ಭಾರತವು ಮಾನವ ನಾಗರೀಕತೆಯ ತೊಟ್ಟಿಲುಗಳಲ್ಲೊಂದು. ಸಂಸ್ಕೃತಿಯು ಇತರ ಅನೇಕ ಜನತೆಗಳ ಸಂಸ್ಕೃತಿಗಳೊಂದಿಗೆ ನಿಕಟವಾಗಿ ಸಂಬಂಧಿಸಿದ ಅವುಗಳ ಬೆಳವಣಿಗೆಯ ಮೇಲೆ ಮಹತ್ವ ಹಾಗೂ ಸತ್ವಪೂರ್ಣ ಪ್ರಭಾವ ಬೀರಿದೆ. ಈ ಪರಸ್ಪರ ಸೃಷ್ಟಿಗೊಳಿಸುವ ಪ್ರತಿಕ್ರಿಯೆಯು ಅನೇಕ ಶತಮಾನಗಳಿಂದ ನಡೆದುಕೊಂಡು ಬಂದಿದ್ದರೂ ಭಾರತವು ತನ್ನ ಅನನ್ಯತೆಯನ್ನು ಕಾಯ್ದುಕೊಂಡಿದೆ. ಎಲ್ಲ ರಂಗಗಳಲ್ಲೂ ದೂರದ ದೇಶಗಳ ಸೃಜನಾತ್ಮಕ ಚಿಂತನೆಗೆ ಸ್ಪೂರ್ತಿನೀಡಿದೆ. ಪ್ರಪಂಚದ ಅನೇಕ ಇತರ ಭಾಗಗಳಲ್ಲಿ ಸಾಮಾಜಿಕ ಚಿಂತನೆಯ ಮೇಲೂ ಪ್ರಭಾವ ಬೀರಿದೆ.

ಈ ದೇಶದ ಮೇಲೆ ಅನೇಕ ಧರ್ಮೀಯರ ದಬ್ಬಾಳಿಕೆ, ಯುದ್ಧಗಳು, ಆಘಾತಗಳು ನಡೆದರೂ ಈ ಭಾರತ ಭೂಮಿ ತನ್ನ ತನವನ್ನು ಉಳಿಸಿಕೊಳ್ಳುವುದರೊಂದಿಗೆ ಅನೇಕ ಧರ್ಮೀಯರ ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ತನ್ನ ಗರ್ಭದಲ್ಲಿ ಜೀರ್ಣಿಸಿಕೊಂಡು ಮತ್ತೆ ಮತ್ತೆ ತಲೆ ಎತ್ತಿ ಎದ್ದು ನಿಂತಿದೆ. ಇಂತಹ ದೇಶ ಜಗತ್ತಿನ ಯಾವ ಮೂಲೆಯಲ್ಲಿಯೂ ಸಿಕ್ಕುವುದಿಲ್ಲ. ಮನುಕುಲಕ್ಕೆ ತನ್ನದೇ ಆದ ವಿಶಿಷ್ಟ ಸಂಸ್ಕೃತಿಯ ಪರಿಕಲ್ಪನೆ ಮಾಡಿಕೊಟ್ಟಿದೆ. ಸುಮಾರು ಇನ್ನೂರು ವರ್ಷಗಳ ವಸಾಹತು ದಬ್ಬಾಳಿಕೆಗೆ ಒಳಗಾಗಿದ್ದರೂ ಭಾರತದ ಜನ ತಮ್ಮ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿದುಕೊಂಡು ಬರುವಲ್ಲಿ ಬಹು ಯಶಸ್ವಿಯಾಗಿದ್ದಾರೆ. ಕಳೆದ ಹಲವು ನೂರು ವರ್ಷಗಳ ಭಾರತದ ಇತಿಹಾಸವು ವಸಾಹತು ಮತ್ತು ಸಾಮಂತಶಾಹಿ ದಬ್ಬಾಳಿಕೆಯಿಂದ ವಿಮೋಚನೆಗಾಗಿ ಅನೇಕ ಪೀಳಿಗೆಗಳು ನಡೆಸಿದ ಸುದೀರ್ಘ ಹಾಗೂ ವೀರ ಹೋರಾಟದ ಇತಿಹಾಸ ಈ ದೇಶಕ್ಕಿದೆ.

ಭಾರತದಲ್ಲಿ ಕ್ರಿ.ಶ. ೧೬೦೦ರಿಂದ ಪ್ರಾರಂಭವಾದ ತಮ್ಮ ಆಡಳಿತದಲ್ಲಿ ಬ್ರಿಟೀಷರು ಎಂದೂ ಕಾಣದ ಪ್ರತಿಭಟನೆಯನ್ನು ಕಂಡದ್ದು ೧೮೫೭ರ ‘ಸಿಪಾಯಿದಂಗೆ’ಯಲ್ಲಿ. ಆ ದಂಗೆಯಿಂದ ಅಪಾರ ಕಷ್ಟನಷ್ಟಗಳನ್ನು ಅನುಭವಿಸಬೇಕಾಗಿದ್ದರಿಂದ ಬ್ರಿಟೀಷರು ಅದೇ ವರ್ಷ ‘ನಿಶ್ಯಸ್ತ್ರೀಕರಣ ಕಾಯೆ್ದ’ಯನ್ನು ಜಾರಿಗೆ ತಂದ ಪರಿಣಾಮ ಈ ಕಾಯ್ದೆಯ ಪ್ರಕಾರ ಪ್ರಜೆಗಳು ಯಾವುದೇ ಬಗೆಯ ಆಯುಧಗಳನ್ನು ತಮ್ಮಲ್ಲಿ ಇಟ್ಟುಕೊಂಡರೆ ಆಗಿನ ಕಂಪನಿ ಸರ್ಕಾರಕ್ಕೆ ಸಾಕಷ್ಟು ಹಣವನ್ನು ಭರಣಾ ಮಾಡಿ ಲೈಸನ್ಸ ಪಡೆಯಬೇಕಿತ್ತು. ಇಲ್ಲವೆ ಸರ್ಕಾರಕ್ಕೆ ಆಯುಧಗಳನ್ನು ಒಪ್ಪಿಸಿ ರಹದಾರಿ ಪಡೆಯಬೇಕು. ಇದು ಆ ಕಾಯ್ದೆಯ ವ್ಯಾಖ್ಯಾನವಾಗಿತ್ತು.

ಬೇಡ ಸಮುದಾಯ ಹತಾಶಭಾವರಾಗಿ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ಕಾರಣ ಯಾವುದೇ ಕಾಯ್ದೆಗಿಂತ ಅವರಿಗೆ ಬದುಕು ಮುಖ್ಯವಾಗಿತ್ತು. ಬ್ರಿಟೀಷರ ಆ ದೊಡ್ಡ ಸಾಮ್ರಾಜ್ಯಶಾಹಿಯ ವಿರುದ್ಧ ಪ್ರತಿಭಟನೆ ಸೂಚಿಸಿದ್ದೇ ದುಡಿದು ಬದುಕುವ ಬೇಡರ ಪ್ರಮುಖ ಸಾಧನೆ. ಹಲಗಲಿಯ ಬೇಡರ ಬಂಡಾಯವೆಂದೇ ಪ್ರಸಿದ್ದಿಪಡೆಯಿತು. ಆದರೆ ಇತಿಹಾಸ ಪುಟದಲ್ಲಿ ಕಾಣಿಸಿಕೊಳ್ಳದೇ ಇದ್ದುದು ಒಂದು ಇತಿಹಾಸದ ಕ್ರೂರ ವ್ಯಂಗ್ಯ.

