ಕಪ್ಪರ ಪಡಿಯವ್ವ, ದಿಗಂಬರೇಶ್ವರನ ನೆನೆಯುತ್ತಾ ನಾನು ಈ ಸಮಾರೋಪ ಭಾಷಣವನ್ನು ಮಾಡುತ್ತಿದ್ದೇನೆ. ಇಲ್ಲಿಯವರೆಗೂ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಪೂಜ್ಯ ಶೇಷಪ್ಪಯ್ಯ ಸ್ವಾಮಿಗಳು ಉತ್ಸವಮೂರ್ತಿಗಳಾಗದೇ ನಮ್ಮಗೆಲ್ಲರಿಗೂ ಉತ್ಸಾಹ ಮೂರ್ತಿ ಗಳಾಗಿದ್ದಾರೆ. ಈ ೩ ದಿನಗಳ ಕಾಲ ನಮ್ಮ ಬೆನ್ನಹಿಂದೆ ನಿಂತು ಕಾರ್ಯಕ್ರಮ ನೆರವೇರಲಿಕ್ಕೆ ಸಹಾಯಕರಾಗಿದ್ದಾರೆ. ಅವರನ್ನು ನಾನು ಇಲ್ಲಿ ತುಂಬ ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಹಾಗೆ ಈ ಸಮಾರೋಪ ಗೋಷ್ಠಿಯ ಹಿರಿಯ ವಿದ್ವಾಂಸರಾದ ಡಾ.ಶ್ರೀರಾಮ ಇಟ್ಟಣ್ಣವರಿಗೆ ಹಾಗೂ ಇಲ್ಲಿ ನೆರೆದಿರುವ ಸಮಸ್ತ ನಾಗರೀಕರಿಗೆ ನಮಸ್ಕಾರಗಳು.

ನಾನು ಮೊದಲು ಒಂದು ಮಾತು ಹೇಳುವೆ. ಹಲಗಲಿ ಬಂಡಾಯ ಆಗಲಿಕ್ಕೆ ಹೇಗೆ ಪೂಜಾರಿ ಹನುಮ, ಜಡಗ, ಭೀಮ, ರಾಮ ಕಾರಣರೋ ಈ ಬೌದ್ದಿಕ ಬಂಡಾಯ ನಾಗರಾಳದಲ್ಲಿ ಆಗಲಿಕ್ಕೆ ಪೂಜಾರಿ ಹನುಮ ಜಡಗರ ರೂಪದಲ್ಲಿ ಕಂಠಿ ಹನುಮಂತರಾಯ, ವೀರೇಂದ್ರ ಶೀಲವಂತರು, ಶಿವಾನಂದ ಶೆಲ್ಲಿಕೇರಿಯವರು, ರಾಮಭೀಮನ ರೂಪದಲ್ಲಿ  ಸುರೇಂದ್ರನಾಯ್ಕ ಮತ್ತು ಜಾನಮಟ್ಟಿ ಗುರುಗಳು ಬಂದಿದ್ದಾರೆ. ಇದು ಅತಿಶಯೋಕ್ತಿ ಅನಿಸಬಹುದು. ಈ ತರಹ ಬೃಹತ್‌ಕಾರ್ಯಕ್ರಮ ನಡೆಯಬೇಕಾದರೆ ಸುಸಂಸ್ಕೃತ, ಇಚ್ಚಾಶಕ್ತಿ ಯುಳ್ಳತಕ್ಕಂತ ಜನಗಳು ಹಿಂದಿದ್ದಾಗ ಮಾತ್ರ ಮಾಡಲಿಕ್ಕೆ ಸಾಧ್ಯವಾಗುತ್ತದೆ. ಅವರು ನಿನ್ನೆಯಿಂದ ಹೇಳುತ್ತಿದ್ದಾರೆ. ಇಂತ ಒಂದು ಹಳ್ಳಿಯಲ್ಲಿ ನೀವು ಅಷ್ಟುದೂರದಿಂದ ಖರ್ಚು ಮಾಡಿಕೊಂಡು ಬಂದಿದ್ದೀರಿ ನಿಮಗೆ ಎಷ್ಟು ತ್ರಾಸು ಆಯಿತೇನೋ ದಯವಿಟ್ಟು ನಮ್ಮನ್ನು ಕ್ಷಮಿಸಿ ಅಂತ. ಆದರೆ ನಾನು ಹೇಳತೀನಿ ನಿಮ್ಮ ನಿರ್ಮಲವಾದ ಪ್ರೀತೀನೇ ಸಾಕು ಎಂದು. ನಿರೀಕ್ಷೆಗೂ ಮೀರಿ ನೀವು ನಮಗೆ ಪ್ರೀತಿಯನ್ನು ಕೊಟ್ಟಿದ್ದೀರಿ, ಹೀಗಾಗಿ ನನ್ನ ಇಡೀ ವಿಶ್ವ ವಿದ್ಯಾಲಯದ ಕುಟುಂಬದ ಪರವಾಗಿ ನಿಮಗೆ ನನ್ನ ವಂದನೆಗಳು.

