ಇಂದಿನ ಈ ಸಮಾರಂಭದ ಅಧ್ಯಕ್ಷರಾಗಿರುವ ಮತ್ತು ನಮ್ಮ ವಿಶ್ವವಿದ್ಯಾಲಯ ದವರೇ ಆಗಿರುವ ಡಾ. ವೀರೇಶ ಬಡಿಗೇರ್ ಅವರೇ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಜೆ.ಟಿ. ಪಾಟೀಲ್‌ರವರೇ, ಆರ್.ಎಸ್. ಪಾಟೀಲ್‌ರವರೆ ಮತ್ತು ಪೂಜ್ಯ ಸ್ವಾಮೀಜಿಯವರೇ, ಇದರಲ್ಲಿ ಭಾಗವಹಿಸಿರುವ ಎಲ್ಲ ಪ್ರಬಂಧಕಾರರೇ ಹಾಗೂ ಊರಿನ ಹಿರಿಯರೇ ಸಮೂಹ ಮಾಧ್ಯಮದ ಮಿತ್ರರೆ ಮತ್ತು ಗೆಳೆಯರೆ. ಈ ಕಾರ್ಯಕ್ರಮಕ್ಕೆ ನಮ್ಮ ವಿಶ್ವವಿದ್ಯಾಲಯದ ಎಲ್ಲ ಕುಟುಂಬ ಪಡೆಯನ್ನು ಕರೆದುಕೊಂಡು ಬಂದಿದ್ದೇನೆ. ಬಹಳ ಪ್ರೀತಿಯಿಂದ ನೀವು ನಮ್ಮನ್ನು ಬರಮಾಡಿಕೊಂಡಿದ್ದೀರಾ. ಅದರ ಜೊತೆಗೆ ಅಷ್ಟೇ ಪ್ರೀತಿಯಿಂದ ಸನ್ಮಾನ ಕೂಡ ಮಾಡಿದ್ದೀರಾ. ಇದಕ್ಕಾಗಿ ನಾನು ವೈಯಕ್ತಿಕವಾಗಿ ಹಾಗೂ ವಿಶ್ವವಿದ್ಯಾಲಯದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಪ್ರಸ್ತಾವನೆಯ ಸಂದರ್ಭದಲ್ಲಿ ಮಾತನಾಡಿದ ಬೇವಿನಕಟ್ಟಿಯವರು ಹೇಳಿದ ಹಾಗೆ ಇಂತಹ ಸಮಾರಂಭಗಳು ಸಾಕಷ್ಟು ಬೇಕಾಗುತ್ತವೆ ಅಂತ ಅನುಸುತ್ತೆ. ಭಾರತದಂತಹ ವಿಶಾಲ ದೇಶದೊಳಗೆ ನಾವು ವೈವಿಧ್ಯತೆಯನ್ನು ಕಾಣುತ್ತೇವೆ. ಬೇರೆ ಬೇರೆ ಸಮುದಾಯಗಳಿಗೆ ಸೇರಿದ ಜನಾಂಗಗಳ ಜನರನ್ನು ಕಾಣುತ್ತೇವೆ. ಅದರಲ್ಲಿ ಅಭಿವೃದ್ದಿ ಹೊಂದಿದ ಜನರನ್ನು ಮತ್ತು ತಳಸಮುದಾಯದವರನ್ನು ಕಾಣುತ್ತೇವೆ. ಒಂದು ಕಡೆ ಶಿಷ್ಟ ಸಂಸ್ಕೃತಿ ಇದ್ದರೆ ಇನ್ನೊಂದು ಕಡೆ ತಳಸಮುದಾಯಗಳ ಮುಖಾಮುಖಿ ಎದುರಗುತ್ತದೆ. ಶಿಷ್ಟ ಸಂಸ್ಕೃತಿಗಳ ಜೊತೆಗೆ ತಳಸಂಸ್ಕೃತಿಗಳ ತಲಸ್ಪರ್ಶಿಯ ಅಧ್ಯಯನದ ಅವಶ್ಯಕತೆ ಇದೆ ಎಂಬುದು ನನ್ನ ಭಾವನೆ. ಯಾಕೆಂದರೆ ಶಿಷ್ಟ ಸಂಸ್ಕೃತಿಗಳು ತಮ್ಮದೇ ನಾಗರಿಕ ಮಾರ್ಗವನ್ನು ತುಳಿದುಕೊಂಡು ಹೋಗುತ್ತವೆ. ಆದರೆ ಉಪೇಕ್ಷೆಗೆ ಒಳಪಡುವಂತವು ತಳಸಮುದಾಯಗಳು ಇದರಿಂದ ದೂರ ಉಳಿಯುವ ಸಾಧ್ಯತೆ ಇದೆ. ಈಗಾಗಲೇ ನನ್ನ ಗೆಳೆಯ ಬೇವಿನಕಟ್ಟಿಯವರು ಹೇಳಿದ ಹಾಗೆ ತಳಸಮುದಾಯಗಳನ್ನು ಬೇರೆ ಬೇರೆ ನೆಲೆಯಲ್ಲಿ ಅಧ್ಯಯನ ಮಾಡುವುದು ಅವಶ್ಯಕ. ಒಂದೊಂದು ಸಂಸ್ಕೃತಿಯು ತನ್ನದೇ ಆದ ಜೀವನ ವಿಧಾನವನ್ನು ನಿರ್ಮಿಸಿಕೊಂಡಿರುವಾಗ ಅವುಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡುವ ಅವಶ್ಯಕತೆ ಕಂಡುಬರುತ್ತದೆ. ಒಂದು ಕಡೆ ವಿವರಣಾತ್ಮಕವಾಗಿ ನೋಡಿದರೆ ಇನ್ನೊಂದು ಕಡೆ ಐತಿಹಾಸಿಕವಾಗಿ ಗಮನಿಸುವುದು ಅಷ್ಟೇ ಅವಶ್ಯಕವಾಗಿರುತ್ತದೆ. ಯಾವುದೇ ಒಂದು ಸಂಸ್ಕೃತಿ ಜಡವಾಗಿ ಇರದೆ ಜಂಗಮವಾಗಿ ಇರುತ್ತದೆ. ಅಂದರೆ ಬದಲಾವಣೆಗೆ ಒಳಪಡುತ್ತಿರುತ್ತದೆ.

ತನ್ನದೇ ಆದ ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಪರಿಸರ ಪ್ರತಿ ಸಮುದಾಯಕ್ಕೆ ಇರುತ್ತದೆ. ಹಾಗೇನೆ ಬಾಹ್ಯ ಕಾರಣಗಳಿಂದ ಒತ್ತಾಯ ಪೂರ್ವಕವಾಗಿ ಮಾಡುವ ಬದಲಾವಣೆ, ಮಾನಸಿಕ ಬದಲಾವಣೆಗೆ ಒಳಪಡುವಂತದ್ದು. ಇವುಗಳನ್ನು ನಾವು ಅಧ್ಯಯನಕ್ಕೆ ಒಳಪಡಿಸು ವುದು ಅವಶ್ಯಕ ಅಂತ ಕಾಣುತ್ತದೆ. ಮಾನಸಿಕವಾಗಿ ಒತ್ತಡಗಳು ಬರುವಂತದ್ದು ಒಂದು ರೀತಿಯ ಅನುಕರಣೆಯ ಆಶಯದ ಮೂಲಕ ಬದಲಾವಣೆಗೆ ಒಳಪಡುವಂತದ್ದು ಮತ್ತು ತಾನು ಬದಲಾಗುವಂತದ್ದು.

ಬರಿ ಕೇಂದ್ರಕ್ಕೆ ಸೀಮಿತವಾಗಿರದೆ ಆಯಾ ಪ್ರದೇಶಕ್ಕೆ ಹೋಗಿ ಆಯಾ ಸಮುದಾಯದ ಅಧ್ಯಯನ ಮಾಡುತ್ತಿರುವುದು ಕನ್ನಡ ವಿಶ್ವವಿದ್ಯಾಲಯದ ಗುರಿಯಾಗಿದೆ. ಇದೇ ಒಂದು ಸಮಾರಂಭವನ್ನು ಹಂಪಿಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದರೆ ಅದು ಎಷ್ಟರ ಮಟ್ಟಿಗೆ ಸಮುದಾಯಕ್ಕೆ ತಲುಪುತ್ತಿತ್ತು ಅನ್ನುವುದನ್ನು ಕೂಡ ನಾವು ಯೋಚನೆ ಮಾಡಬೇಕಾ ಗುತ್ತದೆ.

