ಬಾಗಲಕೋಟೆ ಜಿಲ್ಲೆಯನ್ನು ಗಮನದಲ್ಲಿಟ್ಟುಕೊಂಡು ವಾಲ್ಮೀಕಿ ಸಮಾಜದ ರಾಜಕೀಯತೆಯನ್ನು ಗ್ರಹಿಸುವುದಾದರೆ ಮೊದಲಿಗೆ ಅರಿವಾಗುವುದು ಹಲಗಲಿ ಬಂಡಾಯ. ಈ ಹಲಗಲಿ ಬಂಡಾಯದಲ್ಲಿ ಪಾಲ್ಗೊಂಡ ಅಸಂಖ್ಯಾತ ಜನರು ವಾಲ್ಮೀಕಿಗಳೇ ಆಗಿದ್ದಾರೆ. ಆದರೆ ಇಲ್ಲಿ ವಾಲ್ಮೀಕಿಗಳೆಂದು ಹೇಳದೆ ಬೇಡ ಬಂಟರೆಂದು ಉಲ್ಲೇಖಿಸುತ್ತೇನೆ. ಬೇಡರು, ವಾಲ್ಮೀಕಿಗಳು ಒಂದೇ ಜನಸಮುದಾಯವಾಗಿರುವುದರಿಂದ ಇದರಲ್ಲಿ ಯಾವುದೇ ವೈರುಧ್ಯತೆ ಗಳಿಲ್ಲ.

ಬೇಡ ಸಮುದಾಯದ ಇತಿಹಾಸವನ್ನು ಪ್ರಾಗೈತಿಹಾಸಿಕ ಕಾಲದಿಂದಲೂ ಗಮನಿಸ ಬಹುದು. ಕರ್ನಾಟಕದ ಅತೀ ಪ್ರಾಚೀನ ಸಮುದಾಯದವಾದ ಬೇಡ ಸಮುದಾಯ ಇಲ್ಲಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೇಟೆಗಾರ ಸಮುದಾಯವಾಗಿ ಮುಂದುವರಿದ ಬೇಡರು, ತಮ್ಮ ಆಯುಧ ಬಳಕೆಯ ಕಲೆ ಹಾಗೂ ಸಾಹಸಿ ಜೀವನದ ಅಂಗವಾಗಿ ಯುದ್ಧಕಲೆ ಯನ್ನು ಅಳವಡಿಸಿಕೊಂಡವರು. ಮಿಕ ಹಿಡಿಯಲು ಬಳಸುವ ನಾನಾ ತಂತ್ರಗಳೇ ಮುಂದೆ ಸಮರವ್ಯೆಹ ರಚನೆಯ ತಳಹದಿಗಳಾದವು. ಬೇಟೆಯ ಜೊತೆಗೆ ವೀರತ್ವವನ್ನು ಬೆಳೆಸಿಕೊಂಡ ಬೇಡ ಸಮುದಾಯವು ನಂತರದಲ್ಲಿ ರಾಜ್ಯ ವಿಸ್ತರಣೆ ಹಾಗೂ ನಿರ್ವಹಣೆಯಲ್ಲಿ ಸಾಮ್ರಾಜ್ಯ ಗಳಿಗೆ ಸೇವೆಸಲ್ಲಿಸಿತು. ಹೀಗೆ ನಾಡಿನಾದ್ಯಂತ ಅವರ ಇತಿಹಾಸದ ತುಣುಕುಗಳು ಮೂಲ ದಿಂದಲೂ ಸಿಗುತ್ತವೆ. ಆ ಎಳೆಯ ಜಾಡಿನಲ್ಲಿಯೇ ವಲಸೆಗಾರರಾಗಿ ಬಂದ ಬೇಡ ಸಮುದಾಯ ಬಾಗಲಕೋಟೆ ಜಿಲ್ಲೆಯಲ್ಲಿ ಗುಡ್ಡದ ವಾರಿಯಲ್ಲಿ ನೆಲೆ ನಿಂತು ಜೀವನ ಸಾಗಿಸುತ್ತಿದ್ದುದು ಬಾದಾಮಿ, ಬಾಗಲಕೋಟೆ, ಬೀಳಗಿ, ಮುಧೋಳ, ಜಮಖಂಡಿ ತಾಲೂಕು ಗಳಲ್ಲಿ ಕಂಡುಬರುತ್ತದೆ. ಮೊದಲನೆಯದಾಗಿ ಅವರ ಪೂರ್ವ ಪಾರಂಪರಿಕ, ಏರು ಪೇರುಗಳೂ ರಾಜಕೀಯದ ಆಸ್ತಿಭಾರವಾಗಿದೆ. ಹಾಗಾಗಿ ಪ್ರಥಮದಲ್ಲಿ ಪೂರ್ವಪಾರಂಪರಿಕ ಏರು ಪೇರೆಂದು ಗುರ್ತಿಸಲಾಗಿದೆ.

ಆದಿಮಾನವನ ಸಮುದಾಯದ ವ್ಯವಸ್ಥೆಯು ಶಿಥಿಲಗೊಂಡ ನಂತರ ಪ್ರಪ್ರಥಮವಾಗಿ ವರ್ಗವಿಭಜನೆ ಕಾಣಿಸಿಕೊಳ್ಳುತ್ತದೆ. ಈ ಆದಿಮಾನವನ ಸಮುದಾಯ ವ್ಯವಸ್ಥೆಯು ಶಿಥಿಲ ಗೊಂಡು ವರ್ಗ ಸಮಾಜವು ಅಸ್ತಿತ್ವದಲ್ಲಿ ಬಂದದ್ದು ಸುದೀರ್ಘ ಕಾಲದ ಬೆಳವಣಿಗೆಯ ಪರಿಣಾಮವಾಗಿ, ಹಾಗೇ ಆಯಾ ಕಾಲ ಘಟ್ಟದಲ್ಲಿಯೇ ಗಮನಿಸಿದಾಗ ಸುಮಾರು ಜಾತಿ ಸಮುದಾಯಗಳನ್ನು, ಮತ-ಬೇಧಗಳನ್ನು ಕೂಡ ಕಾಣಬಹುದಾಗಿದೆ. ಅಲ್ಲದೇ ಆಯಾ ಸಮುದಾಯಗಳವರಿಗೆ ಪಾರಂಪರಿಕತೆ ತಿಳಿದು ಬರುತ್ತದೆ.

