ಇತ್ತೀಚಿನ ದಿನಮಾನಗಳಲ್ಲಿ ಉಪೇಕ್ಷಿತ ಸಮುದಾಯಗಳ ಬಗ್ಗೆ ಗಂಭೀರವಾದ ಚಿಂತನೆಗಳೂ, ಚರ್ಚೆಗಳೂ ನಡೆಯುತ್ತಿವೆ. ಇದೊಂದು ಆರೋಗ್ಯಕರವಾದ ಬೆಳೆವಣಿಗೆಯಾಗಿದೆ. ಮೊನ್ನೆ ಮೊನ್ನೆಯವರೆವಿಗೂ ತಳಸಮುದಾಯಗಳು ಇತಿಹಾಸ, ಧರ್ಮ, ಪರಂಪರೆ ಗಳ ಬಗೆಗೆ ಅಚಲವಾದ ನಂಬಿಕೆಯನ್ನು ಹೊಂದಿದ್ದವು. ಅಲ್ಲಿನ ವಿಧಿನಿಷೇಧಗಳಿಗೆ ಅನುಗುಣ ವಾಗಿ ಬದುಕುವುದು ತಮ್ಮಧರ್ಮ ಕರ್ತವ್ಯ ಎಂದೇ ತಿಳಿದು, ಆ ವ್ಯವಸ್ಥೆಯನ್ನು ಯಾವತ್ತು ಅನುಮಾನಿಸದೆ, ಅಗೌರವಿಸದೆ ಅತ್ಯಂತ ವಿಧೇಯತೆಯಿಂದ ಪಾಲಿಸಿಕೊಂಡು ಬಂದಿವೆ. ತಳಸಮುದಾಯಗಳ ಈ ವಿರೋಧರಹಿತ ಮನೋಧೋರಣೆ ಅವರನ್ನು ಅತ್ಯಂತ ಆಳಕ್ಕೆ ತಳ್ಳಲ್ಪಟ್ಟಿತು.

ವಸಹಾತೋತ್ತರ ಭಾರತ, ಅಕ್ಷರವಂಚಿತ ಸಮುದಾಯಗಳಿಗೆ ಅಕ್ಷರ ಕಲಿಯುವ ಅವಕಾಶ ಕಲ್ಪಿಸಿಕೊಟ್ಟಿತು. ಪರಿಣಾಮವಾಗಿ ತಳಸಮುದಾಯಗಳ ಒಳಗಿನ ಸೂಕ್ಷ್ಮಪ್ರಜ್ಞೆಗಳು ಎತ್ತರ ಸಂಸ್ಕೃತಿಗಳ ಸೋಗಲಾಡಿತನವನ್ನು, ಜೀವ ವಿರೋಧಿ ಮನಸ್ಥಿತಿಗಳನ್ನು ಅರ್ಥಮಾಡಿ ಕೊಂಡು, ಆ ಹೊತ್ತಿನಿಂದಲೇ ಪರಂಪರೆಯನ್ನು ಅನುಮಾನಿಸುತ್ತ, ಪ್ರಶ್ನಿಸುತ್ತ ಬಂದಿದೆ. ಈ ದಿಸೆಯಲ್ಲಿ ಪ್ರಜ್ಞಮನಸ್ಸುಗಳು ತಳಜನರಲ್ಲಿ ಜಾಗೃತಿ ಮೂಢಿಸಿ ಬದುಕಿನ ಭದ್ರತೆಗೆ ಅಗತ್ಯವಾದ ರೂಪು-ರೇಷೆಗಳನ್ನು ರೂಪಿಸುವುದು ಇಂತಹ ಚರ್ಚೆಗಳ ಮುಖ್ಯ ಕಾಳಜಿಯಾಗ ಬೇಕಾಗಿದೆ. ಪ್ರಸ್ತುತ ಈ ಪ್ರಬಂಧದಲ್ಲಿ ನಾಯಕ ಸಮುದಾಯದ ಬಗ್ಗೆ ಗಮನಹರಿಸಲಾಗಿದೆ.

ಕರ್ನಾಟಕದ ಬುಡಕಟ್ಟು ಸಮುದಾಯಗಳಲ್ಲಿ ‘ನಾಯಕ’ ಸಮುದಾಯವೂ ಒಂದು. ಶತಮಾನಗಳಷ್ಟು ಹಳೆಯ ಇತಿಹಾಸ ಪರಂಪರೆ ಹೊಂದಿರುವ ಈ ಸಮುದಾಯ ಅನೇಕ ಏಳು-ಬೀಳುಗಳನ್ನು ಕಂಡಿದೆ. ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ನಾಯಕ ಸಮುದಾಯ, ಬೇರೆ ಬೇರೆ ಕಾಲಘಟ್ಟಗಳಲ್ಲಿ ವಿಭಿನ್ನ ಸಂಸ್ಕೃತಿಗಳ ಜತೆ ಮುಖಾಮುಖಿ ಯಾಗುತ್ತ, ತನ್ನ ಸಾಂಸ್ಕೃತಿಕ ಅನನ್ಯತೆಯನ್ನು ಗಟ್ಟಿಗೊಳಿಸಿಕೊಳ್ಳುತ್ತ ಬಂದಿದೆ.

ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಣೆ ಮಾಡಬೇಕೆಂಬ ಇರಾದೆಯಿಂದ ಸರಕಾರ ಅರಣ್ಯ, ಜಲ ಮೊದಲಾದ ಸಂಪನ್ಮೂಲಗಳನ್ನು ರಾಷ್ಟ್ರೀಕರಣ ಮಾಡಿತು. ಕಾಡು ಆದಿವಾಸಿ ಬುಡಕಟ್ಟು ಜನರ ಬದುಕಾಗಿತ್ತು. ಜೀವಾಳವಾಗಿತ್ತು. ಪ್ರಕೃತಿ ಸಂಪನ್ಮೂಲಗಳನ್ನು ಎದುರಿಸಬೇಕಾಯಿತು.  ಅಭಿವೃದ್ದಿಯ ಹೆಸರಿನಲ್ಲಿ ರಕ್ಷಿತ ಅರಣ್ಯ ಧಾಮಗಳಲ್ಲಿ ಜನವಸತಿ ಮತ್ತು ಪಶುಪಾಲನೆಗೆ ನಿರ್ಬಂಧಗಳನ್ನು ಹಾಕುವುದರ ಮುಖಾಂತರ ಆ ಜನರ ಬದುಕಿನ ಹಕ್ಕನ್ನು ಕಿತ್ತುಕೊಂಡಿತು. ಆ ಮೂಲಕ ಪಶುಪಾಲನೆ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳು ಸವಾಲುಗಳನ್ನು ತಂದೊಡ್ಡಿದವು. ಇದೇ ವೇಳೆ ಅನೇಕರು ತಮ್ಮ ವೃತ್ತಿ ಬದುಕುಗಳನ್ನು ಬಿಟ್ಟು, ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಂಡರು. ಸ್ವಾವಲಂಬಿಗಳಾಗಿ ಬದುಕುತ್ತಿದ್ದ ಇವರು ಮತ್ತೊಬ್ಬರನ್ನು ಆಶ್ರಯಿಸುವಂತಾಯಿತು. ಪಶುಪಾಲನೆ ಮುಂದುವರಿಸಿಕೊಂಡು ಬಂದವರು, ಇಂದು ಹೊಸ ಸಮಸ್ಯೆಗಳನ್ನು ಎದುರಿಸಬೇಕಿದೆ. ಮಾರುಕಟ್ಟೆಗಳಲ್ಲಿ ಸರಿಯಾದ ಬೆಂಬಲ ಬೆಲೆ ಸಿಗದೆ ನಷ್ಟವನ್ನು ಅನುಭವಿಸುತ್ತಿರುವುದು ಇನ್ನೊಂದು ಬಗೆ. ಈ ಯಾವ ಸಮಸ್ಯೆಗಳಿಗೂ ಸರಕಾರವು ನೆರವಾಗದೆ, ಇವರ ಬದುಕನ್ನು ಅತಂತ್ರವಾಗಿಸಿದೆ. ಹೀಗಾಗಿ ‘ಪಶುಪಾಲನೆ’ ಕ್ರಮೇಣವಾಗಿ ಕಡಿಮೆಯಾಗುತ್ತಿದೆ.

‘ಪಶುಪಾಲನೆ’ ಕೇವಲ ಆ ಸಮುದಾಯದ ಒಂದು ಭಾಗವಾಗಿರಲಿಲ್ಲ. ಸುತ್ತಲಿನ ಜನರ ಮೇಲೆ ಪರಿಣಾಮವನ್ನುಂಟು ಮಾಡುತ್ತಿತ್ತು. ಸಾವಯವ ಕೃಷಿಯಲ್ಲಿ ಕೊಟ್ಟಿಗೆ ಗೊಬ್ಬರಗಳನ್ನು ಬಳಕೆ ಮಾಡುತ್ತಿದ್ದುದರಿಂದ ಆಹಾರ ಧಾನ್ಯಗಳಲ್ಲಿ ಔಷಧಿಯ ಗುಣವಿದ್ದು, ಮನುಷ್ಯನಿಗೆ ರಕ್ಷಾಕವಚವಾಗಿತ್ತು. ಆಧುನೀಕರಣ, ಜಾಗತೀಕರಣದ ಪ್ರಭಾವದಿಂದ ಸಾವಯವ ಗೊಬ್ಬರಗಳು ಬದಲಾಗಿ, ರಾಸಾಯನಿಕಗೊಬ್ಬರ ಬಳಕೆ ಮಾಡುತ್ತಿದ್ದು, ಅವು ಪ್ರತಿಕೂಲ ಪರಿಣಾಮ ಬೀರುತ್ತವೆ. ಭೂಮಿ ಶಕ್ತಿ ಕಳೆದುಕೊಂಡು ಬಂಜೆಯಾಗುತ್ತಿದ್ದು, ಆಹಾರಕ್ಕಾಗಿ ಪರರನ್ನು ಅವಲಂಬಿಸಬೇಕಾದ ನಾಳಿನ ಅಪಾಯಗಳನ್ನು ಅರ್ಥಮಾಡಿಕೊಳ್ಳ ಬೇಕಿದೆ.

