ತಳಸಮುದಾಯದಗಳ ಅಭಿವೃದ್ದಿ ಅಂದರೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಭಿವೃದ್ದಿ ಸಾಧಿಸುವುದಾಗಿದೆ ಮತ್ತು ಜನತೆಯಲ್ಲಿ ತಿಳುವಳಿಕೆಯ ಜ್ಞಾನ ಬೆಳೆಸಬೇಕೆಂದರೆ ವಿಚಾರವಂತರು ವಿಚಾರ ಸಂಕಿರಣಗಳನ್ನು ಏರ್ಪಡಿಸಿ ತಳ ಸಮುದಾಯಗಳ ಬಗೆಗೆ ತಿಳಿಸುವುದರ ಮೂಲಕ ಆ ಸಮುದಾಯಗಳನ್ನು ಬೆಳಕಿಗೆ ತರುವುದಾಗಿದೆ.

ಇಂತಹ ವಿಚಾರ ಸಂಕಿರಣ ಕನ್ನಡ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠ ಹಾಗೂ ನಾಗರಾಳದ ದಿಗಂಬರೇಶ್ವರ ಮಠದ ಸಹಯೋಗದೊಂದಿಗೆ ಮೂರು ದಿನಗಳವರೆಗೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕು ನಾಗರಾಳ ಗ್ರಾಮದಲ್ಲಿ ಜರುಗಿತು. “ಸಾಂಸ್ಕೃತಿಕ ಅನನ್ಯತೆ ಮತ್ತು ಹಲಗಲಿ ಬಂಡಾಯ” ವಿಷಯಕ್ಕೆ ಸಂಬಂಧಿಸಿದಂತೆ ೩ ದಿನಗಳ ಕಾಲ ೫ ಗೋಷ್ಠಿಯಲ್ಲಿ ಹಲವಾರು ವಿದ್ವಾಂಸರು ವಿಚಾರಗಳನ್ನು ಮಂಡಿಸಿದರು. ವಿಚಾರ ಸಂಕಿರಣ ದಲ್ಲಿ ಸಾಂಸ್ಕೃತಿಕ ಹಿನ್ನೆಲೆಯನ್ನು ಇಟ್ಟುಕೊಂಡು ಹಲಗಲಿ ಬಂಡಾಯದ ಬಗೆಗೆ ಹಾಗೂ ಬೇಡಸಮುದಾಯದ ಸಾಂಸ್ಕೃತಿಕ ನಾಯಕನಾದ ಸಿಂಧೂರ ಲಕ್ಷ್ಮಣನ ವಿಚಾರವನ್ನು ವ್ಯಕ್ತಪಡಿಸುವುದಾಗಿತ್ತು.

ಭಾರತ ಸುಮಾರು ಮೂರು ಭಾರಿ ವಿದೇಶೀಯರ ಆಕ್ರಮಣಕ್ಕೆ ಒಳಗಾಗಿ ಪ್ರಾಚೀನ ಕಾಲದಲ್ಲಿ ಆರ್ಯರು ಮಧ್ಯಯುಗದಲ್ಲಿ ಮುಸ್ಲಿಂರು ಮತ್ತು ಆಧುನಿಕ ಯುಗದಲ್ಲಿ ಬ್ರಿಟೀಷರ ಆಕ್ರಮಣಕ್ಕೆ ತುತ್ತಾಗಿ ತತ್ತರಿಸಿ ಹೋಗಿದೆ. ಆರ್ಯರು ಭಾರತಕ್ಕೆ ಬಂದ ನಂತರ ಭಾರತದ ಮೂಲನಿವಾಸಿಗಳಾದ ದ್ರಾವಿಡರು ಮೂಲೆಗುಂಪಾದರು. ದ್ರಾವಿಡರು ರಾಕ್ಷಸ ಕುಲಕ್ಕೆ ಸೇರಿದವರು ಅವರನ್ನು ನಾಗರೀಕರಂತೆ ನೋಡದೆ ಅಸ್ಪೃಶ್ಯರ ಗುಂಪಿಗೆ ಸೇರಿಸಿದರು. ಅದೇರೀತಿ ಮಧ್ಯಯುಗದಲ್ಲಿ ಮುಸ್ಲಿಂರ ದಾಳಿಗೆ ಒಳಗಾದಾಗ ಅವರು ಇಡೀ ಭಾರತೀಯ ಸಂಸ್ಕೃತಿಗೆ ದಕ್ಕೆ ತಂದರು. ನಂತರ ಬ್ರಿಟೀಷರ ಆಕ್ರಮಣದಿಂದ ಇಡೀ ಭಾರತ ಅವರ ಕಪಿಮುಷ್ಠಿಯಲ್ಲಿ ಶತಶತಮಾನಗಳವರೆಗೆ ನರಳಿತು.

