ಸಿಂಧೂರ ಆರಾಧ್ಯ ಭೀಮರಾಯ ದೇವರ ಕೃಪೆಯಿಂದ ತುಳಸಿಗೇರಿ ಹನುಮಂತ ದೇವರ ಅನುಗ್ರಹ ಹಾಗೂ ಸಿದ್ದಾಪೂರ ಕಪ್ಪರ ಪಡಿಯಮ್ಮನ ಆಶೀರ್ವಾದದ ಬಲದಿಂದ ಸಿಂಧೂರ ಸಿಂಹ ಬ್ರಿಟೀಷರ ಸೊಲ್ಲಡಗಿಸಿದ ಶೂರ ದೇಶಭಕ್ತ ಸಿಂಧೂರ ಲಕ್ಷ್ಮಣನ ಚರಿತ್ರೆ ಹೇಳೊದ ಅಂದ್ರ ಮೈಯಾನ ಕೂದಲು ನೆಟ್ಟಗಾಕ್ಕವ.

ಒಬ್ಬ ವ್ಯಕ್ತಿ ಮಹಾನ್ ಶಕ್ತಿಯಾಗಿ ಹೊರಹೊಮ್ಮಿ ಇತಿಹಾಸ ಪುರುಷ ಆಗಬೇಕಂದ್ರ ಅವನ ಹಿಂದೆ ಮತ್ತೊಬ್ಬರ ಪ್ರೋಇದ್ದ ಇರ್ತೈತಿ. ಹಾಂಗ ಸಾಬು, ನರಸಪ್ಪ, ಗೋಪಾಲಿ. ಇವರು ಸಿಂಧೂರ ಲಕ್ಷ್ಮಣನ ಸೋದರಳಿಯಂದಿರು ಆತನ ಬಲಗೈ ಬಂಟರು.

ಕನ್ನಡನಾಡನ್ನಾಳಿದ ವಾಲ್ಮೀಕಿ ಸಮುದಾಯ ಶೂರತನ, ತ್ಯಾಗ, ವಿಶ್ವಾಸಕ್ಕೆ ಹೆಸರಾ ದವರು. ಅಂತಹ ಕುಲದಲ್ಲಿ ಹುಟ್ಟಿದ ನಾಯಕ ಸಮುದಾಯದ ಸಿಂಧೂರ ಲಕ್ಷ್ಮಣನಾಯಕ ಅಮರನಾಗಿ ಹೋದ. ಬದುಕಿರುವಷ್ಟು ದಿನ ಬ್ರಿಟೀಷರಿಗೆ ಸಿಂಹಸ್ವಪ್ನದಂತಿದ್ದ ಬಡವರ ಬಾಳಿನ ಭಗವಂತ ಅನಿಸಿದ್ದ.

ಸಿಂಧೂರ ಲಕ್ಷ್ಮನ ನಾಟಕವನ್ನು ಶ್ರೀ ಹನುಮಂತರಾಯ ಕಂಠಿಯವರು, ಶ್ರೀ ಪುಂಡಲೀ ಕಪ್ಪ, ದುತ್ತರಗಿ ಕವಿಗಳು ಬರೆದ ನಾಟಕ ಚಲನ ಚಿತ್ರಿತವಾಗಿ ಇತಿಹಾಸ ಪುರುಷನ ಹೆಸರು ಬೆಳಕಿಗೆ ತಂದಿರುವುದು ಸ್ತುತ್ಯಾರ್ಹ.

ಸಿಂಧೂರ ಲಕ್ಷ್ಮಣನ ಮನೆತನದ ಪರಿಚಯ

ಸಾಬು (ಲಕ್ಷ್ಮಣನ ತಂದೆ) ನರಸವ್ವ (ಲಕ್ಷ್ಮಣನ ತಾಯಿ) ಭೀಮಣ್ಣ (ಚಿಕ್ಕಪ್ಪ)
ಲಕ್ಷ್ಮಣ ಸಿಂಧೂರಿನ ವಾಲಿಕಾರ ತವರೂರು ರಡ್ಡೇರಹಟ್ಟಿ ತಾ|| ಅಥಣಿ
ಹೆಂಡತಿ ಚಂದ್ರವ್ವ (ಸಕ್ರವ್ವನ ಮಗಳು) ಅಕ್ಕಂದಿರು
ಸತ್ಯವ್ವ:
ಗಂಡನ ಮನೆ ರಡ್ಡೇಹಟ್ಟಿ; ಮಗ- ನರಸಪ್ಪ
ಸಕ್ರವ್ವ:
ಗಂಡನ ಮನೆ ನೇಸೂರು; ಮಗ- ರಾಯಪ್ಪ
ಲಕ್ಷ್ಮಣನ ಸೋದರ ಸೊಸೆಯಂದಿರರು : ಚಂದ್ರವ್ವ, (ಸಕ್ರವ್ವನ ಮಗಳು, ಲಕ್ಷ್ಮಣನ ಹೆಂಡತಿ)
ಸತ್ಯವ್ವ (ಸತ್ಯವ್ವನ ಮಗಳು ನರಸಪ್ಪನ ತಂಗಿ) ಸಗರವ್ವ (ನರಸಪ್ಪನ ದ್ವಿತೀಯ ತಂಗಿ)
ಲಕ್ಷ್ಮಣನ ಸೋದರರು, ಇಲ್ಲ (ಭೀಮಣ್ಣನು ಸೋದರರಂತೆ ಇದ್ದನು)
ಲಕ್ಷ್ಮಣನ ಊರು ಸಿಂಧೂರ ತಾ|| ಜತ್ತ (ಆಗ ಸಂಸ್ಥಾನ)
ನರಸಪ್ಪನ ಚಿಕ್ಕಪ್ಪನ ಮಕ್ಕಳು : ಸಾಬು, ಗೋಪಾಲಿ, ಧರ್ಮ
ಸೋದರ ಅಳಿಯಂದಿರು: ನರಸ್ಯಾ, ಸಾಬು, ಗೋಪಾಲಿ, ರಾಯಪ್ಪ, ಧರ್ಮ
ಚಂದ್ರವ್ವ ಇವಳೆ ಸಿಂಧೂರ ಲಕ್ಷ್ಮಣನ ಹೆಂಡತಿ, (ಅಕ್ಕನ ಮಗಳು)
ಸಾಬು – ಲಕ್ಷ್ಮಣನ  ಏಕೈಕ ಮಗ (ಸಾಬೂನ ಮಗ ಭೀಮ (ಅಜ್ಜನ ಹೆಸರು ಇಡಲಾಗಿದೆ)

