ಭಾರತ ದೇಶವು ಹಳ್ಳಿಗಳಿಂದ ಕೂಡಿದ ರಾಷ್ಟ್ರವಾಗಿದೆ. ಇದು ಒಕ್ಕಲುತನವೇ ಪ್ರಧಾನವಾಗಿರುವ ದೇಶ. ಆದ್ದರಿಂದ ರೈತರನ್ನು ಈ ದೇಶದ ಬೆನ್ನೆಲುಬು ಎಂದು ಕರೆಯು ತ್ತಾರೆ. ಇದನ್ನು ಎಲ್ಲರೂ ಹೇಳುತ್ತಾರೆ. ಆದರೆ ಆ ಬೆನ್ನೆಲುಬನ್ನೆ ಮುರಿಯುತ್ತಿದ್ದಾರೆ. ಆ ಬೆನ್ನೆಲುಬನ್ನು ಕಣ್ಣಿನಿಂದ ನೋಡಿ ಹೋಗುತ್ತಿದ್ದರೂ, ಎಲ್ಲರೂ ನೋಡಿದರೂ ನೋಡದಂತಿ ದ್ದಾರೆ. ಏಕೆಂದರೆ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆ, ದಬ್ಬಾಳಿಕೆ ಪದಗಳಿಗೆ ನಿಲುಕದಂತಹದ್ದು. ನಕಲಿ ಬೀಜಗಳ ಹಾವಳಿ, ಅಧಿಕ ಬಡ್ಡಿಯ ಹೊರೆ, ಜೊತೆಗೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಂಗಾಲಾದ ರೈತ ಆತ್ಮಹತ್ಯೆ ಮಾಡಿಕೊಳ್ಳು ತ್ತಿದ್ದಾನೆ. ಇದು ಸಾಲದೆಂಬಂತೆ ಕೂಲಿಕಾರ್ಮಿಕರಿಗೆ ಜಮೀನುದಾರರು ಸರಿಯಾಗಿ ಕೂಲಿ ಕೊಡದೆ, ಅವರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ. ಜೀತಪದ್ಧತಿಯಂತ ಅನಿಷ್ಟ ಕೆಲವು ವರ್ಗದ ಜನತೆಯ ಜೀವನಕ್ಕೆ ಮುಳುವಾಗಿದೆ. ಇತ್ತೀಚೆಗೆ ಘನ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅಧಿಕ ಕೂಲಿಯನ್ನು ನೀಡಿಯೂ ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ಫಲಾನುಭವಿಗಳಿಗೆ ಸಿಗದಂತೆ ಎಚ್ಚರವಹಿಸಿದ್ದಾರೆ. ಇನ್ನೊಂದು ದುರಂತವೆಂದರೆ ಸದ್ಯ ನಮ್ಮ ರಾಜಕಾರಣಿಗಳು, ಅಧಿಕಾರಿಗಳು, ಆರ್ಥಿಕ ಅಭಿವೃದ್ದಿಗಾಗಿ ಕೃಷಿಗೆ ಒಲವು ಆದ್ಯತೆಕೊಡದೆ ಬೇರೆಯವಕ್ಕೆ ಹೆಚ್ಚಿನ ಆದ್ಯತೆ ವಹಿಸಿದ್ದಾರೆ. ಕೃಷಿಗೆ ಹೆಚ್ಚಿನ ಆದ್ಯತೆ ಕೊಡುವುದುತ್ತಮ. ೊತೆಗೆ ಶಿಕ್ಷಣಕ್ಕೂ ಆದ್ಯತೆ ಕೊಡಬೇಕಾಗಿದೆ.

ಏಕೆಂದರೆ, ನಮ್ಮ ಹಳ್ಳಿಗಳಲ್ಲಿ ಬಾಲಕಾರ್ಮಿಕರ ಪದ್ಧತಿ ತಾಂಡವವಾಡುತ್ತಿದೆ. ಇದಕ್ಕೆ ನಗರ ಪಟ್ಟಣಗಳೂ ಹೊರತಲ್ಲ. ಹಳ್ಳಿಗಳಲ್ಲಿ ಮಕ್ಕಳು ದನಮೇಯಿಸಲು, ಮೇಕೆ, ಕುರಿ ಮೇಯಿಸಲು ಹೋಗುವುದು ಸರ್ವೇಸಾಮಾನ್ಯ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಬೀಜಗಳ ಕಸಿಮಾಡಲು ಮಕ್ಕಳುಗಳನ್ನೇ ಬಳಸಿಕೊಳ್ಳಲಾಗುತ್ತಿದೆ. ಮಂಡಕ್ಕಿ ಬಟ್ಟಿಗಳಲ್ಲಿ ಮಕ್ಕಳ ಕಲರವ ನಲುಗುತ್ತಿದೆ. ಮಂಡಕ್ಕಿ ಭಟ್ಟಿ ದುರಂತ ಇಡೀ ರಾಷ್ಟ್ರವನ್ನೇ ತಲ್ಲಣ ಗೊಳಿಸಿತು. ಪಟಾಕಿಗಳು ಚಿಕ್ಕಚಿಕ್ಕವಾಗಿರುವುದರಿಂದ ಅವುಗಳಿಗೆ ಹಾಳೆಗಳನ್ನು ಸುತ್ತಿಲೇಬಲ್ ಅಂಟಿಸುವ ಕೆಲಸಕ್ಕೆ ತುಂಬಾ ತಾಳ್ಮೆಬೇಕು. ಅದನ್ನು ಮಾಡಲು ದೊಡ್ಡವರು ಹಿಂದೇಟು ಹಾಕುತ್ತಾರೆ. ಜೊತೆಗೆ ಜಾಸ್ತಿ ಕೂಲಿ ಕೇಳುತ್ತಾರೆ. ಆದರೆ ಮಕ್ಕಳು ಆ ಕೆಲಸವನ್ನು ಆಟವಾಡಿ ಕೊಂಡೇ ಮಾಡಿಮುಗಿಸುತ್ತಾರೆ. ಕಡಿಮೆ ಕೂಲಿ ಮತ್ತು ಪ್ರತಿಭಟನೆಗಳ ಕಿರಿಕ್‌ಗಳಿಲ್ಲದೆ, ಜೊತೆಗೆ ಬೇಡಿಕೆಗಳಿಲ್ಲದೇ ಕೆಲಸ ಮುಗಿಸಿಕೊಡುವುದರಿಂದ ಮಕ್ಕಳನ್ನೇ ಬಳಸಿಕೊಳ್ಳ ಲಾಗುತ್ತಿದೆ. ಬೀಡಿ ತಯಾರಿಕಾ ಘಟಕಗಳಲ್ಲಿಯೂ ಕೂಡ ಮಕ್ಕಳು ಬೇಕು. ಬೀಡಿಗಳಿಗೆ ಲೇಬಲ್ ಅಂಟಿಸಲು ಮಕ್ಕಳು ಬೇಕು. ಮುಂದುವರಿದ ರಾಷ್ಟ್ರಗಳು ಕೂಡ ಇದಕ್ಕೆ ಹೊರತಾ ಗಿಲ್ಲ. ಫುಟ್‌ಬಾಲ್‌ಗಳಿಗೆ ಅಂತಿಮ ರೂಪಕೊಡಲು, ಹೊಲಿಗೆ ಹಾಕಲು ದೊಡ್ಡವರಿಂದ ಸಾಧ್ಯವಿಲ್ಲ. ಅದಕ್ಕೆ ಮಕ್ಕಳೇ ಬೇಕು. ಮಕ್ಕಳ ಚಿಕ್ಕ ಬೆರಳುಗಳು ಫುಟ್‌ಬಾಲ್‌ಗಳನ್ನು ತೇಪೆಹಾಕಲು ಸರಿ ಹೊಂದುವಂತಹವುಗಳಾಗಿವೆ. ಆದ್ದರಿಂದ ಇಲ್ಲಿ ಕೂಡ ಬಾಲಕಾರ್ಮಿಕರು ಹೆಚ್ಚಾಗಿ ಕೆಲಸ ಮಾಡುತ್ತಾರೆ.

