ಭಾರತ ಬಹು ಸಂಸ್ಕೃತಿಯ ಬೀಡು. ಇಲ್ಲಿರುವ ನೆಲ ಜಲ ಮತ್ತು ಪರಿಸರ ತನ್ನದೆ ಯಾದ ಅಸ್ತಿತ್ವವನ್ನು ಇಟ್ಟುಕೊಂಡು ಇತರೆ ದೇಶಗಳಿಗೆ ಸಂಪತ್ತಿನ ಕೇಂದ್ರವಾಗಿ ಗೋಚರಿಸುತ್ತಿದೆ. ಈ ಹಿನ್ನೆಲೆಯಿಂದ ವಿದೇಶಿಯರು ಒಂದಲ್ಲಾ ಒಂದು ಕಾರಣದಿಂದ ಭಾರತಕ್ಕೆ ಬಂದು ತಮ್ಮದೆಯಾದ ಪ್ರಭಾವವನ್ನು ಬೀರಿರುವುದು ನಿಜ ಸಂಗತಿಯಾಗಿದೆ.

ಪ್ರಾಚೀನ ಆರ್ಯರ ಕಾಲದಿಂದ ಇಲ್ಲಿಯವರೆಗಿನ ಅಧ್ಯಯನಗಳ ಹಿನ್ನೆಲೆಯಲ್ಲಿ ಅವಲೋಕಿಸಿದರೆ ತಳಸಮುದಾಯಗಳು ಅನೇಕ ಸಮಸ್ಯೆಗಳಿಂದ ಬಳಲುತ್ತಿರುವುದು ತಿಳಿಯುತ್ತದೆ. ಭಾರತ ವಿವಿಧ ಜಾತಿಗಳ ಸಂಗಮವಾಗಿದ್ದು ತನ್ನದೆಯಾದ ಭೌಗೋಳಿಕ ಲಕ್ಷಣಗಳನ್ನು ಹೊಂದಿ ಭಿನ್ನ ಭಿನ್ನವಾದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮೈಗೂಡಿಸಿಕೊಂಡು ಜಾನಪದೀಯ ಸಾಂಸ್ಕೃತಿಕ ತವರೂರು ಭಾರತ ಎನ್ನುವ ಹಿನ್ನೆಲೆಯಲ್ಲಿ ತನ್ನ ಅಸ್ತಿತ್ವವನ್ನು ಇಟ್ಟುಕೊಂಡು ಮಾನವೀಯ ಮೌಲ್ಯಗಳನ್ನು ಸಾರುತ್ತಿರುವ ದೇಶದಲ್ಲಿ ಆಧುನಿಕತೆ ಮತ್ತು ತಳಸಮುದಾಯ ಗಳನ್ನು ಮುಖಾಮುಖಿ ಮಾಡಿದರೆ ಆಧುನಿಕ ಜಗತ್ತು ಎಷ್ಟರ ಮಟ್ಟಿಗೆ ತಳಸಮುದಾಯಗಳಿಗೆ ಪೂರಕವಾಗಿದೆ ಎಂಬುದು ಇಲ್ಲಿ ಚರ್ಚೆಯ ವಿಷಯವಾಗುತ್ತದೆ.

