ವಾಲ್ಮೀಕಿ ಸಮುದಾಯದ ಲೋಕೋಪಯೋಗಿ ಕೊಡುಗೆಗಳು ಸಾಕಷ್ಟು. ಮುಖ್ಯ ವಾಗಿ ಈ ಸಮುದಾಯದ ವಾಲ್ಮೀಕಿ  ಮಹರ್ಷಿಯು ರಾಮಾಯಣ ದರ್ಶನ ಎಂಬ ಬೃಹತ್ ಕಾವ್ಯವನ್ನು ರಚಿಸಿ ಲೋಕಕ್ಕೆ ನೀಡಿದ ಕೊಡುಗೆಯೇ ಬಲು ದೊಡ್ಡದು. ಬೇಟೆಗಾರ ನಾಗಿದ್ದ ವಾಲ್ಮೀಕಿಯು ಸಪ್ತರ್ಷಿಗಳ ಮೂಲಕ ಜ್ಞಾನವನ್ನು ಪಡೆದು ರಾಮಮಂತ್ರವನ್ನು ಜಪಿಸುತ್ತ ಧ್ಯಾನಾಸಕ್ತನಾಗಿ ಕುಳಿತಿದ್ದಾಗ ಆತನ ಮೈಮೇಲೆ ಹುತ್ತ ಬೆಳೆಯುತ್ತದೆ. ಆ ಹುತ್ತದ ಒಳಗಿನಿಂದ ‘ರಾಮ’ ‘ರಾಮ’ ಎನ್ನುವ ಮಂತ್ರ ಘೋಷದ ಧ್ವನಿ ಕೇಳಿ ಬರುತ್ತಿತ್ತು. ಅದನ್ನು ಕೇಳಿದ ಸಪ್ತರ್ಷಿಗಳೇ ಬಂದು ಆತನನ್ನು ಎಚ್ಚರಿಸಿ ಹುತ್ತದಿಂದ ಹೊರಬರಸಿದರು. ಸಂಸ್ಕೃತದಲ್ಲಿ ವಲ್ಮಿ ಅಂದರೆ ಹುತ್ತ. ವಲ್ಮಿದಿಂದ ಹೊರಬಂದವನಾದ್ದರಿಂದ ಆತನನ್ನು ವಾಲ್ಮೀಕಿ ಎಂದು ಕರೆದರು.

ನಾರದ ಮಹರ್ಷಿಯಿಂದ ಶ್ರೀ ರಾಮ ಕಥೆಯನ್ನು ಕೇಳಿ ರೋಮಾಂಚನಗೊಂಡ ವಾಲ್ಮೀಕಿಯು ಒಮ್ಮೆ ಬೆಳಗಿನ ಸಮಯಕ್ಕೆ ಸ್ನಾನ ಮಾಡಲೆಂದು ತಮಸಾ ನದಿಯ ತೀರಕ್ಕೆ ಬರುತ್ತಾನೆ. ಆಗ ತಾನೆ ಉದಯಿಸುತ್ತಿದ್ದ ಸೂರ್ಯನ ಹೊನ್ನ ಕಿರಣಗಳ ಹೊಂಬಿಸಿಲಲ್ಲಿ ಕಳಕಳಿಸುತ್ತಿದ್ದ ಅರಣ್ಯದಲ್ಲಿ ಚೈತ್ರಋಥು ಪಕ್ಷಿಯ ಇಂಚರವನ್ನು ಆಲಿಸುತ್ತ ನದಿ ತಾಟಕದ ಪಾವಟಿಗೆಗಳನ್ನಿಳಿದು ನೀರಲ್ಲಿ ಮುಳುಗಲುದ್ಯುಕ್ತನಾದಾಗ ಆಹ್ಲಾದಕರವಾದ ಸುಸ್ವರ ಧ್ವನಿಯೊಂದು ಕೇಳಿ ಬರುತ್ತದೆ. ಸ್ವರ್ಗವೇ ಭೂಮಿಗಿಳಿದಂತಿರುವ ಆ ಉದಯ ಕಾಲದಲ್ಲಿ ಉದಯರಾಗಾಲಾಪನೆ ಗೈಯುತ್ತಿದ್ದ ದಂಪತಿ ಕ್ರೌಂಚಗಳ ಮಿಥುನವನ್ನು ಕಂಡು ವಾಲ್ಮೀಕಿಯ ಮನಸ್ಸು ಪುಳುಕಗೊಂಡಿತು. ಆ ಸುಮಧುರ ರಾಗಾಲಾಪನೆಯನ್ನು ಆಲಿಸುತ್ತ ವಾಲ್ಮೀಕಿಯು ಅದೆಷ್ಟು ಹೊತ್ತು ಹಾಗೇ ನಿಶ್ಚಲನಾಗಿ ನಿಂತುಕೊಂಡನೋ!

ಗಾಳಿವಟ್ಟೆಯಲ್ಲಿ ಸರಸವಾಗಿ ಆಡುತ್ತಿದ್ದ ಆ ವಿಹಂಗಮಗಳಲ್ಲಿ ಗಂಡು ಕ್ರೌಂಚವು ಒರಲಿ ಧೊಪ್ಪನೆ ನೆಲಕ್ಕೆ ಬಿದ್ದಿತು. ಆ ಸಪ್ಪಳವನ್ನು ಕೇಳಿದ ವಾಲ್ಮೀಕಿಯು ಮೈಮರವೆಯಿಂದ ಎಚ್ಚರಾಗಿ ನೋಡುತ್ತಾನೆ; ನೆಲಕ್ಕೆ ಬಿದ್ದ ಗಂಡು ಕ್ರೌಂಚವು ರಕ್ತದ ಮಡುವಿನಲ್ಲಿ ಮುಳುಗಿತ್ತು. ಮಾಂಸದ ಆಶೆಯಿಂದ ವ್ಯಾಧನೋರ್ವನು ಅದಕ್ಕೆ ಬಾಣವನ್ನು ಎಸೆದಿದ್ದನು. ಬಾಣ ನೆಟ್ಟು ಅದರ ಎದೆಯಿಂದ ನೆತ್ತರು ಪುಟಿಯುತ್ತಿತ್ತು.

ಹೆಣ್ಣು ಕ್ರೌಂಚವು ತನ್ನ ಇನಿಯನ ಹತ್ಯೆಯನ್ನು ಕಂಡು ಶೋಕಾತಿಶೋಕದಿಂದ ಚೀತ್ಕರಿಸಿತು. ಆ ಆಕ್ರಂದನವನ್ನು ಕೇಳಿದ ವಾಲ್ಮೀಕಿಯ ಕರುಳು ಕರಗಿ ಕಂಬನಿಯುಕ್ಕಿತು. ಕೂಡಲೆ ಆತನಿಗೆ ತನ್ನ ಪೂರ್ವದ ಕೃತ್ಯದ ನೆನಪಾಯಿತು. ಆಗ ವಾಲ್ಮೀಕಿಯು ಆ ಕ್ರೌಂಚ ಪಕ್ಷಿಯ ಹಂತಕನಿಗೆ “ಬೇಡ, ನಿಷಾದನೇ ಬೇಡ! ಕೊಲೆ ಸಾಕಿನ್ನು! ನಾರದ ಮಹರ್ಷಿಯ ದಯೆಯಿಂದ ಕರುಣೆಯನ್ನು ಕಲಿತೆನು” ಎಂದು ಆ ಹಂತಕ ನಿಷಾದನಿಗೆ ಬೋಧನೆ ಮಾಡಿ ಅಹಿಂಸೆಯ ರುಚಿಗಲಿಸಿದನು.

ವಾಲ್ಮೀಕಿಯ ಬೋಧೆಯಿಂದ ಎಚ್ಚರಗೊಂಡ ಆ ವ್ಯಾಧನು ಅಂದಿನಿಂದ ಬೇಟೆಯಾಡು ವುದನ್ನೇ ಬಿಟ್ಟು ಬಿಟ್ಟನು. ವಾಲ್ಮೀಕಿಯು ಆ ಕ್ರೌಂಚ ಪಕ್ಷಿಯ ಮೈಗೆ ನಾಟಿದ್ದ ಬಾಣವನ್ನು ಕಿತ್ತು ಸಂಜೀವಿನಿ ಪ್ರಯೋಗದಿಂದ ಅದಕ್ಕೆ ಮರಳಿ ಪ್ರಾಣವನ್ನು ಬರಿಸಿದನು. ಆಗ ತನ್ನ ಇನಿಯನು ಜೀವಂತನಾದುದನ್ನು ಕಂಡು ಆ ಹೆಣ್ಣು ಕ್ರೌಂಚದ ಶೋಕದ ಉರಿ ತಣ್ಣಗಾಗಿ ಎದೆಯಲ್ಲಿ ಸಂತಸ ತುಂಬಿತು.

