ಭಾರತೀಯ ಪರಂಪರೆಯಲ್ಲಿ ಮಹಿಳೆಯನ್ನು ಪಾತಿವ್ರತ್ಯ ಮತ್ತು ಸಂಪತ್ತಿನ ಸಮೀಕರಣದೊಂದಿಗೆ ನೋಡುವ ಮೂಲಕ ಖಾಸಗಿ ಆಸ್ತಿಯನ್ನಾಗಿ ಪರಿಗಣಿಸಿದ ಸಂದರ್ಭ ಗಳೇ ಹೆಚ್ಚು. ಚರಿತ್ರೆಯನ್ನು ಅವಲೋಕಿಸಿದಾಗ ಲಿಂಗತಾರತಮ್ಯತೆಯ ಹಿನ್ನೆಲೆಯಲ್ಲಿ ಮಹಿಳೆಯು ಅಸ್ತಿತ್ವರಹಿತಳಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಉದಾಸೀನಕ್ಕೊಳಗಾಗುತ್ತಲೇ ಬಂದಿದ್ದಾಳೆ. ಪುರುಷನಿಗಿಂತ ಮಹಿಳೆ ದುರ್ಬಲಳು ಎನ್ನುವ ಅಸಮಾನ ನೆಲೆಗಳು ಕುಟುಂಬದಿಂದ ಹಿಡಿದು, ಸಮಾಜದ ವಿವಿಧ ಸ್ಥರಗಳಲ್ಲಿ ಬೆಸೆದುಕೊಂಡಿವೆ. ಇತಿಹಾಸದಲ್ಲಿ ರಾಜಮನೆತನದ ಮತ್ತು ಉನ್ನತವರ್ಗದ ಮಹಿಳೆಯರನ್ನು ಹೊರತುಪಡಿಸಿದರೆ, ಸಾಮಾನ್ಯ ವರ್ಗಗಳ ಮಹಿಳೆಯರ ಸ್ಥಾನಮಾನಗಳನ್ನು ಗುರುತಿಸುವುದು ಕಷ್ಟಸಾಧ್ಯವಾಗಿದೆ. ಇದಕ್ಕೆ ಬೇಡ ಸಮುದಾಯದ ಮಹಿಳೆಯರೂ ಹೊರತಾಗಿಲ್ಲ. ಕಾರಣ ಭಾರತೀಯ ಸಂಸ್ಕೃತಿಯ ಒಂದು ಭಾಗವೇ ಅವರು.

ಚರಿತ್ರೆಯನ್ನು ಅವಲೋಕಿಸಿದಾಗ ಬೇಡ ಸಮಾಜದಲ್ಲಿ ಪಾಳೆಗಾರರು (ಅಂದರೆ ಸಂಸ್ಥಾನಿ ಕರು) ಮೊದಲ ವರ್ಗವಾಗಿದ್ದರು. ಗುರಿಕಾರರು, ಸುಬೇದಾರರು, ಸೈನಿಕರು, ತುಬಾಕಿಯವರು, ಪೊಲೀಸ್ ಪಾಟೀಲ, ಕಟ್ಟೆಮನೆಯವರು, ಮಾಲಿ ಪಾಟೀಲ, ತಳವಾರ ಮೊದಲಾದ ಹುದ್ದೆಗಳಲ್ಲಿದ್ದ ಬೇಡರು ೨ನೇಯ ವರ್ಗದಲ್ಲಿದ್ದರು. ಬ್ರಾಹ್ಮಣ ಪುರೋಹಿತ, ವೀರಶೈವರ ಕೈ ಕೆಳಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದ ಬೇಡರೇ ಆದ ದಾಸಯ್ಯ ಸಮರಾಯ, ಪೂಜಾರಿಗಳು ೩ನೇ ವರ್ಗದಲ್ಲಿದ್ದರು. ಯಾವುದೇ ಹುದ್ದೆ ಅಥವಾ ನಿರ್ಧಿಷ್ಟ ವೃತ್ತಿಯಲ್ಲಿ ಇಲ್ಲದೆ ಬೇಟೆ ಪಶುಪಾಲನೆಯಲ್ಲಿ ತೊಡಗಿದವರು ೪ನೆಯ ವರ್ಗದಲ್ಲಿದ್ದರು. ನಾಲ್ಕು ವರ್ಗಗಳಿಂದ ಕೂಡಿದ ಬೇಡ ಸಮುದಾಯವು ಸಮಾಜದಲ್ಲಿ ಬೇರೆ ಬೇರೆ ರೀತಿಯ ಹುದ್ದೆ ಗಳಲ್ಲಿ ತೊಡಗಿ ತನ್ನದೇ ಆದ ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿತ್ತು ಎಂಬುದು ವಿಧಿತವಾಗುತ್ತದೆ.

ಮೇಲಿನ ೪ ವರ್ಗಗಳನ್ನು ಅವಲೋಕಿಸಿದಾಗ ಮಹಿಳೆಯರಿಗೆ ಸ್ಥಾನವೆಲ್ಲಿದೆ ಎಂದು ಹುಡುಕಾಡಬೇಕಾಗುತ್ತದೆ. ೪ ವರ್ಗಗಳು ಆರ್ಥಿಕತೆಗೆ ಅಥವಾ ದುಡಿಮೆಗೆ ಮೂಲವಾದ ವೃತ್ತಿಗಳ ಆಧಾರದ ಮೇಲೆ ನಿರ್ಧಾರವಾಗಿರುವುದು ನಿಚ್ಛಳವಾಗಿ ಗೋಚರಿಸುತ್ತದೆ. ಹಾಗಾದಲ್ಲಿ ಬೇಡ ಮಹಿಳೆಯರ ಆರ್ಥಿಕ ಸ್ಥಾನಮಾನಗಳೇನು? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಬೇಡ ಸಮುದಾಯ ಬಿಲ್ವಿದ್ಯೆಯಲ್ಲಿ ಪರಿಣತಿ ಪಡೆದಿತ್ತು. ಸೈನಿಕ ವೃತ್ತಿ ಇವರಿಗೆ ಪ್ರಿಯವಾದ ಉದ್ಯೋಗವಾಗಿತ್ತು. ಕ್ರಿ.ಶ. ೧೩೨೪ರ ಹರದನಹಳ್ಳಿ ಶಾಸನ, ಕ್ರಿ.ಶ. ೧೩೮೦ರ ಶಾಸನ, ಕ್ರಿ.ಶ. ೧೪೧೩ರ ಮೈಸೂರು ಚಾಮರಾಜನಗರ ತಾಲೂಕಿನ ಮೂಡಲಅಗ್ರಹಾರ ಶಾಸನ, ಇದೇ ತಾಲೂಕಿನ ೧೫೫೭ರ ಗಳಿಗೆ ಕೆರೆಶಾಸನಗಳಿಂದ ಬಹಳ ಪ್ರಮುಖವಾಗಿ ಬಾದಾಮಿ ಚಾಲುಕ್ಯರ ಕಾಲದಿಂದ ವಿಜಯನಗರದ ಕಾಲದವರೆಗೆ ಬೇಡ ಸಮುದಾಯದ ವೃತ್ತಿ ಬೇಟೆಯಾಗಿತ್ತು ಎಂದು ತಿಳಿದುಬರುತ್ತದೆ. ಆಡಳಿತ ನಡೆಸುವ ರಾಜಮನೆತನದವರು ತಮ್ಮ ರಾಜ್ಯವನ್ನು ಶತೃಗಳಿಂದ ರಕ್ಷಿಸಿಕೊಳ್ಳಲು ಕೂಲಿಯ ಸಿಪಾಯಿಗಳಾಗಿ ಬೇಡರನ್ನು ನೇಮಿಸಿಕೊಂಡಿದ್ದರು. ತಮ್ಮ ಧೈರ್ಯ ಸಾಹಸ ಪ್ರವೃತ್ತಿಗಳಿಂದ ಬೇಡರು ನಾಯಕ, ಗಾವುಂಡ, ರಾಯ, ವೀರ ಬಿರುದುಗಳನ್ನು ಪಡೆದುಕೊಂಡು ಸ್ಥಳೀಯ ಅಧಿಕಾರಿಗಳಾಗಿ ಬಡ್ತಿ ಹೊಂದಿದ್ದರು.