ಆಧುನೀಕತೆಯೆಂದರೆ ಯಾವುದೇ ಸಮುದಾಯದ ಮನಸ್ಸುಗಳಿಗೆ ತಮ್ಮ ಬದುಕಿಗೆ ಅನುಗುಣವಾಗಿ ನೆರವಿನ  ಆಲೋಚನೆಗಳು ಬಂದವು ಎಂದರೆ ಅದು ಆಧುನೀಕತೆಯಾಗುತ್ತದೆ. ಆದರೆ ದೇಶಿಯ ಸಂಸ್ಕೃತಿಯಲ್ಲಿ ಪರಿವರ್ತನೆ, ಸಾಂಪ್ರದಾಯಿಕ ಬದುಕಿನಲ್ಲಿ ಬದಲಾವಣೆ, ಸಮುದಾಯಗಳ ವೃತ್ತಿಯಲ್ಲಿ ಯಂತ್ರಗಳನ್ನು ಬಳಸುವಿಕೆ, ದಿನದ ಬದುಕಿನಲ್ಲಿ ಯಾವುದೇ ಕ್ರಿಯೆಗಳು ನಡೆದರೂ ಅದು ನಿನ್ನೆಯ ಬದುಕಾಗಿರದೆ ಹೊಸದಾದ ಬದುಕಾಗಿರುವುದೇ ಆಧುನಿಕತೆ ಅಥವಾ ಬದಲಾವಣೆಯ ಬದುಕು ಎನ್ನುವಾಗ ಮಾನವನ ಬುದ್ದಿಬೆಳವಣಿಗೆಗೆ ಅನುಗುಣವಾಗಿ ಹೊಸದಾದ ಬದುಕಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಬರುವುದು ಸಹಜವಾದ ಕ್ರಿಯೆ. ಆದರೆ ಬಂಡವಾಳಶಾಹಿಗಳ ನೇತೃತ್ವದಲ್ಲಿ ಆಧುನಿಕತೆ ಮತ್ತು ಜಾಗತೀಕರಣದಿಂದ ಮುಕ್ತ ಮಾರುಕಟ್ಟೆಗಳು ಭಾರತಕ್ಕೆ ಬಂದು ಇಲ್ಲಿಇರುವ ನೈಸರ್ಗಿಕ ಸಂಪತ್ತನ್ನು ದೋಚಿಕೊಂಡು ಹೋಗಿರುವುದಲ್ಲದೆ ಭಾರತೀಯ ತಳಸಮುದಾಯ ಗಳ ದುಡಿಮೆಗೆ ತಕ್ಕ ಪ್ರತಿಫಲ ದೊರೆಯದೆ ಅನೇಕ ಕೈಗಾರಿಕೆಗಳನ್ನು ಭಾರತದಲ್ಲಿ ಬಂಡವಾಳ ಶಾಹಿಗಳು ಪ್ರಾರಂಭಿಸಿ ಇಲ್ಲಿಯ ಸಂಪತ್ತು ಮತ್ತು ದುಡಿಯುವ ಸಮುದಾಯಗಳ ಶ್ರಮದಿಂದ ಲಾಭವನ್ನು ಮಾಡಿಕೊಂಡು ಪ್ರಭುತ್ವವನ್ನು ಬಲಿಷ್ಟತೆ ಗೊಳಿಸುತ್ತಿರುವುದು ನಿಜ ಸಂಗತಿ ಯಾಗಿದೆ. ಭಾರತದಲ್ಲಿ ತಮ್ಮ ಪ್ರಭುತ್ವವನ್ನು ಇಟ್ಟುಕೊಂಡು ಬದುಕುವ ರ್ಗ ಒಂದೆಡೆ ಯಾದರೆ ಇನ್ನೊಂದೆಡೆ ಯಾವುದೇ ಭವಿಷ್ಯವಿರದೇ ತಮ್ಮ ಕುಲಕಸುಬಿನ ಆಧಾರದ ಮೇಲೆ ಪ್ರಭುತ್ವದ ಶೋಷಣೆಗೆ ಒಳಗಾಗಿ ಜೀವನ ಮಾಡುತ್ತಾ ಬಂದಿರುವ ಇನ್ನೊಂದು ವರ್ಗ ಆಧುನೀಕತೆಯ ಸೆರಗಿಗೆ ಸಿಕ್ಕು ಅತಂತ್ರದ ಬದುಕನ್ನು ಸಾಗಿಸುತ್ತಿರುವುದರಿಂದ ಆಧುನೀಕತೆ ತಳಸಮುದಾಯಗಳ ಬದುಕಿಗೆ ವರವಾಗಿರದೆ ಶಾಪವಾಗಿದೆ ಎಂದರೆ ತಪ್ಪಾಗಲಾರದು.

