ನಾನು ಇಲ್ಲಿ ಮುಖ್ಯವಾಗಿ ಖಾಟಿಕ್ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಈ ಲೇಖನವನ್ನು ಸಿದ್ಧಪಡಿಸಿದ್ದೇನೆ. ಇವರು ಮಾಡುವ ವೃತ್ತಿಯ ಆಧಾರದ ಮೇಲೆ ಜನ ಇವರನ್ನು ಕರ್ನಾಟಕದಲ್ಲಿ ಕಟುಗರು, ಕಟುಕರು ಎಂದು ಗುರುತಿಸತೊಡಗಿದರು. ಹೀಗೆ ಖಾಟಿಕ್ ಸಮುದಾಯ ಕರ್ನಾಟಕದಲ್ಲಿ ತನ್ನನ್ನು ಹಲವಾರು ಹೆಸರುಗಳಿಂದ ಗುರುತಿಸಿ ಕೊಳ್ಳುತ್ತಿರುವುದನ್ನು ಕಾಣಬಹುದು. ಇವರು ವೃತ್ತಿಯಾಧಾರವಾಗಿ ತಮ್ಮನ್ನು ಸಮಾಜ ಗುರುತಿಸುತ್ತಿರುವುದನ್ನು ನಿರಾಕರಿಸುತ್ತ ಸೂರ್ಯವಂಶಿ ಕ್ಷತ್ರಿಯ, ಮರಾಠಿ, ಅರೆಮರಾಠಿ, ಕ್ಷತ್ರಿಯ, ರಜಪೂತ ಎಂದು ಗುರುತಿಸಿಕೊಳ್ಳಲು ಮುಂದಾಗುತ್ತಾರೆ. ಏಕೆಂದರೆ ಇವರಿಗೆ ಸಮಾಜದಲ್ಲಿ ಕಟುಕರೆಂದರೆ, ಖಾಟಿಕ್ ಎಂದರೆ ಸ್ಥಾನಮಾನ ಇಲ್ಲದಿರುವುದೇ ಕಾರಣವಾಗಿದೆ. ಹೀಗಾಗಿ ಬಹಳಷ್ಟು ಜನರು ಇವರ ಮೂಲ ವೃತ್ತಿಯಿಂದ ಏತಕ್ಕಾಗಿ ಸಮಾಜದಲ್ಲಿ ಅವಮಾನಿತರಾಗಬೇಕೆಂದು ತಮ್ಮ ವೃತ್ತಿಯನ್ನೇ ಬದಲಾಯಿಸಿಕೊಂಡಿರುವುದು ಸಹ ಕಂಡು ಬರುತ್ತದೆ.

ಇವರನ್ನು ವರ್ಣವ್ಯವಸ್ಥೆಯ ಯಾವ ಮೂಲದಿಂದ ಬಂದವರೆಂದು ಗುರುತಿಸುವಾಗ ಕರ್ನಾಟಕದಲ್ಲಿ ಖಾಟಿಕ್‌ರ ಮತ್ತು ಹಿಂದೂ ಶೂದ್ರ ಸಮುದಾಯದ ಜೊತೆಗಿನ ಸಂಬಂಧ ಅವರೊಂದಿಗೆ ಒಡನಾಟ ಮತ್ತು ಪಾಲ್ಗೊಳ್ಳುವಿಕೆಯನ್ನು ಗಮನಿಸಿದರೆೆ ಅವರ ಸಾಮಾಜಿಕ ಸ್ಥಾನಮಾನಗಳ ಚಿತ್ರಣ ದೊರೆಯುತ್ತದೆ. ಸಮಾಜದಲ್ಲಿ ಖಾಟಿಕ್‌ರನ್ನು ಅಸ್ಪೃಶ್ಯರಂತೆ ಕಾಣುತ್ತಾರೆ. ಇವರು ವಾಸಿಸುವ ಕೇರಿಗಳನ್ನು ಕಟುಕರ ಕೇರಿ, ಕುಟುಕರ ಬೀದಿ, ಕಟುಕ ಮೊಹಲ್ಲಾ, ಕಟುಗರ ಓಣಿ ಎಂದು ಗುರುತಿಸುತ್ತಾರೆ. ಇವರ ಹೆಸರುಗಳನ್ನು ಸಹ ಕಟುಗರ ರಾಮಪ್ಪ, ಕಟುಗರ ಯಂಕಪ್ಪ, ಕಟುಗರ ಶಂಕ್ರಪ್ಪ ಎಂದು ಕರೆಯುತ್ತಾರೆ. ಹಾಗೆಯೆ ಲಿಂಗಾಯತ, ಕುರುಬ, ನಾಯಕ ಬೇರೆ ಸಮುದಾಯಗಳು ಇವರನ್ನು ತಮ್ಮ ಮನೆಯಲ್ಲಿ ಒಳಗೆ ಬಿಟ್ಟುಕೊಂಡರೂ, ಅದು ಮನೆಯ ಮುಂದಿನ ಪಡಸಾಲೆಯವರೆಗೆ ಮಾತ್ರ ಪ್ರವೇಶ ವಿರುತ್ತದೆ. ನಡುಮನೆ ಅಥವಾ ಅಡುಗೆ ಮನೆಯಾಗಲಿ ದೇವರ ಕೋಣೆಯವರೆಗೆ ಇವರಿಗೆ ಪ್ರವೇಶವಿರುವುದಿಲ್ಲ. ಇವರು ಸಹ ಇಲ್ಲಿಯ ಜನರಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಬೆರೆಯಲು ಇಷ್ಟಪಡುವುದಿಲ್ಲ. ಕಾರಣ ಇವರ ನಿರಂತರ ಉದ್ಯೋಗ ಹಾಗೂ ವ್ಯಾಪಾರದಿಂದ ಸಮಯದ ಅಭಾವ ಒಂದಾದರೆ, ಇನ್ನೊಂದು ಅನ್ಯ ಸಮುದಾಯದವರು ಇವರನ್ನು ನೋಡುವ ದೃಷ್ಟಿಕೋನದಿಂದ ಎಂಬ ಕಾರಣಕ್ಕೆ ಸಮಾಜದಲ್ಲಿ ಯಾರೊಂದಿಗೂ ಹೆಚ್ಚಾಗಿ ಬೆರೆಯುವು ದಿಲ್ಲ. ವುುಸ್ಲಿಂ ಸಮುದಾಯದೊಂದಿಗೆ ಮಾತ್ರ ಹೆಚ್ಚು ಬಾಂಧವ್ಯ ಹಾಗೂ ಒಡನಾಟ ಇರುವುದು ಕಂಡುಬರುತ್ತದೆ. ಇದಕ್ಕೆ ಕಾರಣ ಒಂದು ಇವರೊಂದಿಗೆ ವ್ಯಾಪಾರ, ವ್ಯವಹಾರ ಸಂಬಂಧವಿರುವುದು ಮತ್ತು ಭಾಷೆಯು ಇವರನ್ನು ಹತ್ತಿರ ಬೆಸೆಯುವಂತೆ ಮಾಡಿದೆ ಎಂದು ಹೇಳಬಹುದು. ಇವರಾಡುವ ಗುಪ್ತ ಭಾಷೆಯನ್ನು ಮುಸ್ಲಿಂ ವ್ಯಾಪಾರಸ್ಥರು ಬಲ್ಲವರಾಗಿರು ತ್ತಾರೆ. ಹಾಗಾಗಿ ವ್ಯಾಪಾರದ ಬಾಂಧವ್ಯ ಇವರನ್ನು ಪರಸ್ಪರ ನಿಕಟವಾಗಿಸುವ ಒಂದು ಅವಿನಾಭಾವ ಸಂಬಂಧವಾಗಿದೆ. ಇವರು ಪರಸ್ಪರರಲ್ಲಿ ಹಾಗೂ ವ್ಯಾಪಾರದಲ್ಲಿ, ವ್ಯವಹಾರ ದಲ್ಲಿಯಾಗಲಿ ಅಥವಾ ಕುಶಲ ಕ್ಷೇಮಗಳನ್ನು ವಿಚಾರಿಸುವಾಗ ಮಾಮು (ಮಾವ), ಚಾಚಾ (ದೊಡಪ್ಪ ಚಿಕ್ಕಪ್ಪ), ದಾದಾ ನಾನಾ (ಅಜ್ಜ) ಆಪಾ (ಅಕ್ಕ), ದೀದಿ (ಸಹೋದರಿ), ಖಾಲಾ, ಚಾಚಿ (ಚಿಕ್ಕಮ್ಮ), ಬೈಯಾ (ಅಣ್ಣ) ಎಂದು ಸಂಭೋದಿಸುತ್ತಾರೆ. ಹಾಗೆಯೇ ತಮ್ಮಲ್ಲಿರುವ ಪ್ರೀತಿ ವಾತ್ಸಲ್ಯ ಮತ್ತು ಸ್ನೇಹಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಾರೆ. ಅವರ ಮದುವೆ ಕಾರ್ಯಕ್ರಮ ಇತರೆ ಕಾರ್ಯಗಳಲ್ಲಿ ಇವರು ಭಾಗವಹಿಸುವುದು ಸಹ ಕಂಡುಬರುತ್ತದೆ. ಈ ರೀತಿ ಖಾಟಿಕ್ ಸಮುದಾಯ ಮುಸ್ಲಿಂ ಸಮುದಾಯದೊಂದಿಗೆ ಅನನ್ಯತೆಯ ಸಂಬಂಧ ಗಳನ್ನು ಹೊಂದಿರುವುದು ಕ್ಷೇತ್ರಕಾರ್ಯದಲ್ಲಿ ತಿಳಿದುಬರುತ್ತದೆ.

