ಪ್ರಸ್ತುತ ವಿದ್ಯಮಾನಗಳ ಸಂದರ್ಭದಲ್ಲಿ ಆಧುನಿಕ ಜಗತ್ತು ಮತ್ತು ತಳಸಮುದಾಯ ಗಳು ಎನ್ನುವ ವಿಚಾರವನ್ನು ಕುರಿತು ಮಾತನಾಡುವಾಗ ಸ್ವಲ್ಪ ಎಚ್ಚರಿಕೆಯಿಂದಲೇ ಮಾತನಾಡಬೇಕಾಗುತ್ತದೆ. ಏಕೆಂದರೆ “ಆಧುನಿಕ ಜಗತ್ತು” ಮತ್ತು “ತಳಸಮುದಾಯಗಳು” ಎನ್ನುವ ಕಾನ್ಸೆಪ್ಟ್‌ಗಳು ಅಷ್ಟು ಸುಲಭವಾಗಿ ಗ್ರಹಿಕೆಗೆ ಬೇಗನೆ ನಿಲುಕುವಂತ ಕಾನ್ಸೆಪ್ಟ್‌ಗಳಲ್ಲ. ಮೇಲುನೋಟಕ್ಕೆ ಈ ಎರಡು ಕಾನ್ಸೆಪ್ಟ್‌ಗಳು ಸುಲಭವಾಗಿ ಕಂಡರೂ ಆಂತರ್ಯದಲ್ಲಿ ಭಿನ್ನವಾದ ಹಾಗೂ ಬಿಡಿಸಲಾರದಂಥ ಕಗ್ಗಂಟಾದ ವಿಷಯ ವ್ಯಾಪ್ತಿಯನ್ನು ಹೊಂದಿವೆ. ಆ ವಿಚಾರವಾಗಿ ಇಲ್ಲಿ ನಾನು ಗಮನಿಸಿದ ಮತ್ತು ನಾನು ಗ್ರಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಎರಡು ಕಾನ್ಸೆಪ್ಟ್‌ಗಳ ಕುರಿತು ಕೆಲವೊಂದು ತಾತ್ವಿಕವಾದಂಥ ಮತ್ತು ತಂತ್ರಜ್ಞಾನ ಯುಗದಲ್ಲಿ ಅವು ಹುಟ್ಟು ಹಾಕಿದ ಕೆಲವೊಂದು ತಳಮಳಗಳ ವಿಚಾರವಾಗಿ ಮಾತನಾಡುತ್ತೇನೆ.

‘ಆಧುನಿಕ ಜಗತ್ತು’ ಮತ್ತು ‘ತಳಸಮುದಾಯಗಳು’ ಎನ್ನುವ ಕಾನ್ಸೆಪ್ಟ್‌ಗಳನ್ನು ನಾವು ಇಂದು ವಿಶಾಲಾರ್ಥದಲ್ಲಿ ಗ್ರಹಿಸುವುದಕ್ಕಿಂತ ಪೂರ್ವದಲ್ಲಿ ಅವುಗಳನ್ನು ರೂಪಿಸಿಕೊಟ್ಟ ವಿದ್ಯಮಾನಗಳ ಕುರಿತು ಕೊಂಚ ಆಸ್ಥೆವಹಿಸಿಬೇಕಿದೆ. ಎಲ್ಲ ಸಾಮಾಜಿಕ ಚಿಂತಕರು ‘ಆಧುನಿಕ ಜಗತ್ತು’ ರೂಪಿಸಿಕೊಟ್ಟ ಪ್ರಭುತ್ವದ ಪರವಾದಂಥ ಆಲೋಚನ ಕ್ರಮದಡಿಯಲ್ಲಿಯೇ ತಮ್ಮ ವಿಚಾರಗಳನ್ನು ಬಹುತೇಕ ಚಿಂತಕರು ನಿರೂಪಿಸುತ್ತ ಬಂದಿರುವುದನ್ನು ಕಾಣುತ್ತೇವೆ. ಆ ಚಿಂತನೆಗಳ ಸ್ವರೂಪವನ್ನು ಹೀಗೆ ಗ್ರಹಿಸಬಹುದು. ಆಧುನಿಕ ಜಗತ್ತು ಬಹುಮುಖ್ಯವಾಗಿ ಶಿಕ್ಷಣರಂಗದಲ್ಲಿ ರಾಜಕೀಯ ರಂಗದಲ್ಲಿ, ಸಾಮಾಜಿಕ ರಂಗದಲ್ಲಿ ಹಾಗೂ ಅಭಿವೃದ್ದಿ ರಂಗದಲ್ಲಿ ಕೇವಲ ಅಂಕಿ-ಅಂಶಗಳ ಲೆಕ್ಕಚಾರದಲ್ಲಿ ಮುಂದುವರಿದಿದೆ ಎನ್ನುವ ವಿಚಾರಗಳನ್ನು ಹೇಳುತ್ತಾರೆ. ಈ ಮೇಲಿನ ವಿಚಾರಗಳನ್ನು ನಾವು ಪ್ರಾಯೋಗಿಕವಾಗಿ ಗಮನಿಸುವ ಸಂದರ್ಭದಲ್ಲಿ ಉಜ್ಜಿ ನೋಡಿದಾಗ ಅದರ ಸ್ವರೂಪ ಹಾಗಿಲ್ಲ ಎನ್ನುವುದು ಮನದಟ್ಟಾ ಗುತ್ತದೆ. ಅಂದರೆ ಮೇಲಿನ ವಿಚಾರಣೆಗಳೆಲ್ಲವು ಪ್ರಭುತ್ವ ತಾನು ಅಭಿವೃದ್ದಿ ಮಾಡಿದ್ದೇನೆ ಎನ್ನುವುದನ್ನು ತೋರಿಸಲಿಕ್ಕೆ ಕೇವಲ ನಗರ ಪ್ರದೇಶದಲ್ಲಿ ಯಾವುದೇ ಒಂದು ಮೂಲೆಯಲ್ಲಿ ಕೆಲಸ ಮಾಡಿ; ಅದನ್ನು ಇಡಿಯಾಗಿ, ವಿಸ್ತಾರವಾಗಿ ಹೋಲಿಸಿ ಹೇಳುವ ಕೆಲವನ್ನು ಮಾಡಿವೆ. ಅದು ತಮಗೂ ಗೊತ್ತಿರುವ ವಿಚಾರವೇ ಆಗಿದೆ. ಇಲ್ಲಿ ಆಧುನಿಕ ಜಗತ್ತು ಹೊಸದಾದ ವಿದ್ಯಾಮಾನಗಳನ್ನು ನಮಗೆ ಪರಿಚಯ ಮಾಡಿಕೊಟ್ಟಿದೆಯೇ ವಿನಃ ಅದು ಇನ್ನು ಅಷ್ಟಾಗಿ ಯಾರಿಗೂ ಸಿಗುತ್ತಿಲ್ಲ ಮತ್ತು ಕೇವಲ ಕೆಲವರ ಸ್ವತ್ತಾಗಿಯೋ ಉಳಿದಿದೆ ಎನ್ನುವಂಥದ್ದು ಇದು ಎಲ್ಲ ಕ್ಷೇತ್ರವನ್ನು ಅನುಲಕ್ಷಿಸಿ ಹೇಳಿದ ವಿಚಾರವಾಗಿದೆ.

