ಈ ದಕ್ಷಿಣ ಕನ್ನಡದ ಮಣ್ಣು ತುಂಬಾ ವಿಶಿಷ್ಟ. ಇಲ್ಲಿ ಎಲ್ಲವೂ ಸಮೃದ್ಧ. ಮೀನು, ಮಳೆ, ತೆಂಗು, ಕಂಗು, ಬ್ಯಾಂಕ್ ಇತ್ಯಾದಿ. ಅನೇಕ ವಿಶಿಷ್ಟ ದೈವ-ದೇವರುಗಳ ನೆಲೆವೀಡಾದ ಈ ನಾಡು ಕನ್ನಡಮ್ಮನ ಸುಂದರ ಸೆರಗೂ ಹೌದು-ನಾಡಿನ ಬೆರಗೂ ಹೌದು. ಕೊಡಲಿರಾಮನ ಕಡಲತಡಿಯಲ್ಲಿ ಅನೇಕ ಕವಿಗಳು, ಸಾಹಿತಿಗಳು, ಸಂಘಟಕರು, ಸಮಾಜಸೇವಕರು, ಧೈರ್ಯಶಾಲಿಗಳು ಬಾಳಿ ಬೆಳಗಿದ್ದಾರೆ. ಇಂತಹ ಮಹಾನ್ ಸಾಧಕರಲ್ಲೊಬ್ಬರನ್ನು ಹುಡುಕುತ್ತಾ ನೀವು ಕರ್ನಾಟಕ ಬ್ಯಾಂಕಿನ ಯಾವುದೇ ಶಾಖೆಗೆ ಹೋಗಿ, ಪ್ರಾದೇಶಿಕ ಕಛೇರಿಗೆ ಭೇಟಿ ನೀಡಿ. ಕೇಂದ್ರ ಕಛೇರಿಗೆ ಬನ್ನಿ. ಅಲ್ಲಿ ಸಿಕ್ಕ ಉದ್ಯೋಗಿಗಳನ್ನೋ ಅಥವಾ ಬಹುಕಾಲದ ಗ್ರಾಹಕರನ್ನೋ ಹೀಗೇ ಮಾತಿಗೆಳೆಯಿರಿ. ಅವರ ನೆನಪಿನ ಸಂಚಿಗೆ ಕೈ ಹಾಕಿ ಗತಕಾಲದ ನೆನಪುಗಳನ್ನು ಕೆದಕಿ. ಉದ್ಯೋಗಿಗಾದರೆ ಬ್ಯಾಂಕಿಗೆ ಸೇರಿದ ಹಿನ್ನೆಲೆ ಕೇಳಿ. ಗ್ರಾಹಕನಿಗಾದರೆ ಬ್ಯಾಂಕಿನೊಂದಿಗೆ ಗಟ್ಟಿಗೊಂಡ ಸಂಬಂಧದ ಬಗ್ಗೆ ಮಾತನಾಡಿ. ಈ ಎಲ್ಲ ಮಾತುಗಳ ಮಥನದಿಂದ ನಿಮಗೆ ಒಬ್ಬ ದಿವ್ಯ ವ್ಯಕ್ತಿಯ -ಪುರುಷನ ಅಸ್ತಿತ್ವ ಆಶೀರ್ವಾದ ಈ ಬ್ಯಾಂಕಿನ ಉಸಿರಾಗಿದೆ-ಉಸಿರಾಗಿತ್ತು ಎಂದು ಗೋಚರವಾಗದೆ ಇರದು. ಯಾರು ಆ ಮಹನೀಯ ಎಂದು, ತಲೆ ಕೆರೆದುಕೊಳ್ಳುವಾಗಲೆ ಗೊತ್ತಾಗಿ ಬಿಡುತ್ತದೆ ಅವರೇ ಅಡಿಗರು ಎಂದು. ಜನಸಾಮಾನ್ಯರ ಮನೆಮಾತಾಗಿದ್ದ ಈ ಶ್ರೀ ಅಡಿಗರು ಅರ್ಥಾತ್ ಶ್ರೀ ಕೆ. ಎಸ್. ಎನ್. ಅಡಿಗರು ಎಂದರೆ ಶ್ರೀ ಕಕ್ಕುಂಜೆ ಸೂರ್ಯ ನಾರಾಯಣ ಅಡಿಗರು. ಬ್ಯಾಂಕಿನ ಬಹುಪಾಲು ಉದ್ಯೋಗಿಗಳ ಪ್ರಾತಃಸ್ಮರಣೀಯರು.

ಬರೀ ಬ್ಯಾಂಕೊಂದರ ನಿರ್ಮಾತೃವೇ ಈ ಅಡಿಗರು? ಅಲ್ಲಲ್ಲ; ಅಡಿಗರದು ಬಹುರೂಪಿಯಾದ ಸಾರ್ವಜನಿಕ ಬದುಕು. ಜನಸೇವೆಗಾಗಿ ದುಡಿದ ತ್ಯಾಗಜೀವಿ. ದಕ್ಷಿಣ ಕನ್ನಡದ ಅಭಿವೃದ್ಧಿಯ ಹರಿಕಾರರಲ್ಲಿ ಅಗ್ರಪಂಕ್ತಿಯಲ್ಲಿ ಪ್ರಸ್ತಾಪವಾಗುವ ಕೆಲವೇ ಕೆಲವು ಹೆಸರುಗಳಲ್ಲಿ ಕೆ.ಎಸ್.ಎನ್. ಒಂದು. ಅವರು ಕಟ್ಟಿದ ಬ್ಯಾಂಕು, ನಿರ್ಮಿಸಿದ ಮಂಗಳೂರು, ಶೈಕ್ಷಣಿಕ ರಂಗದಲ್ಲಿಯ ಸಾಧನೆ, ಮಾನವತೆಗಾಗಿ ಮಿಡಿದ ಬದುಕು, ಜಗದಳಲನ್ನೇ ನಿವಾರಿಸಹೊರಟ ಸಂಕಲ್ಪ- ಇವೆಲ್ಲವುಗಳೂ ಅವರ ಸಾಧನೆಯ ಗಾಥೆಗಳನ್ನು ಬಿಚ್ಚಿಡುತ್ತವೆ.

ಕೌಟುಂಬಿಕ ಹಿನ್ನೆಲೆ – ಅಡಿಗರು ಬಂದರು ದಾರಿಬಿಡಿ!

ಕಕ್ಕುಂಜೆ ಕೋಟದ ಸಮೀಪದ ಒಂದು ಚಿಕ್ಕ ಹಳ್ಳಿ. ಈ ಹಳ್ಳಿಯ ಅಡಿಗರ ಮನೆತನ ಕೋಟದ ಸುತ್ತು ಮುತ್ತೆಲ್ಲ ಹೆಸರುವಾಸಿ. ಕಕ್ಕುಂಜೆ ಅಡಿಗರು ಬಂದರೆಂದರೆ ಕೋಟದ ಜನ ಬೆರಗುಗಣ್ಣಿನಿಂದ ನೋಡುತ್ತಿದ್ದರು. ಈ ಅಡಿಗರ ಪೈಕಿ ಸೋದರದ್ವಯ ರಿಬ್ಬರು ತಮ್ಮ ವಕೀಲಿ ವೃತ್ತಿಯಿಂದ ಪ್ರಖ್ಯಾತರಾಗಿದ್ದರು. ಅವರೆಂದರೆ ಶ್ರೀ ಯಜ್ಞ ನಾರಾಯಣ ಅಡಿಗ ಮತ್ತು ಶ್ರೀ ಸದಾಶಿವ ಅಡಿಗ. ಯಜ್ಞನಾರಾಯಣರು ತಮ್ಮ ವಕೀಲಿ ವೃತ್ತಿಯನ್ನು ದೂರದ ಮದ್ರಾಸಿನಲ್ಲಿ ವಿಸ್ತರಿಸಿದರೆ ಸದಾಶಿವ ಅಡಿಗರು ತಮ್ಮ ವೃತ್ತಿಯನ್ನು ಮಂಗಳೂರಿನಲ್ಲಿ ಕೈಗೊಂಡಿದ್ದರು. ಈ ಉಭಯರೂ ಕೂಡಾ ಕೋಟದ ಆಸುಪಾಸಿನ ಗೌರವಾನ್ವಿತರಾಗಿದ್ದರು. ಅಡಿಗ ಮನೆತನದ ಕೀರ್ತಿಯನ್ನು ಮತ್ತಷ್ಟು ಬೆಳಗಲೋಸುಗ ಎಂಬಂತೆ ಸೂರ್ಯನಾರಾಯಣ ಅಡಿಗರು ಶ್ರೀ ಸದಾಶಿವ ಅಡಿಗ ಹಾಗೂ ಶ್ರೀಮತಿ ಮಹಾಲಕ್ಷ್ಮಿ ಅಮ್ಮ ಇವರ ಮಗನಾಗಿ ‘ಆನಂದ’ ಸಂವತ್ಸರ 1914ರ ನವಂಬರ 5ರಂದು ಜನಿಸಿದರು.

ವಿದ್ವತ್‌ಪೂರ್ಣ ಕುಟುಂಬ

ಶ್ರೀ ಸದಾಶಿವ ಅಡಿಗರು ಮಂಗಳೂರಲ್ಲಿ ವಕೀಲರಾಗಿ ಖ್ಯಾತಿ ಹೊಂದಿದುದಲ್ಲದೆ ಮಂಗಳೂರಿನ ಬಾರ್ ಆಸೋಸಿಯೇಷನ್ ಕಾರ್ಯದರ್ಶಿಗಳಾಗಿ, ಅಧ್ಯಕ್ಷರಾಗಿ ಬಹುಕಾಲ ಕೆಲಸ ಮಾಡಿದರು. ಮಂಗಳೂರಿನ ನಗರಸಭೆ ಹಾಗೂ ದಕ್ಷಿಣಕನ್ನಡ ಜಿಲ್ಲಾ ಬೋರ್ಡಿಗೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಕೆಲಕಾಲ ಮದರಾಸು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರೂ ಆಗಿದ್ದರು. ಕರ್ಣಾಟಕ ಬ್ಯಾಂಕಿನ ಸ್ಥಾಪಕ ನಿರ್ದೇಶಕರಾಗಿ ಸುಪ್ರಸಿದ್ಧರಾಗಿದ್ದರು.

ಕುಂದಾಪುರ ತಾಲೂಕು ಬೋರ್ಡಿನ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಬೋರ್ಡಿನ ಸದಸ್ಯರು ಆಗಿದ್ದ ಶ್ರೀ ಹಲಸನಾಡು ಮಾದಪ್ಪಯ್ಯನವರ ಮಗಳು ಶ್ರೀಮತಿ ಮಹಾಲಕ್ಷ್ಮಿ ಅಮ್ಮ ಅಡಿಗರ ತಾಯಿ.

ಸೇವಾಕ್ಷೇತ್ರದಲ್ಲಿ ತೊಡಗಿಸಿಕೊಂಡ ಕುಟುಂಬಗಳ ಆಡುಂಬೊಲದಲ್ಲಿ  ಜನಿಸಿದ ಈ ಮಗು ಸಹಜವಾಗಿಯೇ ಸಾರ್ವಜನಿಕ ಕ್ಷೇತ್ರದಲ್ಲಿ ತ್ರಿವಿಕ್ರಮನಾಗಿ ಬೆಳೆಯಿತು.

ಅಡಿಗರು ಜನಿಸಿದ್ದು, ಬೆಳೆದದ್ದು, ಅಭ್ಯಸಿಸಿದ್ದು ಎಲ್ಲ ಮಂಗಳೂರಿನಲ್ಲಿಯೇ.  ಅವರು ಪ್ರಾಥಮಿಕ ಶಿಕ್ಷಣ ಪಡೆದದ್ದು ಸೈಂಟ್ ಸೆಬಾಸ್ಟಿಯನ್ಸ್ ಹಾಯರ್ ಎಲಿಮೆಂಟರಿ ಶಾಲೆಯಲ್ಲಿ, ಕೆನರಾ ಹೈಸ್ಕೂಲಿನಲ್ಲಿಯ ವಿದ್ಯಾಭ್ಯಾಸದ ನಂತರ ಅವರು ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಹಾಗೂ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ಪದವಿಯನ್ನು ಪಡೆದರು. ಮೈಸೂರು ವಿಶ್ವವಿದ್ಯಾನಿಲಯದ ಬಿ.ಎ. ಪದವಿಯ ಪ್ರಾಪ್ತಿಯ ನಂತರ ಕಾನೂನು ವಿದ್ಯಾಭ್ಯಾಸಕ್ಕಾಗಿ ಮದರಾಸಿನತ್ತ ಪಯಣಿಸಿದರು. 1937ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಎಲ್. ಪದವಿಯ ಪ್ರಾಪ್ತಿಯೊಂದಿಗೆ ಹಿಂದಿರುಗಿದರು.

ಅಡಿಗರದು ಆರಂಭದಿಂದಲೂ ಬಹುಮುಖ ವ್ಯಕ್ತಿತ್ವ. ಬಹುಶ್ರುತ ಪಾಂಡಿತ್ಯ. ಧ್ಯಾನಸ್ಥ ಅರ್ಜುನನಂತೆ ಶಾಲಾ ಕಾಲೇಜಿನ ಪಠ್ಯದಲ್ಲಿ ತೊಡಗಿ ಕಲಿಯುವುದರಲ್ಲಿ ಯಾವಾಗಲೂ ಅಗ್ರಪಟ್ಟ. ಹಾಗಂತ ಅವರು ಬರೀ ಪುಸ್ತಕದ ಹುಳುವಾಗಿ ಕೂಚುಭಟ್ಟ ನಾಗಲಿಲ್ಲ. ಆಟದ ಬಯಲು ಯಾವಾಗಲೂ ಅವರನ್ನು ಕೈ ಬೀಸಿ ಕರೆಯುತ್ತಿತ್ತು. ಓದುವ ಸಮಯವನ್ನು ಓದಿಗೆ ಮೀಸಲಾಗಿಟ್ಟ ಅಡಿಗರು ಶಾಲಾ ಕಾಲೇಜುಗಳಲ್ಲಿ ಕ್ರಿಕೆಟ್, ಬ್ಯಾಡ್ಮಿಂಟನ್, ವಾಲಿಬಾಲ್, ಬಾಸ್ಕೆಟ್ ಬಾಲ್ ಇತ್ಯಾದಿ ಆಟಗಳಲ್ಲಿ ಭಾಗವಹಿಸಿ ಕ್ರೀಡಾರಂಗದಲ್ಲಿ ಸಹ ಕೀರ್ತಿಪತಾಕೆಯನ್ನು ಹಾರಿಸಿದ್ದರು. ವ್ಯಾಸಂಗಕ್ಕಾಗಿ ಲಭ್ಯವಾದ ಪ್ರಶಸ್ತಿ ಪಾರಿತೋಷಕಗಳೊಟ್ಟಿಗೆ ಸ್ಪರ್ಧಿಸುವಂತೆ ಆಟೋಟಗಳಲ್ಲಿ ಲಭ್ಯವಾದ ಕಪ್‌ಗಳು ಅವರ ಮನೆಯ ಬೀರುವನ್ನು ಅಲಂಕರಿಸಿದ್ದುವು. ಅಡಿಗರ ಕ್ರೀಡಾಪ್ರೇಮ ಅವರ ವಿದ್ಯಾರ್ಥಿ ಜೀವನದ ನಂತರವೂ ಮುಂದುವರಿಯಿತು. ಕರ್ಣಾಟಕ ಬ್ಯಾಂಕಿನ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾಗ ಕ್ರೀಡಾಳುಗಳನ್ನು ಗುರುತಿಸಿ ಬ್ಯಾಂಕಿನಲ್ಲಿ ಉದ್ಯೋಗ ವನ್ನು ಕಲ್ಪಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರಿಂದ ಉಪಕೃತವಾದ ಜನರ ಒಂದು ದೊಡ್ಡ ದಂಡೇ ಇದೆ. ಮಂಗಳೂರು ನಗರ ಸಭೆಯ ಅಧ್ಯಕ್ಷರಾಗಿ ಅಭಿವೃದ್ಧಿ ಕಾರ್ಯ ಗಳಿಗಾಗಿ ಕೆಲ ಜಮೀನು ವಶಪಡಿಸಿಕೊಳ್ಳುವುದು ಅಭಿವೃದ್ಧಿಯ ಭಾಗವಾಗಿತ್ತು. ಎಂತಹ ಸಂದಿಗ್ಧ ಸಮಯದಲ್ಲೂ ಆಟದ ಮೈದಾನಗಳನ್ನು ಅಭಿವೃದ್ಧಿಯ ನೆಪದಲ್ಲಿ ಆಪೋಷನ ತೆಗೆದುಕೊಳ್ಳುತ್ತಿರಲಿಲ್ಲ.

