ಪ್ರಾಸ್ತಾವಿಕ

ಊರ ಸಂಸ್ಕೃತಿಗೆ ಒಗ್ಗಿಕೊಂಡು ಒಂದೆಡೆ ನೆಲೆಕಂಡುಕೊಂಡ ವಾಲ್ಮೀಕಿ-ಬೇಡರ ಗುಂಪು ಗಳು ಕೃಷಿ ಅವಲಂಬಿಸಿ ಬೇಟೆಗಾರಿಕೆ ಮತ್ತು ಪಶು ಪಾಲನೆಗಳನ್ನು ಪೂರಕ ವೃತ್ತಿಯಾಗಿಸಿ ಪರಿವರ್ತಿತರಾದರು. ಹೀಗಾಗಿ ಊರುಗಳಲ್ಲಿ ವಾಸವಾದಂದಿನಿಂದ ಕೃಷಿಯೇ ಅವರ ಮೂಲ ಆಧಾರ. ಕೃಷಿಗೆ ಪೂರಕವಾಗಿ ಪಶುಪಾಲನ ವೃತ್ತಿ. ಇದು ನಾಡಿನ ಕೃಷಿಗೂ ಮುಖ್ಯ ತಳಹದಿ. ದನಕರುಗಳಿಂದಲೇ ಗ್ರಾಮಜೀವನ. ಯಾಕೆಂದರೆ ಗೊಬ್ಬರ, ಪುಷ್ಟೀಕರಣದ ಆಹಾರ ಪಶು ಗಳಿಂದಲೇ. ಹೀಗಾಗಿ ಸಾಮಾನ್ಯಜನ ಪಶುಪಾಲನೆ ಮತ್ತು ರಕ್ಷಣೆಗಾಗಿ ಹೆಚ್ಚು ಗಮನಕೊಡು ತ್ತಿದ್ದರು. ಪ್ರಯುಕ್ತ ಕಾಡಿನೆಡೆಗೆ ಅವರ ನಡಿಗೆ. ಅಲ್ಲಿಂದ ಕಾಡನ್ನೇ ಅವಲಂಬಿಸಿದ ಕಟ್ಟಿಗೆ, ಬೇಟೆ ಪಾಶುಪಾಲನದಂತಹ ದೇಹಬಲ ಅವಲಂಬಿಸಿರುವ ಕಾಯಕದಲ್ಲಿ ತೊಡಗುವದು ಸರ್ವೇ ಸಾಮಾನ್ಯವಾಯಿತು. ಹೀಗೆ ಕಾಡಿನ ಕಟ್ಟಿಗೆ, ಬೇಟೆಗೆ ಬಳಸುವ ಜನಸಮೂಹದ ವೃತ್ತಿಯು ಜಾತಿಯಾಗಿ ಹೆಪ್ಪುಗಟ್ಟಿ ಅವರೊಂದು   ವಾಲ್ಮೀಕಿ ಬೇಡರು ಜಾತಿಯಾಗಿದ್ದಾರೆ. ಆ ಬೇಡ ಸಮುದಾಯದ ಮೂಲ ಎಲ್ಲಿ ಎಂದು ಕೆದಕುತ್ತಾ ಹೋದರೆ, ಬೇಡರಲ್ಲೇ ಎದ್ದು ಕಾಣುವ ವ್ಯಕ್ತಿತ್ವದ ವಾಲ್ಮೀಕಿಯೇ ಅವರ ಮೂಲ ಎಂಬುವುದೆಂದು ತೋರುತ್ತದೆ.

ಕ್ರಮೇಣ ಊರ ಇತರ ಸಮುದಾಯಗಳೊಂದಿಗೆ ಸಮನ್ವಯ ಹೊಂದಾಣಿಕೆಗಳನ್ನು ಮಾಡಿಕೊಂಡ ಗುಂಪುಗಳು ಗ್ರಾಮ-ನಗರ-ಪಟ್ಟಣ ಹೀಗೆ ನೆಲಸಿದೆಡೆಯಲ್ಲಿ ಪ್ರಾದೇಶಿಕ, ಸಾಮಾಜಿಕ, ಸಂಸ್ಕೃತಿಯನ್ನು ರೂಪಿಸಿಕೊಂಡು ಕರ್ನಾಟಕದ ಬಾಗಲಕೋಟೆ ಪರಿಸರದಲ್ಲಿ ವಾಲ್ಮೀಕಿ-ಬೇಡ, ನಾಯಕ ಜಾತಿಯವರೆಂಬ ಹೆಸರಿನಿಂದ ಹೇರಳವಾಗಿ ನೆಲೆಯೂರಿದ್ದಾರೆ. ಇವತ್ತಿಗೂ ಈ ಬುಡಕಟ್ಟಿನ ಸಂತತಿಯವರು ತಮ್ಮ ಮೂಲದ ಭಾಷೆ,ವೇಷ, ರೂಪ, ದೈವ ಮತ್ತು ಆಚಾರ ವಿಧಿ-ವಿಧಾನಗಳೊಂದಿಗೆ ಇತರ ಸಮುದಾಯದ ಆಚರಣೆಗಳನ್ನು ಪಾಲಿಸತೊಡಗಿದರು.

ಅಧ್ಯಯನದ ಉದ್ದೇಶ

ಮನುಷ್ಯ ಲೋಕದಲ್ಲಿ ಕುಲ, ಜಾತಿ, ಜನಪದ, ರಾಜ್ಯ ಮೊದಲಾದ ವಿಭಾಗಗಳಿವೆ. ಈ ವಿಭಾಗಗಳು ಮೊದ-ಮೊದಲು ಪ್ರಕೃತಿಸಿದ್ಧವಾದ ಕಾರಣಗಳಿಂದ ಉಂಟಾದವು. ಭೂಗುಣ, ವಾಯುಗುಣಗಳು ಜನರ ದೇಹ ಸ್ವಭಾವವನ್ನು, ಮನಃ ಪ್ರವೃತ್ತಿಯನ್ನು ರೂಪ ಗೊಳಿಸಿರುತ್ತವೆ. ಅನಂತರ ಅವರ ಮತ ವಿಶ್ವಾಸಗಳು ಅವರ ಮನೋ ವೃತ್ತಿಯನ್ನು ತಿರುಗಿ ಸುತ್ತವೆ. ಅವರ ಆರ್ಥಿಕ ಪರಿಸ್ಥಿತಿ, ಉದ್ಯೋಗ ಸಂದರ್ಭಗಳು ಅವರ ಶೀಲಸ್ವಭಾವವನ್ನು ತಿದ್ದುತ್ತೆ. ನಾನಾ ಸಮುದಾಯಗಳಲ್ಲಿ ನಾನಾ ಆಚಾರಗಳು ವ್ಯವಹಾರ ಪದ್ಧತಿಗಳು ನೆಲೆ ಗೊಂಡಿರುತ್ತವೆ.

ಈ ಆಚಾರ ಪದ್ಧತಿಗಳು ಜೀವನದ ಮೇಲೆ ಇಂದು ಅಧಿಕಾರ ನಡೆಸುತ್ತಿವೆ. ಇಂತಹ ವಿಷಯಗಳಲ್ಲಿ ನಾವು ಚಿಕಿತ್ಸಕ ಬುದ್ದಿಯನ್ನು ಇರಿಸಿಕೊಳ್ಳಬೇಕಾಗುತ್ತದೆ.

ಪ್ರಸ್ತುತ ನಮ್ಮ ಹಿಂದಿನ ತಲೆಮಾರಿನ ಜನಪರ ಆಚರಣೆಗಳು ಜನಸಮೂಹದಲ್ಲಿ ಈಗಲೂ ಪ್ರಚಲಿತದಲ್ಲಿದ್ದು, ಆ ಹಿನ್ನೆಲೆಯಲ್ಲಿ ನಂಬಿಕೆಗಳು, ವಿಧಿ-ನಿಷೇಧಗಳು ಈಗಲೂ ತೀರ್ಮಾನಬದ್ದವೇ? ಆ ಜನರ ಮನಸ್ಸು, ಅವರ ತರ್ಕ ಆಚರಣೆಗಳ ಹಿನ್ನೆಲೆ, ಕಟ್ಟಿದ ಗುಡಿ ಗೋರಿಗಳು ಅವರ ಮೇಲೆ ಬಲವಾಗಿ ಹಿಡಿತವಿರಿಸಿ ಹೇಗೆ ಬೆಳೆದುಬಂದಿವೆ? ಇಂದಿನ ನಮ್ಮ ಮತಗಳು ಹೇಗೆ ನಿನ್ನಿನ ಈ ನಂಬಿಕೆಗಳಿಂದ ಉತ್ಪನ್ನವಾಗಿವೆ ಎಂಬುದನ್ನು ಗುರುತಿ ಸುವುದು ಅವಶ್ಯ. ಈ ದಿಶೆಯಲ್ಲಿ ಬಾಗಲಕೋಟೆ ಪರಿಸರದಲ್ಲಿ ವಾಲ್ಮೀಕಿ ಸಮುದಾಯದ ಆಚರಣೆಗಳ ನೆಲೆಯಲ್ಲಿ ನಂಬಿಕೆ, ವಿಧಿ-ನಿಷೇಧಗಳನ್ನು ತಿಳಿಯುವದು ಈ ಅಧ್ಯಯನದ ಉದ್ದೇಶವಾಗಿದೆ.