ಈ ೩ ದಿನದ ಕಾಲದಲ್ಲಿ ನಡೆದ ಚರ್ಚೆಯನ್ನು ಒಂದು ಸಣ್ಣ ಪ್ರೇಮ್‌ವರ್ಕನಲ್ಲಿ ಹಾಕಲು ಪ್ರಯತ್ನಿಸುತ್ತೇನೆ. ಸಿಂಧೂರ ಲಕ್ಷ್ಮಣನ ಹಿಂದಿರುವ ಹೋರಾಟವೆಂದರೆ ಹಸಿವು ಹಾಗೂ ಅವಮಾನ. ಇವು ಒಬ್ಬ ಮನುಷ್ಯನನ್ನು ಏನೆಲ್ಲಾ ಮಾಡಿಸಬಹುದು. ಹಾಗಾಗಿ ನಾವು ಯಾವುದನ್ನು ಹಲಗಲಿ ಬಂಡಾಯ, ಸಿಂಧೂರ ಲಕ್ಷ್ಮಣನ ಹೋರಾಟವೆಂದು ಕರಿತೇವೋ ಈ ಎರಡೂ ಸಂಗತಿಗಳು ಮೂರು ದಿನಗಳಲ್ಲಿ ಬಹಳ ಗುಣಾತ್ಮಕ ಚರ್ಚೆಗಳಾಗಿ ಈ ವೇದಿಕೆ ಮೇಲೆ ನಡೆದವು. ಈ ಚರ್ಚೆಯಲ್ಲಿ ಇಲ್ಲಿನ ಸುತ್ತಲಿನ ಪ್ರಜ್ಞಾವಂತ ಹಳ್ಳಿ ಜನರು ಭಾಗವಹಿಸಿದರು. ಅಂದರೆ ನಿನ್ನೆ ಪ್ರಬಂಧ ಮಂಡಿಸುತ್ತಿರುವಾಗ ಎಷ್ಟೊ ಜನ ವಿದ್ವಾಂಸರ ತಪ್ಪು  ಕಂಡುಹಿಡಿದರು. ಪ್ರಶ್ನೆ ಕೇಳಿದರು. ಅಂದರೆ ಇಂತಹ ಒಂದು ಹಿಂದುಳಿದ ಹಳ್ಳಿಯಲ್ಲಿಯೂ ಪ್ರಜ್ಞಾವಂತ ಜನ ಇದ್ದಾರೆ ಎಂದು ಗೊತ್ತಾಯಿತು. ನಾವು ಹೇಳಬಹುದು ಅಕ್ಷರಸ್ಥರು ಅನಕ್ಷರಸ್ಥರು ಎಂದು. ಈ ವಿಂಗಡಣೆ ಇದೆಯೆಲ್ಲ ಬಹಳ ಭಯಾನಕವಾದ ವಿಂಗಡಣೆ. ಈ ಮಠದ ಆವರಣದೊಳಗೆ ಇಂದು ಇದ್ದೀವಿ. ಈಮಠದ ಅಧಿಕಾರಿಗಳು ಯಾವುದೇ ವಿಶ್ವವಿದ್ಯಾಲಯದಲ್ಲಿ ಪ್ರಸಸ್ತಿಪಡೆದುಕೊಂಡು ಬಂದವರಲ್ಲ. ನಮ್ಮಲ್ಲಿ ಅನಕ್ಷ ರಸ್ಥರಿದ್ದರು ಆದರೆ ಅಜ್ಞಾನಿಗಳಲ್ಲ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಒಂದು ವೇಳೆ ಅವರು ಅಜ್ಞಾನಿಗಳಾಗಿದ್ದರೆ ಇವತ್ತು ಯಾವುದನ್ನು ಜನಪದ ಸಾಹಿತ್ಯ, ವಚನ ಸಾಹಿತ್ಯ ಅಂತ ಕರಿತೇವೋ ಅವು ಯಾವುವು