ಬೇಡ ಸಮುದಾಯ ಅನಾದಿ ಕಾಲದಿಂದಲೂ ತನ್ನದೇ ಆದಂತ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ವಾಲ್ಮೀಕಿ ಮಹರ್ಷಿ ಬರೆದ ರಾಮಾಯಣದ ಮೂಲಕ ಜಾಗತಿಕ ಮಟ್ಟದಲ್ಲಿ ಹಿಂದೂ ಪರಿಕಲ್ಪನೆಗೆ ಮುನ್ನುಡಿಯಾದರು. ಈ ಬೇಡ ಸಮುದಾಯ ಬೇಟೆಯಾಡುವುದನ್ನೇ ತನ್ನ ಮೂಲ ಕಸುಬನ್ನಾಗಿಸಿಕೊಂಡು ಗುಡ್ಡಗಾಡುಗಳಲ್ಲಿ ನೆಲೆಸಿದ್ದರು. ಅದೇ ರೀತಿ ಯುದ್ಧ ಮಾಡುವುದರಲ್ಲಿಯೂ ಅಷ್ಠೇ ನಿಫುಣರಾಗಿದ್ದರು. ಭಾರತದ ರಾಜವಂಶಗಳಾದ ಮೌರ್ಯ, ಕದಂಬ, ಗಂಗ, ರಾಷ್ಟ್ರಕೂಟ, ಚಾಲುಕ್ಯ ಮತ್ತು ವಿಜಯನಗರ ಅರಸರ ಕಾಲದಲ್ಲಿ ಬೇಡ ಸಮುದಾಯವನ್ನು ಮೀಸಲು ಪಡೆಯಾಗಿ ಇಟ್ಟುಕೊಳ್ಳುತ್ತಿದ್ದರು. ನಂತರ ಈ ಬೇಡಸಮು ದಾಯದ ನಾಯಕರು ಕೆಲವೊಂದು ಪಾಳೆಪಟ್ಟುಗಳನ್ನು ಕಟ್ಟಿಕೊಂಡು ಪಾಳೆಯಗಾರರಾಗಿ ಅಧಿಕಾರ ನಡೆಸಿದ್ದಾರೆ. ಭಾರತಕ್ಕೆ ಬ್ರಿಟೀಷರ ಆಗಮನ ಆದ ಮೇಲೆ ಅವರ ಕುತಂತ್ರ ನೀತಿ ಯಿಂದ ಇಡೀ ಭಾರತವನ್ನೇ ತಮ್ಮದಾಗಿಸಿಕೊಂಡು ಸಂಪೂರ್ಣವಾಗಿ ಭಾರತವನ್ನು ಆಳತೊಡ ಗಿದ ಸಂದರ್ಭದಲ್ಲಿ ಬ್ರಿಟೀಷರ ವಿರುದ್ಧ ಹೋರಾಟದ ಕಿಚ್ಚನ್ನು ಮೂಡಿಸಿದವರೆಂದರೆ ಹಲಗಲಿ ಬೇಡರು. ಬ್ರಿಟೀಷರು ತಮ್ಮ ಉದ್ದೇಶ ಸಾಧನೆಗೋಸ್ಕರ ಶಸ್ತ್ರಾಸ್ತ್ರನಿಷೇಧ ಕಾಯ್ದೆ ಯನ್ನು ಜಾರಿಗೆ ತಂದು ಅವರ ಆಯುಧಗಳೆನ್ನೆಲ್ಲಾ ಕಿತ್ತುಕೊಂಡರು. ಆಗ ಹಲಗಲಿ ಬೇಡರ ಮುಖಂಡರಾದ ಜಡಗ, ಬಾಲ ಇವರ ನೇತೃತ್ವದಲ್ಲಿ ಹೋರಾಟ ಪ್ರಾರಂಭಿಸಿದರು. ಈ ಹೋರಾಟದ ಕಿಚ್ಚು ಹೆಚ್ಚು ವಿಸೃತವಾಗುತ್ತಾ ಹೋಯಿತು. ಇಂತಹ ಹಲವಾರು ವಿಷಯಗಳ ಬಗ್ಗೆ ನಾಗರಾಳ ವಿಚಾರ ಸಂಕಿರಣದಲ್ಲಿ ಚರ್ಚಿಸಲಾಯಿತು.

