‘ತಳಸಮುದಾಯ’ಗಳು ಎಂಬುದರ ಅರ್ಥವ್ಯಾಪ್ತಿಯನ್ನು ಈ ಸಂದರ್ಭದಲ್ಲಿ ಹೇಳಲು ಬಯಸುವುದಿಲ್ಲ. ಏಕೆಂದರೆ ಈಗಾಗಲೇ ಈ ವೇದಿಕೆಯಲ್ಲಿರುವ ಸ್ನೇಹಿತರು ಈ ಕುರಿತಾಗಿ ಯೋಗ್ಯಪೂರ್ಣ ಪ್ರಬಂಧಗಳನ್ನು ಮಂಡಿಸಿದ್ದಾರೆ. ಹಾಗಾಗಿ ನಾನು ಮತ್ತೆ ಇದನ್ನೇ ಪ್ರಸ್ತಾಪಿಸುವುದು ಸರಿಯಾಗಲಾರದೆಂಬುದು ನನ್ನ ಭಾವನೆ.

ಇಂದು ತಳಸಮುದಾಯಗಳು ಹಲವು ಬಗೆಯಿಂದ ಬದುಕಿನುದ್ದಕ್ಕೂ ಶೋಷಣೆಗೊಳಗಾಗುತ್ತಾ ಬಂದಿರುವುದು ಚಾರಿತ್ರಿಕ ಸಂಗತಿ. ಅದು ಶ್ರೀಮಂತರ, ಮೇಲ್‌ಜಾತಿಯವರ ಅಷ್ಟೇ ಏಕೆ ನನ್ನದೇ ಸಮುದಾಯದವರ, ತನ್ನದೇ ಕುಟುಂಬದವರ ಶೋಷಣೆಯನ್ನು ಅನುಭವಿಸುತ್ತಿದೆ. ಇಂಥ ಶೋಷಣೆಗೊಳಗಾದ ಸಮುದಾಯಗಳಿಗೆ ತಳಮಳ, ಅನಾಥ ಪ್ರಜ್ಞೆ ಕಾಡಿದೆ. ತಳಮಳದ ತಾಣವಾದ ಶ್ರಮಿಕನ ಮನಸ್ಸು ತಳಮಳಕ್ಕೆ ಕಾರಣವಾದ ಮೂಲವನ್ನು ಹುಡುಕಬೇಕಾದರೆ, ತಾನು ಶೋಷಣೆಗೊಳಗಾಗುತ್ತಿರುವ ಅರಿವು ಅವನಲ್ಲಿ ಮೂಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ತಳಸಮುದಾಯಗಳು ಪಾರಂಪರಿಕ ಹಲವು ಶೋಷಣೆ ಗಳ ನಡುವೆ ಆಧುನಿಕತೆಯೆಂಬುದು ಮನಸ್ಥಿತಿಯನ್ನು ವೈಭವೀಕರಿಸಲು ಮುಂದಾಗಿ ಕೆಳ ಸಮುದಾಯಗಳ ಮನಸ್ಥಿತಿಯನ್ನು ಕೀಳೀಕರಿಸುವಲ್ಲಿ ಮುಂದಾಗಿದೆ. ಅಂದರೆ ಆಧುನಿಕತೆಯ ಆಧುನಿಕ ಉತ್ಪಾದನಾ ವಿಧಾನದ ಬಹುಮುಖ್ಯ ಆಯಾಮಗಳು ಇಂಡಿಯಾದ ಜಾತಿರಚನೆಯ ಸ್ವರೂಪ ಮತ್ತು ಸ್ವಭಾವಗಳಲ್ಲಿ ಗತಿಶೀಲತೆಯನ್ನುಂಟು ಮಾಡಿವೆ.

