ಬಾಗಲಕೋಟೆ ಜಿಲ್ಲೆ ಎಂದಾಕ್ಷಣ ಕೆಲವರಿಗೆ ಚಾಲುಕ್ಯರ ಕಾಲದ ವಾಸ್ತು, ಶಿಲ್ಪಕಲೆ, ಧಾರ್ಮಿಕ ಕ್ಷೇತ್ರಗಳು ನೆನಪಿಗೆ ಬರುತ್ತವೆ. ಆದರೆ ಇವುಗಳಲ್ಲದೇ ಇನ್ನಿತರ ಹಲವು ವೈಶಿಷ್ಟ್ಯಗಳಿಂದಾಗಿ ಬಾಗಲಕೋಟೆ ಜಿಲ್ಲೆ ಇತಿಹಾಸದ ಪುಟಗಳಲ್ಲಿ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿದೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಸಿರಿವಂತಿಕೆಗೆ ಹೆಸರಾಗಿರುವಂತೆ ಶೌರ್ಯ, ಸಾಹಸ, ಪರಾಕ್ರಮಗಳಿಗೆ ಹೆಸರಾಗಿದೆ. ಸ್ವಾಭಿಮಾನ, ಸ್ವಾತಂತ್ರ್ಯದ ರಕ್ಷಣೆಗಾಗಿ ಜಿಲ್ಲೆಯ ಕ್ಷಾತ್ರವೀರರು ನಡೆಸಿದ ಹೋರಾಟಗಳು, ಅವರ ಬಲಿದಾನಗಳನ್ನು ನೆನಪಿಸಿಕೊಂಡರೆ ಇಂದಿಗೂ ಕೆಲಕ್ಷಣ ರೋಮಾಂಚನ ಉಂಟಾಗುತ್ತದೆ. ಆದರೆ ಈ ಬಗ್ಗೆ ಇತಿಹಾಸದಲ್ಲಿ ಸರಿಯಾಗಿ ದಾಖಲಾಗ ದಿರುವುದು ತುಂಬಾ ವಿಷಾದ ಎನ್ನಿಸುತ್ತಿದೆ. ಈಗ ತಡವಾಗಿಯಾದರೂ ಸುಶಿಕ್ಷಿತರು ಜಾಗೃತ ಗೊಂಡು ಮುಂದಿನ ಪೀಳಿಗೆಗೆ ಜಿಲ್ಲೆಯ ನೈಜ ಹಾಗೂ ಸಮಗ್ರ ಇತಿಹಾಸ ತಿಳಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.

ಯಾವುದೇ ಒಂದು ನಿರ್ಧಿಷ್ಟ ಪ್ರದೇಶಕ್ಕೆ ಅದರ ಭೌಗೋಳಿಕ ಸ್ಥಾನೀಕರಣದ ಅಂಶ ಅತ್ಯಂತ ಮಹತ್ವದ್ದಾಗಿರುತ್ತದೆ. ಜಿಲ್ಲೆಯ ಬಹುತೇಕ ಭಾಗ ಬೆಟ್ಟಗುಡ್ಡಗಳಿಂದ ಕೂಡಿರುವು ದರಿಂದ ಹಾಗೂ ಮೂರು ನದಿಗಳು ಹರಿದಿರುವುದರಿಂದ ಆದಿವಾಸಿಗಳು, ಬುಡಕಟ್ಟು ಸಮುದಾಯಗಳು ವಾಸಿಸಲು ಅತ್ಯಂತ ಪ್ರಶಸ್ತ ಸ್ಥಳವಾಗಿದೆ. ಈ ಕುರಿತು ಆಳವಾಗಿ ಅಧ್ಯಯನ ಮಾಡಿದಾಗ ಕೆಲವು ಬುಡಕಟ್ಟು ಪಂಗಡಗಳೇ ಈ ಜಿಲ್ಲೆಯ ಮೂಲನಿವಾಸಿಗಳು ಎಂಬುದು ಕಂಡುಬರುತ್ತದೆ. ಅವುಗಳಲ್ಲಿ ವಾಲ್ಮೀಕಿ ಸಮುದಾಯವನ್ನು ನಾವು ಮುಖ್ಯವಾಗಿ ಹೆಸರಿಸ ಬಹುದು. ವಾಲ್ಮೀಕಿ ಸಮುದಾಯದ ಮೂಲವೃತ್ತಿಯಾದ ಬೇಟೆಗಾರಿಕೆ, ಪಶುಪಾಲನೆ ಹಾಗೂ ಕೃಷಿಗೆ ಇದು ಅತ್ಯಂತ ಪ್ರಶಸ್ತವಾದ ಸ್ಥಳವಾದುದರಿಂದ ಈ ಸಮುದಾಯ ಇಲ್ಲಿ ಗಟ್ಟಿಯಾಗಿ ನೆಲೆನಿಂತಿದೆ. ನಂತರ ನಾಗರೀಕತೆ ಬೆಳೆದಂತೆ ಈ ಸಮುದಾಯ ನದಿದಂಡೆ ಬೆಟ್ಟಗುಡ್ಡಗಳನ್ನು ತೊರೆದು ಅಲ್ಲಲ್ಲಿ ಚದುರಿ ಹೋಗಿ ಊರು, ಕೇರಿ, ಓಣಿಗಳಲ್ಲಿ ನೆಲೆ ನಿಂತಿರುವುದು ಕಂಡುಬರುತ್ತಿದೆ. ಕಾಲ ಬದಲಾದಂತೆ ತಾನೂ ಬದಲಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಬೆರೆತು ಬೇಟೆಗಾರಿಕೆ ಬಿಟ್ಟು, ಕೃಷಿ, ಪಶುಪಾಲನೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಬೇಡ, ನಾಯಕ, ವಾಲ್ಮೀಕಿ, ನಾಯಕ ಮಕ್ಕಳು, ತಳವಾರ ಎಂದು ಕರೆಯಲ್ಪಡುವ ವಾಲ್ಮೀಕಿ ಸಮುದಾಯಕ್ಕೆ ಉಜ್ವಲವಾದ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ಜಗತ್ತಿಗೆ ಆದರ್ಶವಾದ ರಾಮಾುಣ ಮಹಾಗ್ರಂಥವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಇದೇ ಸಮುದಾಯದಲ್ಲಿ ಹುಟ್ಟಿ ಬೆಳೆದವ. ಶಬರಿ, ಗುಹಾ, ಜರಾ, ಧರ್ಮವ್ಯಾಧ, ಏಕಲವ್ಯ, ಎಚ್ಚಮನಾಯಕ, ಗಂಡುಗಲಿ ಕುಮಾರರಾಮ, ವೀರಕಂಪಿಲರಾಯ, ಬೇಡರ ಕಣ್ಣಪ್ಪ, ರಾಜಾ ಮದಕರಿನಾಯಕ, ಸುರಪುರದ ವೆಂಕಟಪ್ಪ ನಾಯಕ, ಹಲಗಲಿ ಜಡಗಣ್ಣ-ಬಾಳಣ್ಣ, ತಳವಾರ ಫಕೀರಪ್ಪ, ವೀರ ಸಿಂಧೂರ ಲಕ್ಷ್ಮಣ, ಪೆರಿಯಾರ್ ರಾಮಸ್ವಾಮಿ ನಾಯ್ಕರ, ಭೀಮಪ್ಪನಾಯಕ, ಶ್ರೀ ತಿರುಚ್ಚಿ ಮಹಾಸ್ವಾಮಿ, ಶ್ರೀಪುಣ್ಯನಂದ ಪುರಿಸ್ವಾಮಿ, ಎಲ್.