ವಾಲ್ಮೀಕಿ ಸಮುದಾಯದ ನಂಬಿಕೆಗಳು, ವಿದಿನಿಷೇಧಗಳು

ಆಂಗ್ಲ ಕವಿ ಜಾನ್‌ಡೆನ್ ಹೇಳುವಂತೆ ಯಾವೊಬ್ಬಮಾನವನೂ ದ್ವೀಪವಲ್ಲ ಎಂಬಂತೆ, ಇಬ್ಬರು ಅಥವಾ ಅದಕ್ಕೂ ಹೆಚ್ಚು ಹೆಚ್ಚು ಜನರ ನಡುವೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷ ವಾಗಿ ಸಂಪರ್ಕ ಸಂಬಂಧಗಳು ಏರ್ಪಟ್ಟು ಅವರುಗಳ ನಡುವೆ ಕ್ರಮಬದ್ಧವಾದ ಅಂತಃಕ್ರಿಯೆ ಅಥವಾ ಒಡನಾಟಗಳು ಆರಂಭವಾದಾಗ ಸಮುದಾಯ ಸ್ಥಾಪನೆಗೆ ವೇದಿಕೆ ಸಿದ್ಧವಾಗು ವುದು

ಈ ಸಮುದಾಯ ಕೆಲವು ವಿಷಯ, ವಿಚಾರ ಅಥವಾ ವಸ್ತುಗಳಿಗೆ ಸಂಬಂಧಿಸಿದಂತೆ ಸತ್ಯವೆಂದು ಭಾವಿಸಿ ಸ್ವೀಕರಿಸಲು ಅಣಿಯಾಗುವರು. ಅದನ್ನು ನಂಬಿಕೆ ಎನ್ನುವರು. ಆದರೆ ಪ್ರತ್ಯಕ್ಷ ಅನುಭವದ ದೃಷ್ಠಿಯಿಂದ ಅವು ಸತ್ಯವಿರಬಹುದು ಅಥವಾ ಅಸತ್ಯವಿರಬಹುದು.

ಹೀಗೆ ತಮ್ಮದೇ ಆದ ನಂಬಿಕೆಗಳನ್ನು ಸೃಷ್ಠಿಸಿಕೊಂಡು ಬಂದ ಜನ ನಂಬಿಕೆಗಳನ್ನು ಆಚರಿಸುತ್ತಾ ತಮ್ಮ ಮುಂದಿನ ತಲೆಮಾರಿಗೆ ವರ್ಗಾಯಿಸುತ್ತಾ ಅವರಲ್ಲಿ ನಡತೆಯಾಗಿ ಮಾರ್ಪಟ್ಟಿತು. ಮುಂದೆ ತಮ್ಮ ನಡತೆಯ ಬಗೆಗಿನ ಸಮೂಹದ ನಿರೀಕ್ಷೆಗಳು, ನಿಯಮ, ವಿಧಿಗಳಾಗಿ ಪರಿಣಮಿಸಿದವು.

ವಿಧಿಗಳೆಂದರೆ ಸಮೂಹದ ಸದಸ್ಯರುಗಳಿಗೆ ಅವರ ನಡತೆಯ ನೀಲಿನಕಾಶಗಳಾದವು. ತರುವಾಯ ವಿಧಿಗಳಿಗೆ ಸಹಾಯಕವಾಗಿ ನಿಷೇಧಗಳು ಹುಟ್ಟಿಕೊಂಡು ಸಾಮಾಜಿಕ ನಿಯಂತ್ರಣ ಗಳಿಗೆ ಕಾರಣವಾದವು.

ಸಮುದಾಯದ ಐಕ್ಯಮತ್ಯ ಹಾಗೂ ನಿರಂತರತೆಯನ್ನು ಸಾಧಿಸುವದರೊಂದಿಗೆ ಸಾಮಾಜಿಕ ಅನುವರ್ತನೆಯನ್ನು ಕಾಯ್ದುಕೊಳ್ಳುವುದು ನಿಷೇಧದ ಕಾರ್ಯವಾಯಿತು.

ವ್ಯಕ್ತಿಗಳ ಅಪವರ್ತನೆಯನ್ನು ನಿಯಂತ್ರಿಸುವ ಸಾಧನವೇ ನಿಷೇಧ. ಇದು ವ್ಯಕ್ತಿಯ ನಿಯಮಿತವಾದ ಹಾಗೂ ನಿರೀಕ್ಷಿತವಾದ ರೀತಿಯಲ್ಲಿ ವರ್ತನೆ ಸಾಗುವಂತೆ ಮಾಡುವುದು.

ಹೀಗೆ ಎಲ್ಲಾ ಸಮೂಹಗಳ ಆಚರಣೆಯ ನಂಬಿಕೆ, ವಿಧಿ-ನಿಷೇಧಗಳೊಂದಿಗೆ ಮೇಳೈಯಿಸಿ ಕೊಂಡು ಬಂದ ವಾಲ್ಮೀಕಿ ಸಮುದಾಯ ತನ್ನ ಸಮುದಾಯದ ಆಚರಣೆಗಳ ನೆಲೆಯಲ್ಲಿ ನಂಬಿಕೆ, ವಿಧಿ-ನಿಷೇಧಗಳಲ್ಲಿ ಜೀವಂತಿಕೆಯನ್ನಿರಿಸಿಕೊಂಡು ಬಂದಿರುವುದನ್ನು ನೋಡ ಬಹುದು.

ವಾಲ್ಮೀಕಿ ಸಮುದಾಯವು ಅನೇಕ ಸಮುದಾಯಗಳೊಂದಿಗೆ ಸಾಮಾಜಿಕ, ಧಾರ್ಮಿಕ ನಂಬುಗೆಗಳು, ವಿಧಿ-ನಿಷೇಧಗಳಿಗೆ ಸಂಬಂಧಿಸಿದಂತೆ ಸಹಸಂಬಂಧಗಳನ್ನು ಹೊಂದಿದ್ದರೂ, ಕೆಲವೊಂದು ವಿಶಿಷ್ಟವಾದ ನಂಬಿಕೆ, ವಿಧಿ-ನಿಷೇಧಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಲಾಗಿದೆ.

ಸಾಮಾಜಿಕ ನಂಬಿಕೆಗಳು, ವಿಧಿಗಳು

ವಾಲ್ಮೀಕಿ ಸಮೂಹದಲ್ಲಿ ಸಾಮಾಜಿಕ ನಂಬುಗೆ ಹಾಗೂ ವಿಧಿಗಳು ಸಾಮಾಜಿಕ ಜೀವನದ ಮೇಲೆ ತುಂಬಾ ಪ್ರಭಾವ ಬೀರುವಂತಾಗಿವೆ. ಈ ಸಾಮಾಜಿಕ ನಂಬುಗೆ, ವಿಧಿಗಳೇ ಇಲ್ಲದಿರು ತ್ತಿದ್ದರೆ. ಮಾನವರು ಇಂದು ಸಮೂಹ ಜೀವನವನ್ನು ನಡೆಸುವದೇ ಸಾಧ್ಯವಾಗುತ್ತಿರಲಿಲ್ಲ, ಮಾತ್ರವಲ್ಲ ಜೈವಿಕ ಅಸ್ತಿತ್ವಕ್ಕೆ ಸಂಚಕಾರ ಬರುತ್ತಿತ್ತು. ವಾಲ್ಮೀಕಿ ಸಮೂಹದ ಮೇಲಿನ ವ್ಯಕ್ತಿಗಳ ಅವಲಂಬನೆಯು ಸಮೂಹದ ನಂಬುಗೆ, ವಿಧಿಗಳ ಮೇಲಿನ ಅವಲಂಬನೆಯೇ ಆಗಿದೆ. ಸಾಮಾಜಿಕ ಜೀವನದ ಎಲ್ಲಾ ಸಂದರ್ಭಗಳಲ್ಲೂ ನಂಬುಗೆ, ವಿಧಿಗಳು ವಾಲ್ಮೀಕಿ ಜನರ ನಡತೆಗೆ ಮಾರ್ಗದರ್ಶನವಾಗಿದ್ದು ಅವುಗಳ ಪಟ್ಟಿ ಈ ಕೆಳಗಿನಂತಿದೆ.