ಸ್ನಾನ ಮುಗಿಸಿಕೊಂಡು ಆ ಸನ್ನಿವೇಶದ ಸ್ಮರಣೆಯಲ್ಲಿಯೆ ಮಹರ್ಷಿ ವಾಲ್ಮೀಕಿಯು ತನ್ನ ಆಶ್ರಮಕ್ಕೆ ಬಂದು, ಧ್ಯಾನಮಗ್ನನಾಗಿರಲು ಕಾವ್ಯ ಪ್ರತಿಭೆಯ ಮಿಂಚಿನಿಂದ ಕಾವ್ಯ ವೊಂದುೊಹೊಮ್ಮಿ ಶ್ರೀ ರಾಮಾಯಣ ದರ್ಶನವಾಯ್ತು! ಅಂಥಾ ಒಂದು ಬೃಹತ್ ಕಾವ್ಯವನ್ನೇ ಲೋಕಕ್ಕೆ ನೀಡಿದ ವಾಲ್ಮೀಕಿ ಮಹರ್ಷಿಯ ಕೊಡುಗೆ ಬಲುದೊಡ್ಡದಲ್ಲವೆ?

ಬೇಡರ ಮುದುಕಿ ಶಬರಜ್ಜಿ ಶ್ರೀರಾಮನಿಗೆ ಕೊಡಲೋಸುಗ ಬೋರೆ ಹಣ್ಣಗಳನ್ನು ಸಂಗ್ರಹಿಸಿ ಆತನ ಬರುವಿಗಾಗಿ ತವಕಿಸುತ್ತ ಕಾದು ಕುಳಿತಿದ್ದ ಅವಳ ಭಕ್ತಿಯ ಕೊಡುಗೆಯೂ ಕೂಡ ಅಷ್ಟೇ ದೊಡ್ಡದು!

ಪ್ರತ್ಯಕ್ಷವಾಗಿ ಗುರುವಿನಿಂದ ಪಾಠ ಹೇಳಿಸಿಕೊಂಡು ಕಲಿಯದಿದ್ದರೂ ಗುರುವಿನ ವಿಗ್ರಹ ವನ್ನೇ ಮುಂದಿರಿಸಿಕೊಂಡು ನಿಷ್ಠೆಯಿಂದ ಧನುರ್ವಿದ್ಯೆಯನ್ನು ಅಭ್ಯಾಸ ಮಾಡಿ ನಿಷ್ಣಾತನಾದ ಕಿರಾತ ಬಾಲಕ ಏಕಲವ್ಯನು ದ್ರೋಣಾಚಾರ್ಯನಿಗೆ ತನ್ನ ಹೆಬ್ಬೆರಳನ್ನೇ ಕತ್ತರಿಸಿ ಗುರುದಕ್ಷಿಣೆ ಯನ್ನಾಗಿ ನೀಡಿದ ಅವನ ಗುರುಭಕ್ತಿಯ ಕೊಡುಗೆಗೆ ಬೆಲೆ ಕಟ್ಟಲಾದೀತೆ?

ಬೇಟೆಗಾರನಾಗಿದ್ದ ಕಿರಾತನೋರ್ವನು ತಾನು ಬೇಟೆಯಾಡಿ ತಂದ ಪ್ರಾಣಿಗಳ ಮಾಂಸ ವನ್ನೇ ಪ್ರತಿದಿನವೂ ಶಿವನಿಗೆ ನೈವೇದ್ಯ ಮಾಡುತ್ತ ತನ್ನ ಭಕ್ತಿಯನ್ನು ಸಮರ್ಪಿಸುತ್ತಿದ್ದ. ಒಮ್ಮೆ ಅವನು ಪೂಜಿಸುತ್ತಲಿದ್ದ ಅಡವಿಯ ಶಿವಲಿಂಗದ ಕಣ್ಣುಗಳಿಂದ ನೀರು ಒಸರುವುದನ್ನು ಆ ಕಿರಾತನು, ಪಾಪ, ಶಿವನಿಗೆ ಕಣ್ಣುಬೇನೆಯಾಗಿದೆಯೆಂದು ತಿಳಿದು, ಶಿವನು ಕಣ್ಣು ಕಳೆದು ಕೊಂಡು ಕುರುಡನಾದರೆ ಲೋಕವನ್ನು ರಕ್ಷಿಸಬೇಕಾದ ಅವನಿಗೆ ಲೋಕವಾದರೂ ಗೋಚರಿ ಸುವದೆಂತು? ಹೀಗೆ ತಿಳಿದ ಆ ಕಿರಾತನು ತಾನು ಸ್ವತಃ ಕುರುಡನಾದರೂ ಚಿಂತೆಯಿಲ್ಲ ಶಿವನು ಲೋಕವನ್ನು ಕಾಣುವಂತಾಗಲೆಂದು ತನ್ನ ಕಣ್ಣುಗಳನ್ನೇ ಬಾಣದಿಂದ ಕಿತ್ತು ಆ ಶಿವಲಿಂಗಕ್ಕೆ ತೊಡಿಸಿ, ಬೇಟೆಗಾರನಾದ ಆ ಬೇಡನು ಕಣ್ಣಪ್ಪನೆಂದು ಹೆಸರಾದನು. ಇಂದು ವೈದ್ಯಕೀಯದಲ್ಲಿ ನಡೆದಿರುವ ನೇತ್ರದಾನ ಪದ್ಧತಿಗೆ ಅಂದು ಪೌರಾಣಿಕ ವ್ಯಕ್ತಿಯಾದ ವ್ಯಾಧ ಕಣ್ಣಪ್ಪನೇ ಅಡಿಗಲ್ಲು ಹಾಕಿದನೆಂದರೆ ತಪ್ಪಾಗಲಿಕ್ಕಿಲ್ಲ. ಇಂದು ಮರಣಾನಂತರ ಮೃತ ವ್ಯಕ್ತಿಯ ಕಣ್ಣುಗಳನ್ನು ಪಡೆದುಕೊಳ್ಳುತ್ತಿದ್ದರೆ, ಜೀವಂತನಾಗಿದ್ದಾಗಲೇ ಕಣ್ಣುಗಳನ್ನು ಕಿತ್ತುಕೊಟ್ಟ ಬೇಡರ ಕಣ್ಣಪ್ಪನ ಕೊಡುಗೆಯೇನು ಸಾಮಾನ್ಯವೇ?

ವಿಜಯನಗರ ಸಾಮ್ರಾಜ್ಯದ ಪತನಾನಂತರ ಕನ್ನಡ ನಾಡಿನಲ್ಲಿ ಅನೇಕ ಪಾಳೆಯಪಟ್ಟಗಳು ತಲೆಯೆತ್ತಿದ್ದವು. ಚಿತ್ರದುರ್ಗದ ಮದಕರಿ ನಾಯಕರು, ಸುರಪುರದ ವೆಂಕಟಪ್ಪನಾಯಕರು ಅಂಥಾ ಪಾಳೆಯಗಾರರಲ್ಲಿ ಪ್ರಮುಖರು. ಇವರ ದಂಡಿನಲ್ಲಿ ಬೇಡ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅವರು ಅತ್ಯಂತ ಶೂರ-ವೀರರೂ, ಪ್ರಾಣದ ಹಂಗುತೊರೆದು ಹೋರಾಡುವ ಧೀರ ದಳವಾಯಿಗಳಾಗಿದ್ದರು. ಕದನ ಕಲಿಗಳಾಗಿದ್ದರು. ಸ್ವಾಮಿ ನಿಷ್ಠೆಯಲ್ಲಿ ಹೆಸರಾಗಿದ್ದರು. ತಮ್ಮ ಅಧೀನದಲ್ಲಿದ್ದ ಪಾಳೆಯಕ್ಕೆ ನಾಯಕರಾಗಿ ಅದನ್ನು ಆಳುವ ಒಡೆತನ ವನ್ನು ವಹಿಸಿಕೊಂಡುದರಿಂದಲೇ ಅವರಿಗೆ ನಾಯಕರು ಎನ್ನುವ ಹೆಸರು ರೂಢಿಯಾಗಿರಬಹು ದಾಗಿದೆ.

ಹೀಗೆ ಪೌರಾಣಿಕವಾಗಿ, ಐತಿಹಾಸಿಕವಾಗಿ ಲೋಕ ಕಲ್ಯಾಣಾರ್ಥವಾಗಿ ಅಹಿಂಸೆಯ, ಭಕ್ತಿಯ ಹಾಗೂ ಶೌರ್ಯದ ಅಮೂಲ್ಯ ಕೊಡುಗೆಯನ್ನು ನೀಡಿದ ಸಮುದಾಯ ಈ ಬೇಡ ಸಮುದಾಯದವರದು. ಇನ್ನು ಪಾಳೆಯಪಟ್ಟಗಳು ಕಾಲಾನಂತರದಲ್ಲಿ ತಮ್ಮ ಪ್ರಾಬಲ್ಯ ವನ್ನು ಕಳೆದುಕೊಂಡ ನಂತರ ಆಯಾ ಪಾಳೆಯದಲ್ಲಿ ಪಾಳೆಯಗಾರರ ಕೈ ಕೆಳಗೆ ಅಧಿಕಾರ ದಲ್ಲಿದ್ದ ಈ ಸಮುದಾಯದ ಕೆಲವು ಜನ ವರ್ಚಸ್ವೀ ಶ್ರೀಮಂತರೂ ಸ್ಥಿತಿವಂತರೂ ಪ್ರಮುಖರೂ ಆಗಿ ಉಳಿದರು. ಅಂಥವರಲ್ಲಿ ಕೆಲವರು ಕೆಲವೊಂದು ಗ್ರಾಮಸಮುದಾಯ ಗಳಿಗೆ ದೊರೆಗಳೋ ದೇಸಾಯರೋ ನಾಯಕರೋ ಎನ್ನುವ ಗೌರವ ಪಡೆದರು. ಅಂಥವರ ಮುನ್ನಿನ ಐತಿಹಾಸಿಕ ಚಾರಿತ್ರ್ಯವನ್ನೂ, ರಾಜಕೀಯ ಪ್ರಾಬಲ್ಯವನ್ನು ಗುರುತಿಸಿ ನಂತರ ಬಂದ ಬ್ರಿಟೀಷ್ ಸರ್ಕಾರವು ಅವರಿಗೆ ಬಿರುದು ಬಾವಲಿಗಳನ್ನಿತ್ತು ಭೂಮಿ ಕಾಣಿಯನ್ನು ನೀಡಿ ಜಹಗೀರು ಹಾಕಿ ಕೊಟ್ಟು ಅವರಿಗೆ ಮಾನ್ಯತೆ ನೀಡಿದರು. ಹಾಗೂ ಅವರನ್ನೂ ತಮ್ಮ ಆಳ್ವಿಕೆಗೆ ಒಳಪಡಿಸಿಕೊಂಡರು.

ಈ ರೀತಿಯಾಗಿ ಅಸ್ತಿತ್ವಕ್ಕೆ ಬಂದ ದೇಸಗತಿಗಳು, ಜಹಗೀರುಗಳು ಇಂದಿಗೂ ನಮ್ಮ ರಾಜ್ಯದಲ್ಲಿ ಅನೇಕ ಕಡೆಗಳಲ್ಲಿವೆ. ಇವರ ಅರಮನೆ, ವಾಡೆ, ದಿವಾನಖಾನೆಗಳಲ್ಲಿ ಹುಲಿ, ಸಿಂಹ, ಸಾರಂಗ ಮುಂತಾದ ಪ್ರಾಣಿಗಳ ಮುಖವಾಡಗಳೂ, ಖಡ್ಗ-ಢಾಲು, ಬಂದೂಕು ಮುಂತಾದ ಆಯುಧಗಳು ಗೋಡೆಯ ಮೇಲೆ ರಾರಾಜಿಸುತ್ತಿರುವುದನ್ನು ಇಂದಿಗೂ ಕಾಣಬಹು ದಾಗಿದೆ. ಇದು ಅವರು ಹೆಸರಾಂತ ಬೇಟೆಗಾರರಾಗಿದ್ದರೆನ್ನುವುದನ್ನೇ ಬಿಂಬಿಸುತ್ತದೆ.

ಕ್ರಿ.ಶ. ೧೮೫೭ರಲ್ಲಿ ಬ್ರಿಟೀಷ್ ಸರ್ಕಾರ ನಿಶ್ಯಸ್ತ್ರೀಕರಣ ಕಾಯ್ದೆಯನ್ನು ಜಾರಿಗೊಳಿಸಿತು. ಇದರಿಂದಾಗಿ ಭಾರತೀಯರಾರೂ ಬ್ರಿಟೀಷ್ ಸರ್ಕಾರದ ಅನುಮತಿಯಿಲ್ಲದೆ ಯಾವ ಶಸ್ತ್ರಾಸ್ತ್ರ ಗಳನ್ನು ತಮ್ಮ ಬಳಿಯಲ್ಲಿಟ್ಟುಕೊಳ್ಳದಂತಾಯಿತು. ಕಂಪನಿ ಸರ್ಕಾರದ ಈ ಶಸ್ತ್ರಾಸ್ತ್ರ ನಿಯಂತ್ರಣದ ಹುಕುಂ ೧೮೫೭ರ ಸೆಪ್ಟೆಂಬರ ೧೧ರಂದು ಬೆಳಗಾವಿ ಮ್ಯಾಜಿಸ್ಟ್ರೇಟನ ಮೂಲಕ ಮುಧೋಳ ಸಂಸ್ಥಾನ ಸರ್ಕಾರಕ್ಕೆ ಬಂತು. ಯಾರ ಬಳಿಯಲ್ಲಿ ಆಯುಧಗಳಿವೆಯೊ ಅವರೆಲ್ಲಾ ತಮ್ಮ ಆಯುಧಗಳನ್ನು ಸರಕಾರದಿಂದ ಅನುಮತಿಯಿಲ್ಲದೆ ಬಳಕೆಯಲ್ಲಿಟ್ಟುಕೊಳ್ಳಬಾರದು ಎಂಬ ಕಾನೂನು ಹಲಗಲಿ ಗ್ರಾಮಕ್ಕೂ ಬಂತು.

ಹಲಗಲಿ ಗ್ರಾಮವು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿರುವ ಒಂದು ಊರು. ಆ ಊರಿನಲ್ಲಿ ಬೇಡರ ಜನವಸತಿಯೇ ಹೆಚ್ಚು. ಅವರೆಲ್ಲಾ ಹೆಚ್ಚಾಗಿ ಬೇಟೆಗಾರರು. ಆದ್ದರಿಂದ ಆಯುಧಗಳೇ ಅವರಿಗೆ ಪ್ರಾಣವಾಗಿದ್ದವು. ಅವುಗಳನ್ನು ಬಿಟ್ಟು ಬದುಕುವ ದಾರಿಯೇ ಅವರಿಗಿರಲಿಲ್ಲ. ಸರ್ಕಾರದ ಹುಕುಮಿನಂತೆ ಆಯುಧಗಳನ್ನು ಒಪ್ಪಸದಿದ್ದರೆ ಅವರು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಈ ಕಾಯ್ದೆಯಿಂದಾಗಿ ಹಲಗಲಿಯ ಬೇಡರೆಲ್ಲಾ ಚಿಂತೆಗೀಡಾದರು. ಸಂಸ್ಥಾನದ ಕೆಲವರು ತಮ್ಮ ಆಯುಧಗಳನ್ನೊಯ್ದು ಮ್ಯಾಜಿಸ್ಟ್ರೇಟರಿಗೆ ಒಪ್ಪಿಸಿದರು. ಆದರೆ ಸ್ವಾಭಿಮಾನಿಗಳಾದ ಬಂಟ ಬೇಡರು ಇದಕ್ಕೆ ಒಪ್ಪಲಿಲ್ಲ. ಅವರಲ್ಲಿ ದಿಟ್ಟಧೀರ ಬಂಟರಾದ ಬಡಗಣ್ಣ, ಬಾಲಣ್ಣ, ಹಣಮಣ್ಣ ಹಾಗೂ ರಾಮಣ್ಣ ಎಂಬುವರು ಜೀವ ಹೋದರೂ ಹತ್ಯಾರಗಳನ್ನು  ಒಪ್ಪಿಸಲಾರೆವೆಂದು ಸ್ಪಷ್ಟವಾಗಿ ಹೇಳಿ ಸರ್ಕಾರದ ಹುಕುಮನ್ನು ದಿಟ್ಟತನದಿಂದ ನಿರಾಕರಿಸಿದರು. ಊರಿನ ತಮ್ಮ ಸಮುದಾಯದವರನ್ನೆಲ್ಲ ಸೇರಿಸಿ ಬ್ರಿಟೀಷ್ ಸರ್ಕಾರದ ವಿರುದ್ಧ ಬಂಡಾಯವನ್ನೇ ಸಾರಿದರು.

