ಕಪ್ಪರ ಪಡಿಯವ್ವ ಪ್ರಧಾನವಾಗಿ ಒಂದು ಜಾನಪದ ದೇವತೆ. ಇದು ಸಾಂಸ್ಕೃತಿಕ ವಾಗಿಯೂ ತನ್ನದೇ ಆದ ಅನನ್ಯತೆಯನ್ನು ಪಡೆದಿದೆ. ದುರ್ಬಲರ ಪರವಾದ ಸಿಂಧೂರ ಲಕ್ಷ್ಮಣ ತನ್ನ ಸಂಘರ್ಷದ ಕೊನೆಯ ದಿನಗಳ ಬಹುಪಾಲನ್ನು ಕಳೆದದ್ದು ಕಪ್ಪರ ಪಡಿಯವ್ವನ ಸುತ್ತಮುತ್ತಲು. ಪಡಿಯವ್ವ ಇತಿಹಾಸದಲ್ಲಿ ದಾಖಲಾಗುವದೂ ಸಿಂಧೂರ ಲಕ್ಷ್ಮಣನ ಕಾರಣವಾಗಿಯೇ.

ಪಡಿಯವ್ವನ ಸುತ್ತಲಿನ ಭೌಗೋಳಿಕ ಪರಿಸರ ಲಕ್ಷ್ಮಣನಿಗೆ ರಕ್ಷಣೆಯನ್ನೊದಗಿಸಿದರೆ, ಪಡಿಯವ್ವ ಅವನಿಗೆ ಮಾನಸಿಕ ಸ್ಥೈರ್ಯ ತುಂಬಿದ ಶಕ್ತಿದೇವತೆ. ಕಪ್ಪರ ಪಡಿಯವ್ವನಿಗೆ ಬರುವುದು ಭಕ್ತ ಸಮೂಹವಾದರೂ ಐತಿಹಾಸಿಕ ವ್ಯಕ್ತಿಯಾದ ಸಿಂಧೂರ ಲಕ್ಷ್ಮಣನನ್ನು ಅಲ್ಲಿಗೆ ಬಂದವರಾರೂ ನೆನಿಸದೇ ಹೋಗಲಾಗುವುದಿಲ್ಲ. ಅಂಥ ಒಂದು ಅವಿನಾಭಾವ ಸಂಬಂಧ ಕಪ್ಪರ ಪಡಿಯವ್ವ ಮತ್ತು ಲಕ್ಷ್ಮಣನಿಗೆ.

ಕಪ್ಪರ ಪಡಿಯವ್ವ ನಾಗರಾಳ ಮತ್ತು ಸಿದ್ದಾಪುರ ನಡುವಿನ ಸೀಮೆಗೆ ಸೇರಿದ ಅರಣ್ಯ ಪ್ರದೇಶದಲ್ಲಿರುವ ದೇವತೆ. ದೇವಿಯ ಹೆಸರು ಪಡಿಯವ್ವ, ಕಪ್ಪರ ಎನ್ನುವದು ವಿಶೇಷಣ. ಪಡಿಯವ್ವನಿಗಿಂತ ಮುಂಚೆ ಈ ಪ್ರದೇಶವನ್ನು ಲಕ್ಷ್ಯದಲ್ಲಿರಿಸಿಕೊಂಡು ‘ಕಪ್ಪರ’ ಎನ್ನುವ ಪದವನ್ನಿಟ್ಟುಕೊಂಡು ಹೊರಟಾಗ ‘ಕಪ್ಪುರ’ ಎನ್ನುವ ಪದಕ್ಕೆ ಒಂದು ಜಾತಿಯ ಗಿಡ ಎಂಬರ್ಥ ನಿಘಂಟುವಿನಲ್ಲಿದೆ. ಇದನ್ನಾಧರಿಸಿ ನೋಡಿದಾಗ ‘ಕಪ್ಪುರ’ ಎನ್ನುವದು ‘Larency’ ಎಂಬ ಜಾತಿಯ, Cinnamum campher ಎಂಬವೈಜ್ಞಾನಿಕ ಹೆಸರುಳ್ಳ ಗಿಡ, ಇದೊಂದು ಔಷಧೀಯ ಗುಣವುಳ್ಳ ವೃಕ್ಷ ಎಂಬ ಮಾಹಿತಿ ದೊರೆಯುತ್ತದೆ. ಇದನ್ನನುಲಕ್ಷಿಸಿ ನೋಡಿದಾಗ ಒಂದು ಕಾಲಕ್ಕೆ ಅರಣ್ಯ ದಟ್ಟವಾಗಿದ್ದ ಕಾಲದಲ್ಲಿ ಪಡಿಯಮ್ಮನ ಆಸುಪಾಸಿ ನಲ್ಲಿ ಈ ಕಪ್ಪುರ ಗಿಡಗಳು ಹೇರಳವಾಗಿರಬಹುದು ಅಥವಾ ಆ ಪ್ರದೇಶದಲ್ಲಿ ವಿಶಿಷ್ಟವಾಗಿ  ಒಂದೇ ಒಂದು ಕಪ್ಪುರ ಗಿಡ ಇದ್ದಿರಲೂಬಹುದು. ಹೀಗಾಗಿ ಅರಣ್ಯದಲ್ಲಿ ಪಡಿಯವ್ವನಿರುವ ಸ್ಥಾನವನ್ನು Signify ಮಾಡಿಕೊಳ್ಳುವುದಕ್ಕೋಸ್ಕರ ಈ ಪಡಿಯವ್ವನನ್ನು ‘ಕಪ್ಪುರ ಪಡಿಯವ್ವ’ ಎಂದು ಗುರುತಿಸಿಕೊಂಡಿದ್ದು, ಕಾಲಾನಂತರದಲ್ಲಿ ಅರಣ್ಯವು ನಾಶವಾಗಿ ಕಪ್ಪುರ ಗಿಡಗಳೂ ಕಾಣದಂತಾದರೂ ರೂಢಿ ಬಲದಿಂದ ಕಪ್ಪುರ < ಕಪ್ಪರವಾಗಿದೆ. ಇನ್ನು ಪಡಿಯವ್ವ ಳಾಗಲು ಕಾರಣ ಇಲ್ಲಿಯ ದೇವಿಗೆ ಅರಣ್ಯ ಪ್ರದೇಶದಲ್ಲಿನ ಹಾಸು ‘ಪಡಿ’ಯಲ್ಲಿಯೇ ಮೂರ್ತರೂಪ ಕೊಟ್ಟಿದ್ದರಿಂದ ಪಡಿಯವ್ವಳಾಗಿದ್ದಾಳೆ. ಹೀಗೆ ವಿಶೇಷಣ, ನಾಮಪದ ಗಳೆರಡೂ ಸೇರಿ ಜನ ಮಾನಸದಲ್ಲಿ ಒಂದು ಶಕ್ತಿ ಸ್ವರೂಪವನ್ನು ಪಡೆದಿದೆ.

ಸ್ಥಳೀಯರು ಹೇಳುವ ಐತಿಹ್ಯದ ಪ್ರಕಾರ; ಇಲ್ಲಿರುವ ಈ ಪಡಿಯವ್ವ ಮೂಲತಃ ನಾಗರಾಳದವಳಲ್ಲ; ಗೋಕಾಕ ಹತ್ತಿರದ ಗೂಗಿಕೊಳ್ಳದಿಂದ ಬಂದ ಲಕ್ಷ್ಮಿದೇವಿ.