ಬಹುತೇಕ ಇಲ್ಲಿನ ಬೇಡ ಸಮುದಾಯ ಈಗಾಗಲೇ ಪೀಠಿಕೆಯಲ್ಲಿ ಹೇಳಿದಂತೆ ವಲಸೆ ಬಂದವರೇ ಆಗಿದ್ದಾರೆ. ಅಲ್ಲದೇ ಅವರ ಮೂಲ ಪುರುಷರು ಸುರಪುರ, ಕಂಪಿಲದುರ್ಗದಲ್ಲಿ, ಸಾಗರದಲ್ಲಿ ಗೌಡರಾಗಿ, ದೇಸಗತಿಯವರಾಗಿದ್ದರೆಂದು ಅವರ ವಂಶಾವಳಿಯಿಂದ ತಿಳಿದು ಬರುತ್ತದೆ. ಮ್ಯಾಸ ನಾಯಕರೆಂದು ಹೇಳಿಕೊಳ್ಳುವ ವಾಲ್ಮೀಕಿಗಳು ಬಹುಪಾಲು ಬಾದಾಮಿ ತಾಲೂಕಿನ ಕೆರೂರು ಗ್ರಾಮದಲ್ಲಿ ಕಾಣಸಿಗುತ್ತಾರೆ. ಇವರೂ ಕೂಡ ವೇಷಗಾರರಾಗಿದ್ದು ಕೊಂಡು ನೀರು ಬೂದಿಹಾಳ ದೇಸಗತಿಯ ಕಾವಲುಗಾರರಾಗಿ ಐದಾರು ತಲೆಗಳಿಂದ ಸೇವೆ ಸಲ್ಲಿಸಿ, ತಮ್ಮದೇ ಸಮುದಾಯದಲ್ಲಿ ಜಂಗೀ ನಾಯಕರೆಂದು ಕರೆದುಕೊಂಡದ್ದು ವಿಶೇಷ ಎನಿಸುತ್ತದೆ. “ಜಂಗಿ” ಅಂದರೆ ನ್ಯಾಯ ನಿರ್ಣಯ ಮಾಡುವವರೆಂದು ತಿಳಿದು ಬರುತ್ತದೆ. ತಮ್ಮ ಸಮುದಾಯದ ಯಾವುದೇ ನ್ಯಾಯಗಳು ಕೋರ್ಟು ಕಛೇರಿಗೆ ಹೋಗಿರದೆ ನಾಲ್ಕಾರು ಜನ ಹಿರಿಯರು ತಮ್ಮದೇ ಪಂಚಾಯತಿ ಸೇರಿಸಿ ನ್ಯಾಯಧೀಕರಣದಂತ ಕಾನೂನು ಚೌಕಟ್ಟಿ ನೊಳಗೆ ಬದುಕುತ್ತಿದ್ದಾರೆ. ಈ ಜನರ ಇನ್ನೊಂದು ಮುಖ್ಯವೆಂದರೆ ಬೇರೆ ಸಮುದಾಯದವ ರೊಡನೆ ಸೇರದೇ ಇರುವುದು. ಅಂದರೆ ತಮ್ಮ ನೆರಳಿಗೆ ತಾವೇ ಹೆದರುವ ಈ ಬೇಡ ಸಮುದಾಯ ತಮ್ಮ ಕ್ಷೇತ್ರದಲ್ಲಿ ತಾವೇ ಮುಂದುವರಿದವರೆಂದು ಇದರಿಂದ ಮನವರಿಕೆ ಯಾಗುತ್ತದೆ.

ಒಂದು ನ್ಯಾಯಾಧೀಕರಣದಂತ ನಿರ್ಣಯ ಕೈಕೊಂಡದ್ದು ಅಪರೂಪವೆನಿಸಿದೆ. ಅದು ಹೀಗಿದೆ. ಆಕಸ್ಮಿಕವಾಗಿ ಒಂದು ಹೆಣ್ಣಿನ ಜೊತೆಗೆ ಎರಡನೇ ಮದುವೆ ಮಾಡಿಕೊಂಡಿದ್ದರಿಂದ ಆ ಕುಟುಂಬವನ್ನು ತಮ್ಮ ಸಮಾಜದಿಂದ ಬಹಿಷ್ಕರಿಸಿದ್ದು ಅಲ್ಲದೇ ಎಲ್ಲೇ ಹೋದರೂ ನೆಲೆ ಸಿಗದಂತೆ ಕೋರ್ಟ್ ತೀರ್ಪಿನಂತೆ ವಾಸ್ತವದಲ್ಲೂ ಕಾಣಸಿಗುತ್ತದೆ. ಅವರದೇ ಆದ ಒಂದು ತೀರ್ಮಾನವನ್ನು ಮೀರಿ ಪ್ರಜಾಪ್ರಭುತ್ವದಲ್ಲಿ ಹೇಗಾದರೂ ಬದುಕ ಬಹುದಿತ್ತು, ಆದರೆ ತಮ್ಮ ಸಮುದಾಯದ ಬೇಲಿಯನ್ನು ದಾಟಿ ಬಾರದಿರುವುದೇ ಇದಕ್ಕೆ ಕಾರಣವಾಗಿದೆ. ತಮ್ಮ ಪರಿಸರವಾಗಲಿ, ಸಮುದಾಯವಾಗಲಿ ಒಂದು ಸಾಮಾಜಿಕ ಕಟ್ಟಳೆ ನಿರ್ಬಂಧಗಳು ಎಂತಹ ದಿಗ್ಬ್‌ಂಧನಗಳನ್ನು ಹಾಕಿ ತಮ್ಮ ಹಿಡಿತದಲ್ಲಿಟ್ಟುಕೊಂಡಿವೆ ಎಂಬುದು ಇದರಿಂದ ತಿಳಿದುಬರುತ್ತದೆ. ಇನ್ನೂ ಮುಂದುವರಿದಂತೆ.