ತಳಸಮುದಾಯಗಳು ಪ್ರಾಚೀನ ಸಮಯದಿಂದ ಇಲ್ಲಿಯವರೆಗೆ ಕುಂಬಾರಿಕೆ, ಚಮ್ಮಾರಿಕೆ, ನೇಕಾರಿಕೆ, ಬುಟ್ಟೆ ತಯಾರಿಸುವುದು, ಮುಂತಾದ ವೃತ್ತಿಗಳನ್ನು ಪರಂಪರಗತವಾಗಿ ಮೈಗೂಡಿಸಿ ಕೊಂಡು ಸರಳವಾದ ಬದುಕಾದರೂ ನೆಮ್ಮದಿಯ ಬದುಕನ್ನು ಮಾಡಿಕೊಂಡು ಬಂದಿದ್ದರು. ಅಲ್ಲದೆ ಒಂದು ಹಳ್ಳಿಯಲ್ಲಿ ಪರಸ್ಪರ ನಂಬಿಕೆ, ಪ್ರೀತಿ, ಹೊಂದಾಣಿಕೆ, ಸರ್ವರ ಹಿತವಿರು ತ್ತಿತ್ತು. ಆದರೆ ಆಧುನಿಕ ಜಗತ್ತಿನಲ್ಲಿ ತಳಸಮುದಾಯಗಳು ಮಾಡುತ್ತಿದ್ದ ವೃತ್ತಿಗಳೆಲ್ಲವು ಜಾಗತೀಕರಣದ ಸುಳಿಯಲ್ಲಿ ಸಿಕ್ಕು ಆಭದ್ರತೆಯ ಬದುಕನ್ನು ಸೃಷ್ಠಿಮಾಡಿರುವುದು ಕಂಡು ಬರುತ್ತಿದೆ. ಮತ್ತು ಸ್ಪರ್ಧೆಯ ಜೀವನವನ್ನು ಮಾಡುವಂತೆ ಸಮಾಜದ ವ್ಯವಸ್ಥೆಯನ್ನು ಕಲುಸಿತಗೊಳಿಸಿದೆ. ಆದ್ದರಿಂದ ಆಧುನಿಕತೆಯ ಜಗತ್ತು ತಳಸಮುದಾಯಗಳಿಗೆ ಬದುಕನ್ನು ಕೊಡದೆ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗಿದೆ.

ಆಧುನಿಕ ಜಗತ್ತಿನಲ್ಲಿ ತಳಸಮುದಾಯಗಳು ಕಡಿಮೆಯ ವೇತನಕ್ಕೆ ದಿನದ ೨೪ ಗಂಟೆಗಳ ಕಾಲ ದುಡಿಯಬೇಕಾದ ಸ್ಥಿತಿ ತಲುಪಿರುವುದು ದುರಂತವೇ ಸರಿ. ಕಾರ್ಲ್‌ಮಾರ್ಕ್ಸ್‌ರವರು ಹೇಳಿದ ಸಿದ್ಧಾಂತವು ಇಂದು ಗೋಚರಿಸುತ್ತಿದೆ. ಆಧುನಿಕ ಜಗತ್ತು Haves and Have not ಎಂಬ ವರ್ಗಗಳನ್ನು ಸೃಷ್ಟಿಮಾಡಿರುವುದು ನಿಜ ಸಂಗತಿಯಾಗಿದೆ. ತಳಸಮುದಾಯಗಳು ತಯಾರಿಸಿದ ಮತ್ತು ಉತ್ಪಾದಿಸಿದ ಹಾಗೂ ಸಂಗ್ರಹಿಸಿದ ಸಂಪತ್ತು, ಉತ್ಪನ್ನಗಳು, ಸಿದ್ದವಸ್ತು ಗಳನ್ನು ಕಡಿಮೆ ಬೆಲೆಗೆ ಕೊಂಡು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ  ಮಾಡುವ ಪರಿಪಾಠ ಒದಗಿರುವುದು ದುರಂತವೇ ಸರಿ. ಆಧುನಿಕತೆಯ ಸಮಾಜ ತಳ ಸಮುದಾಯಗಳನ್ನು ಏಣಿಶ್ರೇಣಿಯಲ್ಲಿ ಕೆಳಸ್ಥಾನದಲ್ಲಿಟ್ಟು ನೋಡುವ ವಾತಾವರಣ ಸೃಷ್ಟಿಯಾಗಿದೆ. ಆಧುನಿಕ ಸಮಾಜದಲ್ಲಿ ಪ್ರಭುತ್ವವನ್ನೆ ವಿರುದ್ಧ ಮಾಡಿಕೊಂಡು ತಳಸಮುದಾಯಗಳು ಬದುಕುವುದು ಅಷ್ಟು ಸುಲಭದ ಕೆಲಸವಲ್ಲವಾಗಿದೆ. ಪ್ರಬಲ ಜಾತಿ ವರ್ಗಗಳು ಹೆಚ್ಚು ಹೆಚ್ಚು ಬಲಿಷ್ಟತೆ ಗೊಳ್ಳುವುದಕ್ಕೆ ಪ್ರೇರಕವಾಗಿ ಜಾಗತೀಕರಣ, ಬಂಡವಾಳಶಾಹಿಗಳು ಸೃಷ್ಟಿಯಾಗಿವೆ ಎಂದರೆ ನಿಜ ಸಂಗತಿಯಾಗುತ್ತದೆ.