ಹಲಗಲಿ ಬೇಡರವಾರಸುದಾರನಾಗಿ ಬೆಳೆದು ಬ್ರಿಟೀಷರ ವಿರುದ್ಧ ಎದ್ದು ನಿಂತವರಲ್ಲಿ ಸಿಂಧೂರ ಲಕ್ಷ್ಮಣನು ಪ್ರಮುಖನಾಗಿದ್ದಾನೆ. ಲಕ್ಷ್ಮಣನ ಕುರಿತಾಗಿ ಅವನ ಕುಟುಂಬದಲ್ಲಿ ಇತರರೆಂದರೆ ಹೆಂಡತಿ ಚಂದ್ರಿ ತಾಯಿ ನರಸವ್ವ ಇಬ್ಬರು ಅಕ್ಕಂದಿರಾದ ಸತ್ಯವ್ವ ಮತ್ತು ಸಕ್ರವ್ವ ಮಗ ಸಾಬಣ್ಣ ಹೀಗೆ ಇರುವ ಕುಟುಂಬಕ್ಕೆ ಲಕ್ಷ್ಮಣ ಮನೆ ಒಡೆಯ. ಲಕ್ಷ್ಮಣನ ಕಾಲಕ್ಕೆ ಸಿಂಧೂರ ಜತ್ತ ಸಂಸ್ಥಾನಕ್ಕೆ ಸೇರಿದ ಒಂದು ಗ್ರಾಮ. ಅದು ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿಗೆ ಒಳಪಟ್ಟಿತ್ತು. ಲಕ್ಷ್ಮಣನ ಕುರಿತಾಗಿ ನಾಲ್ಕಾರು ಜನ ನಾಟಕಕಾರರು ಬರೆದು ನಾಟಕವನ್ನು ಓದಿದಾಗ ಲಕ್ಷ್ಮಣನ ಬದುಕನ್ನು ಕುರಿತು ಯಾರೂ ಆಸಕ್ತಿಯಿಂದ ಅಭ್ಯಾಸ ಮಾಡಿಯಾಗಲಿ ಅಥವಾ ಅವನ ಜೀವನ ವೃತ್ತಾಂತದ ಸುತ್ತ ಸಂಶೋಧನೆಯಾಗದೇ ಇರುವುದು ಒಂದು ಬಹುದೊಡ್ಡ ದುರಂತ. ಯಾರದೇ ಬದುಕಿನ ನೈಜತೆ ತಿಳಿಯದೇ ಅಂತೆ ಕಂತೆಗಳ ಆಧಾರದ ಮೇಲೆ ಸಾಹಿತ್ಯ ಸೃಷ್ಟಿಸುವುದು ಸರಿಯಾದ ಅಭ್ಯಾಸವಾಗದೇ ಹೋಗಬಹುದು. ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ನಾಗರಾಳದ ಖ್ಯಾತ ನಾಟಕಕಾರರಾದ ಶ್ರೀ ಕಂಠಿ ಹನುಮಂತರಾಯರು ತಮ್ಮ ಸಿಂಧೂರ ಲಕ್ಷ್ಮಣ ನಾಟಕ ಕೃತಿಯಲ್ಲಿ ತಾವು ಸ್ವತಃ ಸಿಂಧೂರಿಗೆ ಹೋಗಿ ಅಲ್ಲಿನ ಅವರ ತಂದೆಯವರಾದ ಮಹಾದೇವಪ್ಪ ಗೌಡರೇ ಲಕ್ಷ್ಮಣನ ಕಾಲಕ್ಕೆ ಸಿಂಧೂರಿನ ಪೊಲೀಸ್ ಪಾಟೀಲ್‌ರಾಗಿದ್ದರೆಂದು ಹಾಗೂ ಲಕ್ಷ್ಮಣನ ಒಡನಾಡಿಯಾದ ಶ್ರೀ ಪರಸಪ್ಪ ಆರೇರ ಇವರನ್ನು ಸಂದರ್ಶಿಸಿ ಅವರಿಂದ ಮಾಹಿತಿ ಸಂಗ್ರಹಿಸಿದ್ದು, ಲಕ್ಷ್ಮಣನಿಗೆ ತಂಗಿಯೇ ಇರಲಿಲ್ಲ. ಅವನಿಗೆ ಇಬ್ಬರು ಸತ್ಯವ್ವ ಮತ್ತು ಸಕ್ರವ್ವವೆಂಬ ಅಕ್ಕಂದಿರು. ಸತ್ಯವ್ವನ ಮಗನೇ ನರಸಪ್ಪ ಇನ್ನೊಬ್ಬಾಕೆಯನ್ನು ನೇಸೂರಿಗೆ ಕೊಟ್ಟಿದ್ದರು ಅವಳ ಮಗಳೇ ಚಂದ್ರವ್ವ ಲಕ್ಷ್ಮಣನ ಹೆಂಡತಿ. ಹೀಗೆ ಹೆಂಡತಿ ಇದ್ದರೂ ಇಲ್ಲದ ಕ್ರೈಸ್ತ ಕನ್ಯೆಯೋರ್ವಳನ್ನು ಸೃಷ್ಟಿಸಿಕೊಂಡು ಲಕ್ಷ್ಮಣನ ಹೆಂಡತಿಯನ್ನು ಕೈಬಿಟ್ಟು ಅವನ ಚರಿತ್ರೆಯ ಬಗೆಗೆ ಸಂಶಯಮೂಡಿಸುವುದು ನೈಜ ಇತಿಹಾಸವಾಗದು.

