ಆಧುನಿಕತೆ ಬೆಳೆದಂತೆ ಮನುಷ್ಯನೂ ಸಹ ಅನಿವಾರ್ಯವಾಗಿಯೇ ಆಧುನಿಕತೆಗೆ ಮಾರುಹೋಗಬೇಕಾದ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ನಾಗರೀಕತೆಯೆಡೆಗೆ ಮುಖ ಮಾಡುವಾಗ ಆಧುನಿಕ ಸವಾಲುಗಳ ಜೊತೆಗೆ ಬೌದ್ದಿಕವಾಗಿ ಬೆಳೆಯಬೇಕಾಗುತ್ತದೆ. ಸವಾಲು ಹಾಗೂ ಬೌದ್ದಿಕ ಪ್ರಕ್ರಿಯೆ ಸಮಸ್ಯೆಗಳ ಸೃಷ್ಟಿಗೂ ಹಾಗೂ ಸಮಸ್ಯೆಗಳ ನಿವಾರಣೆಗೂ ಸಹಕಾರಿಯಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ದೇಶದ ಒಟ್ಟು ಸಮುದಾಯಗಳು ತಮ್ಮ ತಮ್ಮ ಅಸ್ತಿತ್ವಕ್ಕಾಗಿ ಹಪಾಹಪಿಯಲ್ಲಿ ಹಾತೊರೆಯುತ್ತಿವೆ. ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಭೌಗೋಳಿಕವಾಗಿ ಸಾಂಸ್ಕೃತಿಕವಾಗಿ ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳುವತ್ತ ಸಾಗುತ್ತಿವೆ. ಆಧುನೀಕತೆಯ ಹಲವು ಮುಖಗಳಾದ ಖಾಸಗೀಕರಣ, ಜಾಗತೀಕರಣ, ಕೈಗಾರಿಕೀಕರಣ ಮುಂತಾದ ‘ಈಕರಣ’ ಸಂಸ್ಕೃತಿಗಳು ತಳಸಮುದಾಯಗಳನ್ನು ಹುಸಿ ಪೋಜು ನೀಡಿ ತನ್ನತ್ತ ಸೆಳೆಯತೊಡಗಿವೆ. ಈ ‘ಈಕರಣ’ಗಳೆಂದರೇನೇ ಹುಸಿ ಆಸೆಯನ್ನು ಹುಟ್ಟಿಸುವುದಾಗಿದೆ. ಇಂಥ ಆಸೆಗಳಿಗೆ ತಳಸಮುದಾಯಗಳು ಬಲಿಬಿದ್ದು ಬದುಕಿನ ನೆಲೆಗಳನ್ನು ಕಳೆದುಕೊಳ್ಳುತ್ತಿವೆ. ಇತ್ತೀಚೆಗೆ ಅನೇಕ ತಳಸಮುದಾಯಗಳು ಎಚ್ಚೆತ್ತು ಆಯಾ ಸಮುದಾಯದ ಕುರಿತಾಗಿ ನಡೆಯುತ್ತಿರುವ ಅನೇಕ ಅಧ್ಯಯನಗಳು ವಿಚಾರ ಸಂಕಿರಣಗಳಿಂದ ಬೌದ್ದಿಕ ಜಾಗೃತಿಯನ್ನು ಮೂಡಿಸಿಕೊಳ್ಳುತ್ತಿವೆ. ಶಿಷ್ಟ ಸಂಸ್ಕೃತಿಯ ನಡುವೆಯೇ ಇಂಥ ಪ್ರಕ್ರಿಯೆಗಳು ಈ ದಶಮಾನಗಳಲ್ಲಿ ಕಂಡುಬರುತ್ತಿರುವುದು ತಳಸಮುದಾಯಗಳಲ್ಲಿ ಮೂಡಿದ ಎಚ್ಚರ ಹಾಗೂ ಪರ್ಯಾಯಗಳ ಹುಡುಕಾಟಗಳಾಗಿವೆ.