ನೀಳಕಾಯದ ಸ್ಫುರದ್ರೂಪಿಯಾದ ಅಡಿಗರದು ತುಂಬಾ ಎತ್ತರದ ವ್ಯಕ್ತಿತ್ವ. ಆರೋಗ್ಯಪೂರ್ಣ ಸುಂದರ ದೇಹ ದಾರ್ಢ್ಯದ, ಉನ್ನತ ನಿಲುವಿನ ಅಡಿಗರು ಸಾರ್ವಜನಿಕ ಬದುಕಿನಲ್ಲೂ ತುಂಬಾ ಹಿರಿದಾದುದನ್ನೇ ಸಾಧಿಸಿದರು. ಬಾಲ್ಯ ಕಾಲದ ಬಳುವಳಿಯಾಗಿ ಲಭ್ಯವಾದ ಸೇವಾ ಸಂಕಲ್ಪಿತ ಕೌಟುಂಬಿಕ ಹಿನ್ನೆಲೆ ಅವರನ್ನು ವಿದ್ಯಾಭ್ಯಾಸದ ಕಾಲದ ಸಂದರ್ಭದಿಂದಲೇ ಸಾರ್ವಜನಿಕ ರಂಗವನ್ನು ಪ್ರವೇಶಿಸುವಂತೆ ಪ್ರೇರೇಪಿಸಿತು. ಅಂತೆಯೇ ಸ್ಕೌಟ್ ಚಳುವಳಿಯ ಮೂಲಕ ಅವರು ಸಾರ್ವಜನಿಕ ಸೇವೆಗೆ ಧುಮುಕಿದರು. ಕೆಲವು ವರ್ಷಗಳ ಕಾಲ ಸ್ಕೌಟ್ ಬುಲ್ಲೆಟಿನ ಸಂಪಾದಕರಾಗಿ ದುಡಿದರು. ಕನ್ನಡ ನಾಡು ನುಡಿಯ ಬಗ್ಗೆ ಅಪಾರ ಪ್ರೀತಿ ಅಡಿಗರಿಗೆ. ನುಡಿ ಪ್ರಸಾರದ ಹಂಬಲ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು – ಇದರ ದಕ್ಷಿಣ ಕನ್ನಡ ಮತ್ತು ಕೊಡಗು ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುವಂತೆ ಪ್ರೇರೇಪಿಸಿತು. ಸಾಹಿತ್ಯದ ಕೆಲಸಗಳಿಗೆ ಮೀಸಲಾದ ಮಂಗಳೂರು ಮಿತ್ರ ಮಂಡಲಿಯ ಕ್ರಿಯಾಶೀಲ ಸದಸ್ಯರಾಗಿ ಕನ್ನಡ ಸೇವಾ ಕೈಂಕರ್ಯಕ್ಕೆ ತೊಡಗಿದರು. ವರ್ತಮಾನ ಪತ್ರಿಕೆಗಳಲ್ಲಿ ಸಮಕಾಲಿನ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಂದ ಮೂಡಿಬಂದ ಅವರ ಲೇಖನಗಳು ಅನೇಕ ವಿಚಾರಗಳ ಮೇಲೆ ಬೆಳಕನ್ನು ಚೆಲ್ಲಿದವು. 1941ರಲ್ಲಿ ತಮ್ಮ ಸೋದರನ ಸಹ ಲೇಖಕನಾಗಿ ಆಕಾಶವಾಣಿ ಎಂಬ ಕನ್ನಡ ಗ್ರಂಥದ ರಚನೆ ಮಾಡಿದರು. ಅಂದಿನ ಮದರಾಸು ಸರಕಾರ ಅವರ ಈ ಗ್ರಂಥಕ್ಕೆ ಬಹುಮಾನವನ್ನೂ ನೀಡಿತು. ಅಡಿಗರು ಕರ್ಣಾಟಕ ಏಕೀಕರಣ ಸಮಿತಿಯ ಒಬ್ಬ ಕಾರ್ಯದರ್ಶಿಯಾಗಿ ಕನ್ನಡ ನಾಡನ್ನು ಕಟ್ಟುವಲ್ಲಿ ತುಂಬಾ ಶ್ರಮಿಸಿದರು.

ಅಡಿಗರ ಮನೆ

ಶ್ರೀ ಕಕ್ಕುಂಜೆ ಸದಾಶಿವ ಅಡಿಗರಿಗೆ ಒಟ್ಟು ಐದು ಜನ ಮಕ್ಕಳು. ಶ್ರೀ ಅಡಿಗರೇ ಪ್ರಥಮರು. ನಂತರದವರು ಶ್ರೀಮತಿ ಕಮಲಾ ರಾವ್ (ಗಿರೀಶ್ ಕಾಸರವಳ್ಳಿಯವರ ಸಂಬಂಧಿ) ಶ್ರೀ ರಾಮಕೃಷ್ಣ ಅಡಿಗ, ಶೀನಿವಾಸ ಅಡಿಗ ಹಾಗೂ ಶ್ರೀಮತಿ ವಿಮಲ ಹೊಳ್ಳ (ಈಗಿನ ಅಡ್ವೋಕೇಟ್ ಜನರಲ್, ಶ್ರೀ ಉದಯಹೊಳ್ಳ ಅವರ ತಾಯಿ)

ಶ್ರೀ ಕೆ. ಸೂರ್ಯನಾರಾಯಣ ಅಡಿಗರಿಗೆ 5 ಜನ ಮಕ್ಕಳು. ಮೊದಲನೆಯವರು ಡಾ. ಮಾಧವ ಅಡಿಗ, ಯೂರಾಜಿಲಿಸ್ಟ್ ಆಗಿ ಆಸ್ಟ್ರೇಲಿಯಾ ದೇಶದಲ್ಲಿದ್ದಾರೆ. ಎರಡನೆಯವರಾದ ಶ್ರೀ ಸದಾಶಿವ ಅಡಿಗ ಇಂಜಿನಿಯರರಾಗಿ ಯು.ಎಸ್.ಎ.ನಲ್ಲಿದ್ದಾರೆ. ಮೂರನೆಯವರು ಶ್ರೀಮತಿ ಮೀರಾ ಆಚಾರ್. ಇವರು ಸಂತೃಪ್ತ ಕುಟುಂಬದ ಗೃಹಣಿಯಾಗಿ ಬೆಂಗಳೂರಿನಲ್ಲಿದ್ದಾರೆ. ಮಕ್ಕಳ ಚಿಕಿತ್ಸಾ ತಜ್ಞ ಡಾ. ರವಿಶಂಕರ ಅಡಿಗ ಇವರು ನಾಲ್ಕನೆಯವರು. ಡಾ. ರಘುವೀರ ಅಡಿಗರು ಐದನೆಯವರು. ಇವರೋರ್ವ ಆರ್ಥೋಪೆಡಿಕ್ ಸರ್ಜನ್. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದಾರೆ. ಶ್ರೀ ಅಡಿಗರಂತೆಯೇ  ಅವರ ಮಕ್ಕಳು ಕೂಡಾ ತುಂಬಾ ಪ್ರತಿಭಾವಂತರೇ.

ಶ್ರೀ ಕೆ.ಎಸ್.ಎನ್. ಅಡಿಗರ ಹಿರಿಯ ಮಗ ಡಾ. ಮಾಧವ ಅಡಿಗರ ಮಕ್ಕಳೇ ಶ್ರೀ ಆನಂದ ಅಡಿಗ ಹಾಗೂ ಶ್ರೀ ಅರವಿಂದ ಅಡಿಗ. ಶ್ರೀ ಅರವಿಂದ ಅಡಿಗ ಇತ್ತೀಚಿಗೆ ತಾವು ಬರೆದ ‘ವೈಟ್ ಟೈಗರ್’ ಕೃತಿಗೆ ಜಗತ್ತಿನ ಅತ್ಯುತ್ತಮ ಪುಸ್ತಕ ಪ್ರಶಸ್ತಿಯಾದ ‘ಬೂಕರ್’ ಪ್ರಶಸ್ತಿ ಪಡೆದು ನಾಡಿಗೆ ಕೀರ್ತಿ ತಂದಿದ್ದಾರೆ.

ಅಡಿಗರಿಗೆ ಕುಟುಂಬದ ಬಗ್ಗೆ ಜವಾಬ್ದಾರಿ ಇತ್ತಾದರೂ ವಿಪರೀತವಾದ ವ್ಯಾಮೋಹವಿದ್ದಿಲ್ಲ. ಜನಸಾಮಾನ್ಯರ ಮಕ್ಕಳಂತೆ ತಮ್ಮ ಮಕ್ಕಳು ಬೆಳೆಯಲಿ ಎಂಬ ಹಂಬಲ ಅವರದ್ದು. ‘ಉದಾರ ಚರಿತಾನಾಂತು ವಸುದೈವ ಕುಟುಂಬಕಂ’ ಎಂಬಂತೆ ಆಡಿಗರು ಉದಾರ ಚರಿತರೇ ಆಗಿದ್ದರು. ಇಂದಿನ ಜನರಂತೆ ಅವರು ‘ನ್ಯೂಕ್ಲಿಯಸ್’ ಕುಟುಂಬಕ್ಕೆ ಬದ್ಧರಾಗಿರಲಿಲ್ಲ. ಸಮಾಜಕ್ಕೆ ತನ್ನನ್ನು ಸಮರ್ಪಿಸಿಕೊಂಡ ಅವರ  ಮಕ್ಕಳಿಗೆ ಅಡಿಗರ ಸಮಯದ ಸಿಂಹಪಾಲು ದಕ್ಕುತ್ತಿರಲಿಲ್ಲ. ಡಾ. ರಘುವೀರ ಅಡಿಗರು ವಿವರಿಸುತ್ತಾರೆ. ಅಪ್ಪಯ್ಯ ಮನೆಯಲ್ಲಿರುತ್ತಿದ್ದುದೇ ಕಮ್ಮಿ. ಬೆಳಗಿನಿಂದ ಸಂಜೆಯವರೆಗೆ ಕೋರ್ಟು. ಅನಂತರ ನಗರಸಭೆ ಮತ್ತೆ ಸಮಾಜಸೇವೆ. ಮನೆಗೆ ಬಂದರೆ ಕಕ್ಷಿದಾರರ ಮಧ್ಯೆ ಸ್ಥಾಪಿತರಾಗಿರುತ್ತಿದ್ದ ಅಪ್ಪಯ್ಯ ನಮಗೆ ಸಿಕ್ಕುತ್ತಿದ್ದುದೇ ವಿರಳ. ಹಾಗಂತ ನಮ್ಮನ್ನು ಯಾವೊತ್ತೂ ಕಡೆಗಣಿಸಿದ್ದಿಲ್ಲ. ನಮ್ಮ ಅಗತ್ಯಗಳಿಗೆಲ್ಲ ಆದ್ಯತೆಯ ಮೇರೆಗೆ ಸ್ಪಂದಿಸುತ್ತಿದ್ದ ಅಪ್ಪಯ್ಯ ನಮಗೆ ಯಾವಾಗಲೂ ವಿಶೇಷ ಸವಲತ್ತುಗಳನ್ನು ಕೊಡಲು ಉತ್ಸುಕ ರಾಗಿರುತ್ತಿದ್ದಿಲ್ಲ. ಒಂದು ಜೊತೆ ಚಪ್ಪಲಿ ಸವೆದ ಬಳಿಕವೇ ಮತ್ತೊಂದು. ಪೆನ್ನು, ಪೆನ್ಸಿಲ್ ಇತ್ಯಾದಿ ಕಳೆದಾಗ ಸರಿಯಾದ ವಿವರಣೆ ಇತ್ತಾಗ ಮಾತ್ರ ಇನ್ನೊಂದು ಲಭ್ಯ. ನಾವು ಭಾರಿ ಶ್ರೀಮಂತರೆಂದು ಹೇಳಿಕೊಳ್ಳುವಂತೆ ಇದ್ದಿಲ್ಲವಾದರೂ ಬಡವರಂತೂ ಆಗಿದ್ದಿರಲಿಲ್ಲ. ಆದರೂ ಅಪ್ಪಯ್ಯನಿಗೆ ಅನಗತ್ಯ ಸಂಗ್ರಹದಲ್ಲಿ, ಆವಶ್ಯಕತೆಗಿಂತ ಹೆಚ್ಚಿನದನ್ನು ಹೊಂದುವುದರಲ್ಲಿ ಯಾವಾಗಲೂ ನಿರಾಸಕ್ತಿ. ಆ ‘ಅಪರಿಗ್ರಹ ನಿಗ್ರಹ’ ಗುಣವನ್ನೇ ನಮ್ಮಲ್ಲೂ ಬೆಳೆಸಲೆತ್ನಿಸುತ್ತಿದ್ದರು. ನಮ್ಮ ಮನೆಯಲ್ಲಿ ಮೀರಾ ಒಬ್ಬಳೇ ಮಗಳಾದ್ದರಿಂದ ಅಪ್ಪಯ್ಯನಿಗೆ ಅವಳ ಬಗ್ಗೆ ಸ್ವಲ್ಪ ಹೆಚ್ಚು ಪ್ರೀತಿ ಎನ್ನಬಹುದು.

ಮನೆಯಲ್ಲಿ ಕಟುವಾದ ಶಿಸ್ತಿನ ಪಾಲನೆಯ ಶಾಸನವೇನೂ ಇರಲಿಲ್ಲವಾದರೂ ಮಕ್ಕಳ ಅಶಿಸ್ತನ್ನು ಅವರು ಸಹಿಸುತ್ತಿರಲಿಲ್ಲ. ಮನೆ ಎದುರು ಕ್ರಿಕೆಟ್ ಆಡಿ ಗ್ಲಾಸು ಹುಡಿ ಮಾಡಬೇಡಿ ಎಂದು ತಾಕೀತು ಮಾಡಿದಾಗಲೂ ಆಟ ಮುಂದುವರಿಸಿದರೆ ಅಡಿಗರು ಹೊರಕ್ಕೆ ಬಂದು ಏನು? ಎಂದು ಸ್ವರ ಏರಿಸಿದರೆ ಮಕ್ಕಳ ಆಟ ಬಂದ್. ತೀರಾ ಕಠಿಣ ಹೃದಯದವರಾಗಿರದಿದ್ದ ಅಡಿಗರು ಮಕ್ಕಳೊಂದಿಗೆ ಗೆಳೆಯರಂತೆಯೂ ವರ್ತಿಸುತ್ತಿರಲಿಲ್ಲ. ಅಗತ್ಯವಿದ್ದಷ್ಟು ಮಾತು. ಅಗತ್ಯದಷ್ಟೇ ಸಹಾಯ ಹಾಗೂ ಪೂರೈಕೆ. ಮಕ್ಕಳ ಬೇಡಿಕೆಗಳ ಪೂರೈಕೆಗೆ ಪತ್ನಿಯ ಮಧ್ಯಸ್ಥಿಕೆ ಯಾವಾಗಲೂ ಬೇಕಾಗುತ್ತಿತ್ತು.

ದೀಪಾವಳಿ ಸಮಯ ಬಂದಾಗ ಪಟಾಕಿ ಉರಿಸುವ ವಿಚಾರದಲ್ಲೂ ಅಡಿಗರು ಆಸಕ್ತಿ ತೋರುತ್ತಿರಲಿಲ್ಲ. ಅವರಿಗೆ ಅದು ಹಣ ಪೋಲು ಮಾಡಿದಂತೆ ಭಾಸವಾಗುತ್ತಿತ್ತು. ಉಳ್ಳವರ ಮಕ್ಕಳು ಈ ರೀತಿ ಮದ್ದನ್ನು ಸುಟ್ಟು ಮೋಜು ಮಾಡಿದರೆ ಹೊಟ್ಟೆಗಿಲ್ಲದವರ ಮಕ್ಕಳ ಪಾಡೇನು? ಮಕ್ಕಳೊಟ್ಟಿಗಿದ್ದ ಈ ಬಿಗಿ ನಿಲುವು ಮೊಮ್ಮಕ್ಕಳೊಟ್ಟಿಗೆ ಅಡಿಗರಿಗಿದ್ದಿಲ್ಲ. ಚೇರ್ಮನ್ ಪದವಿಯಿಂದ ನಿವೃತ್ತರಾದ ಮೇಲೆ ತಾವೇ ಸ್ವತಃ ಮೊಮ್ಮಕ್ಕಳೊಂದಿಗೆ ಕ್ರಿಕೆಟ್ ಆಟವಾಡಿ ಅವರಿಗೆ ಖುಷಿಕೊಟ್ಟು ನಲಿದದ್ದುಂಟು.

ಅಡಿಗರು ಎಂದೂ ತಮ್ಮ ಮಕ್ಕಳಿಗಾಗಿ ಬೇರೆಯವರಲ್ಲಿ ಶಿಫಾರಸ್ಸು ಮಾಡಲಿಲ್ಲ. ಪ್ರತಿಭಾನ್ವಿತ ಮಕ್ಕಳಿಗೆ ಅದರ ಅಗತ್ಯ ಕೂಡ ಬೀಳಲಿಲ್ಲ. ಎಲ್ಲರೂ ಸ್ವಯಂಭೂ ವ್ಯಕ್ತಿಗಳಾಗಿ ಅಡಿಗರ ಕೀರ್ತಿ ಕಿರೀಟಕ್ಕೆ ಹೊನ್ನಗರಿಯನ್ನು ಸೇರಿಸಿದವರೇ.

ಮನೆಯಲ್ಲಿ ಶ್ರೀಮತಿ ಸರೋಜಿನಿಯವರು ಅಡಿಗರಿಗೆ ಪಡಿನೆಳಲಾಗಿ, ಬೆಂಗಾವಲಾಗಿ ತನ್ನನ್ನೇ ತಾನು ಸಮರ್ಪಿಸಿಕೊಂಡವರು. ಅವರೂ ಕೂಡಾ ಸಮಾಜ ಸೇವಾಸಕ್ತೆ. ಪತಿ ತನ್ನೊಬ್ಬರ ಸೊತ್ತು ಎಂಬಂತೆ ಭಾವಿಸಲಿಲ್ಲ. ಹೀಗಾಗಿ ಅಡಿಗರ ಲಭ್ಯತೆಯ ಕೊರತೆಯನ್ನು, ಪ್ರೀತಿಯ ಕೊರತೆ ಆದಂತೆ ಎಂದು ಅವರು ಭಾವಿಸಲಿಲ್ಲ.