ಜಿ. ಹಾವನೂರು, ಸರ್ದಾರ್ ಬೂಟಾಸಿಂಗ್ ಹೀಗೆ ಈ ಸಮುದಾಯದಲ್ಲಿ ಹುಟ್ಟಿ ಬೆಳೆದು ವಿವಿಧ ಕ್ಷೇತ್ರಗಳಲ್ಲಿ ಇತಿಹಾಸ ಪುರುಷರಾದವರದು ದೊಡ್ಡ ಪಟ್ಟಿ ಇದೆ. ಇತಿಹಾಸದ ಗರ್ಭದಲ್ಲಿರುವ ಸತ್ಯವನ್ನು ಯಾರೂ ಸಾಯಿಸಲಾಗದು. ಹಾಗೆಯೇ ಕಲ್ಲಿನ ಎದೆಯಲ್ಲಿ ನೀರು ದೊರೆಯುವುದನ್ನು ಯಾರೂ ತಪ್ಪಿಸಲಾರರು. ವಾಲ್ಮೀಕಿ ಸಮುದಾಯದ ಪ್ರಾಚೀನ ಇತಿಹಾಸವನ್ನು ಕೂಡ ಚರಿತ್ರೆಯಿಂದ ಮುಚ್ಚಿಡಲಾಗದು ಎಂಬುದನ್ನು ನೆನಪಿನಲ್ಲಿಟ್ಟು ಕೊಳ್ಳಬೇಕಾಗುತ್ತದೆ. ಚಿತ್ರದುರ್ಗ, ಬಳ್ಳಾರಿ, ತರೀಕೆರೆ, ಲಿಂಗಸೂಗೂರು, ಹರಪನಹಳ್ಳಿ, ಗುಡಗುಂಟಿ, ಸುರಪುರ, ದೇವದುರ್ಗ ಸೇರಿದಂತೆ ರಾಜ್ಯದಲ್ಲಿ ೭೭ ಪಾಳಯಪಟ್ಟುಗಳನ್ನು ಕಟ್ಟಿಕೊಂಡು ವಾಲ್ಮೀಕಿ ಸಮುದಾಯ ರಾಜ್ಯಭಾರ ಮಾಡಿದೆ. ಆ ಸಂದರ್ಭದಲ್ಲಿ ಈ ಸಮುದಾಯ ೨೮,೦೦೦ ಕೆರೆಗಳನ್ನು ಕಟ್ಟಿ ಸಮಾಜಕ್ಕೆ ಶಾಶ್ವತವಾಗಿ ಉಪಯೋಗ ವಾಗುವಂತಹ ಕಾರ್ಯಮಾಡಿರುವುದು ಉಲ್ಲೇಖನೀಯ. ಮೊಗಲರು, ನವಾಬರು, ಬ್ರಿಟೀಷರ ವಿರುದ್ಧ ಈ ಸಮುದಾಯ ಅಪ್ರತಿಮ ಪರಾಕ್ರಮ ಮೆರೆದಿರುವುದನ್ನು ಎಂದಿಗೂ ಮರೆಯಲಾಗದು. ತನ್ನ ಬದುಕಿನ ಕಷ್ಟ-ಕಾರ್ಪಣ್ಯಗಳನ್ನು ಸಹಿಸಿಕೊಂಡು ತ್ಯಾಗ, ಬಲಿದಾನದ ನಿಸ್ಸೀಮ ಜೀವಿಯಂತಿರುವ ವಾಲ್ಮೀಕಿ ಸಮುದಾಯ ಪರನಾರಿ ಸಹೋದರ ಎಂದು ಮನೆ ಮಾತಾಗಿದೆ. ಇಂತಹ ಒಂದು ಧೀಮಂತ ಸಮುದಾಯದ ಕುರಿತು ಈ ಗೋಷ್ಠಿಯಲ್ಲಿ ಚಿಂತನೆ ನಡೆಯುತ್ತಿರುವುದು ಸಮಯೋಚಿತ ಹಾಗೂ ಸ್ತುತ್ಯವಾಗಿದೆ. ನಾನು ಹಿಂದೆಯೇ ಪ್ರಸ್ತಾಪಿಸಿದಂತೆ ಬಾಗಲಕೋಟೆ ಜಿಲ್ಲೆಯ ಮೂಲನಿವಾಸಿಗಳಾದ ವಾಲ್ಮೀಕಿ ಸಮುದಾಯಕ್ಕೆ ತನ್ನದೇ ಆದ ವಿಶಿಷ್ಟ ಪರಂಪರೆ, ಸಂಪ್ರದಾಯಗಳಿವೆ. ಬದಲಾದ ಸಂದರ್ಭಕ್ಕೆ ತಕ್ಕಂತೆ ಜಿಲ್ಲೆಯಲ್ಲಿ ರಾಜ್ಯಭಾರ ಮಾಡಿದ ಮೌರ್ಯರು, ಶಾತವಾಹನರು, ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಪಲ್ಲವರು, ಕಲ್ಯಾಣ ಚಾಲುಕ್ಯರು, ಕಲಚೂರಿಯರು, ದೇವಗಿರಿ ಯಾದವರ ಸೈನ್ಯದಲ್ಲಿ ಈ ಸಮುದಾಯ ಶೌರ್ಯ ಸಾಹಸಗಳನ್ನು ಮೆರೆದು ಬಿರುದು ಬಾವಲಿಗಳನ್ನು ಪಡೆದುಕೊಂಡಿದೆ. ವಿಜಯನಗರ ಸಾಮ್ರಾಜ್ಯದ ಇತಿಹಾಸದುದ್ದಕ್ಕೂ ಪ್ರಸ್ತಾಪ ವಾಗುವ ಈ ಸಮುದಾಯ ತಾಳಿಕೋಟಿ ಕದನದಲ್ಲಿ ವಿಜಯನಗರದ ಅರಸರ ಪರವಾಗಿ ನಡೆಸಿದ ಹೋರಾಟ ನೆನಪಿಸಿಕೊಂಡರೆ ಮೈನವಿರೇಳುತ್ತದೆ. ಬೇಟೆಗಾರಿಕೆಯಲ್ಲಿ ಆಯುಧ ಗಳನ್ನು ಉಪಯೋಗಿಸುವುದರಲ್ಲಿ ಅತ್ಯಂತ ಪರಿಣತಿ ಹೊಂದಿದ ಈ ಸಮುದಾಯ ಶಾರೀರಿಕ ವಾಗಿ ಬಲಿಷ್ಟವಾಗಿರುವುದನ್ನು ಕಂಡು ಅಂದಿನ ಅರಸರು ಈ ಸಮುದಾಯವನ್ನು ತಮ್ಮ ತಮ್ಮ ಸೈನ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ರಿ.ಶ. ೭ನೇ ಶತಾನದಿಂದ ಕ್ರಿ.ಶ. ೧೬ನೇ ಶತಮಾನದವರೆಗೆ ಅಂದರೆ ಬಾದಾಮಿ ಚಾಲುಕ್ಯರ ಕಾಲದಿಂದ ವಿಜಯನಗರ ಅರಸರ ಕಾಲದವರೆಗೆ ಈ ಸಮುದಾಯ ಸೈನ್ಯಪಡೆಯಲ್ಲಿ ದಂಡಿನ ನಾಯಕತ್ವ ವಹಿಸಿ ಹೋರಾಟ ಮಾಡಿರುವುದಕ್ಕೆ ಬಲವಾದ ಆಧಾರಗಳಿವೆ. ಇದನ್ನು ಗಮನಿಸಿದಾಗ ಶೌರ್ಯ, ಧೈರ್ಯ, ಸಾಹಸ, ಪರಾಕ್ರಮ, ಹೋರಾಟ, ತ್ಯಾಗ, ಬಲಿದಾನ ಈ ಸಮುದಾಯಕ್ಕೆ ರಕ್ತಗತವಾಗಿ ಬಂದಿರುವುದು ಸ್ಪಷ್ಟವಾಗುತ್ತದೆ. ಯಾವುದೇ ಒಂದು ಸಮುದಾಯ ಹಿಂದಿನ ಪೀಳಿಗೆಯಿಂದ ಜೀವಿಗಳ ಮೂಲಕ ಹರಿದು ಬಂದ ಗುಣಲಕ್ಷಣಗಳನ್ನು ಆನುವಂಶಿಕವಾಗಿ ಮುಂದಿನ ಪೀಳಿಗೆಗೆ ರವಾನಿಸುತ್ತದೆ. ಪ್ರಾಚೀನ ಕಾಲದಲ್ಲಿ ಕಾಡುಮೇಡುಗಳಲ್ಲಿ ಅಲೆಯುತ್ತ, ನಂತರ ರಾಜಮಹಾರಾಜರ ಸೈನ್ಯದಲ್ಲಿ ಸಶಸ್ತ್ರ ಹೋರಾಟ ನಡೆಸಿದ ವಾಲ್ಮೀಕಿ ಸಮುದಾಯದ ಆನುವಂಶಿಕ ಗುಣಗಳು ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿರುವುದರಿಂದ ಸಾಮಾನ್ಯವಾಗಿ ಇಂದಿಗೂ ಈ ಸಮುದಾಯದಲ್ಲಿ ಆ ಕ್ಷಾತ್ರ ತೇಜಸ್ಸು ಕಂಡುಬರುತ್ತಿದೆ. ಈ ಜಿಲ್ಲೆಯ ವಾಲ್ಮೀಕಿ ಸಮುದಾಯದಲ್ಲಿ ಬೇರೆ ಬೇರೆ ಬೆಡಗುಗಳಿದ್ದು ಭಿನ್ನ ಭಿನ್ನ ಬೆಡಗಿನವರಲ್ಲಿ ಮದುವೆ ಸಂಬಂಧಗಳನ್ನು ಬೆಳೆಸುವ ಪದ್ಧತಿ ಇದೆ. ಸಮುದಾಯಕ್ಕೆ ತನ್ನದೇ ಆದ ನಂಬಿಕೆ, ಆಚರಣೆ, ಜೀವನಕ್ರಮ ಇದೆ. ಬಾಗಲಕೋಟೆ ಜಿಲ್ಲೆಯ ವಾಲ್ಮೀಕಿ ಸಮುದಾಯದ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ ಸ್ವಾಭಿಮಾನದ ಹೆಗ್ಗುರುತು ಎಂದು ಹೇಳಬಹುದು. ಹಾಗಂತ ಈ ಸಮುದಾಯ ತನ್ನ ಬಗ್ಗೆ ಅಹಂಕಾರ ಪಟ್ಟುಕೊಳ್ಳುವುದಿಲ್ಲ. ತಾನು ಇನ್ನೊಂದು ಸಮುದಾಯಕ್ಕಿಂತ ಕಡಿಮೆ ಅಲ್ಲ ಎಂದು ನಂಬಿರುವಂತೆ ಇನ್ನಿತರ ಸಮುದಾಯಗಳು ಕೂಡ ತನಗಿಂತ ಕಡಿಮೆ ಅಲ್ಲ ಎಂದು ಭಾವಿಸಿದೆ. ಹೀಗಾಗಿ ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿರುವ ಇನ್ನಿತರ ಧರ್ಮಗಳಾದ ಮುಸ್ಲಿಂ, ಕ್ರೈಸ್ತ ಧರ್ಮದ ಜತೆ ಈ ಸಮುದಾಯದ ಸುಮಧುರ ಸಂಬಂಧ ಇದೆ. ಅಂತೆಯೇ ಈ ಸಮುದಾಯದವರು ದೇವಸ್ಥಾನಗಳಿಗೆ ಹೋಗು ವಂತೆ ಮಸೀದಿಗಳಿಗೂ, ಚರ್ಚ್‌ಗಳಿಗೂ ಹೋಗುತ್ತಾರೆ. ಇತರೆ ಧರ್ಮೀಯರ ಹಬ್ಬ ಉತ್ಸವಗಳಲ್ಲಿ ಭಕ್ತಿಯಿಂದ ಭಾಗವಹಿಸುತ್ತಾರೆ. ಈ ಸಮುದಾಯದವರು ಹೆಚ್ಚಾಗಿರುವ ಗ್ರಾಮಗಳಲ್ಲಿ ಒಂದೇ ಒಂದು ಕೋಮು ಗಲಭೆಯಾಗಲಿ, ಜಾತಿಯ ದಂಗೆಗಳಾಗಲಿ ನಡೆದಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಕ್ರಿ.ಶ. ೬ನೇ ಶತಮಾನದಲ್ಲಿ ಬಾದಾಮಿಗೆ ಭೇಟಿ ನೀಡಿದ್ದ ಚೀನಿ ಯಾತ್ರಿಕ ಹ್ಯುಯೆನ್ ತ್ಸಾಂಗ್ ಕೂಡ ವಾಲ್ಮೀಕಿ ಸಮುದಾಯದ ದಿಟ್ಟ ಪರಾಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದನೆಂದು ತಿಳಿದುಬರುತ್ತದೆ. ಪುಲಿಕೇಶಿ ನಾಡಿನಲ್ಲಿ ಗಣನೀಯ ಪ್ರಮಾಣದಲ್ಲಿರುವ ಈ ಸಮುದಾಯ ಶೂರ, ಸ್ವಾಭಿಮಾನ, ನಿಷ್ಠಾವಂತ ಸಮುದಾಯವಾಗಿತ್ತು. ಯುದ್ಧದಲ್ಲಿ ಗೆಲುವೊಂದೇ ಇವರ ಗುರಿಯಾಗಿರುತ್ತದೆ. “ಯುದ್ಧದಲ್ಲಿ ಹೋರಾಡಿ ಮಡಿಯುತ್ತಾರೆಯೇ ವಿನಃ ಸೋತು ಹಿಂದಿರುಗುವುದಿಲ್ಲ. ತಾವೂ ಸೆರೆ ಕುಡಿದು ಆನೆ, ಕುದುರೆಗಳಿಗೂ ಕುಡಿಸಿ ಯುದ್ಧರಂಗಕ್ಕೆ ಧುಮುಕುವ ಚಾಲುಕ್ಯ ಸೈನಿಕರು (ವಾಲ್ಮೀಕಿ ಸಮುದಾಯ) ವಿರಾಟ್ ರೂಪ ತಾಳಿ ಹೋರಾಡುತ್ತಾರೆ. ಇಂತಹ, ಧೀರೋದಾತ್ತ ಸೈನಿಕರ, ಸ್ವಾಭಿಮಾನಿ ಪ್ರಜೆಗಳ ಪ್ರೀತಿಯೇ ಪುಲಿಕೇಶಿಗೆ ಅಬೇಧ್ಯ ಕೋಟೆಯಾಗಿದೆ” ಎಂಬ ಅವನ ಬಣ್ಣನೆಯಲ್ಲಿ ವಾಲ್ಮೀಕಿ ಸಮುದಾಯದ ವೀರಜೀವನದ ಬಗ್ಗೆ ತಿಳಿದುಕೊಳ್ಳಬಹುದು. ನರ್ಮದೆಯ ದಡದಲ್ಲಿ ಇಮ್ಮಡಿ ಪುಲಿಕೇಶಿ ಹರ್ಷವರ್ಧನನನ್ನು ಸೋಲಿಸುವಲ್ಲಿ ವಾಲ್ಮೀಕಿ ಸಮುದಾಯದ ಕೆಚ್ಚೆದೆಯ ಹೋರಾಟ ಕೆಲಸ ಮಾಡಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಬಾದಾಮಿ ಯಲ್ಲಿರುವ ಎರಡು ಪ್ರಾಚೀನ ಶಾಸನಗಳಲ್ಲಿ ನೇರವಾಗಿ ವಾಲ್ಮೀಕಿ ಸಮುದಾಯದ ಹೆಸರಿರದಿದ್ದರೂ ಪರೋಕ್ಷವಾಗಿ ಅದು ಈ ಸಮುದಾಯದ ಬಗ್ಗೆ ಹೇಳಿದಂತಿದೆ. “ವರಂ ತೇಜಸ್ವಿನೋ ಮೃತ್ಯುಃ ನತು ಮಾನಾವಖಂಡನಂ ಮೃತ್ಯುಃ ತತ್‌ಕ್ಷಣಿಕೋ ದುಃಖ ಮಾನಭಂಗಂ ದಿನೇ ದಿನೇ” ಅಂದರೆ ಶೂರರಿಗೆ ಅಪಮಾನಕ್ಕಿಂತ ಸಾವೇ ಶೇಷ್ಠವಾಗಿದೆ. ಮೃತ್ಯುವು ಕ್ಷಣಿಕ ದುಃಖ ಉಂಟುಮಾಡುತ್ತದೆ. ಆದರೆ ಮಾನಭಂಗ ದಿನದಿನವೂ ದುಃಖ ಉಂಟು ಮಾಡುತ್ತಿದೆ. ಇಂದಿಗೂ ಕೂಡ ವಾಲ್ಮೀಕಿ ಸಮುದಾಯದವರಲ್ಲಿ ಈ ಗುಣ ವಂಶಪಾರಂಪರ್ಯವಾಗಿ ಬಂದಿದೆ. ಈ ಸಮುದಾಯದವರು ಮಾನಕ್ಕೆ ಹೆದರುತ್ತಾರೆಯೇ ವಿನಃ ಸಾವಿಗೆ ಹೆದರುವುದಿಲ್ಲ. ಕಪ್ಪೆ ಆರ್ಯಭಟ್ಟನ ಶಾಸನ ಇದಕ್ಕೆ ಇನ್ನೊಂದು ಪುಷ್ಟಿ ನೀಡುತ್ತದೆ. ‘ಸಾಧುಂಗೆ ಸಾಧುಂ, ಮಾಧುರ್ಯಂಗೆ ಮಾಧುರ್ಯಂ, ಬಾಧಿಪ್ಪಕಲಿಗೆ ಕಲಿಯುಗ ವಿಪರೀತನ, ಮಾಧವನೀತಿ ಪೆರನಲ್ಲ’ ಅಂದರೆ ಚಾಲುಕ್ಯ ನಾಡಿನ ಜನ ಒಳ್ಳೆಯವರಿಗೆ ಒಳ್ಳೆಯವರು, ಕೆಟ್ಟವರಿಗೆ ಕೆಟ್ಟವರು, ಆದರೆ ನಂಬಿಕೆದ್ರೋಹ ಮಾಡಿದವರಿಗೆ ಯಾರನ್ನೂ ಕೇಳುವವರಲ್ಲ. ಚಾಲುಕ್ಯರ ಸೈನ್ಯದ ಶೇ ೯೦ ಸೈನಿಕರು ವಾಲ್ಮೀಕಿ ಸಮುದಾಯದವ ರಾಗಿದ್ದುದರಿಂದ ಇಂತಹ ವರ್ಣನೆಗಳೆಲ್ಲ ಅವರನ್ನು ಕುಳಿತೇ ಹೇಳಿದವುಗಳಾಗಿರಬಹುದು. ಬಾದಾಮಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಇಂದಿಗೂ ವಾಲ್ಮೀಕಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಆಡಗಲ್, ಹಲಕುರ್ಕಿ, ಮುತ್ತಲಗೇರಿ, ಕುಟಕನ ಕೇರಿ, ಕೆಂದೂರ, ಕಬ್ಬಲಗೇರಿ, ಕರಡೀಗುಡ್ಡ ಮುಂತಾದ ಗ್ರಾಮಗಳಲ್ಲಿ ಈಗಲೂ ಬಹು ಸಂಖ್ಯಾತರಾಗಿರುವ ವಾಲ್ಮೀಕಿ ಸಮುದಾಯದವರು ಅಂದು ಚಾಲುಕ್ಯರ ಆಳ್ವಿಕೆಯಲ್ಲಿ ಮುಂಚೂಣಿಯಲ್ಲಿದ್ದರೆಂದು ತಿಳಿದುಬರುತ್ತದೆ. ಮುಂದೆ ೧೮೧೦ರಲ್ಲಿ ಬಾದಾಮಿಯಲ್ಲಿ ಬ್ರಿಟೀಷರ ವಿರುದ್ಧ ನಡೆದ ಬಂಡಾಯದಲ್ಲಿಯೂ ಈ ಸಮುದಾಯ ಹೋರಾಡಿದೆ. ಈ ಸಮುದಾಯದ ನೂರಾರು ಶೂರರ ಶೌರ್ಯಗಳನ್ನು ಸಾರುವ ವೀರಗಲ್ಲುಗಳು ಜಿಲ್ಲೆಯ ಮೂಲೆಮೂಲೆಗಳಲ್ಲಿ ದೊರಕುತ್ತವೆ. ಆದರೆ ಅವುಗಳಿಗೆ ಸೂಕ್ತ ರಕ್ಷಣೆ ಇಲ್ಲದಿರುವುದರಿಂದ ಹಾಳಾಗುತ್ತಿವೆ. ಯುದ್ಧಭೂಮಿಯಲ್ಲಿ ಖಡ್ಗ ಹಿಡಿದು ವೀರಾವೇಶದಿಂದ ಹೋರಾಡುತ್ತಿರುವ ವಾಲ್ಮೀಕಿ ಸಮುದಾಯದ ಸೈನಿಕರ ವೀರಗಲ್ಲುಗಳು ಚಿತ್ರದುರ್ಗ, ಬಳ್ಳಾರಿ, ರಾಯಚೂರು ಬಿಟ್ಟರೆ ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಮುಧೋಳ ತಾಲೂಕಿನ ಹಲಗಲಿ, ಲೋಕಾಪುರ, ಬಂಡನೂರ, ಜಮಖಂಡಿ ತಾಲೂಕಿನ ನಾವಲಗಿ, ಬಾಗಲಕೋಟೆ ತಾಲೂಕಿನ ಬೇವೂರ, ಬಿಲ್‌ಕೇರೂರ, ನೀರಲಕೇರಿ ಬೇವಿನಮಟ್ಟಿ ಹೊನ್ನಾಕಟ್ಟಿ, ಮುಚ ಖಂಡಿ, ಸೀಮಿಕೇರಿ, ಗದ್ದನಕೇರಿ, ಯಡಹಳ್ಳಿ, ಮಲ್ಲಾಪುರ, ಕಿರಸೂರ, ಭಗವತಿ, ಹುನಗುಂದ ತಾಲೂಕಿನ ಕಮತಗಿ, ರಾಮತಾಳ, ಮುಳ್ಳೂರ, ಚಿಕ್ಕಮಾಗಿ, ಯರನಕೇರಿ, ಅಮರಾತಿ, ಬೀಳಗಿ ತಾಲೂಕಿನ ಅರಕೇರಿ, ತೆಗ್ಗಿ, ಸಿದ್ದಾಪುರ, ಯಡಹಳ್ಳಿ, ಕಾತರಕಿ, ಸುನಗ, ಜಾನಮಟ್ಟಿ,  ಗಿರಿಸಾಗರ, ಬಾದಾಮಿ ತಾಲೂಕಿನ ನೀಲಗುಂದ, ಬೇಲೂರ, ಜಾಲಿಹಾಳ, ನೆಲದಗಿ, ಅನವಾಲ, ಹುಲ್ಲಿಕೇರಿ ಇನಾಂ, ಬಂದಿಕೇರಿ, ಸೂಳಿಕೇರಿ, ಕಟಗೇರಿ, ಕೆಲವಡಿ, ಖಾನಾಪುರ, ಹಂಸನೂರ, ಪರ್ವತಿ, ಕೋಟೆಕಲ್, ಗುಳೇದಗುಡ್ಡ, ಕೆರುದ, ಬೆಳಗಂಟಿ, ಮತ್ತಿಕಟ್ಟಿ, ಹೊಕೋಟಿ, ಕೈನಕಟ್ಟಿ ಮುಂತಾದ ಊರುಗಳು ಸೇರಿದಂತೆ ಜಿಲ್ಲೆಯ ೨೦೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಾಲ್ಮೀಕಿ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಕೆಲವು ಗ್ರಾಮಗಳಲ್ಲಿ ಈ ಸಮುದಾಯಕ್ಕೆ ಹಿಂದಿನ ರಾಜ, ಮಹಾರಾಜರು, ಬ್ರಿಟೀಷ್ ಸರಕಾರದಿಂದ ಇನಾಮುಗಳು, ಬಹುಮಾನಗಳು ದೊರೆತಿವೆ. ಅಂತೆಯೇ ಹಲವು ಗ್ರಾಮಗಳಲ್ಲಿ ವಾಲ್ಮೀಕಿ ಸಮುದಾಯದವರು ಪಾಟೀಲರು, ಗೌಡರು, ದೇಸಾಯರು, ನಾಯಕರು ಎಂದು ವತನಗಳನ್ನು ಪಡೆದುಕೊಂಡಿದ್ದಾರೆ. ಆ ಗ್ರಾಮಗಳಲ್ಲಿ ಇವರಿಗೆ ನೂರಾರು ಎಕರೆ ಜಮೀನು ಗಳ ಒಡೆತನದ ವತನದಾರಿಕೆ ಕೂಡ ಇದೆ. ಕೆಲವು ಗ್ರಾಮಗಳಲ್ಲಿ ಈ ಸಮುದಾಯದವರು ಪೂಜಾರರು, ತಳವಾರರು, ವಾಲೀಕಾರರಾಗಿಯೂ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗಿ ಸಂಸ್ಥಾನಗಳ ವಿಲಿನೀಕರಣ, ರಾಜಧನ ರದ್ಧತಿಯಾದಂತೆ ಈ ಸಮುದಾಯದ ವತನದಾನಿಕೆ ರದ್ದಾದರೂ ಆ ಸಮಯದಲ್ಲಿ ಇವರಿಗೆ ನೀಡಲಾಗಿದ್ದ ಜಮೀನುಗಳನ್ನು ರೈತವಾರಿ ಮಾಡಿಕೊಂಡಿದ್ದಾರೆ. ವತನದಾರಿಕೆ ರದ್ದಾದರೂ ಈ ಸಮುದಾಯದವರಿಗೆ ಆಗ ದೊರೆಯುತ್ತಿದ್ದ ಮಾನ, ಮರ್ಯಾದೆ, ಗೌರವಗಳ ಪರಂಪರೆ ಈಗಲೂ ಮುಂದುವರಿದುಕೊಂಡು ಬಂದಿರುವುದು ಕಂಡುಬರುತ್ತದೆ. ವತನದಾರಿಕೆಯ ಕುರುಹುಗಳಾದ ಖಡ್ಗ, ಕತ್ತಿ, ಗುರಾಣಿಗಳನ್ನು ಈ ಸಮುದಾಯದವರು ಜಗಲಿಯ ಮೇಲಿಟ್ಟು ಪೂಜಿಸುತ್ತಿದ್ದು, ಜಾತ್ರೆ, ಉತ್ಸವಗಳಲ್ಲಿ ಹೊರಗೆ ತಂದಿರುತ್ತಾರೆ. ಸ್ವಾಭಿಮಾನ ಅತ್ಯಂತ ಶ್ರೇಷ್ಟವಾದ ಮೌಲ್ಯ ಎಂದು ಭಾವಿಸಿಕೊಂಡಿರುವ ವಾಲ್ಮೀಕಿ ಸಮುದಾಯ ಅದಕ್ಕೆ ಧಕ್ಕೆ ನಡೆದರೆ, ಅನ್ಯಾಯ, ಅಸಮಾನತೆಗಳು ಸಮಾಜದಲ್ಲಿ ತಾಂಡವವಾಡಿದಾಗ ಅವುಗಳ ವಿರುದ್ಧ ಸೆಟೆದು ನಿಂತುಹೋರಾಟ ಮಾಡಿದೆ. ಹಲಗಲಿ, ಜಮುಖಂಡಿ ಬಂಡಾಯಗಳು ಹಾಗೂ ವೀರ ಸಿಂಧೂರ ಲಕ್ಷ್ಮಣನ ಹೋರಾಟವೇ ಇದಕ್ಕೆ ಜೀವಂತ  ಸಾಕ್ಷಿಯಾಗಿದೆ. ಬಹುಶಃ ಸ್ವಾತಂತ್ರ್ಯಕ್ಕಾಗಿ ಹಲಗಲಿ ಬೇಡರು ಮಾಡಿದ ಬಲಿದಾನ, ಸ್ವಾತಂತ್ರ್ಯದ ಜತೆಗೆ ಸಮಾನತೆಗಾಗಿ ಸಿಂಧೂರ ಲಕ್ಷ್ಮಣ ನಡೆಸಿದ ೋರಾಟವನ್ನು ಬೇರೆ ಯಾವುದೇ ಸಮುದಾಯ ನಡೆಸಿದ್ದರೆ ಅದು ದೇಶದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಮೊದಲ ಅಧ್ಯಾಯವಾಗಿರುತ್ತಿತ್ತು. ಆದರೆ ಅದು ವಾಲ್ಮೀಕಿ ಸಮುದಾಯದ ಹೋರಾಟವಾಗಿರುವುದರಿಂದ ಎಲ್ಲೋ ಒಂದು ಮೂಲೆಯಲ್ಲಿ ಇದೆ. ಇತಿಹಾಸದಲ್ಲಿ ಮಾನವೀಯ ಮೌಲ್ಯಗಳ ರಕ್ಷಣೆಯಲ್ಲಿ, ಅನ್ಯಾಯ ಗಳನ್ನು  ತಡೆಗಟ್ಟುವಲ್ಲಿ, ಸಮಾಜ ಕಂಟಕರನ್ನು ನಿಗ್ರಹಿಸುವಲ್ಲಿ ವಾಲ್ಮೀಕಿ ಸಮುದಾಯ ಬಹುದೊಡ್ಡ ಕೊಡುಗೆ ನೀಡಿದೆ. ಬೇಟೆ ಆಡುವುದು ಬೇಡರ ಕುಲದ ಕಸುಬಾದರೂ ಹಸು ಕೊಲ್ಲುವುದು ಧರ್ಮವಲ್ಲ. ಆದರೆ ಕ್ರೂರ ಮೃಗಗಳನ್ನು ಕಂಡರೆ ಕೊಲ್ಲದೆ ಬಿಡುವಂಗಿಲ್ಲ ಎಂಬ ಈ ಸಮುದಾಯದ ಸಂದೇಶ ಏನೆಂದರೆ ಕ್ರೌರ್ಯ ಸಮುದಾಯದಲ್ಲಿ ರಕ್ತಗತವಾಗಿ ಬಂದಿದ್ದರೂ ಮುಗ್ಧರಿಗೆ, ನಿಷ್ಪಾಪಿಗಳಿಗೆ ಕಿರುಕುಳ ನೀಡಬಾರದು. ಆದರೆ ದುಷ್ಟರು, ಸಮಾಜ ವಿದ್ರೋಹಿಗಳನ್ನು ನಿಗ್ರಹಿಸದೇ ಬಿಡಬಾರದೆಂಬುದಾಗಿದೆ. ಅದರಂತೆಯೇ ಈ ಸಮುದಾಯ ಇಂದಿಗೂ ಬದುಕುತ್ತಿದೆ. ಬಹುತರವಾಗಿ ಇಂತಹ ಆದರ್ಶಗಳನ್ನು ಮೈಗೂಡಿಸಿ ಕೊಂಡಿರುವ ಏಕೈಕ ಸಮುದಾಯವೆಂದರೆ ವಾಲ್ಮೀಕಿ ಸಮುದಾಯ ಎಂದು ಹೇಳಬಹುದು.

ಇಂತಹ ಧೀರೋದಾತ್ತ ಸಮುದಾಯ ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿ ಯಲ್ಲಿದ್ದರೆ ಬಾಗಲಕೋಟೆ ಜಿಲ್ಲೆ ದೇಶದಲ್ಲೇ ಅಭಿವೃದ್ದಿಯಲ್ಲಿ ನಂ. ೧ ಆಗಿರುತ್ತಿತ್ತು. ಆದರೆ ಈ ಸಮುದಾಯ ಇನ್ನೂ ಅನಾಯಕತ್ವದಲ್ಲೇ ತೊಳಲಾಡುತ್ತಿರುವುದು ಪರಿಸ್ಥಿತಿಯ ಪಿತೂರಿ ಎಂದೇ ಹೇಳಬೇಕಾಗುತ್ತದೆ. ಸ್ವಾತಂತ್ರ್ಯಾನಂತರ ಬ್ಯಾಕ್‌ವರ್ಡ್ ಟ್ರೈಬ್ಸ್, ಡಿನೋಟಿಫೈಡ್ ಟ್ರೈಬ್ಸ್, ಬ್ಯಾಕ್‌ವರ್ಡ್ ಕ್ಲಾಸ್ ಎಂದು ಸರಕಾರದಿಂದ ವರ್ಗೀಕರಿಸಲ್ಪಟ್ಟ ವಾಲ್ಮೀಕಿ ಸಮುದಾಯ ೧೯೯೨ರಿಂದ ಶೆಡ್ಯೂಲ್ ಟ್ರೈಬ್ಸ್ ಪಟ್ಟಿಯಲ್ಲಿ ಸೇರಿದೆ. ಅದರಡಿ ಅಷ್ಟು ಇಷ್ಟು ಸೌಲಭ್ಯ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಎರಡು ಲಕ್ಷಮತದಾರರನ್ನು  ಹೊಂದಿರುವ ವಾಲ್ಮೀಕಿ ಸಮುದಾಯ ಒಂದಾಗಿ ನಿಂತರೆ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಹಣೆಬರಹ ಬರೆಯುವ ಶಕ್ತಿ ಇದ್ದರೂ ಅದರ ಸದ್ಬಳಕೆಗೆ ಕಾಲಕೂಡಿ ಬಂದಿಲ್ಲ. ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಶೈವ ಸಂಸ್ಕೃತಿ, ಸಂಪ್ರದಾಯಗಳಿಗೆ ಮಾರುಹೋಗಿರುವ ವಾಲ್ಮೀಕಿ ಸಮುದಾಯ ನಿತ್ಯನೈಮಿತ್ತಿಕ ವ್ಯವಹಾರಗಳಲ್ಲಿ ವಿಶೇಷ ಆಚಾರಗಳಲ್ಲಿ ಇದೇ ಚೌಕಟ್ಟನ್ನು ತೆಗೆದುಕೊಂಡು ಅದನ್ನು ತಮ್ಮ ಸ್ಥಿತಿಗತಿಗೆ ಅನುಸಾರವಾಗಿ ಹೊಂದಿಸಿಕೊಂಡಿದೆ. ಸವದತ್ತಿಯ ಯಲ್ಲಮ್ಮ, ತುಳಸಿಗೇರಿ ಹನಮಂತ, ಮುನಿರಾಬಾದ್ ಹುಲಿಗೆಮ್ಮ, ಕಿರಸೂರ ಕೋನಮ್ಮ, ಹಲಕುರ್ಕಿ ಪಾಕೋಳ ರಂಗನಾಥ, ಲೋಕಾಪುರ ದುರಗಮ್ಮ ದೇವರುಗಳನ್ನು ವಾಲ್ಮೀಕಿ ಸಮುದಾಯದವರು ತಮ್ಮತಮ್ಮ ಮನೆದೇವರೆಂದು ಮಾಡಿಕೊಂಡು ಭಕ್ತಿಭಾವ ದಿಂದ ನಡೆದುಕೊಳ್ಳುತ್ತಾರೆ. ತಿರುಪತಿ ತಿಮ್ಮಪ್ಪ, ಪಂಢರಾಪುರ ಪಂಢರಿನಾಥ, ಧರ್ಮಸ್ಥಳ ಮಂಜುನಾಥ, ಕೊಲ್ಲಾಪುರದ ಮಹಾಲಕ್ಷ್ಮಿ ದರ್ಶನಕ್ಕೆ ಈ ಸಮುದಾಯದವರು ವಿಶೇಷ ಸಂದರ್ಭಗಳಲ್ಲಿ ಹೋಗಿಬರುತ್ತಾರೆ. ತಾವು ನಂಬಿಕೊಂಡ ಶಕ್ತಿದೇವತೆಗಳಿಗೆ ಬಲಿಕೊಡುವುದು ಹಾಗೂ ತಮ್ಮ ಪೂರ್ವಜರ ಆತ್ಮಶಾಂತಿಗಾಗಿ ಪ್ರಾಣಿಬಲಿಕೊಡುವ ಪದ್ಧತಿ ಈ ಸಮುದಾಯ ದಲ್ಲಿ ಕಂಡುಬರುತ್ತದೆ. ಈ ಸಮುದಾಯದಲ್ಲಿ ಸವದತ್ತಿ ಯಲ್ಲಮ್ಮನ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಜೋಗತಿ ಬಿಡುವ ಸಂಪ್ರದಾಯ ಇದೆಯಾದರೂ ಇತ್ತೀಚೆಗಿನ ದಿನಗಳಲ್ಲಿ ಕಡಿಮೆಯಾಗಿದೆ. ಅನೇಕ ಊರುಗಳಲ್ಲಿ ಶಕ್ತಿದೇವತೆ ಹಾಗೂ ಹನುಮಂತ ದೇವರ ಪೂಜಾರಿಕೆ ಯನ್ನು ವಾಲ್ಮೀಕಿ ಸಮುದಾಯದವರೇ ಮಾಡುತ್ತ ಬಂದಿರುವರಾದರೂ ಇವರ ಅನಕ್ಷರತೆ, ಅಜ್ಞಾನದಿಂದಾಗಿ ಅವು ಕೂಡ ಕೆಲವು ಕಡೆ ಬೇರೆ ಸಮುದಾಯದವರ ಪಾಲಾದ ಉದಾಹರಣೆ ಗಳೂ ಇವೆ.

