ಮಾನವ ವಿಕಾಸದ ಆರಂಭದ ವೃತ್ತಿ ಬೇಟೆಗಾರಿಕೆ. ನಂತರ ಸಂಸ್ಕೃತಿಯ ವಿಕಾಸ ದೊಂದಿಗೆ ಹಲವು ವೃತ್ತಿಗಳು ಸಮಾಜದಲ್ಲಿ ಕಂಡುಬಂದವು. ಆದರೆ ಬೇಟೆಗಾರಿಕೆಯನ್ನೇ ಉಳಿಸಿಕೊಂಡು ಕಾಡಿನಲ್ಲಿ ನೆಲೆಯನ್ನು ಸ್ಥಾಪಿಸಿಕೊಂಡು, ನಂತರ ನಾಡಿನೊಂದಿಗೆ ಸ್ಪಂದಿಸುತ್ತಾ ಕಾಡು-ನಾಡುಗಳ ಸಾಮರಸ್ಯ ಸಂಘರ್ಷಗಳೊಂದಿಗೆ ಸಂಸ್ಕೃತಿಯನ್ನು ರೂಪಿಸಿ ಕೊಂಡ ಸಮುದಾಯ ಬೇಡನಾಯಕರದು.

ಬೇಟೆ ವೃತ್ತಿಯಿಂದ ವಿಕಾಸಗೊಂಡ ಈ ಬುಡಕಟ್ಟು ಜನ ಆರಂಭದಲ್ಲಿ ಉತ್ತರ ಭಾರತದ ಸಿಂಧೂ, ಬ್ರಹ್ಮಪುತ್ರ, ಗಂಗಾ, ಯಮುನಾ ನದಿಗಳ ಮಲಜ ಭೂಮಿಯಲ್ಲಿದ್ದರು. ಆರ್ಯರು ಈ ದೇಶಕ್ಕೆ ವಲಸೆ ಬಂದಾಗ ಅವರೊಡನೆ ಹೋರಾಡಿ ದಕ್ಷಿಣ ಭಾಗಕ್ಕೆ ವಿಂಧ್ಯಾ ಪರ್ವತಗಳ ಮೂಲಕ ನಿರ್ಗಮಿಸಿದರು. ಓರಿಸ್ಸಾ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ನೆಲೆಗೊಂಡರು.

ವಾಲ್ಮೀಕಿಯ ಹೆಸರು ಒಂದು ಸಮುದಾಯಕ್ಕೆ ಮತ್ತು ಒಬ್ಬ ವ್ಯಕ್ತಿಗೆ ಇರುವದು ಭವ್ಯ ಪರಂಪರೆಯ ಪ್ರತೀಕ. ವಾಲ್ಮೀಕಿ ಮಹರ್ಷಿಯು ರಾಮಾಯಣ ಮಹಾಕಾವ್ಯವನ್ನು ರಚಿಸಿ ಈ ದೇಶಕ್ಕೆ ದೊಡ್ಡ ಉಪಕಾರ ಮಾಡಿದ್ದಾರೆ. ವಾಲ್ಮೀಕಿ ಈ ದೇಶದ ಚರಿತ್ರೆ, ಸಂಸ್ಕೃತಿ ಮತ್ತು ನಾಗರೀಕತೆಯ ನಿಜವಾದ ನಿರ್ಮಾಪಕ. ಅಲ್ಲದೆ ಯಾವುದೇ ಒಂದು ಭಾಷೆ, ಜಾತಿ, ಪ್ರದೇಶಕ್ಕೆ ಸೀಮಿತವಾದ ವ್ಯಕ್ತಿ ಈತನಲ್ಲ. ಸರ್ವತೋಮುಖ ವಿಚಾರಗಳಿಗೆ ಅವಕಾಶ ಮಾಡಿಕೊಟ್ಟಿದ್ದಾನೆ ತನ್ನ ಕಾವ್ಯದಲ್ಲಿ.

ವಾಲ್ಮೀಕಿ, ಶಬರಿ, ಗುಹಾ, ಬೇಡರ ಕಣ್ಣಪ್ಪ, ಏಕಲವ್ಯ, ಧರ್ವವ್ಯಾಧ, ಮುಂತಾದವರು ವಾಲ್ಮೀಕಿ ಸಮುದಾಯದ ಪ್ರಾತಃ ಸ್ಮರಣೀಯರು. ಇವರು ತಮ್ಮ ನಡೆ-ನುಡಿಯಿಂದ, ಜೀವನ ಕ್ರಮದಿಂದ ಜೀವನ ಪಾವನ ಮಾಡಿದ್ದಾರೆ. ತಮ್ಮ ತ್ಯಾಗದಿಂದ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ. ವಾಲ್ಮೀಕಿಯ ಜೀವನ, ಪರಿವರ್ತನೆಯ ಬದುಕು, ತಪಸ್ಸು, ರಾಮಾಯಣ ರಚನೆ ಮತ್ತು ವಾಲ್ಮೀಕಿಯ ವಿಚಾರಗಳು ಯೋಗಿಯ ಜೀವನಕ್ಕೆ ಸಾಕ್ಷಿ ಯಾಗಿವೆ. ಮಹಾಪತಿವೃತೆ ಶಬರಿ, ಶ್ರೀರಾಮ ಲಕ್ಷ್ಮಣ  ವನವಾಸದಲ್ಲಿದ್ದಾಗ ಬೋರೆ ಹಣ್ಣುಗಳನ್ನು ನೀಡಿ ಸಂತೈಸಿದಳು. ದೊರೆ ಹಿರಣ್ಯಧನುವಿನ ಮಗ ಏಕಲವ್ಯ ದ್ರೋಣಾಚಾರ್ಯ ರಿಗೆ ಎಡಗೈ ಹೆಬ್ಬೆರಳನ್ನು ಗುರುಕಾಣಿಕೆಯಾಗಿ ನೀಡಿದನು. ಬೇಡರ ದೊರೆ ಗುಹಾ, ಸೀತೆ ರಾಮ-ಲಕ್ಷ್ಮಣರನ್ನು ಹರಿಗೋಲು ಮೂಲಕ ಗಂಗಾನದಿ ದಾಟಿಸಿದನು.

ಸರಳ ಬದುಕಿನ ಮೂಲಕ ಅಪಾರ ಜ್ಞಾನ ಹಾಗೂ ದಿವ್ಯ ದೃಷ್ಟಿಯನ್ನು ಗಳಿಸಿದವನು ಧರ್ಮವ್ಯಾಧನು. ಅಹಂಕಾರ ದೂರ ಮಾಡಿದವನಿಗೆ ಮೋಕ್ಷದ ದಾರಿ ಸಿಗುವದೆಂದು ತೋರಿಸಿ ಕೊಟ್ಟವನು ಬೇಡರ ಕಣ್ಣಪ್ಪನು. ದಕ್ಷಿಣ ಭಾರತದ ಪುಣ್ಯ ಕ್ಷೇತ್ರವಾದ ಕಾಳಹಸ್ತಿ ನಾಡಿನ ವನು. ಕಾಳ ಹಸ್ತಿ ದೇವಾಲಯವು, ಲೋಕ ಪ್ರಸಿದ್ದಿಯಾಗಿ ದಕ್ಷಿಣ ಕಾಶಿ ಎನಿಸಿಕೊಂಡಿದೆ. ಬೇಡರ ಕಣ್ಣಪ್ಪನು ಶಿವನಿಗೆ ಹಸಿಮಾಂಸವನ್ನು ಹಾಗೂ ತನ್ನ ಕಣ್ಣನ್ನು ಕಿತ್ತು ಅರ್ಪಿಸಿ, ಶಿವನಿಂದ ಕಣ್ಣಪ್ಪನೆಂದು ಪರಮ ಭಕ್ತನಾಗಿ ಅಮರನಾಗಿದ್ದಾನೆ. ಸುಮಾರು ೧೫೦೦ ವರ್ಷಗಳ ಹಿಂದೆಯೇ ಬೇಡರ ಕಣ್ಣಪ್ಪನ ದೇವಾಲಯ ಶ್ರೀಕಾಳಹಸ್ತಿಯಲ್ಲಿ ಕಟ್ಟಲ್ಪಟ್ಟಿದೆ.