ಆಧುನೀಕರಣ ಮತ್ತು ಜಾಗತೀಕರಣ ತಳಸಮುದಾಯಗಳಲ್ಲಿ ಮತ್ತು ಬುಡಕಟ್ಟುಗಳಲ್ಲಿ ಒಂದು ರೀತಿಯ ಸಂಚಲವನ್ನುಂಟು ಮಾಡಿವೆ. ಆಧುನಿಕ ತಂತ್ರಜ್ಞಾನ ಹಟ್ಟಿ-ಹಳ್ಳಿಗಳಿಗೂ ಹತ್ತಿರವಾಗುತ್ತಿದ್ದು, ಆ ನೆಲೆಗಳು ಅನೇಕ ಸ್ಥಿತ್ಯಂತರಗಳಿಗೆ ಒಳಗಾಗಿವೆ. ವಿಶೇಷವಾಗಿ ದೂರದರ್ಶನ, ಸಿನೆಮಾದಂತಹ ಮಾಧ್ಯಮಗಳು ಈ ವರ್ಗಗಳನ್ನು ಬಹುವಾಗಿ ಆಕರ್ಷಿಸಿವೆ. ಆ ಪರದೆಗಳ ಮೇಲೆ ಮೂಡಿಬರುವ ತನ್ನದಲ್ಲದ ಬದುಕನ್ನು, ತನ್ನದಾಗಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ, ವಾಸ್ತವತೆಯನ್ನು ಮರೆತು ಭ್ರಮೆಗೆ ಒಳಗಾಗುತ್ತಿವೆ. ಮುಂದುವರೆದ ನಾಗರೀಕ ಬದುಕನ್ನು ನಾವೂ ಬದುಕಬೇಕೆಂದು ಬಯಸಿ, ತನ್ನ ವಾಸ್ತವದ ಪರಿಸ್ಥಿತಿಗೆ ಒಗ್ಗದ ಮತ್ತು ನಿಲುಕದ ಅನಗತ್ಯ ಪ್ರಯತ್ನಗಳಿಗೆ ಮುಂದಾಗುತ್ತಿವೆ. ಈ ಬಗೆಯ ಹಪಾಹಪಿತನ ಅವರ ಬದುಕನ್ನು ಸಂಕೀರ್ಣಗೊಳಿಸಿದೆ. ಖಿನ್ನತೆಗೂ, ಭ್ರಮೆಗೂ ಒಳಗು ಮೂಡಿದ್ದು, ಯುವಜನತೆಯನ್ನು ನಗರ, ನಾಗರೀಕತೆಯತ್ತ ಸೆಳೆದಿದೆ.

ಹಳ್ಳಿ ಹಟ್ಟಿಗಳು ನಗರಗಳ ಕಡೆ ಮುಖಮಾಡಿವೆ. ನಾಗರೀಕ ಬದುಕನ್ನು ಅನುಕರಣೆ ಮಾಡುತ್ತ ತಮ್ಮ ಜೀವನ ವಿಧಾನದಲ್ಲಿ ಹಲವು ರೀತಿಯ ಬದಲಾವಣೆಗಳನ್ನು ಅಳವಡಿಸಿ ಕೊಂಡಿವೆ. ಲುಂಗಿ ಬದಲು ಪ್ಯಾಂಟು, ಲಂಗದ ಬದಲು ಮಿಡಿ, ಸೀರೆಯ ಬದಲು ಚೂಡಿದಾರ, ರಿಬ್ಬನ್ ಬದಲು ಹೇರ್ ಬೆಂಡು/ಕ್ಲಿಪ್,  ಜಡೆಗೆ ಬದಲು ಬಾಬ್‌ಕಟ್ಟು, ಬಳೆಗೆ ಬದಲು ಗಡಿಯಾರ ಗುಡಿಸಲು ಚಪ್ಪರದ ಬದಲು ಮಹಡಿ, ಇದ್ದಿಲು ಬದಲು ಟೂತ್‌ಪೇಸ್ಟ್, ಬೇವಿನಕಡ್ಡಿ ಬದಲು ಬ್ರೆಷ್ ಹೀಗೆ ನಗರದ ಜನಬಳಸುವ ಸರಕುಗಳ ಬಳಕೆಯೇ ಪರಿವರ್ತನೆ, ಅಭಿವೃದ್ದಿ ಎಂದು ಭಾವಿಸಿದಂತಿವೆ. ಈ ಪರಿವರ್ತನೆಯು ಕೂಡ ಅಕ್ಷರ ಕಲಿಯವವರಿಗಿಂತ ಕಲಿತವರಲ್ಲಿ, ಸ್ತ್ರೀಯರಿಗಿಂತ ಪುರುಷರಲ್ಲಿ ಅಧಿಕವಾಗಿರುವುದು ಗಮನಾರ್ಹ ಸಂಗತಿ.

