ರಾಮಾಯಣ ಮಹಾಕಾವ್ಯ ರಚಿಸಿದ ವಾಲ್ಮೀಕಿಯನ್ನು ಮರೆಯುವಹಾಗಿಲ್ಲ. ಈ ಮಹಾತಪಸ್ವಿಯನ್ನೇ ಮೂಲವಾಗಿಟ್ಟುಕೊಂಡು ಧೈರ್ಯ ಸಾಹಸದ ಶ್ರಮ ಸಂಸ್ಕೃತಿಯ ಸಮುದಾಯವಂದು ಆಗ ಬೆಳೆದುಬಂದಿತು. ಹೀಗೆ ಬೆಳೆದುಬಂದ ಸಮುದಾಯವೇ ಬಡ, ನಾಯಕ ಸಮುದಾಯ. ತನ್ನದೆಯಾದ ಪರಂಪರೆ ಹಾಗೂ ಸಂಸ್ಕೃತಿಯೊಂದಿಗೆ ಇಂದಿಗೂ ಈ ಸಮುದಾಯ ಬದುಕಿನ ಎಲ್ಲ ಸ್ಥರದಲ್ಲೂ ಬೆಳೆದು ನಿಂತಿದೆ. ಅನ್ಯ ಸಮುದಾಯ ಗಳೊಂದಿಗೆ ಅನನ್ಯತೆಯಿಂದ ಈ ಜಲನೆಲದ ಜಗದಲ್ಲಿ ಗಟ್ಟಿಹೆಜ್ಜೆಯೂರಿ ಅನೇಕ ಬಗೆಯ ಸಾಧನೆಗೈದಿದೆ. ಈ ಸಮುದಾಯವು ಮೂಲತಃ ಬೇಟೆಯಾಡುವ ವೃತ್ತಿಯಿಂದ ವಿಕಾಸ ಗೊಂಡು ಕ್ರಮೇಣ ಪಶುಪಾಲನೆ ಕೃಷಿ, ರಾಜಕೀಯ ಹೀಗೆ ತನ್ನದೆಯಾದ ಶಕ್ತಿ ಸಾಮರ್ಥ್ಯ ವನ್ನು ತೋರುತ್ತ ಸಾಗಿದೆ. ತನ್ನ ನಂಬಿಕೆ ಆಚರಣೆಗಳ ಮೂಲಕ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ. ಇಂತಹ ಪರಿಶ್ರಮದ ಸಮುದಾಯದಲ್ಲಿ ಗುರುಭಕ್ತಿಗೆ ತನ್ನನ್ನೇ ಅರ್ಪಿಸಿಕೊಂಡ ಏಕಲವ್ಯ, ಕಣ್ಣನ್ನೇ ದಾನಮಾಡಿದ ಕಣ್ಣಪ್ಪ, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಹಲಗಲಿಯ ಬೇಡರು, ಮುಧೋಳದ ಜಡಗಾಬಾಲಾ ಎಚ್ಚಮನಾಯಕ, ಮದಕರಿಯನಾಯಕ ಮುಂತಾದ ವೀರಪುರುಷರಿಗೆ ಜನ್ಮನೀಡಿದ್ದು ಈ ಸಮುದಾಯ. ಇವರಂತೆ ದೀನದಲಿತರಿಗಾಗಿ, ಶೋಷಿತರ ಏಳ್ಗೆಗಾಗಿ ತನ್ನ ಸಂಸಾರಸುಖ ತ್ಯಾಗ ಮಾಡಿದ ಬ್ರಿಟೀಷರ ವಿರುದ್ಧ ಹೊೀರಾಡಿದ ಧೈರ್ಯಶಾಲಿ, ಸಾಹಸಿ ಪುರುಷನೇ ವೀರ ಸಿಂದೂರ ಲಕ್ಷ್ಮಣ. ಬಡತನದಲ್ಲಿ ಬೆವರು ಸುರಿಸಿ ಸಾಮಾಜಿಕ ಶೋಷಣೆಗೆ ಒಳಪಡುವವರ ರಕ್ಷಕ. ಆರ್ಥಿಕವಾಗಿ ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ಪ್ರಯತ್ನಿಸಿದ ಲಕ್ಷ್ಮಣನ ಬದುಕಿನ ಕಥೆ ರೋಮಾಂಚನಕಾರಿ ಯಾದುದು. ಬ್ರಿಟೀಷರ ವಿರುದ್ಧ ಬಂಡಾಯಗಾರನಾಗಿ ತಂಡವೊಂದನ್ನು ಕಟ್ಟಿಕೊಂಡು ಗುಡ್ಡಬೆಟ್ಟಗಳಲ್ಲೆಲ್ಲ ಅಲೆದು ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಿದ ಲಕ್ಷ್ಮಣನ ಸಾಹಸಗಾಥೆ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದೆ. ಈ ವೀರಪುರುಷನ ಧೈರ್ಯ ಸಾಹಸಗಳನ್ನು ಅನೇಕರು ಅನೇಕ ರೀತಿಯಲ್ಲಿ ಚಿತ್ರಿಸಿದ ಚಿತ್ರಣ ಇಲ್ಲಿದೆ.

ಸಿಂಧೂರಿನ ಈ ಯುವಕ ಬಡತನ ಬೆಂಕಿಯಲ್ಲಿ ಅರಳಿದವ, ಶ್ರೀಮಂತಿಕೆಯನ್ನು ತನ್ನ ಜೀವನದಗುರಿಯಾಗಿಸಿಕೊಂಡ ಪರಿಶ್ರಮಿ. ತಂದೆ ಸಾಬಣ್ಣನ ನಂತರ ಸಿಂಧೂರಿನ ವಾಲಿಕಾರಿಕೆ ಯನ್ನು ಸಮರ್ಥವಾಗಿ ನಿರ್ವಹಿಸಿದ ಬಲಶಾಲಿಯುವಕ. ಬೆನ್ನಿಗೆ ಬಿದ್ದವರನ್ನು ಬದುಕಿಸಿದವ. ಬಡವರ ಬಂಧುವಾಗಿ ಅವರ ಕಷ್ಟಗಳಿಗೆ ಬದುಕಿನ ಉಸಿರನ್ನು ನೀಡಿದ ಮಾನವತೆಯ ಶ್ರೀಮಂತನೆಂದು ಈತನ ಧೈರ್ಯಸಾಹಸವನ್ನು ಜನರು ಹಾಡಿ ಹೊಗಳಿದ್ದಾರೆ.

“ಗಂಡಸಿದ್ದರೆ ಇರಬೇಕು ಎಂಥಾವಾ
ನಮ್ಮ ಸಿಂಧೂರ ಲಕ್ಷ್ಮಣನಂಥಾವ
ಮಲ್ಲಿನ ಅಂಗಿ ಮೈಮ್ಯಾಲ
ಚಾಕ್ರಿಕೋಲು ಕೈಯಾಗ
ಶಮನಬಿಟ್ಟು ಪಟಗಾ ಸುತ್ತಿ
ಚಾವಡಿಗೆ ಹೊಂಟಾನ”

ಎನ್ನುವ ಈ ಜನಪದ ಹಾಡಿನಲ್ಲಿ ಲಕ್ಷ್ಮಣನ ಧೈರ್ಯ, ಮನೋಸ್ಥೈರ್ಯ, ಆತನ ಮೈಕಟ್ಟು, ದೇಹ ದಾರ್ಢ್ಯತೆ, ಆತನ ಗಂಭೀರತೆಯ ಚಿತ್ರಚಿತ್ರಿತವಾಗಿದೆ. ಹೀಗೆ ಲಕ್ಷ್ಮಣನೊಬ್ಬ ಅಜಾನುಬಾಹು ವ್ಯಕ್ತಿ. ಹದಿನಾರು ಗುಂಡಿಗಳಿರುವ ಶಕ್ತಿಯು ಆತನಿಗಿತ್ತೆಂದರೆ ಅವನೆಂಥ ಶಕ್ತಿಯ ಶರೀರವೆಂಬುದು ತಿಳಿಯುತ್ತದೆ.

ತಮ್ಮೂರಿನ ಶೆಟ್ಟರ ಮಗಳ ಮದುವೆಗೆ ತುಂಗಳಕ್ಕೆ ಬಂದಾಗ ಮದುವೆ ಊಟದ ಸಮಯದಲ್ಲಿ ಪರಪಂತಿ ಮಾಡಿ ದೂರಕೂಡಿಸಿ ಊಟ ಹಾಕಿದಾಗ ಲಕ್ಷ್ಮಣನ ಹದಿಹರೆಯದ ಮನಸ್ಸಿಗೆ ಎಷ್ಟು ನೋವಾಗಬೇಡ? ಆಗಲೇ ಆತ “ನಮ್ಮದು ಮನುಷ್ಯಜಾತಿ, ನಾಯಿಗಿಂತ ಕೀಳಲ್ಲವೆಂದು” ಊಟಮಾಡದೆ ಹೊರನಡೆದ. ಆ ಕ್ಷಣದಲ್ಲೆ ಜಾತಿವ್ಯವಸ್ಥೆಯ ವಿರುದ್ಧ ಪ್ರತಿಭಟಿಸುವ ಧೈರ್ಯ ಆಗಲೇ ಬೇರೂರಿದ್ದು ಮುಂದೆ ಅದು ಅಂಕುರಿಸುತ್ತ ತಾರತಮ್ಯತೆಯ ವಿರುದ್ಧ ಸೆಡ್ಡು ಹೊಡೆಯಲಾರಂಭಿಸಿದ. ಹೀಗೆ ನಿಧಾನವಾಗಿ ಲಕ್ಷ್ಮಣ ಈ ವ್ಯವಸ್ಥೆಯ ವಿರುದ್ಧ ಹೋರಾಡಲು ಸಿದ್ಧವಾದ ಕೆಲವು ಪ್ರಸಂಗಗಳನ್ನು ಸಿಂಧೂರ ಲಕ್ಷ್ಮಣನನ್ನು ಕುರಿತು ನಾಗರಾಳದ ಕಂಠಿ ಹನುಮಂತರಾಯ ಬರೆದ ನಾಟಕಗಳಿಂದ ಕೆಲವು ಸಂಭಾಷಣೆಗಳನ್ನು ಇಲ್ಲಿ ಆಯ್ದುಕೊಳ್ಳಲಾಗಿದೆ.