ಗೂಗಿ ಕೊಳ್ಳದಲ್ಲಿದ್ದ ಯತಿವರೇಣ್ಯರಾದ ದಿಗಂಬರೇಶ್ವರ ಸ್ವಾಮಿಗಳು ದೇಶ ಸಂಚಾರ ಕ್ಕಾಗಿ ಹೊರಟಾಗಿ ಗೂಗಿಕೊಳ್ಳದ ದಿಗಂಬರೇಶ್ವರ ಮಠದ ಹತ್ತಿರದಲ್ಲಿಯೇ ಇದ್ದ ಲಕ್ಷ್ಮಿ ದೇವಿಯೂ ಇವರೊಂದಿಗೆ ಹೊರಡಲು ಹಟ ಹಿಡಿಯುತ್ತಾಳೆ. “ನೀ ಎಲ್ಲಿ ಕೂಡಸ್ತಿಯೋ ಅಲ್ಲಿ ಕೂಡ್ತಿನಿ” ಎಂದು ಕಾಡಿ, ಬೇಡಿ ಸ್ವಾಮಿಗಳೊಂದಿಗೆ ಅವಳೂ ಹೊರಡುತ್ತಾಳೆ. ಹೀಗೆ ಅವರು ಸಂಚಾರ ಕೈಗೊಂಡು ನೆಲೆನಿಂತ ಕಡೆಗಳಲೆಲ್ಲ ದಿಗಂಬರ ಮಠಗಳಿವೆ. ಉದಾ. ಕುಚನೂರು, ಮರೇಗುದ್ದಿ, ಸಿದ್ದಾಪುರ ಇಲ್ಲೆಲ್ಲ ಲಕ್ಷ್ಮೀದೇವಿಯ ಗುಡಿಗಳೂ ಇವೆ. ಹೀಗೆ ದಿಗಂಬರ ಸ್ವಾಮಿಗಳು ಸಂಚಾರ ಕೈಗೊಂಡು ನಾಗರಾಳಕ್ಕೆ ಬಂದ ಸ್ವಾಮಿಗಳು ಗುಡ್ಡದ ಮೇಲೆ ದಿನವೂ ತಪಸ್ಸಿಗೆ ಹೋಗುತ್ತಿರುತ್ತಾರೆ. ಹಾಗೆ ಒಂದು ದಿನ ಈಗ ಕಪ್ಪರ ಪಡಿಯವ್ವನಿರುವ ಜಾಗದಲ್ಲಿ ತಪಸ್ಸಿಗೆ ಕುಳಿತಾಗ ಅವರಿಗೆ ತಮ್ಮೊಂದಿಗೆ ಬಂದ ಲಕ್ಷ್ಮಿಗೆ ಇದೇ ಸರಿಯಾದ ಸ್ಥಾನವೆಂದು, ಗುಡ್ಡದ ಪಡಿಯಲ್ಲೇ ಇರುವುದರಿಂದ ಇವಳು ಪಡಿಯಮ್ಮ ಳಾಗಿ ಪ್ರಸಿದ್ದಿಯಾಗಲಿ ಎಂದರಂತೆ. ಇಷ್ಟು ಸ್ಥಳೀಯ ಜನಪದರು ಗೂಗಿಕೊಳ್ಳದಿಂದ ಬಂದ ಲಕ್ಷ್ಮಿ ನಾಗರಾಳಕ್ಕೆ ಬಂದು ಪಡಿಯಮ್ಮನಾಗಿ ನೆಲೆಗೊಂಡ ಬಗೆಯನ್ನು ಸ್ವಾರಸ್ಯಕರವಾಗಿ ಹೇಳುತ್ತಾರೆ.

ಜನಪದರು ಹೇಳುವ ಇದೇ ಕಥೆಯನ್ನು ಇನ್ನೊಂದು ನಿಟ್ಟಿನಿಂದಲೂ ನೋಡಬಹು ದೆಂದು ತೋರುತ್ತದೆ. ಸರ್ವಸಂಗ ಪರಿತ್ಯಾಗಿಯಾದ ಯೋಗಿಯೊಂದಿಗೆ ಅದೂ ಸಕಲ ಐಹಿಕ ಸಂಪತ್ತಿಗೂ ಸಂಕೇತ ರೂಪಿಯಾದ ಲಕ್ಷ್ಮಿ ಹೊರಡುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ. ದೇಶ ಸಂಚಾರಕ್ಕಾಗಿ ಬಂದ ದಿಗಂಬರೇಶ್ವರ ಸ್ವಾಮಿಗಳು ಭವ ಬಂಧನದಿಂದ ಪೂರ್ತಿಯಾಗಿ ಇನ್ನೂ ಮುಕ್ತರಾಗಿರಲಿಲ್ಲ ಎಂಬುದನ್ನು ಜನಪದರು ಒಪ್ಪಿಕೊಂಡ ಪರಿಯನ್ನು ಕೂಡ ಈ ಕಥೆ ಹೇಳುತ್ತಿದೆ ಎನ್ನಿಸುತ್ತದೆ.

ನಾಗರಾಳಕ್ಕೆ ಬಂದ ನಂತರದಲ್ಲಿಯೇ ಅವರಿಗೆ ನಿಜವಾದ ರೂಪದಲ್ಲಿ ಯೋಗಿತ್ವದ ಸಿದ್ದಿಯಾಗಿರಬೇಕು. ಅದಕ್ಕಾಗಿಯೇ ಮನಸ್ಸಿನ ವ್ಯಾಮೋಹಗಳಿಗೆಲ್ಲ ಒಂದು ಸಾಕಾರ ರೂಪ ಕೊಟ್ಟು, ಅದನ್ನು ತಮ್ಮಿಂದ ಸಾಧ್ಯವಾದಷ್ಟು ದೂರ ಗುಡ್ಡದಲ್ಲಿ ಸ್ಥಾನೀಕರಿಸಿರಬಹುದು ಎಂತಲೂ ಯೋಚಿಸಲು ಅನುವು ಮಾಡಿಕೊಡುತ್ತದೆ.