ಸರಕಾರವು ಹಟ್ಟಿಗಳನ್ನು ಅಭಿವೃದ್ದಿ ಪಡಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ನಿಟ್ಟಿನಲ್ಲಿ ಕ್ರೀಯಾಶೀಲವಾಗಿದೆ. ಈ ದಿಸೆಯಲ್ಲಿ ಹಟ್ಟಿಗಳಿಗೂ ಶಾಲೆ, ಕುಡಿಯುವ ನೀರು, ಸಾರಿಗೆ ಸಂಪರ್ಕ, ಶೌಚಾಲಯ, ಆಸ್ಪತ್ರೆ, ವಿದ್ಯುತ್ತು ಇವೇ ಮೊದಲಾದ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದೆ. ನಾಗರೀಕ ಜೀವನದ ಸವಲತ್ತುಗಳನ್ನು ಹಟ್ಟಿ ಹಳ್ಳಿಗಳಿಗೂ ತಲುಪಿಸುವು ದನ್ನೇ ಅಭಿವೃದ್ದಿಯೆಂದು ತಿಳಿದಿದೆ. ಸರಕಾರ ಅಭಿವೃದ್ದಿಗೆ ಬಳಸುವ ಮಾನದಂಡಗಳೂ ಕೂಡ ಇವೇ ಆಗಿವೆ. ಹಾಗಾದರೆ ಈ ಸವಲತ್ತುಗಳು ಕಂಡಿರುವ ಹಳ್ಳಿಗಳು ವಾಸ್ತವವಾಗಿ ಅಭಿವೃದ್ದಿಯಾಗಿವೆಯೇ? ಅಂತಹ ಹಳ್ಳಿ-ಹಟ್ಟಿಗಳಲ್ಲಿ ಈಗಲೂ ಗುಡಿಸಲುಗಳಿವೆ. ಬೇಟೆ ಸಂಸ್ಕೃತಿಯಿದೆ, ಮೈಗೆ ಕುಪ್ಪಸ ತೊಡದ ಸ್ತ್ರೀಯರೂ ಇರುವಂತೆ, ಅಂಗಿ ತೊಡದ ಪುರುಷರೂ ಇದ್ದಾರೆ, ಕೋಳಿ ತಿನ್ನದ ಈಚಲು ಚಾಪೆಯ ಮೇಲೆ ಕೂರದ ಜನರೂ, ಜನ ನಂಬಿಕೆಗಳೂ ಇವೆ. ಅಜ್ಞಾನ, ಅಂಧಕಾರ, ರೂಢಿಸಂಪ್ರದಾಯಗಳೂ ಇವೆ.

ಆಧುನೀಕರಣ ಕಾಲಘಟ್ಟದಲ್ಲಿಯೂ ಆಧುನೀಕರಣದ ವರ್ಣರಂಜಿತ ಬದುಕು ಕಣ್ಣಿಗೆ ಕಾಣಿಸುತ್ತಿದ್ದರೂ, ನಾಗರೀಕತೆಯ ಸವಲತ್ತುಗಳನ್ನು ತನ್ನನೆರೆಹೊರೆಯವರು ಅನುಭವಿಸುತ್ತಿ ದ್ದರೂ, ಹಟ್ಟಿಗಳು ಇನ್ನೂ ಇದ್ದಲ್ಲಿಯೇ ಇವೆ. ಹಟ್ಟಿಗಳು ಹಟ್ಟಿಗಳಾಗಿಯೇ ಉಳಿದಿವೆ. ಬುಡಕಟ್ಟಿನ ಸಂಸ್ಕೃತಿಯನ್ನು ಬಿಗಿಯಾಗಿ ಅಪ್ಪಿಕೊಂಡಿರುವ ಹಟ್ಟಿಗಳು, ಬಿಟ್ಟೂ ಬಾರದ ಸ್ಥಿತಿಯಲ್ಲಿ ಸಿಕ್ಕು ಒದ್ದಾಡುತ್ತಿವೆ. ಬುಡಕಟ್ಟಿನ ಸಂಸ್ಕೃತಿಯನ್ನು ಮೀರಬೇಕೆಂದಾಗಲೆಲ್ಲಾ ತಮಗರಿವಿಲ್ಲದೆಯೇ ಯಾವುದೋ ಅನಾಥ ಪ್ರಜ್ಞೆಗೆ ಒಳಗಾಗುತ್ತಿವೆ. ಏನನ್ನೋ ಕಳೆದುಕೊಳ್ಳು ತ್ತೇವೆಂಬ ಆತಂಕವನ್ನು ಅನುಭವಿಸುತ್ತವೆ. ಈ ಅನಾಥಪ್ರಜ್ಞೆಗೆ, ಆತಂಕಕ್ಕೆ ತನ್ನ ಸಂಸ್ಕೃತಿಯ ಮೇಲಿನ ವ್ಯಾಮೋಹವೇ ಕಾರಣವೆಂದೆನಿಸಿದರೂ, ಈ ಮನೋಧರ್ಮಕ್ಕೆ ಇನ್ನೂ ಬಗೆಯ ಕಾರಣಗಳು ಇರುವುದನ್ನು ತಿರಸ್ಕರಲಾಗದು.

