ಬಾಗಲಕೋಟೆ ಜಿಲ್ಲೆ ಬುಡಕಟ್ಟು ಸಂಸ್ಕೃತಿಗಳ ಕಣಜ. ಹನುಮಂತ ದೇವರು, ಗುಡ್ಡದ ಯಲ್ಲವ್ವ, ಹುಲ್ಲಪ್ಪ, ಚಂದ್ರಪ್ಪ, ಮೂಕನೆವ್ವ ಇವು ಈ ಸಮುದಾಯದ ಆರಾಧ್ಯ ದೈವಗಳು. ಈ ಸಮುದಾಯದವರಿಗೆ ರೋಗರುಜಿನಗಳು ಕಾಡಿದರೆ ಕಷ್ಟ ಕಾಲದಲ್ಲಿ ಇಷ್ಟ ದೇವರಿಗೆ ಮೊರೆ ಹೋಗುವರು ಹರಕೆ ತೀರಿಸುವರು.

ಮಾನವ ವಿಕಾಸದ ಮೂಲ ಘಟ್ಟವೇ ಅಲೆಮಾರಿತನ. ಬೇಟೆಗಾರಿಕೆಯನ್ನು ಮೂಲ ಕಸುಬಾಗಿ ಮಾಡಿಕೊಂಡಿದ್ದ ಬೇಡ ಸಮುದಾಯದವರು ಶೌರ್ಯ ಸಾಹಸಕ್ಕೆ ಹೆಸರಾದವರು. ಕೃಷಿಯಿಂದ ಗ್ರಾಮಗಳು ಉದಯವಾದವು. ಕೃಷಿ ಆಧಾರಿತ ಸ್ವಯಂ ಪರಿಪೂರ್ಣ ಗ್ರಾಮ ಗಳಿಗೆ ನೈಪುಣ್ಯತೆಯುಳ್ಳ ವಿವಿಧ ಕಸುಬುದಾರರ ಕುಟುಂಬಗಳು ಪಾರಂಪರಿಕವಾಗಿ ಮುಂದು ವರಿದಂತೆ ಅವು ಕಸುಬಾದಾರಿತ ಕುಲಗಳಾಗಿ ಮಾರ್ಪಟ್ಟವು. ಸಾಮಾಜಿಕ ಸ್ಥಾನಮಾನದಿಂದ ವಂಚಿತವಾದ ಕೆಲ ಕುಲಗಳು ಮತ್ತೆ ಅಲೆಮಾರಿತನವನ್ನು ಮುಂದುವರಿಸಿದವು. ಅಂತಹು ಗಳಲ್ಲಿ ಬೇಡ ಸಮುದಾಯವು ಒಂದು. ಅಲೆಮಾರಿತನದ ಬೇಟೆಗಾರಿಕೆ ಇವರ ಸಹಜ ಬದುಕು. ಜನಸಂಖ್ಯೆ ಬೆಳವಣಿಗೆ ಹಾಗೂ ಆಧುನಿಕ ವೈಪರೀತ್ಯಗಳು ಇವರ ಮುಕ್ತ ಬದುಕಿಗೆ ಕಡಿವಾಣ ಹಾಕಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಇವರು ಒಂದೆಡೆ ನೆಲೆನಿಂತು ಸಮಾಜದ ಮುಖ್ಯವಾಹಿನಿಗೆ ಸೇರಿದ್ದಾರೆ.

ಇವರು ಸರ್ವಚೇತನವಾದಿಗಳು. ದೇವರಲ್ಲಿ ಅಪಾರ ನಂಬಿಕೆಯನ್ನಿಟ್ಟಿರುವ ಇವರು ಪ್ರಾಂತೀಯವಾಗಿ ಅನೇಕ ದೇವರುಗಳನ್ನು ತಮ್ಮ ಆರಾಧ್ಯದೈವವಾಗಿ ಪೂಜಿಸುವುದು ವಾಡಿಕೆ. ಇದಕ್ಕೆ ಅವರ ಬೆಡಗುಗಳು ಕಾರಣವೆಂದು ಹೇಳಬಹುದು. ಇಲ್ಲಿ ಪ್ರಮುಖವಾಗಿ ಹೆಣ್ಣು ದೇವರನ್ನು ಆರಾಧಿಸುವುದು ವಾಡಿಕೆ. ಈ ಭಾಗದ ತುಳಸೀಗಿರಿ ಹನುಮಪ್ಪ ಬಹುಸಂಖ್ಯೆ ಬೇಡರ ಆರಾದ್ಯದೈವ. ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಕಾಡಿದ ಬಡವರ ಪಾಲಿನ ದೈವವಾಗಿದ್ದ ವೀರ ಸಿಂಧೂರಲಕ್ಷ್ಮಣನೂ ಕೂಡ ತುಳಸಿಗಿರಿಯ ಹನಮಪ್ಪನವರ ಪ್ರಸಾದದಿಂದಲೇ ಜನಿಸಿದರು ಎಂದು ಹೇಳುವಲ್ಲಿ ಈ ಭಾಗದ ಬೇಡ ಸಮುದಾಯದವರು ಆ ದೇವರ ಬಗೆಗೆ ಇಟ್ಟುಕೊಂಡು ಬಂದ ಶ್ರದ್ಧಾ ಭಕ್ತಿಯ ಅರಿವಾಗುತ್ತದೆ. ಬಾಗಲಕೋಟ ಜಿಲ್ಲೆಯ ಗ್ರಾಮಜೀವನದಲ್ಲಿಯೂ ಗ್ರಾಮದೇವತೆಗಳು ಹಾಸುಹೊಕ್ಕಾಗಿವೆ. ಪುರಾಣಮೂಲದ ದೇವತೆಗಳನ್ನೊಳಗೊಂಡಂತೆ ಸಾಮಾನ್ಯ ದೇವತೆಗಳವರೆಗೂ ನೂರಾರು ಶಕ್ತಿದೇವತೆಗಳಿವೆ. ಕರೆವ್ವ, ಕಾಟವ್ವ, ಮಾರೆವ್ವ, ಕಾಳಿದುರ್ಗವ್ವ, ದ್ಯಾಮವ್ವ, ಉಡಚವ್ವ, ಶೆಟ್ಟವ್ವ, ಮೂಕನೆವ್ವ, ಹುಲಿಗೆಮ್ಮ, ಯಲ್ಲಮ್ಮ, ಮಾಯವ್ವ ಹೀಗೆ ಬೇರೆ ಬೇರೆ ಹೆಸರುಗಳನ್ನು ಶಕ್ತಿ ದೇವತೆಗಳು ತಮ್ಮ ಅಸಂಖ್ಯ ಭಕ್ತರಿಂದ ಈ ಜಿಲ್ಲೆಯಲ್ಲಿ ಬೇಡ ಸಮುದಾಯದ ಶಕ್ತಿ ದೇವತೆಗಳಾಗಿವೆ.

