ಊರು ಚಿಕ್ಕದು, ಹೆಸರು ದೊಡ್ಡದು. ಹೆಸರು ಅರ್ಥಪೂರ್ಣವಾದದು ಸಾರ್ಥಕ್ಯ ವಾದದು ಒಬ್ಬ ವೀರ ಜನ್ಮತಾಳಿದಾಗ. ಅದುವೇ ಸಿಂಧೂರ ಅವನೇ ವೀರಲಕ್ಷ್ಮಣ. ಈ ಸಂಗಮವೇ ವೀರಸಿಂಧೂರ ಲಕ್ಷ್ಮಣ. ಆ ಲಕ್ಷ್ಮಣ ಜಗತ್ತನ್ನೆ ರಾಮನಲ್ಲಿ ಕಂಡ, ಈ ಲಕ್ಷ್ಮಣ ಜಗತ್ತಿನಲ್ಲಿಯೇ ರಾಮನನ್ನು ಕಂಡ ಅದಕ್ಕಾಗಿಯೇ ಈ ವೀರ, ದೇಶಕ್ಕಾಗಿ ತನ್ನ ಪ್ರಾಣವನ್ನೆ ಪಣಕ್ಕಿಟ್ಟ. ರಾಷ್ಟ್ರ, ಸಮಾಜದ ಮುಂದೆ ತನ್ನ ಪ್ರಾಣ ತೃಣಸಮಾನವೆಂದು ಬಗೆದ. ಊರು  ಒಂದು ವ್ಯಕ್ತಿಯಿಂದ ಪ್ರಸಿದ್ದಿ ಪಡೆಯಬೇಕಾದರೆ ಆ ವ್ಯಕ್ತಿಯ ವ್ಯಕ್ತಿತ್ವ ಅದೆಷ್ಟು ಅತ್ಯದ್ಭುತ!  ಅಬಾಲ ವೃದ್ಧರಿಗೆಲ್ಲ ಇವನ ಹೆಸರೇ ಸ್ಫೂರ್ತಿದಾಯಕ. ಆ ಲಕ್ಷ್ಮಣನ ರೇಖೆ ದಾಟಿ ಬಂದ ರಾವಣ ರಾಮನ ಬಾಣ ತಾಕಿ ಪ್ರಾಣಬಿಟ್ಟ. ಈ ಲಕ್ಷ್ಮಣನ ರೇಖೆದಾಟಿ ಬಂದ ಆಂಗ್ಲ ರಾವಣರು ದೇಶಬಿಟ್ಟು ಪಲಾಯನಗೈದರು.

ಜಗದ ಹುಟ್ಟು ಸಾವಿನ ನಿರಂತರ ಪ್ರಕ್ರಿಯೆಯಲ್ಲಿ ಅದೆಷ್ಟೋ ಜನ ಬಂದು ಹೋಗು ತ್ತಾರೆ. ಲೋಕ ತೊರೆದು ಜನಮಾನಸದಿಂದ ಜಾರಿ ಬಹುದೂರ ಹೋಗಿ ಶಾಶ್ವತವಾಗಿ ಮರೆಯಾದವರೆ ಬಹಳ. ಜನ ಮಾನಸದಲ್ಲಿ ನಿತ್ಯಹಸಿರಾಗಿ ಉಳಿದವರು ತೀರ ವಿರಳ. ವಿರಳರಲ್ಲಿ ಲೆಕ್ಕಕ್ಕೆ ಸಿಕ್ಕವನೇ ವೀರ ಸಿಂಧೂರ ಲಕ್ಷ್ಮಣ. ಊರು ಇವನಿಗೆ ಆಧಾರವಾಗಲಿಲ್ಲ. ಇವನ ಕೀರ್ತಿ, ಶೌರ್ಯದ ಪ್ರಭೆಯಲ್ಲಿ ಊರು (ಸಿಂಧೂರು) ಬೆಳೆಯಿತು, ಬೆಳಗಿತು.