ಅಡಿಗರದು ಒಂದು ಮನೆಯಲ್ಲ; ಅದೊಂದು ಧರ್ಮಛತ್ರ! ದಿನವೂ ಕನಿಷ್ಟ 5-6 ಜನ ನೆಂಟರಿಷ್ಟರೂ, ಸ್ನೇಹಿತರೂ ಇದ್ದದ್ದೇ! ಅವರಿಗೆ ಊಟೋಪಚಾರದ ವ್ಯವಸ್ಥೆ ಶ್ರೀಮತಿ ಸರೋಜಿನಿಯವರೇ ನಿರ್ವಹಿಸುತ್ತಿದ್ದರು. ಮನೆಗೆ ಬಂದ ಅತಿಥಿಗಳಿಗೆ ಯಾವಾಗಲೂ ಭೋಜನ ಸಿಕ್ಕುತ್ತಿತ್ತು. ಕೆಲವೊಮ್ಮೆ ಅಪರಾತ್ರಿಯಲ್ಲೂ ಕೂಡ ಅಡಿಗರ ಮನೆಗೆ ಅನಿರೀಕ್ಷಿತ ಅತಿಥಿಗಳ ಆಗಮನವಾಗುತ್ತಿತ್ತು. ಆಗ ಮನೆವಾಳ್ತೆಯ ಗೃಹಲಕ್ಷ್ಮಿ ಸ್ವಲ್ಪವೂ ಬೇಸರಿಸದೇ ಆ ರಾತ್ರಿಯೇ ಅನ್ನ, ಸಾರು ಇತ್ಯಾದಿ ಮಾಡಿ ಉಣ ಬಡಿಸುತ್ತಿದ್ದರು.

ಕುಂದಾಪುರದ ನೆಂಟರು, ಸ್ನೇಹಿತರು ಬೆಂಗಳೂರಿಗೆ ಹೋಗುವಾಗೊಮ್ಮೆ ಬರುವಾಗೊಮ್ಮೆ ಮಂಗಳೂರಿಗಿಳಿದು ಅಡಿಗರ ಮನೆಯಲ್ಲಿ ಊಟಮಾಡಿ ಹೋಗುವುದು ಅಲಿಖಿತ ಕಾನೂನು ಆಗಿತ್ತು. ಇನ್ನು ಅಡಿಗರ ಕಕ್ಷಿದಾರರಿಗೆಲ್ಲ ಅಡಿಗರ ಮನೆಯ ಊಟ, ವಾಸ್ತವ್ಯ ಹಾಗೂ ಅವರ ವಕಾಲತ್ತು ಎಲ್ಲವೂ ಉಚಿತವಾಗಿಯೇ ಲಭ್ಯವಾಗುತ್ತಿತ್ತು. ಬಂದ ಕಕ್ಷಿದಾರರು ಕೋರ್ಟು ಕೆಲಸ ಮುಗಿಯುವವರೆಗೆ ಅಡಿಗರ ಮನೆಯಲ್ಲಿ ತಂಗಿ ಊಟ ಉಪಾಹಾರ ಸ್ವೀಕರಿಸುತ್ತಿದ್ದರು.  ತಾವು ತಂದ ತರಕಾರಿಯನ್ನೋ, ತೆಂಗಿನಕಾಯಿಯನ್ನೋ, ಹಲಸನ್ನೋ ಅಡಿಗರಿಗೆ ಕೊಟ್ಟು ಹೋಗುತ್ತಿದ್ದರು. ಅಡಿಗರಿಗೆ ಯಾವೊತ್ತೂ ಹೇರಳ ಧನ ಸಂಪಾದಿಸುವ ಮನಸ್ಸೇ ಬರಲಿಲ್ಲ.  ಕರ್ಣಾಟಕ ಬ್ಯಾಂಕಿನ ಪೂರ್ಣಾವಧಿ ಚೇರ್‌ಮೇನ್ ಆಗುವವರೆಗೆ ಅವರು ನ್ಯಾಯಾಲಯಕ್ಕೆ ಹೋಗುತ್ತಿದ್ದರು. ಅಸಂಖ್ಯಾತ ಸಾರ್ವಜನಿಕ ಕೆಲಸಗಳ ಮಧ್ಯೆ ವಕೀಲಿ ವೃತ್ತಿಯನ್ನು ನಿಭಾಯಿಸುವುದು ಹರಸಾಹಸವಾಗಿತ್ತು. ಸಿವಿಲ್ ವ್ಯಾಜ್ಯಗಳನ್ನೇ ಕೈಗೆತ್ತಿಕೊಳ್ಳುತ್ತಿದ್ದ ಅಡಿಗರು ಸಮರ್ಥ ವಾಗಿಯೇ ವಾದಿಸುತ್ತಿದ್ದರಾದರೂ, ಅವರಲ್ಲಿ ಏನಕೇನ ಪ್ರಕಾರೇಣ ಖ್ಯಾತಿಗೆ ಬರುವ ಅಭಿಲಾಷೆಯಾಗಲಿ, ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ವ್ಯಾಜ್ಯವನ್ನು ಗೆಲ್ಲಲೇಬೇಕೆಂಬ ಛಲವಾಗಲಿ ಇರುತ್ತಿರಲಿಲ್ಲ. ಏನಿದ್ದರೂ ಅವರದು ಸತ್ಯದ ಪರವಾದ ಕಾಳಜಿ. ಬೆಳಿಗ್ಗೆ ಹನ್ನೊಂದು ಗಂಟೆಯಾಗುವುದಕ್ಕೂ ಅವರು ತಮ್ಮ ಕಾರನ್ನು ಕೋರ್ಟಿನ ಬಳಿ ನಿಲ್ಲಿಸುವುದಕ್ಕೂ ತಾಳಮೇಳ ಕೂಡಿ ಬರುತ್ತಿತ್ತು. ಬೆಳಗ್ಗಿನಿಂದ ಬಿಡುವಿರದ ಕೆಲಸಗಳಲ್ಲಿ ತೊಡಗಿದ ಅಡಿಗರು ಮತ್ತೆ ಉಂಡು ಪೋಷಾಕು ಧರಿಸಿ ಬರುವ ಧಾವಂತ ಎದ್ದು ಕಾಣುತ್ತಿತ್ತು. ಹುಟ್ಟಿನಿಂದಲೇ ಮುಂದಾಳತ್ವದ ಗುಣವನ್ನು ಹೊಂದಿದ್ದ ಅಡಿಗರು ಬಹು ಕಾಲ ಮಂಗಳೂರಿನ ಬಾರ್ ಎಸೋಸಿಯೇಶನ್‌ನ ಕಾರ್ಯದರ್ಶಿಗಳೂ ಆಗಿದ್ದರು. ತಮಗಿಂತ ಕಿರಿಯರಾದ ವಕೀಲರುಗಳನ್ನು ಅತ್ಯಂತ ಸ್ನೇಹ ಸಲುಗೆಯ ಭಾವದಿಂದ ಮಾತನಾಡಿಸುತ್ತಿದ್ದರು. ಅಡಿಗರ ಸ್ನೇಹಿತರಲ್ಲಿ ಸಾಹಿತಿ ಹಾಗೂ ವಕೀಲರಾದ ಶ್ರೀ ಸೇವ ನೇಮಿರಾಜ ಮಲ್ಲ ಕೂಡ ಒಬ್ಬರು. ನೇಮಿರಾಜ ಮಲ್ಲರಿಗೆ ಯಾವಾಗಲೂ ಸಲುಗೆಯಿಂದ ಸಾಯಿತಿ ಎಂದೇ ಕರೆಯುತ್ತಿದ್ದರು. ಅವರ ಚುರುಕು ಮಾತಿನ ಮಧ್ಯದಲ್ಲಿ ಹಾಸ್ಯಪ್ರಜ್ಞೆ ಮೂಡಿ ಬರುತ್ತಿತ್ತು.

ಒಮ್ಮೆ ಸೇವ ನೇಮಿರಾಜ ಮಲ್ಲರ ವೃತ್ತಿಯ ಗುರುಗಳು ಮಂಗಳೂರನ್ನು ತೊರೆಯಲಿದ್ದರು. ಅವರು ಮನೆ ಮಾರಾಟ ಮಾಡಿ ಸೇಲ್‌ಡೀಡ್‌ಗೆ ಸಹಿ ಹಾಕಿಸುತ್ತಿದ್ದರು. ಬಳಿಯಲ್ಲೇ ಇದ್ದ ಸೇವ ನೇಮಿರಾಜ ಮಲ್ಲರಿಗೆ ಕ್ರಯ ಪತ್ರಕ್ಕೆ ಒಂದು ಸಾಕ್ಷಿ ರುಜು ಹಾಕಲು ತಿಳಿಸಿದರು. ಗುರುಗಳ ಆದೇಶದಂತೆ ಮಲ್ಲರು ರುಜು ಮಾಡಿದರು ಕೂಡ. ಸಮೀಪದಲ್ಲಿ ನಿಂತು ಗಮನಿಸುತ್ತಿದ್ದ ಅಡಿಗರು ಮಲ್ಲರ ಬಳಿ ಬಂದು ಬೆನ್ನು ತಟ್ಟಿ ‘ಭೇಷ್ ಕಣಯ್ಯ ಶಿಷ್ಯ ಅಂದರೆ ನಿನ್ನ ಹಾಗಿರಬೇಕು. ಅವರಿಗೆ ಹತ್ತಾರು ಜನ ಶಿಷ್ಯರಿದ್ದರೂ ಗುರುಗಳ ಮನೆ ಮಾರಾಟ ಮಾಡಿಸಿ ಅವರ ಒಕ್ಕಲೆಬ್ಬಿಸಿದ ಕೀರ್ತಿ ನಿನಗೆ ಸಲ್ಲಬೇಕು!’ ಎಂದರು. ಅಲ್ಲಿದ್ದ ಎಲ್ಲರೂ ನಗೆಗಡಲಲ್ಲಿ ಮುಳುಗಿದರು.

ಅಡಿಗರು ಎಂದೂ ತಮ್ಮ ಮಕ್ಕಳ ಮೇಲೆ ತಮ್ಮ ಅಭಿಪ್ರಾಯವನ್ನು ಹೇರಿದವರಲ್ಲ. ಮಕ್ಕಳ ವಿದ್ಯಾಭ್ಯಾಸ ಹಾಗೂ ಅವರ ಏಳ್ಗೆಯ ಆಯ್ಕೆ ಅವರದ್ದೇ ಎಂದು ನಂಬಿದವರು. ಅವರೆಂದೂ ನೀನು ಇದನ್ನು ಓದು ಇಂತಹದನ್ನು ಮಾಡು ಎಂದು ಹಸ್ತಕ್ಷೇಪ ಮಾಡಿದವರಲ್ಲ. ಸ್ವತಃ ಕ್ರಾಂತಿಯ ಪ್ರವೃತ್ತಿಯವರಾದ ಅಡಿಗರು ತಮ್ಮ ವಿದ್ಯಾಭ್ಯಾಸದ ಆಯ್ಕೆ ಬಂದಾಗಲೇ ಬಂಡಾಯವೆದ್ದಿದ್ದರು. ಅವರಿಗೆ ಪದವಿಪೂರ್ವ ಕಾಲೇಜಿನಲ್ಲಿ ಎಕನಾಮಿಕ್ಸ್‌ನಲ್ಲಿ ಸೇರಿ ಅದರಲ್ಲಿ ಅಭ್ಯಾಸ ಮುಂದುವರಿಸಬೇಕೆಂಬ ಅಪೇಕ್ಷೆ ಇತ್ತು. ಆಗ ಆ ಕಾಲೇಜಿನ ಪ್ರಾಚಾರ್ಯರು ಕಕ್ಕುಂಜೆ ಸದಾಶಿವ ಅಡಿಗರ ಮಗನೆಂಬ ಭಾವದಿಂದ ಅಡಿಗರ ಬಗ್ಗೆ ವಿಶೇಷ ಕಾಳಜಿ, ಅನಗತ್ಯ ಮಹತ್ವ ಕೊಡತೊಡಗಿದರು. ಇಂತಹುದಾವುದರಲ್ಲೂ ನಂಬುಗೆಯಿರಿಸದ ಅಡಿಗರಿಗೆ ಅವರ ವಿಶೇಷ ಉಪಚಾರ ಹಿಂಸೆಯಾಗತೊಡಗಿತು. ಅದರ ನಿವಾರಣೆಗೋಸ್ಕರ ಒಂದು ದಿನ ಅಡಿಗರು ತಮ್ಮ ತಂದೆ ಕಕ್ಷಿದಾರರ ಮಧ್ಯೆ ಕುಳಿತಿದ್ದಾಗ ಒಂದು ಅಪ್ಲಿಕೇಶನನ್ನು ತಂದು ತಮ್ಮ ತಂದೆಯ ರುಜು ಪಡೆದರು. ಆ  ಅಪ್ಲಿಕೇಶನ್ ಅಡಿಗರು ಇಕಾನಾಮಿಕ್ಸ್ ವಿಷಯ ತೊರೆದು ಕಲಾ ವಿಭಾಗಕ್ಕೆ ಸೇರುವ ಕುರಿತದ್ದಾಗಿತ್ತು. ಅಪ್ರಜ್ಞಾಪೂರ್ವಕವಾಗಿ ರುಜು ಮಾಡಿದ ತಂದೆ ಸದಾಶಿವ ಅಡಿಗರಿಗೆ ಈ ವಿಚಾರ ತಿಳಿಯುವುದರೊಳಗಾಗಿ ಕಾಲ ಮಿಂಚಿತ್ತು. ಅಡಿಗರು ಕಲಾವಿಭಾಗಕ್ಕೆ ಸೇರಿಕೊಂಡು ಅದಾಗಲೇ ನಾಲ್ಕು ತಿಂಗಳಾಗಿತ್ತು. ಅವರ ಬಿ.ಎ. ಪದವಿಯ ಪ್ರಾಪ್ತಿಯ ನಂತರ ಕಾನೂನು ಶಾಸ್ತ್ರ ಅಭ್ಯಸಿಸಿ ಶ್ರೇಷ್ಠ ವಕೀಲರಾಗಿ ಜನ ಸೇವಕರಾಗಿ ಎಂ.ಎಲ್.ಸಿ.ಯಾಗಿ ಬ್ಯಾಂಕಿನ ಅಧ್ಯಕ್ಷರಾಗಿ, ಆರ್ಥಿಕ ತಜ್ಞರಾಗಿ ಸೇವೆ ಸಲ್ಲಿಸುವಂತೆ ಆಯಿತು. ಅಂದಿನ ಆ ಘಟನೆ ಅಡಿಗರ ಚರಿತ್ರೆಯ ದಿಕ್ಕನ್ನೇ ಬದಲಿಸಿತು. ಇಂತಹದ್ದೊಂದು ಘಟಿಸದೇ ಹೋಗಿದ್ದಲ್ಲಿ  ಅಡಿಗರು ಒಬ್ಬ ಮಹಾನ್ ಆರ್ಥಿಕ ತಜ್ಞರಾಗಬಹುದಿತ್ತೇ ಹೊರತು ಉಳಿದೆಲ್ಲ ಕ್ಷೇತ್ರಕ್ಕೆ ಪೆಟ್ಟು ಬೀಳುತ್ತಿತ್ತು. ಅಡಿಗರ ಮಕ್ಕಳಾದರೋ ತಂತಮ್ಮ ಇಚ್ಛೆಯಂತೆ ಶಿಕ್ಷಣವನ್ನು ಆಯ್ಕೆ ಮಾಡಿ ಪ್ರಗತಿ ಸಾಧಿಸಿದರು. ಮಗ ಸದಾಶಿವ ಅಡಿಗ ಮಾತ್ರ ‘ಲಾ’ ಓದಬೇಕೆಂಬ ಅಪೇಕ್ಷೆ ವ್ಯಕ್ತ ಪಡಿಸಿದಾಗ ಅವರು ಸದಾಶಿವನ ಅಸಾಧಾರಣ ಬುದ್ಧಿಮತ್ತೆಗೆ ‘ಕಾನೂನು’ ವಿಷಯಕ್ಕಿಂತ ಹೆಚ್ಚಿನ ಸವಾಲನ್ನು ನಿಭಾಯಿಸುವ ಕ್ಷಮತೆ ಇದೆ ಎಂದು ಭಾವಿಸಿ ಇಂಜಿನಿಯರಿಂಗ್ ಓದುವಂತೆ ಸೂಚಿಸಿದರು. ಅಡಿಗರ ಅಪೇಕ್ಷೆಯಂತೆ ಸದಾಶಿವ ಅವರು ಇಂಜಿನಿಯರಿಂಗ್ ಓದಿ ಈಗ ಯು.ಎಸ್.ಎ.ಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಮುದ್ದಿನ ಮಗಳು ಮೈಸೂರಿಗೆ ತೆರಳಿ ಎಂ.ಬಿ.ಬಿ.ಎಸ್. ಕಲಿಯಬಹುದಾಗಿತ್ತಾದರೂ ಅವಳ ಈ ಬಗೆಯ ದೂರ ಸರಿಯುವಿಕೆಯ ಬಗ್ಗೆ ಅವರಿಗೆ ಅಷ್ಟೊಂದು ಇಷ್ಟವಿರಲಿಲ್ಲ. ಅಪ್ಪಯ್ಯನ ಮನದಿಂಗಿತ ವನ್ನು ಮೌನವಾಗಿ ಗಮನಿಸಿದ ಮಗಳು ಕೂಡ ಅಪ್ಪಯ್ಯನನ್ನು ತೊರೆಯದೇ ಬಿ.ಎಸ್ಸಿ. ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲೇ ಮುಂದುವರಿಸಿದಳು.

