ಬೇಸಾಯ ಬಿಟ್ಟರೆ ಸುಖವಿಲ್ಲಾ
ಧರ್ಮದಿಂದ ನಡೆದುಕೊಂಡಲ್ಲಿ
ಬೇಸಾಯ ಮಾಡುವವನಿಗೆ
ಎಂದೂ ಅನ್ನ, ಬಟ್ಟೆಗೆ ಕೊರತೆ ಇರುವುದಿಲ್ಲ

ಎಂಬ ವಾಣಿಯನ್ನು ತಿಳಿದುಕೊಂಡು ನಡೆದವರು ನಮ್ಮ ಗ್ರಾಮೀಣರು. ತಾವು ಬದುಕುವು ದರೊಂದಿಗೆ ಇತರರನ್ನು ಬದುಕಿಸುವ ಕಲೆ ನಮ್ಮ ಕೃಷಿ ಕುಟುಂಬಗಳಿಗೆ ಸಲ್ಲುತ್ತದೆ. ಅದಕ್ಕಾಗಿ “ಕೋಟಿವಿದ್ಯೆಗಳಲ್ಲಿ ಮೇಟಿವಿದ್ಯೆ ಮೇಲು” ಎಂದರು ನಮ್ಮ ಹಿರಿಯರು. ಇಂತಹ ಸರ್ವಶ್ರೇಷ್ಠ ಕಾಯಕವನ್ನು ಮಾಡಿದವರು ನಾಡಿನಲ್ಲಿ ಕೋಟಿ ಕೋಟಿ ಜನ ಭೂಮಿಯ ಮೇಲೆ ಹುಟ್ಟಿದ್ದಾರೆ. ಅಂತಹ ಕೃಷಿಕರಲ್ಲಿ ಇತಿಹಾಸ ನಿರ‌್ಮಿಸಿದವರು ಕೆಲವರು ಅಂತವರಲ್ಲಿ ಸಿಂಧೂರ ಲಕ್ಷ್ಮಣರು ಒಬ್ಬರು.

ಬೆಳಗಾಗ ಎದ್ದು ಯಾರನ್ನು ನೆನೆಯಲಿ
ಎಳ್ಳು ಜೀರಿಗಿ ಬೆಳೆಯೋಳು| ಭೂತಾಯಿ
ಎದ್ದೊಂದು ಗಳಿಗೆ ನೆನೆದೆನು”

ಎಂಬ ಹಾಡನ್ನು ಹಾಡಿ ತಮ್ಮ ಕಾಯಕವನ್ನು ಪ್ರಾರಂಭಿಸುತ್ತಿದ್ದರು ನಮ್ಮ ರೈತಾಪಿ ಬಂಧುಗಳು. ಅಂತಹ ಕಾಯಕದಲ್ಲಿ ದೇವರನ್ನು ಕಂಡ ಸಾಬಣ್ಣ ಮತ್ತು ನರಸಪ್ಪ ಎಂಬ ದಂಪತಿಗಳ ಏಕೈಕಮಗನಾಗಿ ಸಿಂಧೂರಿನಲ್ಲಿ ಜನಿಸಿದವರು ಲಕ್ಷ್ಮಣ. ಚಿಕ್ಕಂದಿನಿಂದಲೆ ಅನ್ಯಾಯ, ಅತ್ಯಾಚಾರದಂತ ವಿಷಯಗಳು ಕೇಳಿಬಂದಾಗ ಸಿಡಿದೇಳುವ ಗುಣವನ್ನು ಮೈಗೂಡಿಸಿಕೊಂಡು ಬೆಳೆದವನು. ಲಕ್ಷ್ಮಣನ ತಂದೆ ಸಿಂಧೂರ ಓಲೆಕಾರ. ಓಲೆಕಾರರಿಗೆ ಸರ್ಕಾರ ಉಂಬಳಿಯಾಗಿ ಕೊಟ್ಟ ಜಮೀನಿನಲ್ಲಿ ಒಕ್ಕಲುತನಮಾಡುತ್ತಿದ್ದ ಸಾಬಣ್ಣ. ಊರಿನ ಚಾಕ್ರಿ ಕೆಲಸ ಹಾಗೂ ಒಕ್ಕಲುತನವನ್ನು ಸಮರ್ಥವಾಗಿ ನೆರವೇರಿಸಿಕೊಂಡು, ಊರಿನ  ಕೆಲಸ ಗಳು ಬಂದಾಗ ಹೊಲದ ಕೆಲಸಗಳನ್ನು ಬಾಲಕನಾದ ಲಕ್ಷ್ಮಣಮಾಡುತ್ತಿದ್ದನು. ಹೊಲದ ಕೆಲಸದಲ್ಲಿ ತಾಯಿ ನರಸವ್ವ ಲಕ್ಷ್ಮಣನಿಗೆ ಸಹಾಯಮಾಡುತ್ತಿದ್ದಳು. ಹಲವಾರು ವರ್ಷಗಳು ಕಳೆದ ನಂತರ ಸಾಬಣ್ಣ ಮರಣ ಹೊಂದಿದ ನಂತರ ಊರಿನ ಓಲೆಕಾರಿಕೆ ಕೆಲಸ ಲಕ್ಷ್ಮಣನಿಗೆ ದೊರೆಯಿತು.