ಬೇಟೆ

ವಾಲ್ಮೀಕಿ-ಬೇಡ ಕುಲದಲ್ಲಿ ಹುಟ್ಟಿದ ಮೇಲೆ ವರ್ಷದಲ್ಲಿ ಒಂದು ದಿನವಾದರೂ ಬೇಟೆ ಯಾಡಲೇಬೇಕು.

ಬೇಟೆಯಾಡಿದರೆ ಕೇವಲ ಕೆಲವೇ ಕಾಡುಪ್ರಾಣಿಗಳಾದ ಜಿಂಕೆ, ಮೊಲ, ಹಾಗೂ ಕೌಜುಗ ಬುರ್ಲಿಗಳನ್ನು ಮಾತ್ರ ಆಡಬೇಕು.

ಗಾಳಿಬೀಸುವ ಎದುರು ದಿಕ್ಕಿನಲ್ಲಿ ಬೇಟೆಯಾಡಿದರೆ ಬೇಟೆ ತಪ್ಪಿಸಿಕೊಳ್ಳುವದಿಲ್ಲವೆಂಬ ನಂಬಿಕೆ ಇದೆ.

ಬೇಟೆಯ ಬಡಿಗೆಗೆ ಆರಿಯ ತಪ್ಪಲವನ್ನು ತಿಕ್ಕುವದರಿಂದ ಬೇಟೆ ಬೇಗ ಸಿಗುವದೆಂಬ ನಂಬಿಕೆ.

ಬೇಟೆಯಲ್ಲಿ ಯಾರು ಬೇಟೆಯನ್ನು ಎತ್ತಿಹಿಡಿಯುವರೋ ಅವರದೇ ಬೇಟೆ ಎಂಬ ನಿಯಮವಿದೆ.

ಗುಡ್ಡದ ಮೇಲಿನಿಂದ ಇಳಿಯುವ ಮೊಲ/ಜಿಂಕೆಗಳ ಹೆಜ್ಜೆಯ ಮಣ್ಣು, ತಿಪ್ಪೆಯಲ್ಲಿನ ಹುಲ್ಲಿನ ಕಸಬರಗಿಯ ಗರಿಗಳು, ಮೂರು ಹಾದಿಗಳು ಕೂಡಿದ ಮಣ್ಣು, ರಂಡೆ-ಮುಂಡೆ ಹೆಣ್ಣುಮಕ್ಕಳು ಉಂಡು ಬಿಸಾಡಿದ ಎಲೆ, ಗಂಜಿತಪ್ಪಲು ಒಡೆಯನ ತಪ್ಪಲು/ಕಟ್ಟಿಕೆ ಕೌಡಿಲೋಬಾನ ಇವೆಲ್ಲವುಗಳನ್ನೂ ಮೂರು ಹಾದಿಗಳು ಸೇರುವ ಸ್ಥಳದಲ್ಲಿ ಬೆಂಕಿಯನ್ನು ಹೊತ್ತಿಸಿ ಅದರ ಮೇಲೆ ಬೇಟೆಗಾರ, ಬೇಟೆನಾಯಿ, ಬಂದೂಕು, ಬೇಟೆಯಾಡುವ ಬಲಿ, ಇತ್ಯಾದಿಗಳನ್ನು ತೆಗೆದುಕೊಂಡು ಹೋದರೆ ಬೇಟೆ ಸಿಗುವದೆಂಬ ನಂಬಿಕೆ.

ಗುಡ್ಡ ಹತ್ತಿದ ಮೊಲ/ಜಿಂಕೆಗಳ ಹೆಜ್ಜೆ ಮಣ್ಣನ್ನು ತೆಗೆದುಕೊಂಡು ತಮ್ಮ ವಸ್ತ್ರ ಅಥವಾ ಧೋತಿಯ ಚುಂಗಿನಲ್ಲಿ ಅಥವಾ ಮನೆಯಲ್ಲಿ ಕಟ್ಟಿದರೆ ಆ ಬೇಟೆಗಳು ಬೇರೆ ಬೇಟೆಗಾರರಿಗೆ ಸಿಗುವುದಿಲ್ಲ ಎಂಬ ನಂಬಿಕೆ ಇದೆ.

ಬೇಟೆಯ ಕರಿಯನ್ನು ತರದೆ ಊರಿಗೆ ಬರಬಾರದೆಂಬ ನಂಬಿಕೆ ಇದೆ.

ವಾಲ್ಮೀಕಿಬೇಡರ ಬೇಟೆಯ ಧರ್ಮ

ಬೇಟೆಗಾರ ಬೇಡ, ನಾಯಕರು ನೀರು-ಆಹಾರ ಸೇವಿಸುವ ಹಾಗೂ ಮಲಗಿರುವ ಪ್ರಾಣಿಗಳನ್ನು ಎಚ್ಚರಿಸಿ, ಎಬ್ಬಿಸಿ ಬೇಟೆಯಾಡುವದು ಧರ್ಮ ಎಂಬ ನಂಬಿಕೆಯುಳ್ಳವ ರಾಗಿರುತ್ತಾರೆ.

ಬೇಟೆ ಪಂಚಪ್ರಾಣ

ಬ್ಯಾಡ ಹಡದು ಬೇಲಿ ಮೇಲೆ ಎಸೆದ, ‘ನಾಯಕಗ ಯಾಕ ಬೇಕು ನಾಲ್ಕು ಎತ್ತು’ ಅಮೃತ  ಕೊಟ್ಟರೂ ಬೇಟೆ ಕಂಡರೆ ಬಿಡೆನು, ಎಂಬ ಮಾತುಗಳು ಬೇಟೆ ಎಂದರೆ ಪಂಚಪ್ರಾಣ ಎಂಬುದನ್ನು ತೋರಿಸುತ್ತದೆ.

ಬೇಟೆಗಾರನ ಚುಕ್ಕೆ

ಮೂರು ತಾಸಿನ ಚುಕ್ಕೆ (ಶುಕ್ರಗ್ರಹ) ಅಂದರೆ ಸೂರ್ಯ ಮುಳುಗಿದ ತರುವಾಯ ಮೂರು ತಾಸಿನವರೆಗೂ ಇರುವ ಚುಕ್ಕೆ ಮುಳುಗುವುದರೊಳಗಾಗಿ ಬೇಟೆಯಾಡಬೇಕು.

ಮೂರು ತಾಸಿನ ಚುಕ್ಕೆ ಇರುವದರೊಳಗಾಗಿ ಬೇಟೆಯಾಡಿದರೆ ಬೇಟೆ ಅತ್ಯಂತ ಯಶಸ್ವಿ. ಹಾಗೂ ಯಾವ ತೊಂದರೆ ಇಲ್ಲದೇ ಸರಾಗವಾಗಿ ನಡೆಯುವದೆಂಬ ನಂಬಿಕೆ.

ಮೊಲಕ್ಕಾಗಿ ಬೆಳಗಿನ ಜಾವ ಬೆಳ್ಳಿ ಚುಕ್ಕೆ (ಶುಕ್ರ) ಜಿಗಿದ ಮೇಲೆ ಸೂರ್ಯೋದಯ ದವರೆಗಿನ ಬೇಟೆಯಾಡಿದರೆ ಬೇಟೆ ಯಶಸ್ವಿ ಎಂಬ ನಂಬಿಕೆ

ಬಣ್ಣ

ಹಳದಿ ಬಣ್ಣ ಶುಭ ಸಂಕೇತವೆಂದೂ, ಕರಿಯಬಣ್ಣ ಅಶುಭವೆಂದೂ ನಂಬಿಕೆ ಇದೆ.