ಭೀಕರ ಬರಗಾಲ, ದನಕರುಗಳಿಗೂ ಆಹಾರ ಇಲ್ಲವಾಯ್ತು, ಅಳಿಯ ಸರಸು, ಸಾಬು, ಗೋಪಾಲಿ, ಹೊಟ್ಟೆಹಿಟ್ಟಿಗಾಗಿ ದರೋಡೆ ಮಾಡಿ ಪೊಲೀಸರಿಂದ ತಪ್ಪಿಸಿಕೊಂಡು ಆಸರೆಗಾಗಿ ಲಕ್ಷ್ಮಣನ ಮನೆಗೆ ಬಂದರು. ಆಗ ಲಕ್ಷ್ಮಣನ ಹೆಂಡತಿ ಚಂದ್ರಿಗೆ ಈ ರೀತಿ ಹೇಳುತ್ತಾನೆ. “ಮನಿ ದೀಪ ಅಂತ ಮುದ್ದುಕೊಡಬಾರದು, ಇಂಥವರನ್ನು ಒದ್ದು ಸರಕಾರಕ್ಕೆ ಒಪ್ಪಿಸಬೇಕು” ಎನ್ನುವ ಮಾತಿನಲ್ಲಿ ನಿಷ್ಠೆ, ಪ್ರಾಮಾಣಿಕತನ, ಲಕ್ಷ್ಮಣನ ಸಾಚಾತನ ವ್ಯಕ್ತವಾಗುತ್ತದೆ.  “ಉಣ್ಣಾಕ ಸಿಗದವು ಉಪವಾಸ ಸಾಯಬೇಕು, ಅದು ಮನುಷ್ಯಧರ್ಮ, ಹಸದೀನಿ ಅಂತ ಹೋಗಿ ಇನ್ನೊಬ್ಬರ ಅನ್ನ ಕಸಕೊಂಡ ಉಣ್ಣೋದು ಮಹಾಪಾಪ” ಎನ್ನುವ ಲಕ್ಷ್ಮಣನ ಮಾತಿಗೆ ಹೆಂಡತಿ ಚಂದ್ರಿ “ಸುಖಾ ಉಂಡು ಸೊಕ್ಕ್ಯಾದಲ್ಲಿ ಶ್ರೀಮಂತರು ಬಂದಿರೋ ಬರಗಾಲ ದಾಗ ಬಿಕ್ಕಿ ಬಿಕ್ಕಿ ಬಾಯಿಬಿಡೋ ಬಡುವ್ರ ಹೊಟ್ಟೀಗೆ ತುತ್ತು ಅನ್ನ ಹಾಕಿದ್ರ ಅವ್ರ ಶ್ರೀಮಂತಕೇನ ಸವೆದುಹೋಗುತ್ತಿತ್ತೆ. ಬಡವ್ರ ಮ್ಯಾಲ ದಯಾಮಯ ಇಲ್ಲದ ಶ್ರೀಮಂತರ ಮನಿಯಾಕ ದರೋಡೆ ಮಾಡಬಾರ‌್ದು? ಎಂದಾಗ ಲಕ್ಷ್ಮಣನ ಎದೆ ಝಲ್ ಎನ್ನದಿರಲಿಲ್ಲ ಆಗಲೇ ಅಸಮಾನತೆವಿರುದ್ಧ ಹೋರಾಡಬೇಕೆಂಬ  ಬೆಳಕು ಮಿಂಚಿಹೋಯ್ತು. ಆಗ ಲಕ್ಷ್ಮಣ “ಪರೋಪಕಾರದ ಕೆಲಸಕ್ಕೆ ಲೈಸೆನ್ಸ್ ಯಾಕ ಬೇಕ್ರಿ ಧರ್ಮದಿಂದ ನಡೀತೀನಿ ಅನ್ನವ್ಗ ದೇವರ ಅಂಜಕೀನೂ ಇಲ್ಲವೆನ್ನುತ್ತ”, “ಧೈರ್ಯಂ ಸರ್ವತ್ರ ಸಾಧನಂ” ಮಂತ್ರಕ್ಕೆ ಶರಣಾದ. ಆಗಿಂ ದಲೇ ಮನೆಮಠಬಿಟ್ಟು ಈ ವ್ಯವಸ್ಥೆಯ ವಿರುದ್ಧ ಹೋರಾಡಲು ತಂಡವೊಂದನ್ನು ಕಟ್ಟಿ ಕೊಂಡು ಸೊಂಟಕಟ್ಟಿದ.

ಹೀಗೆ ಸಿಂಧೂರ ಲಕ್ಷ್ಮಣ ಸ್ವಂತಸುಖವನ್ನು ಲೆಕ್ಕಿಸದೆ ಸತ್ಯವನ್ನು ಕರ್ತವ್ಯವನ್ನು ಬಿಡದೆ ಎಂತಹ ಪ್ರಸಂಗಗಳಲ್ಲೂ ಅಂಜದೆ ಅಳುಕದೆ ಎಲ್ಲ ತರಹದ ಆಪತ್ತು ವಿಪತ್ತುಗಳನ್ನು ಸಹಿಸಿಕೊಳ್ಳಲು ಸಿದ್ಧನಾದ. ತಂದೆ ಅಡವಿಟ್ಟ ಬಂಗಾರದ ಸಾಮಾನು ಇಲ್ಲವೆಂದ ಶ್ರೀಮಂತನ ವಿರುದ್ಧ ಬಂಡೆದ್ದ.  ಈ ಧರ್ಮಯುದ್ಧದಲ್ಲಿ ಕಾಮ, ಕ್ರೋಧ, ಮದ, ಮತ್ಸರ, ಲೋಬ, ಮೋಹಗಳಲ್ಲೆವನ್ನು ದಾಟಿದ ಧೈರ್ಯವಂತ. ಈ ಆತ್ಮ ಸಂಯಮತೆಯಿಂದ ಬಲಿಷ್ಠನಾಗಿ ಪ್ರೀತಿಯ ಹೆಂಡತಿಯನ್ನು ಭಕ್ತಿಶಕ್ತಿಯಾದ ತಾಯಿ ನರಸಮ್ಮಳನ್ನು ಬಿಟ್ಟು ಹಗಲಿರುಳು ಅಡವಿ ಸೇರಿ ಅಲೆದಾಡುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕೆ ಧೈರ್ಯಬೇಕು, ಆತ್ಮಸ್ಥೈರ್ಯ ತಾಕತ್ತುಬೇಕು. ಸಿಂಧೂರ ಲಕ್ಷ್ಮಣ ಇವೆಲ್ಲವನ್ನು ಗೆದ್ದ ವೀರಶೂರನಾಗಿ ದ್ದಾನೆ.

ತನ್ನ ತಂದೆಯೊಂದಿಗೆ ಕಷ್ಟನಷ್ಟಗಳೆಲ್ಲವನ್ನು ಮೆಟ್ಟಿನಿಂತ ಹೊತ್ತಿಗೆ ಸರಿಯಾಗಿ ತುತ್ತಿನ ಚೀಲ ತುಂಬಿಸುವ ಚಿಂತೆ, ನೀರು, ಬಟ್ಟೆ, ಬರೆಯ ಬದುಕು ಎಷ್ಟು ಕಷ್ಟ? ಅದು ಅನುಭವಿಸು ವವರಿಗೇ ಗೊತ್ತು. ಆ ನೋವುನಲಿವುಗಳನ್ನು ತನ್ನ ವನವಾಸದ ಕಾಲದಲ್ಲಿ ಆತ್ಮಶಕ್ತಿಯನ್ನು ಕಳೆದುಕೊಳ್ಳದೆ ಹೋರಾಟದಲ್ಲಿ ತೊಡಗುವುದು ಬಲಿಷ್ಟ ಹೃದಯಕ್ಕೆ ಮಾತ್ರ ಸಾಧ್ಯ. ಅಂತೆಯೇ ಈತನನ್ನು ‘ಎಂಟೆದೆಯ ಬಂಟ’ ಎಂದು ಕರೆದಿರುವುದೂ ಉಂಟು. ‘ಶಾಂತತೆಯ ಕಾಲದಲ್ಲಿ ಎಲ್ಲರೂ ಧೈರ್ಯಶಾಲಿಗಳೇ, ಮೇಮೇಲೆ ಸಮಸ್ಯೆಗಳು ಕಠಿಣ ಪ್ರಸಂಗಗಳು ಬಂದೆರಗಿದಾಗ ತಮ್ಮ ಜೀವವನ್ನು, ಜೀವನವನ್ನು ಲೆಕ್ಕಿಸದೆ ಪರರಿಗೆ ಪರೋಪಕಾರ ಮಾಡುವ ವರ ಶಕ್ತಿಯೇ ಧೈರ್ಯ”. ಹೀಗೆ ಲಕ್ಷ್ಮಣ ಅನ್ಯಾಯ, ಅತ್ಯಾಚಾರ, ದಬ್ಬಾಳಿಕೆಯ ವಿುದ್ಧ ಗುಡುಗು ಸಿಡಿಲಿನಂತೆ ಆರ್ಭಟಿಸಿದ. ಹಾಡುಹಗಲೇ ಶ್ರೀಮಂತರ ಮನೆಗಳನ್ನು ಹೇಳಿಕೇಳಿ ಕೊಳ್ಳೆಹೊಡೆದ. ಕೊಳ್ಳೆಹೊಡೆದುದನ್ನು ತನಗಾಗಿ, ತನ್ನವರಿಗಾರಿಗೊ ಕೊಡಲಿಲ್ಲ. ಎದುರಿಗೆ ಬಂದವರಿಗೆಲ್ಲ ಹಂಚುತ್ತಾ ನಡೆದ. ಹಸಿದ ಹೊಟ್ಟೆಗೆ ತುತ್ತು ರೊಟ್ಟಿಕೊಟ್ಟವರಿಗೂ ಚಿನ್ನಾ ಭರಣಗಳನ್ನು ನೀಡಿ ನಡೆದ. ಹೀಗೆ ಜನಹಿತಕ್ಕಾಗಿ ದೃಢನಿಶ್ಚಯದಿಂದಲೂ ವಿವೇಕದಿಂದಲೂ ನಡೆದು ವೀರನೆನಿಸಿಕೊಂಡ. “ಛಳಿ ಹತ್ತಿದವರು ನಡುಗುತಿರಬೇಕು. ಆದ್ರ ಎದೀ ಗುಂಡಿಗ್ಯಾಗ ಬೆಂಕಿಕೆಂಡದಂತಾ ಬಿಸನೆತ್ತರಾ ತುಂಬಿಕೊಂಡಿರೋ ನಾ ಯಾಕ ನಡುಗಲಿ” ಎನ್ನೋ ಲಕ್ಷ್ಮಣನ ಮಾತಿನಲ್ಲಿ ಎಂತಹ ಗಂಡೆದೆಯ ಗುಂಡಿಗೆ ಇರಬೇಕು. “ಬ್ಯಾಡರ ಕುಲದ ಬಂಟ ಹುಲಿಕೂಡ ಗುದ್ಯಾಡ್ದ ಇಲಿಕೂಡ ಆಡಬೇಕನವಾ ಯವ್ವಾ! ನಿನ್ನ ಮಗ ಮಲದ ಬ್ಯಾಟಿ ಆಡೋನಲ್ಲ, ಹುಲಿಬ್ಯಾಟಿ ಆಡಿ ಹೆಸರಾಗೋ ಕಲಿ” ಎನ್ನುವಲ್ಲಿ ಆತನ ಧೈರ್ಯದ ತಾಕತ್ತಿನ ಆಳ ಊಹಿಸಲೂ ಕಷ್ಟಸಾಧ್ಯ. ಹೀಗೆ ತನ್ನ ಲೆಕ್ಕಿಸದೆ ಪರರ ಹಸಿವನ್ನು ಹಿಂಗಿಸಲು ಹೋರಾಡಿದ ಮಾನವತೆ ಸರದಾರ ಪಡೆದುದನ್ನು ಬಡಬಗ್ಗರಿಗೆ ಹಂಚುವ ವಿಶಾಲ ಹೃದಯ.

ಬ್ರಿಟೀಷ್ ಸರಕಾರದ ವಿರುದ್ಧ ಬಂಡಾಯ ಕಹಳೆಯನ್ನು ಊದಿದ ಶೂರ. ಶೋಷಿತರನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವ, ದುಡಿಸಿಕೊಳ್ಳುವ ಅವರನ್ನು ಕೀಳಾಗಿ ನಡೆಸಿಕೊಳ್ಳುವುದು ಯಾವ ಕಾನೂನಿನಲ್ಲಿಯೂ ಇಂದಿಗೂ ಎಂದಿಗೂ ಇಲ್ಲವೆಂಬುದನ್ನು ಮನಗಂಡ ಧೀಮಂತ. (೧೯೨೦ ರಿಂದ ೧೯೪೭ರ ದೇಶದ ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ಈತ ಕಾರ್ಯೋನ್ಮುಖ ನಾದ. ಈತನ ಸಾಮರ್ಥ್ಯ ಪರಿಸರಕ್ಕಿಂತಲೂ ಪರಿಸ್ಥಿತಿಯನ್ನೇ ಅವಲಂಬಿಸಿ ಇಮ್ಮಡಿ ಗೊಂಡಿತು. ನೈತಿಕ ಬಲ ಲಕ್ಷ್ಮಣನ ಕಾರ್ಯಕ್ಕೆ ಮತ್ತಷ್ಟು ಬೆಳಕು ನೀಡಿತು. ಅಂತೆಯೇ ಲಕ್ಷ್ಮಣ ಭಯಭೀತಿಯನ್ನು ಅಲ್ಲೆಗಳೆದು ಈ ಕಾರ್ಯದಲ್ಲಿ ನಿರತನಾದ. ಶೂರವೀರ ಎಂಬ ನಂಬಿಕೆಗೆ ಪಾತ್ರನಾದ).

ಕೌಲೆಟ್ ಕಾಯಿದೆ ಜಾರಿಗೆ ಬಂದಕಾಲ. ಭಾರತದ ಯುವಕರನ್ನು ಬಲಾತ್ಕಾರವಾಗಿ ಸೇನೆಗೆ ಸೇರಿಸಿಕೊಳ್ಳುವ ಸಮಯ ಈ ಕಾಯಿದೆಯನ್ವಯ ಭಾರತೀಯರನ್ನು ಸಕಾರಣವೂ ಇಲ್ಲದೆ ರಾಜದ್ರೋಹಿ ಎಂದು ಶಿಕ್ಷಿಸುವ ಕಾಲ. ಬರಗಾಲದಲ್ಲೂ ಕಂದಾಯವನ್ನು ಕೊಡಲೇ ಬೇಕು. ಅಂತಹ ಕಂದಾಯ ವಸೂಲಿ ಮಾಡುವ ವಾಲೀಕಾರ ಸಿಂಧೂರ ಲಕ್ಷ್ಮಣ. ಕಂದಾಯ ವಸೂಲಿ ಮಾಡುವ ಬದಲು ಸರಕಾರಕ್ಕೆ ಕಂದಾಯವನ್ನು ಯಾರೂ ಕೊಡಬಾರದೆಂದು ಬ್ರಿಟೀಷರ ವಿರುದ್ಧ ಮೊದಲ ಕಹಳೆಯನ್ನು ಊದಿದ ಮನೋಬಲದ ಛಲಗಾರ. ಅಂದಿನಿಂದ ವಾಲಿಕಾರಿಕೆಗೆ ಶರಣೆಂದು ಶ್ರಮದ ಬದುಕನ್ನು ಆರಿಸಿಕೊಂಡಾತ. ಬ್ರಿಟೀಷರ ಕಾಸಿಗೆ, ಉಂಬಳಿಗೆ ಬೆಲೆಗೊಡದೆ ಸಾರ್ವಜನಿಕ ವ್ಯಕ್ತಿಯಾಗಿ ಸಮಾಜದ ಮಗನಾಗಿ ಜನಮನ ಸೂರೆಗೊಂಡ.

“ಸಿಂಧೂರ ಲಕ್ಷ್ಮಣ ಹುಟ್ಟ್ಯಾನ ಬಂಟ ಅನಿಸ್ಯಾನ
ಕೊಟ್ಟ ವಚನವ ಮೆಟ್ಟಿದ ಮ್ಯಾಲ ಎಂದೂ ತಪ್ಪಲಿಲ್ಲ
ಫಟಾ ದೋಗೋತನಕ ಹಿಡ್ದ ಹಟಾ ಬಿಡಲಿಲ್ಲ”

ಎನ್ನುವಲ್ಲಿ ಎದೆಗಾರಿಕೆ, ಛಲಗಾರಿಕೆಯನ್ನು ನೋಡಬಹುದು.

ಕ್ಯಾತನಹಳ್ಳಿಯ ರಾಮಣ್ಣ ಅವರು ಸಂಪಾದಿಸಿರುವ ವಿಜಾಪುರ ಜಿಲ್ಲೆಯ ಲಾವಣಿಗಳು, ೧೯೭೯ ಗ್ರಂಥದ “ಸಿಂಧೂರಾಗ ಹುಟ್ಟ್ಯಾನ ಲಚ್ಮ್ಯಾ” ಲಾವಣಿಯಲ್ಲಿ ಲಕ್ಷ್ಮಣ್ಣನ ಧೈರ್ಯ ಸಾಹಸದ ಗೀತೆ ತುಣುಕುಗಳ ಚಿತ್ರಣ ಇಲ್ಲಿದೆ. ಸಿಂಧೂರಿಗೆ ಬಂದ ಫೌಜುದಾರ ಲಕ್ಷ್ಮಣನನ್ನು ಹಿಡಿದು ಬೇಡಿಹಾಕಲು ಹೋದಾಗ.

ಲಕ್ಷ್ಮಣ ಹೇಳತಾನ
ಬಾಳ ಹುಷಾರಲಿಂದ ಬಾ ಎದ್ದು
ಏನು ಆಗೂದು ಆಗಲಿ ಎಂದ
ಇಷ್ಟ ಹೇಳಿ ಕಟ್ಟಿ ಜಿಗಿದಾನು
ಹಂಗೆ ನಡೆದಾನು ಊರಬಿಟ್ಟ ಊರು

ಎನ್ನುವುದು ಸರಳ ಸಹಜ ಮಾತಲ್ಲ ಎಂಬುದನ್ನು ಎದುರಿಸ್ತೆನೆನ್ನುವ ಧೈರ್ಯವಿದ್ದವನಿಗೆ ಮಾತ್ರ ಈ ಮಾತುಗಳನ್ನಾಡುವ ತಾಕತ್ತು ಬರಲು ಸಾಧ್ಯ.

ಜತ್ತ ಜೇಲಿನ ತುರಂಗ ಮುರದ ಹೊರಗೆ ಬಂದಮ್ಯಾಲ ತಪ್ಪಿಸಿಕೊಳ್ಳುವ ಸನ್ನಿವೇಶದಲ್ಲಿ

“ಸಾರಿ  ಹೊಂಟಾರ ನಡುವೆ ಪ್ಯಾಟ್ಯಾಗ
ಗಂಡಸಿದ್ದವ ಮಗ ಹಿಡಿಯಬೇಕು”
ಇನಸ್ಪೆಕ್ಟರ್ ಹತ್ತೆಂಟು ಮಂದಿ ಸ್ಟಾಪ್
ಹತ್ತಿದರ ಬೆನ್ನ ಗುಡ್ಡದ ಒಳಗ
ಅವರ ಮಾರಿ ತಪ್ಪಿಸಿ ಹೋಗಿ
ಕುಂತ್ರು ಗುಡ್ಡದ ಮರ್ಯಾಗ”

ಇಲ್ಲಿ ಸಿಂಧೂರ ಲಕ್ಷ್ಮಣನ ಮನೋಸ್ಥೈರ್ಯದ ಧೈರ್ಯವನ್ನು ಎಷ್ಟು ಬಣ್ಣಿಸಿದರೂ ಕಡಿಮೆಯೇ ಸರಿ.

