದ ಅಸ್ತಿತ್ವವೂ ಸ್ವಾಯತ್ತತೆಯೂ ಇದೆ. ಸತ್ಯವು ಒಂದಲ್ಲ, ಹಲವು. ಸತ್ಯದ ಪ್ರತಿಮುಖವೂ ಮಾನ್ಯವಾದುದು, ಒಂದು ಇನ್ನೊಂದರ ಅಧೀನ ಎಂದು ಭಾವಿಸಬೇಕಿಲ್ಲ ಎಂದು ಅವು ಭಾವಿಸುತ್ತವೆ.

ಈ ತಾತ್ವಿಕ ನಿಲುವಿನಿಂದ ಸಾಂಸ್ಕೃತಿಕ ಅಧ್ಯಯನಗಳಿಗೆ ಒಂದು ಬಗೆಯ ಸ್ವಾಯತ್ತತೆಯೇನೋ ಸಿಕ್ಕಿದೆ. ಆಧುನಿಕೋತ್ತರ ಚಿಂತನೆಯ ಮುಖ್ಯ ಗುಣವೆಂದರೆ, ಪ್ರತಿಯೊಂದರ ಮಹತ್ವವನ್ನು ಮನ್ನಿಸುವುದು. ಇದರಿಂದ ಸಮಾಜದ ಯಾವುದೇ ವಿಷಯವನ್ನು ಕ್ಷುದ್ರವೆಂದು ತಿರಸ್ಕರಿಸದೆ, ಇದು ಯಾಕೆ ಹೀಗಿದೆ ಎಂದು ಸೂಕ್ಷ್ಮ ವಿವೇಚನೆಗೆ ತೊಡಗಲು ಸಾಧ್ಯ. ಇದು ಬಹುಶಃ ನಿರ್ಲಕ್ಷಿತ (ಸಬಾಲ್ಟರ್ನ್) ಅಧ್ಯಯನಗಳ ಹಿಂದೆ ಕೆಲಸ ಮಾಡಿದೆ. ನಿರಾಕರಣೆಗೆ ಒಳಗಾದ ದಲಿತರು, ಆದಿವಾಸಿಗಳು, ಅಸಾಹಿತ್ಯಕ ಎನಿಸಿಕೊಂಡ ಪಠ್ಯಗಳು – ಇವೆಲ್ಲವುಗಳ ಅಧ್ಯಯನಕ್ಕೆ ಇದು ಒಂದು ತಾತ್ವಿಕ ಭೂಮಿಕೆ ನೀಡುತ್ತದೆ.

ಆಧುನಿಕೋತ್ತರವಾದವು ಬಹುಮುಖಿ ಸತ್ಯಗಳನ್ನು ನಂಬುತ್ತದೆ. ಸಮಾಜದ ಬಿಡಿಬಿಡಿ ವಸ್ತುಗಳ ಸಂಗತಿಗಳ ಬಗ್ಗೆ ಅತಿಯಾದ ಗಮನ ಕೊಡುತ್ತದೆ. ಅವು ಇತರ ಸಂಗತಿಗಳ ಜತೆ ಇರಿಸಿಕೊಂಡಿರುವ ಸಂಬಂಧವನ್ನು ನೋಡುವುದಿಲ್ಲ. ವಿಭಿನ್ನ ಸಂಗತಿಗಳ ನಡುವೆ ಇರು ಅಧಿಕಾರ ಸಂಬಂಧವನ್ನು ತತ್ವಶಾಸ್ತ್ರಜ್ಞ ಫುಕೊನನ್ನು ಬಿಟ್ಟರೆ, ಹೆಚ್ಚಿನವರು ವಿವರಿಸುವುದಿಲ್ಲ. ಸಮಾಜದ ಚಲನೆಗಳನ್ನು ವರ್ಗದ ನುಡಿಗಟ್ಟಿನಲ್ಲಿ ಗ್ರಹಿಸುವುದಿಲ್ಲ. ಈ ವಾದವು ಆರ್ಥಿಕ ರಾಜಕೀಯ ಸ್ವರೂಪದ ಸಂಗತಿಗಳಿಗೆ ‘ಸಾಂಸ್ಕೃತಿಕ’ ಂಬ ಆಕರ್ಷಕವಾದ ಹೊದಿಕೆಯನ್ನು ಕೊಟ್ಟುಬಿಡುತ್ತದೆ. ಮುಖ್ಯವಾಗಿ ಅದು ಸಂಗತಿಗಳನ್ನು ಆ ಕ್ಷಣದ ಸತ್ಯವೆಂದು ತೆಗೆದುಕೊಂಡು ವಿವರಿಸುತ್ತದೆ. ಸಮಾಜ ಬದಲಾಯಿಸುವ ಪ್ರಶ್ನೆಯನ್ನು ಎತ್ತುವುದಿಲ್ಲ-ಇವು ಆಧುನಿಕೋತ್ತರ ಚಿಂತನೆಯ ಮೇಲಿರುವ ಟೀಕೆಗಳು. ಮಾರ್ಕ್ಸ್‌ವಾದದ ಪ್ರಭಾವವನ್ನು ತಗ್ಗಿಸಲೆಂದೇ ಹುಟ್ಟಿಕೊಂಡಿರುವ ಚಿಂತನೆಗಳಿವು ಎಂದು ಮಾರ್ಕ್ಸ್‌ವಾದಿಗಳು ಅನುಮಾನಿಸುತ್ತಾರೆ. ಫೋಸ್ಟ್ ಮಾಡರ್ನಿಸ್ಟ್ ಚಿಂತನೆಗಳಿಗೂ, ಬಹುಚರ್ಚಿತ ಸಾಂಸ್ಕೃತಿಕ ಅನನ್ಯತೆಯ ಪ್ರಶ್ನೆಗೂ, ಎನ್‌ಜಿಓಗಳಿಗೂ, ಬಂಡವಾಳಶಾಹಿ ದೇಶಗಳಿಗೂ ಒಳಸಂಬಂಧಗಳಿವೆ ಎಂದು ಅವರು ಭಾವಿಸುತ್ತಾರೆ.