ಮೈಸೂರು, ಬೆಂಗಳೂರುಗಳಂತಹ ಮಹಾನಗರಗಳಲ್ಲಿಯೂ ಮಕ್ಕಳನ್ನು ಮನೆಕೆಲಸಕ್ಕೆ ಬಳಸಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಗ್ಯಾರೇಜು, ಕಾರ್ಖಾನೆ ಮತ್ತು ಅಪಾಯಕಾರಿ ಕ್ಷೇತ್ರಗಳಲ್ಲಿ ಮಕ್ಕಳು ಕೆಲಸಮಾಡುವುದನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ. ಪ್ರಸ್ತುತ ನಮ್ಮ ದೇಶದಲ್ಲಿ ೧.೨೭ಕೋಟಿ ಬಾಲಕಾರ್ಮಿಕರಿದ್ದಾರೆ. ಕರ್ನಾಟಕದಲ್ಲಿಯೇ ೧೧ ಲಕ್ಷ ಬಾಲಕಾರ್ಮಿಕರು ತಮ್ಮ ಬಾಲ್ಯ ಮರೆತು ದುಡಿಯುತ್ತಿದ್ದಾರೆ, ದುಡಿಸಿಕೊಳ್ಳುವವರು ದುಡಿಸಿ ಕೊಳ್ಳುತ್ತಿದ್ದಾರೆ. ಈಗ ನಾವು ಯಾವ ಹಳ್ಳಿಗೆ ಹೋದರೂ ಶಾಲೆಬಿಟ್ಟ ಮಕ್ಕಳನ್ನು ನೋಡ ಬಹುದಾಗಿದೆ. ಇದಕ್ಕೆ ಮೂಲ ಕಾರಣ ತಂದೆ ತಾಯಂದಿರ ಅನಕ್ಷರತೆ. ‘ಎಷ್ಟು ಓದಿದರೂ ಗೌರ್ನಮೆಂಟ್ ಕೆಲಸ ಸಿಗುವುದೂ ಅಷ್ಟಕಷ್ಟೇ ಇದೆ’ ಎನ್ನುವ ಪೋಷಕರ ಮನೋಧೋರಣೆ, ಚಿಕ್ಕವರಿದ್ದಾಗಲೇ ಮೈಬಗ್ಗಿಸಿ ಕೆಲಸ ಮಾಡಿದರೆ ಮುಂದೆ ದೊಡ್ಡವರಾದ ಮೇಲೆ ದುಡಿದು ಕೊಂಡು ತಿನ್ನುತ್ತಾರೆ ಎಂದು ಭಾವಿಸಿಕೊಂಡು ಮಕ್ಕಳನ್ನು ಚಿಕ್ಕವರಿದ್ದಾಗಲೇ ಮನೆಕೆಲಸಕ್ಕೆ, ಹೊಲಕೆಲಸಕ್ಕೆ ಕಳಿಸಿಕೊಡುತ್ತಾರೆ. ಇದು ಬಾಲಕಾರ್ಮಿಕರ ಪದ್ಧತಿಗೆ ಮೂಲ ತಳಪಾಯ ವೆನ್ನಬಹುದು. ಜೊತೆಗೆ ಸರ್ಕಾರದ ಉಡಾಫೆತನ, ಬೇಧಭಾವಗಳು ಜನಗಳು ಎಲ್ಲ ವ್ಯವಸ್ಥೆ ಗಳ ಬಗ್ಗೆ ನಿರಾಸಕ್ತಿ ತಾಳುವಂತೆ. ಮಾಡುತ್ತವೆ.

ಜಾಗತೀಕರಣ ಎಂಬ ಪೆಡಂಭೂತ ಆವರಿಸಿಕೊಳ್ಳದಿರುವ ಜಾಗವೇ ಇಲ್ಲವೆನ್ನಬಹುದು. ನಾವು ತಿನ್ನುವ ಆಹಾರದಿಂದ ಹಿಡಿದು ಉಪಯೋಗಿಸುವ ವಸ್ತುಗಳವರೆಗೂ ಜಾಗತೀಕರಣವಾಗಿದೆ. ಅಷ್ಟೇ ಏಕೆ ಆಗ ತಾನೆ ಹುಟ್ಟಿದ ಮಗುವಿಗೂ ನಾವು ಬಳಸುವ ಸಾಬೂನು ಎಣ್ಣೆ ಎಲ್ಲದರಲ್ಲೂ ವಿದೇಶದ ಕೈವಾಡವಿದೆ. ಇದರಿಂದ ನಮ್ಮ ದೇಶ ಆಂತರಿಕವಾಗಿ ಗುಲಾಮಗಿರಿ ಯತ್ತ ಸಾಗುತ್ತಿದೆ.

ಅಭಿವೃದ್ದಿಶೀಲ ರಾಷ್ಟ್ರಗಳು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ತನ್ನೆಲ್ಲಾ ಆಕ್ಟೋಪಸ್ ಕೈಗಳನ್ನು ಬಳಸಿ ಹಿಡಿತದಲ್ಲಿ ಇಟ್ಟುಕೊಳ್ಳುತ್ತಿವೆ. ಅಭಿವೃದ್ದಿಹೊಂದುತ್ತಿರುವ ದೇಶವು ತನ್ನ ದೇಶದ ದೇಸೀಯತೆಯನ್ನು, ಸಂಸ್ಕೃತಿಯನ್ನು ಮರೆತು ಪರಕೀಯವಾಗುತ್ತಿರು ವುದನ್ನು ಮನಗಂಡ ಆ ದೇಶದ ವಿಚಾರವಾದಿಗಳು ತಮ್ಮ ನೆಲದ ದೇಸೀಯ ತಳಿ, ಬೆಳೆ, ಸಂಸ್ಕೃತಿ, ಭಾಷೆ ಇವುಗಳನ್ನು ಉಳಿಸಿ ಬೆಳೆಸಲು ಪರದಾಡುವಂತಾಗಿದೆ. ತಮ್ಮ ಜನಗಳು ವಿದೇಶದ ಮೋಹಕ್ಕೆ ಬಿದ್ದು ಕನಿಷ್ಠ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಜಾಗತೀಕರಣಕ್ಕೆ ಬಲಿಯಾಗುತ್ತಿದ್ದಾರೆ.

ಮುಖ್ಯವಾಗಿ ನಾವು ನಮ್ಮ ದೇಶದ ಬಗ್ಗೆ ಯೋಚಿಸಿದರೆ ದಿಗ್ಭ್ರಮೆಯಾಗುತ್ತದೆ. ಏಕೆಂದರೆ ಜಾಗತೀಕರಣವು ಈ ನಮ್ಮ ದೇಶದ ಬೆನ್ನೆಲುಬಾದ ಕೃಷಿ ಮತ್ತು ಕೃಷಿಕಾರ್ಮಿಕರ ಬದುಕಿಗೆ ಬೆಂಕಿ ಹಚ್ಚುತ್ತಿದೆ. ನಮ್ಮ ಸಂಪದ್ಭರಿತ ನೆಲವನ್ನೇ ನುಂಗುತ್ತಿದ್ದಾರೆ.

ಮುಖ್ಯವಾಗಿ ವಿದೇಶಿ ಕಂಪನಿಗಳು ರೈತರ ಬದುಕನ್ನು ಸುಧಾರಿಸುವಂತೆ ರೈತನ ಮನೆಗೆ ಮನಕ್ಕೆ ಗಾಳ ಹಾಕಿದರು. ಅವರ ನೆಲವನ್ನೇ ತಮ್ಮ ಬೀಜಗಳ ತಯಾರಿಕೆಗೆ ಬಳಸುತ್ತಿದ್ದಾರೆ. ಬೀಜಗಳನ್ನು ನಮ್ಮ ನೆಲದಲ್ಲಿಯೇ ಬೆಳೆಸಿ ಅವುಗಳಿಗೆ ೧ಕೆ.ಜಿ.ಗೆ ಇಂತಿಷ್ಟು, ಉದಾಹರಣೆಗೆ ೫೦.ರೂ. ಕೊಟ್ಟು ಖರೀದಿಸಿ, ನಮ್ಮ ರೈತರು ಬೆಳೆದ ಬೀಜಕ್ಕೆ ತಮ್ಮ ಕಂಪನಿಯ ಹೆಸರು, ದೇಶದ ಹೆಸರು ಹಾಕಿ ಮತ್ತೆ ನಮ್ಮ ರೈತರಿಗೆ ೧ ಕೆ.ಜಿ. ಬೀಜಕ್ಕೆ ರೂ.೧೮೦೦ರ ಹಾಗೆ ತಾವು ಲಾಭ ಪಡೆಯುತ್ತಿದ್ದಾರೆ. ಪಾಪ ಮುಗ್ಧರಾದ ನಮ್ಮ ಜನಕ್ಕೆ ಇದ್ಯಾವುದೂ ಅರಿವಿಗೆ ಬರುತ್ತಿಲ್ಲ. ಸದ್ಯಕ್ಕೆ ಅವರಿಗೆ ಒಂದೇ ಲಾಭವೆಂದರೆ ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕಿದೆ ಎಂಬ ಸಮಾಧಾನ. ಆದರೆ ಅದೇ ಬೀಜ ಕೊಂಡ ರೈತರಿಗೆ ಇನ್ನೊಂದು ದುರಂತ ಕಾದಿರುತ್ತದೆ. ತಾವು ತೆಗೆದುಕೊಂಡ ಬೀಜ ಕಳಪೆಯಾಗಿರುವುದು ಅವರ ಅರಿವಿಗೇ ಬರದೆ ಅದನ್ನು ಕೊಂಡು ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿ ಬಿತ್ತಿರುತ್ತಾರೆ. ಆದರೆ ಅದು ಎಲ್ಲ ಕಳಪೆ ಗುಣಮಟ್ಟದಿಂದಾಗಿ ಬಿತ್ತಿ ಬೆಳೆ ಬೆಳೆಯದೇ ನಾಶವಾಗಿ ಬಿತ್ತಿದ ರೈತರ ಸಾಲ ಶೂಲಕ್ಕೆ ಸಿಲುಕಿ ಇನ್ನೇನೂ ದಾರಿ ಕಾಣದೆ ಆತ್ಮಹತ್ಯೆ ಒಂದೇ ದಾರಿಯಾಗಿರುತ್ತದೆ.

ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಈ ಬೀಜ ತಯಾರಿಕೆಗೆ ಬಳಕೆ ಯಾಗುವ ಶ್ರಮ, ವಿದೇಶದ ಶ್ರಮವೇನೂ ಅಲ್ಲ. ಇಲ್ಲಿಯೇ ಇರುವ ನಮ್ಮ ಕೃಷಿ ಕಾರ್ಮಿಕರದು. ಈ ಬೀಜ ಕಸಿ ಮಾಡುವ ಕೆಲಸಕ್ಕೆ ಬಳಕೆಯಾಗುವುದು ಹೆಚ್ಚಾಗಿ ಕೃಷಿ ಕಾರ್ಮಿಕರ ಮಕ್ಕಳು. ಏಕೆಂದರೆ ಈ ಬೀಜದ ಕಸಿ ಕೆಲಸ ಮಾಡಲು ತುಂಬಾ ತಾಳ್ಮೆಬೇಕು. ಮತ್ತೆ ಬೇಗ ಬೇಗ ಕೆಲಸ ಮಾಡುವಂತಿರಬೇಕು. ದೊಡ್ಡವರಿಗೆ ಈ ವ್ಯವಧಾನವಿರುವುದಿಲ್ಲ. ಆದರೆ ಮಕ್ಕಳು ಈ ಕೆಲಸವನ್ನು ಬೇಸರವಿಲ್ಲದೆ ಆಡಿಕೊಳ್ಳುತ್ತಲೇ ಮಾಡಿಮುಗಿಸುತ್ತಿದ್ದಾರೆ. ಇದಕ್ಕೆ ಅವರು ಪಡೆಯುವ ಕೂಲಿ ಅವರ ಊಹೆಗೂ ನಿಲುಕದ್ದಾಗಿರುವುದರಿಂದ ಸಹಜ ವಾಗಿಯೇ ಮಕ್ಕಳನ್ನು ಪೋಷಕರು ಈ ಕೆಲಸಕ್ಕೆ ಕಳಿಸುತ್ತಿದ್ದಾರೆ. ಅವರ ಬಡತನವೊಂದೇ ಮುಖ್ಯ ಕಾರಣವಾಗಿರುವುದರಿಂದ ಅವರಿಗೆ ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ.

ಮಕ್ಕಳು ಕೂಡ ಕೂಲಿಯ ಆಕರ್ಷಣೆಯಿಂದ ಶಾಲೆ ಬಿಟ್ಟು ಬೀಜ ಕಸಿಮಾಡುವ ಕೆಲಸಕ್ಕೆ ಹೋಗುತ್ತಿದ್ದಾರೆ. ಇದರಿಂದ ಅವರ ವಿದ್ಯಾಭ್ಯಾಸಕ್ಕೆ ಮುಳುವಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸ, ಆರೋಗ್ಯದ ಕಡೆ ಗಮನಕೊಡಲು ಅಲ್ಲಿ ಯಾರೂ ಇಲ್ಲ. ಸಹಜವಾಗಿಯೇ ಇಂದಿನ ಪೀಳಿಗೆ ಶಿಕ್ಷಣದಿಂದ ವಂಚಿತವಾಗುತ್ತಿದೆ. ಇನ್ನೊಂದೆಡೆ ಭೂಮಾಲೀಕರು ದೊಡ್ಡ ವರಿಗಿಂತ ಚಿಕ್ಕಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ. ಏಕೆಂದರೆ ಮಕ್ಕಳು ಎಷ್ಟೇ ಕೆಲಸ ಮಾಡಿದರೂ ಅವರಿಗೆ ದಣಿವು ಆಗುವುದಿಲ್ಲ. ಅದೇ ದೊಡ್ಡವರು ಅರ್ಧಗಂಟೆ ಕೆಲಸ ಮಾಡಿದರೆ ೧೦ ನಿಮಿಷ ವಿಶ್ರಾಂತಿ ಪಡೆಯುತ್ತಾರೆ. ಪ್ರತಿಯೊಂದು ಹಳ್ಳಿಗಳಿಗೆ ದಾಳಿಇಟ್ಟ ವಿದೇಶಿ ಬಂಡವಾಳಶಾಹಿ ಕಂಪನಿಗಳು ಇಲ್ಲಿರುವ ಭೂಮಿಯನ್ನು ತಮ್ಮ ಬೀಜೋತ್ಪನ್ನಕ್ಕೆ ಬಳಸಿಕೊಳ್ಳುತ್ತವೆ. ಈ ರೀತಿ ಭೂಮಿ ಬಳಕೆಯಾಗುವುದರಿಂದ ದೇಸೀ ತಳಿಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಕೆಲವು ವರ್ಷ ಕಳೆದ ನಂತರ ದೇಸೀ ತಳಿಯು ಇತಿಹಾಸದ ಪುಟ ಸೇರುತ್ತದೆ.

ಪ್ರತಿಯೊಂದು ಜಿಲ್ಲೆಗಳಲ್ಲಿ ನಡೆಯುವ ಸೀಡ್ಸ್ ಕ್ರಾಸಿಂಗ್ ನಮ್ಮ ದೇಶದ ಮಕ್ಕಳ ಭವಿಷ್ಯವನ್ನೇ ಬಲಿ ತೆಗೆದುಕೊಳ್ಳುತ್ತದೆ. ಭೂಮಾಲೀಕರಾದವರು ತಮ್ಮ ಮಕ್ಕಳಂತೆ ಈ ಮಕ್ಕಳನ್ನು ಸಮಾನದೃಷ್ಟಿಯಿಂದ ನೋಡಿದ್ದೇ ಆದಲ್ಲಿ ಇಂತಹ ಅವಘಡಗಳನ್ನು ತಪ್ಪಿಸ ಬಹುದು.

ನಮ್ಮ ದೇಶದಲ್ಲಿ ಪ್ರತಿಯೊಂದು ಉತ್ಪನ್ನ ಘಟಕಗಳಲ್ಲಿ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇವುಗಳನ್ನು ನಿವಾರಿಸಲು ನಮ್ಮ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದರೂ ಅದು ಪ್ರಯೋಜನವಾಗಿಲ್ಲ.

ದಶಕಗಳಿಂದಲೂ ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ. ಈ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿವೆ. ಆದರೆ ಗಂಭೀರವಾದ ಯೋಚನೆಗಳು ನಡೆದದ್ದು ಇತ್ತೀಚೆಗಷ್ಟೇ ಎಂದು ಹೇಳಬಹುದು. ಮಕ್ಕಳ ನ್ಯಾಯ ಮಂಡಲಿ (J.J.B.) ಕೂಡ ಮಕ್ಕಳ ನ್ಯಾಯ ಕಾಯಿದೆಯಡಿ ಬರುತ್ತದೆ. ಇದು ಮಕ್ಕಳ ನ್ಯಾಯ ಕಾಯಿದೆಯ ಒಂದು ಪ್ರಮುಖ ಅಂಗ. ಕಾನೂನಿನೊಡನೆ ಸಂಘರ್ಷಕ್ಕೆ ಬಿದ್ದ ಮಕ್ಕಳಿಗೆ ಸಹಾಯ ಮತ್ತು ಆಶ್ರಯ ನೀಡುತ್ತದೆ. ಈ ವ್ಯವಸ್ಥೆಯಲ್ಲಿ ಒಬ್ಬ ನ್ಯಾಯಾಧೀಶರಿಗೆ ನೆರವಾಗಲು ಇಬ್ಬರು ಸಮಾಜ ಸೇವಾ ಕಾರ್ಯ ಕರ್ತರಿರುತ್ತಾರೆ. ರಾಜ್ಯದಲ್ಲಿ ಪ್ರಸ್ತುತ ಇಂತಹ ಐದು ಮಂಡಳಿಗಳು (ಮೈಸೂರು, ಗುಲ್ಬರ್ಗಾ, ಬೆಂಗಳೂರು, ಶಿವಮೊಗ್ಗ, ಧಾರವಾಡ) ಕಾರ್ಯನಿರ್ವಹಿಸುತ್ತವೆ. ಅವುಗಳಲ್ಲಿ ಮಕ್ಕಳ ಕಲ್ಯಾಣ ಸಮಿತಿ(C.W.C), ಮಕ್ಕಳ ನ್ಯಾಯ ಮಂಡಳಿ(J.J.B), ಬಾಲಕಾರ್ಮಿಕರ ಪದ್ಧತಿ ವಿರೋಧಿ ಆಂದೋಲನ, ಕರ್ನಾಟಕ (C.F.C.L.E) ಇವುಗಳೆಲ್ಲವೂ ಬಾಲಕಾರ್ಮಿಕರ ಪದ್ಧತಿಯನ್ನು ತೊಡೆದು ಹಾಕಲು ಅವಿರತವಾಗಿ ದುಡಿಯುತ್ತಿವೆ.