ಈ ಶಕ್ತಿ ದೇವತೆಗಳ ಗುಡಿಗಳು ಊರಸುತ್ತಲೂ ಇರುತ್ತದೆ. ಹಾಗಾಗಿ ಇವು ಗಡಿರಕ್ಷಕ ದೇವತೆಗಳು. ಊರಿನ ಬೆಳೆರಕ್ಷಣೆ, ದನಕರುರಕ್ಷಣೆ, ಸಕಾಲಕ್ಕೆ ಮಳೆ ತರಿಸುವುದು ಸಾಂಕ್ರಾಮಿಕ ರೋಗಗಳಿಂದ ಊರು ರಕ್ಷಣೆ, ಮಕ್ಕಳುಮರಿ ಕಾಪಾಡುವುದು, ಭೂತ ಪ್ರೇತಾದಿಗಳು ಊರೊಳಗೆ ಪ್ರವೇಶಿಸದಂತೆ ನೋಡಿಕೊಳ್ಳುತ್ತವೆ ಎಂಬುವುದು ಈ ಸಮುದಾಯದ ಪ್ರಮುಖ ನಂಬಿಕೆ. ಗ್ರಾಮದಲ್ಲಿ ಈ ದೇವಾಲಯಗಳನ್ನು ಹೆಚ್ಚಾಗಿ ಮಣ್ಣು ಕಲ್ಲುಗಳಿಂದ ಕಟ್ಟಿದ್ದಾರೆ. ಗರ್ಭಗುಡಿ, ಪ್ರಕಾರಪಾಳೆ ಇದಾವು ಇದ್ದಂತಿಲ್ಲ. ಮೂರ್ತಿ ಕೂಡ ಅತ್ಯಂತ ಸರಳ. ಸ್ತ್ರೀ ರೂಪದ ಮೂರ್ತಿ ಇರಬೇಕೆಂದಿಲ್ಲ. ಕರಿಕಲ್ಲು, ಗುಂಡಕಲ್ಲುಗಳ ದೇವತೆ ಎನಿಸಿಕೊಂಡಿವೆ. ಗಿಡಗಂಟೆಯ ನೆರಳಿನಲ್ಲಿ ಇವು ಇರಬಹುದು, ಕ್ರಮೇಣ ಗುಡಿ, ಕಳಸ, ತೇರು, ನಿರ್ಮಾಣ ಗೊಂಡಿರಬಹುದು. ಮಂಗಳವಾರ, ಶುಕ್ರವಾರ ದೇವಿವಾರಗಳೆನಿಸಿವೆ. ಪರಿಶಿಷ್ಟರ ಜೊತೆಗೆ ಶಿಷ್ಠರು ಉತ್ಸವಾಚರಣೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶಿಷ್ಟತೆ ಈ ದೇವತೆಗಳ ಸುತ್ತ ಪುರಾಣ, ಐತಿಹ್ಯ, ಕತೆ, ಪವಾಡಗಳು ಸೃಷ್ಟಿಗೊಂಡು ಅವುಗಳ ಶಕ್ತಿ ಮತ್ತು ಪ್ರಭಾವ ವೃದ್ದಿಸಿದಂತೆ ತೋರುತ್ತದೆ. ಪ್ರತಿಯೊಂದು ಸ್ಥಳದೇವತೆಗಳ, ಸ್ಥಳಗತೆಗಳ ನೆಲೆಯಲ್ಲಿ ಆಶ್ಚರ್ಯಕರ ವಿವರಗಳು ಸಿಗುತ್ತವೆ. ಈ ದೇವತೆಗಳನ್ನು ಗಮನಿಸಿದಾಗ ಆ ಪ್ರದೇಶದ ವ್ಯಕ್ತಿ ಅಥವಾ ಸಮುದಾಯದ ಮೂಲ ನೆಲೆಯಲ್ಲಿ ಆ ವಿಶಿಷ್ಟ ದೇವರುಗಳು ಹುಟ್ಟಿದ್ದನ್ನು ಗಮನಿಸಿರುವುದು ಉತ್ಸವಗಳು, ಬಾಹುಕ ಜನರು ಆರಾಧಿಸುವ ಮಾಧ್ಯಮಗಳಾದವು. ಇವುಗಳಲ್ಲಿ ಬುಡಕಟ್ಟು ಸಮುದಾಯದ ಮೋಜು, ಮನರಂಜನೆಗಿಂತ ಹೆಚ್ಚಾಗಿ ಧಾರ್ಮಿಕ ನಂಬಿಕೆ, ಹರಕೆ, ವಿವಿಧ ಬಗೆಯ ವಿಚಿತ್ರ ನಮೂನೆಯ ಆಚರಣೆಗಳೂ ಸೇರಿಕೊಂಡವು. ದೈವದ ಸಂತೃಪ್ತಿಗಿಂತ ಪ್ರಾಣಿಬಲಿಯೂ ಶುರುವಾಯಿತು. ಹುಣ್ಣಿಮೆಯ ದಿನ ರಾತ್ರಿ ದೇವಿಗೆ ಬೆತ್ತಲೆಸೇವೆ, ಉಟಗಿ ಸಲ್ಲಿಸುವ ಪದ್ಧತಿ ಇತ್ತು. ಜನಗಿ ಬಿಡುವ, ಮುಡುಪು ಕಟ್ಟುವ, ದೀಡನಮಸ್ಕಾರ ಹಾಕುವ, ಉರುಳು ಸೇವೆ ಮಾಡುವ, ಸಿಡಿಯಾಡುವ, ಉಪ್ಪುಹಾಕುವ, ಜಡೆ ಇಳಿಸುವ, ತೊಟ್ಟಿಲು ಸೇವೆ ಸಲ್ಲಿಸುವ, ಮೀಸಲು ತುಪ್ಪ ನೀಡುವ ಇತ್ಯಾದಿ ದೇವರ ಹರಕೆ ಒಪ್ಪಿಸುವುದು ರೂಢಿಯಲ್ಲಿತ್ತು. ಇವುಗಳಲ್ಲಿ ಕೆಲವು ನಿರ್ಬಂಧನೆಗೊಂಡರೂ ನಂಬಿಕೆಯ ಪಾಲನೆಗಾಗಿ ಹತ್ತು ಹಲವು ಸೇವೆಗಳು ಜಿಲ್ಲೆಯಲ್ಲಿ ನಡದೇ ಇವೆ.