ಇದನ್ನು ತಿಳಿದ ಬ್ರಿಟೀಷ್ ಸರ್ಕಾರ ೧೮೫೭ರ ನವೆಂಬರ್ ೨೯ರಂದು ರಾತ್ರಿ ಹೊತ್ತು ೬೦೦ ಕುದುರೆ ಸವಾರ ಸೈನಿಕರನ್ನು ಕಳಿಸಿ ಹಲಗಲಿಯ ಮೇಲೆ ದಾಳಿ ನಡೆಸಿತು. ಆದರೆ ಬೇಡರ ಪಡೆಯು ಬ್ರಿಟೀಷ್‌ರ ಈ ದಾಳಿಗೆ ಬಗ್ಗಲಿಲ್ಲ. ಧೈರ್ಯದಿಂದ ಹೋರಾಡಿದರು. ಬೇಡರ ಈ ಕೆಚ್ಚನ್ನು ಅರಿತು ಕರ್ನಲ್ ಸೆಟನ್‌ಕರನು ಹೆದರಿಕೊಂಡು ಹೆಚ್ಚಿನ ಸೈನ್ಯವನ್ನು ತರಸಿಕೊಂಡು ಹೋರಾಟ ಮುಂದುವರಿಸಿದನು. ಅದಕ್ಕೆ ಬೇಡರು ಹಿಂಜರಿಯಲಿಲ್ಲ. ಶೌರ್ಯ ದಿಂದ ಕಾದಿದರು. ಬೇಡರ ಹೊಡೆತಕ್ಕೆ ಬ್ರಿಟೀಷ್ ಅಧಿಕಾರಿ ವಿಲಿಯಮ್ ಹೇನ್ರಿ ಹೆವಲಾಕ್ ಎಂಬಾತನು ಬಲಿಯಾದನು. ಇದರಿಂದ ತಲ್ಲಣಿಸಿದ ಇಂಗ್ರೇಜಿಯವರು ಮಧ್ಯರಾತ್ರಿಯಲ್ಲಿ ಊರಿಗೆ ಕೊಳ್ಳೆ ಇಟ್ಟರು. ಹಲಗಲಿ ಬೆಂಕಿಯಲ್ಲಿ ಹೊತ್ತಿ ಧಗಧಗಿಸಿ ಉರಿಯ ಹತ್ತಿತ್ತು. ಎಷ್ಟೋ ಜನ ಬೇಡ ಪಡೆಯ ವೀರರು ಬ್ರಿಟೀಷ್ ಸೈನ್ಯದ ಗುಂಡಿಗೆ ಬಲಿಯಾದರು. ಬ್ರಿಟೀಷ್ ಸೈನಿಕರು ಊರನ್ನು ಲೂಟಿ ಮಾಡಿದರು. ಬೇಡಪಡೆಯ ವೀರರನ್ನು ಬಂಧಿಸಿದರು. ಅವರಲ್ಲಿ ೧೯ ಜನರನ್ನು ೧೮೫೭ನೆಯ ಡಿಸೆಂಬರ ೧೧ರಂದು ಮುಧೋಳದಲ್ಲಿ ಸಂತೆ ಕೂಡುವ ಜಾಗೆಯಲ್ಲಿ ಗಲ್ಲಿಗೇರಿಸಿದರು. ಹಾಗೂ ಡಿಸೆಂಬರ ೧೪ರಂದು ೧೩ ಜನರನ್ನು ಹಲಗಲಿ ಅಗಸಿ ಮುಂದೆ ನಿರ್ದಯವಾಗಿ ಗಲ್ಲಿಗೇರಿಸಿದರು. ಹಲಗಲಿಯ ಜಡಗಣ್ಣ ಬಾಲಣ್ಣ ರಂಥ ಅನೇಕ ಬೇಡರ ವೀರರು ಆತ್ಮಗೌರವಕ್ಕಾಗಿ, ಸ್ವಾಭಿಮಾನಕ್ಕಾಗಿ, ಬ್ರಿಟೀಷ್ ಸೈನ್ಯ ದೊಂದಿಗೆ ಕೆಚ್ಚೆದೆಯಿಂದ ಹೋರಾಡಿ, ನೇಣಿಗೆ ಕೊರಳೊಡ್ಡಿದ ಈ ಬೇಡರ ಕೊಡುಗೆ, ಮುಂದಿನ ಸ್ವಾತಂತ್ರ್ಯ ಸಮರಕ್ಕೆ ನಾಂದಿಯಾಯಿತೆನ್ನಬಹುದು!

ಇದು ಸ್ವಾತಂತ್ರ್ಯ ಪೂರ್ವದ ಸಂಗತಿಯಾದರೆ ಸ್ವಾತಂತ್ರ್ಯ ನಂತರ ಅಸ್ತಿತ್ವಕ್ಕೆ ಬಂದ ಹಿಂದುಳಿದ ವರ್ಗದ ಆಯೋಗದಲ್ಲಿ ಈ ವಾಲ್ಮೀಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿದಾಗ ಇವರಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳು ಸಿಗಲಾರಂಭಿಸಿದವು. ವಿದ್ಯಾರ್ಥಿಗಳಿಗೆ ವೇತನ, ಸರ್ಕಾರಿ ಹಾಸ್ಟೇಲುಗಳಲ್ಲಿ ಉಚಿತ ಊಟ-ವಸತಿ, ಬೇಸಾಯಗಾರ ರಿಗೆ ಬ್ಯಾಂಕಿನಿಂದ ಸಾಲಸೌಲಭ್ಯ ಸಬ್‌ಸಿಡಿ ಹಾಗೂ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ. ಹೀಗೆ ಅನೇಕ ಬಗೆಯ ಲಾಭವನ್ನು ಪಡೆದು ವಾಲ್ಮೀಕಿ ಸಮುದಾಯದವರು ಕ್ರಮೇಣ ಪ್ರಗತಿಯತ್ತ ಹೆಜ್ಜೆ ಇಡಲಾರಂಭಿಸಿದರು.

ಸರ್ಕಾರದ ಹಾಸ್ಟೇಲುಗಳಲ್ಲಿದ್ದು, ಶುಲ್ಕ ವಿನಾಯಿತಿ ಪಡೆದು ವ್ಯಾಸಂಗ ಮಾಡಿ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದು ಪದವೀಧರರಾಗಿ, ಡಾಕ್ಟರೇಟ ಪಡೆದವ ರಾಗಿ ಸರ್ಕಾರಿ ಇಲ್ಲವೆ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದು, ಪ್ರೌಢಶಾಲೆಗಳಲ್ಲಿ ಉಪಾಧ್ಯಾಯರಾಗಿ, ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ವಿಶ್ವವಿದ್ಯಾಲಯಗಳಲ್ಲಿ ಪ್ರೊಫೇಸರು ಗಳಾಗಿ ಆಡಳಿತ ಇಲಾಖೆಯಲ್ಲಿ ಶಿಕ್ಷಣಾಧಿಕಾರಿಗಳಾಗಿ ಕೆಲಸ ಮಾಡುತ್ತ ಈ ವಾಲ್ಮೀಕಿ ಸಮುದಾಯದವರು ಲೋಕೋಪಯೋಗಿ ಕೊಡುಗೆಯನ್ನು ನೀಡುತ್ತಿದ್ದಾರೆ.

ಕೃಷಿಕರಾದವರು ಸರ್ಕಾರದಿಂದ ಸಾಲಸೌಲಭ್ಯ ಪಡೆದು ಆಧುನಿಕ ಪದ್ಧತಿಯ ಸುಧಾರಿಸಿದ ಕೃಷಿ ಪದ್ಧತಿಯನ್ನವಲಂಬಿಸಿ ನೀರಾವರಿ ಬೇಸಾಯ ಮಾಡುತ್ತ ಪ್ರಗತಿಪರ ರೈತರಾಗಿ ಇವರು ನೀಡುತ್ತಿರುವ ಕೊಡುಗೆಯೂ ಅಪಾರವಾದುದು. ಇದೇ ರೀತಿ ಸರ್ಕಾರದ ಸಾಲಸೌಲಭ್ಯದಿಂದ ತಾಂತ್ರಿಕ ಶಿಕ್ಷಣ ಪಡೆದು ಅನೇಕ ಎಂಜೀನಿಯರಿಂಗ್ ಪದವೀಧರರು ಸರ್ಕಾರಿ ನೌಕರಿಗೂ ಸೇರದೆ ಸ್ವಂತ ಫ್ಯಾಕ್ಟರಿಯನ್ನೋ, ಕಾರ್ಖಾನೇ, ಗ್ಯಾರೇಜನ್ನೋ ನಡೆಸುತ್ತ ಉದ್ದಿಮೆ ಕ್ಷೇತ್ರದಿಂದ ಕೊಡುಗೆ ನೀಡುತ್ತಲಿದ್ದಾರೆ. ಹೀಗೆ ವಾಲ್ಮೀಕಿ ಸಮುದಾಯದವರು ತಾವು ಪಡೆದ ಶಿಕ್ಷಣ, ಸಂಪಾದಿಸಿದ ಅನುಭವ ಜ್ಞಾನ ಹಾಗೂ ಪರಿಶ್ರಮದಿಂದ ಲೋಕೋಪಯೋಗಿ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