ಬಾಲಕಾರ್ಮಿಕರ ಪದ್ಧತಿ ನಿರ್ಮೂಲನೆ ಮಾಡುವ ಉದ್ದೇಶದಿಂದ ೨೦೦೧ರಲ್ಲಿ ರಾಜ್ಯ ಸರ್ಕಾರ ರೂಪಿಸಿದ್ದ ರಾಜ್ಯ ಬಾಲಕಾರ್ಮಿಕರ ಯೋಜನೆಯು (S.C.L.P) ನಿಗದಿತ ಗುರಿ ಮುಟ್ಟುವ ಯಾವ ಲಕ್ಷಣಗಳೂ ಕಂಡುಬರುತ್ತಿಲ್ಲ. ಮೇ. ೩೧.೨೦೦೧ರಂದು ಆರಂಭಗೊಂಡ S.C.L.P. ಯೋಜನೆಯು ಆರು ವರ್ಷಗಳಲ್ಲಿ ಅಂದರೆ ೨೦೦೭ರ ವೇಳೆಗೆ ತನ್ನ ಉದ್ದೇಶಿತ ಗುರಿಯನ್ನು ಮುಟ್ಟಬೇಕಾಗಿದೆ. ಆದರೆ, ಈ ಯೋಜನೆಯು ತನ್ನ ಗುರಿಮುಟ್ಟುವ ಲಕ್ಷಣಗಳು ತೀರಾ ಕಡಿಮೆ ಎನಿಸುತ್ತದೆ. ಆದರೆ ಒಂದು ಹೆಮ್ಮೆ ಪಡುವ ಸಂಗತಿಯೆಂದರೆ ಈ ರೀತಿಯ ಯೋಜನೆಯನ್ನು ರೂಪಿಸುವಲ್ಲಿ ಕರ್ನಾಟಕವೇ ಪ್ರಥಮ. ಆದರೆ, ಇದು ನಿಯೋಜಿತ ಗುರಿ ಮುಟ್ಟದಿರುವುದೇ ನಿರಾಶದಾಯಕವಾಗಿದೆ.

ರಾಜ್ಯದಲ್ಲಿ ಕೇಂದ್ರ ರಾಷ್ಟ್ರೀಯ ಬಾಲಕಾರ್ಮಿಕರ ಯೋಜನೆಯು (N.C.L.P) ಮತ್ತು S.C.L.P ಎಂಬ ಎರಡು ಯೋಜನೆಗಳು ಜಾರಿಯಲ್ಲಿದ್ದರೂ ಶಿಕ್ಷಣದಿಂದ ವಂಚಿತ ಬಾಲಕಾರ್ಮಿಕರ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿ ಇಳಿಕೆ ಕಂಡಿಲ್ಲ ಎನ್ನುವುದೇ ವಿಷಾದನೀಯ. ೨೦೦೧ರ ಜನಗಣತಿಯಲ್ಲಿ ಕಂಡುಬಂದ ಅಂಶವೇನೆಂದರೆ ೫ ರಿಂದ ೧೪ ವರ್ಷದೊಳಗಿನ ೧೨.೬೬ಕೋಟಿ ಮಕ್ಕಳು ದೇಶದಾದ್ಯಂತ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ೧೯೮೬ರ ಬಾಲಕಾರ್ಮಿಕ ಪದ್ಧತಿ ನಿಷೇಧವು ಸಂವಿಧಾನದ ೨೪ನೇ ಪರಿಚ್ಛೇದದಲ್ಲಿ ಅಡಕವಾಗಿದೆ. ಇದರ ಪ್ರಕಾರ ವರ್ಷದೊಳಗಿನ ಮಕ್ಕಳು ದುಡಿಮೆ ಮಾಡುವಂತಿಲ್ಲ. ಮತ್ತು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಇದನ್ನು ಉಲ್ಲಂಘಿಸಿದರೆ ದುಡಿಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ೨೦,೦೦೦ ದಂಡ ಮತ್ತು ಜೈಲಾಗಬಹುದು. ಆದರೆ ಸರ್ಕಾರ ಇಂತಹ ಬಿಗಿ ಕಾನೂನು ಜಾರಿಗೆ ತಂದಿದ್ದರೂ ಸಮಾಜದಲ್ಲಿ ಯಾವುದೇ ಬದಲಾವಣೆ ಆಗಿಲ್ಲವೆನ್ನಬಹುದು. ಕಾರಣ ಪೋಷಕರ ಬಡತನ, ಅನಕ್ಷರತೆ.

೧೪ ವರ್ಷ ಮೀರಿದ ಮಕ್ಕಳು ಕನಿಷ್ಠ ವೇತನ ಕಾಯಿದೆಯಡಿ ದುಡಿಯಲು ಅವಕಾಶವಿದೆ. ಆದರೆ ಮಕ್ಕಳನ್ನು ಕೇವಲ ೬ ಗಂಟೆಗಳ ಕಾಲ ಮಾತ್ರ ದುಡಿಸಿಕೊಳ್ಳಲು ಅವಕಾಶವಿದೆ. ನಿಯಮ ಉಲ್ಲಂಘಿಸಿದರೆ ಮಾಲೀಕರಿಗೆ ೧೮೦೦ ದಂಡ ವಿಧಿಸಲಾಗುವುದು ಎಂದು ನ್ಯಾಯ ವಾದಿ ಶ್ರೀಮತಿ ಕವಿತಾ ಅವರು ಹೇಳುತ್ತಾರೆ.

ನಾವು ದುಡಿಯುವ ಕ್ಷೇತ್ರಗಳನ್ನು ಎರಡು ವಿಧವಾಗಿ ವಿಂಗಡಿಸುತ್ತೇವೆ. ಒಂದು ಅಪಾಯ ಕಾರಿ ಅಲ್ಲದ ವಲಯ ಎರಡನೆಯದು ಅಪಾಯಕಾರಿ ವಲಯ ಎಂಬುದಾಗಿ. ಅಪಾಯಕಾರಿ ವಲಯವೆಂದರೆ ಕೆಮಿಕಲ್ ಪ್ಯಾಕ್ಟರಿಗಳು, ಸಿಡಿಮದ್ದು ತಯಾರಿಕಾ ಘಟಕಗಳು, ಮಂಡಕ್ಕಿ ಬಟ್ಟಿಗಳು ಮುಂತಾದವುಗಳು ಅಪಾಯಕಾರಿಯಲ್ಲದ ಕ್ಷೇತ್ರವೆಂದರೆ ಹೊಲಗದ್ದೆಗಳು. ದಿನನಿತ್ಯ ಪತ್ರಿಕೆಗಳಲ್ಲಿ ಪ್ರಕಟವಾಗುವಂತಹ ಅಪಾಯಕಾರಿ ವಲಯಗಳಲ್ಲಿ ಕೆಲಸ ಮಾಡುವ ಮಕ್ಕಳ ದುರ್ಮರಣ ಹಾಗೂ ವಾಸಿಯಾಗದಂತಹ ಕಾಯಿಲೆಗಳಿಗೆ ತುತ್ತಾಗುವುದು ನಮಗೆಲ್ಲ ತಿಳಿದ ಸಂಗತಿಯೆ ಆಗಿದೆ. ಇದಕ್ಕೆಲ್ಲಾ ಮೂಲ ಕಾರಣ ಬಡತನ, ಹಾಗೂ ಅವಿಭಕ್ತ ಕುಟುಂಬಗಳ ಪರಿಣಾಮ, ತಂದೆ ತಾಯಿಗಳು ಅನಕ್ಷರಸ್ಥರಾಗಿದ್ದು ಅವರ ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚಿಗೆ ಗಮನ ಹರಿಸುವುದಿಲ್ಲ. ದೇಶದಲ್ಲಿ ಅನಕ್ಷರತೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ಮಕ್ಕಳು ಬಾಲಕಾರ್ಮಿಕತೆಯಿಂದ ಹೊರಬರಲು ಸಾಧ್ಯವಿಲ್ಲ. “ಸಾಕ್ಷರತೆ ಮಾನವೀಕರಣದ ಸಾಧನ. ಅಕ್ಷರ ಜ್ಞಾನದ ಮೂಲಕ ಮಾನವೀಕರಣಗೊಳಿಸಬೇಕು. ಪ್ರಜ್ಞೆಯ ಹೊಸ ಪ್ರಪಂಚಕ್ಕೆ ಪ್ರವೇಶಿಸಬೇಕು” ಎಂದು ಬ್ರೆಜಿಲ್‌ನ ಸಾಹಿತಿ ಫಾಲೊ ಫೆರೇರೆ ಹೇಳಿದ್ದಾರೆ.

