ಜಾನಪದ ಎಂದರೆ ಜಾಣಪದ. ಇದೊಂದು ಸಮುದಾಯದ ಸಾಂಸ್ಕೃತಿಕ ತುಡಿತದ ಸೃಷ್ಟಿ. ಅಡಿಗೆಗೆ ಉತ್ತು ಬಿತ್ತಿ ಬೆಳೆದ ಕಾಳು ಹೇಗೆ ಸಾಮಗ್ರಿಯಾಗುವುದೊ ಹಾಗೆಯೇ ಬದುಕಿನಲ್ಲಿ ಕಂಡು ಉಂಡು ಉಸುರುವ ಅನುಭವ ಸಾಹಿತ್ಯಸಾಮಗ್ರಿಯಾಗುತ್ತದೆ. Literature is the mirror of  life ಎಂಬ Alore crombeನ ಮಾತನ್ನು ಒಪ್ಪದಿದ್ದರೂ ಸಾಹಿತ್ಯ ಜೀವನದ ಗತಿಬಿಂಬ ಎಂಬ ಮಾತನ್ನು ಒಪ್ಪಬಹುದಾಗಿದೆ.

(Literature is equal to facts minus something plus imagination ಎಂಬ ಸೂತ್ರ ಸಾಹಿತ್ಯದ ಸ್ವರೂಪವನ್ನು ವಿವರಿಸುತ್ತದೆ).

ಬದುಕು ಅದರೊಳಗಿನ ಅನಗತ್ಯ ವಿವರಗಳನ್ನು ಹೊರತುಪಡಿಸಿ ಕವಿಯ ಕಲ್ಪನೆ ಯೊಂದಿಗೆ ಸ್ವೀಕಾರಾರ್ಹ ಸಾಹಿತ್ಯವಾಗಿ ಹೊರಹೊಮ್ಮುತ್ತದೆ ಎಂಬುದನ್ನು ಅಲ್ಲಗಳೆಯ ಲಾಗದು. ಜನರ ಅನುಭವವೆಲ್ಲ ಸಾಹಿತ್ಯದ ಆಕರ ಸಾಮಗ್ರಿ ಎಂಬುದನ್ನು ಜನವಾಣಿ ಬೇರು ಕವಿವಾಣಿ ಹೂವು ಎಂದು ಬಣ್ಣಿಸಲಾಗಿದೆ. ಬೇರಿನ ತ್ಯಾಗದಲ್ಲೇ ಹೂವಿನ ಕೀರ್ತಿಯಿದೆ. ಆದ್ದರಿಂದ ಜಾನಪದವೇ ಎಲ್ಲ ಸಾಹಿತ್ಯದ ತಾಯಿಬೇರು ಎಂಬ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕು. ಜನಪದ ಸಾಹಿತ್ಯ ಒಂದು ಸರ್ವಾಂಗ ಸುಂದರ ಸಶಕ್ತವಾದ ಸಾಹಿತ್ಯ ಇದು ಏನೆಲ್ಲವನ್ನೂ ಒಳಗೊಂಡಿರುತ್ತದೆ.

Folklore includes every thing from culture to agriculture ಎಂಬ ಉಕ್ತಿ ಇದಕ್ಕೆ ಸಾಕ್ಷಿ. ಶಿಷ್ಟ ಸಾಹಿತ್ಯಕ್ಕೆ ಕೃತಿಕಾರನ ಪಾಂಡಿತ್ಯ ಹಾಗೂ ಪರಿಶ್ರಮ ಕಾರಣವಾಗಿ ಸಮಾಜದ ಕೆಲಮಂದಿಗೆ ಮಾತ್ರ ಅದು ಆನಂದ ನೀಡಬಹುದು. ಆದರೆ ಜಾನಪದ ಜನಕ್ಕೆಲ್ಲ ಅಂದರೆ ಇಡೀ ಸಮುದಾಯಕ್ಕೆಲ್ಲ ರಂಜನೆ ಹಾಗೂ ಶಿಕ್ಷಣವನ್ನೊದಗಿಸುತ್ತದೆ.

ಮಾರ್ಗ ಮನುಜ ಸಂತಾನ
ದೇಶಿ ದೇವ ಸಂತಾನ

ಇದು ನನ್ನ ಅನಿಸಿಕೆ ಸಮಷ್ಠಿ ಚಿಂತನ ಹಾಗೂ ಸಮಷ್ಟಿ ಕಲ್ಯಾಣದಲ್ಲೇ ದೈವತ್ವವಿರುತ್ತದೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಹಾಗೆಯೇ ಜನಪದ ಸಾಹಿತ್ಯದ ಪಾವಿತ್ರ್ಯ ಮತ್ತು ಸಾರ್ವತ್ರಿಕತೆಯನ್ನು ಅಲ್ಲಗಳೆಯಲಾಗದು. ತ್ರಿಪದಿ ಜನಪದ ಸಾಹಿತ್ಯದ ಅತ್ಯಂತ ಜನಪ್ರಿಯ ಪ್ರಕಾರ. ಬೇಂದ್ರೆ ಅವರು ಇದನ್ನು ಸಾಹಿತ್ಯದ ಗಾಯತ್ರಿ ಎಂದು ಕರೆಯುವ ಮೂಲಕ ಜನಪದವೆಂದರೆ ಮೂಗು ಮುರಿಯುವವರ ಬಾಯಿಗೆ ಬರೆಕೊಟ್ಟಿದ್ದಾರೆ. ಛಂದಸ್ಸು ಹಾಗೂ ಪ್ರಾಸ ಜನಪದ ಸಾಹಿತ್ಯದ ಜನಪ್ರಿಯತೆಗೆ ಕಾರಣ. ಸರ್ವಜ್ಞ  ಪ್ರಾಸವಿಲ್ಲದ ಹಾಡ ತಾಸು ಹಾಡಿದರೇನು? ಎಂದು ಪ್ರಶ್ನೆಮಾಡಿರುವುದು ಈ ಕಾರಣಕ್ಕೆ ಇದ್ದೀತು.

