ಈ ವೇದಿಕೆಯ ಮೇಲೆ ಆಸೀನರಾಗಿರುವಂಥ ಸಮುದಾಯದ ನಾಯಕರುಗಳಿಗೆ ಹಾಗೂ ಬೇರೆ ಬೇರೆ ಸಮುದಾಯದ ಹಿರಿಯರುಗಳಿಗೆ ಹಾಗೂ ಶಾಸಕರುಗಳಿಗೆ ಹಾಗೂ ಹಾಲಿ ಮತ್ತು ಮಾಜಿ ಅಧ್ಯಕ್ಷರುಗಳಿಗೆ ನನ್ನ ಸ್ವಾಗತವನ್ನು ಕೋರುತ್ತಾ ನನ್ನ ಒಂದೆರಡು ಮಾತುಗಳನ್ನು ಹೇಳಲು ಇಷ್ಟ ಪಡುತ್ತೇನೆ.

ವಾಲ್ಮೀಕಿ ಸಮುದಾಯ ಅಥವಾ ಬೇಡ ಸಮುದಾಯವು ಮೂಲತಃ ಬೇಟೆಯನ್ನಾಧರಿಸಿ ಕೊಂಡು ಜೀವನ ಸಾಗಿಸುವಂತಹ ಸಮುದಾಯವಾಗಿದೆ. ಈ ಸಮುದಾಯ ಬೇಟೆಯ ನೀತಿಯನ್ನು ಅಂದರೆ ಬೇಟೆಯನ್ನಾಡುವಾಗ ಮಾಡುವ ತಂತ್ರಗಳ ಮುಖಾಂತರವಾಗಿ ಗಮನಿಸಿದಾಗ ಒಂದು ರೀತಿ ಯೋಧರ ಪಡೆಯಾಗಿರುವುದು ನಮ್ಮ ಚರಿತ್ರೆಯಲ್ಲಿ ಕಂಡು ಬರುತ್ತದೆ. ಇವರು ತಮ್ಮ ಚಾಣಾಕ್ಷತನದಿಂದಾಗಿ ಈ ದೇಶದಲ್ಲಿ ಹಲವಾರು ಪಾಳೇಪಟ್ಟು ಗಳನ್ನು ಕಟ್ಟಿದ ಉದಾಹರಣೆಗಳಿವೆ. ಉದಾಹರಣೆಗೆ ಚಿತ್ರದುರ್ಗ, ಕುಮ್ಮಟದುರ್ಗ, ಹರಪನಹಳ್ಳಿ, ಉಚ್ಚಂಗಿದುರ್ಗ ಹೀಗೆ ಮುಂತಾದ ಕಡೆಗೆ ಪಾಳೆಯಪಟ್ಟುಗಳನ್ನು ನಿರ್ಮಿಸಿ ದುದನ್ನು ನಾವು ಕಾಣಬಹುದು. ಹಾಗೆ ಇವರು ಬೇರೆ ಸಮುದಾಯಗಳ ಪಾಳೇಪಟ್ಟುಗಳನ್ನು ಹೂಡುವಾಗ ತಾವು ಯೋಧರಾಗಿ ಕೆಲಸ ಮಾಡಿರುವಂತದ್ದು, ಬೇರೆ ಪಡೆಯ ಅಂಗರಕ್ಷಕರಾಗಿ ಜೀವನ ಮಾಡಿರುವಂತದ್ದನ್ನು ಕಾಣುತ್ತೇವೆ.  ಬ್ರಿಟೀಷರು ಈ ದೇಶಕ್ಕೆ ಕಾಲಿಟ್ಟಾಗಿನಿಂದ ಬೇಡರಿಗೆ ಅವನತಿ ಕಾಲ ಶುರುವಾಯಿತೆಂದು ಹೇಳಬಹುದು. ಯಾಕೆಂದರೆ ಬೇಡರ ಕುಲಕಸುಬೇ ಬೇಟೆ. ಬ್ರಿಟೀಷರು ಬಂದದ್ದರಿಂದ ಅವರ ಕಾನೂನುಗಳು ಇವರ ಬೇಟೆಯ ಕ್ರಿಯೆಯನ್ನು ತಡೆಗಟ್ಟಿತು. ಇದರಿಂದ ಬೇಡರ ಆಹಾರದ ಜೊತೆಗೆ ಅವರ ಕೆಲಸವನ್ನು ಕಸಿದುಕೊಂಡದ್ದಲ್ಲದೆ, ಪಾಳೆಪಟ್ಟುಗಳನ್ನು ವಶಕ್ಕೆ ತೆಗೆದುಕೊಂಡು ಒಂದು ರೀತಿಯಲ್ಲಿ ವೀರಯೋಧರಿೆ ಕೆಲಸವಿಲ್ಲವಾಯಿತು. ಇದರಿಂದ ಬಡತನವನ್ನನುಭವಿಸುವ ಸಂದರ್ಭ ಒದಗಿತು ಎನ್ನಬಹುದು. ಇಷ್ಟೆಲ್ಲಾ ಇದ್ದಾಗಲೂ ಬೇಡನಾಯಕರು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಾಗಿದ್ದರು. ಸಿಂಧೂರಲಕ್ಷ್ಮಣ, ಹಲಗಲಿ ಬೇಡರಂತವರು ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮ ಶೂರತ್ವದಿಂದ ಬ್ರಿಟೀಷರನ್ನು