“ಸಾಂಸ್ಕೃತಿಕ ಅನನ್ಯತೆ ಮತ್ತು ಹಲಗಲಿ ಬಂಡಾಯ” ಎಂಬ ವಿಷಯ ಕುರಿತು ಮೊದಲ ಗೋಷ್ಠಿಯಲ್ಲಿ ಹಲವಾರು ಪ್ರಬಂಧಕಾರರು ವಿಚಾರವನ್ನು ವ್ಯಕ್ತಪಡಿಸಿದರು. ನಿಶ್ಯಸ್ತ್ರೀಕರಣ ಕಾಯಿದೆಯಿಂದ ಹಲಗಲಿಯ ಬೇಡ ಸಮುದಾಯದಲ್ಲಿ ಉಂಟಾದ ಭಾವನಾತ್ಮಕ ವಿಚಾರಗಳ ಬಗ್ಗೆ ಹಲಗಲಿ ಬಂಡಾಯ ಭಾರತದ ರಾಜಕೀಯ ಸ್ವಾತಂತ್ರ್ಯಕ್ಕೆ ಹೇಗೆ ಪೂರಕವಾಯಿತು. ಇಂತಹ ಬಂಡಾಯ ಜಾತಿ ಮತ್ತು ವರ್ಗದ ನೆಲೆಯನ್ನು ಹೇಗೆ ಕಂಡುಕೊಂಡಿತು, ಸಾಮ್ರಾಜ್ಯ ಶಾಹಿಗಳು ತಮ್ಮ ದಿನ ನಿತ್ಯದ ಬದುಕಿನ ಅಸ್ತ್ರಗಳನ್ನು ಕಸಿದುಕೊಂಡು ಸ್ಥಳೀಯರನ್ನು ಕಷ್ಟಕ್ಕೆ ಸಿಲುಕಿಸಿ ಅವರ ಬದುಕನ್ನೇ ಬದಲಾವಣೆಯ ಅಂಚಿಗೆ ತಂದು ನಿಲ್ಲಿಸಿದರು. ಇಂತಹ ವಿಚಾರಗಳನ್ನು ಈ ಗೋಷ್ಠಿಯಲ್ಲಿ ಚರ್ಚಿಸಲಾಯಿತು. ಒಟ್ಟಾರೆಯಾಗಿ ನೋಡುವುದಾದರೆ ಸಾಮ್ರಾಜ್ಯಶಾಹಿವರ್ಗ ಯಾವ ರೀತಿ ತನ್ನ ಹಿತ ಸಾಧಿಸಿಕೊಳ್ಳುತ್ತದೆ, ಇದರಿಂದ ಸಾಮಾನ್ಯ ಜನತೆಗೆ ಅನ್ಯಾಯವಾಗುವುದು ಕಂಡುಬರುತ್ತದೆ.

ಸಂಕಿರಣದ ಎರಡನೆಯ ಗೋಷ್ಠಿಯಲ್ಲಿ “ಬಾಗಲಕೋಟೆ ಪರಿಸರದ ವಾಲ್ಮೀಕಿ ಸಮುದಾಯದ ಸ್ಥಿತಿಗತಿಗಳು” ಎಂಬ ವಿಷಯ ಕುರಿತು ಹಲವಾರು ಪ್ರಬಂಧಕಾರರು ಪ್ರಬಂಧ ಮಂಡಿಸಿದರು. ಈ ಬೇಡಸಮುದಾಯದವರು ಸಾಕಷ್ಟು ಸಾಮರ್ಥ್ಯಉಳ್ಳವರಾಗಿದ್ದಾರೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಉಳಿಸಿಕೊಳ್ಳುತ್ತಿಲ್ಲ ಹಾಗಾಗಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ಇದಕ್ಕೆ ಅತಿಮುಖ್ಯ ಕಾರಣ ಇವರು ಪೂರ್ವಾಗ್ರಹಕ್ಕೆ ಒಳಗಾಗಿರುವುದು. ತಮ್ಮ ಪೂರ್ವಿಕರ ಆಚರಣೆಗಳನ್ನು ಇನ್ನೂ ಕೂಡ ಆಚರಿಸುತ್ತಿದ್ದಾರೆ ಹಾಗೂ ರಾಜಕೀಯತೆ ಮತ್ತು ಉದ್ಯೋಗದಲ್ಲಿ ಅಸಮಾನತೆಗಳು ಹೆಚ್ಚಿನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಖೇದದ ಸಂಗತಿ. ಆದಾಗ್ಯೂ ಇತ್ತಿತ್ತಲಾಗಿ ಸಮಾಜದ ಎಲ್ಲಾ ಕ್ಷೇತ್ರದಲ್ಲೂ ಪ್ರಗತಿಯತ್ತ ದಾಪುಗಾಲು ಇಡುತ್ತಿದೆ ಎಂಬ ಅಭಿಪ್ರಾಯಗಳು ಗೋಷ್ಠಿಯಲ್ಲಿ ಕೇಳಿಬಂದವು.