ಡಾ. ರಘುವೀರ ಅಡಿಗ  ತಮ್ಮ ತಂದೆಯವರ ಕ್ರಿಕೆಟ್ ಪ್ರೇಮದ ಬಗ್ಗೆ ಹೀಗೆ ವಿವರಿಸುತ್ತಾರೆ : ಕಾಲೇಜು ದಿನಗಳಲ್ಲಿ ಒಮ್ಮೆ ನಾನು ಕ್ರಿಕೆಟ್ ಆಡುತ್ತಿದ್ದೆ. ಒಂದು ದಿನ ವಿಶೇಷವಾಗಿ ರನ್ ಸ್ಕೋರ್ ಮಾಡಿದೆ. ಬಹುಶಃ 75 ಅಥವಾ 80 ರನ್ನಿರಬೇಕು. ರಾತ್ರಿ ಊಟವಾದ ನಂತರ ಅಪ್ಪಯ್ಯ ನನ್ನನ್ನು ಕರೆದು ‘ರಘು ಇಗೋ ಈ ಚೆಕ್. ಇವತ್ತು ನೀನು ಮ್ಯಾನ್ ಆಫ್ ದಿ ಮ್ಯಾಚ್ ಅಲ್ವಾ? ಅದಕ್ಕೆ ಬಹುಮಾನ’ ಎಂದು 11 ರೂಪಾಯಿಯ ಚೆಕ್ ಕೈಗಿತ್ತರು. ನನಗೆ ತುಂಬಾ ಆಶ್ಚರ್ಯ. ಅಪ್ಪಯ್ಯ ಯಾವಾಗ ಆಟ ನೋಡಿದರು ಅಂತ. ಅವರನ್ನು ಕೇಳಿಯೇ ಬಿಟ್ಟೆ ನಿಮಗೆ ಹೇಗೆ ಗೊತ್ತು ಅಪ್ಪಯ್ಯ? ಆಗ ಅಪ್ಪಯ್ಯ ಹೇಳಿದರು, ಆ ದಿನ ಅದೇ ದಾರಿಯಲ್ಲಿ ಹೋಗುತ್ತಿದ್ದೆ. ಕಾರು ನಿಲ್ಲಿಸಿ ಆಟ ನೋಡಿ ಹೋಗಿದ್ದೆ ಅಪ್ಪಯ್ಯನಿಂದ ದೊರೆತ ಬಹುಮಾನ ನನಗೆ ಅಪೂರ್ವವಾದದ್ದರಿಂದ ಇಂದಿಗೂ ಆ ಚೆಕ್ಕನ್ನು ನಾನು ಕ್ಯಾಶ್ ಮಾಡಲೇ ಇಲ್ಲ. ಅದು ನನ್ನ ಬಳಿಯೇ ಇದೆ ಅಪ್ಪಯ್ಯನ ನೆನಪಾಗಿ. ಅಪ್ಪಯ್ಯನಿಗೆ ಪಾರ್ಕರ್ ಪೆನ್ ಅಂದರೆ ತುಂಬಾ ಇಷ್ಟ. ಇಂಗ್ಲೀಷ್ ಹಾಗೂ ಕನ್ನಡಗಳೆರಡನ್ನು ತುಂಬಾ ಮುದ್ದಾಗಿ ಬರೆಯುತ್ತಿದ್ದ ಅಪ್ಪಯ್ಯ ಅಕ್ಷರ ದುಂಡಾಗಿ ಬರೆಯುತ್ತಿದ್ದವರನ್ನು ತುಂಬಾ ಮೆಚ್ಚುತ್ತಿದ್ದರು. ನೌಕರಿಗೆ ಆಯ್ಕೆ ಮಾಡುವಾಗಲೂ ಶುದ್ಧ ಬರಹಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದರು.

ಅಪ್ಪಯ್ಯ ತನ್ನ ಸ್ನೇಹಿತರ ಮಕ್ಕಳಿಗೆ ಹಾಗೂ ಇತರರ ಮಕ್ಕಳಿಗಾಗಿ ಶಿಪಾರಸ್ಸು ಮಾಡುತ್ತಿದ್ದರೇ ಹೊರತು ನಮಗಾಗಿ ಎಂದೂ ಹೊರಗಿನವರ ಬಳಿ ಕೇಳಿದ್ದು ಇಲ್ಲ. ಅಪ್ಪಯ್ಯನ ಈ ನಡವಳಿಕೆಯಿಂದ ನಮಗಾಗ ಕೋಪ ಬರುತ್ತಿದ್ದರೂ, ಈಗ ದಿನಗಳೆದಂತೆ ಅಪ್ಪಯ್ಯ ತುಂಬಾ ಹತ್ತಿರ ಮತ್ತು ಹೆಚ್ಚು ಅರ್ಥವಾಗತೊಡಗಿದರು. ಅಪ್ಪಯ್ಯ ತೀರಿ ಎರಡು ದಶಕಗಳು ಸಂದವು. ಮತ್ತೊಮ್ಮೆ ಅಪ್ಪಯ್ಯನ ಅನ್ವೇಷಣೆ ಕಾಂತಾವರದಂತಹ ಹಳ್ಳಿಯ ಕನ್ನಡ ಸಂಘದಿಂದ ಆಗುತ್ತಿರುವುದಕ್ಕೆ ಖುಷಿಯಿದೆ. ಅವರು ಬಾಳಿ ಬೆಳಗಿದ ಮೌಲ್ಯಗಳ ಬಗ್ಗೆ, ಅಂತಹ ತಂದೆಯ ಬಗ್ಗೆ ಹೆಮ್ಮೆ ಅನಿಸುತ್ತದೆ.

ಅಪ್ಪಯ್ಯನಿಗೆ ಈ ಶಿಲಾಫಲಕಗಳ ಮೇಲೆ ಹೆಸರು ಕೆತ್ತಿಸುವುದರ ಬಗ್ಗೆ ಅಷ್ಟೊಂದು ಆಸಕ್ತಿ ಇದ್ದಿರಲಿಲ್ಲ. ಅವರು ಯಾವುದೇ ಶಿಲಾನ್ಯಾಸದ ಕಾರ್ಯಕ್ರಮಗಳಿರಲಿ ಅಥವಾ ಉದ್ಘಾಟನಾ ಕಾರ್ಯಕ್ರಮಗಳಿರಲಿ ಶಿಲಾಫಲಕಗಳ ಮೇಲೆ ತಮ್ಮ ಹೆಸರು ಬರದಂತೆ ನೋಡಿಕೊಳ್ಳುತ್ತಿದ್ದರು. ಅಪ್ಪಯ್ಯನಿಗೆ  ಅವರ 60ನೆಯ ವರ್ಷದಲ್ಲಿ ಅಭಿನಂದನ ಸಮಾರಂಭ ಏರ್ಪಾಡಾಗಿತ್ತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ, ನನಗೆ ಶಿಲೆಯ ಮೇಲೆ ಹೆಸರು ಕೆತ್ತಿಸುವುದರಲ್ಲಿ ಆಸಕ್ತಿ ಇಲ್ಲ. ನನ್ನ ಕೆಲಸವೇನಿದ್ದರೂ ಜನರ ಹೃದಯದಲ್ಲಿ ನನ್ನ ಹೆಸರು ಮೂಡುವಂತೆ ಶ್ರಮಿಸುವುದು ಎಂದು ಹೇಳಿದ್ದರು.

ಶ್ರೀಮಂತ ಕುಟುಂಬದಲ್ಲಿ ಜನಿಸಿದ ಅಡಿಗರಿಗೆ ಬಡತನದ ಅನುಭವವಾದರೂ ಹೇಗೆ? ಎಂಬ ನನ್ನ ಕುತೂಹಲದ ಪ್ರಶ್ನೆಗೆ, ರಘುವೀರ ಅಡಿಗರು ಉತ್ತರಿಸುತ್ತಾರೆ, ನನ್ನ ಅಜ್ಜ, ದೊಡ್ಡಪ್ಪಯ್ಯ ಇವರೆಲ್ಲಾ ಪ್ರಖ್ಯಾತ ವಕೀಲರುಗಳಾಗಿ ಹೇರಳವಾಗಿ ಸಂಪಾದಿಸಿದ್ದರು. ಅಜ್ಜ ಜಸ್ಟಿಸ್ ಪಾರ್ಟಿಯಲ್ಲಿದ್ದುದರಿಂದ, ಕಾಂಗ್ರೆಸಿಗನಾದ ಅಪ್ಪಯ್ಯ ಕೂಡಾ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿರಲಿಕ್ಕಿಲ್ಲ. ಆದರೆ ನನ್ನ ತಂದೆಯ ಸೋದರಮಾವನವರಾದ ಹಲಸನಾಡು ಸೂರಪ್ಪಯ್ಯನವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಆಗಾಗ ಜೈಲುಯಾತ್ರೆ ಕೈಗೊಳ್ಳುತ್ತಿದ್ದರು. ಅಪ್ಪಯ್ಯನಿಗೆ ಅವರೊಂದಿಗೆ ತುಂಬಾ ಸ್ನೇಹವಿತ್ತು. ಪ್ರಾಯಶಃ ಅಪ್ಪಯ್ಯನ ಮೇಲೆ ಅವರದೇ ಪ್ರಭಾವವಿರಲಿಕ್ಕೂ ಸಾಕು

ಅಮ್ಮನಿಗೆ ಮನೆವಾರ್ತೆಯ ಕೆಲಸವೇ ಹೆಚ್ಚಾಗಿರುತ್ತಿತ್ತು. ಮನೆಯಲ್ಲಿಯೇ ಆಫೀಸು. ಯಾರಾದರೂ ಬಂದರೆ ಅಪ್ಪಯ್ಯ ಒಳ ಬಂದು ನಾಲ್ಕು ಕಾಫಿ, ಆರು ಕಾಫಿ ಹೀಗೆ ಹೇಳಿ ಹೋಗುತ್ತಿದ್ದುದು ಉಂಟು. ಅಮ್ಮ ಕಾಫಿ ಹಿಡಿದು ಹೊರಬಂದರೆ ಅಲ್ಲಿ ಜನ ನಾಲ್ಕಿದ್ದದ್ದು ಎಂಟೂ ಆಗಿರುತ್ತಿತ್ತು. ಅಮ್ಮ ಮೆಲ್ಲನೆ ಒಳ ಬಂದು ಸದ್ದಿಲ್ಲದೆ ಮತ್ತೆ ಕಾಫಿ ತಯಾರಿಸಿ ಕೊಂಡೊಯ್ಯುತ್ತಿದ್ದರು. ದೊಡ್ಡ ಕುಟುಂಬವಾದ್ದರಿಂದ ಅಮ್ಮನ ಬೇಕು ಬೇಡಗಳ ಬಗ್ಗೆ ಅಪ್ಪಯ್ಯ ಸ್ಪಂದಿಸಿದ್ದಾಗಲೀ, ಅಮ್ಮ ಅದಕ್ಕೆ ಗೊಣಗಿದ್ದಾಗಲೀ ನಮಗೆ ನೆನಪಿಲ್ಲ. ಆಗಿನ ದಿನಗಳೇ ಹಾಗೇ ಅಲ್ಲವೇ? ತಾಳ್ಮೆ, ಹೊಂದಾಣಿಕೆಯೇ ಬದುಕು. ಹಳ್ಳಿಯಿಂದ ಕಾಲೇಜು ಕಲಿಯಲು ಬಂದ ಮಕ್ಕಳೂ ನಮ್ಮ ಮನೆಯಲ್ಲೇ ಇರುತ್ತಿದ್ದರು. ಅಮ್ಮ ಜ್ವರ ಬಂದರೂ ಅಡುಗೆ ಮಾಡಿ ಹಾಕಲೇ ಬೇಕಿತ್ತು. ದಿನಚರಿ ನಡೆಯಲೇಬೇಕಿತ್ತಲ್ಲ? ಅಮ್ಮ ಅಪ್ಪಯ್ಯನ ಪಡಿ ನೆರಳಾಗಿ ಇರುತ್ತಿದ್ದಳು. ಊಟದಲ್ಲಿ ಅಂತಹ ವಿಶೇಷ ಆಸಕ್ತಿ ಏನೂ ಅಪ್ಪಯ್ಯನಿಗೆ ಇದ್ದಂತೆ ನಾನು ಕಾಣೆ. ಅಪ್ಪಯ್ಯನ ಊಟ ತುಂಬಾ ಸರಳ ಅನ್ನ, ಹುಳಿ ಚಟ್ನಿ ಇತ್ಯಾದಿ. ಒಮ್ಮೊಮ್ಮೆ ಗಂಜಿ ಉಪ್ಪಿನಕಾಯಿಯಾದರೂ ಆದೀತು. ಅಪ್ಪನಿಗೆ ವಿಶೇಷ ತಿನಿಸುಗಳೆಂದರೆ ಹಲಸಿನ ಅಪ್ಪ, ಪತ್ರೊಡೆ ಹಾಗೂ ಅಪ್ಪ ಪಾಯಸ.

ಅಪ್ಪಯ್ಯ ಅಂತಹ ಆಸ್ತಿಕನೂ ಅಲ್ಲ, ನಾಸ್ತಿಕನೂ ಅಲ್ಲ. ಒಂದು ತೆರನಾದ ಅನಾಸ್ತಿಕ ಅನ್ನಿ. ಆದರೆ ಅಪ್ಪಯ್ಯನಿಗೆ ಶ್ರೀ ಪೇಜಾವರ ಸ್ವಾಮಿಗಳ ಬಗ್ಗೆ ಶ್ರೀ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಹಾಗೂ ಶ್ರೀ ಶೃಂಗೇರಿ ಗುರುಗಳ ಬಗ್ಗೆ ಅಪಾರ ಗೌರವ. ಅವರಿಗೂ ಕೂಡ ಅಪ್ಪಯ್ಯನೆಂದರೆ ವಿಶೇಷ ಪ್ರೀತಿ. ಸಮಾಜ ಸೇವೆಯೇ ಇವರೆಲ್ಲರ ಸಮಾನಾಸಕ್ತಿ ಆದ್ದರಿಂದ ಪರಸ್ಪರ ಗೌರವ ಭಾವವಿತ್ತು.

ಒಮ್ಮೆ ತಂದೆಯೊಡನೆ ನಾವೆಲ್ಲ ಊಟಿಗೆ ಹೋಗಿಲಿದ್ದೆವು. ಅಪ್ಪಯ್ಯನಿಗೆ ಮೈಸೂರಿನಲ್ಲಿ ಯಾವುದೋ ಒಂದು ಕೆಲಸ ಬಂತು. ಅಪ್ಪಯ್ಯ ಸ್ವಲ್ಪ ಮಾತ್ರ ಕೆಲಸವಿದೆ, ಮುಗಿಸಿದ ನಂತರ ಊಟಿಗೆ ಹೋಗಿ ಬರೋಣ ಆಯ್ತ? ಎಂದರು. ಎರಡು ದಿನ ಕಳೆದರೂ ಅಪ್ಪಯ್ಯನ ಕೆಲಸ ಮುಗಿಯಲಿಲ್ಲ. ನಮ್ಮೊಂದಿಗೆ ಬಂದ ನಮ್ಮ ನೆರೆಯವರು ಊಟಿಗೆ ಹೋಗಿ ಬಂದಾಗಿತ್ತು, ನಾವು ಮಾತ್ರ ಊಟಿಗೆ ಹೋಗದೆ ಮೈಸೂರಿನಿಂದಲೇ ಮಂಗಳೂರಿಗೆ ಮರಳಿದೆವು. ಇಂತಹ ಸಣ್ಣ ಪುಟ್ಟ ವಿಷಯಗಳಿಗೆ ಆಗ ನಮಗೆ ಕೋಪ ಬರುತ್ತಿದ್ದರೂ ಸಾರ್ವಜನಿಕ ಬದುಕಿಗೆ  ಸಮರ್ಪಿಸಿಕೊಂಡ ಅಪ್ಪಯ್ಯನ ಸಮಯ ನಮಗಷ್ಟೇ ಮೀಸಲಾಗಿದ್ದಿಲ್ಲವಲ್ಲ.

ಅಪ್ಪಯ್ಯನ ಬಗ್ಗೆ ತುಂಬಾ ಆತ್ಮೀಯವಾಗಿ ಮಾತನಾಡುವ ರಘುವೀರ ಅಡಿಗರು ಕದ್ರಿಯ ತಮ್ಮ ಕ್ಲಿನಿಕ್ಕಿನಲ್ಲಿ ತಂದೆಯ ಕುರಿತಂತೆ ಒಂದು ಉಕ್ತಿಯನ್ನು ಗೋಡೆಗೆ ತೂಗು ಹಾಕಿದ್ದಾರೆ.

