ಈ ಮೂರು ದಿನಗಳ ವಿಚಾರ ಸಂಕಿರಣವನ್ನು ಶ್ರೀ ಶೇಷಪ್ಪಯ್ಯ ಸ್ವಾಮಿಗಳು ತಮ್ಮ ಶ್ರೀಮಠದ ಆವರಣದಲ್ಲಿ ನೆಡೆಸಲು ಸರ್ವಸಹಕಾರವನ್ನು ನೀಡಿದ್ದಾರೆ ಅಂತ ಮಹಾತ್ಮ ರಿಗೆ ನನ್ನ ಮೊದಲ ಶರಣು. ಈವತ್ತಿನ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ನನ್ನಂಥ ಹುಡುಗರ ಮನಸ್ಸಿನಲ್ಲಿ ಬೆಳಕಿನ ಕಿಚ್ಚನ್ನು ಹಚ್ಚಿಸಿದ ನಮ್ಮ ಗುರುಗಳಾದ ಡಾ. ಮುರಿಗೆಪ್ಪ ನವರೇ, ಅನುಪಸ್ಥಿಯಲ್ಲಿರುವ ಚಂದ್ರಶೇಖರ ಕಂಬಾರರವರೇ, ವೇದಿಕೆಯ ಮೇಲೆ ಉಪಸ್ಥಿತ ರಿದ್ದು ಮಾರ್ಗದರ್ಶನದ ಮಾತುಗಳನ್ನಾಡಿದ ಜೆ.ಟಿ. ಪಾಟೀಲರವರೇ, ಆರ್.ಎಸ್. ಪಾಟೀಲ ಸಾಹೇಬರೆ, ಮಂಜುನಾಥ ಬೇವಿನಕಟ್ಟಿಯವರೇ, ಸುರೇಂದ್ರ ನಾಯ್ಕರವರೇ, ಸಿಂಧೂರ ಲಕ್ಷ್ಮಣ ವಂಶಸ್ಥರಾಗಿರುವ ಕುಮಾರ ಕಂಠೀರವರೇ, ಸಮಸ್ತ ನಾಗರೀಕರೆ ಸಂಸ್ಕೃತಿ ಪ್ರೀಯರೇ, ಪತ್ರಿಕಾ ಮಿತ್ರರೆ, ಆರಂಭದಲ್ಲಿ ಕಪ್ಪರಪಡಿಯಮ್ಮನನ್ನು ಕುರಿತಾಗಿ ವಿದ್ಯಾರ್ಥಿಗಳು ಮೈನವಿ ರೇಳುವಂಥ ಪ್ರಾರ್ಥನೆಯನ್ನು ಮಾಡಿಕೊಟ್ಟರು. ಸಾಮಾನ್ಯವಾಗಿ ಏನಾಗುತ್ತದೆಂದರೆ ನಮ್ಮ ಕುಲಪತಿಗಳು ಆ ಮಾತನ್ನು ಬಹಳ ಮಾರ್ಮಿಕವಾಗಿ ಹೇಳಿದರು. ನಾವೆಲ್ಲರು ಸಂಸ್ಕೃತಿ ಸಂಸ್ಕೃತಿ ಅಂತ ಮಾತನಾಡುತ್ತಿರುತ್ತೇವೆ. ಹೇಗೆ ಮಾತಾಡುತ್ತೀವಿ ಅಂದರೆ ನಾವು ಮಾತಾಡುದು ಬಿಟ್ಟರಬಾರದು ಅವರು ಕೇಳೂದು ಬಿಟ್ಟಿರಬಾರದು ಹಾಗೆ ಮಾತಾಡುತ್ತಿರುತ್ತೇವೆ. ನಾಲ್ಕು ಗೋಡೆಗಳ ಎ.ಸಿ. ಛೆಂಬರ್‌ನಲ್ಲಿ ಸಂಸ್ಕೃತಿಯ ಬಗ್ಗೆ ಮಾತಾಡುತ್ತಿರುತ್ತೇವೆ.

ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಎಲ್ಲಿಯವರೆಗೆ ಹಬ್ಬಿದೆ ಎಂದರೆ ಎಲ್ಲಿಯವರೆಗೂ ಕನ್ನಡ ಮಾತನಾಡುವವರು ಇರುವರೋ ಅಲ್ಲಿಯವರೆಗೂ ಕನ್ನಡ ವಿಶ್ವವಿದ್ಯಾಲಯದ ಕೀರ್ತಿ ಹಬ್ಬಿದೆ ಎಂದು ಹೇಳಲಿಕ್ಕೆ ಇಷ್ಟಪಡುತ್ತೇನೆ. ಕನ್ನಡ ವಿಶ್ವವಿದ್ಯಾಲಯವು ಬರೀ ಆವರಣಕ್ಕೆ ಸೀಮಿತವಾಗದೆ ಹೊರಗಡೆ ಬಂದು ಜನರ ಮನಸ್ಸಿನೊಂದಿಗೆ ಬೆರೆಯುವುದೇ ಅವರಿಗೆ ಪರಿಹಾರ ಸೂಚಿಸುವುದೇ ಕನ್ನಡ ವಿಶ್ವವಿದ್ಯಾಲಯದ ಕೆಲಸ. ಸಾಮಾನ್ಯವಾಗಿ ಬೇರೆ ವಿಶ್ವವಿದ್ಯಾಲಯಗಳಿಗೆ ಭೌಗೋಳಿಕ ವ್ಯಾಪ್ತಿ ಇದೆ. ಆದರೆ ಕನ್ನಡ ವಿಶ್ವವಿದ್ಯಾಲಯಕ್ಕೆ ಆ ತರಹ ಇಲ್ಲ. ಇದು ವಿದ್ಯೆಯನ್ನು ಸೃಷ್ಟಿಸುವ ಕೇಂದ್ರ ಇದನ್ನು ಮಾನ್ಯ ಚಂದ್ರಶೇಖರ ಕಂಬಾರರವರು ಹೇಳುತ್ತಾ ಇದ್ದರು. ಇವತ್ತು ಜೆ.ಟಿ. ಪಾಟೀಲರವರು ಹೇಳಿದರು. ಜನಕ್ಕೆ ಎಂತ ವಿದ್ಯಾಬೇಕಾಗಿದೆ ಎಂದು. ತಾಯಿಯ ಉಪಮೆಯನ್ನು ಒಂದು ಮಾರ್ಮಿಕವಾಗಿ ನೀಡಿದರು. ಆಡಿಬಾ ನನ ಕಂದ ಅಂಗಾಲ ತೊಳೆದೇನು ಅನ್ನುವ ಸಂಸ್ಕೃತಿ ನಮ್ಮದು ಆದರೆ ಇವತ್ತು ಹೆಂಗಾಗಿದೆ ಅಂದರೆ ‘ಹೊಡಿ ಮಗ ಹೊಡಿ ಮಗ ಬಿಡಬ್ಯಾಡ ಅವ್ನ’ ಅನ್ನು ವಂತಾಗಿದೆ.

ನಮ್ಮದು ಸ್ವಾಭಿಮಾನದ ಸಂಸ್ಕೃತಿ. ಆ ಸಂಸ್ಕೃತಿ ಎಲ್ಲಿರುತ್ತೋ ಅದು ಯಾವಾಗಲೂ ಒತ್ತಡವನ್ನು, ಅವಮಾನವನ್ನು ಸಹಿಸಿಕೊಳ್ಳೋದಿಲ್ಲ. ಆದರೆ ಬ್ರಿಟೀಷರ ಮುಖೇನ ನಮ್ಮ ಸಮುದಾಯದ ಸಂಸ್ಕೃತಿಯನ್ನು ನೋಡಿದ್ದೇವೆ. ಅವರು ಹೇಳಿದ್ದನ್ನು ನಾವು ಯತಾವತ್ತಾಗಿ ಬಾಯಿ ಪಾಠ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಹಲಗಲಿ ಬೇಡರು ಅಂದರೆ ಅವರು ಬಹಳ ಮೊಂಡರು ಜಗಳಗಂಟರು ಎನ್ನುವಂತದ್ದನ್ನು ನಾನು ಬಹಳ ಚಿಕ್ಕವನಿದ್ದಾಗಿನಿಂದಲೂ ಕೇಳಿದ್ದೇನೆ. ಹಲಗಲಿ ಬ್ಯಾಡರು ಅಂದರೆ ಜೀವಕ್ಕೆ ಜೀವ ಕೊಡುತ್ತಾರೆನ್ನುವಂತದ್ದು ಒಂದು ಕಡೆ ಇದೆ. ಸಂಸ್ಕೃತಿಯೊಳಗಡೆ ಒಂದು ಸಮುದಾಯದ ಬಗ್ಗೆ ವ್ಯಾಖ್ಯಾನಗಳಿವು. ಅಂದರೆ ಯಾವುದು ಅವರ ಊಟದ ಮೂಲವಾಗಿತ್ತು ಯಾವುದು ಅವರ ಬದುಕಿನ ಮೂಲವಾಗಿತ್ತು. ಯಾವುದು ಅವರ ಶ್ರಮ ಮತ್ತು ಸಂಸ್ಕೃತಿಯ ಮೂಲವಾಗಿತ್ತೋ ಅದನ್ನು ಬ್ರಿಟಿಷರು ಕಸಿದುಕೊಂಡರು. ೧೯೫೬ರ ದಂಗೆಯಲ್ಲಿ ಬ್ರಿಟೀಷರ ಮೇಲೆ ತಳ ಸಂಸ್ಕೃತಿಗಳು ಬಹಳ ದೊಡ್ಡ ದಾಳಿಯನ್ನು ಮಾಡಿದ್ದವು. ಸುಸಜ್ಜಿತವಾಗಿರುವ ಬ್ರಿಟೀಷ ಸೈನ್ಯಪಡೆಯ ಸಂಸ್ಕೃತಿ ನಮ್ಮ ಹಲಗಲಿ ಸಂಸ್ಕೃತಿ ಮುಂದೆ ಒದ್ದಾಡುತ್ತದೆ. ನಮ್ಮ ಹಲಗಲಿ ಬೇಡರನ್ನು ಬಹಳ ಮೋಸದಿಂದ ವಶಪಡಿಸಿಕೊಳ್ಳುತ್ತಾರೆ.