ಬೀಳಗಿ ತಾಲೂಕು

ಸಿದ್ದಾಪುರ ಬೀಳಗಿ ತಾಲೂಕಿನಲ್ಲಿ ಸಿದ್ದಾಪುರ ಗ್ರಾಮದಲ್ಲಿಯೇ ವಾಲ್ಮೀಕಿ ಸಮುದಾಯ ದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿಯ ನಿಂಗಪ್ಪ ಅಂಟಿನ ಎಂಬುವರು ಅಪ್ಪಟ ಖಾದೀಧಾರಿಯಾಗಿ, ಗಾಂಧೀವಾದಿಗಳಾಗಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿ ಜೇಲಿಗೆ ಬಿದ್ದು, ಸ್ವಾತಂತ್ರ್ಯ ಯೋಧರಾಗಿ, ಸ್ವಾತಂತ್ರ್ಯಾ ನಂತರ ದಿವಂಗತರಾದರು. ಸ್ವಾತಂತ್ರ್ಯ ಕ್ಕಾಗಿ ಅವರು ನೀಡಿದ ಕೊಡುಗೆ ದೊಡ್ಡದಲ್ಲವೆ? ಅವರ ಪುತ್ರರಲ್ಲಿ ಈರ್ವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಈಗ ನಿವೃತ್ತರಾಗಿದ್ದಾರೆ. ಈ ಶಿಕ್ಷಣರೀರ್ವರ ಮಕ್ಕಳಲ್ಲಿ ಒಬ್ಬರು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ, ಇನ್ನೀರ್ವರು ಪ್ರೌಢಶಾಲಾ ಶಿಕ್ಷಕರಾಗಿದ್ದರೆ, ಇನ್ನೋರ್ವರು ಎಂ.ಬಿ.ಬಿ.ಎಸ್. ಡಾಕ್ಟರ್ ಆಗಿದ್ದಾರೆ. ಒಬ್ಬರು ರೇಲ್ವೆ ಇಲಾಖೆಯಲ್ಲಿದ್ದರೆ ಇನ್ನೋರ್ವರು ಬಿ.ಇ. ಎಂಜಿನೀಯರಾಗಿ ಊರಲ್ಲಿದ್ದುಕೊಂಡೇ ಸಮಾಜ ಸೇವೆ ಮಾಡುತ್ತಲಿ ದ್ದಾರೆ. ಇದೇ ಊರಿನ ವಡವಾಣಿಯವರ ಮನೆಯಲ್ಲಿ ಮೂವರು ಹಾಗೂ ಜೇವೋಜಿಯವರ ಮನೆಯಲ್ಲಿ ಮೂವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ. ಹೀಗೆ ಈ ಊರಿನ ವಾಲ್ಮೀಕಿ ಸಮುದಾಯವು ಶಿಕ್ಷಣ ಕ್ಷೇತ್ರಕ್ಕೆ ತನ್ನ ಅಪಾರ ಕೊಡುಗೆಯನ್ನು ನೀಡಿದೆ. ಇಲ್ಲಿಯ ವಾಲ್ಮೀಕಿ ಯುವಕ ಸಂಘವು ತನ್ನ ಸಮುದಾಯದ ಅಭಿವೃದ್ದಿಗಾಗಿ ಕಾರ್ಯ ಮಾಡುತ್ತಲಿದೆ. ಇಲ್ಲಿಯ ಸ್ತ್ರೀಶಕ್ತಿ ಸಂಘಕ್ಕೆ ವಾಲ್ಮೀಕಿ ಸಮುದಾಯದ ಮಹಿಳೆಯೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಲಿದ್ದಾರೆ. ಇಲ್ಲಿಯ ಭೀಮಪ್ಪ ಕೂಗಟ ಎಂಬವರು ಬೀಳಗಿ ಪಿ.ಎಲ್.ಡಿ. ಬ್ಯಾಂಕಿನ ಉಪಾಧ್ಯಕ್ಷರಾಗಿದ್ದಾರೆ.

ತೆಗ್ಗಿ : ಈ ಗ್ರಾಮವು ಬೀಳಗಿ ತಾಲೂಕಿನದಾಗಿದ್ದು ಇದು ವಾಲ್ಮೀಕಿ ಸಮುದಾಯ ದಿಂದಾಗಿ ವಿಶೇಷ ಮಹತ್ವ ಪಡೆದ ಗ್ರಾಮವಾಗಿದೆ. ಈ ತೆಗ್ಗಿ ಗ್ರಾಮವು ಬೇಡರ ಬಂಟನಾಗಿದ್ದ ಸಿಂದೂರ ಲಕ್ಷ್ಮಣನಿಗೆ ಆಶ್ರಯ ನೀಡಿದ್ದ ವೆಂಕಪ್ಪ ನಾಯಕರ ಊರು. ಕೆಲವು ಜನ ಸಾಹಿತಿ ಗಳು, ನಾಟಕಕಾರರು ವಸ್ತು ಸ್ಥಿತಿಯ ನಿಜವಾದ ಸಂಗತಿಯನ್ನರಿಯದೇ ವೆಂಕಪ್ಪ ನಾಯಕನೇ ಇಂಗ್ರೇಜಿಯವರಿಗೆ ಪಿತೂರಿಯಾಗಿ ಮೋಸದಿಂದ ಲಕ್ಷ್ಮಣನನ್ನು ಕೊಲ್ಲಿಸಿದನೆಂದು ಸಾಹಿತ್ಯ ಸೃಷ್ಟಿಸಿ, ವೆಂಕಪ್ಪ ನಾಯಕನ ಪಾತ್ರವನ್ನು ದೇಶದ್ರೋಹಿಯಂತೆ ಚಿತ್ರಿಸಿದ್ದಾರೆ. ಅವರದು ವಸ್ತುನಿಷ್ಠವಾದುದಲ್ಲ. ಇತಿಹಾಸಕ್ಕೆ ಬಗೆದ ಅಪಚಾರವದು. ವೆಂಕಪ್ಪನಾಯಕನ ಕೈ ಕೆಳಗಿನ ವರು ತಮ್ಮ ಒಡೆಯನಿಗೆ ತಿಳಿಯದಂತೆಯೇ ಇಂಗ್ರೇಜಿ ಸರ್ಕಾರದ ಅಧಿಕಾರಿಗಳೊಂದಿಗೆ ಶಾಮೀಲಾಗಿ ಲಕ್ಷ್ಮಣನ ಹತ್ಯೆ ಮಾಡಿದರೆಂಬುದಾಗಿ ತಿಳಿದು ಬರುತ್ತದೆ. ಈ ಹಂತಕರನ್ನು ಬಚಾವ ಮಾಡಲೋಸುಗ ಹತ್ಯೆಯ ಹೊಣೆಯನ್ನು ಬ್ರಿಟೀಷ್ ಸರ್ಕಾರವೇ ಹೊತ್ತು ಕೊಂಡದ್ದು ಇತಿಹಾಸ. ಲಕ್ಷ್ಮಣನ ಚರಿತ್ರೆಯಲ್ಲಿ ತೆಗ್ಗಿಯ ಹೆಸರು ದಾಖಲೆಯಾಗಿ ಉಳಿಯಿತು. ಯಾವುದೋ ಒಂದು ಅನಿಷ್ಟ ಪ್ರಸಂಗಕ್ಕೆ ಸಿಲುಕಿ, ಹುಟ್ಟಿದ ನಾಡನ್ನು ಬಿಟ್ಟು ಕನ್ನಡ ನಾಡಿಗೆ ಬಂದು, ಸರ್ಕಾರದ ಕಣ್ಣು ತಪ್ಪಿಸಿ ನಾಗರಾಳದ ಕಪ್ಪರ ಪಡಿಯಮ್ಮನ ಗುಡ್ಡದಲ್ಲಿ ನೆಲೆಮಾಡಿಕೊಂಡಿದ್ದು ಬಡವರನ್ನು ಶೋಷಣೆ ಮಾಡುತ್ತಿದ್ದ ನಿರ್ದಯಿ ಶ್ರೀಮಂತರ ಸಂಪತ್ತನ್ನು ಸುಲಿದು ತನ್ನ ತಾಯಿ-ಹೆಂಡತಿಗೆ ಕಳಿಸಲಾರದೇ ಇಲ್ಲಿಯೇ ಬಡಬಗ್ಗ ರಿಗೆ ಹಂಚುತ್ತ ಸಮಾಜವಾದಿ, ಸಮತಾವಾದಿಯಾಗಿ ನೀಡಿದ ಲಕ್ಷ್ಮಣನ ಕೊಡುಗೆಯು ಚಿರಸ್ಮರಣೀಯವಾದುದು! ಈ ತೆಗ್ಗಿ ಗ್ರಾಮದಲ್ಲಿ ಸಣಮನಿ ಎಂಬವರ ಒಂದೇ ಮನೆತನದಲ್ಲಿ ಒಬ್ಬರು ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನೀಯರಾಗಿ ಇನ್ನೊಬ್ಬರು ಪೋಲೀಸ ಇಲಾಖೆಯಲ್ಲಿ ಎಸ್.ಆಯ್. ಆಗಿದ್ದು ಸಾರ್ವಜನಿಕರಿಗೆ ತಮ್ಮ ಸೇವೆಯ ಕೊಡುಗೆ ನೀಡುತ್ತಲಿದ್ದಾರೆ. ಈ ಊರಲ್ಲಿ ಮಹರ್ಷಿ ವಾಲ್ಮೀಕಿ ಬಯಲು ರಂಗಮಂದಿರವಿದ್ದುದು ಇಲ್ಲಿಯ ವಾಲ್ಮೀಕಿ ಸಮುದಾಯದವರ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಾಕ್ಷಿಯಾಗಿದೆ.