ಬದಲಾವಣೆ ಆಗುವುದರ ಜೊತೆಗೆ ತಮ್ಮ ಸಮುದಾಯಗಳು ತಮ್ಮ ಮೂಲ ಸಂಸ್ಕೃತಿ ಯನ್ನು ಎಷ್ಟರಮಟ್ಟಿಗೆ ಉಳಿಸಿಕೊಂಡು ಹೋಗುತ್ತವೆ ಎನ್ನುವಂತದ್ದು ಅಧ್ಯಯನ ಆಸಕ್ತಿಯ ವಿಷಯ. ತಮ್ಮ ಊಟದಲ್ಲಿ, ಉಡುಗೆಯಲ್ಲಿ, ಆಚರಣೆಯಲ್ಲಿ ಬದಲಾವಣೆಯ ಸಂದರ್ಭ ದಲ್ಲಿ ತಮ್ಮ ಮೂಲಸಂಸ್ಕೃತಿಯನ್ನು ಎಲ್ಲಿ ಕಂಡುಕೊಳ್ಳುತ್ತಾರೆ ಎಂಬುದನ್ನು ಗುರುತಿಸಲಿಕ್ಕೆ ಸಾಧ್ಯ. ಇದೇ ವಿಷಯವಾಗಿ ನಮ್ಮ ಬೇವಿನಕಟ್ಟಿಯವರು ಇಲ್ಲಿ  ವಿಚಾರ ಸಂಕಿರಣ ಹಮ್ಮಿ ಕೊಂಡಿರುವುದು ತುಂಬಾ ಸಂತೋಷದ ವಿಷಯ ಮತ್ತು ಇದೇ ಸಂದರ್ಭದಲ್ಲಿ ವ್ಯಾಧಚರಿತೆ ಎನ್ನುವ ಪುಸ್ತಕ ಬಿಡುಗಡೆಯಾಗುತ್ತದೆ, ಅದಕ್ಕೆ ಸಂಬಂಧಪಟ್ಟ ಹತ್ತಾರು ವಿಷಯಗಳನ್ನು ಇಲ್ಲಿ ಚರ್ಚಿಸಲಾಗಿದೆ. ಇದು ಸಮುದಾಯವನ್ನು ತಲುಪಬೇಕಾಗುತ್ತೆ ಓದಿಗೆ ಒಳಪಡ ಬೇಕಾಗುತ್ತದೆ ಆಸಕ್ತರಿಗೆ ಹೆಚ್ಚಿನ ಅನುಕೂಲವಾಗುತ್ತದೆ.

ಹಂಪಿ ವಿಶ್ವವಿದ್ಯಾಲಯ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಸಂತೋಷದ ವಿಷಯ. ಈ ಮೂರು ದಿನದ ಗೋಷ್ಠಿಯಲ್ಲಿ ಬಾಗಲಕೋಟೆ ಪರಿಸರದ ವಾಲ್ಮೀಕಿ ಸಮುದಾಯದ ಆಚರಣಾತ್ಮಕ ನೆಲೆಗಳ ಬಗ್ಗೆ, ತಳಸಮುದಾಯಗಳು ಮತ್ತು ಆಧುನಿಕ ಜಗತ್ತಿನ ಬಗ್ಗೆ ಮತ್ತು ಸಿಂಧೂರ ಲಕ್ಷ್ಮಣನ ಬಗ್ಗೆ ಮಂಡಿಸುವ ಎಲ್ಲ ಪ್ರಂಬಂಧಗಳು  ಚರ್ಚೆಗೆ ಒಳಪಡಲಿ ಮತ್ತು ಪ್ರಬಂಧನಾಕಾರರೂ ಕೂಡ ಕ್ರಿಯಾತ್ಮಕವಾಗಿ ಭಾಗವಹಿಸಬೇಕು ಅಂತ ಹೇಳುವುದರ ಜೊತೆಗೆ ಎಲ್ಲ ಪ್ರಬಂಧಕಾರರನ್ನು ವೈಯಕ್ತಿಕವಾಗಿ ಬರಮಾಡಿಕೊಳ್ಳು ತ್ತೇನೆ. ಪೂಜ್ಯ ಸ್ವಾಮೀಜಿಯವರಿಗೂ ಮತ್ತು ವೇದಿಕೆಯ ಮೇಲಿರುವ ಎಲ್ಲರಿಗೂ ಮತ್ತು ಸಂಶೋಧನಾ ಬಳಗದವರಿಗೂ ಮತ್ತು ಜೆ.ಟಿ. ಪಾಟೀಲ್‌ರವರಿಗೂ, ಅವರ ಅನುಪಸ್ಥಿತಿ ಯಲ್ಲಿ ಜಾರಕಿ ಹೊಳೆಯವರಿಗೂ ನಮಸ್ಕಾರ ಹೇಳುತ್ತಾ ನನ್ನ ಮಾತನ್ನು ಮುಗಿಸುತ್ತೇನೆ. ನಮಸ್ಕಾರ

* * *