ಉತ್ತರ ಕರ್ನಾಟಕದ ತುಂಬ ಸಿಂಧೂರ ಲಕ್ಷ್ಮಣನ ಹೆಸರು ಜನಸಾಮಾನ್ಯರ ನಾಲಿಗೆಯ ಮೇಲೆ ಕುಣಿದಾಡುತ್ತಿದೆ. ಹಾಡು, ಲಾವಣಿ, ಕಥೆ, ನಾಟಕಗಳ ಮುಖಾಂತರ ಲಕ್ಷ್ಮಣ ಜನನಾಯಕನಾಗಿಯೇ ಮೆರೆದಿದ್ದಾನೆ. ಸ್ವಾತಂತ್ರ್ಯ ಪೂರ್ವದಲ್ಲಿ ದೀನದಲಿತರ ಧ್ವನಿಯಾಗಿ, ಬಡವರ ಬಂಧುವಾಗಿ, ಸಾಮಾಜಿಕ ಅಸಮತೋಲನವನ್ನು ಹೋಗಲಾಡಿಸಲು ಹಗಲಿರುಳು ಹೋರಾಟ ಮಾಡಿದ ಒಬ್ಬ ವೀರ ಧೀರನ ಕಥೆ ಇತಿಹಾಸದ ಪುಟಗಳನ್ನು ಸೇರದೆ ಇರುವುದು ಒಂದು ವಿಪರ್ಯಾಸವೇ ಸರಿ.

ಬ್ರಿಟೀಷ್ ಸರಕಾರ ಸಿಂಧೂರ ಲಕ್ಷ್ಮಣನನ್ನು ಒಬ್ಬ ದರೋಡೆ ಕೋರ ಎಂದು ದಾಖಲಿಸಿದ ಹಿನ್ನಲೆಯಿಂದಾಗಿ ಅವನ ಶೌರ್ಯ, ಸಾಹಸ, ಚರಿತ್ರೆಗೆ ಸೂರ್ಯಗ್ರಹಣವೇ ಹಿಡಿದಂತಾಯಿತೋ ಏನು? ಆದರೆ ಇತಿಹಾಸ ತಜ್ಞರು, ಸಂಶೋಧಕರು, ಸಾಹಿತಿಗಳು ಗ್ರಾಮೀಣ ಮಟ್ಟದಲ್ಲಿ ಇದುವರೆಗೂ ದಾಖಲೆಗಳನ್ನು ಸಂಗ್ರಹಿಸಿ ನಾಡಿನ ಐತಿಹಾಸಿಕ ಚರಿತ್ರೆಯನ್ನು ಕಟ್ಟುವ ಸಂದರ್ಭದಲ್ಲಿಯಾದರೂ ಲಕ್ಷ್ಮಣನ ಹೆಸರನ್ನು ಪರಗಣಿಸದೆ ಇರುವುದು ಒಂದು ದುರ್ದೈವದ ಸಂಗತಿಯೇ ಸರಿ. ಈ ಒಂದು ಹಿನ್ನಲೆಯಲ್ಲಿ ಸ್ಥಳೀಯ ಚರಿತ್ರೆಗಳನ್ನು ಪುನಃ ಕಟ್ಟಬೇಕಾದಂತಹ ಅವಶ್ಯಕತೆ ಇದೆ. ಅವುಗಳ ಮುಖಾಂತರ ತಲೆ ತಲಾಂತರದಿಂದ ಬೆಳೆದು ಬಂದ ವರ್ಗ ಸಂಘರ್ಷದ ತಳಹದಿಗೆ ನಮ್ಮವರ ತೆಲೆಗಳುರಿಳಿ, ಮಡಿದವರ ಮರೆಯಲಾಗದ ಮಹಾನುಭಾವರ ಚರಿತ್ರೆಯನ್ನು ಯುವಸಮುದಾಯಕ್ಕೆ ತೋರ್ಪಡಿಸಬೇಕಾಗಿದೆ.

ವೀರ ಸಿಂಧೂರ ಲಕ್ಷ್ಮಣನ ಕುರಿತು ಹಲವಾರು ನಾಟಕಕಾರರು ಕೃತಿಗಳನ್ನು ರಚಿಸಿದ್ದಾರೆ. ಪ್ರತಿಯೊಬ್ಬ ನಾಟಕಕಾರರು ಕೆಲವು ದೃಶ್ಯಗಳನ್ನು ಕಾಲ್ಪನಿಕವಾಗಿ ಚಿತ್ರಿಸಿದ್ದಾರೆ. ಲಕ್ಷ್ಮಣರಾವ್ ಪುರಿ, ಪಿ.ಬಿ. ದುತ್ತರಗಿ, ಕಂಠಿ ಹನಮಂತರಾಯ, ಕವಟಗಿಯ ಸಂಗಮೇಶ ಆರ್. ಗುರವ, ಮುಂತಾದ ಪ್ರಮುಖ ನಾಟಕಕಾರರು ಕೃತಿಗಳನ್ನು ರಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಟಕದ ಧ್ವನಿ ಸುರುಳಿಯು ಹೊರಬಂದಿದೆ. ಎನ್. ಬಸವರಾಜ ಮತ್ತು ಟಿ.ಕೆ. ಮಹಮ್ಮದ ಅಲಿಯವರ ಮಧ್ಯ ಸಿಂಧೂರ ಲಕ್ಷ್ಮಣ ಕೃತಿಯ ಕುರಿತು ವಿವಾದದಗಾಳಿ ಎದ್ದು ತಣ್ಣಗಾದದ್ದು ಉಂಟು. ಎನ್. ಬಸವರಾಜರವರು ತಮ್ಮ ವೃತ್ತಿರಂಗಭೂಮಿಯಲ್ಲಿ ಈ ನಾಟಕವನ್ನು ಅದ್ಧೂರಿಯಾಗಿ ಪ್ರಯೋಗಿಸುವುದರೊಂದಿಗೆ ಕನ್ನಡದ ಚಲನಚಿತ್ರ ರಂಗದ ಬೆಳ್ಳಿ ತೆರೆಗೆ ವೀರ ಸಿಂಧೂರ ಲಕ್ಷ್ಮಣನ ಪಾತ್ರವನ್ನು ತಾವೇ ಅಭಿನಯಸಿದ್ದು ಒಂದು ಅಪೂರ್ವ ಸಾಧನೆಯೇ ಸರಿ.

ಉತ್ತರ ಕರ್ನಾಟಕದ ವೃತ್ತಿರಂಗಭೂಮಿಯಲ್ಲಿ ಸಿಂಧೂರ ಲಕ್ಷ್ಮಣ ಹೆಚ್ಚು ಪ್ರಯೋಗ ಗೊಳ್ಳುವುದರ ಜೊತೆಗೆ ಜನಮಾನಸದಲ್ಲಿ ಇನ್ನೂ ಜೀವಂತವಾಗಿ ಉಳಿಯಲು ಕಾರಣ ವಾಯಿತು. ಈ ಹಿನ್ನೆಲೆಯಲ್ಲಿ ವೃತ್ತಿರಂಗಭೂಮಿಯನ್ನು ಅಭಿನಂದಿಸಲೇಬೇಕು. ಅದರ ಮುಖಾಂತರ ಸುಧೀರ ರಂಗಭೂಮಿ ಮತ್ತು ಚಿತ್ರರಂಗದ ಸೇತುವೆಯಾಗಿಯೇ ಬೆಳೆದು ಬಂದು ಮಿಂಚಿನಂತೆ ಮಿಂಚಿ ಮರೆಯಾಗಿದ್ದಾರೆ.

“ಲಕ್ಷ್ಮಣನ ಕಾಲಕ್ಕೆ ಸಿಂಧೂರು ಜತ್ತ ಸಂಸ್ಥಾನಕ್ಕೆ ಸೇರಿದ ಒಂದು ಹಳ್ಳಿ.  ಲಕ್ಷ್ಮಣನ ತಂದೆ ಸಾಬಣ್ಣ, ತಾಯಿ ನರಸವ್ವ ಮಹಾದೇವಪ್ಪ ಗೌಡರು ಸಿಂಧೂರಿನ ಪೋಲಿಸ ಪಾಟೀಲರು, ಲಕ್ಷ್ಮಣ ವಾಲಿಕಾರ, ಲಕ್ಷ್ಮಣನಿಗೆ ತಂಗಿಯೇ ಇಲ್ಲ. ಇದ್ದವರು ಇಬ್ಬರು ಸತ್ಯವ್ವ, ಸಕ್ರವ್ವ ಎಂಬ ಅಕ್ಕಂದಿರು. ಒಬ್ಬಳನ್ನು ರಡ್ಡೇರಹಟ್ಟಿಗೆ ಮದುವೆ ಮಾಡಿಕೊಟ್ಟಿದ್ದರು. ಅವಳ ಮಗನೇ ನರಸಪ್ಪ, ಇನ್ನೊಬ್ಬಾಕೆಯನ್ನು ನೇಸೂರಿಗೆ ಕೊಟ್ಟಿದ್ದರು ಅವಳ ಮಗಳೇ ಚಂದ್ರವ್ವ (ಲಕ್ಷ್ಮಣನ ಹೆಂಡತಿ) ನಾಟಕದ ಕಥಾನಾಯಕನಿಗೆ ನಿಜ ಜೀವನದ ಸಂಗಾತಿಯಾಗಿ ಹೆಂಡತಿ ಇದ್ದರು ಸಹ ಅವಳ ಪಾತ್ರವನ್ನೆ ಬಿಟ್ಟು ಇಲ್ಲದ ಕ್ರೈಸ್ತ ಕನ್ಯೆ ಓರ್ವಳನ್ನು ಸೃಷ್ಟಿಸಿಕೊಂಡು ಲಕ್ಷ್ಮಣನ ಮೇಲೆ ಛೂ ಬಿಡುವುದೆಂದರೆ ಅದೇನು ಇತಿಹಾಸವೋ ಅಭಾಸವೋ ಹೇಳುವುದೇ ಕಷ್ಟ. ಲಕ್ಷ್ಮಣನಿಗೆ ತಂಗಿಯೇ ಇಲ್ಲವೆಂದಾಗ ದುಂಡವ್ವನೆಂದೋ, ಮಾಳವ್ವನೆಂದೋ, ಗಂಗವ್ವಳೆಂದೋ ಇಲ್ಲದ ತಂಗಿಯನ್ನು ಕಲ್ಪಿಸಿಕೊಂಡದ್ದು, ನಾಟಕಕಾರನ ಕಥೆಯಾದೀತೇ ಹೊರತು ಇತಿಹಾಸವೆನಿಸಲಾರದು. ಲಕ್ಷ್ಮಣನು ಅಂತ್ಯಗೊಂಡದ್ದು ೧೯೨೧ರಲ್ಲಿ ಲಕ್ಷ್ಮಣ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದನೆ? ಎಂಬುದನ್ನು ಇತಿಹಾಸದ ಆಧಾರದಿಂದಲೇ ನಿರ್ಧರಿಸಬಹುದಾಗಿದೆ. ಇತಿಹಾಸದ ವಿಷಯವನ್ನು ಎತ್ತಿಕೊಂಡಾಗ ನಾಟಕಕಾರ ಕೇವಲ ಕವಿಯಾದರೆ ಸಾಲದು. ಇತಿಹಾಸಕಾರನು ಆಗಬೇಕಾಗುತ್ತದೆ. ಲಕ್ಷ್ಮಣನ ಬಾಳನದಿಯ ದಿಕ್ಕು ಬದಲಾದದ್ದು ಅವನ ಸೋದರಳಿಯಂದಿರು ತಂದೊಡ್ಡಿದರೆಂದು ಹೇಳಲಾಗುವ ಪರಿಸ್ಥಿತಿಯ ಒತ್ತಡದಿಂದ. ಮಂತರೆಯ ಪಾತ್ರವು ರಾಮಾಯಣದ ಕಥೆಗೆ ತಿರುವುಕೊಟ್ಟ ಹಾಗೆ ಲಕ್ಷ್ಮಣನ ಜೀವಕ್ಕೆ ತಿರುವು ಕೊಟ್ಟವರು ಅವನ ಸೋದರಳಿಯಂದಿರು” ಎಂದು ನಾಟಕಕಾರ ಕಂಠಿ ಹನಮಂತರಾಯರು ಅಭಿಪ್ರಾಯ ಪಡುತ್ತಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ನಿರಂತರವಾಗಿ ಹೋರಾಡಿದ ಬ್ರಿಟೀಷ್ ಸಂಸ್ಥಾನಕ್ಕೆ ಸಿಂಹ ಸ್ವಪ್ನವಾದ ಹಲಗಲಿಯ ಬೇಡರ ಬಂಟರಾಗಲಿ ಹಾಗೂ ವೀರಸಿಂಧೂರ ಲಕ್ಷ್ಮಣನಾಗಲಿ ಅವರ ಚರಿತ್ರೆಯ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಬಂಡಾಯ ಸಾಹಿತಿ ಬರಗೂರ ರಾಮಚಂದ್ರಪ್ಪನವರು ಮಾಡಿರುವುದು ಗಮನಿಸಬೇಕಾದ ಅಂಶ.

