ಸಮಾಜದಲ್ಲಿ ಶೋಷಣೆಗೆ ಒಳಗಾದಂತಹ ಈ ತಳಸಮುದಾಯಗಳನ್ನು ಪ್ರಾಚೀನ ಕಾಲದಿಂದಲೂ ನಾವು ನೋಡುತ್ತಾ ಬಂದಿದ್ದೇವೆ. ಸಾಮ್ರಾಜ್ಯಶಾಹಿಗಳು ಬಂಡವಾಳಶಾಹಿಗಳ ತುಳತಕ್ಕೆ ಒಳಗಾದಂತಹ ಸಮುದಾಯವನ್ನು ನಾವು ತಳಸಮುದಾಯ ಎಂದು ಕರೆಯಬಹುದು. ಈ ತಳ ಸಮುದಾಯ ಎನ್ನುವ ಪದ ಚರಿತ್ರೆಯಲ್ಲಿ ರಾಜ ಪ್ರಭುತ್ವದಲ್ಲಿ ಕಂಡು ಬರುವುದಿಲ್ಲ. ಈ ರಾಜಪ್ರಭುತ್ವದಲ್ಲಿ ಅಲಕ್ಷಿತ ವರ್ಗಕ್ಕೆ ಎಷ್ಟೇ ಸಮುದಾಯಗಳು ಸೇರಿದ್ದರು ಇವರನ್ನು ಬಿಡಿಬಿಡಿಯಾಗಿ ನೋಡುತ್ತಿರಲಿಲ್ಲ. ಆದರೆ ಪ್ರಜಾಪ್ರಭುತ್ವ ಎಂಬುದು ದೇಶದಲ್ಲಿ ಕಾಣಿಸಿಕೊಂಡಾಗ ಈ ತಳಸಮುದಾಯ ಎಂಬ ಪದ ಕಂಡುಬರುತ್ತದೆ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳು ಸಿಗಬೇಕೆಂಬುದು ಮತ್ತು ಎಲ್ಲರೂ ಸಮಾನರು ಎಂಬ ಪರಿಕಲ್ಪನೆ ಬಂದಿದ್ದರಿಂದ ಅಂತಹ ಸಂದರ್ಭದಲ್ಲಿ ಶೋಷಣೆಗೆ ಒಳಗಾ ದಂತಹ ಸಮುದಾಯಗಳು ಕಂಡುಬರುತ್ತವೆ.

ಆಧುನಿಕ ಜಗತ್ತು ಅಥವಾ ಆಧುನಿಕತೆಯೆಂಬುದು ಕೈಗಾರಿಕೀಕರಣದ ಜೊತೆ ಅನುಷಂಗಿಕ ವಾಗಿ ಬಂದ ಸಂಗತಿಯೇ ಆಗಿದೆ. ಮತ್ತು ಆಧುನೀಕತೆಯಲ್ಲಿ ಈ ದೇಶದ ಶೋಷಿತ ಸಮುದಾಯಗಳ ವಿಮೋಚನೆಗಾಗಿಯೇ ರೂಪುಗೊಂಡ ಯಾವುದೇ ನಿಷ್ಪಕ್ಷಪಾತವಾದ ಹೋರಾಟಗಳು ಇರಲಿಲ್ಲ. ಆಧುನೀಕತೆಯಿಂದ ಮುಕ್ತವಾಗಿ ಆರ್ಥಿಕತೆಯಿಂದ ಪ್ರಯೋಜನ ವಾಗಿದ್ದು ಭಾರತದ ಬಂಡವಾಳಶಾಹಿ ವರ್ಗಕ್ಕೆ ಮಾತ್ರ. ಗೈಕಾರಿಕೀಕರಣದಿಂದ ಪ್ರಚ್ಛನ್ನಗೊಂಡ ಬಂಡವಾಳಶಾಹಿ ವ್ಯವಸ್ಥೆ ದುಡಿಯುವ ವರ್ಗಗಳ ಶ್ರಮವನ್ನು ಉಪಯೋಗಿಸಿಕೊಂಡು ಬಂಡವಾಳವನ್ನು ಹೆಚ್ಚುಮಾಡಿಕೊಂಡಿತು. ಆದರೆ ಆಧುನಿಕ ಜಗತ್ತಿನಲ್ಲಿ ಕೈಗಾರಿಕೀಕರಣವು ಭಾರತದ ಸ್ವದೇಶಿ ಮಾದರಿಯ ಉತ್ಪಾದನೆಗಳನ್ನು ಇಲ್ಲವಾಗಿಸಿತು. ಜೊತೆಗೆ ಇಲ್ಲಿ ಸಾಮಾಜಿಕ ಬದುಕಲ್ಲಿ ಅನೇಕ ಬದಲಾವಣೆಗಳು ಸಹಜವಾಗಿಯೇ ಘಟಿಸಿಹೋದವು. ಈ ಕೈಗಾರಿಕೀಕರಣ ಬೀಸುವ ಹೊಡೆತದಿಂದ ಇಲ್ಲಿನ ಆಳುವ ವರ್ಗವೇ ವಿಚಲಿತವಾದ ಮೇಲೆ ತಳಸಮುದಾಯಗಳು ಸಹಜವಾಗಿಯೇ ತಮ್ಮಲ್ಲಿ ಹಲವಾರು ಬದಲಾವಣೆಗಳನ್ನು ತಂದು ಕೊಳ್ಳಬೇಕಾಯಿತು.ಮೊದಲು ಇಲ್ಲಿ ಅಘಾತಗೊಂಡಿದ್ದು, ಸ್ವದೇಶಿ ತಂತ್ರಜ್ಞಾನ ಮತ್ತು ಅದರ ಮೂಲಕವೇ ಉತ್ಪಾದನೆಯಲ್ಲಿ ತೊಡಗಿದ್ದ ಇಲ್ಲಿನ ಹಲವು ತಳ ಸಮುದಾಯಗಳ ಗುಡಿಕೈಗಾರಿಕೆಗಳು ಅನಿವಾರ್ಯವಾಗಿ ಮೂಲೆಗುಂಪಾಗಲೇಬೇಕಾಯ್ತು. ಆಧುನೀಕತೆಯ ಪ್ರಭಾವದಿಂದ ಹಾಗೂ ಹೊಸ ಹೊಸ ಆವಿಷ್ಕಾರಗಳಿಂದ ತಳಸಮುದಾಯಗಳ ಮೇಲೆ ಪೆಟ್ಟು ಬಿದ್ದಿತು. ಸಾಂಪ್ರದಾಯಿಕವಾಗಿ ರೂಢಿಸಿಕೊಂಡು ಬಂದಂತಹ ವೃತ್ತಿಗಳ ಮೇಲೆ ಆಧುನಿಕತೆಯೆಂಬುದು ಬಲಪ್ರಯೋಗಮಾಡಿತು.  ಆಗ ತಮ್ಮ ವೃತ್ತಿಯನ್ನು ಕೈಬಿಡಬೇಕಾ ಯಿತು.