ಅಂದಿನ ದಿನಗಳಲ್ಲಿ ದೇಶಕ್ಕೆಲ್ಲ ಬಿದ್ದ ಭೀಕರ ಬರಗಾಲದಿಂದ ಉಪವಾಸ ತಾಳದೇ ಸಿರಿವಂತರ ಮನೆ ಕಳ್ಳತನ ಮಾಡಿದರು. ಲಕ್ಷ್ಮಣನ ಅಳಿಯಂದಿರಾದ ಸಾಬು, ನರಸಪ್ಪ, ಗೋಪಾಲಿ, ಬಡತನದಲ್ಲಿ ಹುಟ್ಟಿ ಬಂದದ್ದು ಮಹಾಪಾಪ ಅಂತ ಭಾವಿಸಿಕೊಂಡರು. ಸಿಂಧೂರ ಲಕ್ಷ್ಮಣನ ಕಡೆ ಅಳಿಯಂದಿರು ಪೋಲಿಸರಿಂದ ರಕ್ಷಣೆ ಪಡೆಯಲು ಬಂದರು. ‘ಇಂಥ ಕೆಲಸಾ ಮಾಡಬಾರದು’ ಅಂತ ಲಕ್ಷ್ಮಣ ಹೇಳಿದ. ಆದರೆ ಪರಿಸ್ಥಿತಿ ಹಾಗೆ ಮಾಡಲು ಹಚ್ಚಿತು. ಕೆಲಸ, ಕೂಲಿ, ಮಾಡೀವ ಅಂದ್ರೆ ಕೆಲಸ ಹಚ್ಚವ್ರ ಇಲ್ಲ.

ಆ ಸಂದರ್ಭದಲ್ಲಿ ಜೀವಂತ ಇರಬೇಕಾದ್ರ ಏನಾರ ಮಾಡಬೇಕಾಗಿತ್ತು. ಆಗ ನರಸು, ಸಾಬು, ಗೋಪಾಲ, ಬಡವರ ಬಂಡಾಟ, ಶ್ರೀಮಂತರ ಉಂಡಾಟ ಕಂಡು ರೊಚ್ಚಿಗೆದ್ದ. ಬಡ ಮಂದಿಯಲ್ಲಾ ಬಂಡೆದ್ದು ಒಟ್ಟುಗೂಡಿಕೊಂಡು ಹೋಗಿ, ಖೇಡ ಖಾನಾಪೂರದಾಗ ಲಕ್ಷ್ಮಣನ ಅಳಿಯಂದಿರರೂ ಪ್ರಥಮ ದರೋಡೆ ಮಾಡಿ, ಪೋಲಿಸಿನವರಿಂದ ತಪ್ಪಿಸಿಕೊಳ್ಳಲು ಸಿಂಧೂರಿಗೆ ಬಂದ ಸಂದರ್ಭದಲ್ಲಿ ವಾಲಿಕಾರ ಆಗಿದ್ದ. ಲಕ್ಷ್ಮಣ ಇವರಿಗೆ ಬುದ್ದಿ ಹೇಳುವು ದನ್ನು ನಾಟಕದ ಸಂದರ್ಭವೊಂದರಲ್ಲಿ ಕಂಡಾಗ ನಿಜವಾಗಿ ಲಕ್ಷ್ಮಣ ಕ್ರೂರಿ ಆಗಿರಲು ಸಾಧ್ಯವಿಲ್ಲ. ಆದರೂ ಪರಿಸ್ಥಿತಿಯ ಪಿತೂರಿಯಿಂದ ವಿಧಿಯ ಕೈಚಳಕದಿಂದ ತಾಯಿ ನರಸವ್ವಳ ಒತ್ತಾಯದಿಂದ ಹೆಂಡತಿ ಚಂದ್ರವ್ವಳ ಸಲಹೆಯಂತೆ ದರೋಡೆ ಮಾಡಿ ಪೋಲಿಸನವರಿಗೆ ಬೇಕಾಗಿದ್ದ ತನ್ನ ಅಳಿಯಂದಿರರಿಗೆ ಆಶ್ರಯ ಕೊಟ್ಟಿದ್ದು ಲಕ್ಷ್ಮಣನ ಬದುಕಿನ ಚಿತ್ರಣವನ್ನು ಸಂಪೂರ್ಣ ಬದಲಾಯಿಸಿದ ಸಂದರ್ಭ ಅದಾಯಿತು.

ನಾನು ಕೈಗೊಂಡ ಕ್ಷೇತ್ರ ಕಾರ್ಯದಿಂದ ತಿಳಿದುಬಂದ ಪ್ರಮುಖ ವಿಚಾರ ಲಕ್ಷ್ಮಣನಿಗೆ ತಂಗಿ ಇರಲಿಲ್ಲ. ಅಕ್ಕಂದಿರು ಮಾತ್ರ ಇದ್ರು ಅವರನ್ನು ಮೊದಲೆ ಮದುವೆ ಮಾಡಲಾಗಿತ್ತು. ಇದರಿಂದ ನಾವು ತಿಳಕೊಳ್ಳಬೇಕಾದದ್ದು ಏನೆಂದರೆ ಲಕ್ಷ್ಮಣನ ಕುರಿತಾಗಿ ಇಲ್ಲಿಯವರೆಗೆ  ಹುಟ್ಟಿಕೊಂಡಿರುವಂತಹ ಹಲವಾರು ಕಾಲ್ಪನಿಕ ಕಥೆಗಳ ನೈಜತೆ ಬಗ್ಗೆ ಸಂಶಯದಿಂದ ನೋಡುವಂತೆ ಮಾಡಿದೆ. ಆದರೂ ಕೆಲವು ನಾಟಕಕಾರರು ರಂಜನೆಗಾಗಿಯೋ ಅಥವಾ ರಂಗಭೂಮಿ ಪ್ರಯೋಗಕ್ಕಾಗಿಯೆ ಕೃತಿಗಳನ್ನು ಬರೆದಿರಬಹುದು. ಇರಲಿ ಆದರೂ ಇದರಿಂದ ಸಾಮಾಜಿಕ ವೈಷಮ್ಯವಾಗದಿದ್ದರೆ ಸಾಕು.

ನಾನು ಸ್ಪಷ್ಟಪಡಿಸೋ ವಿಚಾರವೇನೆಂದರೆ ಸಮಾಜದಲ್ಲಿ ಸಾಮರಸ್ಯ ಮೂಡಬೇಕು. ಅನ್ಯಾಯವಾಗಿ ಯಾವುದೇ ವ್ಯಕ್ತಿಯ ಮೇಲೆ ಗೂಬೆ ಕೂರಿಸಿ ಮಾನ ಹರಾಜು ಹಾಕುವ ಕೆಲಸ ಆಗಬಾರದು. ಅದರ ಜೊತೆಗೆ ಅವಶ್ಯವಿರುವ ಮೂಲ ವ್ಯಕ್ತಿ ಹಾಗೂ ಅಳಿಯಂದಿರ ಕುರಿತು ಪ್ರಾಮಾಣಿಕ ಲೇಖನ ಬರೆಯಬೇಕೆಂಬುದು ನನ್ನ ಆಶಯ.

