ಸ್ನೇಹಿತರೆ, ವೀರಸಿಂಧೂರ ಲಕ್ಷ್ಮಣ ಸಾಬು ಮತ್ತು ನರಸವ್ವ ದಂಪತಿಗಳ ವೀರ ಪುತ್ರ. ಭೀಮಕಾಯದ ಲಕ್ಷ್ಮಣ ತುಳಸಿಗಿರೀಸನ ವರಪ್ರಸಾದ. ಕಾಡು ಬೆಟ್ಟದ ಮಧ್ಯೆಯೇ ಸುತ್ತಿ ನಿಸರ್ಗದ ಒಡನಾಟದಲ್ಲಿ ಬೆಳೆದದ್ದು ಆತನ ಸಂಸ್ಕೃತಿ. ನಟ್ಟು ಕಡಿಯುವುದರಲ್ಲಿ ಆತನದ್ದು ಎತ್ತಿದ ಕೈ. ಬೀಳೂರು ಶ್ರೀಗಳು ಆತನ ಸಾಹಸಕ್ಕೆ ಹರಸಿದರು. ಬ್ರಿಟೀಷರ ಕೈಗೊಂಬೆಗಳಾಗಿದ್ದ ಜಮೀನ್ದಾರರು ಭೀಕರ ಬರದಲ್ಲಿಯೂ ಬಿರಾಡ ಭೂಕಂದಾಯ ವಸೂಲಿ ಮಾಡುವುದರ ವಿರುದ್ಧ ಸಿಡಿದೆದ್ದ ಲಕ್ಷ್ಮಣ, ಈ ಹೋರಾಟದ ಮೂಲಕವೇ ಬ್ರಿಟೀಷರ ವಿರುದ್ಧ ಹೋರಾಟ ಆರಂಭಿಸಿದ.

ಹಳ್ಳಿಗಳಲ್ಲಿ ಜನರನ್ನು ಸಂಘಟಿಸಿ ದಾಸ್ಯದ ವಿರುದ್ಧ ಧ್ವನಿ ಎತ್ತುವಂತೆ ಮಾಡಿದ. ಇದರಿಂದ ಕಂಗಾಲಾದ ಬ್ರಿಟೀಷರು ಆತನ ಬಂಧನಕ್ಕೆ ಜಾಲ ಬೀಸಿದರು. ಅಳಿಯಂದಿರರಾದ ನರಸ್ಯಾ, ಗೋಪಾಲಿ, ಸಾಬಾರೊಂದಿಗೆ ಹೋರಾಟದ ಗುಂಪು ಕಟ್ಟಿದ. ಬ್ರಿಟೀಷರ ಕಾವಲು ಬೇಧಿಸಿ ಕಾಡು ಸುತ್ತಿದ. ಶ್ರೀಮಂತರಿಗೆ ಸಿಂಹಸ್ವಪ್ನನಾಗಿ, ದುರ್ಬಲರ, ದೀನದಲಿತರಿಗೆ ಆಸರೆಯ ಶಕ್ತಿಯಾಗಿ ನಿರಂತರವಾಗಿ ದುಡಿದ ಲಕ್ಷ್ಮಣನಿಗೆ ಆತನ ಊರು ಸಿಂಧೂರು ಬಿರುದಾಂಕಿತವಾಗಿ ಸೇರ್ಪಡೆಯಾಗಿತ್ತು. ವೀರ ಸಿಂಧೂರ ಲಕ್ಷ್ಮಣ ಕೊನೆಗೆ ದುಷ್ಟರ ಪಿತೂರಿಗೆ ಬಲಿಯಾಗಿ ಬೀಳಗಿಯ ಕಪ್ಪರ ಪಡಿಯವ್ವನ ಗುಡಿಯಲ್ಲಿ ಪ್ರಾಣಬಿಟ್ಟ.