ಹಾಗಾಗಿ ಪರಿವರ್ತನೆ ಅಥವಾ ಅಭಿವೃದ್ದಿ ಎನ್ನುವುದು ಕೇವಲ ವಸ್ತುವಿನ ರೂಪದಲ್ಲಿ ಅಂದರೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಭೌತಿಕ ಮತ್ತು ಭೌದ್ದಿಕ ಎರಡೂ ಆಯಾಮ ಗಳಿಗೆ ಸಂಬಂಧಿಸಿದ್ದು. ‘ಅಭಿವೃದ್ದಿ’ ಎನ್ನುವುದು  ದೇಹ ಮತ್ತು ಆತ್ಮಗಳ ಸಂಗಮವಿದ್ದಂತೆ. ಹೀಗಾಗಿ ಈ ಎರಡರಲ್ಲಿ ಯಾವೊಂದರ ಪ್ರಗತಿಯೂ ಅಭಿವೃದ್ದಿ ಎನಿಸಲಾರದು. ನಾಗರೀಕ ಸವಲತ್ತುಗಳೂ, ಉಡುಗೆ-ತೊಡುಗೆ, ಆಸಕ್ತಿ-ಅಭಿರುಚಿಗಳ ಪರಿವರ್ತನೆಯೂ ಅಭಿವೃದ್ದಿಯೇ ಅದು ಅಭಿವೃದ್ದಿಗೆ ಅವಶ್ಯಕವೂ ಹೌದು. ಆದರೆ ಅದುವೇ ಅಭಿವೃದ್ದಿಯ ಅಂತಿಮವಲ್ಲ. ಅದು ಅಭಿವೃದ್ದಿಯ ಒಂದು ಮುಖವಷ್ಟೆ. “ನಿನ್ನ ನೀನರಿತ ಮೇಲೆ ಇನ್ನೇನು ಇನ್ನೇನು” ಎಂಬ ವಚನದಲ್ಲಿ ಅಭಿವೃದ್ದಿಯ ತಾತ್ವಿಕತೆ ಸ್ವರೂಪವನ್ನು ಗಮನಿಸಬಹುದಾಗಿದೆ.

ಹಟ್ಟಿಗಳ, ಹಟ್ಟಿಜನರ ಏಳಿಗೆಗೆ ಅನೇಕ ಅಭಿವೃದ್ದಿ ಯೋಜನೆಗಳನ್ನು ರೂಪಿಸಿದ್ದರೂ ಯಶಕಾಣದಾಗಿವೆ. ಏಕೆಂದರೆ ಆ ಜನ ಬೌದ್ದಿಕವಾಗಿ ಬದಲಾಗದಿರುವುದು. ಪರಿವರ್ತನೆ ಯನ್ನು ಒಪ್ಪಿಕೊಳ್ಳುವ ಧಾರಣಾಶಕ್ತಿಯನ್ನು ರೂಪಿಸಿಕೊಳ್ಳದಿರುವುದು. ಹಾಗಾಗಿ ಈ ಸಮುದಾಯವನ್ನು ಭೌತಿಕವಾಗಿ ಬದಲಾಯಿಸಬೇಕಾದರೆ, ಮೊದಲು ಬೌದ್ದಿಕವಾಗಿ ಬದಲಾಯಿಸಬೇಕಿದೆ. ಹಟ್ಟಿ ಜನರ ಸಂಸ್ಕೃತಿಯನ್ನು, ಮನಸ್ಥಿತಿಯನ್ನು ಸಮೀಪದಿಂದ ಅರಿತು, ಅವರ ಸಾಂಸ್ಕೃತಿಕ ಸೂಕ್ಷ್ಮಗಳಿಗೆ ಅನುಗುಣವಾಗಿ ಸ್ಪಂದಿಸಬೇಕಿದೆ. “ಬುಡಕಟ್ಟು ಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವಾಗಿ ಅನಾವಶ್ಯಕವಾಗಿ ಅವರ ಸಾಂಸ್ಕೃತಿಕ ಬದುಕಿನಲ್ಲಿ ಹಸ್ತಕ್ಷೇಪ ಮಾಡಬಾರದು” (ಮಾಸ್ಯಮಂಡಲ ಡಾ. ಮೀರಾಸಾಬಿಹಳ್ಳಿ ಶಿವಣ್ಣ: ಪು: ೧೩೭) ಈ ಸಮತೋಲನವನ್ನು ಸಾಧಿಸದ ಹೊರತು ಅಭಿವೃದ್ದಿ ಆಗದು.