ಇವರು ಕತ್ತಲ ಭೂ ಕಂಡದೊಳಗೆ ಇದ್ದು ತಮ್ಮನ್ನು ತಾವೇ ನೋಡಿಕೊಳ್ಳದ ಅಲಕ್ಷಿತರು, ಮುಖಾಮುಖಿ ಸಂವಹನದಿಂದ ದೂರವಿದ್ದವರು ಇದ್ದುದರಲ್ಲಿಯೇ ಸುಖ ಹಂಚಿಕೊಂಡವರು ವರ್ತಮಾನದ ಶಿಕ್ಷಣ ಸಾರ್ವತ್ರೀಕರಣದಿಂದ ಬೆಳಕು ಪಡೆದುಕೊಂಡವರಾಗಿದ್ದಾರೆ. ಒಂದನ್ನು ನೆನಪಿಟ್ಟುಕೊಳ್ಳುವುದಾದರೆ ಇವರಿಗೆ ಸಿಕ್ಕಂತ ಶಿಕ್ಷಣ ಪಶ್ಚಿಮ ಮುಖಿಯಾದುದೇ ಹೊರತು ಪೂರ್ವದ ಬೆಳಕಲ್ಲ. ಹಾಗಾಗಿ ಇನ್ನೂ ದಾಸ್ಯದಲ್ಲಿದ್ದುದು ಕಂಡುಬರುತ್ತದೆ. ಜಾಗತೀಕರಣದ ಹಿನ್ನೆಲೆಯಲ್ಲಿ ನೋಡಿದಾಗ ಇವರ ವ್ಯಕ್ತಿತ್ವ ಬೆಳವಣಿಗೆ ತೀರಾ ಹಿಂದುಳಿದುದೇ ಆಗಿದೆ.

ಸ್ವಲ್ಪ ಪ್ರಾಚೀನತೆಯತ್ತ ದೃಷ್ಟಿ ಹರಿಸಿದಾಗ ಏಕಲವ್ಯನಂತಹ ಮುಗ್ಧ ಜನ ತುಳಿತಕ್ಕೆ ಒಳಗಾಗಿದ್ದುದು ಆಗಿದೆ. ಇಲ್ಲಿ ಪ್ರಮುಖವಾಗಿ ಏಕಲವ್ಯನನ್ನು ಎತ್ತಿಕೊಂಡಾಗ ತಿಳಿಯುವುದು ಹೀಗೆ, ಏಕಲವ್ಯನು ದ್ರೋಣಚಾರ್ಯರೇ ಬಿಲ್ವಿದ್ಯೆ ಕಲಿಸಿದರೆಂಬ ನಂಬಿಕೆಯಿಂದ ವಿವೇಕವನ್ನು ಮರೆತು ದ್ರೋಣಾಚಾರ್ಯರಿಗೆ ಹೆಬ್ಬೆರಳನ್ನು ಕತ್ತರಿಸಿ ಕೊಟ್ಟಿದ್ದು ಎಷ್ಟು ಸಮಂಜಸ! ಅದು ಏಕಲವ್ಯನ ಹೆಬ್ಬೆರಳಲ್ಲ ಇಡೀ ತನ್ನ ಸರ್ವಸ್ವ ಎನ್ನುವ ಉಪಾದಿಯಾಗಿದೆ. ಇನ್ನೊಂದ ರ್ಥದಲ್ಲಿ ಬೇಡ ಬಾಲಕನ ಅದ್ಭುತ ವಿದ್ಯೆಯನ್ನು ಕಬಳಿಸಲೆಂದೇ ದ್ರೋಣರು ಪಾಂಡವರ ಪಕ್ಷವಹಿಸಿ ಹೊಂಚು ಹಾಕಿದ್ದು ಆ ದಿನದ ರಾಜಕೀಯತೆ ಆಗಿದೆ. ಒಂದರ್ಥದಲ್ಲಿ ಗ್ರಹಿಸುವು ದಾದರೆ ಬೆಳೆಯುವ ಮೊಳಕೆಯನ್ನು ಅಂದೇ ಚಿವುಟಿ ಹಾಕಿದ್ದರಿಂದ ಅಂಧಕಾರದಲ್ಲಿ ಮುಳುಗುತ್ತ ಬದುಕಿದ್ದು ವಾಸ್ತವದಲ್ಲೂ ಕಂಡುಬರುತ್ತದೆ. ಆದರೂ ಕೂಡ ತನ್ನ ಎಡಗೈ ಬಂಟನಾಗಿ ಸಾಧಿಸಿ, ಬೇಧಿ ಬೆಳೆದುದಕ್ಕೆ ಈ ದಿನದ ಸಮುದಾಯವು ತನ್ನ ಏಳ್ಗೆಯನ್ನು ಸ್ವಾತಂತ್ರ್ಯ ನಂತರದಲ್ಲಿ ಹೊಸ ಹೆಜ್ಜೆ ಹಾಕಿದ್ದು ಅಂಥವರ ಧೀರತನ, ವೀರತನಕ್ಕೆ ಸಾಕ್ಷಿ ಯಾಗಿದ್ದು ಮುಂದಿನ ಚರ್ಚೆಯಲ್ಲಿ ಗಮನಿಸಬಹುದಾಗಿದೆ.

ಸ್ವಾತಂತ್ರ್ಯ ಪೂರ್ವದ ರಾಜಕೀಯತೆ

ಪ್ರಖ್ಯಾತಿ ಪಡೆದ ಈ ಜನ ಸಮುದಾಯ ಕಾಲ ಉರುಳಿದಂತೆ ಮೇಲ್ವರ್ಗದ ಜನರು ತುಳಿತಕ್ಕೆ ಒಳಪಡಿಸುತ್ತ ಬಂದಿದ್ದರೂ ವಂಶ ಪಾರಂಪರ್ಯದಿಂದ ಬೆಳೆದು ಬಂದಿರುವ ಇವರ ಕೆಚ್ಚೆದೆಯ ಮನೋದಾರ್ಢ್ಯದಿಂದ, ಧೈರ್ಯ ಶೌರ್ಯಾಧಿ ಗುಣಗಳಿಂದ, ಆಡಳಿತ ದಕ್ಷತೆ ಯಿಂದ ಪ್ರತಿ ಕಾಲಕ್ಕೂ ಕೀರ್ತಿಗಳಿಸುತ್ತ ಇತಿಹಾಸದಲ್ಲಿ ಮಿಂಚಿದ್ದಾರೆ. ಒಂದನ್ನು ಗಮನಿಸುವು ದಾದರೆ ವಾಲ್ಮೀಕಿಗಳನ್ನು ಸಾಮಂತರು, ಮಾಂಡಲೀಕರು, ಅರಸರು ತಮ್ಮ ಸೈನ್ಯಕ್ಕೆ ಸೇರಿಸಿ ಕೊಳ್ಳಲಾರಂಭಿಸಿದರು. ಈ ನಾಡಿನ ಎಷ್ಟೋ ದೇಸಗತಿ ಮನೆತನಗಳಲ್ಲಿ ಕೂಡ ಬೇಡ ಪಡೆಯೇ ಪ್ರಮುಖ ಮುಂಚೂಣಿಯಲ್ಲಿತ್ತೆಂಬುದು ನನ್ನದೇ ಆದ ಬಾಗಲಕೋಟೆ ಜಿಲ್ಲೆಯ ದೇಸಗತಿ ಮನೆತನಗಳು ಎಂಬ ಮಹಾ ಪ್ರಬಂಧದಿಂದ ತಿಳಿದು ಬರುತ್ತದೆ. ಇದಕ್ಕೊಂದು ಪ್ರಮುಖ ಕಾರಣವನ್ನು ಇಲ್ಲಿ ಗುರುತಿಸಬಹುದು. ಅರಣ್ಯ ವಾಸಿಗಳಾದ್ದರಿಂದ ಬೇಟೆ ವೃತ್ತಿಯು ಉಪಜೀವನವಾಗಿರುವುದರಿಂದ, ಧೀರರು, ನುರಿತ ಹೋರಾಟಗಾರರಾಗಿದ್ದರಿಂದ ಸೈನ್ಯದಲ್ಲಿ ಇವರಿಗೆ ಆದ್ಯತೆ ದೊರೆಯುತ್ತ ಬಂದಿರಬೇಕೆನಿಸುತ್ತದೆ.