ಲಕ್ಷ್ಮಣನ ಬದುಕಿನ ಕಾಲವು ಪ್ರಥಮ ಜಾಗತಿಕ ಯುದ್ಧ ನಡೆದಾಗ ಮುಕ್ತಾಯಗೊಂಡ ಕಾಲವೆನ್ನುತ್ತಾರೆ. ಅವನ ಅಂತ್ಯ ಕ್ರಿ.ಶ. ೧೯೨೧ರಲ್ಲಿ ಎಂದಾಗ ಓರ್ವ ಮನುಷ್ಯನ ಜೀವಿತಾ ವಧಿಯು ೬೦ ವರ್ಷ ಎಂದರೆ ೧೯೬೦ರಿಂದ ೧೯೨೧ರ ಅವಧಿಯು ಅವನು ಜೀವಿಸಿದ ಕಾಲವೆನ್ನಬಹುದು. ಆ ಕಾಲದಲ್ಲಿ ಸಿಂಧೂರಿನ ವಾಲೀಕಾರನಾಗಿದ್ದನೆಂದು ತಿಳಿಸುತ್ತಾರೆ. ಲಕ್ಷ್ಮಣನು ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದವನೇ ಅಥವಾ ದರೋಡೆಕೋರನೇ ಎಂದು ತಿಳಿಸುವುದು ಕಷ್ಟದ ಕೆಲಸ. ಹೀಗಾಗಿ ಅವನ ಬದುಕನ್ನು ಕುರಿತು ಆಳವಾದ ಅಧ್ಯಯನದಿಂದ ಸಂಶೋಧನೆಯ ಫಲವಾಗಿ ಲಕ್ಷ್ಮಣನ ಬದುಕನ್ನು ನಿರ್ಧರಿಸಬಹುದೇ ವಿನಃ ಕೇವಲ ಜಾನಪದಗಳ, ಹಾಡುಗಳ ಮುಖಾಂತರ ಸಾಧ್ಯವಾಗದು. ಇಂದಿಗೂ ನಾಗರಾಳ ಗುಡ್ಡದಲ್ಲಿ ಗುಹೆಯಿದ್ದ ಲಕ್ಷ್ಮಣನು ನಾಗರಾಳಗುಡ್ಡದಲ್ಲಿ ನಿರಾಳವಾಗಿ ಓಡಾಡುತ್ತಿದ್ದನೆಂದು, ತೆಗ್ಗಿ ನಾಯಕ (ವೆಂಕಪ್ಪಗೌಡ) ಹಾಗೂ ವಾಲೀಕಾರ ಶಿವಪ್ಪನ ಕುತಂತ್ರದಿಂದ ಲಕ್ಷ್ಮಣನು ಸಾಯುವುದು ವಾಲೀಕಾರ ಸೋಮನ ಬಂದೂಕಿನ ಗುಂಡಿನಿಂದ ಎಂದು ಕೃತಿಕಾರರು ನಾಟಕ ರಚಿಸಿದ್ದು ಕಂಡುಬರುತ್ತದೆ. ಲಕ್ಷ್ಮಣನ ಗೆಳೆಯನೆಂದು ಹೇಳುವ ಜಾನಮಟ್ಟಿಯ ಚಿಗರಿ ಯಮನಪ್ಪನಿಂದ ವಿಷಯ ಸಂಗ್ರಹಿಸಿದೆ ಎಂದೂ ಹೇಳುತ್ತಾರೆ. ನಾಟಕ ಪೂರ್ವಾರ್ಧಕ್ಕೆ ಬೇಕಾಗುವಷ್ಟು ವಿಷಯವನ್ನು ಸಿಂಧೂರಿನಲ್ಲಿ ಸಂಗ್ರಹಿಸಿದೆ ಇನ್ನು ಲಕ್ಷ್ಮಣನ ಜೀವನದ ಉತ್ತರಾರ್ಧವು ನೆಡೆದದ್ದು ನಾಗರಾಳದ ಸುತ್ತಲಿನ ಪ್ರದೇಶದಲ್ಲಿ ತೆಗ್ಗಿ ವಾಲೀಕಾರ ಶಿವಪ್ಪ ನಿಂದ ಕೇಳಿ ತಿಳಿದುಕೊಂಡೆ ಎಂದಿದ್ದಾರೆ. ಸಿಂಧೂರ ಲಕ್ಷ್ಮಣನ ಕುರಿತಾಗಿ ಲೇಖಕರು ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಸುತ್ತಾಡಿದ್ದು ಅಲ್ಲದೇ ಅನೇಕರಿಂದ ವಿಷಯ ಸಂಗ್ರಹಿಸಿದ್ದು ಇದು ಸ್ಪಷ್ಟ ಸಂಶೋಧನಾತ್ಮಕ ಸತ್ಯವಾದ ಸಂಗತಿಯನ್ನೇ ಅವರು ಕೇಳಿ ತಿಳಿದು ಲಕ್ಷ್ಮಣನ ಇತಿಹಾಸದ ವೃತ್ತಾಂತ ಕುರಿತು ನಾಟಕ ರಚಿಸಿದ್ದಾರೆ.

ಪ್ರಕೃತಿಯಲ್ಲಿ ಒಂದು ಕಟ್ಟಿರುವಿ ಮುಟ್ಟಿದರೆ ಅದು ಮನುಷ್ಯನನ್ನು ಕಚ್ಚಿ ಹಿಡಿದು ಬಿಡುತ್ತದೆ. ಆಕಸ್ಮಾತ್ ಇರುವೆ ಹಿಡಿದು ಜಗ್ಗಿದರೆ ಅದರ ದೇಹ ಕಿತ್ತು ಕೈಗೆ ಬಂದರೂ ಅದರ ಚಂಡು ಮಾತ್ರ ಮನುಷ್ಯನನ್ನು ಕಚ್ಚಿ ಹಿಡಿದಿರುತ್ತದೆ. ಅಂಥ ಚಿಕ್ಕ ಇರುವೆಗೂ ತನ್ನ ಅಸ್ತಿತ್ವ ಹಾಗೂ ಜೀವನ ಉಳಿಸಿಕೊಳ್ಳಲು ಹೋರಾಡುತ್ತಿರುವಾಗ ಇನ್ನು ಎಲ್ಲ ಪ್ರಾಣಿಗಳಲ್ಲಿ ಮನುಷ್ಯ ಪ್ರಾಣಿ ಶ್ರೇಷ್ಠವೆನ್ನುವಾಗ ತನ್ನ ಬದುಕಿನ ಅಸ್ತಿತ್ವಕ್ಕೆ ಹೋರಾಡುವದು ಸಹಜ.  ಪ್ರಕೃತಿಯ ಗುಣ ಧರ್ಮವೆನ್ನಬಹುದು. ಹಾಗೆಯೇ ಲಕ್ಷ್ಮಣನೊಬ್ಬ ಹಿಂದುಳಿದ ಸಮುದಾಯ ದಲ್ಲಿ ಜನಿಸಿದರೂ ಅವನಲ್ಲಿ ಹರಿಯುತ್ತಿದ್ದ ರಕ್ತ ಸ್ವಾಭಿಮಾನದ್ದು. ಅವನು ಯಾರ ಹಂಗಿ ನಲ್ಲಾಗಲೀ ಯಾರ ಛತ್ರ ಚಾಮರಗಳಲ್ಲಾಗಲಿ ಬದುಕಿದ ವ್ಯಕ್ತಿಯಾಗಿರಲಿಲ್ಲವೆಂಬುದು ಅವನ ದೈನಂದಿನ ಬದುಕನ್ನು ತಿಳಿದಾಗ ನಮಗೆ ಸಹಜವಾಗಿ ಅವನ ಸಂಘರ್ಷದ ಬದುಕು ಯಾವ ಅವಮಾನವನ್ನಾಗಲಿ ಸಹಿಸುತ್ತಿರಲಿಲ್ಲ. ಅವನ ಸೋದರ ಅಳಿಯಂದಿರಾದ ನರಸ್ಯಾ, ಸಾಬು, ಗೋಪಾಲಿ ಹೊಟ್ಟೆಗೆ ಏನೂ ಸಿಗದಾಗ ಹಸಿವು ಸಂಕಟ ತಾಳಲಾರದೇ ದರೋಡೆ ಮಾಡಿದ ಸುದ್ದಿ ಗೊತ್ತಾಗಿ ಲಕ್ಷ್ಮಣ ಬೆಂಕಿಯಾಗಿ ಹೊಟ್ಟೆಗೆ ಹಿಟ್ಟಿಲ್ಲ ಅಂದ್ರ ಉಪವಾಸ ಬಿದ್ದು ಸಾಯಬೇಕು. ಬೇರೆಯವರ ತಲೆ ಒಡೆದು ಹೊಟ್ಟೆ ತುಂಬಿಸಿಕೊಳ್ಳುವ ವಿಚಾರ ಒಳ್ಳೆಯದಲ್ಲ ಎಂದು ಕಿಡಿಕಾರಿ ಹಸಿದೀನಿ ಅಂತ ಇನ್ನೊಬ್ಬರ ಕೈಯ್ಯಗಿನ ರೊಟ್ಟಿ ಕಸಗೊಳ್ಳು ವುದು ತಪ್ಪು ಎಂದು ಹೇಳುವಾಗ ಅವನ ಹೆಂಡತಿ ಚಂದ್ರಿ, ಬರಗಾಲದಾಗ ಬಡವರು ಹಸಿದು ವಕವಕ ಬಾಯಿಬಿಡುವಾಗ ಸುಖಾ ಉಂಡು ತಿಂದು ತೇಗುತ್ತಿರುವ ಹಣದ ಮದದಿಂದ ಬೀಗುತ್ತಿರುವ ಸಿರಿವಂತರ ಮನೆ ದರೋಡೆ ಮಾಡಿ ಬಡವರ ಹೊಟ್ಟೆಗೆ ಹಾಕುವುದು ತಪ್ಪಲ್ಲವೆಂದು ವಾದಿಸಿದಾಗ ಲಕ್ಷ್ಮಣನು ಆವೇಶದಿಂದ ಜಿಗಿದು ಗೋಡೆಗೆ ತೂಗು ಹಾಕಿದ ಕೊಡ್ಲಿ ತೆಗೆದುಕೊಂಡು ಭೀಮರಾಯನ ಅಪ್ಪಣ ಆತು ಲಕ್ಷ್ಮಣನ ಜೀವನದ ಹೊಳೆ ಹರಿಯುವ ದಿಕ್ಕು ಬದಲಾತು ಬರ‌್ರಲೇ ಎಂದು ಭರ್ರ‌್‌ನೇ ಮೂವರು ಜೊತೆ ಸೇರಿ ಲಕ್ಷ್ಮಣನ ಕೂಡ ಹೊರಡುತ್ತಾರೆ. ಇಲ್ಲಿ ಬದುಕುವುದಕ್ಕಿಂತ ಸೊಕ್ಕಿನ ಸಿರಿವಂತರನ್ನು ಕಕ್ಕಿಸಿ ಬಡವರ ಒಡಲಿಗೆ ತುತ್ತುಹಾಕಿದರೆ ಯಾವುದೇ ಪಾಪ ಬರಲಾರದು. ಇಲ್ಲಿ ಸ್ವಾಭಿಮಾನ ಕಾಡುತ್ತಿದೆ.

