ಉಳ್ಳವರಿಗೆ ಸಿಂಹಸ್ಪಪ್ನವಾಗಿ, ಇಲ್ಲದವರಿಗೆ ಆತ್ಮೀಯನಾಗಿ, ಅಶಿಕ್ಷಿತನಾದರೂ ಅಸಂಸ್ಕೃತ ವ್ಯಕ್ತಿಯಾಗಿರದ, ಕಾಡುವಾಸಿಯಾಗಿದ್ದರೂ ನಾಡಿನ ಜನರಿಗಿಂತ ಉನ್ನತ ಮಟ್ಟದ ನಡೆ-ನುಡಿಯ ಹೃದಯವಂತ ವ್ಯಕ್ತಿ ಸಿಂಧೂರ ಲಕ್ಷ್ಮಣ.

ಆಗಿನ ಜತ್ತ ಸಂಸ್ಥಾನದ ಸಿಂಧೂರಿನ ಸಾಬಣ್ಣ ಹಾಗೂ ನರಸವ್ವ ಇವರ ಮಗನಾದ ಲಕ್ಷ್ಮಣ ಬಡತನದಲ್ಲಿ ಬೆಳೆದರೂ ಗುಣದಲ್ಲಿ ಸಿರಿವಂತನಾಗಿದ್ದ. ಅಶಿಕ್ಷಿತನಾಗಿದ್ದರೂ ಸುಶಿಕ್ಷಿತರಲ್ಲಿ ಇರಬೇಕಾದ ಅನೇಕ ಒಳ್ಳೆಯ ಗುಣಗಳು ಅವನಲ್ಲಿದ್ದವು ಎಂದು ತಿಳಿದು ಬರುತ್ತದೆ. ಲಕ್ಷ್ಮಣ ದೇಶಭಕ್ತನಾಗಿದ್ದ, ಬ್ರಿಟೀಷರ ವಿರುದ್ಧ ಹೋರಾಡಿದನು. ಮಾನವನಲ್ಲಿ ಇರಬೇಕಾದ ಅತಿ ಮುಖ್ಯಗುಣ ‘ಪರೋಪಕಾರ’ ಲಕ್ಷ್ಮಣನಲ್ಲಿ ಹಾಸುಹೊಕ್ಕಾಗಿತ್ತು. ಜೀವನ ದುದ್ದಕ್ಕೂ ಪರೋಪಕಾರ ಮಾಡುತ್ತ ಬಂದ ಲಕ್ಷ್ಮಣ ಎಂದೂ ಅನ್ಯಾಯವನ್ನು ಸಹಿಸಿದ ವನಲ್ಲ. ನಮ್ಮ ವೇದಗಳಲ್ಲಿ ಪರೋಪಕಾರದ ಬಗ್ಗೆ ಹೇಳಿದ ‘ಪರೋಪಕಾರಾರ್ಥಾಯ ಇದಂ ಶರೀರಂ’ ಎಂಬ ಮಾತಿನಲ್ಲಿ ಮಾನವ ಜನ್ಮದ ಅತಿಮುಖ್ಯವಾದ ಗುಣಗಳಲ್ಲಿ ‘ಪರೋಪಕಾರ’ವೂ ಒಂದು ಎಂಬುದನ್ನು ತೋರಿಸುತ್ತದೆ. ಇಂತಹ ಗುಣಲಕ್ಷ್ಮಣನಲ್ಲಿದ್ದ ಕಾರಣ ಅವನು ಒಬ್ಬ ಆದರ್ಶ ವ್ಯಕ್ತಿ ಎಂದು ಹೇಳುವುದರಲ್ಲಿ ತಪ್ಪಿಲ್ಲ. ಲಕ್ಷ್ಮಣನಿಗೆ ತನ್ನದೇ ಆದ ಬಂಧು – ಬಳಗವಿದ್ದಾಗ್ಯೂ ಅದಕ್ಕೆ ಜೋತು ಬೀಳದೆ ಬಡವರಿಗೆ ದೀನ-ದಲಿತರಿಗೆ ದುರ್ಬಲರಿಗೆ ಸಹಾಯ ಮಾಡಿದ್ದನ್ನು ನೋಡಿದರೆ ಅವನು ಎಂತಹ ಪರೋಪಕಾರಿ ಎಂದು ತಿಳಿಯಬಹುದು. ದುರುಳ ಸಿರಿವಂತರಿಂದ ಸುಲಿದ ಹಣವನ್ನು ಎಂದೂ ತನಗಾಗಿ ಇಟ್ಟುಕೊಳ್ಳದ ಲಕ್ಷ್ಮಣ ಅದನ್ನು ನೊಂದ ಜನರಿಗೆ ಹಂಚಿಬಿಡುತ್ತಿದ್ದ ಎಂಬುದನ್ನು ನೋಡಿದರೆ ಆ ದಿನಗಳಲ್ಲಿಯೇ ಸಮಾಜವಾದದ ಕನಸು ಕಂಡ ಮಾನವತಾವಾದಿ ಎಂದು ತಿಳಿದುಬರುತ್ತದೆ. ಲಕ್ಷ್ಮಣನು ನೊಂದ ಜನರಿಗೆ ದುರ್ಬಲರಿಗೆ ಸಹಾಯ ಮಾಡುತ್ತಿದ್ದ ಎನ್ನುವುದರ ಕುರಿತು ಸಾಕಷ್ಟು ಕಥೆಗಳಿವೆ.