ಚಿಕ್ಕವಯಸ್ಸಿನಿಂದ ಶಿಸ್ತಿನ ಸಿಪಾಯಿ ಆಗಿ ಬಾಳಿದ ಲಕ್ಷ್ಮಣ ಈ ಚಾಕ್ರಿ ಕೆಲಸದ ಜೊತೆಗೆ ಒಕ್ಕಲುತನವನ್ನು ಅಚ್ಚುಕಟ್ಟಾಗಿ ನೆರವೇರಿಸಿವುದರ ಜೊತೆಗೆ ಗುಂಡುಎತ್ತುವುದು, ಕವಣಿಕಲ್ಲು ಬೀಸುವುದು, ಕುಸ್ತಿ ಆಡುವುದು, ಬಂಡಿ ಎಳೆಯುವುದು ಹೀಗೆ ಹಲವಾರು ದೇಶಿಕ್ರೀಡೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಬೆಳೆದು ಉತ್ತಮ ಸಾಹಸಿಗ ಎಂದು ಹೆಸರು ಗಳಿಸಿದನು. ಎಷ್ಟೋ ಸಲ ಅವರ ತಾಯಿ ತಾಲಿಮ ಮನೆಗೆ ಬಂದು ಹೊಲದಾಗ ಬಂದ ಬೆಳೆ “ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗೈತಿ” ಎಂದು ಹೇಳಿ ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಭೂಮಿ ತಾಯಿಯ ಬಗ್ಗೆ ಅಪಾರ ಗೌರವ ಹೊಂದಿದ ಲಕ್ಷ್ಮಣ ಹೊಸದಾಗಿ ಮದುವೆಯಾದ ಸಂದರ್ಭದಲ್ಲಿ ಹೆಂಡತಿಯೊಂದಿಗೆ ರಸನಿಮಿಷ ಕಳೆಯುವುದನ್ನು ಬಿಟ್ಟು ಹೊಲದಲ್ಲಿ ನಟ್ಟು ಕಡಿಯುವುದು, ಕೃಷಿ ಸ್ಪರ್ಧೆಯಲ್ಲಿ ಬಹುಮಾನ ಪಡೆಯುವಂತ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡು, ಗೌಡರ ಹೊಲದ 3 ಅಕ್ಕಡಿ ಜೋಳದ ಕನಕಿ ಕೂಡಿಹಾಕಿ 80 ಚೀಲ ಜೋಳದ ರಾಶಿ ಮಾಡಿದ್ದು ಇತಿಹಾಸವೇ ಸರಿ.