ಸಿಂಧೂರ ಲಕ್ಷ್ಮಣನ ಹಾಗೂ ಅಳಿಯಂದಿರರ ಸಂಘರ್ಷ ಆರಂಭದಲ್ಲಿ ದೇಶವನ್ನಾಳುವ ಬ್ರಿಟೀಷರ ವಿರುದ್ಧವಲ್ಲ, ಅನ್ನುವ ವಿಚಾರ ಗಮನಿಸಬೇಕಾಗಿರುವಂತಹದ್ದು. ಇವರ ಹೋರಾಟವನ್ನು ಹೀಗೆ ಹೇಳುತ್ತೇನೆ. ಇದ್ದವರ ಮತ್ತು ಇಲ್ಲದವರ ನಡುವೆ ನಡೆದ ಹೋರಾಟ ಶ್ರೀಮಂತರು ಮತ್ತು ಬಡವರ ಕಾದಾಟ ಮತ್ತು ಮುಖ್ಯವಾಗಿ ಹಸಿವಿಗಾಗಿ ಹೋರಾಟ, ಬದುಕಿಗಾಗಿ ಹೊಡೆದಾಟ ಎನ್ನುವ ವಿಷಯ ವಿಚಾರ ಸ್ಪಷ್ಟವಾಗಿದೆ.

ಭೀಕರವಾಗಿರೋ ಬರಗಾಲದಾಗ ಬದಕಬೇಕು ಅನ್ನೋ ಆಶೆಯಿಂದ ಸಾಬು, ಗೋಪಾಲ, ನರಸು ಇವರು ದರೋಡೆ ಮಾಡಿರುವ ಸಂಗತಿ ಮೊದಲೆ ತಿಳಿಸಿದ್ದೇನೆ. ದರೋಡೆ ಮಾಡೋದು ವ್ಯವಸ್ಥೆಗೆ ವಿರೋಧವಾಗಿರುವ ಕೆಲಸ. ಆದ್ದರಿಂದ ದರೋಡೆಗೆ ಒಳಗಾಗಿರು ವಂತ ಜನ. ಅಂದರೆ ಶ್ರೀಮಂತರು ಇವರ ಮೇಲೆ ಪೋಲಿಸ್‌ರಲ್ಲಿ ದೂರು ಕೊಟ್ಟಾಗ ಪೊಲೀಸರು ಕರ್ತವ್ಯ ಪಾಲನೆಗಾಗಿ ದರೋಡೆಕೋರರನ್ನು ಹಿಡಿಬೇಕು ಅಂತಾ ಅವರ ಹಿಂದೆ ಬಿದ್ದಾಗ ಅನಿವಾರ್ಯವಾಗಿ ಇವರೆಲ್ಲ ಸೇರಿ ಸಿಂಧೂರಿಗೆ ಹೋಗಿ ಲಕ್ಷ್ಮಣನ ಆಶ್ರಯ ಪಡೆದದ್ದು ಲಕ್ಷ್ಮಣನ ಜೀವನದ ಗತಿ ಬದಲಾಗೋದಕ್ಕೆ ಪ್ರಮುಖ ಕಾರಣ. ಲಕ್ಷ್ಮಣ ತನ್ನ ಪಾಡಿಗೆ ತಾನು ವಾಲಿಕಾರಕಿ ಮಾಡಿಕೊಂಡು, ಊರ ಸೇವೆಯಲ್ಲಿ ತಾನು ತೊಡಗಿಸಿಕೊಂಡವ, ಆದರೆ ಪೋಲಿಸರು ಲಕ್ಷ್ಮಣನನ್ನು ಬಂಧಿಸಿದರು. ಆ ಸಂದರ್ಭದಲ್ಲಿ ಮಹಾದೇವಪ್ಪ ಗೌಡ ಲಕ್ಷ್ಮಣನ ಪರವಾಗಿ ಮಾತಾಡೋ ವಿಚಾರ ಬಂಧನದಿಂದ ಬಿಡಿಸಬೇಕು ಅಂತೇಳಿ ವಕಾಲತ್ತ ವಹಿಸಿರೋ ಸಂದರ್ಭ ನೋಡಿದರೆ ಸಿಂಧೂರಿನ ಗೌಡನಿಗೂ ಲಕ್ಷ್ಮಣನಿಗೂ ಯಾವುದೇ ಕಲಹ ಇರಲಿಲ್ಲ ಅನ್ನೊ ವಿಚಾರ ಕಂಡುಬರುತ್ತೈತಿ, ಕಲಹ ಇದ್ದರು ಸಹ ಗಂಭೀರ ಸ್ವರೂಪದ್ದಾಗಿರಲಿಲ್ಲ, ಇದಾವುದನ್ನು ಅರಿಯದ ಅಳಿಯಂದಿರೂ, ಜತ್ತ ಸಂಸ್ಥಾನ ಜೇಲ ಮುರಿದು ಪರಾರಿ ಮಾಡಿದರು. ಅಂದು ಪರಾರಿ ಆಗದೆ ಇದ್ದರೆ, ಗೌಡನ ಕೃಪೆಯಿಂದ ಬಂಧನದಿಂದ ಮುಕ್ತಿ ಪಡೆದಿದ್ದರೆ, ಹತ್ತೊರೊಳಗೆ ಹನ್ನೊಂದು ಅನ್ನುವಂಗ ಆಗುತ್ತಿತ್ತೇನೋ?

ಆದರೆ ಯಾವಾಗ ಜೈಲ ಮುರದರೋ ಆಗ ಸರಕಾರ ಅಂದ್ರೆ ಬ್ರಿಟೀಷರು ಇವರ ಬಗ್ಗೆ ಆಸಕ್ತಿವಹಿಸಿ ಹುಡುಕೋ ಕಾರ್ಯ ಆರಂಭಿಸಿದರು. ಆಗ ನೇರವಾಗಿ ಹೋರಾಟ ಆರಂಭ ವಾದದ್ದು ಬ್ರಿಟೀಷ ಸರಕಾರದ ಪೋಲಿಸರಿಗೆ ಮತ್ತು ಸಿಂಧೂರಿನ ಲಕ್ಷ್ಮಣ ತಂಡದವರಿಗೆ, ಈ ಸಂದರ್ಭದಲ್ಲಿ ಪೋಲಿಸರಿಗೆ ಸಿಗಲೆಬಾರದು ಅಂತಾ ಸುತ್ತಾಡಿದ್ದು, ಆಗ ಇವರಿಗೆ ಆಶ್ರಯ ನೀಡಿದ್ದು, ಈ ಪರಿಸರದಲ್ಲಿರೋ ಬೃಹತ್ ಗುಡ್ಡಗಳು ಹಾಗೂ ಅಡಿವೆಯೆ ಇವರ ಸಮಸ್ತ ಸಾಮ್ರಾಜ್ಯವಾಗಿ ಹೋಯಿತು.

