ವ್ಯಾಧ ಚರಿತೆ: ಹೆಸರೇ ಹೇಳುವ ಹಾಗೆ ಇದೊಂದು ವ್ಯಾಧ/ಬೇಡ ಕುಲದ ಚರಿತ್ರೆ ಯನ್ನು ಕಟ್ಟಿಕೊಡುತ್ತಿರುವ ಕೃತಿ. ಚರಿತ್ರೆ ಅಥವಾ ಚರಿತೆ ಹಲವು ಆಯಾಮಗಳಿಂದ ಕೂಡಿದ ಜ್ಞಾನದ ನೆಲೆಗಳನ್ನು ಕಟ್ಟಿಕೊಡುವ ಶಿಸ್ತು, ಅಂದರೆ ಇದೊಂದು ಸಾಗರೋಪಮೆ. ಸಾಗರದ ಮೂಲ ನೆಲವೇ ಅಥವಾ ಜಲವೇ ಎಂಬುದು ಬುದ್ದಿಗೆ ಎಟುಕದ ಉತ್ತರಿಸಲಾಗದ ಉತ್ತರವಾಗುತ್ತದೆ. ಚರಿತ್ರೆಯು ಸಾಗರಕ್ಕೆ ಮೂಲ-ಹಿನ್ನಲೆ ಬೇಟೆಗಾರಿಕೆಯ ನೆಲೆ ಎಂದರೆ ತಪ್ಪಾಗಲಾರದು. ಮನುಷ್ಯ ಸಸ್ಯಾಹಾರದ ಹಂತದಿಂದ ಮಾಂಸಾಹಾರಗಳ ಕಡೆಗೆ ಪಲ್ಲಟ ವಾದಾಗಿನಿಂದ ಚರಿತ್ರೆಯೆಂಬ ಮೊಳಕೆಗೆ ಬೇರುಗಳು ಮೂಡಿದವೆಂದು ಹೇಳಬಹುದು. ಆ ಆರಂಭಿಕ ಹಂತದ ಚರಿತ್ರೆಯ ವಾರಸುದಾರರು ಬೇಡರು. ಇವರ ಸಂಸ್ಕೃತಿಯ ವಿವಿಧ ನೆಲೆಗಳನ್ನು ಶೋಧಿಸುವ ಸಾಹಸವನ್ನು ಪ್ರೊ. ಮಂಜುನಾಥ ಬೇವಿನಕಟ್ಟಿಯವರು “ವ್ಯಾಧ ಚರಿತೆ” ಕೃತಿಯಿಂದ ತೋರಿಸಿಕೊಟ್ಟಿದ್ದಾರೆ.

ವಿವಿಧ ಲೇಖಕರ ಬೇಡ ಸಮುದಾಯ ಕುರಿತ ಲೇಖನಗಳ ಸಂಕಲನ ಇದಾಗಿದೆ. ಬೇಟೆಗಾರಿಕೆ ಮನುಷ್ಯ ಸಂಸ್ಕೃತಿಯ ವಿಕಾಸದ ಎರಡನೆಯ ಹಂತವಾಗಿ ನಿಂತು ಹೋದರೂ ಅದನ್ನೇ ವೃತ್ತಿಯಾಗಿ ತಮ್ಮ ಸಂಸ್ಕೃತಿಯಾಗಿ, ಸಮುದಾಯ ಸೂಚಕವಾಗಿ ಉಳಿಸಿಕೊಂಡವರು ಬೇಡರು ಎಂಬ ಸತ್ಯವನ್ನು ಈ ಕೃತಿಯ ಲೇಖನಗಳು ಅನಾವರಣಗೊಳಿಸುತ್ತವೆ. ಅಲ್ಲದೆ, ಈ ಸಮುದಾಯದ ಉಪಪಂಗಡಗಳ ಅಧ್ಯಯನಗಳ ಕ್ರೋಡೀಕರಣವನ್ನು ಸಂಪಾದಕರಾದ ಡಾ. ಬೇವಿನಕಟ್ಟಿಯವರು ಶಿಸ್ತುಬದ್ಧವಾಗಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇಲ್ಲಿರುವ ಒಟ್ಟಾರೆ ೩೧ ಲೇಖನಗಳಲ್ಲಿ ವ್ಯಾದ ಸಂಸ್ಕೃತಿಯ ಪರಂಪರೆ-ಮೂಲ-ವಿಕಾಸ ಮತ್ತು ವರ್ತಮಾನದ ಸ್ಥಿತಿ-ಗತಿಗಳ ಅವಲೋಕನ ಕಂಡುಬರುತ್ತದೆ. ಅಲ್ಲದೆ ಸಮುದಾಯದ ಅನನ್ಯತೆಯನ್ನು ಪ್ರಾದೇಶಿಕ ಭಿನ್ನತೆಗಳ ಪರಿಚಯ ಈ ಕೃತಿಯಲ್ಲಿ ಕಂಡುಬರುತ್ತದೆ. ಇದರ ಎಲ್ಲ ಲೇಖನಗಳು ಇಂಥ ಹುಡುಕಾಟಗಳಿಗೆ ಆಕರಗಳಾಗಿವೆ.