“ಆಚರಣಾತ್ಮಕ ನೆಲೆಗಳು” ಎಂಬ ವಿಷಯ ಕುರಿತ ಚರ್ಚೆ ೩ನೇ ಗೋಷಿಯಲ್ಲಿ ವೇದಿಕೆ ಸಿದ್ಧವಾಗಿತ್ತು. ಬೇಡ ಸಮುದಾಯ ಈ ದೈವಿ ಕಲ್ಪನೆಯಿಂದ ಯಾವ ರೀತಿ ದಿನನಿತ್ಯದ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ ಮತ್ತು ದೈವಿ ಕಲ್ಪನೆ ಸಮುದಾಯದಲ್ಲಿ ಯಾವ ರೀತಿ ಬೇರೂರಿದೆ ಎಂದರೆ ತಮ್ಮ ಪೂರ್ವಿಕರು ಆಚರಿಸಿಕೊಂಡು ಬರುತ್ತಿದ್ದ ಜಾತ್ರೆಗಳು, ಉತ್ಸವಗಳು, ಹಬ್ಬಗಳು ಮುಂತಾದ ಆಚರಣೆಗಳನ್ನು ಬಿಡದೆ ಆಚರಿಸಿಕೊಂಡು ಬರುತ್ತಿರುವುದು ಅಂದರೆ ತನ್ನ ಬಳಿ ಹಣ ಇಲ್ಲದಿದ್ದರೂ ಕೂಡ ಬಂಡವಾಳಗಾರರಿಗೆ ತಮ್ಮ ಮಕ್ಕಳನ್ನು ಒತ್ತೆ ಇಟ್ಟು ಅವರಿಂದ ಹಣಪಡೆದು ಈ ಮೇಲ್ಕಂಡವುಗಳನ್ನು ಆಚರಿಸುವುದು ಇಂದಿಗೂ ಬೆಳೆದು ಬರುತ್ತಿರುವುದು ವಿಸ್ಮಯವಾಗಿದೆ. ಅಂದರೆ ನಂಬಿಕೆ ಸಂಪ್ರದಾಯಕ್ಕೆ ಅಂಟಿಕೊಂಡು ಪಾರಂಪರಿಕ ನೆಲೆಯಲ್ಲಿ ಬದುಕು ನಡೆಸುವುದು ಕಂಡು ಬರುತ್ತದೆ. ಈ ಕಾರಣದಿಂದ ಈ ಸಮುದಾಯ ಅಭಿವೃದ್ದಿಯ ಮಟ್ಟವನ್ನು ಸಾಧಿಸುವಲ್ಲಿ ನಂಬಿಕೆ, ನಿಷ್ಠೆ ಪದ್ಧತಿಗಳನ್ನು ಕೈಬಿಟ್ಟಾಗ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಹೇಳಬಹುದು.

ಸಂಕಿರಣದ ನಾಲ್ಕನೇ ಗೋಷ್ಠಿ “ಆಧುನಿಕ ಜಗತ್ತು ಮತ್ತು ತಳಸಮುದಾಯಗಳು” ಎಂಬ ವಿಷಯದ ಮೇಲೆ ಹಲವಾರು ಪ್ರಬಂಧಗಳು ಮಂಡನೆಯಾದವು. ಆಧುನೀಕರಣ ಅಥವಾ ಜಾಗತೀಕರಣದ ಹಾವಳಿಯಿಂದ ಇಂದು ತಳಸಮುದಾಯಗಳು ತಮ್ಮ ಮೂಲ ಕಸುಬನ್ನೆ ದೂರತಳ್ಳಲ್ಪಟ್ಟಿವೆ. ಇಂದರಿಂದ ಅವರ ಜೀವನ ಶೋಚನೀಯಸ್ಥಿತಿಗೆ ಬಂದು ನಿಂತಿದೆ. ಇಂದು ಈ ತಳಸಮುದಾಯಗಳು ತಮ್ಮ ಮೂಲ ಕಸುಬುಗಳನ್ನು ಮರೆತಿರುವುದ ರಿಂದ ವರ್ಗಸಮಾಜದಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಲು ಆಗುತ್ತಿಲ್ಲ. ಜಾಗತೀಕರಣ ಪ್ರಭಾವದಿಂದ ಗುಡಿ ಕೈಗಾರಿಕೆಗಳು ಮೂಲೆಗುಂಪಾಗಿವೆ ಹಾಗೂ ಯಾಂತ್ರೀಕರಣದಿಂದ ಕೆಲವೇ ಕೆಲವು ವರ್ಗಕ್ಕೆ ಮಾತ್ರ ಅವಕಾಶ ಸಿಗುವುದರಿಂದ ಈ ವರ್ಗಗಳು ಇದರಿಂದ ವಂಚಿತವಾಗುತ್ತಿವೆ. ಹಾಗಾಗಿ ಬಂಡವಾಳದಲ್ಲಿ ಸಾಕಷ್ಟು ರೀತಿ ಅಸಮಾನತೆ ಕಾಣಬಹು ದಾಗಿದೆ.

ಸಂಕಿರಣದ ಕೊನೆ ಅಥವ ಐದನೆಯ ಗೋಷ್ಠಿಯಲ್ಲಿ “ಸಿಂಧೂರ ಲಕ್ಷ್ಮಣ ಹಾಗೂ ಸಂಘರ್ಷದ ಸಂಕಥನ” ಎಂಬ ವಿಷಯದ ಬಗ್ಗೆ ಚರ್ಚಿಸಲಾಯಿತು. ಸಿಂಧೂರ ಲಕ್ಷ್ಮಣ ಬೇಡ ಸಮುದಾಯದ ಸಾಂಸ್ಕೃತಿಕ ವೀರನಾಗಿದ್ದು ಅಳಿಯಗಳ ಹಿನ್ನೆಲೆಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡದ್ದು ಮತ್ತು ಇವನು ಸಮಾಜಸೇವಕನಾಗಿದ್ದು ತಮ್ಮ ಬದುಕನ್ನು ಬಂಡವಾಳಶಾಹಿಗಳ ವಿರುದ್ಧ ಹೋರಾಡಿ ತಳಸಮುದಾಯಗಳ ಬದುಕಿನಲ್ಲಿ ಹೆಸರನ್ನು ಉಳಿಸಿಕೊಂಡಂತ ವೀರನಾಯಕ ಎಂದು ಹೇಳಬಹುದು.

ಸಾಮ್ರಾಜ್ಯಶಾಹಿ ಚರಿತ್ರೆಕಾರರು ಸಿಂಧೂರ ಲಕ್ಷ್ಮಣನನ್ನು ಕಳ್ಳ, ದರೋಡೆಕೋರ ಎಂದೆಲ್ಲಾ ಕರೆದಿದ್ದಾರೆ. ನಿಜವಾಗಿಯೂ ಅವನು ದರೋಡೆಕೋರನೇ ಆಗಿದ್ದರೆ ಸುಖದ ಸುಪ್ಪತ್ತಿಗೆಯಲ್ಲಿ ಜೀವಿಸುತ್ತಿದ್ದ. ಆದರೆ ಲಕ್ಷ್ಮಣ ತಮ್ಮ ಸಮುದಾಯದ ಜನ ಆಹಾರ ವಿಲ್ಲದೆ ನರಳುತ್ತಿದ್ದಂತ ಸಂದರ್ಭದಲ್ಲಿ ತನ್ನ ಜನತೆಯನ್ನು ಸಾಕುವುದಕ್ಕೋಸ್ಕರ ಹಣವಂತ ರಲ್ಲಿ ಹಣಕೇಳುತ್ತಿದ್ದ. ಅವರು ಕೊಡದೇ ಇದ್ದಂತಹ ಸಂದರ್ಭದಲ್ಲಿ ಅವರಿಗೆ ತಿಳಿಸಿ ಅವರ ಮನೆಗೆ ನುಗ್ಗಿ ಹಣತಂದು ತಮ್ಮ ಬಡ ಕುಟುಂಬಗಳಿಗೆ ಹಂಚುತ್ತಿದ್ದ. ಸಿಂಧೂರ ಲಕ್ಷ್ಮಣ ತಳವಾರನಾಗಿ, ರೈತನ ಮಗನಾಗಿ, ಪರೋಪಕಾರಿಯಾಗಿ ನಂಬಿಕೆಗಳ ಹಿನ್ನೆಲೆಯಲ್ಲಿ ಬದುಕಿದಂತವನು ಹಾಗೂ ತಮ್ಮ ಆರಾಧ್ಯ ದೇವತೆ “ಕಪ್ಪರ ಪಡಿಯವ್ವ”ನ ಮಡಿಲಲ್ಲಿ ತನ್ನ ಪ್ರಾಣಕೊಟ್ಟಂತ ವೀರ ಯೋಧ ಎಂದು ಹೇಳಬಹುದು. ಇಂತಹ ಹಲವಾರು ವಿಚಾರಗಳು ಈಗೋಷ್ಠಿಯಲ್ಲಿ ಚರ್ಚೆಗೆ ಒಳಪಟ್ಟವು.