ಇಲ್ಲಿಯೇ ಹೇಳಬೇಕಾದ ಮಹತ್ವದ ಸಂಗತಿ ಏನೆಂದರೆ ಬುಡಕಟ್ಟು ಮತ್ತು ನಾಗರೀಕ ಸಂಸ್ಕೃತಿಗಳ ನಡುವೆ ಕೆಲವು ವೈರುಧ್ಯಗಳಿವೆ. ನಾಗರೀಕ ಸಂಸ್ಕೃತಿಗೆ ಒಪ್ಪಿತ ಮತ್ತು ಅಗತ್ಯ ಅನಿವಾರ್ಯಗಳು, ಹಟ್ಟಿ ಸಂಸ್ಕೃತಿಗೆ ತಿರಸ್ಕೃತವೂ, ಅನಗತ್ಯವೂ ಆಗಬಹುದು. ನಾಗರೀಕ ಮನಸ್ಥಿತಿಗೂ ಬುಡಕಟ್ಟು ಜನರ ಮನಸ್ಥಿತಿಗೂ ನಡುವೆ ಅಜಗಜಾಂತರವಿದೆ. ಈ ಸೂಕ್ಷ್ಮ ಗಳನ್ನು ಅರಿಯದೆ ಯೋಜನೆಗಳನ್ನು ರೂಪಿಸುವ ನಾಗರೀಕ ಜನ, ನಾಗರೀಕ ಸಂಸ್ಕೃತಿಯನ್ನು ಆಧರಿಸಿ ಬುಡಕಟ್ಟು ಜನರ ಅಭಿವೃದ್ದಿಯೋಜನೆಗಳನ್ನು ರೂಪಿಸುವುದು ಹಾಸ್ಯಾಸ್ಪದವೆನಿ ಸುತ್ತದೆ.  ಕುರುಡನು ಕನ್ನಡಿಯ ಮುಂದೆ ನಿಂತು  ಶೃಂಗಾರ ಮಾಡಿಕೊಂಡ ಹಾಗೆ. ಹಾಗಾಗಿ ಅಭಿವೃದ್ದಿ ಕಾರ್ಯಗಳು ಬುಡಕಟ್ಟು ಜನರನ್ನು ಉದ್ದೇಶವಾಗಿಟ್ಟುಕೊಂಡು ಆಗುತ್ತಿಲ್ಲ. ನಾಗರೀಕ ಸಂಸ್ಕೃತಿಯನ್ನು ಅವರ ಮೇಲೆ ಒತ್ತಾಯವಾಗಿ ಹೇರಲಾಗುತ್ತಿದೆ. ಅಭಿವೃದ್ದಿ ಕಾರ್ಯಗಳು ಹಟ್ಟಿ ಜನರ ಅಗತ್ಯ, ಅವಶ್ಯಕತೆಗಳಿಗೆ ಅನುಗುಣವಾಗಿ ಆಗಬೇಕು. ಈ ಬದಲಾವಣೆಗಳು ಎಲ್ಲಿಯವರೆಗೂ ಆಗುವುದಿಲ್ಲವೋ ಅಲ್ಲಿಯವರೆಗೂ ಹಟ್ಟಿಗಳು ಅಭಿವೃದ್ದಿ ಕಾಣಲಾರವು.

ಬುಡಕಟ್ಟು, ಆದಿವಾಸಿ, ಅಲಕ್ಷಿತ ಸಮುದಾಯಗಳಿಗೆ ಆಧುನೀಕರಣವು ಬಹುವಿಧ ಅವಕಾಶಗಳಿಗೆ ವೇದಿಕೆಯಾಯಿತು. ಅಕ್ಷರ ವಂಚಿತ ನೆಲೆಗಳು ಮೊದಲಬಾರಿಗೆ ಅಕ್ಷರ ಲೋಕಕ್ಕೆ ಪ್ರವೇಶ ಪಡೆದದ್ದು ಇದೇ ಸಂದರ್ಭದಲ್ಲಿ. ಆದರೆ ‘ಅಕ್ಷರ’ ತಳನೆಲೆಗಳಲ್ಲಿ ಒಂದು ಬಗೆಯ ಅಹಂಕಾರವನ್ನೂ, ಭ್ರಮೆಯನ್ನು, ಶ್ರೇಷ್ಠತ್ವದ ಮನೋಭಾವನೆಯನ್ನು ತಂದುಕೊಟ್ಟಿತು. ಸಹಜವಾಗಿಯೇ ಮನುಷ್ಯ-ಮನುಷ್ಯರ ನಡುವೆ, ಈ ನೆಲೆಗಳ ಒಳವ್ಯವಸ್ಥೆ ಯಲ್ಲಿಯೇ ಬಿರುಕು ಕಾಣಿಸಿಕೊಂಡಿತು. ಯಾವುದು ಸಮುದಾಯಗಳ ನಡುವಿನ ಅಂತಃಶಕ್ತಿಯನ್ನು ಬೆಸೆದು ಒಡಂಬಡಿಕೆಯನ್ನು ಮೂಡಿಸಬೇಕಾಗಿತ್ತೋ ಅದೇ ಶಕ್ತಿ ಒಡಕಿಗೆ ಕಾರಣವಾದದ್ದು ದುರಂತ. ಹಟ್ಟಿಗಳು ಯಾವತ್ತು ಕಾಪಾಡಿಕೊಂಡು ಬಂದ ಒಕ್ಕಟ್ಟು, ಆಧುನಿಕ ಕಾಲದ ಅಕ್ಷರ ಪ್ರವೇಶದಿಂದ ಒಡೆದುಹೋಳಾಯಿತು. ಅಕ್ಷರ ಪ್ರವೇಶಕ್ಕೂ ಮೊದಲು ಈ ವರ್ಗಗಳು ಅಕ್ಷರ, ಸಂಸ್ಕೃತಿಯ ಬಗ್ಗೆ ಕಟ್ಟಿಕೊಂಡ ಕಲ್ಪನೆಗಳು ಬರೀ ಭ್ರಮೆಗಳೆನಿಸಿದವು. ‘ಅಕ್ಷರ ಕಲಿತವರ್ಗ’ ನಾಗರೀಕ ಸಂಸ್ಕೃತಿಯಲ್ಲೂ ರೂಪುಗೊಳ್ಳದೆ ಇತ್ತ ಸಮುದಾಯದ ಜತೆಗೂ ಸೇರದೆ ಒಂದು ಬಗೆಯ ಅತಂತ್ರ ಸ್ಥತಿಯನ್ನು ತಲುಪಿವೆ.