ಬೇಟೆಗೆ ಹೋಗುವಾಗ ಮತ್ತು ಬರುವಾಗ ‘ಹಳದಿ’ ಬಣ್ಣವನ್ನು ಪರಸ್ಪರ ಎರಚಾ ಡುವರು.

ನಾಮ

ಹಣೆಯ ಮೇಲೆ ಉದ್ದ ಗಂಧದ ನಾಮವನ್ನು ಧರಿಸಿದರೆ ಶುಭ ಸಂಕೇತವೆಂಬ ನಂಬಿಕೆ ಇದೆ.

ಹಕ್ಕಿ ಪಕ್ಷಿಗಳು ಪ್ರಾಣಿಗಳು

ಯಾರ ಮನೆಯ ಹತ್ತಿರ ಹಾಲಕ್ಕಿ ಒಂದು ಬಾರಿ ಕೂಗುತ್ತದೆಯೋ ಆ ಮನೆಯಿಂದ ಹೊರಗೆ ಹೋದ ವ್ಯಕ್ತಿ ಸೂಸೂತ್ರವಾಗಿ ಬರಲು ಸಾಧ್ಯವಿಲ್ಲವೆಂಬ ನಂಬಿಕೆ.

ಯಾರ ಮನೆಯ ಹತ್ತಿರ ಹಾಲಕ್ಕಿ ಎರಡುಬಾರಿ ಕೂಗುವದೋ ಅವರ ಕೆಲಸಗಳಿಗೆ ಜಯ ಸಿಗುವದೆಂಬ ನಂಬಿಕೆ.

ಸಾಂಬಾರ ಕಾಗೆ, ಮುಂಗಲಿ, ನರಿ ಕಂಡರೆ ಶುಭವೆಂದೂ ಬೆಕ್ಕು ಅಶುಭವೆಂದು ನಂಬಿಕೆ.

ಟಿವ್ವಕ್ಕಿ, ಗೂಬೆ ಮನೆಯ ಹತ್ತಿರ ಕೂಗಿದರೆ ಆ ಮನೆಯಲ್ಲಿ ಕೇಡಾಗುವದೆಂಬ ನಂಬಿಕೆ ಇದೆ.

ಕಾಗೆಗಳ ಮೈಥುನವನ್ನು ನೋಡಿದ ವ್ಯಕ್ತಿಗೆ ಸಾವು ಬರುವದೆಂಬ ನಂಬಿಕೆ.

ಮುತ್ತೈದೆ

ಕಿವಿ, ಕಣ್ಣು, ಮೂಗು ಇತರ ಅಂಗಾಂಗಗಳು ಊನವಾದ ವ್ಯಕ್ತಿಗಳಿಗೆ ಮುತ್ತೈದೆಯರು ಮದುವೆ ಮಾಡಿದರೆ ಅವರ ಕುಲದಲ್ಲಿ ದೋಷವಾಗುವದೆಂಬ ನಂಬಿಕೆ.

ಸ್ತ್ರೀಯರು

ಸ್ತ್ರೀಯರು ದುಂಡು ಕುಂಕುಮ ಬೊಟ್ಟನ್ನು ಹಚ್ಚುವುದು ವಾಡಿಕೆ.

ಸ್ತ್ರೀಯರು ಮೂಗಿನ ಏಡಕ್ಕೆ ಮೂಗೂತಿ ಧರಿಸುವುದು ವಿಧಿಯಾಗಿದೆ.

ಹೊಸದಟ್ಟಿ ಹಳೆದಟ್ಟಿ ಪರಂಪರೆ

ಕನ್ನೆಯನ್ನು ವರನಿಗೆ ಗಟ್ಟಿಮಾಡುವ ಪ್ರಸಂಗಗಳಲ್ಲಿ ಕೆಲವರು ಕನ್ಯೆಗೆ ಹೊಸ ಸೀರೆಯಲ್ಲಿ ಉಡಿ ತುಂಬಿದರೆ ಅವರನ್ನು ಹೊಸದಟ್ಟಿಯವರೆಂದೂ, ಹಳೆಯ ಸೀರೆಯಲ್ಲಿ ಉಡಿ ತುಂಬಿ ದರೆ ಹಳೆದಟ್ಟಿಯವರೆಂದೂ ಪರಂಪರೆಗಳು ಇದ್ದು ಇವುಗಳಲ್ಲಿ ನಂಬಿಕೆಯುಳ್ಳವರಾಗಿದ್ದಾರೆ.

ಕೃಷಿಯಲ್ಲಿ ಸಾಕು ಪ್ರಾಣಿಗಳು

ಕುರಿಗಾರರು ಕಾಡಿನಲ್ಲಿ ಕುರಿ ಮೇಯಿಸುವಾಗ ಮೋಡ ಇದ್ದಕಡೆಗೆ ಕುರಿಗಳು ಚಲಿಸಲಾ ರಂಭಿಸಿದರೆ ಮಳೆ ಆಗುವದೆಂಬ ನಂಬಿಕೆ ಇದೆ.

ಎತ್ತುಗಳು ಹೊಲಗಳಲ್ಲಿ ಮೋಡದ ಕಡೆ ಮುಖಮಾಡಿ ನಿಂತರೆ ಮಳೆ ಬರುವದೆಂಬ ನಂಬಿಕೆ

ಹೊಲದಲ್ಲಿ ಬಿತ್ತುವ ಸಂದರ್ಭಗಳಲ್ಲಿ ಎರಡು ಎತ್ತುಗಳೂ ಒಂದೇ ಪಕ್ಕಕ್ಕೆ ಮಲಗಿ ಕೊಂಡಾಗ ಶುಭವೆಂದು ರೈತರು ನಂಬಿ ಆ ಎತ್ತುಗಳನ್ನು ಪೂಜಿಸಿ ಕಾಯಿ ಒಡೆಯುವರು.

ಬೆಡಗುಗಳು

ವಧು ವರರ ವಿವಾಹಕ್ಕೆ ಬೆಡಗುಗಳು ಬೇರೆ ಬೇರೆ ಆಗಿದ್ದರೆ ಮಾತ್ರ ವಿವಾಹಕ್ಕೆ ಸಾಧ್ಯ ಎಂಬ ವಿಧಿ ಇದೆ.

ಬೆಡಗುಗಳು ಪರಸ್ಪರ ಒಂದೇ ಆದರೆ ಅವರು ಸಹೋದರ ಸಹೋದರಿ ಬಾಂಧವ್ಯ ಹೊಂದುವರು ಎಂಬ ನಂಬಿಕೆ ಇದೆ.

ಮಾಂಸಾಹಾರ ಸೇವನೆ

ವಾಲ್ಮೀಕಿ ಬೇಡ ಕುಲದಲ್ಲಿ ಹುಟ್ಟಿದ ಮೇಲೆ ಮಾಂಸಾಹಾರ ಸೇವನೆ ಸರ್ವೇಸಾಮಾನ್ಯ ಕಾಡು ಪ್ರಾಣಿಗಳಾದ ಜಿಂಕೆ, ಮೊಲ, ಕೌಜುಗ, ಬುರ್ಲಿ ಹಾಗೂ ಸಾಕು ಪ್ರಾಣಿಗಳಾದ ಆಡು ಕುರಿ ಕೋಳಿಗಳನ್ನು ಮಾತ್ರ ಸೇವಿಸುವದು ವಿಧಿ.

ನವಿಲಿನ ಮಾಂಸವನ್ನು ಸೇವಿಸಿದರೆ ಕುಷ್ಠರೋಗ ಬರುವದೆಂಬ ನಂಬಿಕೆ ಇದೆ.

ಹುಟ್ಟು

ಹುಟ್ಟಿದ ಮಗು ಬಾಯಿ ಮೇಲೆ ಮಾಡಿ ಹುಟ್ಟಿದರೆ ಸೂಲಗಿತ್ತಿಗೆ ಮರಣ ಬರುವದೆಂದು ನಂಬಿಕೆ ಇದೆ.

ಉಡುದಾ

ಬಟ್ಟೆ ಇಲ್ಲದಿರುವಾಗ ಸೊಪ್ಪನ್ನು ಸಿಗಿಸಿಕೊಳ್ಳಲು ಸೊಂಟಕ್ಕೆ ದಾರದಂಥ ನಾರನ್ನು ಸುತ್ತಿಕೊಳ್ಳುತ್ತಿದ್ದರೆಂದೂ, ಅದು ಉಡುದಾರವೆಂದೂ ಗಂಡಸರು ಮಾತ್ರ ನಡುವಿನ ಸುತ್ತ ಕಟ್ಟಿಕೊಳ್ಳುವರು. ‘ಉಡುದಾರ ವಿಲ್ಲದೇ ಗಂಡಸು ಇರಬಾರದು,’ ಉಡುದಾರ ಇಲ್ಲದ ಮೂಡದಾರ.