ಹುಟ್ಟಿ ಬರಲಿಕ್ಕೆ ಸಾಧ್ಯವಿರುತ್ತಿರಲಿಲ್ಲ. ಹೀಗಾಗಿ ನಾವು ಒಂದು ಚೌಕಟ್ಟಿನೊಳಗೆ ಒಂದು ಸಾಹಿತ್ಯವನ್ನಾಗಲಿ ಒಂದು ಸಮುದಾಯವನ್ನಾಗಲಿ, ಸಂಸ್ಕೃತಿಯನ್ನಾಗಲಿ ನೋಡಿದಾಗ ಅದಕ್ಕೆ ಬಹಳಷ್ಟು ಮಿತಿಗಳು ಪ್ರಾಪ್ತವಾಗುತ್ತವೆ. ನಾವು ಯಾವ ಸಮುದಾಯವನ್ನು ನೋಡಲಿಕ್ಕೆ ಹೋಗುತ್ತೇವೆಯೋ ಅದರ ವಿವಿಧ ಮುಖಗಳನ್ನು ಬಿಟ್ಟುಹೋಗಿ ಅದರ ಪರಿಷ್ಕೃತ ಮುಖ ಪ್ರಾಪ್ತಿಯಾಗುತ್ತದೆ. ಹೀಗಾಗಿ ಕನ್ನಡ ವಿಶ್ವ ವಿದ್ಯಾಲಯದ ಒಂದು ಮುಖ್ಯ ಉದ್ದೇಶವೇನೆಂದರೆ ಅದು ಯಾವುದೇ ಚೌಕಟ್ಟಿನ ಆವರಣ ದಲ್ಲಿ ಕೆಲಸ ಮಾಡದೆ ಜನರ ಜೊತೆ ವಿಭಿನ್ನವಾಗಿ ಬೆರೆಯುತ್ತಾ ಅವರ ಸಮಸ್ಯೆಗಳತ್ತ ಗಮನ ಹರಿಸುತ್ತಾ ಬಂದು ಅವರೊಡನೆ ಪ್ರೀತಿಯಿಂದ ಮಾತನಾಡುತ್ತದೆ. ಹೀಗಾಗಿ ಈ ೩ ದಿನದ ವೇದಿಕೆ ಆ ಕೆಲಸ ಮಾಡಿದೆ ಎಂದು ನಾನು ಪ್ರತ್ಯಕ್ಷ ಸಾಕ್ಷಿಯಾಗಿ ಹೇಳುತ್ತೇನೆ.

ಸಾಮಾನ್ಯವಾಗಿ ೧೯ನೇ ಶತಮಾನದಲ್ಲಿ ಯುರೋಪಿಯನ್ ಅಧ್ಯಯನದ ಮಾದರಿಗಳು ಹುಟ್ಟಿಕೊಂಡ ಮೇಲೆ ಈ ಅಧ್ಯಯನಗಳನ್ನು ನಿರ್ದಿಷ್ಟ ಕೇಂದ್ರಕ್ಕೆ ಅಳವಡಿಸಿದ್ದು ಕಾಣುತ್ತದೆ. ಕೇಂದ್ರೀಯ ಪರಿಧಿಯ ಯಾವುದೋ ಒಂದು ಹಂತಕ್ಕೆ ಅಧ್ಯಯನವನ್ನು ಅಳವಡಿಸು ವಂತದ್ದು. ಉದಾ. ನಾವು ಇತಿಹಾಸವನ್ನು ಪುನರ್‌ಸೃಷ್ಠಿ ಮಾಡಿಕೊಂಡಿದ್ದೀವಿ, ಆದರೆ ಅದು ರಾಜ ರೀತಿಯ ಇತಿಹಾಸ. ಜನ ರೀತಿಯ ಇತಿಹಾಸವಲ್ಲ. ಅಂದರೆ ಹಲಗಲಿ ಬಂಡಾಯ ದೊಳಗೆ ೩೦೦ಜನರು ಸುಟ್ಟರು. ಅಂದರೆ ಈ ಹಳ್ಳಿಯೊಳಗೆ ಇನ್ನೆಷ್ಟು ಜನ ಇದ್ದರು