ಶಿಕ್ಷಣ ರಂಗಕ್ಕೆ ಸಂಬಂಧಿಸಿದಂತೆ ಆಧುನಿಕ ಜಗತ್ತಿನ ಸಂದರ್ಭದಲ್ಲಿ ತಳಸಮುದಾಯ ಗಳನ್ನು ಮುಖಾಮುಖಿ ಮಾಡುವಾಗ ನಾವು ಬಹುಮುಖ್ಯವಾಗಿ ಮನಃಸ್ಥಿತಿಯನ್ನು ಅಂತರಾಳವನ್ನು ಕೆದಕಬೇಕಿದೆ. ಏಕೆಂದರೆ ತಳಸಮುದಾಯದವರು ಸಹ ಎಲ್ಲ ವಿದ್ಯಾಮಾನ ಗಳನ್ನು ಅನುಭವಿಸುತ್ತಿದ್ದಾರೆ. ಅವರು ಸಹ ಮುಂದುವರಿದವರಾಗಿದ್ದಾರೆ ಎಂದು ಹೇಳುವುದು ಕೇವಲ ತೋರಿಕೆಯ ಮಾತಾಗಿದೆ. ಈ ಮಾತನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಅದು ಕೇವಲ ಭೌತಿಕ ಸ್ವರೂಪವನ್ನು ಗಮನಿಸಿ ಹೇಳಿದುದಾಗಿದೆ. ಹೇಗೆಂದರೆ ಈ ಆಧುನಿಕ ಜಗತ್ತು ಕೇವಲ ವಸ್ತುರೂಪದಲ್ಲಿ ತಳಸಮುದಾಯಗಳಲ್ಲಿ ಕಂಡುಬರುತ್ತವೆ. ಅವು ಟೀ.ವಿ. ಫ್ರಿಜ್, ಮೊಬೈಲ್, ಬೈಕ್, ಊಟ, ಉಪಹಾರ, ಉಡುಗೆ, ತೊಡುಗೆ, ಇಂಥ ಭೌತಿಕವಾದ, ಶ್ರೀಮಂತಿಕೆಯ ಸಂಕೇತಗಳು ಎನ್ನುವ ಅರ್ಥದಲ್ಲಿ ಅವರೂ ಉತ್ತಮಸ್ಥಿತಿಯಲ್ಲಿದ್ದಾರೆ ಎನ್ನುವುದನ್ನು ಮಾತ್ರ ಕಟ್ಟಿಕೊಡಲಾಗುತ್ತದೆ. ನಾವು ಇನ್ನೂ ಹಿಂದಕ್ಕೆ ಹೋದಾಗ ತಳಸಮುದಾಯಗಳ ಸ್ಥಿತಿಯನ್ನು ಗಮನಿಸಿದಾಗ ಹಿಂದೆ ಇದ್ದಿದ್ದುಕ್ಕಿಂತಲೂ ಈಗ ಭಿನ್ನವಾಗಿ ಯೇನಿಲ್ಲ. ನಾನು ಮನಃಸ್ಥಿತಿ ಅಂಥ ಹೇಳಿದೆ. ಏನದು ಮನಸ್ಥಿತಿ? ತಳಸಮುದಾಯಗಳು ಬಹುತೇಕವಾಗಿ ಸ್ವ ಉದ್ಯೋಗನಿರತವಾದಂಥವು. ಅಂದಂದಿನ ಕೆಲಸದಿಂದ ಬಂದ ಆದಾಯ ದಿಂದ ಜೀವನ ನಡೆಸುತ್ತ ಬಂದಿರುವುದನ್ನು ನಾವು ಕಾಲದಿಂದಲೂ ಗುರುತಿಸಬಹುದು. ಆದರೆ ಇಂಥ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ ಎನ್ನುವ ಸಂದಿಗ್ಧ ಸ್ಥಿತಿಯೊಳಗೆ ಬಿದ್ದು ಒದ್ದಾಡುವ ಸ್ಥಿತಿಯನ್ನು ನಾವು ಇಂದು ಕಾಣುತ್ತೇವೆ. ಈ ಸಂದಿಗ್ಧಸ್ಥಿತಿ ಅಥವಾ ಮನಸ್ಸಿನ ತೊಳಲಾಟ ಹೇಗಿರುತ್ತದೆಂದರೆ ಮಕ್ಕಳು ಬುದ್ದಿವಂಥರಾಗಲಿ, ಬೇರೆ ಬೇರೆ ವಿದ್ಯಾಮಾನಗಳನ್ನು