ಕನ್ನಡದಲ್ಲಿ ಈ ಆಧುನಿಕೋತ್ತರ ಚಿಂತನೆಗಳ ಪರಿಚಯಾತ್ಮಕ ಪ್ರವೇಶಗಳು ಆಗಿವೆ. ಆದರೆ ಇವು ಸಾಂಸ್ಕೃತಿಕ ಅಧ್ಯಯನಗಳಲ್ಲಿ ಹೇಗೆ ಕ್ರಿಯಾಶೀಲವಾಗಿವೆ ಎಂಬ ಸ್ಪಷ್ಟಚಿತ್ರ ಸಿಗುವುದಿಲ್ಲ. ಡಿ.ಆರ್.ನಾಗರಾಜ ಅವರು ‘ಸ್ಕೂಲ್‌ಮಾಸ್ಟರ್’ ಸಿನಿಮಾ ಮೇಲೆ ಮಾಡಿದ ಅಧ್ಯಯನದಲ್ಲಿ ಇದರ ಪ್ರೇರಣೆ ಗುರುತಿಸಬಹುದು. ರಾಜೇಂದ್ರ ಚೆನ್ನಿಯವರ ಈಚಿನ ಸಾಹಿತ್ಯ ವಿಮರ್ಶೆಯಲ್ಲಿ ವಸಾಹತೋತ್ತರವಾದಿ ಚಿಂತನೆಯ ಪ್ರಭಾವಗಳು ಕಾಣಿಸಿಕೊಂಡಿವೆ. ಕನ್ನಡದ ರಂಗಭೂಮಿಯ ನೆಲೆಯಿಂದ ಸಾಂಸ್ಕೃತಿಕ ವಿಶ್ಲೇಷಣೆಗಳನ್ನು ಮಾಡುತ್ತಿರುವ ಕೆ.ವಿ.ಅಕ್ಷರ ಅವರಲ್ಲಿ ವಸಾಹತ್ತೋತ್ತರ ಚಿಂತನೆಯ ಗಾಢ ಪ್ರಭಾವವಿದೆ. ‘ನನ್ನ ಯೋಚನಾಕ್ರಮದ ಮೇಲೆ ವಿಶೇಷ ಪ್ರಭಾವ ಮಾಡಿದ ಎರಡು ಬರಹಗಳು’ ಎಂದು ಅವರು ಉಲ್ಲೇಖಿಸುವ ಕೃತಿಗಳೆಂದರೆ ಸೂಸನ್ ಸೊಂಟಾಗ್ ಅವರ “ಅಗೇನಸ್ಟ್ ಇಂಟರ್‌ಪ್ರಿಟೇಶನ್” ಹಾಗೂ ಮಿಷೆಲ್ ಫುಕೋ ಅವರ “ದ ಆರ್ಡರ್ ಆಫ್ ಥಿಂಗ್ಸ್: ಎನ್ ಆರ್ಕಿಯಾಲಜಿ ಆಫ್ ಹ್ಯೂಮನ್ ಸೈನ್ಸಸ್” (ಪ್ರಸ್ತಾವನೆ:೧೯೯೮). ಆದರೆ ಫುಕೋವಿನಂತೆ ತನ್ನ ಚಿಂತನೆಯಲ್ಲಿ ಅಧಿಕಾರ ಮತ್ತು ನಿಯಂತ್ರಣಗಳ ಪ್ರಶ್ನೆಯನ್ನು ವಸಾಹತೋತ್ತರವಾದಿ ಚಿಂತನೆಗಳ ಪ್ರಭಾವವುಳ್ಳ ಕನ್ನಡದ ಚಿಂತಕರು ಲಗತ್ತಿಸುವುದಿಲ್ಲ.