ಇದರ ಪರಿಣಾಮ ತಳಸಮುದಾಯಗಳು ತಮ್ಮ ಆಚರಣೆ ಮತ್ತು ಜೀವನ ವಿಧಾನಗಳಲ್ಲಿ ತೀವ್ರತರಹದ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಹಂಬಲಿಸುತ್ತಿವೆ. ಸಂಸ್ಕೃತೀಕರಣ ಬಾಗಿಲು ತಟ್ಟುತ್ತಿದೆ. ಇದಕ್ಕೆ ತದ್ವಿರುದ್ಧವಾಗಿ ಶ್ರೀಮಂತ ವರ್ಗಗಳು ಸಾಮ್ರಾಜ್ಯಶಾಹಿಗಳ ನೆರಳಿನಲ್ಲಿ ಆಧುನೀಕರಣದ ಪ್ರಕ್ರಿಯೆಗಳಿಗೆ ಒಳಗಾಗುತ್ತಿವೆ. ಎರಡೂ ಹಂಬಲಿಸುತ್ತಿವೆ. ಆದರೂ ಪ್ರತಿಷ್ಠಿತ ವರ್ಗಗಳು ಈ ಪ್ರಕ್ರಿಯೆಯನ್ನು ಸಾಮಾಜಿಕ ಪ್ರತಿಷ್ಠೆಯನ್ನಾಗಿ ಮಾಡಿ ಕೊಂಡು ಹೆಡೆಯಿತ್ತಿ ನಿಲ್ಲುತ್ತವೆ. ಆದರೆ ಆಧುನೀಕರಣಕ್ಕೆ ಒಳಗಾದ ಕೆಳಸಮುದಾಯಗಳು ಅಥವಾ ಆದಿವಾಸಿ ಕುಟುಂಬಗಳು ಕೀಳರಿಮೆಯಲ್ಲಿ ಬಳಲುತ್ತಾ ತಮ್ಮ ಮೂಲ ಪ್ರವೃತ್ತಿ ಗಳನ್ನು ಹಪಾಹಪಿಯಲ್ಲಿ ನರಳುವಂತೆ ತೋರಿಸಲಾಗುತ್ತದೆ. ಉದ್ದೇಶಪೂರಿತ ವಿಸ್ಮೃತಿ ಯೊಂದನ್ನು ಅವುಗಳ ಮೇಲೆ ಹೇರಲಾಗುತ್ತಿದೆ. ಹೀಗಾಗಿ ಈ ವರ್ಗಗಳು ಪಡೆದುಕೊಳ್ಳುವ ಮತ್ತು ಕಳೆದುಕೊಳ್ಳುವ ಸಂದಿಗ್ಧತೆಗಳಲ್ಲಿಯೇ ಉಳಿದು ಬಿಡುವಂತಾಗುತ್ತದೆ. ಇದು ಆರ್ಥಿಕ ರಚನೆ ಮತ್ತು ಉತ್ಪಾದನಾ ವಿಧಾನಗಳ ಪ್ರಧಾನ ವೈರುಧ್ಯವೆಂದು ಕಾಣುತ್ತದೆ. ಹಾಗಾಗಿ ಜಾಗತಿಕವಾದ ರಾಜಕೀಯಾರ್ಥಿಕ ಸಂಬಂಧಗಳು ಹೊಸ ರೀತಿಯ ತಲ್ಲಣಗಳನ್ನು ಹುಟ್ಟು ಹಾಕುತ್ತಿವೆ. ಒಂದು ಹಂತದಲ್ಲಿ ಮನುಷ್ಯರಿಂದ ಮನುಷ್ಯರನ್ನು ಬೇರ‌್ಪಡಿಸುವ, ಕೀಳೀಕರಿಸುವ ಪ್ರವೃತ್ತಿಗಳು ಸಮಾಜದಲ್ಲಿ ಜೀವಂತವಾಗಿ ಉಳಿದು ಬಂದಿದ್ದವು. ಆದರೆ ಜಾಗತೀಕರಣದ ಫಲಿತಗಳು ಇಂದು ದೇಹ ಮನಸ್ಸುಗಳ ಮಧ್ಯೆಯೇ ವಿಕಾರಗಳನ್ನು, ಭಿನ್ನತೆಗಳನ್ನು ತಂದು ಹಾಕುತ್ತಿವೆ. ನಿಸರ್ಗ ಪ್ರಮುಖ ಸಾಮಾಜಿಕ ಬೆಳವಣಿಗೆಗಳನ್ನು ವಿಶ್ವಾಸರಹಿತ ಮನದ ಪ್ರವೃತ್ತಿಗಳನ್ನು ಕೇಂದ್ರೀಕೃತ ಆಕೃತಿಗಳನ್ನು ಢಾಳಾಗಿ ಬೆಳೆಸುತ್ತಿವೆ. ಆತನ ಭೋಗ ಜೀವನಕ್ಕೆ ಆಡಂಬರದ ಬದುಕಿಗೆ ಪ್ರೇರಣೆ ನೀಡುತ್ತಿವೆ. ಇಂತಹ ಸಂದರ್ಭದಲ್ಲಿ ಶ್ರಮಿಕ ವರ್ಗಗಳ ಅದರಲ್ಲೂ ಲಂಬಾಣಿ ಸಮುದಾಯಗಳ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಪುನಾರಚನಾ ಹಂಬಲಿಕೆಗಳ ಕುರಿತು ಚರ್ಚಿಸುವುದು ಬಹುಮುಖ್ಯವಾಗಿದೆ.