ಆಧುನಿಕ ಜಗತ್ತಿನಲ್ಲಿ ತಳಸಮುದಾಯಗಳ ಜಾನಪದೀಯ ನೃತ್ಯ ಮತ್ತು ಸಾಂಬಾರ ಪದಾರ್ಥಗಳು ತಳಸಮುದಾಯದ ಕುಲಕಸುಬುಗಳು ಪೇಟೆಂಟ್ ಆಗಿರುವುದು ಆಧುನಿಕ ಸಾಮಾಜಿಕ ಪ್ರತಿಫಲವೆಂದು ತಿಳಿಯಲಾಗಿದೆ. ಆದ್ದರಿಂದ ನಮ್ಮ ನಾಡು, ಸಂಸ್ಕೃತಿ, ಅರಣ್ಯ ಸಸ್ಯ, ಗಿಡಮೂಲಿಕೆಗಳೆಲ್ಲವು ನಮ್ಮ ಕಣ್ಣಿನ ಮುಂದೆ ಇನ್ನೊಬ್ಬರಿಗೆ ಮಾರಾಟವಾಗುತ್ತಿದೆ ಯೆಂದರೆ ನಮಗೆ ಆಧುನಿಕ ಸಮಾಜ ಎಷ್ಟರ ಮಟ್ಟಿಗೆ ಪೂರಕವಾಗಿದೆ ಎಂದು ತಳಸಮುದಾಯ ಗಳು ಮನವರಿಕೆ ಮಾಡಿಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ.

ಭಾರತದಲ್ಲಿ ದಮನಿತ ಧ್ವನಿಗಳ ಕಷ್ಟವನ್ನು ಕಿವಿಕೊಟ್ಟು ಕೇಳುವವರಿಲ್ಲವಾಗಿದೆ ಆದ್ದರಿಂದ ಬಂಡವಾಳಶಾಹಿಗಳು ಆಧುನೀಕತೆಯ ಮುಖವನ್ನು ಹಾಕಿಕೊಂಡು, ಸಮುದಾಯಗಳನ್ನು ಅಭಿವೃದ್ದಿ ಮಾಡುತ್ತೇವೆ ಎಂದು ತಳಸಮುದಾಯಗಳನ್ನು ದರ್ಪ, ಮತ್ತು ಅಧಿಕಾರದ ಮನೋಭಾವನೆಯಿಂದ ನೋಡುವ ಸ್ಥಿತಿ ಬಂದಿದೆಯೆಂದರೆ ತಳಸಮುದಾಯಗಳಿಗೆ ಆಧುನೀಕತೆಯ ಜಗತ್ತು ನುಂಗಲಾರದ ತುತ್ತಾಗಿದೆ. ಅಂದರೆ ಯಾವುದು ಸರಿ ಯಾವುದು ತಪ್ಪು ಎಂದು ತೀರ್ಮಾನಿಸಲು ಆಗದೆ ಮನಸ್ಸುಗಳು ಗೊಂದಲದಲ್ಲಿ ಸಿಕ್ಕಿಕೊಂಡಿವೆ.