ಅಂದಿನ ದಿನಗಳಲ್ಲಿ ಕಲಾದಗಿ ಜಿಲ್ಲಾ ಕೇಂದ್ರವಾಗಿ ಇದ್ದದು ಇತಿಹಾಸದಿಂದ ತಿಳಿಯು ತ್ತದೆ. ಕಲಾದಗಿಯವನಾದ ಕಲಾಲಸಾಬ ಕಟಕ್ ಫೌಜದಾರನಿಗೆ ಲಕ್ಷ್ಮಣನ ತಂಡದವರನ್ನು ಹಿಡಿಯುವ ಕಾರ್ಯವನ್ನು ಇಂಗ್ರೇಜಿ ಸರ್ಕಾರ ಒಪ್ಪಿಸಿದಾಗ, ಕಟಕ್ ಇನಿಸ್ಪೆಕ್ಟರ್ ಹಾಗೂ ಸಿಂಧೂರ ಲಕ್ಷ್ಮಣನ ತಂಡದವರಿಗೆ ಅಂದರೆ ಅಳಿಯಂದಿರರಿಗೆ ಹಲವಾರು ಬಾರಿ ಮಾರಾ ಮಾರಿಯಾಗಿರುವುದನ್ನು ಹಲವಾರು ಹಿರಿಕರ ಮಾತಿನಿಂದ ಮನಗಾಣಲಾಗಿದೆ.

ಅಂದಿನ ಸಂದರ್ಭದಲ್ಲಿ ಕಲಾಲಸಾಬ ಕಟಕ್, ಪೌಜದಾರನ ಎದಿರ ಹಾಕ್ಕೋಳ್ಳುದು ಅಂದ್ರೆ ಇಡೀ ಆಂಗ್ಲ ಸರಕಾರವನ್ನೇ ಎದಿರ ಹಾಕ್ಕೊಂಡಂಗ ಅನ್ನೋದಂತೂ ದಿಟ. ಅಂತಾ ದ್ರಲ್ಲಿ ಸಿಂಧೂರ ಟೋಳಿ ತಲೆಮರಿಸಿಕೊಂಡು, ಕಾಡು, ಮೇಡು, ಅಡವಿ, ಊರು, ಕೇರಿ ಅನ್ನದೆ ಎಲ್ಲಿ ಬೇಕೆಂದ್ರಲ್ಲಿ ಅಲೆದಾಡತಾ ಇರೋವಾಗ, ಕಲ್ಲೊಳ್ಳಿ ಗುಡದಾಗ ಕಟಕ್ ಸಹೇಬನಿಗೂ ಇವರಿಗೂ ಭಯಂಕರ ಹೊಡೆದಾಟದಲ್ಲಿ ಲಕ್ಷ್ಮಣನಿಗೆ ಅಪತ್ತು ಬಂದಿರೋ ಕ್ಷಣದಲ್ಲಿ ತನ್ನ ಪ್ರೀತಿಯ ಮಾವನ ಜೀವನ ಉಳಿಸೋ ಕಾರಣಕ್ಕಾಗಿ, ಮರೆಯಲ್ಲಿದ್ದ ನರಸು ಸಾಹೇಬನ ರುಂಡಾ ಕಡಿದದ್ದು ಈ ತಂಡದವರು ಮಾಡಿದ ಮೊದಲ ಕೊಲೆ ಅಂತ ಕಂಡ ಬರತೈತಿ.

ಅನಂತರ ಸರ್ಕಾರ ರೊಚ್ಚಿಗೆದ್ದು ಹೆಂಗಾರ ಮಾಡಿ ಸಿಂಧೂರ ತಂಡ ಇಲ್ಲದಂಗ ಮಾಡಬೇಕು ಅನ್ನುವ ಆಲೋಚನೆಯಲ್ಲಿತ್ತು. ಲಕ್ಷ್ಮಣ ಅದೆಷ್ಟು ಶೂರ, ಧೀರ ಆಗಿದ್ದನೋ, ಅವನಿಗಿಂತ ಶೂರರು, ವೀರರು ಆಗಿದ್ದರು ಅವನ ಜೊತೆಯಲ್ಲಿದ್ದ ಅಳಿಯಂದಿರರು. ನನಗೆ ಒಂದಿಷ್ಟು ಜನ ಹಿರಿಯರು ಹೇಳಿದ ಮಾತುಗಳು ಈಗ ನೆನೆಪು ಆಗತಾವು, ನರಸು ನೊಗ ನಿಲ್ಲಿಸಿ ಕವಣಿ ಕಲ್ಲನ್ನ ನೊಗದ ಜತ್ತಿಗೆ ಕಟ್ಟೊ ತುತಿನಲ್ಲಿ ಒಗಿತಿದ್ದನಂತೆ ಮತ್ತು ಆರು ಅಕ್ಕಡಿ ಅಗಲ ಬಾವಿ ಹಾರಿ ಹೋಗುತ್ತಿದ್ದನಂತೆ, ಸಿದ್ದಾಪುರ ಗುಡ್ಡದಾಗ ಓಡಿ ಹೋಗುವ ಚಿಗರಿ ಬೆನ್ನತ್ತಿ ಹಿಡಿದಿದ್ದನಂತೆ. ಹೀಗೆ ಸಾಬು, ಗೋಪಾಲಿ ಕುರಿತಾಗಿಯೂ ಹಲವಾರು ಜನರು ಸಾಕಷ್ಟು ಹೇಳುತ್ತಿದ್ದರು.

ಇವರ ಕುರಿತಾಗಿ ಇನ್ನು ಅನೇಕರು ಕಥೆಗಳನ್ನು, ಲಾವಣಿ, ಹಾಡು, ಬೀಸುಕಲ್ಲಿನ ಹಾಡು, ಹೀಗೆ ಅನೇಕ ತರಹದ ಸಾಹಿತ್ಯ ಪ್ರಕಾರಗಳಲ್ಲಿ ಇವರ ಸವಿವರ ಚರಿತ್ರೆ ಹೇಳುವುದು ಕಂಡು ಬರುತ್ತದೆ. ಇವರ ಕುರಿತಾಗಿ ವಿಚಾರ ಮಾಡಿ ಹಿರಿಕರ ಮುಂದೆ ಕುಂತರ ಹೊತ್ತು ಹೋದದ್ದು ತಿಳಿಯಾಂಗಿಲ್ಲ. ಅಂದ್ರ ಅಷ್ಟೊಂದು ಹಿರಿಯರ ಮೇಲೆ ಮತ್ತು ಹಳೇ ತಲೆಮಾರಿನ ಜನತೆಯ ಮೇಲೆ ಪ್ರಭಾವ ಆಗಿತ್ತು ಅನ್ನೋದಂತೂ ಸತ್ಯ.