ಆಧುನಿಕತೆಯ ಹೊಸ ಹೊಸ ನೆಲೆಗಳಾದ ಖಾಸಗೀಕರಣ, ಉದಾರೀಕರಣ, ಕಂಪ್ಯೂಟರೀ ಕರಣಗಳಂತಹವುಗಳು ಮನುಷ್ಯನ ಅಸ್ತಿತ್ವವನ್ನೇ, ಆತನ ಸೃಷ್ಟ್ಯಾತ್ಮಕತೆಯನ್ನೇ ಬಲಿತೆಗೆದು ಕೊಳ್ಳುತ್ತಿವೆ. ಒಂದು ಕಾಲದಲ್ಲಿ ಮೈಲಕೂಲಿ (ರಸ್ತೆಕೆಲಸ) ಒಡ್ಡುಕಟ್ಟಿ ಕಡಿದು ಜೀವಿಸುತ್ತಿದ್ದ, ಜಲ್ಲಿ ಒಡೆದು ಸಂಜೆಗಂಜಿಯನ್ನು ಹುಟ್ಟಿಸಿಕೊಳ್ಳುತ್ತಿದ್ದ ಸಮುದಾಯಗಳು, ಉರುವಲು ಕಟ್ಟಿಗೆ ಮಾರಿ ಜೀವನ ಸಾಗಿಸುತ್ತಿದ್ದ ಲಂಬಾಣಿ ಸಮುದಾಯಗಳು ಅತಿಯಾದ ಯಂತ್ರ ನಾಗರೀಕತೆಯ ಫಲವಾಗಿ ಬದುಕನ್ನೇ ಕಳೆದುಕೊಳ್ಳುತ್ತಿವೆ. ದೊಡ್ಡ ದೊಡ್ಡ ಕ್ರೇನ್‌ಗಳು, ಬುಲ್ಡೋಜರ್‌ಗಳು, ಎಲ್.ಪಿ.ಜಿ., ಗ್ಯಾಸ್, ಗ್ರೀಜರ್, ಸೋಲಾರ್‌ಗಳು ಇಂಥ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿವೆ. ಲಂಬಾಣಿ ಸಮುದಾಯದ ಮಹಿಳೆಯರು ತಾವು ಧರಿಸಲು ಬಟ್ಟೆಗಳ ಮೇಲೆ ಕಸೂತಿಕಲೆ ಅರಳಿಸಿ ಅಲಂಕಾರವಾಗಿ ಕಾಣಲು ಹಾಕುತ್ತಿದ್ದರು. ಇದು ಪರಂಪರಾ ಗತವಾಗಿ ಮುಂದುವರೆದಿತ್ತು. ಕಸೂತಿ ಕಲೆಗಳು ಮತ್ತು ಮಹಿಳೆಯ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಧುನಿಕತೆಯ ಪ್ರಭಾವ ಮತ್ತು ಪರಿಣಾಮಗಳನ್ನು ಬೀರಿರುವುದನ್ನು ಗಮನಿಸಬೇಕು. ಒಂದು ಕಾಲದಲ್ಲಿ ಸೀಮಿತ ಸಮುದಾಯವು ಅಂತಹ ಸಂದರ್ಭದಲ್ಲಿ ಅಂತಹ ಕಸೂತಿ ಕಲೆಗಳಿಗೆ ಆಧುನಿಕ ರೂಪನೀಡಿ ವಿವಿಧ ವಲಯಗಳಲ್ಲಿ ಉಪಯೋಗಿಸಿ ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಿದ್ದು