“ಅವ್ರ ಮ್ಯಾಲಿಂದ ಕುದರಿ ಹೊಡದಾರ
ಎದ್ದು ನಿಂತ ಗಾಬ ಆಗ್ಯಾರ, ಚಿಗರಿ ಬೆದರಿದಂಗ
ಸರದು ನಿಂತು ತಗೊಂಡ್ರು ಕೈಗೆ ಮನಸ್ಯಾಗೊಂದಕಲ್ಲ
ಕುದರೀಗಿ ವಗದಾರ ಕಲ್ಲ, ವಗದು ಮುರದಾರಕಾಲ
ಜೀವಕ ಹೆದರಲಿಲ್ಲ ಹ್ವಾದ್ರು ಸಾಗಲ್ದಾಂಗ”

ಹೀಗೆ ತಮ್ಮ ಜೀವದ ಹಂಗು ಇಲ್ಲದೆ ಎದುರು ನಿಲ್ಲುವ, ಪ್ರತಿಭಟಿಸುವ ಬಂದ ಪ್ರಸಂಗವನ್ನು ಧೈರ್ಯದಿಂದಲೇ ಎದುರಿಸಿ ಸಾಗುವ ಲಕ್ಷ್ಮಣನ ಸಾಮಾರ್ಥ್ಯವನ್ನು ಮೆಚ್ಚಲೇ ಬೇಕು.

“ಇನಸ್ಪೆಕ್ಟರ್ ರಾವಗಂತಾರ ನಾಳೆ ಬರತೀನಿ
ಹುಷಾರ ಇರು ನೀ ಗುಡ್ಡ ಒಳಗ
ನಿನಗ ಹಿಡಿಲಿಲ್ಲಂದ್ರ ಹೆಂಗಸಂತ ಕರಿಲಕ್ಷ್ಯಾ ನನಗ” ಎಂದಾಗ ಲಕ್ಷ್ಮಣ
“ಮಾತು ಇಲ್ಲೇ ಅಲ್ಲ, ನಾಳೆ ನಾ ಊರಾಗ ಬರ್ತೀನಿ ನಿನ್ನತ್ರ
ಆ ತಾಕತ್ತಿದ್ರ ಹಿಡ್ದು ತೋರ್ಸು
ನಾಳೆ ಬರತೀನಿ, ಹುಷಾರ ಇರು ಚಾವಡಿ ಒಳಗ

ಈ ಮಾತು ಸುಳ್ಳಲ್ಲ ಗಂಟುದಾಗೊ ಪದರಾಗ” ಎನ್ನುವ ಪ್ರತಿಯಾಗಿ ನೀಡುವ ಉತ್ತರ ದೊಳಗ ನಾನು ಹೇಡಿಯಲ್ಲ ಹೇಳಿದ ವ್ಯಾಳೇದಾಗ ನಾ ಬಂದ ಬರ್ತೀನಿ ನೀ ಹುಷಾರಿರು ಎನ್ನುವಲ್ಲಿ ಚಾಲೇಂಜಾಗಿ ಮಾತನಾಡುವ ದಿಟ್ಟತನಕ್ಕೆ ಲಾವಣಿ ಸಾಕ್ಷಿಯಾಗಿದೆ.

‘ಸಾಬ್ಯಾ ಗೋಪ್ಯಾ ಸರಸ್ಯಾ
ಲಕ್ಷ್ಮಣ ಸೈತ ಚಾವಡಿಗೆ ಬಂದಾರ
ಜಗ್ಗಿನಿಸ್ಪೆಟರಿಗೆ ಬೀಸಾದರ
ಒಬ್ಬ ನೆಪ್ಪಮೀಸೆ ಬೋಳಿಸಿದರ
ಕುದರಿಯ ಬಾಲ ಕೋಯ್ದರ
ಗುದ್ದಿ ವಾಲಿಕಾರ್ನ ಹಲ್ಲ ಮುರದಾರ
ಕತ್ತಿ ಬಂದೂಕ ಎಲ್ಲ ತಗೊಂಡಾರ’

ಎನ್ನುವ ಸನ್ನಿವೇಶ ಹಾಡುಹಗಲೇ ಸರಕಾರದ ವಿರುದ್ಧ ಜನರ ಸಮ್ಮುಖದೊಳಗೆ ಈ ರೀತಿ ಹೋರಾಟ ನಡೆಸುವುದು ಸುಲಭವಲ್ಲ. ಅವರನ್ನೇ ಶಿಕ್ಷಿಸಿ ಅವರ ಬಂದೂಕುಗಳನ್ನು ಕಸಿದೊಯ್ಯುವುದು ಶೂರತನವನ್ನು ಮೀರಿದ್ದಾಗಿದೆ. ಹೀಗೆ ಅಲ್ಲಿಂದ ಅಕ್ಕಲಕೋಟದಿಂದ ಅಲೆದಾಡುತ್ತ ಜಮಖಂಡಿಯ ಕುಲ್ಲಳ್ಳಿಗುಡ್ಡಕ್ಕೆ ಬಂದ ಸಂಗತಿ ತಿಳಿದ ಪೌಜುದಾರ.

“ಲಕ್ಷ್ಮಣ ಸಿಕ್ಕಾರ ಕುಡುವುತೀನಿ ನೆತ್ರ
ನಿಂತ ಕರಾಕರಾ ಹಲ್ಲ ತಿಂದಾನ
ಇಷ್ಟ ಅನುದರಾಗ ಲಕ್ಷ್ಮಣ ಬಂದ ನಿಂತಾನ”

ಹೀಗೆ ಎದುರಿಗೆ ಬಂದು ನಿಲ್ಲುವ ಲಕ್ಷ್ಮಣನ ಎದೆಯ ಛಾತಿಯ ಧೈರ್ಯವನ್ನು ಈ ಸನ್ನಿವೇಶ ವನ್ನು ಏನು ಹೇಗೆಂದು ವರ್ಣಿಸಬೇಕು. ಆಗ ಲಕ್ಷ್ಮಣನಿಗೂ ಫೌಜುದಾರನಿಗೂ ತೆಕ್ಕಿಮುಕ್ಕಿ ಬಿದ್ದಾಗ ಫೌಜುದಾರನ

“ತೆಲಿ ತಗೊಂಡು ಹ್ವಾಗ ಕಲ್ಲೋಳ್ಯಾಗ
ಇಟಗೊಂಡು ಕುಂತ್ರು ಚಾವಡ್ಯಾಗ
ಯಾರ್ಯಾರ ಬಂದಿಲ್ಲ ಸನಿದಾಗ
ಧಿಂಗ್ ಹೊಡ್ದು ಹೊಂಟ್ರು ಊರಾಗ
ಜತ್ತೀಗಿ ಹೋಗ್ಯಾರ ಬೆಳಗಾಗುದರೊಳ
ತೆಲಿಕಟ್ಟಿ ನಡದಾರ ಅಗಸ್ಯಾಗ”

ಈ ಸನ್ನಿವೇಶ ಇವರ ಧೈರ್ಯಶಕ್ತಿಯನ್ನು ಹೇಗೆ ವಿವರಿಸಬಹುದೋ ತಿಳಿಯದು ಅಷ್ಟೊಂದು ಆಕ್ರೋಶದ ಲಕ್ಷ್ಮಣ ಆಂಗ್ರೇಜಿಯವರ ಮೇಲಿನ ಸೇಡನ್ನು ಮುಯ್ಯಿಗೆ ಮುಯ್ಯಿ ತೀರಿಸಿಕೊಂಡು ಚಾವಡಿಗೆ ತಲೆ ಕಟ್ಟುವದೆಂಥಾ ಸಾಹಸದ ಕೆಲಸ.

ತ್ವಾಳಮಟ್ಟಿ ಮುಮ್ಮರಮಟ್ಟಿ ಬಂದು ಬಿದ್ದರ ಗುಡ್ಡದಾಗ
ಸುದ್ದಿ ಕೇಳಿ ಇನಸ್ಪೆಕ್ಟರ್ ಅಲ್ಲಿಗೆ ಬಂದ ಮೋಟರ ತಂದ
ಗುಡ್ಡವಳೆದೊಡದ ಬಿಗಲ್ ಮ್ಯಾಗ ಮ್ಯಾಗ
ಗಾಬಾಗಿ ಲಕ್ಷ್ಮಣ ನಿಂತಾನ ಗುಡ್ಡದ ಮ್ಯಾಗ
ಜಮಖಂಡಿ ಸರಕಾರಕ ಬಂದೂಕ
ಲಕ್ಷ್ಮ್ಯಾನ ಹಂತ್ಯಾಕ ಅನುಮಾನ ಇವ್ಯಾಕ
ತಗೊಂಡು ಕಯ್ಯಗ ಹತ್ತಿಲಿತ ಲಡಾಯಿ
ಗಾರ್ಮನ್ ಸಾಯ್ಬಗ ಲಕ್ಷ್ಮಣಗ
ಸಾಯ್ಬ ಕುಂತೀದ ಮೋಟರ ಮ್ಯಾಲ
ಲಕ್ಷ್ಮಣ ಒಗದ ರೈಫಾಲ
ಟೊಪಗೀಗೆ ಗುಂಡ ಬಡದೀತಲ್ಲ
ಟೊಪಗಿ ಶಿಡದು ಬಿತ್ತ ಭೂಮಿ ಮ್ಯಾಲ
ಸಾಹೇಬ ತಿಂತಾನ ಕರಿಕರಿ ಹಲ್ಲ
ತೆಗ್ಗಿ ನಾಯ್ಕಗ ಹಾಕ್ಯಾನ ಜಾಲ”

ಹೀಗೆ ಲಕ್ಷ್ಮಣ ಕೇವಲ ಧೀರ ಶೂರನಷ್ಟೇ ಅಲ್ಲ ಗುರಿಯಲ್ಲೂ ನಿಸ್ಸೀಮ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಹೀಗೆ ಲಕ್ಷ್ಮಣ ಸಿಂಧೂರಿನ ಹುಗಿದ ನೊಗದ ರಂದ್ರದೊಳಗಿಂದ ಹಾಯ್ದು ಹೋಗುವ ಹಾಗೆ ಕವಣೆಕಲ್ಲು ಬೀಸಿ, ಗುರಿಯಲ್ಲೂ ಜನರಿಂದ ಸೈ ಎನಿಸಿಕೊಂಡ ಪರಾಕ್ರಮಶಾಲಿ.