ಇವರ ಬದುಕಿನ ಅಂತ್ಯದ ಸಂದರ್ಭದಲ್ಲಿ ಮತ್ತೆ ಹಸುವಿನಿಂದ ಬಳಲೋವಂಗ ಆದದ್ದು, ವಿಧಿಯ ಕೈಚಳಕ ನಿಚ್ಚಳವಾಗಿ ಕಂಡ ಬರತೈತಿ. ಸಿಂಧೂರ ತಂಡಕ್ಕೆ ಅಂತ್ಯ ಹೇಳೋದಕ್ಕೆ ಇಡಿ ಇಂಗ್ರೇಜಿನ ಸರಕಾರ ಹೊಂಚಹಾಕಿ ಸಮಯ ಸಾಧನೆಗಾಗಿ ಕಾಯುತ್ತಿರೋ ಸಂದರ್ಭ ದಲ್ಲಿ, ತಲೆ ಮರೆಸಿಕೊಂಡು ಹಲವಾರು ಶ್ರೀಮಂತರ ಮನೆ ಲೂಟಿ ಮಾಡಿ ಅಪಾರ ಪ್ರಮಾಣದ ಸಂಪತ್ತು ಇದ್ರು ಹೊಟ್ಟೆತುಂಬಾ ಅನ್ನ ಸಿಗದಂಗ ಆಗಿತ್ತು. ಬಂಗಾರ ಎನ ತಿನ್ನುವಂಗೈತ್ಯಾ ಇಲ್ಲ ಅಂದ ಮೇಲೆ ಯಾರು ಇವರಿಗೆ ರೊಟ್ಟಿ ಕೊಡತಾರ ಅವರಿಗೆ ಬೆಳ್ಳಿ ಬಂಗಾರ ಕೊಡತಿದ್ರು ಮತ್ತೆ ಇವರ ಕಣ್ಣಿಗೆ ಬಡವರಂಗ ಕಂಡವರಿಗೂ ದಾನ ಮಾಡತ್ತಿದ್ದರು ಅನ್ನೋದು ಸತ್ಯವಾದ ಮಾತು.

ಒಬ್ಬ ಸಾಮಾನ್ಯ ವ್ಯಕ್ತಿ ಅಸಾಮಾನ್ಯನಾಗಿ ಕಂಡಬರೋದು ಆತನಲ್ಲಿರುವಂತ ಒಳ್ಳೆಯ ಗುಣಗಳಿಂದ. ಆತನ ಶುದ್ಧ ನಡತೆಯಿಂದ ಅನ್ನೋ ಮಾತು ಇವರಿಗೆ ಅನ್ವಯಿಸುತ್ತೆ. ತಮಗಾಗಿ ಏನು ಮಾಡಲಿಲ್ಲ. ಜೋಪಾನವಾಗಿ ಇಡಲಿಲ್ಲ. ತಮ್ಮ ಜೊತೆಗಾರರಿಗೆ ಈ ಪರಿಸರದಾಗ ಇರೋ ಬಡವರಿಗೆ ಹಾಗೂ ಹೊಟ್ಟೆಗೆ ಮತ್ತು ಬಟ್ಟೆಗಾಗಿ ಬಳಲುತ್ತಿರೋ ಜನರಿಗೋಸ್ಕರ ಇವರು ಹೋರಾಡಿದರು ಅನ್ನೋದು ಸತ್ಯ. ಕೊನೆಗೆ ಬ್ರಿಟೀಷರು ಮುಳ್ಳನ್ನು ಮುಳ್ಳಿನಿಂದ ತೆಗಿಬೇಕು ಎನ್ನುವ ಗಾದೆ ಮಾತಿನಂತೆ ಲಕ್ಷ್ಮಣನ ಆತ್ಮೀಯರು ತೆಗ್ಗಿಯ ನಾಯಕರು ಊರಾಳೋ ಗೌಡ್ರು ಇಂದಿನ ಪಾಟೀಲ್ರ ವಂಶಸ್ಥರಾಗಿದ್ದ ವೆಂಕಟಪ್ಪನಾಯಕರ ಮೇಲೆ ಒತ್ತಡ ಹೇರಿ ಮಾನಸಿಕ ಚಿತ್ರಹಿಂಸೆ ನೀಡಿ ಲಕ್ಷ್ಮಣನ ತಂದು ಕೊಡು ಇಲ್ಲ ಅವನ ಕಥೆ ಮುಗಿಸು ಎಂದರು. ಆದರೂ ಸಹ ನಾಯಕರು ಲಕ್ಷ್ಮಣನಿಗೆ ಅನ್ಯಾಯ ಮಾಡಬಾರದು ಏಕೆಂದರೆ ನಂಬಿ ಬೆನ್ನಿಗೆ ಬಿದ್ದ ಲಕ್ಷ್ಮಣಗ ಕಳ್ಳಾಗ ಚೂರಿ ಹಾಕೋದು ಮಹಾಪಾಪದ ಕೆಲಸ ಅಂತ ಚಿಂತಿ ಮಾಡುತ್ತಿದ್ರ ಅದನ್ನ ಕಂಡ ವಾಲಿಕಾರ ಶಿವಪ್ಪ ಚಿಂತಿ ಮಾಡ್ತಾಕುಂತಿರೋ ನಾಯಕರ ಮನ ಒಪ್ಪಿಸಿ, ತಂತ್ರಮಾಡಿ ಸಿದ್ದಾಪೂರ ನಾಗರಾಳ ಸಮೀಪದಲ್ಲಿರೋ ಕಾನನದ ತಾಯಿ, ಅಡವಿದೇವಿ, ಶಕ್ತಿದೇವತೆ ಎಂದು ಸುತ್ತಮುತ್ತ ಹತ್ತಹಳ್ಳಿಗೆ ಹೆಸರು ಮಾಡಿದಂತಾಕಿ, ದೊಡ್ಡ ಗುಡ್ಡದಾಗ ನಟ್ಟ ನಡು ಕೊಳದಾಗ ನೆಲೆಸಿರುವಂತಹ ಕಪ್ಪರ ಪಡಿಯವ್ವನ ಮುಂದೆ ಬ್ಯಾಟಿ  ಮಾಡಿ ಊಟಕ್ಕೆ ನೀಡಿ ಗುಂಡು ಹಾರಿಸಿ ಕೊಂದದ್ದು ಈಗ ಇತಿಹಾಸ ಆಗಿ ಹೋಗೈತಿ.