ಮಹಾರಾಷ್ಟ್ರದ ಜತ್ತ ತಾಲೂಕಿನ ಒಂದು ಚಿಕ್ಕ ಹಳ್ಳಿ ಸಿಂಧೂರ. ಓಲೆಕಾರ ಮನೆತನದ ಬಡ ಕುಟುಂಬದಲ್ಲಿ ಇವನು ಜನ್ಮತಾಳಿದ. ಬಡತನದಲ್ಲಿಯೇ ಬೆಳೆದ. ಬಡತನದ ಕಹಿ ಯಿಂದ ಬೆಳೆದವನ ಹೃದಯ ಶ್ರೀಮಂತವಾಗಿತ್ತು, ಚಿಗುರೊಡೆದ ಸಿಹಿಸಿರಿಯ ತಾಣವಾಗಿತ್ತು. ಅಗಣಿತ ಗುಣಗಳ ಸಿಂಧು ಈ ಸಿಂಧೂರ ಲಕ್ಷ್ಮಣ. ಸ್ವಾಸಾಮರ್ಥ್ಯದಿಂದ ತನ್ನ ಊರಿನ ಹೆಸರನ್ನು ಭಾರತದ ಭೂಪಟದ ಮೇಲೆ ಅನವರತವೂ ರಾರಾಜಿಸುವಂತೆ ಮಾಡಿದ. ಹೇಡಿಯದಾರಿಯನ್ನು ತೊರೆದು, ವೀರರ ಹಾದಿ ಹಿಡಿದು ಶೌರ್ಯದ ಕಿಡಿ ಹಾರಿಸಿದ ಈ ವೀರ ಇಂದಿಗೂ ಜನಮಾನಸದ ಸರೋವರದಲ್ಲಿಯ ಸೌರಭ ಸೂಸುವ ಸುಮವಾಗಿ ಅರಳಿ ನಿಂತಿದ್ದಾನೆ. ಬಡವರ ಬವಣೆ ಬಲ್ಲಿದವನಾಗಿ ಅವರ ಧ್ವನಿಯಾಗಿ, ಸೊಕ್ಕಿನ ಸಿರಿವಂತರ ದುಷ್ಟ ಅಧಿಕಾರಿಗಳೆಂಬ ಮದ್ದಾನೆಗಳಿಗೆ ಮಾವುತನಾಗಿ ಅಂಕುಶ ಹಿಡಿದ, ಏಕೈಕ ವೀರ ಸಿಂಧೂರ ಲಕ್ಷ್ಮಣ.

ಕಿತ್ತು ತಿನ್ನುವ ಬಡತನದಲ್ಲಿಯೂ ಅವನಿಗೆ ಅನೀತಿ, ಅನ್ಯಾಯ ಅಸಹನೀಯ, ಸ್ವಾರ್ಥ ಆತನ ಸುತ್ತ ಎಂದೂ ಸುಳಿಯಲೇ ಇಲ್ಲ. ಸರಿಯಾದುದನ್ನು ಸಮರ್ಥಿಸುವ ಸಾಮರ್ಥ್ಯ, ಪರೋಪಕಾರದಲ್ಲಿಯೇ ಪರಮಾನಂದ. ಇಂಥ ವ್ಯಕ್ತಿಗೆ ಕಾರ್ಯವ್ಯಾಪ್ತಿಯ ಮಿತಿ ಎಲ್ಲಿದೆ? ಅದು ಎಲ್ಲೆಡೆ ಎಲ್ಲೆಯನ್ನು ಮೀರಿ ಮೆರೆದಾಗ ಮಹಾತ್ಮನಾಗುತ್ತಾನೆ. ಹುಡುಗಾಟದ ವಯಸ್ಸಿನಲ್ಲಿಯೇ ನ್ಯಾಯ ನೀತಿಯ ಹುಡುಕಾಟ, ನಕಲಿ ಬಂದೂಕನ್ನು ಹಿಡಿದು ಆಡುವ ವಯಸ್ಸಿನಲ್ಲಿ ಅಸಲಿ ಬಂದೂಕನ್ನು ಬ್ರಿಟೀಷರನ್ನು ಬೆದರಿಸಿ ಬೆಚ್ಚಿಸಿದ.