ಬಯಲಾಟ

ಉತ್ತರ ಕರ್ನಾಟಕದಲ್ಲಿ ಜಾನಪದ ರಂಗಭೂಮಿಯ ಪ್ರಕಾರಗಳಾದ ಸಣ್ಣಾಟ, ದೊಡ್ಡಾಟ, ಶ್ರೀಕೃಷ್ಣ ಪಾರಿಜಾತದಂತಹ ಬಯಲಾಟಗಳು ದಟ್ಟವಾದ ಪ್ರಭಾವವನ್ನೇ ಬೀರಿವೆ. ಅಂತ ಒಂದು ಸಂದರ್ಭದಲ್ಲಿ ವೃತ್ತಿರಂಗಭೂಮಿಯು ಗ್ರಾಮೀಣ ಕಲಾವಿದರನ್ನು ಆಕರ್ಷಿಸಿತು. ಗ್ರಾಮೀಣ ಭಾಗದ ಪ್ರತಿಭಾವಂತ ಕಲಾವಿದರು, ನಾಟಕಕಾರರು, ವೃತ್ತಿರಂಗ ಭೂಮಿಯನ್ನು ಬೆಳೆಸಿದರು. ಶ್ರೀಮಂತಗೊಳಿಸಿದರು. ಅದೇ ನಾಟಕಕಾರರು ಗ್ರಾಮೀಣ ಕಲಾವಿದರನ್ನು ಒಟ್ಟುಗೂಡಿಸಿ ತಮ್ಮ ವೃತ್ತಿರಂಗಭೂಮಿಯ ನಾಟಕಗಳನ್ನೇ ಜಾತ್ರೆ, ಉತ್ಸವ, ಹಬ್ಬಹರಿದಿನಗಳಲ್ಲಿ ಪ್ರಯೋಗಿಸಿದರು. ಇಂತ ಒಂದು ಪರಂಪರೆ ಆಯಾ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ನಿರಂತರವಾಗಿ ಸಾಗಿ ಬರುತ್ತಿದೆ. ಇದು ಒಂದು ಗ್ರಾಮೀಣ ರಂಗಭೂಮಿ ನಮ್ಮ ಹಳ್ಳಿಯ ಜನರ ದೃಷ್ಟಿಯಲ್ಲಿ ಬಯಲಾಟ.