ಬೇಡರ ಉಪಪಂಗಡಗಳಾದ ವಾಲ್ಮೀಕಿ, ನಾಯಕ, ತಳವಾರ, ಪರಿವಾರ, ಕಂಪಣ, ಮೊಂಡ, ಮ್ಯಾಸಬೇಡ, ಊರುಬೇಡ ಇತ್ಯಾದಿ ಪ್ರಭೇದಗಳಲ್ಲದೆ, ಬೇಡರ ಬೆಡಗುಗಳು ಆಚಾರ ವಿಚಾರಗಳು-ಆರಾಧನೆ-ಆಚರಣೆಗಳು ಮುಂತಾದ ಸಾಂಸ್ಕೃತಿಕ ವಿಶ್ಲೇಷಣೆಗಳ ಅಧ್ಯಯನವನ್ನು ಇಲ್ಲಿನ ಕೆಲವು ಲೇಖನಗಳು ವಿವರಿಸುತ್ತವೆ.

ಬೇಡ ಸಂಸ್ಕೃತಿಯ ವೃತ್ತಿ ಪಲ್ಲಟದ ನೆಲೆಗಳನ್ನು ಯಾವುದೇ ಮುಚ್ಚುಮರೆಗಳಿಲ್ಲದೆ ಆಯಾ ಲೇಖಕರು ಬಿಂಬಿಸಿದ್ದಾರೆ. ಬೇಟೆಗಾರರು ಬೇಟೆಯ ವೃತ್ತಿಯಿಂದ ಪಲ್ಲಟಗೊಂಡು ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಳ್ಳಲು ಯತ್ನಿಸಿದ ಹಂತಗಳು ಮತ್ತು ಅಲ್ಲಿ ಬಂದೊದಗಿದ ಸಂಕಷ್ಟಗಳನ್ನು ಕೃತಿ ಪರಿಚಯಿಸುತ್ತದೆ. ಕಾಡುಮೇಡುಗಳಲ್ಲಿ ಬೇಟೆಯಾಡುತ್ತಾ ಪ್ರಕೃತಿಗೆ ಬದ್ಧರಾದ ಈ ಜನ ಊರಿನ ಸಂಸ್ಕೃತಿಗೆ ಬದಲಾಗಲು ಸಿದ್ಧರಾದಾಗ ಎದುರಿಸಿದ ಸಂಕಷ್ಟ ಗಳನ್ನು ನೆನಪಿಸುವ ದೇವತೆಗಳಾಗಿ ಗಾದೆ-ಒಗಟುಗಳು ಮೂಡಿ ಬಂದುದ್ದನ್ನು ಕೆಲವು ಲೇಖನಗಳು ಹೇಳುತ್ತವೆ. ಹಾಗೆಯೇ ಊರಿನ ನೆಲೆಯ ಸವಲತ್ತುಗಳು ಸಿಗದೆ ಕಾಡಿನ ಆಶ್ರಯವೂ ಇಲ್ಲದೆ ಬಾಳಬೇಕಾದ ಸ್ಥಿತಿಯಲ್ಲಿ ಬೇಡರು ಕಳ್ಳರು, ಕದೀಮರು, ದರೋಡೆ ಕೋರರು ಆಗಿ ಬಾಳಬೇಕಾಗಿ ಬಂದ ಸಾಂಸ್ಕೃತಿಕ ಸನ್ನಿವೇಶವನ್ನು ಹಲವಾರು ಲೇಖನಗಳು ಹೇಳುತ್ತವೆ. ಅಂತೆಯೇ ಇದೇ ಅವರ ವಿಕಾಸದ ಮೆಟ್ಟಿಲುಗಳಾಗಿ “ವರ”ವಾಗಿ ಪರಿಣಮಿಸಿದ ವಿಚಾರವು ಬಿಂಬಿತವಾಗಿದೆ. ವಿಕಾಸದ ನಾಯಕ, ಪಾಳೆಯಗಾರ, ದೊರೆ, ಪ್ರಭು, ರಾಜ ಇತ್ಯಾದಿ ಚರಿತ್ರೆಯ ಆಡಳಿತಾತ್ಮಕ ಅಧಿಕಾರದ ಹಂತದಿಂದ ಆಳುವ ವರ್ಗವಾಗಿ ನಿಂತ ಸಮುದಾಯದ ಪರಿಶ್ರಮ ಒಂದೆಡೆಯಾದರೆ ದಾರಿದ್ರ್ಯ, ಶೋಷಣೆ, ಅನಾಗರೀಕತೆ, ಬಡತನ, ಅಜ್ಞಾನ ಮತ್ತೊಂದು ಮುಖವಾಗಿ ಸಮುದಾಯವನ್ನು ಕಾಡುತ್ತಿರುವುದನ್ನು ಕೃತಿಯಲ್ಲಿ ಪರೀಶಿಲಿಸಲಾಗಿದೆ.

