ಶತಶತಮಾನಗಳಿಂದಲೂ ಹಂತಹಂತವಾಗಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ದೌರ್ಜನ್ಯಕ್ಕೆ ಒಳಗಾದಂತಹ ಸಮುದಾಯವೆಂದರೆ ತಳಸಮುದಾಯವೆಂದರೆ ಅತಿಶಯೋಕ್ತಿಯಾಗಲಾರದು. ತಳಸಮುದಾಯದಲ್ಲಿ ಹುಟ್ಟಿ ಬೆಳೆದಂತಹ ಪ್ರತಿಭೆ ಕೌಶಲ್ಯ ಮಾನವನು ಆಧುನೀಕತೆಯತ್ತ ಮುಖ ಮಾಡಿದಂತೆಲ್ಲಾ ಅವುಗಳ ಮೌಲ್ಯ ಕಡಿಮೆಯಾಗುತ್ತಾ ಬಂದಿದೆ. ವಂಶ ಪಾರ‌್ಯಂಪರಿಕವಾಗಿ ಬಂದಂತಹ ಅವರ ಉದ್ಯೋಗ ಜನಪದೀಯತೆಯು ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳೆಂಬ ಭೂತದ ಕಪಿಮುಷ್ಟಿಗೆ ಸಿಲುಕಿ ನಡುಗಿ ಹೋಗಿವೆ.

ತಳಸಮುದಾಯಗಳು ಆಧುನೀಕತೆಯೆ ಸೋಗಿನಲ್ಲಿ ಪ್ರವೇಶ ಮಾಡಿದ ತಾಂತ್ರಿಕ ಜಗತ್ತು ತುತ್ತು ಚೀಲವನ್ನು ತುಂಬಿಸಿಕೊಳ್ಳಲು ಹೆಣಗಾಡತೊಡಗಿವೆ. ಭಾರತ ದೇಶವು ಎದುರಿಸುತ್ತಿ ರುವ ಜನಸಂಖ್ಯಾಸ್ಫೋಟ ಒಂದು ಕಡೆಯಾದರೆ ನಿರುದ್ಯೋಗ ಎಂಬ ಪಿಡುಗು ಇಡೀ ಮನುಕುಲವನ್ನೇ ಕೆಟ್ಟಕೆಲಸಗಳಿಗೆ ಆಹ್ವಾನಿಸಿದಂತಾಗಿದೆ.

ಹಳ್ಳಿಗಳಲ್ಲಿ ಜನರು ಕೆಲಸವಿಲ್ಲದೆ ಪಟ್ಟಣಗಳತ್ತ ವಲಸೆಬರತೊಡಗಿದ್ದಾರೆ. ಕಾರಣ ಆಧುನಿಕ ಯಂತ್ರೋಪಕರಣಗಳು ಕೂಲಿ ಕಾರ್ಮಿಕರ ಅನ್ನದ ತಟ್ಟೆಗೆ ಕೈ ಹಾಕಿವೆ. ಉದಾಹರಣೆ ಯಾಗಿ ಹೇಳಬೇಕೆಂದರೆ ಭತ್ತವನ್ನು ನಾಟಿ ಮಾಡಲು, ಕಟಾವು ಮಾಡಲು ಯಂತ್ರಗಳು ಬಂದು ೨೦೦ ಜನರು ಮಾಡುವಂತಹ ಕೆಲಸವನ್ನು ಕೇವಲ ಒಂದು ಯಂತ್ರ ಕ್ಷಣಾರ್ಧದಲ್ಲೆ ಮಾಡಿ ಮುಗಿಸುತ್ತವೆ. ಹಾಗಾಗಿ ಅನಿವಾರ್ಯವಾಗಿ ಜನರು ಕೆಲಸ ಹುಡಿಕಿಕೊಂಡು ಪಟ್ಟಣ ಗಳತ್ತ ವಲಸೆ ಹೋಗುವ ಪ್ರಕ್ರಿಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತ ಹೋಗುತ್ತಾ ಇದೆ. ವಲಸೆ ಹೋಗುವ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ಸಹ ಶಾಲೆ ಬಿಡಿಸಿ ಜೊತೆಗೆ ಕರೆದು ಕೊಂಡು ಹೋಗುವುದರಿಂದ ಶಾಲೆ ಬಿಟ್ಟಂತ ಮಕ್ಕಳು ಬಾಲಕಾರ್ಮಿಕರಾಗಿ ತಮ್ಮ ತಂದೆ ತಾಯಿಗಳ ಜೊತೆಗೆ ಕೆಲಸ ಮಾಡುತ್ತಾರೆ.