ಊರ ಸಿರಿವಂತ ಸಿದ್ದಯ್ಯನ ಜೊತೆ ಮಾತಿಗೆ ಮಾತು ಬೆಳೆದು ನೀನೊಬ್ಬನು ತಪ್ಪಿ ಹುಟ್ಟೀದಿ ನಮ್ಮೂರಾಗ ಧರ್ಮರಾಯನಂಗೆ ಎನ್ನುವ ಸಿದ್ದಯ್ಯನಿಗೆ, ಅಣಕದ ಮಾತಾಡಿ ನನ್ನ ಕೆಣಕ ಬ್ಯಾಡ್ರೀ ಸಿದ್ದಯ್ಯನಾರ ನಾವು ದರೋಡೆ ಮಾಡಿದರ ತಂದ ಮಾಲನ್ನೆಲ್ಲ ಹಸಿದವರ ಹೊಟ್ಟಿಗೆ ಹಾಕ್ತೀವಿ ಎಂಬ ಲಕ್ಷ್ಮಣನಿಗೆ ಅವಮಾನ ಮಾಡುವ ಉದ್ದೇಶದಿಂದ ಹೇಳುವ ಸಿದ್ದಯ್ಯನವರ ಮಾತಿಗೆ ನಿಮ್ಮನ್ನನಂಬಿ ನಿಮ್ಮಲ್ಲಿ ಬಂಗಾರದ ಒಡವೆ ಇಟ್ಟದ್ದನ್ನು ನುಂಗಲು ನಾನೇನು ಸಿದ್ದಯ್ಯ ಸಾವುಕಾರನೇನು. ಸಮಾಜದಾಗ ದೊಡ್ಡವರೆನ್ನುವ ನಿಮ್ಮಂಥವರು ಮಾಡುವುದನ್ನು ಹಗಲು ದರೋಡೆಯನ್ನುತ್ತಾರೆ. ಲಕ್ಷ್ಮಣ ಪುನಃ ಅವಮಾನಕ್ಕೆ ಒಳಗಾಗದೇ ಸ್ವಾಭಿಮಾನದಿಂದ ಕೊಡುವ ಉತ್ತರ ಇವನೊಬ್ಬ ಉದಾತ್ತವಾದಿಯಾಗಿ ಕಾಣುತ್ತಾನೆ.

ಇನ್ನೊಂದು ಪ್ರಸಂಗದಲ್ಲಿ ಲಕ್ಷ್ಮಣನಿಗೂ ಹಾಗೂ ಪೊಲೀಸ್ ಇನಸ್ಪೆಕ್ಟರ ಮೋಹನಲಾಲ ರೊಂದಿಗೆ ಚಕಮಕಿಯಾಗುವಾಗ ಉಳಕೀ ಸೂಳೇಮಕ್ಕಳು ಎಲ್ಲಿ ಅದರ ಅನ್ನುವಾಗ, ಖಬರದಾರ್ ಸಾಹೇಬರ್, ನಿಮ್ಮನಾಲಿಗಿ ನಿಮ್ಮಕುಲಾ ಹೇಳುತ್ತ ಅದಕ್ಕೆ ಪೊಲೀಸರಿಗೆ ಎಪ್ಪಾ ಅನಬಾರದು ಸೂಳೇರಿಗೆ ಎವ್ವಾ ಅನಬಾರದು. ಅಂದ್ರ ನಿಮಗ ಹ್ಯಾಂಗ ಅನಸತ್ತರಿ ಸಾಹೇಬರ ಅಧಿಕಾರಿಯೆಂದರ ಮುಗಲಮ್ಯಾಗಿಂದ ಇಳದ ಬಂದಿಲ್ಲ. ನೀವು ಮನುಷ್ಯರ ಆಗಿದ್ದರ ನಮ್ಮನ್ನು ನಿಮ್ಮಂಗ ನೋಡ್ರಿ. ಲಕ್ಷ್ಮಣ ಅಂದಾಗ ಅವನೊಬ್ಬ ದಾರ್ಶನಿಕನಾಗಿ ಕಾಣುತ್ತಾನೆ. ಲಕ್ಷ್ಮಣನಿಗೆ ಹಾಕಿದ ಬೇಡಿ ಬಿಚ್ಚಿ ಊಟಕ್ಕೆ ಅಣಿಮಾಡಿ ಕೊಟ್ಟಾಗ ಅವನ ತಾಯಿ, ಮತ್ತು ಹೆಂಡತಿಯಿಂದ ಉಣಿಸಿದ ಪ್ರೀತಿ ತುತ್ತು ತಿಂದು ನೀರುಕುಡಿದು ಕೈಗೆ ಬೇಡಿ ಹಾಕಲು ಬಂದ ಪೊಲೀಸರನ್ನು ತಳ್ಳಿ ಜೈಬಜರಂಗಬಲಿ ಎಂದು ಘೋಷಿಸಿ ಅಲ್ಲಿಂದ ಜಿಗದು ಓಡಿ ಹೋಗುತ್ತಾನೆ. ಇಲ್ಲಿ ಅವನ ಧೈರ್ಯವನ್ನು ಮೆಚ್ಚಬೇಕು. ಪೊಲೀಸ ಕಷ್ಟಡಿ ಯಿಂದ ಪಾರಾಗಿ ಹೋಗಿ ಬಾಳೀಹಳ್ಳದಲ್ಲಿ ಇರುವಾಗ ಇನ್ನೊಬ್ಬ ಗೆಳೆಯ ಮಾರುತಿ ಬಾಳೀ ಹಳ್ಳದ ಕಡೆ ಓಡಿ ಹೋಗುವಾಗ ಸಿದ್ದಯ್ಯನ ಕಣ್ಣಿಗೆ ಬೀಳುತ್ತಾರೆ. ಮಾರುತಿ ತಂಗಿ ರತ್ನಿಯ ಕೂಡ ಸಿದ್ದಯ್ಯ ವಕ್ರದೃಷ್ಟಿಯಿಂದ ಮಾತನಾಡುವಾಗ ರತ್ನಿ ಸ್ವಾಮೇರ ನಿಮ್ಮ ಕಟಬಾಯಾಗ ಜೊಲ್ಲ ಸುರಿಯಾಕ ಹತ್ತೇತೇನು ಎನ್ನುವಾಗ ಅವಳಿಗಾದ ಅವಮಾನಕ್ಕೆ ಸಿದ್ದಯ್ಯ ನಿನಗ ಎದೀಗೆ ಒದ್ದೇನು ಎನ್ನುವ ಮಾತು ಸ್ವಾಭಿಮಾನದಿಂದ ಬುತ್ತದೆ.

