ಭಾರತದ ರಾಜಕೀಯ ಸ್ವಾತಂತ್ರ್ಯದ ಪೂರ್ವ ಕಾಲಘಟ್ಟದಲ್ಲಿ ಭಾರತದಾದ್ಯಂತ ವಿವಿಧ ರೀತಿಯಲ್ಲಿ ನಡೆದ ಸ್ಥಳೀಯ ಪ್ರತಿಭಟನೆಗಳನ್ನು ಭಾರತ ರಾಜಕೀಯ ಸ್ವಾತಂತ್ರ್ಯದ ಪೂರ್ವಸಿದ್ಧತೆಯ ರಂಗತಾಲೀಮು ಎನ್ನುವಂತೆ ವ್ಯಾಖ್ಯಾನಿಸುತ್ತ ಬರಲಾಗಿದೆ. ವಿಶೇಷವಾಗಿ ೧೮೫೭ರ ಆಸು ಪಾಸಿನಲ್ಲಿ ಕರ್ನಾಟಕದೊಳಗೆ ನಡೆದ ಕಿತ್ತೂರು ಬಂಡಾಯ, ನರಗುಂದ ಬಂಡಾಯ, ಹಲಗಲಿ ಬಂಡಾಯ, ಸಿಂಧೂರ ಲಕ್ಷ್ಮಣನ ದಂಗೆ (ಸು. ೧೯೨೪) ಮುಂತಾದ ಪ್ರತಿಭಟನೆಗಳನ್ನು ವ್ಯಾಖ್ಯಾನಿಸಿದ ರೀತಿಗಳನ್ನು ಇಂದು ಪುನರ್ ವಿಮರ್ಶೆಗೆ ಅಣಿಗೊಳಿಸ ಬೇಕಾದ ಅಗತ್ಯವಿದೆ. ಇಂಥ ಪ್ರತಿಭಟನೆಗಳನ್ನು ‘ದಂಗೆ’, ‘ಬಂಡಾಯ’, ‘ತಳ್ಳಿ’, ಮತ್ತು ‘ಸ್ವಾತಂತ್ರ್ಯ ಹೋರಾಟ’ಗಳೆಂದು ವಸಾಹತುಶಾಹಿ ಹಾಗೂ ರಾಷ್ಟ್ರೀಯವಾದಿ ಸಂಕಥನ ಗಳೊಳಗಿಟ್ಟು ವಿಶ್ಲೇಷಿಸಲಾಗಿದೆ. ಚರಿತ್ರೆಯನ್ನು ಒಂದು ಏಕಾಕೃತಿಯೊಳಗಿಂದ ಗ್ರಹಿಸುವ ಇಂಥ ವಿಧಾನಗಳು ಈಗಾಗಲೇ ಚಾಲ್ತಿಯಲ್ಲಿರುವ ಸಂಗತಿಗಳನ್ನೇ ಮತ್ತೆ ಮತ್ತೆ ಹೇಳುತ್ತಿರು ತ್ತವೆ. ಕೇಂದ್ರ ಹಾಗೂ ಪಂಥೀಯ ಎನ್ನುವ ವರ್ಗೀಕೃತ ವಿನ್ಯಾಸದಲ್ಲಿಯೇ ಇಂದು ಸ್ಥಳೀಯ ಕ್ರಿಯಾಶೀಲ ನೆಲೆಗಳನ್ನು ಪುನರ್ ನಿರ್ಮಿಸಿಕೊಳ್ಳುತ್ತಿದ್ದೇವೆ. ರಾಜನ ಬದಲು ಜನರ ದೃಷ್ಟಿಯಲ್ಲಿಯೇ ಪ್ರಭುತ್ವದ ಚರಿತ್ರೆಯನ್ನು ಹೇಳಲಾಗುತ್ತದೆಯೇ ಹೊರತು ಜನರ ಚರಿತ್ರೆ ಯನ್ನಲ್ಲ.