ಒಡಕೋ ಬೆಸುಗೆಯೋ?

ಭಾರತದ ಡೆಮಾಕ್ರಸಿಯಲ್ಲಿ ಸ್ವಾತಂತ್ರ್ಯ ಬಂದು ಅರ್ಧ ಶತಮಾನವಾದರೂ ದೇಶದ ಬಡವರು. ಸ್ತ್ರೀಯರು, ಬುಡಕಟ್ಟುಗಳು ಅಭಿವೃದ್ಧಿಯ ಫಲವನ್ನು ಪಡೆಯಬೇಕಾದಷ್ಟು ಪಡೆಯಲಿಲ್ಲ. ಹೀಗಾಗಿ ಅವರು ಸಂಘಟಿತವಾಗಿ ತಮ್ಮ ಪಾಲಿಗಾಗಿ ಹಕ್ಕೊತ್ತಾಯ ಮಾಡುವ ಅಭ್ಯಾಸ ಬೆಳೆಸಿಕೊಳ್ಳುತ್ತಿದ್ದಾರೆ. ಜಾತಿ, ಮತ, ಮಹಿಳೆ, ಬುಡಕಟ್ಟು ಮುಸ್ಲಿಂ ಮುಂತಾದ ಆಧಾರಗಳಲ್ಲಿಯೇ ಸಂಸ್ಕೃತಿಯನ್ನು ನಿರ್ವಚಿಸಿಕೊಂಡು ಅಧ್ಯಯನ ಮಾಡುವ ಪ್ರವೃತ್ತಿ, ಈ ಹಕ್ಕೊತ್ತಾಯದ ರಾಜಕೀಯ ಸಾಮಾಜಿಕ ಬೆಳವಣಿಗೆಗೆ ಒತ್ತಾಸೆಯಾಗಿ ನಿಲ್ಲುತ್ತದೆ ಎಂದು ವಾದಿಸಬಹುದು. ಇದಕ್ಕೆ ಪೂರಕವಾಗಿ ಜಾತಿ ಧರ್ಮ ಲಿಂಗ ಪ್ರದೇಶ ಭಾಷೆಯ ಗುರುತುಗಳು ಆಧಾರದಲ್ಲಿ ಹುಟ್ಟುತ್ತಿರುವ ಸಾಂಸ್ಕೃತಿಕ ಅನನ್ಯತೆಯ ಪ್ರಶ್ನೆಯನ್ನೂ ಸಾಂಸ್ಕೃತಿಕ ಅಧ್ಯಯನಗಳು ದೃಢೀಕರಿಸುವ ಸಾಧ್ಯತೆಯಿದೆ. ಈ ಪ್ರಕ್ರಿಯೆ ಸಮಾಜವನ್ನು ಒಂದು ಅಪಾಯಕಾರಿ ಸ್ಥಿತಿಗೆ ಒಯ್ಯಬಹುದು. ಶ್ರೇಣಿಕೃತ ಸಮಾಜದಲ್ಲಿ, ಸಂಸ್ಕೃತಿ ವ್ಯಾಖ್ಯೆ ಹಾಗೂ ಅಧ್ಯಯನಗಳು, ಸಾಂಸ್ಕೃತಿಕ ಅನನ್ಯತೆಯ ಹೆಸರಲ್ಲಿ ಜಾತಿ-ಮತ-ಪಂಗಡ-ಜನಾಂಗಗಳು ಮತ್ತಷ್ಟು ಸಂಘಟಿತವಾಗುವಂತೆ ಮಾಡಬಹುದು.