ವೀರಸಿಂಧೂರ ಲಕ್ಷ್ಮಣ ಬಯಲಾಟ ಮತ್ತು ಕ್ರಾಂತಿಕಾರಿ ನಾಟಕ

ಲಕ್ಷ್ಮಣರಾವ್ ಪುರಿಯವರು ರಚಿಸಿದ ವೀರಸಿಂಧೂರ ಲಕ್ಷ್ಮಣ ನಾಟಕ ಗುಳೇದಗುಡ್ಡದ ಹರದೊಳಿಯ ಶ್ರೀರಾಮ ನಾಟ್ಯ ಸಂಘದವರು ಶ್ರೀ ಮಾರುತೇಶ್ವರ ಕಾರ್ತಿಕೋತ್ಸವಕ್ಕೆ ಪ್ರಯೋಗಕ್ಕಾಗಿ ಸಜ್ಜುಗೊಳಿಸುತ್ತಿದ್ದರು. ಖ್ಯಾತ ನಾಟಕಕಾರ ದಿ. ಎಚ್.ಆರ್. ಭಸ್ಮಯ ವರದು ಈ ನಾಟಕದಲ್ಲಿ ಸ್ತ್ರೀ ಪಾತ್ರದ ಅಭಿನಯ, ನಿರ್ದೇಶನವು ಕೂಡಾ ಅವರದೆ. ಈ ನಾಟಕದಲ್ಲಿ ಲಕ್ಷ್ಮಣನಾಗಿ ಕೊಚೆಪ್ಪ ಹಾಲನ್ನವರ, ನರಸ್ಯಾ ಚನ್ನಮಲ್ಲಪ್ಪ ತೋಟದ, ಕಟಕ್ ಇನ್‌ಸ್ಪೆಕ್ಟರ್ ವಾಯ್.ಬಿ. ಗೌಡರ, ಹಾರ‌್ಮೋನಿಯಂ ಮಾಸ್ತರರಾಗಿ ಎಚ್.ಟಿ. ಪವಾರ ಅವರು ಕಾರ್ಯನಿರ್ವಹಿಸುತ್ತಿದ್ದರು. ಕಾರ್ತಿಕೋತ್ಸವ ಸಮೀಪಿಸುತ್ತಿದ್ದಂತೆ ನಾಟಕದ ರಂಗ ತಾಲಿಮು ಮ್ಯಾಳದ ಮನಿ ಕಿಕ್ಕಿರಿದು ತುಂಬುತ್ತಿತ್ತು.

ವೀರಸಿಂಧೂರ ಲಕ್ಷ್ಮಣ ನಾಟಕದ ರಂಗ ತಾಲಿಮು ನಡೆದಿದೆ ಎಂಬ ಸುದ್ದಿ ಕೇಳಿ ಮೇಲೆತ್ತರದ ಆಳು, ದಿರೋದಾತ್ತ ನಿಲುವು. ವಕ್ರಹುಬ್ಬು, ಮುಖದ ತುಂಬ ಗಡ್ಡ ಮೀಸೆ, ಹೊತ್ತು ಕುಂಟುತ್ತಾ ಬಂದು ಮ್ಯಾಳದ ಮನೆಯಲ್ಲಿ ಕುಳಿತುಕೊಂಡ. ಕಲಾವಿದರು ತಮ್ಮ ತಮ್ಮ ಪಾತ್ರಕ್ಕೆ ತಕ್ಕಂತೆ ಜೀವ ತುಂಬುವ ಪ್ರಯತ್ನ ಮಾಡುತ್ತಿದ್ದರು. ಅವರೆಲ್ಲರ ಅಭಿನಯ ವನ್ನು ತದೇಕಚಿತ್ತದಿಂದ ನೋಡುತ್ತಿದ್ದ ಕೆಲವು ಸನ್ನಿವೇಶಗಳು ಮೈಮನಸ್ಸನ್ನು ಕೆರಳಿಸಿದ್ದವು. ನಾಟಕದ ದೃಶ್ಯದಲ್ಲಿ ಲಕ್ಷ್ಮಣ ಮತ್ತು ಅವನ ಅಳಿಯಂದಿರು ಊಟಕ್ಕೆ ಕುಳಿತುಕೊಳ್ಳುವ ಸಂದರ್ಭ ಆಗ ನಾಟಕದ ರಂಗು ತಾಲಿಮು ನೋಡುತ್ತಿದ್ದ ವ್ಯಕ್ತ ಇದ್ದಕ್ಕಿದ್ದಂತೆ ಕುಳಿತಲ್ಲಿಂ ದಲೇ ಹೊರಕ್ಕೆ ಜಿಗಿದ. ರಂಗ ತಾಲಿಮು ನೋಡುತ್ತಿದ್ದ ರಂಗಾಸಕ್ತರು ಗಾಬರಿಗೊಂಡರು. ನಂತರ ಆ ವ್ಯಕ್ತಿಯ ಸಮೀಪ ಬಂದು ತಬ್ಬಿಬ್ಬಾದರು. “ನಾವು ಮಾಡಿದ್ದೆಲ್ಲ ರಗಡೈತಿ, ಇದರಾಗೆನೈತಿ ಆದರೂ ಕವಿ ತನಗೆಷ್ಟು ತಿಳಿದೈತಿ ಅಷ್ಟ ಬರದಾನ ಆದರ ನನ್ನ ಮಾವ ಸಾಯೂ ದೃಶ್ಯ ಬಂದಾಗ ನನ್ನಿಂದ ನೋಡಾಕ ಆಗಲಿಲ್ಲ. ಅದಕ ಕುಳಿತಲ್ಲಿಂದ ಜಿಂಕಿಯಂಗ ಜಿಗಿದ್ಯಾ” ಎಂದ ಆತ ಬೇರೆ ಯಾರು ಆಗಿರಲಿಲ್ಲ ಲಕ್ಷ್ಮಣನ ಸೋದರಳಿಯ ನರಸ್ಯಾ ಆಗಿದ್ದ. ನಡೆಯುವಾಗ ಕುಂಟುತ್ತಿದ್ದ ಲಕ್ಷ್ಮಣನು ಸತ್ತ ಮೇಲೆ ಬ್ರಿಟೀಷರು ಅವರನ್ನು ಬಂಧಿಸಿ ಅವರ ಕಾಲಲ್ಲಿಯ ಹಿಂಬಡದಲ್ಲಿಯ ನರವನ್ನು ಕತ್ತರಿಸಿದ್ದರು. ಮಿಂಚಿನಂತೆ ಓಡುತ್ತಿದ್ದ ನರಸ್ಯಾ ಮುಲೆಗುಂಪಾಗಿದ್ದ ಅವನನ್ನು ಕಣ್ಣಾರ ಕಂಡ ಜನತೆ ಮಮ್ಮಲ ಮರುಗಿದ್ದರು.

ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಪಿ.ಬಿ. ದುತ್ತರಗಿಯವರ ವೀರಸಿಂಧೂರ ಲಕ್ಷ್ಮಣ ನಾಟಕ ಹಸ್ತಪ್ರತಿಯಲ್ಲಿಯೇ ಇದ್ದು ವೃತ್ತಿರಂಗಭೂಮಿಯಲ್ಲಿ ಮಾತ್ರ ಪ್ರಯೋಗ ಕಂಡಿದೆ.

ಕರ್ನಾಟಕದ ಪ್ರಮುಖ ಸಂಘ ಸಂಸ್ಥೆಗಳು ರಂಗಭೂಮಿಯ ಹೆಸರಾಂತ ಚಲನಚಿತ್ರ ಕಲಾವಿದರಿಂದ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾದಲ್ಲಿಯೂ ಜಯಭೇರಿ ಭಾರಿಸಿ, ಈವರೆಗೂ ಸುಮಾರು ಎಪ್ಪತ್ತೈದು ಸಾವಿರಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡ ಅತ್ಯಂತ ಜನಪ್ರಿಯ ಹಾಗೂ ಕುತೂಹಲಕಾರಿ ಕ್ರಾಂತಿಕಾರಿ ನಾಟಕ ವೀರ ಸಿಂಧೂರ ಲಕ್ಷ್ಮಣ ಎಂದು ಕೌವಟಗಿಯ ಸಂಗಮೇಶ ಆರ್. ಗುರವ ಅಭಿಪ್ರಾಯ ಪಡುತ್ತಾರೆ.

ದೇಶಿಭಾಷೆಯ ಸಹಜ ಸಂಭಾಷಣೆ ನಾಟಕಕ್ಕೆ ಮೆರಗು ತಂದಿದೆ. ನಾಟಕ ರಚನೆಯ ತಂತ್ರಗಾರಿಕೆ ಕೂತುಹಲಕೆರಳಿಸುತ್ತಿದೆ. ಒಂದೊಂದು ದೃಶ್ಯಗಳು ರೋಮಾಂಚನಕಾರಿಯಾಗಿವೆ. ಈ ನಾಟಕವು ಹಲವಾರು ಮರು ಮುದ್ರಣಗಳನ್ನು ಕಂಡಿದೆ. ನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಹೆಚ್ಚು ಪ್ರಯೋಗಗಳನ್ನು ಕಂಡ ಕೃತಿಯೂ ಇದಾಗಿದೆ.

ದೃಶ್ಯ ತುಳಸಿಗೆವಿಯ ಹನಮಪ್ಪನ ಗುಡಿ

ಪೂಜಾರಿ : ನರಸವ್ವ ಇವನ ಹಡದ ನಿನ್ನ ಹೊಟ್ಟೆ ಪುಣ್ಯದ ಒಡಲವ್ವ ಎಂಥಾ ವೀರ ಮಗನನ್ನ ನಾಡಿಗೆ ಅರ್ಪಿಸಿದೆವ್ವ ತಾಯಿ, ನಿನ್ನ ಮಗನ ಭುಜದ ಮ್ಯಾಲ ಇರೋದು ಮಚ್ಚಿ ಅಲ್ಲವ್ವ, ಮಾರುತಿ ಪದ್ಮ ಬಂಡಿಗಲ್ಲ ಬಂದ ಅಪ್ಪಳಿಸಿದ್ರೂ ಕಲ್ಲು ಪುಡಿಪುಡಿಯಾಗುತ್ತ ಹೊರ್ತಾಗಿ ಇವಗೇನೂ ಆಗೋದಿಲ್ಲ. ಇಂಥ ಮಕ್ಕಳನ್ನು ಹಡಿಬೇಕಾದ್ರೂ ಪುಣ್ಯಬೇಕು ನರಸವ್ವ….. ಪುಣ್ಯವಂತೆವ್ವಾ ನೀನು ಪುಣ್ಯವಂತಿ.

