ಅನ್ಯಾಯ, ಅಸತ್ಯ, ಅಧರ್ಮಗಳ ವಿರುದ್ಧ ಸಿಡಿದೇಳುವ ಗುಣವನ್ನು ಹುಟ್ಟಿನಿಂದಲೇ ಮೈಗೂಡಿಸಿಕೊಂಡು, ಅಂತಹ ಸಂದರ್ಭಗಳು ಎದುರಾದಾಗ ಜೀವದ ಹಂಗು ತೊರೆದು, ಸೆಟೆದುನಿಂತು ಬ್ರಿಟೀಷ್ ಸರ್ಕಾರಕ್ಕೆ ಕಬ್ಬಿಣದ ಕಡಲೆಯಾಗಿ ಹೊರಹೊಮ್ಮಿದ ಒಬ್ಬ ಸಾಮಾನ್ಯ ಊರ ತಳವಾರನೆಂದು ಚಾಕರಿ ಮಾಡಿದ ಸಿಂಧೂರ ಲಕ್ಷ್ಮಣನ ಕುರಿತು ಮಾತನಾಡು ವುದಾಗಲಿ, ಬರೆಯುವುದಾಗಲಿ ಕಷ್ಟಸಾಧ್ಯ. ಸಿಂಧೂರ ಲಕ್ಷ್ಮಣ ಹುತಾತ್ಮನಾದದ್ದು ೧೫.೦೭. ೧೯೨೨ರಲ್ಲಿ. ಆತ ಬದುಕಿದ್ದು ಕೇವಲ ೨೪ ವರ್ಷಮಾತ್ರ. ಅಂದರೆ ಈತನ ಜನನವು ೧೮೯೮ರಲ್ಲಿ ಆಗಿರಬಹುದೆಂದು ಅಂದಾಜಿಸಬಹುದಾಗಿದೆ.

ಲಕ್ಷ್ಮಣನ ಕಾಲಾವಧಿಯನ್ನು ಪೂರ್ವಾರ್ಧ ಮತ್ತು ಉತ್ತರಾರ್ಧವೆಂದು ಎರಡು ಘಟ್ಟ ಗಳಾಗಿ ವಿಂಗಡಿಸಿದಾಗ ಕಂಡು ಬರುವುದೇನೆಂದರೆ, ಆತನ ಬಾಲ್ಯ ಹಾಗೂ ಊರ ತಳವಾರ ನಾಗಿರುವ ಜೀವನವನ್ನು ಪೂರ್ವಾರ್ಧ ಘಟ್ಟವೆಂದೂ ಬಂಡಾಯಗಾರನಾಗಿ ಹೊರಹೊಮ್ಮಿ ಸಂಘರ್ಷದ ಹಾದಿ ಹಿಡಿದ ಘಟ್ಟವನ್ನು ಉತ್ತರಾರ್ಧವೆಂದು ತಿಳಿಯಬಹುದಾಗಿದೆ. ಲಕ್ಷ್ಮಣನ ಉತ್ತರಾರ್ಧ ಕಾಲಾವಧಿಯ ಬದುಕಿನ ಬಗ್ಗೆ ಸಾಕಷ್ಟು ಮಾಹಿತಿಗಳು ಅಲ್ಲಲ್ಲಿ ದೊರೆಯುತ್ತಿವೆಯಾದರೂ ಪೂರ್ವಾರ್ಧದ ಬಗ್ಗೆ ಅಷ್ಟೊಂದು ಯಥಾವತ್ತಾದ ಮಾಹಿತಿಗಳು ಅಲಭ್ಯ. ಏಕೆಂದರೆ ಸಿಂಧೂರ ಲಕ್ಷ್ಮಣ ಕಾಲವಾಗಿ ೮೫ವರ್ಷಗಳು ಗತಿಸಿಹೋಗಿವೆ. ಆತನ ಸಮಕಾಲೀನ ಬಂಧುಗಳಾಗಲಿ, ಸ್ನೇಹಿತರಾಗಲಿ ಯಾರೂ ಬದುಕಿ ಉಳಿದಿಲ್ಲ. ಸಿಂಧೂರಿನಲ್ಲಿ ಸಧ್ಯ ಬದುಕಿ ಉಳಿದಿರುವವರು ಮೂರನೇ ತಲೆಮಾರಿನ ಸಂತತಿ ಅಂದರೆ ಲಕ್ಷ್ಮಣನ ಮೊಮ್ಮಗನಾದ ಭೀಮಣ್ಣನ ಹೆಂಡತಿ ದುಂಡವ್ವ ಮತ್ತು ಮರಿಮಕ್ಕಳಾದ ಮೀನಾಕ್ಷಿ, ಚಂದ್ರವ್ವ, ಲಕ್ಷ್ಮಣ ಹಾಗೂ ರಾಮ ಮಾತ್ರ. ಇವರೆಲ್ಲರಿಗೂ ತಮ್ಮ ಮುತ್ತಜ್ಜನ ಬಗ್ಗೆ ಸಂಪೂರ್ಣ ವಿಷಯ ಗೊತ್ತಿರುವುದಿಲ್ಲ.