ಬಳ್ಳಾರಿಯಲ್ಲಿ ನಡೆಯುತ್ತಿರುವ ಗಣಿಗಳಲ್ಲಿ ಶಾಲೆ ಬಿಟ್ಟ ಮಕ್ಕಳು ಎರಡು ಸಾವಿರ ಕ್ಕಿಂತಲೂ ಹೆಚ್ಚಿನ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇವುಗಳ ಜೊತೆ ಧೂಳಿನಿಂದ ಅನೇಕ ಹೃದಯ ಸಂಬಂಧಿ ಕಾಯಿಲೆಗಳು ಕೆಲವು ಮಕ್ಕಳಲ್ಲಿ ಕಾಣಿಸಿಕೊಂಡಿವೆ. ಕರಕುಶಲ ಕೈಗಾರಿಕೆಗಳು ಸಹ ಈ ಆಧುನಿಕತೆಯಿಂದ ಹೊರತಾಗಿಲ್ಲ. ಬಹುರಾಷ್ಟ್ರೀಯ ಕಂಪನಿಗಳು ಈ ನೆಲದ ಕಚ್ಚಾವಸ್ತುಗಳನ್ನು ಉಪಯೋಗಿಸಿಕೊಂಡು ಅಗ್ಗದ ದರದಲ್ಲಿ ಗೃಹ ಉಪಯೋಗಿ ವಸ್ತುಗಳು ಜನಸಾಮಾನ್ಯರ ಕೈಗೆಟುಕುವಂತಾಗಿದ್ದರಿಂದ ಸ್ಥಳೀಯ ಮಾರುಕಟ್ಟೆಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಕುಂಬಾರಿಕೆಯ ಜೀವನ ನಡೆಸುವಂತಹ ಕುಟುಂಬಗಳ ಸ್ಥಿತಿ ಗತಿಗಳು ಸಹ ಈ ತಾಂತ್ರಿಕ ಯುಗದಿಂದ ಅವರ ಆರ್ಥಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಿವೆ. ಮಣ್ಣಿನಿಂದ ತಯಾರಾದಂತ ಮಡಿಕೆ ಕುಡಿಕೆಗಳನ್ನು ಯಾರು ಕೊಂಡುಕೊಳ್ಳುತ್ತಿಲ್ಲ ಆದರ ಮಹತ್ವವನ್ನು ಜನರು ಮರೆಯುತ್ತಿದ್ದಾರೆ. ಮಡಿಕೆ ಕುಡಿಕೆಗಳಲ್ಲಿ ತಯಾರಾದ ತಿನುಸುಗಳು ರುಚಿಫಲಿತವಾಗಿರುತ್ತವೆ. ಆದರೆ ಮನಮೋಹಕವಾಗಿ ಕಾಣುವ ಸ್ಟೀಲ್ ಪ್ಲಾಸ್ಟಿಕ್ ಪಾತ್ರೆಗಳಿಗೆ ಮನಸೋತು ಅಂತಹುಗಳತ್ತ ತಮ್ಮ ಚಿತ್ತವನ್ನು ಹರಿಸಿದ್ದಾರೆ. ಇದರಿಂದ ಕುಂಬಾರಿಕೆಯ ಕುಟುಂಬಗಳು ಪರ್ಯಾಯ ಉದ್ಯೋಗವನ್ನು ಹುಡುಕುತ್ತಿದ್ದಾರೆ. ವಿಶ್ವಮಾರುಕಟ್ಟೆಯು ಮುಕ್ತವಾಗಿರುವುದರಿಂದ ವಿದೇಶಿವಸ್ತುಗಳು ಉದಾ. ಯಂತ್ರೋಪಕರಣಗಳು ಹಾಗೂ ಗೃಹೆಪಯೋಗಿ ಸರಕುಗಳು ಅಗ್ಗದರದಲ್ಲಿ ಮಾರಾಟ ವಾಗುವುದರಿಂದ ದೇಶೀಯ ಸರಕುಗಳು ವಿದೇಶಿ ಸರಕುಗಳ ಜೊತೆ ಪೈಪೋಟಿಯನ್ನು ನಡೆಸಲಾರದೆ ಬಹುಪಾಲು ಕಂಪನಿಗಳು ಸಣ್ಣ ಸಣ್ಣ ಗುಡಿ ಕೈಗಾರಿಕೆಗಳು ಕಾರ್ಮಿಕರಿಗೆ ವೇತನವನ್ನು ಬರಿಸಲಾರದೆ ದಿವಾಳಿಯಾಗಿವೆ. ಲಕ್ಷಾಂತರ ಜನರು ನಿರುದ್ಯೋಗಿಗಳಾಗಿದ್ದಾರೆ. ಕೆಲವೊಂದು ಕುಟುಂಬಗಳು ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೧೯೯೯ರಲ್ಲಿ ಒಂದೇ ವರ್ಷದಲ್ಲಿ ೩೦೦೦ ಸಾವಿರಕ್ಕಿಂತಲೂ ಹೆಚ್ಚು ಕೈ ಮಗ್ಗಗಳು ದಿವಾಳಿ ಯಾಗಿವೆ. ಕೈ ಮಗ್ಗಗಳನ್ನು ನಂಬಿ ಜೀವನ ಸಾಗಿಸುತ್ತಿದ್ದ ಕುಟುಂಬಗಳು ಪರ್ಯಾಯ ಉದ್ಯೋಗದಲ್ಲಿ ನಿರತವಾಗಿವೆ.

ಇಂತಹ ಎಲ್ಲಾ ಸಮಸ್ಯೆಗಳಿಗೆ ಒಂದು ಪರಿಹಾರವನ್ನು ಕಂಡುಕೊಳ್ಳದಿದ್ದರೆ ಎಲ್ಲಾ ಸಣ್ಣ ಸಣ್ಣ ಕಂಪನಿಗಳು ಹಾಗೂ ಗುಡಿ ಕೈಗಾರಿಕೆಗಳು ಇತಿಹಾಸ ಪುಟ ಸೇರಬೇಕಾಗುತ್ತದೆ. ಕೇಂದ್ರ ಸರ್ಕಾರವು ಮುಕ್ತವಾಣಿಜ್ಯ ನೀತಿಯನ್ನು ರದ್ದುಗೊಳಿಸಿ ವಿದೇಶದಿಂದ ಆಮದು ಆಗುವಂತಹ ವಸ್ತುಗಳ ಮೇಲೆ ಅತೀ ಹೆಚ್ಚಿನ ತೆರಿಗೆಗಳನ್ನು ವಿಧಿಸಿ, ದೇಶೀಯವಾಗಿ ತಯಾರಾದಂತಹ ವಸ್ತುಗಳ ಮೇಲೆ ತೆರಿಗೆಯಿಂದ ವಿನಾಯಿತಿಯನ್ನು ನೀಡಬೇಕು ಅಂದಾಗ ಮಾತ್ರ ಗುಡಿ ಕುಶಲ ಕೈಗಾರಿಕೆಗಳು ಹಾಗೂ ಸಣ್ಣ ಸಣ್ಣ ಕಂಪನಿಗಳು ಬದುಕಲು ಸಾಧ್ಯವಾಗುತ್ತವೆ.

* * *

ಏಳನೆಯ ಶತಮಾನದ ‘ಗದ್ದೆಮನೆ’ ಶಾಸನದಿಂದ ಬೇಡರು ರಾಜ್ಯವಾಳಿದರೆಂದು ಗೊತ್ತಾಗುತ್ತದೆ.
ಡಾ. ಎಂ.ಬಿ. ನೇಗಿನಹಾಳ