ಹಟ್ಟಿಗಳು ಅಕ್ಷರವರ್ಗವನ್ನು ಯಾವತ್ತೂ ಪ್ರಧಾನವೆಂದು ಭಾವಿಸಿಕೊಂಡಂತಿಲ್ಲ. ಅಲ್ಲಿನ ಯಾವುದೇ ಕೆಲಸಕಾರ್ಯಗಳಿಗೂ, ಹಬ್ಬ-ಹರಿದಿನದಂತೆ ನ್ಯಾಯಪಂಚಾಯ್ತಿ ಸಮಯ ದಲ್ಲೂ ವಿದ್ಯಾವಂತ ಜನರನ್ನು ಮುಖ್ಯವಾಗಿ ಪರಿಗಣಿಸಿದಂತೆ ಕಾಣಬರುವುದಿಲ್ಲ. ನನ್ನ ಅನುಭವವನ್ನೇ ಹೇಳುವುದಾದರೆ, ನನ್ನ ಹಟ್ಟಿಯಲ್ಲಿ ಉನ್ನತ ಶಿಕ್ಷಣ ಪಡೆದವರು ನಾಲ್ಕೈದು ಜನರಿದ್ದು, ನಮ್ಮಲ್ಲಿ ಯಾರನ್ನೂ ಯಾವತ್ತೂ ಬಳಸಿಕೊಳ್ಳುವುದರ ಬಗ್ಗೆ ಒಲವು ತೋರಿ ಸಿಲ್ಲ. ಈ ಬಗೆಯ ಮನೋಧರ್ಮಕ್ಕೆ ಅಕ್ಷರಕಲಿತವರ ಬಗ್ಗೆ ಅವರಿಗಿರುವ ಭ್ರಮೆಯೋ, ನಿರ್ಲಕ್ಷ್ಯವೋ ತಿಳಿಯದು. ಈ ನಡವಳಿಕೆಗಳ ಹಿಂದಿನ ಕಾರಣಗಳು ಏನೇ ಇರಲಿ, ಬುಡಕಟ್ಟು ಗಳಲ್ಲಿ ಅಕ್ಷರ ಅರಿವಾಗಿ ಪರಿವರ್ತನೆಯಾಗದೆ, ಅಂಧಕಾರವಾಗಿ ರೂಪುಗೊಂಡದ್ದು ನಿಜಕ್ಕೂ ವಿಪರ್ಯಾಸದ ಸಂಗತಿ.