ತೋಳುಗಳಲ್ಲಿ ಅಪಾರ ಬಲ ತುಂಬಿಕೊಂಡಿರುವ ಈ ಸಮುದಾಯದ ಯುವಕರು ಜಾತ್ರೆ, ಉತ್ಸವಗಳಲ್ಲಿ ಕುಸ್ತಿ ಆಡುವುದು, ಗುಂಡುಕಲ್ಲುಗಳನ್ನು ಎತ್ತುವುದು, ಉಸುಕಿನ ಚೀಲ ಎತ್ತುವುದು, ಕವಣಿಕಲ್ಲು ಬೀಸುವುದು ಮುಂತಾದ ತಾಕತ್ತಿನ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾರೆ. ಹಲ್ಲುಗಳಿಂದಲೇ ನೀರು ತುಂಬಿದ ತಾಮ್ರದ ಕೊಡ ಎತ್ತಿದ ಮಹಿಳೆಯರು ಈ ಸಮುದಾಯದಲ್ಲಿ ಹುಟ್ಟಿದ್ದಾರೆ. ಆದರೆ ಇತ್ತೀಚೆಗಿನ ನಗರೀಕರಣದ ಪ್ರಭಾವಕ್ಕೆ ಸಿಕ್ಕು ದಾರಿ ತಪ್ಪುತ್ತಿರುವ ಈ ಸಮುದಾಯದ ಯುವಕರು ಮಧ್ಯವ್ಯಸನಿಗಳು, ಜೂಜುಕೋರರಾಗಿ ಸೋಮಾರಿಗಳಾಗುತ್ತಿದ್ದಾರೆ. ಇದುವರೆಗೆ ತಮ್ಮಗ್ರಾಮಗಳಲ್ಲಿ ಮುಂಚೂಣಿಯಲ್ಲಿ ನಿಂತು ಸಮಾಜ ಸೇವೆ ಮಾಡಿದವರು ಇಂದಿನ ಕಲುಷಿತ ರಾಜಕೀಯದ ಸುಳಿಯಲ್ಲಿ ಸಿಕ್ಕು ಅನಾಯಕತ್ವಕ್ಕೆ ಈಡಾಗಿದ್ದಾರೆ.

ಬದಲಾದ ಇತ್ತೀಚೆಗಿನ ದಿನಗಳಲ್ಲಿ ಜಿಲ್ಲೆಯಲ್ಲಿ ವಾಲ್ಮೀಕಿ ಸಮುದಾಯ ತನ್ನ ಬದುಕಿನ ಸಂಗಾತಿಯಾಗಿ ಕೃಷಿ, ಗೋವುಗಳ ಸಾಕಾಣಿಕೆ, ಎಮ್ಮೆ, ಕುರಿ, ಆಡುಗಳು ಹಾಗೂ ಸಣ್ಣ ಪ್ರಮಾಣದಲ್ಲಿ ಕೋಳಿ ಸಾಕಾಣಿಕೆಯಂತಹ ಉದ್ಯೋಗಗಳನ್ನು ಆಯ್ಕೆ ಮಾಡಿಕೊಂಡಿದೆ. ಹೊಟ್ಟೆಯ ತುತ್ತಿಗಾಗಿ, ನೆತ್ತಿಯ ಮೇಲಿನ ಸೂರಿಗಾಗಿ ನೆಮ್ಮದಿಯನಿದ್ದೆಗಾಗಿ ಇದೇ ವೃತ್ತಿ ಗಳನ್ನು ನೆಚ್ಚಿಕೊಂಡಿದೆ. ಈ ವೃತ್ತಿಗಳಲ್ಲಿಯೇ ಬೇರೆಯವರ ಹೊಟ್ಟೆ ತುಂಬಿಸಲು ಜೀತದ ಆಳುಗಳಾಗಿ, ಕೃಷಿ, ಕೂಲಿ ಕಾರ್ಮಿಕರಾಗಿ ಈ ಸಮುದಾಯದ ಬೆವರು ಸುರಿಯುತ್ತಿದೆ. ದುಡಿಮೆ ಈ ಸಮುದಾಯದಲ್ಲಿ ಕೇವಲ ಪುರುಷರಿಗಷ್ಟೆ ಸೀಮಿತವಾಗಿರದೆ ಮಹಿಳೆಯರೂ ಕಚ್ಚೆ ಹಾಕಿ ದುಡಿಯುತ್ತಾರೆ.

ಜಿಲ್ಲೆಯಲ್ಲಿ ಈ ಸಮುದಾಯ ರಾಜಕೀಯ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಸೇರಿದಂತೆ ಬಹುತೇಕ ಅವಕಾಶಗಳಿಂದ ವಂಚಿತವಾಗಿದೆ. ಇದಕ್ಕೆ ಮುಖ್ಯಕಾರಣ ಅನಕ್ಷರತೆ, ಬಡತನ, ಸಂಘಟನಾ ಕೊರತೆ ಎಂದೇ ಹೇಳಬೇಕಾಗುತ್ತದೆ. ಜಿಲ್ಲೆಯಲ್ಲಿರುವ ಒಟ್ಟು ಅನಕ್ಷರಸ್ಥರಲ್ಲಿ, ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿರುವವರ, ಸ್ವಂತ ನಿವೇಶನ, ಮನೆ, ಭೂಒಡೆತನ ಹೊಂದಿಲ್ಲದವರಲ್ಲಿ ಈ ಸಮುದಾಯದ ಪಾಲು ಶೇ ೫೦ಕ್ಕಿಂತ ಹೆಚ್ಚಿಗಿದೆ. ಮಹಿಳಾ ಸಾಕ್ಷರತೆಯಂತೂ ತೀರಾ ಕಡಿಮೆ ಪ್ರಮಾಣದಲ್ಲಿದೆ. ಈ ಸಮುದಾಯದ ಮಹಿಳೆಯರ ಶೇ ೬೦ರಷ್ಟು ಹೆರಿಗೆಗಳು ಅಸುರಕ್ಷಿತ ಹೆರಿಗೆಗಳಾಗುತ್ತಿವೆ. ಗರ್ಭಿಣಿ ಮಹಿಳೆಯರ ಸಾವು, ನವಜಾತ ಶಿಸುಗಳ ಸಾವಿನಲ್ಲಿ ಈ ಸಮುದಾಯದ ಪಾಲು ಹೆಚ್ಚಿದೆ. ಈ ಸಮುದಾಯದ ಶೇ ೬೫ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಾರೆ. ಶೇ ೮೦ರಷ್ಟು ಜನ ಅಸುರಕ್ಷಿತ ಕುಡಿಯುವ ನೀರು ಕುಡಿದು ಹಲವಾರು ಸಾಂಕ್ರಾಮಿಕ ರೋಗರುಜಿನಗಳಿಂದ ಬಳಲುತ್ತಿದ್ದಾರೆ. ವೈದ್ಯಕೀಯ ಸೇವೆಯಂತೂ ಈ ಸಮುದಾಯಕ್ಕೆ ದುರ್ಲಭ ಎಂದೇ ಹೇಳಬೇಕಾಗುತ್ತದೆ.