ಹೀಗೆ ವಾಲ್ಮೀಕಿ, ಏಕಲವ್ಯ, ಶಬರಿ, ಗುಹಾ, ಧರ್ಮವ್ಯಾಧ, ಬೇಡರ ಕಣ್ಣಪ್ಪ ಸಾಮಾನ್ಯ ಮಾನವರಾಗಿ, ನಡೆಯಿಂದ ಸರಳ ಬದುಕು ಸಾಗಿಸಿಬದುಕಿನಲ್ಲಿ ತಿರುವು ಪಡೆದು ಪರಿವರ್ತನೆ ಗೊಂಡು ದೇವ ಮಾನವರಾಗಿ ಬದುಕಿದರು. ಹಾಗೂ ಯೋಗಿಗಳಾಗಿ ಬದುಕಿದರು.

ವಾಲ್ಮೀಕಿ ಸಮುದಾಯದಲ್ಲಿ ಸಾಂಸ್ಕೃತಿಕ ಶೂರರು ಹಲವಾರು ಜನರಿದ್ದಾರೆ. ಬೇಡ ನಾಯಕರು ರಾಜ್ಯಸ್ಥಾಪನೆ ಆಳ್ವಿಕೆ ನಡೆಸಿದ್ದು ಕಮ್ಮಟ ದುರ್ಗದಲ್ಲಿ. ಮುಮ್ಮಡಿ ಸಿಂಗೇನಾಯಕ ವೀರಕಂಪಿಲರಾಯ ಮತ್ತು ಕುಮಾರರಾಮ ಅವರ ಹೆಸರು ಚರಿತ್ರೆ ಪುಟದಲ್ಲಿ ದಾಖಲಾಗಿದೆ. ‘‘ವಿಜಯನಗರ ಕಾಲದ ಸ್ಥಾಪಕರಾದ ಹಕ್ಕ-ಬುಕ್ಕರು ಕುಮಾರರಾಮನ ಸಹೋದರಿ ಮಾರಾಂಬಿಕೆಯ ಮಕ್ಕಳು’’. ವಿಜಯನಗರ ಕಾಲೀನ ಪಾಳೆಯಗಾರರಲ್ಲಿ ಎಚ್ಚಮನಾಯಕ ಪ್ರಾಮಾಣಿಕತೆ ಮೆಚ್ಚತಕ್ಕದ್ದು.

ಸುರುಪರದ ರಾಜಾವೆಂಕಟಪ್ಪ ನಾಯಕ , ಕಾರುಗನಹಳ್ಳಿ ಮಾರನಾಯಕ, ತರೀಕೆರೆ ಸರ್ಜಪ್ಪ ನಾಯಕರು, ರಾಜಾವೀರಮದಕರಿನಾಯಕ, ಸಣ್ಣನಾಯಕರ ಜೀವನ, ಆಡಳಿತ, ಶೂರತನ, ಇತಿಹಾಸ ಓದಿ ತಿಳಿದುಕೊಳ್ಳಬಹುದು. ನಾವೆಲ್ಲರೂ ಹೆಮ್ಮೆಪಡುವಂತಿದೆ. ಮಧ್ಯಕಾಲದ ಈ ವಾಲ್ಮೀಕಿ  ಸಮುದಾಯದ ರಾಜರ ಆಡಳಿತಕಾಲ. ಅಲ್ಲದೆ ಹಲವಾರು ಸಣ್ಣ ಪುಟ್ಟ ಪಾಳೆಯಗಾರರಾಗಿ ಕೋಟೆ ಕೊತ್ತಳದ ರಕ್ಷಕರಾಗಿ ರಾಜರ ಆಪ್ತಸೇವಕರಾಗಿ ಕೆಲಸ ಮಾಡಿದ್ದಾರೆ.

ಆಧುನಿಕ ಕಾಲದ ವೀರಸಿಂಧೂರ ಲಕ್ಷ್ಮಣ ಹಾಗೂ ಹಲಗಲಿಯ ವೀರ ಜಡಗಾಬಾಲರ ವೀರರ ಬಗ್ಗೆ ಹೆಚ್ಚಿನ ವಿವರ ನೀಡಲು ಈ ಲೇಖನದಲ್ಲಿ ಪ್ರಯತ್ನಿಸಿದ್ದೇನೆ.

ಕುಮಾರರಾಮ ಪರನಾರಿ ಸಹೋದರ, ಶೂರ, ಧೀರ, ಸ್ವದೇಶ, ಸ್ವಧರ್ಮ ಹಾಗೂ ಸ್ವ ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ಈತನು ಮುಂದಾದ. ಹೊಯ್ಸಳರ ಅಂತ್ಯಕಾಲದಲ್ಲಿ ಉದಯಿಸಿ, ವಿಜಯನಗರದ ಆರಂಭಕ್ಕೆ ಅಸ್ತಂಗತನಾದ. ಈ ಕುಮಾರರಾಮನ ವ್ಯಕ್ತಿತ್ವ ಕುರಿತು ಕನ್ನಡದಲ್ಲಿ ಮೂರು ಜನ ಕವಿಗಳು ಕಾವ್ಯಕ್ಕೆ ವಸ್ತುವಾಗಿ ಬಳಸಿಕೊಂಡಿದ್ದಾರೆ.

ಸುರಪುರ ಸಂಸ್ಥಾನ ೧೯ನೇ ಶತಮಾನದ ಇತಿಹಾಸ ಪ್ರಸಿದ್ಧವಾದ ರಾಜ್ಯ. ಸುರಪುರದ ನಾಯಕರು ಸ್ವಾತಂತ್ರ್ಯ ಪ್ರೇಮಿಗಳು ಶೂರರು. ಬ್ರಿಟೀಷರ ಕುಟಿಲೋಪಾಯಕ್ಕೆ ಬಲಿ ಯಾದರು. ಆದರೆ ಚಿಕ್ಕವೆಂಕಟಪ್ಪನಾಯಕ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಬಲಿಕೊಟ್ಟ.

ರಾಜ ವೆಂಕಟಪ್ಪನಾಯಕನ ತಾಯಿ ಈಶ್ವರಮ್ಮ ಬುದ್ದಿವಂತೆ. ಪರಾಕ್ರಮಶಾಲಿ ಮಹಿಳೆ. ಗಂಡನ ಮರಣದನಂತರ ಸುರುಪುರದ ಆಡಳಿತವಹಿಸಿಕೊಂಡಳು. ಮಗನಿಗೆ ತಂದೆ-ತಾತರ ಹೋರಾಟ ಸ್ಮರಿಸಿ ಬ್ರಿಟೀಷರ ವಿರುದ್ಧ ಹೋರಾಡುವ ಶಕ್ತಿ ನೀಡಿದಳು. ತಾಯಿ ಪ್ರೇರಣೆ ಪ್ರೋಸಂಸ್ಥಾನದ ಉಳಿವಿಗಾಗಿ ಹೋರಾಟಕ್ಕೆ ಮುಂದಾದ. ೧೮೫೭ರ ಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ  ಪಾಲ್ಗೊಂಡ ಸುರಪುರದ ವೆಂಕಟಪ್ಪ ನಾಯಕ ವೀರತನದಿಂದ ಹೋರಾಡಿ ಮಡಿದ ತನ್ನ ೨೪ ನೇ ವಯಸ್ಸಿನಲ್ಲಿ.

ಮದಕರಿನಾಯಕನೆಂದರೆ ಚಿತ್ರದುರ್ಗ, ಚಿತ್ರದುರ್ಗವೆಂದರೆ ಮದಕರಿನಾಯಕನೆಂಬಂತೆ ಜನರಿಗೆ ತಿಳಿದ ವಿಷಯ. ೧೭೫೪ರಿಂದ ೧೭೭೯ರ ವರೆಗೆ ಚಿತ್ರದುರ್ಗವನ್ನಾಳಿದ ಸುಮಾರು ೩೭ ವರ್ಷದವನಿರುವಾಗಲೇ ಮಡಿದ ಮದಕರಿನಾಯಕನ ಬಗ್ಗೆ ಗೌರವವಿದೆ, ಹೆಮ್ಮೆ ಇದೆ.

‘‘ದೊರೆ ಸದಾಶಿವನಾಯಕನ ಮರಣಾನಂತರ ಇಕ್ಕೇರಿಯ ದೊರೆಯಾಗಿ, ವಿಜಯ ನಗರದ ಬಲಗೈ ಬಂಟನಾದ, ಉಡುಗಣಿಯ ವೀರಣ್ಣನ ಸೊಕ್ಕನ್ನಡಿಸಿ ಅವನನ್ನು ಸರಿದಾರಿಗೆ ತಂದುವಿಜಯನಗರದ ದೊರೆ ರಾಮರಾಯನ ಪ್ರೀತಿಗೆ ಪಾತ್ರನಾದ. ಅಂದು ವಿಜಯನಗರದ ಪರಮ ಶತ್ರುವಾಗಿದ್ದ ಗೋವೆಯ ಕರ್ಣನನ್ನು ಸೋಲಿಸಿ ವಿಜಯನಗರ ಸಾಮ್ರಾಜ್ಯಕ್ಕೆ ಭದ್ರಬುನಾದಿ ಹಾಕಿದ ವೀರದೊಡ್ಡ ಸಂಕಣ್ಣನಾಯಕ’’

ಮಹಾರಾಷ್ಟ್ರ ಕರ್ನಾಟಕ ಗಡಿಭಾಗದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ ವೀರಯೋಧ ಉಮಾಜಿ ರಾಜೇನಾಯಕ. ೧೯೨೬ರಲ್ಲಿ ಜೆಬುರಿಯಲ್ಲಿ ಉಮಾಜಿ ಟೋಳಿಯವರು ಬ್ರಿಟೀಷರ ಸೈನಿಕರನ್ನು ಕೊಂದು ಆಯುಧ ಸಂಗ್ರಹಿಸಿದರು. ಉಮಾಜಿ ರಾಜೇನಾಯಕ ಬ್ರಿಟೀಷರಿಂದ ತಪ್ಪಿಸಿಕೊಳ್ಳುವ ಕಲೆ ಅರಿತುಕೊಂಡಿದ್ದ. ದರೋಡೆ ಮಾಡಿತಂದ ಹಣವನ್ನು ಬಡಜನರಿಗೆ ಹಂಚುತ್ತಿದ್ದ ಉಮಾಜಿ, ಜನರಿಗೆ ನಾವು ಕಳ್ಳರಲ್ಲ, ನಾವು ಕ್ರಾಂತಿಕಾರಿಗಳು. ನಾವು ಒಂದು ಸರಕಾರವೆಂದು ಹೇಳುತ್ತಿದ್ದ. ಬ್ರಿಟೀಷ ಸರಕಾರ ಕಿತ್ತೊಗೆಯಲು ಯತ್ನಿಸುತ್ತೇವೆ ಎಂದು ಹೇಳಿದ್ದ

ಬ್ರಿಟೀಷರು ಉಮಾಜಿ ರಾಜೇನಾಯಕನನ್ನು ಹಿಡಿಯಲು ಅನೇಕ ರೀತಿಯಲ್ಲಿ ಯತ್ನಿಸಿ ದರು. ಕುಟಿಲ ನೀತಿ ಅನುಸರಿಸಿ ಉಮಾಜಿಯ ವಿಶ್ವಾಸಿತ ಬಂಟರಾದ ನಾನಾ ಹಾಗೂ ಕಾಳೂರನ್ನು ಒಲಿಸಿಕೊಂಡು ಇವರ ಟೋಳಿಯಿಂದ ಉಮಾಜಿ ರಾಜೇನಾಯಕನನ್ನು ಹಿಡಿಸಿ ಬಿಟ್ಟರು. ಮುಳ್ಳನ್ನು ಮುಳ್ಳಿನಿಂದ ತೆಗೆದಂತೆ ಬ್ರಿಟೀಷರು ಮಾಡಿದರು. ದಿನಾಂಕ ೩.೨.೧೮೩೪ ರಲ್ಲಿ ಪುಣೆಯಲ್ಲಿ ಗಲ್ಲಿನ ಶಿಕ್ಷೆ ವಿಧಿಸಲಾಯಿತು. ಸ್ವಾತಂತ್ರ್ಯಕ್ಕಾಗಿ ತಹಿಸುತ್ತಿದ್ದ ಜೀವ ಕಣ್ಮರೆಯಾಯಿತು.

ಸಿಂಧೂರ ಲಕ್ಷ್ಮಣ ಬೇಡರ ಸಾಬು ಮತ್ತು ನರಸವ್ವ ದಂಪತಿಗಳ ಪುತ್ರ. ಲಕ್ಷ್ಮಣನು ಗೌಡರ ದಬ್ಬಾಳಿಕೆಯ ವಿರುದ್ಧ ತಿರುಗಿ ಬಿದ್ದನು. ನಂತರ ಬ್ರಿಟೀಷ್ ಸರಕಾರ ಲಕ್ಷ್ಮಣನನ್ನು ಹಿಡಿಯಲು ಯತ್ನಿಸಿತು. ಜತ್‌ಜೇಲಿನಿಂದ ತಪ್ಪಿಸಿಕೊಂಡು ಬೀಲೂರು ಮೂಲಕ ವಿಜಾಪುರ, ಬಾಗಲಕೋಟೆ ಜಿಲ್ಲೆಗೆ ಬಂದ. ಊರು-ಕೇರಿ-ಗುಡ್ಡ-ಗವಿಗಳಲ್ಲಿ ಕಾರ್ಯಾಚರಣೆ ಮಾಡಿದ. ಲಕ್ಷ್ಮಣನ ಹೋರಾಟ ಸಂಸ್ಥಾನ ಮತ್ತು ಬ್ರಿಟೀಷ ಕಂಪನಿ ಸರಕಾರದ ವಿರುದ್ಧ ಮಾತ್ರವಿತ್ತು.  ಸಿಂಧೂರಿನ ವಿವಾದದ ತರುವಾಯ ಲಕ್ಷ್ಮಣತನ್ನ ಅಳಿಯಂದಿರು ಮತ್ತು ಗೆಳೆಯರೊಂದಿಗೆ ಗುಂಪು ಕಟ್ಟಿಕೊಂಡು ಜಮೀನ್ದಾರನ ಹಾಗೂ ಕಂಪನಿ ಸರಕಾರದ ವಿರುದ್ಧ ಹೋರಾಟ ಮಾಡಿದ. ಬಡವರಿಗೆ ತಾನು ತಂದ ಹಣ ಕೊಡುತ್ತಿದ್ದ ಜನಸಾಮಾನ್ಯರ ನಜರಿನಲ್ಲಿ ಲಕ್ಷ್ಮಣ ಆದರ್ಶನಾಯಕನಾಗಿದ್ದ.