ಖಾಟಿಕ್ ಸಮುದಾಯವು ಉತ್ತರದಿಂದ ದಕ್ಷಿಣಕ್ಕೆ ಬಂದಂತಹ ಸಂದರ್ಭದಲ್ಲಿ ಇಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುವ ಜೊತೆಗೆ ಹೊಟ್ಟೆಪಾಡಿಗಾಗಿ ಮಾಂಸ ಮತ್ತು ಮಧ್ಯ ಮಾರಾಟ ಮಾಡುತ್ತ ಜೀವನ ಸಾಗಿಸುವಾಗ ತಮ್ಮ ಸಂಸ್ಕೃತಿಯ ಮೂಲ ನೆಲೆಗಳಾದ ಅವರ ಆಚರಣೆ, ಸಂಪ್ರದಾಯಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದನ್ನು ಕಾಣಬಹುದು. ಭಾರತ ಆರಂಭದಿಂದಲೂ ಅನ್ಯ ದೇಶೀಯರ ಆಕ್ರಮಣಗಳಿಗೆ ತುತ್ತಾಗುತ್ತ ರಾಜಕೀಯ ಗುಲಾಮಗಿರಿ ಯನ್ನು ಅನುಭವಿಸಿದರೂ ತನ್ನ ಸಾಮಾಜಿಕ ರಚನೆಯ ಒಳವಿವರಗಳನ್ನು ಬಿಟ್ಟುಕೊಟ್ಟಿಲ್ಲ. ಇಲ್ಲಿನ ಧಾರ್ಮಿಕ ಬದ್ಧತೆಯೊಂದಿಗೆ ಬೆಸೆದು ಹೋದ ಸಮಾಜ ಅದರ ಕಟ್ಟುಪಾಡುಗಳನ್ನು ರೂಪಿಸಿಕೊಳ್ಳುವಾಗ ಮನುಷ್ಯ ಮತ್ತು ದೇವರ ನಡುವಿನ ಸಂಬಂಧವನ್ನು ಕಟ್ಟಿಕೊಂಡಿದೆ. ದೇವರು, ಧರ್ಮ, ಜಾತಿ, ಪಾಪ-ಪುಣ್ಯ, ಸ್ವರ್ಗ-ನರಕ ಮೊದಲಾದವುಗಳೆಲ್ಲಾ ಒಂದರೊಳ ಗೊಂದರಂತೆ ಹೆಣೆದುಕೊಂಡು ಇಲ್ಲಿನ ಸಮಾಜದ ತಾರತಮ್ಯ ನೆಲೆಯನ್ನು ರೂಪಿಸಿದೆ. ಖಾಟಿಕರು ಸಹ ಇಂತಹ ರಚನೆಯ ಒಳಗಡೆಯೇ ಆಕಾರ ಪಡೆದುಕೊಂಡವರಾಗಿದ್ದಾರೆ. ಅವರ ಸಾಮಾಜಿಕ ಸ್ಥಾನಮಾನಗಳನ್ನು ಕುರಿತು ಯೋಚಿಸುವಾಗ ಸಹಜವಾಗಿಯೇ ಅವರ ಮೂಲ ಸಂಸ್ಕೃತಿಯ ರೂಪಗಳು ಕಣ್ಣೆದುರಿಗೆ ಬರುತ್ತದೆ.

ಮುಖ್ಯವಾಗಿ ಇವರ ವೃತ್ತಿಯ ಕಾರಣದಿಂದಾಗಿ ಸಮಾಜ ಇವರನ್ನು ಅಸ್ಪೃಶ್ಯರಂತೆ ಕಾಣುತ್ತದೆ. ಆದರೆ ಇವರ ಮತ್ತು ದಲಿತರ ಸಂಬಂಧಗಳನ್ನು ನೋಡಿಕೊಂಡಾಗ ಇವರು ದಲಿತರನ್ನು ತಮ್ಮ ಮನೆಯಲ್ಲಿ ಸೇರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಹಾಗೆಯೇ ಅವರಿಂದ ಆಹಾರ ಪಾನೀಯಗಳನ್ನು ಸಹ ಸ್ವೀಕರಿಸುವುದಿಲ್ಲ. ಇದನ್ನು ಗಮನಿಸಿದಾಗ ಇವರ ಮೂಲ ನೆಲೆ ಯಾವುದಿರಬಹುದು ಎಂದು ಗುರುತಿಸುವುದು ಕಷ್ಟವಾಗುತ್ತದೆ. ಸಮಾಜದ ಇತರ ಸಮುದಾಯಗಳು ಇವರನ್ನು ಅಸ್ಪೃಶ್ಯರಂತೆ ಕಾಣುತ್ತವೆ. ಇವರು ತಮಗಿಂತ ಕನಿಷ್ಟರನ್ನಾಗಿ ಮತ್ತೊಂದು ತಳ ಸಮುದಾಯವನ್ನು ಕಾಣುವಂತ ಸಂದರ್ಭದಲ್ಲಿ ಯಾರ ನೆಲೆ ಯಾವುದು ಎಂದು ಗುರುತಿಸುವುದು ಕಷ್ಟದ ಕೆಲಸವೇ ಎಂದು ತೋರುತ್ತದೆ.

ಮೂಲದಿಂದ ಬೇಟೆಯಾಡುತ್ತ ಬಂದ ಒಂದು ಸಮುದಾಯ ಕಾಲಾನಂತರ ಬೇಟೆಯಿಂದ ಪಶುಪಾಲನೆ ನಂತರ ಮಾಂಸ ಮಾರಾಟ ಮಾಡುವಿಕೆಯಲ್ಲಿ ತೊಡಗಿಕೊಂಡು ಬಂದುದನ್ನು ಗಮನಿಸಿದಾಗ ಮಾಂಸ ಮಾರಾಟ ಮಾಡುವಿಕೆ ಇವರ ಮೂಲ ಉದ್ಯೋಗವಾಗಿರುವುದು ಕಂಡುಬರುತ್ತದೆ. ಅವಶ್ಯವಿದ್ದಾಗ ಸೈನಿಕರಾಗಿ ನಂತರ ಹೊಟ್ಟೆ ಪಾಡಿಗಾಗಿ ಈ ಉದ್ಯೋಗ ವನ್ನು ಸ್ವೀಕರಿಸಿ ಅದನ್ನೇ ವಂಶಪಾರಂಪರ್ಯವಾಗಿ ಮುಂದುವರೆಸಿಕೊಂಡು ಬಂದಿರುವ ಸಮುದಾಯ ಇಂದಿನ ಜಾಗತೀಕರಣದಲ್ಲಿಯೂ ತನ್ನ ಮೂಲವೃತ್ತಿಯನ್ನುಳಿಸಿಕೊಳ್ಳುತ್ತಾ ಆಧುನಿಕತೆಯ ಭರಾಟೆಯಲ್ಲಿ ಸಾಗುವ ಸಮಾಜದ ಬದಲಾವಣೆಗಳ ಪರಿಸ್ಥಿತಿಗಳಿಂದ ಒಂದು ಕಡೆ ತನ್ನ ವೃತ್ತಿಯನ್ನು ಉಳಿಸಿಕೊಳ್ಳುವ ಮತ್ತೊಮ್ಮೊ ಹೊಸ ಔದ್ಯೋಗಿಕರಣಗಳಾದ ಕೈಗಾರಿಕೀಕರಣ, ಜಾಗತೀಕರಣ, ಸಂಸ್ಕೃತೀಕರಣದ ಪ್ರಭಾವದಿಂದ ಹೊಸ ಉದ್ಯೋಗದ ಕಡೆ ಚಲನೆಯನ್ನು ಪ್ರಾರಂಭಿಸುವ ವ್ಯಕ್ತಿ ಸ್ವಾತಂತ್ರ್ಯ, ಜಾತಿ ಸ್ವಾತಂತ್ರ್ಯ, ಶಿಕ್ಷಣದ ಸವಲತ್ತು ಗಳಿಲ್ಲದ್ದರಿಂದ ಇಂತಹ ಸಮುದಾಯಗಳಿಗೆ ಮುಂದೆ ಚಲಿಸಲು ಆಗದೆ ಹಿಂದೆ ಉಳಿಯಲು ಆಗದೆ ಒದ್ದಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗುವುದು. ಆದ್ದರಿಂದ ಇಂತಹ ಹೊಸತನ ಮೈಗೂಡಿಸಿಕೊಳ್ಳಲು ಶಿಕ್ಷಣ, ರಾಜಕೀಯ, ಆರ್ಥಿಕ, ಕಂಪ್ಯೂಟರ್ ಜ್ಞಾನಗಳು ಬಡ ಸಮುದಾಯಗಳ ಮೆದುಳಿಗೆ ತಲುಪಿ ಅವರು ಜಾಗೃತರಾಗುವ ಹೊತ್ತಿಗೆ ಇಂತಹ ನೂರೆಂಟು ಸಮುದಾಯಗಳಿಗಿಂತ ಜಗತ್ತು ಯಾವ ಹಂತದಲ್ಲಿರುತ್ತದೆಯೋ ಸಮಯವೇ ನಿಗದಿಸುತ್ತದೆ.

ಆಧುನಿಕತೆ ಹೆಚ್ಚಿದಂತೆಲ್ಲಾ ಈ ವೃತ್ತಿ ಮೂಲ ಸಮುದಾಯಗಳು ಹೆಚ್ಚಿನ ಆತಂಕಗಳಿಗೆ ಒಳಗಾಗುತ್ತಲೇ ಇವೆ. ಆಧುನಿಕತೆಯ ಪರಿಣಾಮವಾಗಿ ವೃತ್ತಿ ಮೂಲ ಸಮುದಾಯಗಳು ಜನತೆಯ ಕಣ್ಣಿನಿಂದ ದೂರವಾಗುತ್ತಿವೆ. ಇದಕ್ಕೆ ಕಾರಣ ಇವರು ತಮ್ಮ ವೃತ್ತಿಯಿಂದ ಎಷ್ಟೇ ದುಡಿದರು ತುಂಬದ ಅರೆಹೊಟ್ಟೆ, ಕುಟುಂಬದ ಹೊರೆ, ಉತ್ತಮ ಶಿಕ್ಷಣಗಳಂತಹ ಸ್ಥಿತಿಯಿಂದ ಮುಂದುವರೆಯಲು ಹಾಗೂ ಉತ್ತಮ ಸ್ಥಿತಿಗೆ ತಲುಪಲು ಆಗುತ್ತಿಲ್ಲ. ಇನ್ನೊಂದೆಡೆ ವಿದ್ಯೆ ಇದ್ದರೆ ತಂತ್ರಜ್ಞಾನ ಲೋಕದಲ್ಲಿ ಗಳಿಸುವ ಮತ್ತು ಎಣಿಸಲಾರದ ವೇತನ ನೀಡುತ್ತಿರುವ ಆಧುನಿಕ ವ್ಯವಸ್ಥೆ ಇವರಲ್ಲಿ ವಿದ್ಯೆ ಪಡೆದು ಆಧುನಿಕತೆಯನ್ನು ತಲುಪುವುದಕ್ಕೆ ಸಮಯವಿಲ್ಲ. ಇವರು ಕಲಿತು ಮುಂದುವರೆಯುವ ತನಕ ಅದು ಮತ್ತೇ ನನ್ನೋ ಸಾಧಿಸಿ ಇವರೊಂದಿಗೆ ಕಣ್ಣುಮುಚ್ಚಾಲೆ ಆಟವನ್ನು ಆಡುತ್ತಿದೆಯೇನೋ ಅನಿಸುತ್ತದೆ. ಇನ್ನೊಂದೆಡೆ ಮನುಷ್ಯ ಎಷ್ಟೇ ಹಾಗೂ ಏನೇ ಸಾಧಿಸಿದರು ಅವರನ್ನು ಜಾತಿಯಿಂದ ಅಳೆಯುವ ನಮ್ಮ ಸಮಾಜದ ಮಾನದಂಡ. ಇದರಿಂದ ವ್ಯಕ್ತಿಯ ಪರಿಸ್ಥಿತಿ ನಮ್ಮ ಜನಪದರು ಹೇಳುವಂತೆ “ರೋಸಿಗೆ ಬಂದು ಬಿಟ್ಟಿದೆ ನೋಡಿ ನೋಡಿ” ಎಂದು ಬೇಜಾರು ಪಟ್ಟುಕೊಳ್ಳು ವಂತ ಪರಿಸ್ಥಿತಿಯಿಂದಾಗಿ ಇಂತಹ ಸಮುದಾಯಗಳು ನರಳುತ್ತಿವೆ. ಅನೇಕ ಸಾಮಾಜಿಕ ನಿರ್ಲಕ್ಷ್ಯದಿಂದ ಕಡೆಗಾಣಿಸುವ ಬುದ್ದಿವಂತರಿಂದ ಇಂತಹ ಸಮುದಾಯಗಳು ಇಂದು ಸವಕಲು ನಾಣ್ಯಗಳಾಗುತ್ತಿವೆ.

ಆಧುನಿಕ ಪ್ರವೇಶದಿಂದಾಗಿ ಭಾರತದ ಬಹುಪಾಲು ಬುಡಕಟ್ಟು ಪಂಗಡಗಳು ಈ ತರಹದ ಸಮುದಾಯಗಳು ಬುಡಮೇಲಾದುದು ಹೇಗೆ ಎಂಬುದನ್ನು ಕುರಿತು ಯೋಚಿಸುವಾಗ ಆಧುನಿಕತೆ ಭಾರತೀಯನಿಗೆ ಅಧ್ಯಯನದ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಿದರೂ ಬುಡಕಟ್ಟು ಸಮುದಾಯಗಳನ್ನು ನೋಡಿದಾಗ ಅವರ ಪರಿಸ್ಥಿತಿ ಹೆಚ್ಚು ಹೆಚ್ಚು ಶೋಚನೀಯ ವಾಗಿರುವುದನ್ನು ನೋಡಬಹುದು. ಪ್ರಾರಂಭದಲ್ಲಿ ತಮ್ಮ ಪಾರಂಪರಿಕ ವೃತ್ತಿಯಿಂದಾಗಿ ತುಂಬಾ ಸ್ವಾವಲಂಬಿಗಳಾಗಿದ್ದ ಸಮುದಾಯಗಳು ಆರ್ಥಿಕವಾಗಿ ಶೋಚನೀಯ ಸ್ಥಿತಿಯನ್ನು ಬಹುಶಃ ತಲುಪಿರಲಿಲ್ಲ ಎಂದೆನಿಸುತ್ತದೆ.

ಖಾಟಿಕ್ ಸಮುದಾಯವನ್ನು ಕುರಿತು ಆಲೋಚಿಸುವಾಗ ಮೊದಲು ಇವರಿಗೆ ವೃತ್ತಿಯಲ್ಲಿ ಬರುವ ಲಾಭದಿಂದ ತಮ್ಮ ಜೀವನ ನಿರ್ವಹಣೆ ಕಷ್ಟವಾಗಿರಲಿಲ್ಲ. ಆಗ ಇವರಿಗೆ ಉದ್ಯೋಗಕ್ಕೆ ಕುರಿಗಳ ಸಂಖ್ಯೆ ಜಾಸ್ತಿ ಇದ್ದು ಮಾಂಸಾಹಾರ ಮಾಡುವ ಜನವರ್ಗವು ಒಂದು ಪ್ರಮಾಣದಲ್ಲಿತ್ತು ಎಂದು ಹೇಳಬಹುದು. ಆದರೆ ಇಂದು ಮಾಂಸಾಹಾರ ಎಂಬುದು ಒಂದು ಫ್ಯಾಷನ್ ರೂಪ ತಾಳುತ್ತಿರುವುದು ಕಂಡುಬರುತ್ತೆ. ಕೆಲವೊಂದು ಸಮುದಾಯದವರು ಕದ್ದುಮುಚ್ಚಿ ಬಳಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದರು ಅದನ್ನು ಯಾರೂ ಬಾಯಿಬಿಟ್ಟು ಹೇಳಲು ಇಷ್ಟಪಡುವುದಿಲ್ಲ.

ತಾವು ತುಂಬಾ ಮಡಿವಂತರು, ಮಾಂಸಾಹಾರ ಉಪಯೋಗಿಸುವುದೇ ಮಹಾ ಘೋರ ಅಪರಾಧ ಎನ್ನುವಂತೆ ಮಾತನಾಡುತ್ತಾರೆ. ಇನ್ನು ಮಾಂಸ ಉಪಯೋಗಿಸುವವರು ಮನೆಯಲ್ಲಿ ಉಪಯೋಗಿಸುತ್ತೇವೆ ಎಂದು ಹೇಳುವುದಿಲ್ಲ. ತಾವು ಮಾಂಸ ತಿನ್ನುವವರಿದ್ದರು ನಾನು ತಿನ್ನಲ್ಲ ಮನೆಯಲ್ಲಿ ಒಬ್ಬಿಬ್ಬರು ಉಪಯೋಗಿಸುತ್ತಾರೆ. ಹೊಲಸು ಮಾಡಿದ್ದೇವೆ ಎಂದು ತಿನ್ನುವ ಆಹಾರದ ಬಗ್ಗೆ ತಾಳುವ ನಿಲುವು ಇದು. ಹೀಗೆ ಸಮಾಜದಲ್ಲಿ ಮಾಂಸಾಹಾರವನ್ನು ಅದನ್ನು ಮಾರುವ ಸಮುದಾಯವನ್ನು ಕುರಿತು ಸಮಾಜವೇ ಒಂದು ಕಲ್ಪನೆಯನ್ನು ಹುಟ್ಟು ಹಾಕಿದೆ. ಸಾತ್ವಿಕ ಆಹಾರ. ತಾಮಸಿಕ ಆಹಾರ. ಆಹಾರದಿಂದ ಮನುಷ್ಯನ ಗುಣಗಳನ್ನು ತಿಳಿಸುವ ಕೆಲಸದ ಮೇಲೆ ಸಮಾಜವನ್ನು ಯಾವುದು ಸರಿ ಯಾವುದು ತಪ್ಪು ಎಂಬ ಯೋಚನೆಗೆ ನೂಕಿ ಆಹಾರವನ್ನು ಪೂರೈಸುವ ಸಮುದಾಯದ ಕುರಿತು ಭಯಂಕರ ಚಿತ್ರಣ ನೀಡಿದೆ. ನಮ್ಮ ಸಾಹಿತ್ಯವನ್ನು ಒಮ್ಮೆ ಗಮನಿಸಿದಾಗ ಅದರಲ್ಲಿ ಸಿಗುವ ಹಲವು ಮಾಹಿತಿಗಳು ಖಾಟಿಕ್‌ರನ್ನು ಕುರಿತು ಈ ಸಮಾಜದ ದೃಷ್ಟಿಕೋನ ಗೊತ್ತಾಗುತ್ತದೆ.