ನರಸವ್ವ : ಎಪ್ಪಾ……

ಪೂಜಾರಿ : ಹೌದು ನರಸವ್ವ ಈ ನಿನ್ನ ಮಗ ರಾಜನಾಗಿ ಹುಟ್ಟದೇ ಇದ್ರೂ ರಾಜರನ ಮೆಟ್ಟಿ ಆಳುವಂತ ಧೀರನಾಗತಾನವ್ವ. ನಿನ್ನ ಹೆಸರು ನಿನ್ನ ಗಂಡನ ಹೆಸರು ತಾನು ಹುಟ್ಟಿ ಬೆಳೆದ ಸಿಂಧೂರ ಹೆಸರು ಸೂರ್ಯ ಚಂದ್ರರಿರುವವರೆಗೂ ಉಳಿಸತಾನವ್ವಾ. ಈ ನಿನ್ನ ಮಗ ಲಕ್ಷ್ಮಣ. ಲಕ್ಷ್ಮಣಾ ಅನ್ನುವ ಹೆಸರು ಕೇಳಿದವರೆಲ್ಲಾ ತಮ್ಮ ಮಕ್ಕಳಿಗೂ ಲಕ್ಷ್ಮಣ ಅಂತನೆ ಕರಿಬೇಕು ಅನ್ನೂ ಹಾಂಗ ಎಲ್ಲರ ಬಾಯಿಯಲ್ಲಿಯೂ ಸವಿಸಕ್ಕರಿಯಾಗಿ ಉಳಿತಾ ನವ್ವಾ ನಿನ್ನ ಮಗ ಲಕ್ಷ್ಮಣಾ, ಲಕ್ಷ್ಮಣಾ ಬಡವರನ ಮರಗಸ ಬ್ಯಾಡಾ, ಅನ್ಯಾಯಕ್ಕೆ ತಲೆ ತಗದುಕೊಡುವ ಪ್ರಸಂಗ ಬಂದ್ರೂ ನೀನು ಹಿಂದಕ ಸರಿಬ್ಯಾಡಾ.

ನರಸವ್ವ : ಎಪ್ಪಾ ಇನ್ನೊಂದು ಹೋದ ಶನಿವಾರ ಬಂದಾಗ ನಾನು ಒಂದು ತಾಯಿತಾ ಹೇಳಿದಿನಲ್ರಿ ಮಾಡಿರೇನ್ರಿ?….. ಇದ್ರ ಇವನಿಗೆ ಕಟ್ಟಿಬಿಡ್ರಿ.

ಪೂಜಾರಿ : ಹಂ. ಚಲೊ ನೆನಪ ಮಾಡಿದೆವ್ವಾ…. ತಯಾರ ಮಾಡೇನಿ ತಡಿ ತರಲೆನಿ. (ಗರ್ಭದ ಗುಡಿಯೊಳಗಿಟ್ಟ ತಾಯಿತ ತಂದು ಲಕ್ಷ್ಮಣನಿಗೆ ಕಟ್ಟುವನು) ಲಕ್ಷ್ಮಣಾ ನಮ್ಮ ದೇಶ ಸ್ವತಂತ್ರ ಇಲ್ಲಾ. ನಮ್ಮನ್ನು ಪರಂಗಿ ಸರಕಾರದವರು ಆಳಾಕ ಹತ್ತ್ಯಾರ, ಅವರ ವಿರುದ್ಧ ನಮ್ಮ ದೇಶದ ಮಂದೆಲ್ಲಾ ಬಂಡ ಎಬ್ಬಿಸ್ಯಾರ. ಅವರ ಕೂಡ ನೀನು ಧೀರನಾಗಿ ನಿಲ್ಲು ಮಾರುತಿಯಂತೆ ಎಲ್ಲಕ್ಕೂ ಎದಿಗೊಟ್ಟುನಿಲ್ಲು ಬಡವರ ಹಿತಕ್ಕಾಗಿ ದೇಶದ ಸ್ವಾತಂತ್ರ್ಯ ಕ್ಕಾಗಿ ನಿನಗೆ ಎಂಥಾ ಕಷ್ಟ ಬಂದ್ರೂ ಅದನ್ನು ನುಂಗಿಕೊಂಡು ಧರ್ಮದ ದಾರ್ಯಾಗ ಸಾಗು. ನೀನು ಉಣ್ಣುವ ಮುಂದೆ ಮೊದಲನೆಯ ತುತ್ತು ಈ ಮಾರುತಿಗೆ ಅರ್ಪಿಸಿ ಉಟಾ ಮಾಡು. ಈ ಮಾರುತಿ ನಿನ್ನ ಕೊಳ್ಳಾಗ ಇರುವವರೆಗೂ ಯಾವ ಶಕ್ತಿಗೂ ನಿನ್ನನ್ನು ಬಗ್ಗಸಾಕೆ ಆಗುವು ದಿಲ್ಲಾ ಭಜರಂಗಬಲಿ ನಿನಗೆ ಒಳ್ಳೆಯದು ಮಾಡಲಿ.