ಎದುರಿಸಿದುದನ್ನು ಕಾಣಬಹುದು. ಆದರೆ ನಮ್ಮ ಆ ಪರಂಪರೆಯನ್ನು ನೋಡುತ್ತಾ ಹೋದರೆ ಕೇವಲ ಉತ್ತರ ಭಾರತದಲ್ಲಿ ರುವಂತಹವರನ್ನು ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧವಾಗಿ ಹೋರಾಟ ಮಾಡಿದವರು ಮಾತ್ರ ಸ್ವತಂತ್ರ ಹೋರಾಟಗಾರರೆಂದು ಗುರುತಿಸಿಕೊಳ್ಳುತ್ತಾ ಬಂದರು. ಆದರೆ ಇಲ್ಲಿಯ ಸಿಂಧೂರ ಲಕ್ಷ್ಮಣನಾಗಿರಬಹುದು, ಹಲಗಲಿ ಬೇಡರಾಗಿರಬಹುದು, ಇಂತಹ ಪರಂಪರೆಯುಳ್ಳ ಸಮುದಾಯದ ಬಗೆಗೆ ಯಾವುದೇ ರೀತಿಯ ಗುರುತಿಸುವಿಕೆ ಹಾಗೂ ಅಧ್ಯಯನಗಳು ನಡೆಯಲಿಲ್ಲ. ಇತ್ತೀಚೆಗೆ ಅಧ್ಯಯನ ನಡೆಯುವಂತಹದ್ದನ್ನು ಕಾಣುತ್ತೇವೆ.  ಪ್ರಸ್ತುತ ವಿಚಾರ ಸಂಕಿರಣದಲ್ಲಿ ಬಾಗಲಕೋಟೆ ಪರಿಸರದ ವಾಲ್ಮೀಕಿ ಸಮುದಾಯದವರ ವಾಸ್ತವ ಗಳೇನು? ಪರಿಸ್ಥಿತಿಗಳೇನು? ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಪರಿಸ್ಥಿತಿಯ ವಾಸ್ತವಗಳೇನು? ಇವುಗಳ ಜೊತೆಯಲ್ಲಿ ಪರಂಪರೆಯನ್ನು ಅಧ್ಯಯನ ಮಾಡುವಂತದ್ದು ವಿಶೇಷ. ಅದಕ್ಕೋಸ್ಕರ ಸಾಂಸ್ಕೃತಿಕ ಅನನ್ಯತೆ ಮತ್ತು ಹಲಗಲಿ ಬಂಡಾಯ ಎಂಬ ಶೀರ್ಷಿಕೆಯಲ್ಲಿ ಈ ವಿಚಾರ ಸಂಕಿರಣ. ಇಂತಹ ಸಂದರ್ಭದಲ್ಲಿ ಸಿಂಧೂರಲಕ್ಷ್ಮಣನ ಚಟುವಟಿಕೆಗಳಿಗೆ ಕಾರಣವೇನು? ಎಂಬ ವಿವರ ನೀಡುವುದರ ಜೊತೆಗೆ ಹಲಗಲಿ ಚರಿತ್ರೆಯನ್ನು ಕಟ್ಟಿಕೊಂಡು ವಂತದ್ದು ಪ್ರಮುಖ ಉದ್ದೇಶವಾಗಿದೆ. ಈ ತರಹದ ಪಟ್ಟವನ್ನು ಹೊರುವುದರ ಮೂಲಕ ಇವರು ಜನಪರ ಕಾಳಜಿಗಾಗಿ ಹೋರಾಟ ಮಾಡಿದರು. ಅಥವಾ ಈ ದೇಶಕ್ಕೆ ಸ್ವತಂತ್ರವನ್ನು ತಂದುಕೊಡುವುದರ ಜೊತೆಗೆ, ತಮ್ಮ ಆಯುಧಗಳ ಮೇಲಿನ ಕಾಯಿದೆಗಳನ್ನು ರದ್ದು ಗೊಳಿಸಲು ಹೋರಾಟ ಮಾಡಿರುವಂತದ್ದು ಬಹಳ ಮುಖ್ಯವಾಗುತ್ತದೆ. ತಮ್ಮ ಅನ್ನ ತಮ್ಮ ಸಂಸ್ಕೃತಿಗೋಸ್ಕರ ಹೋರಾಡಿದವರನ್ನು ಕಳ್ಳರು, ಕಾಕರು, ಎಂದು ಪಟ್ಟವನ್ನು ಕಟ್ಟಿರುವಂತದನ್ನು ನಾವು ಕಾಣುವಂತದ್ದು ಇಲ್ಲಿಯೇ. ಈ ತರಹ ಪರಿಸ್ಥಿತಿಗಳು ಯಾಕೆ ನಿರ್ಮಾಣವಾಗುತ್ತವೆ? ಹಲಗಲಿ ಸಮುದಾಯಕ್ಕೆ ಆಗಿರುವ ಅನ್ಯಾಯಗಳೇನು? ಇತ್ಯಾದಿ ವಿವರಗಳು ಅನ್ವೇಷಣೆಗಾಗಿ ಈ ಮೂರು ದಿನದ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.