“ತಲೆಗಳ ತುಂಡು, ತೋಳ್ಗಳ ತುಂಡು, ನಡು ತುಂಡು, ಸಲೆಜಾನು ಜಂಘೆಯ ತುಂಡು ಬೆಲೆಯಿಂದ ಕಟುಕರಂಗಡಿಯಂತೆ ರಣರಂಗ ಸಲೆ ಜಿಗುಪ್ಸೆಯ ತೋರಿಸಿತು” ಮೋಹನ ತರಂಗಿಣಿಯಲ್ಲಿ ಬರುವ ಮೇಲಿನ ವಾಕ್ಯಗಳು ರಣರಂಗವು ಕಟುಕರಂಗಡಿಯಂತೆ ಭಯಾನಕ ವಾತಾವರಣದಿಂದ ಕಂಗೊಳಿಸಿ ಜಿಗುಪ್ಸೆಯನ್ನುಂಟು ಮಾಡುವಂತಿತ್ತು ಎಂದು ತಿಳಿದು ಬರುತ್ತದೆ.

“ಕಟುಕರ ಮನೆಯ ಕುರಿಯ ಹಾಗೆ” ಎಂಬಿ ಗಾದೆಯು ಕುರಿಯು ಇಂದಲ್ಲ ನಾಳೆ ಸಾಯುವುದು ಖಂಡಿತ ಅದರ ಸಾವು ತಪ್ಪಿದ್ದಲ್ಲ ಎಂಬ ಧ್ವನಿಯನ್ನು ಹೇಳುತ್ತಾ ಕಟುಕರ ಮತ್ತು ಕುರಿಯ ಸಂಬಂಧದಲ್ಲಿ ಯಾವ ತರಹದ ನಂಟಿರುತ್ತದೆ ಅವರ ದೃಷ್ಟಿಯಲ್ಲಿ ಕುರಿ ಯೆನ್ನುವುದು ಅವರ ವ್ಯಾಪಾರದ ವಸ್ತುವೆ ವಿನಃ ಅದು ಪ್ರಾಣಿ ಅಥವಾ ದಯೆಯ ವಿಚಾರ ಸುಳಿಯುವುದಿಲ್ಲ ಎಂಬುದನ್ನು ತಿಳಿಸುತ್ತೆ.

ಕಟುಗ ಗಂಜಿಕೆಯೇಕೆ ದಿಟಕೆ ಮೂದಲೆಯೇಕೆ (ಸರ್ವಜ್ಞ)
ಆ ಕಟಿಗರು ಅವನ ರಭಸಕ್ಕೆ ಭೀತರಾದವರಂತೆ
ಶಕಟದಾಸನಂ ಬಿಟ್ಟು ದಿಕ್ಕು ದಿಕ್ಕಿಗೆ ಓಡಿ ಹೋಗಲು
ಮುದ್ರಾಮಂಜುಷಾದಲ್ಲಿ ದೊರೆಯುವ ಈ ಮಾಹಿತಿಯು

ಅಂಜಿ ಅಳುವ ಬಾಲಕನಂ ಕಂಡು ಕಟುಕರ ಮನ ಕರಗಿತು. ಚಂದ್ರಹಾಸನ ಕಥೆಯಲ್ಲಿ ಬರುವ ಈ ವಾಕ್ಯವನ್ನು ಗಮನಿಸಿದರೆ ಇಲ್ಲಿಯವರೆಗೆ ಸಮಾಜ ಕಟುಕರೆಂದ ತಕ್ಷಣ ಹೃದಯವಿಲ್ಲದವರು ಮನುಷ್ಯತ್ವವಿಲ್ಲ ಎಂದು ಗುರುತಿಸುವಾಗ ಒಂದು ಚಿಕ್ಕ ಮಗು ಅಳುವುದನ್ನು ಕಂಡು ಕಟುಕರ ಮನ ಕರಗಿರುವುದು ಅವರಲ್ಲಿಯೂ ಕರುಣೆ ಎನ್ನುವುದಿದೆ. ಇವರು ಮನುಷ್ಯರೇ, ಇವರಲ್ಲಿಯೂ ಪ್ರೀತಿ, ಮಮತೆ, ಕರುಣೆ, ಸ್ನೇಹ ಎಂಬುದಿದೆ. ಆದರೆ ವೃತ್ತಿ ಮಾಡಿದ ತಕ್ಷಣ ಇವರ ಮನಸ್ಸು ಕಲ್ಲು ಎನ್ನುವುದು ಸರಿಯಲ್ಲ. ಹೀಗೆ ನಮ್ಮ ಸಾಹಿತ್ಯದಲ್ಲಿ ಖಾಟಿಕ್‌ರನ್ನು ಕುರಿತು ಚಿತ್ರಣ ದೊರೆಯುತ್ತದೆ.

ಇತ್ತೀಚಿನ ದಿನಗಳಲ್ಲಿ ಕುರಿಮಾಂಸ ಮಾರಾಟದೊಂದಿಗೆ ಹಲವು ಇತರ ಚಿಕ್ಕಪುಟ್ಟ ವೃತ್ತಿಗಳಲ್ಲಿ ಖಾಟಿಕ್‌ರು ತೊಡಗಿಸಿಕೊಂಡಿರುವುದು ಕಂಡುಬರುತ್ತದೆ. ಉದಾಹರಣೆಯಾಗಿ ಕೋಳಿಮಾಂಸ ಮಾರಾಟ ಮಾಡುವುದು, ಮೀನುವ್ಯಾಪಾರ ಮಾಡುವುದರಿಂದ ಮೀನನ್ನು ಸ್ವಚ್ಛಗೊಳಿಸಿ ಗಿರಾಕಿಗಳಿಗೆ ನೀಡುವುದು, ಮೊಟ್ಟೆ ವ್ಯಾಪಾರ, ರಾತ್ರಿ ಹೊತ್ತು ರಸ್ತೆಯಲ್ಲಿ ಚಿಕನ್ ಪಕೋಡ, ಅನ್ನ ಮಾಂಸದ ಸಾರು ಮಾರುವುದು ಹೀಗೆ ಅವರು ಹತ್ತು ಹಲವು ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವುದನ್ನು ಗಮನಿಸಬಹುದು. ಇತ್ತೀಚೆಗೆ ಮಕ್ಕಳ ಶಿಕ್ಷಣದ ಕಡೆ ಗಮನ ಹರಿಸಿದ್ದಾರೆ. ನಮ್ಮಂತೆ ನಮ್ಮ ಮಕ್ಕಳು ಕಷ್ಟಪಡುವುದು ಬೇಡ ಆದರೆ ವಿದ್ಯೆ ಹತ್ತದಿದ್ದರೆ ನಮ್ಮ ಕುಲಕಸುಬು ನಮಗೆ ತಪ್ಪಿದ್ದಲ್ಲ ಎಂದು ಹೇಳುತ್ತಾರೆ. ಹೀಗೆ ಒಂದು ಕಡೆ ತಮ್ಮ ಮಕ್ಕಳು ವಿದ್ಯಾವಂತರಾಗಲಿ ಎಂಬ ಆಶಾವಾದದೊಂದಿಗೆ ಕುಲ ಕಸುಬನ್ನು ಮುಂದುವರೆಸುವ ಯೋಚನೆಯುಳ್ಳವರು ಒಂದು ಸಮುದಾಯದಲ್ಲಿ ಕಂಡುಬರು ತ್ತಾರೆ. ಹಾಗೆಯೇ ಈ ಉದ್ಯೋಗವೇ ಬೇಡ ಎಂದು ಕಿರಾಣಿ ಅಂಗಡಿಯೋ, ಬಟ್ಟೆ ವ್ಯಾಪಾರವೋ, ಸ್ಟೇಷನರಿ ಅಂಗಡಿಯೋ ಸ್ವಲ್ಪವಾದರು ಸ್ಥಿತಿ ಉತ್ತಮಗೊಂಡು ಸಮಾಜದ ಜನರೊಂದಿಗೆ ಬೆರೆಯುವಲ್ಲಿ ಕೆಲವರು ಆಸಕ್ತಿ ವಹಿಸುವವರು ಸಿಗುತ್ತಾರೆ. ಅಪ್ಪ ಹಾಕಿದ ಆಲದ ಮರ ಎಂದು ಬೇರೆ ಉದ್ಯೋಗ ಬಾರದೆ ಇದೇ ಉದ್ಯೋಗದಲ್ಲಿ ಹಾಗೂ ಹೀಗೂ ಮಾಡಿ ಜೀವನ ನಿರ್ವಹಿುತ್ತ ಮಕ್ಕಳಿಗೆ ಶಿಕ್ಷಣ, ಮಗಳ ಮದುವೆ, ಸಾಲಸೋಲ ತೆಗೆದು ಕೊಂಡು ಬದುಕು ಸಾಗಿಸುವವರು ಇರುವರು. ಹೀಗೆ ಒಂದು ಸಮುದಾಯದಲ್ಲಿ ಹಲವು ಸ್ಥಿತಿಯಲ್ಲಿರುವ ಜನ ಕಂಡುಬರುತ್ತಾರೆ.