ಹಾಗೆಯೇ ರಾಷ್ಟ್ರಕೂಟರ ಕಾಲದಲ್ಲಿ ಬೇಡ ಪಡೆಗಳು  ಸೈನ್ಯದಲ್ಲಿ ಪ್ರಸಿದ್ದಿಯಾಗಿದ್ದವು. ಬೇಡ ಪಡೆಯ ಕಾಲ್ದಳವು ಮುಖ್ಯ ಅಂಗವಾಗಿತ್ತು. ಸೈನಿಕ ವೃತ್ತಿಯು ಬರುಬರುತ್ತಾ ಹೆಮ್ಮೆಯೊಂದಿಗೆ ವಂಶಪಾರಂಪರ್ಯವಾಯ್ತು. ಮುಂದೆ ಪಾಳೆಯಗಾರಿಕೆಗೂ ಕಾರಣ ವಾಯ್ತು. ೭ನೇ ಶತಮಾನದಿಂದ ಇವರ ಪ್ರತ್ಯೇಕ ರಾಜ್ಯಗಳೇ ಇದ್ದವೆಂದು ತಿಳಿಸುವ ಗದ್ದೆಮನೆಶಾಸನದಲ್ಲಿ ಬೇಡ ಕುಲದವರ ಸೈನಿಕ ವೃತ್ತಿಯನ್ನು ವರ್ಣಿಸಲಾಗಿದೆ. ಟಿಪ್ಪು ಸುಲ್ತಾನನ ಸೇನೆಯಲ್ಲಿದ್ದ ಬೇಡರ ಪಡೆಯು ೧೨ ಪಗೋಡಗಳ ವೇತನ ಹೊಂದಿತ್ತು. ಬೇಟೆಯ ವೃತ್ತಿಯಲ್ಲಿ ಪರಿಣಿತರಾದ ಇವರು ಯುದ್ಧದಲ್ಲಿ ಗೆಲವು ಸಾಧಿಸಲು ಸಹಕಾರಿ ಗಳಾಗಿದ್ದರು. ಹಾಗಾಗಿ ಹೈದರಾಲಿ ಮತ್ತು ಟಿಪ್ಪುಸುಲ್ತಾನರು ಅನೇಕ ಹೋರಾಟಗಳಲ್ಲಿ ಬೇಡ ಸೈನಿಕರಿಂದ ವಿಜಯ ಸಾಧಿಸಿದ್ದರು ಎಂದು ತಿಳಿಯುತ್ತದೆ.

ಪ್ರಾಂತ್ಯಗಳ ರಾಜರ ಗೆಲವು ಸಾಧಿಸಲು, ಬೇಡರ ಸೈನ್ಯದ ಪಡೆಗಳು ಅನಿವಾರ್ಯವಾದವು. ಇದರಿಂದ ಬೇಡ ಸಮುದಾಯದ ಮಹಿಳೆಯರ ಸಾಮಾಜಿಕ ಬದುಕಿನಲ್ಲೂ ಸ್ಥಿತ್ಯಂತರ ಗಳುಂಟಾದವು. ಪರಿಣಾಮವಾಗಿ ಮಹಿಳೆಯರು ಅರಮನೆಯಲ್ಲಿ ದಾಸಿಯರಾದರು. ಪರಿಚಾರಿಕೆಯರಾದರು. ಕೊನೆಗೆ ಸೈನಿಕರ ಅವಶ್ಯಕತೆಗಳನ್ನು ಪೂರೈಸುವ ಗಣಿಕೆಯರೂ ಆಗಬೇಕಾಯಿತು. ಹೀಗೆ ಪರಿಸ್ಥಿತಿಗಳ ಒತ್ತಡದಿಂದಲೋ ಅನಿವಾರ್ಯತೆಗಳಿಂದಲೋ ಬೇಡ ಮಹಿಳೆಯರು ಬೇಟೆ, ಬೇಸಾಯ, ಪಶುಪಾಲನೆಯ ನಂತರ ಜೀವನೋಪಾಯಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಯ್ತು.

ಯುದ್ಧಗಳಲ್ಲಿ ಮಡಿದ ಸೈನಿಕರ ಕುಟುಂಬದ ಮಹಿಳೆಯರು ಬಹಳ ಅನಿವಾರ್ಯವಾಗಿ, ನಿಧಾನವಾಗಿ ಸಾಮಾಜಿಕ ಮನ್ನಣೆ ಪಡೆದ ಬಸವಿ ಪರಂಪರೆಗೆ ತಲೆಬಾಗಬೇಕಾಯಿತು. ರಾಜ ಮನ್ನಣೆ ಪಡೆದ ದೇವದಾಸಿ ಪದ್ಧತಿಯು ಆರ್ಥಿಕವಾಗಿ ಬಹಳ ಮುಖ್ಯ ಮೂಲ ವಾಯಿತು. ದೇವದಾಸಿಯರು ರಾಜಕೀಯಾಡಳಿತದಲ್ಲಿ ಯುದ್ಧಗಳಲ್ಲಿ ಪಾಲ್ಗೊಳ್ಳುತ್ತಿದ್ದರು.

ಬೇಡ ಸಮುದಾಯದ ಮಹಿಳೆಯ ಸ್ಥಾನಮಾನಗಳು ಅವರ ಕುಟಂಬದ ಪುರುಷರ ಮೂಲಕ ನಿರ್ಧಾರವಾಗುತ್ತಿದ್ದವೆಂದು ಅನೇಕ ಸಂಗತಿಗಳಿಂದ ತಿಳಿಯಬಹುದು. ಉನ್ನತ  ವರ್ಗದ ಬೇಡ ಮಹಿಳೆಯರು ‘ನಾಗತಿ’ ಎಂಬ ಹೆಸರಿನಿಂದ ಗೌರವಕ್ಕೆ ಪಾತ್ರರಾಗಿರುತ್ತಿದ್ದರು. ಇವರು ಸಾರ್ವಜನಿಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದರು. ದೇವಾಲಯ, ಕೆರೆ, ಬಾವಿಗಳನ್ನು ಕಟ್ಟಿಸುತ್ತಿದ್ದರು ಹಾಗೂ ಜೀರ್ಣೋದ್ಧಾರ ಮಾಡಿಸುತ್ತಿದ್ದರು. ಗ್ರಾಮ ಗಳನ್ನು ನಿರ್ಮಿಸುತ್ತಿದ್ದರು. ಶೈಕ್ಷಣಿಕ ಕೇಂದ್ರಗಳಾದ ಅಗ್ರಹಾರಗಳನ್ನು ಸ್ಥಾಪಿಸುತ್ತಿದ್ದರು. ಇದಕ್ಕಾಗಿ ದಾನದತ್ತಿ ಬಿಡುತ್ತಿದ್ದರು.

ಇಂತಹ ಬೇಡ ಸಮುದಾಯವು ರಾಜಮನೆತನಗಳ ಪತನದ ನಂತರ ನಿರುದ್ಯೋಗದ ಸುಳಿಗೆ ಸಿಲುಕಿತು. ಇವರ ಕುಲವೃತ್ತಿಯಾದ ಬೇಟೆಯನ್ನು ಬ್ರಿಟೀಷರು ನಿಷೇಧಿಸಿದ್ದರಿಂದ ಆರ್ಥಿಕ ಮೂಲವಾದ ಬೇಟೆಯೂ ಇವರಿಗಿಲ್ಲವಾಯಿತು. ಅರಣ್ಯ ಸಂರಕ್ಷಣೆಗಾಗಿ ಬಂದ ಕಾನೂನುಗಳಿಂದಾಗಿ ಕಾಡಿನ ಪ್ರವೇಶಕ್ಕೆ ನಿರ್ಬಂಧ ಉಂಟಾಯಿತು. ಜೀವನ ನಿರ್ವಹಣೆಗೆ ಪರ್ಯಾಯ ಮಾರ್ಗಗಳು ಅನಿವಾರ್ಯವಾದವು.