“ವಾಲಿಕಾರ ಗುಂಡ ವಗದಾನು
ಫಕಡ್ಯಾಗ ಗುಂಡ ಬಡದಿತ್ತಲ್ಲ
ನಾಯ್ಕ ಓಡಿಹ್ವಾದ ಲಕ್ಷ್ಮಣ ಬಿದ್ದಾನ
ಮೋಸ ಮಾಡಿ ಅಭಿಮನ್ಯಾಗ ಹೊಡದಾಂಗೈತಿ ಕೌರವರ”

ಎನ್ನುವ ಲಾವಣಿಯಲ್ಲಿ ಸಿಂಧೂರ ಲಕ್ಷ್ಮಣನ ಪರಾಕ್ರಮವನ್ನು ವೀರಅಭಿಮನ್ಯುವಿಗೆ ಹೋಲಿಸಿದ ಸಂದರ್ಭ ಇದಾಗಿದೆ.

ಹುಟ್ಟಬೇಕ ಲಕ್ಷ್ಮಣನಂತವರು
ಶ್ರೇಷ್ಟ ಅನಿಸಿಕೊಂಡ ಹ್ವಾದಬಗರು”

ಈ ಮಾತು ಅವನ ಹೆಸರು ಶಾಶ್ವತವಾಗುಳಿದಿದೆ ಎನ್ನುವುದಕ್ಕೆ ನಿದರ್ಶನವಾಗಿದೆ. ಅಂದು ಲಕ್ಷ್ಮಣನಂತವರ ಅವಶ್ಯಕತೆ ಇತ್ತೆಂಬುದನ್ನು ಲಾವಣಿಕಾರ ಸ್ಪಷ್ಟಪಡಿಸಿದ್ದಾರೆ.  ಇಂತಹ ಹೋರಾಟದ ಪ್ರಸಂಗದಲ್ಲಿ ಧೈರ್ಯದ ಹೊರತು ಗತಿ ಇಲ್ಲ. ಬೇಕಾದಷ್ಟು ಶೌರ್ಯವಿರಲಿ, ಶಸ್ತ್ರಾಸ್ತ್ರಗಳಿರಲಿ ಧೈರ್ಯವಿಲ್ಲದಿದ್ದರೆ ಅವೆಲ್ಲ ವ್ಯರ್ಥ. ಅಧೈರ್ಯದಿಂದ ಯಾವಕಾರ್ಯವೂ ಯಶಸ್ವಿಯಾಗಲಾರದು. ಆದ್ದರಿಂದ ಲಕ್ಷ್ಮಣನ ಈ ಹೋರಾಟಕ್ಕೆ ವ್ಯಕ್ತಿತ್ವಕ್ಕೆ ಆತನ ಶರೀರ ಧಾರ್ಡ್ಯತೆ, ಬೆಲೆತಂದದ್ದು ಮಲ್ಲನಿಗೆ ಧೈರ್ಯ ತನ್ನಿಂದ ತಾನೆ ನಿರ್ಮಾಣವಾಗುತ್ತಾ ಹೋಗುತ್ತದೆಂಬುದಕ್ಕೆ ಸಿಂಧೂರ ಲಕ್ಷ್ಮಣ ಇಂದಿಗೂ ನಿದರ್ಶನ ನಾಗಿದ್ದಾನೆ. “ಗಂಡಾಂತರಗಳಿಂದ ಪಾರಾಗುವವನೇ ಗಂಡಗಬರು” ಎಂಬಂತೆ ಲಕ್ಷ್ಮಣನ ಬದುಕು, ಬವಣೆ ನಮಗೆಲ್ಲ ಮಾದರಿ.

ಹೀಗೆಯೇ ಸಿಂಧೂರ ಲಕ್ಷ್ಮಣನ ಧೈರ್ಯ ಸಾಹಸವನ್ನು ಶಕ್ತಿಯನ್ನು ಡಾ.ಆರ್.ಸಿ. ಮುದ್ದೇಬಿಹಾಳರವರ “ಸಿಂಧೂರ ಲಕ್ಷ್ಮಣ ಮಹಾಕಾವ್ಯ”ದಲ್ಲಿ ತ್ರಿಪದಿಗಳಲ್ಲಿ ಚಿತ್ರಿಸಿದ ಚಿತ್ರಣವನ್ನು ಈ ಮುಂದೆ ನೋಡಬಹುದಾಗಿದೆ.

“ಎಂಟು ಆಳಿನ ನಟ್ಟ ಒಂಟಿಗನು ತಾನಾಗಿ
ಬಂಟ ಲಕ್ಷ್ಮಣ ಕಡಿದಾನ/ವಾರಕ್ಕ
ಎಂಟಾನೆ ಕೂಲಿ ಪಡದಾನ”

ತ್ರಿಪದಿಯಲ್ಲಿ ಆತನ ಶಕ್ತಿ ವೈಶಿಷ್ಟ್ಯತೆ ಇದೆ.

“ದುಂಡ ಹಲುಬುದು ಕಂಡು ಪುಂಡ ಲಕ್ಷ್ಮಣ ಜಿಗಿದು”
ಕುಂಡರ ತಿರುವಿ ಬಡಗರ| ಆತಂಡ
ಕಂಡಂಗ ಚದುರಿ ಓಡಿತ್ತ”

ಹೊಲೇರ ದುಂಡಪ್ಪ ಕುಸ್ತಿಯಲ್ಲಿ ಮೇಲ್ಜಾತಿಯವನನ್ನು ವಗದಾಗ ಅವರೆಲ್ಲ ಸೇರಿ ದುಂಡನ ಕಾಲು ಎದುರಾಳಿಗೆ ಬಡಿಯಿತೆಂದು ನೆಪಮಾಡಿ ಆತನನ್ನು ಎಲ್ಲರೂ ಸೇರಿ ಬಡಿಯುತ್ತಿರುವುದನ್ನು ಸಹಿಸದ ಲಕ್ಷ್ಮಣ ಪುಂಡರ ತಿರುವ ಬಡವರ ಕಂಡಂಗ ಚದುರಿ ಓಡಿದರೆಂಬುದು ಲಕ್ಷ್ಮಣನ ಬಲಿಷ್ಠತೆಗೆ ಮೆರುಗು ತಂದಿದೆ ಈ ಪ್ರಸಂಗ.

“ಪುಂಡರ ತಂಡವು ಕಂಡಂಗ ಮುತ್ತಿರಲು
ಬಂಡೆದ್ದು ತಂಡ ಹೊಕ್ಕಾನ/ಆನೆಗಳ
ಹಿಂಡಿನಲಿ ಸಿಂಹ ಹೊಕ್ಕಾಂಗ”

ಹೀಗೆ ಸಿಂಹದ ಎದೆಗಾರಿಕೆ ಈತನದು.

“ಮಾವಿನ ಗಿಡತುದಿಗೆ ಜೋತಾಡುಹಣ್ಣೀಗೆ
ಕಾಲೀಲೆ ಕಲ್ಲ ಒಗೆದಿದ್ದ/ಗಿಡದಿಂದ
ಮಾವಿನ ಹಣ್ಣ ಕೆಡವಿದ್ದ”

ನೆನ್ನುವಲ್ಲಿ ಆತನ ಗುರಿಯ ಪರಾಕಾಷ್ಠತೆಯನ್ನು ಇಲ್ಲಿ ನಾವು ಕಾಣಬಹುದು.

ಏಕಲವ್ಯನ ತೆರದಿ ಪಾಂಡುತನಯನ ತೆರದಿ
ಜೋಕೀಲೆ ಗುರಿಯ ಇಡುತಿದ್ದ| ತಪ್ಪದೆ
ಬೇಕಾದ ಸ್ಥಳಕೆ ಹೂಡುತ್ತಿದ್ದ

ಎನ್ನುವಲ್ಲಿ ಗುರಿಯಲ್ಲಿ ಲಕ್ಷ್ಮಣನ ಪ್ರಾವೀಣ್ಯತೆಯ ಶಕ್ತಿ ಕಂಡುಬರುತ್ತದೆ.

‘ತುಳಿದವರ ಹಿಡಿದೆಳೆದು ತುಳಿದಂಥ ಜನಬೇಕೆ
ಲಕ್ಷ್ಮಣನಂಥ ಮಗ ಬೇಕ| ನಾಡೋಳು
ಬೇಡರ ಜಾತಿಯ ಜನಬೇಕ’

ತ್ರಿಪದಿಯಲ್ಲಿ ಬೇಡರ ಜಾತಿಗೊಂದು ವೀರ, ಶೂರತೆಯ ಸ್ಥಾನಮಾನವನ್ನು ತಂದು ಕೊಡುವಲ್ಲಿ ಸಿಂಧೂರ ಲಕ್ಷ್ಮಣ ಜಯವಾದನೆನ್ನಬಹುದು.

“ತಿಳಿಗೇಡಿ ಉಳ್ಳವರು ತುಳಿದಿರಲು ನನ್ನನ್ನು
ತಳಮಳಗೊಂಡು ನನ ರಕ್ತ ಕುದ್ದಿರಲು
ಬಲಹೀನನನಾಗಿ ನಾ ನಿಂತೆ”

ಸಮಾಜದ ಭೇದ ಭಾವದ ವ್ಯವಸ್ಥೆಗೆ ರೋಸಿಹೋದ ಮನಸ್ಸು ಈ ರೀತಿ ಮರುಗಿರಲು ಸಾಕು.

‘ಗಪ್ಪನ ಲಕ್ಷ್ಮಣ ಕುಪ್ಪಳಿಸಿ ಮ್ಯಾಲಿಂದ
ತಪ್ಪದೇ ಗೌಡನ ಹಿಡಿದಾನ| ಎಳೆದಾಡಿ
ರೊಚ್ಚೀಲೆ ಕಾಲ ಮುಂದಾಗ!