ಕೆಳಸಮುದಾಯಗಳು ಮೂಲ ನೆಲೆ ಅಥವಾ ಉದ್ಯೋಗಗಳನ್ನು ಬಿಟ್ಟು ಆದ್ಯ ಉದ್ಯೋಗ ಗಳ ಕಡೆ ಮುಖ ಮಾಡುವಾಗ ಮೂಲ ಉದ್ಯೋಗವನ್ನು ಮರೆಯುವುದಿಲ್ಲ. ದೇವರಲ್ಲಿ ಹರಕೆ ಮಾಡಿಕೊಂಡಾಗ ತಮ್ಮ ಬೇಡಿಕೆ ಈಡೇರದಿದ್ದರೆ ಮತ್ತೊಂದು ದೇವರಲ್ಲಿ ಹರಕೆ ಹೊತ್ತುಕೊಳ್ಳುತ್ತಾರೆ. ಹೀಗೆಯೇ ಸಾಗುತ್ತಾ ವರಕೊಡುವ ದೇವರನ್ನು ತನ್ನ ಜೀವಮಾನದ ವರೆಗೂ ಪೂಜಿಸುತ್ತಾನೆ. ಅಂತೆಯೇ ಹಿಂದೆ ಹೊತ್ತ ದೇವರುಗಳನ್ನು ಉದಾಸೀನ ಮಾಡು ವುದಿಲ್ಲ. ಇದರಂತೆ ತಳಸಮುದಾಯಗಳು ನಾಗರೀಕತೆಗೆ ಹೊಂದಿಕೊಂಡರೂ, ತಮ್ಮ ಮೂಲ ಸಂಸ್ಕೃತಿಯ ಬೇರುಗಳನ್ನು ಜೀವಂತವಾಗಿರಿಸಿಟ್ಟುಕೊಂಡಿರುತ್ತವೆ. ಅಂದರೆ ತಮ್ಮ ಮೂಲ ಸಂಸ್ಕೃತಿಗಳನ್ನು ಪುನರಾವಲೋಕನ ಮಾಡಿ ಇಂದಿನ ಬದುಕಿನ ತಾಕಲಾಟಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿವೆ. ಇಂದು ಯಾವುದೇ ತಳಸಮುದಾಯಗಳ ಸಾಂಸ್ಕೃತಿಕ ಪುನರಾವಲೋಕನ ಮಾಡುವುದು ಅಗತ್ಯ ಹಾಗೂ ಅನಿವಾರ್ಯವಾಗಿದೆ. ಏಕೆಂದರೆ, ಮೂಲ ಬದುಕಿನ ಹೋರಾಟಗಳು ಹೊಸ ಜಗತ್ತಿನೊಂದಿಗೆ ಹೋರಾಡಲು ಪ್ರೇರಣೆಯಾಗುತ್ತವೆ. ೧೮೫೭ರ ದಂಗೆಯಲ್ಲಿ ತಳಸಮುದಾಯಗಳು ಅದರಲ್ಲೂ ಬೇಡಸಮುದಾಯದವರು ತೋರಿದ ದಿಟ್ಟ ಸಾಹಸ, ಧೈರ್ಯ ಮುಂದೆ ಸ್ವತಂತ್ರಕ್ಕಾಗಿ ಹೋರಾಡಲು ಮಾನಸಿಕವಾಗಿ, ದೈಹಿಕವಾಗಿ ಸಜ್ಜುಗೊಳ್ಳುವಂತೆ ಮಾಡಿತು. ಅಂದು ಬ್ರಿಟೀಷರ ವಿರುದ್ಧ ನೇರವಾಗಿ ಹೋರಾಡಿದ ತಳಸಮುದಾಯಗಳು ಇಂದು ಆಧುನಿಕತೆ ವಿರುದ್ದ ಪರೋಕ್ಷವಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ರಿಟೀಷರು ಮತ್ತು ಆಧುನಿಕತೆ ಒಂದೇ ನಾಣ್ಯದೆರಡು ಮುಖಗಳಿದ್ದಂತೆ. ಬಾಗಲಕೋಟೆ ಪರಿಸರದ ಬೇಡ ಸಮುದಾಯದವರು ಮೊದಲ ಬಾರಿಗೆ ಬ್ರಿಟೀಷರ ವಿರುದ್ಧ ದಂಗೆ ಎದ್ದಿದ್ದು ಚರಿತ್ರಾರ್ಹ. ಹಾಗಾಗಿ ಈ ಜಿಲ್ಲೆಯ ಬೇಡ ಸಮುದಾಯದವರ ಹಾಗೂ ಇತರೇ ತಳಸಮು ದಾಯಗಳ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಚರ್ಚಿಸುವುದು ಬಹುಮುಖ್ಯ. ಈ ಉದ್ದೇಶದಿಂದ ಹಾಗೂ ಈ ಸಮುದಾಯಕ್ಕೆ ಸೇರಿದ ಸಿಂಧೂರ ಲಕ್ಷ್ಮಣ ನಂಥ ಧೀಮಂತ ನಾಯಕನ ವ್ಯಕ್ತಿತ್ವವನ್ನು ಹಲವು ಮುಖಗಳಿಂದ ಚರ್ಚೆ ನಡೆಸುವ ಸಲುವಾಗಿ ಮತ್ತು ತಳಸಮುದಾಯಗಳು ಆಧುನಿಕ ಜಗತ್ತಿನೊಂದಿಗೆ ಹೆಜ್ಜೆಗಳನ್ನು ಇಡುವ ಎಚ್ಚರಗಳನ್ನು ‘ಸಾಂಸ್ಕೃತಿಕ ಅನನ್ಯತೆ ಮತ್ತು ಹಲಗಲಿ ಬಂಡಾಯ’ ವಿಚಾರ ಸಂಕಿರಣ ದಡಿಯಲ್ಲಿ ಚರ್ಚೆಯಾಗಿರುವುದು ಸಂತೋಷದ ಸಂಗತಿ. ಬ್ರಿಟೀಷರನ್ನು ಭಾರತದಿಂದ ತೊಲಗಿಸಿ ಸ್ವತಂತ್ರ ಭಾರತದವನ್ನಾಗಿಸಿಕೊಳ್ಳಬೇಕೆಂಬ ಛಲ ಮಹಾತ್ಮಗಾಂಧೀಜಿ ಅವರಾದಿಯಾಗಿ ಹಾಗೂ ಮುಂಚೂಣಿಯಲ್ಲಿದ್ದ ನಾಯಕರೆಲ್ಲ ಹೋರಾಡಿದರು. ಅನೇಕ ಸ್ಥಳೀಯ ಜನಸಾಮಾನ್ಯರೂ ಪಾಲ್ಗೊಂಡಿದ್ದು ಇತಿಹಾಸ. ೧೮೫೭ರ ದಂಗೆ ಭಾರತದ ಪ್ರಥಮ ಸ್ವತಂತ್ರ ಸಂಗ್ರಾಮ. ಈ ಸಂಗ್ರಾಮದಲ್ಲಿ ಬ್ರಿಟೀಷರು ಜಯ ಸಾಧಿಸಿದ್ದು ಅವರ ಶಿಸ್ತು ಬದ್ದ ಸೈನ್ಯದಿಂದ ಅಥವಾ ಶಸ್ತ್ರಾಸ್ತ್ರಗಳಿಂದ ಎಂದು ನಮಗೆ ಗೋಚರಿಸಬಹುದು. ಆದರೆ ಒಳಹೊಕ್ಕು ನೋಡಿದಾಗ ‘ಒಡೆದು ಆಳುವ’ ಯುದ್ಧ ತಂತ್ರಗಳನ್ನು ರೂಪಿಸಿಕೊಂಡು ಅದರಲ್ಲಿ ಯಶಸ್ವಿಯೂ ಆದರು. ಅಂದರೆ ಸ್ವಾತಂತ್ರ್ಯಕ್ಕಾಗಿ ಜಾತಿ, ಮತ, ಪ್ರಾಂತ, ಭಾಷೆಗಳನ್ನು ಬದಿಗೊತ್ತಿ ಸಂಘಟಿತರಾಗಿದ್ದ ಭಾರತದ ಹೋರಾಟಗಾರರನ್ನು, ಪಾಳೇಗಾರ ರನ್ನು ತಮ್ಮ ಅಧೀನದಲ್ಲಿಟ್ಟುಕೊಂಡು ಆ ಮೂಲಕ ಸ್ವಾತಂತ್ರ್ಯಕ್ಕಾಗಿ ಸಜ್ಜುಗೊಂಡ ಸಮೂಹವನ್ನು ಚೆಲ್ಲಾಪಿಲ್ಲಿಯಾಗುವಂತೆ ನೋಡಿಕೊಂಡರು. ನಂತರ ಶೂರರೆನಿಸಿಕೊಂಡ ಬೇಡರ ಧೈರ್ಯವನ್ನು ಮನಗಂಡು ಬ್ರಿಟೀಷರು ನಿಶಸ್ತ್ರೀಕರಣ ಕಾಯಿದೆಯನ್ನು ಜಾರಿ ಮಾಡಿದುದು ತಳಸಮುದಾಯಗಳ ಅದರಲ್ಲೂ ಬೇಡ ಸಮುದಾಯದ ಮೇಲೆ ದಿನನಿತ್ಯದ ಕೈಕಸಬುಗಳ ಅಡ್ಡಪರಿಣಾಮ ಬೀರಿತು. ನಿಶಸ್ತ್ರೀಕರಣ ಕಾಯಿದೆಯನ್ನು ರದ್ದುಪಡಿಸುವ ಸಂಬಂಧ ಬಾಗಲಕೋಟೆ ಜಿಲ್ಲೆಯ ‘ಹಲಗಲಿ’ ಎಂಬಲ್ಲಿ ಬೇಡ ಸಮುದಾಯದ ಜಡಗಪ್ಪ ಜಡಗನ್ನವರ ಆದಿಯಾಗಿ ಬಾಲಪ್ಪ ಕೊಳ್ಳಣ್ಣವರ, ಹಣಮಪ್ಪ ಪೂಜೇರ, ಬೇಹುಗಾರ ಭೀಮಪ್ಪ, ಚಿಕ್ಕಣ್ಣನವರ ಮುಂತಾದವರು ಬ್ರಿಟೀಷರ ವಿರುದ್ಧ ದಂಗೆ ಎದ್ದರು. ಈ ದಂಗೆಯೇ ಹಲಗಲಿ ಬಂಡಾಯವಾಗಿ ಮುಂದೆ ಚರಿತ್ರೆಯಲ್ಲಿ ಜಾಗ ಪಡೆಯಿತು.