ಈ ಕೃತಿಯ ಮತ್ತೊಂದು ವಿಶೇಷವೆಂದರೆ ಇಲ್ಲಿನ ಲೇಖನಗಳು ವ್ಯಾಧ ಅಥವಾ ಬೇಡ ಸಂಸ್ಕೃತಿಗೆ ಸಂಬಂಧಿಸಿದ ಲೇಖನಗಳೇ ಆದರೂ ಅವುಗಳ ಲೇಖಕರು ಹಲವು (ಬೇರೆ-ಬೇರೆ) ಸಮುದಾಯಗಳ ಹಿನ್ನೆಲೆಗಳಿಂದ ಬಂದಂಥವರಾಗಿದ್ದಾರೆ. ಹೀಗೆ ಬೇರೆ ಸಂಸ್ಕೃತಿಗಳ ಹಿನ್ನೆಲೆಗಳುಳ್ಳ ಲೇಖಕರು ಕಟ್ಟಿಕೊಟ್ಟಿರುವ ವಿಚಾರಗಳು ಅಂದಾಭಿಮಾನ-ಅತಿಅಭಿಮಾನ ಎಂಬ ತೆಗಳಿಕೆಗಳಿಂದ ಹೊರತಾದಂಥವುಗಳಾಗಿವೆ. ಕನ್ನಡಿ ಮತ್ತು ಬಿಂಬದ ಸಂಬಂಧ ಇಲ್ಲಿನ ಲೇಖಕ ಮತ್ತು ಲೇಖನಗಳದ್ದಾಗಿದೆ. ಅಂದರೆ ಬೇಡ ಸಂಸ್ಕೃತಿಯನ್ನು ಅನ್ಯ ಸಂಸ್ಕೃತಿಯ ಲೇಖಕರು ತಮ್ಮ ಅನುಭವದ ಆಲೋಚನೆಗಳ ಪರಿಧಿಯ ಆಚೆಗಿನ ಸಂಶೋಧ ನಾತ್ಮಕ ನೆಲೆಯಿಂದ ಅಧ್ಯಯನ ಮಾಡಿ ಚಿಂತನೆಗಳನ್ನು ಬಿಂಬಿಸಿದ್ದಾರೆ. ಇಲ್ಲಿ ಲೇಖಕನೆಂಬ ಕನ್ನಡಿಯಲ್ಲಿ ಬೇಡ/ವ್ಯಾಧ ಸಂಸ್ಕೃತಿಯ ಬಿಂಬ ಮೂಡಿದಂತೆಯೇ ಏಕಕಾಲಕ್ಕೆ ಅಧ್ಯಯನ ಮಾಡುತ್ತಿರುವ ಲೇಖಕನು ಈ ಸಂಸ್ಕೃತಿ ಅಧ್ಯಯನದ ಕನ್ನಡಿಯಲ್ಲಿ ಪ್ರತಿಬಿಂಬವಾಗಿ ಕಂಡುಬರುತ್ತಾನೆ. ಪ್ರೊ. ನೇಗಿನಹಾಳರ ಲೇಖನ ಇರಬಹುದು ಅಥವಾ ಪ್ರೊ. ಕೃಷ್ಣಮೂರ್ತಿ ಹನೂರು, ಪ್ರೊ. ಎಂ.ಜಿ. ಈಶ್ವರಪ್ಪ, ಪ್ರೊ. ಲಕ್ಷ್ಮಣ್ ತೆಲಗಾವಿ, ಎಂ.ಪಿ. ವೀಣಾ, ಬಿ. ತಾರಾಮತಿ ಇವರ ಲೇಖನಗಳನ್ನು ಓದುವಾಗ ಈ ಅನುಭವ ಆಗುತ್ತದೆ ಮತ್ತು ಬೇಡ ಸಮುದಾಯದ ಹಲವು ಲೇಖಕರು ನೀಡಿರುವ ಎಲ್ಲ ಲೇಖನಗಳು ಒಂದಕ್ಕಿಂತ ಒಂದು ವಿಶಿಷ್ಟಪೂರ್ಣವಾಗಿದ್ದು ಸಮುದಾಯದ ಏಕತೆ ಹಾಗೂ ಪ್ರಾದೇಶಿಕ ಭಿನ್ನತೆಗಳನ್ನು ಕಟ್ಟಿ ಕೊಡುವಲ್ಲಿ ಯಶಸ್ವಿಯಾಗಿವೆ.