ತಂದೆ

ತಾಯಿ ಮನೆಯ ಗೌರವವೆಂದಾದರೆ
ತಂದೆ ಮನೆಯ ಅಸ್ತಿತ್ವ
ತಾಯಿಯ ಬಳಿ ಅಶ್ರುಧಾರೆ ಇದ್ದರೆ
ತಂದೆಯ ಬಳಿ ಇದೆ ಸಂಯಮ

ನಗರಾಭಿವೃದ್ಧಿಗಾಗಿ ಪಣ

ಶ್ರೀ ಕೆ.ಎಸ್.ಎನ್. ಅಡಿಗರು ಪ್ರಥಮವಾಗಿ ನಗರಾಧ್ಯಕ್ಷರಾಗಿದ್ದುದು 1952ರಿಂದ 1955ರ ಕಾಲ. ಅದು ಮಂಗಳೂರಿನ ಇತಿಹಾಸದಲ್ಲಿ ಸುವರ್ಣ ಯುಗ. ಅಡಿಗರ ಅಧ್ಯಕ್ಷತೆಯಿಂದ ನಗರಸಭೆಗೆ ಒಂದು ಹೊಸ ಅಲೆ ಪ್ರಾಪ್ತವಾಯಿತು. ನಗರ ಸಂಬಂಧಿತ ವಾದ ವಿಷಯಗಳು ತುಂಬಾ ಆಸಕ್ತಿಯಿಂದ ಚರ್ಚಿತವಾಗುತ್ತಿದ್ದವು. ಸಮಷ್ಟಿಯ ಮುಂದಾಳತ್ವದಲ್ಲಿ ನಂಬಿಕೆಯಿರಿಸಿದ್ದ ಅಡಿಗರು ತಮ್ಮೊಂದಿಗೆ ಇರುವ ಇತರ ಸದಸ್ಯರ ಮನವೊಲಿಸಿ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸುತ್ತಿದ್ದರು. ಶ್ರೇಷ್ಠ ವಕೀಲರಾದ ಅಡಿಗರಿಗೆ ಉತ್ತಮ ವಾಕ್ಪಟುತ್ವ ಸಿದ್ಧಿಸಿತ್ತು. ಅವರು ಅಧಿವೇಶನಗಳನ್ನು ತುಂಬಾ ಶಿಸ್ತುಬದ್ಧವಾಗಿ ಅರ್ಥಪೂರ್ಣವಾಗಿ ನಡೆಸುತ್ತಿದ್ದರು. ಸದಸ್ಯರೆಲ್ಲಾ ಒಂದೇ ಕುಟುಂಬದವರಂತೆ ಒಟ್ಟಾಗಿ ಮುನ್ನಡೆಯುವಂತೆ ಪ್ರೇರೇಪಿಸುತ್ತಿದ್ದರು. ಹೀಗಾಗಿ ಸಹಸದಸ್ಯರೆಲ್ಲಾ ಶ್ರೀ ಅಡಿಗರನ್ನು ಅತ್ಯಂತ ಗೌರವಪೂರಿತ ಪ್ರೀತ್ಯಾದರಗಳಿಂದ ಕಾಣುವಂತಾಗಿತ್ತು.

ಅಡಿಗರು ಉತ್ತಮ ಆಡಳಿತಗಾರರೂ ಹೌದು. ಆಡಳಿತ ವರ್ಗಕ್ಕೆ ಅಡಿಗರೆಂದರೆ ಪ್ರೀತಿ ತುಂಬಿದ ವ್ಯಕ್ತಿ. ತಮ್ಮ ಜವಾಬ್ದಾರಿ, ಸಮಯ ಪ್ರಜ್ಞೆ, ಶಿಸ್ತು, ಸಂಯಮಗಳಿಂದ ಇತರರಿಗೆ ಮಾದರಿಯಾಗಿದ್ದರು. ಅವರ ಅಸಾಮಾನ್ಯ ಜ್ಞಾನ, ವಿಷಯ ಸಂಪನ್ನತೆ, ಸರಳ ಪೋಷಾಕು, ಧೀರ ನಡಿಗೆ, ಮಿತ ಭಾಷೆ, ಗಂಭೀರ ವ್ಯಕ್ತಿತ್ವ ಎಂತಹವರಿಗಾದರೂ ಒಳ್ಳೆಯ ಪ್ರಭಾವ ಬೀರುತ್ತಿದ್ದುವು. ಅಭಿವೃದ್ಧಿ ಸಂಬಂಧಿತ ಕಾರ್ಯನಿರ್ವಹಣೆಯಲ್ಲಿ ರಾಜಕೀಯಗಳಿಗೆ ಅವಕಾಶವಿದ್ದಿಲ್ಲ. ಎಲ್ಲಾ ಕೆಲಸಗಳ ಹಿಂದೆ ನಗರದ ಉದ್ಧಾರವೇ ಸೂತ್ರವಾಗಿರುತ್ತಿತ್ತು. ಅಧಿವೇಶನದಲ್ಲಿ ಎಂತಹದೆ ಅಹಿತಕರ ಚರ್ಚೆ ಪ್ರಾರಂಭವಾದಲ್ಲಿ ತಮ್ಮ ಹಾಸ್ಯಪ್ರಜ್ಞೆ ಮೆರೆದು ಸಭಾಸದರ ಮನ ಗೆದ್ದುಬಿಡುತ್ತಿದ್ದರು. ನಗರದ ಎಲ್ಲಾ ವಾರ್ಡುಗಳನ್ನು ಸಮದೃಷ್ಟಿಯಿಂದ ನೋಡಿ ಪಕ್ಷಪಾತರಹಿತ ಸುಧಾರಣಾ ವ್ಯವಸ್ಥೆ ರೂಢಿಸುತ್ತಿದ್ದರು.

ಮಂಗಳೂರು ನಗರಸಭೆಯ ಆದಾಯವನ್ನು ನಾಗರಿಕರಿಗೆ ಹೊರೆಯಾಗದಂತೆ ತೆರಿಗೆಯನ್ನು ಸಂಗ್ರಹಿಸುದರ ಮೂಲಕ ಹೆಚ್ಚಿಸಿದರು. ಆಗರ್ಭ ಶ್ರೀಮಂತಿಕೆಯ ಕುಟುಂಬದಲ್ಲಿ ಜನಿಸಿದರೂ ದುಂದು ವೆಚ್ಚಕ್ಕೆ ಅವಕಾಶವೇ ಇರುತ್ತಿರಲಿಲ್ಲ. ನಗರಸಭೆಯ ಒಂದೊಂದು ಪೈಸೆಯ ಖರ್ಚಿನ ಹಿಂದೆಯೂ ತಾರ್ಕಿಕವಾದ ಲೆಕ್ಕಾಚಾರವಿರುತ್ತಿತ್ತು. ಹಾಗಂತ ಅಭಿವೃದ್ಧಿಯ ಕಾರ್ಯಗಳಿಗೆ ಎಂದೂ ಕೊರತೆ ಮಾಡುತ್ತಿರಲಿಲ್ಲ. ಸಾರ್ವಜನಿಕರ ಶ್ರಮದ ಫಲದಿಂದ ಸಂದಾಯವಾದ ಕಂದಾಯದ ಹಣದ ಬಗ್ಗೆ ಅವರಿಸಿದ್ದ ಗೌರವ ಅವರ ನೈತಿಕತೆಯ ಪ್ರತೀಕವಾಗಿತ್ತು. ರಸ್ತೆಗಳ ವಿಸ್ತರಣೆ ಇತ್ಯಾದಿ ವಿಷಯಗಳ ಅನುಷ್ಠಾನದ ಪ್ರಸ್ತಾಪ ಬಂದಾಗ ಖುದ್ದಾಗಿ ವೀಕ್ಷಣೆಗೆ ಮುಂದಾಗುತ್ತಿದ್ದ ಅಡಿಗರು, ತಮ್ಮ ಸ್ವಂತ ಖರ್ಚಿನಲ್ಲಿ ಸ್ಥಳ ಪರಿಶೀಲನೆಗೆ ಹೊರಡುತ್ತಿದ್ದರು. ಮಂಗಳೂರಿನ ನಗರಸಭೆಯ ಆಡಳಿತ ಅವರ ಉಸಿರಿನ ಭಾಗವಾಗಿತ್ತು. ಕೋರ್ಟು ಕಲಾಪಗಳನ್ನು ಮುಗಿಸಿ ತೊಟ್ಟ ಕರಿಕೋಟಿನಲ್ಲಿಯೇ ನಗರಸಭೆಗೆ ಧಾವಿಸುತ್ತಿದ್ದರು. ಆಡಳಿತಾತ್ಮಕ ವಿಷಯಗಳ ಪತ್ರ ವ್ಯವಹಾರವನ್ನು ಮುಗಿಸಿ ಮನೆಗೆ ಹಿಂದಿರುಗುವಾಗ ಕಛೇರಿಯ ಗೋಡೆಗಡಿಯಾರ ರಾತ್ರಿ ಒಂದು ಗಂಟೆಯ ಸಮಯವನ್ನು ತೋರಿಸುತ್ತಿತ್ತು. ಹೀಗೆ ಸಮಯಾತೀತ ಕಾರ್ಯವಿಧಾನವನ್ನು ರೂಢಿಸಿಕೊಂಡ ಅಡಿಗರು ಅಹರ್ನಿಶಿ ಮಂಗಳೂರಿಗಾಗಿ ದುಡಿದರು.

ಅಡಿಗರು ಚೇರ್‌ಮೇನ್ ಆಗಿ ಆಯ್ಕೆಯಾಗಿ ಬಂದೊಡನೆ ರಸ್ತೆ ಹಾಗೂ ಮೂಲಭೂತ ಸೌಕರ್ಯಗಳ ಕಡೆ ಗಮನವಿತ್ತರು. ಅಜಗರನಂತೆ ನಿದ್ರಿಸುತ್ತಿದ್ದ ಪಿಡಬ್ಲ್ಯುಡಿ ವಿಭಾಗವನ್ನು ಬಡಿದೆಬ್ಬಿಸಿ, ಸದಾ ಧೂಳೆಬ್ಬಿಸುತ್ತಿದ್ದ ಸುಮಾರು ಮೂವತ್ತು ಕಿ.ಮೀ ರಸ್ತೆಗಳಿಗೆ ಡಾಮರು ಹಾಕಿಸಿದರು. ರಸ್ತೆಯ ಹೊಂಡಗಳಿಗೆ ವಿದಾಯ ಹೇಳಿದರು. ಹೊಸ ರಸ್ತೆಗಳ ನಿರ್ಮಾಣ, ಕಿರಿದಾದ ರಸ್ತೆಗಳ ಅಗಲೀಕರಣ, ಶತಮಾನಗಳಿಂದ ಕಣ್ಣು ಮುಚ್ಚಿದ್ದ ಬೀದಿ ದೀಪಗಳ ರಿಪೇರಿ ಹಾಗೂ ನವೀಕರಣ, ಹೊಸ ದೀಪಗಳ ಸ್ಥಾಪನೆ ಇತ್ಯಾದಿಗಳಿಂದಾಗಿ ಮಂಗಳೂರು ಅಂಧಕಾರದಿಂದ ಹೊರಬಂದು ಬೆಳಗತೊಡಗಿತು. ರಸ್ತೆಗಳನ್ನು ವಿದ್ಯುತ್ ದೀಪದಿಂದ ಬೆಳಗಿದರೆ, ಜನಮನವನ್ನು ಜ್ಞಾನದೀಪದಿಂದ ಬೆಳಗಲು ವಾರ್ಡ್ ವಾರ್ಡುಗಳಲ್ಲಿ ವಾಚನಾಲಯಗಳು ಪ್ರಾರಂಭ ವಾದುವು. ಮುನ್ಸಿಪಾಲಿಟಿಯ ಹಲವು ಎಲಿಮೆಂಟರಿ ಶಾಲೆಗಳು, ಹೈಯರ್ ಎಲಿಮೆಂಟರಿ ಶಾಲೆಗಳಾಗಿ ಪರಿವರ್ತನೆ ಹೊಂದಿದವು. ಶಾಲಾ ಕಟ್ಟಡಗಳ ದುರಸ್ತಿ, ವಿಸ್ತರಣೆಯಂತಹ ಕಾರ್ಯಗಳು ನಡೆದು ಶಾಲಾ ಮಕ್ಕಳಿಗೆ ಯೋಗ್ಯ ಸ್ಥಳಾವಕಾಶ ದೊರೆಯುವಂತೆ ಮಾಡಿದವು. ಉರ್ವದ ಮೈದಾನ, ಬೋಳಾರ, ನಂದಿಗುಡ್ಡೆ ಇತ್ಯಾದಿ ಸ್ಥಳಗಳಲ್ಲಿ ಆಟದ ಬಯಲುಗಳು ನಿರ್ಮಿಸಲ್ಪಟ್ಟವು.

‘ಆಕಾಶವಾಣಿ’ ಎಂಬ ಗ್ರಂಥ ಬರೆದ ಶ್ರೀ ಅಡಿಗರು ಬಾನುಲಿಯ ಪ್ರಯೋಜನ ವನ್ನರಿತು ದೇರೆಬೈಲು, ಸುಲ್ತಾನ ಬತ್ತೇರಿ, ನಂದಿ ಗುಡ್ಡೆ, ಜೆಪ್ಪು, ಕದ್ರಿ ಮೊದಲಾದ ಕಡೆಗಳಲ್ಲಿ ರೇಡಿಯೋ ಪೆವಿಲಿಯನ್‌ಗಳನ್ನು ನಿರ್ಮಿಸಿ, ಸಾರ್ವಜನಿಕರಿಗೆ ಸಂಗೀತ ಹಾಗೂ ದೈನಿಕ ವಾರ್ತೆಗಳನ್ನು ಆಲಿಸುವ ವ್ಯವಸ್ಥೆಯನ್ನು ಕಲ್ಪಿಸಿದರು.

ಬೋಳಾರದಲ್ಲಿ ನಗರಸಭೆಯ ವತಿಯಿಂದ ಹೆರಿಗೆ ಆಸ್ಪತ್ರೆಯ ಸ್ಥಾಪನೆ ಇವರ ಸಾಧನೆಯ ಇನ್ನೊಂದು ಮೈಲಿಗಲ್ಲು.

ಆರೋಗ್ಯವೇ ಭಾಗ್ಯ

ಅಂದು ಮಂಗಳೂರು ಪಟ್ಟಣವು ಮಲೇರಿಯಾ ಹಾಗೂ ಫೈಲೇರಿಯಾ (ಆನೆಕಾಲು ರೋಗ) ದಂತಹ ಮಾರಕರೋಗಗಳಿಗೆ ಕುಖ್ಯಾತವಾಗಿತ್ತು. ರೋಗ ಮುಕ್ತ ನಗರ ಅಡಿಗರ ಪ್ರಥಮ ಆದ್ಯತೆಯಾಯಿತು. ಆನೆಕಾಲು ರೋಗ ನಿಯಂತ್ರಣದ ಸಲುವಾಗಿ ಇಡೀ ನಗರದಲ್ಲಿ ರೋಗ ಪ್ರಮಾಣದ ವ್ಯಾಪ್ತಿಯನ್ನರಿಯಲು ನಗರದ ಎಲ್ಲಾ ವಾರ್ಡುಗಳಲ್ಲಿಯ ಜನರ ರಕ್ತ ಪರೀಕ್ಷೆಯನ್ನು ಅಖಿಲ ಭಾರತ ಮಲೇರಿಯಾ ಸಂಸ್ಥೆಯ ನೆರವಿನಿಂದ ಮಾಡಿಸಿ, ಫಲಿತಾಂಶ ತಿಳಿದು ಆನೆಕಾಲು ರೋಗ ನಿವಾರಣಾ ಔಷಧ ‘ಹೆಟ್ರಜನ್’ ಮಾತ್ರೆಗಳನ್ನು ಮನೆಮನೆಗೂ ತಲುಪಿಸುವ ವ್ಯವಸ್ಥೆಯನ್ನು ಮಾಡಿದರು. ವಿತರಣೆಯ ನೇತೃತ್ವದ ಮುಂಚೂಣಿಯಲ್ಲಿ ತಾವೇ ಇದ್ದು ಜನರು ಅದನ್ನು ಸೇವಿಸುವಂತೆ ಮಾಡಿದ ಪ್ರಯತ್ನ ಭಾರತದಲ್ಲಿಯೇ ಅದ್ವಿತೀಯ.

ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳಿಗೆ ಬಾಧಿಸುವ ‘ನಾಯಿಕೆಮ್ಮು’, ‘ಗಂಟಲು ಹುಣ್ಣು’ ಇತ್ಯಾದಿ ರೋಗಗಳು ಬಾರದಂತೆ ಟ್ರಿಪಲ್ ಆಂಟಿಜನ್ ಚುಚ್ಚುಮದ್ದು ಕೊಡಿಸುವ ಏರ್ಪಾಡು ಮಾಡಿದರು. ಈ ಪ್ರಯತ್ನ ಕೂಡಾ ದಕ್ಷಿಣ ಭಾರತದಲ್ಲಿ ಮಂಗಳೂರು ನಗರ ಸಭೆಯ ಪ್ರಪ್ರಥಮ ಸಾಧನೆ.