ಹದಿನೆಂಟರ ಹರೆಯದ ಬಂಟ ಪಾರತಂತ್ರದ ಪರದೆಯನ್ನು ಹರಿದು ಹಾಕುವುದಕ್ಕಾಗಿ ಪಣತೊಟ್ಟು ಊರು, ಮನೆಯನ್ನು ಬಿಟ್ಟು ಬ್ರಿಟೀಷರ ಭೇಟೆಯಾಡಲು ಪ್ರಾರಂಭಿಸಿದ. ಹೋಗುವಾಗ ತನ್ನ ಪತ್ನಿ ಚಂದ್ರವ್ವಳಿಗೂ ಸುಳಿವು ನೀಡಲಿಲ್ಲ. ಊರು ಬಿಟ್ಟು ಹೋದವ ಊರಿಗೆ ತಿರುಗಿ ಬರಲೇ ಇಲ್ಲ. ಅವನ ಹೆಂಡತಿ ಆಗ ತುಂಬು ಗರ್ಭಿಣಿ. ಮುಂದೆ ಗಂಡು ಹುಟ್ಟಿದ ಸುದ್ದಿ ಅವನಿಗೆ ತಲುಪಿತು. ಮಗನನ್ನು ನೋಡಲು ಬರುವುದಾಗಿ ತಿಳಿಸಿದ್ದ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಅವನು ಬೀಳಗಿ ತಾಲೂಕನ್ನು ತನ್ನ ಕಾರ್ಯಕ್ಷೇತ್ರವಾಗಿ ಆಯ್ದುಕೊಂಡಿದ್ದ. ಇಲ್ಲಿಯೇ ಅವನು ಬ್ರಿಟೀಷರಿಗೆ ದಿಕ್ಕು ತಪ್ಪಿಸಿದ. ಅವರಿಗೊಂದು ಸವಾಲಾದ. ಇವನ ತಂತ್ರಕ್ಕೆ ಅವರ ಕುತಂತ್ರ ತತ್ತರಿಸಿತು ನಿಷ್ಕ್ರಿಯವಾಯಿತು. ಬ್ರಿಟೀಷರ ಮುಖದಲ್ಲಿ ಬೆವರೊಡೆಯಿತು. ಹೇಗಾದರೂ ಮಾಡಿ ಅವನನ್ನು ಸೆರೆಹಿಡಿಯಬೇಕೆಂಬ ಅವರ ಸರ್ವ ಪ್ರಯತ್ನಗಳು ವಿಫಲವಾದವು. ಭಾರತದ ಬಾನಂಗಳದಲ್ಲಿ ದಟ್ಟವಾಗಿ ಹರಡಿಕೊಂಡಿದ್ದ ಕಾರ್ಮೋಡಗಳಿಗೆ ಭಾಸ್ಕರನಾಗಿ ಬಂದು ಚದುರಿಸಿದ. ಜೀವಿತ ಸಮಯದಲ್ಲಿ ಇವನ ಮುಖ ನೋಡುವುದು ಬ್ರಿಟೀಷರಿಗೆ ಆಗಲೇ ಇಲ್ಲ. ಅವರಿಗೆ ಸಿಂಹಸ್ವಪ್ನನಾಗಿದ್ದ.

ಧನ ಸಂಪತ್ತುಗಳನ್ನು ಲೂಟಿಮಾಡಿ ಸ್ವಹಿತಕ್ಕಾಗಿ ಬಳಸದೆ ಬಡವರಿಗೆ ಆಶ್ರಯದಾತ ನಾದ. ಸಿರಿವಂತರನ್ನು ಸುಲಿದು ಹಸಿದವರಿಗೆ ಹಂಚುತ್ತಿದ್ದ.