ತಮ್ಮ ಪಿತ್ರಾರ್ಜಿತ ಹೊಲ, ಮನೆಗಳನ್ನು ಮಾಡಿಕೊಂಡು ಕೂಲಿ, ನಾಲಿ ಮಾಡಿ ಉಪಜೀವನ ಸಾಗಿಸುತ್ತಿರುವ ಈ ಸಮುದಾಯ ಮೂಲತಃ ಅರಣ್ಯವಾಸಿಯಾಗಿದ್ದರೂ ಅರಣ್ಯ ಒತ್ತುವರಿಯಂತಹ ಕಾರ್ಯಮಾಡಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ ಒತ್ತುವರಿ ಯಾಗಿರುವ ೫೦೦ ಹೆ. ಅರಣ್ಯ ಪ್ರದೇಶದಲ್ಲಿ ಒಬ್ಬರೂ ಈ ಸಮುದಾಯದವರಿಲ್ಲ. ಇವರ ಸೇವೆಯನ್ನು ಬಳಸಿಕೊಂಡು ಮೇಲ್ವರ್ಗದ ದೊಡ್ಡ ದೊಡ್ಡ ರೈತರು ಅರಣ್ಯ ಒತ್ತುವರಿ ಮಾಡಿದ್ದಾರೆ. ವಾಲ್ಮೀಕಿ ಸಮುದಾಯ ಸಾಗಿ ಬಂದಿರುವ ಹಾದಿಯಲ್ಲಿ ಎಷ್ಟೋ ಮೈಲುಗಲ್ಲು ನಿಂತಿವೆ. ಬಾಗಲಕೋಟೆ ಜಿಲ್ಲೆಯ ಇತಿಹಾಸ ಎಂದರೆ ವಾಲ್ಮೀಕಿ ಸಮುದಾಯದ ಇತಿಹಾಸ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಆದರೆ ಸ್ವಾತಂತ್ರ್ಯ ದೊರೆತು ೬೦ ವರ್ಷಗಳಾದರೂ ಈ ಸಮುದಾಯದ ಬದುಕಿನಲ್ಲಿ ಮಹತ್ತರ ಬದಲಾವಣೆ ಆಗಿಲ್ಲ. ಮೇಲ್ವರ್ಗದವರಿಂದ ಬರೆಯಲ್ಪಟ್ಟ ಜಿಲ್ಲೆಯ ಇತಿಹಾಸದಲ್ಲಿ ಈ ಸಮುದಾಯದ ಬಗ್ಗೆ ಉದ್ದೇಶಪೂರ್ವಕವಾಗಿ ಸರಿಯಾಗಿ ಉಲ್ಲೇಖ ಮಾಡಿಲ್ಲ. ಆದರೆ ಈ ಸಮುದಾಯದ ಬಗ್ಗೆ ಬರೆಯಲಾರದ ಇತಿಹಾಸಕ್ಕಂತೂ ಕೊರತೆ ಇಲ್ಲ. ಈ ಜಿಲ್ಲೆಯ ಮಣ್ಣಿನ ಕಣಕಣ ದಲ್ಲೂ, ಕಲ್ಲುಕಲ್ಲುಗಳಲ್ಲೂ ಈ ಸಮುದಾಯದ ತ್ಯಾಗ, ಬಲಿದಾನದ ಸಾಹಸ ಗಾಥೆ ಅನುರಣಿಸುತ್ತಿದೆ.

ಜನರು ಇತಿಹಾಸ ನಿರ್ಮಿಸುತ್ತಾರೆ. ಆದರೆ ಇತಿಹಾಸ ಜನರನ್ನು ನಿರ್ಮಿಸುವುದಿಲ್ಲ. ನಾಯಕತ್ವ ಇಲ್ಲದ ಸಮುದಾಯ ಸುಮ್ಮನೆ ನಿಂತು ಬಿಡುತ್ತದೆ. ಅನಕ್ಷರತೆ ಹೆಚ್ಚಾಗಿರುವ ಯಾವುದೇ ಸಮುದಾಯ ಸದಾ ಹಿಂದುಳಿಯುತ್ತದೆ ಎಂಬ ಹ್ಯಾರೀಸ್ ಟ್ರೂಮನ್‌ನ ಮಾತು ವಾಲ್ಮೀಕಿ ಸಮುದಾಯಕ್ಕೆ ಸಂಪೂರ್ಣ ಅನ್ವಯವಾಗುತ್ತದೆ ಎಂದು ಹೇಳಿದರೆ ತಪ್ಪಾಗ ಲಾರದು. ಜಿಲ್ಲೆಯಲ್ಲಿ ಸಂಘಟನೆಯ ಬಲ ಇಲ್ಲದಿರುವುದರಿಂದ ಈ ಸಮುದಾಯ ಅಸಹಾಯಕವಾಗಿ ಶೋಷಣೆ ಅನುಭವಿಸುತ್ತಿದೆ. ನೋವು, ಅವಮಾನ, ದೌರ್ಜನ್ಯ, ಸಿಟ್ಟು, ಹತಾಶೆ ಎಲ್ಲವನ್ನೂ ಕಾಲ ಪಕ್ವವಾದಾಗ, ಸಂಘಟನೆಯ ಪ್ರಜ್ಞೆ ಜಾಗೃತವಾದಾಗ, ಸಮರ್ಥ ನಾಯಕತ್ವ ಮೂಡಿ ಬಂದಾಗ ಸ್ಫೋಟಿಸಿದರೆ ಆಶ್ಚರ್ಯಪಡಬೇಕಾಗಿಲ್ಲ.

ಇಂದು ಅಭಿವೃದ್ದಿ ಅರ್ಥವನ್ನು ಆದಾಯದ ಏರಿಕೆಯಿಂದಲಷ್ಟೇ ಪರಿಗಣಿಸಲಾಗದು. ಅದಕ್ಕೆ ಸೌಲಭ್ಯವಂಚಿತತೆಯ ಪರಿಕಲ್ಪನೆ ಬಂದಿದೆ. ಈ ಸಮುದಾಯದ ಆದಾಯ ಹೆಚ್ಚಿಸುವುದರ ಜತೆಗೆ ಆಯ್ಕೆ ಅವಕಾಶಗಳನ್ನು ಹೆಚ್ಚಿಸುವ ಕೆಲಸ ನಡೆಯಬೇಕಾಗಿದೆ. ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ, ರಾಜಕೀಯ ಸ್ವಾತಂತ್ರ್ಯ, ಸಾಂಸ್ಕೃತಿಕ ಮನ್ನಣೆ, ವ್ಯಕ್ತಿಗತ ಸುರಕ್ಷೆ, ಸಮುದಾಯದಲ್ಲಿ ಭಾಗವಹಿಸುವಿಕೆ, ಪಾರಿಸರಿಕ ಭದ್ರತೆ ದೊರಕಿಸಿಕೊಡ ಬೇಕಾಗಿದೆ. ದೇಶ, ರಾಜ್ಯ, ಜಿಲ್ಲೆಯ ಹಿತಕ್ಕಾಗಿ ಸದಾ ತ್ಯಾಗ ಮಾಡುತ್ತ ಬಂದಿರುವ ವಾಲ್ಮೀಕಿ ಸಮುದಾಯಕ್ಕೆ ಇನ್ನು ಮೇಲಾದರೂ ಭೋಗಗಳ ಸೌಲಭ್ಯ ದೊರಕಿಸಿಕೊಡುವ ಪ್ರಯತ್ನ ನಡೆಯಬೇಕಾಗಿದೆ.

* * *