ಕಲಿತು ಸುಧಾರಣೆ ಹೊಂದಲಿ ಆ ಮೂಲಕ ಜೀವನವನ್ನು ಸುಖವಾಗಿ ನಡೆಸಬಹುದು ಎನ್ನುವ ಕಾರಣಕ್ಕಾಗಿ ಕಳಿಸಲಾಗುತ್ತದೆ. ಆದರೆ ಸ್ಥಿತಿ ಏನಾಗಿದೆ ಯೆಂದರೆ ಹಿಂದೆ ಹೇಳಿದ ಹಾಗೆ ‘ಅಭಿವೃದ್ದಿ’ ಎನ್ನುವ ಅರ್ಥದೊಳಗೆ ಈ ಎಲ್ಲವನ್ನು ಪಡೆದಿದ್ದಾರೆ. ಆದರೆ ಜೀವನ ಸಾಗಿಸುವುದಕ್ಕಾಗಿ ಅಲ್ಲ. ಯಾಕೆಂದರೆ ಸಂಪೂರ್ಣವಾದ ಅದರ ಜ್ಞಾನವನ್ನು ಕಲಿಸಲಾಗುವುದಿಲ್ಲ. ಆ ಕಾರಣಕ್ಕಾಗಿ ಯಾಕೋ ಕೆಲವು ಜನರು ಅದರ ಸದುಪಯೋಗವನ್ನು ಪಡೆದುಕೊಂಡಿರಬಹುದು. ಆದರೆ ಬಹುಪಾಲು ಜನರು ಏನಾಗಿದ್ದಾರೆ. ಆಲೋಚಿಸಬೇಕಾದ ವಿಚಾರ ಅದನ್ನು ಗಮನಕ್ಕೆ ಬಿಟ್ಟಿದ್ದೇವೆ. ಮಗ ಕಲಿತಿದ್ದಾನೆ ಎನ್ನುವ ಅವನು ಜಾಣನಾಗಿದ್ದಾನೆ ಎಂದು ಅವನು ಊರಲ್ಲಿ ಅಥವಾ ಅವನ ಕುಟುಂಬದಲ್ಲಿ ಅವನನ್ನು ಟ್ರೀಟ್ ಮಾಡುವ ಸ್ವರೂಪ ಭಿನ್ನವಾಗಿರುತ್ತದೆ. ಆದರೆ ಇತ್ತ ಆಧುನಿಕ ಜಗತ್ತು ದಿನೇ ದಿನೇ ಹೊಸದಾಗಿ ಸೃಷ್ಟಿಸುವ ವಿದ್ಯಾಮಾನಗಳ ಭರಾಟೆಯಲ್ಲಿ ತನ್ನ ತನವನ್ನು ಹುಡುಕಾಡುವ ಸ್ಥಿತಿಗೆ ತಂದು ನಿಲ್ಲಿಸಿವೆ. ಆಗ ಅವನು ಕುಟುಂಬ ಮತ್ತು ಈ ಆಧುನಿಕ ಜಗತ್ತಿನ ನಡುವೆ ಏನೂ ಇಲ್ಲದವನಾಗಿ ಯಾವುದಕ್ಕೂ ಯೋಗ್ಯ person ಆಗಿ ಕಾಣಿಸಿ ಕೊಳ್ಳುವುದಿಲ್ಲ ಇದು ಇರುವ ಸ್ಥಿತಿ.

ವರ್ಗಾಧಾರಿತ ಮತ್ತು ವರ್ಣಾಧಾರಿತ ನೆಲೆಯಲ್ಲಿ ಚರ್ಚಿಸಲಿಕ್ಕೂ ಕೂಡ ಅವಕಾಶವಿದೆ. ಇಲ್ಲಿ ಪ್ರಮುಖವಾಗಿ ವರ್ಗಾಧಾರಿತವಾಗಿ ಮೇಲ್ವರ್ಗ, ಮಧ್ಯಮವರ್ಗ, ಹಾಗೂ ಕೆಳವರ್ಗ ಎಂದು ಗುರುತಿಸುವಲ್ಲಿ ಈ ಕೆಳವರ್ಗವೇ ಹೆಚ್ಚು ಹೀನಾಯಸ್ಥಿತಿಯಲ್ಲಿ ನಲುಗುತ್ತಿರುವುದನ್ನು ನಾವು ಕಾಣುತ್ತೇವೆ.  ಶಿಕ್ಷಣ ಕಲಿತ ಇಂಥ ದಿನಮಾನಗಳಲ್ಲಿಯೂ ಸಹ ಈ ತರಹದ ಪರಿಸ್ಥಿತಿಗೆ ಕಾರಣ ಏನು? ಎಂಬ ಪ್ರಶ್ನೆಗೆ ಒಂದು ಸ್ವರೂಪ ಪಡೆಯುವುದೇ ಈ ವಿಚಾರ ಧಾರೆಯ ಮುಖ್ಯ ಕಾಳಜಿಯಾಗಿದೆ.

ಶತ-ಶತಮಾನಗಳಿಂದ ನಾವು ನೋಡುತ್ತ ಬಂದರೆ ಮುಖ್ಯವಾಗಿ ‘ಉತ್ಪಾದಕ’ ಮತ್ತು ‘ಉಪಭೋಗಿ’ ಸಂಸ್ಕೃತಿಗಳನ್ನು ಕಾಣುತ್ತೇವೆ. ‘ಉತ್ಪಾದಕ’ ಸಂಸ್ಕೃತಿಯೊಳಗೆ ತಳಸಮು ದಾಯಗಳು ಬಂದರೆ ‘ಉಪಭೋಗಿ’ ಸಂಸ್ಕೃತಿಯೊಳಗೆ ಮೇಲ್ವರ್ಗ ಮತ್ತು ಸ್ವಲ್ಪ ಮಧ್ಯಮ ವರ್ಗದವರು ಬರುತ್ತಾರೆ. ಈ ಉತ್ಪಾದಕವರ್ಗ ಮತ್ತು ಉಪಬೋಗಿವರ್ಗಗಳ ನಡುವೆ ಕೊಂಡಿಯಾಗಿ ಕೆಲಸ ಮಾಡುವುದಕ್ಕೆ ‘ಮಧ್ಯವರ್ತಿ’ಗಳು ಬರುತ್ತಾರೆ. ಹೀಗೆ ಈ ತ್ರಿಕೋನಾ ಕಾರದಲ್ಲಿ ಕಾಲದಿಂದ ಕಾಲಕ್ಕೆ ನಡೆಯುತ್ತ ಬಂದಿದೆ. ಹೀಗೆ ನಡೆಯುತ್ತ ಬಂದುದರಲ್ಲಿ ಉತ್ಪಾದಕ ವರ್ಗವೇ ಹೆಚ್ಚು ಅನ್ಯಾಯಕ್ಕೆ ಒಳಗಾಗುತ್ತಲೇ ಬಂದಿರುವುದನ್ನು ನಾವು ಕಾಣು ತ್ತೇವೆ. ಜೊತೆಗೆ ಈ ಜಾಗತೀಕರಣದ ಸಂದರ್ಭದಲ್ಲಿ ಇನ್ನೂ ತುಳಿತಕ್ಕೆ ಒಳಗಾಗಿರುವುದ್ನು ಕಾಣುತ್ತೇವೆ.

ಇಲ್ಲಿ ಮುಖ್ಯವಾಗಿ ತಳಸಮುದಾಯಗಳು ಸೃಷ್ಟಿಸಿದ ಕಸುಬನ್ನು ಆಧಾರವಾಗಿಟ್ಟುಕೊಂಡು ಭಿನ್ನ ಭಿನ್ನ ನೆಲೆಗಳಲ್ಲಿ ಈ ಚರ್ಚೆಗಳನ್ನು ಅನೇಕ ಸ್ನೇಹಿತರು ತಮ್ಮದೇ ಆದ ರೀತಿಯಲ್ಲಿ ವಿವರಿಸಿದ್ದಾರೆ. ಅದನ್ನು ನಾವು ಹನ್ನೆರಡನೆ ಶತಮಾನಕ್ಕೆ ಹೋಗಿ ಬಸವಣ್ಣ ಏನು ಹುಟ್ಟು ಹಾಕಿದನೋ ಕಸುಬಾಧಾರಿತವಾದ ಕುಲಕಸುಬು ಅಲ್ಲಿಂದ ಈ ವಿಚಾರವನ್ನು ಮಂಡಿಸ ಬಹುದು. ಅದು ನೇಕಾರಿಕೆ, ಬಡಿಗ, ಕಮ್ಮಾರ, ಹಡಪದ, ಸೂಳೆಗಾರಿಕೆ, ಚಪ್ಪಲಿಕೆಲಸ ಇನ್ನು ಅನೇಕ ಕುಲಕಸುಬುಗಳನ್ನು ನಾವು ಕಾಣುತ್ತೇವೆ. ಅವು ಆಗ ಕಸುಬು ಆಧಾರಿತವಾಗಿ ಬಂದಂಥವುಗಳಾಗಿವೆ. ಆದರೆ ಆಧುನಿಕದ ಮತ್ತು ಜಾಗತೀಕರಣ ಸಂದರ್ಭದಲ್ಲಿ ದೊಡ್ಡ ಬಂಡವಾಳಶಾಹಿಯಾಗಿ ಮಾರ್ಪಟ್ಟು ಒಂದು ಮಾರ್ಕೆಟಿಂಗ್ ಅನ್ನು ಸೃಷ್ಟಿ ಮಾಡುವಲ್ಲಿ ತಳಸಮುದಾಯಗಳ ಪಾತ್ರ ಮುಖ್ಯವಾಗಿದ್ದರೂ ಅದು ಮುಂಚೂಣಿಗೆ ಬರದೆ, ಬಂಡವಾಳ ಹೂಡಿಕೆದಾರರೆ ಮುಖ್ಯವಾಹಿನಿಯಲ್ಲಿ ಬರಲಿಕ್ಕೆ ಅನೇಕ ಕಾರಣಗಳಿವೆ. ಅದಕ್ಕೆ ಪೂರಕವಾದ ಈ ಮಧ್ಯವರ್ತಿಗಳು ಆಧಾರ ಸ್ತಂಭಗಳಾಗಿ ಕಾರ್ಯ ನಿರ್ವಹಿಸಿದ್ದಾರೆ ಎನ್ನಬಹುದು.