ಇಂದು ಆಧುನಿಕ ಜಗತ್ತಿನಲ್ಲಿ ಇಡೀ ಜಗತ್ತನ್ನು ಹಿಡಿಯಾಗಿ ನೋಡಲಾಗುತ್ತದೆ. ಉದಾ. ಜಾಗತೀಕರಣವನ್ನು ನಾವು ನೋಡಿದಾಗ ತನ್ನ ಬೃಹತ್ತಾದ ಕಂಪನಿಯು ಈ ಜಗತ್ತಿ ನಲ್ಲಿಯೇ ಹೆಸರು ಮಾಡುತ್ತದೆ. ಜಾಗತೀಕರಣ, ಉದಾರೀಕರಣ ಹಾಗೂ ನಗರೀಕರಣ ಇವುಗಳ ಪ್ರಭಾವದಿಂದ ಈಡೀ ಜಗತ್ತು ತನ್ನ ಕಡೆ ನೋಡುವಂತೆ ಮಾಡಿವೆ. ಇಂತಹ ಸಂದರ್ಭದಲ್ಲಿ ಶೋಷಣೆಗೆ ಒಳಗಾದಂತಹ ಅಲಕ್ಷಿತ ಸಮುದಾಯಗಳು ತಯಾರಿಸುವಂತಹ  ವಸ್ತುಗಳು ಹಾಗೂ ಗುಡಿ ಕೈಗಾರಿಕೆಗಳು ಇಂದು ಆಧುನಿಕ ಮಾರುಕಟ್ಟೆಯಲ್ಲಿ ತಮ್ಮ ಬೇಡಿಕೆಯನ್ನು ಕಳೆದುಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ತಳಸಮುದಾಯಗಳು ಆರ್ಥಿಕ ವಾಗಿ ದುರ್ಬಲತೆಯನ್ನು ಹೊಂದುತ್ತಾರೆ. ಆದ್ದರಿಂದ ಇಂದು ತಳಸಮುದಾಯಗಳ ಬಗ್ಗೆ ಪ್ರತ್ಯೇಕವಾದ ಅಧ್ಯಯನಗಳು ಕಂಡುಬರುತ್ತವೆ. ಈ ರೀತಿ ಅಧ್ಯಯನ ಮಾಡುವುದರಿಂದ ಅಲಕ್ಷಿತ ಸಮುದಾಯವನ್ನು ಗುರುತಿಸಿ ಅಥವಾ ಸ್ಥಳೀಯ ಚರಿತ್ರೆಗೆ ಹೆಚ್ಚು ಮಹತ್ವವನ್ನು ಕೊಡಲಾಗುತ್ತದೆ. ಕೇವಲ ರಾಜ-ರಾಣಿ,  ನಗರ ಪ್ರದೇಶಗಳಿಗೆ ಹೆಚ್ಚು ಮಹತ್ವ ಕೊಡದೆ ಪ್ರಸ್ತುತ ಸಂದರ್ಭದಲ್ಲಿ ತಳಸಮುದಾಯಗಳ ಬಗ್ಗೆ ಸ್ಥಳೀಯವಾಗಿ ಅಧ್ಯಯನ ಮಾಡಲಾ ಗುತ್ತದೆ. ಇಡಿಯಾದ ಅಧ್ಯಯನವನ್ನು ಇಂದು ಬಿಡಿಬಿಡಿಯಾಗಿ ನೋಡಲಾಗುತ್ತದೆ. ಪ್ರತ್ಯೇಕ-ಪ್ರತ್ಯೇಕವಾಗಿ ಸಮುದಾಯಗಳನ್ನು ಕುರಿತು ಅಧ್ಯಯನ ಮಾಡುವುದರಿಂದ ಅವರು ಆರ್ಥಿಕ ವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ನೋಡುವುದರಿಂದ ಯಾವ ಸಮುದಾಯವು ಸಮಾಜದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಇತ್ಯಾದಿಗಳನ್ನು ಕುರಿತು ಅಧ್ಯಯನ ಮಾಡುವುದರಿಂದ ತಳಸಮುದಾಯಗಳ ಚರಿತ್ರೆ ಕಂಡುಬರುತ್ತದೆ. ಇವರು ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂಬುದು ಕಂಡುಬರುತ್ತದೆ. ಈ ಹಿಂದುಳಿವಿಕೆಗೆ ಕಾರಣಗಳೇನು? ಪರಿಣಾಮಗಳೇನು? ಅದಕ್ಕೆ ಪರಿಹಾರ ಉಪಾಯ ಗಳೇನು? ಎಂಬುದನ್ನು ತಿಳಿಯಬಹುದು. ಈ ರೀತಿ ಅಧ್ಯಯನ ಮಾಡುವುದರಿಂದ ಬಂಡವಾಳ ಶಾಹಿಗಳಿಂದ ಶೋಷಣೆಗೆ ಒಳಗಾಗಿದ್ದ ತಳಸಮುದಾಯವನ್ನು ಗುರುತಿಸಬಹುದು. ತಳ ಸಮುದಾಯಗಳಲ್ಲಿ ಕೃಷಿಯನ್ನೇ ಅವಲಂಬಿಸಿದಂತಹ ಸಮುದಾಯಗಳು ಬೀದಿಗೆ ಇಳಿಯ ವಂತಹ ಪ್ರಸಂಗ ಬಂದಿದೆ. ಏಕೆಂದರೆ ರೈತನು ಬೆಳದಂತಹ ಬೆಳೆಗೆ ಆಧುನಿಕ ಜಗತ್ತಿನ ಮಾರುಕಟ್ಟೆಯಲ್ಲಿ ತನ್ನ ಶ್ರಮಕ್ಕೆ ತಕ್ಕ ಬೆಲೆ ಇಲ್ಲದಂತೆ ಆಗಿದೆ. ಆದ್ದರಿಂದ ಇಂದು ರೈತ ಆತ್ಮಹತ್ಯೆಗೆ ಶರಣಾಗತನಾಗುತ್ತಿದ್ದಾನೆ. ಅನೇಕ ಸ್ತ್ರೀಯರು ಬಡತನದಿಂದ ವೇಶ್ಯಾವೃತ್ತಿಗೆ ಇಳಿದಿದ್ದಾರೆ. ಆರ್ಥಿಕವಾಗಿ ಶೋಷಣೆಗೆ ಈ ತಳಸಮುದಾಯಗಳು ಒಳಗಾಗಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಗೃಹ ಉಪಯೋಗಿ ಕೆಲಸಗಳನ್ನು ತಳಸಮುದಾಯಗಳು ಮಾಡುತ್ತಿದ್ದವು. ಉದಾಹರಣೆಗೆ ಬುಟ್ಟೆ ಹೆಣೆಯುವುದು, ಚರಕದಿಂದ ನೂಲನ್ನು ತೆಗೆಯುವುದು, ಗುಡಿಕೈಗಾರಿಕೆಗಳಾದ ಮಡಿಕೆ ತಯಾರಿಕೆ, ಗಡಿಗೆ ತಯಾರಿಕೆ, ಚಾಪೆ ತಯಾರಿಕೆ ಇನ್ನೂ ಮುಂತಾದವುಗಳನ್ನು ತಳಸಮುದಾಯಗಳು ತಯಾರಿಸುತ್ತಿದ್ದವು. ಅದರೆ ಇಂದು ಆಧುನಿಕ ಜಗತ್ತಿನ ಪ್ರಭಾವದಿಂದ ವಸಾಹತುಶಾಹಿಗಳ ಆಗಮನದಿಂದ ಬೃಹತ್ತಾದ ಕೈಗಾರಿಕೆ ಗಳು ಹುಟ್ಟಿಕೊಂಡವು. ಕೈಗಳಿಂದ ಮಾಡುವ ಕೆಲಸವನ್ನು ಆಧುನಿಕ ಯಂತ್ರಗಳು ಮಾಡಲಾ ರಂಭಿಸಿದವು. ದೇಶೀಯತೆಯನ್ನು ಮರೆಯವಂತೆ ಅಯಿತು. ಏಕೆಂದರೆ ವಿದೇಶಿಯರ ಆಗಮನ ದಿಂದ ದೇಶದಲ್ಲಿ ತಯಾರಿಸಿದ ವಸ್ತುಗಳಿಗೆ ಬೆಲೆ ಇಲ್ಲದಂತೆ ಆಯಿತು. ಆಧುನಿಕ ಜಗತ್ತಿನಲ್ಲಿ ವಿವಿಧ ಬಗೆಯ ತಾಂತ್ರಿಕವಾದ ಯಂತ್ರಗಳನ್ನು ಕಂಡುಹಿಡಿಯಲಾಯಿತು. ಉದಾ. ಕೈಗಳಿಂದ ತಯಾರಿಸಿದಂತಹ ಬಟ್ಟೆಗಳು ದಪ್ಪದಾಗಿರುತ್ತಿತ್ತು ಮತ್ತು ರಪ್ಪಾಗಿರುತ್ತಿತ್ತು. ಆಧುನಿಕ ಯಂತ್ರಗಳಿಂದ ತಯಾರಿಸಿದ ಬಟ್ಟೆಗಳು ಮೃದುವಾಗಿರುತ್ತಿದ್ದವು ಮತ್ತು ಆಕರ್ಷಿಕವಾಗಿರು ತ್ತಿದ್ದವು. ಆದ್ದರಿಂದ ಹೆಚ್ಚು ಜನಗಳು ಇಂತಹ ಬಟ್ಟೆಗಳಿಗೆ ಹೆಚ್ಚು ಮಹತ್ವವನ್ನು ಕೊಡಲಾಯಿತು. ಭಾರತ ದೇಶದಲ್ಲಿ ಕಚ್ಚಾವಸ್ತುಗಳು ಹೆಚ್ಚಾಗಿ ಕಂಡುಬರುತ್ತಿತ್ತು. ಆದರೆ ಅದನ್ನು ಸಿದ್ಧವಸ್ತುಗಳನ್ನಾಗಿ ತಯಾರಿಸಲು ಆಗುತ್ತಿರಲಿಲ್ಲ. ಆದ್ದರಿಂದ ಸಾಹತುಶಾಹಿಗಳ ಆಗಮನವಾದ ನಂತರ ಭಾರತದ ಕೃಷಿ, ಅರ್ಥವ್ಯವಸ್ಥೆಯಲ್ಲಿ ಅತಿ ಮುಖ್ಯವಾದ ಒಂದು ಪರಿವರ್ತನೆಯನ್ನು ಉಂಟುಮಾಡಿದರು. ಅದು ಭಾರತದ ಬೇಸಾಯ ಪದ್ಧತಿಯನ್ನು ಉತ್ತಮ ಪಡಿಸಿ ಉತ್ಪಾದನೆಯನ್ನು ಹೆಚ್ಚು ಮಾಡಿ ಅದರಲ್ಲಿ ತೊಡಗಿದ್ದ ಕೃಷಿಕರ ಯೋಗಕ್ಷೇಮ ಮತ್ತು ಅಭಿವೃದ್ದಿಯನ್ನು ಅಧಿಕಗೊಳಿಸುವ ಉದ್ದೇಶದಿಂದಲ್ಲ. ಕೃಷಿಯನ್ನು ವಾಣಿಜ್ಯೀಕರಿಸು ವುದರ ಮೂಲಕ ಲಾಭವನ್ನು ಪಡೆಯುವುದು ವಸಾಹತುಶಾಹಿಗಳ ಉದ್ದೇಶವಾಗಿತ್ತು. ಕೃಷಿಯಲ್ಲಿ ಅಧಿಕವಾಗಿ ಬಂದುದನ್ನೆಲ್ಲ ಭೂಕಂದಾಯ ರೂಪದಲ್ಲಿ ವಸೂಲು ಮಾಡಲಾಗು ತ್ತಿತ್ತು. ತಮಗೆ ಅನುಕೂಲಕರವಾದ ಹೊಸ ಕೃಷಿ ಸಂಬಂಧಗಳನ್ನು ಹುಟ್ಟುಹಾಕಲಾಯಿತು. ವಸಾಹತುಶಾಹಿಗಳ ಸುಲಿಗೆಯ ಹೊಡೆತವನ್ನು ಬಹಳ ಉಗ್ರವಾಗಿ ಅನುಭವಿಸಿದವರು ಈ ತಳಸಮುದಾಯಗಳು. ಕಾಡಿನಲ್ಲಿ ವಾಸಮಾಡುವಂತಹ ಬುಡಕಟ್ಟುಗಳ ಜನರು ವಸಾಹತು ಶಾಹಿಗಳ ಸಾಮ್ರಾಜ್ಯ ವಿಸ್ತರಣಾ ನೀತಿ ಮತ್ತು ಅನಾವಶ್ಯಕ ಮಧ್ಯ ಪ್ರವೇಶಗಳು ಅವರಿಗೆ ತೀವ್ರ ಅಸಮಧಾನವುಂಟು