ಗಂಡ ಮಲಗಿದಾಗ ಸೆರಗಿನಿಂದ ಗಾಳಿ ಬೀಸುವ ಗರತಿ ಬೀಸಲೊಲ್ಲದ ಸುಳಿಗಾಳಿಗೆ ಕೇಳುವ ಈ ಪ್ರಶ್ನೆಯಲ್ಲಿ ಏನಿಲ್ಲ.

ಬ್ಯಾಸಗಿ ಬಿಸಲೇನು, ರೂಕಂಬು ದಿನವೇನ
ಪೋಷಕದ ರಾಯ ಮಲಿಗ್ಯಾನ/ಮಂಚಕ
ಬೀಸವಲ್ಯಾಕ ಸುಳಿಗಾಳಿ

ಕಾಡುವ ಅತ್ತಿ ಖೊಂಡಿ ಗಂಡ ಇವರ ನಡುವೆ ಇಕ್ಕಳದಲ್ಲಿ ಸಿಕ್ಕ ಪಾತರಗಿತ್ತಿಯಂತೆ ವಿಲಿವಿಲಿ ಒದ್ದೀತುತು ಹೆಣ್ಣು.

ಹುರಳೀಯ ಬಳ್ಳೀಗಿ ಹೂವ್ಯಾಕ ಕಾಯಾಕ
ಹುಳಗಡಿಕಿ ಅತ್ತಿಗಿ ಸೊಸಿಯಾಕ/ನನ್ನವ್ವ
ಪಣತಿ ಮಾರ್ಯಾಂವಗ ಮಡದ್ಯಾಕ?

ಎಂದು ಚಡಪಡಿಸುತ್ತಾಳೆ. ಕಣ್ಣರಿಯದಿದ್ದೊಡೇಂ ಕರುಳರಿಯದೇ? ಎಂದು ಶಿಷ್ಟ ಕವಿ ಕೇಳುವಂತೆ ತಂಗಿಯ ಇಂಥ ಸಂಕಟದ ಸ್ಥಿತಿಯನ್ನು ಕರುಳಿನಿಂದ ಅನುಭವಿಸುವ ಅಣ್ಣನ ಸ್ಥಿತಿಯನ್ನು:

ಕಪ್ಪರಗುಡ್ಡಕ ಬೆಂಕಿ ತಪ್ಪದಲೆ ಇಟ್ಟಾಂಗ
ಸುಣ್ಣದ ಭಟ್ಯಾಗ ತಣ್ಣೀರ/ಹೊಯ್ದಂಗ
ಅಣ್ಣನ ಹೊಟ್ಟೆ ತಳಮಳಿಸಿ

ಶಬ್ದಗಳ ಸಂತೆಯಲ್ಲ ಕಾವ್ಯ. ಅದು ಪ್ರತಿಭೆ ಮತ್ತು ಮತಿಮೆಗಳು ಕೂಡಿ ಕುಣಿಯುವ ಮೇಳ. ಈ ತ್ರಿಪದಿಗಳೇ ಇಂಥ ಮೇಳಕ್ಕೆ ಕಟ್ಟಿದ ಗೆಜ್ಜೆಯಂತಿವೆ. ಕಿರಿದರಲ್ಲಿ ಪಿರಿದರ್ಥ ಹೇಳುವ ಈ ತ್ರಿಪದಿಗಳ ರಾಶಿರಾಶಿ ನಕ್ಷತ್ರಗಳು ಈ ಜಾನಪದ ಬಾನ ತುಂಬೆಲ್ಲ ಮಿನುಗುತ್ತವೆ. ಜನಪದ ಸಾಹಿತ್ಯ ಹಾಗೂ ಕಲೆಗಳ ಹುಟ್ಟಿಗೆ ಕಾರ್ಯ ಕಾರಣ ಸಂಬಂಧ ಇರಲೇಬೇಕೆಂದಿಲ್ಲ. ಅದೊಂದು ಸಹಜ ಸೃಷ್ಟಿ.

ಗಿಡಗಳಿಗೆ ಎಲೆ ಮೂಡಿ ಕಂಡತೆರನಾಗಿ,
ವನಿತೆಗೆ ಮೊಲೆಮೂಡಿ ಬಂದ ತೆರನಾಗಿ
ಕೋಗಿಲೆಗೆ ಇಂಚರ ಸಂದ ತೆರನಾಗಿ
ಕಾವ್ಯಕನ್ನಿಕೆ ನೀ ಬಂದೆ ಸ್ವರವಾಗಿ

‘ನಾನೀ ಅಂಬೋ ಪೂರ್ಣ ನಾಟಕ’ ಎಂಬ ನನ್ನ ನಾಟಕದ ನಾಟ್ಯಚಾರ್ಯ ಜನಪದ ಸಾಹಿತ್ಯ ಹಾಗೂ ಕಲೆಯ ಹುಟ್ಟಿನ ಬಗ್ಗೆ ಹೇಳುವ ಪರಿ ನೋಡಿ.