ಜಮೀನ್ದಾರರು, ಇನಾಮುದಾರರು ಹಾಗೂ ಕಂಪನಿ ಸರಕಾರದವರು ಜನರನ್ನು ಸುಲಿಯು ತ್ತಿದ್ದರು. ಇವರಿಂದ ಜನಸಾಮಾನ್ಯರಿಗೆ ಮುಕ್ತಿ ಸಿಗಬೇಕಾದರೆ ಬಂಡಾಯ ಮಾಡಲೇ ಬೇಕೆಂದು ಲಕ್ಷ್ಮಣ ಬಯಸಿದ್ದ. ಲಕ್ಷ್ಮಣ ಯಾವ ಸಂಸ್ಥಾನದ ದೊರೆಯಲ್ಲ ರಾಜನಲ್ಲ. ಆದರೆ ಸಾಮಾನ್ಯರು ಬದುಕಿ ಬಾಳಲು ರಕ್ಷಣೆ ಕೊಡಬೇಕಾದ ಸರಕಾರ, ಜಮೀನ್ದಾರರು ಅನ್ಯಾಯ ಮಾಡುತ್ತಿದ್ದರು. ಆ ಅನ್ಯಾಯದ ವಿರುದ್ಧ ಹೋರಾಡಲು ಕೊನೆಯವರೆಗೂ ಸಿದ್ದನಾದವನು ಈ ಲಕ್ಷ್ಮಣ.

‘‘ಲಕ್ಷ್ಮಣನ ದೃಷ್ಟಿಯಲ್ಲಿ ಈ ದೇಶದ ವೈರಿಗಳು ಇಬ್ಬರು. ಒಬ್ಬರು ದೇಶವನ್ನೇ ಕಿತ್ತು ತಿನ್ನುತ್ತಿರುವ ಆಂಗ್ಲರು. ಇನ್ನೊಬ್ಬರು ಜನರನ್ನೇ ಸುಲಿಯುತ್ತಿರುವ ಸ್ಥಾನಿಕ ಆಡಳಿತ ಗಾರರು. ಇವರೀರ್ವರನ್ನು ಮುಗಿಸಿದ ಹೊರತು ಜನಸಾಮಾನ್ಯರಿಗೆ ಮುಕ್ತಿಯೆಂಬುದಿಲ್ಲ ವೆಂದು ಲಕ್ಷ್ಮಣನ ಬಂಡಾಯದ ಮೂಲ ಗುರಿಯಾಗಿತ್ತು.’’ ಈ ಗುರಿ ಸಾಧನೆಗಾಗಿ ತನ್ನ ಚೋಳಿಯೊಂದಿಗೆ ಗುಡ್ಡ ಗವಿಗಳಲ್ಲಿ ಇರತೊಡಗಿದ.

ಲಕ್ಷ್ಮಣ ಬಾಗಲಕೋಟೆ ಜಮುಖಂಡಿ ಭಾಗದಲ್ಲಿ ವಾಸ ಮಾಡತೊಡಗಿದ. ಈ ಸುದ್ದಿ ಬ್ರಿಟೀಷರಿಗೂ ತಿಳಿಯಿತು. ಬ್ರಿಟೀಷರು ಫೌಜುದಾರ ಕಲಾಲನನ್ನು ಜತ್‌ದಿಂದ ಜಮಖಂಡಿಗೆ ವರ್ಗಮಾಡಿದರು. ಚಿಕ್ಕಪಡಸಲಗಿ ಲಕ್ಷ್ಮಣನನ್ನು ಬಂಧಿಸಿದರು. ಜಮಖಂಡಿ ಜೇಲಿಗೆ ಹಾಕಿದರು. ಆದರೆ ಜಮಖಂಡಿ ಜೇಲ ಮುರಿದು ಲಕ್ಷ್ಮಣನು ತನ್ನ ಸಂಗಡಿಗರೊಂದಿಗೆ ಪರಾರಿಯಾದ. ಕಲ್ಲೋಳ್ಳಿ ಗುಡ್ಡದಲ್ಲಿ ಫೌಜುದಾರ ಕಲಾಲನಿಗೂ ಲಕ್ಷ್ಮಣನಿಗೂ ಸೆಣಸಾಟ ನಡೆಯಿತು. ಲಕ್ಷ್ಮಣನ ಅಳಿಯ ನರಸಪ್ಪನು ಕೊಡಲಿಯಿಂದ ಕಲಾಲನ ಕುತ್ತಿಗೆಯನ್ನು ಬೇರ್ಪಡಿಸಿದ. ಕಲಾಲನ ಕೊಲೆಯ ಸುದ್ದಿ ಹಬ್ಬತೊಡಗಿತು.

ಬ್ರಿಟೀಷ್ ಸರಕಾರ ಲಕ್ಷ್ಮಣನನ್ನು ಹಿಡಿಯಲು ಸಂಸ್ಥಾನಗಳಿಗೆ, ಇನಾಮುದಾರರಿಗೆ ತಿಳಿಸಿತು. ಅಲ್ಲದೆ ಪೋಲಿಸ್ ಅಧಿಕಾರಿ ಗಾರ್ಮನನ್ನು ತೆಗ್ಗಿ ಗ್ರಾಮಕ್ಕೆ ಕಳಿಸಿತು. ತೆಗ್ಗಿ ಗ್ರಾಮದ ಪೋಲಿಸ್ ಪಾಟೀಲ ಹುದ್ದೆಯಲ್ಲಿ ವೆಂಕನಗೌಡನಿದ್ದನು. ಇವರು ಲಕ್ಷ್ಮಣನ ಕುಲದವರು. ಲಕ್ಷ್ಮಣನಿಗೆ ಸ್ವ ಕುಲದ ಕಾರಣ ಬೆಂಬಲಿಸುವದು, ಶಸ್ತ್ರಾಸ್ತ್ರ ಕೊಡುವುದು ಅಪರಾಧವೆಂದು ಗಾರ್ಮನ ಹೇಳಿದ. ಕಾನೂನು ರೀತ್ಯಾ ನಿಮ್ಮನ್ನು ಬಂದಿಸುವನೆಂದೂ ಎಚ್ಚರಿಕೆ ನೀಡಿದ. ಗಾರ್ಮನ ನೀಡಿದ ಎಚ್ಚರಿಕೆ ಪೋಲಿಸ್ ಪಾಟೀಲ ಹುದ್ದೆ ಕೈಬಿಡುವದೆಂದು ಚಿಂತಿಸತೊಡಗಿದ, ಲಕ್ಷ್ಮಣನ ಸ್ನೇಹ, ಕುಲದ ಸ್ನೇಹ ಈಗ ಮುಳುವಾಗಿತ್ತು ವೆಂಕನಗೌಡರಿಗೆ.