ಜೋಡಂಗಿ ರಕ್ತ ಆಗಿ ರಕ್ತದ ಮುಡುವಿನಲ್ಲಿ ಬಿದ್ದು ಹೊರಳಾಡುತ್ತಿರುವ ಲಕ್ಷ್ಮಣ ಅಳಿಯಂದಿರಿಗೆ ಹೇಳುವ ಮಾತು ಬಹಳ ಮಹತ್ವದ್ದು. ನನ್ನ ಹಡದ ತಾಯಿನ, ಕೈಹಿಡಿದ ಹೆಂಡ್ತಿನ, ಪರದೇಶಿ ಮಾಡಿ ಯಾವುದೋ ಸಮಯದಾಗ ಬಡವರ ಪರ ಹಾಗೂ ಬದುಕು ವುದಕ್ಕಾಗಿ ಈ ಹೋರಾಟದ ಕೆಲಸಕ್ಕೆ ಕೈ ಹಾಕಿ ಇಷ್ಟುದೂರ ಬಂದ ದಿಕ್ಕಿಲ್ಲದ ಹೆಣ ಆಗಬೇಕು ಅಂತ ನನ್ನ ಹಣ್ಯಾಗ ಬರೆದಿತ್ತು ಅಷ್ಟಾತ! ನೀವೆಲ್ಲರೂ ಊರಿಗೆ ಹೊಗರಲೇ ಇನ್ನ! ಈ ಉದ್ಯೋಗ ಬಿಟ್ಟು ಊರಾಗ ದುಡುಕೊಂಡು ತಿನ್ನಿರಿ. ಮನಿ ಹಿಡಿದು ಬಾಳೆ ಮಾಡ್ರಿ ಎನ್ನುವ ಮಾತಿನಿಂದ ಗೋಚರಿಸುತ್ತೈತಿ, ತಾನು ಬದುಕಿದ ರೀತಿ ತಾನ್ ನಡೆದಿರುವ ದಾರಿ ಹಾಗೂ ತನ್ನ ಗುರಿ ಮುಟ್ಟದೆ ಇರುವ ಬಗ್ಗೆ ಅವನಿಗೆ ಅಸಮಾಧಾನ ಇತ್ತು ಅಂತ ಕಂಡುಬರ್ತೈತಿ. ಆತನ ದುರಂತ ಜೀವನಕ್ಕೆ ಸಾಕ್ಷಿಯಾಗುವಂತಹ ಮಾತು ಇನ್ನೋಂದೈತಿ ಸರ್ಕಾರದ ಕಛೇರ್ಯಾಗ ಈ ಶೂರ ಸಿಂಧೂರ ಲಕ್ಷ್ಮಣನ ಹೆಸರು ದರೋಡೆಕೋರ ಅಂತ ದಾಖಲೆ ಆಗೇ ಉಳಿತು. ಈ ಲಕ್ಷ್ಮಣನ ಕಥೆ ಮುಗಿತು. ಯವ್ವ, ಚಂದ್ರಿ………. ಭೀಮರಾಯ……. ಅಂತ ಸಂಕಟ ಪಡುತ್ತಿರುವಾಗ ಪ್ರಾಣಪಕ್ಷಿ ಹಾರಿ ಹೋಯಿತು. ಅಂತ ನಾಟಕದ ಸಂದರ್ಭ ಒಂದರಲ್ಲಿ ತುಂಬಾ ಸ್ಪಷ್ಟವಾಗಿ ಮೂಡಿಬಂದೈತಿ.

ಲಕ್ಷ್ಮಣ ಜೀವ ಬಿಡುವಾಗ ಅವನ ಜೊತೆಯಲ್ಲಿದ್ದವರು, ಆತನ ಅಳಿಯಂದಿರರು ಮಾತ್ರ. ಲಕ್ಷ್ಮಣನಿಗೆ ಗುಂಡು ಹೊಡೆದಾಗ ನರಸು ಜಾನಮಟ್ಟಿಗೆ ಹೋಗಿ ಚಿಗರಿಯಮನಪ್ಪಗ ಸುದ್ದಿ ಮುಟ್ಟಿಸಿ, ಮತ್ತ ತಮ್ಮಂದಿರ ಕರೆಯಾಕಹೋದ ಸಂದರ್ಭದಾಗ, ಬ್ರಿಟೀಷ್ ಅಧಿಕಾರಿ ಗಾರ್ಮನ್ ಪೋಲಿಸರೊಂದಿಗೆ ತಾಯಿ ಕಪ್ಪರಪಡಿಯಮ್ಮನ ಸನ್ನಿಧಿಗೆ ಬಂದಾಗ, ಸಾಬು ಮತ್ತು ಗೋಪಾಲ ಇಬ್ಬರೆ ಲಕ್ಷ್ಮಣನ ಹೆಣದ ಮುಂದೆ ಅಳತಾ ಇದ್ರು ಅವರಿಬ್ಬರನ್ನು ಬಂಧನ ಮಾಡಿ ಜಮಖಂಡಿಗೆ ಕರೆದುಕೊಂಡು ಹೋಗಿ ಗಲ್ಲ ಶಿಕ್ಷೆ ಜಾರಿ ಮಾಡಿದರು ಅನ್ನೋ ವಿಚಾರ ಕೇಳಿ ಬರ‌್ತಿತ್ತು.

ಭಾರತ ಸ್ವತಂತ್ರ ಚಳುವಳಿ ಗಾಳಿ ಜೋರಾಗಿ ಬೀಸುತ್ತಿರುವ ಸಂದರ್ಭದಲ್ಲಿ, ನರಸು ತಪ್ಪಿಸಿಕೊಂಡು ತಿರುಗಾಡುವ ಸಮಯದಲ್ಲಿ ಹುಸೇನಸಾಬ್ ಮೋದಿನಸಾಬ್ ಕುಡಚಿಕರ ಎನ್ನುವ ಬ್ರಿಟೀಷ್ ಜಾಮದಾರ ಆಗಿದ್ದ. ದುದನಿ ಅನ್ನೊ ಊರೊಳಗ ನರಸಪ್ಪನ ಅರೆಷ್ಟ ಮಾಡಿದ. ವಿಜಾಪೂರ ಕೇಂದ್ರ ಕಾರಾಗೃಹದಾಗ ಜೈಲು ವಾಸ ಅನುಭವಿಸಿ ಬಿಡುಗಡೆ ಹೊಂದಿ ಬಂದ ಮೇಲೆ ಸಿದ್ದಾಪುರ ಹಾಗೂ ಸುತ್ತಮುತ್ತ ಹಳ್ಳಿಗಳಿಗೆ ಬಂದ ಸಂದರ್ಭದಾಗ, ಕೆಲವು ಜನ ನರಸಪ್ಪನ ಕರಕೊಂಡ ಅಡವಿ, ಗುಡ್ಡ, ಸುತ್ತಾಡಿ ಈ ಮೊದಲು ಹೂಳಿ ಇಟ್ಟ ಹೊನ್ನಕ್ಕಾಗಿ ಅಲೆದು ಅಲೆದು ಸುಸ್ತಾದರು. ಕೊನೆಗೆ ಕುರಿಗಾರರು ಎಲ್ಲಾ ಸೇರಿ ಹಿಂಡಿಗೊಂದು ಕುರಿಮರಿ ಕೊಟ್ರಂತ ಅವುಗಳನ್ನು ತೊಗೊಂಡ ಹಾಗೂ ಸಂಸಾರಸ್ಥ ಬಾಳೆ ನಡೆಸಿ ಮುಪ್ಪಾಗುವರೆಗೂ ಬದುಕಿದ್ದು ಜೀವನ ಪೂರ್ತಿಗೊಳಿಸಿದನು.