ಬೇಡ ಸಮುದಾಯದ ಕೊಟ್ಟಾಯಂನ ಕೇರಳವರ್ಮ, ಉತ್ತರ ಆರ್ಕಾಟಿನ ಪಾಳೆಯಗಾರರು, ರಾಯಲ ಸೀಮೆಯ ಪಾಳೆಯಗಾರರು, ಸಿಂಧೂರ ಲಕ್ಷ್ಮಣನಂತವರು ಹೋರಾಟ ಮಾಡಿದ್ದು ಸ್ವತಂತ್ರ ಭಾರತಕ್ಕಾಗಿ ಅನ್ನುವುದಕ್ಕಿಂತ ಹೆಚ್ಚಾಗಿ ತಮ್ಮ ತಮ್ಮ ಅಸ್ತಿತ್ವ ಹಾಗೂ ಬದುಕಿನ ಮೂಲಗಳನ್ನು ಭದ್ರಪಡಿಸಿಕೊಳ್ಳುವುದೇ ಉದ್ದೇಶವಾಗಿತ್ತು. ಇವರ ಆಂತರಿಕ ಹೋರಾಟಗಳು ಭಾರತ ಸ್ವಾತಂತ್ರ್ಯದ ಹೋರಾಟಕ್ಕೆ  ಪ್ರೇರಣೆಯಾದವು. ಬ್ರಿಟೀಷರ ವಿರುದ್ಧ ಮೊದಲ ಭಾರಿಗೆ ಹೋರಾಟ ಮಾಡಿದ್ದು ಈ ಸಮುದಾಯದವರು ಎಂಬುದು ಕೂಡಾ ಗಮನಾರ್ಹ ಸಂಗತಿ. ಅಂದಿನ ಪರಿಸ್ಥಿತಿಯಲ್ಲಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಸಾಧಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ‘ಮುಖ್ಯವಾಗಿ ಎಲ್ಲ ಅನುಕೂಲಗಳು ಇದ್ದು ಯಾವುದೇ ಸಾಧನೆಯನ್ನು ಮಾಡುವುದು, ಅದನ್ನೇ ವ್ಯವಸ್ಥಿತ ವಾಗಿ ಅವರದೆ ಆದ ಗುಂಪಿನ ಮೂಲಕ ಹೊಗಳಿಸಿಕೊಂಡು ಕೃತಕ ಹೆಸರು ಮಾಡಿಕೊಳ್ಳುವುದು ದೊಡ್ಡದಲ್ಲ. ಒಟ್ಟು ವ್ಯವಸ್ಥೆಯ ತಿರಸ್ಕಾರದ ನಡುವೆಯೂ ತನ್ನ ಸಹಜ ಶಕ್ತಿಯಿಂದ ತನ್ನೊಳಗಿದ್ದ ಸುಪ್ತ ಪ್ರತಿಭೆಗಳನ್ನು ಹೊರಹಾಕುವುದು, ನಂತರ ಆ ಬಗ್ಗೆ ಇಡೀ ವ್ಯವಸ್ಥೆ ಬೇಕಂತಲೆ ಗುರುತಿಸಲಾರದ ನಡುವೆಯೂ ನಿಸರ್ಗ ಸಹಜವಾಗಿ ಅರಳುವುದು ಇದೆಯಲ್ಲಾ ಅದೇ ನಿಜವಾದ ಶಕ್ತಿ, ಪ್ರತಿಭೆ, ಸಿಂಧೂರ ಲಕ್ಷ್ಮಣ ಈ ಶಕ್ತಿಯಿಂದಾಗಿಯೇ ಬೇಡ ಸಮುದಾಯದ ವೀರಯೋಧ. ಚರಿತ್ರೆಯಲ್ಲಿ ದಾಖಲಾದ ವೀರಶೂರ.