ನಾಟ್ಯಾಚಾರ್ಯ ಈ ಜಾನಪದ ಭೂಮಿಮ್ಯಾಗ ಹುಲ್ಲು ಹುಟ್ಟುವಾಂಗ ಹುಟ್ಟಿತು. ಹುಲ್ಲು ಹಾಲಾತು, ಕುದ್ದುಕೆನಿ ಗಟ್ಟಿತು. ಹೆಪ್ಪಕಡದಾಗ ಬೆಣ್ಣಿ ಆತು, ಕಾದು ಕಾದು ತುಪ್ಪಾತು, ಅದರ ಘಮ ಘಮ ಓಣೆಲ್ಲ ಹಬ್ಬಿತು. ಹಬ್ಬ, ಹರಿದಿನ ಜಾತ್ರಿ, ಓಕುಳಿ, ಕಾರ್ತೀಕದಂಥಾ ಸಂದರ್ಭದೊಳಗ ನಟರಾಜನ ಬಳಗಕ್ಕೆ ಎಡಿ ಆಗಿ, ಗಂಗಾಳ ತುಂಬಿ ಹೊರಸೂಸಿತು.. ಇನ್ನೂ ತಿಳಿಯೂವಂಗ ಹೇಳಬೇಕೆಂದರೆ ಚಿಗುರು ಹಾದಂಗ, ಕಟ್ಟಿಗಿ ಕೊಳಲಾದಂಗ, ಗಾಳಿಸ್ವರಾ ಆದಂಗ ಹುಟ್ಟಿತು ಈ ಜಾನಪದ.

ಜನಪದರ ಬದುಕು ಎಷ್ಟು ಸಹಜ ಹಾಗೂ ಸುಂದರವೊ.. ಅಷ್ಟೇ ಸಹಜ ಹಾಗೂ ಸುಂದರ ಜನಪದ ಸಾಹಿತ್ಯ.

ಏಳುತಲೆ ಶಿವನೆನ್ನುವರು ಅವರ ಬದುಕು ಸುಂದರ
ಮಲಗುವಾಗ ಶಿವನೆನನ್ನುವರು ಅವರ ಕನಸು ಸುಂದರ
ನೆನಪು ನಿಮಗ್ನತೆ ಜನಪದ
ಬದುಕಿನಾಧಾರ ಕಾಣು ಸದ್ಗುರು ಬಸವಲಿಂಗ

ಜನಪದ ಗಂಧರ್ವರಿಗೆ ನಾನು ಸಮರ್ಪಿಸಿದ ವಚನ ಇದು. ಕೊಟ್ಟಾಂವಗ, ಕೊಟ್ಟೆ ಅನಬೇಕು. ಇಲ್ದಾವರಿಗೆ ಇಗಾ ಒಂದು ರೊಟ್ಟಿ ಅನಬೇಕು ಇದು ಜನಪದರ ನೀತಿ. ಆದ್ದರಿಂದ ಅವರ ಬೆಳಗು ಆರಂಭವಾಗುವುದು ಕೊಟ್ಟ ಭೂಮಿ ತಾಯಿಯ ಸ್ಮರಣೆಯೊಂದಿಗೆ

ಬೆಳಗಾಗಿ ನಾನೆದ್ದು ಯಾರ್ಯಾರ ನೆನಿಯಲಿ
ಎಳ್ಳು ಜೀರಿಗಿ ಬೆಳಿಯೋಳ ಭೂಮಿಯ
ಎದ್ದೊಂದು ಗಳಿಗಿ ನೆನದೇನ

ಅನ್ನ ಬದುಕಿನಾಧಾರ ಅನ್ನ ಕೊಟ್ಟ ಭೂಮಿತಾಯಿಯನ್ನು ನೆನೆಯದಿದ್ದರೆ ಅನ್ನಗೇಡಿ ಯಾದೇವು ಎಂಬ ನೀತಿ ಇಲ್ಲಿದೆ.

ಹಂತಿಯ ಕಟ್ಟುತಲೆ ಹೆಂತಾವನ ನೆನಿಬೇಕೆ
ಕಾಂತ್ಯಾಳ್ ಪಿತನಾದ ಬಸವಣ್ಣ ನೆನದರ
ತಂಪತ್ತಿನ್ಹಂತಿ ನುರದಾವೊ

ಬಸವಣ್ಣ ಜನಪದ ಜೀವನದ ಆಧಾರಸ್ತಂಭ. ಕಾರ್ಯ, ದಾಸೋಹದ ಮಂತ್ರ ಕಲಿಸಿದಾತ ಅವನನ್ನು ಗಳೆ ಹಂತ ಹೊಡೆಯುವ ಗಂಡಸರಷ್ಟೆ ಅಲ್ಲ ಬೀಸುವ ಹೆಂಗಸರೂ ನೆನೆಯುತ್ತಾರೆ ಹೀಗೆ

ಮುಕ್ಕಿಗಿ ಮೊದಲ ಬಸವನಮಂದರ ಭಾಗ್ಯ ಬಾಗಲದಲ್ಲೇ
ಮುಗಿಸುವ ಮೊದಲ ಬಸವೆನ್ನಿರಿ ಶಿವನ ಸದರಿನಲ್ಲೆ.