ಮಾಡಿದವು. ಎಲ್ಲಕಿಂತ ಮುಖ್ಯವಾಗಿ ತಮ್ಮ ಸರಳವೂ, ಸುರಕ್ಷಿತವೂ ಆದ ಬದುಕಿಗೆ ಹಣವನ್ನು ಸಾಲಕೊಡುವ ಶ್ರೀಮಂತರ, ವ್ಯಾಪಾರಿಗಳು ಮತ್ತು ಕಂದಾಯ ವಸೂಲಿಗಾರರು ಪ್ರವೇಶಸಿದ್ದು ಅವರಿಗೆ ಸಹಿಸಲಾಗಲಿಲ್ಲ. ಈ ಆದಿವಾಸಿ ಗಳನ್ನು ವಸಾಹತುಶಾಹಿ ಅರ್ಥವ್ಯವಸ್ಥೆ ಹಾಗೂ ಸುಲಿಗೆಗಳ ಪ್ರಭಾವಕ್ಕೆ ಒಳಪಡಿಸುವಲ್ಲಿ ಮಧ್ಯವರ್ತಿಗಳು ವಸಾಹತುಶಾಹಿಗಳ ಕೈಯ ಉಪಕರಣಗಳಾಗಿ ವರ್ತಿಸುತ್ತಿದ್ದರು. ಬುಡಕಟ್ಟು ಜನರ ಹೋರಾಟಗಳ ವಿಶಿಷ್ಟ ಲಕ್ಷಣವೆಂದರೆ ತಾವು ಪರಂಪರಾಗತವಾಗಿ ಬಳಸುತ್ತಿದ್ದ ಕೂಡಲಿ, ಬಿಲ್ಲು-ಬಾಣಗಳ ಮೂಲಕವೇ ವ್ಯವಸ್ಥಿತವಾದ ಮತ್ತು ಶಸ್ತ್ರಸಜ್ಜಿತವಾದ ಬ್ರಿಟೀಷ್ ಸೇನೆಯನ್ನು ಎದುರಿಸಿದ್ದುದು. ಬುಡಕಟ್ಟು ಜನರು ತಮ್ಮ ಪರಿಸರದಲ್ಲೇ ನಿರ್ಮಾಣ ಗೊಳ್ಳುತ್ತಿದ್ದ ಆಯುಧಗಳ ಬಗ್ಗೆ ಪವಿತ್ರ ಮತ್ತು ಗೌರವ ಭಾವನೆಯನ್ನು ಹೊಂದಿದ್ದರು. ಅದನ್ನೇ ಬ್ರಿಟೀಷರು ತಮ್ಮ ಲಾಭಕ್ಕೆ ಬಳಸಿಕೊಂಡರು. ಈ ರೀತಿಯಾಗಿ ಬ್ರಿಟೀಷರ ದಬ್ಬಾಳಿಕೆಯ ಆಳ್ವಿಕೆಯನ್ನು ಬುಡಕಟ್ಟು ಜನರು, ರೈತರು ಮತ್ತು ಮಹಿಳೆಯರು ಅನುಭವಿ ಸುತ್ತಲೇ ಜೀವನ ನಡೆಸಬೇಕಾಗಿತ್ತು. “ದಾದಾಬಾಯಿ ನವರೋಜಿ” ಹೀಗೆ ಹೇಳಿದ್ದಾರೆ. “ಭಾರತೀಯರು ಜೀತಗಾರರಾಗಿದ್ದಾರೆ. ಅವರು ಅಮೇರಿಕನ್ ಗುಲಾಮಗಿರಿಗಿಂತ ಹೀನ ಸ್ಥಿತಿಯಲ್ಲಿದ್ದಾರೆ. ಏಕೆಂದರೆ ಕೊನೆಯ ಪಕ್ಷ ಗುಲಾಮರನ್ನು ಅವರ ಒಡೆಯರು ತಮ್ಮ ಆಸ್ತಿ ಎಂಬುದರಿಂದಾಗಿಯಾದರೂ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದರು. ಬ್ರಿಟೀಷ್ ಆಡಳಿತವು ಶಾಶ್ವತವಾದ ಹೆಚ್ಚುತ್ತಲಿರುವ ದಿನದಿನವೂ ಅಧಿಕವಾಗುತ್ತಿರುವ ವಿದೇಶಿ ಆಕ್ರಮಣ ಅದು ದೇಶವನ್ನು ನಿಧಾನವಾಗಿದ್ದರೂ ಸಂಪೂರ್ಣವಾಗಿ ನಾಶಮಾಡುತ್ತದೆ.”