ಅ) ಸಂಸ್ಕೃತಿಯ ಹೆಸರಲ್ಲಿ ಎಲ್ಲ ಸಮುದಾಯಗಳು ತಂತಮ್ಮ ಆಚರಣ ನಂಬಿಕೆಗಳನ್ನು (ಅವುಗಳಲ್ಲಿ ಅನ್ಯ ಸಮುದಾಯಗಳನ್ನು ಅಪಮಾನಿಸುವ ಆಶಯವಿದ್ದರೂ) ವಿಮರ್ಶೆ ಮಾಡಿಕೊಳ್ಳುವ ಹಾಗೂ ತಿದ್ದಿಕೊಳ್ಳುವ ಅವಕಾಶಗಳು ಕಡಿಮೆಯಾಗುತ್ತವೆ. ಬದಲಿಗೆ ಅವು ಸಾಂಸ್ಕೃತಿಕ ವಿಶಿಷ್ಟತೆಯ ಕಾರಣದಿಂದಲೇ ಮುಂದುವರೆಯುವ ನ್ಯಾಯಬದ್ಧತೆಯನ್ನು ಪಡೆಯುತ್ತವೆ.

ಆ) ಸಾಂಸ್ಕೃತಿಕ ಹಕ್ಕು ಮತ್ತು ವಿಶಿಷ್ಟತೆಗಳ ಹೆಸರಲ್ಲಿ ಸಮುದಾಯ, ಜಾತಿ, ಮತಗಳಿಗೆ ಸೀಮಿತವಾದ ಸಂಕುಚಿತ ರಾಜಕಾರಣ ಬೆಳೆಯುವುದು. ಇಡೀ ಸಮಾಜದ ಜನ ತಂತಮ್ಮ ಲಿಂಗಾಧಾರಿತ, ಜಾತ್ಯಾಧರಿತ, ಧರ್ಮಾಧರಿತ, ಪ್ರದೇಶಾಧರಿತ ವಿಶಿಷ್ಟತೆಗಳನ್ನು ಗಡಿಗಳನ್ನಾಗಿ ಮಾಡಿಕೊಳ್ಳದೆ, ಸಮಾನ ಸುಖದುಃಖಗಳಿಗಾಗಿ ಕೂಡುವ, ಸಮಾನತೆಯ ಸಮಾಜ ಕಟ್ಟಲು ತೊಡಗುವ ಅವಕಾಶ (Space) ಕಡಿಮೆಯಾಗುತ್ತ ಹೋಗುವುದು, ಮಾತ್ರವಲ್ಲ, ಆಯಾ ಸಮುದಾಯವು ತನ್ನ ಸಮಸ್ಯೆಗೆ ತಾನೇ ಹೋರಾಡಬೇಕು ಎಂಬ ಸೆಕ್ಟೇರಿಯನ್ ಮನೋಧರ್ಮ ಬೆಳೆಯುವ ಸಾಧ್ಯತೆಯೂ ಇದೆ. ಎಲ್ಲರೂ ಕೂಡಿ ಹೋರಾಟ ಮಾಡಿ ಬಿಡುಗಡೆ ಪಡೆಯಬೇಕೆನ್ನುವ ಚಿಂತನೆಗಳ ಪ್ರಭಾವ ಕುಗ್ಗಿಸಲೆಂದೇ, ಸಮುದಾಯವಾದಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚು ಪ್ರೋತ್ಸಾಹ ಕೊಡುವ ಸಾಧ್ಯತೆ ಹೆಚ್ಚಾಗುತ್ತಿದೆ; ಎಂತಲೇ ಎನ್‌ಜಿಓಗಳು ಸಾಂಸ್ಕೃತಿಕ ಅಧ್ಯಯನಗಳನ್ನು ಸಾಮಾಜಿಕ ಗುಂಪುಗಳ ಬಗ್ಗೆ ಮಾಡಲು ಪ್ರೋತ್ಸಾಹಿಸುತ್ತವೆ ಎಂಬ ಗುಮಾನಿ ಈ ಹಿನ್ನೆಲೆಯಲ್ಲಿ ಹುಟ್ಟಿದೆ.

ಇ) ಇದೇ ಹೊತ್ತಲ್ಲಿ ಧಾರ್ಮಿಕ ಸಮುದಾಯಗಳನ್ನು ಕೃತಕವಾಗಿ ವಿಂಗಡಿಸುವ ಕೋಮುವಾದ ಕೂಡ ಭಾರತೀಯ ಸಂಸ್ಕೃತಿ, ಹಿಂದೂ ಸಂಸ್ಕೃತಿ, ಸಾಂಸ್ಕೃತಿಕ ರಾಷ್ಟ್ರೀಯತೆ ಮುಂತಾದ ಪರಿಭಾಷೆಯನ್ನು ತನ್ನ ರಾಜಕಾರಣಕ್ಕೆ ಬಳಸುತ್ತಿದೆ. ಹಿಗಾಗಿ ಜಾತಿ-ಮತ-ಧರ್ಮಗಳ ಪುನರುಜ್ಜೀವನವೂ ಈಗ ನಡೆಯುತ್ತಿದೆ. ಇದಕ್ಕೆ ಸಾಂಸ್ಕೃತಿಕ ಅಧ್ಯಯನಗಳು ಒಂದು ಬಗೆಯಲ್ಲಿ ನೀರು ಗೊಬ್ಬರ ಹಾಕುವ ಕೆಲಸ ಮಾಡಬಹುದು. ಇಂತಹ ರಾಜಕೀಯ ಬೆಳವಣಿಗೆ ಗಳಿಂದ ಸಾಂಸ್ಕೃತಿಕ ಅಧ್ಯಯನಗಳೇ ತಮ್ಮ ದೃಷ್ಟಿಕೋನಗಳನ್ನು ಪಡೆಯಲೂ ಬಹುದು.