ಬಿಸನಾಳ : ಬೀಳಗಿ ತಾಲೂಕಿನ ಈ ಬಿಸನಾಳ ಗ್ರಾಮದ ವಾಲ್ಮೀಕಿ ಸಮುದಾಯವು ರಾಜಕೀಯವಾಗಿ ವಿಶೇಷ ಗೌರವ ಪಡೆದುಕೊಂಡಿದೆ. ಮಂಡಲ ಪಂಚಾಯತಿಯ ಅಧ್ಯಕ್ಷ ಸ್ಥಾನ ಹಾಗೂ ತಾಲೂಕು ಪಂಚಾಯಿತಿಯ ಅಧ್ಯಕ್ಷಸ್ಥಾನ ಈ ಊರಿನ ವಾಲ್ಮೀಕಿ ಸಮುದಾಯಕ್ಕೆ ದೊರೆತದ್ದು ವಿಶೇಷ ಗೌರವವಾಗಿದೆ.

ಜಾನಮಟ್ಟಿ : ಬೀಳಗಿ ತಾಲೂಕಿನ ಜಾನಮಟ್ಟಿ ಗ್ರಾಮದಲ್ಲಿ ಚಿಗರಿ ಯಮನಪ್ಪ ಎಂಬಾತನು ಸಿಂಧೂರ ಲಕ್ಷ್ಮಣನಿಗೆ ಅತ್ಯಂತ ನಂಬಿಗಸ್ಥ ಒಡನಾಡಿಯಾಗಿದ್ದನು. ಲಕ್ಷ್ಮಣ ನನ್ನು ಸೆರೆ ಹಿಡಿಯಲು ಬರುತ್ತಿದ್ದ ಪೋಲೀಸರಿಗೆ ತಿಳಿಯದಂತೆ ಈ ಯಮನಪ್ಪನು ಲಕ್ಷ್ಮಣನಿಗೆ ಆಶ್ರಯ ನೀಡುತ್ತಿದ್ದನು. ಈ ಊರಿನವರೊಬ್ಬರು ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕರಾಗಿದ್ದಾರೆ. ಕೆಲವು ಯುವಕರು ಭಾರತದ ಸೈನ್ಯ ಖಾತೆಯಲ್ಲಿ ಸೇವೆ ಸಲ್ಲಿಸುತ್ತಲಿ ದ್ದಾರೆ. ಇವರು ವಾಲ್ಮೀಕಿ ಸಮುದಾಯದವರು.

ಕೊಪ್ಪ (ಎಸ್.ಕೆ.) : ಬೀಳಗಿ ತಾಲೂಕಿನ ಈ ಕೊಪ್ಪ ಗ್ರಾಮದಲ್ಲಿಯು ವಾಲ್ಮೀಕಿ ಸಮುದಾಯದ ಜನರಿದ್ದಾರೆ. ಈ ಊರಿನ ವಾಲ್ಮೀಕಿ ಸಮುದಾಯದ ಮನೆತನಗಳಲ್ಲಿ ಬೂದಿಹಾಳ ಎನ್ನುವ ಮನೆತನದವರೇ ಐದು ಜನರು ವಕೀಲರಾಗಿದ್ದುದೊಂದು ವಿಶೇಷ. ಇವರಲ್ಲಿ ಒಬ್ಬರು ಹೈಕೋರ್ಟ ರಿಜಿಸ್ಟ್ರಾರ್ ಜನರಲ್‌ರಾಗಿದ್ದಾರೆ.

ಗಿರಗಾಂವ : ಈ ಊರಿನ ಪ್ರಗತಿಪರ ರೈತರಾದ ಸುರೇಂದ್ರನಾಯಕ ಎಂಬವರು ಒಂದು ಎಕರೆಗೆ ಅತೀ ಹೆಚ್ಚು ಕಬ್ಬನ್ನು ಬೆಳೆದು ಕೃಷಿ ಕ್ಷೇತ್ರದಲ್ಲಿ ದಾಖಲೆ ಮಾಡಿದ್ದಾರೆ. ವಾಲ್ಮೀಕಿ ಸಮುದಾಯದವರಾದ ಇವರು ಬೀಳಗಿಯಲ್ಲಿ ದ್ವೀಚಕ್ರವಾಹನದ ಶೋ-ರೂಮ್ ನಡೆಸು ತ್ತಿದ್ದು ತಾಲೂಕು ಮಟ್ಟದಲ್ಲಿ ಮಹರ್ಷಿ ವಾಲ್ಮೀಕಿ ಸಂಘವನ್ನು ಸ್ಥಾಪಿಸಿ ಅದಕ್ಕೆ ಅಧ್ಯಕ್ಷರಾಗಿ ತನ್ಮೂಲಕ ವಾಲ್ಮೀಕಿ ಸಮುದಾಯದಲ್ಲಿ ಜಾಗೃತಿ ಹಾಗೂ ಅಭಿವೃದ್ದಿಗಾಗಿ ಅನೇಕ ಕಾರ್ಯ ಕ್ರಮಗಳನ್ನು ಹಾಕಿಕೊಂಡಿದ್ದಾರೆ. ಇವರು ಅಪ್ಪಾಜಿ ಮೆಮೋರಿಯಲ್ ಸ್ಕೂಲಿಗಾಗಿ ಸಂಸ್ಥೆ ಯೊಂದನ್ನು ಸ್ಥಾಪಿಸಿಕೊಂಡಿದ್ದು ಶಿಕ್ಷಣ ಪ್ರಸಾರಕ್ಕೆ ಅಣಿಯಾಗಿದ್ದಾರೆ. ಸಿಂಧೂರ ಲಕ್ಷ್ಮಣನ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಇವರು ತಮ್ಮ ಮಹರ್ಷಿ ವಾಲ್ಮೀಕಿ ಸಂಘದ ಸರ್ವಸದಸ್ಯರೆಲ್ಲರೊಡಗೂಡಿ ಬೀಳಗಿಯಲ್ಲಿ ಸಿಂಧೂರ ಲಕ್ಷ್ಮಣನ ಸ್ಮಾರಕವನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇವರು ಬಾಗಲಕೋಟೆ ಎ.ಪಿ.ಎಂ.ಸಿ.ಯ ಅಧ್ಯಕ್ಷರಾಗಿದ್ದಾರೆ. ಚೆನ್ನಪ್ಪ ಬೀಳಗಿ, ಬೆನ್ನಪ್ಪ ಬೀಳಗಿ ತಾಲೂಕಿನ ಯಡಹಳ್ಳಿಯವರಾದ ಚಿನ್ನಪ್ಪ ಬೀಳಗಿ ಎಂಬವರು ಬಾಗಲಕೋಟೆ ಜಿಲ್ಲಾ ಪಂಚಾಯತಿಯ ಸದಸ್ಯರಾಗಿದ್ದಾರೆ. ಬೀಳಗಿಯಲ್ಲಿ ವಾಲ್ಮೀಕಿ ಸಮುದಾಯದವರದೇ ಒಂದು ಸಹಕಾರಿ ಕ್ರೆಡಿಟ್ ಸೊಸೈಟಿಯಿದೆ.