ಲಿಖಿತ ಅಥವಾ ಆ ಸ್ವರೂಪದ ದಾಖಲೆಗಳ ಮೂಲಕ ಸ್ಥಳೀಯ ಪ್ರಕ್ರಿಯೆ ಹಾಗೂ ಸಂಕಥನಗಳ ಮೂಲಕ ಇಂಥ ಸ್ಥಳೀಯ ಪ್ರತಿಭಟನೆಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಏಕರೂಪದ, ಸರಳ ರೇಖಾತ್ಮಕ ಹಾಗೂ ಪಂಚಾಂಗೀಯ ನೆಲೆಯಲ್ಲಿ ಇಂಥ ಸಾಮಾಜಿಕ ಸಂಚಲನೆಗಳನ್ನು ವಿಶ್ಲೇಷಿಸುವ ಬದಲು ಅದರ ಸಾಮಾಜಿಕ ಹಾಗೂ ಸಾಂದರ್ಭಿಕ ಸಂಗತಿಗಳ ಮೂಲಕ ವ್ಯಾಖ್ಯಾನಿಸಿಕೊಳ್ಳಬೇಕಾಗಿದೆ. ಕಾರಣ ಸರಳರೇಖಾತ್ಮಕವಾದ ಪಂಚಾಂಗೀಯ ನೆಲೆಗಳಲ್ಲಿ ಸಾರ್ವಭೌಮ ಅಧಿಕಾರ ರಾಜಕಾರಣದ ಸ್ವಯಂಘೋಷಿತ ದೃಷ್ಟಿಕೋನ ಮುಖ್ಯ ವಾಗಿರುತ್ತದೆ. ಅವು ಸ್ವತಂತ್ರ ವ್ಯಕ್ತಿತ್ವಕ್ಕಾಗಿ ಹೋರಾಡುವವರನ್ನು ‘ದಂಗೆಕೋರರು’ ‘ಪುಂಡರು’ ‘ಪಟಿಂಗರು’ ‘ತಂಟೆಕೋರರು’, ‘ಡಕಾಯಿತರು’, ‘ಸ್ವಭಾವತಃ ಗಲಭೆಕೋರರು’, ‘ದಾರಿ ಬಡುಕರು’ ಎಂದು ವ್ಯಾಖ್ಯಾನಿಸುತ್ತವೆ. ಬ್ರಿಟೀಷ್ ದಾಖಲೆಗಳಂತೂ ಇಂಥವರನ್ನು ‘ರೆಬಲ್ಸ್’ ಎಂದು ಕರೆಯುತ್ತವೆ. ಇವತ್ತಿಗೂ ಸಂಗೊಳ್ಳಿ ರಾಯಣ್ಣ, ಸಿಂಧೂರ ಲಕ್ಷ್ಮಣ, ಹಲಗಲಿ ಬೇಡರು ನಡೆಸಿದ ವ್ಯವಸ್ಥೆಯೊಂದಿಗಿನ ಗುದ್ದಾಟಗಳನ್ನು ಇದೇ ಮಾದರಿಯಲ್ಲಿಯೇ ಅರ್ಥಮಾಡಿಕೊಂಡು ಖುಷಿ ಪಡುತ್ತಿದ್ದೇವೆ. ನಮ್ಮನ್ನು ನಾವೇ ತಳ್ಳಿಕೋರರು ಎಂದು ಕರೆದುಕೊಂಡು ಆತ್ಮ ಸಂತೋಷ ಅನುಭವಿಸುವ ಹಾಗೂ ಮೀಸಿ ಹುರಿಗೊಳಿಸಿ ಬೀಗುವ ಸ್ಥಿತಿಗೆ ತಲುಪಿದ್ದೇವೆ. ಇಂದು ನಮ್ಮ ವಿಸ್ಮೃತಿಗೆ ನಾವೇ ಕಾರಣರಾಗಿದ್ದೇವೆ. ಚರಿತ್ರೆ ವ್ಯಾಖ್ಯಾನಿಸಿದ ದಾಸ್ಯ ಸ್ಥಿತಿಯನ್ನೇ ಪರಮ ಮೋಕ್ಷ ಎಂದು ಭಾವಿಸಿಕೊಂಡಿರುವ ಸ್ಥಿತಿ ಈ ಮೂರು ದಿನಗಳ ಕಾಲ ನಡೆದ ಹೆಚ್ಚಿನ ಚರ್ಚೆಯಲ್ಲಿ ಬಿಂಬಿತವಾಯಿತು. ಹಾಗಾಗಬಾರದು. ನಮ್ಮ ಚರಿತ್ರೆಯನ್ನು ನಮ್ಮ ದೃಷ್ಟಿಕೋನಗಳಿಂದ ಬದುಕಿನ ಒಳಗಡೆಯಿಂದ ಒಮ್ಮೆ ನೋಡಿಕೊಳ್ಳಬೇಕಾಗಿದೆ. ಆ ಮೂಲಕ ಊನಗೊಂಡ ಹಾಗೂ ಗೈರು ಹಾಜರಾಗಿರುವ ಅನುಭವ ಜಗತ್ತನ್ನು ಚರಿತ್ರೆಯ ಮುಖ್ಯ ವಾಹಿನಿಗೆ ತರಬೇಕಾಗಿದೆ. ಹೊಸ ರೀತಿಯ ವ್ಯಾಖ್ಯಾನಗಳಿಗೆ ಗುರಿಪಡಿಸಬೇಕಾಗಿದೆ.