ತಂದ ಹೊನ್ನರಾಣಿ
ಎಂದೂ ತನಗಿರಲಿಲ್ಲ
ಇಂದು ನಾಳೆಂದು ಅನಲಿಲ್ಲ
ಲಕ್ಷ್ಮಣ ನಂಬಿದವರ ಕೈ ಬಿಡಲಿಲ್ಲ

ಇಂದಿಗೂ ಹಳ್ಳಿಯ ಮಹಿಳೆಯರ ಬಾಯಿಯಿಂದ ಹೊರಹೊಮ್ಮುವ ಈ ಬೀಸುಕಲ್ಲಿನ ಹಾಡು ಅವನ ಚಿತ್ರಣವನ್ನು ಕಣ್ಣೆದುರು ನಿಲ್ಲಿಸುತ್ತದೆ. ತಂದ ಹಣವನ್ನು ತನಗಾಗಿ ಇಂದು ನಾಳೆಂದು ಎಂದೂ ಅನಲಿಲ್ಲ. ಬಂದು ಬೇಡಿದವರಿಗೆ  ಇಲ್ಲೆನಲಿಲ್ಲ. ಯಾರಿಗಾಗಿಯೋ ಲೂಟಿ, ಯಾರಿಗಾಗಿಯೋ ನೋವು ಅನುಭವಿಸುವುದು ಇದು ಮಹಾತ್ಮರ ನಿರ್ಧಾರ. ಗಲಗಲಿಗೆ ಸಮೀಪವಿರುವ ಯಡಹಳ್ಳಿಯ ಶೇಠನ ಮನೆಯನ್ನು ಹಾಗೂ ಬಿಸನಾಳ ಶೇಠನ ಮನೆಯನ್ನು ಲೂಟಿಮಾಡಿ ಬಡವರಿಗೆ ಹಂಚಿಹೋದ. ಹೊಲಕ್ಕೆ ಬುತ್ತಿ ಒಯ್ಯುತ್ತಿದ್ದ ಮಹಿಳೆಯರನ್ನು ತಡೆದು ಹಸಿದ ಹೊಟ್ಟೆಗೆ ಅನ್ನ ಕೊಡು ಎಂದು ವಿನಯದಿಂದ ಕೇಳಿ ಪಡೆದು ಅವರಿಗೆ ಹೊನ್ನು ನೀಡುತ್ತಿದ್ದ. ಅವರನ್ನು ತಾಯಿಯ ಸ್ವರೂಪದಲ್ಲಿ ಕಾಣುತ್ತಿದ್ದ. ಪರೋಪಕಾರ ಅವನ ವೃತ್ತಿಯಾಗಿತ್ತು.

ಪರೋಪಕಾರಾಯ ಫಲಂತಿ ವೃಕ್ಷಃ
ಪರೋಪಕಾರಾಯ ವಹಂತಿ ಸದ್ಯಃ
ಪರೋಪಕಾರಾಯ ದುಹಂತಿ ಧೇನವಃ
ಪರೋಪಕಾರಾರ್ಥ ಮಿದಂ ಶರೀರಂ|

ವೃಕ್ಷಗಳು ಬಿಸಿಲಿನ ಬೇಗೆಯನ್ನು ಸಹಿಸಿಕೊಂಡು ದಾರಿಹೋಕರಿಗೆ ನೆರಳನ್ನು, ಹಣ್ಣನ್ನು ನೀಡುತ್ತವೆ. ನದಿಗಳು ಪರೋಪಕಾರವನ್ನು ಸಾಧಿಸಲೆಂದೆ ಹರಿದು ಜೀವನಸಂಕುಲಕ್ಕೆ ನೀರಿನ ದಾಹವನ್ನು ತೀರಿಸುತ್ತವೆ. ಹಸುಗಳು ಹುಲ್ಲನ್ನು ತಿಂದು ಹಾಲನ್ನು ಕೊಡುತ್ತವೆ. ಇವು ಗಳಂತೆಯೆ ಈ ಶರೀರ ಪರರ ಹಿತಕ್ಕಾಗಿ ಎಂಬ ಭಾವನೆ ನಮ್ಮಲ್ಲಿ ಇರಬೇಕು. ಈತ ವೃಕ್ಷ, ನದಿ, ಹಸುಗಳ ಸಾಲಿಗೆ ಸೇರಿದ ವ್ಯಕ್ತಿ.