ಅಕ್ಕಿ, ಬೇಳೆ, ಎಣ್ಣೆ, ತುಪ್ಪ, ಉತ್ತತ್ತಿ, ಕಲ್ಲುಸಕ್ಕರೆ, ಹಣ್ಣು, ಕಾಯಿ, ಕರ್ಪೂರ, ದೀಪಾರತಿ ಮುಂತಾದುವನ್ನು ಪೂಜಾ ಸಂದರ್ಭದಲ್ಲಿ ನೀಡುವುದು. ಹಣೆಗೆ ಭಂಡಾರ, ಚಂದ್ರ ಬಳಿಯುವುದು ಒಂದು ವಿಶೇಷ. ವಿಜ್ಞಾನ-ತಂತ್ರಜ್ಞಾನಗಳು ಬೆಳೆದಂತೆಲ್ಲಾ ನಂಬಿಕೆ ಗಳಲ್ಲಿ ಕೆಲವು ಶಿಥಿಲಗೊಂಡಿವೆ. ಆದರೆ ಇಂದಿಗೂ ಇಷ್ಟ ದೇವರುಗಳ ಪೂಜೆ ನಡದೇ ಇದೆ. ಶೂದ್ರ ವರ್ಗದ ದೇವತೆಗಳು ಮೂಲ ಆದಿಶಕ್ತಿಯ ಅವತಾರಗಳಾಗಿ ಗ್ರಾಮದೇವತೆ ಗಳಾಗಿ ಆರಾಧನೆಗೊಳ್ಳುತ್ತಾ ಬಂದಿವೆ. ಹೆರಿಗೆಯಾದ ೧೧-೧೩ ದಿನಗಳಲ್ಲಿ ಮಗುವಿಗೆ ನಾಮಕರಣ ಮಾಡುವ ಪದ್ಧತಿ ಜಾರಿಯಲ್ಲಿದೆ. ಮನೆದೇವರ ಹೆಸರನ್ನು ಮೊದಲು ಮಗುವಿಗೆ ಕರೆದು ನಂತರ ಐದುದೇವರುಗಳ ಹೆಸರು ಕರೆದು ನಂತರ ತಮಗಿಷ್ಟವಾದ ಹೆಸರನ್ನು ಕರೆಯುತ್ತಾರೆ.