ಸ್ಥಳೀಯ ಶ್ರೀಮಂತ ಜಮೀನ್ದಾರರು ಮತ್ತು ಶ್ರೀಮಂತ ವರ್ತಕರು ದುಡಿಯುವ ವರ್ಗಗಳ ಹಿತಾಸಕ್ತಿಗಳಿಗೆ ಅನೇಕ ಸಂದರ್ಭಗಳಲ್ಲಿ ವಿರುದ್ಧವಾಗಿಯೇ ಇದ್ದರು. ಪ್ರಬಲ ವರ್ಗಗಳು ಸಬಾಲ್ಟರ್ನ್ ವರ್ಗಗಳನ್ನು ಶೋಷಣೆ ಮಾಡುವುದರ ಬಗೆಗಳನ್ನು ಇಟಲಿಯ ಮಾರ್ಕಿಸ್ಟನಾದ ಆ್ಯಂಟೋನಿಗ್ರಾಂಸಿಯು ‘ಹೆಜಮನಿ’ ಎನ್ನುವ ಪರಿಕಲ್ಪನೆಯ ಮೂಲಕ ತಿಳಿಸಿದ್ದಾನೆ. ಅಧಿಕಾರ ಮತ್ತು ಸಂಪತ್ತುಗಳೆರಡರಿಂದಲೂ ದೂರ ತಳ್ಳಲ್ಪಟ್ಟ ಬುಡಕಟ್ಟು, ಆದಿವಾಸಿ, ಕಾರ್ಮಿಕ, ರೈತ ಇತ್ಯಾದಿ ಗುಂಪುಗಳು ಈ ತಳಸಮುದಾಯಗಳಲ್ಲಿ ಕಂಡುರುತ್ತವೆ. ಒಟ್ಟಾರೆಯಾಗಿ ಈ ಆಧುನಿಕ ಜಗತ್ತಿನಲ್ಲಿ ಜಾಗತೀಕರಣ ಪ್ರಭಾವದಿಂದ ತಳ ಸಮುದಾಯಗಳ ಆರ್ಥಿಕ ಸ್ಥಿತಿ ದುರ್ಬಲವಾಗಿದೆ.

* * *

ಹಲಗಲಿ ಬೇಡರು

೬ನೇ ನುಡಿ

ಬೆನ್ನಹತ್ತಿ ತಿರಿತಿರಿವಿ ಕಡದರೂ ಯೇನು ಉಳಿಯದ್‌ಅಂಗ
ನಡವಿ ಹಾಕಿಕೊಂಡ ಹೊಡದರ ಗುಂಡ ದರಜ ಇಲ್ಲದ್‌ಹಾಂಗ

ಕವಾತ ಫೈರಾ ಸುತ್ತಗಟ್ಟಿ ತಂಬು ನುಡಿಶಾರ ಆವಾಗ
ತೋಪು ತುಬಾಕಿ ಕರುಲಿ ಪಿಸ್ತುಲ ಬಾಕ ನಡವಿನಾಗ

ಶಿಡಿಲಿನ ಹಂತ ಗುಂಡ ಹೊಡವುತ ಕತ್ತಿಲಿ ಕಡದರ ವೊಲತ್ ಆಂಗೆ
ನೆಡುಗಿತು ಬ್ಯಾಡಕಿ ಕೆನ್-ಧೂಳೆ ಹರಿದ್-ಅಂಗ ಕಡದಾಟವು ಹ್ಯಾಂಗ

ಕೇಡ-ಗಾಲ ಬಂದಿತ ನಡವಿ ಶಿಕ್ಕರೊ ಬಿಡಸವರ್-ಯಾರ್-ಈಗ
ಚಟೆಕಾರರು ಚಾಟಿ ಮಾಡುತ ನಡದರ ಗುಡದಾಗ ||ಇಳವ||