ಎನ್ನುವಂತದ್ದು. ಇಡೀ ಚರಿತ್ರೆ ಏನು ಮಾಡುತ್ತದೆಂದರೆ ಕಾಲ ಮತ್ತು ಸ್ಥಳಕ್ಕೆ ಬಾಳ ಬೆಲೆಕೊಡುತ್ತದೆ. ಅಂದರೆ ನಮ್ಮ ಸಂಸ್ಕೃತಿ, ಕಾಲ ಮತ್ತು ಸ್ಥಳವನ್ನು ಅಖಂಡವಾಗಿ ಗ್ರಹಿಸು ತ್ತದೆ. ಹೀಗಾಗಿ ಒಂದೇ ಮನೆಯಲ್ಲಿ ಭೂತವನ್ನು ಪ್ರತಿನಿಧಿಸುವ ಮುತ್ತ್ಯಾ, ಭವಿಷ್ಯವನ್ನು ಪ್ರತಿನಿಧಿಸುವ ತಂದೆ, ವರ್ತಮಾನವನ್ನು ಪ್ರತಿನಿಧಿಸುವ ಮಕ್ಕಳು. ಭೂತ, ಭವಿಷ್ಯ ಮತ್ತು ವರ್ತಮಾನವನ್ನು ಭಾರತೀಯರು ಅಖಂಡವಾಗಿ ಗ್ರಹಿಸಿ ಬದುಕುತ್ತಿರುವಂತ ಸಂಸ್ಕೃತಿ ನಮ್ಮದಾಗಿದೆ. ಬಿಡಿಬಿಡಿಯಾಗಿ ಬದುಕುವಂತ ನೋಡುವಂತ ಸಂಸ್ಕೃತಿ ನಮ್ಮದಲ್ಲ. ನಾವು ಆವರ್ತನ ಶೀಲತೆಯಲ್ಲಿ ಬದುಕನ್ನು ಕಟ್ಟಿಕೊಂಡು ಬಂದಂತವರು. ಬದುಕನ್ನು ಅನುಭವಿಸಿ ದವರು. ನಮಗೆ ಯಾವುದು ಬೇಕು ಯಾವುದು ಬೇಡ ಎನ್ನುವ ವಿವೇಚನೆ ಅಗತ್ಯವಾಗಿದೆ.

ತಳಸಮುದಾಯಗಳು ಮತ್ತು ಆಧುನಿಕತೆ ಎನ್ನುವಲ್ಲಿ ಬಹಳ ಪ್ರಬುದ್ಧಚರ್ಚೆಗಳಾದವು. ನಮ್ಮ ಸ್ಥಳೀಯರು ಇಲ್ಲಿಕೂಡ ಎಂ.ಎ. ಮಾಡಿದವರು ಇದ್ದಾರೆಂದು ಗೊತ್ತಾಗಿದ್ದು ನನಗಂತು ಬಹಳ ಖುಷಿ ಆಯಿತು.ಇಂದು ಬ್ರಿಟೀಷ್ ದಾಖಲೆಗಳಂತ ಏನು ಕರಿತೀವಿ ಅವು ಪ್ರಭುತ್ವದ ಪರವಾಗಿರುತ್ತವೆ. ಯಾಕೆಂದರೆ ಯಾವುದೇ ನೇಮಕಾತಿಗಳು ಪ್ರಭುತ್ವದ ಪರವಾಗಿ ನೇಮಕವಾಗಿರುತ್ತವೆ. ಸಿಂಧೂರ ಲಕ್ಷ್ಮಣ, ಸಂಗೊಳ್ಳಿರಾಯಣ್ಣ, ಹಲಗಲಿ ಬಂಡಾಯದ ಬಗ್ಗೆ ಬಂದಿರುವ ಮಾಹಿತಿಗಳು ಇವೆಲ್ಲ ಬ್ರಿಟೀಷ್ ಚರಿತ್ರೆಯ ಅಂಕಿ ಅಂಶಗಳ ಮೂಲಕ ಚರಿತ್ರೆಯನ್ನು ಕಟ್ಟಿಕೊಡುತ್ತವೆ.

