ಜನಪದ ಅಂಶಗಳ ಯಾವುದೇ ಉಗಮದ ಬಗ್ಗೆ ನಿರೂಪಿತವಾಗುವ ಸಿದ್ದಾಂತ ಮತ್ತು ವಿಧಾನಗಳು ಕೇವಲ ಊಹೆಯ ನಿಲುವಿನಲ್ಲಿಯೇ ಬರುವಂತಹವು. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಬಾಗಲಕೋಟೆ ಪರಿಸರದ ವಾಲ್ಮೀಕಿ ಸಮುದಾಯದ ಆಚರಣಾತ್ಮಕ ನೆಲೆಗಳಲ್ಲಿ “ಜಾತ್ರೆ ಉತ್ಸವಗಳು” ಜನಪದರ ಬದುಕಿನ ಆರಂಭದಿಂದಲೇ ಹುಟ್ಟಿಕೊಂಡವು. ಆರಂಭದಲ್ಲಿ  ಹುಟ್ಟಿಕೊಂಡ ಈ ಜಾತ್ರೆ-ಉತ್ಸವಗಳಲ್ಲಿ ಪ್ರಧಾನವಾಗಿ ಕಾಣಸಿಗುವ ಅಂಶ ಒಪ್ಪಿತಭಾವನೆ ಅಥವಾ ಭಯ. ಸಮಾಜದ ಶ್ರೇಯಸ್ಸಿಗಾಗಿ, ಸಾಮಾಜಿಕ ಸಂಬಂಧಗಳ ಹೊಂದಾಣಿಕೆಗಾಗಿ, ಧಾರ್ಮಿಕ ನೆಲೆಗಟ್ಟಿನ ಸಮ್ಮಿಲನಕ್ಕಾಗಿ ಬದುಕಿನುದ್ದಕ್ಕೂ ವರ್ಷದ ವಿಶೇಷ ಸಂದರ್ಭಗಳಲ್ಲಿ ಉಲ್ಲಾಸ-ಉತ್ಸಾಹ ಹಾಗೂ ಸಂಭ್ರಮ ಸಂತೋಷಗಳಿಂದ ಆಚರಿಸ ಲ್ಪಡುವ ಜಾತ್ರೆ-ಉತ್ಸವಗಳು ವಾಸ್ತವವಾಗಿ ಸಾಂಪ್ರದಾಯಿಕ ನಡುವಳಿಕೆ-ಉಪಾಸನೆಗಳ ಕೇಂದ್ರಬಿಂದುವಾಗಿ ಕಂಡುಬರುತ್ತವೆ. ಜಾತ್ರೆ-ಉತ್ಸವಗಳು ಸಾಮಾನ್ಯವಾಗಿ ಸಾರ್ವತ್ರಿಕ ಅಥವಾ ಸಾಮೂಹಿಕ ಆಚರಣೆಗಳಾಗಿ ಸಾಂಘಿಕ ಹಾಗೂ ಸಾಂದರ್ಭಿಕ ವಿಶೇಷಗಳಾಗಿಯೂ ತೋರುತ್ತಲಿವೆ.

ಇಲ್ಲಿ ಮುಖ್ಯವಾಗಿ ಕಾಣುವ ಅಂಶ ದೈವ ಸಂಬಂಧದ ನಡುವಳಿಕೆ ಉಪಾಸನೆಗಳದು. ದೈವಾರಾಧನೆ ವ್ಯಕ್ತಿ ವ್ಯಕ್ತಿಗಿರುವ ಸಂಬಂಧ ಅತ್ಯಂತ ಅತ್ಮೀಯವಾಗಿ ಬೆಳೆದುಕೊಂಡು ಹೋಗುವಂತೆ ನೋಡಿಕೊಳ್ಳುತ್ತದೆ. ಪ್ರತಿಯೊಬ್ಬರು ಜಾತ್ರೆ-ಉತ್ಸವಗಳ ಕಾರ್ಯಾಚರಣೆ ಯಲ್ಲಿದ್ದಾಗಲಂತೂ ಧಾರ‌್ಮಿಕ ಭಾವನೆಯ ಜೊತೆಗೆ ಸಾಮಾಜಿಕ ರಾಜಕೀಯ ಬಾಂಧವ್ಯಗಳನ್ನು ಏರ್ಪಡಿಸಿಕೊಳ್ಳಲು ಅವಕಾಶವನ್ನಿತ್ತಿರುತ್ತದೆ. ಈ ಬುಡಕಟ್ಟು ಜನಪದರಿಗೆ ಇಂಥ ಅನ್ಯೋನ್ಯ ವಾದ ಹೊಂದಾಣಿಕೆಯ ಸಂಬಂಧಕ್ಕಿಂತ ಬೇರೇನೂ  ಬೇಕಿರುವುದಿಲ್ಲ. ಹೀಗಾಗಿ ತಮ್ಮ ತಮ್ಮ ಇಚ್ಛಾನುಸಾರಗಳಂತೆಯೇ ಆಚರಿಸಿಕೊಳ್ಳುವ ಜಾತ್ರೆ-ಉತ್ಸವಗಳು ನೋಡುಗರ ಕಣ್ಣಿಗೆ ವಿಶೇಷ ವೈಭವಗಳನ್ನೇ ಸೃಷ್ಟಿಸಿದ ಹಾಗೆ ಕಾಣುತ್ತಿವೆ. ನಂಬಿಕೆಯ ಮುಂದುವರೆದ ರೂಪಗಳಾದ ಈ ಜಾತ್ರೆ-ಉತ್ಸವಗಳು ಅವರಿಗೆ ಒಂದು ರೀತಿಯ ಸಂವಿಧಾನ ಶಾಸ್ತ್ರಗಳಾಗಿ ಪರಿಣಮಿಸಿವೆ. ಅವರ ಧರ್ಮ ಹಾಗೂ ಸಂಸ್ಕೃತಿಯ ಚಟುವಟಿಕೆಗಳಲ್ಲಿ ಅನೇಕ ನಂಬಿಕೆಗಳು ಕಾಣಸಿಗುತ್ತವೆ. ಅವರು ಆಚರಿಸುವ ದಿನ, ವಾರ, ಹಬ್ಬ, ಜಾತ್ರೆ, ಉತ್ಸವ, ತೇರು, ಮುಂತಾದ ಪ್ರತಿಯೊಂದು ಆಚರಣೆಯಲ್ಲಿಯೂ ತಮ್ಮದೆ ಆದ ನಂಬಿಕೆಗಳನ್ನು ನಂಬಿಕೊಂಡಿದ್ದಾರೆ.

ಧಾರ್ಮಿಕತೆ ಜಾತ್ರೆ ಉತ್ಸವಗಳಿಗೆ ಅಂಟಿಕೊಂಡ ಒಂದು ಗುಣ. ಅದು ಗುಣವು ಹೌದು. ದೋಷವು ಹೌದು. ಧಾರ‌್ಮಿಕ ಗುಣ ಏಕೆಂದರೆ ಶಿಸ್ತು ಸಂಯಮದ ನಡುವಳಿಕೆಗಳನ್ನು ಅದು ರೂಢಿಸುತ್ತದೆ. ಅದು ದೋಷ ಏಕೆಂದರೆ ಸಂತೋಷದ ಸಂಭ್ರಮದಲ್ಲಿ ಅನಕ್ಷರಸ್ಥ ಜನಪದರನ್ನು ಸುಲಿಗೆಮಾಡುತ್ತದೆ. ಉಸಿರುಗಟ್ಟಿಸುವ ವಾತಾವರಣ ನಿರ್ಮಾಣ ಮಾಡುತ್ತದೆ. ಇವುಗಳಿಗೆ ಒಳಿತು ಕೆಡುಕುಗಳು ಎರಡೂ ಇದ್ದರೂ ಜನಪದರ ಬದುಕಿನಲ್ಲಿ ಇವು ಪಡೆದು ಕೊಂಡಿರುವ ಮಹತ್ವವೇ ಹೆಚ್ಚು ಎನ್ನಬೇಕು. ಈ ಆಚರಣೆಗಳು ಇರದಿದ್ದರೆ ಅವರ ಆಚಾರ-ವಿಚಾರ, ಹಬ್ಬ-ಹರಿದಿನ, ರೀತಿ-ನೀತಿ, ನೋವು-ನಲಿವು, ಮದುವೆ-ಮುಂಜಿ, ಸುಗ್ಗಿ, ಕುಣಿತ, ಅಡುಗೆ, ಊಟ, ವೈದ್ಯ ಮುಂತಾದ ಬದುಕಿನ ಯಾವ ಚಟುವಟಿಕೆಗಳೂ ಇರುತ್ತಿರ ಲಿಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಬೆಳೆದುಕೊಂಡು ಬಂದಿವೆ. ಹುಟ್ಟಿನಿಂದ ಸಾಯುವರೆಗಿನ ಅವರ ಬದುಕಿನ ಪ್ರತಿಯೊಂದು ಚಟುವಟಿಕೆಗಳಲ್ಲಿಯೂ ಕಾಣಸಿಗುತ್ತವೆ. ಬದುಕಿನ ಏರಿಳಿತಗಳಲ್ಲಿ ಸಾವು ನೋವಿನಲ್ಲಿ ಅಚ್ಚಾಗಿವೆ ಹೆಚ್ಚಾಗಿವೆ. ಇವು ಜನಪದರಿಗೆ ಅನೇಕ ರೀತಿಯ ಒಳ್ಳೆಯ ಅವಕಾಶಗಳನ್ನು ಸೃಷ್ಟಿಸಿವೆ. ಜನರು ಸ್ನಾನ, ಮಡಿಯಲ್ಲಿದ್ದು ಸಾಂಪ್ರ ದಾಯಿಕ ವೇಷಭೂಷಣಗಳನ್ನಾಧರಿಸಿ ಹಿರಿಯರನ್ನು ಸ್ಮರಿಸಲು ನಂಬಿದ ದೈವಗಳ ಉಪಾಸನೆ ಮಾಡಲು ದೈವದ ಉತ್ಸವ ಮೂರ್ತಿಯನ್ನು ಮೆರೆಸಲು ಅವು ಸಂದರ್ಭಗಳು. ಔತಣಕೂಟ ಗಳನ್ನೇರ್ಪಡಿಸಿ ಹಿರಿಯರಿಗೆ ಎಡೆ ಸಲ್ಲಿಸಿ ಆಪ್ತರೊಂದಿಗೆ ಸಹಭೋಜನ ನಡೆಸಲು ಕಲ್ಪಿತವಾದ ಅವಕಾಶಗಳು. ಇಂಥ ಸಹಭೋಜನಗಳು ಬಿರುಕು ಬಿಟ್ಟ ಮನಸ್ಸುಗಳು ಒಂದಾಗಲು ನೆರವಾಗುತ್ತವೆ.

ಬಾಗಲಕೋಟೆ ಪರಿಸರದ ಜಾತ್ರೆ ಉತ್ಸವಗಳನ್ನು ವಿಶ್ಲೇಷಿಸುವಾಗ ಗಮನಿಸಬೇಕಾದ ಅಂಶಗಳು ಹಲವಾರು ಇವೆ. ಸಾರ್ವತ್ರಿಕ ಅಥವಾ ಸಾಮೂಹಿಕ ಆಚರಣೆಗಳೆನಿಸಿರುವ ಯುಗಾದಿ, ದೀಪಾವಳಿ, ಶಿವರಾತ್ರಿ, ಗೌರಿಗಣೇಶ, ಶ್ರಾವಣ, ಬಸವಜಯಂತಿ ಈ ಮೊದಲಾದ ಹಬ್ಬಗಳಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಭಾವೈಕ್ಯದ ಪ್ರತಿಪಾದನೆಗಳ ಸಂಗತಿಗಳನ್ನು ಮರೆಯುವಂತಿಲ್ಲ. ಏಕಕಾಲದಲ್ಲಿ ಒಂದೇ ರೀತಿಯ ನಿಯಮದ ಕಟ್ಟುಪಾಡುಗಳ ಜಾಡನ್ನೇ ಹಿಡಿದು ಪ್ರತಿಪಾದಿಸುವ ಅಂಶಗಳು ಇಲ್ಲಿರುವುದು ಸಹಜ. ಆದರೆ ಪ್ರಾದೇಶಿಕ ಭಿನ್ನತೆಗಳ ದೃಷ್ಟಿಯಲ್ಲಿ ನಾವು ಈ ಜಾತ್ರೆ ಉತ್ಸವಗಳನ್ನು ಗಮನಿಸಿದಾಗ ಈ ಎಲ್ಲ ಉತ್ಸವಗಳ ಮೇಲೆ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳ ಪ್ರಭಾವ ಬಿದ್ದದ್ದು ತಿಳಿದು ಬರುತ್ತದೆ. ಅಲ್ಲದೆ ಹಿಂದೂ ಧರ್ಮದ ಇತ್ತಿತ್ತಲಾಗಿ ವೀರಶೈವ ಧರ್ಮಗಳ ಪ್ರಭಾವ ಆದದ್ದೇ ಇನ್ನು ಗಮನಿಸಬೇಕಾದ ಸಂಗತಿಯಾಗಿದೆ. ಬಾಗಲಕೋಟೆ ಪರಿಸರ ಎಂದಾಗ ಹಲಗಲಿಯದೇ ಒಂದು ಪ್ರಧಾನ ಕವಲಾಗಿ ಒಡೆದರೂ ಅಲ್ಲಿಯ ಮೂಲ ಆಚರಣೆಗೆ ದಕ್ಕೆ ಬಂದಿರಲಿಕ್ಕಿಲ್ಲ ಎಂದು ಹೇಳುವ ಸಾಹಸ ಬಹುಷಃ ಯಾರಿಗೂ ಇರಲಿಕ್ಕಿಲ್ಲ ಎಂದು ಅನಿಸುತ್ತದೆ. ಉದಾಹರಣೆಗೆ ಯುಗಾದಿ. ಇದು ವರ್ಷದ ಮೊದಲಹಬ್ಬ. ಹೊಸ ಸಂವತ್ಸರ, ಹೊಸಬದುಕು, ಹೊಸಯುಗ. ವರ್ಷವೆಲ್ಲ ದುಡಿದು ದಣಿದು ಆಯಾಸಗೊಂಡು ವಿಶ್ರಾಂತಿಯ ಹಂತಕ್ಕೆ ಬಂದಿರುವ ವ್ಯಕ್ತಿಗೆ ಹೊಸವರ್ಷಕ್ಕೆ ಬದುಕಿಗೆ ಕಾಲಿಕ್ಕಲು ಯುಗಾದಿ ಹಬ್ಬ ಸ್ವಾಗತ ನೀಡುತ್ತದೆ. ಹೊಸವರ್ಷದ ಬೇಟೆಯ ಹಾಗೂ ಬೇಸಾಯದ ಸಲುವಾಗಿ ಸಲಕರಣೆ ಗಳನ್ನು ಸಿದ್ಧಪಡಿಸಿಕೊಳ್ಳುವುದು. ಹೊಸಬಟ್ಟೆ ಧರಿಸಿ ಹೊಸಶ್ಯಾವಿಗೆ ಹೊಸೆದುಕೊಂಡು ಬೇವಿನರಸದ ಜೊತೆಗೆ ಶ್ಯಾವಿಗೆಯ ಸಿಹಿಪಾಯಸ ಉಣ್ಣುವುದು ವಾಡಿಕೆಯಲ್ಲಿದೆ. ಆಯಾ ವರ್ಷದ ಕಷ್ಟಸುಖದ ಮುಂಬಾಳಿನ ಸೂಚನೆಗಳಾಗಿ ಈ ಹಬ್ಬ ಕಾಣಸಿಗುತ್ತದೆ.

ಶ್ರಾವಣ ಮಾಸದ ಒಂದು ಉದಾಹರಣೆ ಶ್ರವಣ ಎಂದರೆ ಕೇಳುವುದು ಒಳ್ಳೆಯದನ್ನು ಆಲಿಸುವುದಾಗಿದೆ. ಶ್ರಾವಣ ದೇಹಾರೋಗ್ಯವನ್ನು ಕಾಯ್ದುಕೊಳ್ಳುವುದಕ್ಕಾಗಿ ಹುಟ್ಟಿಕೊಂಡಿರು ವಂತಹದು ಎಂಬ ನಂಬಿಕೆ ವಾಲ್ಮೀಕಿ ಸಮುದಾಯದ ಜನರಲ್ಲಿದೆ. ವರ್ಷದ ಬಹುತೇಕ ದಿನಗಳಲ್ಲಿ ಮಾಂಸಾಹಾರವನ್ನು ಉಪಯೋಗಿಸುವ ಈ ಜನ ಶ್ರಾವಣ ಮಾಸದಲ್ಲಿ ಇದನ್ನು ಕೈಬಿಟ್ಟು ಸಸ್ಯಾಹಾರವನ್ನು ಸೇವಿಸುವುದು ರೂಢಿ. ಅಲ್ಲದೆ ಈ ಮಾಸದ ಎಲ್ಲಾ ಶನಿವಾರ ಗಳಲ್ಲೂ ಒಪ್ಪೊತ್ತು (ಒಂದು ಹೊತ್ತು ಉಪವಾಸ) ಆಚರಿಸುವುದು ರೂಢಿಯಲ್ಲಿದೆ. ರಾಷ್ಟ್ರೀಯ ಹಬ್ಬದ ಸಾಲಿನಲ್ಲಿ ಸಾರ್ವತ್ರಿಕವಾಗಿ ಆಚರಣೆಗೊಳ್ಳುವ ಇನ್ನೊಂದು ಪ್ರಮುಖ ಹಬ್ಬವೆಂದರೆ ದೀಪಾವಳಿ. ಇದು ನಾಲ್ಕು ಐದು ದಿನ ಅವಧಿಯಲ್ಲಿ ಸಂಭ್ರಮೋತ್ಸಾಹದಿಂದ ಆಚರಿಸಲ್ಪಡುತ್ತದೆ. ಮೊದಲದಿನ ನೀರು ತುಂಬುವುದು, ಜಳಕ ಮಾಡುವಾಗ ಉಪಯೋಗಿ ಸುವ ಹಂಡೆ, ಹರವಿಗಳಿಗೆ ಸುಣ್ಣ (ಪಟಗ) ಕೆಮ್ಮಣ್ಣು ಸಾರಣೆ ಮಾಡುತ್ತಾರೆ. ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ಕುಳ್ಳು ಕಟ್ಟಿಗೆ ಕಳುವು ಮಾಡಿದರೆ ಶಿಕ್ಷೆ ಇಲ್ಲವಂತೆ. ಈ ಸಂದರ್ಭದಲ್ಲಿ ಹಣ್ಣು, ಕಾಯಿಪಲ್ಲೆ ಹೂಗಳನ್ನು ಕಳ್ಳತನ ಮಾಡಲು ಅನುಮತಿ ಇದ್ದು, ಕಳ್ಳತನ ಮಾಡಿದರೆ ಸಿಕ್ಕು ಬೀಳಬಾರದು. ಅಕಸ್ಮಾತ್ ಸಿಕ್ಕು ಬಿದ್ದರೆ ಅಪಶಕುನ ಎಂದು ವಾಲ್ಮೀಕಿ ಸಮುದಾಯದ ಹಿರಿಯರು ಹೇಳುತ್ತಾರೆ.  ಎರಡನೆಯದಿನ ದಿನ ಬಲಿಪಾಡ್ಯ. ಮನೆಯ ಅಂಗಳದಲ್ಲಿ ದೀಪಗಳನ್ನು ಹಚ್ಚುವುದು ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಯುವ ದನಗಾಹಿಗಳು ‘ಗೊಗ್ಗೆ’ ಆಣಿ ಪೀಣಿದೀಪ ಹಿಡಿದು ಊರಿನ ದನಗಳಿಗೆ ದೀಪ ಬೆಳಗಿ ಅವುಗಳ ಪೀಡೆ ತೆಗೆಯುವ ಸಂಪ್ರದಾಯವು ಬಾಗಲಕೋಟೆ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿವೆ.

ಇನ್ನು ವಾಲ್ಮೀಕಿ ಸಮುದಾಯದವರೆ ಮುಂಚೂಣಿಯಲ್ಲಿದ್ದು ಆಚರಿಸುವ ಜಾತ್ರೆ ಉತ್ಸವಗಳು ಬಾಗಲಕೋಟೆ, ಬಿಜಾಪುರ ಜಿಲ್ಲೆಗಳ ಅನೇಕ ಹಳ್ಳಿಗಳಲ್ಲಿ ಕಾಣಸಿಗುತ್ತವೆ. ಪ್ರಾರಂಭದಲ್ಲಿ ಮಹರ್ಷಿ ವಾಲ್ಮೀಕಿ ಇವರಿಗೆ ದೇವರು ಹಾಗೂ ಕುಲಗುರುವಾದರೂ ಇತ್ತೀಚಿನ ದಿನಗಳಲ್ಲಿ ಬೇಡರ ಕಣ್ಣಪ್ಪ, ಇನ್ನು ನವಯುಗಕ್ಕೆ ಬಂದರೆ ಸಿಂಧೂರ ಲಕ್ಷ್ಮಣ ಇವರಿಗೆ ಆದರ್ಶಪುರುಷರಾಗಿ ಅವರ ಮನೆ ಮನಗಳನ್ನು ಬೆಳಗುವ ದೈವವಾಗಿದ್ದಾರೆ. ಇವರ ಯಾವುದೇ ಜಾತ್ರೆ, ಉತ್ಸವ ಆಚರಣೆ ನಡೆದರು ಅಲ್ಲಿ ಈ ಮೂವರಿಗೂ ಪೂಜ್ಯ ಸ್ಥಾನವಿರುತ್ತದೆ. ಅಪಮಾನ, ಮೇಲ್ವರ್ಗದ ಜನರಿಂದ ಹಿಂಸೆ, ಸರ್ಕಾರಗಳ ನಿರ್ಲಕ್ಷತನದಿಂದ ಸಂಚಾರಿ ಗುಡಿಸಲುಗಳನ್ನು ಕಟ್ಟಿಕೊಂಡು ತಾತ್ಪೂರ್ತಿಕ ನೆಲೆಗಳಲ್ಲಿ ವಾಸಿಸುತ್ತ ತಮ್ಮ ಬದುಕನ್ನು ಪ್ರಾರಂಭಿಸಿದ ಈ ಜನತೆ ಅಡವಿಯಲ್ಲಿ ಬೇಟೆಯಾಡುತ್ತಾ ಜೀವನ ಕಳೆದದ್ದೆ ಹೆಚ್ಚು. ದೀರ್ಘಕಾಲ ಒಂದೇ ಸ್ಥಳದಲ್ಲಿ ನಿಲ್ಲದ ಕಾರಣ ಇವರ ಆಚರಣೆ ಉತ್ಸವಗಳು ಕೂಡಾ ಸಂಚಾರಿಯಾದವು. ಭಾರತ ಸ್ವಾತಂತ್ರ್ಯಾನಂತರ ತಮ್ಮ ಪರಿಸರದಲ್ಲಿರುವ ಇತರ ಧರ್ಮ ಆಚರಣೆಗಳು ಇವರ ಮೇಲೆ ಪ್ರಭಾವಬೀರಿ ಅವು ಮೂಲ ಆಚರಣೆ ಕಳೆದುಕೊಂಡವು ಎಂದರೆ ತಪ್ಪಾಗಲಿಕ್ಕಿಲ್ಲ. ಬಾಗಲಕೋಟೆ ಜಿಲ್ಲೆಯ ಬೀಳಗಿ, ತೆಗ್ಗಿ, ಸಿದ್ದಾಪೂರ, ಹಲಗಲಿ, ಇಲಕಲ್ಲು ಮುಂತಾದ ಕಡೆ ನಡೆಯುವ ವಾಲ್ಮೀಕಿ ಸಮುದಾಯದ ಉತ್ಸವಗಳು, ಜಾತ್ರೆಗಳು ಅನೇಕ ಜನರ ಗಮನ ಸೆಳೆಯುತ್ತವೆ. ಆದರೆ ಈ ಉತ್ಸವಗಳು ತಮ್ಮ ಮೂಲ ಆಚರಣೆಯ ಬಗ್ಗೆ ಸ್ಪಷ್ಟ ಇತಿಹಾಸ ಹಾಗೂ ಮಾಹಿತಿ ನೀಡುವಲ್ಲಿ ಕ್ಷೇತ್ರಕಾರ್ಯ ಮಾಡುವವರಿಗೆ ಸ್ಪಷ್ಟತೆ ನೀಡುವಲ್ಲಿ ವಿಪುಲವಾಗುತ್ತಲಿವೆ. ಅದಕ್ಕೆ ಕಾರಣಗಳು ಬಹಳ ಇವೆ. ಜನರ ಅನಕ್ಷರತೆ, ಸಂಚಾರಿ ಜೀವನ, ಇತರ ಸಮುದಾಯದ ಪ್ರಭಾವ, ಬದುಕಿಗೆ ಗಟ್ಟಿಯಾದ ನೆಲೆ ಇಲ್ಲದಿರುವುದು ಇತ್ಯಾದಿ. ಇತ್ತೀಚಿನ ದಿನಗಳಲ್ಲಿ ಈ ಸಮುದಾಯದಲ್ಲಿ ಅಕ್ಷರಸ್ತರು ಬೇಡರ ಕಣ್ಣಪ್ಪನ ಉತ್ಸವ, ಸಿಂಧೂರ ಲಕ್ಷ್ಮಣನ “ಹುಟ್ಟುಹಬ್ಬ”ಗಳನ್ನು ಆಚರಿಸುತ್ತಾ ಈ ಸಮುದಾಯವಿರುವ ಹಳ್ಳಿಗಳಲ್ಲಿ ಸಂಘಟನೆ ಮಾಡಿಕೊಂಡಿದ್ದಾರೆ. ಹೆಚ್ಚು ಜನರಿರುವ ಗ್ರಾಮಗಳಲ್ಲಿ ವಾಲ್ಮೀಕಿ ಭವನ ಎಂದು ತಮ್ಮ ಸಮಾಜ ಬಾಂಧವರನ್ನು ಅಪ್ಪಿಕೊಂಡು ಅವರ ಅಭಿವೃದ್ದಿಗೆ ಶ್ರಮಿಸುತ್ತಾಲಿದ್ದಾರೆ. ಬಾಗಲಕೋಟೆ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಬಿಜಾಪೂರ ಜಿಲ್ಲೆಯ ಸಾತಿಹಾಳ, ಅಡಿರಸಂಗ, ಅರಳಿಚಂಡಿ, ಬುಯಾರ, ಮುತ್ತಾಗಿ ಅರಕೇರಿ, ಉತ್ನಾಳ, ಮುಂತಾದ ಕಡೆ ಜಾತ್ರೆ ಉತ್ಸವಗಳು ನಡೆಯುತ್ತಲಿವೆ ಎಂಬುದು ಸಹ ಗಮನಿಸಬೇಕಾದ ಸಂಗತಿಯಾಗಿದೆ.