ಈ) ಭಾರತದಲ್ಲಿ ಕೆಲವು ಬುಡಕಟ್ಟುಗಳನ್ನು ಬಿಟ್ಟರೆ, ಯಾವ ಸಮುದಾಯಕ್ಕೂ ಅದರ ಸಾಂಸ್ಕೃತಿಕ ಲೋಕವು ಖಾಸಗಿ ಸಂಗತಿಯಲ್ಲ. ಅವು ಇತರೆ ಸಮುದಾಯಗಳ ಜತೆ ಸ್ನೇಹ, ಸಂಘರ್ಷ, ದ್ವೇಷ, ನಿರಾಕರಣೆ ಮುಂತಾದ ಸಂಕೀರ್ಣ ಸಂಬಂಧಗಳನ್ನಿಟ್ಟುಕೊಂಡೇ ಬದುಕಿವೆ. ಆದರೆ ಹೊಸ ಬೆಳವಣಿಗೆಗಳು ಒಂದು ಸಮುದಾಯವೂ ಇನ್ನೊಂದರ ಆಚರಣೆಗಳ ಜತೆ ಭಾಗವಹಿಸುವ ಬೆರೆಯುವ, ಬೆರೆತು ತನ್ನ ವಿಶಿಷ್ಟತೆ ಸೇರಿಸುತ್ತ ಕೊಡುಕೊಳೆ ನಡೆಸುವ, ಅದರ ದೋಷಗಳನ್ನು ವಿಮರ್ಶಿಸುವ ಆರೋಗ್ಯಕರ ಸಾಧ್ಯತೆಗಳೇ ಅನಗತ್ಯ ಅನಿಸಿಬಿಡುವ ಸಾಧ್ಯತೆಯಿದೆ.