ಆದರೆ ಯಾವಾಗಲೂ ಶ್ರಮ ಸಂಸ್ಕೃತಿ ಏನುಮಾಡುತ್ತದೆಂದರೆ ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳುವ ಇಚ್ಛಾಶಕ್ತಿಯಲ್ಲಿ ಒಂದು ಕಿಚ್ಚನ್ನು ತುಂಬಿರುತ್ತದೆ. ತಳವರ್ಗಗಳು ಯಾವಾಗ ಬೇಕಾದರೂ ಅವಾಗ ಪ್ರತಿಭಟನೆ ಮಾಡಲ್ಲ. ಆ ಪ್ರತಿಭಟನೆಗಳು ಎದ್ದಾಗ ಬಹಳ Force ಆಗಿರುತ್ತವೆ. ಅಂತಹ ಒಂದು ಶಕ್ತಿ ತಳಸಮುದಾಯಗಳಿಗಿದೆ. ಅಂತ ಸಮುದಾಯಗಳನ್ನು ಅಧ್ಯಯನ ಮಾಡಬೇಕಾದರೆ ಸಾಮಾಜಿಕ ಪ್ರಕ್ರಿಯೆ ಮತ್ತು ಸಂಕಥನಗಳ ಮೂಲಕ ಮಾಡಬೇಕಾಗುತ್ತದೆ. ಆ ಸಮುದಾಯದಲ್ಲಿ ಆ ಸಮಾಜದಲ್ಲಿ ಏನೇನು ಚಟುವಟಿಕೆ ಗಳಿವೆ, ಏನೇನು ಸಂಗತಿಗಳಿವೆ ಆ ಮೂಲಕ ನಾವು ಅಧ್ಯಯನ ಮಾಡಬೇಕಾಗುತ್ತದೆ ಹೊರತು ಯಾರೋ ಹಾಕಿಕೊಟ್ಟಂತ ಸಿದ್ಧ ಮಾದರಿಯ ಸಿದ್ಧಾಂತಗಳ ಮೂಲಕ ಅಧ್ಯಯನ ಅಲ್ಲ. ಈಗ ಊರಿಗೆ ಜಾತ್ರೆಗಳಾಗುತ್ತವೆ. ಜಾತ್ರೆಗಳಾಗಬೇಕಾದರೆ ತಳವಾರರು ನಾಯಕರು ಗಳಿಲ್ಲದೆ ಅಥವಾ ಅವರನ್ನು ನೆನೆಯದೆ ಹೋದರೆ ಅದು ಜಾತ್ರೆ ಅನಿಸಿಕೊಳ್ಳಲ್ಲ. ಊರಿನ ಐದು ಮಂದಿ ಪಂಚಾಯಿತಿಯಲ್ಲಿ ಅವರು ಕೂಡ ಒಬ್ಬರಾಗಿದ್ದರು. ಆದರೆ ಶಾನಭೋಗರು ಕುಲಕರ್ಣಿ ಮೂಲಕ ತಳವಾರರನ್ನು ನೋಡುತ್ತೇವೆ ವಿನಃ ತಳವಾರರ ಮೂಲಕ ಶ್ಯಾನಭೋಗ ರನ್ನು ನೋಡಲ್ಲ.