ಮೂಕನೆವ್ವ ಈ ಭಾಗದ ಬೇಡ ಸಮುದಾಯದ ಇಷ್ಟ ದೇವತೆ. ಹಿಂದೆ ಮೂರು ವರ್ಷಕ್ಕೊಮ್ಮೆ ಈ ಜಾತ್ರೆ ನಡೆಯುತ್ತಿತ್ತು. ಆದರೆ ಈಗ ಒಂಭತ್ತು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಕೋಟೆಕಲ್ಲು ದೇಸಾಯಿಯವರ ಮನೆಯಿಂದ ಕೊಡ ಹೊರಬಿದ್ದಾಗ ಒಂಭತ್ತು ದಿನದವರೆಗೆ ಜಾತ್ರೆ ನಡೆಯುತ್ತದೆ. ದೇಸಾಯಿಯವರು ಕೊಡವನ್ನು ಆನೆ ಮೇಲೆ ಗುಳೆದ ಗುಡ್ಡಕ್ಕೆ ತರುತ್ತಾರೆ. ಕೋಟೆಕಲ್ಲು ದೇಸಾಯಿಯವರು ಬೇಡ ಸಮುದಾಯದವರು ದೇವರ ಹಂದರಕ್ಕೆ ಹಾಲುಗಂಬ, ಹಸರುಗಂಬ ತರುವದು ಬೇಡ ಸಮುದಾಯದವರೇ. ದೇವರಿಗೆ ಹೋಳಿಗೆ ಎಡೆಯನ್ನು ಒಯ್ಯುವುದು. ಅಲ್ಲಿ ಜಾತ್ರೆ ಗುಂಪಲ್ಲಿ ಒಂದು ದಿನ ಬ್ಯಾಟಿ ಬೀಳು ತ್ತವೆ. ಈ ದೇವಿ ಜಾತ್ರೆಯದಿನ ಹಂದರ ಹಾಕುವಾಗ ಬಲಭಾಗದ ಹಂದರ ಪಾಲು ಬೇಡ ಸಮುದಾಯದ್ದು. ಪೂರ್ವ ಇತಿಹಾಸ ಹಾಗೂ ಧಾರ್ಮಿಕತೆಯನ್ನು ಮೆಲಕು ಹಾಕಿದಾಗ ಈ ಮೂಕನೆವ್ವ ಮೂರುಡಿ ದ್ಯಾಮನಗೌಡ್ರ ಮನೆತನದವರ ಮಗಳು ಎಂದು ತಿಳಿದುಬರುತ್ತದೆ. ಈಗಲೂ ಆ ಮನೆತನದವರು ಆ ದೇವಿಗೆ ನಡೆದುಕೊಳ್ಳುತ್ತಾರೆ. ಈ ಜಿಲ್ಲೆಯಲ್ಲಿ ನಾಗರ ಪಂಚಮಿಯನ್ನು ಅದ್ದೂರಿಯಾಗಿ ಆಚರಿಸುವರು. ನಾಗಪ್ಪಗೆ ಹಾಲು ಎರೆಯುವಾಗ ಊರ ವರು ತಂದ ಎಡೆಯನ್ನು ನೈವೇದ್ಯೆಮಾಡಿದ ಉಂಡಿ, ಅರಳು, ಎಲ್ಲವನ್ನು ಸಮುದಾಯದ ಪೂಜಾರಿಗೆ ಕೊಟ್ಟುಹೋಗುವರು. ಊರಿಗೊಂದು ಬೋರಗಲ್ಲು ಇರುತ್ತದೆ. ಅಂದರೆ ಈ ಬೋರಗಲ್ಲು ಊರ ಅಗಸಿ ಬಾಗಿಲದ ಆಚೆ ಇರುತ್ತದೆ. ಅದಕ್ಕೆ ಭರಮದೇವರು ಎಂದು ವಾಡಿಕೆ. ಊರೊಳಗೆ ಭೂತ ಪ್ರೇತಗಳು ಬರದಂತೆ ಕಾಯುವ ಕಾರ್ಯ ಈ ಭರಮದೇವರದು ಎನ್ನುತ್ತಾರೆ. ಬೇಡ ಸಮುದಾಯದವರು ಒಟ್ಟಿಗೆ ಹೋಗುವಾಗ ಬೋರಗಲ್ಲಿಗೆ ನಮಸ್ಕರಿಸಿ ಹೋಗುವುದು, ಬ್ಯಾಟಿ ಬಿದ್ದಾಗ ಅದನ್ನು ತಂದು ಬೋರಗಲ್ಲಿಗೆ ಇಟ್ಟು ಪೂಜಿಸಿ ಬಲಿಕೊಟ್ಟು ಮಾಂಸದ ಎಡಿ ಹಿಡಿಯುತ್ತಾರೆ.

ಸತ್ತ ಮೂರು ದಿನದಾಗ ಹೊಲಿ ತೊಳೆಯುವುದು ಜೀವ ಬಿಡುವಾಗ ಆ ವ್ಯಕ್ತಿ ತೊಟ್ಟ ಬಟ್ಟೆಯನ್ನು ಹೊಳೆಯಲ್ಲಿಯೋ, ಹಳ್ಳದಲ್ಲಿಯೋ ತೊಳೆದುತಂದು ಮೂರು ದಿನದಾಗ ಪೂಜೆ ಮಾಡುತ್ತಾರೆ. ಒಂಭತ್ತು ದಿನದ ನಂತರ ದೈವದಾಗ ಹಾಕಿಕೊಳ್ಳುತ್ತಾರೆ. ಆ ದಿನ ಹೊಸ ಅರಬಿ ತಂದು ಸಿಹಿ ಅಡುಗೆ ಮಾಡಿ ದೈವಕ್ಕೆ ಊಟ ಹಾಕುವುದು. ದೈವದ ಕೈ ತೊಳಸ್ತಾರೆ ಆಗ ಸತ್ತ ಮನುಷ್ಯ ದೈವಸ್ವರೂಪವಾಗುತ್ತಾನೆ. ಫೋಟೋ ಪೂಜಿಸುತ್ತಾರೆ. ಹಣಮಂತ ದೇವರು ಈ ಜಿಲ್ಲೆಯ ಬೇಡ ಸಮುದಾಯದ ಆರಾಧ್ಯ ದೇವರು. ಜಾತ್ರೆಯ ದಿನ ಸಮುದಾಯದವರೆಲ್ಲಾ ಪಾಲ್ಗೊಂಡು ಆಚರಣೆ ಮಾಡುತ್ತಾರೆ. ಓಕಳಿ ದಿನ ಓಕಳಿ ಹೊಂಡಕ್ಕೆ ಒಕ್ಕಲಿಗರ ಜನ ಬಣ್ಣ ಹಾಕುತ್ತಾರೆ. ಬೇಡ ಸಮುದಾಯದವರು ಬೇರೆಯವರಿಗೆ ನೀರು ಗೊಜ್ಜುವುದು ಇಲ್ಲಿನ ವಾಡಿಕೆ. ಅಲ್ಲದೆ ಊರ ಜನ ಊರಾಗ ಬಿಟ್ಟ ಹೆಣ್ಣು ಮಕ್ಕಳಿಗೆ ನೀರು ಗೊಜ್ಜು ಆದ ನಂತರ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಸೀರೆ ಕುಪ್ಪಸ ಕೊಟ್ಟು ಕಳಿಸುವ ಸಂಪ್ರದಾಯ ಇದೆ.

ಈ ಸಮುದಾಯದಲ್ಲಿ ಬರುವ ಇನ್ನೊಂದು ವಿಶಿಷ್ಟ ಜನವೆಂದರೆ ಕರಕರ ಮೊಂಡರು. ಕೈಯಲ್ಲಿ ಒಂದು ಕಡಗ ಹಾಕಿಕೊಂಡು ಮನೆಬಾಗಿಲ ಮುಂದೆ ನಿಂತು ಭಿಕ್ಷೆ ಕೇಳುವುದು. ಭಿಕ್ಷೆ ಕೊಡುವವರೆಗೂ ಆ ಮನೆಯಿಂದ ಕದಲುವುದಿಲ್ಲ. ಚೂರಿಯಿಂದ ರಕ್ತ ಹಾಯಿಸಿ ಕೊಂಡು ವಿಚಿತ್ರ ರೀತಿಯಲ್ಲಿ ವರ್ತಿಸುತ್ತಾ ಮನೆಮುಂದೆ ನಿಂತುಕೊಳ್ಳುತ್ತಾರೆ. ಭಿಕ್ಷೆ ಕೊಟ್ಟ ಮೇಲೆ ಮುಂದಿನ ಮನೆಗೆ ಹೋಗುತ್ತಾರೆ.

ಈ ಜಿಲ್ಲೆಯ ಬೇಡ ಸಮುದಾಯದವರು ಸುರುಪುರ, ಮಸ್ಕಿ, ಮುದಗಲ್, ಮುನಿರಾ ಬಾದ್ ಮೂಲದವು ಎಂದು ತಿಳಿದು ಬರುತ್ತದೆ. ಲಕ್ಕಸಕೊಪ್ಪ ಗ್ರಾಮದ ತುಳಸಿಗಿರೆಪ್ಪ ತಳವಾರ್ ಅವರ ಪ್ರಕಾರ ಚಂದ್ರಗಿರೆವ್ವ, ಕೆಲೂಡಿ ರಂಗನಾಥ ಈ ಭಾಗದ ಜನರ ಆರಾಧ್ಯ ದೈವ ಎಂದು ಹೇಳುತ್ತಾರೆ. ದೇವದಾಸಿಯರು ಹೆಚ್ಚಾಗಿದ್ದ ಈ ಭಾಗದಲ್ಲಿ ಅವರೆಲ್ಲ ಕೆಲೂಡಿ ರಂಗನಾಥನಿಗೆ ನಡೆದುಕೊಳ್ಳುತ್ತಾರೆ. ಈ ದೇವದಾಸಿಯರು ಹಣೆಯಲ್ಲಿ ಕುಂಕುಮವನ್ನು ಉದ್ದವಾಗಿ (ಗೋಟಾಗಿ) ಹಚ್ಚುತ್ತಾರೆ. ಉಚ್ಛ ಕುಲದವರು ಹಿಂದಿನ ದಿನದಲ್ಲಿ ಬೇಡ ಸಮುದಾಯದ ಕೆಲವು ಮಹಿಳೆಯರನ್ನು ದೇವದಾಸಿಯರನ್ನಾಗಿ ದೇವರ ಹೆಸರಿನಲ್ಲಿ ಬಿಡುತ್ತಿದ್ದರು. ದೊಡ್ಡವರ ವಿರುದ್ಧ ಪ್ರತಿಭಟಿಸದೇ ದೇವರ ದಯವಿದ್ದಂತೆ ಆಗಲೆಂದು ಪರಿಶಿಷ್ಟರು ಸಮ್ಮತಿಸುತ್ತಿದ್ದರು. ಉಚ್ಛಕುಲದವರು ಈ ಮಹಿಳೆಯರನ್ನು (ದೇವದಾಸಿ ಯರನ್ನು) ಮೋಜಿಗಾಗಿಯೋ ಅಥವಾ ತಮ್ಮ ಸೇವೆಗಾಗಿಯೋ ಬಳಸಿಕೊಳ್ಳುತ್ತಿದ್ದರು ಎಂಬ ಪ್ರತೀತಿ ಇದೆ. ಈಗ ಈ ಸಂಪ್ರದಾಯ ಅಷ್ಟಾಗಿ ಕಂಡುಬರುತ್ತಿಲ್ಲ. ಈ ಸಮುದಾಯದ ಮಹಿಳೆಯರು ಮೂಗುತಿಯನ್ನು ಎಡಗಡೆ ಇಡುವುದು ವಾಡಿಕೆ. ಚೌರಬೀಸುವ ಹೆಣ್ಣು ಮಕ್ಕಳು ಹಣೆಗೆ ಹಸಿರು ಮಿಶ್ರಿತ ಕುಂಕುಮ ಹಚ್ಚುವರು. ಅಲ್ಲದೇ, ಇಲ್ಲಿನ ಕೆಲವು ದೇವರು ಗಳಿಗೆ ಬೇಡ  ಸಮುದಾಯದ ಮನೆಯ ಎಡೆ ಏರುವುದಿಲ್ಲ. ಅಂತಹ ದೇವರಿಗೆ ಹಣ್ಣು, ಕಾಯಿ, ಅಕ್ಕಿ, ಕೊಬ್ಬರಿ, ಕೊಟ್ಟು ನೈವೇದ್ಯ ಮಾಡಿಸುತ್ತಾರೆ.

