ಭಾರತೀಯ ಸಮಾಜವು ವೈವಿಧ್ಯತೆಯಿಂದ ಕೂಡಿದ ಸಾಂಸ್ಕೃತಿಕ ಪರಂಪರೆಯ ಮೂಲಕ ಜಾಗತಿಕಮಟ್ಟದಲ್ಲಿ ತನ್ನದೇಯಾದ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಇಂತಹ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದ ನಮ್ಮ ಸಮಾಜದಲ್ಲಿ ಅನಾದಿಕಾಲದಿಂದಲೂ ರೂಢಿ ಯಲ್ಲಿರುವ ವರ್ಣವ್ಯವಸ್ಥೆಯಲ್ಲಿ ಸಿಲುಕಿಕೊಂಡು ಬಂದ ತಳಸಮುದಾಯಗಳು ಶೋಷಣೆಗೆ ಒಳಗಾಗಿದ್ದರೂ ಸಹ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಜೀವಂತ ಉಳಿಸಿಕೊಂಡು ಬಂದಿವೆ. ಜೊತೆಗೆ ತಮ್ಮ ಸ್ವಾಬಿಮಾನಕ್ಕಾಗಿ ದೇಶಾಭಿಮಾನಕ್ಕಾಗಿ ಹೋರಾಟ ಮಾಡಿವೆ. ಇಂತಹ ಹೋರಾಟವನ್ನು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಇತಿಹಾಸದಲ್ಲಿ ಗುರುತಿಸದೇ ಹೋದದ್ದು ಇತಿಹಾಸದ ಕ್ರೂರ ವ್ಯಂಗ್ಯ ಎಂದು ಹೇಳಬಹುದು. ಆದರೆ ಇತ್ತೀಚಿನ ಕಾಲಘಟ್ಟದಲ್ಲಾದರೂ ಅಂತಹ ಕೊರತೆಯನ್ನು ಸರಿದೂಗಿಸುವ ಕೆಲಸ ನಡೆಯುತ್ತಿರುವುದು ಸಂತೋಷದ ಸಂಗತಿ. ಆ ದೆಸೆಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠವು ಬಾಗಲಕೋಟೆ ಜಿಲ್ಲೆ ನಾಗರಾಳ ಗ್ರಾಮದಲ್ಲಿ ನಡೆಸಿದ ವಿಚಾರ ಸಂಕಿರಣವನ್ನು ನಾನು ಕಂಡಂತೆ ನನ್ನ ಪ್ರತಿಕ್ರಿಯೆಯ ರೂಪದಲ್ಲಿ ಸಾದರಪಡಿಸುತ್ತೇನೆ. ವಿಚಾರಸಂಕಿರಣ ದಲ್ಲಿಯ ಗೋಷ್ಠಿಗಳ ವಿಷಯಾಂಶವನ್ನು ಚರ್ಚಿಸುವ ದುಸ್ಸಾಹಸಕ್ಕೆ ನಾನು ಪ್ರಯತ್ನ ಮಾಡುವುದಿಲ್ಲ. ಅದು ಸೂಕ್ತವೂ ಅಲ್ಲ.  ಆದ್ದರಿಂದ ವಿಚಾರಸಂಕಿರಣ ಸಾಗಿಬಂದ ಬಗೆ ಹಾಗೂ ಆ ಒಂದು ವಾಸ್ತವ ಂದರ್ಭದಲ್ಲಿ ಫಲಿತಗೊಂಡ ಕೆಲ ಅಂಶಗಳನ್ನು ನನಗೆ ತಿಳಿದಂತೆ ನನ್ನ ಇತಿಮಿತಿಗಳ ನಡುವೆ ಗುರುತಿಸಲು ಪ್ರಯತ್ನಿಸುತ್ತೇನೆ.

ಉದ್ಘಾಟನಾ ಸಮಾರಂಭದಲ್ಲಿಯ ಶಾಲಾಮಕ್ಕಳ ಪ್ರಾರ್ಥನೆ ಕಾರ್ಯಕ್ರಮ ನಿರೂಪಕರ ಚಾಕಚಕ್ಯತೆಗಳು ಆಕರ್ಷಣೀಯವಾಗಿದ್ದವು. ಅಧ್ಯಯನಪೀಠದ ಸಂಚಾಕರಾದ ಡಾ. ಮಂಜು ನಾಥ ಬೇವಿನಕಟ್ಟಿ ಅವರು ಪ್ರಾಸ್ತಾವಿಕ ಮಾತನಾಡಿ ಸಭಿಕರಿಗೆ ವಿಚಾರಸಂಕಿರಣದ ಉದ್ದೇಶ ಮತ್ತು ಅಗತ್ಯತೆ ಮನವರಿಕೆಯಾಗುವಂತಿತ್ತು. ಜ್ಯೋತಿ ಬೆಳಗಿಸುವ ಮೂಲಕ ವಿಚಾರ ಸಂಕಿರಣಕ್ಕೆ ಚಾಲನೆನೀಡಿದ ಮಾನ್ಯ ಕುಲಪತಿಗಳಾದ ಡಾ.ಎ.ಮುರಿಗೆಪ್ಪ ಅವರು ವಿಶ್ವ ವಿದ್ಯಾಲಯದ ವಿಶಿಷ್ಟತೆ ಹಾಗೂ ವಿಚಾರಸಂಕಿರಣದ ಆಶಯಗಳನ್ನು ಕುರಿತು ಮಾಡನಾಡಿದ್ದು ವಿಶ್ವವಿದ್ಯಾಲಯವೇ ನಾಗರಾಳ ಗ್ರಾಮಕ್ಕೆ ಬಂದಿದೆ ಎಂಬುದನ್ನು ಸಭಿಕರಿಗೆ ಸ್ಪಷ್ಟಮಾಡು ವಂತಿತ್ತು. ಹೀಗೆ ಉದ್ಘಾಟನಾ ಸಮಾರಂಭವು ದಿಗಂಬರೇಶ್ವರ ಶ್ರೀಗಳ ಸಾನಿಧ್ಯದಲ್ಲಿ ಮಾಜಿ ಸಚಿವರ ಶಾಸಕರ ವಿವಿಧ ಗಣ್ಯವ್ಯಕ್ತಿಗಳ ಉಪಸ್ಥಿತಿಯಲ್ಲಿ ಪ್ರಾರಂಭಿಕ ಯಶಸ್ಸು ಕಂಡಿತು.

ಸಾಂಸ್ಕೃತಿಕ ಅನನ್ಯತೆ ಮತ್ತು ಹಲಗಲಿ ಬಂಡಾಯ ಕುರಿತು ನಡೆದ ಮೊದಲ ಗೋಷ್ಠಿ ಯಲ್ಲಿ ನಿಶ್ಯಸ್ತ್ರೀಕರಣ ಮತ್ತು ಭಾರತ ರಾಜಕೀಯ ಸ್ವಾತಂತ್ರ್ಯ ಕುರಿತು ಪ್ರಬಂಧ ಮಂಡನೆ ಯಾದವು. ಮಂಡನೆಕಾರರು ಪ್ರಾರಂಭದಲ್ಲಿ ಇಡೀ ಭಾರತದ ರಾಜಕೀಯ ಸ್ವಾತಂತ್ರ ಪರಿಚಯಿಸುವ ಪ್ರಯತ್ನ ಮಾಡಿದರು. ಕೊನೆಯಲ್ಲಿಯಾದರೂ ಹಲಗಲಿ ಬಂಡಾಯಕ್ಕೆ ಕೇಂದ್ರೀಕರಿಸಿದ್ದು ಯಥೋಚಿತವಾಗಿತ್ತು.

ಆಚರಣಾತ್ಮಕ ನೆಲೆಗಳ ಕುರಿತು ನಡೆದ ೩ನೇ ಗೋಷ್ಠಿಯಲ್ಲಿ ನಂಬಿಕೆ, ವಿಧಿ-ನಿಷೇಧ ಗಳು, ದೈವಗಳ ಲೋಕ, ಜಾತ್ರೆ, ಉತ್ಸವಗಳು, ಸಾಂಸ್ಕೃತಿಕ ವೀರರ ಕುರಿತು ಮಂಡನೆಯಾದ ಪ್ರಬಂಧಗಳು ನಮ್ಮ ಭವ್ಯಪರಂಪರೆಯ ವಿಶಿಷ್ಟತೆಯನ್ನು ಪುನರಾವಲೋಕನಗೊಳಿಸಿದವು. ಸಂಶೋಧನ ವಿದ್ಯಾರ್ಥಿಗಳ ಮತ್ತು ಸಭಿಕರ ಚರ್ಚೆಗಳು ಗೋಷ್ಠಿಗೆ ಮೆರಗು ನೀಡುತ್ತಿದ್ದವು.