“ಜಗತ್ತಿನಲ್ಲಿ ಬೇಡರಷ್ಟು ಶೂರರು ಸಿಗಬಹುದು. ಆದರೆ ಬೇಡರಿಗಿಂತ ಶೂರರು ದೊರೆಯಲಾರರು” ಎಂದು ವಿಲಿಯಂ ಸ್ಮಿಥ್ ಹೇಳಿದ್ದಾರೆ. ಈ ಮಾತಿನ ದಾಟಿಯಲ್ಲಿ ಅವರ ಶೂರತನದ ವ್ಯಕ್ತಿತ್ವಕ್ಕೆ, ಪ್ರತಿಷ್ಟೆಗೆ ಇದೊಂದೇ ಮಾತು ಸಾಕೆನಿಸುತ್ತದೆ. ತೇರದಾಳ ನಾಡಿನ ದೇಸಗತಿಯಲ್ಲಿ ನೂರಾರು ಬೇಡರ ಪಡೆ, ನೀರಬೂದಿಹಾಳ ದೇಸಾಯರಲ್ಲಿ ನೂರಾರು ಬೇಡರು, ಉಳಿದೆಡೆಗೆ ಚಿಕ್ಕ ಪುಟ್ಟ ಪಡೆಗಳು ಸಿಗುತ್ತವೆ. ನಿಷ್ಟಾವಂತ ಸೈನಿಕರಾಗಿ ಪ್ರಾಣದ ಹಂಗು ತೊರೆದು ಹೋರಾಡಿದ ಬೇಡರು, ತಮ್ಮ ದೊರೆಗಳ ಮೆಚ್ಚುಗೆ, ವಿಶ್ವಾಸಗಳಿಸಿದವರು. ಇಂಥ ಬೆಳವಣಿಗೆಯ ಹಂತದಲ್ಲಿ ಸೇನಾ ನಾಯಕ ಬೇಡ ಕುಲಕ್ಕೆ ನಾಯಕ ಪಟ್ಟ ಸಿಕ್ಕಿದ್ದು ಅಲ್ಲದೇ ಸ್ಥಾನಿಕ ದೊರೆಗಳಾಗಿ ತಮ್ಮ ಸಮುದಾಯದಲ್ಲಿ ಪಂಚರಾಗಿದ್ದು ವಿವಿಧ ಹುದ್ದೆಯ ನೆಪದಲ್ಲಿ ರಾಜಕೀಯ ಪ್ರವೇಶಕ್ಕೆ ಮಣೆಹಾಕಿದ್ದುದು ಸ್ಥಾನಿಕ ಸಂದರ್ಶನದ ಮೂಲಕ ತಿಳಿದುಬರುತ್ತದೆ.

ಈ ಭಾಗದ ಬಹುದೊಡ್ಡ ಹೋರಾಟಗಾರರೆಂದರೆ “ಹಲಗಲಿ ಬೇಡರು”, “ಬಂಟನೂರ ಬೇಡರು” ನಾಡಿಗೋಸ್ಕರ ತಮ್ಮ ಪ್ರಾಣವನ್ನೇ ಪಣವಾಗಿಟ್ಟ, ತಮ್ಮಮನೆ, ಮಕ್ಕಳು, ಮಡದಿಯರ ವ್ಯಾಮೋಹವನ್ನು ಧಿಕ್ಕರಿಸಿ ಬಂಧು-ಬಳಗದವರನ್ನು, ಐಶ್ವರ್ಯವನ್ನು ಸುಖ ಸಂಪತ್ತನ್ನು ಕಡೆಗಣಿಸಿ ಹೋರಾಡಿದ ವೀರ ತರುಣರು, ಶೌರ್ಯ ಪರಾಕ್ರಮಗಳಿಂದ ವೈರಿಗಳ ಎದೆ ನಡುಗಿಸಿ, ಬ್ರಿಟೀಷರನ್ನು ಸದೆ ಬಡಿದು, ಹಿಂದೂ ಧರ್ಮಕ್ಕೆ ಹಿಂದೂ ಸಂಸ್ಕೃತಿಗೆ ಪರಕೀಯರಿಂದ ಗಂಡಾಂತರ ಬಂದಾಗ ಗಂಡುಗಲಿಗಳಾಗಿ ಹೋರಾಡಿ ರಕ್ಷಿಸಿದ ಪ್ರಥಮ ಹೋರಾಟಗಾರರೇ ಈ ವೀರನಾಯಕರು ಹಲಗಲಿ ಬಂಟರು. ಯಾವ ಅರಸೊತ್ತಿಗೆಯ, ಸಂಸ್ಥಾನಗಳ ನೆರವಿಲ್ಲದೆ ತಮ್ಮ ಸ್ವಾಭಿಮಾನಕ್ಕೆ ದಕ್ಕೆ ತಂದ ಸಾಮ್ರಾಜ್ಯ ಶಾಹಿಗಳ ವಿರುದ್ಧ ಸಮರ ಸಾರಿ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಅವರ ವೈಯಕ್ತಿಕ ರಾಜಕೀಯತೆಯ ಕೆಲವು ಮಾತನ್ನು ಉಚ್ಚರಿಸುವುದು ಸೂಕ್ತವೆನಿಸುತ್ತದೆ. ಜನತೆಯಲ್ಲಿ ಭಯ, ಭೀತಿ, ವಾತಾವರಣ ನಿರ್ಮಿಸಿ ನಿಶ್ಯಸ್ತ್ರೀಕರರನ್ನಾಗಿ ಮಾಡಿ ಕಿಡಿಯನ್ನು ಹೊಸಕಿ ಹಾಕಬೇಕೆನ್ನುವದು ಪರಂಗಿಯವರ ಉತ್ಕಟೇಚ್ಛೆ. ಆದರೆ ಅವರಿಗೆ ಗೊತ್ತಿಲ್ಲ! ಕಿಡಿ ನಂದದೇ ಉರಿಯುವ ಪಂಜಾಗಿ ತಮ್ಮ ಹುಲ್ಲಿನ ಬಣವೆಯನ್ನು ಆಹುತಿ ತೆಗೆದುಕೊಳ್ಳುತ್ತದೆನ್ನುವದು, ಕುತಂತ್ರವೇ ಮೈಮೇಲೆ ಇಂಚಿಂಚಾಗಿ ನಮ್ಮನ್ನು ನುಂಗುತ್ತ ಬಂದ ಆಂಗ್ಲರು ಶಾಶ್ವತವಾಗಿ ಇಲ್ಲಿ ತಳ ಊರಬೇಕೆನ್ನುವ ಉದ್ದೇಶದಿಂದ ಹೊಸ ಹೊಸ ಕಾನೂನಿನ ಸಂಕೋಲೆಯಿಂದ ನಮ್ಮನ್ನು ಬಿಗಿಯ ತೊಡಗಿದರು. ಬಿಗಿತವನ್ನು ಸಡಿಲಿಸಿಕೊಳ್ಳಲು ಪ್ರಯತ್ನಿಸಿದ ನಮಗೆ ಆಸೆಯೊಡ್ಡಿ ದರು, ಹೆದರಿಸಿದರು, ಲಾಠಿಯಿಂದ ಹೊಡೆದರು, ಬೂಟಿನಿಂದ ಒದ್ದರು, ಗುಂಡಿಕ್ಕಿ ಕೊಂದರು, ಅಟ್ಟಹಾಸಗೈದರು.