ಗಂಡಸರು ಉಡದಾರ ಕಟ್ಟಬೇಕು ಎಂಬ ವಿಧಿ ಇದೆ. ಅದು ದಾರದ್ದಾಗಿರಬಹುದು ಇಲ್ಲವೇ ಬೆಳ್ಳಿಯದಾದರೂ ಇರಬಹುದು. ಇದನ್ನು ಹೆಣ್ಣಿನ ತವರು ಮನೆಯವರು ಗಂಡು ಮಗುವಿಗೆ ಉಡುದಾರ ಕಾಣಿಕೆ ನೀಡುವದು ವಾಡಿಕೆ.

ಗಂಡಸರು ನಡಕ್ಕೆ ಉಡುದಾರ ಕಟ್ಟದಿದ್ದಾಗ ಬೆನ್ನ ಮೇಲೆ ಬಡಿದರೆ ಅಥವಾ ನೆತ್ತಿಯ ಮೇಲೆ ಬಡಿದರೆ ನಪುಂಸಕನಾಗುವನೆಂಬ ನಂಬಿಕೆ ಇದೆ.

ಸಾಮಾಜಿಕ ನಿಷೇಧಗಳು

ಜಗತ್ತಿನ ಯಾವುದೇ ಸಮಾಜದಲ್ಲಿಯೂ ಮಾನವನು ಸಂಪೂರ್ಣವಾಗಿ ಸ್ವತಂತ್ರ ನಾಗಿಲ್ಲ. ನಿಷೇಧಗಳ ಹೊರತಾಗಿ ಸಮೂಹ ಜೀವನ ನಡೆಸುವದು ಸಾಧ್ಯವಾಗದ ಮಾತು. ತನ್ನ ಹಾಗೂ ತನ್ನ ಸಮಾಜದ ಹಿತದೃಷ್ಟಿಯಿಂದ ತಾನು ವಿಧಿ-ವಿಷೇಧಗಳಿಗೆ ಒಳಪಡುವದು ಅಗತ್ಯವೆಂದು ಮಾನವ ತನ್ನ ಅನುಭವದಿಂದ ಕಂಡುಕೊಂಡಿದ್ದಾನೆ. ವೈಯಕ್ತಿಕ ಹಿತ ಸಾಧನೆಯೇ ಸಮೂಹ ಜೀವನದ ಗುರಿಯಾಗಿದ್ದರೂ ಅದು ಸಾಧ್ಯವಾಗುವದು ವ್ಯಕ್ತಿಗಳು ಸಮೂಹದ ಕಟ್ಟುಪಾಡುಗಳಿಗೆ ಒಳಪಟ್ಟಾಗ ಮಾತ್ರ. ತಾನು ಸ್ವಚ್ಛಂದವಾಗಿ ವರ್ತಿಸದೇ ಇರುವಂತೆ ತನ್ನ ನಡವಳಿಕೆಯ ಮೇಲೆ ಹತೋಟಿಯನ್ನಿಟ್ಟುಕೊಳ್ಳಲು ಮಾನವನು ನಿಷೇಧದ ರೂಪದಲ್ಲಿ ಸಮಾಜಕ್ಕೆ ಅಧಿಕಾರ ನೀಡಿದ್ದಾನೆ. ಇದು ಎಲ್ಲ ಸಮುದಾಯದಲ್ಲಿರುವಂತೆ ವಾಲ್ಮೀಕಿ ಸಮುದಾಯದಲ್ಲಿ ನಿಷೇಧಗಳು ಪ್ರಚಲಿತದಲ್ಲಿದ್ದರೂ ವಿಶೇಷವಾಗಿ ವಾಲ್ಮೀಕಿ ಸಮುದಾಯಕ್ಕೆ ಸಂಬಂಧಿಸಿದವುಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಲಾಗುತ್ತಿದೆ.

ಪೂರ್ವ ಸಿದ್ಧತೆ ಇಲ್ಲದೆ ಬೇಟೆಗೆ ಹೋಗಬಾರದು.

ಕೇವಲ ಜಿಂಕೆ/ಮೊಲ, ಕೌಜುಗ, ಬುರ್ಲಿ ಇವುಗಳನ್ನು ಬಿಟ್ಟು ಬೇರೆ ಕಾಡು ಪ್ರಾಣಿಗಳನ್ನು ಬೇಟೆಯಾಡುವಂತಿಲ್ಲ.

ಕಾಡು ಪ್ರಾಣಿಗಳಾದ ನರಿ, ತೋಳ, ಸಿಂಹ ಹಾಗೂ ಸಾಕು ಪ್ರಾಣಿಗಳಾದ ಆಕಳು, ಎತ್ತು, ಎಮ್ಮೆ, ಬೆಕ್ಕುಗಳ ಮಾಂಸವನ್ನು ತಿನ್ನಬಾರದು.

ಮೂರು ತಾಸಿನ ಬ್ಯಾಟಗಾರನ ಚುಕ್ಕೆ (ಶುಕ್ರ) ಮುಳುಗಿದ ನಂತರ ಬೇಟೆಯಾಡಬಾರದು.

ಬೆಳಗಿನ ಜಾವದ ಬೆಳ್ಳಿಚುಕ್ಕೆಯ ಮುಂಚೆ ಬೇಟೆಯಾಡಬಾರದು.

ಬೇಟೆಗೆ ಹೋಗುವಾಗ ಹಾಗೂ ಬರುವಾಗ ಎರಚುವ ಬಣ್ಣದಾಟದಲ್ಲಿ ಕುಂಕುಮ ಹಾಗೂ ಗುಲಾಲನ್ನು ಎರಚುವಂತಿಲ್ಲ.

ಆಹಾರ-ನೀರು ಸೇವಿಸುವ ಹಾಗೂ ಮಲಗಿರುವ ಪ್ರಾಣಿಗಳನ್ನು ಬೇಟೆಯಾಡುವುದನ್ನು ನಿಷೇಧಿಸಲಾಗಿದೆ.

ಸ್ತ್ರೀಯರು ಬೇಟೆಯಾಡಬಾರದು.

ಗಾಳಿಬೀಸುವ ದಿಕ್ಕಿನಲ್ಲಿ ಬೇಟೆಯಾಡಬಾರದು.

ಸ್ತ್ರೀಯರು ಹಣೆಯ ಮೇಲೆ ಕುಂಕುಮದ ಬೊಟ್ಟನ್ನು ಅಡ್ಡ-ಉದ್ದ ಹಚ್ಚಬಾರದೆಂದು ನಿಷೇಧಿಸಲಾಗಿದೆ.

ಸ್ತ್ರೀಯರು ಮೂಗಿನ ಬಲಕ್ಕೆ ಮೂಗುತಿ ಧರಿಸಬಾರದು.

ಒಂದೇ ಬೆಡಗುಗಳುಳ್ಳ ವಧು-ವರರು ಪರಸ್ಪರ ಮದುವೆಯಾಗಬಾರದು.

ಹಾಸುಹೋಗುವ (ತಲೆ ಅಳ್ಳಾಡಿಸುವ) ಎತ್ತುಗಳನ್ನು ಮನೆಯಲ್ಲಿಟ್ಟುಕೊಳ್ಳಬಾರದು.

ನೊಗ ಮುರಿದ ಎತ್ತುಗಳನ್ನು ಮನೆಯಲ್ಲಿಟ್ಟುಕೊಳ್ಳಬಾರದು.

ಹೊಲದಲ್ಲಿ ಗಳೆಯನ್ನು ದಕ್ಷಿಣ ಮತ್ತು ಪಶ್ಚಿಮಕ್ಕೆ ನಿಲ್ಲಿಸುವುದನ್ನು ನಿಷೇಧಿಸಿದೆ.