ಬಾಗಲಕೋಟೆ ತಾಲೂಕು

ಬಾಗಲಕೋಟೆ ಜಿಲ್ಲೆಯ ಕೇಂದ್ರ ಸ್ಥಳವಾದ ಇಲ್ಲಿ ವಾಲ್ಮೀಕಿ ಸಮುದಾಯದವರ ಮಹಿಳಾ ವಿವಿದೋದ್ದೇಶ ಸಹಕಾರ ಸಂಘವಿದ್ದು ಅದಕ್ಕೆ ಶ್ರೀಮತಿ ಶಾಮವ್ವ ಗೌಡರ ಎಂಬವರು ಅಧ್ಯಕ್ಷರಾಗಿದ್ದಾರೆ. ಇದೇ ತಾಲೂಕಿನ ವೀರಾಪೂರ ಗ್ರಾಮದ ಎಂಜಿನೀಯರ್ ಸುರೇಶ ಗೌಡರು ಈ ಸಂಘದ ಸಂಸ್ಥಾಪಕರು. ಬಾಗಲಕೋಟೆಯಲ್ಲಿ ಕರ್ನಾಟಕ ವಾಲ್ಮೀಕಿ ಸಂಘರ್ಷ ಸಮಿತಿಯು ಅಸ್ತಿತ್ವದಲ್ಲಿದ್ದು ಅಶೋಕ ಲೋಗಾಂವಿ ಎಂಬವರು ಕಾರ್ಯದರ್ಶಿ ಯಾಗಿ ವಾಲ್ಮೀಕಿ ಸಮುದಾಯದ ಅಭಿವೃದ್ದಿಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಭಗವತಿ : ಬಾಗಲಕೋಟೆ ತಾಲೂಕಿನ ಈ ಭಗವತಿ ಗ್ರಾಮದಲ್ಲಿ ಹಣಮಂತ ವಾಲಿ ಎಂಬವರು ಸಬ್ ಟ್ರೇಝರಿ ಆಫೀಸರರಾಗಿದ್ದಾರೆ. ಯಮನಪ್ಪ ವಾಲಿಯವರು ಕಾಲೇಜ ಪ್ರೊಫೆಸರರಾಗಿದ್ದಾರೆ. ಮಲ್ಲಿಕಾರ್ಜುನ ವಾಲಿಯವರು ದೈಹಿಕ ಶಿಕ್ಷಣಾಧಿಕಾರಿಯಾಗಿದ್ದಾರೆ. ಇವರೆಲ್ಲರೂ ವಾಲ್ಮೀಕಿ ಸಮುದಾಯದ ಒಂದೇ ಮನೆತನದವರೆನ್ನುವದೊಂದು ವಿಶೇಷ.

ಬಾದಾಮಿ ತಾಲೂಕು

ಈ ತಾಲೂಕಿನಲ್ಲಿ ವಾಲ್ಮೀಕಿ ಸಮುದಾಯದವರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಬಾದಾಮಿಯವರಾದ ಕೆ.ಬಿ. ಲೆಂಕೆಣ್ಣನವರ ಎಂಬುವರು ಬೆಂಗಳೂರು ಹೈಕೋರ್ಟ್ ಜಡ್ಜರಾಗಿದ್ದಾರೆ. ಶ್ರೀಮತಿ ರೇಣುಕಾ ದಳವಾಯಿ ಎಂಬುವರು ಜಿಲ್ಲಾ ಪಂಚಾಯ್ತಿ ಸದಸ್ಯ ರಾಗಿದ್ದಾರೆ. ರಂಗನಗೌಡ ಎಂಬುವರು ತಾಲೂಕು ಪಂಚಾಯ್ತಿಯ ಉಪಾಧ್ಯಕ್ಷರಾಗಿದ್ದಾರೆ. ಆರ್.ಡಿ. ದಳವಾಯಿ ಎಂಬುವರು ವಾಲ್ಮೀಕಿ ಬ್ಯಾಂಕಿನ ಅಧ್ಯಕ್ಷರಾಗಿದ್ದಾರೆ. ಹಂಡಿಯವರು ಪುಲಿಕೇಶಿ ಬ್ಯಾಂಕಿನ ಉಪಾಧ್ಯಕ್ಷರಾಗಿದ್ದಾರೆ. ಆರ್.ಟಿ.ದಿಬ್ಬದಮನಿ ಹಾಗೂ ನಾಯಕ ಎಂಬವರು ವಕೀಲರಾಗಿದ್ದಾರೆ.

ಇದೇ ತಾಲೂಕಿನ ಆಡಗಲ್ಲನವರು ಒಬ್ಬರು ಲೋಕೋಪಯೋಗಿ ಇಲಾಖೆಯಲ್ಲಿ ಅಸಿಸ್ಟೆಂಟ್ ಎಂಜಿನೀಯರ್ ಆಗಿದ್ದಾರೆ. ಎಚ್.ಕೆ. ನಾಯಕ ಎಂಬುವರು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಜಾಯಿಂಟ್ ಡೈರೆಕ್ಟರ್‌ರಾಗಿದ್ದಾರೆ. ಊರಿನ ಹಲವರು ಶಾಲಾ ಶಿಕ್ಷಕರೂ ಆಗಿದ್ದಾರೆ. ಬಾಗಲಕೋಟ ಜಿಲ್ಲಾದಲ್ಲಿ ಬಾದಾಮಿ ತಾಲೂಕು ವಾಲ್ಮೀಕಿ ಸಮುದಾಯದ ಅತಿಹೆಚ್ಚು ಜನರನ್ನು ಹೊಂದಿರುವ ತಾಲೂಕಾಗಿದೆ.

ಹುನಗುಂದ ತಾಲೂಕು

ಚಿಕ್ಕಯರನಕೇರಿ : ಹುನಗುಂದ ತಾಲೂಕಿನ ಈ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ದವರ ಹೊರತಾಗಿ ಬೇರೆ ಸಮುದಾಯದವರೇ ಇಲ್ಲ. ಇಡೀ ಗ್ರಾಮವೇ ವಾಲ್ಮೀಕಿ ಸಮುದಾಯದವರದಾಗಿದೆ. ಊರಿನ ಕೆಲವರು ನೌಕರಸ್ಥರಾಗಿದ್ದು, ಮೂವರು ಶಾಲಾ ಶಿಕ್ಷಕರಾಗಿದ್ದಾರೆ. ಒಬ್ಬರು ಪೋಲೀಸ ಇಲಾಖೆಯಲ್ಲಿ ಎ.ಎಸ್.ಆಯ್. ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಮಥಾಳ : ಹುನಗುಂದ ತಾಲೂಕಿನ ರಾಮಥಾಳ ಗ್ರಾಮದಲ್ಲಿ ಅರ್ಧದಷ್ಟು ನಾಯಕ ಸಮುದಾಯದವರೇ ಇದ್ದಾರೆ. ಈ ಊರಿನ ಒಬ್ಬರು ಎಂಜಿನಿಯರಾಗಿದ್ದು ಇವರ ತಾಯಿ ಹಿಂದಿನ ಅವಧಿಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದರು.

ಮುಧೋಳ ತಾಲೂಕು

ಹಲಗಲಿ : ಮುಧೋಳ ತಾಲೂಕಿನ ಹಲಗಲಿಯು ಬೇಡರ ಊರೆಂದೇ ಹೆಸರಾಗಿದೆ. ನಿಶ್ಯಸ್ತ್ರೀಕರಣ ಕಾಯ್ದೆ ವಿರುದ್ಧ ಬ್ರಿಟೀಷ್ ಸೈನ್ಯದೊಂದಿಗೆ ಹೋರಾಡಿ, ಗಲ್ಲಿಗೇರಿದ ಜಡಗಣ್ಣ, ಬಾಲಣ್ಣ ಎನ್ನುವ ಬೇಡರ ಬಂಟರು ಇದೇ ಹಲಗಲಿಯವರು. ಬಂಡಾಯದ ಇತಿಹಾಸದಲ್ಲಿ ಹಗಲಿಯ ಹೆಸರು ಹಚ್ಚ ಹಸುರಾಗಿ ಉಳಿದಿದೆ. ಹಲಗಲಿಯಲ್ಲಿ ಪುರವಂತ ದಂಡಿನ ಎಂಬುವರು ಪೋಲೀಸ್ ಇಲಾಖೆಯಲ್ಲಿ ಎಸ್. ಆಯ್. ಆಗಿದ್ದಾರೆ.  ತಳವಾರ ಎಂಬುವರು ಎಕ್ಸೈಜ್ ಇನ್‌ಸ್ಪೆಕ್ಟರರಾಗಿದ್ದಾರೆ. ಚನಬಸು ಹಿರಕನ್ನವರ ಎಂಬವರು ಪ್ರಗತಿಪರ ರೈತರಾಗಿದ್ದಾರೆ. ಬಸಪ್ಪ ಹಿರಕನ್ನವರ ಎಂಬುವರು ಮಂತ್ರದ ಮೂಲಕ ರೋಗ ವಾಸಿ ಮಾಡುವ ಜನಪದ ವೈದ್ಯರಿದ್ದಾರೆ. ಲಕ್ಷ್ಮಣ ದಂಡಿನ ಈತ ರಂಗಭೂಮಿಯ ಹೆಸರಾಂತ ನಟನಾಗಿದ್ದಾನೆ.

ಮಂಟೂರ : ಮುಧೋಳ ತಾಲೂಕಿನ ಮಂಟೂರ ಗ್ರಾಮದಲ್ಲಿಯೂ ವಾಲ್ಮೀಕಿ ಸಮುದಾಯದ ಜನಸಂಖ್ಯೆಯು ವಿಶೇಷವಾಗಿದೆ. ಇವರು ಕೃಷಿ ಕ್ಷೇತ್ರದಲ್ಲಿ ಪ್ರಗತಿ ಪರರೆನಿಸಿ ಕೊಂಡಿದ್ದಾರೆ. ಇಲ್ಲಿ ಮಹರ್ಷಿ ವಾಲ್ಮೀಕಿ ನಾಟ್ಯ ಸಂಘದ ಬಯಲು ರಂಗಮಂದಿರವು ವಾಲ್ಮೀಕಿ ಸಮುದಾಯದವರ ನಾಟ್ಯ ಕಲೆಗೆ ಸಾಕ್ಷಿಯಾಗಿ ನಿಂತಿದೆ.

ಜಮಖಂಡಿ : ತಾಲೂಕಿನ ಕೇಂದ್ರ ಸ್ಥಾನವಾದ ಈ ನಗರದಲ್ಲಿ ಸುಶಿಕ್ಷಿತ ವಿದ್ಯಾವಂತರ ಸಂಖ್ಯೆಯು ಹೆಚ್ಚಾಗಿದ್ದು ಸುಮಾರು ಮೂವತ್ತಕ್ಕೂ ಹೆಚ್ಚು ಜನ ವಾಲ್ಮೀಕಿ ಸಮುದಾಯ ದವರು ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಇಲ್ಲಿಯ ಎಲ್ಲ ಮನೆತನಗಳೂ ಆರ್ಥಿಕವಾಗಿ ಪ್ರಬಲವಾಗಿದ್ದು ವ್ಯಾಪಾರ, ವ್ಯವಸಾಯ ಹಾಗೂ ರಾಜಕೀಯದಲ್ಲೂ ವಿಶೇಷವಾಗಿ ನಿರತರಾಗಿದ್ದಾರೆ.

ಬನಹಟ್ಟಿ : ಬನಹಟ್ಟಿಯಲ್ಲಿ ವಾಲ್ಮೀಕಿ ಸಮುದಾಯದವರಿದ್ದು ಇಲ್ಲಿಯೂ ಈ ಸಮುದಾಯದವರು ಸುಶಿಕ್ಷಿತರಾಗಿದ್ದು ಸರ್ಕಾರಿ ನೌಕರಿಯಲ್ಲಿದ್ದಾರೆ.

ನಾವಲಗಿ : ತಾಲೂಕಿನ ನಾವಲಗಿ ಗ್ರಾಮದಲ್ಲಿಯೂ ವಾಲ್ಮೀಕಿ ಸಮುದಾಯದ ಜನಸಂಖ್ಯೆಯು ಹೆಚ್ಚಾಗಿದ್ದು; ಇಲ್ಲಿ ಸುಶಿಕ್ಷಿತ ಜನರಿದ್ದು ಕೆಲವರು ಸರ್ಕಾರಿ ನೌಕರಿಯಲ್ಲಿ ದ್ದಾರೆ. ಕೆಲವು ಮನೆತನದವರು ಆರ್ಥಿಕವಾಗಿ ಪ್ರಬಲರಾಗಿದ್ದಾರೆ.

ಕೊಣ್ಣೂರ : ಈ ಊರಿನಲ್ಲಿ ವಾಲ್ಮೀಕಿ ಸಮುದಾಯದ ಮನೆತನಗಳು ಹೆಚ್ಚಿನ ಸಂಖ್ಯೆ ಯಲ್ಲಿದ್ದು; ಕೆಲವೊಂದು ಮನೆತನಗಳು ಆರ್ಥಿಕವಾಗಿ ಪ್ರಬಲರಾಗಿದ್ದಾರೆ. ಕೆಲವರು ಸರ್ಕಾರಿ ನೌಕರಿಯಲ್ಲಿದ್ದಾರೆ.

ಶಿರಗುಪ್ಪಿ : ಈ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದವರು ಹೆಚ್ಚಾಗಿ ಸುಶಿಕ್ಷಿತರಾಗಿದ್ದು; ಇಲ್ಲಿಯ ಬಹಳಷ್ಟು ಜನರು ಸರ್ಕಾರಿ ಉದ್ಯೋಗಿಗಳಾಗಿದ್ದಾರೆ. ಹಲವಾರು ಮನೆತನಗಳವರು ಆರ್ಥಿಕವಾಗಿ ಪ್ರಬಲರಾಗಿದ್ದಾರೆ.

ಜಕನೂರ : ಈ ಗ್ರಾಮದಲ್ಲಿ ಹಲವಾರು ವಾಲ್ಮೀಕಿ ಸಮುದಾಯದವರ ಮನೆತನಗಳಿದ್ದು; ಕೆಲವರು ಸರ್ಕಾರಿ ನೌಕರಿಯಲ್ಲಿದ್ದಾರೆ. ಕೆಲವು ಮನೆತನಗಳು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿವೆ.

ಆಲಗೂರ : ಇಲ್ಲಿಯೂ ವಾಲ್ಮೀಕಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಕೆಲವು ಮನೆತನಗಳು ಆರ್ಥಿಕವಾಗಿ ಸಬಲವಾಗಿವೆ ಕೆಲವರು ಸರ್ಕಾರಿ ನೌಕರಿಯಲ್ಲೂ ಇದ್ದಾರೆ.

ಇದು ಬಾಗಲಕೋಟೆ ಜಿಲ್ಲೆಯ ವಾಲ್ಮೀಕಿ ಸಮುದಾಯದ ಪಕ್ಷಿನೋಟವಾಗಿದ್ದು; ಈ ಸಮುದಾಯದವರು ಸಮಾಜ ವಿಕಾಸಕ್ಕಾಗಿ ಹಾಗೂ ಲೋಕೋಪಯೋಗಕ್ಕಾಗಿ ತಮ್ಮ ತಮ್ಮ ಪಾಲನ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ.

* * *

ಹಲಗಲಿ ಬೇಡರು

೨ನೇ ನುಡಿ
ಕೇಳುತ ಹುಕುಮಾ ಕೆಳವರ ತಂದ ಕೊಟ್ಟಾರ ಆವಾಗ
ಬಹಳ ಬೆಲಿವು ಹೆಚ್ಚಿನ ಹತಾರಾ ಮುಚ್ಚಿ ಇಟ್ಟರ ವೊಳಗ

ಸಾಲಸಮದ ಮಾಡಿ ದನ-ಕರ ಮಾರಿ ತಂದಿನ್ನಿ ಹಬ್ಬದಾಗ
ನೋಡ ನೋಡ ಹ್ಯಾಂಗೆ ಕೊಡುನ್‌ಅಂತ ಹುಗಿದ್‌ಇಟ್ಟರ ನೆಲದಾಗ

ಶೂರ ಚಟೆಗಾರು ಜಾಯಿತಸಾಹೇಬ ಬಂದಾರ ಆವಾಗ
ಸಂದಿಯಗೊಂದಿ ವೊಂದು ಉಳಿಯದ್ ಅಂಗ್ ಹೊಕ್ಕ ಹುಡಿಕೆರ ಮನಿಯಾಗ

ತೆಪ್ಪಿತ್‌ಉಪಾಯಿ ಇನ್ನ ಮಾತರ ಮಾಡುನ್‌ಅಂತರ ಹ್ಯಾಂಗ
ವೊಬ್ಬರಕ್ ಒಬ್ಬರ ಚ್ಯಾಡ ಹೇಳತರ ವರ್ಮ ಸಾಧಿಸಿದ್ ಹಾಂಗೆ ||ಚ್ಯಾಲ||
ಜ್ಯಾಡಿಸಿ ಹೋದವೊ ಯಲ್ಲಾ
ನಾಡ್ ಒಳಗೆ ಯೇನು ಉಳಿಲಿಲ್ಲಾ

ಅಜ್ಜ ಮುತ್ತೆರ ಹಿಡುವಪಿಸ್ತುಲ
ಕಾಸದ್‌ಓದರ ಕತ್ತಿಯ ಡಾಲಾ

ಕವಚ ಬೆಳ್ಳಿಯ ಮಕಮಾಲಾ
ರತ್ನದ ಹಿಡಿಕಿವ ಹೋದವು ಯೆಲ್ಲಾ       ||ಯೇರಾ||
ಹೋದ ಹತಾರಕ ಹೊಟಿಬ್ಯಾನಿ ಹಚ್ಚಿಕೊಂಡ ನಿಂತರ ಸಾವುದಕ