ಕೈಗಾರಿಕೀಕರಣದ ಪ್ರಭಾವದಿಂದಾಗಿ ಇವರು ಹೊಸ ಉದ್ಯೋಗಗಳತ್ತ ಆಕರ್ಷಿತರಾಗಿ ಬೇರೆ ಬೇರೆ ಉದ್ಯೋಗಗಳನ್ನು ಮಾಡುವಲ್ಲಿ ಆಸಕ್ತರಾಗಿದ್ದರೂ ಬಂಡವಾಳದ ಕೊರತೆ, ಹೊಸ ಉದ್ಯೋಗದ ಬಗ್ಗೆ ಮಾಹಿತಿ, ವ್ಯವಹಾರ ಜ್ಞಾನ ಇಲ್ಲದಿರುವುದರಿಂದ ವೃತ್ತಿ ಕೌಶಲ್ಯದ ಕೊರತೆ ಹೀಗೆ ಹಲವು ಅಡೆತಡೆಗಳು ಎದುರಾಗಿ ಇವರು ತಮ್ಮ ಉದ್ಯೋಗದಲ್ಲೇ ಮುಂದುವರಿಯುವಲ್ಲಿ ಆಸಕ್ತಿ ವಹಿಸಿದ್ದಾರೆ. ಆದರೆ ವಿದ್ಯೆಯ ಕಡೆಗೆ ಇವರು ಇತ್ತೀಚೆಗೆ ಹೆಚ್ಚು ಒಲವನ್ನು ತೋರಿಸುತ್ತಿದ್ದಾರೆ. ಇವರು ಉದ್ಯೋಗದಲ್ಲಿ ಬದಲಾವಣೆಯನ್ನು ಬಯಸಿದರು ದೊಡ್ಡ ದೊಡ್ಡ ವ್ಯಾಪಾರಗಳಾಗಲಿ ತುಂಬಾ ಉತ್ತಮ ಶ್ರೇಷ್ಠಮಟ್ಟದ ಉದ್ಯೋಗಗಳನ್ನು ಮಾಡುವಂತಹ ಶಕ್ತಿ ಇವರಲ್ಲಿ ಇಲ್ಲ. ಬದಲಾಗಿರುವ ಇಂದಿನ ಪರಿಸ್ಥಿತಿ ಯಲ್ಲಿ ಇವರು ಹಣ್ಣು, ಹೂವು ಮಾರುವುದು, ಗುಜರಿ ಅಂಗಡಿ ಇಡುವುದು, ಗೋಣಿಚೀಲ ಮಾರಾಟ, ಆಟೋರಿಕ್ಷಾ ಓಡಿಸುವುದು, ರಸ್ತೆ ಬದಿಯಲ್ಲಿ ಬೀಡಿ ಸೀಗರೇಟು ಅಂಗಡಿ ಇಡುವುದು. ಹಾಗೆಯೇ ಚಿಕನ್ ಪಕೋಡ, ಪಲಾವ, ಅನ್ನಸಾರು, ರೊಟ್ಟಿ, ಮೊಟ್ಟೆಗಳನ್ನು ಬಂಡಿಗಳಲ್ಲಿಟ್ಟುಕೊಂಡು ಮಾರುವುದು. ಮೀನಿನ ಮಾರ್ಕೆಟ್‌ಗಳಲ್ಲಿ ಮೀನುಗಳನ್ನು ಕಡಿದು ಕೊಡುವುದು. ಹಾಗೆಯೇ ಲಾರಿ ಡ್ರೈವರ್‌ಗಳಾಗಿ, ಕೂಲಿಗಳಾಗಿ, ಡ್ರೈವರ್, ಮೆಕಾನಿಕ್‌ಗಳಾಗಿ ಹಲವು ಚಿಕ್ಕಪುಟ್ಟ ಕೆಲಸಗಳಲ್ಲಿ ಕಂಡುಬರುತ್ತಾರೆ. ಇತ್ತೀಚೆಗೆ ಚಿಕನ್ ಅಂಗಡಿಗಳು ಹೆಚ್ಚು ಪ್ರಚಲಿತವಾಗಿರುವುದು ಕಂಡುಬರುತ್ತದೆ.

ಮಾಂಸ ಮಾರುವ ದೊಡ್ಡ ವ್ಯಾಪಾರಿಗಳಲ್ಲಿ ಮಾಂಸ ಕತ್ತರಿಸುವ ಅಂಗಡಿಯ ಕೆಲಸ ಗಳನ್ನು ಮಾಡುವ, ಕುರಿಯ ಅವಯವಗಳನ್ನು ಮಾರುವ ವೃತ್ತಿಯಲ್ಲಿಯೂ ಈ ಸಮುದಾಯದ ಮಧ್ಯಮ, ಬಡವರ್ಗದವರು ದುಡಿಯುವುದು ಕಂಡುಬರುತ್ತದೆ. ಹೀಗೆ ಜೀವನ ನಿರ್ವಹಣೆಗೆ ಸಾಧ್ಯವಾದುದೆಲ್ಲವನ್ನು ಅವರು ಮಾಡುತ್ತಾರೆ. ಖಾಟಿಕ್‌ರ ಸಾಮಾಜಿಕ, ಆರ್ಥಿಕ ಸ್ಥಿತಿಗಳು ಸಮಾಧಾನಕರವಾಗಿಲ್ಲ. ಇದಕ್ಕೆ ಇವರು ತಮ್ಮ ಮೂಲ ಕಸುಬನ್ನು ಪೂರ್ತಿ ಬಿಡಲು ಆಗದೆ ಮುಂದುವರೆಸಲು ಆಗದೆ ಹಲವು ಇತರ ಚಿಕ್ಕಪುಟ್ಟ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವುದನ್ನು ಗಮನಿಸಿದರೆ ಹೊಟ್ಟೆ ಹೊರೆಯುವ ನಿರಂತರ ಹೋರಟದಲ್ಲಿ ರುವುದು ತಿಳಿಯುತ್ತದೆ.

ಜಾಗತೀಕರಣ ಎನ್ನುವುದು ಖಾಟಿಕ್‌ರ ವಿಚಾರದಲ್ಲಿ ಅಂತಹ ಪರಿಣಾಮವನ್ನು ಬೀರಿ ದಂತಿಲ್ಲ. ಇದು ಕೇವಲ ಆರ್ಥಿಕವಾದ ಜಾಗತಿಕ ಮಾರುಕಟ್ಟೆಗೆ ಸಂಬಂಧಿಸಿದ ವಿಷಯವೋ, ಇಂಡಿಯಾದ ಸಾಮಾಜಿಕ ಸಾಂಸ್ಕೃತಿಕ ಒಳಾವರಣಗಳನ್ನು ಪಲ್ಲಟಗೊಳಿಸಬಲ್ಲ ಮಾಯಾ ವಿಯೋ ಎಂಬ ಬಗ್ಗೆ ತಜ್ಞರಲ್ಲಿಯೇ ಗೊಂದಲವಿದ್ದಂತಿದೆ. ಜಾಗತೀಕರಣವನ್ನು ವಿಸ್ಮಯ ದಿಂದ ನೋಡುತ್ತೇವೆಯೇ ಹೊರತು ಸಂಸ್ಕೃತಿಯ ನಿಜರೂಪಗಳನ್ನು ಅದಕ್ಕೆ ತೆರೆದುಕೊಳ್ಳು ವುದಿಲ್ಲ. ಸಮಾಜದ ಮೇಲುಸ್ತರಗಳೇ ಜಾಗತೀಕರಣದಿಂದ ಪರಿವರ್ತನೆಗೆ ಒಳಗಾಗುತ್ತವೆ. ಭವಿಷ್ಯದ ಆಲೋಚನೆಗಳೇ ಇಲ್ಲದ ಇಂಥ ಹತ್ತಾರು ಸಮುದಾಯಗಳು ತಮ್ಮ ಪರಂಪರಾಗತ ಜೀವನ ವಿಧಾನವನ್ನು ಜಾಗತೀಕರಣದಂತಹ ಯಾವುದೇ ದಾಳಿಗಳಿಂದ ರಕ್ಷಿಸಿಕೊಳ್ಳಬಲ್ಲ ವಾಗಿವೆ.