ಸಿಂಧೂರ ಲಕ್ಷ್ಮಣನು ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದುಕೊಂಡು ತನ್ನ ಚಾಣಾಕ್ಷ ಬುದ್ದಿಯಿಂದ ಹೋರಾಟ ಮಾಡಿದ್ದು ಬ್ರಿಟೀಷರು ಬೆಚ್ಟಿ ಬೀಳುವಂತಾಯಿತು. ನಂತರ ಈತನನ್ನು ದೊಂಬಿಗಾರ, ಕೊಲೆಗಡುಕ, ಕಳ್ಳ ಮುಂತಾಗಿ ಕರೆದು ಈತನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸವನ್ನು ಮಾಡಿದರು. ಸಿಂಧೂರ ಲಕ್ಷ್ಮಣನೊಬ್ಬ ದರೋಡೆಕೋರ, ಕಳ್ಳನಾಗಿ ಬ್ರಿಟೀಷ್ ಚರಿತ್ರೆಯಲ್ಲಿ ಕಂಡರೂ ಬಡವರಿಗೆ ಆಶಾಕಿರಣವಾಗಿದ್ದ. ಮಾನವೀಯ ಕಾಳಜಿ ಯುಳ್ಳ ಮನುಷ್ಯನಾಗಿದ್ದ. ಈತನ ಮುಖ್ಯ ಉದ್ದೇಶವು ಆಡಳಿತಗಾರರ ಹಾಗೂ ಶ್ರೀಮಂತರ ಅಟ್ಟಹಾಸ ಅಡಗಿಸುವುದು ಮತ್ತು ಬಡವರಿಗೆ ಬದುಕನ್ನು ರೂಪಿಸಿಕೊಡುವುದು. ಹೀಗಾಗಿ ಈತ ದರೋಡೆ, ಕಳ್ಳತನ ಮಾಡುತ್ತಿದ್ದುದು ಉಳ್ಳವರ ಸಂಪತ್ತನ್ನು ಮಾತ್ರ. ಕಳವು ಮಾಡಿ ತಂದಂತಹ ಒಡವೆ-ವಸ್ತ್ರಗಳನ್ನು ಬಡವರಿಗೆ ಹಂಚುತ್ತಿದ್ದ. ಸ್ತ್ರೀಯರನ್ನು ಗೌರವಿಸುತ್ತಿದ್ದರಿಂದ ಪರನಾರಿ ಸಹೋದರನಾಗಿದ್ದ. ಈ ಕಾರಣದಿಂದಾಗಿ ಇಂದಿಗೂ ಈ ಭಾಗದ ಜನಸಾಮಾನ್ಯ ರಲ್ಲಿ ಸಿಂಧೂರ ಲಕ್ಷ್ಮಣ ಜೀವಂತವಾಗಿದ್ದಾನೆ. ಈತನ ಕುರಿತು ಅನೇಕ ಜಾನಪದ ಹಾಡು ಗಳಿವೆ, ಲಾವಣಿಗಳಿವೆ, ಮಹಾಕಾವ್ಯಗಳಿವೆ, ನಾಟಕಗಳಿವೆ ಎಂಬುದು ವಿಶೇಷವಾದ ಸಂಗತಿ. ಸಾಮಾಜಿಕ ಕೆಲಸ-ಕಾರ್ಯಗಳನ್ನು ಮಾಡಿರುವ ವ್ಯಕ್ತಿ ಎಂದಿಗೂ ಜೀವಂತವಾಗಿರುತ್ತಾರೆಂಬುದಕ್ಕೆ ಲಕ್ಷ್ಮಣ ಸಾಕ್ಷಿ. ಆಧುನಿಕ ಸಂದರ್ಭದಲ್ಲಿ ಈತನ ವ್ಯಕ್ತಿತ್ವವನ್ನು ಮುಖಾಮುಖಿಯಾಗಿಸ ಬೇಕಾಗಿದೆ. ಏಕೆಂದರೆ ಆಧುನಿಕತೆಯ ಪ್ರಭಾವದಿಂದಾಗಿ ಯುವ ಜನತೆ ಢಾಳಾಗಿ ಹೊರ ಹೊಮ್ಮುತ್ತಿದ್ದಾರೆ. ಲಕ್ಷ್ಮಣನಂತೆ ಶೋಷಣೆಯ ನೆಲೆಗಳನ್ನು ಗುರ್ತಿಸಿ, ಶೋಷಣೆಯ ವಿರುದ್ಧ ಹೋರಾಡಬೇಕು. ಆ ಮೂಲಕ ಬದುಕಿನ ಎಚ್ಚರ ಕಂಡುಕೊಳ್ಳಬೇಕು.