ಬಾಗಲಕೋಟೆ ಪರಿಸರದ ವಾಲ್ಮೀಕಿ ಸಮುದಾಯದ ಸ್ಥಿತಿಗತಿಗಳ ಕುರಿತು ನಡೆದ ೨ನೇ ಗೋಷ್ಠಿಯಲ್ಲಿ ಚಾರಿತ್ರಿಕನೆಲೆ, ಸಾಮಾಜಿಕ ಜೀವನ, ಜಾನಪದ ಸಾಹಿತ್ಯ ಹಾಗೂ ಕಲೆಗಳು ಮಹಿಳಾ ಸಂವೇದನೆ, ಲೋಕೋಪಯೋಗಿ ಕೊಡುಗೆಗಳು ಕುರಿತು ಪ್ರಬಂಧ ಮಂಡನೆಯಾಗಿದ್ದು ಜಿಲ್ಲೆಯ ವಾಲ್ಮೀಕಿ ಸಮುದಾಯದ ಸ್ಥಿತಿಗತಿಗಳನ್ನು ಅನಾವರಣ ಗೊಳಿಸುವಂತಿದ್ದವು. ಅದರಲ್ಲಿಯ ಕೆಲ ಪ್ರಬಂಧಗಳು ಹಲಗಲಿ ಬಂಡಾಯ ಪ್ರಸ್ಥಾಪಿಸದೇ ಇರುವದು ಅದನ್ನು ಪ್ರತಿಕ್ರಿಯೆದಾರರು ಮತ್ತು ಸಭಿಕರು ಚರ್ಚೆಯಲ್ಲಿ ಗಮನಕ್ಕೆ ತಂದಿದ್ದು ಯಥೋಚಿತವಾಗಿತ್ತು. ಅಧ್ಯಕ್ಷತೆವಹಿಸಿದ ಕಂಠಿ ಹನುಮಂತರಾಯರ ಅನುಭವದ ನುಡಿಗಳು ಅರ್ಥಸದೃಶವಾಗಿದ್ದವು. ಆಧುನಿಕ ಜಗತ್ತು ಹಾಗೂ ತಳಸಮುದಾಯಗಳ ಕುರಿತು ನಡೆದ ೪ನೇ ವಿಶೇಷಗೋಷ್ಠಿಯಲ್ಲಿ ೧೪ ಪ್ರಬಂಧಗಳು ಮಂಡನೆಯಾದವು. ಪ್ರತಿಯೊಂದು ಪ್ರಬಂಧವು ಒಂದೊಂದು ಕವಲೊಡೆದು, ಜಾಗತೀಕರಣದಿಂದ ತಳಸಮುದಾಯಗಳ ಮೇಲೆ ಆದ ಪರಿಣಾಮವನ್ನು ಎಳೆಎಳೆಯಾಗಿ ಬಿಚ್ಚಿಟ್ಟವು. ಜೊತೆಗೆ ಗೋಷ್ಠಿ ಕೇವಲ ವಾಲ್ಮೀಕಿ ಸಮುದಾಯಕ್ಕೆ ಸೀಮಿತಗೊಳ್ಳದೆ ಸಮಾಜದ ಎಲ್ಲಾ ಸಮುದಾಯಗಳ ಕುರಿತು ಚಿಂತನೆ ಮಾಡಿದ್ದು ಸಮಯ ಪ್ರಜ್ಞೆಯನ್ನು ಸಾಕಾರಗೊಳಿಸಿದ್ದು ವಿಶೇಷವಾಗಿವೆ. ಬಹುತೇಕ ಎಲ್ಲ ಪ್ರಬಂಧಕಾರರು ಜಾಗತೀಕರಣವನ್ನು ವಿರೋಧಿಸಿದ್ದು ಎದ್ದು ಕಾಣುತ್ತಿತ್ತು. ಇದನ್ನು ಗಮನಿಸಿದ ಭಿಕರು ಪ್ರಶ್ನೆಗಳ ಸುರಿಮಳೆಗೈದು ಜಾಗತೀಕರಣ ಅಭಿವೃದ್ದಿಗೆ ಪೂರಕ ಎಂದು ಸಮರ್ಥಿಸಿದ್ದು ಚರ್ಚೆಯ ವಸ್ತು. ಕೊನೆಯಲ್ಲಿ ಪತ್ರಕರ್ತರಾದ ವೀರೇಂದ್ರಶೀಲವಂತರ ಅವರು ಚರ್ಚೆಯನ್ನು ಸಮನ್ವಯಗೊಳಿಸಿದ್ದು ಅರ್ಥಪೂರ್ಣವಾಗಿದೆ.

