ಆಧುನಿಕ ಜಗತ್ತಿನಲ್ಲಿ ತಳಸಮುದಾಯಗಳು ಸರ್ಕಾರದಿಂದಾಗಿ ಹೇಗೆ ನಿರ್ಲಕ್ಷ್ಯಕ್ಕೆ ಒಳಪಟ್ಟಿವೆ ಎಂಬುದನ್ನು ಮತ್ತು ಆಧುನೀಕರಣದಿಂದಾಗಿ ಪಾರಂಪರಿಕ ಉದ್ಯೋಗವನ್ನು ನಂಬಿ ಬದುಕುತ್ತಿರುವ ಈಗಿನವರ ಸ್ಥಿತಿಯನ್ನು ಮರಿಯಮ್ಮನಹಳ್ಳಿ ಎಂಬ ಗ್ರಾಮವನ್ನು ಉದಾಹರಣೆಯಾಗಿ ಇಟ್ಟುಕೊಂಡು ಹೇಳುತ್ತೇನೆ.

ಮರಿಯಮ್ಮನಹಳ್ಳಿ ಬಳ್ಳಾರಿ ಜಿಲ್ಲಾ, ಹೊಸಪೇಟೆ ತಾಲ್ಲೂಕಿನ ಒಂದು ಗ್ರಾಮವಾಗಿದೆ. ಇಲ್ಲಿ ನೆಲೆಸಿರುವವರೆಲ್ಲಾ ತಳಸಮುದಾಯದವರು. ತುಂಗಾಭದ್ರ ಜಲಾಶಯದ ಆಣೆಕಟ್ಟಿನಲ್ಲಿ ಮುಳುಗಡೆಯಾದ ಹಳ್ಳಿಗಳಿಂದ ವಲಸೆ ಬಂದವರಾಗಿದ್ದಾರೆ. ೧೯೫೩ರಿಂದ ಇಲ್ಲಿಗೆ ಬಂದು ನೆಲೆಸಿದ ತಳಸಮುದಾಯಗಳಿಗೆಲ್ಲಾ ಈ ಹಳ್ಳಿಯ ಸುತ್ತಮುತ್ತ ಕೃಷಿ ಭೂಮಿಯನ್ನು ನೀಡಿತ್ತು ಮತ್ತು ಸಮೀಪದ ಡಣಾಯಕನ ಕೆರೆಗೆ ತುಂಗಾಭದ್ರಾ ಜಲಾಷಯದಿಂದ ನೀರು ಹಾಯಿಸುವ ಭರವಸೆಯನ್ನು ನೀಡಿತ್ತು. ಆ ಭರವಸೆಯನ್ನು ಇಲ್ಲಿಯವರೆಗೂ ಆದರೂ ಸರ್ಕಾರ ಈಡೇರಿ ಸಲು ಸಾಧ್ಯವಾಗಿಲ್ಲ.

ಅಲ್ಲದೆ ತುಂಗಾಭದ್ರಾ ನದಿಯಿಂದ ಕೇವಲ ನಾಲ್ಕು ಕಿಲೋಮೀಟರ್ ಅಂತರದಲ್ಲಿ ಇರುವ ಮರಿಯಮ್ಮನಹಳ್ಳಿಗೆ ಕುಡಿಯುವ ನೀರಿನ ಭಾಗ್ಯ ಇಲ್ಲದಾಗಿವೆ. ಹೆಚ್ಚಾಗಿ ತಳ ಸಮುದಾಯದವರೆ ನೆಲೆಸಿರುವ ಈ ಊರನ್ನು ಅವರು ಮೊದಲಿನಿಂದ ಮಾಡಿಕೊಂಡು ಬಂದಂತಹ ಪಾರಂಪರಿಕ ಉದ್ಯೋಗವಾದ ಕುಂಕುಮ ತಯಾರಿಸುವುದು, ಕಸಬರಿಕೆ ತಯಾರಿಸುವುದು, ಬಿದಿರಿನ ತಯಾರಿಕೆ, ಸುಣ್ಣ ತಯಾರಿಸುವುದು ಮುಂತಾದ ಗುಡಿಕೈಗಾರಿಕೆ  ಆಧುನೀಕತೆಯಿಂದ ತಮ್ಮ ನೆಲೆಯನ್ನು ಕಳೆದುಕೊಂಡು ಮೂಲೆಗುಂಪು ಆಗಿವೆ. ಇಂಥ ಸಂದರ್ಭದಲ್ಲಿ ಮರಿಯಮ್ಮನಹಳ್ಳಿಯಂಥ ಒಂದು ಗ್ರಾಮದಲ್ಲಿ ನಡೆಯುತ್ತಾ ಬಂದಂತ ಪಾರಂಪರಿಕ ಉದ್ಯೋಗಗಳು ಇಂದಿನ ಜಾಗತೀಕರಣ ಹೊತ್ತಲ್ಲಿ ಹೊಸ ಪ್ಯಾಷನ್‌ಗಳಿಗೆ ಬಹುಬೇಗನೆ ಒಳಗಾಗುತ್ತಿರುವ ಯುವ ಜನತೆಯ ಅಭಿರುಚಿಗಳಿಗೆ ತಕ್ಕಂತೆ ನಮ್ಮ ಪಾರಂಪರಿಕ ಉದ್ಯೋಗಗಳು ಸೃಷ್ಟಿಸಿರುವ ವಸ್ತುಗಳ ಸ್ಪರ್ಧಿಸಲು ಹೋಗಿ ಸೋಲು ಕಾಣುತ್ತಿವೆ. ಉದಾಹರಣೆಗೆ ಕುಂಕುಮ ತಯಾರಿಕೆಯಂತಹ ಗುಡಿಕೈಗಾರಿಕೆಯನ್ನು ನೋಡಿದರೆ, ಕುಂಕುಮ ತಯಾರಿಸುವಲ್ಲಿ ಮನೆ ಮಂದಿಯೆಲ್ಲ ಭಾಗವಹಿಸುತ್ತಿದ್ದರು. ಈಗ ಕೈ ಬಿಟ್ಟು ಕಂಪನಿಗಳು ತಯಾರಿಸುವ ಮಾರುಕಟ್ಟೆಯಲ್ಲಿ ಸಿಗುವ ಕುಂಕುಮವನ್ನು ಖರೀದಿಸಿ ತಂದು ಮಾರುವುದನ್ನು ಕಾಣಬಹುದು. ಜೊತೆಗೆ ಇಂದು ಟಿಕಳಿ, ಹೊಸ ಕಲರ್ ತುಂಬಿರುವ ಕುಂಕುಮಗಳು ಫ್ಯಾಷನ್ ಆಗಿ ಬರುವ ಡಿಸೈನ್ ಬಿಂದಿಗಳು ಇವೆಲ್ಲ ಕುಂಕುಮಕ್ಕೆ ಸ್ಪರ್ಧಿಸು ವಂತ ಸಂದರ್ಭದಲ್ಲಿ ಹಳೆಗಿಂತ ಹೊಸ ಫ್ಯಾಷನ್‌ಗೆ ಮಾರು ಹೋಗುವ ಜನತೆ ಹೊಸದನ್ನು ಬಳಸುವ ಗುಂಗಿನಲ್ಲಿರುತ್ತಾರೆಯೇ ಹೊರತು ಹಳೆಯದರ ಕಡೆಗೆ ಗಮನ ನೀಡುವುದಿಲ್ಲ. ಹೀಗಾಗಿ ನಮ್ಮ ಪಾರಂಪರಿಕ ಉದ್ಯೋಗಗಳು ನಾಶ ಹೊಂದುತ್ತಿವೆ. ಇನ್ನು ಕೃಷಿ ಭೂಮಿ ಯನ್ನು ತೆಗೆದುಕೊಂಡಾಗ ಮರಿಯಮ್ಮನಹಳ್ಳಿ ಗ್ರಾಮದ ಭೂಮಿಯು ಸವಳು ಭೂಮಿ. ಕಲ್ಲುಗಳಿಂದ ಕೂಡಿರುವ ಅಷ್ಟೇನು ಫಲವತ್ತಿಲ್ಲದ ಭೂಮಿಯಲ್ಲಿ ಮಳೆಯ ಪ್ರಮಾಣವು ಕಡಿಮೆ ಬೆಳೆಯುವಂತ ಬೆಳೆಯು ಅಷ್ಟೇನು ಲಾಭ ತರದು. ಈ ಸಂದರ್ಭದಲ್ಲಿ ರೈತರು ಹೆಸರಿಗೆ ಮಾತ್ರ ಇಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಒಂದು ಕಡೆ ಪಾರಂಪರಿಕ ಉದ್ಯೋಗಗಳ ಹಿನ್ನಡೆ ಕೃಷಿಯನ್ನು ಕಾಣದ ಭರವಸೆ ಇಂಥ ಸಂದರ್ಭದಲ್ಲಿ ಈ ಗ್ರಾಮದ ತಳಸಮುದಾಯದ ಜನರಿಗೆ ತಮ್ಮ ಬದುಕನ್ನು ಸಾಗಿಸಲು ಉಳಿದಿರುವುದು ಬಳ್ಳಾರಿಯ ಮೈನಿಂಗ್‌ನಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುವುದು. ಈ ಮೈನಿಂಗ್‌ನ್ನು ಗಮನಿಸಿದರೆ ಮರಿಯಮ್ಮನ ಹಳ್ಳಿಯ ಈ ತಳಸಮುದಾಯದವರಿಗೆ ಮೈನಿಂಗ್ ಒಂದು ವರವೇ ಸರಿ. ಅದು ಹಸಿದ ಹೊಟ್ಟೆ ಹೊರೆಯಲು ಹೊರತು ಆರೋಗ್ಯದ ದೃಷ್ಟಿಯಿಂದಲ್ಲ. ಈ ಗ್ರಾಮದ ವಾಲ್ಮೀಕಿ ಸಮುದಾಯದವರ, ಶೇ. ೬೦ರಷ್ಟು ಜನರ ಮುಖ್ಯ ಉದ್ಯೋಗ ಮೈನಿಂಗ್‌ನ್ನು ಕೂಲಿ ಕಾರ್ಮಿಕರಾಗಿ ದುಡಿಯುವುದು ಅದು ೧೮, ೨೦, ೩೦ ವರ್ಷದ ಯುವಕರು ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಯಾಕೆಇವರಿಗೆ ಈ ಮೈನಿಂಗ್ಸ್‌ನಲ್ಲಿ ಲಾರಿ ಓಡಿಸಲು ಕೆಲಸಕ್ಕೆ ಇಟ್ಟುಕೊಳ್ಳುತ್ತಾರೆ ಎಂಬುದನ್ನು ಸ್ವಲ್ಪ ಆಲೋಚಿಸಿದರೆ ವಾಲ್ಮೀಕಿಯಂಥದ ತಳಸಮುದಾಯದ ಪ್ರಾಣದ ಹಂಗು ತೊರೆದು ಹಲವಾರು ಟ್ರಿಪ್ಪನ್ನು ಹೊಡೆಯಲು ಯುವ ಸಮೂಹ ಸಜ್ಜಾಗಿ ನಿಂತಿವೆ. ಇವರಿಗೆ ದುಡ್ಡನ್ನು ಜಾಸ್ತಿ ಕೊಟ್ಟರೆ ಸಾಕು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಲವು ಟ್ರಿಪ್ ಹೊೆದು ಬಿಡುತ್ತಾರೆ. ಇನ್ನು ಮಹಿಳೆಯರು ಸದಾ ಮೈನ್ಸ್‌ನಲ್ಲಿ ಕಲ್ಲು ಆರಿಸಲು, ಮಣ್ಣನ್ನು ಜರಡಿ ಮಾಡಲು, ದೂಳಿನಲ್ಲಿ ಕೆಲಸಮಾಡಲು ಸಜ್ಞಾಗಿರುತ್ತಾರೆ. ಇವರಿಗೆ ದಿನ ಗೂಲಿ ಎಂದು ಹಣ ನೀಡುತ್ತಾರೆ ಹೊರತು ಇಲ್ಲಿ ಮೈನಿಂಗ್‌ನಲ್ಲಿ ದುಡಿಯುವ ಈ ಕಾರ್ಮಿಕರಿಗೆ ಯಾವ ಭದ್ರತೆ ಜೀವನದ ಬಗ್ಗೆ ವಿಮೆ ಸೌಲಭ್ಯಗಳು ಏನು ಇರುವುದಿಲ್ಲ. ಹೀಗೆ ಉದ್ಯೋಗದ ಅನಿವಾರ್ಯತೆಯಿಂದಾಗಿ ಈ ಕೆಳವರ್ಗಗಳು ಈ ಮೈನಿಂಗ್ಸ್‌ನಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

ಇಂದಿನ ಆಧುನಿಕ ಜಗತ್ತಿನಲ್ಲಿ ಕೆಲವೊಂದು ಪಾರಂಪರಿಕ ಗುಡಿಕೈಗಾರಿಕೆಗಳನ್ನು ನಡೆಸುತ್ತಿ ರುವ ತಳಸಮುದಾಯದವರಿಗೆ ನೆಲೆಯೇ ಇಲ್ಲದಾಗಿದೆ.

* * *