ಒಬ್ಬ ವ್ಯಕ್ತಿ ಇಲ್ಲವೆ ಒಂದು ತಂಡ ಆರಂಭದಲ್ಲಿ ಬದುಕುವುದಕ್ಕಾಗಿ ಸಾಮಾನ್ಯ ದರೋಡೆ ಮಾಡಿ, ಜೀವನವೆಲ್ಲ ಕಷ್ಟದಿಂದ ಕಳೆಯುವಂತಾದದ್ದು. ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಹೆಸರು ಮಾಡಿದ್ದು ಬ್ರಿಟೀಷ್ ಸರ್ಕಾರಕ್ಕೆ ಬದುಕಿದ್ದಷ್ಟು ದಿವಸ ಹುಲಿ ಯಾಂಗ ಕಾಡಿದ. ಸಿಂಹದಂಗ ಗುಡುಗಿ ಕೊನೆಗೂ ಬಡವರ ಪರವಾಗಿ ಹೋರಾಟ ಮಾಡಿ, ಸಾಮಾನ್ಯ ಜನ ಮೆಚ್ಚುವಂಗ ಕಾರ್ಯಮಾಡಿ ಮೋಸದಿಂದ ಗುಂಡಿಗೆ ಬಲಿಯಾಗಿ ಸತ್ತು ಬಿದ್ದಾಗ, ಶವ ಸಂಸ್ಕಾರಕ್ಕೆ ದಿಕ್ಕಿಲ್ಲದಂಗ ಆದದ್ದು, ಬಂಧುಬಳಗ ಎಲ್ಲದೂರಾದದ್ದು, ಬಹಳ ನೋವಿನ ಸಂಗತಿ. ಅಂದಿನ ವ್ಯವಸ್ಥೆಯಲ್ಲಿರೋ ಹಲವಾರು ಲೋಪಗಳನ್ನು ಈತನ ದುರಂತ ಬದುಕಿನಿಂದ ನಾವು ಮನಗಾಣಬೇಕೈತಿ.

ಶ್ರೀಮಂತರ ಪರವಾಗಿದ್ದ ಬ್ರಿಟೀಷ್ ಸಾಮ್ರಾಜ್ಯಶಾಹಿ ಆಡಳಿತ ವ್ಯವಸ್ಥೆ ಕನಿಷ್ಟ ಪಕ್ಷ ಬಡವರ ಅವಶ್ಯಕತೆಗಳನ್ನು ಪೂರೈಸುವಲ್ಲಿ ವಿಫಲವಾಗಿತ್ತು ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ಬಡವರ ಪರವಾಗಿ ಶ್ರೀಮಂತರ ಸುಲಿಗೆ ಮಾಡಿ ಬ್ರಿಟೀಷ್ ಸರಕಾರವನ್ನು ಎದುರು ಹಾಕ್ಕೊಂಡು ಬದುಕಿದ ಮಹಾನ್ ಚೇತನ, ಇತಿಹಾಸದೊಳಗೆ ದುರಂತನಾಯಕ ಅಂತ ಗುರುತಿಸಿಕೊಂಡವ.  ಸಿಂಧೂರ ಲಕ್ಷ್ಮಣ ನಾಯಕ ಹಾಗೂ ಆತನ ಅಳಿಯಂದಿರ ಕುರಿತಾಗಿ ಸಂಶೋಧನೆ ಮಾಡಬೇಕಿರುವ ಇಂದಿನ ದಿನಮಾನಗಳಲ್ಲಿ ಅವಶ್ಯವೆನಿಸಿದೆ.

ಅಳಿಯಂದರಾದ ರಾಯಪ್ಪ ಮತ್ತು ಧರ್ಮ ಲಕ್ಷ್ಮಣನ ಹೋರಾಟದೊಳಗೆ ನೇರವಾಗಿ ಭಾಗಿ ಆದದ್ದು ಎಲ್ಲಿ ಕಂಡು ಬರುವುದಿಲ್ಲ. ಅದಕ್ಕಾಗಿ ಅವರ ಕುರಿತು ಚರ್ಚಿಸಲಾಗಿಲ್ಲ.

ಸಿಂಧೂರ ಲಕ್ಷ್ಮಣ, ನಾಯಕ, ವಾಲ್ಮೀಕಿ, ಬೇಡಸಮುದಾಯದಲ್ಲಿ ಹುಟ್ಟಿದ ವೀರ ಆದರೂ ಆತ ಸಮುದಾಯಕ್ಕೆ ಅಂಟಿಕೊಳ್ಳದನೇ ಎಲ್ಲಾ ಸಮುದಾಯದ ಎಲ್ಲಾ ವರ್ಗ ಗಳಲ್ಲಿರುವ ಬಡವರ ಪರ ಹೋರಾಟ ಮಾಡಿ ಬ್ರಿಟೀಷರ ನಿದ್ದೆಗೆಡಸಿ, ಮೋಸಕ್ಕೆ ಬಲಿಯಾ ದಂತ ಮಹಾನ್ ನಾಯಕ ಅನ್ನುವ ಮಾತು ಹೇಳತೀನಿ.

ಸಮಾಜದಲ್ಲಿರುವ ಆರ್ಥಿಕ ಅಸಮಾನತೆ ಹಾಗೂ ಸಂಪತ್ತಿನ ಕ್ರೋಢೀಕರಣದ ವಿರುದ್ಧ ಹೋರಾಡಿದ ಸಿಂಧೂರ ಲಕ್ಷ್ಮಣನಂತಹ ಹಲವಾರು ಮಹಾನ್ ದುರಂತನಾಯಕರು ಇಂತಹ ಮಹಾನೀಯರು ಇತಿಹಾಸದುದ್ದಕ್ಕೂ ಸಮಷ್ಠಿ ಸುಖಕ್ಕಾಗಿ ಹೋರಾಟ ನಡೆಸಿದ್ದು ವಾಸ್ತವ ವಾದರೆ ಇಂತಹ ವಿಷಯಗಳನ್ನು ಕಳ್ಳಕಾಕರು, ದರೋಡೆಕೋರರು ಅಂತಾ ಪಟ್ಟಾ ಕಟ್ಟಿಕೊಂಡಿದ್ದು ವಿಪರ್ಯಾಸ. ಇಂತಹ ವಿಷಯವನ್ನು ಮರುಶೋಧಿಸಿ ಹಲವಾರು ಅಸಂಬದ್ಧ ಹೇಳಿಕೆಗಳನ್ನು ಕಿತ್ತು ಹಾಕಿ ಚರಿತ್ರೆಗೊಂದು ಹೊಸ ನೋಟವನ್ನು ಕೊಡುವಲ್ಲಿ ಇಂತಹ ವೇದಿಕೆಗಳು ಯಶಸ್ವಿಯಾಗಬೇಕು. ಚರಿತ್ರೆಯುದ್ದಕ್ಕೂ ಕೆನೆಗಟ್ಟಿ ನಿಂತಿರುವ ಇಂತಹ ಸೂಕ್ಷ್ಮತೆಗಳನ್ನು ವಿಶ್ವವಿದ್ಯಾಲಯಗಳು ಮತ್ತು ಘನ ಸರ್ಕಾರ ಅರಿತುಕೊಂಡು ಸೂಕ್ತ ಪರಿಹಾರ ನೀಡಿದಲ್ಲಿ ಇಂತಹ ಗೋಷ್ಠಿಗಳಿಗೆ ಹಾಗೂ ಇಂತಹ ಮಹಾನ್ ವೇದಿಕೆಗೆ ಗೌರವ ಸಿಗುತ್ತದೆಂದು ನನ್ನ ಅನಿಸಿಕೆಯಾಗಿದೆ.