ಕೆಲವಾರು ಪ್ರದೇಶಗಳಲ್ಲಿ ಈ ಸಿಂಧೂರ ಲಕ್ಷ್ಮಣನ ಕುರಿತು ರೋಚಕ ಸಂಗತಿಗಳನ್ನು ತಾವು ಕೇಳಿ ತಿಳಿದಿರುವಂತೆ ಹೇಳುವ ಜನರಿದ್ದಾರೆ. ಉಮರಾಣಿ, ಬಸರಗಿ, ಗೋಗಾಡ, ಬೀಳೂರ, ಬೇಡರಹಟ್ಟಿ, ಚಮಕೇರಿ, ರಡ್ಡೇರಹಟ್ಟಿ, ಸಿಂಧೂರ ಮುಂತಾದೆಡೆಗಳಲ್ಲಿ ಅಲೆದಾಡಿದಾಗ ಸ್ವಲ್ಪಮಟ್ಟಿಗೆ ಲಕ್ಷ್ಮಣನ ಪೂರ್ವಾರ್ಧದ ಬಗ್ಗೆ ತಿಳಿದು ಬರುತ್ತದೆ.

ಆಂಗ್ಲರ ಆಳ್ವಿಕೆಯ ಕಾಲಾವಧಿಯಲ್ಲಿ ಸಿಂಧೂರು ಜತ್ತ ಸಂಸ್ಥಾನಕ್ಕೆ ಸೇರಿದ ಒಂದು ಸಣ್ಣ ಹಳ್ಳಿ. ಆ ಹಳ್ಳಿಯಲ್ಲಿ ತಂದೆ ಸಾಬಣ್ಣನಿಂದ ಬಳುವಳಿ ರೂಪದಲ್ಲಿ ಬಂದಿರುವ ತಳವಾರಿಕೆಯನ್ನು ಲಕ್ಷ್ಮಣ ಪ್ರಾಮಾಣಿಕತೆಯಿಂದ ಮುಂದುವರಿಸಿಕೊಂಡು ಹೋಗುತ್ತಿದ್ದ. ಸಿಂಧೂರಿನ ಗೌಡರಾಗಿ ಮಾದುರಾಯ ಭೀಮನಗೌಡ ಪಾಟೀಲರೆಂಬುವರಿದ್ದರು. ಗೌಡರಿಗೆ ಬಲಗೈ ಭಂಟನಾಗಿ, ಊರಿಗೆ ಉಪಕಾರಿಯಾಗಿ, ಸುತ್ತಮುತ್ತಲಿನ ಹಳ್ಳಿಗಳ ಮನೆಮಾತಾಗಿ, ಪ್ರಾಮಾಣಿಕ ಹಾಗೂ ನಿಷ್ಠೆಯ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದನು. ಜತ್ತ ಸಂಸ್ಥಾನದ ದಾದಾಸಾಹೇಬ ಡಪಳೆ ಸರ್ಕಾರ ಅವರು ಈತನನ್ನು ತನ್ನ ಸ್ವಂತ ಮಗನೇ ಎನ್ನುವಷ್ಟರ ಮಟ್ಟಿಗೆ ಮೆಚ್ಚಿಕೊಂಡಿದ್ದರು ಎಂಬ ಅಂಶಗಳು ತಿಳಿದುಬರುತ್ತವೆ.

ಹೊಲ ಮನೆಗಳ ವ್ಯಾಜ್ಯ, ಕೌಟುಂಬಿಕ ಕಲಹಗಳು ಮತ್ತಿತರ ತಕರಾರುಗಳಿಗೆ ಸಂಬಂಧಿಸಿ ದಂತೆ ತಪ್ಪಿತಸ್ಥರಿಗೆ ಊರ ಚಾವಡಿಗೆ ಕರೆತರುವುದು, ಸಂಸ್ಥಾನಿಕರು, ಅಧಿಕಾರಿಗಳು, ಪೊಲೀಸರು ಸಿಂಧೂರಿಗೆ ಬಂದಾಗ ಅವರನ್ನು ಉಪಚರಿಸುವುದು, ಕಂದಾಯ ವಸೂಲಿ ಮಾಡುವುದು, ಸರಕಾರಿ ಆದೇಶಗಳನ್ನು ಜನರಿಗೆ ಸಾರುವುದು ಮುಂತಾದ ಕೆಲಸಕಾರ್ಯ ಗಳನ್ನು ಮಾಡುತ್ತಿದ್ದನು. ತನ್ನ ಚಾಕರಿಯ ಜೊತೆಜೊತೆಗೆ ಹಬ್ಬ ಹರಿದಿನಗಳು, ಜಾತ್ರೆಗಳಲ್ಲಿ ಹಮ್ಮಿಕೊಳ್ಳುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯದ ಸರಮಾಲೆಯನ್ನು ಧರಿಸುತ್ತಿ ದ್ದನು. ಗುಂಡು ಎತ್ತುವುದು, ಕವಣಿಕಲ್ಲು ಬೀಸುವುದು, ಕುಸ್ತಿ ಆಡುವುದು, ತುಂಬಿದ ಚೀಲಗಳ ಬಂಡಿ ಎಳೆಯುವುದು, ಹಿಂಬರಕಿ ಗೋಡೆ ಹತ್ತುವುದು, ವೇಗವಾಗಿ ಹಿಂದೆ ಓಡುವುದು ಹೀಗೆ ಹತ್ತು ಹಲವಾರು ಶಕ್ತಿ ಸಾಹಸ ಪ್ರದರ್ಶನಗಳಲ್ಲಿ ಲೀಲಾಜಾಲವಾಗಿ ಭಾಗವಹಿಸಿ ನೆರೆದವರ ಹುಬ್ಬೇರಿಸುವಂತೆ ಮಾಡುತ್ತಿದ್ದನು. ಕವಣಿಕಲ್ಲು ಬೀಸುವುದರಲ್ಲಿ ಲಕ್ಷ್ಮಣನಿಗೆ ಲಕ್ಷ್ಮಣನೇ ಸಾಟಿ ಎನ್ನುವಷ್ಟರಮಟ್ಟಿಗೆ ಆತನು ಪ್ರಸಿದ್ದಿಯಾಗಿದ್ದನು. ಎತ್ತಿನ ನೊಗವನ್ನು ಗೋಟು ನಿಲ್ಲಿಸಿ ದೂರದಿಂದ ಅದರ ಕಣ್ಣೊ(ತೂತು)ಳಗಿನಿಂದ ಕಲ್ಲು ತೂರಿ ಹೋಗುವಂತೆ ಕವಣಿ ಬೀಸುತ್ತಿದ್ದನು ಎಂಬುದನ್ನು ಕೇಳಿದಾಗ ಅಚ್ಚರಿಯಾಗುತ್ತದೆ. ಹಿಂಬರಕೆ ಗೋಡೆ ಹತ್ತುವುದಾಗಲಿ, ಆರು ಅಕಡಿ ಕಡಿದ ಸಂಗತಿಯಾಗಲಿ, ಮೊಲವನ್ನು ತುಳಿದು ಓಡಿದ ಘಟನೆಯಾಗಲಿ ಕೇಳಿ ತಿಳಿದಾಗ ರೋಚಕತೆಯ ಅನುಭವವಾಗುತ್ತದೆ.