‘‘ಕುಲದ ವಿರುದ್ಧ ಕುಲವನ್ನು, ಸಂಸ್ಥಾನದ ವಿರುದ್ದ ಸಂಸ್ಥಾನವನ್ನೇ ಎತ್ತಿಕಟ್ಟಿ ತಮ್ಮ ಉದ್ದೇಶ ಈಡೇರಿಸಿಕೊಳ್ಳುವ ಇಂಗ್ಲೀಷರ ಒಡೆದು ಆಳುವ ನೀತಿ ತೆಗ್ಗಿ ವೆಂಕಟನಗೌಡರ ಮೇಲೂ ಪ್ರಯೋಗಿಸಲ್ಪಟ್ಟಿತು. ನಂತರ ಕುಲ-ಜಾತಿ ಸಮುದಾಯದವನೆಂದು ತಿಳಿದು ಲಕ್ಷ್ಮಣನನ್ನು ಹಿಡಿದುಕೊಡಲು ನಿರ್ಣಯಿಸಿದ.’’

೧೯೨೨ರಲ್ಲಿ ತೆಗ್ಗಿಯ ಕಪ್ಪರ ಪಡಿಯವ್ವನ ಗುಡ್ಡದಲ್ಲಿ ತನ್ನ ಸಂಗಡಿಗರೊಂದಿಗೆ ಲಕ್ಷ್ಮಣನು ಊಟ ಮಾಡುವಾಗ ಬಂದೂಕಿನ ಗುಂಡಿಗೆ ಬಲಿಯಾದ. ಬಡಜನರ ಪಾಲಿನ ದೇವರು ಮರೆಯಾದ. ಬ್ರಿಟೀಷ್ ಸರಕಾರ, ಜಮಖಂಡಿ, ಜತ್ ಮುಧೋಳ ಮುಂತಾದ ಸಂಸ್ಥಾನಗಳ ಆಡಳಿತಗಾರರು, ಶ್ರೀಮಂತರು ಲಕ್ಷ್ಮಣನ ವಿರೋಧಿಗಳಾಗಿದ್ದರು. ಆತನನ್ನು ಬಂಧಿಸುವಲ್ಲಿ ಯತ್ನಿಸುತ್ತಿದ್ದರು. ಆ ಪ್ರಯತ್ನದಲ್ಲಿ ಯಶ ಕಂಡರು.

ಒಂದು ಮಾತು ವಿಚಾರಕ್ಕೆ ಅಸ್ಪದಮಾಡಿಕೊಡುತ್ತದೆ. ಲಕ್ಷ್ಮಣ ಊರು ಬಿಡುವುದಕ್ಕೆ ಸಣ್ಣ ಕಾರಣವೊಂದು ಯಾವ ಯಾವ ತಿರುವು ಮಾಡಿಕೊಟ್ಟಿತು. ಸಿಂಧೂರಿನಿಂದ ಸಿಡಿದು ಹೊರಬಂದ ಈ ಲಕ್ಷ್ಮಣ ತಿರುಗಿದ ಪ್ರದೇಶಗಳು ನೂರಾರು, ಮಾಡಿದ ಹೋರಾಟಗಳು ನೂರಾರು, ನೀಡಿದ ಘರ್ಷಣೆಗಳು ಅನಂತವೆನ್ನಬಹುದು. ಸ್ವಾಭಿಮಾನಕ್ಕೆ ಆತ್ಮಾಭಿಮಾನಕ್ಕೆ ದಕ್ಕೆಯಾದ ವೀರನು ಸಮರ್ಥನಾಗಿ ಹೋರಾಟ ಮಾಡುತ್ತಾನೆ ಎನ್ನುವುದಕ್ಕೆ ವೀರ ಸಿಂಧೂರ ಲಕ್ಷ್ಮಣ ಉದಾಹರಣೆ. ಸ್ಥಾನಿಕ ಇನಾಮುದಾರರೊಂದಿಗೆ ಬ್ರಿಟೀಷರು ರೂಪಿಸಿದ್ದ ಜಂಟಿ ಕಾರ್ಯಾಚರಣೆಯಲ್ಲಿ ಸಿಂಧೂರ ಲಕ್ಷ್ಮಣ ಅಮೋಘ ಪ್ರತಿಭಟನೆ ನೀಡಿದ್ದಾನೆ. ತನ್ನ ತಾರುಣ್ಯದ ಬಹುಪಾಲು ಸಮಯವನ್ನು ಬೆಟ್ಟಗುಡ್ಡಗಳಲ್ಲೇ ಸವೆಸಿದ. ಸಿಂಧೂರ ಲಕ್ಷ್ಮಣನ ತ್ಯಾಗ, ಬಲಿದಾನ ಯಾವ ಸ್ವಾತಂತ್ರ್ಯ ಹೋರಾಟಗಾರರಿಗಿಂತಲೂ ಕಡಿಮೆಯಾದುದಲ್ಲ. ಈ ಹೋರಾಟಕ್ಕೆ ಲಕ್ಷ್ಮಣನ ಅಳಿಯಂದಿರಾದ ಸಾಬು, ನರಸು, ಗೋಪಾಲಿ, ಭೀಮ ಬಲ ನೀಡಿದರು.

ನಾನಿರುವ ಊರು ಹಲಗಲಿ. ಈ ಹಲಗಲಿ ಗುಡ್ಡದಲ್ಲಿ ಲಕ್ಷ್ಮಣ ಹಾಗೂ ಆತನ ಅಳಿಯಂದಿರು, ಗೆಳೆಯರ ಗುಂಪು ಹಲವಾರು ದಿನ ಕಾಲ ಕಳೆದಿದ್ದಾರೆ, ಗುಡ್ಡದಲ್ಲಿ ಜನ ಸಾಮಾನ್ಯರ ಜತೆ ಮಾತನಾಡಿದ್ದಾನೆ. ಜನಸಾಮಾನ್ಯರು ಪ್ರೀತಿಯಿಂದ ತಂದುಕೊಟ್ಟ ರೊಟ್ಟಿ ಪಲ್ಲೆಯನ್ನು ಸಂತೋಷದಿಂದ ತಿಂದಿದ್ದಾರೆ. ಅವರ ಸುಖ-ದುಃಖವನ್ನು ಕೇಳಿಕೊಂಡಿದ್ದಾನೆ. ಲಕ್ಷ್ಮಣನ ಅಳಿಯ ನರಸಪ್ಪನ ಜತೆ ಮಾತನಾಡಿದ ಹಿರಿಯರನ್ನು ಭೆಟ್ಟಿಯಾಗಿದ್ದೇನೆ. ‘‘ಲಕ್ಷ್ಮಣನ ಹೋರಾಟದ ಹೆಜ್ಜೆಗಳನ್ನು ಗುರುತಿಸಲು ಜನಪದರು ಹಾಡಿದ ಹಾಡುಗಳೇ ಅನನ್ಯ ಆಕರಗಳು” ಎಂದು ಡಾ. ರಂಗರಾಜು ವನದುರ್ಗರು ಹೇಳಿದ ಮಾತು ಸತ್ಯ.