ಸಂಸ್ಕೃತಿ ಪರಿಭಾಷೆಯನ್ನು ಜಾತಿ ಮತ ಭಾಷೆ ಧರ್ಮಗಳ ಹೆಸರಲ್ಲಿ ಜನರನ್ನು ಒಡೆಯುವ ಬದಲು ಬೆಸೆಯುವ ಕೆಲಸ ಮಾಡುವಂತೆ ರೂಪಾಂತರಿಸಲು ಸಾಧ್ಯವಿಲ್ಲವೇ? ಈ ಪ್ರಶ್ನೆಗೆ ಉತ್ತರ ಯಾವ ಸಂಸ್ಕೃತಿ ವ್ಯಾಖ್ಯೆ ಸಮಾಜದಲ್ಲಿ ಹೆಚ್ಚು ಮಾನ್ಯತೆ ಪಡೆಯುತ್ತದೆ, ಅದರ ಸೈದ್ಧಾಂತಿಕತೆ ಯಾವುದು, ಸಾಂಸ್ಕೃತಿಕ ವಿಶಿಷ್ಟತೆಗಳನ್ನು ಮನ್ನಿಸುವ ಜತೆಯಲ್ಲಿಯೇ ಆರ್ಥಿಕ ರಾಜಕೀಯ ಸಾಮಾಜಿಕ ಸಂಗತಿಗಳಿಗೆ ಜನ ಒಂದುಗೂಡುವಂತೆ ಹೇಗೆ ಎಚ್ಚರದಿಂದ ವ್ಯಾಖ್ಯಾನಿಸಿಕೊಳ್ಳುತ್ತೇವೆ, ಯಾವ ತಾತ್ವಿಕ ತಳಹದಿಯಲ್ಲಿ ಸಾಂಸ್ಕೃತಿಕ ಅಧ್ಯಯನ ಕೈಗೊಳ್ಳುತ್ತೇವೆ ಎನ್ನುವುದರ ಮೇಲೆ ನಿಂತಿದೆ. ಸಂಸ್ಕೃತಿಯು ಒಂದು ಸಮುದಾಯದ ಜೀವನ ವಿಧಾನದ ವಿಶಿಷ್ಟತೆಗೆ ಸಂಬಂಧಿಸಿದ್ದು ಎಂಬ ಗ್ರಹಿಕೆಯು, ತಾತ್ವಿಕವಾಗಿ ಪ್ರಜಾಪ್ರಭುತ್ವದ ಸ್ವರೂಪದ್ದು. ಇದನ್ನು ಒಪ್ಪಿಕೊಂಡು, ನಮ್ಮ ಸಮಾಜ, ರಾಜಕಾರಣ, ಧರ್ಮ, ಆರ್ಥಿಕ ವ್ಯವಸ್ಥೆ – ಇವನ್ನೆಲ್ಲ ಅಧ್ಯಯನ ಮಾಡುವುದರಿಂದ ಭಾರತದ ಡೆಮಾಕ್ರಸಿಯೂ ಭದ್ರಗೊಳ್ಳಬಹುದು. ಆಗ, ಸಂಸ್ಕೃತಿಯ ವ್ಯಾಖ್ಯೆಯು ಪ್ರತಿ ಸಮುದಾಯದ – ಅದರ ರಾಜಕೀಯ ಆರ್ಥಿಕ ಬಲಾಬಲಗಳೇನೇ ಇರಲಿ – ಜೀವನ ವಿಧಾನಗಳಿಗೆ ತಾತ್ವಿಕವಾಗಿ ಸಮಾನ ಮಾನ್ಯತೆ ಕೊಡುತ್ತದೆ. ತತ್ವದ ಮಟ್ಟದಲ್ಲಿ ಉಚ್ಚವರ್ಗಗಳು ಅದನ್ನು ತಮ್ಮದಕ್ಕಿಂತ ‘ಬೇರೆ’ ಎನ್ನಬಹುದೇ ಹೊರತು. ‘ಕೀಳು’ ಎನ್ನುವಂತಿಲ್ಲ. ಇದರಿಂದ ಯಾವ ಸಮುದಾಯವೂ ತನ್ನ ಜೀವನವಿಧಾನದ ಬಗ್ಗೆ ಕೀಳರಿಮೆ ಪಡುವಂತಿಲ್ಲ. ಈ ಅರ್ಥದಲ್ಲಿ ಸಂಸ್ಕೃತಿ ವ್ಯಾಖ್ಯೆ ಹಾಗೂ ಸಾಂಸ್ಕೃತಿಕ ಅಧ್ಯಯನಗಳು ಪ್ರಜಾಪ್ರಭುತ್ವವಾದಿ ಸಮಾನತೆಯಲ್ಲಿ ನಡೆಯುತ್ತವೆ. ಇದೇ ತತ್ವವನ್ನು ಮುಂದುವರೆಸಿ, ಸಮುದಾಯಗಳು ಅಧಿಕಾರಸ್ಥರು ಮಾಡುವ ತಾರತಮ್ಯವನ್ನು ವಿರೋಧಿಸುವ ಹೋರಾಟ ಕಟ್ಟಿಕೊಳ್ಳುವುದೂ ಸಾಧ್ಯವಿದೆ. ಇದರಿಂದ ಸಾಂಸ್ಕೃತಿಕ ಅಧ್ಯಯನಗಳಿಗೆ ಸಮಾಜವಾದಿ ಪ್ರತಿರೋಧವನ್ನು ತುಂಬುವ ಚಾರಿತ್ರಿಕ ಜವಾಬ್ದಾರಿಯ ಪಾತ್ರ ವಹಿಸಬಹುದು. ಯಾವುದೋ ಒಂದು ವರ್ಗದ ಸಂಸ್ಕೃತಿಯ ಇಡೀ ದೇಶದ ಸಂಸ್ಕೃತಿಯಲ್ಲ, ಎಲ್ಲ ಸಂಸ್ಕೃತಿಗಳಿಗೂ ದೇಶದ ರಾಜಕಾರಣದಲ್ಲಿ ಸಮಾನ ಹಕ್ಕಿದೆ, ಅವೆಲ್ಲವೂ ಸೇರಿಯೇ ಆ ದೇಶದ ರಾಷ್ಟ್ರೀಯ ಸಂಸ್ಕೃತಿ – ಎಂಬ ಸಾಂಸ್ಕೃತಿಕ ಬಹುತ್ವವಾದವು, ಬಹುಧಾರ್ಮಿಕ ಬಹುಭಾಷಿಕ ದೇಶದಲ್ಲಿ ಈ ಬಗೆಯಲ್ಲಿ ಡೆಮಾಕ್ರಟಿಕ್ ಸಹನೆಯನ್ನು ಬೆಳೆಸಲು ಕಾರಣವಾಗಬಹುದು.

ಹೀಗಾಗಿ ಜಾಗತೀಕರಣವು ಈಗ ಹುಟ್ಟಿಸಿರುವ ಆತಂಕ, ಗೊಂದಲಗಳು ಅಂತಿಮವಾಗಿ ನಮ್ಮ ಸಮಾಜ ಹಾಗೂ ಆರ್ಥಿಕತೆಯ ರಾಜಕಾರಣದಲ್ಲಿ ಬಲಿಷ್ಠ ರಾಷ್ಟ್ರಗಳು ಮಾಡುತ್ತಿರುವ ನಿಯಂತ್ರಣವನ್ನು ಅರಿಯುವ ಎಚ್ಚರವನ್ನು ಸಾಂಸ್ಕೃತಿಕ ಅಧ್ಯಯನಗಳು ಮೂಡಿಸಬಹುದು ಅಥವಾ ಕಳೆದುಹಾಕಲೂಬಹುದು. ‘ಸಾಂಸ್ಕೃತಿಕ’ ಎಂಬುದು ಮೇಲೆ ವಿವರಿಸಿದ ಅಪಾಯಕ್ಕೆ ಆಹ್ವಾನ ನೀಡುವ ಅಧ್ಯಯನಗಳಿಗೆ ಕಾರಣವಾಗಿದೆ. ಹಾಗೆಯೇ, ದೇಶದ ಜನಸಮುದಾಯಗಳ ಸಂಪತ್ತು, ಸಂಸ್ಕೃತಿ, ಸ್ವಾಭಿಮಾನಗಳನ್ನು ರಕ್ಷಿಸುವ ಹೋರಾಟಗಳಿಗೆ ಬೇಕಾದ ಅಧ್ಯಯನಗಳನ್ನು ಮಾಡಲು ಕೂಡ ಪ್ರೇರಣೆ ನೀಡಿದೆ.

ಇಷ್ಟಕ್ಕೂ ಭವಿಷ್ಯ ನುಡಿಯುವುದು ಸುಲಭವಲ್ಲ. ಸಮಾಜವು ಯಾವ ಬಗೆಯ ಬದಲಾವಣೆಯ ಹಾದಿಯನ್ನು ಹಿಡಯತ್ತದೆ, ಅದನ್ನು ಬದಲಿಸುವ ಶಕ್ತಿಗಳನ್ನು ಅಧ್ಯಯನಕಾರರು ಎಷ್ಟು ಸೂಕ್ಷ್ಮತೆಯಲ್ಲಿ ಗ್ರಹಿಸುತ್ತಾರೆ, ಯಾವ ತುರ್ತಿನಲ್ಲಿ ಪ್ರತಿಕ್ರಿಯಿಸುತ್ತಾರೆ, ಇದಕ್ಕೆ ಸಮಾಜವನ್ನು ಬದಲಿಸುವ ಶಕ್ತಿಗಳು ಹೇಗೆ ಪ್ರತಿಪಟ್ಟು ಹಾಕುತ್ತವೆ, ಜಾಗತಿಕ ವಿದ್ಯಮಾನಗಳು ಹೇಗೆ ಜರುಗುತ್ತವೆ, ಜನಸಮುದಾಯಗಳು ಯಾವ ರೀತಿ ಇವನ್ನು ಮುಖಾಮುಖಿ ಮಾಡುತ್ತವೆ – ಮುಂತಾದ ಪ್ರಶ್ನೆಗಳ ಜತೆಗೆ, ಸಾಂಸ್ಕೃತಿಕ ಅಧ್ಯಯನಗಳ ಭವಿಷ್ಯವೂ ವರ್ತಮಾನವೂ ನಿರ್ಧಾರವಾಗುತ್ತದೆ. ಇವೆಲ್ಲವನ್ನೂ ಹೊರತುಪಡಿಸಿ, ಸಾಂಸ್ಕೃತಿಕ ಅಧ್ಯಯನಗಳಿಗೆ ಸ್ವಾಯತ್ತವಾದ ಅಸ್ತಿತ್ವವೆಂಬುದಿಲ್ಲ. ಅಂತಹ ಅಸ್ತಿತ್ವವನ್ನು ಅವು ಒಳಗೊಳ್ಳಬೇಕಾದರೆ, ವರ್ತಮಾನದ ನಿಷ್ಠುರವಾದ ತಿಳಿವಳಿಕೆಯ ಮೇಲೆ ಭವಿಷ್ಯದ ಕನಸನ್ನು ಕಟ್ಟುವ ಹೊಸ ದರ್ಶನಗಳನ್ನು ನಿರಂತರವಾಗಿ ಪಡೆದುಕೊಳ್ಳಬೇಕಾಗುತ್ತದೆ. ಇದು ತತ್ವಶಾಸ್ತ್ರೀಯ ಯತ್ನ ಮಾತ್ರವಲ್ಲ, ರಾಜಕೀಯ ಕ್ರಿಯಾಶೀಲತೆಯ ಯತ್ನ ಕೂಡ.