ಉಮರಾಣಿಯ ಒಂದು ಹೊಲದಲ್ಲಿ ಬಹಳ ಕರಿಕೆ ಬೆಳೆದಿತ್ತು. ಲಕ್ಷ್ಮಣ ನಿತ್ಯ ಬಂದು ನಟ್ಟು ಕಡಿಯುತ್ತಿದ್ದನಂತೆ. ಒಂದು ತಿಂಗಳಲ್ಲಿ ಅಂದಾಗಿ ನಟ್ಟು ಕಡಿದದ್ದನ್ನು ನೋಡಿ ಜನ ದಂಗಾದರು. ಇದರಿಂದ ಅವನಿಗೆ ದೊಡ್ಡ ಉಡುಗೊರೆ ಹಾಗೂ ಹಣ ದೊರಕಿತು. ಲಕ್ಷ್ಮಣ ವಾಪಸ್ ಊರಿಗೆ ಬರುವಾಗ ದಾರಿಯಲ್ಲಿ ಒಬ್ಬ ಬಡವ ತನ್ನ ಮಡದಿ ಮಕ್ಕಳು ಉಪವಾಸ ವಿದ್ದ ಬಗ್ಗೆ ಹೇಳಿ ಬೇಡಿಕೊಂಡಾಗ ತನ್ನ ಹಣವನ್ನೆಲ್ಲ ಅವನ ಉಡಿಯಲ್ಲಿಟ್ಟು ತನ್ನ ಊರಿಗೆ ಬರುತ್ತಾನೆ. ಮನೆಯಲ್ಲಿ ತಾಯಿ ಹಣ ಎಲ್ಲಿ ಎಂದು ಹೇಳಿದಾಗ ಲಕ್ಷ್ಮಣ ಹಣ ಕಳೆದವು ಎಂದು ಹೇಳುತ್ತಾನೆ.

ಇದೇ ರೀತಿ ಒಮ್ಮೆ ಕೆರೆಯ ಕೆಲಸ ನಡೆದಿತ್ತು. ದಿನನಿತ್ಯ ಮುಂಜಾನೆ ಬೇಗ ಬಂದು ಮೈಮುರಿದು ಕೆರೆಒಡ್ಡ ಹಾಕಿ ನಡೆಯುತ್ತಿದ್ದ. ವಾರಕ್ಕೊಮ್ಮೆ ದೊಡ್ಡ ಮೊತ್ತದ ಹಣ ಪಡೆದು ಊರಿನ ದಾರಿ ಹಿಡಿಯುತ್ತಿದ್ದ. ದಾರಿಯಲ್ಲಿ ಬರುವಾಗ ಬೆಟ್ಟಿಯಾಗುತ್ತಿದ್ದ ಬಡವರಿಗೆ, ಅಸಹಾಯಕರಿಗೆ ನೊಂದವರಿಗೆ ಹಣ ಕೊಟ್ಟು ಮನೆಗೆ ಬರುತ್ತಾನೆ. ವಾರದ ಗಳಿಕೆಯನ್ನು ಮನೆಯಲ್ಲಿ ಕೇಳಿದಾಗ ದಾರ್ಯಾಗ ಕಳೆದವು ಎಂದು ದೊಡ್ಡ ಸುಳ್ಳನ್ನು ಹೇಳುತ್ತಿದ್ದ. ಇಂತಹ ಘಟನೆಗಳನ್ನು ನೋಡಿದರೆ ಲಕ್ಷ್ಮಣ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ ಮತ್ತು ಎಂತಹ ಹೃದಯವಂತ ಎಂಬುವುದು ಹಾಗೂ ಇದ್ದುದರಲ್ಲಿಯೇ ಹಂಚಿ ತಿನ್ನೋಣ ಎಂಬ ಅತ್ಯಂತ ದೊಡ್ಡ ಗುಣವನ್ನು ಬಡವನಾದ ಲಕ್ಷ್ಮಣನಲ್ಲಿ ನಾವು ಕಾಣಬಹುದು.