ಜೊತೆಗೆ ಬಾಗಲಕೋಟೆ ಪರಿಸರದ ವಾಲ್ಮೀಕಿ ಸಮುದಾಯದ ಪರಿಸ್ಥಿತಿಗಳು, ಸಾಂಸ್ಕೃತಿಕ ಸ್ಥಿತಿಗತಿಗಳು, ಜೊತೆಗೆ ಸಿಂಧೂರಲಕ್ಷ್ಮಣ ಒಬ್ಬ ಸಾಂಸ್ಕೃತಿಕ ನಾಯಕ ಮತ್ತು ಈ ದೇಶದ ಸ್ವಾತಂತ್ರ್ಯಕ್ಕೆ ರಣಕಹಳೆಯನ್ನು ನೀಡಿದ ಮೊಟ್ಟಮೊದಲಿನ ವ್ಯಕ್ತಿ. ಇಂತಹ ವ್ಯಕ್ತಿಗಳ ಬಗ್ಗೆ ಇದುವರೆಗೆ ಅಧ್ಯಯನಗಳು ನಡೆದಿಲ್ಲ. ಹಾಗಾಗಿ ಆ ಕೊರತೆಯನ್ನು ನೀಗಿಸುವುದರ ಜೊತೆಯಲ್ಲಿ ಸಿಂಧೂರ ಲಕ್ಷ್ಮಣ ಮೂಲತಃ ಯಾವ ರೀತಿ ಇದ್ದ, ಆತನ ಉದ್ದೇಶಗಳೇ ನಾಗಿದ್ದವು. ಯಾಕೆಂದರೆ ನಾವು ಸಿಂಧೂರ ಲಕ್ಷ್ಮಣನ ಬಗ್ಗೆ ಅನಾವಷ್ಯಕ ಅಪಾದನೆಗಳನ್ನು ನೀಡುವುದಕ್ಕಾಗಿ ಚರಿತ್ರೆಯಲ್ಲಿ ಆಗಿರುವ ಈ ಮಸಿಯನ್ನು ತೊಳೆಯುವುದಕ್ಕೊಸ್ಕರ ಚರಿತ್ರೆಯ ಪುನರ್ ವಿಮರ್ಶೆಯನ್ನು ಮಾಡುವಂತದ್ದು, ಪುನರ್ ವ್ಯಾಖ್ಯಾನ ಮಾಡುವಂತದ್ದು ಜರೂರು ಆಗಬೇಕಾಗಿದೆ. ಅದನ್ನು ಈಗ ಪ್ರಾರಂಭಿಸಿದ್ದೇವೆ. ಹಾಗೆಯೇ ಆಧುನಿಕತೆ ಸಹ ಈಗ ಹಿಂದಿನ ರೀತಿಯಂತೆಯೇ ನಮ್ಮನ್ನು ದಾರಿದ್ರ್ಯರನ್ನಾಗಿಸುತ್ತಿದೆ. ಬರೀ ವಾಲ್ಮೀಕಿ ಸಮುದಾಯ ವಷ್ಟೆ ಅಲ್ಲ ಅದರ ಜೊತೆಗೆ ತಳಸಮುದಾಯಗಳು ಯಾವ ರೀತಿ ಆಧುನೀಕರಣಕ್ಕೆ ಸಿಲುಕುತ್ತಿವೆ ಎನ್ನುವಂತದ್ದು. ಆಧುನಿಕತೆ ಎನ್ನುವಂತದ್ದು ಎರಡು ರೀತಿಯದಾಗಿದೆ. ಒಂದು ಬ್ರಿಟೀಷರ ಸಂದರ್ಭದಲ್ಲಿ ಬಂದಂತ ವಸಾಹತುಷಾಹಿ. ಇನ್ನೊಂದು ಇವತ್ತಿನ ಜಾಗತೀಕರಣ. ೧೦-೧೫ ವರ್ಷಗಳಿಂದ ಬಂದಂತ ಜಾಗತೀಕರಣ ತಳಸಮುದಾಯಗಳ ಬದುಕನ್ನು ಯಾವ ರೀತಿ ಕಸಿದುಕೊಂಡು ಬಡವರನ್ನಾಗಿಸಿವೆ ಎನ್ನುವಂತದ್ದು.