ಲಕ್ಷ್ಮಣ ಬಡವರ ಬಗ್ಗೆ ಅನುಕಂಪ ತೋರುತ್ತ ಬಂದ. ಸರಳಜೀವನ ನಡೆಸುತ್ತ ಬಂದ. ಪರನಾರಿ ಸಹೋದರತ್ವ ತೋರಿದ. ತನ್ನನ್ನು ತನ್ನ ಬಂಧು ಬಳಗಕ್ಕೆ ಸಮರ್ಪಿಸಿಕೊಂಡ. ಹೀಗಾಗಿ ಲಕ್ಷ್ಮಣನ ಹೋರಾಟ ಅತ್ಯಂತ ರೋಮಾಂಚನಕಾರಿಯಾಗಿದೆ. ಈ ಹೋರಾಟ ಸ್ವಾತಂತ್ರ್ಯ ಹೋರಾಟಕ್ಕಿಂತಲೂ ಕಡಿಮೆಯಾದುದ್ದಲ್ಲ ಎನ್ನುವ ಮಾತು ಡಾ. ಆರ್.ಸಿ. ಮುದ್ದೇಬಿಹಾಳರು ‘‘ಸಿಂಧೂರ ಲಕ್ಷ್ಮಣ’’ ಎಂಬ ತ್ರಿಪದಿಯಲ್ಲಿ ಬರೆದ ಮಹಾಕಾವ್ಯ ಈ ಮಾತು ಸತ್ಯವೆನಿಸುತ್ತದೆ.

ಸಿಂಧೂರಿನಲ್ಲಿ ಬಾಳಿ ಬದುಕಬೇಕಾದ ಲಕ್ಷ್ಮಣನನ್ನು ಗೌಡ, ಇನಾಮುದಾರರು, ಬ್ರಿಟೀಷ್ ಸರಕಾರಕ್ಕೊಂದು ಹಾಕಿತು.

ಹಲಗಲಿಯ ವೀರಜಡಗಾಬಾಲರು

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಹಳ್ಳಿ-ಹಲಗಲಿ. ಈ ಹಲಗಲಿಯ ಜಡಗಾ, ಬಾಲ, ಭೀಮ ಮತ್ತು ಹಣಮ ಮುಂತಾದ ವೀರರು ಬ್ರಿಟೀಷರ ನಿಶ್ಯಸ್ತ್ರೀಕರಣ ಕಾಯ್ದೆಯ ವಿರುದ್ಧ ಹೋರಾಟ ಮಾಡಿದರು.

೧೮೫೭ರಲ್ಲಿ ನಿಶ್ಯಸ್ತ್ರೀಕರಣ ಕಾಯ್ದೆಯನ್ನು ಬ್ರಿಟೀಷರು ಜಾರಿಗೆ ತಂದರು. ಈ ಕಾಯ್ದೆ ಭಾರತ ವ್ಯಾಪ್ತಿ ಜಾರಿಗೆ ಬಂದಿತು. ಈ ಕಾನೂನಿನನ್ವಯ ಹಲಗಲಿಯ ಬೇಡರು ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಬೇಕಾಗಿತ್ತು. ಹಲಗಲಿಯಲ್ಲಿಯೂ ಡಂಗೂರ ಸಾರಲಾಯಿತು. ‘‘ಮಾರಕ ಶಸ್ತ್ರಾಸ್ತ್ರ ಯಾರೂ ಇಟ್ಟುಕೊಳ್ಳಕೂಡದು. ತಕ್ಷಣ ಕಂಪನಿ ಸರಕಾರಕ್ಕೆ ಒಪ್ಪಿಸ ಬೇಕು. ಒಂದು ವೇಳೆ ಬಚ್ಚಿಟ್ಟವರಿಗೆ ಮೂರು ವರ್ಷ ಶಿಕ್ಷೆಯಾಗುವದು. ಪ್ರತಿಭಟಿಸಿದ ವರನ್ನು ಕೊಂದು ಹಾಕಲಾಗುವದು” ಎಂಬ ಶಾಸನ ಹಲಗಲಿ ಬೇಡರಿಗೆ ನುಂಗಲಾರದ ತುತ್ತಾಯಿತು.

ನಾವು ತಂದ ಶಸ್ತ್ರಾಸ್ತ್ರ ಬೇಟೆಯಾಡುವುದಕ್ಕಾಗಿ ಮತ್ತು ಬದುಕು ಸಾಗುವ ಸಾಧನಕ್ಕಾಗಿ ಮಾತ್ರ ಬಳಸುತ್ತೇವೆ. ಈ ಆಯುಧ ಬ್ರಿಟೀಷರಿಗೆ ಒಪ್ಪಿಸಿ ನಾವು ಬರಿಗೈಯಿಂದ ಬದುಕಬೇಕೆ? ಹೀಗೆ ಹೇಳಲು ಇವರಾರು? ವ್ಯಾಪಾರಕ್ಕಾಗಿ ಬಂದ ಬ್ರಿಟೀಷರು ನಮ್ಮ ಶಸ್ತ್ರಾಸ್ತ್ರ ಕೇಳಲು ಇವರ್ಯಾರು? ಎಂಬ ಪ್ರಶ್ನೆಯ ಜತೆಗೆ ಆತ್ಮಾಭಿಮಾನ ಜಾಗೃತವಾಯ್ತು. ಒಂದು ವೇಳೆ ಹೇಡಿಯಾಗಿ ಆಯುಧಗಳನ್ನು ಬ್ರಿಟೀಷರಿಗೆ ಒಪ್ಪಿಸಿದರೆ ಮಗ್ಗುಲಲ್ಲಿಯ ಹೆಂಡತಿಯನ್ನೇ ಕೊಟ್ಟಂಥ ಅಪಮಾನ ತಮಗಾಗುತ್ತದೆ ಎಂದು ತಿಳಿದರು. ಹೊರಗಿನಿಂದ ಬಂದವರಿಗೆ ತಾವೇಕೆ ಹೇಡಿಯಾಗಿ ತಮ್ಮ ಆಯುಧಗಳನ್ನು ಬ್ರಿಟೀಷರಿಗೆ ಕೊಡಲೇಬಾರದೆಂದು ನಿರ್ಧರಿಸಿ ದರು. ಜಡಗಾ, ಬಾಲ, ಹಣಮ, ಭೀಮರು ಒಟ್ಟಾಗಿ ಬೇಡರ ಪರವಾಗಿ ತಮ್ಮ ಆಸುಪಾಸಿನ ಹಿರಿಯರಿಗೆ ಯುವಕರಿಗೆ ತಿಳಿಸಿದರು. ಶಸ್ತ್ರಾಸ್ತ್ರಗಳನ್ನು ಒಪ್ಪಿಸದೆ ಬಲಿದಾನ ಮಾಡಿದರು. ಹಲಗಲಿ ವೀರರು ಈ ತೆರನಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಸತ್ತ ಹಲಗಲಿಯ ಬೇಡರ ಹೋರಾಟ ಪ್ರಾಯಶಃ ಭಾರತದಲ್ಲಿ ಇದೊಂದೆ ಎಂದು ಹೇಳಬಹುದು. ಹೀಗೆ ಇಡೀ ಊರಿನ ಜನ ಬಲಿದಾನವಾದ ಘಟನೆಗೆ ಜಪಾನಿ ಭಾಷೆಯಲ್ಲಿ ‘‘ಹರಾಕರಿ’’ ಎಂದು ಕರೆಯು ತ್ತಾರೆ.