ಇದಿಷ್ಟು ಸಿಂಧೂರ ಲಕ್ಷ್ಮಣನ ಸಂಕ್ಷಿಪ್ತ ಚರಿತ್ರೆ. ಹೀಗಿರುವ ವ್ಯಕ್ತಿಯನ್ನು ಬ್ರಿಟೀಷ್ ಸರಕಾರ ಹಾಗೂ ಅವರ ದಾಸ್ಯದಲ್ಲಿದ್ದ ಸಂಸ್ಥಾನಗಳು, ಶ್ರೀಮಂತರು, ಅಧಿಕಾರಿಗಳು ಆತನನ್ನು ದರೋಡೆಕೋರ, ಕಳ್ಳ ಮುಂತಾದ ರೀತಿಯಲ್ಲಿ ಚಿತ್ರಿಸಿವೆ.

ಆತ ಸ್ವಾಭಿಮಾನಿ, ಹೋರಾಟಗಾರ, ಪರನಾರಿಪುರುಷನಾಗಿದ್ದ. ಒಂದು ಅಧ್ಯಯನದ ದೃಷ್ಠಿಯಿಂದ ಮತ್ತು ಸಂಶೋಧನೆಯ ದೃಷ್ಠಿಯಿಂದ ಜನರ ದೃಷ್ಟಿಯಿಂದ ಒಬ್ಬ ಮಹಾನ್ ಪುರುಷನ ಬಗ್ಗೆ ಎರಡು ರೀತಿಯ ಅಭಿಪ್ರಾಯಗಳನ್ನು ಕಾಣುತ್ತೇವೆ. ಈ ಅಭಿಪ್ರಾಯಗಳನ್ನು ಇಟ್ಟುಕೊಂಡು ನೋಡಿದಾಗ ಒಂದಕ್ಕೊಂದು ಬಹಳ ತದ್ವಿರುದ್ಧವಾದವು. ಒಂದು ಸ್ಪಷ್ಟವಾಗಿ ತಿಳಿಯಬೇಕಾದರೆ, ಈ ಆಳುವ ವರ್ಗ ಏನಿದೆಯೋ ತನಗೆ ಹಿತವಾಗಿರುವ ತನ್ನ ಆಳ್ವಿಕೆಯನ್ನು ನಡೆಸಿಕೊಂಡು ಹೋಗಲಿಕ್ಕೆ ಯಾರು ಸಹಕಾರಿಯಾಗಿರುತ್ತಾರೆ ಮತ್ತು ತಾನು ಮಾಡುವ ಹುನ್ನಾರುಗಳು ಮತ್ತು ತಾನು ಮಾಡುವ ಸಮಾಜ ವಿರೋಧಿ ಕಾರ್ಯ ಚಟುವಟಿಕೆಗಳನ್ನು ಯಾರು ಸ್ವಾಗತಿಸುತ್ತಾ ಬರುತ್ತಾರೋ ಅವನು ಕೆಟ್ಟವನೇ ಆಗಿರಲಿ ಅವನು ಒಳ್ಳೆಯವನೇ ಆಗಿರಲಿ, ಅವನು ತಲೆಹೊಡೆಯುವ ವರ್ಗವೇ ಆಗಿರಲಿ ಅದನ್ನು ಒಳ್ಳೆಯ ರೀತಿಯಲ್ಲಿ ಕಾಣುತ್ತಾ ಇರುತ್ತದೆ.