ಬೇಡ ಸಮುದಾಯಗಳಲ್ಲಿ ಹಲವಾರು ಉಪ ಪಂಗಡಗಳಿವೆ. ಮೂಲತಃ ಇವರು ಸಮೂಹದಿಂದ ಜೀವನ ನಡೆಸುತ್ತಿದ್ದರು. ಬದುಕಿನಲ್ಲಿ ಅಭದ್ರತೆಯುಂಟಾದಾಗ, ಹೊಟ್ಟೆ ಪಾಡಿಗಾಗಿ ಕೆಲವರು ಕಾಡಿಗೆ ಬೇಟೆಯಾಡಲು ಮತ್ತೆ ಕೆಲವರು ನಾಡಿನಲ್ಲಿಯೇ ವ್ಯವಸಾಯ, ಪಶುಸಂಗೋಪನೆ ಮಾಡಲು ಹೊರಟರು. ಅವರು ತಾವು ನೆಲೆಗೊಂಡ ಪ್ರದೇಶಗಳಲ್ಲಿ ತಮಗೆ ಸರಿಹೊಂದದಂತ ವೃತ್ತಿಗಳನ್ನು ಅನುಸರಿಸಿಕೊಂಡರು. ಈ ಕಾರಣದಿಂದಾಗಿಯೇ ಹಲವಾರು ಉಪ ಪಂಗಡಗಳಾಗಿವೆ. ಈ ಪಂಗಡಗಳ ಸಂಸ್ಕೃತಿ, ಆಚಾರ-ವಿಚಾರಗಳ ಪ್ರಾದೇಶಿಕ ನೆಲೆಯಲ್ಲಿ ಅಲ್ಪ ಸ್ವಲ್ಪ ಭಿನ್ನವಾಗಿದ್ದರೂ ಇವರ ಶೂರತ್ವ ಮಾತ್ರ ಒಂದೇ ಎಂಬುದು ವಿಶಿಷ್ಟ ಸಂಗತಿ. ಪ್ರಾದೇಶಿಕ ಭಿನ್ನತೆ ಕುರಿತು ಚರ್ಚಿಸುವಾಗ ಬಾಗಲಕೋಟೆ ಪರಿಸರ ವಿಶಿಷ್ಠವಾಗಿದೆ. ಈ ಜಿಲ್ಲೆ ಬೇಡ ಸಮುದಾಯಗಳ ಮೂಲ ನೆಲೆ ಎಂಬುದು ಒಂದೆಡೆಯಾದರೆ, ಶೋಷಣೆಯ ವಿರುದ್ಧ ಮೊದಲು ಹೋರಾಟಕ್ಕಿಳಿದ ಮೂಲಸ್ಥಾನವೂ ಆಗಿದೆ. ಹೀಗಾಗಿ ಈ ಪರಿಸರದ ಹಲಗಲಿ ಬೇಡರ ಇಡೀ ಸಾಂಸ್ಕೃತಿಕ ಬದುಕಿನ ಸ್ಥಿತಿಗತಿಯನ್ನು ಅರಿಯಬೇಕಾಗುತ್ತದೆ.