ತುಂಬೆಯ ಗಂಗೆಯನ್ನು ಮಂಗಳೂರಿಗೆ ತಂದ ಭಗೀರಥ

ಕರಾವಳಿಯಲ್ಲಿ ವರ್ಷಂಪ್ರತಿ ಸರಿಸುಮಾರು 140-150 ಇಂಚು ಮಳೆಯಾಗುತ್ತದೆ. ಆದರೂ ಮಂಗಳೂರಿಗೆ ನೀರಿನ ಬವಣೆ ಯಾವತ್ತೂ ತಪ್ಪಿದ್ದಿಲ್ಲ. ಮಂಗಳೂರಿಗೆ ನಳ್ಳಿನೀರು ತರುವ ಯೋಜನೆ ಆಗ ನೆನೆಗುದಿಗೆ ಬಿದ್ದಿತ್ತು. ಈ ನೀರು ತರುವ ಪ್ರಯತ್ನ 1895ರಷ್ಟು ಹಿಂದೆಯೇ ಪ್ರಾರಂಭಗೊಂಡಿತ್ತು. ಎಲ್ಲ ಸರಕಾರಿ ಯೋಜನೆಗಳಂತೆಯೇ ಕಡತದಲ್ಲಿಯೇ ಮಲಗಿದ್ದ ಆ ಯೋಜನೆ ಊರ್ಜಿತವಾಗುವ ಲಕ್ಷಣಗಳು ಇದ್ದಿಲ್ಲ. ಕುಂಟುತ್ತಾ ಸಾಗಿದ ಯೋಜನೆಯ ಅಂದಾಜು ವೆಚ್ಚ ರೂ. 9 ಲಕ್ಷವಾಗಿತ್ತು. ಅಂದಾಜು ಪಟ್ಟಿ 1917ರಲ್ಲಿ ಪ್ರಾರಂಭವಾಗಿ 1939ರಲ್ಲಿ ಅದರ ಪರಿಶೀಲನೆ ಪೂರ್ಣವಾಗಿತ್ತು. ಆದರೆ 1945ರಲ್ಲಿ ಆ ಯೋಜನೆಯನ್ನೇ ಕೈಬಿಡಲಾಯಿತು. 1947ರಲ್ಲಿ ಗುರುಪುರ ನದಿಯಿಂದ ನೀರು ತರುವ ಯೋಜನೆ ರೂಪುಗೊಂಡು ಆ ನದಿಯ ನೀರಲ್ಲಿ ಕಬ್ಬಿಣದ ಅಂಶ ಹೆಚ್ಚಿದೆಯೆಂಬ ಕಾರಣಕ್ಕೆ ಆ ಯೋಜನೆ 1952ರಲ್ಲಿ  ಸಂಪೂರ್ಣ ನೆಲಕಚ್ಚಿತು. 1953ರಲ್ಲಿ ನೇತ್ರಾವತಿ ನದಿಯ ನೀರನ್ನು ತರುವ 88ಲಕ್ಷ ರೂಪಾಯಿ ವೆಚ್ಚದ ಯೋಜನೆ ಇದ್ದುದಾದರೂ ಆಗಿನ ಮದ್ರಾಸ್ ಸರಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅದು ಚಾಲನೆ ಪಡೆಯಲೇ ಇಲ್ಲ. ಹಠ ಬಿಡದ ತ್ರಿವಿಕ್ರಮನಂತೆ ಅಡಿಗರು ಯೋಜನೆಯ ಅನುಷ್ಠಾನಕ್ಕೆ ಪಣ ತೊಟ್ಟರು. ಅದು ಅಕ್ಷರಶಃ ಭಗೀರಥ ಪ್ರಯತ್ನ. ಅಡಿಗರ ಮನೋಸಂಕಲ್ಪವನ್ನು ತಡೆಯುವುದು ಯಾವ ಋಣಾತ್ಮಕ ಶಕ್ತಿಗಳಿಗೂ ಸಾಧ್ಯವಿದ್ದಿಲ್ಲ. ಜನಾನುರಾಗಿಯಾಗಿದ್ದ ಅಡಿಗರು ಸಾರ್ವಜನಿಕರಿಂದ 17.50 ಲಕ್ಷ ರೂಪಾಯಿಯ ಡಿಬೆಂಚರ್ ಬಾಂಡ್ ಸಂಗ್ರಹಿಸಿ ನಲ್ಲಿ ನೀರಿನ ಯೋಜನೆಯ ಕೆಲಸವನ್ನು ಕೈಕೊಂಡೇ ಬಿಟ್ಟರು. ಬೇರಾವ ನಗರ ಸಭೆಯೂ ಇಂತಹ ಸಾಹಸಕ್ಕೆ ಕೈ ಹಾಕಿರಲಿಲ್ಲ. ಅಡಿಗರ ಅಸಾಧ್ಯ ಪರಿಶ್ರಮದ ಫಲವಾಗಿ 1958ನೆ ಇಸವಿಯ ಯುಗಾದಿಯ ಶುಭದಿನದಂದು ನೇತ್ರಾವತಿ ನದಿಯ ನೀರು ಮಂಗಳೂರಿಗರ ದಾಹ ತಣಿಸಲು ಮುಂದೆ ಬಂದಳು. ತತ್‌ಸಂಬಂಧವಾದ ಕೆಲಸಗಳೆಲ್ಲಾ ದಾಖಲೆ ಸಮಯದಲ್ಲೇ ಪೂರ್ಣಗೊಂಡದ್ದು ಇನ್ನೊಂದು ವಿಶೇಷ. ಈ ಮಹಾನ್ ಸಾಧನೆಗಾಗಿ ಮಂಗಳೂರಿನ ಜನತೆ ಅಡಿಗರನ್ನು ಶ್ಲಾಘಿಸಿತು. ಅಧುನಿಕ ಭಗೀರಥನೆಂದೇ ಕೊಂಡಾಡಿತು.

ಕಡಲು ಕೊರೆದಾಗೆಲ್ಲ – ಕರಗುವುದು ನನ್ನ ಮನ

ಕಾರ್ಗಾಲದ ವೈಭವಕ್ಕೆ ಪ್ರಖ್ಯಾತವಾದ ಕರಾವಳಿ ಬಹು ಆರ್ಭಟ ದೊಂದಿಗೆ ಮುಂಗಾರು ಮಳೆಯನ್ನು ಸ್ವಾಗತಿಸುತ್ತದೆ. ಈ ವರ್ಷಧಾರೆಯ ಆಗಮನ ರುದ್ರ ರಮಣೀಯ. ಮಳೆಗಾಲ ಪ್ರಾರಂಭವಾಯಿತೆಂದರೆ ಕಡಲ ತಡಿಯನ್ನು ಕಬಳಿಸುವ ಹುನ್ನಾರ ಈ ಸಾಗರದ್ದು. ತನ್ನ ಆರ್ಭಟದ ಮೊರೆತದಲ್ಲಿ ಅದಕ್ಕೆ ಬಡವರ ಕಂಬನಿ ಕಾಣುವುದೇ ಇಲ್ಲ. ಬಡವರ ಗುಡಿಸಲುಗಳನ್ನು ನುಂಗಿ ನೊಣೆಯುವ ಸಮುದ್ರ ರಾಜನಿಗೆ ಪ್ರತಿ ಹೇಳುವವರಾರು? ಇಂತಹದೆ ಒಂದು ಮಳೆಗಾಲ – 1974. ಅಸದೃಶ ನೆರೆ ಹಾವಳಿಯಿಂದಾಗಿ ಕರಾವಳಿ ತತ್ತರಿಸಿದಾಗ ಜಿಲ್ಲೆಯ ಬಹು ಭಾಗಗಳಲ್ಲಿ ಅಗಣಿತ ಹಾನಿಯಾದಾಗ ಅಡಿಗರು ಜಿಲ್ಲಾ ನೆರೆ ಪರಿಹಾರ ಸಮಿತಿಯ ಅಧ್ಯಕ್ಷರಾಗಿ ಅಮೋಘ ಸೇವೆ ಸಲ್ಲಿಸಿದರು. ನಿರಾಶ್ರಿತ ಕುಟುಂಬಗಳಿಗೆ ಆರ್ಥಿಕ ಸಹಾಯ ಒದಗಿಸಿದರು. ಬಟ್ಟೆ-ಬರೆ, ಪಾತ್ರೆ ಜೀವನಾವಶ್ಯಕ ಸಾಮಗ್ರಿಗಳನ್ನು ಒದಗಿಸುವ ಮಹತ್ಕಾರ್ಯವನ್ನು ಮಾಡಿದರು. ‘ಸೇವೆಯೇ ಜೀವನದ ಪರಮ ಧ್ಯೇಯ’ವೆಂದು ದುಡಿದರು. ಅವರ ಅಚಂಚಲ ಶ್ರದ್ಧೆ, ವ್ಯಾಮೋಹ ರಹಿತ ನಿರ್ಭರ ಪ್ರೇಮ, ಅಸಾಧಾರಣ ಮಾನವಾಂತಃಕರಣದಿಂದ ಅವರು ಜನರ ಪ್ರೀತ್ಯಾದರಗಳಿಗೆ ಭಾಜನರಾದರು.

ಆರೋಗ್ಯವಂತ ದೇಹ – ಸುಮನಸರ ಮನಸ್ಸು

ದೇಹ ಮತ್ತು ಬುದ್ಧಿಗಳ ಒಟ್ಟು ವಿಕಾಸ ಪ್ರಾಯ: ಅತಿ ವಿರಳ. ದೊಡ್ಡದಾದ ತಲೆ ಕೃಶವಾದ ಶರೀರ ಅಥವಾ ಹಿರಿದಾದ ದೇಹ ಕಿರಿದಾದ ಬುದ್ಧಿಗಳ ಸಂಯೋಜನೆಯ ಮಾದರಿಗಳೇ ಜೀವನದಲ್ಲಿ ಸಿಕ್ಕುವಾಗ  ಅತಿ ಅಪರೂಪದ ವ್ಯಕ್ತಿಯಾಗಿದ್ದ ಅಡಿಗರು ಡಾ. ಶಿವರಾಮ ಕಾರಂತರು ಉಲ್ಲೇಖಿಸಿದಂತೆ ಆರೋಗ್ಯವಂತ ಮನಸ್ಸು ಮತ್ತು ದೇಹಗಳ ಒಡೆಯರಾಗಿದ್ದರು. ಅಂತೆಯೇ ಅಡಿಗರು ಅನೇಕ ಕ್ರೀಡಾಸಂಸ್ಥೆಗಳ ನಿಕಟ ಸಂಪರ್ಕ ಸಾಧಿಸಿದ್ದರು. ದಕ್ಷಿಣ ಕನ್ನಡದ ಹವ್ಯಾಸಿ ಬಾಡಿ ಬಿಲ್ಡರ್ಸ್ ಅಸೋಶಿಯೇಶನ್ ಇದರ ಉಪಾಧ್ಯಕ್ಷರು, ಬಾಸ್ಕೆಟ್ ಬಾಲ್ ಅಸೋಶಿಯೇಶನ್‌ನ ಅಧ್ಯಕ್ಷರು, ಕೆನರಾ ಕ್ರಿಕೆಟ್ ಅಸೋಶಿಯೇಶನ್ನಿನ ಉಪಾಧ್ಯಕ್ಷರೂ ಆಗಿದ್ದರು. ಬತ್ತದ ಕ್ರೀಡಾಪ್ರೇಮ ಅವರಲ್ಲಿ ಸದಾ ಜೀವನೋತ್ಸಾಹವನ್ನು ಉಂಟುಮಾಡಿದ್ದಿತು. ಅಪಾರ ಧೈರ್ಯದ ಆಗರವಾಗಿದ್ದ ಅವರು ನಾಯಕನಾಗಿ ಮುಂದಾಳತ್ವ ವಹಿಸುವ ಎದೆಗಾರಿಕೆ ಹೊಂದಿದ್ದರು.

ಮಾತು ಬಲ್ಲವನಿಗೆ ಜಗಳವಿಲ್ಲ

ಅಸಾಧಾರಣ ಪಾಂಡಿತ್ಯ, ವಿದ್ವತ್ಪೂರ್ಣ ಹಾಗೂ ಅಸ್ಖಲಿತ ಮಾತುಗಾರಿಕೆ ಅವರಿಗೆ ಅವರ ವಕೀಲಿ ವೃತ್ತಿಯ ಬಳುವಳಿಯಾಗಿ ಲಭ್ಯವಾಗಿತ್ತು. ಪ್ರತಿವಾದಿ ಭಯಂಕರರಾಗಿದ್ದ ಅಡಿಗರು ಮಾತಿಗೆ ನಿಂತರೆ ಮಳೆಗಾಲದ ಜೋಗದ ಜಲಧಾರೆಯ ಮೊರೆತದ ಅನುಭವವೇ. ಪ್ರಶ್ನೆಯೂ ತಾನಾಗಿ, ಉತ್ತರವೂ ತಾನೇ ಆಗಿ ಪ್ರವಹಿಸುವ ಅವರ ವಾಕ್‌ಝರಿಗೆ ಎಣೆ ಇರಲಿಲ್ಲ. ಇಂಗ್ಲಿಷ್ ಹಾಗೂ ಕನ್ನಡಗಳೆರಡರಲ್ಲೂ ಹಿಡಿತ ಸಾಧಿಸಿದ್ದ ಸವ್ಯಸಾಚಿ. ಅವರ ಭಾಷಣ ಕೇಳುವುದೇ ಒಂದು ಭಾಗ್ಯ. ಅವರ ಸಂಭಾಷಣೆ ಅದೊಂದು ಅಪರೂಪದ ಅನುಭವ ಕಥನ. ಸ್ಮೃತಿಪಟಲದಾಳದಿಂದ ಉದ್ಭವವಾಗುತ್ತಿದ್ದ ಸಿಹಿ ಕಹಿ ನೆನಪುಗಳ ಆಣಿಮುತ್ತುಗಳು ಆಯ್ದಷ್ಟು ಲಭ್ಯ. ಒಮ್ಮೆ ಮೊನಚೆನಿಸಿದರೂ ಮತ್ತೊಮ್ಮೆ ನಗೆಯ ಕೋಲ್ಮಿಂಚಿನಲ್ಲಿ ಪ್ರಕಟವಾಗುತ್ತಿದ್ದ ಅವರ ಮಾತು, ಯಾರಿಗೂ ನಂಜನ್ನೂ ನೋವನ್ನೂ ಎಂದೂ ಹರಡುತ್ತಿದ್ದಿಲ್ಲ. ಅವರ ಅನುಭವದ ಸಮ್ಯಕ್ ದರ್ಶನ ಮಾತುಗಾರಿಕೆಯಲ್ಲಿ ಮೂಡಿ ಬರುತ್ತಿತ್ತು. ಅವರ ಚುನಾವಣಾ ಭಾಷಣಗಳು ಉತ್ಕೃಷ್ಟವಾಗಿರುತ್ತಿದ್ದವು. 1969ರಲ್ಲಿ ಮತ್ತು 1970ರಲ್ಲಿ ಕರ್ನಾಟಕ ಸರಕಾರವು ಮಹಾಜನ ವರದಿಗೆ ಸಂಬಂಧಿಸಿದ ಗಡಿ ಪ್ರಶ್ನೆ ಕುರಿತು ರಾಜ್ಯದ ಅಭಿಪ್ರಾಯ ಬಿಂಬಿಸಲು ಎರಡು ನಿಯೋಗಗಳನ್ನು ದೆಹಲಿಗೆ ಕಳುಹಿಸಿತು. ಅಡಿಗರು ಈ ಎರಡೂ ನಿಯೋಗಗಳಲ್ಲಿದ್ದರು. ಮೊದಲಿಗೆ ದಿವಂಗತ ಶ್ರೀ ಗೋಪಾಲ ಗೌಡರ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗವು ತೆರಳಿದ್ದರೆ, ದ್ವಿತೀಯ ಬಾರಿ ವಿರೋಧ ಪಕ್ಷದ ನಿಯೋಗ ಶ್ರೀ ಎಸ್. ಶಿವಪ್ಪನವರ ಮುಖಂಡತ್ವದಲ್ಲಿ ಹೋಗಿತ್ತು. ಅಜಾತ ಶತ್ರುವಾಗಿದ್ದ ಅಡಿಗರು ಎಲ್ಲರೊಳಗೊಂದಾಗುವ ವಿಶಿಷ್ಟ ಮನೋಭಾವದವರಾಗಿದ್ದರು. ಕರ್ನಾಟಕ-ಕೇರಳ ಗಡಿ ವಿವಾದದ ಕುರಿತಾದ ಅಡಿಗರ ವಾದ ಮಂಡನೆ ಬಹು ಅಪರೂಪದ್ದಾಗಿತ್ತು. ನಿಷ್ಪಕ್ಷಪಾತದ ಅವರ ನಿಲುವು, ಸತ್ಯದ ಬಗೆಗೆ ಅವರ ಒಲವು, ಸತ್ಯಮಪ್ರಿಯಂ ಬ್ರೂಯಾತ್ ಎನ್ನುವಂತೆ ಕಡ್ಡಿಮುರಿದಂತಹ ಅವರ ಮಾತು, ಮುಖ ನೋಡಿ ಮಣೆ ಹಾಕದ ಗುಣ, ಇವೆಲ್ಲವುಗಳು ಅವರನ್ನು ಎಲ್ಲ ಸಭೆಗಳಲ್ಲೂ ಭಾಗವಹಿಸುವಂತೆ ಮಾಡುತ್ತಿತ್ತು. ಮಂಗಳೂರಿಗೆ ಎಂತಹುದೆ ಕ್ಲಿಷ್ಟ ಸಂದರ್ಭ ಬರಲಿ, ಶಾಂತಿಪಾಲನೆಯ ಅಗತ್ಯವಿರಲಿ, ಪ್ರಕ್ಷುಬ್ಧತೆಯನ್ನು ತಿಳಿಗೊಳಿಸುವ ಅಗತ್ಯ ಇದ್ದಾಗ ಸೂರ್ಯನಾರಾಯಣ ಅಡಿಗರ ಉಪಸ್ಥಿತಿ ಅವಶ್ಯವಾಗಿರುತ್ತಿತ್ತು. ಸರ್ವ ಪಕ್ಷಗಳಿಗೂ ಸಲ್ಲುವ, ಎಲ್ಲವರ್ಗಕ್ಕೂ ಬೇಕಾಗುವ, ಎಲ್ಲರಿಗೂ ಹಿತವಾಗುವ ಅಡಿಗರು ಎಲ್ಲರ ಸ್ನೇಹಿತರು. ಯಾರಿಗೂ ವೈರಿಯಲ್ಲ. ಹೀಗೆಲ್ಲಾ ಮಿತ್ರರೆಲ್ಲ ಸಂಕಟ ಬಂದಾಗ ಈ ಸೂರ್ಯನಾರಾಯಣನಿಗೆ ಮೊರೆಹೊಗುತ್ತಿದ್ದರು.