ವಾಗ್ವಾದದ ಹಂಬಲ

ಕನ್ನಡದಲ್ಲಿ ಎರಡು ಬಗೆಯ ಪರಿಕಲ್ಪನಾತ್ಮಕ ಗೊಂದಲವಿದೆ. ಮೊದಲನೆಯದು, ಸಂಸ್ಕೃತಿ ಕುರಿತದ್ದು. ಎರಡನೆಯದು, ಸಂಸ್ಕೃತಿಯ ಮೇಲೆ ಹಲವು ತೆರನಾದ ಪರಿಣಾಮ ಬೀರುವ ಚಾರಿತ್ರಿಕ ಸಂಗತಿಗಳನ್ನು ಕುರಿತದ್ದು. ಉದಾ: ಜಾಗತೀಕರಣವನ್ನು ಕುರಿತು ಇರುವ ಗೊಂದಲವನ್ನೇ ನೋಡೋಣ. ‘ಜಾಗತೀಕರಣದಿಂದ ಸಂಸ್ಕೃತಿ ನಾಶವಾಗುತ್ತದೆ’; ‘ನಮ್ಮ ದೇಶಿ ಸಂಸ್ಕೃತಿಯ ಮೂಲಕ ಅದನ್ನು ಪ್ರತಿರೋಧಿಸಬಹುದು’; ‘ಜಾಗತೀಕರಣವು ಮೂಲತಃ ಆರ್ಥಿಕ ರಾಜಕೀಯ ವಿದ್ಯಮಾನವಾಗಿರುವ ಕಾರಣ, ಸಂಸ್ಕೃತಿ ನಾಶ ಎನ್ನುವುದು ಮುಖ್ಯ ಸಂಗತಿಯಲ್ಲ’ – ಇಂತಹ ಅಭಿಪ್ರಾಯಗಳೆಲ್ಲ ವ್ಯಕ್ತಿವಾಗಿವೆ. ಹೊಸದೊಂದು ವಿದ್ಯಮಾನ ಘಟಿಸಿದಾಗ, ಯಾವುದೇ ಸಮಾಜದ ವಿಭಿನ್ನ ವರ್ಗಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ. ಮೊದಲ ಹಂತದಲ್ಲಿ ಈ ಬಗೆಯ ಗೊಂದಲ ಇರುವುದು ಸಹಜ. ಆದರೆ ಈ ಗೊಂದಲ ಮುಂದುವರೆಯುತ್ತದೆಯೊ ಗಂಭೀರವಾದ ಸೈದ್ಧಾಂತಿಕ ವಾಗ್ವಾದವಾಗಿ ಮಾರ್ಪಡುತ್ತದೆಯೆ? ವಾಗ್ವಾದದ ತುದಿಯಲ್ಲಿ ಹೊಸ ಅರಿವಿನ ಉದಯವಾಗುತ್ತದೆಯೆ? ಈ ಅರಿವು ಕ್ರಿಯೆಗೆ ತೊಡಗಿಸುತ್ತದೆಯೆ? – ಇವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು. ಸಾಂಸ್ಕೃತಿಕ ಅಧ್ಯಯನಗಳ ಒಳಗೆ ತಾತ್ವಿಕ ವಾಗ್ವಾದಗಳು ಕನ್ನಡದಲ್ಲಿ ತೀವ್ರವಾಗಿ ನಡೆಯಬೇಕಿದೆ. ಈ ವಾಗ್ವಾದಗಳು ಪರಿಕಲ್ಪನಾತ್ಮಕ ಗೊಂದಲವನ್ನು ದಾಟಲು ಮಾತ್ರವಲ್ಲ, ನಮ್ಮ ಸಮಾಜ, ಸಾಹಿತ್ಯ, ರಾಜಕಾರಣ, ಚರಿತ್ರೆಗಳನ್ನು ನೋಡಲು ಸ್ಪಷ್ಟತೆಯನ್ನು ಒದಗಿಸಲೂ ಅಗತ್ಯವಾಗಿವೆ. ಅಂತಹ ವಾಗ್ವಾದದ ಬಿರುಗಾಳಿ ಕನ್ನಡದ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಸದ್ಯ ಬೀಸಬೇಕಿದೆ.

* * *