ಬೇಡ ಸಮುದಾಯದವರು ಬಾಗಲಕೋಟೆ ಪರಿಸರದಲ್ಲಿ ರಾಜಕೀಯವಾಗಿ, ಸಾಮಾಜಿಕ ವಾಗಿ ಆರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ತಮ್ಮದೇ ಆದ ಕೊಡುಗೆಗಳನ್ನು ಕೊಟ್ಟಿದ್ದಾರೆ. ‘ಬೇಟೆ’ಯಾಡುವುದು ಇವರ ಮೂಲ ಉದ್ಯೋಗವಾಗಿದ್ದರೂ, ವ್ಯವಸಾಯ, ಕುರಿ ಸಾಕಾಣಿಕೆ ಮುಂತಾದ ಕಸುಬುಗಳಲ್ಲಿ ನಿರತರಾಗಿದ್ದರು. ಈ ಕಸಬುಗಳನ್ನು ನಿರ್ವಹಿಸುವ ಸಂಬಂಧ ಕೆರೆಗಳನ್ನು, ಭಾವಿಗಳನ್ನು, ಕಾಲುವೆಗಳನ್ನು ನಿರ್ಮಿಸಿರುವುದು ಕಂಡುಬರುತ್ತದೆ.

ಬಾಗಲಕೋಟೆ ಪರಿಸರದ ಹಾಗೂ ಇತರೆ ಪರಿಸರದ ವಾಲ್ಮೀಕಿ ಸಮುದಾಯದ ಮಹಿಳಾ ಸಂವೇದನೆಗಳ ಕುರಿತು ಹೇಳುವುದಾದರೆ, ಪ್ರಾಚೀನ ಭಾರತವು ಮಾತೃಪ್ರಧಾನವಾದ ದೇಶವಾಗಿತ್ತು. ‘ರಾಮಾಯಣ’, ‘ಮಹಾಭಾರತ’ದಂತಹ ಮಹಾನ್ ಕಾವ್ಯಗಳಿಂದಲೂ ಹಾಗೂ ಶಿಲಾಶಾಸನಗಳಿಂದಲೂ ಈ ಅಂಶ ಗೋಚರಿಸುತ್ತದೆ. ಆ ಸಂದರ್ಭದಲ್ಲಿ ಹೆಣ್ಣಿಗೆ ಸಮಾಜದಲ್ಲಿ ಗೌರವ ಹೆಚ್ಚಾಗಿತ್ತು ಮತ್ತು ಸಾಮಾಜಿಕ ಜವಾಬ್ದಾರಿಯೂ ಕೂಡ ಹೆಚ್ಚಾಗಿತ್ತು. ಕ್ರಮೇಣ ಅದು ಪುರುಷನ ಹಿಡಿತಕ್ಕೆ ಸಿಕ್ಕು ಇಂದು ಪುರುಷ ಪ್ರಧಾನವಾಗಿದೆ. ವಾಲ್ಮೀಕಿ ಮಹಿಳೆಯರು ಮೂಲತಃ ಮಾತೃ ಸಂಸ್ಕೃತಿಯನ್ನು ಹೊಂದಿದವರಾಗಿದ್ದು ಇಂದಿಗೂ ಕೂಡ ಜೀವಂತವಾಗಿರುವುದನ್ನು ಹಲವು ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಬೇಡ ಮಹಿಳೆ ಸ್ವತಃ ಬೇಟೆಯನ್ನಾಡಿ ಆಹಾರದ ಮೂಲವನ್ನು ಕಂಡುಕೊಳ್ಳುವುದರ ಜೊತೆಗೆ ಲಾಲನೆ-ಪಾಲನೆಯಲ್ಲಿ ತೊಡಗಿಕೊಳ್ಳುತ್ತಿದ್ದಳು. ತಮ್ಮ ಗಂಡಂದಿರು ಸೈನ್ಯಕ್ಕೆ ಸೇರಿಕೊಂಡರೆ ಇಡೀ ಮನೆಯ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದ್ದಿತು. ಹಾಗಾಗಿ ಅಂದಿನಿಂದ ಇಂದಿನವರೆಗೂ ದುಡಿಯುವುದರಲ್ಲೇ ಮಗ್ನಳಾಗಿದ್ದಾಳೆ. ವಾಸ್ತವವಾಗಿ ಆಧುನಿಕ ಸಂದರ್ಭದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತಿದ್ದರೂ ಈ ಸಮುದಾಯದ ಬಹುಪಾಲು ಮಹಿಳೆಯರು ಮಾನಸಿಕ ವಾಗಿ ಹಾಗೂ ದೈಹಿಕವಾಗಿ ಶೋಷಣೆಗೆ ಒಳಗಾಗುತ್ತಿರುವುದು ಮೌಢ್ಯತೆ ಹಾಗೂ ಬಡತನವೆ ಆಗಿದೆ. ಇದರ ಪರಿಣಾಮದಿಂದಾಗಿ ‘ದೇವದಾಸಿ’ಯಂಥ ಪದ್ಧತಿಯು ಕೆಲವು ಪ್ರದೇಶಗಳಲ್ಲಿ ಇಂದಿಗೂ ಗೋಚರಿಸುತ್ತದೆ. ಈ ಪದ್ಧತಿಯಡಿಯಲ್ಲಿ ಅನೇಕ ಹದಿವಯಸ್ಸಿನ ಹೆಣ್ಣು ಮಕ್ಕಳು ದೇವರ ಹೆಸರಿನಡಿ ಬಲಿಪಶುಗಳಾಗುತ್ತಿದ್ದಾರೆ. ಸುಂದರ ಬದುಕಿನ ಕನಸು ಕಾಣುವ ವಯಸ್ಸಿನಲ್ಲಿಯೇ ಬಡತನವನ್ನು ನೀಗಿಸುವುದಕ್ಕೋಸ್ಕರ ಬದುಕನ್ನು ಧಾರೆ ಎರೆಯುತ್ತಿದ್ದಾರೆ. ಅಂದಿನ ಕಾಲದಲ್ಲಿ ಅನಿವಾರ್ಯವಾಗಿ ಪರಗಂಡನಿಗೆ ಒಲಿಯುತ್ತಿದ್ದುದು ಕ್ರಮೇಣ ಅದು ಒಂದು ಸಾಮಾಜಿಕ ಪದ್ಧತಿಯಾಗಿ ಪರಿವರ್ತನೆಗೊಂಡಿತು ಅಂತಲೇ ಹೇಳಬೇಕಾಗುತ್ತದೆ. ಈ ಪದ್ಧತಿಯಿಂದಾಗಿ ಸಾಮಾಜಿಕವಾಗಿ ಅವಮಾನ-ಶೋಷಣೆ ಅನುಭವಿಸುತ್ತಿದ್ದಾರೆ. ಮಾನಸಿಕವಾಗಿ ಭಿನ್ನಳಾಗಿದ್ದಾಳೆ. ಆದರೂ ಇವುಗಳ ನಡುವೆಯೂ ಬದಕನ್ನು ಜೀವಂತ ವಾಗಿರಿಸಿಕೊಂಡಿದ್ದಾಳೆ.

ಇಂತಹ ಶೋಷಿತ ಮಹಿಳೆಯ ಬಿಡುಗಡೆಗಾಗಿ ಯೋಚಿಸುವ ಕಾಲ ಬಂದೊದಗಿದೆ. ಈ ನಿಟ್ಟಿನಲ್ಲಿ ಚರ್ಚೆಗಳು ನಡೆಯಬೇಕಾಗಿದ್ದು ಅನಿವಾರ್ಯವಾಗಿದೆ. ಅಂತಹ ಒಂದು ಮಹಾತ್ಕಾರ್ಯವನ್ನು ವಾಲ್ಮೀಕಿ ಅಧ್ಯಯನ ಪೀಠದಿಂದ ಮಾಡುವುದರ ಮೂಲಕ ಚರ್ಚಿತ ವಿಷಯಗಳನ್ನು ಪುಸ್ತಕ ರೂಪದಲ್ಲಿ ತರುತ್ತಿದ್ದೇವೆ. ಈ ಕಾರ್ಯಕ್ಕೆ ಸಲಹೆ-ಸಹಕಾರ ನೀಡಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಕೃತಿಯಲ್ಲಿ ಫ್ಲೀಟ್ ಸಂಗ್ರಹಿಸಿದ ಐತಿಹಾಸಿಕ ಲಾವಣಿಗಳಲ್ಲಿ ‘ಹಲಗಲಿ ಬೇಡರು’ ಲಾವಣಿಯನ್ನು ಅಲ್ಲಲ್ಲಿ ಬಳಸಲಾಗಿದೆ ಹಾಗೂ ‘ಸಿಂಧೂರ ಲಕ್ಷ್ಮಣ’ ಮಹಾಕಾವ್ಯದ ಕೆಲವು ಫೋಟೋಗಳನ್ನು ಬಳಸಲಾಗಿದೆ. ಅದಕ್ಕಾಗಿ ಡಾ.ಕ್ಯಾತನಹಳ್ಳಿ ರಾಮಣ್ಣ ಹಾಗೂ ಡಾ.ಆರ್.ಸಿ.ಮುದ್ದೇಬಿಹಾಳ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಪ್ರೊ. ಮಂಜುನಾಥ ಬೇವಿನಕಟ್ಟಿ