ಹಿಂದುಳಿದ ಪ್ರದೇಶವೆಂದು ಕರೆಯಿಸಿಕೊಳ್ಳುತ್ತಿರುವ ಉತ್ತರ ಕರ್ನಾಟಕದ ಬಾಗಲಕೋಟೆ ಪರಿಸರದಲ್ಲಿರುವ ಬೇಡ ಸಮುದಾಯವು ಕೃಷ್ಣ ನದಿಗೆ ಕಟ್ಟಲಾಗಿರುವ ಅಣೆಕಟ್ಟೆಯಿಂದ ಮುಳುಗಡೆ ಪ್ರದೇಶವಾಗಿದೆ. ಕೃಷಿ ಪ್ರಧಾನವಾದ ಈ ಭಾಗದಲ್ಲಿ ಭೂಮಿಯನ್ನು ಕಳೆದು ಕೊಂಡು ಸರ್ಕಾರ ಕೊಡುತ್ತಿರುವ ಅಲ್ಪ ಪರಿಹಾರದಲ್ಲೇ ಪುನರ್ವಸತಿ ಕೇಂದ್ರಗಳಲ್ಲಿ ಹೊಸ ಬದುಕನ್ನು ರೂಪಿಸಿಕೊಳ್ಳಲು ಸಮುದಾಯವು ಪ್ರಯತ್ನ ನಡೆಸಿದೆ. ಬೇಡ ಸಮುದಾಯದ ಮಹಿಳೆಯರ ಬದುಕು ಮತ್ತಷ್ಟು ಅತಂತ್ರವಾಗಿದೆ. ಉಳಿದ ಸಮುದಾಯಗಳ ಕೆಳ ವರ್ಗದ ಮಹಿಳೆಯರ ಬದುಕಿಗಿಂತ ಬೇಡ ಮಹಿಳೆಯರ ಆರ್ಥಿಕ ಸ್ಥಿತಿಗಳು ಭಿನ್ನವಾಗೇನೂ ಇಲ್ಲ.

ಬಾಗಲಕೋಟೆ ಪರಿಸರದಲ್ಲಿರುವ ಬೇಡ ಸಮುದಾಯವು ಲಿಂಗ ತಾರತಮ್ಯವಿಲ್ಲದೆ ಕೃಷಿಯನ್ನೇ ಅವಲಂಬಿಸಿದೆ. ಮಹಿಳೆ ಪುರುಷರಾದಿಯಾಗಿ ಕೃಷಿ ಕಾರ್ಮಿಕರಾಗಿದ್ದಾರೆ. ಸ್ವಂತ ಕೃಷಿ ಮಾಡುವವರು ವಿರಳ. ಮೊದಲು ಕಾಡಿನ ಜೊತೆ ನಂಟು ಇದ್ದಾಗ ಜೇನುತುಪ್ಪ ಸಂಗ್ರಹ, ಆನೆಯ ದಂತಗಳು, ಕಾಡುಕೋಣ ಮೊದಲಾದ ಪ್ರಾಣಿಯ ಕೋಡುಗಳು, ವಿವಿದ ಪ್ರಾಣಿಗಳ ಚರ್ಮ, ನವಿಲುಗರಿ, ಪುನಗನ ಬೆಕ್ಕು, ಗಿಡದ ಅಂಟು ಸಂಗ್ರಹ ಇಂತಹ ವೈವಿಧ್ಯತೆಯ ಸಂಗ್ರಹ ಆರ್ಥಿಕ ಮೂಲವಾಗಿತ್ತು. ಜೊತೆಗೆ ಕವಳೆ, ಬೋರೆ, ನೇರಳೆ, ಕಾರೆ ಹಣ್ಣು ಸಂಗ್ರಹಿಸಿ ಮಾರುವುದೂ ಇತ್ತು. ಕಟ್ಟಿಗೆ ಸಂಗ್ರಹಿಸಿ ಮಾರುವುದು, ಪತ್ರಾವಳಿ ಮಾರಾಟ ಇವೆಲ್ಲವೂ ಜೀವನೋಪಾಯಕ್ಕೆ ಆಧಾರವಾಗಿದ್ದವು. ಆಧುನಿಕ ಸಂದರ್ಭದಲ್ಲಿ ಮೇಲಿನ ಅನೇಕ ಕಾಯಕಗಳು ಕಣ್ಮರೆಯಾಗಿವೆ.

ರಾಜಮನೆತನಗಳಿದ್ದಾಗ ತಳವಾರರು ಅಂದರೆ ಬೇಡರು ಗ್ರಾಮರಕ್ಷಣೆಗೆ ನಿಯೋಜಿತ ರಾದವರಾಗಿದ್ದರು. ಈಗ ತಳವಾರಿಕೆ ಎಂದರೆ ಬೇರೆಯವರ ಮನೆಗಳಲ್ಲಿ ಕಸಮುಸುರೆ ಮಾಡುವುದು, ಹೊಲಗಳಲ್ಲಿ ದುಡಿಯುವುದು, ಅವರು ಎತ್ತಿಕೊಟ್ಟದ್ದನ್ನು ಸ್ವೀಕರಿಸುವುದು, ಉನ್ನತ ಜಾತಿಯವರಿಗಾಗಿ ಸೇವೆಗಳನ್ನು ಮಾಡುವ ಅರ್ಥವ್ಯಾಪ್ತಿಯನ್ನು ಹೊಂದಿದೆ.

ಪ್ರಸ್ತುತದಲ್ಲಿ ಬೇಡ ಸಮುದಾಯದವರು ಕೃಷಿಯೊಂದಿಗೆ ಮರಗಳಿಂದ ಅಂಟು ಬಿಡಿಸುವುದು, ಪಶುಪಾಲನೆ, ಹೈನುಗಾರಿಕೆ, ಬೇವಿನ ಬೀಜ, ಹೊಂಗೆ ಬೀಜದಂತಹ ಎಣ್ಣೆ ಕಾಳುಗಳ ಸಂಗ್ರಹ, ತರಕಾರಿ ಮಾರುವುದು, ಹಣ್ಣು ಹಂಪಲು ಮಾರುವುದು, ಹೂ ಕಟ್ಟುವುದು, ವೀಳ್ಯೆದೆಲೆ ಮಾರುವುದು, ದವಸಧಾನ್ಯ ಹಸನು ಮಾಡುವುದು, ದಿನಗೂಲಿಗಳಾಗಿ ದುಡಿಯು ವುದು, ಗಾರೆಕೆಲಸ ಮಾಡುವುದು, ಬೀಡಿಕಟ್ಟುವುದು, ಅಗರಬತ್ತಿ ತಯಾರಿಸುವುದು, ಮಂಡಾಳು ಭಟ್ಟಿಗಳಲ್ಲಿ ಕೆಲಸ ಮಾಡುವುದು, ಸುಣ್ಣ ಬಳಿಯುವುದು, ನಾಟಕಗಳಲ್ಲಿ ಪಾತ್ರ ಮಾಡುವುದು, ಗೂಡಂಗಡಿ ಇಟ್ಟುಕೊಳ್ಳುವುದು ಇಂತಹ ಅನೇಕ ಕಾಯಕಗಳಲ್ಲಿ ಸ್ತ್ರೀ ಪುರುಷರಾದಿಯಾಗಿ ತೊಡಗಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ.