ಅಕ್ಷರ ವರ್ಗದಲ್ಲಿ ಈ ಮನೋಧರ್ಮ ಬರುವುದಕ್ಕೂ ಕಾರಣವಿದೆ. ಪಾರಂಪರಿಕ ಅಕ್ಷರ ಜಗತ್ತು, ಮೊದಲಿನಿಂದಲೂ ‘ಅಕ್ಷರ’ವನ್ನು ‘ಅಕ್ಷರಜ್ಞಾನ’ವನ್ನು ಶ್ರೇಷ್ಠವೆಂದು ಪ್ರತಿಪಾದಿಸಿಕೊಂಡು ಬಂದದ್ದನ್ನು ಮರೆಯುವಂತಿಲ್ಲ. ಅಕ್ಷರಜಗತ್ತು ಹೇಳಿಕೊಟ್ಟ ಗಿಳಿಪಾಠ ಗಳನ್ನು ತರ್ಕಮಾಡದೆ ಒಪ್ಪಿಕೊಂಡದ್ದರ ಪರಿಣಾಮವಿದು. ಅಂದರೆ ಬುಡಕಟ್ಟುಗಳು ಅಕ್ಷರವನ್ನು ಅರಿವಾಗಿ ಪರಿವರ್ತಿಸಿಕೊಳ್ಳುವಲ್ಲಿ ಸೋತ ಬಗೆಯಿದೆ. ಬಸವಣ್ಣ ಗಾಂಧೀಜಿ ಯವರಲ್ಲಿ ಈ ಬದಲಾವಣೆಯನ್ನು ಕಾಣಲುಸಾಧ್ಯ. “ಎನಗಿಂತ ಕಿರಿಯರಿಲ್ಲ ಶಿವಶರಣರಿ ಗಿಂತ ಹಿರಿಯರಿಲ್ಲ” ಎಂಬ ಬಸವಣ್ಣನವರ ನುಡಿಯಲ್ಲೂ, ಅರೆಬೆತ್ತಲೆಯ ಫಕೀರನಾಗಿ ಸರ್ವರನ್ನು ಸಮಾನವಾಗಿ ಕಂಡ ಗಾಂಧೀಜಿಯವರ ನಡೆಯಲ್ಲೂ ಅಕ್ಷರ ಅರಿವಾದ ಬಗೆಯನ್ನು ಕಾಣಬಹುದು. ಹಾಗಾಗಿ ಬಸವಣ್ಣ ಗಾಂಧೀಜಿಯವರು ಅಕ್ಷರ ಅರಿವಿನ ರೂಪಕಗಳಾಗಿದ್ದರೆ ಕಾರಣ ತಳಸಮುದಾಯಗಳು ಅಕ್ಷರ ಲೋಕಕ್ಕೆ ತೆರಕೊಂಡವೇ ಹೊರತು ಅದರಲ್ಲಿ ಪಡೆದ ಜ್ಞಾನ ಅರಿವಾಗಿ ಅನುಭವವಾಗಿ ಸಾಕಾರಗೊಳ್ಳಲಿಲ್ಲ.

 

ಗ್ರಂಥಋಣ

೧. ದಲಿತರು ಮತ್ತು ಜಾಗತೀಕರಣ ಲೇ: ಡಾ. ಮೊಗಳ್ಳಿ ಗಣೇಶ್ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.

೨. ಬಹುಪಠ್ಯೀಯ ನೆಲೆಗಳು. ಲೇ: ಡಾ. ವೀರೇಶ್ ಬಡಿಗೇರ್ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.

೩. ‘ಮೌಖಿಕ ಕಥನ’ ಲೇ: ಡಾ. ಮೊಗಳ್ಳಿ ಗಣೇಶ್ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.

೪. ದಲಿತರು ಮತ್ತು ಅಭಿವೃದ್ದಿ ಸಂ: ಡಾ. ಟಿ.ಆರ್. ಚಂದ್ರಶೇಖರ್ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.

* * *

ಹಲಗಲಿ  ಬೇಡರು

ಅಗಸಿಗೆ ಬಂದು ನಿಂತಿತು
ಹೆಬಲಕ್-ಸಾಹೇಬಂದು ತಾವು ನಿಂತು

ಹೇಳತಾರ ಬುದ್ದಿಯ ಮಾತು
ಕೊಡತೇವ ಕವಲ ಈ ಹೊತ್ತು
ಹೋಗಬ್ಯಾಡರಿ ವೆರ್ತಾ ನೀವು ಸತ್ತು                   ||ಯೇರ||
ಯೆಂಬು ಮಾತಿಗೆ ನಂಬಿಗೆ ಸಾಲದ ಹಣಮ ಬಂದ ಮುಂದಕ

೭ನೇ ನುಡಿ

ಜಡಗ ಹೇಳತನ ಹೊಡಿ ಇವರನಾ ಈಗ ಘಾತಕರೊ ಯಿವರಾ
ಅಸವಸ-ಘಾತಾ ಮಾಡಿ ನೆಂಬಿಗಿಲೆ ಮಾಡತಾರು ಫೀತುರಾ

ಮಾಸ-ಮಾಡಿ ಬಲ-ದೇಶ ತಗೋತರ ಮುಂದ ನಮಗ ಗೋರಾ
ಅಂದ ಹೊಡದಾರೊ ವೊಂದು ಗುಂಡಿಗೆ ಆದ ಸಾಹೇಬ ಟಾರಾ

ಕಾರ್-ಸಾಹೇಬ ಬೆಂಕಿ-ಚೂರ ಆಗಿ ತಾನು ಲೂಟಿ ಮಾಡ್-ಅಂದ ವೂರ
ಹುರಿಪಿಲಿ ಹೊಡದರ ಮಳಿ ಆದ ಹಾಂಗ ಗುಂಡ ಸುರದವು ಬರಪೂರಾ

ಹಣಮ ಹೇಳತನ ಗುಂಡ ಹೊಡದಕೆರ ಕೆಡವುನ್-ಅಷ್ಟು ಬರಪೂರಾ
ಮುನ್-ನೂರ ಮಂದಿ ಯನ್ನ ಮೇಗೆ ಬಿಟ್ಟ ಆಗ ನೋಡರಿ ಜೋರಾ       ||ಚ್ಯಾಲ||