ಇಂಥ ಹೀನ ಕೃತ್ಯ ಬೇಡ ಬಂಟರಿಗೆ ಅಪಥ್ಯವೆನಿಸಿತು. ಹತ್ಯಾರ ಕೊಡಲಿಕ್ಕೆ ಹೆಂಗಸಾಗಿ ಬಳಿ ಇಟ್ಟಿಲ್ಲ ಕೈಯಾಗ, ಜೀವ ಹೋದರೂ ಕೊಡುದಿಲ್ಲ. ಅಲ್ಲದೆ ಮಗ್ಗುಲದಾಗಿನ ಹೆಣತಿ ಕೊಟ್ಟಾಂಗ ಅತಿ ಹೇಡಿ ಆತಲ್ಲಾ ಸತ್ತ/ಹೆಣಕ ಶೃಂಗಾರ ಮಾಡಿದ ಪರಿ ಆದಿತಲ್ಲಾ ಎನ್ನುವುದು ದೇಶ ಪ್ರೇಮಿಗಳ ಎದೆಯನ್ನು ನಡುಗಿಸುವಂತಾಯಿತು. ಎಲ್ಲೆಲ್ಲಿ ಸಾಹಸ ಕಾರ್ಯಗಳು ಜರುಗುತ್ತಿದ್ದವೋ ಅಲ್ಲೆಲ್ಲಾ ನೆರವು ನೀಡುತ್ತಾ ಎಲ್ಲರೊಂದಿಗೆ ಬೆಲ್ಲದಂತಿದ್ದ ಮುಗ್ದ ಬೇಡರ ಮನೋಭಾವನೆಯನ್ನು ಆತ್ಮಾಭಿಮಾನವನ್ನು ಕೆರಳಿಸಿದಾಗ ಹಠಾತ್ತನೆ ವೈರಿಗಳ ಮೇಲೆ ಬಿದ್ದು ಭರ್ಜಿ ಎಸೆದರು, ಕವಣೆಗಲ್ಲು ತೂರಿದರು, ಕುದುರೆಗಳ ಕಾಲು ಕಡಿದರು, ಹೀಗೆ ಉಭಯ ಬಣಗಳಲ್ಲಿ ಅಪಾರ ಸಾವು ನೋವು ಸಂಭವಿಸಿದರೂ ಬೇಡರ ಪಡೆ ಧೈರ್ಯ ಕಳೆದುಕೊಳ್ಳಲಿಲ್ಲ. ತಮ್ಮ ಜೀವನದಲ್ಲಿ ಸಂಪೂರ್ಣ ಹೊಸತನವನ್ನು ಅಳವಡಿಸಿಕೊಳ್ಳದೇ ಸ್ವಂತಿಕೆಯನ್ನು ಉಳಿಸಿಕೊಳ್ಳಲು ವಿಫಲ ಪ್ರಯತ್ನ ನಡೆಸಿದರು. ಈ ಬುಡಕಟ್ಟು ಸಮುದಾಯವು ಕಾಡಿನ ಸಂಸ್ಕೃತಿಯಿಂದ ನಾಡಿನ ಸಂಸ್ಕೃತಿಯನ್ನು ರೂಢಿಸಿ ಕೊಂಡರು. ಈ ನಾಡಿಗಾಗಿ ಪ್ರಾಣವನ್ನೇ ಮುಡುಪಾಗಿಡಲು ವೈಯಕ್ತಿಕವಾಗಿ ಹೋರಾಟ ಮಾಡಿದ್ದು ಅದ್ಭುತ ಸಾಧನೆಯಾಗಿದೆ.

ಒಂದರ್ಥದಲ್ಲಿ ಗಮನಿಸುವುದಾದರೆ ಸಾಮ್ರಾಜ್ಯ ದಬ್ಬಾಳಿಕೆಯ ಆಳ್ವಿಕೆಗೆ ತುತ್ತಾದ ಭಾರತದ ಬಿಡುಗಡೆಯ ಪ್ರಪ್ರಥಮ ಪ್ರಯತ್ನಗಳು ನಡೆದದ್ದು ಕರ್ನಾಟಕದಲ್ಲಿ ಎಂಬುದು ಕನ್ನಡಿಗರ ಸ್ವಾಭಿಮಾನ, ಸ್ವಾತಂತ್ರ್ಯ ಪ್ರಿಯತೆಗೆ ಸಾಕ್ಷಿಯಾಗಿದೆ. ೧೮೫೭ರಲ್ಲಿ ಹೊತ್ತಿಕೊಂಡ ರಾಷ್ಟ್ರೀಯ ವಿಪ್ಲವದಾವಾಗ್ನಿಯಲ್ಲಿ ಭಾರತೀಯರು ಪ್ರಕಟಿಸಿದ ವೀರ ಸಾಹಸಗಳಿಗೂ ಪ್ರಾಣಾಂತಿಕ ಪ್ರತಿಭಟನೆಗಳಿಗೂ ತ್ಯಾಗ ಬಲಿದಾನಗಳಿಗೂ ಅಸಂಖ್ಯಾತ ನಿದರ್ಶನಗಳಿವೆ.

ಇತಿಹಾಸದಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದುಕೊಂಡು ಬಂದಿರುವ ಈ ಎಲ್ಲ ಹೋರಾಟ ಅಧಿಕಾರಕ್ಕಾಗಿ ಅಲ್ಲ; ಅವರ ಮುಂದಿದ್ದು ತಮ್ಮ ರಕ್ಷಣೆ ಜೊತೆಗೆ ಬದುಕು ಎಂಬ ಕೂಗೂ ಕೂಡ ಕೇಳಿ ಬರುತ್ತದೆ. ಈ ಹೋರಾಟ ಕೇವಲ ಹಲಗಲಿ ಬಂಟನೂರಕ್ಕೆ ಸೀಮಿತವಾಗಿ ಅಲ್ಲದೇ ಬಾಗಲಕೋಟೆ ಜಿಲ್ಲೆಯಾದ್ಯಂತ ಪಸರಿಸಿದ್ದಿತೆಂದು ಮನವರಿಕೆ ಯಾಗುತ್ತದೆ ಅನೇಕಾನೇಕ ಸ್ತ್ರೀಪುರುಷರಾಧಿಯಾಗಿ ಹೋರಾಡಿದ್ದು ಇತಿಹಾಸ ಪ್ರಸಿದ್ದಿ ಯಾಗಿದೆ. “ಸಿಂಧೂರ ಲಕ್ಷ್ಮಣ” ಕೂಡ ಹಲವು ಕಾಲ ಏಕಾಂಗಿಯಾಗಿ ಹೋರಾಡಿದನು. ಸಿಂಹದಂತೆ ಸಂಚರಿಸುತ್ತಿದ್ದ ಇವನನ್ನು ಬ್ರಿಟೀಷರು ಮೋಸದಿಂದ ಸೆರೆ ಹಿಡಿದ ಘಟನೆ ಇತಿಹಾಸದಿಂದ ಇನ್ನೂ ಮಾಸಿಲ್ಲ. ಹೀಗೆ ವೈಯಕ್ತಿಕವಾಗಿ ಹೋರಾಟ ಮಾಡಿದ ಇವರ ಧೈರ್ಯ, ಸಾಹಸ, ಶೂರತನ ಮರೆಯುವಂತಿಲ್ಲ.

ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಬೇಡರು ಸಾಮ್ರಾಜ್ಯ ಶಾಹಿ ವಿರುದ್ಧ ಸಿಡಿದೆದ್ದು ನಡೆಸಿದ ಹೋರಾಟದಲ್ಲಿ ಸ್ವಾಭಿಮಾನವಿದೆ, ದೇಶಾಭಿಮಾನವಿದೆ, ಇಂತಹ ಹೋರಾಟದ ಮೂಲಕ ಇಡೀ ನಾಡಿಗೆ ಬಂಡಾಯದ ರೂಪು ನೀಡಿದ ವಾಲ್ಮೀಕಿ ಸಮುದಾಯದ ವೀರರ ನೆನಪನ್ನು ಚಿರಾಯುಯಾಗಿಸುವ ಪ್ರಯತ್ನಗಳು ಅವರ ವೈಯಕ್ತಿಕ ರಾಜಕೀಯ ಪ್ರವೇಶಕ್ಕೆ ಆಸ್ತಿಭಾರವಾಗಿರುವುದೆಂದು ಭಾವಿಸುತ್ತೇನೆ.

ಸ್ವಾತಂತ್ರ್ಯ ನಂತರದ ರಾಜಕೀಯ ಸ್ಥಿತಿಗತಿಗಳು

ಇಡೀ ಭಾರತ ದೇಶವೇ ಇಂದು ಸಾಮಾಜಿಕ, ಆರ್ಥಿಕ, ರಾಜಕೀಯ ಪರಿವರ್ತನೆಯತ್ತ ಮುಖ ಮಾಡಿರುವ ಕಾರಣ ಇದರ ಪರಿಣಾಮಗಳು ಎಲ್ಲ ಜಾತಿ-ಸಮುದಾಯಗಳ ಮೇಲೂ ಕಾಣಿಸಿಕೊಂಡಿವೆ. ಕಳೆದ ಶತಮಾನದ ಮಹತ್ತರ ಕಾಲ ಖಂಡದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಈಗ ಭಿನ್ನವಾಗಿ ಕಾಣಿಸಿಕೊಂಡಿತು. ಅಂದಿನ ದೇಶೀಯ ಹೋರಾಟಗಾರರು ಇಂದಿನ ಸಮುದಾಯಕ್ಕೆ ಪರಿಚಿತರಾಗಿ ವಾಸ್ತವಿಕವಾಗಿ ವ್ಯವಹಾರಿಕವಾಗಿ ಕಾಣುತ್ತಿಲ್ಲ. ಇದಕ್ಕೆ ಇತರೆ ಕಾರಣಗಳೇನೇ ಇರಲಿ ಸ್ವಾತಂತ್ರ್ಯ ನಂತರ ವಾಲ್ಮೀಕಿ ಸಮುದಾಯದ ಅಂದಿನ ಸ್ಮೃತಿಗಳೊಂದಿಗೆ ದಾಸ್ಯದಿಂದ ಬಿಡುಗಡೆಗೊಳ್ಳುವ ಹೋರಾಟ, ಅವಿದ್ಯೆ, ಶೋಷಣೆ ಅಸ್ಪೃಶ್ಯತೆಗಳಿಂದ ಹೊರ ಬರುವ ಸಾಧ್ಯತೆಗಳನ್ನು ತೋರಿಸುವುದು ಸೂಕ್ತವೆನಿಸುತ್ತದೆ.