ಸಂಪಾದಕರಾದ ಬೇವಿನಕಟ್ಟಿಯವರ ಎರಡು-ಮೂರು ಲೇಖನಗಳು ಈ ಕೃತಿಯಲ್ಲಿದ್ದು, ಕರ್ನಾಟಕದ ಬೇಡ ನಾಯಕರ ಅಧ್ಯಯನ ಎಂಬ ಲೇಖನದಲ್ಲಿ ಮಾನವಶಾಸ್ತ್ರ ಹಾಗೂ ಸಮಾಜಶಾಸ್ತ್ರದ ಹಿನ್ನೆಲೆಗಳ ಅವಲೋಕನ ಕಂಡುಬರುತ್ತದೆ. ಗ್ರಾಮ ಮತ್ತು ನಗರ ಸಂಸ್ಕೃತಿ, ಕಾಡು ಮತ್ತು ನಾಡಿನ ಸಂಸ್ಕೃತಿ ಭಾರತೀಯ ಜಾತಿ ಪರಂಪರೆ ಹಾಗೂ ಹಿಂದೂ ಜಾತಿ ವ್ಯವಸ್ಥೆ ಇವಿಷ್ಟರ ಹಿನ್ನೆಲೆಗಳಲ್ಲಿ ಲೇಖಕರು ಬೇಡ ಸಮುದಾಯದ ಅನನ್ಯತೆಯನ್ನು ಕಟ್ಟಿ ಕೊಡಲು ಪ್ರಯತ್ನಿಸಿದ್ದಾರೆ. ಅಲ್ಲದೆ ಬಹುಪಾಲು ಅಧ್ಯಯನಗಳನ್ನು ಲೇಖಕರು ಓದಿ ತಮ್ಮ ಬರವಣಿಗೆಗೆ ಸತ್ವ ತುಂಬಿದ್ದಾರೆ. ಗ್ರಾಮೀಣ ಪರಿಸರದಲ್ಲಿ ಜನರಿಗೆ ಭವಿಷ್ಯವನ್ನು ಹೇಳುತ್ತಾ ಮಾನಸಿಕ ಸಂಕಷ್ಟಗಳಿಂದ ಬಿಡುಗಡೆಗೊಳಿಸುವ ಕೊಂಡಮಾಮಗಳ ಕುರಿತ ಬೇವಿನಕಟ್ಟಿಯವರ ಲೇಖನ ವಿಸ್ಮಯ ಮೂಡಿಸುವ ಅಧ್ಯಯನವಾಗಿ ಕಂಡುಬರುತ್ತದೆ. ಏಕೆಂದರೆ, ಕೊಂಡಮಾಮ/ಕುರುಮಾಮಗಳು ಮೂಲತಃ ಬೇಡರಾಗಿದ್ದು ಯಾವುದೋ ಒಂದು ಕಾಲಘಟ್ಟದಲ್ಲಿ ಸಮುದಾಯದಿಂದ ಸಿಡಿದುಹೋದವರು ಎಂಬ ಸುಳಿವುಗಳು ಈ ಲೇಖನದಲ್ಲಿವೆ. ಇಂಥದ್ದೇ ಮತ್ತೊಂದು ಲೇಖನ ಚಾಮರಾಜನಗರ ಪರಿಸರದ ಕಂಪಣರು/ಕಂಪಣಬೇಡರನ್ನು ಕುರಿತದ್ದು, ಕಂಪಣರು ಕೂಡ ಬೇಡ ಸಮುದಾಯ ಮೂಲದ ಸಂಬಂಧ ವನ್ನು ಕಟ್ಟಿಕೊಡುವ ನೆನಪುಗಳನ್ನು ಆಚರಣೆಗಳಲ್ಲಿ ಉಳಿಸಿಕೊಂಡಿರುವುದನ್ನು ಲೇಖಕರು ಶೋಧಿಸಿದ್ದಾರೆ.