ಇಂದಿಗೂ ಕೆಲವು ಹಿಂದುಳಿದ ಹಳ್ಳಿಗಳಲ್ಲಿ ಬಾಬದವರು ಇದ್ದಾರೆ. ಇವರು ಡಂಗುರ ಹಾಕುವ ಮೂಲಕ ಊರಿನ ಜನರಿಗೆ ಸತ್ತಸುದ್ದಿ ತಿಳಿಸುವುದು, ಊರಿನ ಜಾತ್ರೆಯ ದಿನಾಂಕ ತಿಳಿಸುವುದು, ಸಭೆಗಳ ವಿಷಯ ತಿಳಿಸುವಂತಹ ನಿರ್ಧಿಷ್ಟ ವಿಷಯಗಳನ್ನು ತಿಳಿಸುವ ಚಾಕರಿ ಮಾಡುತ್ತಿದ್ದಾರೆ.

ಸಮುದಾಯದ ದೇವತೆಗಳಾದ ಉದ್ದವ್ವ, ಹೊನ್ನವ್ವ, ಜುಂಜಪ್ಪರನ್ನು ಪೂಜಿಸುವ ಪೂಜಾರಿ ಹಾಗೂ ಪೂಜಾರಿಣಿಯರೂ ಇದ್ದು, ಕಾಣಿಕೆ ಹಾಗೂ ನೈವೇದ್ಯ ಸ್ವೀಕರಿಸುವುದು ಇವರ ಹಕ್ಕಿನ ಉತ್ಪನ್ನವಾಗಿದೆ. ಉನ್ನತವರ್ಗದವರ ಮನೆಗಳಲ್ಲಿ ಸೂತಕದಂತಹ ಸಂದರ್ಭ ಗಳಲ್ಲಿ ಸೇವೆ ಮಾಡಿ ಚಾಜ (ಶುಲ್ಕ) ಸ್ವೀಕರಿಸುತ್ತಾರೆ.

ಇನ್ನು ಕೆಲವರು ಅಂಗನವಾಡಿ ಕಾರ್ಯಕರ್ತೆಯರಾಗಿದ್ದಾರೆ. ವಿದ್ಯಾವಂತರು ಸರ್ಕಾರಿ ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ದುಡಿಯುತ್ತಿದ್ದಾರೆ. ಈ ಎಲ್ಲ ಕಾಯಕಗಳೊಂದಿಗೆ ಮಹಿಳೆಯರ ದುಡಿಮೆಯನ್ನು ೩ ಬಗೆಯಲ್ಲಿ ವರ್ಗೀಕರಿಸಿ ನೋಡಬಹುದು. ೧. ಉತ್ಪಾದನಾ ದುಡಿಮೆ ೨. ಕೌಟುಂಬಿಕ ದುಡಿಮೆ. ೩. ಸಂತಾನೋತ್ಪತ್ತಿ ದುಡಿಮೆ. ಮೇಲಿನ ಎಲ್ಲ ದುಡಿಮೆಗಳು ಉತ್ಪಾದನಾ ದುಡಿಮೆಯಲ್ಲಿ ಸೇರುತ್ತವೆ. ಈ ದುಡಿಮೆ ಸ್ತ್ರೀ ಪುರುಷರಿಗೆ ಸಮಾನವಾಗಿದೆ. ಕೌಟುಂಬಿಕ ದುಡಿಮೆಯಲ್ಲಿ ಪುರುಷರ ದುಡಿಮೆಯ ಪ್ರಮಾಣಕ್ಕಿಂತ ಮಹಿಳೆಯರ ದುಡಿಮೆಯ ಪ್ರಮಾಣವು ಅಧಿಕವಾಗಿದೆ. ೩ನೆಯ ದುಡಿಮೆಯು ಸಂಪೂರ್ಣವಾಗಿ ಮಹಿಳೆಗೆ ಸಂಬಂಧಿತವಾಗಿದೆ.

ಹೀಗೆ ಆರ್ಥಿಕವಾಗಿ ಹಿಂದುಳಿದಿರುವ, ಅಭಿವೃದ್ದಿ ದೃಷ್ಟಿಂದ ಕೆಳಮಟ್ಟದಲ್ಲಿರುವ ಬೇಡ ಸಮುದಾಯಕ್ಕೆ ದುಡಿಮೆ ಅನಿವಾರ್ಯವಾಗಿದೆ. ದುಡಿಮೆಯೇ ಬದುಕಾಗಿದೆ. ಬೇಡ ಸಮುದಾಯ ಕೃಷಿಯೇತರ ಚಟುವಟಿಕೆಗಳಲ್ಲಿ ವಿರಳವಾಗಿದ್ದು, ಕೃಷಿಯ ಮೇಲೆ ಅಧಿಕ ಒತ್ತಡ ಇರುವ ಏಕರೂಪಿ ಆರ್ಥಿಕತೆಯನ್ನು ಅವಲಂಬಿಸಿದೆ. ಇವರ ಧಾರುಣ ಶಕ್ತಿಯು ಅತ್ಯಂತ ಕೆಳಮಟ್ಟದಲ್ಲಿದೆ. ಸರ್ಕಾರದಿಂದಾಗಲಿ ಅಥವಾ ಖಾಸಗಿಯಾಗಿ ಹರಿದು ಬರುವ ಅವಕಾಶಗಳನ್ನು ತನ್ನದಾಗಿಸಿಕೊಳ್ಳುವ ಸಾಮರ್ಥ್ಯ ಮತ್ತು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ವನ್ನು ಹೊಂದಿದಾಗ ಮಾತ್ರ ಸಮುದಾಯ ಬದುಕನ್ನು ಉತ್ತಮಪಡಿಸಿಕೊಳ್ಳುವ ಸಾಧ್ಯತೆ ಗಳನ್ನು ತಳ್ಳಿಹಾಕುವಂತಿಲ್ಲ. ಹಿಂದುಳಿದ ಮತ್ತು ಮುಳುಗಡೆ ಪ್ರದೇಶವಾದ ಬಾಗಲಕೋಟೆ ಯಲ್ಲಿ ಬೇಡ ಸಮುದಾಯದ ಜೀವನ ಮಟ್ಟ, ವರಮಾನ ಉತ್ತಮ ಸ್ಥಿತಿಯಲ್ಲಿ ಇಲ್ಲವೆಂದು ಮೇಲ್ಕಂಡ ಸಂಗತಿಗಳಿಂದ ಗೋಚರವಾಗುತ್ತದೆ. ವರಮಾನದ ಏರಿಕೆಯ ಗತಿಯೇ ಅಭಿವೃದ್ದಿ ಯನ್ನು ಅಳತೆ ಮಾಡುವ ಮಾನದಂಡ ಎಂಬ ವ್ಯಾಖ್ಯಾನವಿದೆ. ಈ ವ್ಯಾಖ್ಯಾನದ ಹಿನ್ನೆಲೆ ಯಲ್ಲಿ ಬೇಡ ಸಮುದಾಯದ ವರಮಾನದಲ್ಲಿ ಅಂತಹ ಏರಿಕೆಯೇನೂ ಕಾಣಬರುತ್ತಿಲ್ಲ. ವ್ಯಾಖ್ಯಾನದ ಹಿನ್ನೆಲೆಯಲ್ಲಿ ಬೇಡ ಸಮುದಾಯ ಇನ್ನೂ ಅಭಿವೃದ್ದಿಯ ಮುಂಚೂಣಿಗೆ ಬರಬೇಕಾಗಿದೆ. ಯಥೇಚ್ಛವಾದ ಮಾನವ ಸಂಪನ್ಮೂಲವನ್ನು ಹೊಂದಿರುವ ಬೇಡ ಸಮುದಾಯವು ನಿಶ್ಚಿತ ಕಾಲದಲ್ಲಿ ವೃತ್ತಿ, ಉದ್ದಿಮೆಗಳಲ್ಲಿ ಪರಿಣತಿ ಪಡೆದು ಅದರ ಉಪಯೋಗವನ್ನು ಸ್ವಂತ ಬೆಳವಣಿಗೆಗೆ ಉಪಯೋಗಿಸಿಕೊಂಡರೆ ಮಾನವ ಸಂಪನ್ಮೂಲ ಅಭಿವೃದ್ದಿಯಾಗಲು ಸಾಧ್ಯತೆಗಳಿವೆ.