ಜಾಗತೀಕರಣದಿಂದ ವಿಶ್ವವೇ ಹಳ್ಳಿಯಾಗಿದೆ. ಪ್ರಪಂಚದ ಮೂಲೆ ಮೂಲೆಗಳ ಸುದ್ದಿ ಕ್ಷಣಮಾತ್ರದಲ್ಲಿ ಲಭ್ಯವಾಗುತ್ತದೆ. ಜಗತ್ತಿನ ಯಾವುದೇ ಭಾಗದ ಉತ್ಪನ್ನಗಳು ರಸ್ತೆ ಕಾಣದ ಹಳ್ಳಿಗಳನ್ನು ತಲುಪುತ್ತವೆ. ಅಗತ್ಯವಿರಲಿ, ಇಲ್ಲದಿರಲಿ ಜನರ ಮನೆ ಮನಸ್ಸುಗಳಲ್ಲಿ ಹೊಕ್ಕು ಶೃಂಗಾರದ ವಸ್ತುಗಳು ರಾರಾಜಿಸುತ್ತವೆ. ಜನ ತಮ್ಮ ಭಾಷೆಯಲ್ಲಿ ಅನ್ಯ ಭಾಷೆಯ ಪದಗಳನ್ನು ಸೇರಿಸಿಕೊಳ್ಳಬಹುದು. ಉಡುಗೆ, ತೊಡುಗೆಯಲ್ಲಿ ಆಧುನಿಕರಾಗಬಹುದು. ಇಂಡಿಯಾದ ಸಾಮಾಜಿಕ ರಚನೆಯ ಒಳಭಾಗದಲ್ಲಿ ಹೂತು ಹೋಗಿರುವ ಧಾರ್ಮಿಕವಾದ ಸಂವೇದನೆಗಳು ಮಾತ್ರ ಬದಲಾಗಲಾರವು. ಜಾಗತೀಕರಣ ಭಾರತದ ರೈತರ ಕೃಷಿಗೆ ಅಪಾಯ ಕಾರಿಯಾಗಿರುವ ಹಾಗೇನೂ ಇತರ ಕ್ಷೇತ್ರಗಳಿಗೆ ಹಾನಿಕರವಲ್ಲ ಎಂಬಂತಹ ಅಭಿಪ್ರಾಯ ಗಳಿವೆ. ಆಳುವ ವ್ಯವಸ್ಥೆಯೇ ಅಂತರಾಷ್ಟ್ರೀಯ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡು ದೇಶೀ ಉತ್ಪನ್ನಗಳನ್ನು  ಕಡಿಮೆ ಬೆಲೆಗೆ ಮಾರಾಟವಾಗುವಂತೆ ನೋಡಿಕೊಳ್ಳುತ್ತಿದೆ. ಹೀಗಿರು ವಾಗ ಇಲ್ಲಿನ ನೆಲ ಜಲದಂತಹ ಮೂಲ ಅವಶ್ಯಕತೆಗಳನ್ನು ಮತ್ತು ಸಾಂಸ್ಕೃತಿಕ ಸಂವೇದನೆಗಳ ಮೂಲ ಸ್ವರೂಪವನ್ನು ಸಮಕಾಲೀನ ಪ್ರೇರಣೆಗಳ ಜೊತೆಗೇ ಉಳಿಸಿಕೊಳ್ಳುವ ಬಗ್ಗೆ ಚರ್ಚೆಯಾಗಬೇಕಿದೆ. ಖಾಟಿಕ್ ಬದುಕಿನ ಪರಿವರ್ತನೆಯನ್ನು ಕೂಡ ಈ ನೆಲೆಯಲ್ಲಿಯೇ ಗಮನಿಸಬೇಕಿದೆ.

ಸಾಮಾಜಿಕ ಪರಿವರ್ತನೆಯನ್ನು ಸಾಮಾನ್ಯವಾಗಿ ಸಮಾಜ ಸ್ವೀಕರಿಸುವ ಸಮಕಾಲೀನ ಪ್ರೇರಣೆ ಪ್ರಭಾವಗಳ ನೆಲೆಯಲ್ಲಿ ಗುರುತಿಸಲಾಗುತ್ತದೆ. ಚಲನಶೀಲ ಸಮಾಜದ ಜೀವನ ವಿಧಾನ ಮತ್ತು ಆಲೋಚನಾಕ್ರಮ ರೂಪಗೊಳ್ಳುವುದು ಮತ್ತು ಪರಂಪರಾಗತ ಆಚರಣೆಗಳಲ್ಲಿ ಅನೇಕ ಬಗೆಯ ಒತ್ತಡಗಳಿಂದಾಗಿ ಹಲ ಕೆಲವು ಮಾರ್ಪಾಡುಗಳನ್ನು ತಂದುಕೊಳ್ಳುವುದು ಸಮಕಾಲೀನ ಪ್ರೇರಣೆ ಪ್ರಭಾವಗಳಿಂದ ಸಾಧ್ಯವಾಗುತ್ತದೆ. ಜನಸಂಖ್ಯೆ, ಬದಲಾಗುತ್ತಿರುವ ಸಾಮಾಜಿಕ ಸಂವೇದನೆಗಳು, ಬದುಕಿನ ತೀವ್ರಗತಿ, ರಾಜ್ಯಾವಸ್ಥೆಯಲ್ಲಿ ಕಂಡುಬರುತ್ತಿರುವ ಬದಲಾವಣೆ, ತಂತ್ರಜ್ಞಾನದ ಆಶ್ಚರ್ಯಕರ ಬೆಳವಣಿಗೆ ಮತ್ತು ವ್ಯಾಪ್ತಿ, ಪರಿಸರಪ್ರಜ್ಞೆ, ಧರ್ಮ ಮೂಲವಾದ ಆತಂಕ, ತಳಮಳ, ಸಾಮಾನ್ಯರ ಬದುಕಿನ ಭದ್ರತೆಗಿರುವ ಅಪಾಯಗಳು, ರಾಷ್ಟ್ರದ ಒಳ ಹೊರಗಿನ ಒಟ್ಟಾರೆ ವಿದ್ಯಾಮಾನಗಳು ಹೀಗೆ ಸಮಾಜ ಅನ್ನುವುದು ಹತ್ತು ಹಲವು ದಿಕ್ಕುಗಳ ದೃಷ್ಟಿಗಳ ತಾಕಲಾಟದಲ್ಲಿ ಸಂಕೀರ್ಣಗೊಳ್ಳುತ್ತಿರುವುದು ನಿಜ. ಸಮಾಜದ ಸಂಕೀರ್ಣತೆಗೂ, ಈ ಸಂಕೀರ್ಣತೆಯನ್ನು ಗೋಜಲುಗೊಳಿಸಲು ಬಹುಮಟ್ಟಿಗೆ ಕಾರಣ ವಾಗುವ ಧಾರ್ಮಿಕ, ರಾಜಕೀಯ ಒತ್ತಡಗಳಿಗೂ ಇರಬಹುದಾದ ಸಂಬಂಧ ವಸಾಹತುಶಾಹಿ ಆಡಳಿತ ವ್ಯವಸ್ಥೆಯ ಮೂಲದಲ್ಲಿರುವಂತಿದೆ. ಶತಮಾನಗಳ ಕಾಲ ವಸಾಹತುವಾಗಿಯೇ ಉಳಿದಿದ್ದ ಇಂಡಿಯಾ ಸ್ವಾತಂತ್ರ್ಯದ ನಂತರ ಕೂಡ ಆ ಮೂಲದ ಲಕ್ಷಣಗಳನ್ನು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ನಿಚ್ಛಳವಾಗಿ ಕಾಪಾಡಿಕೊಂಡು ಬಂದಿದ್ದರ ಪರಿಣಾಮವಾಗಿ ಇಲ್ಲಿನ ಸಂಸ್ಕೃತಿ ಕೂಡ ನವ ವಸಾಹತುಶಾಹಿ ಗುಣಗಳನ್ನು ಇನ್ನೂ ಅರಗಿಸಿಕೊಳ್ಳುವುದರಲ್ಲೇ ಇದೆ. ಹಾಗಾಗಿ ಇಂಡಿಯಾದ ಪ್ರಾಚೀನ ಸಂಸ್ಕೃತಿಯ ನೆಲೆ ಬೆಲೆಯನ್ನು ಸಮಕಾಲೀನ ಸಂದರ್ಭದ ಒಳ ಹೊರ ಒತ್ತಡಗಳ ಹಿನ್ನೆಲೆಯಲ್ಲಿ ಗುರುತಿಸುವಾಗ ವಸಾಹತು ಮೂಲದ ಆಧುನಿಕತೆಯು ಮಾನದಂಡವಾಗುತ್ತಿದೆ. ಬದುಕಿನ ಬಾಹ್ಯರೂಪ ಮತ್ತು ಮನೋಧರ್ಮದ ನಡುವಿನ ಅಂತರದಲ್ಲಿ ಸಾಮಾಜಿಕ ಸಂವೇದನೆಗಳ ಮತ ಧರ್ಮ ನಿರಪೇಕ್ಷ ಗುಣವನ್ನು ಕಾಣಬಹುದಾದ್ದರಿಂದ ಸಂಸ್ಕೃತಿ ಅನ್ನುವುದು ಸಾಮಾಜಿಕ ಪರಿವರ್ತನೆಯ ಸಂದರ್ಭದಲ್ಲಿ ಬೇರೆಯದೇ ಆದ ಆವರಣದಲ್ಲಿ ಅಭಿವ್ಯಕ್ತವಾಗುತ್ತದೆ. ಈ ಮಾತು ಖಾಟಿಕ್‌ರ ಸಂಸ್ಕೃತಿ ಯನ್ನು ಸಾಮಾಜಿಕ ಬದಲಾವಣೆಯ ಹಿನ್ನೆಲೆಯಲ್ಲಿ ಗಮನಿಸುವಾಗಲೂ ನಿಜವೆನಿಸುತ್ತದೆ.