ಉತ್ಪಾದಕವರ್ಗದ ಒಂದು ವಸ್ತುವನ್ನು ಉದಾಹರಣೆಗೆ ಒಂದು ಜೊತೆ ಚಪ್ಪಲಿಯನ್ನು ಗಮನಿಸೋಣ. ಉತ್ಪಾಕವರ್ಗ ಒಂದು ಜೊತೆ ಚಪ್ಪಲಿ ತಯಾರುಮಾಡಿದರೆ ಅದನ್ನು ಮಧ್ಯವರ್ತಿ ಉಪಭೋಗಿ ವಲಯಕ್ಕೆ ಮಾರಾಟ ಮಾಡುತ್ತಾನೆ. ಆ ಮಾರಾಟದಲ್ಲಿ ಒಂದು ಜೊತೆ ಚಪ್ಪಲಿಗೆ ೧೦೦ರೂಪಾಯಿ ತೆಗೆದುಕೊಂಡರೆ ಅದರಲ್ಲಿ ೨೦ ರೂಪಾಯಿ ಉತ್ಪಾದಕನಿಗೆ ಸಿಕ್ಕರೆ ಉಳಿದ ೮೦ ರೂಪಾಯಿಯಲ್ಲಿ ೪೦ ರೂಪಾಯಿ ಮಧ್ಯವರ್ತಿಗೆ, ಇನ್ನರ್ಧ ಉಳಿದ ೪೦ ರೂಪಾಯ ಬಂಡವಾಳ ಹೂಡಿಕೆದಾರಿಗೆ ಸಿಗುತ್ತದೆ. ಆಗ ನಾವು ಶ್ರಮಾಧಾರಿತವಾಗಿ ಆಲೋಚನೆ ಮಾಡಿದಾಗ ಶೇಖಡ ೬೦ ರೂಪಾಯಿ ಉತ್ಪಾದಕರಿಗೆ ಸಿಗಬೇಕು. ಉಳಿದ ೪೦ ರೂಪಾಯಿಯಲ್ಲಿ ಮಧ್ಯವರ್ತಿ ಬಂಡವಾಳ ಹೂಡಿಕೆದಾರರಿಗೆ ಸಿಗಬೇಕು. ಆದರೆ ಸ್ಥಿತಿ ಏನಾಗಿದೆ. ೨೦ ಪರಿಸೆಂಟ್ ಉತ್ಪಾದಕರಿಗೆ ಸಿಕ್ಕರೆ ಉಳಿದ ೮೦ ಪರಿಸೆಂಟ್ ಮಧ್ಯವರ್ತಿ, ಬಂಡವಾಳ ಹೂಡಿಕೆದಾರರ ಪಾಲಾಗಿದೆ. ಈ ವಿಚಾರವನ್ನು ಕಾರ್ಯರೂಪಕ್ಕೆ ತರುವಲ್ಲಿ ತಳಸಮುದಾಯಗಳಿಗೆ ಆಗುವ ಅನ್ಯಾಯವನ್ನು ಬಗೆಹರಿಸುವ ಕಡೆಗೆ ಗಮನಹರಿಸಬೇಕಿದೆ.