ಬರಗಾಲದಿಂದ ಬಳಲುತ್ತಿದ್ದ ಜನ ಹಪ್ತೆ ತುಂಬಲಾರದೆ ಕಷ್ಟವನ್ನು ಅನುಭವಿಸುವ ಸಂದರ್ಭದಲ್ಲಿ ಗೌಡ ಕುಲಕರ್ಣಿಯವರಂತ ಜಮೀನ್ದಾರ ವಿರುದ್ಧ ಸಿಡಿದು ನಿಲ್ಲುತ್ತಾನೆ.

ಲಕ್ಷ್ಮಣ : ಬೇಡರ ಕುಲದಾಗ ಹುಟ್ಟಿದ ಈ ಲಕ್ಷ್ಮಣಗ ಹ್ಯಾ ಅಂತ ಅಂದ ಹೋದ ಕೋಳಿಯಂತ ಈ ನನ್ನ ಮಕ್ಕಳ ಗೋಣ ತಿರುವಿ ಇಡತಿನಿ. ಇನ್ನು ಮೇಲಾದರೂ ಇವರು ಬಡವರ ಬಗ್ಗೆ ದಯಾ ತೋರಿಸಿದ್ದರ ಇವರ ಗಂಟ್ಲಾ ಕಡದು ಬಿಸಿ ರಕ್ತಾ ಕುಡಿತಿನಿ. ಇದಕ ತಪ್ಪಿದರೆ ನಾನು ಸನದಿ ಸಾಬಣ್ಣನ ಮಗ ಲಕ್ಷ್ಮಣ ಅಲ್ಲಾ ಅಂತ ಈ ತುಳಸಿಗೇರಿ ಹನಮಪ್ಪನ ಮುಂದ ನಿನ್ನ ಪಾದಾ ಮುಟ್ಟಿ ಆಣಿ ಮಾಡಿ ಹೇಳ್ತಿನಿ ನಡಿಯವ್ವಾ.

ಜತ್ತದ ಜೈಲು

ಲಕ್ಷ್ಮಣ : ಈ ನಿಮ್ಮ ಕಟುಕತನದ ಬಲವಾದರೂ ಎಷ್ಟಿದೆ ಕಂಡೇ ಬಿಡ್ತಿನಿ ಅಂದು ಗಲ್ಲಿಗೇರಿದಾ ಅಂದು ಗಂಡುಗಲಿ ಸಂಗೊಳ್ಳಿಯ ಹುಲಿ ಶೂರ ರಾಯಣ್ಣ ನೀವು ಸುರಿಸಿದ ಲಾಠಿ ಏಟಿಗೆ ಬಗ್ಗದೆ, ಕೆಚ್ಚು ಕೆಡದೆ ನಿಂತು ಮುರಿದು ಬಿದ್ದ ಆ ಪಂಜಾಬಿನ ಸಿಂಹ ಲಾಲಾಲಜಪತರಾಯ ತಾಯಿಯಾಗಿ, ತಲೆಕೊಡುವೆ ಎಂದು ತನ್ನ ತಲೆಯನ್ನೆ ಬಲಿಕೊಟ್ಟ ತಾಯಿ ಭಾರತಮಾತೆಯ ಬಂಟಮಗವೀರಭಗತ್‌ಸಿಂಗ್ ನಿಮ್ಮ ದಬ್ಬಾಳಿಕೆ, ಧರ್ಪಕ್ಕೆ ಸರ್ಪದಂತೆ ಹೆಡೆಕೆದರಿ ನಿಂತ ನಾನಾದರೂ ಇಂದು ನೀನು ಹೇಳುವ ಈ ಸಾವಿನ ಹೆದರಿಕೆಯನ್ನು ನನ್ನ ದೋತರದ ಚುಂಗಿನ್ಯಾಗ ಕಟಗೊಂಡ ಬಂದೀನಲೇ ಕಟಗಾ ಪ್ರಾಣದ ಭಯಬಿಟ್ಟು ನಿರ್ಭಯನು ಈ ಬ್ಯಾಡ.

ಬ್ರೀಟಿಷ ಅಧಿಕಾರಗಳ ದರ್ಪ ದೌರ್ಜನ್ಯವನ್ನು ಮೆಟ್ಟಿನಿಂತ ಚಿತ್ರಣ ರೋಮಾಂಚನ ವನ್ನುಂಟು ಮಾಡುತ್ತದೆ.