ಅತೀ ಹೆಚ್ಚು ಬಾಲಕರು ಸ್ವತಃ ತಮ್ಮ ತಂದೆ ತಾಯಿಗಳಿಂದ ಶೋಷಣೆಗೆ ಒಳಗಾಗಿವೆ. ತಂದೆ ತನ್ನ ದುರಾಭ್ಯಾಸ ಚಟಗಳನ್ನು ಪೂರೈಸಿಕೊಳ್ಳಲು ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಕಳಿಸುವ ಪ್ರವೃತ್ತಿ ಪ್ರತಿಯೊಂದು ಊರುಗಳಲ್ಲಿ ನಡೆದೇ ಇದೆ. ಅಸಹಾಯಕ ಅಂಗವಿಕಲ ತಂದೆತಾಯಿಗಳು ಅನಿವಾರ್ಯವಾಗಿ ಮಕ್ಕಳನ್ನು ದುಡಿಯಲು ಕಳುಹಿಸುತ್ತಾರೆ.

ಸಮಾಜದಲ್ಲಿ ಬಾಲಕಾರ್ಮಿಕರ ಸ್ಥಿತಿಯು ಒಂದು ಮುಖವಾದರೆ, ಇನ್ನೊಂದು ಮುಖವಾಗಿ ಬಾಲ್ಯವಿವಾಹ, ಮಕ್ಕಳ ಮೇಲೆ ಅತ್ಯಾಚಾರ, ದೇವದಾಸಿ ಪದ್ಧತಿ ಇವು ಸಮಾಜವನ್ನು ಕಾಡುತ್ತಿವೆ. ಉತ್ತರ ಕರ್ನಾಟಕದಲ್ಲಿ ದೇವದಾಸಿ ಪದ್ಧತಿಯು ಅಲ್ಪಪ್ರಮಾಣದಲ್ಲಿ ನಿಗೂಢ ವಾಗಿ ಈಗಲೂ ಮುಂದುವರೆಯುತ್ತಿದೆ.

ಬಾಲಕಾರ್ಮಿಕರು ಸೃಷ್ಟಿಯಾಗಲು ಮೂರು ಕಾರಣಗಳನ್ನು ನಾವು ನೋಡಬಹುದಾಗಿದೆ.

೧. ಪೋಷಕರು ೨. ಸರ್ಕಾರ ೩. ಸಂಘ ಸಂಸ್ಥೆಗಳು.

ಮೊದಲನೆಯ ಕಾರಣವನ್ನು ನಾವು ಪರಿಶೀಲಿಸಿದರೆ ತಂದೆ ತಾಯಿಗಳು ತಮ್ಮ ಬಡತನಕ್ಕೆ ಮತ್ತು ಜೀವನದ ಹೊಣೆಯನ್ನು ಸರಿದೂಗಿಸಲು ಮಕ್ಕಳನ್ನು ಕೆಲಸಕ್ಕೆ, ಜೀತಕ್ಕೆ ಇಡುತ್ತಾರೆ. ಅಲ್ಪ ಕೂಲಿಯು ಸಂಸಾರವನ್ನು ನೀಗಿಸಲು ಸಾಧ್ಯವಾಗುವುದಿಲ್ಲ. ಶಿಕ್ಷಣಕ್ಕಿಂತ ಹಸಿವು ಅಲ್ಲಿ ಪ್ರಧಾನವಾಗುತ್ತದೆ.

ಎರಡನೆಯದಾಗಿ ಸಂಘ ಸಂಸ್ಥೆಗಳು ‘ಬೇಲಿಯೇ ಎದ್ದು ಹೊಲ ಮೇದಂತೆ’ ಎಂಬ ಗಾದೆಯಂತೆ ನಡೆದುಕೊಳ್ಳುತ್ತವೆ. ಮಕ್ಕಳ ಅಭಿವೃದ್ದಿಗಾಗಿ ವಿದೇಶದಿಂದ ಸಂಘಸಂಸ್ಥೆಗಳಿಗೆ ಹಣದ ಹೊಳೆಯೇ ಹರಿಯುತ್ತದೆ. ಆದರೆ ಎನ್.ಜಿ.ಓ.ಗಳು ಹಣದ ವ್ಯಾಮೋಹಕ್ಕೆ ಬಿದ್ದು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಮಕ್ಕಳ ಶ್ರೇಯೋಭಿವೃದ್ದಿಗಾಗಿ ಟಿ.ಡಿ.ಎಚ್. ಡ್ರೇಡೇಸ್ ಹೋಂ ತುಂಬಾ ಸಹಾಯ ಮಾಡುತ್ತವೆ. ಆದರೆ ಇದು ಸಮರ್ಪಕವಾಗಿ ಬಳಕೆ ಯಾಗುತ್ತಿಲ್ಲ.

ಗಣಿಗಾರಿಕೆ ಮತ್ತು ಬಾಲಕಾರ್ಮಿಕರು

ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿಯೇ ನಾಯಕ ಸಮುದಾಯವು ಎಲ್ಲಾ ಕ್ಷೇತ್ರದಲ್ಲಿ ತಮ್ಮ ಪ್ರಾತಿನಿಧ್ಯವನ್ನು ಹೊಂದಿದ್ದಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ನಾಯಕ ಸಮುದಾಯದಿಂದಲೇ ಪ್ರತಿಯೊಂದು ಕ್ಷೇತ್ರವು ಕಾರ್ಯೋನ್ಮುಖವಾಗಿದೆ. ಕೈಗಾರಿಕಾ ಘಟಕ ದಲ್ಲಾಗಲಿ, ಕೃಷಿ ಕ್ಷೇತ್ರದಲ್ಲಾಗಲಿ, ಮಾರುಕಟ್ಟೆಯಲ್ಲಾಗಲಿ ಬಹುಪಾಲು ನಾಯಕ ಸಮುದಾಯದವರೇ ಇದ್ದಾರೆ. ಹಾಗೆಯೇ ಸಮಾಜಸೇವೆಯಲ್ಲಿ ಜಾಗೃತ ನಾಯಕ ಬಳಗ ದವರು ಸಕ್ರಿಯವಾಗಿ ಭಾಗವಹಿಸುತ್ತಾರೆ. ಕುಂದುಕೊರತೆಗಳಿಗೆ ಅನ್ಯಾಯಗಳ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ನಿಷ್ಠುರವಾಗಿ ಪ್ರತಿಭಟಿಸುತ್ತಾರೆ.

ನಾಯಕ ಸಮುದಾಯವು ಕೃಷಿ ಚಟುವಟಿಕೆಯಲ್ಲಿ ಹೆಚ್ಚು ಸಹಭಾಗಿಗಳಾಗಿದ್ದಾರೆ. ಕೃಷಿಯೇ ಅವರ ಮೂಲ ಆದಾಯವಾಗಿದೆ. ಇಂತಹ ಸಮುದಾಯವು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಅಷ್ಟೇ ಅಲ್ಲದೇ ಇಂದಿನ ಬಹುಪಾಲು ಮಕ್ಕಳು ಶಾಲೆಯ ಮುಖವನ್ನೇ ನೋಡಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.