ಧಾರ್ಮಿಕ ನಂಬಿಕೆಗಳು, ವಿಧಿಗಳು

ಧಾರ್ಮಿಕ ನಂಬುಗೆ ವಿಧಿಗಳು ಸಮಾಜದ ನೈತಿಕ ವ್ಯವಸ್ಥೆಗೆ ಸಂಬಂಧಿಸಿದವುಗಳಾಗಿವೆ. ಹಾಗೂ ಈ ನಂಬುಗೆ ವಿಧಿಗಳಲ್ಲಿ ಧಾರ್ಮಿಕತೆಯ ಪ್ರಭಾವ ತುಂಬಾ ಇದೆ. ಸಮಾಜ ಮತ್ತು ಧಾರ್ಮಿಕ ನಂಬುಗೆ ವಿಧಿಗಳು ದೈವಿಕ ಸಂವೇದನೆಗಳನ್ನುಂಟು ಮಾಡುತ್ತವೆ. ಜೊತೆಗೆ ನೈತಿಕ ಅಧಿಕಾರ ಹೊಂದಿದ್ದು ಸ್ವಾರ್ಥ, ತ್ಯಾಗ ಮತ್ತು ಅನುಪಮವಾದ ನಡತೆಯನ್ನು ಪ್ರಚೋದಿಸುತ್ತದೆ. ಇಂತಹ ಕೆಲವು ವಿಶೇಷ ಪ್ರಚೋದನೆಗಳನ್ನು ವಾಲ್ಮೀಕಿ ಸಮುದಾಯ ದಲ್ಲಿ ಗುರುತಿಸಬಹುದು.

ಓಕಳಿ

ಗ್ರಾಮಗಳಲ್ಲಿ ಪ್ರತಿ ವರ್ಷ ಹನುಮಂತದೇವರ ಓಕಳಿ.  ಯುಗಾದಿ ಪಾಡ್ಯ ಮತ್ತು ಕಾರ್ತೀಕದಲ್ಲಿ ಎರಡು ಬಾರಿ ನಡೆಯುತ್ತಿದ್ದು ಆ ಸಂದರ್ಭಗಳಲ್ಲಿ ಹೊಂಡಗಳಿಗೆ ನೀರು ತುಂಬುವರು.

ನೀರು ತುಂಬುವ ಉತ್ಸವದಲ್ಲಿ ವಾಲ್ಮೀಕಿ ಸಮುದಾಯದವರೇ ಮಾತ್ರ ನೀರು ತುಂಬಬೇಕೆಂಬ ದೈವ ನಿರ್ಣಯ ಕೆಲವು ಗ್ರಾಮಗಳಲ್ಲಿ ಇದೆ.

ಇಂತಹ ಸಂದರ್ಭಗಳಲ್ಲಿ ದೇವರ ಸೇವೆ ನಾವು ಮಾಡಲೇಬೇಕು ಮಾಡದಿದ್ದರೆ ತೀವ್ರ ಬರಗಾಲ ತಲೆದೋರಿ ತಿನ್ನುವ ಅನ್ನಕ್ಕೂ ಗತಿಯಿಲ್ಲದಂತಾಗುವದೆಂಬ ನಂಬಿಕೆ ಇದೆ.

ವಾರ್ಷಿಕ ಆಹುತಿ

ಕಾಲ ಕಾಲಕ್ಕೆ ದೇವರು ದೇವತೆಗಳಿಗೆ ಆಹಾರ ಮತ್ತು ಆಹುತಿಗಳನ್ನು ಅರ್ಪಿಸಿದರೆ ಅವುಗಳನ್ನು ತೃಪ್ತಿಪಡಿಸಿದಂತಾಗುವದೆಂದೂ, ಇವುಗಳು ನಿತ್ಯ ಜೀವನದಲ್ಲಿ ತಮಗೆ ಸಂತೋಷ ನೆಮ್ಮದಿಯಿಂದಿರಲು ಸಹಾಯ ಮಾಡುತ್ತವೆಂದೂ ನಂಬಿಕೆ ಇದೆ.

ವಿಶೇಷವಾಗಿ ಶಕ್ತಿದೇವತೆಗಳ ಆರಾಧಕರು ಇವರಾಗಿದ್ದು ದೇವತೆ (ಹೆಣ್ಣದೇವತೆ)ಯ ಆಹುತಿಗಾಗಿ ಟಗರು, ಹೋತ (ಗಂಡುಬದುಕುಗಳು)ಗಳನ್ನು ಮಾತ್ರ ಬಲಿ ನೀಡುವದು ವಾಡಿಕೆ.

ವಾಲ್ಮೀಕಿ ಜಯಂತಿ

ಪ್ರತಿ ಶೀಗಿಹುಣ್ಣಿಮೆಯಂದು ತಮ್ಮ ಕುಲದೇವರಾದ ಮಹರ್ಷಿ ವಾಲ್ಮೀಕಿ ಋಷಿಗಳ ಹುಟ್ಟಿದ ದಿನವೆಂದು ಪ್ರತಿಗ್ರಾಮಗಳಲ್ಲಿ ಆಚರಿಸುವದು ವಾಡಿಕೆ.

ಬೇವು ಇಳಿಸಿಕೊಳ್ಳುವದು

ಭಾರತ ಹುಣ್ಣಿಮೆಯ ದಿನ ಕುಟುಂಬದಲ್ಲಿನ ಹೆಣ್ಣುಮಗಳನ್ನು ಬಿಟ್ಟು ಎಲ್ಲರೂ ಬೇವು ಇಳಿಸಿಕೊಳ್ಳುವುದು ವಿಧಿಯಾಗಿದೆ.

ನೈವೇದ್ಯ

ಉಚ್ಛ ಕುಲದವರ ದೇವತೆಗಳಿಗೆ ನಮ್ಮ ನೈವೇದ್ಯ (ನೀರಿನಿಂದ ತಯಾರಿಸಿದ) ಸ್ವೀಕಾರಾರ್ಹವಲ್ಲವೆಂಬ ನಂಬುಗೆ ಇತ್ತು. ಬೆಲ್ಲ, ಸಕ್ಕರೆ, ಹೂ ಹಣ್ಣು, ಕಾಯಿಗಳನ್ನು ಮಾತ್ರ ಅರ್ಪಿಸಬೇಕೆಂಬ ನಿಯಮವಿದೆ.

ಬೀಜಪರು

ರೈತ ಹೊಲದ ಬಿತ್ತಣಿಕೆ ಪ್ರಾರಂಭದಲ್ಲಿ ಸುತ್ತಲಿನ ದೇವರಿಗೆ ಐದು ನಿಧಿಗಳನ್ನು ಅರ್ಪಿಸು (ಉಡಿತುಂಬು)ವನು. ನಿಧಿ ಅರ್ಪಿಸಿದ ಸ್ವಲ್ಪ ಭಾಗವನ್ನು ಬಿತ್ತುವ ಬೀಜದಲ್ಲಿ ಸೇರಿಸಿ ಬಿತ್ತಣಿಕೆ ಮಾಡುವನು. ಹೀಗೆ ಮಾಡುವದರಿಂದ ಭೂಮಿ ತಾಯಿ ಪ್ರಸನ್ನಳಾಗಿ ಬೆಳೆಯ ಇಳುವರಿ ಚೆನ್ನಾಗಿ ಬರುವದೆಂದು ನಂಬಿಕೆ.

ಸೆಟಿಗೆವ್ವಾ

ಸೆಟಿಗೆವ್ವಾ ಎಂಬ ದೇವತೆ ಮಗು ಹುಟ್ಟಿದ ಐದು ದಿನಕ್ಕೆ ಬ್ರಹ್ಮನ ಆದೇಶದಂತೆ ಹಣೆ ಬರಹ ಬರೆಯುವಳೆಂಬ ನಂಬಿಕೆ ಇದೆ.

ಸೆಟಿಗೆವ್ವಾ ಮಗುವಿನ ಹಣೆಬರಹ ಚೆನ್ನಾಗಿ ಬರೆಯಲಿ ಎಂಬ ನಂಬಿಕೆಯಿಂದ ಮಗು ಹುಟ್ಟಿದ ಐದು ದಿನಕ್ಕೆ ಕಡುಬಿನ ಸಿಹಿ ಅಡಿಗೆ ಮಾಡಿ ಅದರಲ್ಲಿ ೧೦ ಕಡಬು, ಅಕ್ಕಿಗಳ ತುಂಬಿದೆಡೆಯನ್ನು ತೊಟ್ಟಿಲ ಬುಡದಲ್ಲಿ ಇಟ್ಟು ಅರಿಷಿಣ ಗುಂಡವನ್ನು ಜೋಳದ ನಿಧಿಯ ಮೇಲೆ ಇಟ್ಟು ಹಡೆದ ತಾಯಿಯ ತಾಳಿ, ಮೂಗೂತಿಗಳನ್ನಿಟ್ಟು ಸೆಟಿಗೆವ್ವಳನ್ನು ಶೃಂಗರಿಸಿ ಶಾಂತಪಡಿಸುವರು.