ಖಾಟಿಕ್‌ರ ಸ್ಥಿತ್ಯಂತರ ಪರಿಸ್ಥಿತಿಯನ್ನು ಅಧ್ಯಯನ ಮಾಡುವಾಗ ಅವರ ಆಚರಣೆಗಳನ್ನು ಕುರಿತು ಗಮನಿಸಿದರೆ ಹಿಂದೆ ಇವರ ಮದುವೆಯ ಆಚರಣೆಗಳಾಗಲಿ ಅಥವಾ ಇತರ ಬೇರೆ ಸಮಾರಂಭಗಳಲ್ಲಿ ಕುರಿಬಲಿ ನೀಡುವುದು ಮಾಂಸಾಹಾರವು ಮುಖ್ಯವಾದ ಆಹಾರ ಪದ್ಧತಿ ಯಾಗಿತ್ತು. ಆದರೆ ಇಂದು ಇವರ ಆಚರಣೆಗಳನ್ನು ಗಮನಿಸಿದಾಗ ಮಾಂಸಾಹಾರವು ತುಂಬಾ ಕಡಿಮೆಯಾಗಿದ್ದು ತಮ್ಮ ದೇವರಿಗೆ ನೈವೇದ್ಯ ಮಾತ್ರ ಮಾಂಸಾಹಾರವನ್ನು ಬಳಸಿ ಉಳಿದಂತೆ ಸಸ್ಯಾಹಾರವನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಇದಕ್ಕೆ ಒಂದು ಕಾರಣ ಇಂದಿನ ದುಬಾರಿಯಾಗಿರುವ ಖರ್ಚು ವೆಚ್ಚದಲ್ಲಿ ಮಾಂಸಾಹಾರವನ್ನು ಎಲ್ಲರಿಗೂ ಪೂರೈಸುವುದು ಕಷ್ಟ. ಇನ್ನೊಂದು ಈ ಸಮುದಾಯದವರು ಇತರ ಸಮುದಾಯದವರಿಗೆ ತಮ್ಮ ಕೆಲಸ ಕಾರ್ಯಗಳಿಗೆ ಆಹ್ವಾನಿಸುವರು. ಇಂಥ ಸಂದರ್ಭದಲ್ಲಿ ಎಲ್ಲರೂ ಮಾಂಸಾಹಾರ ತಿನ್ನುವವರಿ ರುವುದಿಲ್ಲ. ಹಾಗಾಗಿ ಸಸ್ಯಾಹಾರ ಶ್ರೇಷ್ಠ ಎಂಬ ಕಲ್ಪನೆಯಿಂದ ಮತ್ತು ಸಸ್ಯಾಹಾರವು ಒಂದು ಸಾಮಾಜಿಕ ಅಂತಸ್ತನ್ನು, ಗೌರವವನ್ನು ತಂದು ಕೊಡುತ್ತದೆ ಎಂಬ ಕಾರಣದಿಂದ ಹೆಚ್ಚಾಗಿ ಸಸ್ಯಾಹಾರವನ್ನು ಬಳಸುತ್ತಿರುವುದನ್ನು ಕಾಣಬಹುದು. ಮದುವೆಯ ಸಂದರ್ಭದಲ್ಲಿ ಹಲವು ಹೊಸ ಆಚರಣೆಗಳು ಬದಲಾವಣೆಗಳಾಗಿರುವುದು ಕಂಡುಬರುತ್ತದೆ. ಹಿಂದೆ ಇಲ್ಲದಂತ ಹೊಸ ಬ್ಯಾಂಡ್ ಸಿಸ್ಟಮ್‌ಗಳು, ಆರ್ಕೆಸ್ಟ್ರಾಗಳು, ವಿವಿಧ ಅಲಂಾರಗಳನ್ನು ಹೊಂದಿರುವ ಮದುವೆಯ ಚಪ್ಪರಗಳು, ದೀಪಾಲಂಕಾರ ವ್ಯವಸ್ಥೆ ಮದುವೆಯ ಜೋಡಿಗಳಿಗೆ ಕೂಡಿಸಲು ಹೊಸ ಮಾದರಿಯ ಅಲಂಕಾರಿಕ ಕುರ್ಚಿಗಳು, ಮದುಮಗಳಿಗೆ ಹಾಕುವ ಮದರಂಗಿಯ ಅಲಂಕಾರಿಕ ಚಿತ್ತಾರಗಳು, ಅಭರಣಗಳಲ್ಲೂ ನವೀನತೆ, ಬಟ್ಟೆ ಉಡುಗೆ ತೊಡುಗೆಗಳಲ್ಲಿ ಆಧುನಿಕತೆಯ ಛಾಪನ್ನು ಗುರುತಿಸಬಹುದು.

ಅಲಂಕಾರ, ಬ್ಯೂಟಿಪಾರ್ಲರ್‌ಗಳಲ್ಲಿ ಅವರು ಶೃಂಗರಿಸಿಕೊಳ್ಳುವುದು. ಉಡುಗೆ ತೊಡುಗೆ ಗಳನ್ನು ಗಮನಿಸಿದರೆ ಈ ಸಮುದಾಯದ ಯುವತಿಯರು, ಹೆಣ್ಣು ಮಕ್ಕಳು ಆಧುನಿಕ ರೀತಿಯ ಉಡುಪುಗಳಾದ ಚೂಡಿದಾರ, ಪ್ಯಾಂಟು, ಶರ್ಟ್, ನೈಟಿ, ಮಿಡಿಗಳು ಆಧುನಿಕ ರೀತಿಯ ಸೀರೆ ಡಿಸೈನುಗಳನ್ನು ಬಳಸಿದರೆ, ಯುವಕರು ಶರ್ಟ್, ಪ್ಯಾಂಟ್, ಬನಿಯನ್‌ಗಳು, ಟೀ ಶರ್ಟ್‌ಗಳು, ಬರ್ಮೋಡಾ, ಹಾಫ್ ಪ್ಯಾಂಟ್ ಹೀಗೆ ಸಿನಿಮಾ ಶೈಲಿಯ ಉಡುಪುಗಳನ್ನು ಸಹ ತೊಡುವುದನ್ನು ಕಾಣಬಹುದು. ಮನೆಯ ರಚನೆಗಳಲ್ಲೂ ಹೊಸ ಮಾದರಿಗಳನ್ನು ಅಳವಡಿಸಿಕೊಳ್ಳುತ್ತಿರುವುದನ್ನು ಗಮನಿಸಬಹುದು. ಮನೆಯ ಒಳಗಡೆ ಪಡಸಾಲೆಯಲ್ಲಿ ಸೋಫಾ, ಕುರ್ಚಿಗಳು, ನಡುಮನೆಯಲ್ಲಿ ಅಲಂಕಾರಿಕ ವಸ್ತುಗಳು, ಷೋಕೇಶ್‌ಗಳು, ಟಿ.ವಿ. ಇಂತಹ ವಸ್ತುಗಳಿಂದ ಬದಲಾಗಿರುವುದು ಹಾಗೆಯೇ ಮನೆಯ ಪೂಜಾ ವಿಧಾನಗಳಲ್ಲೂ, ದೇವರುಗಳ ವಿಷಯದಲ್ಲೂ ಸಾಕಷ್ಟು ಬದಲಾವಣೆಗಳು ಕಂಡುಬಂದಿರುವುದನ್ನು ಕಾಣ ಬಹುದು. ಉದಾಹರಣೆಗೆ ಅಭಿಷೇಕ ಮಾಡಿಸುವುದು, ಕುಂಕುಮಾರ್ಚನೆ, ಸಾಕಷ್ಟು ಹೊಸ ದೇವರುಗಳು ಇತ್ತೀಚೆಗೆ ಪೂಜೆಗೊಳ್ಳುತ್ತಿರುವುದು ಕಂಡುಬರುತ್ತಿದೆ. ಇದೆಲ್ಲಾ ಸಂಸ್ಕೃತೀ ಕರಣದ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಗಮನ ಸೆಳೆಯುತ್ತವೆ. ಹೊಸ ದೇವಾನು ದೇವತೆಗಳು ಈ ಸಮುದಾಯದಲ್ಲಿ ಪೂಜೆಗೊಳ್ಳುತ್ತಿರುವುದನ್ನು ಕಾಣಬಹುದು. ಹೀಗೆ ಒಟಾ್ಟಗಿ ಈ ಸಮುದಾಯವು ನಿಧಾನವಾಗಿ ಬದಲಾಗುತ್ತಿರುವ ಸಂದರ್ಭಕ್ಕೆ ತನ್ನನ್ನು ತಾನು ಒಗ್ಗಿಸಿಕೊಳ್ಳು ವತ್ತ ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ.