ಚರಿತ್ರೆಯನ್ನು ಅವಲೋಕಿಸಿದಾಗ ಬೇಡ ಸಂಸ್ಥಾನಿಕರು ರಾಜ್ಯಾಧಿಕಾರ ಹಿಡಿದು ಆಡಳಿತ ನಡೆಸುತ್ತಿದ್ದಾಗಲೇ ಶಿಕ್ಷಣ ಓದು ಬರಹದ ಕುರಿತು ಯೋಚಿಸಲಿಲ್ಲ. ರಾಜ್ಯಾಡಳಿತವೊಂದೇ ತಮ್ಮ ಕರ್ತವ್ಯ. ಓದು ಬರಹವೆಲ್ಲ ಬ್ರಾಹ್ಮಣರಿಗೆ ಸೇರಿದ್ದು ಎಂಬ ಮನೋಭಾವನೆಯನ್ನು ಬೇಡ ಸಂಸ್ಥಾನಿಕರು ಹೊಂದಿದ್ದರು. ಉನ್ನತ ವರ್ಗದ ಬೇಡ ಮಹಿಳೆಯರು ಅರಮನೆಯ ಘೋಷಾದಲ್ಲಿ ಇದ್ದುದ್ದರಿಂದ ಇವರ ಶಿಕ್ಷಣ ಅರಮನೆಯ ಒಳಗೇ ಸೀಮಿತವಾಗಿತ್ತು. ರಾಜಪರಿವಾರದವರು ಶಿಕ್ಷಣ ಪಡೆದರೂ ಅದು ಕಂಠಪಾಠದ ರೂಪದಲ್ಲಿರುತ್ತಿತ್ತು. ಬೇಡರಲ್ಲೇ ಕೆಳವರ್ಗದವರು ಬದುಕಲು ದುಡಿಯಲೇ ಬೇಕಾದ ಅನಿವಾರ್ಯತೆ ಹಾಗೂ ಬಡತನ ಇದ್ದುದರಿಂದ ಶಿಕ್ಷಣದ ಕುರಿತು ಯೋಚಿಸುತ್ತಿರಲಿಲ್ಲ. ಕುಟುಂಬದ ದುಡಿಮೆಗೆ ಆಸರೆಯಾಗಿ ಮಹಿಳೆಯೂ ದುಡಿಯಬೇಕಾದುದರಿಂದ ಮಹಿಳೆಯರಿಗೂ ಶಿಕ್ಷಣಕ್ಕೆ ಅವಕಾಶ ಇರುತ್ತಿರಲಿಲ್ಲ. ಜೊತೆಗೆ ಜಾತಿ ವರ್ಗಾಧಾರಿತವಾದ ಮೇಲುಕೀಳು ಆಚರಣೆ ಕಟ್ಟುನಿಟ್ಟಾಗಿತ್ತು. ಆದ್ದರಿಂದ ಕೆಳವರ್ಗದ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಶಿಕ್ಷಣ ಗಗನ ಕುಸುಮ ವಾಗಿತ್ತು. ಮಠಗಳು, ಅಗ್ರಹಾರಗಳು, ದೇವಾಲಯಗಳು ಶಿಕ್ಷಣ ಕಲಿಸುವ ಕೇಂದ್ರಗಳಾ ಗಿದ್ದವು. ಆದರೆ ಕೆಳವರ್ಗದವರಿಗೆ ದೇವಾಲಯಕ್ಕೆ ಪ್ರವೇಶ ಇರಲಿಲ್ಲ.

ಕೆಲವು ಪೂರ್ವಾಗ್ರಹ ಪೀಡಿತ ಭಾವನೆಗಳಿಂದಾಗಿ ಆರಂಭದಲ್ಲಿ ಗುರುತಿಸಿದಂತೆ ಬೇಡರ ನಾಲ್ಕು ವರ್ಗಗಳು ಶಿಕ್ಷಣದಿಂದ ವಂಚಿತವಾಗಿದ್ದವು. ಈ ರೀತಿ ಶಿಕ್ಷಣದ ಕುರಿತು ಉದಾಸೀನತೆಯಿಂದ ಬೇಡರ ಚರಿತ್ರೆಯು ಸರಿಯಾದ ಕ್ರಮದಲ್ಲಿ ದಾಖಲಾಗಲು ಸಾಧ್ಯವಾಗಲಿಲ್ಲ. ಹೀಗಿದ್ದರೂ ಬೇಡ ಸಂಸ್ಥಾನಿಕರು ಶಿಕ್ಷಣದ ಅಭಿವೃದ್ದಿಗೆ ಶ್ರಮಿಸಿದರು. ಶಿಕ್ಷಣ ಕೇಂದ್ರಗಳಿಗೆ ಅನೇಕ ಗ್ರಾಮಗಳನ್ನು ದತ್ತಿ ಬಿಡುತ್ತಿದ್ದರು.

ಶಿಕ್ಷಣ ಪ್ರೇಮಿಗಳಾದ ನಾಗತಿಯರೂ ಅನೇಕ ಅಗ್ರಹಾರ ಕಟ್ಟಿಸಿ ದಾನದತ್ತಿ ನೀಡಿದ್ದಾರೆ. ರಾಜ ಪರಿವಾರದ ಮಹಿಳೆಯರಿಗೆ ಶಿಕ್ಷಣ ಕೊಡಿಸಲು ಉದಾಸೀನ ತೋರಿದರೂ, ಕೆಲವು ರಾಣಿಯರು ರಾಜಕೀಯ ಅನುಭವದಿಂದ ಸ್ವಾತಂತ್ರ್ಯ ಹೊಂದಿ ಸಾರ್ವಜನಿಕ ಕೆಲಸ ಮಾಡುತ್ತಿ ದ್ದರು. ಇವರು ಧರ್ಮ, ಪುರಾಣ, ಕಾವ್ಯ, ಇತಿಹಾಸ, ಭಾಷೆ ಮೊದಲಾದ ವಿಷಯಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಇವರು ಶಿಕ್ಷಣ ಪಡೆಯುವ ಸಂದರ್ಭ ಇದ್ದು ಆಸಕ್ತಿ ಹೊಂದಿ ದ್ದರೂ ಅತ್ಯಂತ ಸೂಕ್ಷ್ಮವಾಗಿ ಅವರನ್ನು ಶಿಕ್ಷಣದಿಂದ ದೂರ ಇರಿಸುವ ಪ್ರಯತ್ನ ನಡೆಯು ತ್ತಿತ್ತು. ಬಹುಶಃ ಪುರುಷರಾದ ತಾವೇ ಕಲಿಯುತ್ತಿಲ್ಲ. ಇನ್ನು ಮಹಿಳೆಯರಿಗೇಕೆ ಶಿಕ್ಷಣ ಎಂಬ ತಾತ್ಸರ ಭಾವನೆ ಇರಬಹುದು.

ನಂತರ ಮಿಶನರಿ ಶಾಲೆಗಳು ಬಂದರೂ ಕಲಿಯಲು ಆಸಕ್ತಿ ತೋರದೆ ತಾವು ರಾಜ ಮನೆತನಕ್ಕೆ ಸೇರಿದವರು ಎಂಬ ಭ್ರಮೆಯಲ್ಲಿ ಇರುವ ಆಸ್ತಿಯಲ್ಲೇ ಜೀವನ ಸಾಗಿಸುತ್ತ ಬಂದರು. ಈ ಘೋಷಾ ಪ್ರಭಾವದಿಂದ ಇನ್ನೂ ಕೆಲವು ಹಳೆಯ ಬೇಡ ಸಂಸ್ಥಾನಿಕರು ತಮ್ಮ ಹೆಣ್ಣು ಮಕ್ಕಳನ್ನು ಓದಿಸುವ ಪದ್ಧತಿ ಇಲ್ಲ ಎಂದು ಈಗಲೂ ಹೇಳುತ್ತಿದ್ದಾರೆ. ನಿಧಾನವಾಗಿ ಶಿಕ್ಷಣದ ಮಟ್ಟ ಏರುತ್ತಿದೆಯಾದರೂ ಮಹಿಳೆಯರ ಶಿಕ್ಷಣದ ಕುರಿತು ಸಮುದಾಯ ಗಮನ ಹರಿಸುತ್ತಿಲ್ಲ.