ರತ್ನಿ ಬಂಗಾರನ ಸಿದ್ದಯ್ಯನ ಕಡೆ ಇಟ್ಟಾಗಿನಿಂದ ಎಲ್ಲರೂ ರತ್ನಿ ಬಂಗಾರ ತಿರುಗಿ ಕೊಡಿಸಲಿಕ್ಕೆ ಪ್ರಯತ್ನಿಸುತ್ತಾರೆ. ಅವಳಿಗೊಂದು ವರನೋಡಿ ಲಗ್ನಮಾಡುವ ವಿಚಾರ ಮಾಡುತ್ತಾರೆ. ಅಲ್ಲದೇ ಸಿದ್ದಯ್ಯನ ಕಡೆಯಿಂದ ರತ್ನಿಗೆ ಬಂಗಾರ ಕೊಡಸೂತನಕ ಮತ್ತು ಲಗ್ನ ಮಾಡುತನಕ ಸಿಂಧೂರ ಸೀಮಿ ಬಿಟ್ಟು ಹೋಗೂದು ಹ್ಯಾಂಗ ಅಂತ ಲಕ್ಷ್ಮಣ ಹಾಗೂ ಮೂವರು ಅಳಿಯಂದಿರು ಅನ್ನುತ್ತಾರೆ. ಸಾಬು ಹೇಳುವ ಮಾತು ನಾವು ಇಲ್ಲಿದ್ರೂ ಪೊಲೀಸರ ಕೈಗೆ ಸಿಕ್ಕು ಸಾಯಬೇಕಾದಿತು ಎನ್ನುವಾಗ, ಸತ್ರಾತು ಅದಕ್ಯಾಕ ಅಂಜೂದು. ಒಂದು ಪರದೇಶಿ ಮಗಳ ಕಲ್ಯಾಣ ಮಾಡಕ ಹೋಗಿ ಸತ್ರ ನಮ್ಮಂಥ ಪುಣ್ಯವಂತ್ರ ಯಾರದಾರ ಎಂದು ಲಕ್ಷ್ಮಣ ಹೇಳುತ್ತಾನೆ. ಆಗ ನರಸ್ಯಾ ಹೌದು ಮಾಂವಾ ಗತಿ ಇಲ್ಲದ ಬಡವರ ಗೋಣುಮುರುದು ಅವರ ಗೋರಿ ಮ್ಯಾಲ ಮಹಲ ಕಟ್ಟಿಸಿಕೊಂಡು ಮೆರೀತಾರಲ್ಲ ಈ ಸಿರಿವಂತರು ಇವರ ಸಂಪತ್ತ ಲೂಟಿ ಮಾಡಬೇಕು. ಅವರ ಚರ್ಮ ಸುಲಿದು ಎಕ್ಕಡಾ ಹೋಲಿಸಿಕೋಬೇಕು ಮತ್ತು ಶ್ರೀಮಂತರ ಬೆನ್ನಕಟ್ಟಿ ಬರುವ ಸರಕಾರಕ್ಕೂ ಕೈ ತೋರಿಸಬೇಕು ಎನ್ನುವ ಸಂದರ್ಭ ಲಕ್ಷ್ಮಣ ಹಾಗೂ ಅವನ ಅಳಿಯಂದಿರ ಬಗೆಗೆ ಅಭಿಮಾನ ಮೂಡುತ್ತದೆ.

ಸಿದ್ದಯ್ಯನ ಹೆಂಡತಿ ರಾಚವ್ವ ತನ್ನ ಗಂಡನನ್ನು ಅವನ ಪಟಗಾದಿಂದ ಬಿಗದು ಬಂಗಾರ ಕೇಳುವಾಗ ಮೈತುಂಬ ಬಂಗಾರ ಡಾಗೀಣ ಇಟಗೊಂಡ ರಾಚವ್ವನನ್ನು ನೋಡಿ, ನರಸ್ಯಾ ಅವಳ ಕುತ್ತಿಗೆಗೆ ಕೈಹಾಕಿದಾಗ ಲಕ್ಷ್ಮಣ ಅವನ ಕಪಾಳಕ್ಕೆ ಹೊಡೆದು ಹೆತ್ತವ್ವನಂಥ ಈ ತಾಯಿ ಕೊರಳಿಗೆ ಕೈಹಾಕಕ ನಾಚಿಕೆ ಬರುದಿಲ್ಲಾ. ಸರಕಾರದಾಗ ಲಕ್ಷ್ಮಣನ ಗ್ಯಾಂಗ ದರೋಡೆ ಕೋರರ ಗುಂಪು ದಾಖಲೆಯಾಗಿದ್ದರೂ ಜನರ ಬಾಯಾಗ ಲಕ್ಷ್ಮಣನೊಬ್ಬ ದಯಾಮಯಿ. ಸರಕಾರ, ಎದರ ಹಾಕಿಕೊಂಡ ಸೊಕ್ಕಿನ ಸಿರಿವಂತರ ನಡಾ ಮುರಿತಾನ. ಆದರ ಈ ತಾಯಿ ಮೈ ಕೈಮುಟ್ಟಿ ಮಾನಾ ಕಳೀಬ್ಯಾಡ ಅನ್ನುವಾಗ ಲಕ್ಷ್ಮಣನನ್ನು ಕುರಿತು ಮತ್ತು ಸ್ವಾಭಿಮಾನ ಗರಿಗೆದರುತ್ತದೆ.

ಸಿದ್ದಯ್ಯನ ಹೆಂಡತಿ ರಾಚವ್ವನಿಂದ ಬಂಗಾರ ಪಡೆದು ರತ್ನಿಯ ಲಗ್ನಮಾಡಿ ಗಂಡನ ಮನಿ ನಾಗಾರಾಳಕ್ಕೆ ಹೊರಟು ನಿಂತಾಗ ರತ್ನಿ ಉಡಿಯಾಗ ಬಂಗಾರದ ಡಾಗೀನದ ಗಂಟು ಇಟ್ಟು ಬಾಳೀಹಳ್ಳದಾಗ ನಿಮ್ಮಣ್ಣಗ ಕೊಟ್ಟ ಮಾತು ಮುಟ್ಟಿದಂಗ ಆತು ಎನ್ನುತ್ತಿದ್ದಂತೆ ಪತ್ನಿ ಮಾಂವ ತಂದಿ ಸತ್ತರೂ ತಂದಿಯಾಗಿ, ಅಣ್ಣ ಸತ್ತರೂ ಅಣ್ಣನಾಗಿ, ಪೊಲೀಸರು ಹಿಂಡಗಟ್ಟಿ ನಿನ್ನ ಹಿಡಿಯಾಕ ಪ್ರಯತ್ನ ಮಾಡುವಾಗಲೂ ನೀನು ನನ್ನ ಲಗ್ನ ಮಾಡಿದೆಲ್ಲಾ ಈ ನಿನ್ನ ಉಪಕಾರ ಯಾವ ಜನ್ಮದಲ್ಲಿ ತೀರಸಲಿ ಎನ್ನುತ್ತಿದ್ದಂತೆ ಬೇರೆಯವರೂ ಲಕ್ಷ್ಮಣನ ಕುಟುಂಬದ ಬಗೆಗೆ ಇರಿಸಿಕೊಂಡ ಅಭಿಮಾನ ಕಣ್ಣಿಗೆ ಕಟ್ಟಿದಂತಾಗುತ್ತದೆ.