ಆಧುನಿಕತೆಯ ಕೊಡುಗೆ ಸ್ವಾಗತಾರ್ಹವಾದು ದಾಗಿದೆ. ಆದರೆ ಜನಪ್ರಿಯತೆಯ ನೆಪದಲ್ಲಿ ಲಂಬಾಣಿ ಮಹಿಳೆಯರನ್ನು ಶೋಷಣೆ ಮಾಡಲಾ ಗುತ್ತಿದೆ. ಕಸೂತಿ ಕಲೆಗಳು ಹೊಂದಿರುವ ವಸ್ತ್ರಗಳತ್ತ ಜನರ ಅಭಿರುಚಿಗಳು ಹೆಚ್ಚಾದಂತೆ, ಅನೇಕ ಸಿದ್ದ ಉಡುಪು ತಯಾರಿಕ ಕಂಪನಿಗಳು ಇಂತಹದೇ ಉಡುಪುಗಳನ್ನು ಯಂತ್ರಗಳ ಮೂಲಕ ಹೊಸ ಹೊಸ ರೂಪಗಳನ್ನು ನೀಡಿ ಎಂಬ್ರಾಯಿಡರ್, ದರಕ್ಕಿಂಗ್ ಸಾರಿ, ಚೂಡಿ ದಾರ್, ವರಕ್ಕಿಂಗ್‌ಸ್ಟೋನ್ ಸ್ಯಾರಿಗಳೆಂದು ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿದೆ. ಇದೇ ಮಾದರಿಯ ಕಸೂತಿಯ ಕಲೆಗಳು ಮಹಿಳೆಯರು ಧರಿಸುವ ಉಡುಪುಗಳಲ್ಲಿ ಅಷ್ಟೇ ಅಲ್ಲದೇ ವಿವಿಧ ಉಪಯೋಗಗಳ ವಸ್ತುಗಳು ಅಂದರೆ, ವ್ಯಾನಿಟಿ ಬ್ಯಾಗ್, ಲೇಡಿಸ್ ಸ್ಲಿಪ್ಪರ್, ಫೈಲ್ಸ್, ಪಂಕ್ಸನ್ ಡೆಕೋರೇಷನ್, ಹೌಸ್ ಡೆಕೋರೇಷನ್, ಹೂದಾನಿ, ವಾಚ್, ಲೇಡಿಸ್ ಬೆಲ್ಟ್ ಮುಂತಾದವುಗಳಲ್ಲಿಯೂ ವಿಸ್ತರಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಇಂಥ ವಸ್ತುಗಳಿಗೆ ಬೇಡಿಕೆ ಹೆಚ್ಚಿದ್ದು ಬೆಲೆಗಳು ಹೆಚ್ಚಿದೆ. ಅಲ್ಲದೆ ವಿವಿಧ ಕಂಪನಿಗಳು ಸ್ವತಃ ಲಂಬಾಣಿ ಮಹಿಳೆಯರ ಮೂಲಕ ಬಟ್ಟೆಗಳ ಮೇಲೆ ಡಿಜೈನ್‌ಗಳನ್ನು, ಕಸೂತಿಗಳನ್ನು ಸಿದ್ದಪಡಿಸಿಕೊಳ್ಳುತ್ತಿವೆ. ಕಸೂತಿಗೆ ಬೇಕಾದ ಸಾಮಗ್ರಿಗಳನ್ನು ತಾನೇ ಕೊಟ್ಟು ಇಂತಿಷ್ಟು ಬಟ್ಟೆಗೆ ಸುಮಾರು ೭೫ ರಿಂದ ೧೫೦ರೂ ಗಳವರೆಗೆ ‘ಕೂಲಿ’ ಎಂದು