ಬ್ರಿಟೀಷ ಸರಕಾರ ೧೮೫೩, ಸೆಪ್ಟೆಂಬರ್ ೧೧ರಂದು ನಿಶ್ಯಸ್ತ್ರೀಕರಣ ಕಾಯ್ದೆಯನ್ನು ಹೊರಡಿಸಿತು. ಭಾರತೀಯರು ತಕ್ಷಣ ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳನ್ನು ತಂದು ಸರಕಾರಕ್ಕೆ ಒಪ್ಪಿಸಿ ಲಾಯಸನ್ಸ್ ಪಡೆಯಬೇಕೆಂದು ತಿಳಿಸಿತು. ಹಲಗಲಿಗೂ ಈ ಕಾಯ್ದೆ ಬಂದಿತು. ಆಗ ಹಲಗಲಿ ಮುಧೋಳ ಸಂಸ್ಥಾನದ ಒಂದು ಹಳ್ಳಿ. ಮುಧೋಳ ಸಂಸ್ಥಾನದ ರಾಜೇಸಾಹೇಬ ರಾದ ಘೋರ್ಪಡೆಯವರು ಬ್ರಿಟೀಷ್ ಸರಕಾರಕ್ಕೆ ವಿಧೇಯರಾಗಿದ್ದರಿಂದ ಸಂಸ್ಥಾನದಲ್ಲಿ ಯಾವ ತೊಂದರೆಯಾಗಲಿಲ್ಲ. ಆದರೆ ಹಲಗಲಿ ಬೇಡರಿಗೆ ಈ ಕಾಯ್ದೆ ಸರಿ ಬರಲಿಲ್ಲ.

ಬ್ರಿಟೀಷರ ಈ ಕಾನೂನನ್ನು ಜಾರಿಗೆ ತರಲು ಮುಧೋಳ ಸಂಸ್ಥಾನದ ಕಾರಬಾವಿ ಕೃಷ್ಣರಾವ ಪ್ರಯತ್ನ ಮಾಡಿದ. ಹಲಗಲಿ ಬೇಡರು ಒಪ್ಪಲಿಲ್ಲ. ಆಗ ಕಾರಬಾರಿಯು ತನ್ನ ಕಾರಕೂನನಾದ ರಾಮರಾಯ ಭುಜಂಗನನ್ನು ಕಳಿಸಿ ಬೇಡರ ಮನಸ್ಸು ಒಲಿಸಲು ಪ್ರಯತ್ನಿಸಿ ವಿಫಲನಾದ. ಬೇಡರ ನಾಯಕ ವೀರಹನುಮನಾಯಕನನ್ನು ಕಳಿಸಿದ ಕೆಲಸವಾಗಲಿಲ್ಲ. ಕುಂದರಗಿಯ ಕೃಷ್ಣೇಗೌಡರನ್ನು ಬೇಡರ ಮನಸ್ಸನ್ನು ಒಲಿಸಲು ಕಳಿಸಿದ ಆಗಲೂ ಕೆಲಸ ವಾಗಲಿಲ್ಲ. ಹಲಗಲಿಯ ಸುತ್ತಲಿನ ಹಳ್ಳಿಗಳಾದ ಮಂಟೂರ, ಬುದ್ನಿ, ಬಂಟನೂರು, ಅಲಗುಂಡಿ, ಬೇಡರ ಮುಖಂಡರನ್ನು ಕರಿಸಿ ಬ್ರಿಟೀಷರ ಕಾನೂನ ಒಪ್ಪಿಕೊಳ್ಳುವಂತೆ ಹಲಗಲಿ ಬೇಡರಿಗೆ ತಿಳಿಸಲು ಕಾರಬಾವಿ ಪ್ರಯತ್ನ ಮಾಡಿದರೂ ಯಾವ ಕೆಲಸವಾಗಲಿಲ್ಲ. ಆಗ ಮೇಲಾಧಿಕಾರಿಗೆ ಬರೆದು ತಿಳಿಸಿದ ‘‘ಹಲಗಲಿಯಲ್ಲಿ ಏನು ನಡೆಯುತ್ತಿದೆ ಎಂಬುದು ಒಂದು ತಿಳಿಯದು. ಹಲಗಲಿ ಬೇಡರು ಈ ಹಳ್ಳಿಗೆ ಹೊರಗಿನವರು ಬರುವುದನ್ನು ಪ್ರತಿಬಂಧಿಸಿ ದ್ದಾರೆ.’’ ಎಂದು ಹೇಳಿ ಕೈಚಲ್ಲಿ ಕುಳಿತ. ಆಗ ಬ್ರಿಟೀಷರು ಹಲಗಲಿ ಬೇಡರ ಆಯುಧ ಒಪ್ಪಿಸುವ ನಿರಾಕರಣೆಯನ್ನು ಗಂಭೀರವಾಗಿ ಪರಿಗಣಿಸಿ ನವ್ಹೆಂಬರ್ ೨೭. ೧೮೫೩ರಂದು ಕರ್ನಲ್ ಮಾಲ್ಕಂ ಸಾಹೇಬನಿಗೆ ಈ ಕಾರ್ಯ ಒಪ್ಪಿಸಿತು.

೧೮೫೭ರ ಹೊತ್ತಿಗೆ ಬ್ರಿಟೀಷರು ಕಲಾದಗಿಯನ್ನು ತಮ್ಮ ಆಡಳಿತ ವ್ಯವಸ್ಥೆಯ ಮುಖ್ಯ ಸ್ಥಳವನ್ನಾಗಿ ಮಾಡಿಕೊಂಡಿದ್ದರು. ಕಲಾದಗಿಯಿಂದ ಬ್ರಿಟೀಷ್ ಅಧಿಕಾರಿಯೊಬ್ಬ ಹಲಗಲಿಗೆ ಬಂದ. ಆಗ ಕಾವಲು ಕಾಯುತ್ತಿದ್ದ ಭೀಮ ಅಧಿಕಾರಿಯ ಕುದುರೆಗೆ ಕವಣೆಗಲ್ಲು ಬೀಸಿದ. ಕುದುರೆ ಮುಗ್ಗರಿಸಿ ಸವಾರ ಕೆಳಗೆ ಬಿದ್ದ ಹಲಗಲಿಯ ಬೇಡರು ದಾಳಿಮಾಡಿ ೧೨-೧೩ ಜನ ಅಧಿಕಾರಿಗಳನ್ನು ಕೊಂದರೆಂದು (ಹಲಿಗಲಿಯಲ್ಲಿ ವಾಸವಾಗಿದ್ದ ಕುಲಕರ್ಣಿ ಡಾಕ್ಟರ್ ಹೇಳುತ್ತಿದ್ದರು) ಪ್ರತೀತಿ ಇದೆ. ವಿಷಯದ ಗಂಭೀರತೆ ಅರಿತುಕೊಂಡ ಅಧಿಕಾರಿ ಹಲಗಲಿ ಯೊಳಗೆ ಬರಲಾರದೆ ಹಾಗೆ ಹಿಂತಿರುಗಿದ್ದ. ಹಲಿಗಲಿ ಬೇಡರು ಅಯುಧ ನಿರಾಕರಣೆ ಕಾಯ್ದೆ ಯನ್ನು ಗಂಭೀರವಾಗಿ ಪರಿಗಣಿಸಿ ಇದೊಂದು ಸಶಸ್ತ್ರ ಕ್ರಾಂತಿಯಾಗಲಿದೆ ಎಂದು ಸರಕಾರ ಮನವರಿಕೆ ಮಾಡಿಕೊಂಡಿತು.