ಅಂದು ಗೌಡನೆಂಬ ರಾಜನ ಮುಂದೆ ಹಾಯುವುದು ಕಣ್ಣಿಗೆ ಬೀಳುವುದು ಒಂದು ಅಪರಾಧವಾಗಿರುವ ಆ ಕಾಲದಲ್ಲಿ ಈ ಸನ್ನಿವೇಶ ಜರುಗಿಸುವುದು ಪ್ರಾಣ ತೆತ್ತಲು ಸಿದ್ಧರಾದ ವರಿಗೆ ಮಾತ್ರ ಸಾಧ್ಯ.

ಇಂದಾದ ಅಪಮಾನ ಎಂದಿಗೂ ಸಹಿಸದೆ
ಮುಂದೆ ಮರೆಯದೆ ಬಂದೇನು| ಮುಯ್ಯಕ್ಕೆ
ಒಂದಿನ ಮುಯ್ಯ ಮಾಡೇನು’

ತ್ರಿಪದಿಯಲ್ಲಿ ಅಂಗ್ರೇಜ್ ಸರ್ಕಾರಕ್ಕೆ ಸವಾಲನ್ನು ಹಾಕಿದ ಸಾಹಸ ಸಿಂಧೂರ ಲಕ್ಷ್ಮಣನದು.

ಇಂಥವರ ಕಾಲಾಗ ನಾವೆಂತು ಬದುಕೇವ
ಇಂಥ ಜನಕಾಗಿ ನಾನಿರುವೆ| ಅವರನ್ನ
ಕೂತಲ್ಲಿ ನಿಂತಲ್ಲಿ ನಾ ಸುಡುವೆನೆನ್ನುವಲ್ಲಿ

ಬಡಜನರಕಷ್ಟ ನಷ್ಠ ಅವರ ಬದುಕಿನ ಪರಿಯನ್ನು ಕಂಡು ಬಂಡೆದ್ದ ಲಕ್ಷ್ಮಣನ ಮನಸ್ಸು ಈ ರೀತಿ ತುಡಿದಿದೆನ್ನಬಹುದು.

ರಂಜನಿ ಮುಗಿಲೀಗೆ ರಂಜಕ ತುಂಬಿರಲಿ
ಮುಂಜಾನೆ ಕರೆಯಲು ಬಂದಿರಲು| ಲಕ್ಷ್ಮಣನು
ಅಂಜದೆ ವಾಡೇಕ ಬಂದಾನ.

ಧೈರ್ಯತೆಯ ಸಂಕೇತಕ್ಕೆ ಈ ಸನ್ನಿವೇಶವು ಸಾಕ್ಷಿಯಾಗಿದೆ.

“ಬೂಟೀಲೆ ಒದೆಯಲು ಇಷ್ಟಾಕ ಬಡಿದಾರ
ಬೂಟು ನನಗಿಲ್ಲ ಈ ದಿನ| ಎಚ್ಚರಿಕೆ
ಬೂಟೊಮ್ಮೊ ತಂದ ಒದ್ದೇನೋ

ಎನ್ನುವ ಕಲಾಲ ಫೌಜುದಾರನಿಗೆ ಉತ್ತರಕ್ಕೆ ಪ್ರತ್ಯುತ್ತರ ನೀಡುವ ಲಕ್ಷ್ಮಣನ ಧೀರತೆಯ ಎದೆ ಆದೆಷ್ಟು ಬಲಿಷ್ಟ. ಆಗ

‘ಅಬ್ಬರಿಸಿ ಕಲಾಲ ಎದ್ದಾನ ಹೊಡೆಯುದಕ
ಉಬ್ಬಿ ಪಿಸ್ತೂಲ ಹಿಡಿದಿರಲು| ಲಕ್ಷ್ಮಣ
ಒದ್ದು ಪಿಸ್ತೂಲ ಕೆಡಿವ್ಯಾನ’

ಈ ಧೈರ್ಯ ಅಧಿಕಾರ ಹಾಗೂ ಸರಕಾರ ಇರೋ ಆ ಕಲಾಲ ಫೌಜುದಾರನಿಗೂ ಇರದು.

‘ಇಂಥ ಶೂರನು ಒಬ್ಬ ಇಂಥ ರಾಜ್ಯದೊಳಗ
ಕುಂತೀಯ ಮಗ ಭೀಮ ಇದ್ದಂಗ| ಇರಬೇಕ
ಸಂತ್ಯಾಗ ಗೂಳಿ ಮೆರದಾಂಗ’

ಜತ್ತಿ ಫೌಜುದಾರ ಲಕ್ಷ್ಮಣನನ್ನು ಬಂಧಿಸಿದಾಗ ಲಕ್ಷ್ಮಣನ ಆ ಚಿತ್ರಣವನ್ನು ಈ ತ್ರಿಪದಿ ಬಿಂಬಿಸುತ್ತದೆ.

ಸುತ್ತೆಲ್ಲ ಫೌಜವು ಮುತ್ತೀಗೆ ಹಾಕಿರಲು
ಇತ್ತ ಲಕ್ಷ್ಮಣ ನಿಂತಾನ| ಗಟ್ಟ್ಯಾಗಿ
ಸುತ್ತ ಕಲ್ಲನ್ನು ತೂರ್ಯಾದ

ಇದು ಲಕ್ಷ್ಮಣನಿಗೆ ಎಂಥಪ್ರಸಂಗ ಸನ್ನಿವೇಶಗಳು ಬಂದರೂ ಹೋರಾಡುವುದನ್ನು ಬಿಡದ ಕಲಿ ಲಕ್ಷ್ಮಣ ಎಂಬ ಮಾತನ್ನು ಪುಷ್ಠೀಕರಿಸಲಾಗುತ್ತದೆ. ಜೇಲಲ್ಲಿ ಖೈದಿಗಳ ತಂಡ ವನ್ನು ಗುಟ್ಟೆ ಎಳೆಸು ಕಂಡು ಲಕ್ಷ್ಮಣ

ಕುದಿ ಕುದಿದು ಬಲು ಮುನಿದು
ತದಕಿ ಪೋಲಿಸರ ಕೆಡಿವ್ಯಾನ| ತಿರುವ್ಯಾಡಿ
ಸದೆ ಬಡಿದು ಅವನ ಎಳೆದಾನ

ಹೀಗೆ ಲಕ್ಷ್ಮಣ ಎಲ್ಲಸ್ಥಳಗಳಲ್ಲೂ ನಡೆದ ಶೋಷಣೆ ವಿರುದ್ಧ ಕಿಡಿಕಾರಿದ ನಿಜ ಪುರುಷ ಹೃದಯಿ. ಆಗ ಪೋಲೀಸರ ದಂಡು ಆವರಿಸಿದಾಕ್ಷಣ

“ಪುಂಡ ಲಕ್ಷ್ಮಣನಾಗ ಗುಂಡೀಗೆ ಸಿಲುಕದೆ
ಚೆಂಗನೆ ಗೋಡೆ ಏರುತ್ತ| ಅಲ್ಲಿಂದ
ಮಂಗನಾಂಗ ಲಾಗಾ ಹೊಡೆದಾನ

ತ್ರಿಪದಿಯಲ್ಲಿ ಸಮಯ ಪ್ರಜ್ಞೆಯೊಂದಿಗೆ ಆತನ ತಾಕತ್ತಿನ ಚಾಕ ಚಕ್ಯತೆಯು ಬಲುವಿಶಿಷ್ಠ ವಾದುದು.

ಗಂಡಸ ಇದ್ದರ ಬಂಧಿಸಬಾ ಎಂದು
ಗಂಡುಗಲಿ ಲಕ್ಷ್ಮಣನಂದಾನ| ಅವನೀಗೆ
ಕಂಡಂಗೆ ಬೈದು ನಿಂದಾನ.

ಇದು ಜೈಲಿನಿಂದ ಪಾರಾಗಿ ಬಂದನಂತರ ಈ ರೀತಿ ಫೌಜುದಾರನಿಗೆ ಸವಾಲೊಡ್ಡುವ ಸನ್ನಿವೇಶ ಆತನ ಧೈರ್ಯ ಸಾಹಸದ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

ಊರೂರು ಅಲೆದಾಡಿ ಕೇರ್ಯಾಗ ಸುಳಿದಾಡಿ
ಊರ ದುಷ್ಟರಿಗೆ ಹುಲಿಯಾಗಿ| ಮೆರೆದಾನ
ನಾರೇರ ಕಾಲೀಗೆ ಶಿರ ಬಾಗಿ

ಈ ನುಡಿಯಲ್ಲಿ ಆತನಲ್ಲಿ ಹುಲಿಯ ಹಾಗೆ ಹೋರಾಟ ಮಾಡುವ ಧೀಮಂತಿಕೆಯ ಶಕ್ತಿ ಬೆಳೆದು ಬಂದಿತ್ತೆಂಬುದಂತೂ ಸತ್ಯ. ಆದರೆ ಅಷ್ಟೇ ಸಹೃದಯಿಯೂ ದಯಾಮ ಯಿಯೂ ಆಗಿದ್ದನೆಂಬುದನ್ನು ಕಂಡುಕೊಳ್ಳಬಹುದು.

‘ಬಂದೂಕ ಹಿಡಕೊಂಡು ಸಿಂಧೂರ ಲಕ್ಷ್ಮಣ
ಚೆಂಗನೆ ಜಿಗಿದು ನಿಂದಾನ| ಅವರನ್ನ
ಬಂಧಿಸಿ ನೆಲಕ ಒಗದಾನ’

ಈ ಸನ್ನಿವೇಶವೊಂದು ಆತನ ಶಕ್ತಿ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆನ್ನಬಹುದು.

‘ಸಿಂಧೂರ ಲಕ್ಷ್ಮಣ ಹೊಂಚಾಕಿ ಬಲು ಬೇಗ
ಸಿಂಹ ಜಿಗಿದಾಂಗ ಜಿಗಿದಾನ| ಅರಸನ
ಬಂದೂಕ ಪಡದ ನಿಂದಾನ’

ಇದು ಆತನ ದೈಹಿಕ ಚಾಕಚಕ್ಯತೆಯನ್ನು ಎತ್ತಿ ತೋರುತ್ತದೆ.