ದುಡಿತದ ಮೇಲಿನ ದಿಗ್ಭಂಧನ

ಹಲಗಲಿ ಬಂಡಾಯ ಹಾಗೂ ಸಿಂಧೂರ ಲಕ್ಷ್ಮಣ ಇಂಥ ಸ್ವಯಂಪ್ರೇರಿತ ಪ್ರತಿಭಟನೆಗಳು ಬಹು ಮುಖ್ಯವಾಗಿ ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯ ಆಯಾಮಗಳೊಂದಿಗೆ ಥಳುಕು ಹಾಕಿಕೊಂಡಿವೆ. ಹಾಗಾಗಿ ಭಾರತದ ರಾಜಕೀಯ ಸ್ವಾತಂತ್ರ್ಯದ ಚೌಕಟ್ಟಿನೊಳಗಷ್ಟೇ ಇಟ್ಟು ನೋಡಿದರೆ ಆ ಪ್ರತಿಭಟನೆಗಳಿಗಿದ್ದ ಸ್ಥಳೀಯ ತುರ್ತು ಮರೆಮಾಚುತ್ತದೆ. ಆರ್ಥಿಕ ಖಾಸಗೀಕರಣ ಬಂಡವಾಳಶಕ್ತಿಯ ಕೇಂದ್ರೀಕರಣವಾದಂತೆ ಭಕ್ತಿಯ ಖಾಸಗೀಕರಣ ಶಿವಭಕ್ತಿಯ ಕೇಂದ್ರೀಕರಣವು ಆಗಬಲ್ಲದು. ಹಾಗೆ ನಿಶಸ್ತ್ರೀಕರಣ ಎನ್ನುವ ಕಾಯಿದೆಯ ಹೇರಿಕೆ ಕೂಡ ಶ್ರಮಿಕ ವರ್ಗಗಳ ದಾಸ್ಯದ ಪ್ರತೀಕವೂ ಆಗಿದೆ. ಬ್ರಿಟೀಷ್ ಆಳ್ವಿಕೆಯ ರೀತಿ ರಿವಾಜುಗಳಿಗೆ   ಸರಿಯಾಗಿ ಇನ್ನೂ ಹೊಂದಿಕೊಳ್ಳದಿದ್ದ ದುಡಿದ ವರ್ಗಗಳಿಗೆ ಈ ಆಜ್ಞೆ ದೊಡ್ಡ ಆಘಾತ ತಂದಿತ್ತು.

ಹಲಗಲಿ ದಕ್ಷಿಣ ಮರಾಠಾ ನಾಡಿನ ಮುಧೋಳ ಸಂಸ್ಥಾನಕ್ಕೆ ಸೇರಿದ ಕೊನೆಯ ಹಳ್ಳಿ ಯಾಗಿತ್ತು. ೧೮೫೭ರ ಬಂಡಾಯದ ಪರಿಣಾಮವಾಗಿ ಬ್ರಿಟೀಷ್ ಜಿಲ್ಲೆಗಳಲ್ಲಿ ಹಾಗೂ  ಅವರ ರಾಜಕೀಯ ಮೇಲ್ವಿಚಾರಣೆಗೊಳಪಟ್ಟ ಸ್ವದೇಶಿ ಸಂಸ್ಥಾನಗಳಲ್ಲಿ ಈ ಕಾಯಿದೆ ಊರ್ಜಿತಗೊಂಡಿತು. ಸಂಸ್ಥಾನಗಳು ಈ ಕಾಯಿದೆ ಕುರಿತು ಯಾವ ಪ್ರತಿಕ್ರಿಯೆಯನ್ನು ವಹಿಸಲಿಲ್ಲ. ಆದರೆ ಸಂಸ್ಥಾನಗಳಿಗೆ ನಿಷ್ಠರಾಗಿದ್ದ ಸ್ಥಳೀಯ ಸೇವಾವರ್ಗಗಳು ಅನ್ಯಮೂಲದ ಇಂಥ ಕಾಯಿದೆಗಳಿಂದ ಕಂಗಾಲಾಗುವಂತಾಯಿತು. ಯಾವಾಗಲೂ ಅಧಿಕಾರ ವರ್ಗಗಳು ಆ ಸ್ಥಾನಿಕ ಉತ್ಪಾದನೆ ಅಥವಾ ಅಂಥ ಸಾಮಗ್ರಿಗಳ ಮೇಲೆ ಒಡೆತನವನ್ನು ಹೊಂದಿ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುತ್ತಿರುತ್ತವೆ. ಇಂಥ ಸಂದರ್ಭದಲ್ಲಿ ದುಡಿದ ವರ್ಗಗಳಿಗೆ ತನ್ನ ಪ್ರತಿನಿಧೀಕರಣ ಹಾಗೂ ಪ್ರತಿಭಟನೆ ಮಾಡಲು ಇರುವ ಏಕೈಕ ಮಾರ್ಗವೆಂದರೆ ಉತ್ಪಾದನಾ ಸಾಮರ್ಥ್ಯ ಹಾಗೂ ಉತ್ಪಾದನಾ ಸಂಗತಿಗಳು. ಇವು ದುಡಿವ ವರ್ಗಗಳ ಕೈಗೆಟುಕದ ಕಾರಣ ಇವರಿಗೆ ನಿಲುಕದೆ ಹೋಗುತ್ತವೆ. ಅಧಿಕಾರ ಉಳ್ಳವರಿಂದ ಕೂಡಿದ ಜಾತಿಗಳ ವಶದಲ್ಲಿವೆ. ಸುಧಾರಣೆಗಳಿಂದು ಉಳ್ಳವರ ತಿಜೋರಿಯನ್ನು ಭರ್ತಿ ಮಾಡುತ್ತಿವೆ ಹೊರತು ಉಳಿದವರ ಹೊಟ್ಟೆಯನ್ನು ತುಂಬಿಸುತ್ತಿಲ್ಲ. ಕೈಗಾರಿಕಾಭಿವೃದ್ದಿಯಂಥ ಅತೀ ನಾಗರೀಕ ಪ್ರಣೀತ ಹಂಬಲಗಳನ್ನು ಮುಂದಿಟ್ಟುಕೊಂಡು ನಡೆದ ಸ್ವಾತಂತ್ರ್ಯದ ಕಲ್ಪನೆಗೂ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ, ಹಾಗೂ ಅವಮಾನಗಳ ವಿರುದ್ಧ ಸಿಡಿದೆದ್ದ ಸ್ಥಳೀಯ ಪ್ರತಿಭಟನೆಗಳಿಗೂ ಮಾಡುವ ಹೋಲಿಕೆ ಈ ಅರ್ಥದಲ್ಲಿ ವಿಹಿತವೆನಿಸದು. ಜನರ ಬದುಕಾಗಿ ಬರಬೇಕಾಗಿದ್ದ ಅಭಿವೃದ್ದಿ ಅಥವಾ ಅಂತಹ ಸುಧಾರಣೆಗಳು ಜನರ ಬದುಕನ್ನು ಕಸಿದುಕೊಳ್ಳುವ ಸ್ವಾರ್ಥಪರ ಚಿಂತನೆಗಳಾಗಿ ಪ್ರಚಲಿತಗೊಳ್ಳುತ್ತಿವೆ. ಅಭಿವೃದ್ದಿ ಯನ್ನು ಜನರ ಬದುಕಾಗಿ ಪರಿವರ್ತಿಸಿಕೊಳ್ಳಲು ಸಾಧ್ಯವಾಗದಿರುವುದೇ ಸ್ವಾತಂತ್ರ್ಯೋತ್ತರ ಭಾರತದ ಬಹುದೊಡ್ಡ ವೈಫಲ್ಯವಾಗಿದೆ.