ಇನಸ್ಪೆಕ್ಟರ್ ಮೋಹನಲಾಲ ಹಾಗೂ ಪೊಲೀಸರಿಗೆ ಕಲ್ಲೊಳ್ಳಿ ಗುಡ್ಡದಾಗ ಲಕ್ಷ್ಮಣನ ಹೋಳಿ ಅಡಗೇತಿ ಅವರ ಹಿಡಿಯಾಕ ಹೊರಟಾಗ ಸ್ವತಃ ಇನಸ್ಪೆಕ್ಟರ ಗುಂಡ ಹಾರಿಸಿ ಬ್ಯಾಟಿ ಎಬ್ಬಸ್ತೀನೆಂದು ಗುಂಡುಹಾರಿಸಿದಾಗ ಲಕ್ಷ್ಮಣ ಯಾಕೋ ಇನಸ್ಪೆಕ್ಟರ ಎಂದು ಕೂಗಿದಾಗ ಆ ಕೂಗಿಗೆ ಪೊಲೀಸ ಸಿಬ್ಬಂದಿ ಓಡಿ ಹೋಗುವಾಗ ಜೈ ಬಜರಂಗ ಬಲಿ ಎಂದು ಇನಸ್ಪೆಕ್ಟರನ ಎದುರಿಗೆ ನಿಂತ ನೀನನ್ನ ಹರಕಿ ಕುರಿಯಾಗಾಕ ಬಂದೀಲೇ ಇನಸ್ಪೆಕ್ಟರ ಎದೀ ಮ್ಯಾಲ ಒದ್ದು ಮೋಹಲನಲಾಲನನ್ನು ನೆಲಕ್ಕೆ ಕೆಡವಿ ಅವನ ಏದೀಮ್ಯಾಲ ಕಾಲಿಟ್ಟು ಹೇಳು ಸಾಹೇಬ ಬಾಳೇ ಹಳ್ಳದಾಗ ಅವತ್ತು ಬೂಟಗಾಲೀಲೆ ಒದ್ದ ನಮ್ಮವ್ವನ ಕೆಡವಿದ್ದೆಲ್ಲಾ ಆ ಸಾಲಾ ಇವತ್ತ ಬಡ್ಡಿ ಸಹಿತಮುಟ್ಟಿಸಿ ಬಿಡತೀನಿ. ಸಾಯುಮುಂದ ದೇವರ್ನ ನೆನೆಸಿಕೊ ಅನ್ನುವಾಗ ಮೋಹನಲಾಲ ವಿನಯದಿಂದ ಶಸ್ತ್ರ ಕೈಮ್ಯಾಗ ಇಲ್ಲದಾಗ ಶತ್ರುವನ್ನು ಕೊಲ್ಲುವುದು ವೀರರಿಗೆ ಒಪ್ಪುವ ಧರ್ಮವಲ್ಲವೆಂದಾಗ ಇನಸ್ಪೆಕ್ಟರ ಸಾಹೇಬ ಈ ಲಕ್ಷ್ಮಣ ಬದುಕಿದ್ದೇ ಧರ್ಮದ ಬಲದಿಂದ. ಅದಕ್ಕೆ ಹೋಗು ಕುನ್ನಿ ನಿನಗ ಜೀವದಾನ ಮಾಡೀನಿ ಎನ್ನುವಾಗ ವೈರಿಯ ಎದುರಿನಲ್ಲೂ ರಣರಂಗವಾಗುತ್ತಿರುವಾಗಲೂ ಇನಸ್ಪೆಕ್ಟರನ ಮೇಲೆ ದಯಾ ತೋರಿಸಿ ಅವನೊಬ್ಬ ಕರುಣಾಮಯಿಯಾಗಿ ಕಾಣುತ್ತಾನೆ. ಇಲ್ಲಿಯೂ ಇಂಥ ಜೀವಕ್ಕೆ ಭಯವಿದ್ದಾ ಗಲೂ ಸ್ವಂತಕ್ಕೆ ಆಪತ್ತ ಕಾದಿದ್ದರೂ ವೈರಿಗೆ ಜೀವದಾನ ಮಾಡುವಾಗ ಅವನ ಕುರಿತು ಸ್ವಾಭಿಮಾನ ಮೂಡುತ್ತದೆ.

ವಾಲೀಕಾರ ಶಿವಪ್ಪ ತೆಗ್ಗಿ ವೆಂಕಪ್ಪ ನಾಯಕರಿಬ್ಬರೂ ಕಪ್ಪರದ ಪಡಿಯವ್ವನ ಗುಡ್ಡಕ್ಕೆ ಹೋಗು ಮುಂದ ನನ್ನ ಕುಲಬಾಂಧವನೊಬ್ಬನಾದ ಲಕ್ಷ್ಮಣನ ಸಾಹಸದ ಸುದ್ದಿ ಮಾತನಾ ಡುತ್ತ ನಡೆಯುವಾಗ ಯಡೆಹಳ್ಯಾಗ ಗುಜ್ಜರ ತಾರಾಚಂದ ಶೇಟಜಿ ಮನೀ ಲೂಟಿ ಮಾಡಿ ಆ ಹಣಾನ ಬಡವರಿಗೆ ಹಂಚಿ ಮತ್ತು ಅವ ಒತ್ತೀ ಇಟ್ಟಗೊಂಡ ಹೊಲಾ, ಮನಿ ಕಾಗದಾನ ಸುಟ್ಟಹಾಕಿ ಎಷ್ಟೊಂದು ಬಡ ಜನಕ್ಕೆ ಅವ ಸಹಾಯ ಮಾಡಿ ದೇವರ ಆಗ್ಯಾನ ಎನ್ನುತ್ತಿದ್ದಂತೆ ತೆಗ್ಗಿ ವೆಂಕಪ್ಪನಾಯಕರ ಮುಂದೆ ನಿಂತು ಲಕ್ಷ್ಮಣ ಮುಜುರೆ ಮಾಡಿದಾಗ ನಾನ್ರಿ ಧಣೇರ ನೀವು ಹುಡುಕುವ ಲಕ್ಷ್ಮಣ ಎನ್ನುವಾಗ ಸಂತೋಷಗೊಂಡ ನಾಯಕ ನೋಡ್ಲಶಿವ್ಯಾ ಹ್ಯಾಂಗ ಬಂದೈತಿ ಸಿಂಧೂರ ಹುಲಿ ಮತ್ತು ಹಲಗಲಿ ಖಡ್ಗಕಲಿಗಳಾದ ಜಡಗಣ್ಣಾ ಬಾಲಣ್ಣ ಸತ್ತ ಮ್ಯಾಲೆ ಬತ್ತಿ ಹೋಗಿದ್ದ ಬ್ಯಾಡರ ಕುಲಕ್ಕ ನಿನ್ನಿಂದ ಬಲಾ ಬಂದಾಂಗಾತು. ಲಕ್ಷ್ಮಣ ನಾನೀಗ ನಿನಗ ಆಪ್ತಬಂಧು ಎಂದು ತಿಳಕೋ ಎನ್ನುತ್ತಾನೆ. ಲಕ್ಷ್ಮಣ ಶಿವಗ ಕಣ್ಣ ಕಿತ್ತಿ ಕೊಟ್ಟಿರೋ ಕಣ್ಣಪ್ಪನ ಕುಲದಾಗ ಹುಟ್ಟೀವಿ ಈ ದೇಶಕ್ಕೆ ಕೊಟ್ಟ ರಾಮಾಯಣ ಕಾವ್ಯದ ಕತೃ ವಾಲ್ಮೀಕಿ ಮಹರ್ಷಿ ಸಂತಾನ ನಮ್ಮದು. ನಿನ್ನ ಮ್ಯಾಲ ವಾರಂಟ ಇದ್ರೂ ಸಹಿತ ಪ್ರಸಂಗ ಬಂದ್ರ ನನ್ನ ಪ್ರಾಣಾ ಕೊಟ್ಟ ನಿನ್ನ ಉಳಿಸಿಕೊಳ್ಳತೀನಿ ಇದಕ ಅರಣ್ಯ ಪಾರ್ವತೀ ತಾಯಿ ಕಪ್ಪರದ ಪಡಿಯವ್ವನೇ ಸಾಕ್ಷಿ ಎನ್ನುವಾಗ ಕುಲಬಾಂಧವರಲ್ಲಿ ಬೆಳೆಯುವ ವಿಶ್ವಾಸ ಕಂಡು ವಾಲ್ಮೀಕಿ ಸಮುದಾಯದ ಬಗೆಗೆ ಅಭಿಮಾ ಮೂಡುತ್ತದೆ. ಹಲಗಲಿ ಕುಲಬಂಧು ಗಳು ಕಟ್ಟಿ ಹೋದ ಸ್ವಾತಂತ್ರ್ಯದ ಗುಡಿಯ ಗೋಪುರಕ್ಕೆ ನೀನು ಕಳಸವಾಗು. ನಿನ್ನ ಧೈರ್ಯ, ಸಾಹಸ ಕಾರ್ಯ ಹಾಡುಗಟ್ಟಿ ನಾವೆಲ್ಲ ಹಾಡುವಂತಾಗಲಿ ಎನ್ನುವಾಗಂತೂ ಬೇಡ ಸಮುದಾಯ ಕುರಿತು ಸ್ವಾಭಿಮಾನ ಹೆಚ್ಚುತ್ತದೆ.