ವಾಲ್ಮೀಕಿ ಇವರ ಮೂಲಪುರುಷನಾದರೂ ಈ ಜನರನ್ನು ಅತಿ ಹೆಚ್ಚಾಗಿ ನಾಯಕ ಸಮುದಾಯ, ಬೇಡ ಸಮುದಾಯ ಎಂತಲೇ ಕರೆಯಲಾಗುತ್ತದೆ. ಶಾಸನಗಳಲ್ಲಿಯು ಸಹ ಬೇಡನಾಯಕರೆಂದೇ ಕರೆದಿದ್ದನ್ನು ಎಂ.ವಿ ಚಿತ್ರಲಿಂಗಯ್ಯನವರು ಕಂಡುಕೊಂಡಿದ್ದಾರೆ. ನಾಯಕ ಎಂಬ ಉಪನಾಮವು ಕಲ್ಯಾಣ ಚಾಲುಕ್ಯರ ಕಾಲದ ಕ್ರಿ.ಶ. ೧೧-೧೨ನೆಯ ಶತಮಾನದ ಶಿಲಾಶಾಸನಗಳಲ್ಲಿ ಕಂಡುಬರುತ್ತದೆ. ಆಗ ಇದು ಜಾತಿಸೂಚಕ ಪದವಾಗಿರಲಿಲ್ಲ. ಬೇಡರಿಗೆ ‘ನಾಯಕ’ ಎಂಬ ಗೌರವಸೂಚಕ ಪದ ಕಲ್ಯಾಣ ಚಾಲುಕ್ಯರ ಕಾಲದಿಂದ ಬಂದಿರ ಬೇಕು ಎಂಬುದು ಇಲ್ಲಿ ಅರಿಕೆಯಾಗುತ್ತದೆ. ಈ ಬೇಡ ಸಮುದಾಯದ ನಾಯಕರು ೧೦-೨೦ ಕುಟುಂಬಗಳನ್ನು ಒಂದೇ ಸ್ಥಳದಲ್ಲಿ ಸಲುಹಿ ತಮ್ಮ ಬೇಡ ಘಟ್ಟಿಗಳನ್ನು ಕಟ್ಟಿಕೊಳ್ಳು ತ್ತಿದ್ದರು. ಈ ಗುಂಪುಗಳು ಅಲೆಮಾರಿಗಳಾಗಿ ಹೊರಟಾಗ ತಮಗೆ ತೊಂದರೆ ಮಾಡಿದವರನ್ನು ಎದುರಾದವರನ್ನು ಕೊಂದು ಅಲ್ಲಿಯ ದನಕರುಗಳನ್ನು ಅಟ್ಟಿಸಿಕೊಂಡು ತೆರಳುತ್ತಿದ್ದರು. ಹೀಗೆ ಸ್ಥಳಬಿಟ್ಟು ಸ್ಥಳಕ್ಕೆ ತೆರಳುವಾಗ ಕೆಲವು ದೈವ, ದೇವರುಗಳನ್ನು ಅವರು ತಮ್ಮ ಸಂಗಡ ಒಯ್ಯುತ್ತಿದ್ದರು. ಈ ಸಂದರ್ಭದಲ್ಲಿ ಕೆಲವು ಆಚರಣೆಗಳು ನಡೆಯುತ್ತಲಿದ್ದವು ಎಂದು ಹಿರಿಯರು ಹೇಳುತ್ತಾರೆ. ಹೀಗೆ ಸಂಚಾರಿಯಲ್ಲಿರುತ್ತಿದ್ದ ಈ ಸಮುದಾಯ ಬೇರೆ ಸಮುದಾಯಗಳೊಡನೆ ಬೆರೆಯದೆ ಬಹಳಕಾಲ ಸ್ವತಂತ್ರವಾಗಿದ್ದುದು ತಮಗೆ ವಿಶಿಷ್ಟವಾದ ಸಂಸ್ಕೃತಿಯನ್ನು ಹಿಂದೂ ಧರ್ಮದ ಪ್ರಭಾವ ಯಾವ ಪ್ರಮಾಣದಲ್ಲಿ ಆಗಿದೆ ಎಂಬ ಅಂಶ ಜಾತಿ ಹಾಗೂ ಬುಡಕಟ್ಟು ಈ ಎರಡಕ್ಕೂ ಇರುವ ವ್ಯತ್ಯಾಸವನ್ನು