ದುಡಿವ ಜನರನ್ನು ಯಾಚಕರನ್ನಾಗಿ ಫಲಾನುಭವಿಗಳನ್ನಾಗಿ ನಿರಾಶಿತ್ರರನ್ನಾಗಿ ಮಾಡುವ ಕ್ರಿಯೆ ನಿಶ್ಯಸ್ತ್ರೀಕರಣ ಕಾಯಿದೆಯ ಗರ್ಭದೊಳಗಿದೆ. ದುಡಿವ ವರ್ಗಗಳ ಅನ್ನ ಹಾಗೂ ಅನನ್ಯತೆಯ ಪ್ರಶ್ನೆ ಇಲ್ಲಿದೆ. ಸುಧಾರಣೆಗಳು ಹಾಗೂ ಕಾಯಿದೆಗಳು ಜನರನ್ನು ಸಕ್ರಿಯಾತ್ಮಕ ವಾಗಿ ತೊಡಗಿಸಿಕೊಳ್ಳುವಂಥವಾಗಬೇಕೇ ಹೊರತು ಅವರನ್ನು ನಿಷ್ಕ್ರಿಯರನ್ನಾಗಿ ಮಾಡ ಬಾರದು. ನಿಶಸ್ತ್ರೀಕರಣ ಕಾಯಿದೆಯು ಸ್ಥಳೀಯ ಹಲವು ಸಮುದಾಯಗಳ ಅಸ್ತಿತ್ವವನ್ನೇ ಅಡಗಿಸಲು ಪ್ರಯತ್ನಿಸುತ್ತದೆ. ಹೀಗಾಗಿ ಕಂಪನಿ ಸರಕಾರದ ವಿರುದ್ಧ ದಂಗೆಯೆದ್ದದ್ದು ಶ್ರೀಮಂತ ವರ್ಗಗಳೂ ಅಲ್ಲ ದೇಶಗತಿಗಳೂ ಅಲ್ಲ, ಬದಲಾಗಿ ದಿನನಿತ್ಯ ದುಡಿದು ತಿನ್ನುವ ಶ್ರಮಿಕ ವರ್ಗಗಳು ಎಂಬುದು ಇಲ್ಲಿನ ವಿಶೇಷ.

ನಿಶ್ಯಸ್ತ್ರೀಕರಣ ಕಾಯಿದೆ ಅಡಿಯಲ್ಲಿ ನಿಷೇಧಕ್ಕೆ ಒಳಗಾದ ಹಲಗಲಿ ಬೇಡರ ಆಯುಧ ಗಳಾದರೂ ಎಂಥವು. ಲಾವಣಿಯೊಂದರಲ್ಲಿ ಹೇಳುವಂತೆ

“ಕತ್ತಿ, ಕಟಾರಿ, ಚೂರಿ, ಬಾಕು, ಗುರ್ದಿ, ಸುರಾಯಿ ಚಕ್ರಾ
ಬರ್ಚಿ, ಬಿಚ್ಚುಗತ್ತಿ ಬಾಣ ಬಿಲ್ಲಿನವರಾ”

“ಪಟಾತ ಪಿಸ್ತೂಲ ಕುರಲಿ ತೇಗಾ ಚಾಪಗೊಡ್ಲಿ ಶಸ್ತ್ರಾ
ತೋಪು ತುಬಾಕಿ ಹೊಡವ ಮದ್ದು ಗುಂಡಾ ಬಿಡಬ್ಯಾಡರಿ ಚೂರಾ”