ಇದಕ್ಕೆ ತಳವಾರರು ಊರಿನ ವ್ಯವಸ್ಥೆಯನ್ನು ಕಾಯುವಂತವರಾಗಿದ್ದರು. ಇವರ ಆಯುಧಗಳು ಕೊಡಲಿ ಕುಡುಗೋಲುಗಳಾಗಿದ್ದವು. ಸ್ಥಳೀಯ ಪರಿಕರಗಳೇ ಪ್ರತಿಭಟನೆಯ ಅಸ್ತ್ರಗಳಾಗಿದ್ದವು.

ಇಂತಹ ಸಂಸ್ಕೃತಿಯನ್ನು ನಾವು ಅಧ್ಯಯನ ಮಾಡಬೇಕಾಗಿದೆ. ಕನ್ನಡ ವಿಶ್ವವಿದ್ಯಾಲಯದ ಮುಖ್ಯ ಗುರಿ ಏನೆಂದರೆ, ಅಲಕ್ಷ್ಯವಾಗಿರುವ ಸಮುದಾಯದ ಸಂಸ್ಕೃತಿಯನ್ನು ಒಳನೋಟಗಳ ಮೂಲಕ ನೋಡಿ ಅದರ ಜೊತೆ ಬೆರೆಯಬೇಕಾಗಿದೆ. ಎಲ್ಲೋ ಬಿಳಿ ಆನೆಗಳ ತರಹ ಮೇಲೆ ಕುಳಿತುಕೊಂಡು ಅಧ್ಯಯನ ಮಾಡಿದರೆ ಆಗಲ್ಲ. ಕನ್ನಡ ವಿಶ್ವವಿದ್ಯಾಲಯವು ಜನರ ಹತ್ತಿರ ಹೋಗತಕ್ಕಂತದ್ದು ಜನರ ನಾಡಿ ಮಿಡಿತವನ್ನು ಅಧ್ಯಯನ ಮಾಡುವಂತ ಕೆಲಸವನ್ನು ಮಾಡುತ್ತದೆ. ಬರಿ ಬರಿಯುವುದೊಂದೇ ಕೆಲಸ ಅಲ್ಲ. ಬರೆದಿದ್ದನ್ನು ಓದಿ ಮನವರಿಕೆ ಮಾಡಿಕೊಳ್ಳಬೇಕು. ೧೦-೧೫ ವರ್ಷಗಳಿಂದ ಕನ್ನಡ ವಿಶ್ವವಿದ್ಯಾಲಯ ಈ ಕೆಲಸವನ್ನು ಮಾಡುತ್ತಾ ಬಂದಿದೆ.

ಈ ಆಮಂತ್ರಣ ಪತ್ರಿಕೆಯಲ್ಲಿ ಸ್ಥಳೀಯ ವಿದ್ವತ್ ಪ್ರತಿಭೆಗಳನ್ನು ಜಾಸ್ತಿ ಬಳಸಿ ಕೊಂಡಿದ್ದೇವೆ. ಯಾಕೆಂದರೆ ಅವರಿಗೆ ಈ ವಿಚಾರದ ಆಳ ಅಗಲ ಗೊತ್ತಿರುತ್ತೆ ವಿನಃ ಬೇರೆ ಯಾರೋ ಹೊರಗಿನವರಿಗೆ ಗೊತ್ತಿರಲ್ಲ. ಹೀಗಾಗಿ ನಾವು ಸೇರಿಕೊಂಡಿವಿ ನಮ್ಮೊಂದಿಗೆ ಜನಗಳನ್ನು ಸೇರಿಸಿಕೊಂಡಿದ್ದೇವೆ. ಆದ್ದರಿಂದ ಈ ಮೂರು ದಿನದ ಗೋಷ್ಠಿಯನ್ನು ಸುಖಮಯವಾಗಿ ನೆರವೇರಲು ಅವಕಾಶಮಾಡಿಕೊಟ್ಟ ಸ್ವಾಮಿಗಳಿಗೆ ಊರಿನ ಹಿರಿಯರುಗಳಿಗೆ ನಮಸ್ಕರಿಸುತ್ತಾ ನನಗೆ ಅಧ್ಯಕ್ಷೀಯ ಭಾಷಣ ಮಾಡಲು ಅವಕಾಶ ಒದಗಿಸಿದ ಗೆಳೆಯ ಬೇವಿನಕಟ್ಟಿಗೂ ವಂದನೆಗಳು.

* * *