ಒಟ್ಟಾರೆ ಈ ಮೂರು ದಿನದ ಗೋಷ್ಠಿಯಲ್ಲಿ ನಮ್ಮ ಪರಂಪರೆ, ಬಾಗಲಕೋಟೆ ಪರಿಸರದ ವಾಲ್ಮೀಕಿ ಸಮುದಾಯವಲ್ಲದೆ ಕರ್ನಾಟಕದ ತಳಸಮುದಾಯದ ಬಗೆಗಿನ ಅಧ್ಯಯನವಾಗಿದೆ.

ಮಠದ ಸ್ವಾಮಿಗಳು ಹಾಗೂ ಪ್ರತಿಯೊಬ್ಬರು ನಮ್ಮ ಸಮುದಾಯಕ್ಕೆ ಕಾಳಜಿ ತೋರಿಸಿ ದ್ದಾರೆ. ಇಲ್ಲಿ ಈ ವೇದಿಕೆಯ ಮೇಲಿರುವ ಎಲ್ಲರಿಗೂ ನನ್ನ ಕೃತಜ್ಞತೆಗಳನ್ನು ಹೇಳುತ್ತಾ  ನನ್ನ ಮಾತನ್ನು ಮುಗಿಸುತ್ತೇನೆ.

* * *

ಆದಿಕವಿ, ವಾಲ್ಮೀಕಿ, ಶಬರಿ, ಮಹಾಭಾರತದ ಧರ್ಮವ್ಯಾಧ ಏಕಲವ್ಯ, ಜೈನ ಆರಾಧಾ ಗ್ರಂಥದಲ್ಲಿ ಬರುವ ಚಿರಾತಪುತ್ರ, ಚಾಲುಕ್ಯದೊರೆ ಪೆರ್ಯಾಡಿ ರಾಯನ ಮಂತ್ರಿ ತೆಲುಗು ಬೊಮ್ಮಯ್ಯ ಮತ್ತು ಪ್ರಸಿದ್ಧ ಶರಣರು ಬೇಡ ಜನಾಂಗದ ಪ್ರತಿನಿಧಿಗಳೇ. ಕ್ರಿ.ಶ. ೧೪೦೭ರ ಸಂಗೂರ ಶಿಲಾಶಾಸನದಿಂದ ಅಸಾಮಾನ್ಯ ಮಂತ್ರಿ ಬೈಚಪ್ಪನೂ ಈ ಜನಾಂಗದವನೆಂದು ಪ್ರಕಟವಾಗುತ್ತದೆ. ಅಂದಿನ ದೇಶೀಯ ಸೈನ್ಯದಲ್ಲಿ ಬಹುಭಾಗ ಬೇಡರೇ ಇದ್ದು, ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ್ದರಿಂದ ಬ್ರಿಟೀಷರು, ಸಿಖ್‌ರು, ಗೂರ್ಖಾಗಳನ್ನು ನಂಬಿ ಸೈನ್ಯದಲ್ಲಿ ಸೇರಿಕೊಂಡಂತೆ ಇವರನ್ನು ಸೇರಿಸಲಿಲ್ಲ. ಹೀಗಾಗಿ ಇವರ ಮಹತ್ವ ಕಡಿಮೆಯಾಯಿತು. ಒಟ್ಟಿನಲ್ಲಿ ಬೇಡರು ಬಹುಸಮರ್ಥ ಜನಾಂಗಕ್ಕೆ ಸೇರಿದವರು. ಈಗ ಮಾತ್ರ ತೀರ ಅಸಮರ್ಥರಾಗಿ ಬಾಳಬೇಕಾದ ಸ್ಥಿತಿ ಉಂಟಾಗಿದೆ. ಶೈಕ್ಷಣಿಕವಾಗಿ ಹಿಂದುಳಿದಿರುವುದೇ ಇದಕ್ಕೆ ಮೂಲಭೂತವಾದ ಕಾರಣ.

ಡಾ. ಎಂ.ಬಿ. ನೇಗಿನಾಳ