ತುಮ್ಮರಮಟ್ಟಿ ಗುಡ್ಡದಾಗ ಗಾರ್ಮನ್ ಸಾಹೇಬ ಕುದರಿ ಮ್ಯಾಲ ಬರುವಾಗ ಸಿಂಧೂರ ಲಚ್ಚ್ಯಾನ ಠೋಳಿ ತುಮ್ಮರಮಟ್ಟಿಗುಡ್ಡದಾಗ ಐತಿ ಅಂತ ಬಂದ ಬಾಲೇ ಮ್ಯಾಗ ಇಲ್ಲಿಗೆ ಬಂದು ನನ್ನ ಆರ್ಡರ ಪ್ರಕಾರ ಆ ದರೋಡೆಕೋರನನ್ನ ಹಿಡದ ಹೆಡಮುರ್ಗಿಬಿಗಿದು ನಮ್ಮ ಮುಂದ ತಂದು ನಿಲ್ಲಿಸಿರಿ ಎನ್ನುತ್ತಾನೆ. ಆ ಗಾರ್ಮನ್ ಸಾಹೇಬ ಮತ್ತೆ ಒಂದು ಸುತ್ತ ಗುಂಡ ಹಾರಿಸುತ್ತಾನೆ. ಆಗ ಗುಡ್ಡದ ಮ್ಯಾಗ ನಿಂತು ಕೆಂಪು ಮುಖದ ಕೋತಿ ನಿಮ್ಮ ಹರಾಮಖೋರ ಇನಸ್ಪೆಕ್ಟರ ಮೋಹನಲಾಲನ ಚಂಡ ಆಡೀನಿ ನಿನ್ನ ರುಂಡಾನೂ ಕತ್ತರಸೋದು ಬಹಳ ಸುಲಭ ಅನ್ನುವಾಗ ಶೂರರಾದ ಇಂಗ್ಲೀಷರನ್ನು ಹೆದರಿಸುವುದು ಅಷ್ಟು ಸುಲಭವಲ್ಲವೆನ್ನುವಾಗ ಎಲ್ಲಾ ಫಿರಂಗಿ ಕೋತಿಗಳು ನೀವೆಷ್ಟು ಶೂರರು ಅಂತಾ ನಮಗೆ ಗೊತ್ತಿಲ್ಲೇನು, ನಮ್ಮದೇಶದ ಸಂಸ್ಥಾನಿಕರು ಮಣ್ಣು ಮುಕ್ಕಿದ್ದು ನಿಮ್ಮ ಶೂರತನ ದಿಂದ ಅಲ್ಲಾ ನಮ್ಮ ದೇಶದಾಗೀನ ಪಾಪಿಸ್ಟ ಪಿತೂರಿಗಳಿಂದ. ಕಿತ್ತೂರ ಸಂಸ್ಥಾನ ಹಾಳಾದದ್ದು ಕನ್ನೂರ ಮಲ್ಲಪ್ಪಶೆಟ್ಟಿಯ ಕುಟಿಲತನದಿಂದ, ನರಗುಂದ ಬಾಬಾ ಸಾಹೇಬರ ಸಂಸ್ಥಾನದ ಬನಿಯಾ, ಬಾಪೂರಂಥ ದೇಶದ್ರೋಹಿಗಳಿಂದ ನಾಶಾತು. ಹುಲಿಯಂಥ ಸಂಗೊಳ್ಳಿರಾಯಣ್ಣ ಸೆರೆ ಸಿಕ್ಕದ್ದು ನೇಗಿನಾಳ ವೆಂಕಪ್ಪ ಗೌಡನ ಪಿತೂರಿಯಿಂದ, ಮುಧೋಳದ ಕಾರಭಾರಿ ಕುಲಕರ್ಣಿ ಕೈವಾಡದಿಂದ ಹಲಗಲಿ ಹುಲಿಗಳಾದ ಜಡಗಣ್ಣ, ಬಾಲಣ್ಣ ನಿಮ್ಮ ಕೈಗೆ ಸಿಕ್ಕರು. ನಿಮ್ಮ ಯಾವ ಶೂರತನದಿಂದ ಅವರನ್ನು ಹಿಡದೀರಿ ಹೇಳಿರಿ. ನಾವ್ಯಾರೂ ಅಂಥ ಸಂಸ್ಥಾನಿ ಕರೂ ಅಲ್ಲ. ಗಾರ್ಮನ್ ಸಾಹೇಬಾ ಎಂಟೆದೆಯ ಬಂಟಾ ಬ್ಯಾಡರ ಜ್ಯಾತ್ಯಾಗ ಹುಟ್ಟಿ ಇಂಗ್ರೇಜ ಅವರಿಗೆ ತಲೀಬಾಗೂದು ಅಂದ್ರ ನಾವು ಹೇಡಿಜಾತಿಯವರು ಅಲ್ಲಾ. ಜೀವಂತ ಹೆಣ ಆಗಿ ನಿಮ್ಮ ಜೇಲಿನ್ಯಾಗ ಇರೂದಕ್ಕಿಂತ ಸತ್ತ ಬದಕಿರೋದು ಸಾವಿರ ಪಾಲಿಗೆ ಮೇಲು, ಲಕ್ಷ್ಮಣನ ವಜ್ರ ದೇಹಕ್ಕೆ ನಿನ್ನ ಪಿಸ್ತೂಲಿನ ಗುಂಡು ಜೋಳದ ದಂಟಿನ ಬೆಂಡು. ಈ ಹುಲಿ ಮೀಸೆಗೆ ಕೈ ಹಾಕಬೇಕಾದರ ತಾಕತ್ ಬೇಕು ಸಖತ್ ತಾಕತ್ ಎನ್ನುವಲ್ಲಿ ಬ್ರಿಟೀಷರ ಒಡೆದಾಳುವ ನೀತಿ ಕುರಿತು ಮಾತನಾಡುವ ಪರಿಲಕ್ಷ್ಮಣನ ಬಗೆಗೆ ದೇಶಾಭಿಮಾನ ಉಕ್ಕುತ್ತದೆ. ಅವಮಾನದ ಬದುಕಿಗಿಂತ ಸ್ವಾಭಿಮಾನದ ಮರಣಕ್ಕೆ ಶರಣಾಗುವುದು ನಮಗೆಲ್ಲ ಪ್ರೀತಿ, ವಿಶ್ವಾಸ ಗೌರವ ಮೂಡಿಸುತ್ತದೆ.