ಸಮುದಾಯಗಳ ಅಧ್ಯಯನದಿಂದ ಹೊಸರೀತಿಯ ಅಧ್ಯಯನ ಸಾಧ್ಯ ಎಂದು ನನ್ನ ಭಾವನೆ. ನಾವೆಲ್ಲ ಗಮನಿಸಬೇಕು. ಹಲಗಲಿ ಬೇಡರ ಬಗ್ಗೆ ಲಕ್ಷ್ಮಣನ ಬಗ್ಗೆ  ಬಂದ ಬರಹಗಳೆಲ್ಲ ಏನಿದ್ದಾವೋ ಅವು ಅವರನ್ನು ಸುಳ್ಳರು, ಕಳ್ಳರು, ಕೊಲೆಗಡುಕರು ಎಂದು ಅರ್ಥೈಸುತ್ತವೆ. ನಮ್ಮನ್ನು ನಾವು ಇಂದು ಆತ್ಮವಿಮರ್ಶೆ ಮಾಡಿಕೋಬೇಕು. ಯಾಕೆ ಪ್ರತಿಭಟನೆಗಳು ನಡೆದವು ಯಾತಕ್ಕೋಸ್ಕರ ಬೇಡರು ಇಂಗ್ಲೀಷ್ ಸರಕಾರದ ಮೇಲೆ ಹರಿಬಿದ್ದರು. ಯಾತಕ್ಕೋಸ್ಕರ ಅವರ ರುಂಡಗಳನ್ನು ಚಂಡಾಡಿದರು. ಆರಂಭದಲ್ಲಿ ಹೇಳುತ್ತಿದ್ದೆ, ಮರಾಠ ಸಂಸ್ಥಾನ ಬ್ರಿಟೀಷರ ಪರವಾಗಿತ್ತು. ಹೆಚ್ಚು ಕಡಿಮೆ ದುಡಿವವರ್ಗಗಳು ಯಾವಾಗಲು ಸ್ಥಾನಿಕರಿಗೆ ವಿಶೇಷ ಅಭಿಮಾನ ನೀಡುತ್ತವೆ ಪ್ರಶ್ನೆಬಂದಾಗ ಧಿಡೀರನೇ ಸಿಡಿದೇಳುವ ಪ್ರಸಂಗ ಬರುತ್ತದೆ. ನನ್ನ ಅನ್ನಕ್ಕೋಸ್ಕರ ನಾನು ಸಿಡಿದೇಳುವಂತದು ಬಂಡಾಯ ಎಂದು ವ್ಯಾಖ್ಯಾನಿಸುವುದಾದರೆ ಅಂಥ ಪ್ರತಿಭಟನೆ ಬೇಕು? ಸುನಾಮಿಯಾದಾಗ ನೋಡು ತ್ತೇವೆ. ಅಷ್ಟು ಜನ ಸತ್ತರು ಇಷ್ಟು ಜನ ಸತ್ತರು ಎಂದು. ಅಂದರೆ ಮಾಧ್ಯಮಗಳು ನಮಗೆ ಕೊಡುವ ಮಾಹಿತಿಯನ್ನೆ ನಾವು ನಂಬುತ್ತೇವೆ. ಎಷ್ಟು ಜೀವಿಗಳು ಭೂಗತ ಆಗಿರುತ್ತವೆ ಯಾರಿಗೆ ಗೊತ್ತು. ಬಂಡಾಯ ಅಂದರೆ ಅದು ಸಾತ್ವಿಕವಾಗಿ, ಗುಣಾತ್ಮಕವಾಗಿ, ಪರಿಣಾಮಕಾರಿ ಯಾದಂತ ಒಂದು ಬಂಡಾಯ ಕೂಡ. ಅಂತ ಬಂಡಾಯವನ್ನು ಅಂಕಿ, ಸಂಖ್ಯೆಗಳ ಮೂಲಕ ವ್ಯಾಖ್ಯಾನಿಸುವುದರಿಂದ ಅಥವಾ ಬ್ರಿಟೀಷ್ ಪ್ರಣೀತ ಯೋಚನೆಯ ಮೂಲಕ ವ್ಯಾಖ್ಯಾನಿಸು ವುದರಿಂದ ಸಾಂಸ್ಕೃತಿಕವಾಗಿರುವಂತ, ಸಾಮಾಜಿಕವಾಗಿರತಕ್ಕಂತ ಪ್ರಕ್ರಿಯಾತ್ಮಕ ಅಂಶಗಳನ್ನು ಗುರುತಿಸಿದರೆ ಪರಿಣಾಮಗುತ್ತದೆ. ಹೀಗಾಗಿ ಇತಿಹಾಸವನ್ನು ಚರಿತ್ರೆಯನ್ನು ಸಮುದಾಯ ಮುಖಿಯಾಗಿ, ಸಾಮಾಜಿಕ ಮುಖವಾಗಿ ನೋಡಬೇಕಾಗುತ್ತದೆ. ನಾನು ಆರಂಭದಲ್ಲಿ ಒಂದು ಮಾತು ಹೇಳಿದ್ದೀನಿ. ಯಾವುದೇ ಒಂದು ಪ್ರತಿಭಟನೆಯನ್ನು ಆ ಸಮಾಜದಲ್ಲಿ ಚಲನಶೀಲ ವಾಗಿರತಕ್ಕಂತ ಸಂಗತಿ, ಸಂಕಥನ, ವಿಷಯಗಳ ಮೂಲಕ ಅರ್ಥಮಾಡಿಕೊಳ್ಳಬೇಕಾಗುತ್ತದೆ ವಿನಃ ಯಾವುದೋ ಒಂದು ನಿರ್ದಿಷ್ಟ ಬರಹಗಳ ಮೂಲಕ ಅಧ್ಯಯನ ಮಾಡಲಿಕ್ಕಾಗಲ್ಲ. ಬರಹಗಳು ಚರಿತ್ರೆಯನ್ನು ಅಧ್ಯಯನ ಮಾಡಲಿಕ್ಕೆ ಪೂರಕ ಖರೆ ಆದರೆ ಅವು ನಿಖರವಲ್ಲ ಅಂತಿಮವಲ್ಲ. ಆದ್ದರಿಂದ ನಾವು ಈ ೩ ದಿನಗಳಲ್ಲಿ ಸಿದ್ಧಸಾಮಾಗ್ರಿಗಳನ್ನು ಬಿಟ್ಟುಕೊಟ್ಟು ಸಂವಾದವನ್ನು ನಾವು ಈ ವೇದಿಕೆ ಮೂಲಕ ನಡೆಸಿದ್ದೇವೆ. ಹೇಗೆ ಜನರ ಮನಸ್ಸಿನಲ್ಲಿ ತುಂಬಿಕೊಂಡು ಈ ವಿಚಾರ ಸಂಕಿರಣ ಅವರಿಗೆ ಮನಮುಟ್ಟುವಂತೆ ಮಾಡಿದೆ ಎಂದರೆ ನಿಜಕ್ಕೂ ಅವರು ಪ್ರತಿಕ್ರಿಯಿಸಿದ್ದನ್ನು ಕಂಡು ಬಹಳ ಸಂತೋಷ ಆಯಿತು.