ಹಿಂದಿನಿಂದಲೂ ಈ ಸಮುದಾಯದಲ್ಲಿ ದೈವ ಪಂಚಾಯಿತಿ (ಜಮಾತ್)ಯು ನ್ಯಾಯ ತೀರ್ಮಾನ ಮಾಡುತ್ತ ಸಮುದಾಯದ ಸದಸ್ಯರಲ್ಲಿ ಒಡಕುಗಳು, ವ್ಯಾಜ್ಯಗಳು ಕಂಡುಬಂದರೆ ಅದನ್ನು ಬಗೆಹರಿಸುವಲ್ಲಿ ಪ್ರಮುಖ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಇಂದು ದೈವ ಪಂಚಾಯಿತಿಯ ಮಾತನ್ನು ಕೆಲವರು ಒಪ್ಪಿದರೆ ಮತ್ತೆ ಕೆಲವರು ಸರ್ಕಾರದ ಕಾನೂನುಗಳಾದ ಪೋಲೀಸ್, ಕೋರ್ಟ್ ಕಛೇರಿಗಳ ಮೆಟ್ಟಿಲು ಹತ್ತುವುದು ಕಂಡುಬರುತ್ತದೆ. ಈ ರೀತಿ ನ್ಯಾಯ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿರುವುದು ಕಂಡುಬರುತ್ತದೆ.

ಯುವ ಸಮೂಹವು ಕೆಟ್ಟ ವ್ಯಸನಗಳಿಗೆ ಮಾರು ಹೋಗುತ್ತಿರುವುದು ಕಂಡುಬರುತ್ತದೆ. ಊದಾಹರಣೆಗೆ ಗುಟುಕಾ, ಸಿಗರೇಟು, ಕುಡಿತ, ಜೂಜು ಹೀಗೆ ಆಧುನೀಕತೆಯ ಯುವ ಪೀಳಿಗೆಯು ಇದನ್ನು ಫ್ಯಾಷನ್ ಎನ್ನುವಂತೆ ಯುವ ಜನತೆ ಈ ಚಟಗಳಿಗೆ ದಾಸರಾಗಿ ಮಾರು ಹೋಗುವುದು ಸಾಮಾನ್ಯ ಎನಿಸಿಬಿಟ್ಟಿದೆ. ಹಾಗೆಯೇ ಇಂದು ಹಲವು ಸಾಂಪ್ರದಾಯಿಕ ಆಚರಣೆಗಳ ಜೊತೆಗೆ ಹುಟ್ಟುಹಬ್ಬವನ್ನು ನವೀನ ರೀತಿಯಲ್ಲಿ ಆಚರಿಸಿಕೊಳ್ಳುವುದು, ವ್ಯಾಲೇಂಟೈನ್ಸ್ ಡೇ, ಫ್ರೆಂಡ್ಸ್ ಡೇ, ರೋಸ್ ಡೇ, ಬ್ಯಾಂಗಲ್ಸ್ ಡೇ, ಮದರ್ಸ್‌ಡೇ, ಫಾದರ್ಸ್‌ಡೇ ಹೀಗೆ ಹತ್ತು ಹಲವು ಹೊಸ ಸಂಪ್ರದಾಯಗಳು ಖಾಟಿಕ್ ಯುವ ಜನತೆಯಲ್ಲಿ ಹಾಸುಹೊಕ್ಕಾಗಿರುವುದನ್ನು ಕಾಣಬಹುದು.

ಖಾಟಿಕ್‌ರು ಇತರ ಸಮುದಾಯದವರೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿ ದ್ದಾರೆ. ಮುಖ್ಯವಾಗಿ ಮುಸ್ಲಿಂರೊಂದಿಗೆ, ಈಡಿಗರೊಂದಿಗೆ ಇವರ ನಂಟು ಹೆಚ್ಚು ಎಂದು ಹೇಳಬಹುದು. ಮುಸ್ಲಿಂರು ಖಾಯಂ ಗ್ರಾಹಕರಾಗಿ ಮಾಂಸ ಖರೀದಿಸುವ ಹಾಗೂ ಹಿಂದಿ ಭಾಷೆಯನ್ನು ಬಲ್ಲವರಾಗಿರುವುದರಿಂದ ಇವರೊಂದಿಗೆ ಒಳ್ಳೆಯ ಬಾಂಧ್ಯವ್ಯವಿದೆ. ಹಾಗೆಯೇ ಮಧ್ಯ ಮಾರಾಟ ಇವರ ಎರಡನೆಯ ಪ್ರಮುಖ ವೃತ್ತಿ ಎಂದು ಗುರುತಿಸುವುದಾದರೆ ಈಡಿಗರೊಂದಿಗೆ ಮಧ್ಯ ಮಾರುವಿಕೆ ಹಾಗೂ ಮಧ್ಯ ಮಾರುವ ಈಡಿಗರ ಅಂಗಡಿಗಳಲ್ಲಿ ಖಾಟಿಕ್‌ರು ಚಾಕಣಾ ಮಾರುವ ಪ್ರಮುಖ ವೃತ್ತಿಯಲ್ಲಿ ತೊಡಗಿಕೊಂಡಿರುವುದು ಖಾಟಿಕ್ ಮತ್ತು ಈಡಿಗರಲ್ಲಿ ಅಣ್ಣ ತಮ್ಮಂದಿರ ನಂಟಿದೆ ಎಂದು ಹೇಳಬಹುದು. ಮಧ್ಯ ಕುಡಿದ ನಂತರ ಅಲ್ಲಿಯೇ ರೊಟ್ಟಿ, ಅನ್ನ, ಚಾಕಣಾ, ಮಾಂಸದ ಸಾರು ಕುಡಿದ ಜನರು ಕೊಂಡು ತಿನ್ನುವುದರಿಂದ ಮಧ್ಯಕ್ಕೆ ಮಾಂಸವು ಪೂರಕವಾಗಿರುವುದರಿಂದ ಈ ವ್ಯಾಪಾರವು ನಡೆಯು ತ್ತದೆ. ಹೀಗೆ ಕೆಲವೊಮ್ಮೆ ಈಡಿಗರು ಖಾಟಿಕ್‌ರಿಗೆ ತಮ್ಮ ಮದ್ಯದಂಗಡಿಗಳನ್ನು ಸಹ ನೋಡಿಕೊಳ್ಳುವಂತೆ ಹೇಳುತ್ತಿದ್ದರು ಎಂದು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ತಿಳಿದು ಬರುತ್ತದೆ. ಹೀಗೆಯೇ ಕುರಿ ವ್ಯಾಪಾರದಲ್ಲಿ ಇವರಿಗೆ ಹತ್ತಿರವಾಗಿರುವ ಸಮುದಾಯವೆಂದರೆ ಕುರುಬರು ಎಂದು ಹೇಳಬಹುದು. ಹಾಗಾಗಿ ಇವರು ಕುರುಬರು ಮತ್ತು ಖಾಟಿಕ್‌ರ ಸಂಬಂಧಗಳು ಉತ್ತಮಾಗಿವೆ. ಇವರು ತಮ್ಮ ಮನೆಯ ಕೆಲಸ, ಶುಭ ಕಾರ್ಯಗಳಿಗೆ ಕುರುಬರನ್ನು ಈಡಿಗರನ್ನು ಮುಸ್ಲಿಂರನ್ನು ಅಮಂತ್ರಿಸುತ್ತಾರೆ. ಅವರ ಮನೆಗಳಿಗೂ ಹೋಗಿ ಬರುತ್ತಾರೆ.

* * *

ಹಲಗಲಿ ಬೇಡರು

೫ನೇ ನುಡಿ

ಹತಾರ ಕೊಡಲಿಕೆ ಹೆಂಗಸ್‌ಆಗಿ ಬಳಿಯ್‌ಇಟ್ಟಿಲ ಕೈಯಾಗ
ಯಾವ ಬಂದೀರಿ ಜೀವಹೋದರು ಕೊಡುದಿಲ್ಲ ಸುಮ್ಮನ್‌ಹೋಗರಿ ಈಗ

ಅಂದ ಮಾತ ಯೆಲ್ಲ ಬಂದ ಹೇಳಿದಾನ ಆವಾಗ ಸಾಹೆಬಗ
ಶಿಟ್ಟಿಲಿ ಮುಂಗೈ ಕಟ್ಟನೆ ಕಡಕೊಂಡ ಹುಕುಮ ಕೊಟ್ಟರ್‌ಆಗ

ಕುದರಿಯಮಂದಿ ಕೂಡಿ ಮುಟ್ಟಿತೊ ಹಲಗಲಿಸ್ಥಳದ ಮೇಗ
ವೊಳಗಿನ ಮಂದಿ ವೊಟ್ಟರಲೆ ಹೊಡದರ ಮುಂಗಾರಿ ಮಳಿ ಸುರದ್‌ಅಂಗ

ಹೊರಗಿನ ಮಂದಿ ಗುಂಡ ಹತ್ತಿಕೆರ ತಿರಿಗೆರ ಆವಾಗ
ಕಾಗದ ಬರದ ಕಳವೆರ ಬೇಗನ ದಂಡ ಬರಲ್‌ಎಂತ ಹೀಂಗ