ನರಸ್ಯಾ ಇವತ್ತ ನಸಿಗಿನಾಗ ನನಗೆ ಭಯಂಕರ ಭಯಾನಕ ಕನಸು ಬಿದ್ದಿತ್ತು. ನಾನು ಚಂದ್ರಿ ಮಲಗಿದಂಗ ಆದಾಗ ಯಮಧರ್ಮ ನನ್ನ ಕೊಳ್ಳಿಗೆ ಹಗ್ಗಾ ಹಾಕಿ ಜೆಗ್ಗಾಕ ಹತ್ತಿದಾ ಆಗ ದಡಗ್ನ ಎಚ್ಚರಾತು. ಬೆಳಗಿನ ಜಾವದಾಗ ಬಿದ್ದ ಕನಸು ಖರೇ ಆಗತಾವಂತ ತುಳಸೀಗೇರಿ  ಪೂಜಾರಿ ಶರಣಪ್ಪ ಹೇಳುತ್ತಿದ್ದ. ಮಾಂವಾ ಈ ಹೊತ್ತು ನಾಗರ ಪಂಚಮಿ ಅಮಾಸಿ ಉಣ್ಣಾಕ ಬರ‌್ರಿಂತ ತೆಗ್ಗಿ ನಾಯಕರು ವಾಲೀಕಾರ ಶಿವಪ್ಪನ ಮುಂದ ಹೇಳಿ ಕಳಸ್ಯಾರ ಎಂದು ನಾಲ್ವರೂ ಹೊರಡುವಾಗ ಮಾಂವಾ ಗೂಗಿ ಒದರಾಕ ಹತ್ತೇತಿ ಮ್ಯಾಲ ಎಡಗಣ್ಣು ಹಾರಾಕ ಹತ್ತೇತಿ ಅದ ಮೂಲ್ಯಾಗ ಚಿಕ್ಕಿ ಬಿತ್ತು ಮಾಂವಾ ವಾರಾ ನೋಡಿ ಹಡದರ ಕುಡ್ಡಗನ್ನಿನ ಕೂಸ ಹುಟ್ಟಿದಂಗ ಅಂತಾರ ನಡಿ ನಡೀರಿ ಎಂದು ಹೊರಟರು. ಕಪ್ಪರದ ಪಡಿಯವ್ವನ ಗುಡ್ಡದಾಗ ವಾಲೀಕಾರ ಶಿವಪ್ಪ ದಾರೀ ಕಾಯ್ತ ಕುಳಿತ್ತಿದ್ದ ನಾಲ್ಕೂ ಜನ ಸೇರಿ ಹೋಗಿ ಶಿವಪ್ಪನ ಹತ್ತಿರ ಕುಳಿತರು ಊಟಕ್ಕೆ. ಆದರೆ ಮೊದಲೇ ಸಂಚು ಮಾಡಿದ ಗಾರ್ಮಾನ್‌ನ ಪ್ರಕಾರ ಕೊಡಲಿ ಕಾವು ಕುಲಕ್ಕ ಮೂಲ ಅಂದಂಗೆ ತೆಗ್ಗಿ ನಾಯಕನ ಸಂಚು ಕುಲಬಾಂಧವರಿಗೆ ತಿಳಿಯಲಿಲ್ಲ. ನಡುವೆ ಶಿವಪ್ಪ ಕಂದೀಲ ಹಿಡಿದು ಎತ್ತಿ ಲಕ್ಷ್ಮಣನ ಮುಂದ ಹಿಡದ ಇಟ್ಟಾ. ಆಗ ಕಂದೀಲಿನ ಯಾಕ ಹಿಡದೀದಿ ಅಂದಾಗ ಎಣ್ಣಿ ಕಡಿಮೆ ಆಗಾಗ ಹತ್ತೇತೇನು ನೋಡಾಕ ಹಾಂಗ ಮಾಡಿದ್ಯಾ ಅಂತ ಶಿವಪ್ಪ ಸಬೂಬ ಹೇಳಿ ಸುಮ್ಮನಾದ. ಅಷ್ಟರಾಗ ಗುಂಡುಹಾರಿಸಿದ ಗುಂಡು ಲಕ್ಷ್ಮಣನ ಹಿಂಬದಿಗೆ ಬಡಿೀತು ಘಾತ ಆತಲೇ ನರಸ್ಯಾ ಅಂತ ಲಕ್ಷ್ಮಣ ಚೀರಿದ. ತಾಯಿ ಹೆಂಡತಿ ಬಿಟ್ಟ ಇಷ್ಟು ದೂರ ಬಂದು ಸಾಯೂದ ಐತಿ ಇಂಥ ಪರಸ್ಥಿತಿಯಲ್ಲಿ ಮಾಂವನ ಬಿಟ್ಟು ಹೋಗೂದು ತಪ್ಪು ಆಗತೈತಿ ಏನೇ ಬರಲಿ ಒಟ್ಟಿಗೆ ಸೇರಿವಿ ಒಂದಾಗಿ ಸಾಯಾಣ ಅಂತ ಲಕ್ಷ್ಮಣನ ತಬ್ಬಿ ಎಲ್ಲರೂ ಅಳಾಕ ಹತ್ತಿದಾಗ ಗಾರ್ಮನ್ ಬಂದು ಎಲ್ಲರನ್ನು ಬಂಧಿಸಿ ಜಮಖಂಡಿಗೆ ಒಯ್ಯುತ್ತಾರೆ. ಲಕ್ಷ್ಮಣನ ಹೆಣಾನ ಚಕ್ಕಡಿಯಲ್ಲಿ ಹಾಕಿ ಕೊಂಡು ಬೀಳಗಿಗೆ ಒಯ್ಯುತ್ತಾರೆ. ಕೊನೆಗೆ ಶಿವಪ್ಪ ಲಕ್ಷ್ಮಣನ ಹಣೇಬರಹ ತಪ್ಪಸಾಕ ಯಾರಿಗೂ ಆದೀತು ದಿಕ್ಕಿಲ್ಲದ ಹೆಣ ಆಗಬೇಕು ಅಂತಾ ಅವನ ಹಣೇ ಬರದಾಗ ಬರೆದಿತ್ತೊ ಏನೋ ಎಂದು ಏನೇ ಆದ್ರೂ ನೀನು ಸತ್ತು ಬದುಕಿದಿ! ನಾವು ಬದುಕಿ ಸತ್ವಿ! ಜನರ ಬಾಯಾಗ ನಿನ್ನ ಹೆಸರು ಹಾಡಾಗಿ ಉಳೀತು. ಎನ್ನುವಾಗಲಂತೂ ಲಕ್ಷ್ಮಣ, ನರಸ್ಯಾ ಗೋಪಾಲಿ, ಸಾಬು ಇವರೆಲ್ಲರ ಬಗೆಗೆ ದುಃಖ ಆದರೂ ಕೊನೆಗೆ ಗೌರವ ಆದರ ಅಭಿಮಾನ ಮೂಡುತ್ತದೆ.

 

ಗ್ರಂಥಋಣ

೧. ಭಾರತದ ಇತಿಹಾಸ.

೨. ಸಿಂಧೂರ ಲಕ್ಷ್ಮಣ, ಕಂಠಿಹನುಮಂತರಾಯ.

೩. ವೀರಸಿಂಧೂರ ಲಕ್ಷ್ಮಣ, ಸಂಗಮೇಶ ಗುರುವ.

* * *