ಸೂಚಿಸುವ ಮಾನದಂಡ ವಾಗಿದೆ. ವಾಲ್ಮೀಕಿ ಜನ ಹುಟ್ಟು, ಮದುವೆ, ಮತ್ತು ಸಾವು ಈ ಮೂರು ಸಂದರ್ಭಗಳಲ್ಲಿ ಬ್ರಾಹ್ಮಣ ಪೌರೋಹಿತ್ಯಕ್ಕೆ ಅವಕಾಶ ಕೊಟ್ಟಿಲ್ಲ. ಹೀಗಿದ್ದೂ ಹಿಂದುಗಳೊಡನೆ ಜಾತ್ರೆಯಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ಅವರು ಬಾಗವಹಿಸುತ್ತಾರೆ. ಈ ಕಾರಣದಿಂದಲೆ ಮಾನವ ವಿಜ್ಞಾನಗಳು ಇವರನ್ನು ಬುಡಕಟ್ಟು ಸಮುದಾಯ ಎಂದು ಕರೆದರೆ ಜಾನಪದ ವಿಜ್ಞಾನದಲ್ಲಿ “ಜನಪದವರ್ಗ” ಎಂದು ಪರಿಗಣಿಸಲಾಗುತ್ತಿದೆ. ಈ ಜನಪದವರ್ಗ ಪಶುಪಾಲನೆಯ ಮೇಲೆ ಬಂದಿತಾದರೂ ಇದರ ಜತೆಗೆ ಬೇಟೆ ಮತ್ತು ಯೋಧವೃತ್ತಿಯನ್ನು ಕೈಗೊಂಡು ಬಂದದ್ದು ಐತಿಹಾಸಿಕ ಸಂಗತಿ. ದೃಢಕಾಯರಾದ ಇವರು ಯಾವ ಅಪಾಯಕ್ಕೂ ಅಂಜುತ್ತಿ ರಲಿಲ್ಲ. ಪೂರ್ವಾಪರ ಯೋಚಿಸದೆ ಶತೃಗಳ ಮೇಲೆ ಬೀಳುವವರೂ ಅಗಿರುತ್ತಾರೆ. ಇತರರ ದನಗಳನ್ನು ತರುಬಿಕೊಂಡು ಹೋಗಿ ತಮ್ಮ ವಶದಲ್ಲಿಸಿರಿಕೊಂಡ ಪ್ರಸಂಗಗಳು ಇವರಲ್ಲಿವೆ.

* * *

ಹಲಗಲಿ ಬೇಡರು

೪ನೇ ನುಡಿ

ಹಲಗಲಿ ಅಂಬುವ ಹಳ್ಳಿ ಮುಧೋಳ ರಾಜ್ಯದಾಗ ಇತ್ತು
ಪೂಜೆರಿಹಣಮಾ ಬಾಲ ಜಡಗ ರಾಮ ಮಾಡ್ಯಾರ ಮಸಲತ್ತು

ಕೈನ ಹತಾರ ಕೊಡಬಾರದೊ ನಾವು ನಾಲ್ಕು ಮಂದಿ ಜತ್ತು
ಹತಾರ ಹೋದ್‌ಇಂದ ಬಾರದ ನಮ್ಮ ಜೀವ ಸತ್ತ್‌ಓಗುದು ಗೊತ್ತು

ಸುತ್ತಿನ ಹಳ್ಳಿ ಮತ್ತು ಧೊರಿಗಳಿಗೆ ತಿಳಶೆರ ಹೀಂಗ್‌ಅಂತು
ಮಾಡರಿ ಜಗಳಾ ಕೂಡ್‌ಇರತೇವು ಕುಮುಕಿ ಯಾವತ್ತು

ವೊಳಗಿಂದ್‌ಒಳಗ ವಚನ ಕೊಟ್ಟರೊ ಬ್ಯಾಡರ್ ಎಲ್ಲ ಕಲಿತು
ಕಾರಕೂನನ ಕಪಾಳಕ ಬಡದರ ಶಿಪಾಯಿ ನೆಲಕ ಬಿತ್ತು