ಇವನು ಹುಟ್ಟಿದ ಊರು ಮಹಾರಾಷ್ಟ್ರಕ್ಕೆ ಸೇರಿದೆ ಎಂಬ ಕಾರಣದಿಂದ ಕರ್ನಾಟಕ ಸರಕಾರದಿಂದ ತಿರಸ್ಕಾರ. ಇವನ ಮಾತೃ ಭಾಷೆ ಕನ್ನಡವೆಂಬ ಕಾರಣಕ್ಕೆ ಮಹಾರಾಷ್ಟ್ರ ಸರಕಾರ ದಿಂದ ನಿರ್ಲಕ್ಷ. ಹೀಗಾಗಿ ಈಗಿದ್ದವರ ಜೀವನ ಅತಂತ್ರ, ತಿರಸ್ಕಾರ ಅಳಿದು ಪುರಸ್ಕಾರ ಸಿಗುವುದಾದರು ಎಂದು? ಪುರಸ್ಕಾರಕ್ಕೆ ಭಾಷೆ ನೆಲ ಅಡ್ಡವಾಗಬಾರದು. ಕಾರ್ಯವೈಖರಿ, ಬದುಕಿನ ಬಗೆ ಇದನ್ನು ಅವಲಂಬಿಸಿರಬೇಕು. ಬಡವರ ಬದುಕಿಗೆ ಭರವಸೆ ನೀಡಿದ ಈ ವೀರನ ಮುಂದಿನ ಪೀಳಿಗೆಯೂ ಬಡತನ ಬವಣೆಯಲ್ಲಿಯೇ ಬದುಕನ್ನು ಸವಿಸಬೇಕೆ? ಸರಕಾರ ಸಮಾಜ ಇವರತ್ತ ಗಮನ ಹರಿಸದಿದ್ದರೆ ಘೋರ ಅನ್ಯಾಯವಾದೀತು! ಕನ್ನಡಾಂ ಬೆಯ ಹಿಡಿಶಾಪಕ್ಕೆ ಗುರಿಯಾಗಬೇಕಾದೀತು! ಸಿಂಧೂರಲ್ಲಿ ವಾಲ್ಮೀಕಿ ಸಮಾಜಕ್ಕೆ ಸೇರಿದ ಕುಟುಂಬ ಇದೊಂದೆ. ಈಗ ಈ ಕುಟುಂಬಕ್ಕೆ ಸೇರಿದ ಆಸ್ತಿ ಒಂದುವರೆ ಎಕರೆ ಜಮೀನು ಮಾತ್ರ ಅದೂ ಮಹಾರಾಷ್ಟ್ರ ಸರಕಾರ ಸ್ವಾಧೀನಪಡಿಸಿಕೊಂಡಿದೆ. ಸಿಂಧೂರದಿಂದ ಲಕ್ಷ್ಮಣ ನಿಗೆ ಹೆಸರುಬರಲಿಲ್ಲ. ಆದರೆ ಲಕ್ಷ್ಮಣನಿಂದ ಸಿಂಧೂರಕ್ಕೆ ಕೀರ್ತಿ ಬಂದದ್ದು. ಇದಾದರೂ ಸರಕಾರದ ಗಮನದಲ್ಲಿರಬೇಕು.