ಲಕ್ಷ್ಮಣನು ಸಾಹಸ ಪ್ರವೃತ್ತಿಗೆ ಹೆಸರುವಾಸಿಯಾದಂತೆ ಕರುಣೆ, ಅನುಕಂಪ, ದಯಾ ಶೀಲತೆ ಹಾಗೂ ಸ್ತ್ರೀಯರ ಬಗ್ಗೆ ಗೌರವ ಭಾವನೆ, ಈ ಎಲ್ಲಾ ಗುಣಗಳಿಂದ ಸಿಂಧೂರಿನ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಉತ್ತಮ ವ್ಯಕ್ತಿಯಾಗಿ ಹೊರಹಮ್ಮಿದ್ದು ತಿಳಿದು ಬರುತ್ತದೆ. ಸ್ತ್ರೀಪರ ಕಾಳಜಿಯುಳ್ಳ ಲಕ್ಷ್ಮಣನು ಪರನಾರಿ ಸಹೋದರನೆಂಬ ಕೀರ್ತಿಗೆ ಪಾತ್ರನಾಗಿದ್ದನು. ಗ್ರಾಮದಲ್ಲಿರುವ ಎಲ್ಲ ಹೆಣ್ಣು ಮಕ್ಕಳನ್ನು ಅಕ್ಕ-ತಂಗಿಯರಂತೆ ಭಾವಿಸಿ ಆದರಿಸುತ್ತಿದ್ದನು. ಹಾಗೆಯೇ ದೀನದಲಿತರು, ಬಡವರು ಕಂಡರೆ ಈತನಿಗೆ ಅಕ್ಕರತೆ ಉಕ್ಕಿ ಬರುತ್ತಿತ್ತು. ಅಂಥವರ ಪರಿಸ್ಥಿತಿಯನ್ನು ನೋಡಲಾಗದೆ ಸಾಧ್ಯವಾದಷ್ಟು ಅವರಿಗೆ ಸಹಾಯ, ಸಹಕಾರ ಒದಗಿಸುತ್ತಿದ್ದನು.

ಕಂದಾಯ ವಸೂಲಿ ಸಂದರ್ಭದಲ್ಲಿ ಅಧಿಕಾರಿಗಳಿಗೆ ನಿಷ್ಟನಾಗಿ, ಜನರಿಗೆ ದಯಾಮಯಿ ಯಾಗಿ ಪ್ರಾಮಾಣಿಕತನದಿಂದ ಕಾರ್ಯ ನಿರ್ವಹಿಸುತ್ತಿದ್ದನು. ಕೆಲವೊಂದು ಕಾರಣಗಳಿಂದ ಬಡವರು ಕರ ಸಂದಾಯ ಮಾಡದೇ ಇರುವಾಗ, ಅವರ ಪರವಾಗಿ ಎಷ್ಟು ಸಲ ಸ್ವತಃ ತಾನೇ ಸರ್ಕಾರಕ್ಕೆ ಕಂದಾಯ ಕಟ್ಟುತ್ತಿದ್ದನು. ಅಥವಾ ಕಂದಾಯ ವಸೂಲಿಗೆಂದು ಲಕ್ಷ್ಮಣನಿಗೆ ಕುಲಕರ್ಣಿಯವರು ಕಳುಹಿಸಿದಾಗ ಉಳ್ಳವರಿಂದ ಕರ ವಸೂಲಿ ಮಾಡಿ, ಇಲ್ಲದವರ ಬಗ್ಗೆ ಕಾಳಜಿವಹಿಸಿ ಮತ್ತೊಮ್ಮೆ ತುಂಬುತ್ತಾರೆ ಎಂದು ಹೇಳಿ ಸಾಗಹಾಕುತ್ತಿದ್ದನು. ಕರವಸೂಲಿ ಸಂದರ್ಭದಲ್ಲಿ ಲಕ್ಷ್ಮಣನಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿತ್ತು, ಹೀಗಾಗಿ ಈತನ ಮಾತಿಗೆ ಕುಲಕರ್ಣಿ ಸಹಿತವಾಗಿ ಯಾರೂ ಚಕಾರ ಎತ್ತುತ್ತಿರಲಿಲ್ಲವೆಂದೇ ಹೇಳಬಹುದು.