ಗ್ರಾಮಾಂತರ ಪ್ರದೇಶಗಳಲ್ಲಿರುವ ಮೌಲ್ಯಾದರ್ಶಗಳು ಎಂತಹ ಪವಾಡ ಸದೃಶ ಕೆಲಸ ಮಾಡಿದವು ಎಂಬುದನ್ನು ಯೋಚಿಸಿದರೆ ಅಚ್ಚರಿಯಾಗುತ್ತದೆ. ಅಂದು ಯಾವ ಸೌಲಭ್ಯ ಗಳಿರಲಿಲ್ಲ. ಸಂಪರ್ಕ ಸಾಧನಗಳಿರಲಿಲ್ಲ. ನಾಳೆಯ ಭರವಸೆಯ ನೆಚ್ಚುಗಳಿರಲಿಲ್ಲ. ಆದರೂ ಜನತೆ ತಾವಾಗಿಯೇ ಮುಂದೆ ಬಂದು ಹಲವು ರಾಷ್ಟ್ರೀಯ ಜನಪರ ಹೋರಾಟಗಳಲ್ಲಿ ಸೇರಿಕೊಂಡರು, ಇಂತಹ ಗ್ರಾಮೀಣ ಪರಿಸರ ಜನರಲ್ಲಿ ವಾಲ್ಮೀಕಿ ಜನ ಸಮುದಾಯವು ಒಂದು. ಹಳ್ಳಿಯ ಕೃಷಿಕ ಕುಟುಂಬದಲ್ಲಿ ತುಸು ಓದು ಸಂಪಾದಿಸಿಕೊಂಡು ಸಾಮಾಜಿಕ ಕೆಲಸಗಳನ್ನು ಸಾಧಿಸಿ ಗ್ರಾಮೀಣ ಚರಿತ್ರೆಯಲ್ಲಿ ಗಾಂಧೀಜಿಯವರ ಮೌಲ್ಯಾದರ್ಶಗಳನ್ನು ಕರಗತ ಮಾಡಿಕೊಂಡು ಕಾಂಗ್ರೆಸ್ ರೂವಾರಿಗಳಾಗಿ ವಾಸ್ತವದಲ್ಲೂ ಉಸಿರಾಗಿಸಿಕೊಂಡವರು, ಇನ್ನೂ ಕೆಲವರು ತಮಗೆ ಇಚ್ಛೆ ಪಟ್ಟ ಪಕ್ಷಗಳಲ್ಲಿ ಇದ್ದುಕೊಂಡವರು ಕಾಣಸಿಗುತ್ತಾರೆ.

ಸ್ವಾತಂತ್ರ್ಯ ಹೋರಾಟ ಕಾಲಕ್ಕೆ ನಡೆದ ಪ್ರಮುಖ ಚಳುವಳಿಯಲ್ಲಿ ನೇರವಾಗಿ ಧುಮುಕಿ ಅಸಹಕಾರ, ಸ್ವದೇಶಿ ಖಾದಿ, ಗಾಂಧೀ ಎಂದು ಉತ್ಸಾಹ ಕ್ರೀಯಾಶೀಲತೆಗಳಿಂದ ಓಡಾಡುತ್ತ ಬೆಳೆದುದು ಈ ಬೇಡ ಸಮುದಾಯದವರು ಎಂಬುದು ಕೆಲವೊಂದು ಉದಾಹರಣೆಗಳಿಂದ ತಿಳಿದು ಬರುತ್ತದೆ. ಒಂದನ್ನು ಅರ್ಥೈಸುವುದಾದರೆ ಬಿಸನಾಳ ಗ್ರಾಮದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಈ ಜನ ಸಮುದಾಯವು ಉಪ್ಪನ್ನು ತಯಾರಿಸಿ ಬ್ರಿಟೀಷ್‌ರ ವಿರುದ್ಧ ಸಮರ ಸಾರಿದ್ದು ಅದ್ಭುತವೆನಿಸುತ್ತದೆ. ಹೀಗೆ ವಿವಿದೆಡೆ ಇದೇ ರೀತಿ ಚಳುವಳಿ ನಡೆದುದರ ಬಗೆಗೆ ಉಲ್ಲೇಖಗಳಿವೆ.

೧೯೪೭ರ ನಂತರದಲ್ಲಿ ಇಡೀ ದೇಶದ ತುಂಬೆಲ್ಲಾ ಸರ್ವರೂ ಸಮಾನತೆ ಎಂಬ ಅಂಶದ ಮೇಲೆ ಹೊಸ ಬೆಳವಣಿಗೆ ಕಾರಣಬಂದಿತು. ದೀನ ದಲಿತರ ಉದ್ದಾರಕ್ಕೋಸ್ಕರ ಪ್ರತ್ಯೇಕ ಸವಲತ್ತುಗಳು ದೊರೆಯಲಾರಂಭಿಸಿದವು. ಸರಕಾರ ನೇಮಿಸಿದ ಹಿಂದುಳಿದ ವರ್ಗಗಳ ಪರವಾಗಿ ಬಂದ ನೇತಾರ ಎಲ್.ಜಿ. ಹಾವನೂರ ವರದಿಯು ಸಾಮಾಜಿಕ ಸಂಘಟನೆ ಹಾಗೂ ಸಮಾನತೆಯನ್ನು ಪ್ರತ್ಯೆಕವಾಗಿ ರೂಪಿಸಿದ್ದು ಈ ಸಮುದಾಯಕ್ಕೊಂದು ವರವಾಗಿ ಪರಿಣಮಿಸಿದೆ. ಎಲ್ಲ ಜಾತಿ ಸಮುದಾಯಗಳೊಡನೆ ಶೇಕಡಾ ೩ರಷ್ಟು ಸ್ಥಾನ ಕಲ್ಪಿಸಿಕೊಟ್ಟುದ್ದ ರಿಂದ ವರ್ತಮಾನ ರಾಜಕೀಯದಲ್ಲಿ ತಮ್ಮನ್ನು ಗುರ್ತಿಸಿಕೊಂಡು ವಿವಿಧ ಹುದ್ದೆ ಅಲಂಕರಿಸಿ ಈ ಸಮುದಾಯದ ಪ್ರಮುಖರಾಗಿ ಪ್ರತಿನಿಧಿಸಿದ್ದಾರೆ.  ಅನೇಕ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿ ಬೆಳೆಸುತ್ತಿರುವ ಸಹೋದರ ಜಿಲ್ಲೆಯ ಗೋಕಾಕದ ಜಾರಕಿಹೊಳಿ ಕುಟುಂಬ ದವರು. ಚಲನ ಚಿತ್ರ ಶಶಿಕುಮಾರ ಕೂಡಾ ಈ ಸಮುದಾಯದ ಧುರೀಣರೆ ಆಗಿದ್ದಾರೆಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಸಧ್ಯಕ್ಕೆ ಕರ್ನಾಟಕದಿಂದ ಇಬ್ಬರು ಲೋಕಸಭಾ ಸದಸ್ಯರು, ಹದಿನಾರು ಜನ ವಿಧಾನ ಸಭಾ ಸದಸ್ಯರು, ನಾಲ್ಕು ಜನ ವಿಧಾನ ಪರಿಷತ್ ಸದಸ್ಯರು ಈ ವಾಲ್ಮೀಕಿ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆಂದು ರಾಜಕೀಯ ಚರಿತ್ರೆಯಿಂದ ತಿಳಿದು ಬರುತ್ತದೆ.