ಈ ಸಮುದಾಯದ ಹಳೆಯ ತಲೆಮಾರಿನವರು ಮುಂಜಾನೆ ಎದ್ದ ಕೂಡಲೇ ಸೂರ್ಯ ನಮಸ್ಕಾರ ಮಾಡುವ ರೂಢಿಯಿದೆ. ಹಕ್ಕಿ ಶಕುನಗಳಲ್ಲಿ ಈ ಸಮುದಾಯದವರು ನಂಬಿಕೆ ಇಟ್ಟುಕೊಂಡಿದ್ದಾರೆ. ಹಾಲಕ್ಕಿ ಒಂದು ಸಲ ನುಡಿದರೆ ಅಪಶಕುನ, ಎರಡು ಸಲ ನುಡಿದರೆ ಶುಭ ಎಂದು ನಂಬಿಕೊಂಡಿದ್ದಾರೆ. ಬೇಟೆಗೆ ಹೊರಡುವ ಸಂದರ್ಭದಲ್ಲಿ ಹಾಲಕ್ಕಿ ನುಡಿಯು ವುದರ ಮೇಲೆ ಬೇಟೆ ಸಿಗುವುದನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದರು. ಇನ್ನು ಟೀವಕ್ಕಿ ಯಾರ ಮನೆ ಮೇಲೆ ಕೂಗುತ್ತದೆಯೋ ಅವರಿಗೆ ಕೇಡು ಎಂದು ನಂಬಿದ್ದಾರೆ. ಗೂಗಿ ನುಡಿಯುವುದು ಅಶುಭದ ಸಂಕೇತ ಎಂದು ಈ ಜನರ ಗಾಢನಂಬಿಕೆ. ಮುಸ್ಲಿಂರ ಹಬ್ಬವಾದ ಮೊಹರಂ ಹಬ್ಬವನ್ನು ಈ ಭಾಗದ ಅನೇಕ ಗ್ರಾಮಗಳಲ್ಲಿ ಊದು ಹಾಕುವುದು, ದೇವರ ಹಿಡಿಯುವುದು ಬೇಡ ಸಮುದಾಯದವರೇ ಅಲ್ಲದೇ ಈ ಸಮುದಾಯದ ಮಕ್ಕಳಾದಿಯಾಗಿ ಫಕೀರ ಆಗುವುದು ಇಲ್ಲಿನ ವೈಶಿಷ್ಟ್ಯ.

ಮದುವೆ ಸಂದರ್ಭದಲ್ಲಿ ಒಳಕಲ್ಲು ಪೂಜೆಯನ್ನು ಐದಗಿತ್ತೆಯರು ಮುತ್ತೈದೆಯರು ಮಾಡುವರು. ಆದಿನ ಐದು ಜನ ಮುತ್ತೈದೆಯರು ಉಪವಾಸ ವೃತಮಾಡಿ ಮಡಿಯಿಂದಲೇ  ಒಳಕಲ್ಲ ಪೂಜೆ ಮಾಡುವರು. ಅಲ್ಲದೇ, ಕಳಸಕ್ಕೆ ನೂಲು ಸುತ್ತವುದು ಹೀಗೆ ನೂಲು ಸುತ್ತುವಾಗ ಬಸವಣ್ಣ ದೇವರ ಹಾಗೂ ಮನೆದೇವರ ಹೆಸರಲ್ಲೆ ನೂಲುಸುತ್ತುವರು. ಶವಸಂಸ್ಕಾರದ ಸಂದರ್ಭದಲ್ಲಿಯೂ ಕೂಡ ಕೆಲವು ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದಾರೆ. ಸತ್ತ ಶವವನ್ನು ಚಟ್ಟ ಅಥವಾ ಡೋಲಿಯಲ್ಲಿ ಒಯ್ಯುವುದು,ಪಟಾಕಿ ಸಿಡಿಸುವುದು, ಚಿಲ್ಲರೆ ಹಣವನ್ನು ಶವ ಒಯ್ಯುವಾಗ ತೂರುವುದು ಅಲ್ಲದೇ ನವಣೆ ಕಾಳು ತೂರುವುದು ವಾಡಿಕೆ. ಹಾಗೂ ಹೆಣವನ್ನು ಸುಡುವುದು ಇಲ್ಲವೇ ಹೂಳುವುದು ರೂಢಿ. ಮದುವೆ ಆಗದೇ ವಯಸ್ಕ ಸತ್ತರೆ ಚಟ್ಟದಲ್ಲಿ ಬೋರಲು ಹಾಕಿ ಒಯ್ಯುವುದು ಸಂಪ್ರದಾಯ.