ಹಾಗೂ ಈ ಪ್ರಬಂಧದ ಬರೆಯುವುದಕ್ಕೆ ಪ್ರೋನೀಡಿ ಮಾರ್ಗದರ್ಶಕರಾದ ಡಾ. ವೀರೇಶ ಬಡಿಗೇರ ಹಾಗೂ ಡಾ. ಮಂಜುನಾಥ ಬೇವಿನಕಟ್ಟಿ ಗುರುಗಳಿಗೆ ನಮನಗಳನ್ನು ಹೇಳುವುದು ನಾನೆಂದು ಮರೆಯುವುದಿಲ್ಲ.

 

ಆಕರಗಳು

ಸಿಂಧೂರ ಲಕ್ಷ್ಮಣ ಮಹಾಕಾವ್ಯ : ಲೇಖಕರು : ಡಾ. ಆರ್.ಸಿ. ಮುದ್ದೇಬಿಹಾಳ

ಸಿಂಧೂರ ಲಕ್ಷ್ಮಣ ನಾಯಕ : ಲೇಖಕರು : ಕಂಠಿ ಹನುಮಂತರಾಯ

ಸಿಂಧೂರ ಲಕ್ಷ್ಮಣ ಕ್ಯಾಸೆಟ್ ನಾಟಕ : ಪಿ.ಬಿ. ದುತ್ತರಿಗಿ

 

ಮಾಹಿತಿ ನೀಡಿದವರು

ಶ್ರೀ ಲೆಂಕೆಪ್ಪ ವಡವಾಣಿ – ಸಿದ್ದಾಪೂರ

ಶ್ರೀ ಹನುಮಂತ ಕಾಡರಕೊಪ್ಪ (ಸಿಂಧೂರ ಲಕ್ಷ್ಮಣನ ಸಂಬಂಧಿಗಳ ಪರಿಯಸ್ಥರು)

ಶ್ರೀ ಕಂಠಿ ಹನುಮಂತರಾಯ (ಕವಿಗಳು) – ನಾಗರಾಳ

ಶ್ರೀ ಎಸ್.ಜಿ. ಒಡೆಯರ – ಸಿದ್ದಾಪೂರ

ಶ್ರೀ ಪುಂಡಲೀಕಪ್ಪ ಮುತ್ತೂರು ವಾಲ್ಮೀಕಿ ಪ್ರಮುಖರು – ಸಿದ್ದಾಪೂರ

ಶ್ರೀ ಯಮನಪ್ಪ ಕೂಗಟಿ ಲಾವಣಿ ಹಾಡುಗಾರರು – ಸಿದ್ದಾಪೂರ

ಶ್ರೀ ಎಮ್,ವೈ. ವಡವಾಣಿ ಶಿಕ್ಷಕರು – ಸಿದ್ದಾಪೂರ

ಶ್ರೀ ಶ್ರೀಶೈಲ ಅಂಟೀನ ಕಾರ್ಯದರ್ಶಿ ವಾಲ್ಮೀಕಿ ಸಂಘರ್ಷ ಸಮಿತಿ, ಬೀಳಗಿ

ಶ್ರೀ ಅಪ್ಪಣ್ಣ ಮುಂಡಾಸ

ಶ್ರೀ ಮನೋಹರ ದೇವಗಿರಿಕರ

ಶ್ರೀ ಭೀಮಪ್ಪ ಕೂಗಟಿ ಮುಖಂಡರು ವಾಲ್ಮೀಕಿ ಸಮಾಜ

ಶ್ರೀ ಸಿದ್ಧಪ್ಪ, ವಿ. ಕೂಗಟಿ ಮುಖಂಡರು ವಾಲ್ಮೀಕಿ ಜನಾಂಗ

ಶ್ರೀ ಗೋಪಾಲ ಅರಕೇರಿ

ಶ್ರೀರಾಮಪ್ಪ ಅಂಟೀನ

ಶ್ರೀ ಹಾಜಿಸಾಬ ಅರಮನಿ

ಶ್ರೀ ಬಿ.ವೈ. ಲೋಣಾರೆ ಪ್ರಾಂಶುಪಾಲರು ಸ್ವಾಮಿ ವಿವೇಕಾನಂದ ಸಂಯುಕ್ತ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ, ಬೀಳಗಿ

ಶ್ರೀ ಕೆ.ಆರ್. ಕಂದಗಲ್ಲ, ಉಪನ್ಯಾಸಕರು ಸ್ವಾಮಿ ವಿವೇಕಾನಂದ ಸಂಯುಕ್ತ  ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ, ಬೀಳಗಿ

ಶ್ರೀ ಎ.ವೈ. ಹೆರೂರ ಶಿಕ್ಷಕರು ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ, ಬೀಳಗಿ

ಶ್ರೀ ವಿನಾಯಕ, ಚಿತ್ರಕಾರ, ಗಣಕಯಂತ್ರ ಶಿಕ್ಷಕರು, ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ, ಬೀಳಗಿ

ಶ್ರೀ ಶೇಖರ, ಎಂ. ಲಮಾಣಿ, ಶಿಕ್ಷಕರು, ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ, ಬೀಳಗಿ

ಶ್ರೀ ವಿ.ಬಿ. ಕುಡಕುಂಟಿ, ಶಿಕ್ಷಕರು, ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ, ಬೀಳಗಿ

ಶ್ರೀ ಜಿ.ಆರ್. ಪಾಟೀಲ, ಶಿಕ್ಷಕರು, ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ, ಬೀಳಗಿ

ಶ್ರೀ ಎಚ್.ಬಿ. ಅರಷಣಗಿ, ಶಿಕ್ಷಕರು, ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ, ಬೀಳಗಿ

ಶ್ರೀ ವಿ.ಎಸ್. ಚೌಡಾಪುರ, ಶಿಕ್ಷಕರು, ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ, ಬೀಳಗಿ

* * *