ಜಾಗತೀಕರಣದ ಹಿನ್ನೆಲೆಯಲ್ಲಿ ನೋಡಿದಾಗ ಇವರ ವ್ಯಕ್ತಿತ್ವ ಬೆಳವಣಿಗೆ ತೀರಾ ಕಡಿಮೆ. ಪ್ರಸ್ತುತ ಬಾಗಲಕೋಟೆ ಜಿಲ್ಲೆಯಲ್ಲಿ ಈ ಸಮುದಾಯದವರು ಕೆಲವೇ ಕೆಲವು ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಬಾದಾಮಿ, ಬೀಳಗಿ, ಬಾಗಲಕೋಟೆ ಹಾಗೂ ಮುಧೋಳ ತಾಲೂಕುಗಳಲ್ಲಿ ಮಾತ್ರ. ಒಂದು ಅಂಕಿ ಅಂಶದ ಪ್ರಕಾರ ಸುಮಾರು ೫೦,೦೦೦ (ಐವತ್ತು ಸಾವಿರ ಮಾತ್ರ) ಆಗಿದೆ. ಇತರೆ ನಗರ ಪ್ರದೇಶದಲ್ಲಿ ನೌಕರಿಗಾಗಿ ವಲಸೆ ಬಂದವರಾಗಿದ್ದಾರೆ.

೧೯೮೫ರಲ್ಲಿ ಚಲಾವಣೆಗೆ ಬಂದ ಗ್ರಾಮೀಣ ಅಭಿವೃದ್ದಿ, ಗ್ರಾಮ ರಾಜ್ಯ ಎಂಬ ಘೋಷಣೆಯ ಪ್ರಕಾರ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಹಾಗೂ ಗ್ರಾಮೀಣ ಅಭಿವೃದ್ದಿ ಬ್ಯಾಂಕುಗಳಿಗೂ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಸದಸ್ಯರಾಗಿ, ನಾಮನಿರ್ದೇಶಿತ ಸದಸ್ಯರಾಗಿದ್ದರೆಂದು ಕ್ಷೇತ್ರ ಕಾರ್ಯದಿಂದ ತಿಳಿದು ಬರುತ್ತದೆ. ಇವರಿಗೆ ಸಿಗುವ ಈ ಸ್ಥಾನಮಾನಗಳಿಗೆ ವಾಸ್ತವಿಕತೆಯಲ್ಲಿ ಆಸ್ತಿಭಾರ ಸಿಕ್ಕಾಂತಾಗಿದೆ ಎಂದು ಹೇಳಬಹುದು. ಇತ್ತಿಚೇಗೆ ವಾಲ್ಮೀಕಿ ಧರ್ಮಪೀಠ ರಚಿಸಿ ಕೂಡಾ ಸಾಮಾಜಿಕ ಸ್ಥಾನ ಮಾನಗಳಿಗೆ ಹೋರಾಟ ನಡೆಸಿದ್ದು ಇದೆ. Man is Social animal ಎಂಬರ್ಥದಲ್ಲಿ “ಮನುಷ್ಯ ಸಂಘ ಜೀವಿ” ಈ ಸಮೂಹ ಸಂಘಟನೆ ಕುರಿತು ಅದರ ಮುಖಾಂತರ ಬೇಡಿಕೆಗಾಗಿ ಹೋರಾಟ ನಡೆಸಿದ್ದಾರೆ.

 

ಪರಾಮರ್ಶನ ಗ್ರಂಥಗಳು

೧. ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳು, ಸೂರ್ಯನಾಥ ಕಾಮತ

೨. ಹಳೆಯ ಲಾವಣಿಗಳು, ಡಾ. ವೀರೇಶ ಬಡಿಗೇರ

೩. ವ್ಯಾದ ಚರಿತೆ, ಡಾ. ಮಂಜುನಾಥ ಬೇವಿನಕಟ್ಟಿ

೪. ಪ್ಲೀಟರು ಸಂಗ್ರಹಿಸಿದ ಲಾವಣಿಗಳು, ಕ್ಯಾತನಹಳ್ಳಿ ರಾಮಣ್ಣ

೫. ಬಾಗಲಕೋಟೆ ಜಿಲ್ಲೆಯ ದೇಸಗತಿಗಳು (ಅಪ್ರಕಟಿತ ಪ್ರಬಂಧ), ಡಾ. ಸಂಗಮೇಶ ಕಲ್ಯಾಣಿ

೬. ಸವನೂರ ನವಾಬರು, ಡಾ. ಗೋವಿಂದ ಮೂರ್ತಿದೇಸಾಯಿ

೭. ಧಾರವಾಡ ಜಿಲ್ಲಾ ಸ್ವಾತಂತ್ರ್ಯ ಸಂಗ್ರಾಮ, ಡಾ. ಗೋವಿಂದ ಮೂರ್ತಿ ದೇಸಾಯಿ

 

ಸಂದರ್ಶನಗಳು

ಶ್ರೀಶೈಲ ಗೋಲಶೆಟ್ಟಿ ಸಾಹಿತಿಗಳು ಹಲಗಲಿ

ಶ್ರೀ ಕಾಗಲಗೊಂಬ ತಲಾಠಿಗಳು ತೆಗ್ಗಿ

ಶ್ರೀ ತೆಗ್ಗಿನಾಯಕರು ತೆಗ್ಗಿ ಸಾ. ಬೀಳಗಿ

ಶ್ರೀ ಚಂದ್ರಶೇಖರ ದೇಸಾಯಿ ಸೊನ್ನ

* * *