ಗಾರ್ಮನ್ ಆಫೀಸ್

ಗಾರ್ಮನ್ : ಓ ಲಚಮನ್ ಲಚಮನ್ ಲಚಮನ್ ಹೀ ಬಿಕೆಮ ಬಿಗ್ ಎನ್‌ಮೀ ಪಾರ್ ಆಸ್. ಜಗತ್ತನ್ನೆ ಆಳುವ ಬ್ರಿಟೀಷ್ ಸರಕಾರಕ್ಕೆ ವಿರೋಧಿಯಾದ ಚಾವಡಿಯನ್ನು ಮುರಿದು ಅಳಿಯಂದಿರನ್ನು ಬಿಡಿಸಿಕೊಂಡು ಹೋದ. ಜೈಲುಮುರಿದು ಪರಾರಿಯಾದ ಈಗ ಗೌಡನನ್ನು ಕೊಲೆ ಮಾಡಿ ನಮ್ಮ ಸರಕಾರಕ್ಕೆ ಸವಾಲು ಹಾಕಿದ. ಓ ಮಾಯ್, ಗಾಡ್ ಬಟ್ ಒಬ್ಬ ವಾಲಿಕಾರ ಇಂತ ಶೂರನಿರಬೇಕಾದರೆ ಈ ಭಾಗದಲ್ಲಿಯ ರಾಜ ಮಹಾರಾಜರು ಕಿಂಗ್ ಆಸ್ ಕಿಂಗ್ಸ್ ಎಂಥಾ ಶೂರರಿರಬೇಕು. ಏನಾದರೇನು ಬಟ್ ಆಯ್‌ಡೊಂಟ್ ಕೇರ್ ಜಗತ್ತನ್ನೆ ಆಳುವ ಬ್ರಿಟೀಷ ಸರಕಾರಕ್ಕೆ ದಿಸ್ ಇಂಡಿಯಾ ಈಸ್ ಓನ್ಲಿ ಎ ಡಸ್ಟ್ ಆಫ್ ಬರ್ನಿಂಗ್ ಸಿಗರೇಟ್.

ಹುಲಿ ಚಿರತೆ ಬೇಟೆಯಾಡುವ ಬೇಡರ ಭಂಟರಿಗೆ ಶೌರ್ಯ ಸಾಹಸಗಳು ಹುಟ್ಟಿನಿಂದಲೇ ಬಂದಂತವುಗಳು ಕೇವಲ ತನ್ನ ಮೂರು ಅಳಿಯಂದಿರನ್ನು ಕಟ್ಟಿಕೊಂಡು ಜಮೀನ್ದಾರರ ವಿರುದ್ಧ ವರ್ಗ ಸಂಘರ್ಷಕ್ಕೆ ಇಳಿದು ಬ್ರಿಟೀಷ್ ಸರಕಾರದ ದಬ್ಬಾಳಿಕೆಗೆ ಎದೆಯೊಡ್ಡಿ ನಿರಂತರ ಹೋರಾಟ ಮಾಡಿ ಬ್ರಿಟೀಷ್ ಸರ್ಕಾರವನ್ನು ಬೆಚ್ಚಿಬೀಳಿಸಿದ ಎಂಟೆದೆಯ ಭಂಟ ವೀರಸಿಂಧೂರ ಲಕ್ಷ್ಮಣ.

ಬ್ರಿಟೀಷರ ಕುತಂತ್ರದಿಂದಾಗಿ ಸಿಂಧೂರ ಲಕ್ಷ್ಮಣ ಮೋಸದ ಬಲೆಯಲ್ಲಿ ಸಿಲುಕಿದ ಕಾಡಡವಿಯಲ್ಲಿ ಊಟಕ್ಕೆ ಕುಳಿತ ಸಂದರ್ಭದಲ್ಲಿ ಗುಂಡಿಗೆ ತನ್ನ ಎದೆಗುಂಡಿಗೆಯನ್ನು ಬಲಿಕೊಟ್ಟ ಬ್ರಿಟೀಷರು ಹೊಡೆದವರು ನಮ್ಮ ನಮ್ಮವರೆಯಾದರು. ಅವರು ಭಾರತೀಯ ಬ್ರಿಟೀಷರಾದರು.

ಸಾಹಿತ್ಯ ಕ್ಷೇತ್ರದಲ್ಲಿ ವೀರ ಸಿಂಧೂರ ಲಕ್ಷ್ಮಣ ಕೃತಿಯನ್ನು ವಿವಿಧ ದೃಷ್ಟಿಕೋನದಲ್ಲಿ ರಚಿಸಿದ್ದರೂ ಅವನ ಅಂತ್ಯ ಮಾತ್ರ ಅತ್ಯಂತ ಕೂತುಹಲಕಾರಿಯಾಗಿ ಚಿತ್ರಿಸಿದ್ದಾರೆ. ಸಿಂಧೂರ ಲಕ್ಷ್ಮಣನೆಂದರೆ ಸಾಕು ಮೈಯಲ್ಲಿ ಸ್ಫೂರ್ತಿ ತುಂಬುವದು. ನಾಟಕ ನೋಡಿದ ಕೇಳಿದ ಸಾರ್ಥಕಗೊಳ್ಳುವುದು.

* * *

 

ಈಚಿನ ಸಮೀಕ್ಷೆಯ ಪ್ರಕಾರ, ಕರ್ನಾಟಕದ ಮಟ್ಟಿಗೆ ಸುಮಾರು ೧೮೦ ನಾಯಕ ಪಾಳೆಯಗಾರರು ಅಸ್ಥಿತ್ವದಲ್ಲಿದ್ದುದು ಖಚಿತಪಡುತ್ತದೆ. ಇವುಗಳ ಪೈಕಿ ಇಂದಿಗೂ ಜೀವಂತವಿರುವ ಸಂಸ್ಥಾನಗಳು ಸುಮಾರು ಇಪ್ಪತ್ತೈದು ಇಲ್ಲಿ ಉತ್ತರ ಕರ್ನಾಟಕದ ದೇಸಾಯಿ ಮನೆತನಗಳನ್ನು ಲೆಕ್ಕಕ್ಕೆ ಹಿಡಿದಿಲ್ಲ.
   – ಪ್ರೊ. ಲಕ್ಷ್ಮಣ್ ತೆಲಗಾವಿ