ಹೆಮ್ಮಾರಿಯಾಗಿ ಬಂದ ಬರ

ಊರಿನಚಾಕ್ರಿ ಜೊತೆಗೆ ಒಕ್ಕಲುತನವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವ ಸಂದರ್ಭದಲ್ಲಿ ಜತ್ತಭಾಗಕ್ಕೆ ಬಂದೆರಗಿದ್ದು ಬರಗಾಲ, ನಮ್ಮ ಕೃಷಿಕರಿಗೆ ಮಳೆ ದೇವತೆ ಯಾದರೆ ಬರ ಹೆಮ್ಮಾರಿಯಾಗುತ್ತದೆ. ಹೊಟ್ಟೆಗೆ ಹಿಟ್ಟಿಲ್ಲದೆ ತೊಂದರೆಯಲ್ಲಿ ಸಿಕ್ಕಿಕೊಂಡ ರೈತ ಕುಟುಂಬಗಳು ಜೀವನವನ್ನು ಸಾಗಿಸುವುದು ಬಹಳ ದುಸ್ತರವಾಗಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಬ್ರಿಟೀಷ್ ಸರ್ಕಾರ ಕಂದಾಯ ವಸೂಲಾತಿಗೆ ಕ್ರಮಕೈಗೊಂಡಾಗ ಅದರ ವಿರುದ್ಧ ಪ್ರಥಮವಾಗಿ ಬಂಡೆದ್ದವನು ಸಿಂಧೂರಿನ ಲಕ್ಷ್ಮಣ. ಸರ್ಕಾರಿ ನೌಕರಿಯಲ್ಲಿದ್ದು ತಮ್ಮ ನೌಕರಿ ಹಂಗನ್ನು ಬಿಟ್ಟು ಅಧಿಕಾರಿಗಳು ತೆಗೆದುಕೊಂಡ ನಿರ್ಧಾರವನ್ನು ದಿಕ್ಕರಿಸುವದು ಸಾಮಾನ್ಯ ಮಾತಲ್ಲ, ಸಾಮಾನ್ಯರಿಗೂ ಬರುವಂತ ಗುಣವು ಅಲ್ಲಾ. ಸಾಮಾನ್ಯಜನರು ಪಡುವ ತೊಂದರೆಯನ್ನು ಅನುಲಕ್ಷಿಸಿ ಸರ್ಕಾರಕ್ಕೆ ಸವಾಲು ಹಾಕಿ “ಮಳೆ ಇಲ್ಲದೆ ಘೋರ ಬರಗಾಲ ಬಂದೈತಿ ಈ ವರ್ಷದ ಬರಾಡ (ಕಂದಾಯ) ಸೂಟಮಾಡಿ” ಎಂದು ಅಧಿಕಾರಿ ಗಳನ್ನು ವಿನಂತಿಸಿಕೊಂಡನು. ಈ ಭಾಗದ ಬಡವರಿಗಾಗಿ ನನ್ನ ನೌಕರಿ ಹೋದರು ಚಿಂತೆ ಯಿಲ್ಲಾ ಜನಸುಖದಿಂದ ಇರಬೇಕೆಂಬುದು ಲಕ್ಷ್ಮಣನ ಆಸೆಯಾಗಿತ್ತು.

ಬರಗಾಲದ ಉಪಯೋಗವನ್ನು ಪಡೆದುಕೊಂಡ ಶ್ರೀಮಂತರು, ವ್ಯಾಪಾರಸ್ಥರು ಹೊಲ ಮನೆ ಬರೆಯಿಸಿಕೊಂಡು ದುಬಾರಿಬಡ್ಡಿಯಂತೆ ದುಡ್ಡು, ಆಹಾರ ಸಾಮಗ್ರಿಗಳನ್ನು ಕೊಡುತ್ತಿ ದ್ದರು. ಬಂಡವಾಳಶಾಹಿಗಳು ಬಡಕುಟುಂಬಗಳಿಗೆ ಮಾನಸಿಕ ತೊಂದರೆಕೊಡುತ್ತಿದ್ದರು. ಇಂತಹ ಪ್ರಸಂಗಗಳನ್ನು ಕಂಡುಕೆಂಡಮಂಡಲನಾದ ಲಕ್ಷ್ಮಣ ಬಂಡವಾಳಶಾಹಿಗಳ ವಿರುದ್ಧ ಬಂಡಾಯವೆದ್ದು ಸಾಮಾನ್ಯ ಜನರಿಗೆ ನ್ಯಾಯದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಡಿದನು. ಅದೇ ರೀತಿ ಬ್ರಿಟೀಷ್ ಅಧಿಕಾರಿಗಳ ವಿರುದ್ಧ ಹೋರಾಡಿ ತನ್ನ ನೌಕರಿಯನ್ನು ಕಳೆದುಕೊಂಡು “ಸೂರಿಲ್ಲದವರ ಬಾಳಿಗೆ ಆಸರೆ” ನೀಡಿದ್ದಾನೆ. ದಬ್ಬಾಳಿಕೆ ಮಾಡಿದ ಶ್ರೀಮಂತರಿಗೆ “ಯುಗಾದಿತನಕಾ ಬರಕೋ ಉಗಾದಿ ಆದ ಮ್ಯಾಲ ಹರಕೊ” ಎಂಬ ಮಾತುಗಳನ್ನಾಡಿ ಶ್ರೀಮಂತರಿಗೆ ಎಚ್ಚರಿಕೆ ನೀಡಿದ್ದಾನೆ.