ಕರುಣಾಳು – ಬಾ ಬೆಳಕೆ!

‘ತಮಸೋಮ ಜ್ಯೋತಿರ್ಗಮಯ’ ಎನ್ನುವುದು ಆರ್ಯೋಕ್ತಿ. ಅಂಥ  ಕತ್ತಲಿನಿಂದ ಬೆಳಕಿನೆಡೆಗೆ ಅಂಧಕಾರವನ್ನು ಹೊಡೆದೋಡಿಸಿ ಬೆಳಕು ಹಂಚುವ ಕಾರ್ಯವನ್ನು ಅಡಿಗರು ಹಲವು ರೀತಿಯಲ್ಲಿ ಮಾಡಿದರು. ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿ ಅಜ್ಞಾನದ ತಮಸ್ಸನ್ನು ಕಳೆದರೆ, ಉದ್ಯೋಗಕ್ಕೆ ಆಸರೆಯಾಗಿ ಹೊಟ್ಟೆಯನ್ನು ತಣಿಸಿದರು. ತಮ್ಮ ದೃಷ್ಟಿಯನ್ನು ಕಳೆದುಕೊಂಡವರ ಪ್ರಪಂಚ ಕತ್ತಲೆಯಿಂದಾವರಿಸಿದಾಗ ಆ ದೀನರಿಗೆ ಆಸರೆಯ ಬೆಳಕೆಂಬಂತೆ ಮಂಗಳೂರಿನಲ್ಲಿ ಮೂರು ಬಾರಿ, ಪದ್ಮಶ್ರೀ ಡಾ ಎಂ.ಸಿ. ಮೋದಿಯವರ ಧರ್ಮಾರ್ಥ ನೇತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಿದರು. ಆ ಮೂಲಕ ಸಹಸ್ರಾರು ಕಣ್ಣುಗಳಿಗೆ ಬೆಳಕು ನೀಡಿದರು. ಡಾ ಮೋದಿಯವರ ಸಾಮರ್ಥ್ಯವನ್ನು ಹೀಗೆ ದಕ್ಷಿಣಕನ್ನಡ ಜಿಲ್ಲೆಗೆ ಪರಿಚಯಿಸಿದ ಕೀರ್ತಿ ಇದ್ದರೆ ಅದು ಅಡಿಗರಿಗೆ ಸಲ್ಲಬೇಕು.

ಕಲಾಪ್ರಿಯ ಅಡಿಗ

ಶ್ರೀ ಅಡಿಗರು ಉತ್ತಮ ಕಲಾಪ್ರಿಯರು ಹಾಗೂ ಕಲಾಪೋಷಕರು. ನಾಟಕ, ನೃತ್ಯ, ಯಕ್ಷಗಾನ, ಸಂಗೀತ ಯಾವುದೇ ಕಲಾಪ್ರಕಾರಗಳಿರಲಿ ಉತ್ಕೃಷ್ಟವಾದುದನ್ನು ಮೆಚ್ಚಿ ಆಸ್ವಾದಿಸಿ ಕಲಾವಿದರ ಬೆನ್ನು ತಟ್ಟಿ ಅಭಿನಂದಿಸುತ್ತಿದ್ದರು. ಯಕ್ಷಗಾನದ ಪ್ರಚಾರ ಮತ್ತು ಉನ್ನತಿಗಾಗಿ ಶ್ರಮಿಸುತ್ತಿದ್ದ ಹಿರಿಯ ಜೀವಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ನಗರಸಭಾಧ್ಯಕ್ಷರಾಗಿದ್ದಾಗ ಇನ್ನಿತರ ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗಲೂ ಕೂಡ ಕಲಾ ಸಮಾರಂಭದ ಅಧ್ಯಕ್ಷತೆ ವಹಿಸಲು ಕರೆ ಬಂದಾಗ ಕಾರ್ಯಕ್ರಮಗಳನ್ನು ಸಾದ್ಯಂತವಾಗಿ ವೀಕ್ಷಿಸಿ ವಿಮರ್ಶಿಸುತ್ತಿದ್ದರು. ಅಂಕದ ಪರದೆ ಜಾರಿದ ಮೇಲೆ ಕಲಾವಿದರನ್ನು ಕೇಳುವರಾರು? ಕಾರ್ಯಕ್ರಮ ವೀಕ್ಷಿಸಿದವರು ಬೆನ್ನು ಹಾಕಿ ನಡೆದರೆ ಕಲಾವಿದರ ಬಗ್ಗೆ ಅತ್ಯಂತ ಗೌರವಾದರಗಳನ್ನು ಹೊಂದಿದ್ದ ಅಡಿಗರು ತಮ್ಮ ಕಾರ್ ಡ್ರೈವರನ್ನು ಕರೆದು ಸಂಗೀತಗಾರರನ್ನು ತಬಲೆಯವರನ್ನು ನಟರನ್ನು ತಮ್ಮ ಕಾರಲ್ಲೇ ಅವರ ಮನೆಗೆ ತಲುಪಿಸುವಂತೆ ಸೂಚಿಸುತ್ತಿದ್ದರು. ಹೀಗಾಗಿ ಎಲ್ಲರೂ ಮನೆ ಸೇರಿದ ಮೇಲೆಯೇ ಅಡಿಗರು ಮನೆ ಸೇರುವಾಗ ಮಧ್ಯರಾತ್ರಿ ಕಳೆದಿರುತ್ತಿತ್ತು. ತಮ್ಮ ಆತ್ಮೀಯ ಕೆಲ ಸುಪ್ರಸಿದ್ಧ ನ್ಯಾಯವಾದಿಗಳು ಒಂದು ಕಲಾಸಂಸ್ಥೆಯನ್ನು ಕಟ್ಟಿ ಮೈಸೂರು, ಕೊಡಗು ಇತ್ಯಾದಿ ಪ್ರದೇಶಗಳಲ್ಲಿ ತಾಳಮದ್ದಲೆ, ಯಕ್ಷಗಾನ ಕಾರ್ಯಕ್ರಮಗಳನ್ನು ನೀಡುವಂತೆ ಉತ್ತೇಜಿಸುತ್ತಿದ್ದರು. ಕಲೆಗಾಗಿ ತ್ರಿಕರಣ ಪೂರಕವಾದ ಅವರ ಸಹಾಯವನ್ನು ನೆನೆಯದ ಕಲಾವಿದರೆ ವಿರಳ.

ವಿಧಾನ ಪರಿಷತ್‌ನಲ್ಲಿ – ಮಾತಿನ ಮಲ್ಲನಿಗೆ ಇದಿರಾರೈ!

ಜನಸೇವೆಗಾಗಿ ಅಧಿಕಾರವನ್ನು ಬಯಸುವವರು, ‘ಕುರ್ಚಿಗಂಟಿದ ಕರ್ಚಿ’ಯಾಗಿ ಜೀವಿಸುವವರು, ಸ್ವಹಿತಾಸಕ್ತಿಯ ಅಧಿಕಾರ ಲಾಲಸೆಯ ಜಿಪುಣತೆ ತುಂಬಿರುವ ಈ ದಿನಗಳಲ್ಲಿ ಶ್ರೀ ಅಡಿಗರಂತಹವರು ಬಹು ವಿರಳ. ಸೇವಾಜೀವನ ಅವರ ಧ್ಯೇಯವಾಗಿತ್ತು. ಅವರ ಉಸಿರಾಗಿತ್ತು. ಅವರು ಶಾಸಕಾಂಗದಿಂದ ದೂರ ನಿಂತು ಕೆಲಸ ಮಾಡುವ ಕರ್ತೃತ್ವ ಶಕ್ತಿ ಅವರಲ್ಲಿತ್ತು. ಅಂತಹ ನಿರಪೇಕ್ಷ ಮನಸ್ಸು ಮತ್ತು ಶಕ್ತಿ ಅಡಿಗರಿಗಿತ್ತು.

ಕಾಂಗ್ರೆಸ್ ಪಕ್ಷದ ಒತ್ತಾಯದ ಮೇರೆಗೆ ಅವರು ಕುಂದಾಪುರ ಕ್ಷೇತ್ರದ ಅಭ್ಯರ್ಥಿಯಾಗಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಜನಾನುರಾಗಿಯಾಗಿದ್ದ ಅಡಿಗರಿಗೆ ಚುನಾವಣೆ ಗೆಲ್ಲುವ ಪಟ್ಟುಗಳು ಅಪರಿಚಿತವಾಗಿದ್ದವು ಹಾಗು ಅದು ಬೇಕಾಗಿಯೂ ಇದ್ದಿರಲಿಲ್ಲ. ಹೀಗಾಗಿ ಚುನಾವಣೆಯಲ್ಲಿ ಜಯ ದಕ್ಕಲಿಲ್ಲ. ಎರಡನೆ ಬಾರಿ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯ ಬಂದಾಗ ಹಲವಾರು ನೆಪವೊಡ್ಡಿ ಹಿಂದೇಟು ಹಾಕಿದರು. ಅಡಿಗರು ಶಾಸಕರಾದರೆ ಪಕ್ಷದ ವರ್ಚಸ್ಸು ವೃದ್ಧಿಯಾಗುವುದೆಂದು ಕಾಂಗ್ರೆಸ್ ಪಕ್ಷವು 1964ರಲ್ಲಿ ಮೂರನೆಯ ಬಾರಿ ಒತ್ತಾಯಿಸಿದಾಗಲೂ ಒಪ್ಪದ ಅಡಿಗರು ಪಕ್ಷದ ಮುಂದಾಳುಗಳ ತೀವ್ರ ಹಟಕ್ಕೆ ಕಟ್ಟುಬಿದ್ದು 1966ರಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾದರು. ಸದಸ್ಯರಾಗಿ ಆರು ವರ್ಷಗಳ ಕಾಲ ಮುಂದುವರಿಯಬಹುದಾಗಿದ್ದ ಅವಕಾಶ ಇದ್ದರೂ ಅಡಿಗರು ಅವಧಿಗೆ ಮುನ್ನವೇ ಸದಸ್ಯತನ ತೊರೆದು ಸಾರ್ವಜನಿಕ ಸೇವೆಗೆ ಮತ್ತೆ ಹಿಂದಿರುಗಿದರು.

ಪರಿಷತ್ತಿನಲ್ಲಿ ಅಡಿಗರೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸ್ನೇಹಜೀವಿಯಾದ ಅಡಿಗರಿಗೆ ಆಳುವ ಪಕ್ಷ, ವಿರೋಧ ಪಕ್ಷಗಳೆಂಬ ಭೇದವಿರಲಿಲ್ಲ. ಅವರು ವಿರೋಧ ಪಕ್ಷವನ್ನು ವಿರೋಧ ಪಕ್ಷವೆಂದು ಕರೆಯದಿರಿ, ಅವರು ನಮ್ಮ ಅಂತರ್ ವಿಮರ್ಶಕರೆಂದು ಕರೆಯುವ ಸೌಜನ್ಯ ನಮ್ಮಲ್ಲಿರಲಿ. ಪ್ರತಿಪಕ್ಷ ನಮಗೆ ಕನ್ನಡಿ, ಅದನ್ನು ಗಮನಿಸಿ ನಮ್ಮಲ್ಲಿರಬಹುದಾದ ಓರೆಕೋರೆಗಳನ್ನು ತಿದ್ದಿಕೊಳ್ಳುವ ಅವಕಾಶ ನಮಗುಂಟು ಎನ್ನುವ ಧನಾತ್ಮಕ ವಿಚಾರಧಾರೆ ಅಡಿಗರದು.

ಕಾರ್ಯಕಲಾಪಗಳಲ್ಲಿ ಅಡಿಗರು ಯಾವತ್ತೂ ಶತಪ್ರತಿಶತ ಶ್ರದ್ಧೆಯಿಂದ ಭಾಗವಹಿಸುತ್ತಿದ್ದರು. ಮಂಗಳೂರಿನಲ್ಲಿ ತೀರಾ ಅಗತ್ಯದ ಕೆಲಸಗಳಿದ್ದಾಗ ಮಾತ್ರ ಅನುಪಸ್ಥಿತರಾಗುತ್ತಿದ್ದರೇ ಹೊರತು ಉಳಿದಂತೆ ಅವರು ಸದಾ ಹಾಜರಿರುತ್ತಿದ್ದರು.  ಸಭೆ ಆರಂಭವಾಗುವ ನಿಮಿಷದಿಂದ ಕಡೆಯವರೆಗೂ ಕುಳಿತುಕೊಳ್ಳುವ ಸಭಾ ಮಾರ್ಯಾದೆ ಅವರದ್ದು. ಯಾವ ವಿಧೇಯಕ ಬಂದರೂ ಯಾವ ನಿರ್ಣಯ ಬಂದರೂ ತಮ್ಮ ಸರದಿ ಬಂದಾಗ ವಿಚಾರ ಪೂರ್ಣವಾದ ಮಾತುಗಾರಿಕೆ. ತಮ್ಮ ಭಾಷಣವನ್ನು ಸ್ವಚ್ಛ ಕನ್ನಡದಲ್ಲೇ ಎಲ್ಲರಿಗೂ ಮನಮುಟ್ಟುವಂತೆ ಮಾಡುತ್ತಿದ್ದರು. ಅವರು ಸರಕಾರದ ಕ್ರಮಗಳನ್ನು ಸಮರ್ಥಿಸುವಷ್ಟೇ ಸಹಜವಾಗಿ, ವ್ಯಂಗ್ಯದಿಂದ ಟೀಕಿಸುವ ರೀತಿಯೂ ಅನನ್ಯ. ಮಹಾಜನ ವರದಿಯ ನೇಮಕ, ಕೈಗಾರಿಕೆಗಳಿಂದಾಗುವ ಪರಿಸರ ಮಾಲಿನ್ಯ ತಡೆಗಟ್ಟುವ ಕ್ರಮಗಳನ್ನು ಜರುಗಿಸಲು ಸಂಬಂಧಿಸಿದ ವಿಧೇಯಕ ಮಂಡನೆಯ ವಿಷಯಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ವಿಧಾನ ಪರಿಷತ್ತಿನಲ್ಲಿ ವೈಕುಂಠ ಬಾಳಿಗರಿಗೆ ಅಡಿಗರ ಮೇಲೆ ತುಂಬಾ ವಿಶ್ವಾಸ. ಅಡಿಗರು ಯಾವಾಗಲೂ ಅವರೊಂದಿಗೆ ಮಂತ್ರಾಲೋಚನೆಯಲ್ಲಿ ಭಾಗವಹಿಸುತ್ತಿದ್ದರು. ಬಾಳಿಗರಿಗೆ ಹೃದಾಯಾಘಾತವಾದಾಗ ಅವರನ್ನು ತಕ್ಷಣ ಮನೆಗೆ ಕರೆದುಕೊಂಡು ಹೋದದ್ದು ಅಡಿಗರೇ. ಎಲ್ಲ ಮಂತ್ರಿಮಾನ್ಯರಿಗೂ ಅಡಿಗರು ಮಾನ್ಯರಾಗಿದ್ದರೆಂಬುದು ಸರ್ವವಿದಿತ.

ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ‘Who is Who’ ಪರಿಚಯ ಪುಸ್ತಕದಲ್ಲಿ ಪ್ರಕಟಿಸಬೇಕೆಂದ ಬಯೋಡಾಟವನ್ನು ಸದಸ್ಯರೇ ಒದಗಿಸಬೇಕಾದದ್ದು ಪರಿಪಾಠ. ಸ್ವಂತ ತುತ್ತೂರಿಯನ್ನು ಊದುವುದರಲ್ಲಿ ಅನಾಸಕ್ತರಾಗಿದ್ದ ಅಡಿಗರು ಕೊನೆಯವರೆಗೂ ತಮ್ಮ ವಿವರಗಳನ್ನು ಒದಗಿಸಲಿಲ್ಲ.  ಹೀಗಾಗಿ ಅವರ ಪರಿಚಯ ಆ ಪುಸ್ತಕದಲ್ಲಿ ಪ್ರಕಟವಾಗಲೇ ಇಲ್ಲ.