‘ಮೊಸಳೆಯು ಬೆನ್ನಟ್ಟಿ ಘಾಸಿಗೊಳಿಸಲು ಬರಲು
ಕಸುವಿನಲಿ ಲಕ್ಷ್ಮಣ ಈಜುತ್ತ | ಈ ದಡಕೆ
ಬಸವಳಿದು ಬಂದು ಕುಂತಾನ’

ಮೊಸಳೆಯಿಂದ ಲಕ್ಷ್ಮಣ ಪಾರಾಗಲು ಜೀವದ್ಹಂಗ ತೊರೆದು ಈಜಿ ಬಂದ ಆತನ ಧೈರ್ಯವೇ ಆತನನ್ನು ಉಳಿಸಿತೆನ್ನುವಲ್ಲಿ ಸಂಶಯವಿಲ್ಲ.

‘ಟೊಂಕಕ್ಕೆ ಕೈಯಿಟ್ಟು ಡೊಂಕ ಮುಖದ ಹನುಮ
ಲಂಕಕ್ಕ ಹಾರಿ ಜಿಗಿದಂಗ| ಕ್ಷಣದಾಂಗ
ಬಂಟ ಲಕ್ಷ್ಮಣ ಜಿಗಿದಾನ’

ಈ ರೀತಿಯ ಚಟುವಟಿಕೆಗಳಿಗೆ ಲಕ್ಷ್ಮಣ ತನ್ನನೇ ತಾನು ತರಬೇತಿಗೊಳಿಸಿಕೊಂಡ ಶ್ರೇಯಸ್ಸೆಂದು ಹೇಳಬಹುದು.

‘ಸಿಂಧೂರ  ವೀರರು ಇವರೆಂದು ಜನವೆಲ್ಲ
ದಂಗಾಗಿ ನಿಂತ ನೋಡುತ್ತ| ದೂರದಿ
ಬಂದರ್ಹಾಂಗಿಯವರು ಅಂದಿತ್ತss’

ಇಷ್ಟೊಂದು ಚುರುಕು ಹಾಗೂ ದಿಟ್ಟತೆಯಿಂದ ಲಕ್ಷ್ಮಣನ ತಂಡವಿತ್ತು ಎಂಬುದನ್ನು ಈ ತ್ರಿಪದಿ ಸಾರಿ ಹೇಳುತ್ತದೆ.

‘ಹಿಗ್ಗೀಲೆ ಲಕ್ಷ್ಮಣ ಸಾಬುನ ಬಳಿಕರೆದು
ಹಗ್ಗೀಲೆ ಇವನ ಬಿಗಿ ಎಂದ | ಹೇಳುತ್ತ
ಮಗ್ಗಲ ಎಲುವ ಮುರಿಯಂದ |

ಜಮಖಂಡಿಯ ಜೇಲಲ್ಲಿ ಬಾಳಪ್ಪನೆಂಬುವನನ್ನು ಕುರಿತು ಸಿಂಧೂರ ಲಕ್ಷ್ಮಣ ಜೈಲಲ್ಲಿ ಏನನ್ನೂ ಯಾರನ್ನೂ ಲಕ್ಷಿಸದೆ ತನ್ನ ಅಳಿಯಂಗೆ ಈ ಮಾತು ಹೇಳಬೇಕಾದರೆ ಆತನ ಮನೋಬಲಿಷ್ಠತೆಯನ್ನು ಅಳತೆಗೈಯಲು ಸಾಧ್ಯವೆ.

‘ಹಿಂಗೋಳಿ ಕಲಾಲ ಮುಂಗಡೆ ಬಂದಿರಲು
ಚಂಗನೆ ಜಿಗಿದು ಬಂದಾನ | ಲಕ್ಷ್ಮಣ
ಅಂಗಾತ ಅವನ ಕೆಡವ್ಯಾನ’

ಹೀಗೆ ಲಕ್ಷ್ಮಣನ ಬರುವಿಕೆ ಹಾಗೂ ಮಿಂಚಿ ಮಾಯವಾಗುವಿಕೆಯೊಂದು ಅಂಗ್ರೇಜಿಗರಿಗೆ ನಿಲುಕಲಾರದ ಮಾತಾಗಿತ್ತು. ನುಂಗಲಾರದ ತುತ್ತಾಗಿತ್ತು.

‘ಹಾವನ್ನು ಗರುಡವು ಆವನ್ನ ಸಿಂಹವು
ಬಾವುಲಿ ಗಿಡಗ ಹಿಡಿದಂಗ | ಲಕ್ಷ್ಮಣ
ಧಾವಿಸಾಕಟುಕನ ಹಿಡಿದಾನ’

ಹೀಗೆ ಶಿಕ್ಷೆ ಕೊಡಬೇಕೆನ್ನುವವರಿಗೆ ಶಿಕ್ಷೆಕೊಟ್ಟ ಸನ್ನಿವೇಶಗಳೂ ಇಲ್ಲಿವೆ.

‘ಗುಂಡಿನ ಸರಪಟ್ಟಿ ಅಂದಾದ ಬಂದೂಕ
ಗಂಡುಗಲಿಯಾಗಿ ಲಕ್ಷ್ಮಣನ | ಕೈಗಿರಿಸಿ
ಪುಂಡನ ತೆರದಿ ಬಾಳೆಂದ”

ತೆಗ್ಗಿ ವೆಂಕಟಪ್ಪ ನಾಯಕನ ಆಶೀರ್ವಾದ. ಬಲದಲ್ಲಿ ಆತನ ಆತ್ಮವಿಶ್ವಾಸ ಹಾಗೂ ಧೈರ್ಯ ಸ್ಥೈರ್ಯತೆಗೆ ಒಲವು ಬಂದಿತ್ತು.

“ಬಂಡ ಆಂಗ್ಲರ ಜೋಡಿ ಬಂಡಾಯ ಇರಬೇಕ
ಕಂಡಲ್ಲಿ ಅವರ ತುಳಿಬೇಕ | ಲಕ್ಷ್ಮಣ
ಗಂಡುಗಲಿಯಾಗಿ ಮೆರಿಬೇಕ”

ಎಂಬುದು ತೆಗ್ಗಿವೆಂಕಟಪ್ಪನಾಯಕರ ಸದಾಶಯವಾಗಿತ್ತು. ಅಂತಃಶಕ್ತಿ ಲಕ್ಷ್ಮಣನಲ್ಲಿದೆ ಎಂದು ಅವರು ಕಂಡುಕೊಂಡಿದ್ದರಿಂದಲೇ ಲಕ್ಷ್ಮಣನಿಗೆ ಹೀಗೆ ಹಾರೈಸಿರುವ ಸಂಗತಿ ತಿಳಿದುಬರುತ್ತದೆ.

“ಮುದುಕೀಯ ವೇಷದಲಿ ಹೆದರದೆ ಲಕ್ಷ್ಮಣ
ಹದುಳಿದಿ ಊರ ಹೊಕ್ಕಿದ್ದು | ಲಕ್ಷ್ಮಣ
ಹೋಳಾಗಿ ಬೇಗ ಪಾರಾದ”

ಕೊಟ್ಟ ಮಾತಿಗೆ ತಪ್ಪದೆ ನಡೆದುಕೊಳ್ಳವ ಸ್ಪಭಾವದ ದಿಟ್ಟತನವನ್ನು ಈ ತ್ರಿಪದಿ ತಿಳಿಯ ಪಡಿಸುತ್ತದೆ. ಆಗ ಬೆನ್ನಟ್ಟಿದ ಅಂಗ್ರೇಜಿಯವರಿಂದ ತಪ್ಪಿಸಿಕೊಳ್ಳಲು ಉಪಾಯದಿಂದ ಪಾರಾದ ಪ್ರಸಂಗ ಇಲ್ಲಿದೆ.

‘ಸಿಂಧೂರ ಬಂಟರು ಸಂತ್ಯಾಗ ತಿರುಗಿದರ’
ನಿಂತು ಜನರೆಲ್ಲ ನೋಡ್ಯಾರ | ಬೆರಗಾಗಿ
ಇಂಥವರ ಕಾಣೇವು ಎಂದಾರ”

ಹೀಗೆ ಯಾವ ಭಯ ಭೀತಿ ಇಲ್ಲದೆ ಸಂತೆಯಲ್ಲಿ ನೆರೆದ ಜನರ ಮಧ್ಯದಲ್ಲಿ ಇವರ ತಿರುಗಾಟದ ಧೈರ್ಯತೆ ಬೆಚ್ಚಿಬೀಳಿಸುವಂತಹದು.

“ಹುಡುಕುತ್ತ ಫೌಜವು ಗಡಿಬಿಡ್ಲೆ ಬಂದಾಗ
ಅಡಕಿತ್ತಿ ಲಕ್ಷ್ಮಣ ಜಿಗಿದಾನ | ಅಲ್ಲಿಂದ
ಪಡೆವ್ವನ ಗುಡ್ಡಕ ಸೇರ್ಯಾನ”

ತೆಗ್ಗಿನ ಗೌಡರ ಮನೆಯಲ್ಲಿರುವ ತನ್ನನ್ನು ಹಿಡಿಯಲು ಮುತ್ತಿಗೆ ಹಾಕಿದ ಅಂಗ್ರೇಜಿಯವರಿಂದ ಲಕ್ಷ್ಮಣ ತನ್ನ ಚಾಕಚಕ್ಯತೆಯಿಂದ ತಪ್ಪಿಸಿಕೊಂಡು ಪಡಿಯವ್ವನ ಗುಡ್ಡ ಸೇರಿದ ಪರಿಯನ್ನು ಚಿತ್ರಿಸಲಾಗಿದೆ.

“ಗಾರ್ಮನ ಸಾಬನು ಜೋಕೀಲೆ ಹೇಳ್ಯಾನ
ಶೂರ ಲಕ್ಷ್ಮಣ ತರಬೇತಿ | ನಾಡೋಳು
ಭಾರಿ ಸೌಖ್ಯದಿ ಇರಬೇಕು”

ಈತನ ಈ ಶೂರತನ ಹಾಗೂ ಧೀರತನವನ್ನು ತಮ್ಮನ್ನು ಚಳ್ಳೆಹಣ್ಣು ತಿನ್ನಿಸುತ್ತಿರುವ ಲಕ್ಷ್ಮಣನ ಶೌರ್ಯವನ್ನು ಸ್ವತಃ ಗಾರ್ಮನ್ ಸಾಹೇಬನು ವರ್ಣಿಸಿದ ಮನಸಾರೆ ಹೊಗಳಿದ ಪರಿ ಇಲ್ಲಿ ವ್ಯಕ್ತವಾಗುತ್ತದೆ.