ಮೇಲಿನ ಸಾಲಿನಲ್ಲಿ ಕಾಣುವ ಅಸ್ತ್ರಗಳ ವಿವರ ಕುತೂಹಲಭರಿತವಾದಂಥವು. ದುಡಿಮೆಗೆ ಅಂದಿನ ಅನ್ನದ ಅವತಾರಕ್ಕೆ ದುಡಿವ ವರ್ಗಗಳಿಗೆ ಬೇಕಾಗಿರುವ ಅತಿ ಮುಖ್ಯ ಆಯುಧಗಳು ಇವಾಗಿವೆ. ಗುಡ್ಡಗಾಡು ತಿರುಗಿ, ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಅನ್ನದ ದಾರಿ ಮಾಡಿಕೊಳ್ಳುವ ಜನರ ತುತ್ತನ್ನೇ ಈ ಕಾಯ್ದೆ ಕಸಿದುಕೊಳ್ಳುತ್ತದೆ. “ಸಾಲ ಸಮುದಾ ಮಾಡಿ ದನಕರ ಮಾರಿ ತಂದೀನಿ” “ಹಬ್ಬದಾಗ ನೋಡ ನೋಡ ಹ್ಯಾಂಗ ಕೊಡೂನ ಅಂತ ಹುಗಿದಿಟ್ಟರ ನೆಲದಾಗ” ಈ ಸಾಲುಗಳು ಆಯುಧ, ಅನ್ನ ಹಾಗೂ ಬದುಕು ಇವುಗಳ ಅಭಿನ್ನತೆಯನ್ನೂ ತೀವ್ರತೆಯನ್ನು ಹೇಳುವಂಥವಾಗಿವೆ. “ಹೋದ ಹತಾರಕ ಹೊಟಿಬ್ಯಾನಿ ಹಚ್ಚಕೊಂಡ ನಿಂತಾರ ಸಾವುದಕ” ಎನ್ನುವಲ್ಲಾಗಲೀ

ಹಲ್ಲಕಿತ್ತ ಹಾಂವಿನ ಪರಿಯು ನಮಗ ಆದಿತಲ್ಲಾ
ರಂಡಿ ಮುಸಕ ಹಾಕಿ ತಿರಿಗಿದರ ನಮ ಮಾನ ಉಳಿಯುವದಿಲ್ಲಾ
ಮಗ್ಗಲದಾಗಿನ ಹೇಣತಿ ಕೊಟ್ಟಾಂಗ ಅತಿ/ಹೇಡಿ ಆದೆವಲ್ಲಾ
ಸತ್ತ ಹೆಣಕ ಸಿಂಗಾರ ಮಾಡಿದ ಪರಿ ಆದಿತಲ್ಲಾ

ಆಯುಧವೇ ಬದುಕು, ಬದುಕೇ ಆಯುಧವಾದ ಪರಿ ಇಲ್ಲಿದೆ. ಕಂಪನಿ ಸರಕಾರದ ಕಾಯಿದೆ ಜನರ ಬದುಕನ್ನು ಅಭಿವೃದ್ದಿ ಪಡಿಸುವ ಬದಲು ಅವರನ್ನು ನಾಗರೀಕ ಬದುಕಿನಿಂದ, ಶ್ರಮ ಬದುಕಿನ ಮೂಲಗಳಿಂದ, ಸ್ವಾವಲಂಬಿ ನೆಲೆಗಳಿಂದ ವಂಚಿತರನ್ನಾಗಿ ಮಾಡುತ್ತಿದೆ. ಕಸುಬಿಗೆ ಮೂಲವಾಗಿದ್ದ, ಅನ್ನಕ್ಕೆ ದಾರಿಯಾಗಿದ್ದ ಪರಿಕರಗಳು ಸಾಮ್ರಾಜ್ಯಶಾಹಿಯ ಎದೆ ನಡುಗಿಸುತ್ತವೆಂದರೆ ಅವುಗಳಿಗಿದ್ದ ಸಾಮರ್ಥ್ಯದ ಅರಿವಾಗದೇ ಇರದು.