ಬೇಟೆ

ಊರ ಬಾಗಿಲಲ್ಲಿರುವ ದೇವತೆ (ಬಾಗಿಲ ಬರಮಪ್ಪ)ಗೆ ಊರನ್ನು ಸಂರಕ್ಷಿಸಲಿ ಎಂಬ ನಂಬಿಕೆಯಿಂದ ತಂದಿರುವ ಬೇಟೆಯನ್ನು ಅರ್ಪಿಸುವರು.

ಧಾರ್ಮಿಕ ನಿಷೇಧಗಳು

ಧಾರ್ಮಿಕ ನಿಷೇಧಗಳು ಜನರ ನಡತೆಯನ್ನು ನಿಯಂತ್ರಿಸುವದರೊಂದಿಗೆ ಸಮುದಾಯದ ಐಕ್ಯಕ್ಕೂ ಕಾರಣವಾಗುತ್ತವೆ. ಸಾಮಾಜಿಕ ಮೌಲ್ಯಗಳನ್ನು ಮಾತ್ರ ನಿಯಮಗಳನ್ನು ಪವಿತ್ರ ವಾಗಿರಿಸುವಲ್ಲಿ ಹಾಗೂ ಸಮೂಹದ ಗುರಿ ಉದ್ದೇಶಗಳು ಉಳಿಯುವಂತೆ ಧಾರ್ಮಿಕ ನಿಷೇಧ ಗಳು ಕಾರ್ಯ ತತ್ಪರವಾಗಿರುತ್ತವೆ. ಅಂತೆಯೇ ವಾಲ್ಮೀಕಿ ಸಮುದಾಯದಲ್ಲೂ ಕೆಲವು ಧಾರ್ಮಿಕ ನಿಷೇಧಗಳನ್ನು ಕಾಣಬಹುದಾಗಿದೆ.

ದೇವತೆಗಳ ಆಹುತಿಗಾಗಿ ಟಗರು ಹೋತಗಳನ್ನು ಬಿಟ್ಟು ಅನ್ಯ ಪ್ರಾಣಿಗಳನ್ನು ಬಲಿಕೊಡು ವಂತಿಲ್ಲ.

ದೇವತೆಗಳಿಗೆ ಆಹುತಿ ನೀಡುವ ಪ್ರಾಣಿಗಳ ಕಣ್ಣು, ಕಿವಿ, ಬಾಲ ಇತ್ಯಾದಿಗಳ ಊನಗಳಿರ ಬಾರದು.

ಉಚ್ಛಕುಲದೇವರ ದೇವತೆಗಳಿಗೆ ನೀರಿನಿಂದ ಮಾಡಿದ ನೈವೇದ್ಯಗಳನ್ನು ಅರ್ಪಿಸ ಬಾರದು.

ಹೊಸ ಧಾನ್ಯಗಳಿಗೆ ಭೂತದ ವಕ್ರದೃಷ್ಟಿ ಬೀಳಬಾರದೆಂದು ಭೂತಪ್ಪಗೆ ಹಗೆಯಲ್ಲಿ ಜೋಳವನ್ನು ತುಂಬಿ ಅದರ ಮೇಲೆ ಮಣ್ಣಿನ ಮಡಿಕೆ, ನೀರು ನೈವೇದ್ಯ ಹಾಕಿ ಪೂಜಿಸುವದ ರಿಂದ ಭೂತಾಯಿ ತನ್ನ ಒಡಲಿನಲ್ಲಿ ಧಾನ್ಯಗಳನ್ನು ಚೆನ್ನಾಗಿ ಸಂರಕ್ಷಣೆ ಮಾಡುತ್ತಾಳೆ ಎನ್ನುವ ಕಾರಣಕ್ಕಾಗಿ ಹಗೆಯಲ್ಲಿ ಧಾನ್ಯಗಳನ್ನು ಭೂತಪ್ಪಗೆ ಮಾಡದೇ ಹಾಕಬಾರದೆಂಬ ನಿಷೇಧವಿದೆ.

ಮನೆಯಲ್ಲಿ ಯಾರಾದರು ಮರಣ ಹೊಂದಿ ೩ನೆ ದಿನ ಮರಣ ಹೊಂದಿದ ವ್ಯಕ್ತಿಯ ಜೀವ ಬಿಟ್ಟಾಗಿನ ಅರಿವೆ ಗಳಿಗೆಗಳನ್ನು ಪೂಜಿಸುವರು. ಇದಕ್ಕೆ೩ ದಿನ ಹೊಲಿತೊಳೆಯುವದು ಎನ್ನುವರು. ಈ ಕಾರ್ಯಕ್ರಮ ಆಗುವವರೆಗೂ ಆ ಮನೆಯಲ್ಲಿನ ನೀರು ಆಹಾರವನ್ನು ಯಾರು ಸೇವಿಸುವದಿಲ್ಲ ಹಾಗೂ ಯಾವ ಶುಭಕಾರ್ಯವನ್ನು ಮಾಡಬಾರದೆಂಬ ನಿಷೇಧವಿದೆ.

ಮನೆಯ ಶುಭ ಪ್ರಸಂಗಗಳಲ್ಲಿ ಕರಿಕಂಬಳಿಯನ್ನು ಬಿಟ್ಟು ಬೇರೆ ಯಾವುದನ್ನೇ ನೆಲಕ್ಕೆ ಹಾಸುವುದನ್ನು ನಿಷೇಧಿಸಲಾಗಿದೆ.

ಪ್ರಸ್ತುತ ವೈಜ್ಞಾನಿಕ ಮತ್ತುತಾಂತ್ರಿಕ ಕ್ಷೇತ್ರದಲ್ಲಿ ಸಂಭವಿಸಿರುವ ಗಣನೀಯ ಸಾಧನೆಗಳು, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಉಂಟಾಗುತ್ತಿರುವ ವಿದ್ಯಮಾನಗಳು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆ, ವಿಧಿ-ನಿಷೇಧಗಳ ಮೇಲೆ ಗಂಭೀರ ಪರಿಣಾಮವುಂಟು ಮಾಡಿರುವ ಇಂದಿನ ಕಾಲಘಟ್ಟದಲ್ಲಿಯೂ ವಾಲ್ಮೀಕಿ ಬೇಡ ಸಮುದಾಯದಲ್ಲಿ ತನ್ನ ಮೂಲದ ನಂಬಿಕೆ, ವಿಧಿ-ನಿಷೇಧಗಳನ್ನು ಕಾಣಬಹುದಾಗಿದೆ.

ಬೇಟೆಗಾರಿಕೆ ವಾಲ್ಮೀಕಿ ಸಮುದಾಯದ ಮೂಲ ಕಸುಬಾದರೂ ವೃತ್ತಿ ಬದಲಾವಣೆ ಗಳಾದಂತೆ ಅವುಗಳಿಗೆ ಒಗ್ಗಿಹೋಗಿದ್ದಾರೆ. ಆದರೆ ಮುಲಭೂತವಾಗಿ ಬೇಟೆಯಾಡುವುದನ್ನು ವರ್ಷದಲ್ಲಿ೧-೨ ದಿನವಾದರೂ ಸಾಂಕೇತಿಕವಾಗಿ ಆಡುವದರ ಮೂಲಕ ಅಲ್ಲಿಯ ನಂಬಿಕೆ ವಿಧಿ-ನಿಷೇಧಗಳನ್ನು ತಮ್ಮ ಇತರ ವೃತ್ತಿಗಳಲ್ಲೂ ಅನ್ವಯಿಸಿಕೊಂಡು ಬದುಕುತ್ತಿದ್ದಾರೆ.

ಆಹಾರಕ್ಕಾಗಿ ಅನಿವಾರ್ಯವಾಗಿ ಬೇಟೆಯಾಡಿದ ಬೇಡ ತನಗೆ ಅಪಾಯ ತರುವ ಕಾಡು ಪ್ರಾಣಿಗಳನ್ನು ಕೊಲ್ಲದೇ ಬಿಡುತ್ತಿರಲಿಲ್ಲ. ಬೇಟೆಯು ಕೂಡಾ ಒಂದು ಧರ್ಮಯುದ್ಧವೆಂದು ತಿಳಿದು ಹೋರಾಡುತ್ತಿದ್ದನು. ಇವತ್ತಿಗೂ ತಾವು ಬಾಳುತ್ತಿರುವ ಪರಿಸರದಲ್ಲಿ ಬೇಡರು ತಮಗೆ ಅಪಾಯವೆನಿಸಿದ ವ್ಯಕ್ತಿ ಸಮೂಹದೊಂದಿಗೆ ಹೋರಾಡುತ್ತಿರುವರು.