ಒಮ್ಮೆ ಸಿಂಧೂರಿನಲ್ಲಿ ಡೊಳ್ಳಿ ಮನೆತನದ ಒಬ್ಬ ಮುದುಕಿಯ ಮಕ್ಕಳು ಆಕೆಯನ್ನು ಮುಪ್ಪಿನಲ್ಲಿ ನೋಡದೆ ಕಡೆಗಣಿಸಿ ಆಕೆಯು ಹೊಟ್ಟೆಗೂ ಪರದಾಡುವ ಸ್ಥಿತಿ ತಂದೊಡ್ಡಿದ್ದರು. ಮುದುಕಿ ದೂರನ್ನು ಲಕ್ಷ್ಮಣನಲ್ಲಿಗೆ ಕೊಂಡೊಯ್ದಳು ಲಕ್ಷ್ಮಣ ಆಕೆಯ ಮಕ್ಕಳನ್ನು ಕರೆಯಿಸಿ ಕೇಳಿದಾಗ ಅವರು ‘ಕೇಳಲು ನೀನ್ಯಾರು’ ಎಂದಾಗ ಅವರನ್ನು ಚೆನ್ನಾಗಿ ಥಳಿಸಿ ಬುದ್ದಿ ಹೇಳಿದನು. ಅವರು ತಪ್ಪೊಪ್ಪಿಕೊಂಡು ತಾಯಿಯನ್ನು ಜೋಪಾನ ಮಾಡಿದರು. ಈ ಘಟನೆಯನ್ನು ನೋಡಿದಾಗ ಲಕ್ಷ್ಮಣ ದುರ್ಬಲರ, ನೊಂದವರ ತೊಂದರೆಗಳನ್ನು ತೊಲಗಿಸುವಲ್ಲಿ ಶ್ರಮಿಸುತ್ತಿದ್ದ ಹಾಗೂ ‘ಉಪಕಾರ’ ಮಾಡುತ್ತಿದ್ದ ಎಂಬುದನ್ನು ಕಾಣಬಹುದು.

ಒಮ್ಮೆ ಕೋಟ್ಯಾಳ ದಾರಿಯಲ್ಲಿ ಹೋಗುವಾಗ ಹೊಟ್ಟೆ ಹಸಿದಿತ್ತು. ದಾರಿಯಲ್ಲಿ ಒಬ್ಬ ಹೆಣ್ಣುಮಗಳು ಬುತ್ತಿ ತೆಗೆದುಕೊಂಡು ಬರುತ್ತಿದ್ದಳು. ಲಕ್ಷ್ಮಣ ಹಸಿವಿನಿಂದ ಕಂಗೆಟ್ಟು ಬುತ್ತಿ ಕೇಳಿದಾಗ ಅವಳು ನನ್ನ ಗಂಡ ಸಿಡುಕ ಎಂದು ಹೇಳುತ್ತಾಳೆ. ಆಗ ನಾನು ನಿನ್ನ ಅಣ್ಣ, ನಿನಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎನ್ನುತ್ತಾನೆ. ಆಗ ಆ ಹೆಣ್ಣು ಮಗಳು ಬುತ್ತಿ ಬಿಚ್ಚಿ ಊಟಕ್ಕೆ ಕೊಡುತ್ತಾಳೆ. ಅಷ್ಟರಲ್ಲಿ ಗಂಡ ಬಂದು ಅವಳನ್ನು ಬಡಿಯ ತೊಡಗುತ್ತಾನೆ. ಇದನ್ನು ಕಂಡ ಲಕ್ಷ್ಮಣ ತನ್ನ ಹೆಸರನ್ನು ಹೇಳಿ ‘ತಪ್ಪಾಗಿದೆ’ ಎಂದಾಗ ಯುವಕ ದಂಗಾಗುತ್ತಾನೆ. ಊಟದ ನಂತರ ಲಕ್ಷ್ಮಣ ರೊಟ್ಟಿ ತುಣಕೊಂದನ್ನು ಬಿಟ್ಟಿರುತ್ತಾನೆ. ಅದರ ಕೆಳಗೆ ಬಂಗಾರ ಇಟ್ಟು ಹೋಗಿರುತ್ತಾನೆ.