ಇತಿಹಾಸಬಲ್ಲವರು, ಇತಿಹಾಸ ಓದಿದವರು ಇತಿಹಾಸ ನಿರ‌್ಮಿಸಲು ತೊಂದರೆಯಾಗು ವುದಿಲ್ಲ. ಓದುಬರಹಬಾರದ ಕೃಷಿ ಕುಟುಂಬದಲ್ಲಿ ಬೆಳೆದ ಲಕ್ಷ್ಮಣನಂತಹ ವೀರರು ನಾಡಿಗೆ ನೀಡಿದ ಕೊಡುಗೆ ಅಪಾರ. ಇಂತವರು ಇತಿಹಾಸ ಸೃಷ್ಟಿಮಾಡಲು ಎಷ್ಟು ತೊಂದರೆ ಪಡಬೇಕಾ ಗುತ್ತದೆ, ಮತ್ತು ಅದರ ಹಿಂದಿನ ಶ್ರಮವನ್ನು ನಾವು ಲಕ್ಷ್ಮಣನ ಚರಿತ್ರೆ ಓದಿಯೇ ತಿಳಿಯ ಬೇಕು. ಲಕ್ಷ್ಮಣ ಇಂದು ನಮ್ಮ ಮುಂದೆ ಇಲ್ಲ ಆದರೆ ಅವರು ತೋರಿಸಿದ ಅನುಕಂಪ, ದಯೆ, ಕರ್ತವ್ಯನಿಷ್ಠೆ, ಅನ್ಯಾಯದ ವಿರುದ್ಧ ಬಂಡೇಳುವ ಮಾತುಗಳು ಇನ್ನೂ ಹಸಿಹಸಿ ಯಾಗಿವೆ. ಅಂತಹ ವ್ಯಕ್ತಿಗಳು ಶಕ್ತಿಯಾಗಿ ಬೆಳೆದು ಮುಂಬರುವ ಯುವ ಪೀಳಿಗೆಗೆ ಮಾದರಿ ಯಾಗಿದ್ದಾರೆ.  ಅವರಂತಹ ಆದರ್ಶಗಳನ್ನು ನಾವೆಲ್ಲ ಬೆಳೆಸಿಕೊಂಡು ಬಾಳುವುದು ಇಂದಿನ  ಜರೂರತೆಯಾಗಿದೆ.

ಸಿಂಧೂರ ಲಕ್ಷ್ಮಣನ ಕುಟುಂಬದವರ ಪರಿಚಯ

ಲಕ್ಷ್ಮಣನ ತಂದೆ : ಸಾಬು ಲಕ್ಷ್ಮಣ ನಾಯಿಕ
ತಾಯಿ : ನರಸವ್ವ, ನರಸವ್ವನ ತವರೂರ:ರಡ್ಡೇರಹಟ್ಟಿ, ತಾಲೂಕ : ಅಥಣಿ ಲಕ್ಷ್ಮಣನ ಹೆಂಡತಿ: ಚಂದ್ರವ್ವ (ಅಕ್ಕನ ಮಗಳು)
ಲಕ್ಷ್ಮಣನ ಮಗನು : ಸಾಬು, ಮೊಮ್ಮಗ : ಭೀಮು. ಲಕ್ಷ್ಮಣನ ಕಕ್ಕನು: ಭೀಮಣ್ಣ (ಈತನ ಹೆಸರನ್ನು ಲಕ್ಷ್ಮಣನ ಮೊಮ್ಮಗನಿಗೆ ಇಡಲಾಗಿದೆ.)
ಲಕ್ಷ್ಮಣನ ಅಕ್ಕಂದಿರು : ನರಸು, ಸಕ್ರವ್ವ, ಸತ್ಯವಳನ್ನು ರಡ್ಡೇರಹಟ್ಟಿಗೆ ಕೊಟ್ಟಿತ್ತು. ಸಕ್ರವಳನ್ನು ನೇಸೂರಿಗೆ ಕೊಟ್ಟಿತ್ತು.
ಲಕ್ಷ್ಮಣನ : ನರಸು, (ಸತ್ಯವ್ವನ ಮಗನು). ರಾಯಪ್ಪ (ಸಕ್ರವ್ವನ ಮಗ).
ಅಳಿಯಂದಿರು ನರಸಪ್ಪನ ಕಕ್ಕನ ಮಕ್ಕಳು:ಸಾಬ, ಗೋಪಾಲ, ಧರ್ಮ.
ಲಕ್ಷ್ಮಣನ ಸೋದರ : ಚಂದ್ರವ್ವ (ಸಕ್ರವ್ವನ ಮಗಳು, ಲಕ್ಷ್ಮಣನ ಹೆಂಡತಿ) ಸತ್ಯವ್ವ
ಸೊಸಿಯಂದಿರರು : (ಸತ್ಯವ್ವನ ಮಗಳು ನರಸಪ್ಪನ ತಂಗಿ) ಸಗರವ್ವ (ನರಸಪ್ಪ ದ್ವಿತೀಯ ತಂಗಿ, ಇವಳನ್ನು ದೇವರಿಗೆ ಬಿಟ್ಟಿತ್ತು)
ಲಕ್ಷ್ಮಣ ಸಹೋದರ : ಇಲ್ಲ, ಭೀಮಣ್ಣನು ಸಹೋದರನಂತೆ ಇದ್ದನು.
ಲಕ್ಷ್ಮಣನ ಊರು : ಸಿಂಧೂರ ತಾ.ಜತ್ತಿ (ಆಗ ಸಂಸ್ಥಾನ).

* * *