ದುರಗಮುರಗಿ ಸಂಪ್ರದಾಯ ಆಚರಣೆಯು ಕೂಡ ಜಿಲ್ಲೆಯಲ್ಲಿ ಅಲ್ಪಮಟ್ಟಿಗೆ ಗೋಚರವಾಗುತ್ತಿದೆ. ಆದರೆ ಸಂಪ್ರದಾಯ ಹೈದರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಇದ್ದಷ್ಟು ಪ್ರಮಾಣದಲ್ಲಿಲ್ಲ. ದುರ್ಗಿಯನ್ನು ಒಂದು ಮರದ ಪೆಟ್ಟಿಗೆಯಲ್ಲಿ ಉದ್ದ ಕೋಲು ಹಾಕಿ ಹೊತ್ತುಕೊಂಡು ಊರೂರು ಅಲೆಯುವದು. ಬರಿಮೈಯ್ಯಲ್ಲಿ ತುಂಡು ಬಟ್ಟೆಯನ್ನ ಹೊಚ್ಚಿಕೊಂಡು ತಲೆಯಲ್ಲಿ ಉದ್ದ ಕೂದಲು ಬಿಟ್ಟು ಒಂದು ಬಾರಕೋಲಿನಿಂದ ಹೊಡೆದು ಕೊಳ್ಳುತ್ತಾ ತಿರುಗುವರು. ಅಲ್ಲದೇ ದೇವಿ ಹೊತ್ತ ವ್ಯಕ್ತಿಯ ಹೆಂಡತಿಯೋ ಮಗಳೋ ಒಂದು ಡೋಲು ಭಾರಿಸುತ್ತಾ ದೇವಿಯ ಮಹಿಮೆಯನ್ನು ಹೊಗಳುವುದು ದುರುಗಮುರಗಿ ಯವರ ಸಂಪ್ರದಾಯ. ಈ ಸಮುದಾಯ ಹಿಂದೆ ಇದ್ದಷ್ಟು ಈಗ ಅಷ್ಟಾಗಿ ಕಾಣುತ್ತಿಲ್ಲ ಎನ್ನುತ್ತಾರೆ ಮುರಡಿ ಗ್ರಾಮದ ಮಲ್ಲಪ್ಪ ದ್ಯಾಮನಗೌಡ್ರು

ಬೀಳಗಿ ತಾಲೂಕಿನ ಕಪ್ಪರಪಡಿಯವ್ವ ವೀರ ಸಿಂಧೂರ ಲಕ್ಷ್ಮಣನಿಗೆ ಆಶ್ರಯ ನೀಡಿದ ಆರಾಧ್ಯ ದೈವ. ಬ್ರಿಟೀಷರಿಂದ ತಲೆಮರೆಸಿಕೊಂಡು ಕಾಡುಮೇಡು ಅಲೆಯುವ ಸಿಂಧೂರ ಲಕ್ಷ್ಮಣನಿಗೆ ತಾಯಿ ಕಪ್ಪರ ಪಡಿಯವ್ವನ ಗುಡ್ಡವೇ ಆಶ್ರಯತಾಣ. ಕೊನೆಗೆ ಅದೇ ಸಮುದಾಯದವರ ಕುಟಿಲೋಪಾಯದಿಂದ ಬ್ರಿಟೀಷರಿಂದ ಸಿಂಧೂರ ಲಕ್ಷ್ಮಣ ಹತ ನಾದುದು ಎಲ್ಲರಿಗೂ ತಿಳಿದವಿಷಯ. ಲಕ್ಷ್ಮಣ ಪ್ರಾಣಬಿಡುವಾಗ ತಾಯಿ ಕಪ್ಪರಪಡಿಯವ್ವ ನನ್ನು ಜೋರಾಗಿ ಕೂಗಿ ಪ್ರಾಣಬಿಟ್ಟನೆಂಬ ವಾಡಿಕೆ ಇದೆ. ಇನ್ನು ಈ ಜಿಲ್ಲೆಯ ಕೆಲವು ಕಡೆ ಗಳಲ್ಲಿ ಜೋಕುಮಾರ ಹುಣ್ಣಿಮೆಯಲ್ಲಿ ಜೋಕುಮಾರನನ್ನು ಒಂದು ಬಿದಿರಿನ ಪುಟ್ಟಿಯಲ್ಲಿ ಹೊತ್ತು ಊರೂರು ಸುತ್ತಿ ಬರುತ್ತಿದ್ದರೆಂದು ವಾಡಿಕೆ ಇದೆ. ಮಳೆಗಾಲದ ಸಂದರ್ಭದಲ್ಲಿ ಚೋಕುಮಾರನನ್ನು ಹಾಡಿ ಹೊಗಳುವರು. ‘‘ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆ ತುಂಬಿ ಗೊಡ್ಡುಗಳೆಲ್ಲಾ ಹೈನಾದ್ವ ಜೋಕುಮಾರ’’ ಎಂದು   ಹಾಡುತ್ತ ತಿರುಗುವುದು ಬೇಡ ಸಮುದಾಯದ ಮಹಿಳೆಯರು ಎಂಬುವುದು ತಿಳಿದುಬರುತ್ತದೆ.