ಇದೇ ರೀತಿ ಲಕ್ಷ್ಮಣನನ್ನು ಪೊಲೀಸರು ಬೆನ್ನು ಹತ್ತಿದಾಗ ಅವನು ಹೊಲದಲ್ಲಿ ಅಡ್ಡ ಬಿದ್ದು ಒಡುತ್ತಿದ್ದ ದಾರಿಯಲ್ಲಿ ಒಬ್ಬ ಅತ್ತೆ ಮನೆ ಸೊಸೆ ಬರುತ್ತಿರುತ್ತಾಳೆ. ಆಗ ಲಕ್ಷ್ಮಣ ತನ್ನನ್ನು ಉಳಿಸಲು ಕೇಳಿಕೊಂಡಾಗ ಅವಳು ಹೊಲದಲ್ಲಿಯೆ ಮೆದೆ ಹೊಚ್ಚಿ ಉಳಿಸಿದಾಗ ಲಕ್ಷ್ಮಣ ಹೊನ್ನು, ಆಭರಣ ಮುಂದಿಟ್ಟ. ಆ ಹೆಣ್ಣು ಮಗಳು “ಹೊನ್ನು ಏಕೆ?” ಹೊನ್ನು ತೆಗೆದುಕೊಂಡರೆ ಅತ್ತೆ ಏನಂದಾಳು ಅನ್ನುವಷ್ಟರಲ್ಲಿ ಅತ್ತೆ ಬಂದಳು. ಅತ್ತೆಗೆ ಲಕ್ಷ್ಮಣ ಎಂದು ಗೊತ್ತಾದಾಗ ಬಹಳ ಸಂತೋಷದಿಂದ ಬುತ್ತಿ ಬಿಚ್ಚಿ ಊಟ ಮಾಡಿಸಿದಳು. ಲಕ್ಷ್ಮಣ ಪ್ರತಿಯಾಗಿ ಹೊನ್ನು ಹಾಕಿ ದಾರಿ ಹಿಡಿಯುತ್ತಾನೆ. ಇದನ್ನು ನೋಡಿದಾಗ ಲಕ್ಷ್ಮಣನ ಬಗ್ಗೆ ಹೆಣ್ಣುಮಕ್ಕಳಿಗೆ ಇದ್ದ ಅಪಾರವಾದ ನಂಬಿಕೆಯನ್ನು ಕಾಣಬಹುದು. ಆ ದಿನಗಳಲ್ಲಿ ಹೆಣ್ಣುಮಕ್ಕಳು ಬೀಸುವಾಗ ಲಕ್ಷ್ಮಣನ ಹೆಸರಿನ ಮೇಲೆ ‘ನನ್ನಣ್ಣ ಲಕ್ಷ್ಮಣ’ ಎಂದು ಅವನ ಗುಣಗಾನ ಮಾಡುತ್ತಿದ್ದರೆಂದು ಹೇಳುವುದನ್ನು ನೋಡಿದರೆ ಲಕ್ಷ್ಮಣನಿಗೆ ನಿಜವಾಗಿಯೂ ‘ಪರನಾರಿ ಸಹೋದರ’ ಎಂಬ ಮಾತು ಅನ್ವಯಿಸುತ್ತದೆ ಮತ್ತು ಅವನ ಪರೋಪಕಾರ ಪ್ರವೃತ್ತಿಯ ಬಗ್ಗೆ ಗೊತ್ತಾಗುತ್ತದೆ.

ಮುತ್ತೂರಿನಲ್ಲಿ ಒಬ್ಬ ಮುದುಕ ಉತ್ತಮ ಕವಣೆ ಹೆಣೆದಿದ್ದ. ಅವನ ಬಳಿ ಲಕ್ಷ್ಮಣ ಹಾಗೂ ಸಂಗಡಿಗರು ಬಂದು ವಸತಿಮಾಡಿ ಕೆಲವು ದಿನ ಕಳೆದಿದ್ದರು, ಧನದಾಸೆ ಮಾಡದ ಮುದುಕ ಬಹಳ ಆಸಕ್ತಿಯಿಂದ ಕವಣೆ ಮಾಡಿ ಕೊಟ್ಟು ಕಳಿಸುತ್ತಾನೆ. ಮುದುಕನ ಋಣ ಬಹಳ ಆಯ್ತೆಂದು ಲಕ್ಷ್ಮಣ ಮುದುಕನ ಮನೆಗೆ ಹಣ ತಂದು ಕೊಟ್ಟಿಗ್ಯಾಗ ಹೂಳಿದ್ದನಂತೆ. ಮುಂದೆ ಕೆಲವು ದಿನಗಳ ನಂತರ ಮುದುಕನ ಮರಣದ ಸುದ್ದಿ ತಿಳಿದ ಲಕ್ಷ್ಮಣ ಮುದುಕನ ಮನೆಗೆ ಬಂದು ಹೊನ್ನು ಅಗಿದು ಮುದುಕಿಗೆ ಕೊಟ್ಟು ಬರುತ್ತಾನೆ. ಇದರಿಂದ ಉಪಕಾರ ಮಾಡಿದವರನ್ನು ಮರೆಯದೇ ಅವರಿಗೆ ‘ಪ್ರತ್ಯುಪಕಾರ’ ಮಾಡುತ್ತಿದ್ದ ‘ಕೃತಜ್ಞ’ ವ್ಯಕ್ತಿಯಾಗಿದ್ದ ಎಂದು ತಿಳಿದು ಬರುತ್ತದೆ.

ಒಮ್ಮೆ ಅಡವಿಯಲ್ಲಿ ಸುತ್ತಾಡುವಾಗ ಊಟಕ್ಕೆ ಏನೂ ಸಿಗದಾಗ ಲಕ್ಷ್ಮಣನ ಸಂಗಡಿಗರು ಕುರಿ ಹಿಂಡಿನಲ್ಲಿಯ ಹೋತವನ್ನು ತಿನ್ನಲು ತಂದಿದ್ದರು. ಲಕ್ಷ್ಮಣ ಅವರಿಗೆ ಬದ್ದಿ ಹೇಳಿ ಈ ರೀತಿ ಬದುಕುವ ದಾರಿ ಸರಿಯಲ್ಲ ಎಂದು ಹೇಳಿ ಬಂದ ಕುರುಬನಿಗೆ ಹೋತು ಕೊಟ್ಟ. ಕುರುಬನಿಗೆ ಸಂತೋಷವಾಗಿ ಅವಸರದಿಂದ ಕುರಿಹಿಂಡಿ ಅವರಿಗೆ ಹಾಲು ಕೊಟ್ಟಾಗ ಅವನಿಗೆ ಬೆರಳುಂಗುರ ಕೊಟ್ಟು ಹೋಗುತ್ತಾನೆ.

ಹರನಾಳದ ಒಂದು ಮನೆಯಲ್ಲಿ ದರೋಡೆ ನಡೆದಾಗ ಆ ಮನೆಯಲ್ಲಿ ಹೆಣ್ಣು ಮಕ್ಕಳು ಧರಿಸುವ ಬಂಗಾರದ ಆಭರಣಗಳನ್ನು ಬಿಟ್ಟು ಮನೆಯಲ್ಲಿನ ಹೆಚ್ಚಿನ ಬಂಗಾರ ಮಾತ್ರ ಕೊಡಲು ಹೇಳುತ್ತಾನೆ ಮತ್ತು ತಂದಂತಹ ಬಂಗಾರವನ್ನು ಬಡವರಿಗೆ ಹಂಚುತ್ತಾನೆ. ಇದರಿಂದ ಹೆಣ್ಣು ಮಕ್ಕಳ ಬಗ್ಗೆ ಇದ್ದ ಗೌರವಭಾವನೆ ಹಾಗೂ ಅವನ ಉಚ್ಛವಿಚಾರಧಾರೆ ಕಂಡು ಬರುತ್ತದೆ.