ಲಕ್ಷ್ಮಣನ ವ್ಯಕ್ತಿತ್ವದ ಬಗ್ಗೆ ಜತ್ತ ಸಂಸ್ಥಾನದ ಪ್ರತಿಯೊಂದು ಹಳ್ಳಿಹಳ್ಳಿಗಳಲ್ಲಿ ಪಸರಿಸಿ ಹೆಸರುವಾಸಿಯಾಗುತ್ತಿರುವ ಸಮಯದಲ್ಲಿಯೇ ಪ್ರಕೃತಿಯ ಮುನಿಸು ಶುರುವಾಗುತ್ತದೆ. ಸಕಾಲದಲ್ಲಿ ಮಳೆಯಾಗದೆ ಜನ ಕಂಗಾಲಾಗುತ್ತಾರೆ. ಹೊಲದಲ್ಲಿಯ ಉತ್ತುವ ಬಿತ್ತುವ ಕೆಲಸ ಸ್ಥಗಿತವಾಗುತ್ತದೆ. ಆಗಸದಲ್ಲಿ ಮೋಡಗಳ ಸುಳಿವು ಇಲ್ಲದೆ ರೈತರು ಮುಗಿಲನ್ನು ದಿಟ್ಟಿಸುತ್ತ ಹಣೆಗೆ ಕೈಹೊತ್ತು ಹಪಹಪಿಸುತ್ತಾರೆ. ಇಡೀ ಭೂಮಿ ರಣಗುಡತ್ತ ಭೀಕರ ಬರಗಾಲಕ್ಕೆ ತುತ್ತಾಗಿ ಹಸುರೆಲ್ಲ ಒಣಗಿ ಬಕಬಕಬಾಡಿ ನೆಲಕ್ಕುರುಳುತ್ತವೆ. ತಿನ್ನಲು ಮೇವಿ ಲ್ಲದೆ ದನಕರುಗಳು ರೋದನೆಗೈಯುತ್ತವೆ. ದುಡಿಯುವವರಿಗೆ ಕೆಲಸವಿಲ್ಲದೆ ಕೈಕಟ್ಟಿ ಕುಳಿತು ಕೊಳ್ಳುವಂತಹ ಸ್ಥಿತಿ ಬಂದು ಹೊಟ್ಟೆಗೆ ಹಿಟ್ಟಿಲ್ಲದಂತಾಗುತ್ತದೆ. ಈ ಭಯಾನಕ ಪರಿಸ್ಥಿತಿ ಯನ್ನು ಕಂಡು ಲಕ್ಷ್ಮಣನ ಕರುಳು ಚುರುಗುಟ್ಟುತ್ತದೆ. ಎಲ್ಲರ ಮನೆಯ ಸ್ಥಿತಿ ಈತನ ಮನೆತನಕ್ಕೂ ಬಂದೊದಗುತ್ತದೆ. ತಾಯಿ ನರಸವ್ವ ಪತ್ನಿ ಚಂದ್ರವ್ವ ಸಾಂತ್ವಾನ ಹೇಳುತ್ತಾರೆ.

ಮನೆಮನೆಗಳಲ್ಲಿ ತಿನ್ನಲು ಅನ್ನವಿಲ್ಲದ ಸ್ಥಿತಿ ಬಂದೊದಗಿದಾಗ ಸರ್ಕಾರಕ್ಕೆ ಕಂದಾಯ ತುಂಬುವುದಾದರೂ ಹೇಗೆ? ಭಯಂಕರ ಬರಗಾಲದ ಪರಿಸ್ಥಿತಿಯಲ್ಲೂ ಬ್ರಿಟೀಷ್ ಸರ್ಕಾರ ಯಾವುದೇ ಪರಿಹಾರ ನೀಡದೆ ಕಂದಾಯ ವಸೂಲಿಗಾಗಿ ಫರ್ಮಾನು ಹೊರಡಿಸುತ್ತದೆ. ಗೌಡರು ಕುಲಕರ್ಣಿಯವರು ಕಂದಾಯ ವಸೂಲಿ ಮಾಡಿಕೊಡುವಂತೆ ಲಕ್ಷ್ಮಣನಿಗೆ ಒತ್ತಾಯ ಪಡಿಸುತ್ತಾರೆ. ಸರ್ಕಾರದ ಹಂಗಿನಲ್ಲಿರುವ ಲಕ್ಷ್ಮಣ ಸಿಂಧೂರಿನಲ್ಲಿ ಕರ ವಸೂಲಿ ಮಾಡಲು ಹೋದಾಗ ಅವಮಾನಿತನಾಗುತ್ತಾನೆ. ಕೆಲವೊಬ್ಬರಿಗೆ ಕುಲಕರ್ಣಿ ಇರುವ ಕಂದಾಯದರ ಕ್ಕಿಂತಲೂ ಹೆಚ್ಚಿಗೆ ಬರೆದಿದ್ದನ್ನು ನೋಡಿ ತಿಳಿದು ಮನದಲ್ಲಿ ಕುದಿಯುತ್ತಾನೆ. ಊರ ಜನತೆ ಸಿಟ್ಟಿಗೇಳುವುದರಲ್ಲಿ ಸತ್ಯವಿದೆ ಎಂಬುದು ಅರಿವಾಗುತ್ತದೆ. ಹೊಟ್ಟಿಗೆ ಗತಿಇಲ್ಲದೆ ಕೊರಗುವ ಈ ಸ್ಥಿತಿಯಲ್ಲಿ ಕಂದಾಯ ಎಲ್ಲಿಂದ ಸಂದಾಯ ಮಾಡಿಯಾರು? ಎಂಬ ತೀರ್ಮಾನಕ್ಕೆ ಬರುತ್ತಾನೆ. ಮನಸ್ಸು ಬೂದಿ ಮುಚ್ಚಿದ ಕೆಂಡವಾಗುತ್ತದೆ.