ಸಿಂಧೂರ ಲಕ್ಷ್ಮಣ ಹಾಗೂ ಸಂಘರ್ಷದ ಸಂಕಥನದ ೫ನೇಗೋಷ್ಠಿ ಪ್ರಾರಂಭವಾಗುವ ಮೊದಲು ಸಿಂಧೂರ ಲಕ್ಷ್ಮಣನ ಕೊಲೆಯಾದ ಸ್ಥಳ ಕಪ್ಪರಪಡಿಗೆ ಹೋಗುವ ಮೂಲಕ ಲಕ್ಷ್ಮಣನ ಕಾರ್ಯಕ್ಷೇತ್ರ, ಜೀವನವಿಧಾನ, ಕೊಲೆಯ ಸಂಚು ಕುರಿತು ಪೀಠದ ಸಂಚಾಲಕ ರಾದ ಡಾ. ಮಂಜುನಾಥ ಬೇವಿನಕಟ್ಟಿಯವರು, ಡಾ.ವೀರೇಶ ಬಡಿಗೇರ ಅವರು ಸಂಶೋಧನಾ ವಿದ್ಯಾರ್ಥಿಗಳಿಗೆ ವಿವರಿಸಿದ್ದು ಅವರನ್ನು ಗೋಷ್ಠಿಗೆ ಹುರಿದುಂಬಿಸಿವು. ಅದಕ್ಕೆ ಪೂರಕವಾಗಿ ಗೋಷ್ಠಿಯಲ್ಲಿ ತಳವಾರನಾಗಿ, ರೈತನಾಗಿ, ಹೋರಾಟಗಾರನಾಗಿ, ಸಾಹಸಿಯಾಗಿ ಸ್ವಾಭಿಮಾನಿಯಾಗಿ, ದುರಂತನಾಯಕನಾಗಿ, ವಿವಿಧಮುಖಗಳಲ್ಲಿ ಲಕ್ಷ್ಮಣನೇ ಅವತರಿಸಿ ಬಂದಿದ್ದಾನೆ ಎನ್ನುವ ರೀತಿಯಲ್ಲಿ ಮಂಡನೆಯಾದ ಪ್ರಬಂಧಗಳು ಸಭಿಕರನ್ನು ರೋಮಾಂಚನ ಗೊಳಿಸುವಂತಿದ್ದವು. ಸಿಂಧೂರಲಕ್ಷ್ಮಣ ಮಹಾಕಾವ್ಯದ ಸಂಪಾದಕರಾದ ಡಾ. ಆರ್.ಸಿ. ಮುದ್ದೇಬಿಹಾಳರ ಅದ್ಯಕ್ಷೀಯಭಾಷಣಗೋಷ್ಠಿಗೆ ವಿಶೇಷಕಳೆ.