ಒಟ್ಟಾರೆಯಾಗಿ ತಳಸಮುದಾಯಗಳಿಗೆ ಆಗುವ ಇಂಥ ಅನೇಕ ಉದಾಹರಣೆಗಳನ್ನು ಕೊಡಬಹುದು. ಈಗ ಏನೆಲ್ಲ ವಿದ್ಯಾಮಾನಗಳು ಬಂದರೂ ಕೂಡಾ ಅವರ ಬದುಕು ಅತಂತ್ರಸ್ಥಿತಿಯಲ್ಲೇ ಮುಂದುವರಿದಿರುವುದನ್ನು ಕಾಣುತ್ತೇವೆ. ಕುಲಕಸುಬಾಧಾರಿತವಾಗಿದ್ದಂಥ ಸಮುದಾಯಗಳು ಸಹ ಇಂಥ ಆಧುನಿಕ ಬಣ್ಣದ ಬದುಕಿನಲ್ಲಿ ತಮ್ಮ ಕಲೆಯನ್ನು ಮಾರಾಟ ಕ್ಕಿಡುವ, ಇನ್ನೊಬ್ಬರು ಕೊಡುವ ಬಿಡಿಕಾಸಿಗೂ ಅಲೆದಾಡುವ ಪರಿಸ್ಥಿತಿಯನ್ನು ಕಾಣುತ್ತೇವೆ. ಈ ಮೇಲಿನ ವಿಚಾರಗಳನ್ನು ಗಮನಿಸಿದಾಗ ತಳಸಮುದಾಯಗಳು ಆಧುನಿಕ ಜಗತ್ತಿನ ವಿದ್ಯಾಮಾನಗಳ ಜೊತೆಗೆ ಪೈಪೋಟಿ ಮಾಡಿ ತಮಗೆ ಒದಗುವ ಎಲ್ಲವನ್ನು ನಿರೀಕ್ಷೆಯ ಮಟ್ಟದಲ್ಲಿ ಪಡೆಯುವ ಸ್ಥಿತಿಯನ್ನು ನಿರ್ಮಾಣಮಾಡಿ ಅವರಿಗೆ ನ್ಯಾಯವಾಗಿ ಸಿಗಬೇಕಾದ ಎಲ್ಲ ರೀತಿಯ ವಿದ್ಯಾಮಾನಗಳನ್ನು ಪಡೆದುಕೊಳ್ಳುವ ಹಾಗೆ ಗಮನ ಹರಿಸಿ ಆ ಬಗೆಗೆ ಚಿಂತಿಸಬೇಕಿದೆ, ದಕ್ಕಿಸಿಕೊಡಬೇಕಿದೆ. ಹಾಗಾದಾಗ ಈ ತಳಸಮುದಾಯಗಳಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ.

(ನನ್ನ ವಿಚಾರಗಳನ್ನು ಹಂಚಿಕೊಳ್ಳಲ್ಲಿಕ್ಕೆ ಅವಕಾಶ ಕಲ್ಪಿಸಿಕೊಟ್ಟದ್ದಕ್ಕಾಗಿ ಡಾ. ಮಂಜುನಾಥ ಬೇವಿನಕಟ್ಟಿ ಗುರುಗಳಿಗೂ ಡಾ. ವೀರೇಶ ಬಡಿಗೇರ ಗುರುಗಳಿಗೂ ಹಾಗೂ ಸಮಸ್ಥ ನಾಗರಾಳ ಜನರಿಗೂ ವಂದಿಸುತ್ತೇನೆ ನಮಸ್ಕಾರ.)

* * *

ಧೀರರೂ, ಶೂರರೂ, ಉದಾರ ಚೇತನರೂ ಆದ ನಾಯಕ ಜನಾಂಗದವರು ಜನಪ್ರಿಯರಾಗಿ ಜನನಾಯಕರಾಗಿ ಪಾಳೆಯಪಟ್ಟುಗಳನ್ನು ಕಟ್ಟಲು ಶಕ್ತರೆನಿಸಿ ದರು.
ಪ್ರೊ. ತ.ಸು. ರಾಮರಾಯರು