ಇಂದಿನ ಆಧುನಿಕ ಯುಗದಲ್ಲಿಯೂ ಸಹ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾ ರೆಂದರೆ, ಅದು ಮಾನವ ಕುಲಕ್ಕೆ ಅವಮಾನಕರ ಸಂಗತಿಯಾಗಿದೆ. ಸರ್ಕಾರವು ಅಕ್ಷರ ಅಭಿಯಾನದ ಮುಖಾಂತರ ಪ್ರತಿಯೊಂದು ಮಕ್ಕಳು ಕನಿಷ್ಟ ವಿದ್ಯಾರ್ಹತೆಯನ್ನು ಹೊಂದ ಬೇಕು ಎಂದು ಕಾನೂನನ್ನು ಜಾರಿ ಮಾಡಿದ್ದರು ಅದು ಯಶಸ್ವಿಯಾಗಿಲ್ಲ. ಇದಕ್ಕೆ ಮೂಲ ಕಾರಣ ಹೊಸಪೇಟೆ ಮತ್ತು ಸಂಡೂರು ತಾಲ್ಲೂಕಿನಲ್ಲಿ ನಡೆಯುವ ಗಣಿಗಾರಿಕೆ. ಇದು ಬಹಳಷ್ಟು ಮಕ್ಕಳನ್ನು ಶಾರೀರಿಕವಾಗಿ ಮತ್ತು ಶೈಕ್ಷಣಿಕವಾಗಿ ಭೂಗತ ಮಾಡಿದೆ. ಹೊಸಪೇಟೆ ತಾಲ್ಲೂಕು ಮತ್ತು ಸಂಡೂರಿನ ಸುತ್ತಮುತ್ತಲಿನ ಹಳ್ಳಿಗಳಿಂದ ತಾಲ್ಲೂಕುಗಳಿಂದ ಶೇಕಡ ೩೦ಭಾಗ ನಾಯಕ ಸಮುದಾಯದವರು ವಲಸೆ ಬಂದು ಗಣಿಗಾರಿಕೆಯಲ್ಲಿ ಕೆಲಸಮಾಡು ತ್ತಿದ್ದಾರೆ. ಇವರ ಜೊತೆಯಲ್ಲಿ ಮಕ್ಕಳನ್ನೂ ಸಹ ಕರೆತಂದಿದ್ದಾರೆ. ಈ ಎಲ್ಲಾ ಮಕ್ಕಳು ಶಾಲೆಯನ್ನು ಬಿಟ್ಟು ಗಣಿಗಳಲ್ಲಿ ಹ್ಯಾಂಡ್ ಕಟಿಂಗ್, ಡಿಗ್ಗಿಂಗ್, ಜರಡಿ ಹಿಡಿಯುವುದು, ಬಿದ್ದ ಕಲ್ಲುಗಳನ್ನು ಆಯುವುದು ಹೀಗೆ ಅಪಾಯದ ವಲಯಗಳಲ್ಲಿ ಕೆಲಸವನ್ನು ಮಾಡುತ್ತಿ ದ್ದಾರೆ. ಈ ಮಕ್ಕಳು ದಿನಾಲೂ ಉಸಿರಾಡುವುದು ದೂಳನ್ನು, ಉಸಿರುಬಿಡುವುದು ದೂಳನ್ನು. ಹೀಗಾಗಿ ಕೆಲವು ಮಕ್ಕಳಲ್ಲಿ ಭಯಾನಕ ಕಾಯಿಲೆಗಳಾದಂತಹ, ಅಸ್ತಮಾ, ಕಿಡ್ನಿತೊಂದರೆ, ಕಣ್ಣಿನ ತೊಂದರೆ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಬಳ್ಳಾರಿಯ ವೈದ್ಯತಜ್ಞರು ಹೇಳುವ ಪ್ರಕಾರ ಶೆೀಕಡ ೩೦ರಷ್ಟು ಮಕ್ಕಳು ಇಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆಂದು ಹೇಳಿದ್ದಾರೆ.

ಮಕ್ಕಳಿಂದ ಸಿಗುವ ಅಲ್ಪಸ್ವಲ್ಪ ಬಿಡಿಗಾಸು ತಂದೆ ತಾಯಿಗಳಿಗೆ ಸ್ವಲ್ಪಮಟ್ಟಿಗೆ ನೆರವಾಗು ತ್ತದೆ. ಕೆಲವು ಮಕ್ಕಳು ತಮಗೆ ಸಿಗುವ ಹಣದಿಂದ ದುಶ್ಚಟಗಳ ದಾಸರಾಗಿದ್ದಾರೆ. ತಂದೆ ತಾಯಿಗಳು ಧೂಳಿನಿಂದ ಹಾಗೂ ಕೆಲಸದಿಂದ ತುಂಬಾ ದಣಿಯುವುದರಿಂದ ಅವರು ಬೆಳಗಿ ನಿಂದಲೇ ಸಾರಾಯಿ ಕುಡಿಯುತ್ತಾ ಕೆಲಸ ಮಾಡುತ್ತಿರುತ್ತಾರೆ. ಒಬ್ಬ ಮನುಷ್ಯ ಕನಿಷ್ಟವೆಂದರೂ ೪ ರಿಂದ ೫ ಪಾಕೆಟ್ ಸಾರಾಯಿ ಕುಡಿಯುತ್ತಾನೆ. ತಾವು ಕೆಲಸ ಮಾಡುವ ಸ್ಥಳಕ್ಕೆ ಸಾರಾಯಿ ಪಾಕೆಟ್‌ಗಳು ಬಂದು ಸೇರುತ್ತವೆ. ಇವರು ದುಡಿದ ೭೫ ಭಾಗವನ್ನು ಇಲ್ಲೇ ಖರ್ಚುಮಾಡು ತ್ತಾರೆ. ಉಳಿದ ಅಲ್ಪಸ್ವಲ್ಪ ಹಣವನ್ನು ಊರಿಗೆ ಕೊಂಡೊಯ್ಯುತ್ತಾರೆಂದು ಗಣಿ ಮಾಲಿಕರೇ ಹೇಳುತ್ತಾರೆ.

ಮೊದಲು ಮಾನ್ಯತೆ ಪಡೆದು ಗಣಿಗಾರಿಕೆಯನ್ನು ನಡೆಸುತ್ತಿದ್ದ ಸಮಯದಲ್ಲಿ ವಲಸೆ ಬರುವವರ ಪ್ರಮಾಣ ಕಡಿಮೆ ಇತ್ತು. ಆದರೆ ಮೂರುವರ್ಷಗಳ ಹಿಂದೆ ಹೊರರಾಷ್ಟ್ರಗಳ ಜೊತೆ ಮಾಡಿಕೊಂಡ ಅದಿರಿನ ಮಾರಾಟದ ಒಪ್ಪಂದದಿಂದಾಗಿ ಮಾನ್ಯತೆಯನ್ನು ಪಡೆಯದೇ ಗಣಿಗಾರಿಕೆಯನ್ನು ಶುರುಮಾಡಿದ್ದರು. ಇದರ ಪರಿಣಾಮವಾಗಿ ಕಾರ್ಮಿಕರ ಅಭಾವವು ಹೆಚ್ಚಾಯಿತು. ಇದರಿಂದಾಗಿ ಗಣಿಮಾಲೀಕರು ಕೂಲಿಯ ಪ್ರಮಾಣವನ್ನು ಹೆಚ್ಚಿಸಿದರು. ಇದರಿಂದ ಸುತ್ತಮುತ್ತಲಿನ ಜಿಲ್ಲೆಗಳಿಂದ ಭೂರಹಿತ ಕುಟುಂಬಗಳು ಮತ್ತು ಸಣ್ಣ ಹಿಡುವಳಿ ದಾರರು ವಲಸೆ ಬಂದು ಗಣಿಗಾರಿಕೆ ನಡೆಸುವ ಸ್ಥಳದಲ್ಲಿ ಬೀಡುಬಿಟ್ಟರು.

ಮೊದಲೆ ಹೇಳುವಂತೆ ಇವರು ಹೆಚ್ಚಾಗಿ ನಾಯಕ ಸಮುದಾಯದವರೇ ಆಗಿದ್ದಾರೆ. ಈ ಕುಟುಂಬಗಳಲ್ಲಿರುವ ಮಕ್ಕಳು ಶಾಲೆಯಲ್ಲಿ ಅಕ್ಷರ ಕಲಿಯಬೇಕಾದ ಸಮಯದಲ್ಲಿ ಕಲ್ಲುಕುಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಇವರ ದುಡಿಮೆಯಿಂದ ಬಂಡವಾಳಶಾಹಿ ಗಳು ಇನ್ನೂ ಹೆಚ್ಚು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ. ಆದರೆ ಈ ಕಾರ್ಮಿಕರು ಮಕ್ಕಳ ಕಡೆ ತಿರುಗಿಯೂ ನೋಡುತ್ತಿಲ್ಲ. ಕನ್ನಡ ವಿ.ವಿ.ಯಪ್ರಾಧ್ಯಾಪಕರಾದ ಡಾ.ಟಿ.ಆರ್.ಚಂದ್ರ ಶೇಖರ ಅವರು ಹೇಳುವಂತೆ ಈ ಶ್ರೀಮಂತವರ್ಗ ತಿನ್ನವ ಅನ್ನ ಹೇಗೆ ಬಂತು ಎಂದು ಕನಿಷ್ಠ ಯೋಚನೆ ಮಾಡದೆ ಬರೀ ಹಣದ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂದು ಬಂಡವಾಳಶಾಹಿಗಳ ವಿರುದ್ಧ ಧ್ವನಿಎತ್ತಿದ್ದಾರೆ.

ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ನಾವು ಸರ್ವೆ ಮಾಡಿದಾಗ ನಾಯಕ ಕುಟುಂಬಗಳನ್ನು ಹೊರೆತುಪಡಿಸಿ ಬಹುಪಾಲು ಕುಟುಂಬಗಳು ತಮ್ಮ ಮಕ್ಕಳನ್ನು ಶಾಲೆಯಿಂದ ವಂಚಿತರ ನ್ನಾಗಿಸಿಲ್ಲ. ಈ ರೀತಿ ಕುಟುಂಬಗಳು ವಲಸೆ ಬರಲು ಮುಖ್ಯ ಕಾರಣಗಳನ್ನು ಹುಡುಕಿದಾಗ ಕೆಲವು ಸತ್ಯಗಳು ನಮಗೆ ಗೋಚರವಾಗುತ್ತವೆ.

೧. ಮೊದಲನೆಯದಾಗಿ ಹೇಳುವುದಾದರೆ ಭೂಮಿ ಇಲ್ಲದೇ ಇರುವುದು.

೨.  ಹಳ್ಳಿಗಳಲ್ಲಿ ಕೊಡುವ ಕೂಲಿ ಅಲ್ಪಪ್ರಮಾಣದ್ದಾಗಿರುತ್ತದೆ.

೩. ಬೆಳೆಗೆ ತಕ್ಕ ಬೆಲೆ ಸಿಗದೇ ಇರುವುದು.

೪. ಸಾಲಗಾರರ ಕಾಟ.

೫. ಸಕಾಲಕ್ಕೆ ಮಳೆ ಬಾರದೇ ಇರುವುದು.

ಹೀಗೆ ಅನೇಕ ಕುಟುಂಬಗಳು ವಲಸೆ ಬರಲು ಕಾರಣೀಭೂತವಾಗಿವೆ. ಹೀಗೆ ಬಂದಂತ ಕುಟುಂಬಗಳಿಗೆ ತುರ್ತಾಗಿ ಆಸ್ಪತ್ರೆಗಳಿಲ್ಲ. ಏನಾದರೂ ಅಪಘಾತ ಸಂಭವಿಸಿದರೆ ಕಾಡಿನಿಂದ ನಾಡಿಗೆ ಅವರನ್ನು ತರುವುದರಲ್ಲಿಯೇ ಅವರ ಪ್ರಾಣಪಕ್ಷಿ ಹಾರಿಹೋಗಿರುತ್ತದೆ. ಶುದ್ಧವಾದ ಕುಡಿಯುವ ನೀರಿನ ಸೌಲಭ್ಯವಿಲ್ಲ. ಗಣಿಮಾಲೀಕರಾಗಲಿ ಸರ್ಕಾರದವರಾಗಲಿ ಅದರ ಕಡೆ ಗಮನ ಹರಿಸಿಲ್ಲ. ಈ ಕುಟುಂಬಗಳು ನಾಲ್ಕು ತಿಂಗಳಿಗೊಮ್ಮೆ ಅಥವಾ ಆರುತಿಂಗಳಿಗೊಮ್ಮೆ ತಮ್ಮ ಊರಿಗೆ ಹೋಗಿ ಬರುತ್ತವೆ. ಅಥವಾ ತಿರಿಗಿಬಾರದನೇ ಇರಬಹುದು. ಅಷ್ಟರಲ್ಲಿ ಮಕ್ಕಳು ಕಲಿತ ಅಕ್ಷರ ಜ್ಞಾನವನ್ನು ಮರೆಯುತ್ತಾರೆ. ಈ ರೀತಿ ಶಾಲೆ ಬಿಟ್ಟ ಮಕ್ಕಳು ಪುನಃ ಶಾಲೆಗೆ ಹೋಗಲು ಹಿಂಜರಿಯುತ್ತಾರೆ. ಅಲ್ಲಿಗೆ ವಿದ್ಯಾಭ್ಯಾಸವೆಂಬ ಬದುಕು ಕೊನೆಗೊಂಡಂ ತಾಗುತ್ತದೆ. ಪ್ರತಿಯೊಂದು ಗಣಿಕ್ಷೇತ್ರದಲ್ಲಿ ನಾಯಕ ಸಮುದಾಯವಲ್ಲದೇ ಇನ್ನುಳಿದ ಸಮುದಾಯದವರ ಮಕ್ಕಳ ಕಥೆಯೂ ಇದೇ ಆಗಿದೆ. ಇಲ್ಲಿನ ಲೇಬರ್ ಇನ್‌ಸ್ಪೆಕ್ಟರ್‌ಗಳು, ಸಿ.ಡಿ.ಪಿ.ಓ.ಮುಂತಾದ ಅಧಿಕಾರಿಗಳು ಕಂಡುಕಾಣದಂತೆ ಕುಳಿತಿದ್ದಾರೆ.

ಇತ್ತೀಚೆಗೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಗಣಿಗಾರಿಕೆಯ ಹಗರಣದ ಪರಿಣಾಮವಾಗಿ ಇಲ್ಲಿನ ಪ್ರತಿಯೊಂದು ಚಟುವಟಿಕೆಯು ರಾಷ್ಟ್ರಮಟ್ಟದಲ್ಲಿ ಪ್ರಚಾರವಾಗಿ ಕೆಲವು ಅಧಿಕಾರಿ ಗಳು ಎಚ್ಚೆತ್ತು ಸ್ವಲ್ಪಮಟ್ಟಿಗೆ ಸುಧಾರಣೆ ಮಾಡಿದರು. ಆದರೂ ಅದು ತಾತ್ಕಾಲಿಕವಾಗಿದೆ. ಕೆಲವು ಕಡೆ ನಡೆಸಿದ ದಾಳಿಗಳಿಂದ ಕ್ರಷರ್‌ಗಳು ಸೀಜ್ ಆಗಿವೆ. ಅವುಗಳ ಅಕ್ಕಪಕ್ಕದಲ್ಲಿ ಮತ್ತೆ ಮುಂದುವರೆದಿವೆ. ಕೆಲವು ಸಾಮಾಜಿಕ ಸೇವಾ ಸಂಸ್ಥೆಗಳಾದ ಡಾನ್‌ಬಾಸ್ಕೋ, ಸೀಡ್ಸ್, ಅಭಿವೃದ್ದಿ ಸಂಸ್ಥೆಗಳು ಗಣಿಗಾರಿಕೆಯ ಸ್ಥಳಗಳಲ್ಲಿ ಟೆಂಟ್ ಶಾಲೆಗಳನ್ನು ತೆರೆದಿವೆ. ಅಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ. ಆದರೆ ಇವು ಕೆಲವೇ ಮಕ್ಕಳಿಗೆ ಮಾತ್ರ ಉಪಯೋಗಕರವಾಗಿವೆ. ಶೇ. ೮೦ರಷ್ಟು ಭಾಗ ಮಕ್ಕಳು ಈ ರೀತಿಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸರ್ಕಾರದವರು ಸಹ ಕೆಲವು ಕಡೆಗಳಲ್ಲಿ ಟೆಂಟ್ ಶಾಲೆಗಳನ್ನು ತೆರೆದು, ಸ್ವಲ್ಪಮಟ್ಟಿಗೆ ಮಕ್ಕಳಿಗೆ ಶಿಕ್ಷಣ ಸಿಗುವಂತ ವ್ಯವಸ್ಥೆಯನ್ನು ಮಾಡಿದ್ದಾರೆ. ಇದು ಕೇವಲ ಅನೌಪಚಾರಿಕವಾಗಿದೆ.