ಕೊನೆಯಲ್ಲಿ ಶ್ರೀಗಳ ಸಾನಿಧ್ಯದಲ್ಲಿ ನಡೆದ ಸಭೆಯಲ್ಲಿ ಸಮಾರೋಪಭಾಷಣ ಮಾಡಿದ್ದು ಡಾ.ವೀರೇಶ ಬಡಿಗೇರ ಅವರು ಅಧ್ಯಕ್ಷೀಯ ಭಾಷಣ ಮಾಡಿದ ಡಾ.ಶ್ರೀರಾಮ ಇಟ್ಟಣ್ಣ ಅವರು ೩ ದಿನಗಳ ಗೋಷ್ಠಿಯಲ್ಲಿ ಫಲಿತಗೊಂಡ ಅಂಶಗಳ ಮೇಲೆ ಬೆಳಕು ಚೆಲ್ಲಿದರು. ವಿಚಾರಸಂಕಿರಣದ ಯಶಸ್ಸಿಗೆ ಸಹಾಯ ಸಹಕಾರ ನೀಡಿದ ಸರ್ವರನ್ನು ಸನ್ಮಾನಿಸಿ ಅವರ ಮನ ಗೆದ್ದಿರುವುದು ಸುವ್ಯವಸ್ಥಿತ ಸಂಘಟನೆಯ ಸಂಕೇತವಾಗಿತ್ತು.

ಹೀಗೆ ಪ್ರತಿದಿನವೂ ಗೋಷ್ಠಿ ಮುಗಿಯುತ್ತಿದ್ದಂತೆ ಶ್ರೀದಿಗಂಬರೇಶ್ವರ ಸ್ವಾಮೀಜಿಯ ಮಹಾಪ್ರಸಾದ ನಮ್ಮ ಉದರರಾಜನ ಹಸಿವನ್ನು ತಣಿಸದರೆ, ಜನಪದ ಕಲೆಗಳ ಪ್ರದರ್ಶನ ನಮ್ಮ ಮನತಣಿಸಲು ಸಜ್ಜಾಗಿದ್ದವು. ಕರಡಿಮಜಲು, ಲಾವಣಿ, ಜನಪದಗೀತೆ, ಸೋಬಾನ ಪದ ವೀರಗೀತೆ ಮುಂತಾದ ಕಲಾಕಾರರು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದು ೩ ದಿನಗಳವರೆಗೆ ನಡೆದ ಈ ವಿಚಾರಸಂಕಿರಣದಲ್ಲಿ ಜಾತಿಮತ ಪಂಥವೆಂಬ ಭಿನ್ನತೆಯಿಲ್ಲದೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಪಾಲ್ಗೊಂಡು ಜನರು ಕಾರ್ಯಕ್ರಮ ಯಶಸ್ವಿಗೊಳಿಸಿದ್ದನ್ನು ನೋಡಿದರೆ ವಿಚಾರಸಂಕಿರಣ ಕೇವಲ ವಿಶ್ವವಿದ್ಯಾಲಯಕ್ಕೆ ಅಥವಾ ವಾಲ್ಮೀಕಿ ಸಮುದಾಯಕ್ಕೆ ಸೀಮಿತವಲ್ಲ. ಅದು ಸಮಷ್ಠಿಸ್ವತ್ತು ಎಂಬುದನ್ನು ಸಾದರಪಡಿಸುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಹನಿಹನಿಕೂಡಿದರೆ ಹಳ್ಳ ತೆನಿತೆನಿ ಕೂಡಿದರೆ ರಾಶಿ ಎನ್ನುವಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಳಗ ಹಾಗೂ ನಾಗರಾಳ ದಿಬಂಗರೇಶ್ವರಮಠ ಬಾಗಲಕೋಟ ಜಿಲ್ಲೆಯ ಜನರ ಅರ್ಥಪೂರ್ಣ ಪಾಲ್ಗೊಳ್ಳುವಿಕೆಯು ತೆನಿತೆನಿಯ ರೀತಿಯಲ್ಲಿ ಸಂಗ್ರಹಗೊಂಡು ವಿಚಾರಸಂಕಿರಣದಲ್ಲಿ ಜ್ಞಾನರಾಶಿಯನ್ನು ಮಾಡಿ ಅದನ್ನು ಸಂಶೋಧಕರ ಸಭಿಕರ ಪಾಲ್ಗೊಂಡ ಸಮಸ್ತ ಜನರ ಮನದಲ್ಲಿ ಬಿತ್ತುವ ಮೂಲಕ ಸಾಂಸ್ಕೃತಿಕ ಬೆಳೆಯನ್ನು ಬೆಳೆಯುವಲ್ಲಿ ವಿಚಾರಸಂಕಿರಣ ಯಶಸ್ವಿಯಾಗಿದೆ ಎಂದು ಹೇಳಬಹುದು.

* * *