ಈ ಕಪ್ಪರ ಪಡಿಯವ್ವನಿಗೆ ಕೃಷ್ಣೆಯಿಂದ ಭೀಮೆಯವರೆಗೂ ಭಕ್ತರಿದ್ದಾರೆ. ಸಿಂಧೂರ ಲಕ್ಷ್ಮಣನಿಗೆ ಮುಂಚಿನಿಂದಲೂ ಪಡಿಯವ್ವನ ಕುರಿತಾಗಿ ಭಕ್ತಿ ಇತ್ತಾದರೂ ಈ ಎಲ್ಲ ಭಕ್ತರಂತೆ ಅವನು ಬರೀ ಭಕ್ತನಾಗಿ ಬಂದವನಲ್ಲ, ಆಳುವ ವರ್ಗದ ವಿರುದ್ಧ ಬಂಡೆದ್ದ ಸ್ವಾಭಿಮಾನಿ ವ್ಯಕ್ತಿಯಾಗಿ ಬಂದ.

ಸಿಂಧೂರ ಲಕ್ಷ್ಮಣ ಎಲ್ಲೂ ಬಹಳದಿನಗಳ ಕಾಲ ನೆಲೆಯೂರುವುದಿಲ್ಲವಾದರೂ ಕಪ್ಪರ ಪಡಿಯವ್ವನಿಗೆ ಮೇಲಿಂದ ಮೇಲೆ ಬರುತ್ತಿದ್ದನು. ಹೀಗೆ ಕಪ್ಪರ ಪಡಿಯವ್ವನೊಂದಿಗೆ ಒಂದು ಕಳ್ಳು ಬಳ್ಳಿಯ ಸಂಬಂಧ ಬೆಳೆಸಿಕೊಳ್ಳಲು ಕಾರಣ ಹಲವಾರು ೧. ಅವನಿಗೆ ಅದೊಂದು ಭಕ್ತಿಯ ನೆಲೆ. ೨. ಅಲ್ಲಿ ಅವನಿಗೊಂದು ತೆರನಾದ Secured Feeling ಇತ್ತು. ಕಾರಣ ಪಡಿಯವ್ವ ನಾಗರಾಳ ಸಿದ್ದಾಪುರಗಳಿಂದ ದೂರ ಗುಡ್ಡದಲ್ಲಿರುವ ದೇವತೆ, ಅದು ಅರಣ್ಯ ಪ್ರದೇಶವಾದ್ದರಿಂದ ನಿತ್ಯ ಜನಬಳಕೆ ಅಪರೂಪ. ನಾಗರಾಳ, ಸಿದ್ದಾಪುರ, ತೆಗ್ಗಿ, ಅರಕೇರಿ ಭಾಗದಲ್ಲಿ ಬೇಡ ಸಮುದಾಯದವರು ಹೆಚ್ಚಾಗಿರುವರು. ಹಾಗಾಗಿ ಆ ಪ್ರದೇಶದಲ್ಲಿ ಬೇಟೆಯಾಡುವವರ ಬಳಕೆಯೇ ಹೆಚ್ಚಾಗಿದ್ದು, ಲಕ್ಷ್ಮಣನಿರುವ ಸ್ಥಳಕ್ಕೆ ಬಂದರೂ, ತಮಗಾಗಿಯೇ ಹೋರಾಡುತ್ತಿರುವ ತಮ್ಮೊಬ್ಬ ಹುಡುಗನಿಗೆ ಸಹಕಾರಕೊಡುತ್ತಿದ್ದಿರಲೂ ಬಹುದು. ಈ ಪ್ರದೇಶದಲ್ಲಿ ಅವರಿಗೆ ಆಹಾರದ ಪೂರೈಕೆಗೆ ಸಮಸ್ಯೆ ಇರಲಿಲ್ಲ. ಬೇಕೆಂದಾಗ ಲೆಲ್ಲ ಬುತ್ತಿಯನ್ನು ತಂದುಕೊಡುತ್ತಿದ್ದ ರತ್ನವ್ವ, ತೆಗ್ಗಿಯ ವೆಂಕಪ್ಪ ಗೌಡರಂಥವರ ಆತ್ಮೀಯತೆ ಲಕ್ಷ್ಮಣನನ್ನು ಈ ಪ್ರದೇಶದ ಸುತ್ತಮುತ್ತ ಕಟ್ಟಿಹಾಕುತ್ತಿದ್ದವು.