ಬರಿಗೈಯಿಂದ ಲಕ್ಷ್ಮಣ ಚಾವಡಿಗೆ ಬಂದಾಗ ಗೌಡರು ಕುಲಕರ್ಣಿಯವರು ಕಾರಣ ಕೇಳುತ್ತಾರೆ. ತನಗೊದಗಿದ ಪರಿಸ್ಥಿತಿಯನ್ನು ಅವರ ಮುಂದೆ ವಿವರಿಸುತ್ತಾನೆ. ಕುಲಕರ್ಣಿ ಲಕ್ಷ್ಮಣನ ಮಾತನ್ನು ಕಿವಿಗೆ ಹಾಕಿಕೊಳ್ಳದೆ, “ಇದು ಕಂಪನಿ ಸರ್ಕಾರದ ಹುಕುಂ ಆಗಿದೆ ಅದರಂತೆ ನಾವು ನಡೆದುಕೊಳ್ಳಲೇಬೇಕು. ಪ್ರತಿಯೊಬ್ಬರೂ ಬಿರಾಡ ತುಂಬಲೇಬೇಕು ತುಂಬದಿದ್ದರೆ ಪರಿಣಾಮ ಅನುಭವಿಸಬೇಕಾಗುತ್ತದೆ” ಎನ್ನುತ್ತಿದ್ದಂತೆ ಲಕ್ಷ್ಮಣನ ಎದೆಯೊಳ ಗಿನ ಕೋಪ ಉಕ್ಕಿಬರುತ್ತದೆ. ಕುಲಕರ್ಣಿ ಮಾಡಿರುವ ಮೋಸದ ಕುರಿತು ಗೌಡರಿಗೆ ತೋರಿಸಿ, ಸಿಂಧೂರಿನ ಪರಿಸ್ಥಿತಿಯನ್ನು ಸರ್ಕಾರಕ್ಕೆ ತಿಳಿಸುವಂತೆ ಮನವಿ ಮಾಡಿಕೊಂಡು, ಕರ ಸಂದಾಯಕ್ಕೆ ಸಂಬಂಧಿಸಿದಂತೆ ಕಾಲಾವಕಾಶ ನೀಡಲು ಕೇಳಿಕೊಳ್ಳುತ್ತಾನೆ. ಈ ರೀತಿಯಾಗಿ ಮನವಿ ಮಾಡಿಕೊಳ್ಳುತ್ತಿದ್ದರೂ ಕುಲಕರ್ಣಿ ಸರ್ಕಾರದ ಪರವಾಗಿಯೇ ಕಿರುಚಾಡುತ್ತಿರುವಾಗ ರೊಚ್ಚಿಗೆದ್ದ ಲಕ್ಷ್ಮಣ ಅವನ ಮೇಲೆ ಹರಿಹಾಯುತ್ತಾನೆ. ಗೌಡರು ಮೂಕ ಪ್ರೇಕ್ಷಕರಾಗು ತ್ತಾರೆ. ಈ “ಕುಲಕರ್ಣಿ ಮಾಡಿರುವ ಮೋಸ ಅಷ್ಟಿಷ್ಟಲ್ಲ ಬಡವರಿಗೆ ಹೆಚ್ಚಿನ ಬಡ್ಡಿಹೇರಿ ಹಣಕೊಟ್ಟು ಹೊಲ ಮನೆ ಬರೆಯಿಸಿಕೊಂಡಿದ್ದಾನೆ. ಅವರಿಗೆ ಹಣಕೊಡದಾಗದಿದ್ದಾಗ ಹೊಲ ಬರೆದು ದುಪ್ಪಟ್ಟು ಮಾಡಿದ್ದಾನೆ. ಈತನದು ಅತಿಯಾಗಿದೆ” ಎಂದು ಅವನ ಮೇಲೇರಿ ಹೋಗಿ ಬಡಿಯುತ್ತಾನೆ. ಇದೆಲ್ಲವನ್ನು ಸರಪಡಿಸುವಂತೆ ಗೌಡರಿಗೆ ಕೇಳುತ್ತಾನೆ. “ಎಲ್ಲದಕ್ಕೂ ನೀನೇ ಮುಂದೆ ಇರುವಿ ನಿನಗೆ ಹೇಗೆ ಅನಿಸುತ್ತೋ ಹಾಗೆ ಮಾಡು ಎಂದು ಗೌಡರು ಘಟನೆಗೆ ತೆರೆ ಎಳೆಯುತ್ತಾರೆ.” ಗುಂಗಿನಲ್ಲಿ ಲಕ್ಷ್ಮಣ ಮನೆಗೆ ಬರುತ್ತಾನೆ. ಮನೆಯಲ್ಲಿ ತಾಯಿ, ಹೆಂಡತಿ ಗಂಜಿಗೂ ಗತಿಯಿಲ್ಲದೆ ಉಪವಾಸವಿರುವುದನ್ನು ಕಂಡು ಮರುಗಿ ತಾನೂ ನೀರು ಕುಡಿದು ಹಾಗೆಯೇ ಮಲಗುತ್ತಾನೆ. ಅದೇ ರಾತ್ರಿ ಲಕ್ಷ್ಮಣನ ಸೋದರ ಅಳಿಯಂದಿರಾದ ನರಸ್ಯಾ, ಸಾಬು, ಗೋಪಾಲಿ ದರೋಡೆ ಪ್ರಕರಣದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಬಂದು ಈತನ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ. ಅವರು ದರೋಡೆಗೆ ಮುಂದಾಗುವ ಸತ್ಯಾಸತ್ಯತೆಯನ್ನು ಅರಿತುಕೊಂಡು ಅವರೊಂದಿಗೆ ತಾನೂ ಕೈಜೋಡಿಸಿ ರಾತ್ರೋರಾತ್ರಿ ಕುಲಕರ್ಣಿಯ ಮನೆಗೆ ಕನ್ನ ಹಾಕಿ ಹಣ ಒಡವೆ, ಕಾಗದ ಪತ್ರಗಳನ್ನು ಲೂಟಿ ಮಾಡಿ ಊರ ಚಾವಡಿಯಲ್ಲಿ ತಂದು ಪ್ರಮುಖ ಕಾಗದ ಪತ್ರಗಳನ್ನು ಸುಡುತ್ತಾನೆ. ಉಳಿದ ಹಣ ಒಡವೆಗಳನ್ನು ಸಿಂಧೂರಿನ ಭಾವಿಯಲ್ಲಿ ಬಿಸಾಕಿ ಅದೇ ದಿನ ಊರನ್ನು ತೊರೆದು ತನ್ನ ಚಾಕರಿಗೆ ತಿಲಾಂಜಲಿ ಇಟ್ಟು, ಸಿರಿವಂತರ ಅಕ್ರಮ ಸಂಪತ್ತನ್ನು ಲೂಟಿಮಾಡಿ ಬಡವರಿಗೆ, ಹಸಿದವರಿಗೆ, ನಿರ್ಗತಿಕರಿಗೆ, ಹಂಚಲು ವ್ಯವಸ್ಥಿತಿ ತಂಡ ಕಟ್ಟಿಕೊಂಡು ಊರಿಂದೂರಿಗೆ ತಮಲೆಮರೆಸಿಕೊಂಡು ಅಲೆಯುತ್ತಾ, ಉಳ್ಳವರ ಸಂಪತ್ತನ್ನು ಕೊಳ್ಳೆಹೊಡೆಯಲು ತೊಡಗು ತ್ತಾನೆ. ತನ್ನ ಹದಿನೆಂಟನೇ ವಯಸ್ಸಿಗೆ ಸಿಂಧೂರನ್ನು ತೊರೆದು ಹೋದ ಲಕ್ಷ್ಮಣ; ಅಲ್ಪ ಸಮಯದಲ್ಲೇ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿ, ಹೆಜ್ಜೆಹೆಜ್ಜೆಗೂ ಕಾಡಿ ಇತಿಹಾಸ ಪುರುಷ ನಾದದ್ದು ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

* * *