ನಿಶಸ್ತ್ರೀಕರಣ ಕಾಯಿದೆಯ ಬಿಸಿ ತಟ್ಟಿದ್ದು ಹೆಚ್ಚಾಗಿ ದುಡಿವ ಹಾಗೂ ಅಂಚಿನ ವರ್ಗ ಗಳಿಗೆ. ಕಾರಣ ಅವುಗಳಿಗಿರುವ ಸಾಮಾಜಿಕ ಹಾಗೂ ಆರ್ಥಿಕ ಅಭದ್ರತೆಗಳು. ಸ್ವ ಮೂಲವನ್ನು ಬಿಡದ ಅನ್ಯ ಮೂಲವನ್ನು ಆಶ್ರಯಿಸದ ಅವುಗಳ ಅನನ್ಯ ಸ್ವಭಾವವು ಅನ್ನ ಹಾಗೂ ನೆಲೆ ಕಸಿದುಕೊಳ್ಳುವ ಪ್ರವೃತ್ತಿಗಳ ವಿರುದ್ಧ ಸೆಟೆದು ನಿಲ್ಲುವಂತೆ ಮಾಡುತ್ತದೆ. ಹಲಗಲಿ ಬೇಡರಂತಹ ಅಡವಿ ಅವಲಂಬಿತ ಸಮುದಾಯಗಳಿಗೆ ವೃತ್ತಿ ಎನ್ನುವುದು ಅಸಮಾನತೆಯ ನೆಲೆಯಾಗದೆ ಅದೊಂದು ಸಾಮುದಾಯಿಕ ಆಚರಣೆಯ ಭಾಗವಾಗಿತ್ತು. ಎಲ್ಲ ದುಡಿವ ಸಂಸ್ಕೃತಿಗಳಲ್ಲಿ ಈ ಗುಣವನ್ನು ಕಾಣುತ್ತೇವೆ. ಹೀಗಾಗಿ ಹಲಗಲಿ ದಂಗೆ ಹಾಗೂ ಸಿಂಧೂರ ಲಕ್ಷ್ಮಣನ ಪ್ರತಿಭಟನೆಗಳು ಬರೀ ಆಂಶಿಕ ಅಗತ್ಯಗಳಾಗಿರದೆ ಆ ಕಾಲದ ಸಾಮಾಜಿಕ, ಆರ್ಥಿಕ, ರಾಜಕೀಯ ಅಸ್ತಿತ್ವದ ಅಗತ್ಯ ಹಾಗೂ ಅನಿವಾರ್ಯತೆಗಳಾಗಿ ಮೂಡಿಬಂದಂಥವು. ಈ ಆರ್ಥಿಕ ಸ್ವಾವಲಂಬನೆ ಹಾಗೂ ಅಸ್ತಿತ್ವ ನಾಶದ ಪ್ರವೃತ್ತಿಗಳ ವಿರುದ್ಧ ಶ್ರಮ ಹಾಗೂ ಸ್ವಾವಲಂಬಿ ಮನಸ್ಸುಗಳು ತೋರಿದ ಚುರುಕುತನವದು. ಬೇಡರದು ನಿಸರ್ಗಮುಖಿ ಹಾಗೂ ನಿಸ್ವಾರ್ಥ ಬದುಕು. ಪ್ರಭುತ್ವದ್ದು ಸ್ವಾರ್ಥಮುಖಿ ಬದುಕು. ವಸಾಹತು ಪ್ರಭುತ್ವ ಯಾವಾಗಲೂ ಸ್ಥಳೀಯ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಸಂಬಂಧಗಳ ವಿಘಟನೆಯಾಗಿ ಕೆಲಸ ಮಾಡುತ್ತ ಬಂದಿದೆ. ಇದಕ್ಕೆ ಸ್ಥಳೀಯ ಕೆಲವು ಪ್ರತಿಷ್ಠಿತ ಹಿತಾಸಕ್ತಿಗಳ ಸ್ವಾಥಪರ್ರ ಸಹಾಯವೂ ಕಾರಣವಾಗಿದೆ. ಸ್ಥಳೀಯ ಉತ್ಪಾದನೆಯ ಮುಖ್ಯಗುಣವೇ ಮಾನವಮುಖಿ ಹಾಗೂ ಸಮಾಜಮುಖಿ ಸಂಬಂಧಗಳನ್ನು ಗಟ್ಟಿಗೊಳಿಸುವುದು. ಆ ಮೂಲಕ ವ್ಯಕ್ತಿಯ ಸಾಂಸ್ಕೃತಿಕ ಲೋಕದ ವಿಸ್ತಾರಕ್ಕೆ ಹಾಗೂ ಆರ್ದಿಕ ಭದ್ರತೆಗೆ ಹಂಬಲಿಸುವುದು. ಹೀಗಾಗಿ ಬದುಕನ್ನು ಅಭದ್ರಗೊಳಿಸುವ, ಅವಮಾನಿಸುವ, ನಾಶಗೊಳಿಸುವ ಶಕ್ತಿಗಳ ವಿರುದ್ಧ ಸಿಡಿದೇಳುವ ಮೂಲಕ ಹಲಗಲಿ ಬೇಡರು ಹಾಗೂ ಸಿಂಧೂರ ಲಕ್ಷ್ಮಣನಂತಹ ಸ್ಥಳೀಯ ಪ್ರತಿಭಟನಾಕಾರರು ಪ್ರಭುತ್ವ ಹಾಗೂ ಅದರ ಪರಿವಾರವನ್ನು ತಮ್ಮ ಹೋರಾಟಗಳ ಮೂಲಕ ಕಂಗೆಡಿಸಿದರು.