ಸಿಂಧೂರ ಲಕ್ಷ್ಮಣನಿಗೆ ಅಧಿಕಾರ ಶಾಹಿಯ ವಿರುದ್ಧದ ಅವನ ಹೋರಾಟಕ್ಕೆ ಪೂರಕವಾದ ಅನೇಕ ಸಹಕಾರಗಳಿಗೆ ಕಪ್ಪರ ಪಡಿಯವ್ವ ಕೇಂದ್ರ ನೆಲೆಯಾಗಿದ್ದಳು.

ಹೀಗೆ ತನ್ನದಲ್ಲದ ಊರಿನಲ್ಲಿ ತನ್ನ ಹೋರಾಟಕ್ಕೆ ಸಿಕ್ಕುತ್ತಿರುವ ಸ್ಪಂದನೆಗೆ ಮೂಲ ರಕ್ಷಣಾ ಶಕ್ತಿ ಪಡಿಯವ್ವಳೇ ಎಂದು ನಂಬಿದವ ಲಕ್ಷ್ಮಣ. ಏಕೆಂದರೆ ಮನುಷ್ಯ ಯಾವತ್ತೂ ತೊಂದರೆಯಲ್ಲಿದ್ದಾಗ, ತನ್ನ ದಾರಿಗಳು ಸ್ಪಷ್ಟವಾಗಿರದಿದ್ದಾಗ ಮೊರೆ ಹೋಗುವದು ಕಾಣದ ಶಕ್ತಿಯೊಂದರ ಆಶ್ರಯಕ್ಕೆ. ಅವನಿಗೆ ಅಂಥ ಒಂದು ಅಭಯಾತ್ಮಕ ರಕ್ಷಣೆಯನ್ನು ನೀಡಿ ದವಳು ಕಪ್ಪರ ಪಡಿಯವ್ವಳಾದ್ದರಿಂದ ಸಿಂಧೂರ ಲಕ್ಷ್ಮಣನಿಗೆ ಅವಳೇ ಅಧಿದೈವ. ಕಾಯುವ ವಳೂ ಅವಳೇ ಕೊಲ್ಲುವವಳೂ ಅವಳೇ ಎಂದು ನಂಬಿದಂತೆ ಅವನು ಅತ್ಯಂತ ನಂಬಿದ ಕಪ್ಪರ ಪಡಿಯವ್ವನೆದುರಲ್ಲೇ ಅವನ ಹತ್ಯೆಯಾಗುತ್ತದೆ.

ಕ್ಷೇತ್ರಕಾರ್ಯದಲ್ಲಿ ಸಹಕರಿಸಿದ ಕಂಠಿ ಹನುಮಂತರಾಯ, ಸಿದ್ಧಮಲ್ಲಪ್ಪ ಬಾಳಿಗಿಡದ, ಬಸವ್ವ ಎಣ್ಣಿ, ಪಡಿಯವ್ವ, ವಿರೂಪಾಕ್ಷ ಜತ್ತಿ, ಸರ್ವಮಂಗಳಾ ಕೆರೂರ ಇವರಿಗೆಲ್ಲ ಕೃತಜ್ಞತೆಗಳು.

* * *

ಬೇಡರು ಕರ್ನಾಟಕದಲ್ಲಿ ಹಿಂದೆ ರಾಜಕೀಯವಾಗಿ ಪ್ರತಿಷ್ಠೆ ಪಡೆದ ಶೂರ ಸಮಾಜ. ಇವರು ಸ್ವತಂತ್ರರಾಗಿ ಆಳಿದ ದಾಖಲೆಗಳಿವೆ. ಸುರಪುರದ ಬೇಡರ ದೊರೆ ಪಿಡ್ಡನಾಯಕ ಔರಂಗಜೇಬನನ್ನು ಯಶಸ್ವಿಯಾಗಿ ಎದುರಿಸಿದ ಧೀರ.
ಡಾ. ಸೂರ್ಯನಾಥ ಕಾಮತ