ನೀತಿಯಿಂದ ಬಾಳಗೊಟ್ಟ, ಬದುಕು ಕೊಟ್ಟ ಬಸವನನ್ನಷ್ಟೇ ಅಲ್ಲ ಬೀಸಲ ಕಲ್ಲುಕೊಟ್ಟ ತಾಯಿಯನ್ನು ನೆನೆಯಲೂ ಮರೆಯುವುದಿಲ್ಲ. ಜನಪದ ಗರತಿಯರು.

ಕಲ್ಲ ಕೊಟ್ಟವ್ವಗ ಎಲ್ಲ ಭಾಗ್ಯವು ಬರಲಿ
ಪಲ್ಲಕ್ಕಿಮ್ಯಾಗ ಮಗ ಬರಲಿ ಹಡದವ್ನ
ಸೊಸಿಮುದ್ದ ಗಂಡ ಹಡಿಯಲಿ

ಹೀಗೆ ಪ್ರತಿಭೆಯ ಜೊತೆಗೆ ಉಪಕೃತಿ ಸ್ಮರಣೆಯನ್ನು ಬೆರೆಸಿ ಬೆರೆತು ಬದುಕಿದ ಜನಪದರು ಸಾಹಿತ್ಯಕ್ಕೆ ಮೂರು ಸಾಲಿನಲ್ಲಿ ಮಹಾಭಾರತದ ಕತೆಯನ್ನು ಹೇಳುವ ಸಾಮರ್ಥ್ಯವಿದೆ.

ಕಲ್ಲ ಕಡುಬವ ಮಾಡಿ, ಮುಳ್ಳಶ್ಯಾವಿಗಿ ಮಾಡಿ
ಬನ್ನಿ ಎಲಿಯಾಗ ಎಡಿಮಾಡಿ/ಧರುಮರು
ಉಣ್ಣದಲ್ಹೋಗ್ಯಾರ ವನವಾಸ.

ಈ ತ್ರಿಪದಿಯ ಸಾರ್ವತ್ರಿಕತೆ ಅಗಾಧವಾದುದು. ‘ಧರ್ಮವಂತರಿಗೆ ವನವಾಸ ತಪ್ಪಿದ್ದಲ್ಲ, ಅಂತೂ ಇಂತೂ ಕುಂತೀಮಕ್ಕಳಿಗೆ ರಾಜ್ಯ ಸಿಗಲಿಲ್ಲ’ ಎಂಬ ಅನುಭವವಾಣಿಗಳ ಕಾವ್ಯರೂಪ ವಾಗಿದೆ ಈ ತ್ರಿಪದಿ. ಕಲ್ಲಕಡಬು, ಮುಳ್ಳುಶ್ಯಾವಿಗೆ, ಬನ್ನಿ ಎಲೆಯಲ್ಲಿ ಎಡೆಮಾಡುವುದು, ಇವೆಲ್ಲ ಅದ್ಭತ ಪ್ರತಿಮೆಗಳು ಯಾವ ಶಿಷ್ಟಕವಿಗೂ ನಿಲುಕದ ಪ್ರತಿಭೆ ಮೆರೆದ ಜನಪದರ ಹಾಡಿನ ಕಣಜ ಎಷ್ಟು ದೊಡ್ಡದೆಂದರೆ

ಹಾಡ ಹಾಡಂದರ ಹಾಡೇನ ಪಾವನ
ಹಾಡಬಿತ್ಯಾಡ ಬೆಳದೇವ/ಹಗೆ ಹಾಕಿ
ನೀಡಂದ ಗಳಿಗಿ ನೀಡೇವ

ಬಾಹುಳ್ಯ ಅಷ್ಟೇ ಅಲ್ಲ ಭಕ್ತಿಯಿದೆ, ಅಲ್ಲ ಭಕ್ತಿಯಿಂದ ಭವ್ಯತೆಯಿದೆ, ಜೀವನಾನು ಭವವಿದೆ. ವಿನೋದವಿದೆ, ಕೌತುಕವೂ ಇದೆ ಈ ಜನಪದ ಸಾಹಿತ್ಯದಲ್ಲಿ.

ಹಂಪಿಯ ವಿರುಪಾಕ್ಷ ಹೆಂತಲ್ಲಿ ನೆಲೆಸಿದಿ
ಹಿಂತಿಂತಾ ಕಲ್ಲ ಎಡವುತ ನಾ ಬಂದೆ
ಸಂಪ ಕೊಡು ನನ್ನ ತವರಿಗೆ

ಎಂಬ ಗರತಿಯ ಪ್ರಾರ್ಥನೆಯಲ್ಲಿ ಬರಿ ಸ್ವಾರ್ಥವಿಲ್ಲ. ಹೆಂತೆಂತ ಕಲ್ಲ ಎಡವಿ ಬಂದು ಹಂಪೆಯಲ್ಲಿ ನೆಲೆಸಿದೆ ವಿರೂಪಾಕ್ಷ ಎಂಬ ಕಳಕಳಿಯೂ ಇದೆ.