ಅಲ್ಲದೇ ಮಳೆಗಾಲದಲ್ಲಿ ಮಳೆ ಬಾರದೇ ಇದ್ದಾಗ ಊರವರೆಲ್ಲ ಸೇರಿ ಗುರ್ಚಿ ಮೆರವಣಿಗೆ ಮಾಡಿಸುವುದು ರೂಢಿಯಲ್ಲಿತ್ತು. ಅಂದರೆ ಗುರ್ಚಿ ಮೆರವಣಿಗೆ ಮಾಡಿದರೆ ಮಳೆ ಆಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಊರ ತುಂಬ ಗುರ್ಚಿ ಹೊತ್ತು ತಿರುಗುವರು. ಆಗ ಮನೆ ಮನೆಯವರು ಕಾಲಿಗೆ ನೀರು ಹಾಕಿ, ಊದಿನಕಡ್ಡಿ ಬೆಳಗಿ ಮುಂದೆ ಕಳುಹಿಸುವುದು ಸಂಪ್ರದಾಯ. ಆಗ ಗುರ್ಚಿ ಹೊತ್ತು ಊರು ಸುತ್ತಿ ಬರುವವರು ಬೇಡ ಸಮುದಾಯದವರೇ ಎಂಬುದು ಪ್ರತೀತಿ ಇದೆ.

ಒಟ್ಟಾರೆ, ಈ ಜಿಲ್ಲೆಯಲ್ಲಿ ಬೇಡ ಸಮುದಾಯದವರು ಬಹು ಸಂಖ್ಯೆಯಲ್ಲಿದ್ದು ಉಳಿದ ಸಮುದಾಯದ ಒಂದು ಮುಖ್ಯ ಭಾಗದಂತೆ ಇದ್ದಾರೆ. ವಿಜ್ಞಾನ ತಂತ್ರಜ್ಞಾನದ ಆವಿಷ್ಕರಣೆ ಯಲ್ಲಿ ಮೂಲ ಸಂಪ್ರದಾಯವನ್ನು ಕಡೆಗಣಿಸಿ, ಈ ಸಮುದಾಯದವರು ಬೇರೆಯವರಂತೆ ಆಚರಣೆ ಸಂಪ್ರದಾಯದಲ್ಲಿ ತೊಡಗಿದ್ದರೂ, ದೈವಾಚಾರದಲ್ಲಿ ಹಿರಿಯರ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆ. ಈ ಜಿಲ್ಲೆಯಲ್ಲಿ ಬೇಡ ಸಮುದಾಯದ ಸಾಹಸಗಾತೆ ಲಾವಣಿ ಗಳಾಗಿ ಜನಪದರ ಬಾಯಲ್ಲಿ ಹರಿದು ಬರುತ್ತಿವೆ. ದೈವಗಳ ಲೋಕದಲ್ಲಿ ಬೇಡ ಸಮುದಾಯ ತನ್ನ ಮೂಲತನವನ್ನು ಉಳಿಸಿಕೊಂಡಿದೆ ಎಂದಷ್ಟೇ ಹೇಳಬಲ್ಲೆ.

* * *

ಹಲಗಲಿ ಬೇಡರು

ದೇವರ ತಂದ ಪಡಿಪಾಟಾ
ಚಿಂತಿ ಹತ್ತಿ ಆದರೋ ನಷ್ಟಾ
ಅಧಿಕಾರ ಉಳಿಯಲಿಲ್ಲ ಯೆಳ್ಳ್‌ಅಷ್ಟಾ
ಕೇಡಗಾಲ ಊಂದಿತು ಕನಿಕಷ್ಟಾ

ಹೆಂಗಸ್‌ಆಗಿ ಶೀರಿಯ ವುಟ್ಟಾ
ಸೋಂಡ್‌ಒಣಗಿ ಆದೀತೋ ಬೊಬ್ಬಾಟಾ

ಅದ್‌ಹಾಂಗ್‌ಅತಿ ಸ್ತ್ರೀಯರ ಕ್ರೀಡಾದ್ ಆಟಾ
ಭಂಟರಿಗೆ ಬಂದಿತೊ ಕಿಕ್ಕಷ್ಟಾ                 ||ಯೇರ||

ಪಕ್ಕಾ ಕಿತ್ತ ಪಕ್ಷಿ ಗತಿ ಆಗಿ ಚಿಂತಿ ಅದರ ಮನಕ

 

��r���ذ� p� � ಲಾವಣಿಗಳು ಪುಸ್ತಕದಿಂದ ಆಯ್ದುಕೊಂಡಿದ್ದೇನೆ).

 

* * *

ಹಲಗಲಿ ಬೇಡರು

ಬೇಡಿದಾ ಕ್ಷಣಕ ತಾವು ತಂದು
ಕೊಡತಾರ ಹಿಡಿಹಿಡಿರ್ ಎಂದು

ವತ್ನ ಕೊಡತೇವ್ ಅನ್ನರಿ ವೊಂದ್ ಒಂದು
ತಂದು ಕೊಡತಾರ ತಮ್ಮ ಕುಸಿಲಿಂದು

ಬಂದಿತು ಹುಕುಮ ಹೀಂಗ್ ಎಂದು
ಡಣ್ಗರ ಸಾರಿದರ ಮುಂದು

ಶೂರ ಶಿಪಾಯಿಜನರ ತಾವು ತಿಳಿದು
ಅಳತಾಯ ಕಣ್ಣಿಗೆ ನೀರ್ ತಂದು    ||ಯೇರ||

ಬಹಳ ಚಿಂತಿಯ್‌ಆಗಿ ದುಋೂಖದಿಂದ ಅವರು ಬಿದ್ದರ್-ಅಣ್ಣ ನೆಲಕ

 

ಚಿತ್ರದುರ್ಗ, ಸುರಪುರ, ಹಲಗಲಿಯ ಬೇಡರ ಶೌರ್ಯ, ಪರಾಕ್ರಮಗಳು ಯಾವ ಕಾಲಕ್ಕೂ ಚಿರಸ್ಮರಣೀಯ

ಹರ್ತಿಕೋಟೆ ವೀರೇಂದ್ರ ಸಿಂಹ