ಬೇಡ ಸಮುದಾಯದ ಆರ್ಥಿಕ ಸ್ಥಿತಿಗೂ ಶಿಕ್ಷಣಕ್ಕೂ ನೇರವಾದ ಸಂಬಂಧವಿದೆ. ಧಾರಣಶಕ್ತಿಯ ದುಃಸ್ಥಿತಿಯೇ ಬಡತನ ಎಂದು ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಹೇಳಿದ್ದಾರೆ. ಹಾಗಾದರೆ ಧಾರಣಶಕ್ತಿಯ ದುಃಸ್ಥಿತಿಯಿಂದ ಹೊರಬರಲು ಮಾರ್ಗವೇನು? ಧಾರಣಶಕ್ತಿಯು ಅಕ್ಷರ ಜ್ಞಾನದಿಂದ ಪ್ರಾಪ್ತವಾಗುತ್ತದೆ. ಸಾಕ್ಷರತೆಯು ಬದುಕನ್ನು ಉತ್ತಮಪಡಿಸಿಕೊಳ್ಳಲು ಅವಕಾಶಗಳನ್ನು ವರ್ಧಿಸುತ್ತದೆ. ಈ ಹಿನ್ನೆಲೆಯಲ್ಲಿ ಸಾಕ್ಷರತೆಯೇ ಅಭಿವೃದ್ದಿಯಾಗಿದೆ. ಬೇಡ ಸಮುದಾಯವು ಆರ್ಥಿಕವಾಗಿ ಕೆಳಮಟ್ಟದಲ್ಲಿರುವುದಕ್ಕೆ ತಜ್ಞರ ಪ್ರಕಾರ ಅನಕ್ಷರತೆಯೇ ಪ್ರಮುಖ ಕಾರಣವಾಗಿದೆ.

ಸಮುದಾಯವನ್ನು ಸರ್ಕಾರವು ಪರಿಶಿಷ್ಟ ಪಂಗಡದಲ್ಲಿ ಗುರುತಿಸಿದೆ. ನಿರ್ದಿಷ್ಟ ಮೀಸಲಾತಿ ಯನ್ನು ನೀಡಿದೆ. ಬೇಡ ಸಮುದಾಯವನ್ನು ಒಳಗೊಂಡ ಪರಿಶಿಷ್ಟ ಪಂಗಡಕ್ಕೆ ಲಿಂಗ ಭೇದವಿಲ್ಲದೆ ಅನೇಕ ಸವಲತ್ತುಗಳನ್ನು ನೀಡಿದೆ. ಕಲಿಕೆಯ ಉನ್ನತ ಹಂತದವರೆಗೂ ಮೀಸಲಾತಿ ಸೌಲಭ್ಯವನ್ನು ನೀಡಿದೆ.

ಪರಿಶಿಷ್ಟ ವರ್ಗದಲ್ಲಿ ಸೇರ್ಪಡೆಯಾಗಿರುವ ಬೇಡ ಸಮುದಾಯದ ಶಿಕ್ಷಣಕ್ಕಾಗಿ ನರ್ಸರಿ ಮತ್ತು ಮಹಿಳಾ ಕಲ್ಯಾಣ ಕೇಂದ್ರಗಳನ್ನು ತೆರೆಯಲಾಗಿದೆ. ರಾಜ್ಯದಲ್ಲಿ ಇಂತಹ ಅನೇಕ ಕೇಂದ್ರಗಳಿವೆ. ಆಶ್ರಮ ಶಾಲೆಗಳ (Boarding school)ನ್ನು ತೆರೆಯಲಾಗಿದ್ದು,   ಕಲಿಯು ವವರು ಉಚಿತ ಸೌಲಭ್ಯಗಳನ್ನು ಹೊಂದಿದ್ದಾರೆ. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಶಾಲೆಗಳನ್ನು ತೆರೆದಿದ್ದು, ಸರ್ಕಾರ ಅನೇಕ ಸವಲತ್ತುಗಳನ್ನು ನೀಡಿದೆ. ಖಾಸಗಿಯಾಗಿ ನಡೆಯುತ್ತಿರುವ ಅನುದಾನಿತ ವಿದ್ಯಾರ್ಥಿ ನಿಲಯಗಳಿಗೆ ಸರ್ಕಾರ ಧನ ಸಹಾಯ ನೀಡುತ್ತಿದೆ. ಈ ಮೂಲಕ ಉಚಿತ ಊಟ, ಉಪಾಹಾರ, ಉಡುಪು, ಪುಸ್ತಕ ಹಾಗೂ ಇತರ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತದೆ.

ಹಾಗೆಯೇ ಕುಟುಂಬದ ವಾರ್ಷಿಕ ವರಮಾನವನ್ನು ಆಧರಿಸಿ ಭಾರತ ಸರ್ಕಾರದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಹಾಗೂ ರಾಜ್ಯ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಸೌಲಭ್ಯವನ್ನು ಸರ್ಕಾರ ಕಲ್ಪಿಸಿದೆ. ವೈದ್ಯಕೀಯ, ತಾಂತ್ರಿಕ ಹೀಗೆ ವಿವಿಧ ಕೋರ್ಸ್‌ಗಳಲ್ಲಿ ಶಿಕ್ಷಣ ಪಡೆಯುತ್ತಿರುವವರು ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿರುತ್ತಾರೆ. ಇವೆಲ್ಲ ಸೌಲಭ್ಯಗಳೊಂದಿಗೆ ಪ್ರೌಢಶಾಲೆಯ ಹೆಣ್ಣು ಮಕ್ಕಳಿಗಾಗಿ ಹೆಚ್ಚುವರಿಯಾಗಿ ಪ್ರತಿ ವಿದ್ಯಾರ್ಥಿ ನಿಗೂ ನಿರ್ಧಿಷ್ಟ ಮೊತ್ತದ ಪ್ರೋನೀಡಲಾಗುತ್ತಿದೆ. ಇದು ಪ್ರೌಢ ಶಾಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲಿಕ್ಕಾಗಿ ಸರ್ಕಾರ ಕೈಗೊಂಡ ವಿಶೇಷ ಕ್ರಮವಾಗಿದೆ.

ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯಲ್ಲಿ ತೊಡಗಿರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಎಂ.ಫಿಲ್ ಮತ್ತು ಪಿಎಚ್.ಡಿ. ಫೆಲೋಶಿಪ್‌ನ್ನು (೮ರಿಂದ ೧೦ ಸಾವಿರ) ನೀಡಲಾಗುತ್ತದೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶದ ವಿಶ್ವವಿದ್ಯಾಲಯಕ್ಕೆ ತೆರಳುವ ಈ ವರ್ಗದ ವಿದ್ಯಾರ್ದಿಗಳಿಗೆ ಗಿರಿಜನ ಉಪಯೋಜನೆಯಲ್ಲಿ ಕ್ರೋಢೀಕರಿಸಿದ ಹಣದಲ್ಲಿ ಧನ ಸಹಾಯ ನೀಡಲಾಗುತ್ತಿದೆ. ಇದಕ್ಕಾಗಿ ಸರ್ಕಾರವು ನಿರ್ಧಿಷ್ಟ ಷರತ್ತುಗಳನ್ನು ವಿಧಿಸಿದೆ. ಈ ಅನುದಾನದಲ್ಲಿ ಬೇಡ ಸಮುದಾಯ ಒಳಗೊಂಡ ಪರಿಶಿಷ್ಟ ವರ್ಗದ ವಿದ್ಯಾವಂತ ನಿರುದ್ಯೋಗಿಗಳಿಗೆ ಪೈಲಟ್ ಹುದ್ದೆಗೆ ಅವಕಾಶವಾಗುವಂತೆ ತರಬೇತಿ ಸೌಲಭ್ಯ ವನ್ನು ನೀಡಿದೆ. ಪ್ರತಿ ಅಭ್ಯರ್ಥಿಯ ತರಬೇತಿ ವೆಚ್ಚ ಸುಮಾರು ೧೧ ಲಕ್ಷ ರೂಪಾಯಿ ಗಳಾಗಿದ್ದು, ತರಬೇತಿ ಹೊಂದಿದ ಅಭ್ಯರ್ಥಿಗಳಿಗೆ ಉದ್ಯೋಗ ದೊರೆತ ಮೇಲೆ ತಮ್ಮ ಮಾಸಿಕ ವೇತನದಲ್ಲಿ ಶೇ. ೫೦ರಷ್ಟನ್ನು ೨ ವರ್ಷಗಳವರೆಗೆ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.

ಮಹಿಳೆಯರಿಗೆ ಗಿರಿಜನ ಉಪಯೋಜನೆಯ ಅಡಿಯಲ್ಲಿ ಗಗನಸಖಿ/ಟ್ರಾವೆಲ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ಒಂದು ವರ್ಷದ ಅವಧಿಯ ಉಚಿತ ತರಬೇತಿಯನ್ನು ಸರ್ಕಾರ ನೀಡುತ್ತದೆ. ತರಬೇತಿಗೆ ತಗಲುವ ಪೂರ್ಣ ವೆಚ್ಚವನ್ನು ಇಲಾಖೆಯು ಭರಿಸುತ್ತದೆ. ಹಾಗೆಯೇ ಮಾಹಿತಿ ತಂತ್ರಜ್ಞಾನದಲ್ಲಿ ತರಬೇತಿ ನೀಡಿ ೫೦೦ ರೂ. ಗಳನ್ನು ಮಾಸಿಕ ಶಿಷ್ಯವೇತನವಾಗಿ ನೀಡಲಾಗುತ್ತದೆ. ಬೆರಳಚ್ಚು ಮತ್ತು ಶೀಘ್ರಲಿಪಿಯಲ್ಲಿ ತರಬೇತಿ ಯನ್ನು ನೀಡುವ ಸೌಲಭ್ಯ ಒದಗಿಸಿದೆ. ಈ ವರ್ಗಕ್ಕೆ ಸೇರಿದ ಪದವೀಧರರಿಗೆ ನ್ಯಾಯಾಂಗಕ್ಕೆ ಸಂಬಂಧಪಟ್ಟ ಆಡಳಿತದಲ್ಲಿ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ೪ ವರ್ಷಗಳ ಅವಧಿಯ ತರಬೇತಿ ನೀಡಲಾಗುತ್ತದೆ. ತಿಂಗಳಿಗೆ ರೂ. ೧೦೦೦ ವನ್ನು ಶಿಷ್ಯ ವೇತನವಾಗಿ ನೀಡಲಾ ಗುತ್ತದೆ.

ಕೃಷಿ, ವಿಜ್ಞಾನ, ವೈದ್ಯಕೀಯ, ತಾಂತ್ರಿಕ ವೃತ್ತಿಪರ ವಿಷಯಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ನಿಗದಿಪಡಿರುವ ಪಠ್ಯಪುಸ್ತಕ ಮತ್ತು ಇತರ ಉಪಯುಕ್ತ ಪುಸ್ತಕಗಳನ್ನು ಕೇಂದ್ರ ಪುರಸ್ಕೃತ ಯೋಜನೆಯಡಿ ಬುಕ್ ಬ್ಯಾಂಕ್ ಅಂದರೆ ಪುಸ್ತಕ ಭಂಡಾರಗಳನ್ನು ಆಯಾ ಕಾಲೇಜುಗಳಲ್ಲಿ ಸ್ಥಾಪಿಸಲಾಗಿದೆ. ಹೀಗೆ ವೃತ್ತಿಪರ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿರುವ ಈ ವರ್ಗದ ವಿದ್ಯಾರ್ಥಿಗಳು ಆರ್ಥಿಕವಾಗಿ ಸಶಕ್ತರಾಗಿಲ್ಲದಿದ್ದಾಗ ಅವರಿಗೆ ಶೈಕ್ಷಣಿಕ ಪ್ರವಾಸ ಕಡ್ಡಾಯವಾಗಿದ್ದರೆ, ಅಂತಹ ಸಂದರ್ಭದಲ್ಲಿ ಗಿರಿಜನ ಯೋಜನೆಯಡಿ ಯಲ್ಲಿ ರೂ. ಒಂದು ಸಾವಿರವನ್ನು ಪ್ರವಾಸದ ವೆಚ್ಚಕ್ಕಾಗಿ ನೀಡುತ್ತದೆ.

ಈ ವರ್ಗಕ್ಕೆ ಸೇರಿದ ನಿರುದ್ಯೋಗ ಯುವ ಜನತೆಗೆ ಸ್ವಯಂ ಉದ್ಯೋಗ ತರಬೇತಿ ಸೌಲಭ್ಯವಿದೆ. ಜಿಲ್ಲಾವರಿಯ ಯೋಜನೆಯ ಹೆಸರಿನಲ್ಲಿ ಯುವ ಜನರಿಗೆ ಆಟೋರಿಕ್ಷಾ ಹಾಗೂ ಲಘುವಾಹನ ಚಾಲನೆಯಲ್ಲಿ ೧ ತಿಂಗಳು ತರಬೇತಿ ನೀಡುವುದರೊಂದಿಗೆ ವಾಹನ ನಡೆಸಲು ಪರವಾನಗಿಯ (ಲೈಸನ್ಸ್)ನ್ನೂ ಒದಗಿಸಲಾಗುತ್ತದೆ. ತರಬೇತಿ ಅವಧಿಯಲ್ಲಿ ಇವರಿಗೆ ನಿರ್ಧಿಷ್ಟ ಮೊತ್ತದ ಶಿಷ್ಯವೇತನ ನೀಡಲಾಗುತ್ತದೆ.

ಕಲಿಕೆಯ ಉನ್ನತ ಹಂತದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕಡ್ಡಾಯವಾಗಿದ್ದರೆ ಸರ್ಕಾರವು ಅಧ್ಯಯನ ಪ್ರವಾಸ ವೆಚ್ಚವನ್ನು ನೀಡುತ್ತದೆ.

ಗಮನಿಸಬೇಕಾದ ಅಂಶವೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಪಂಗಡದ ಬಾಲಕಿ ಯರಿಗೆ ಹಾಜರಾತಿ ವಿದ್ಯಾರ್ಥಿ ವೇತನವನ್ನು ನೀಡುತ್ತದೆ. ಹೀಗೆ ಸರ್ಕಾರ ಸಮುದಾಯದ ಶಿಕ್ಷಣಕ್ಕಾಗಿ ಸಾಧ್ಯವಾದಷ್ಟು ಸವಲತ್ತುಗಳನ್ನು ಅವಕಾಶಗಳನ್ನು ಕಲ್ಪಿಸುತ್ತಲೇ ಇದೆ. ೨೦೦೮ರ ಮಾರ್ಚ್‌ನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಹಿಂದುಳಿದವರ ಕಲ್ಯಾಣಕ್ಕಾಗಿ ವಿಶೇಷ ಅನುದಾನ ನೀಡಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಎಂ.ಫಿಲ್ ಹಾಗೂ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ನೆರವು ನೀಡುವ ರಾಜೀವ್‌ಗಾಂಧಿ ರಾಷ್ಟ್ರೀಯ ಫೆಲೋಶಿಪ್ ಕಾರ್ಯಕ್ರಮಕ್ಕೆ ೭೫ಕೋಟಿ ರೂಪಾಯಿಗಳನ್ನು ಮೀಸಲಾಗಿ ಇಟ್ಟಿದೆ.