ಒಂದು ಸಲ ಹೆಬ್ಬಾಳ ದಾರಿಯಲ್ಲಿ ಮಬ್ಬು ಕವಿದಿತ್ತು. ನಿಬ್ಬಣದ ಗಾಡಿಗಳನ್ನು ಕಳ್ಳರು ತಡೆದು ಸುಲಿಗೆ ಮಾಡುತ್ತಾರೆ. ದಾರೀಲಿ ಲಕ್ಷ್ಮಣ ಕಳ್ಳರನ್ನು ಬಡಿದು ಎಲ್ಲ ಒಡವೆಗಳನ್ನು ನಿಬ್ಬಣದ ಜನರಿಗೆ ಹಂಚಿ ಕಳ್ಳರಿಗೆ ‘ದುರುಳ ಸಿರಿವಂತರನ್ನು ಸುಲಿದು ನಮ್ಮಂತೆ ಬಡವರಿಗೆ ಹಂಚಬೇಕು’ ಎಂದು ಬುದ್ದಿ ಹೇಳಿ ಕಳಿಸುತ್ತಾನೆ.

ಕೆಲವು ಸಿರಿವಂತರು ಬಡವರಿಗೆ ಹಣ ಕೊಟ್ಟ ಬಗ್ಗೆ ಖೊಟ್ಟಿ ಕಾಗದ ಬರೆಯಿಸಿಕೊಂಡಾಗ ಲಕ್ಷ್ಮಣ ಅವುಗಳನ್ನು ಸುಟ್ಟು ಹಾಕಿದ ಮತ್ತು ಬರಗಾಲ ಬಿದ್ದಾಗ ಊರ ಗೌಡ ಬಿರಾಡ ಒಪ್ಪಿಸಲು ರೈತರಿಗೆ ತಿಳಿಸಿದಾಗ ಲಕ್ಷ್ಮಣ ಅರೆಹೊಟ್ಟೆ, ಅರೆಬಟ್ಟೆ ಇರುವಾಗ ರೈತ ಬಿರಾಡ ಹ್ಯಾಂಗ ಕೊಟ್ಟಾನು ಎಂದು ಹೇಳುವುದನ್ನು ನೋಡಿದರೆ ಬಡವರ ಬಗ್ಗೆ ಇದ್ದ ಕಳಕಳಿ ಹಾಗೂ ಅವರಿಗೆ ಉಪಕಾರ ಮಾಡುವ ಗುಣ ತಿಳಿದು ಬರುತ್ತದೆ.

ಇದನ್ನು ನೋಡಿದರೆ ಲಕ್ಷ್ಮಣ ತಂದಂತಹ ಹಣ ಒಂದು ಕಡೆ ಇಡಲಿಲ್ಲ ಬಂಧುಬಳಗಕ್ಕೆ ಹಂಚಲಿಲ್ಲ ಆದರೆ ದೀನದಲಿತರ, ನೊಂದವರ ಕೈಬಿಡಲಿಲ್ಲ, ಅವರ ಕಣ್ಣೀರನ್ನು ಒರೆಸಿದನು, ಅವರಿಗೆ ಉಪಕಾರ ಮಾಡಿದ ಎಂಬುದು ಗೋಚರವಾಗುತ್ತದೆ. ಲಕ್ಷ್ಮಣನಲ್ಲಿ ಸ್ವಾರ್ಥ ವಿರಲಿಲ್ಲ ಎಂಬುವುದು ಅವನು ತನ್ನ ಮನೆ ಬಿಟ್ಟು ಬಂದ ಮೇಲೆ ಮನೆಯ ಚಿಂತೆಯಾಗಲಿ, ಮನೆಗೆ ಹೊನ್ನು, ಹಣ ಕಳಿಸುವ ಬಗ್ಗೆಯಾಗಲಿ ಯಾವತ್ತು ಯೋಚನೆ ಮಾಡದೇ ಇರುವುದು  ಕಂಡುಬರುತ್ತದೆ. ನಮ್ಮ ಸಮಾಜದ ಮೂಲ ತತ್ವಗಳಾದ ಹಂಚಿ ತಿನ್ನುವುದು, ಹೆಣ್ಣು ಮಕ್ಕಳ ಬಗ್ಗೆ ಗೌರವ ಭಾವನೆ, ಅಸಹಾಯಕರಿಗೆ ಸಹಾಯ ಮಾಡುವುದು, ಪರೋಪಕಾರ ಮುಂತಾದ ಒಳ್ಳೆಯ ಗುಣಗಳು ಲಕ್ಷ್ಮಣನಲ್ಲಿ ಕಂಡುಬರುತ್ತವೆ.

* * *