ಒಟ್ಟಾರೆ ಪ್ರೊ. ವಿವೇಕ ರೈರವರ ಮಾತುಗಳ ಪ್ರಕಾರ ವೇದಪೂರ್ವ ಕಾಲದಿಂದ ಸಮಕಾಲೀನ ಸಂದರ್ಭದವರೆಗೆ ಬೇಡ ಸಮುದಾಯವನ್ನು ಕುರಿತು ವ್ಯಾಪಕ ಕ್ಷೇತ್ರಕಾರ್ಯದ ಮತ್ತು ಅಮೂಲ್ಯ ಮಾಹಿತಿಗಳ ಲೇಖನಗಳು ಇಲ್ಲಿ ಒಟ್ಟು ಸೇರಿವೆ. ಬೇಡ ಸಮುದಾಯದ ಭಿನ್ನ ನೆಲೆಗಳು, ಸಾಂಸ್ಕೃತಿಕ ವೈವಿಧ್ಯಗಳು, ಪ್ರಾದೇಶಿಕ ಭಿನ್ನತೆಗಳು, ಸಾಂಸ್ಕೃತಿಕ ವಿವರಗಳು ಇಲ್ಲಿ ಚರ್ಚಿತವಾಗಿವೆ. ಇಂಥ ಲೇಖನಗಳು ಈ ಸಮುದಾಯದ ಅಭಿವೃದ್ದಿಯ ರೂಪು-ರೇಷೆಯ ದೃಷ್ಟಿಯಿಂದ ಮುಖ್ಯವಾಗುತ್ತವೆ.

* * *

ಜಗತ್ತಿನಲ್ಲಿ ಬೇಡರಷ್ಟು ಶೂರರು ಸಿಗಬಹುದು. ಆದರೆ ಬೇಡರಿಗಿಂತ ಶೂರರು ದೊರೆಯಲಾರರು.      
  ವಿಲಿಯಂ ಸ್ಮಿಥ್

ಸೀತೆ ಬೇಡರವಳೆಂಬುದಕ್ಕೆ ಹಲವು ಆಧಾರಗಳಿವೆ.
ಡಾ. ಜ.ಚ.ನಿ.

ಬೇಡಬಂಟನಾದ ಸಳನು ಹೊಯ್ಸಳ ರಾಜ್ಯ ಸ್ಥಾಪಿಸಿದನು.
ಲಂಕೇಶ ಪತ್ರಿಕೆ