ಲೆಫ್ಟಿನೆಟ್ ಸೆಟನ್‌ಕರ್ ಸಾಹೇಬನಿಗೆ ವಿಜಾಪೂರದ ಅಶ್ವದಳದೊಂದಿಗೆ ಹಲಗಲಿಗೆ ಬರಲು ಮಾಲ್ಕಂ ಸಾಹೇಬ ತಿಳಿಸಿದರು. ಸೆಟನ್‌ಕರ್ ಸಾಹೇಬ ಹಲಿಗಲಿ ಬೇಡರಿಗೆ ತಕ್ಷಣ ಆಯುಧಗಳನ್ನು ಒಪ್ಪಿಸಿ ಅನುಮತಿ ಪಡೆದು ಒಯ್ಯಬೇಕೆಂದು ತಿಳಿಸಿದ ಆದರೆ ಬೇಡರು ಸಿದ್ಧರಾಗಲಿಲ್ಲ.

ನವ್ಹೆಂಬರ್ ೨೮, ೧೮೫೭ರಂದು ಬ್ರಿಟೀಷ್ ಸೈನ್ಯ ಹಲಗಲಿ ಊರಲ್ಲಿ ಪ್ರವೇಶಿಸಲು ಯತ್ನಿಸಿತು. ಬೇಡರು ಧೈರ್ಯದಿಂದ ಸೆಟನ್‌ಕರ್ ಸೈನ್ಯವನ್ನು ಎದುರಿಸಿತು. ಒಳಗೆ ಪ್ರವೇಶಿ ಸಲು ಸಾಧ್ಯವಾಗಲಿಲ್ಲ. ಮಾಲ್ಕಂ ಸಾಹೇಬನೂ ಸೈನ್ಯ ಪಡೆ ತೆಗೆದುಕೊಂಡು ಹಲಗಲಿಗೆ ಬಂದ. ಗುಡ್ಡದಲ್ಲಿ ಅಡಗಿದ ಬೇಡರನ್ನು ಹಿಡಿದುಕೊಂಡು ಬರಲು ಗುಡ್ಡದತ್ತ ಮಾಲ್ಕಂ ತನ್ನ ಸೈನ್ಯದೊಂದಿಗೆ ಹೋದ. ಬಾಗಲಕೋಟೆಯಿಂದ ಮುಂಬೈ ಎನ್.ಆಯ್ ೨೮ನೇ ದಂಡಿನ ಗುಂಪುಗಳು ಮಿಃ ಲಿಯಾಟನ ನೇತೃತ್ವದಲ್ಲಿ ಹಲಗಲಿಗೆ ಬಂದಿತು. ವೀರತ್ವದಿಂದ ಬೇಡರು ಹೋರಾಡ ತೊಡಗಿದರು.

ಸೆಟನ್‌ಕರ್ ಬೇರೆ ಉಪಾಯ ಕಾಣದೆ ತನ್ನ ಸೈನಿಕರಿಗೆ ಬೇಡರ ಮನೆಗಳಿಗೆ ಬೆಂಕಿ ಹಚ್ಚಲು ಆಜ್ಞೆಮಾಡಿದ. ಬೆಂಕಿ ಹತ್ತಿ ಉರಿಯುವಾಗಲೂ ಬೇಡರು ಶಸ್ತ್ರಾಸ್ತ ಒಪ್ಪಲು ಸಿದ್ಧರಾಗಲಿಲ್ಲ. ಹಲಗಲಿ ಸುಟ್ಟು ಬೂದಿಯಾಯಿತು. ಬ್ರಿಟೀಷರು ೩೦೦ ರಷ್ಟು ಬೇಡರನ್ನು ಬಂಧಿಸಿ ಖಟ್ಲೆ ಹಾಕಿದರು. ಅದರಲ್ಲಿ ೧೯ ಬೇಡರಿಗೆ ಗಲ್ಲಿನ ಶಿಕ್ಷೆಯಾಯಿತು.೧೮೫೩ ನೆಯ ಡಿಸೆಂಬರ್ ೧೧ ರಂದು ೧೩ ಜನರನ್ನು ಮುಧೋಳದಲ್ಲಿ ೬ ಜನರನ್ನು ೩ ದಿನಗಳ ತರುವಾಯ ಹಲಗಲಿಯಲ್ಲಿ ಗಲ್ಲಿಗೇರಿಸಿದರು.

ಹಲಗಲಿ ಹಾಳಾದರೂ ಹಲಗಲಿ ವೀರರು ಶೌರ್ಯ-ಸಾಹಸ ತೋರಿದರು. ಹಲಗಲಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಚಿರಂತನವಾದ ಹೆಸರಿದೆ.

 

ಬಳಸಿಕೊಂಡದ್ದು

೧. ವ್ಯಾಧ ಚರಿತೆ ಸಂ. ಡಾ. ಮಂಜನಾಥ ಬೇವಿನಕಟ್ಟಿ

೨. ವಾಲ್ಮೀಕಿ ಸಮುದಾಯದ ಪ್ರಾತಃಸ್ಮರಣೀಯರು, ಡಾ. ವಿರೂಪಾಕ್ಷಿ ಪೂಜಾರಹಳ್ಳಿ

೩. ಹಲಗಲಿ ಗ್ರಾಮ ಜಾನಪದ ಡಾ. ಶ್ರೀರಾಮ ಇಟ್ಟಣ್ಣವರ

೪. ಆತ್ಮಾರ್ಪಣೆ (ಐತಿಹಾಸಿಕ ಕಾದಂಬರಿ) ವಿ.ಎಸ್. ಶಿರಹಟ್ಟಿಮಠ

೫. ಪ್ಲೀಟ್ ಸಂಗ್ರಹಿಸಿದ ಐದು ಲಾವಣಿಗಳು, ಸಂ. ಕ್ಯಾತನಹಳ್ಳಿ ರಾಮಣ್ಣ

೬. ಹಲಗಲಿ ಬಂಡಾಯ (ನಾಟಕ) ವಿ.ಎಸ್. ಶಿರಹಟ್ಟಿಮಠ

೭. ಕನ್ನಡ ವಿಶ್ವಕೋಶ

೮. ಕನ್ನಡದ ಕಲಿಗಳು

೯. ಸಿಂಧೂರ ಲಕ್ಷ್ಮಣ, (ಮಕ್ಕಳ ನಾಟಕ), ವಿ.ಎಸ್.ಶಿರಹಟ್ಟಿಮಠ

* * *

ಹಲಗಲಿ ಬೇಡರು

ದುಃಖದಿಂದ ಅವರು ಅಲ್ಲಿಗ್‌ಹೋಗಿ
ಸಾಹೆಬಗ ಹೇಳಿದರ ಕೂಗಿ

ಕೇಳಿ ಸಾಹೇಬ ಯೆದ್ದ ಸಿಟ್ಟಿಗಿ
ತಿರಿಗಿ ಹೋದ ಆವಾಗ ಕಲಾದಗಿ

ಕರ್ಸಿ ಕೃಷ್ಣನಾಯಕಗೌಡ ಕುಂದರಗಿ
ಕರಶ್ಯಾನ ಸಂಧಾನಕ್ಕ್ ಆಗಿ                           ||ಯೇರ||

ಹಟಾ ಮಾಡಬಾರದು ನಿಮ್ಮ ಹತಾರ ಕೊಡರಿ ಸಾಹೇಬನ್ ಈಶಕ