ಬೇಟೆಯಲ್ಲಿ ಆಹಾರ ನೀರು ಸೇವಿಸುತ್ತಿರುವ ಮಲಗಿರುವ ಪ್ರಾಣಿಗಳ ಮೇಲೆ ಬೇಟೆ ಯಾಡಲು ಆಕ್ರಮಣಮಾಡುವದಿಲ್ಲವೋ ಹಾಗೆಯೇ ತಾನು ನಂಬಿಕೊಂಡಿರುವವರನ್ನು ಬೆನ್ನ ಹಿಂದಿನಿಂದ ಚೂರಿ ಹಾಕುವ ಜಾಯಮಾನದವರು ಅವರಲ್ಲ. ಎದುರು ಬದರು ಸೆಣಸಿ ಗೆಲ್ಲಬೇಕು ಎಂಬ ನಂಬಿಕೆಯ ನೆಲೆಯಲ್ಲಿ ಜೀವಿಸಿರುವರು. ಇವತ್ತಿಗೂ ವಿಕಾಸದ ಹಂತಗಳ ವೃತ್ತಿಬದಲಾವಣೆಗಳಲ್ಲಿ ತಮ್ಮ ಪಾರಂಪರಿಕ ನಂಬುಗೆಗಳನ್ನು ಬಿಡದವರಾಗಿದ್ದಾರೆ.

ಅಂತೆಯೇ ವಾಲ್ಮೀಕಿ ಸಮುದಾಯ ಅನಕ್ಷರಸ್ಥರೆನಿಸಿಬಾಳುತ್ತಿದ್ದರೂ ಕೆಲವು ಪಾರಂಪರಿಕ ವಾಗಿ ಬಂದ ನಂಬುಗೆ ಆಚರಣೆಗಳಿಂದ ಅವರೂ ಕೂಡಾ ಚಾಣಾಕ್ಷರು, ನಿಪುಣರು, ವೈಜ್ಞಾನಿಕ ಮನೋಭಾವವುಳ್ಳವರಾಗಿದ್ದರು ಎಂಬುದಕ್ಕೆ, ಗಾಳಿದಿಕ್ಕಿನೊಂದಿಗೆ ಬೇಟೆಯಾಡಲು ಚಲಿಸಿ ದರೆ ಪ್ರಾಣಿಗಳು ಇವರ ವಾಸನೆಗಳನ್ನು ಗ್ರಹಿಸಿ ಪಲಾಯನ ಮಾಡುತ್ತವೆಂಬ ಸೂಕ್ಷ್ಮಮತಿ, ದಿಕ್ಕುಗಳು, ಗ್ರಹ-ನಕ್ಷತ್ರಗಳ ಪರಿಚಯ ವೈದ್ಯಕೀಯ ಮಾರ್ಗದರ್ಶನದಲ್ಲಿ ಒಂದೇ ಸಂತತಿ ಯಲ್ಲಿ ಮದುವೆಗಳಾಗುವದು ನಿಷಿದ್ಧ ಇರುವಂತೆ ಈ ಸಮುದಾಯದಲ್ಲಿಯೂ ಕೂಡಾ ವಿವಾಹದಂತಹ ನಡವಳಿಕೆಗಳಲ್ಲಿ ಒಂದೇ ಬೆಡಗುಗಳಲ್ಲಿ ವಿವಾಹ ನಿಷೇಧವಾಗಿರುವ ನಿದರ್ಶನಗಳನ್ನು ನೋಡಬಹುದು. ಆದಾಗ್ಯೂ ಕೆಲವು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳು, ವಿಧಿ-ನಿಷೇಧಗಳು ಪ್ರಶ್ನಾರ್ಹವಾದರೂ, ಕೆಲವು ಪ್ರಗತಿಪರ ವಿಚಾರಧಾರೆಗಳ ಮೂಲಕ ಸಮುದಾಯದ ಸದಸ್ಯರಲ್ಲಿ ಅಪವರ್ತನೆಯ ಪ್ರಮಾಣವನ್ನು ತಗ್ಗಿಸುತ್ತಾ ಒಬ್ಬರಿಗಾಗಿ ಇನ್ನೊಬ್ಬರು ಸ್ಪಂದಿಸುವ ವಾತಾವರಣ ಉಂಟುಮಾಡುತ್ತಾ ಸಾಮರಸ್ಯದಿಂದ ವಾಲ್ಮೀಕಿ ಬೇಡ ಸಮುದಾಯ ಬಾಗಲಕೋಟೆ ಪರಿಸರದ ಜನಮಾನಸದ ಮುಖ್ಯ ಹರಿವಿನಲ್ಲಿ ಒಂದಾಗಿ ಸಾಗಿಬರುತ್ತಿದೆ.

 

ಮಾಹಿತಿ ಸಂಗ್ರಹ ನೀಡಿದವರು

೧. ಚುರಚಪ್ಪ ಲೋಕಾಪೂರ ಸೂಳಿಕೇರಿ

೨. ಟಿ. ವಾಯ್. ಜಾಣಮಟ್ಟಿ ಬೀಳಗಿ

೩. ಚರಚಪ್ಪಾ ಬಾಲಪ್ಪ ತಳವಾರ ಲಕ್ಕಸಕೊಪ್ಪ

೪. ಜಗನ್ನಾಥ ಶಂಕ್ರಪ್ಪ ವಾಲೀಕಾರ ಲಕ್ಕಸಕೊಪ್ಪ

೫. ಬಿ.ಎಮ್.ಬಾರಕೇರ ನಿವೃತ್ತ ಶಿಕ್ಷಕರು ಮುರನಾಳ

೬. ಶ್ರೀಮತಿ ಮಲ್ಲವ್ವ ಹನಮಪ್ಪ ದ್ಯಾವನಗೌಡರ ಮುರಡಿ

೭. ರಾಮಣ್ಣ ಹನಮಪ್ಪ ಕಟ್ಟಿಮನಿ ಕೆರೂರ

೮. ಎಸ್.ಬಿ.ಕೋರಿ ಉಪನ್ಯಾಸಕರು ಬಾಗಲಕೋಟೆ

೯. ಸಮಾಜ ಶಾಸ್ತ್ರ; ಚ.ನ. ಶಂಕರರಾವ್

* * *

 

ಹಲಗಲಿ ಬೇಡರು

೩ನೇ ನುಡಿ
ಹಲ್ಲ ಕಿತ್ತಿದಾ ಹಾಂವಿನ ಪರಿಯು ನಮಗ ಆದಿತ್‌ಅಲ್ಲಾ
ರಂಡಿ ಮುಸುಕ ಹಾಕಿ ತಿರಿಗಿದರ ನಮ ಮಾನ ಉಳಿಯುವದಿಲ್ಲಾ

ಮಗ್ಗಲದಾಗಿನ ಹೇಣತಿ ಕೊಟ್‌ಅಂಗ ಅತಿ ಹೇಡಿ ಆದೇವ್‌ಅಲ್ಲಾ
ಸತ್ತ ಹೆಣಕ ಶೃಂಗಾರ ಮಾಡಿದ ಪರಿ ಆದಿತ್‌ಅಲ್ಲಾ

ಸಾವಕಾರ ನಮ್ಮ ಜೀವ ಹೋದಿತ್ ಅಂತ ಚಿಂತಿ ಮಾಡೇರ್‌ಅಲ್ಲಾ
ಹಗಲಿ ಮನಿ ಹೊಕ್ಕ ಹಣಾ ವೋದರ ಕೇಳವರ್ ಯಾರ್‌ಇಲ್ಲಾ

ಪುಂಡ ಪಾಳೆಗಾರ ಪಚ್ಚ್ಯಾ ವಜೀರರು ಪಂತ ಹಿಡಿಯಲಿಲ್ಲಾ
ದಂಡನ್ ಆಳುವ ಧೊರಿ ದೌಲತರ್‌ಅಂಜಿ ಕುಳಿತರ್‌ಅಲ್ಲಾ    ||ಚ್ಯಾಲ||