ಒಟ್ಟಾರೆಯಾಗಿ ಆಧುನಿಕ ಜಗತ್ತಿನಲ್ಲಿ ತಳಸಮುದಾಯಗಳ ಸ್ಥಿತಿ ಶೋಚನೀಯವಾಗಿದೆ ಮತ್ತು ನಾಯಿ ಕೊಡೆಯಂತೆ ಕೈಗಾರಿಕೆಗಳು ಪ್ರಾರಂಭಿಸಲಾಗಿರುವುದರಿಂದ ಭಾರತದಂತಹ ದೇಶಕ್ಕೆ ಹಾಗೂ ತಳಸಮುದಾಯಗಳ ಬದುಕಿಗೆ ಒಂದು ರೀತಿಯ ಅತಂತ್ರ ಸ್ಥಿತಿಗೆ ತಲುಪು ವುದನ್ನು ಯಾವುದೇ ಅಧ್ಯಯನಕಾರರು ಗ್ರಹಿಸಿಕೊಂಡು ಪ್ರಸ್ತುತ ಕಾಲದಲ್ಲಿ ಚರ್ಚೆ ಮಾಡ ಬೇಕಾದ ವಿಷಯವಾಗಿದೆ. ಏಕೆಂದರೆ ಇಂದಿನ ದಿನಮಾನಗಳಲ್ಲಿ ತಳಸಮುದಾಯಗಳನ್ನು ಅಭಿವೃದ್ದಿಮಾಡುವ ನೆಪವನ್ನು ಸೃಷ್ಟಿಮಾಡಿ ಅರಣ್ಯಗಳಲ್ಲಿ ಡ್ಯಾಮ್ ಮತ್ತು ಚೆಕ್‌ಡ್ಯಾಮ್ ಗಳ ಜೊತೆಗೆ ರಾಷ್ಟ್ರೀಯ ಉದ್ಯಾನವನ ಯೋಜನೆಯನ್ನು ರೂಪಿಸಿ ತಳಸಮುದಾಯಗಳು ವಾಸಮಾಡುವ ಪ್ರದೇಶಗಳನ್ನು ಹಾಗೂ ಅವರ ಪರಂಪರಾಗತವಾಗಿ ಬಂದಿರುವ ಸಾಂಸ್ಕೃತಿಕ ಬದುಕನ್ನು ತಲ್ಲಣಗೊಳಿಸುವುದಲ್ಲದೆ ಆಧುನೀಕತೆಯ ರೂಪರೇಷೆಗಳನ್ನು ಸ್ವೀಕರಿಸಿಕೊಳ್ಳ ಲಾಗಿದೆ. ಬದುಕಿನ ಸಂಘರ್ಷಕ್ಕೆ ತಳಸಮುದಾಯಗಳಿಗೆ ಭವಿಷ್ಯದ ಬದುಕಿಗೆ ದಾರಿಯಾಗು ತ್ತದೆಯೇ ಅಥವಾ ದೇಶದ ಪ್ರಭುತ್ವಪೂರಿತ ಸಾಮಾಜಿಕ ಬದಲಾವಣೆ ಅವರನ್ನು ನುಂಗು ತ್ತದೆಯೇ ಎಂಬುದು ಇಲ್ಲಿ ಮುಖ್ಯವಾಗುತ್ತದೆ ಆದ್ದರಿಂದಲೇ ಕಾರ್ಲ್‌ಮಾರ್ಕ್ಸ್‌ರ ಸಿದ್ದಾಂತವು ಮಾನವನ ಪ್ರಪಂಚದಲ್ಲಿ ಯಾವತ್ತೂ ಕೂಡ ಜೀವಂತಿಕೆಯನ್ನು ಇಟ್ಟುಕೊಂಡಿ ರುತ್ತದೆ ಎಂದು ಇಲ್ಲಿ ಪ್ರಸ್ತಾಪಿಸಿದರೆ ತಪ್ಪಾಗಲಾರದು.