ಹಿರಿಯರ ಅನುಭವದಂತೆ ಇರುವೆ ಮೇಲೆ ಕಾಲಿಟ್ಟರೆ ಅದು ನಮ್ಮನ್ನು ಕಡಿತದೆ ಎನ್ನುವ ಲೋಕಾನುಭವ ನಮ್ಮಲ್ಲಿದೆ. ಇದನ್ನು ಯಾರೂ ಅರ್ಥಮಾಡಿಕೊಳ್ಳಲ್ಲ. ಕೆಲವರು ಗಲಾಟೆ ಮಾಡಿದರೂ ಬಂಡಾಯ ಎನ್ನುವ ಶೀರ್ಷಿಕೆಯಲ್ಲಿ ಕರಿತೇವೆ. ಹೀಗಾಗಿ ಇಂದು ನಾವು ಪರಿಭಾಷೆಗಳನ್ನು ವಿಮರ್ಶೆಗೊಳಪಡಿಸಬೇಕಾಗಿದೆ. ಬ್ರಿಟೀಷ್ ಚರಿತ್ರೆ ಕಳ್ಳರು, ಕಾಕರು ಅಂತ ಏನು ಹೇಳಿದರೋ ಅದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತೆ. ಆದರೆ ಪ್ರಶ್ನೆ ಏನು, ಅದು ಯಾತಕ್ಕೋಸ್ಕರ ಬಂಡಾಯ ಅಂತ ಕರಿತೀವಿ, ಯಾತಕ್ಕೋಸ್ಕರ ಪ್ರತಿಭಟನೆ ಮಾಡಿದಿವಿ ಎನ್ನುವಂತೆ ಆತ್ಮವಿಮರ್ಶೆ ಮಾಡಿಕೊಂಡರೆ  ಈ ಪ್ರಬಂಧಗಳಿಗೆ ಹೊಸ ರೀತಿಯ ವ್ಯಾಖ್ಯಾನ ಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಇಲ್ಲಿ ನಿಶ್ಯಸ್ತ್ರೀಕರಣ ಕಾಯ್ದೆಯಲ್ಲಿ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡರು. ಅದಕ್ಕೋಸ್ಕರ ಬಂಡೆದ್ದರು. ಯಾವಾಗಲು ದುಡಿವವರ್ಗಗಳ ಮೇಲೆ ಅಧಿಕಾರಶಾಹಿ ವರ್ಗಗಳ ಹಿಡಿತಾ ಇರುತ್ತದೆ. ಬಳಸುವ ಸಲಕರಣೆಗಳ ಮೇಲೆ ನಿಷೇಧಗಳನ್ನು ಹೇರತಕ್ಕಂತದ್ದು. ಇಲ್ಲಿಕೂಡ ತಳಸಮುದಾಯಗಳ ಪ್ರತಿಭಟನೆಗೆ ಕಾರಣವಾಗುತ್ತೆ ಎನ್ನು ವಂಥದ್ದು. ಅಂದರೆ ಉತ್ಪಾದನೆಯ ಒಡೆತನವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವ ಕೆಲಸವನ್ನು ಸರ್ಕಾರಗಳು ಮಾಡುತ್ತವೆ. ಬ್ರಿಟೀಷರು ಮಾಡಿದ್ದು ಅದನ್ನೆ ಯಾವುವು ಉತ್ಪಾದನಾ ಸ್ಥಳಗಳಾಗಿದ್ದವೋ ಅಂಥ ಉತ್ಪಾದನಾ ಸ್ಥಳಗಳ ಮೇಲೆ ಕಂಪನಿ ಸರಕಾರಗಳು ನಿಷೇಧ ಹೇರಿದವು. ಅವರ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳುವಂತದ್ದು ಇದಕ್ಕೆ ಉತ್ತಮ ಉದಾಹರಣೆ.

ಒಟ್ಟಿನಲ್ಲಿ ಈ ಮೂರು ದಿನಗಳ ಚರ್ಚೆ ಹಲಗಲಿ ಬಂಡಾಯವನ್ನು ಸಿಂಧೂರ ಲಕ್ಷ್ಮಣನ ಹೋರಾಟಗಳನ್ನು ಒಂದು ಭಿನ್ನ ದೃಷ್ಟಿಕೋನಗಳಿಂದ ಅರಿಯುವ ಪ್ರಯತ್ನವನ್ನು ಮಾಡಿವೆ. ಬರೀ ಭಾರತ ಸ್ವಾತಂತ್ರ್ಯ ಚಳುವಳಿ ಅಥವಾ ಬ್ರಿಟೀಷ್ ವಿರುದ್ಧದ ಚಳುವಳಿ ಎಂದು ಕೈಚೆಲ್ಲಿ ಕೂಡದೆ ಹಲಗಲಿ ಬೇಡ ಸಮುದಾಯದ ಅಂತರ್ಗತ ನೆಲೆಯಿಂದ ನೋಡಿದ್ದು ಹೊಸ ಜಿಗಿತಕ್ಕೆ ಕಾರಣವಾಯಿತು. ಸಮುದಾಯ ಕುರಿತ ಅಧ್ಯಯನಗಳಿಗೆ ಇದೊಂದು ಹೊಸ ದಿಕ್ಸೂಚಿಯಾಯಿತು ಎನ್ನುವುದು ಗಮನಾರ್ಹ ಸಂಗತಿಯಾಗಿದೆ.

* * *