ಬೀಳಗಿ ತಾಲೂಕಿನ ತೆಗ್ಗಿಯ ಗ್ರಾಮದ ಹತ್ತಿರ ಒಂದು ಗುಡ್ಡ ಅಲ್ಲಿ ಕಪ್ಪರದ ಪಡಿಯವ್ವನ ಗುಡಿ. ಅದು ಪವಿತ್ರಸ್ಥಾನ. ಆದರೆ ಇವನಿಗೆ ಅದು ಮೃತ್ಯು ತಾಣವಾಯಿತು. ಸ್ವಜನರ ಮೋಸದಿಂದಲೆ ಪೊಲೀಸರ ಗುಂಡಿಗೆ ಇಲ್ಲಿಯೇ ಬಲಿಯಾದ. ೧೧ ಜುಲೈ ೧೯೨೨ರಂದು ವೀರಸ್ವರ್ಗ ಸೇರಿದ. ಆಗ ಅವನಿಗೆ ಕೇವಲ ೨೪ವಯಸ್ಸು. ಯಾರಿಗೂ ಮೋಸ, ಅನ್ಯಾಯ ಮಾಡಲಿಲ್ಲ. ಆದರೆ ಅವನಿಗೆ ಅದು ತಪ್ಪಲಿಲ್ಲ. “ಸರ್ವೆ ಜನಾಃ ಸುಖಿನೋಭವಂತು” ಎಂಬ ಮಂತ್ರವನ್ನು ಪಠಿಸುತ್ತ ಮಹಾತ್ಮರ ದಾರಿಯಲ್ಲಿ ನಡೆದು, ಪ್ರಾಮಾಣಿಕ ಪ್ರಯತ್ನದಿಂದ ದೇಶದ ಸಮಾಜದ ಸೇವೆ ಮಾಡುವುದೆ, ಸ್ವಾತಂತ್ರಕ್ಕಾಗಿ ಹೋರಾಡಿದ ವೀರ ಸಿಂಧೂರ ಲಕ್ಷ್ಮಣನಿಗೆ ಸಲ್ಲಿಸುವ ನಿಜವಾದ ಗೌರವ.