ಕೆಲವು ವರ್ಷಗಳ ಹಿಂದೆ ಕಾರ್ಮಿಕ ಸಚಿವರಾಗಿದ್ದ ಇಕ್ಬಾಲ್ ಅನ್ಸಾರಿ ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಭೇಟಿಕೊಟ್ಟು ಅಲ್ಲಿನ ಮಕ್ಕಳ ಕಷ್ಟವನ್ನು ಕಣ್ಣಾರೆ ಕಂಡು ಕೆಲವು ಅಧಿಕಾರಿಗಳನ್ನು ಮತ್ತು ಗಣಿಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಅದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಯಿತು. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ವಿಫಲರಾದರು. ಹೀಗೆಯೇ ಇದು ಮುಂದುವರೆದರೆ ಇಲ್ಲಿ ಬಂಡವಾಳಶಾಹಿಗಳು ಹೆಚ್ಚು ಹೆಚ್ಚು ಶ್ರೀಮಂತ ರಾಗುತ್ತಾರೆ. ಕೂಲಿಕಾರ್ಮಿಕರು ಕಾರ್ಮಿಕರಾಗಿಯೆ ಉಳಿಯುತ್ತಾರೆ. ಮಕ್ಕಳು ಅನಕ್ಷರಸ್ಥರಾಗಿ ಮಾರ್ಪಡುವುದರಲ್ಲಿ ಸಂಶಯವಿಲ್ಲ.

ಇವುಗಳಿಗೆ ಮೂಲ ಪರಿಹಾರವನ್ನು ಸ್ವಲ್ಪುಟ್ಟಿಗೆ ಕಂಡುಕೊಳ್ಳಬಹುದಾಗಿದೆ. ಮೊದಲು ಸಮುದಾಯವನ್ನು ಒಂದುಕಡೆ ಸೇರಿಸಿ, ಮಕ್ಕಳ ಹಕ್ಕುಗಳ ಬಗ್ಗೆ ತಿಳುವಳಿಕೆಯನ್ನು ನೀಡು ವುದು. ಕಾನೂನಿನಲ್ಲಿ ಮಕ್ಕಳಿಗೆ ತಮ್ಮದೇ ಆದಂತಹ ಹಕ್ಕುಬಾಧ್ಯತೆಗಳಿವೆ. ಅಮೇರಿಕಾವನ್ನು ಹೊರತುಪಡಿಸಿ ವಿಶ್ವದ ಎಲ್ಲಾ ರಾಷ್ಟ್ರಗಳು ಮಕ್ಕಳ ಹಕ್ಕು ಮತ್ತು ಅಭಿವೃದ್ದಿಯ ಬಗ್ಗೆ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಮಕ್ಕಳ ಹಕ್ಕುಗಳನ್ನು ನಾವುಗಳು ಕಿತ್ತುಕೊಂಡು ಅವರನ್ನು ಬೇರೆಯವರ ಮನೆಯಲ್ಲಿ ಜೀತಕ್ಕೆ, ಬೇರೆ ಸ್ಥಳಗಳಿಗೆ ಸಾಗಾಣಿಕೆ ಮಾಡುವುದಾಗಲಿ, ಬಾಲ್ಯ ವಿವಾಹ ಪದ್ಧತಿ…ಹೀಗೆ ಅಮಾನವೀಯ ಕೃತ್ಯಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ. ಇಂತಹ ಘಟನೆಗಳು ಪ್ರತಿಹಳ್ಳಿಗಳಲ್ಲಿ ಮತ್ತು ಪ್ರತಿ ಪಟ್ಟಣಗಳಲ್ಲಿ ನಡೆಯುತ್ತಿರುತ್ತವೆ. ಸರ್ಕಾರವು ಮಕ್ಕಳ ಹಕ್ಕುಗಳನ್ನು ಸರಿಯಾದ ರೀತಿಯಲ್ಲಿ ಎಲ್ಲರಿಗೂ ತಲುಪುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಅವುಗಳನ್ನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆಯನ್ನು ಜಾರಿಮಾಡಿದ್ದರೂ ಅವುಗಳು ಸ್ವಲ್ಪಮಟ್ಟಿಗೆ ಮಕ್ಕಳಿಗೆ ಅನುಕೂಲವಾಗುತ್ತಿದ್ದವೇನೋ. ಅಷ್ಟೇ ಅಲ್ಲ, ಪ್ರತಿ ಹಳ್ಳಿಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಬೀದಿನಾಟಕ ಮುಖಾಂತರವಾಗಲಿ, ಭಿತ್ತಿಪತ್ರಗಳ ಮುಖಾಂತರವಾಗಲಿ ಜನರಿಗೆ ಮನಮುಟ್ಟುವಂತೆ ವ್ಯವಸ್ಥೆಯನ್ನು ಮಾಡಬೇಕು. ಮೈನಿಂಗ್ ನಡೆಯುವ ಸ್ಥಳಗಳಲ್ಲಿ ಶಾಶ್ವತವಾದಂತ ಶಾಲೆಗಳನ್ನು ತೆರೆದು ಅವರಿಗೆ ಉಚಿತವಾಗಿ ಶಿಕ್ಷಣದ ಸಾಮಗ್ರಿಗಳು ಹಾಗೂ ಬಟ್ಟೆ, ಊಟದ ವ್ಯವಸ್ಥೆಮಾಡಿ ಅಲ್ಲಿ ನುರಿತ ಶಿಕ್ಷಕರನ್ನು ನೇಮಕಮಾಡಬೇಕು. ಹಾಗೆ ಗಣಿಮಾಲೀಕರು ಸಹ ಮಕ್ಕಳನ್ನು ಶಾಲೆಗೆ ಕಳಿಸಲು ಪ್ರೋನೀಡಬೇಕು. ಮಕ್ಕಳನ್ನು ಗಣಿಮಾಲೀಕರು ಕೆಲಸಕ್ಕೆ ನೇಮಿಸಿಕೊಂಡು ಅವರಿಗೆ ಅಲ್ಪಕೂಲಿಯನ್ನು ಕೊಟ್ಟು ದುಡಿಸಿಕೊಳ್ಳುತ್ತಾರೆ. ಅಂತವರ ವಿರುದ್ಧ ಕ್ರೂರವಾದ ಶಿಕ್ಷೆಯನ್ನು ಜಾರಿಮಾಡಿ ಅಂತಹ ಗಣಿಗಾರಿಕೆಯನ್ನು ಸೀಜ್ ಮಾಡಬೇಕು.

ಪ್ರತಿ ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಕಾವಲು ಪಡೆಯನ್ನು ರಚಿಸಬೇಕು. ಈ ಕಾವಲು ಪಡೆಯುವ ಮಕ್ಕಳನ್ನು ಮಾರಾಟಮಾಡುವುದನ್ನು, ಮಕ್ಕಳನ್ನು ಸಾಗಾಣಿಕೆ ಮಾಡುವು ದನ್ನು, ಬಾಲ್ಯವಿವಾಹ ಪದ್ಧತಿಯನ್ನು, ದೇವದಾಸಿ ಪದ್ಧತಿಯನ್ನು ತಡೆಯಬೇಕು. ಈ ಪಡೆಯಲ್ಲಿ ಎ.ಪಿ.ಎಂ.ಸಿ. ಕಮಿಟಿಯ ಸದಸ್ಯರು ಊರಿನ ಮುಖ್ಯಸ್ಥರು, ಗ್ರಾಮಪಂಚಾಯತಿ ಸದಸ್ಯರು, ಅಂಗನವಾಡಿ ಶಿಕ್ಷಕರು, ಯುವಕ ಸಂಘದವರು ಇರಬೇಕು. ಈ ರೀತಿಯ ಕಾವಲು ಪಡೆ ಸಹಾ ಮಕ್ಕಳ ಬಗ್ಗೆ ಜಾಗೃತಿಯನ್ನು ವಹಿಸಬೇಕು. ಹೀಗೆ ಆದರೆ ಮಾತ್ರ ಮಕ್ಕಳ ಹಕ್ಕುಗಳು ಮಕ್ಕಳಿಗೆ ಸಿಗಲು ಸಾಧ್ಯವಾಗುತ್ತದೆ.

* * *

ಹಲಗಲಿ ಬೇಡರು

ಯಾರ್-ಯಾರು ಇಲ್ಲದ್-ಆದೀತು
ಊರ್-ಎಲ್ಲಾ ಲೂಟಿ ಆಗಿ ಹೋತು

ಮಂದಿ ಮನಿ ಹೊಕ್ಕ ಹುಡುಕಿತು
ದನ-ಕರಾ ಲಯಾ ಆದೀತು

ಸಣ್ಣ ಕೂಸಗಳು ಹೋದವು ಸತ್ತು
ಬೆಂಕಿ ಹಚ್ಚ್ಯಾರ ವೂರ ಸುಟ್ಟಿತು

ನಷ್ಟ ಆತಿ ನೋಡರಿ ಈವತ್ತು
ನಾ ಹೇಳತೇನ ಈ ಮಾತು                   ||ಯೇರ||
ಇಷ್ಟ್-ಎಲ್ಲ ಅಳವ್-ಆಗಿ ಹೋದಿತೊ ಮುಟ್ಟಲಿಲ್ಲ-ಯಾತ್-ಎತಕ