ಒಟ್ಟಿನಲ್ಲಿ ಈ ಮೂರು ದಿನಗಳ ವಿಚಾರಸಂಕಿರಣ ಬಹಳ ಉತ್ತಮವಾಗಿ ನಡೆದು ಯಶಸ್ವಿಯಾಯಿತು. ಸಂಕಿರಣದ ಗೋಷ್ಠಿಗಳ ಬಿಡುವಿನ ವೇಳೆ ಮತ್ತು ದಿನದ ಸಾಯಂಕಾಲದ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅಂದರೆ ಜನಪದ ಸಾಹಿತ್ಯ, ಸೋಬಾನೆ ಪದ, ಭಜನೆ, ಲಾವಣಿ, ಡೊಳ್ಳು ಕುಣಿತ, ವಾದ್ಯ ಭಾರಿಸುವುದು, ಈ ರೀತಿಯ ಜನಪದ ಕಲೆಗಳನ್ನು ನಾಗರಾಳ ಹಾಗೂ ಸುತ್ತಮುತ್ತಲ ಜನತೆ ಪ್ರದರ್ಶಿಸಿದರು. ಇದರಿಂದ ಆ ಭಾಗದಲ್ಲಿ ಇನ್ನೂ ಕೂಡ ಜನಪದ ಕಲೆಗಳು ಜೀವಂತವಾಗಿರುವುದು ಕಂಡುಬರುತ್ತದೆ.

ಈ ಸಂಕಿರಣ ಯಶಸ್ವಿಯಾಗಲು ಮೂಲ ಪ್ರೇರಕರು ಕನ್ನಡ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಾಗರಾಳದ ದಿಗಂಬರೇಶ್ವರ ಮಠದ ಸ್ವಾಮಿಗಳು, ಸಂಘಟನಾಕಾರರು ನಾಗರಾಳ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಉತ್ತಮ ಪ್ರೋನೀಡಿದರು. ವಿಚಾರ ಸಂಕಿರಣಕ್ಕೆ ಬಂದ ಎಲ್ಲಾ ಅತಿಥಿಗಳಿಗೆ ಸ್ಥಳೀಯ ಸಂಪ್ರದಾಯಬದ್ದ ಊಟೋಪ ಚಾರ ನೀಡುವುದರ ಮೂಲಕ ತಮ್ಮ ಸಾಮಾಜಿಕ ಸ್ವಂತಿಕೆಯನ್ನು ಇನ್ನೂ ಉಳಿಸಿ ಬೆಳೆಸಿ ಕೊಂಡು ಬರುತ್ತಿರುವುದು ಗಮನಾರ್ಹವಾಗಿದೆ.

* * *

ಮೂರು ನೂರು ವರುಷಗಳ ಕಾಲ ದಕ್ಷಿಣ ಭಾರತದಲ್ಲಿ ಸೈನಿಕ-ಪ್ರಭುಗಳಾಗಿ ಅಖಂಡವಾಗಿ ವಿಜೃಂಭಿಸಿದ ನಾಯಕ ಪಾಳೆಯಗಾರರನ್ನು ನಿರ್ಲಕ್ಷಿಸುವುದು ಸರಿಯಲ್ಲ.
ಪ್ರೊ. ಲಕ್ಷ್ಮಣ್ ತೆಲಗಾವಿ