ನಿಶ್ಯಸ್ತ್ರೀಕರಣ ಕಾಯಿದೆಯಡಿಯಲ್ಲಿ ನಿಷೇಧಕ್ಕೊಳಗಾದ ಕುಡುಗೋಲು, ಕೊಡ್ಲಿ, ಭರ್ಚಿಯಂಥ ಆಯುಧಗಳನ್ನು ಮತ್ತೆ ಮಾಡಿಕೊಳ್ಳುವಂಥ ಸಾಮರ್ಥ್ಯ ಹಲಗಲಿ ಬೇಡರಿಗೆ ಇರಲಿಲ್ಲವೆಂದಲ್ಲ ಇತ್ತು. ಈ ವರೆಗೆ ಚರ್ಚಿಸಿದಂತೆ ಆಯುಧವೆಂದರೆ ಅದೊಂದು ಪರಿಕರ ಮಾತ್ರವಾಗಿರಲಿಲ್ಲ. ಅದು ಅವರ ಜೀವನ ವಿಧಾನವಾಗಿತ್ತು. ಅಂಥ ಜೀವನವನ್ನು ಕಾಯಿದೆ ಸರ್ವನಾಶ ಮಾಡುತ್ತದೆ ಕಸಿದುಕೊಳ್ಳುತ್ತದೆ.

ಕುಬಸಾ ಸಿರಿ ಹಪ್ಪಳ ಶಾಂಡಿಗಿ ಕುರ್ಚಿಗಿ ಕುಡಗೋಲಾ
ಕೊಡಲಿ ಕೋತಿ ಕುಡ ಕಬ್ಬಿಣಾ ಮಸರು ಬೆಣ್ಣೆ ಹಾಲಾ
ಉಪ್ಪ ಎಣ್ಣಿ ಅರಿಶಿಣ ಜೀರಿಗಿ ಅಕ್ಕಿ ಸಕ್ಕರಿ ಬೆಲ್ಲಾ
ಗಂಗಾಳ ಚರಗಿ ಮಂಗಳ ಸೂತ್ರಾ ತಕ್ಕೊಂಡ ಹೋದರ ಬೀಸುಕಲ್ಲಾ
ಎಲ್ಲಾ ತಗೊಂಡ್ರೊ ಸಿಕಷ್ಟ | ಸರ್ದನಿಂತ ಊರಿಗೆ ಕೊಳ್ಳಿ ಕೊಟ್ಟು
ಬೂದಿ ಮಾಡ್ಯಾರ ಹಲಗಲಿ ಸುಟ್ಟು ಗುರ್ತ ಎಳ್ಳಷ್ಟು ಸಿಗದಷ್ಟು

ಲಾವಣಿಯ ಈ ಸಾಲುಗಳು ತುಂಬಾ ಅರ್ಥಗರ್ಭಿತವಾಗಿರುವುದನ್ನು ಇಲ್ಲಿ ಕಾಣಬಹುದು. ಹಲಗಲಿ ಬೇಡರ ಎಣ್ಣೆ, ಉಪ್ಪು, ಹಪ್ಪಳ, ಸೆಂಡಿಗೆ ಉತ್ಪಾದನೆಗೆ ಮುಖ್ಯವಾದ ವಸ್ತುಗಳೇ ಕೊಡಲಿ, ಕೋತಿ, ಕುಡುಗೋಲು. ಅವುಗಳು ಅಭಿನ್ನವಾಗಿ ಇಲ್ಲಿ ಬಳಕೆಯಾಗಿವೆ. ಅಂಥ ಅಭಿನ್ನ ಬದುಕಿನ ಸರ್ವನಾಶವನ್ನು ಕಂಪನಿ ಸರ್ಕಾರ ಇಲ್ಲಿ ಮಾಡುವುದನ್ನು ಲಾವಣಿ ಮಾರ್ಮಿಕವಾಗಿ ಧ್ವನಿಸುತ್ತದೆ.

“ಹಲಗಲಿ ಎಂಬುವ ಹಳ್ಳಿ ಮುಧೋಳ ರಾಜ್ಯದಾಗ ಇತ್ತೊ
ಪೂಜೆರಿ ಹಣಮಾ ಬಾಲ ಜಡಗ ರಾಮ ಮಾಡ್ಯಾರ ಮಸಲತ್ತ
ಕೈಯಾನ ಹತಾರಕೊಡಬಾರದು ನಾವು ನಾಲ್ಕು ಮಂದಿ ಜತ್ತೋ
ಹತಾರ ಹೋದಿಂದ ಬಾರದ ನಮ್ಮ ಜೀವ ಸತ್ತ ಹೋಗುದು ಗೊತ್ತು”

ಹಲಗಲಿ ಬಂಡಾಯದ ರೂವಾರಿಗಳಾದ ಹಣಮ, ಬಾಲ, ಜಡಗ ಹಾಗೂ ರಾಮ ಇವರು ಹೇಳುವ ಈ ಮಾತು, ಕೆಳವರ್ಗಗಳ ಅಂತಃಸ್ಥೈರ್ಯ ಹಾಗೂ ತಲ್ಲಣಗಳಿಗೆ ಸಾಕ್ಷಿ ಯಾಗಿವೆ. ಅಸ್ತಿತ್ವವನ್ನೇ ಅಡಗಿಸಲು ಪ್ರಯತ್ನಿಸುವ ಪ್ರಭುತ್ವದ ಹುನ್ನಾರದ ವಿರುದ್ಧ ನಡೆದ ಈ ದಂಗೆಗಳನ್ನು ಬರೀ ಬ್ರಿಟೀಷ್ ವಿರೋಧಿ ಅಥವಾ ಭಾರತ ರಾಜಕೀಯ ಸ್ವಾತಂತ್ರ್ಯದ ರಂಗತಾಲೀಮೆಂದು ಬೀಗುವುದು ಬರೋಬ್ಬರಿಯಲ್ಲ. ‘ಸ್ವಾತಂತ್ರ್ಯ’ದ ಪರಿಕಲ್ಪನೆಯೇ ಇಲ್ಲದೆ ಬದುಕು ಅರಸುತ್ತಿರುವ ಸಮುದಾಯಗಳೂ ಸ್ವಾತಂತ್ರ್ಯೋತ್ತರ ಕಾಲದಲ್ಲೂ ಇರುವಾಗ ಹಲಗಲಿ ಬಂಡಾಯ ಹಾಗೂ ಸಿಂಧೂರ ಲಕ್ಷ್ಮಣರ ಪ್ರತಿಭಟನೆ ಗಳನ್ನು ಈ ರೀತಿಯ ವ್ಯಾಖ್ಯಾನಗಳಿಗೆ ಹೊಂದಿಸುವುದು ವಿಚಿತ್ರವೆನಿಸುತ್ತದೆ. ಹೀಗೆ ಮಾಡುವುದರಿಂದ ಈ ಪ್ರತಿಭಟನೆಗಳಿಗಿದ್ದ ಆಂತರಿಕ ತಾಕತ್ತು ಹಾಗೂ ತುರ್ತುಗಳು, ಮತಿಗಳು, ಸೂಕ್ಷ್ಮತೆಗಳು ಸಪಾಟಾಗಿ ಹೋಗುತ್ತವೆ. ಅವುಗಳನ್ನು ನೇರ ಅರ್ಥ ಮಾಡಿ ಕೊಳ್ಳಲು ಆಗದ ಜಡತೆ ಆವರಿಸುತ್ತದೆ. ಅನಗತ್ಯವಾಗಿ ಅವುಗಳನ್ನು ರಾಷ್ಟ್ರೀಯವಾದಿ ಕಕ್ಷೆಯಲ್ಲಿಟ್ಟು ನೋಡದೆ ಅದರ ಸ್ಥಳೀಯ ಸಾಮಾಜಿಕ ತುರ್ತಿನಲ್ಲಿಟ್ಟು ವ್ಯಾಖ್ಯಾನಿಸಿದರೆ ಹೊಸ ರೀತಿಯ ಸೂಕ್ಷ್ಮ ಚಾರಿತ್ರಿಕ ಸಂಕಥನಗಳನ್ನು ನಮ್ಮವಾಗಿಸಿಕೊಳ್ಳಬಹುದಾಗಿದೆ.  ಹೀಗಾಗಿ ಇಂಥ ಪ್ರತಿಭಟನೆಗಳನ್ನು ಅರ್ಥಮಾಡಿಕೊಳ್ಳುವ ನೆಲೆಯೇ ಬದಲಾಗಬೇಕಿದೆ.

(ಲೇಖನಕ್ಕೆ ಬಳಸಿಕೊಂಡಿರುವ ಲಾವಣಿಯ ಸಾಲುಗಳನ್ನು ಫ್ಲೀಟರ್ ಸಂಗ್ರಹಿಸಿದ ಐದು ಐತಿಹಾಸಿಕ ಲಾವಣಿಗಳು ಪುಸ್ತಕದಿಂದ ಆಯ್ದುಕೊಂಡಿದ್ದೇನೆ).

* * *

ಹಲಗಲಿ ಬೇಡರು

ಬೇಡಿದಾ ಕ್ಷಣಕ ತಾವು ತಂದು
ಕೊಡತಾರ ಹಿಡಿಹಿಡಿರ್ ಎಂದು

ವತ್ನ ಕೊಡತೇವ್ ಅನ್ನರಿ ವೊಂದ್ ಒಂದು
ತಂದು ಕೊಡತಾರ ತಮ್ಮ ಕುಸಿಲಿಂದು

ಬಂದಿತು ಹುಕುಮ ಹೀಂಗ್ ಎಂದು
ಡಣ್ಗರ ಸಾರಿದರ ಮುಂದು

ಶೂರ ಶಿಪಾಯಿಜನರ ತಾವು ತಿಳಿದು
ಅಳತಾಯ ಕಣ್ಣಿಗೆ ನೀರ್ ತಂದು    ||ಯೇರ||

ಬಹಳ ಚಿಂತಿಯ್‌ಆಗಿ ದುಋೂಖದಿಂದ ಅವರು ಬಿದ್ದರ್-ಅಣ್ಣ ನೆಲಕ

 

ಚಿತ್ರದುರ್ಗ, ಸುರಪುರ, ಹಲಗಲಿಯ ಬೇಡರ ಶೌರ್ಯ, ಪರಾಕ್ರಮಗಳು ಯಾವ ಕಾಲಕ್ಕೂ ಚಿರಸ್ಮರಣೀಯ

ಹರ್ತಿಕೋಟೆ ವೀರೇಂದ್ರ ಸಿಂಹ