“ಶೂರ ಲಕ್ಷ್ಮಣನಿಗಿಂದು ವೀರಮರಣವು ಬರಲಿ
ಧೀರನಾಯಕನು ಬದುಕಲಿ| ನಾಡೋಳು
ಈರ್ವರ ಕೀರ್ತಿ ಹಬ್ಬಿರಲಿ”

ಸಮಾಜಮುಖಿ ವ್ಯಕ್ತಿಯಾಗಿ ಸಾರ್ವಜನರ ಮಗನಾಗಿ ಇಷ್ಟೊಂದು ಕಷ್ಟನಷ್ಟ ಅನುಭವಿಸಿದ ಲಕ್ಷ್ಮಣನ ಪರಾಕ್ರಮತೆಯ ಎತ್ತರವನ್ನು ಈ ತ್ರಿಪದಿಯಲ್ಲಿ ಸೂಚಿಸಲಾಗಿದೆ.

“ಮುಂಡರಗಿ ಭೀಮಣ್ಣ ಸಂಗೊಳ್ಳಿ ರಾಮಣ್ಣ
ಕಟ್ಟಿ ಚೆನ್ನಪ್ಪ ಇವರಂಗ | ಲಕ್ಷ್ಮಣ
ದಿಟ್ಟದಿಕಾದಿ ಮೆರೆದಿದ್ದ

ಈಗಾಗಲೆ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಜೀವವನ್ನೇ ತೇಯ್ದ ಮುಂಡರಗಿ ಭೀಮಣ್ಣ, ಸಂಗೊಳ್ಳಿ ರಾಮಣ್ಣರಂತೆ ಸಮಾನತೆಗಾಗಿ ಹೋರಾಡಿದ ಸಿಂಧೂರ ಲಕ್ಷ್ಮಣನೂ ಇವರ ಸರಿಸಾಟಿ ಎನ್ನುವ ಮಾತು ಈ ತ್ರಿಪದಿಯಲ್ಲಿದೆ. ಹೀಗೆ ಡಾ.ಆರ್.ಸಿ. ಮುದ್ದೇಬಿ ಹಾಳರವರು ಕ್ಷೇತ್ರಕಾರ್ಯದೊಂದಿಗೆ ತಿಳಿದುಬಂದ ಲಕ್ಷ್ಮಣನ ಸಾಹಸದ ಸಂಗತಿಗಳನ್ನು ತಮ್ಮ ತ್ರಿಪದಿಯಲ್ಲಿ ತುಂಬಾ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾನೆ. ರತ್ನವ್ವ ಯಲ್ಲಪ್ಪ ಮಾದರ ಅವರು ಹಾಡಿರುವ ಕೋಲಾಟದ ಪದದಲ್ಲಿ,

“ಕಾಜಿನ ಕಂಬ ನೆಲಗಚ್ಚಿದ ಲಾವ್ಯಾಗ
ಅಣ್ಣ ಬಸವಣ್ಣ ಬೆಳಕಾದ ಕೋಲ
ಅಣ್ಣ ಬಸವಣ್ಣ ಬೆಳಕಾವ ಮಾಡ್ಕೊಂಡು
ಬಾರಿನ ಬಂದೂಕ ಬಗಲೀಗೆ ಹಾಕ್ಕೊಂಡು
ಬೆಳಗಾಂವಿ ಜೈಲ ಜಿಗಿದಾನ”

ಎನ್ನುವಲ್ಲಿ ಬಸವಣ್ಣನಂತೆ ಲಕ್ಷ್ಮಣನೂ ಸಮಾನತೆಗಾಗಿ, ಶೋಷಣೆರಹಿತ ಸಮಾಜಕ್ಕಾಗಿ ಶ್ರಮಿಸಿದ ಶ್ರಮವಂತನೆಂಬ ಆತನ ಶಕ್ತಿಯ ಸ್ವರೂಪವನ್ನಿಲ್ಲಿ ಚಿತ್ರಿಸಲಾಗಿದೆ.

“ಬಂದೂಕ ತುಂಬ್ಯಾರ ಭರಪೂರ
ಬಸವಣ್ಣ ಗುರಿಯಿಟ್ಟು ಗುಂಡ ಹೊಡದಾರ
ಬಸವಣ್ಣನ ರುದ್ರ ಜೋಡಂಗಿ ರಗತಾಗಿ ಕೋಲ
ಬಸವಣ್ಣ ಬಿದ್ದಾನ ಬೀಳಗಿ ಬಯಲಾಗೆ ಕೋಲ”

ಆತನ ರೌದ್ರಾವತಾರದ ಅಂತ್ಯದ ಕ್ಷಣದ ಚಿತ್ರಣ ಇಲ್ಲಿದೆ.

“ತುಪ್ಪದ ಕೊಡಕ ಕಟ್ಟಿರುವೆಗೊಯ್ದಂಗ
ಸುತ್ತ ಗಟ್ಟ್ಯಾರ ಸರಕಾರ”

ಲಕ್ಷ್ಮಣನ ಅಂತ್ಯವಾದ ಕ್ಷಣದ ಚಿತ್ರಣವನ್ನಿಲ್ಲಿ ನೋಡಬಹುದಾಗಿದೆ.

ಹೀಗೆ ಸಿಂಧೂರ ಲಕ್ಷ್ಮಣ ಕರ್ನಾಟಕದ ನೆಲ ವಸಾಹತುಗಳ ಹಿಡಿತಕ್ಕೆ ತುಳಿತಕ್ಕೆ ಆಕ್ರಮಣಕ್ಕೆ ತುತ್ತಾದ ಕಾಲ. ಸಾಮಾಜಿಕ ಅಸಮಾನತೆ ಜಿಡ್ಡುಗಟ್ಟುತ್ತಾ ಒಳಗೊಳಗೆ ಸ್ವಾತಂತ್ರ್ಯದ ಕಹಳೆಯು ಹೊಗೆಯಾಡುತ್ತಿತ್ತು. ಆರ್ಥಿಕ ಹಾಗೂ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಇಬ್ಬಗೆಯ ನೀತಿ ತುಂಬಿ ತುಳುಕುತ್ತಿತ್ತು. ಉಳ್ಳವರಿಗಷ್ಟೇ ಪ್ರಮುಖ ಸ್ಥಾನ ಮಾನ. ಇನ್ನುಳಿದವರಿಗೆ ಇಲ್ಲ ಮಾನವೆನ್ನುವ ಕಾಲವದು. ಇವನ್ನೆಲ್ಲವನ್ನು ಕಣ್ಣಾರೆ ಕಂಡ ಸಿಂಧೂರಿನ ಲಕ್ಷ್ಮಣ ಬ್ರಿಟೀಷರ ವಸಾಹತುಶಾಹಿ ವಿರುದ್ಧ, ಶ್ರೀಮಂತರ ಸೊಕ್ಕಡಗಿಸುವ ದಿಸೆಯಲ್ಲಿ ಬಂಡೆದ್ದ ಈತನ ಹರಸಾಹಸವನ್ನು ಎಷ್ಟು ಬಣ್ಣಿಸಿದರೂ ಸಾಲದು. ಅಂತೆಯೇ ಈತನನ್ನು ಎಂಟೆದೆಯ ಬಂಟನೆಂದು ಕರೆದವಾಡಿಕೆ. ಕಂದಾಯದ ನೆಪದಲ್ಲಿ ಸರಕಾರಕ್ಕೆ ಬಡ ಜನರ ಆಸ್ತಿಪಾಸ್ತಿ ಸೇರಿಸುವ ವ್ಯವಸ್ಥೆ ವಿರುದ್ಧ ಸಿಡಿದೆದ್ದ ಸಿಡಿಲ ಮರಿ. ಬಡವರ ಜಮೀನುಗಳನ್ನ ಕಸಿದುಕೊಳ್ಳುವವರ ವಿರುದ್ಧ ಹೋರಾಡಿದ ಬಲಶಾಲಿ. ತನ್ನ ತೋಳ್ಬಲವನ್ನು ನಂಬಿಕೊಂಡು ಬ್ರಿಟೀಷರೊಂದಿಗೆ ಸೆಣಸಾಡಿದ ಆತನ ಧೈರ್ಯ ಸ್ಥೈರ್ಯದ ಸನ್ನಿವೇಶಗಳು ಬಹುರೋಮಾಂಚನಕಾರಿಯಾದವುಗಳೆಂದು ಹೇಳಬಹುದು. ಬಡವರ ಬೆಳಕಾಗಿ, ಆಸರೆ ಯಾಗಿ ಮೆರೆದ ಮನೋಸ್ಥೈರ್ಯದ ಧೀಮಂತ ಸಿಂಧೂರ ಲಕ್ಷ್ಮಣ ಅಂತೆಯೇ ಇಂದಿಗೂ ಇತಿಹಾಸದಲ್ಲಿ ಚಿರಸ್ಥಾಯಿ.

 

ಆಕರಗಳು

೧. ಸಿಂಧೂರ ಲಕ್ಷ್ಮಣ ನಾಟಕ, ಕಂಠಿಹನುಮಂತರಾಯ.

೨. ವಿಜಾಪುರ ಜಿಲ್ಲೆಯ ಲಾವಣಿಗಳು, ೧೯೭೯, ಸಂ. ಕ್ಯಾತನಹಳ್ಳಿ ರಾಮಣ್ಣ

೩. ಸಿಂಧೂರ ಲಕ್ಷ್ಮಣ, ಮಹಾಕಾವ್ಯ, ಡಾ.ಆರ್.ಸಿ.ಮುದ್ದೇಬಿಹಾಳ

೪. ಕೋಲಾಟ ಪದ ಸಂಗ್ರಹ, ಜಿ.ಕೆ.ತಳವಾರ

* * *