ಹೆಣ್ಣು ಹಡೆದ ಅಕ್ಕನ ಮನೆಗೆ ಹೊಸ ಅಂಗಿ ತೊಟ್ಟುಕೊಂಡು ಬಂದ ತಮ್ಮನ ಮೇಲೆ ಮಗಳು ಉಚ್ಚೆ ಹೊಯ್ದಗ ಅಳತೊಡಗಿದ ಅವನನ್ನು ನಗಿಸಲು ಅಕ್ಕ ಹಾಡುವ ಪರಿನೋಡಿ.

ಉಚಬುರಕಿ ನನ ಮಗಳು ಉಚ್ಚಿಯ ಹೊಯ್ದಳ
ಬಚ್ಚಲ ತುಂಬಿ ಕೆರಿತುಂಬಿ/ನನ ತಮ್ಮ
ಜಕಣಿ ಭಾವೆಂತ ಜಿಗದಾನ
ತೆಂಗಿನ ನೀರಂತ ಕುಡದಾನ….

ಹಾರುವರ ಆಹಾರದ ಮೇಲಿನ ಪ್ರೀತಿಯನ್ನು ಗೇಲಿಮಾಡುತ್ತ ಹಾಡುವ ರೀತಿ ಎಂಥವರಿಗೂ ನಗೆ ತರಿಸುತ್ತದೆ.

ಹಾರೂರ ಮದಿವ್ಯಾಗ ಮಾರುದ್ದ ಶ್ಯಾಮಿಗಿ
ದೊಣ್ಣೀಮ್ಯಾಲ ದೊಣ್ಣಿ ತಿಳಿದುಪ್ಪ ತಿಂದುರ
ಹಾರುವ ನಿನ ಜುಟ್ಟ ನಿಗರ್ಯಾವ

ಹೀಗೆ ಜನಪದ ಸಾಹಿತ್ಯ ವಿಪುಲವಾಗಿರುವಷ್ಟೇ… ವೈವಿಧ್ಯಮಯವೂ ಆಗಿದೆ. ಆದ್ದರಿಂದ ಇದು ಜನ ಇರುವವರೆಗೆ ಇರುತ್ತದೆ. Tristram Coffin ಎಂಬ ಪಾಶ್ಚಾತ್ಯವಿದ್ವಾಂಸ Folklore is a lively fossil that refuses to die ಎಂದು ಹೇಳಿದ ಮಾತು ಗಮನೀಯ ವೆನಿಸುತ್ತದೆ. ಬದುಕಿನ ರೀತಿ, ನೀತಿ ಹಾಗೂ ಗತಿ ಬದಲಾದಂತೆ ಅದರ ಸ್ವರೂಪವೂ ಬದಲಾಗುತ್ತ ಹೋಗಿ ತನ್ನತನ ಉಳಿಸಿಕೊಳ್ಳುತ್ತದೆ ಅಂತೆಯೇ ಈ ಜನಪದ ಸಾಹಿತ್ಯಕ್ಕೆ ಸಾವಿಲ್ಲ. ಇದೇ ರೀತಿಯಲ್ಲಿ ತಮ್ಮ ತಾಜಾತನ ಉಳಿಸಿಕೊಂಡು ಬಂದಿವೆ ಜನಪದ ಕಲೆಗಳು.

ಜನಪದ ಕಲೆಗಳು

ಜನಪದ ಕಲೆಗಳು ಹುಟ್ಟಿದ್ದು ನಮ್ಮ ಹಳ್ಳಿಗಾಡಿನ ಜನರ ಹೃದಯಗಳಲ್ಲಿ, ಅವು ಬೆಳೆದದ್ದು ಅವರ ಮನೆಯಂಗಳದಲ್ಲಿ, ಉಳಿದದ್ದು ಅವರ ಪ್ರೀತಿಯ ತೆಕ್ಕೆಯಲ್ಲಿ. ಈ ಜನಪದ ಕಲೆಗಳು ಗ್ರಾಮ ಜೀವನದ ಹೈನದ ಕೆನೆಯಿದ್ದಂತೆ. ಕೆಚ್ಚಲಿನಿಂದ ಹಾಲು ಹರಿದು ಬಂದಷ್ಟು ಸಹಜವಾಗಿ ಹುಟ್ಟಿಬಂದಂಥವು ಇವು. ನೋಡುಗರಲ್ಲಿ ಕೇಳುಗರಲ್ಲಿ ಆನಂದ ಉಕ್ಕಿಸಿ ಅವರ ಹೃದಯಗಳನ್ನು ಗೆಲ್ಲುವ ಶಕ್ತಿ ಈ ಜನಪದ ಕಲೆಗಳಿಗಿದೆ. ಈ ಕಲೆಗಳಲ್ಲಿ ಹೆಚ್ಚಿನವು ದೈವೀಶಕ್ತಿಯ ಆರಾಧನೆಯ ಹಿನ್ನೆಲೆಯಲ್ಲಿ ಹುಟ್ಟಿ, ಬೆಳೆದು, ಉಳಿದು ಬಂದಿವೆ ಹಾಗೂ ಇವು ಕುಣಿತ ವಾದ್ಯ ಹಾಗೂ ಹಾಡುಗಳ ಸಮ್ಮಿಶ್ರ ಕಲೆಗಳಾಗಿವೆ.