ಮಾನವ ಪ್ರಾಣಿಯು ನಡೆದು ಬಂದ ಚರಿತ್ರೆಯ ಪುಟಗಳನ್ನು ನಾವು ಅವಲೋಕಿಸುತ್ತ ಹೊರಟರೆ ಇತಿಹಾಸದ ಉದ್ದಕ್ಕೂ ತಳಸಮುದಾಯಗಳು ಪರೋಕ್ಷವಾಗಿ ಶೋಷಣೆಗೆ ಒಳಗಾಗುತ್ತಲೇ ಬಂದಿರುವುದು ಗಮನಾರ್ಹವಾದುದು. ಹಾಗಾಗಿ ನಾವು ಇಂದು ಅನನ್ಯತೆ ಎಂದ ತಕ್ಷಣ ಜಾಗೃತರಾಗಿ ಆಲೋಚಿಸಬೇಕಾಗುತ್ತದೆ. ಏಕೆಂದರೆ ಸರ್ಕಾರದ ಯೋಜನೆ ಗಳೆಲ್ಲವೂ ಮರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದರೂ ಅವರನ್ನು ಮುಖ್ಯವಾಹಿನಿಯ ಒಳಗಡೆ ತರಬೇಕು ಎನ್ನುವಂತೆ ಇರುವಾಗ, ಈ ತೆರನಾದ ಯೋಜನೆಗಳು ತಳಸಮುದಾಯಗಳನ್ನು ತಲುಪಿವೆಯೇ ಇಲ್ಲವೆ ಎಂಬುದನ್ನು ಪರೀಕ್ಷಿಸಲು ಹೋಗದೆ ಇರುವಾಗ ಸಮುದಾಯಗಳಿಗೆ ಅಭಿವೃದ್ದಿ ಎಲ್ಲಿಂದ ಆಗಿರಬೇಕು ಎನ್ನುವಂತಹ ಪ್ರಶ್ನೆಗಳು ಮನಸಿನಲ್ಲಿ ಸೃಷ್ಟಿಯಾಗುವುದು ಅನಿವಾರ್ಯ. ಆದ್ದರಿಂದ ಆಧುನೀಕತೆ ಎಂದು ಹೇಳಿಕೊಳ್ಳು ವಾಗ ಇಡೀ ದೇಶದ ಅಭಿವೃದ್ದಿಯ ಮಾನದಂಡಗಳಲ್ಲಿ ತಳಸಮುದಾಯಗಳು ಇರುತ್ತವೆ ಎಂಬುದನ್ನು ಮರೆಯುವಂತಿಲ್ಲ. ಈ ಹಿನ್ನೆಲೆಯಿಂದ ತಳಸಮುದಾಯಗಳಿಗೆ ಆಧುನೀಕತೆಯ ಮನೋಭಾವನೆಯನ್ನು ಉಂಟುಮಾಡುವುದಕ್ಕಿಂತ ಮೊದಲು ಸಾಮಾಜಿಕ ಸ್ಥಾನಮಾನ ಹಾಗೂ ಆರ್ಥಿಕ ಸ್ಥಾನಮಾನಗಳನ್ನು ಮಾಡಬೇಕಾಗಿರುವ ವ್ಯವಸ್ಥೆ ಸೃಷ್ಠಿಯಾಗಬೇಕಾಗಿದೆ. ಅಲ್ಲದೆ ತಳಸಮುದಾಯಗಳು ಮಾಡುವ ಗುಡಿಕೈಗಾರಿಕೆಗಳಿಗೆ ತಕ್ಕ ಬೆಲೆ ಸ್ಪರ್ಧಾಜಗತ್ತಿಲ್ಲಿ ಸಿಕ್ಕರೆ ಹಾಗೂ ತಳಸಮುದಾಯಗಳು ತಾವಾಗಿಯೇ ಬದಲಾಗುತ್ತಿರುವ ಸಮಯವನ್ನು ಒಪ್ಪಿಕೊಳ್ಳುವುದಲ್ಲದೆ ಆಧುನೀಕತೆಯ ಬದುಕನ್ನೂ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ಪ್ರಾಚೀನ ಕಾಲದಿಂದ ಇಲ್ಲಿಯವರೆಗೂ ಹಳ್ಳಿಗಳಲ್ಲಿ ಬದುಕನ್ನು ಸಾಗಿಸುತ್ತಿರುವ ಎಷ್ಟೋ ಬಡಕುಟುಂಬಗಳ ಮನೆಗಳಿಗೆ ಪ್ರಾಥಮಿಕ ಸೌಲಭ್ಯಗಳೇ ತಲುಪದೆ ಇರುವಂತಹ ಸಂದರ್ಭದಲ್ಲಿ ಹಾಗೂ ಆನುವಂಶೀಯವಾಗಿ ಬೆಳೆದುಕೊಂಡು ಬಂದ ಬಟ್ಟೆಯ ಕೆಲಸ ಪ್ರಚಲಿತ ದಿನಗಳಲ್ಲಿ ಮುಂದುವರಿಯುತ್ತಿರುವಾಗ ತಳ ಸಮುದಾಯಗಳಿಗೆ ಆಧುನಿಕತೆ ಎಂಬ ವಿದೇಶಿಯ ಸೀರೆಯ ಸೆರಗು ತಲುಪದೆ ಇರುವುದು ಒಂದು ಕಡೆಯಾದರೆ ಇನ್ನೊಂದು ದೃಷ್ಟಿಯಲ್ಲಿ ತಲುಪಿದರೆ ಅದು ದೇಶದ ಪ್ರಭುತ್ವದ ಪರವಾದ ಆಧುನೀಕತೆಯ ಬದುಕಾಗಿರುತ್ತೆ ಎನ್ನುವುದನ್ನು ತಳಸಮುದಾಯಗಳನ್ನು ಕುರಿತು ಅಧ್ಯಯನ ಮಾಡುವವರು ಆಲೋಚಿಸಲೇಬೇಕಾದ ಸಂಗತಿಯಾಗುತ್ತದೆ ಎನ್ನುವುದು ನನ್ನ ನಿಲುವು.