ನಿಗದಿಗೊಳಿಸುತ್ತಾರೆ. ಇದನ್ನು ತಯಾರಿಸಲು ಸುಮಾರು ೧೦-೧೫ ದಿನಗಳಾದರೂ ಸಮಯ ಬೇಕು. ಈ ಲೆಕ್ಕಾಚಾರದಲ್ಲಿ ದಿನಕ್ಕೆ ೧೫ ರಿಂದ ೨೦ರೂ ಕೂಲಿ ಬೀಳುತ್ತದೆ. ಇದೇ ಬಟ್ಟೆಯನ್ನು ಮಾರುಕಟ್ಟೆಯಲ್ಲಿ ‘ಹ್ಯಾಂಡ್ ವರ್ಕ್ಸ್ ಫ್ಯಾಬ್ರಿಕ್’ ಎಂಬ ಹೊಸ ಲೇಬಲ್ ಹಚ್ಚಿ ಸುಮಾರು ೧೫೦೦ ರಿಂದ ೧೦,೦೦೦ ಸಾವಿರಕ್ಕೂ ಅಧಿಕ ಬೆಲೆಗೆ ಮಾರಾಟ ಮಾಡುತ್ತಾರೆ. ಹೀಗೆ ಕಂಪನಿಗಳು ಲಂಬಾಣಿ ಸಮುದಾಯದ ಮತ್ತು ಅಂತಹ ಕಲೆಗಳನ್ನು ಆಧುನಿಕ ಯಂತ್ರಗಳ ಮೂಲಕ ತಾವೇ ಸಿದ್ಧಪಡಿಸಿಕೊಳ್ಳುವುದು ಏಕಕಾಲದಲ್ಲಿ ಮಹಿಳೆಯ ಬದುಕಿನ ಅಸ್ತಿತ್ವವನ್ನು ಕಸಿದುಕೊಂಡು ಶೋಷಣೆಗೊಳಪಡಿಸುತ್ತಿದೆ. ಇದು ಒಂದು ಆಧುನಿಕತೆಯ ಮುಖವಾದರೆ, ಮತ್ತೊಂದು ಈ ಸಮುದಾಯದ ಮಹಿಳೆಯರ ಮನಸ್ಥಿತಿಯನ್ನು ಕುಗ್ಗಿಸುತ್ತಿದೆ. ಪಾರಂಪರಿಕ ವಾಗಿ ತಾವೇ ಕಸೂತಿ ಮಾಡಿದ ಬಟ್ಟೆಗಳನ್ನು ಧರಿಸುವುದೂ ಕೂಡ ಮುಜುಗರಕ್ಕೆ ಎಡೆಮಾಡಿ ಕೊಟ್ಟಿದೆ. ಶ್ರೇಣೀಕೃತ ಸಮಾಜದಲ್ಲಿ ಆರ್ಥಿಕ ಸ್ಥಿತಿವಂತರಿಗೆ ಗೌರವವಿದೆ. ಆದರೆ ಬಡವರಿಗೆ ಈ ಗೌರವ ಸಿಗುತ್ತಿಲ್ಲ. ಸ್ಥಿತಿವಂತ ಮಹಿಳೆಯರು ಇಂಥ ಉಡುಪುಗಳನ್ನು ಧರಿಸುತ್ತಿದ್ದರೆ, ಅದೊಂದು ಫ್ಯಾಷನ್ ಆಗಿ, ಘನತೆಯಾಗಿ, ಪ್ರತಿಷ್ಠೆಯ ವಿಷಯವಾಗುತ್ತದೆ. ಅದೇ ತಳ ಸಮುದಾಯದ ಮಹಿಳೆಯರು ಧರಿಸಿದರೆ, ‘ತಾಂಡ’ಮಹಿಳೆಯಾಗಿ ಗುರ್ತಿಸುತ್ತಾರೆ. ತಾರತಮ್ಯ ಮಾಡುತ್ತಾರೆ. ಹಾಸ್ಯಮಾಡುತ್ತಾರೆ. ಮೇಲು ನೋಟಕ್ಕೆ ಇಂಥ ತಾರತಮ್ಯಗಳು ಕಾಣದಿದ್ದರೂ ಸೂಕ್ಷ್ಮಮತಿಗಳಾದ ಮಹಿಳೆಯರು ಅವಮಾನವೆಂದು ಭಾವಿಸಿ ಮಾನಸಿಕವಾಗಿ ಬಳಲಿ ಹಿಂಸೆಗೊಳಗಾಗುತ್ತಾರೆ. ಇಂಥ ವಾತಾವರಣದ ಬಿಕ್ಕಟ್ಟಿನಿಂದ ಪಾರಾಗಲು ಆಧುನಿಕವಾಗಿ ಸಿದ್ಧಗೊಂಡ ಉಡುಪುಗಳ ಕಡೆ ಮುಖಮಾಡಬೇಕಾಗಿದೆ. ಹೀಗಾಗಿಯೇ ಬಹುತೇಕ ಲಂಬಾಣಿ ತಾಂಡಗಳಲ್ಲಿ ಕಸೂತಿ ಕಲೆಯ ಬಟ್ಟೆಗಳು ಮಾಯವಾಗಿ ‘ಆಧುನಿಕ ಲಂಬಾಣಿ ಮಹಿಳೆ’ ಯರಾಗಿದ್ದಾರೆ. ಪಾರಂಪರಿಕ ಒಂದು ಸಂಸ್ಕೃತಿಯನ್ನು ಕಳೆದುಕೊಳ್ಳತೊಡಗಿದ್ದಾರೆ. ಇಲ್ಲಿ ವಿಚಿತ್ರವೆಂದರೆ ಆಧುನಿಕವಾಗಿಯೆಂದು ಕರೆಯಲ್ಪಡುವ ಅಧಿಕ ಬೆಲೆಯ ಸೀರೆಗಳನ್ನು ತಾವೇ ಸಿದ್ಧಮಾಡಿಕೊಟ್ಟಿದ್ದನ್ನು ಹೆಚ್ಚು ಬೆಲೆ ಕೊಟ್ಟು ಧರಿಸಿದರೂ ತಾಂಡ ಮಹಿಳೆಯಾಗಿ ಪರಿವರ್ತಿತ ಳಾಗುತ್ತಾಳೆ ಇದು ವಿಪರ್ಯಾಸವೇ ಸರಿ. ಹೀಗೆ ಆಧುನಿಕತೆಯು ಏಕಕಾಲದಲ್ಲಿ ಬದುಕಿನ ಅಭದ್ರತೆಯನ್ನು ಮತ್ತು ಮಾನಸಿಕ ತಳಮಳವನ್ನುಂಟು ಮಾಡುತ್ತಿದೆ. ಹೀಗಾಗಿ ತಳ ಸಮುದಾಯಗಳು ಪಾರಂಪರಿಕ ಉದ್ಯೋಗಗಳನ್ನು ಕಳೆದುಕೊಂಡು ಪರ್ಯಾಯ ಉದ್ಯೋಗ ಗಳತ್ತ ಮುಖಮಾಡಿವೆ.

ಕೆಳವರ್ಗಗಳು ಯಾವದೇ ಒಂದು ಉದ್ಯೋಗಕ್ಕೆ ನೆಚ್ಚಿಕೊಂಡು ತಟಸ್ಥವಾಗಿರುವುದಿಲ್ಲ. ಬದಲಾಗಿ ತನ್ನ ದೈಹಿಕ ಶ್ರಮದ ಮೂಲಕ ಅನ್ಯ ಉದ್ಯೋಗಗಳ ಕಡೆ ಬದಲಾಗುತ್ತಿರುತ್ತದೆ. ತಾನು ತೊಡಗಿಕೊಂಡ ಉದ್ಯೋಗದಿಂದ ಪ್ರತಿಫಲ ಕಾಣದಿದ್ದಾಗ ಮತ್ತೊಂದು ಉದ್ಯೋಗ ದತ್ತ ಕ್ರಿಯಾಶೀಲವಾಗುತ್ತದೆ. ‘ತಟಸ್ಥತೆ’ ಅಲ್ಲಿ ಕಾಣುವುದಿಲ್ಲ. ತನ್ನ ಸಮಸ್ಯೆಗಳ ಪರಿಹಾರ ಕ್ಕಾಗಿ ದೇವರಲ್ಲಿ ಹರಕೆ ಮಾಡುವ ಹಾಗೆ ಯಾವುದೇ ಒಂದು ದೇವರಿಗೆ ಹರಕೆ ಮಾಡುವುದು. ಹೀಗೆಯೇ ನಿರಂತರವಾಗಿ ಪ್ರತಿಫಲ ನೀಡುವ ದೇವರಿಗೆ ಹರಕೆ ಮಾಡುತ್ತಲೇ ಇರುತ್ತದೆ. ಪ್ರತಿಫಲ ಕೊಡುವ ದೇವರಿಗೆ ತಮ್ಮ ಜೀವಮಾನದವರೆಗೆ ನೆಚ್ಚಿಕೊಂಡು ಪೂಜಿಸುತ್ತವೆ. ಅದರಂತೆ ಉದ್ಯೋಗದಲ್ಲಿಯೂ ಇಂಥ ಗುಣವನ್ನು ಅಳವಡಿಸಿಕೊಂಡಿರುತ್ತದೆ. ಹೀಗೆ ವಲಸೆ ಹೋಗುವಾಗ ಮೂಲ ಸಂಸ್ಕೃತಿಯನ್ನು ಜೀವಂತವಾಗಿಡುವ ದೃಷ್ಟಿಯೂ ಕೆಳವರ್ಗ ಗಳಿಗಿದೆ. ತಳಸಮುದಾಯಗಳು ಆಧುನಿಕತೆಯ ಎಷ್ಟೇ ವಿರಾಟರೂಪ ಪ್ರದರ್ಶಿಸಿದರೂ ಅಂಜದೇ ಬದುಕಿಗಾಗಿ ಹೋರಾಟ ಮಾಡುತ್ತವೆ. ಈ ವರ್ಗಗಳಿಗೆ ತಾಳಿಕೆಯ ಶಕ್ತಿ ಇದೆ. ಕರಿಕೆಯ ಹುಲ್ಲಿನ ಹಾಗೆ, ಕರಿಕೆಯ ಮೇಲೆ ಎಷ್ಟೇ ಕಲ್ಲು, ಮುಳ್ಳುಗಳನ್ನು ಹಾಕಿದರೂ ಆ ಕಲ್ಲು ಮುಳ್ಳುಗಳ ಸಂದುಗಳಲ್ಲಿ ಮತ್ತೆ ಮತ್ತೆ ಚಿಗುರುವಂತೆ ಕೆಳವರ್ಗಗಳು ಇಂದಿಗೂ ಜೀವಂತವಾಗಿವೆ. ಲಂಬಾಣಿ ಸಮುದಾಯದವರ ಮನಸ್ಥಿತಿಯನ್ನು ಬದಲಿಸಿದರೂ ಆಧುನಿಕತೆಯ ಮೂಲಕ ತನ್ನ ಸಂಸ್ಕೃತಿಯ ಕುರುಹುಗಳನ್ನು ಜೀವಂತವಾಗಿರಿಸಿದೆ.

* * *

ಹಲಗಲಿ ಬೇಡರು

೮ನೇ ನುಡಿ

ಯಾರು ಕೇಳಲಿಲ್ಲ ಆರು ಗುಂಡ ತಾಕಿ ಹಣಮ ಬಿದ್ದ ನೆಲಕ
ಚೀರಿ-ಆಡುತ ಜನ ಸುತ್ತಗಟ್ಟಿತೊ ಅಂಜಿ-ಕೊಂಡ ಜೀವಕ

ಶೂರ ವೊಬ್ಬ ಬಹಳ ಜೋರ ಮಾಡಿದನ ಹತಾರ ತಗೊಳುದಕ
ಯೇರಿ ಬರು ಕುದರಿ ಕಡದನೊ ಸ್ವಾರ ಬಿದ್ದ ನೆಲಕ

ರಾಮಿ ಗುಂಡಿಲಿ ಜೋರ ಮಾಡಿ ಹೊಡದಳೊ ಮೂರ ಮಂದಿ ಶಿರಕ
ಆರ ಕುದರಿಯ ಕಡದ ಸಿಡದಳೊ ಬಾಲನ ಸೂರಾಯಕ         ||ಚ್ಯಾಲ||