ಜನಪದ ಕಲೆಗಳು ಮತ್ತು ಸಮಾಜ

ಜಾನಪದ ಎಂದರೆ ಗ್ರಾಮಸಮುದಾಯದ ಹಾಡು ಎಂದರ್ಥ. ಆದ್ದರಿಂದ ಸಮಾಜಕ್ಕೂ ಜನಪದ ಕಲೆಗಳಿಗೂ ನಿಕಟವಾದ ಸಂಬಂಧ ಇದೆ. ಎಂತಾಯಿತು. ಸಮಾಜದ ಕ್ಷೇಮ, ಸಮುದಾಯ ಶಿಕ್ಷಣ, ಮನರಂಜನೆ ಹಾಗೂ ನೀತಿ ಬೋಧನೆ ಈ ಕಲೆಗಳ ಉದ್ದೇಶ. ಬರ ಹಾಗೂ ಬೇನೆಗಳು ಸಮುದಾಯವನ್ನು ಕಾಡದಂತೆ ಹುಲುಸು (ಹೆಚ್ಚು ಫಸಲು) ಕೊಡುವಂತೆ ಫಲವತ್ತತೆಯ ದೇವತೆಗಳನ್ನು ಆರಾಧಿಸಿದ್ದಾರೆ. ದುಡಿದು ಬೇಸತ್ತ, ದುಡಿದುಡಿದು ಸತ್ತ ಶ್ರೀಸಾಮಾನ್ಯನಿಗೆ ಮನರಂಜನೆ ನೀಡಲು, ನೀತಿಬೋಧನೆ ಮಾಡಲು ತರತರದ ಹಾಡು ಹಾಡಿದ್ದಾರೆ, ಆಟ ಆಡಿದ್ದಾರೆ. ಅಟ್ಟಹತ್ತಿ ಕುಣಿದಿದ್ದಾರೆ. ಹೀಗಾಗಿ ಈ ಕಲೆಗಳೆಲ್ಲ ಸಮಾಜದ ಪ್ರೇರಣೆಯಿಂದ ಹುಟ್ಟಿ ಸಮಾಜದ ಪೋಷಣೆಯಲ್ಲಿಯೇ ಬೆಳೆದು ಬಂದವುಗಳಾಗಿವೆ.

ಶಿಷ್ಟ ಕಲೆಗಳು ಮತ್ತು ಜನಪದ ಕಲೆಗಳು

ಶಿಷ್ಟಕಲೆಗಳು ಎಂದರೆ ಸುಶಿಕ್ಷಿತರಿಂದ ಹುಟ್ಟಿ ಬೆಳೆದು ಬಂದ ಕಲೆಗಳು. ಇವುಗಳಲ್ಲಿ ಬಹುತೇಕ ಕಲೆಗಳು ಒಂದು ನಿರ್ಧಿಷ್ಟ ಉದ್ದೇಶಕ್ಕಾಗಿ ಹುಟ್ಟಿಕೊಂಡಂಥವಾಗಿವೆ. ಜನಪದರು ಬದುಕನ್ನೇ ಕಲೆಯನ್ನಾಗಿ ಅರಳಿಸಿದ್ದಾರೆ. (ಆದರೆ ಶಿಷ್ಟರು ವಿಶೇಷ ಶ್ರಮಪಟ್ಟು ಈ ಕಲೆಯ ಹುಟ್ಟಿಗೆ ಕಾರಣರಾಗಿದ್ದಾರೆ. ಜನಪದ ಕಲೆಗಳಲ್ಲಿ ದಟ್ಟವಾದ ಮಣ್ಣಿನ ವಾಸನೆಯಿದೆ. ಶಿಷ್ಟಕಲೆಗಳಲ್ಲಿ ಪಾಂಡಿತ್ಯ ಪ್ರದರ್ಶನವಿದೆ. ಕೃತಿಮತೆಯಿದೆ. ಅಪಾರ ಅನುಭವ, ಅಭಿವ್ಯಕ್ತಿಯ ಸಹಜತೆ, ಬದುಕಿನ ಕಲೆಗಳ ಮುಖ್ಯ ಲಕ್ಷಣಗಳು. ಶಿಷ್ಟಕಲೆಗಳಲ್ಲಿ ಇವುಗಳ ಕೊರತೆಯಿದ್ದು ಇವು ಬೌದ್ದಿಕ ಕಸರತ್ತನ್ನು ಅಪೇಕ್ಷಿಸುತ್ತವೆ. ಹೀಗಿದ್ದರೂ ಇವುಗಳಲ್ಲಿ ಸಾಮ್ಯ ಇರುವುದು ಒಂದು ವಿಷಯದಲ್ಲಿ. ಈ ಎರಡೂ ಕಲೆಗಳಿಗಿರುವ ಉದ್ದೇಶ ಒಂದೇ ಜೀವನ ಚಿತ್ರಣ, ಮನರಂಜನೆ ನೀತಿಬೋಧನೆ ಇತ್ಯಾದಿ ಉಪಉದ್ದೇಶಗಳು).