ಬೇಡ ಸಮುದಾಯ ಒಳಗೊಂಡ ಪರಿಶಿಷ್ಟ ಪಂಗಡಕ್ಕೆ ಲಿಂಗ ಭೇದವಿಲ್ಲದೆ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಶಾಲೆಗಳನ್ನು ತೆರೆದಿದೆ. ಬಿಸಿಯೂಟ ನೀಡುತ್ತಿದೆ. ಅನೇಕ ಬಗೆಯ ಸೌಲಭ್ಯ ಸವಲತ್ತುಗಳನ್ನು ಒದಗಿಸಿದೆ. ಆದರೆ ತೆರೆದಿರುವ ಶಾಲೆ ಕಾಲೇಜುಗಳನ್ನು ಪ್ರವೇಶಿಸುವ, ಒದಗಿಸಿರುವ ಸೌಲಭ್ಯಗಳನ್ನು ಬಳಸಿಕೊಳ್ಳುವ, ಅವುಗಳನ್ನು ಧಾರಣ ಮಾಡಿ ಕೊಳ್ಳುವ ಸಾಮರ್ಥ್ಯ ಸಮುದಾಯಕ್ಕೆ ಇನ್ನೂ ಬರಬೇಕಾಗಿದೆ.

 

ಆಧಾರಆಕರ

೧. ಕರ್ನಾಟಕ ಗ್ಯಾಝೆುಟೀಯರ್, ಡಾ. ಆರ್. ಮುನಿಸ್ವಾಮಿ ೧೯೯೯.

೨. ಕನ್ನಡ ಅಧ್ಯಯನ ಕರ್ನಾಟಕದ ಆರ್ಥಿಕತೆ, ಸಂ: ಪ್ರೊ. ಅಬ್ದುಲ್ ಅಜೀಜ್, ಕೆ.ಜಿ. ವಾಸುಕಿ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೧೯೯೭.

೩. ಜಿಲ್ಲಾ ಅಭಿವೃದ್ದಿ ಅಧ್ಯಯನ ಕೊಪ್ಪಳ, ಸಂಯೋಜಕರು ಟಿ.ಆರ್. ಚಂದ್ರಶೇಖರ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೧೯೯೯.

೪. ಜಿಲ್ಲಾ ಅಭಿವೃದ್ದಿ ಅಧ್ಯಯನ ಗದಗ, ಸಂ. ಪ್ರೊ. ಟಿ.ಆರ್. ಚಂದ್ರಶೇಖರ, ಸಹ ಸಂಯೋಜಕರು, ಡಾ. ಸಿದ್ದಗಂಗಮ್ಮ, ಪ್ರೊ. ಚಂದ್ರಪೂಜಾರಿ, ಶ್ರೀ ಎ. ಶ್ರೀಧರ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೫. ಹಲಗಲಿ ಜಾನಪದ, ಶ್ರೀ ರಾಮ ಇಟ್ಟಣ್ಣನವರ, ವೀರಶೈವ ಅಧ್ಯಯನ ಅಕಾಡೆಮಿ, ಶ್ರೀ ನಾಗನೂರು ರುದ್ರಾಕ್ಷಿಮಠ, ಬೆಳಗಾವಿ ೧೯೯೫.

೬. ವಿಜಯನಗರೋತ್ತರ ಕಾಲಿನ ಬೇಡ ಜನಾಂಗದಲ್ಲಾದ ಸಿತ್ಯಂತರಗಳು: ಚಾರಿತ್ರಿಕ ಅಧ್ಯಯನ, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳನ್ನು ಅನುಲಕ್ಷಿಸಿ. ಪಿಎಚ್.ಡಿ. ಪ್ರಬಂಧ, ಸಂಶೋಧಕರು ಕೆ. ದುರಗಪ್ಪ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೦೩.

೭. ಬಳ್ಳಾರಿ ಜಿಲ್ಲೆಯ ಬೇಡ ಸಮುದಾಯದ ಶಿಕ್ಷಣ ಪ್ರಗತಿ: ಒಂದು ಅಧ್ಯಯನ ಪಿಎಚ್.ಡಿ. ಪ್ರಬಂಧ ಸಂಶೋಧಕರು ಮಲ್ಲಿಕಾರ್ಜುನ ಕಿಚಡಿ ಕನ್ನಡ ವಿಶ್ವವಿದ್ಯಾಲಯ, ಹಂಪಿ.

೮. ಮ್ಯಾಸ ಬೇಡರ ಸಾಂಸ್ಕೃತಿಕ ನಾಯಕಿಯರು: ಒಂದು ಅಧ್ಯಯನ ಪಿಎಚ್.ಡಿ ಪ್ರಬಂಧ ಸಂಶೋಧಕರು ಸಿ.ಬಿ. ಅನ್ನಪೂರ್ಣಮ್ಮ ಕನ್ನಡ ವಿಶ್ವವಿದ್ಯಾಲಯ, ಹಂಪಿ.

೯. ಕುಮ್ಮಟ ನಾಯಕರು: ಒಂದು ಸಾಂಸ್ಕೃತಿಕ ಅಧ್ಯಯನ. ಪಿಎಚ್.ಡಿ. ಪ್ರಬಂಧ ಸಂಶೋಧಕರು ಮಂಜುನಾಥಯ್ಯ ಟಿ.ಎಂ., ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೦೩.

೧೦. ಗ್ರಾಮ ಪಂಚಾಯ್ತಿಯಲ್ಲಿ ಮಹಿಳೆಯ ಪಾತ್ರ: ಹೊಸಪೇಟೆ ಮತ್ತು ಸಂಡೂರು ತಾಲೂಕು ಗ್ರಾಮ ಪಂಚಾಯ್ತಿಗಳ ಒಂದು ತೌಲನಿಕ ಅಧ್ಯಯನ ಪಿಎಚ್.ಡಿ. ಪ್ರಬಂಧ ಸಂಶೋಧಕರು ಡಿ. ಮೀನಾಕ್ಷಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೨.

೧೧. ವಾಲ್ಮೀಕಿ ಸಂಪದ ಸ್ಮರಣಸಂಚಿಕೆ, ಸಂ: ಡಾ. ಮಂಜುನಾಥ ಬೇವಿನಕಟ್ಟಿ, ಡಾ. ತಾರಿಹಳ್ಳಿ ಹನುಮಂತಪ್ಪ ಪ್ರಕಾಶನ: ಶ್ರೀ ವಾಲ್ಮೀಕಿ ಮಹಾಸಂಸ್ಥಾನ ರಾಜನಹಳ್ಳಿ, ೨೦೦೬.

೧೨. ವ್ಯಾಧ ಚರಿತೆ ಬೇಡ ಕುಲಮೂಲದ ಕಥನಗಳು ಸಂ. ಡಾ. ಮಂಜುನಾಥ ಬೇವಿನಕಟ್ಟಿ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೦೭.

* * *

ಸಾಮಂತ, ನಾಯಕ, ಪಾಳೆಯಗಾರ, ದಂಡನಾಯಕ, ಮಂಡಲೇಶ್ವರ, ರಾಜ, ಮಹಾರಾಜ, ಅರಸ, ಒಡೆಯ, ದೊರೆ ಇತ್ಯಾದಿಯಾಗಿ ಕರೆಸಿಕೊಳ್ಳುತ್ತಿದ್ದವರೆಲ್ಲರೂ ನಾಯಕ ಪಾಳೆಯಗಾರರು.

ಪ್ರೊ. ಲಕ್ಷ್ಮಣ್ ತೆಲಗಾವಿ