 

ಅಡಿಟಿಪ್ಪಣಿ

೧.   ಕಾರ್ಲ್‌ಮಾರ್ಕ್ಸ್ ಬಂಡವಾಳದ ಉದ್ಭವ, ಸಂಗತಿ ಪ್ರಕಾಶನ ಯೂನೆಸ್ಕೊ ೧೯೮೧

೨.   ಜೋಗನ್ ಶಂಕರ್, ಗ್ರಾಮ ಸಮಾಜ, ಜೀವ ಪ್ರಕಾಶನ, ಮೈಸೂರು ೧೯೯೫

೩.   ಮಂಜುನಾಥ ಬೇವಿನಕಟ್ಟಿ, ಜನಪದ ಸಂಸ್ಕೃತಿ, ತೇಜಸ್ವಿ ಪ್ರಕಾಶನ ಹ್ಯಾರಡ

೪.   ರವೀಂದ್ರ ಕುಪ್ಪರ ಭಾರತೀಯ ಸಮಾಜದ ಅಧ್ಯಯನ ೧೯೯೬

೫.   ಎ.ಎಸ್. ಪ್ರಭಾಕರ್ ದೊಂಬರು, ಒಂದು ಚಾರಿತ್ರಿಕ ಹಿನ್ನೋಟ ಸಿದ್ದಾರ್ಥ ಪ್ರಕಾಶನ ಹೊಸಪೇಟೆ ೨೦೦೬.

* * *