ಪುರಾಣ ಮತ್ತು ಜನಪದ ಕಲೆಗಳು

ಪುರಾಣಗಳಿಗೂ ಜನಪದ ಕಲೆಗಳಿಗೂ ಅವಿನಾಭಾವ ಸಂಬಂಧ ಇದೆ. ಪುರಾಣ ಎಂದರೆ ಸಾಂಪ್ರದಾಯಿಕ ಅಥವಾ ಕಾಲ್ಪನಿಕ ಕತೆ. ಈ ಕತೆ ದೇವ-ದೇವತೆಗಳದಾಗಿರಬಹುದು, ವೀರ -ಧೀರರದೂ ಆಗಿರಬಹುದು. ನಮ್ಮ ಜನಪದ ಕಥಾಕೋಶ ಮತ್ತು ಕಲಾಕೋಶಗಳಲ್ಲಿ ಇಂಥ ಲಕ್ಷಗಟ್ಟಲೆ ಹಾಡು-ಕತೆ ಮತ್ತು ಆಟಗಳಿವೆ. ಉದಾಹರಣೆಗೆ ವಿಷ್ಣು-ವೀರಭದ್ರರ ಅವತಾರದ ಕತೆ, ಪಾರಿಜಾತ (ಪುಷ್ಪ)ದ ಕತೆ ಇತ್ಯಾದಿ. ಬುದ್ಧ, ಬಸವ, ಗಾಂಧಿ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ, ಕೆಂಪೇಗೌಡ, ಮದಕರಿನಾಯಕ, ಟಿಪ್ಪು ಸುಲ್ತಾನ, ಸಂಗೊಳ್ಳಿರಾಯಣ್ಣ ಇವರೆಲ್ಲಾ ಐತಿಹಾಸಿಕ ವ್ಯಕ್ತಿಗಳೆ. ಇವರ ವಿಶಿಷ್ಟ ಶೌರ್ಯ ಸಾಹಸಗಳ ಕತೆಗಳು, ಹಾಡುಗಳು ಬಾಯಿಯಿಂದ ಬಾಯಿಗೆ ಹರಿದುಬಂದಿವೆ. ಇವರೆಲ್ಲ ಈಗ ದಂತಕತೆಯಾಗಿದ್ದಾರೆ, ಪೌರಾಣಿಕ ವ್ಯಕ್ತಿಗಳೆನಿಸಿಬಿಟ್ಟಿದ್ದಾರೆ. ರಾಮಾಯಣ ಮಹಾ ಭಾರತದ ಹಾಡು ಕತೆಗಳಂತೂ ಮನೆಮಾತಾಗಿವೆ. ಇಂಗ್ಲಿಷಿನ ಕವಿ-ಕಲಾವಿದರು ರಾಬಿನ್ ಹುಡ್ ಎಂಬ ಧೀರ-ಕಳ್ಳನನ್ನು ಪುರಾಣಪುರುಷನನ್ನಾಗಿ ಮಾಡಿದ್ದಾರೆ. ಅದರಂತೆ ನಮ್ಮ ಜನಪದ ಕವಿ ಕಲಾವಿದರು ಸಿಂಧೂರ ಲಕ್ಷ್ಮಣ, ಕನ್ನೇಶ್ವರ ರಾಮರಂಥವರನ್ನು ಹುಡುಕಿ ಹೊಗಳಿ ಹಾಡಿದ್ದಾರೆ. ಅವರನ್ನು ಕತೆಯಾಗಿಸಿದ್ದಾರೆ.

ಕರ್ನಾಟಕದ ಕಲೆಗಳ ವೈಶಿಷ್ಟ್ಯ

ಜನಪದ ಕಲೆಗಳ ಸಂಖ್ಯೆ ಮತ್ತು ವೈವಿದ್ಯ ಈ ಎರಡರಲ್ಲೂ ಕರ್ನಾಟಕಕ್ಕೆ ತನ್ನದೇ ಆದ ಸ್ಥಾನವಿದೆ. ಕಲೆಗಳ ಭಂಡಾರವೇ ಇದು ಎನ್ನಿಸಿದೆ. ಜನಪದ ಕಲೆಗಳ ಮಾತು ಬಂದಾಗ ದೇಶದಲ್ಲೇ ಅತಿ ಶ್ರೀಮಂತ ಎನ್ನಿಸಿಕೊಳ್ಳುವ ಮೂರು ರಾಜ್ಯಗಳಲ್ಲಿ ಕರ್ನಾಟಕವೂ ಒಂದು (ಮಧ್ಯಪ್ರದೇಶ ಮತ್ತು ಹರಿಯಾಣ ಉಳಿದೆರಡು ರಾಜ್ಯಗಳು) ಎಂಬುದು ಜಾನಪದ ವಿದ್ವಾಂಸರ ಅಭಿಪ್ರಾಯ.

ಬೀಸುವ ಕುಟ್ಟುವ ಮತ್ತು ಹಂತಿಯ ಹಾಡುಗಳಂಥ ಹಾಡು, ಕರಡಿ-ಕಂಸಾಳೆ, ಕಣಿಯಂಥ ವಾದ್ಯ, ಸೋಮನಕುಣಿತ, ಪಟಕುಣಿತ ಹಾಗೂ ದಟ್ಟಿ ಕುಣಿತದಂಥ ಕುಣಿತ, ದೊಟ್ಟಾಟ ಯಕ್ಷಗಾನ, ಪಾರಿಜಾತಗಳಂಥ ಆಟಗಳು ಕರ್ನಾಟಕದ ಕಲಾ ವೈಶಿಷ್ಟ್ಯಗಳು.