ಅದನ್ನು ವಿರೋಧಿಸುವಂತವರು ಬದುಕನ್ನು ಸಮಾನವಾಗಿ ಕಾಣುವಂತವರು ಒಳ್ಳೆಯ ರೀತಿಯಲ್ಲಿ ಬದುಕಬೇಕೆಂದವರು ಯಾರಿಗೂ ಕೆಡುಕಾಗಬಾರದು ಎನ್ನುವಂತವರು ಆಳುವ ವರ್ಗದ ವಿರುದ್ಧವಾಗಿ ಮಾತನಾಡಿದರೆ ಅಥವಾ ಒಂದು ಸಣ್ಣ ಪ್ರತಿಕ್ರಿಯೆ ತೋರಿಸಿದರೆ ಅವರು ಕೊಲೆಗಡುಕರು ಅಥವಾ ಸಮಾಜ ಘಾತಕರು ಎಂದು ಚಿತ್ರಿಸುವ ಪರಂಪರೆ ನಮ್ಮಲ್ಲಿ ಬಂದಿದೆ. ಈ ಪರಂಪರೆ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಈ ಪರಂಪರೆಗೆ ವಿರುದ್ಧವಾಗಿ ನಮ್ಮ ಜನಪದ ಪರಂಪರೆ ನಿಂತಿದೆ. ಅದು ಎಷ್ಟು ಖಚಿತವಾಗಿ ಸ್ಪಷ್ಟ ಚಿತ್ರಣವನ್ನು ಕೊಡುತ್ತಾ ಬರುತ್ತದೆಂದರೆ ನಾನು ಒಂದು ಉದಾಹರಣೆ ಹೇಳುವುದರ ಮೂಲಕ ನನ್ನ ಚರ್ಚೆಯನ್ನು ಪ್ರಾರಂಭಿಸುತ್ತೇನೆ. ವಿಜಯನಗರ ಸಾಮ್ರಾಜ್ಯ ಬಹಳ ಸ್ಪಷ್ಟ ವಾಗಿ ನಮಗೆ ಗೊತ್ತಿದೆ. ಅದು ಇಡೀ ದೇಶದಲ್ಲೇ ಅತ್ಯಂತ ಉನ್ನತವಾದ ಸಾಮ್ರಾಜ್ಯ ಎಂದು. ಅದರ ಬಗ್ಗೆ ದೇಶ ವಿದೇಶದ ಚರಿತ್ರೆಕಾರರು ಬಂದು ಅಧ್ಯಯನ ಮಾಡಿದ್ದಾರೆ. ಇನ್ನು ಕೆಲವು ಮೂಲಭೂತವಾದಿಗಳು ಅದು ಹಿಂದೂ ಧರ್ಮವನ್ನು ಎತ್ತಿ ಹಿಡಿಯಲು ಹುಟ್ಟಿಕೊಂಡ ಸಾಮ್ರಾಜ್ಯ ಎಂದು ಹೇಳಲಾಗಿದೆ.

ಅಂದರೆ ಚರಿತ್ರೆಕಾರರಲ್ಲಿ ಅದರ ಬಗೆಗೆ ನಮಗೆ ಹೇರಳವಾದ ಅದ್ಭುತ ಮಾಹಿತಿಗಳು ಸಿಗುತ್ತವೆ. ಆದರೆ ಜನಪದರಲ್ಲಿ ಕಂಡುಬರುವುದು ಅತಿ ಕಡಿಮೆ. ಅದೇ ಪಕ್ಕದಲ್ಲಿರುವ ಕುಮಾರರಾಮನ ಬಗೆಗೆ ಜನಪದರು ಹಾಡು, ಕಥೆ, ಕಾವ್ಯಗಳನ್ನು ಕಟ್ಟಿರುವುದನ್ನು ಕಾಣಬಹುದು. ಮತ್ತೆ ಶಿಷ್ಟ ಸಾಹಿತಿಗಳು ಕುಮಾರರಾಮನ ಬಗೆಗೆ ಸಾಹಿತ್ಯವನ್ನು ಸೃಷ್ಟಿಮಾಡಿ ರುವುದನ್ನು ಕಾಣಬಹುದು. ಇಂತಹ ಒಂದು ಸಣ್ಣ ಸಾಮ್ರಾಜ್ಯದ ಬಗೆಗೆ ಸಾಹಿತ್ಯವನ್ನು ಸೃಷ್ಟಿ ಮಾಡಿರುವ ಜನಪದರು ವಿಜಯನಗರ ಸಾಮ್ರಾಜ್ಯವನ್ನು ಆಳಿದ ಕೃಷ್ಣದೇವರಾಯನ ಬಗೆಗೆ ಒಂದಿಷ್ಟು ರಚನೆಯಾಗಿರುವುದನ್ನು ಕಾಣಲಾರೆವು. ನಮಗೆ ಇದು ಅಚ್ಚರಿಯ ಸಂಗತಿ. ಇಲ್ಲಿ ತಿಳಿದುಕೊಳ್ಳಬೇಕಾಗಿರುವುದು ಇಷ್ಟೇ. ಯಾಕೆ ಜನಪದರು ಕುಮಾರರಾಮನನ್ನು ಇಷ್ಟಪಡುತ್ತಾರೆ ಅದೇ ಕೃಷ್ಣದೇವರಾಯನನ್ನು ಇಷ್ಟಪಡುವುದಿಲ್ಲ. ಬಹಳ ಸ್ಪಷ್ಟವೆಂದರೆ ಕುಮಾರ ರಾಮನ ಆಳ್ವಿಕೆ ಬಗೆಗೆ ಅವರು ಬಹಳ ಸಂತೋಷಪಡುತ್ತಾರೆ. ಅವರ ಜನಪದ ಕಾರ್ಯಗಳು ಜನರಿಗೆ ಹತ್ತಿರವಾಗುತ್ತವೆ. ಕಂಪಿಲನ ಆಳ್ವಿಕೆಯ ಸಂದರ್ಭದಲ್ಲಿ ವ್ಯವಸಾಯದ ಸಮಾಜ ಸೃಷ್ಟಿಯಾಗುತ್ತಾ ಇತ್ತು. ಅಲೆಮಾರಿಗಳೆಲ್ಲ ಸೇರಿ ವ್ಯವಸಾಯವನ್ನು ಮಾಡುವ ಸಂದರ್ಭವಿತ್ತು. ಕುಮಾರರಾಮನು ತನ್ನ ತಂದೆಯ ಆಳ್ವಿಕೆಯಲ್ಲಿ ಕೆರೆಕಟ್ಟಿಸುವುದರ ಮೂಲಕ, ಭಾವಿಗಳನ್ನು, ಕಾಲುವೆಗಳನ್ನು ತೋಡಿಸುವುದರ ಮೂಲಕ ವ್ಯವಸಾಯಕ್ಕೆ ಅನುಕೂಲ ಮಾಡಿಕೊಟ್ಟ. ಹಾಗೆ ತನ್ನ ಪರನಾರಿ ಸಹೋದರ ಗುಣದಿಂದಾಗಿ ಜನಮಾನಸದಲ್ಲಿ ಈಗಲೂ ಉಳಿದುಕೊಂಡಿದ್ದಾನೆ. ಕುಮಾರರಾಮನ ಬಗೆಗೆ ಕರ್ನಾಟಕದಾದ್ಯಂತ ಗುಡಿಗಳನ್ನು ಈಗಲೂ ನಾವು ಕಾಣುತ್ತೇವೆ. ಕುಮಾರರಾಮನ ಬಗೆಗೆ ಜಾತ್ರೆಗಳನ್ನು ಕಾಣುತ್ತೇವೆ. ಜನಪರ, ಸಮಾಜ ಪರ, ಮಾತೃಹೃದಯವಂತರಾಗಿರುವ ವ್ಯಕ್ತಿ, ಪರನಾರಿ ಸಹೋದರನಾಗಿರುವ ವ್ಯಕ್ತಿ ಈಗಲೂ ಜನಪದರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾನೆ. ಕುಮಾರರಾಮನ ಬಗೆಗೆ ಎಷ್ಟು ಹೇಳುತ್ತೇವೆಯೋ ಅದಕ್ಕೆ ಹತ್ತಿರವಾಗಿರುವಂತಹ ಸಿಂಧೂರ ಲಕ್ಷ್ಮಣ, ಒಂದು ರಾಜ್ಯ ಕಟ್ಟದೇ ಹೋಗಿರಬಹುದು. ಆದರೆ ಜನಪರವಾಗಿರುವ ಕೆಲಸಗಳನ್ನು ಮಾಡುವ ಮುಖಾಂತರ ಹಣವಂತರಿಂದ ದೋಚಿಕೊಂಡು ಅದನ್ನು ಶೋಷಣೆಗೆ ಒಳಗಾಗಿರುವವರಿಗೆ ಕೊಡುವ ಮುಖಾಂತರ ಇಲ್ಲಿ ಸಿಂಧೂರ ಲಕ್ಷ್ಮಣ ನಮಗೆ ಪ್ರಮುಖನಾಗುವನು. ಹಾಗಾಗಿನೇ ಸಿಂಧೂರ ಲಕ್ಷ್ಮಣನ ಬಗೆಗೆ ಲಾವಣಿ ಸಾಹಿತ್ಯ ಹೇರಳವಾಗಿ ಸಿಗುತ್ತದೆ. ನಾಟಕಗಳು, ಬಯಲಾಟಗಳು, ಜನಪದ ಸಾಹಿತ್ಯಗಳು ಸಮಗ್ರವಾಗಿ ದೊರೆಯುತ್ತವೆ. ಈಗಲೂ ಸಹ ಹಳ್ಳಿಗಳಲ್ಲಿ ಸಿಂಧೂರ ಸುತ್ತಮುತ್ತಲಿರುವ ಹಳ್ಳಿಗಳಲ್ಲಿ ಒಂದು ತಿಂಗಳು ಅಥವಾ ಎರಡು ತಿಂಗಳು ಕೆಲಸ ಮಾಡಿದರೆ ಸಾಕು ಸಾವಿರಾರು ಪುಟಗಳಷ್ಟು ಸಾಹಿತ್ಯ ಸಿಗುವಂತಿದೆ.