ಧರ್ಮಾಧರ್ಮದ ಬಗ್ಗೆ ಪ್ರಜ್ಞೆಯುಳ್ಳವ. ಅಧರ್ಮದ ಶೌರ್ಯ ಅಧಃಪತನಕ್ಕೆ ಕಾರಣ. ಆದರೆ ಇವನ ಶೌರ್ಯ ಧರ್ಮದ ಸಹಭಾಗಿತ್ವದಲ್ಲಿ ಸಾಗಿ ಸಾರ್ಥಕ ಬಾಳಿಗೆ ಬೆಳಕು ನೀಡಿದೆ. ಆ ಭವ್ಯದಿವ್ಯಬೆಳಕಲ್ಲಿ ಕೀರ್ತಿ ಬಾವುಟದ ಆರೋಹಣ. ಇವನು ಬುದ್ದಿ, ಬಲ, ಧೈರ್ಯ ದಾಯಕನಾದ ತುಳಸಿಗಿರಿ ಆಂಜನೇಯನ ಪರಮಭಕ್ತ. ಕೊರಳಲ್ಲಿ ಸದಾ ಮಾರುತಿಯ ತಾಯಿತ. ಇವನ ತಾಯಿ ತಾಯಿಯ ತವರೂರು ಶೂರ್ಪಾಲಿ (ಮರನೂರು).. ಇದು ಕೃಷ್ಣೆಯ ತಟದಲ್ಲಿದೆ. ಇಲ್ಲಿ ಗಂಗೆಯೇ ಪ್ರತ್ಯಕ್ಷಳಾಗಿ ಮರದ ಬಾಗಿಣಕೊಟ್ಟಳೆಂಬ ಪ್ರತೀತಿ ಇದೆ. ಆದ್ದರಿಂದ ಇದಕ್ಕೆ ಮರನೂರು ಎಂಬ ಹೆಸರು ಬಂದದ್ದು. ಶೂರ್ಪಾಲಿ ಎಂತಲೂ ಕರೆಯುತ್ತಾರೆ. ಅದು ಇದೇ ಅರ್ಥವನ್ನು ನೀಡುತ್ತದೆ. ಅಲ್ಲಿ ಶ್ರೀಲಕ್ಷ್ಮೀ ನರಸಿಂಹನು ಕ್ಷೇತ್ರದೇವ. ಅದಕ್ಕಾಗಿಯೇ ಇವನ ತಾಯಿಯ ಹೆಸರು ನರಸಮ್ಮ. ಅವಳು ಮದುವೆಯಾಗಿ ಸಿಂಧೂರ ಸೇರಿದ್ದರಿಂದ ಇವನಿಗೆ ನರಸಿಂಹನೆಂಬ ಹೆಸರು ತಪ್ಪಿತು. ಅವನ ಹೆಸರು ಇಡಲಿಲ್ಲ, ಆದರೆ ಅವನ ಅವತಾರದ ಉದ್ದೇಶ ಇವನನ್ನು ಬಿಡಲಿಲ್ಲ. ಪಡೆದದ್ದನ್ನು ಪಿಡಿದುಕೊಂಡೇ ಪ್ರಗತಿಯ ಪಥವನ್ನು ಸುಗಮಗೊಳಿಸಿದ. ಅನ್ಯರಿಗೆ ಆದರ್ಶನಾದ.  ಕೀರ್ತಿ ಶಿಖರದ ತುತ್ತ ತುದಿಯನ್ನು ತುಲುಪಿದ. ಸಾಧಿಸಬೇಕಾದದ್ದನ್ನೆಲ್ಲ ಚಿಕ್ಕ ವಯಸ್ಸಿನಲ್ಲಿಯೇ ಸಾಧಿಸಿ ಇಹಲೋಕ ಯಾತ್ರೆ ಮುಗಿಸಿದ. ಇವನ ಸದ್ಭಾವನೆ, ಶೌರ್ಯ, ಕೀರ್ತಿ, ಹೃದಯ ವಂತಿಕೆಯನ್ನು ಕಂಡ ಭಗವಂತ ಇವನನ್ನು ತನ್ನೊಂದಿಗೆ ಕರೆದೊಯ್ದು ತನ್ನ ಲೋಕದ ಅವಶ್ಯಕತೆಯನ್ನು ತೀರಿಸಿಕೊಂಡಿರಬಹುದು. ವೀರಸಿಂಧೂರ ಲಕ್ಷ್ಮಣ ಎಲ್ಲರ ಕಣ್ಣಿಂದ ದೂರಾದ. ಆದರೆ ಹೃದಯದಿಂದಲ್ಲ. ಅವನು ಎಂದೆಂದಿಗೂ ಅಮರ.

* * *

ಕರ್ನಾಟಕದಲ್ಲಿ ಮೊದಲಿನಿಂದಲೂ ನಡೆಯುತ್ತ ಬಂದ ಎಲ್ಲ ಯುದ್ಧಗಳಲ್ಲಿ ನಾಯಕ ಜನಾಂಗದವರೇ ಹೆಚ್ಚಾಗಿ ಸೈನಿಕರಾಗಿ ದುಡಿದದ್ದು ಐತಿಹಾಸಿಕ ಸತ್ಯ. ಕೆಲವರು ಪಾಳೆಯಗಾರರೂ ದೊರೆಗಳೂ ಆಗಿದ್ದರು. ಈಗಲೂ ಈ ಜನಾಂಗದ ಜನರಲ್ಲಿ ಹರಿಯುತ್ತಿರುವುದು ವೀರರಕ್ತ. ಇವರು ತುಂಬಾ ಸ್ವಾಭಿಮಾನಿಗಳು. ಅಭಿಮಾನ ಧನರು. ಮಾನ ಮರ್ಯಾದೆಗಳ ಪ್ರಶ್ನೆ ಬಂದಾಗ ಪ್ರಾಣವನ್ನು ಅರ್ಪಿಸಬಲ್ಲ ಕೆಚ್ಚೆದೆಯವರು. ಆದುದರಿಂದಲೇ ಇವರನ್ನು ಜನರು ನಾಯಕ ರೆಂದು ಗೌರವಿಸಿದ್ದಾರೆ.
ಬಸವರಾಜ ಕಟ್ಟೀಮನಿ