ಪ್ರಕಾರಗಳು

ಈ ಜನಪದ ಕಲೆಗಳಲ್ಲಿ ಹಲವು ಬಗೆಗಳಿವೆ. ಆದರೆ ಅಧ್ಯಯನದ ದೃಷ್ಟಿಯಿಂದ ಈ ಕೆಳಗಿನಂತೆ ನಾಲ್ಕು ಭಾಗಗಳಾಗಿ ವಿಂಗಡಿಸಬಹುದು.

೧. ಜನಪದ ಹಾಡುಗಳು (ಜನಪದ ಸಂಗೀತ)

೨. ಜನಪದ ಕುಣಿತಗಳು (ಜನಪದ ನೃತ್ಯ)

೩. ಜನಪದ ಆಟಗಳು (ನಾಟಕ ಕ್ರೀಡೆ ಇತ್ಯಾದಿ)

೪. ಜನಪದ ವಾದ್ಯಗಳು.

ಒಂದು ಮಾತಿನಲ್ಲಿ ಹೇಳುವುದಾದರೆ ಈ ಜನಪದ ಕಲೆಗಳೆಂದರೆ ಸಂಗೀತ, ನೃತ್ಯ ಮತ್ತು ಅಭಿನಯಗಳ ತ್ರಿವೇಣಿ ಸಂಗಮ. ಯಾವ ರಾಜಾಶ್ರಯವೂ ಇಲ್ಲದೆ ಜನಾಶ್ರಯದಲ್ಲೇ ಬೆಳೆದ ಕಲೆಗಳು ಇವು.

ಕರ್ನಾಟಕದಲ್ಲಿ ನೂರಕ್ಕೂ ಹೆಚ್ಚು ಹಾಡು ಮತ್ತು ವಾದ್ಯಗಳು, ಇನ್ನೂರಕ್ಕೂ ಹೆಚ್ಚು ಕುಣಿತಗಳು, ಹತ್ತು ಹಲವು ಬಗೆಯ ಆಟಗಳು ಇವೆಯೆಂಬುದು ವಿದ್ವಾಂಸರ ಅಭಿಪ್ರಾಯ. ಇವೆಲ್ಲ ಊರಮಧ್ಯದ ಬಯಲಿನಲ್ಲಿ, ದೇವಾಲಯಗಳ ಪ್ರಾಂಗಣಗಳಲ್ಲಿ, ಜಾತ್ರೆ ಉತ್ಸವ ಗಳಂಥ ಸಂದರ್ಭಗಳಲ್ಲಿ ಹುಟ್ಟಿ, ಬೆಳೆದು, ಅರಳಿದ ಕಲೆಗಳು. ಹಾಡುತ್ತ ಆಡುತ್ತ ಬೆಳೆಸಿ, ಉಳಿಸಿಕೊಂಡು ಬಂದ ಸಂಪತ್ತು ಇದು. ಈ ಕಲೆಗಳಲ್ಲಿ ಬಯಲಾಟ ಮತ್ತು ಕ್ರೀಡೆಗಳಿಗೆ ವಿಶಿಷ್ಟವಾದ ಸ್ಥಾನವಿದೆ.

ಜೀವನವೇ ಒಂದು ಆಟ. ಈ ಆಟದಲ್ಲಿ ಹಿಡಿದವ ಮತ್ತು ಜಾರಿಕೊಂಡವ ಇಬ್ಬರೂ ಜಾಣರೆ. ಯಾಕೆಂದರೆ ಈ ಎರಡೂ ಅಪರೂಪದ ಕಲೆಗಳೆ. ಇದನ್ನು ಕಲಿಸುವಂಥ ಹುತೂತು (ಕಬಡ್ಡಿ), ಸಂಗೆರೆ (ಆಟ್ಯಾ-ಪಾಟ್ಯಾ)ದಂಥ ಆಟಗಳಿಗೆ ಕರ್ನಾಟಕ ತವರಾಗಿದೆ. ಅದರಂತೆ ದೊಡ್ಡಾಟ, ಯಕ್ಷಗಾನ, ಶ್ರೀಕೃಷ್ಣ ಪಾರಿಜಾತ, ಸಂಗ್ಯಾಬಾಳ್ಯದಂಥ ಬಯಲಾಟಗಳಿಗೂ ಇದು ನೆಲೆ-ಸೆಲೆ ಒದಗಿಸಿದೆ.

ಈ ಎಲ್ಲ ಆಟಗಳು ನೋಡುವವರಿಗೆ ಮನರಂಜನೆ ನೀಡುತ್ತವೆ, ಆಡುವವರಿಗೆ ದೇಹಕ್ಕೆ ಅಗತ್ಯವಾದ ವ್ಯಾಯಾಮವನ್ನೊದಗಿಸುತ್ತವೆ. ಸಮರಸವೇ ಜೀವನ ಎಂಬುದನ್ನು ಸಾರುತ್ತವೆ. ಆದ್ದರಿಂದಲೇ ಈ ಆಟಗಳು, ಈ ಜನಪದ ಕಲೆಗಳು ಅನಾದಿಕಾಲದಿಂದಲೂ ಉಳಿದು-ಬೆಳೆದು ಬಂದಿವೆ.

* * *