ದಾಸ್ಯ ಸಂಕೋಲೆಯಲ್ಲಿ ನರಳುತ್ತಿದ್ದ ನಾಡಿಗೆ ಸ್ವಾತಂತ್ರ್ಯ ತಂದುಕೊಡುವುದು, ಜಮೀನ್ದಾರರ ಸರ್ವಾಧಿಕಾರಿ ಪ್ರವೃತ್ತಿ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡಿದ ಬಗೆಗೆ ಮಾಹಿತಿಗಳು ದೊರೆಯುತ್ತವೆ. ಸಿಂಧೂರ ಲಕ್ಷ್ಮಣ ಕಪ್ಪರಪಡಿಯವ್ವನ ದೇವಸ್ಥಾನದಲ್ಲಿ ಊಟಕ್ಕೆ ಹೊರಟಾಗ, ಅಳಿಯಂದಿರು ಹೊರಡುವ ಸಂದರ್ಭದಲ್ಲಾದ ಅಪಶಕುನಗಳನ್ನು ಹೇಳಿದರೂ ಹೊರಡುತ್ತಾನೆ. ಆಗ ಅಳಿಯಂದಿರುಗಳಿಗೆ ಹೇಳುತ್ತಾನೆ. ತಾನು ನಂಬಿದ ತಾಯಿ ಕಪ್ಪರ ಪಡಿಯವ್ವನ ಸನ್ನಿಧಿ, ಆಕೆಯಪ್ರಸಾದ ಹಾಗೂ ಭೂಮಿತಾಯಿ ಈ ತಾಯಂದಿರುಗಳ ಸನ್ನಿಧಿಗೆ ಹೋಗುತ್ತಿರುವಾಗ ಬೇಡ ಅನ್ನಬಾರದು ಎನ್ನುತ್ತಾರೆ. ಆದರೆ ಮೋಸವನ್ನು ಮೂರು ತಾಯಂದಿರು ತಡೆಯಲಾಗಲಿಲ್ಲ. ತಾನು ನಂಬಿದ ದೈವದ ಸ್ಥಾನದಲ್ಲೆ ಅಂತ್ಯ ಕಂಡನು.

* * *

ಹಿಂದೆ ನಾಯಕ ಜನಾಂಗದ ವೀರರು ತೋಪಿನ ಬಾಯಿಗೆ, ಗುಂಡಿನ ಮಳೆಗೆ, ಕತ್ತಿ ಬಲ್ಲೆಗಳ ಹೊಡೆತಕ್ಕೆ ಜಗ್ಗದೆ ಎದೆಕೊಟ್ಟು ಮುಂದೆ ನಿಲ್ಲುತ್ತಿದ್ದುರಿಂದಲೇ ಈ ‘ನಾಯಕ’ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ.
   – ಶ್ರೀ ರಾಘವೇಂದ್ರ ಸ್ವಾಮಿಗಳು