ಒಡನಾಟ

ದೊಡ್ಡವರೊಂದಿಗೆ ಗುರುತಿಸಿಕೊಳ್ಳುವ ಸ್ವಾರ್ಥಸಾಧನೆಗಾಗಿ ವಶೀಲಿಯನ್ನು ಉಪಯೋಗಿಸುವ, ರಾಜಕೀಯ ತಂತ್ರಗಾರಿಕೆಗಳನ್ನು ಹೆಣೆಯುವ ಯಾವುದೇ ಆಸೆ ಅಡಿಗರಿಗಿದ್ದಿಲ್ಲ. ಅವರು ಜೀವನದುದ್ದಕ್ಕೂ ಅದನ್ನು ಬಯಸಿದವರೂ ಅಲ್ಲ. ಆದರೂ ಅವರ ಸೂಜಿಗಲ್ಲಿನಂತಹ ಆಕರ್ಷಕ ವ್ಯಕ್ತಿತ್ವ ನಾಡಿನ ಅನೇಕ ಧೀಮಂತ ನಾಯಕರುಗಳ ಸಂಪರ್ಕ ಅವರಿಗೆ ಕಲ್ಪಿಸಿಕೊಟ್ಟಿತ್ತು. ಅಡಿಗರ ಉನ್ನತ ವಿಚಾರಗಳಿಗೆ ಮಾರುಹೋದ ಸಮಾನ ಮನಸ್ಕರು, ಧುರೀಣರು ಅಡಿಗರನ್ನು ತಮ್ಮ ಮಂತ್ರಾಲೋಚನೆಯ ಸದಸ್ಯರನ್ನಾಗಿಸಿಕೊಳ್ಳುತ್ತಿದ್ದರು. ಹೀಗಾಗಿ ದೇಶದ ಪ್ರತಿಷ್ಠಿತ ನಾಯಕರೊಂದಿಗಿನ ಒಡನಾಟ ಮತ್ತು ವಿಚಾರ ವಿನಿಮಯ ಮಾಡುವ ಭಾಗ್ಯ ಅಡಿಗರದಾಗಿತ್ತು. ಪಂಡಿತ್ ಜವಹಾರಲಾಲ್ ನೆಹರು, ಲಾಲ್ ಬಹುದೂರ ಶಾಸ್ತ್ರಿ, ಇಂದಿರಾ ಗಾಂಧಿ, ವಿನೋಬಾ ಭಾವೆ, ಮೊರಾರ್ಜಿ ದೇಸಾಯಿ, ಕಾಮರಾಜ ನಾಡಾರ, ಬಾಬು ಜಗಜೀವನ ರಾಮ, ಸಿ. ಸುಬ್ರಹ್ಮಣ್ಯಂ, ಎಸ್. ನಿಜಲಿಂಗಪ್ಪ, ಬಿ.ಡಿ. ಜತ್ತಿ, ವೀರೇಂದ್ರ ಪಾಟೀಲ, ಟಿ.ಎ. ಪೈ, ಡಿ. ದೇವರಾಜ ಅರಸರು ಅಂಥವರಲ್ಲಿ ಪ್ರಮುಖರು.

ರಾಷ್ಟ್ರ ನಾಯಕರೊಟ್ಟಿಗಿನ ಒಡನಾಟದಲ್ಲಿ ಎಂದೂ ಅವರ ಹಿತಾಸಕ್ತಿಯ ಪ್ರಸ್ತಾಪವಿರುತ್ತಿರಲಿಲ್ಲ. ಸಮಕಾಲೀನ ಸಮಸ್ಯೆಗಳ ಬಗ್ಗೆ ನಾಯಕರ ಗಮನ ಸೆಳೆದು ಅವುಗಳ ನಿವಾರಣೆಯ ಬಗೆಗಿನ ಹೋರಾಟವೆ ಅವರ ಜೀವನದ
ಪರಮ ಗುರಿ. ಆಗಿನ ಕೇಂದ್ರ ಸರಕಾರದಲ್ಲಿ ಉದ್ಯಮ ಮತ್ತು ನಾಗರಿಕ ಪೂರೈಕೆಯ ಸಚಿವರಾಗಿದ್ದ  ಟಿ.ಎ. ಪೈಯವರಂತೂ  ಅಡಿಗರ  ತುಂಬಾ  ನಿಕಟವರ್ತಿ ಯಾಗಿದ್ದರು.  ಸ್ವತಃ ಟಿ.ಎ. ಪೈಗಳೇ ‘ನಮ್ಮದು ಬಲು ಹಳೆಯ ಸ್ನೇಹಾಚಾರ’ ಎಂದು ಹೇಳಿಕೊಳ್ಳುತ್ತಿದ್ದರು.

ಮಾನಸಗಂಗೋತ್ರಿಯಿಂದ ಮಂಗಳಗಂಗೋತ್ರಿಯವರೆಗೆ…

ದಕ್ಷಿಣ ಕನ್ನಡಕ್ಕೆ ವಿದ್ಯಾರಂಗದಲ್ಲಿ ಯಾವತ್ತೂ ಅಗ್ರಪಟ್ಟ. ದ.ಕ.ದವರು ನಾಡಿನಲ್ಲೇ ಬುದ್ಧಿವಂತರೆಂಬ ಹೆಗ್ಗಳಿಕೆ. ಜಿಲ್ಲೆಗೆ ಇಂತಹ ಹೆಸರು ತರುವುದರಲ್ಲಿ ಹಲವು ಮಹನೀಯರ ಪರಿಶ್ರಮ ಉಲ್ಲೇಖನೀಯ. ದ.ಕ. ಜಿಲ್ಲೆಗೆ ಸುರತ್ಕಲ್ ಇಂಜಿನಿಯರಿಂಗ್ ಕಾಲೇಜು ತಂದದ್ದು ಶ್ರೀನಿವಾಸ ಮಲ್ಯರಾದರೆ, ಮಣಿಪಾಲಕ್ಕೆ ವಿಶ್ವಮಾನ್ಯತೆ ತಂದದ್ದು ಪೈಗಳ ಕುಟುಂಬ. ದಕ್ಷಿಣ ಕನ್ನಡದ ಶಿಕ್ಷಣಕ್ಷೇತ್ರಕ್ಕೆ ಸೂರ್ಯನಾರಾಯಣ ಅಡಿಗರದ್ದು ಅವರದ್ದೇ ಆದ ವಿಶಿಷ್ಟ ಸೇವೆ. 1965ರಲ್ಲಿ ಅಡಿಗರು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿದ್ದರು. ಅಡಿಗರಿಗೆ ಶಾಲಾ, ಕಾಲೇಜುಗಳ ವಿದ್ಯಾಭ್ಯಾಸ, ಶಿಕ್ಷಕ-ಶಿಕ್ಷಾರ್ಥಿಗಳ ಶ್ರೇಯೋಭಿವೃದ್ಧಿಯ ಬಗ್ಗೆಯೇ ಯಾವತ್ತೂ ತುಡಿತ. ಶಿಕ್ಷಣಕ್ಷೇತ್ರದ ಪುರೋಗಾಮಿ ಅಭಿವೃದ್ಧಿಗಾಗಿ ಅವರದು ಅವಿರತ ಶ್ರಮ. ಅಡಿಗರ ನಿರಂತರ ಪ್ರಯತ್ನದಿಂದಾಗಿ, ಸತತ ಸಾಧನೆಯ ಫಲವಾಗಿ ಸ್ನಾತಕೋತ್ತರ ಕೇಂದ್ರವು ಮಂಗಳೂರಿನ ಕೊಣಾಜೆ ಬಳಿ ಸ್ಥಾಪಿತವಾಯಿತು. ಮಾನಸಗಂಗೋತ್ರಿಯ ಕವಲಾಗಿ ಹರಿದ ವಿದ್ಯಾಗಂಗೆ ಮುಂದೆ ಮಂಗಳಗಂಗೋತ್ರಿ ಎಂಬ ವಿಶ್ವವಿದ್ಯಾನಿಲಯವಾಗಿ ಕೊಣಾಜೆಯ ನಿಸರ್ಗ ರಮಣೀಯ ತಾಣದಲ್ಲಿ ಪೂರ್ಣಗೊಂಡಿತು. ಇಲ್ಲಿಯೂ ಭಗೀರಥರು ಅಡಿಗರೇ!

1973ರಲ್ಲಿ ಅಡಿಗರು ಮೈಸೂರು ವಿಶ್ವವಿದ್ಯಾನಿಲಯದ ಪ್ರತಿನಿಧಿಯಾಗಿ ಸ್ಕಾಟ್‌ಲ್ಯಾಂಡಿನ ಎಡಿನ್ ಬರೋದಲ್ಲಿ ಸೇರಿದ 11ನೇ ಕಾಮನ್ ವೆಲ್ತ್ ವಿಶ್ವವಿದ್ಯಾನಿಲಯಗಳ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಸಮ್ಮೇಳನದ ಅನಂತರ ಅವರ ಶೈಕ್ಷಣಿಕ ಪ್ರವಾಸ ಮುಂದುವರೆದದ್ದು ಇಂಗ್ಲೆಂಡ್, ರೋಮ್, ಪ್ಯಾರಿಸ್, ಜಿನೆವಾಗಳ ಕಡೆಗೆ. ಅಲ್ಲಿಯ ಶೈಕ್ಷಣಿಕ ಪ್ರಗತಿಯ ಪ್ರತ್ಯಕ್ಷ ಅವಲೋಕನ ಸ್ವದೇಶಿಯ ವಿಶ್ವವಿದ್ಯಾಲಯಗಳ ತುಲನಾತ್ಮಕ ಅಧ್ಯಯನಕ್ಕೆ ಸಹಕಾರಿಯಾಯಿತು.

ಅಡಿಗರು ಕಸ್ತೂರಬಾ ಮೆಡಿಕಲ್ ಕಾಲೇಜು, ಕರ್ನಾಟಕ ರೀಜಿನಲ್ ಇಂಜಿನಿಯರಿಂಗ್ ಕಾಲೇಜು (ಈಗಿನ ಎನ್.ಐ.ಟಿ.ಕೆ.)ಗಳ ಆಡಳಿತ ಮಂಡಳಿಯ ಸದಸ್ಯರಾಗಿ ರಚನಾತ್ಮಕ ಸಲಹೆಗಳನ್ನು ನೀಡುತ್ತಾ ಬಂದರು.

ಕರ್ಣಾಟಕ ಬ್ಯಾಂಕ್‌ನಲ್ಲಿ ಉದಯಿಸಿದ ನವಸೂರ್ಯ!

ಕರಾವಳಿಯ ಈ ದಕ್ಷಿಣ ಕನ್ನಡ ಜಿಲ್ಲೆಯನ್ನು ಬ್ಯಾಂಕುಗಳ ತೊಟ್ಟಿಲು ಎಂದೇ ಕರೆಯಲಾಗುತ್ತದೆ. ದೇಶಕ್ಕೆ ಹಲವಾರು ಬ್ಯಾಂಕುಗಳನ್ನಿತ್ತ ಈ ಜಿಲ್ಲೆಯಲ್ಲಿ ಐದು ಬ್ಯಾಂಕುಗಳು ಅಗ್ರಮಾನ್ಯವಾಗಿವೆ. ಅವೆಂದರೆ ಕರ್ಣಾಟಕ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಹಾಗೂ ವಿಜಯಾ ಬ್ಯಾಂಕ್. ಕರ್ಣಾಟಕ ಬ್ಯಾಂಕನ್ನು ಹೊರತುಪಡಿಸಿ ಉಳಿದ ನಾಲ್ಕು ಬ್ಯಾಂಕುಗಳು ರಾಷ್ಟ್ರೀಕರಣ ಗೊಂಡಿವೆ. ಕರ್ಣಾಟಕ ಬ್ಯಾಂಕ್ ಖಾಸಗೀ ರಂಗದಲ್ಲೇ ಇದ್ದು ಈಗ ಸದೃಢ ಹಾಗೂ ಅಗ್ರಮಾನ್ಯ ಬ್ಯಾಂಕ್ ಎನ್ನಿಸಿದೆ.

20ನೇ ಶತಮಾನದ ಪ್ರಾರಂಭ, ದೇಶ ಸ್ವಾತಂತ್ರ್ಯ ಚಳುವಳಿ, ಸ್ವದೇಶಿ ಚಳುವಳಿಯಂತಹ ಘಟನೆಗಳಿಗೆ ಸಾಕ್ಷಿಯಾದ ಕಾಲ. ಗಾಂಧೀಜಿಯ ಅನುಯಾಯಿಯಾದ ಮಹಾನ್ ರಾಷ್ಟ್ರಪ್ರೇಮಿ ಕಾರ್ನಾಡ್ ಸದಾಶಿವರಾಯರು ಜಿಲ್ಲೆಯಾದ್ಯಂತ ದೇಶಭಕ್ತಿಯ ಸಂದೇಶವನ್ನು ಹರಡುತ್ತಿದ್ದ ಆ ದಿನಗಳಲ್ಲಿ ಹಲವಾರು ಜಮೀನ್ದಾರರು, ವ್ಯಾಪಾರಸ್ಥರು, ವೈದ್ಯರು, ವಕೀಲರುಗಳು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದರು. ಈ ಸಂಕ್ರಮಣ ಕಾಲಘಟ್ಟದಲ್ಲಿ ಜಿಲ್ಲೆಯ ಬ್ರಾಹ್ಮಣ ಸಮುದಾಯದ ಪ್ರಮುಖ ವಕೀಲರು, ವರ್ತಕರುಗಳ ಗುಂಪೊಂದು ತುಳುನಾಡಿನ ಸಣ್ಣ ಕೃಷಿಕರಿಗೆ, ಕಾಫಿ, ಕಂಗು, ತೆಂಗು ಬೆಳೆಗಾರರಿಗೆ, ಹೋಟೆಲಿನವರಿಗೆ ಮತ್ತು ಚಿಕ್ಕ ವ್ಯಾಪಾರಿಗಳಿಗೆ ನೆರವನ್ನೊದಗಿಸಲು ಬ್ಯಾಂಕೊಂದನ್ನು ಸ್ಥಾಪಿಸುವ ಧ್ಯೇಯೋದ್ದೇಶದಿಂದ 1924ರ ಫೆಬ್ರವರಿ 18ರಂದು ದಿ ಕರ್ಣಾಟಕ ಬ್ಯಾಂಕ್ ಎಂಬ ಶಿರೋನಾಮೆಯಡಿಯಲ್ಲಿ ಬ್ಯಾಂಕೊಂದನ್ನು ಪ್ರಾರಂಭಿಸಿತು. ಆಗಿನ್ನೂ ಕನ್ನಡ ನಾಡು ಮೈಸೂರು ರಾಜ್ಯವಾಗೇ ಇತ್ತು. ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂಬ ಪುರ್ನನಾಮಕರಣ ವೂಡುವ ಮೊದಲೇ ಕರ್ಣಾಟಕ ಬ್ಯಾಂಕ್ (ಕರ್ನಾಟಕ ಅಲ್ಲ!) ಎಂಬ ಹೆಸರಿನಲ್ಲಿ ಶುರುವಾದ ಈ ಸಂಸ್ಥೆ ಅದರ ಸ್ಥಾಪಕರ ದೂರದರ್ಶಿತ್ವಕ್ಕೆ ಸಾಕ್ಷಿಯಾಯಿತು.

ಬ್ಯಾಂಕ್ ಸ್ಥಾಪನೆಯ ಧ್ಯೇಯವನ್ನು ಹೊಂದಿದ್ದ ಆಸಕ್ತರಲ್ಲಿ  ಶ್ರೀ ಪೇಜಾವರ ನಾರಾಯಣ ಆಚಾರ್ಯ, ಶ್ರೀ ಕಲ್ಮಾಡಿ ಲಕ್ಷ್ಮಿನಾರಾಯಣ ರಾವ್, ಶ್ರೀ ಬಿ.ಆರ್. ವ್ಯಾಸರಾಯ ಆಚಾರ್, ಶ್ರೀ ಪಾಂಗಾಳ ಸುಬ್ಬರಾವ್, ಶ್ರೀ ಉಡುಪಿ ವೆಂಕಟ ರಾವ್, ಶ್ರೀ ಶೇಷಭಟ್ ಬಿಢೆ, ಶ್ರೀ ನರಿಕೊಂಬು ರಾಮರಾವ್ ಹಾಗೂ ಶ್ರೀ ಕೆ. ಸದಾಶಿವ ಅಡಿಗರು ಸರ್ವ ಪ್ರಥಮರು ಮತ್ತು ಪ್ರಮುಖರು. ಶ್ರೀ ಬಿ. ಆರ್. ವ್ಯಾಸರಾಯ ಆಚಾರ್ಯರು ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾಗಿ ಹಾಗೂ ಉಳಿದ ಎಂಟೂ ಜನರು ಸಂಸ್ಥಾಪಕ ನಿರ್ದೇಶಕರುಗಳಾಗಿ ಬ್ಯಾಂಕಿನ ಸಾರಥ್ಯ ವಹಿಸಿದರು.

ಎಲ್ಲ ಪ್ರಯಾಣಗಳು ಪ್ರಾರಂಭವಾಗುವುದು ಒಂದು ಪುಟ್ಟ ಹೆಜ್ಜೆಯಿಂದಲೇ. ಬ್ಯಾಂಕ್ ಆರಂಭದಲ್ಲಿ ಅಂಬೆಕಾಲಿಕ್ಕಿ ನಡೆಯತೊಡಗಿತು. 1924 ಮೇ 23ರಂದು ಬ್ಯಾಂಕ್ ತನ್ನ ಪ್ರಥಮ ಶಾಖೆಯನ್ನು ಮಂಗಳೂರಿನ ಡೊಂಗರಕೇರಿಯಲ್ಲಿ ಪ್ರಾರಂಭಿಸಿತು. 1930ರಲ್ಲಿ ಬ್ಯಾಂಕ್ ತನ್ನ ದ್ವಿತೀಯ ಶಾಖೆಯನ್ನು ಚೆನ್ನೈನ ಈಗಿನ ತುಂಬುಚೆಟ್ಟಿ ಸ್ಟ್ರೀಟ್‌ನಲ್ಲಿ ತೆರೆಯಿತು.

ಶ್ರೀ ಕೆ. ಸೂರ್ಯನಾರಾಯಣ ಅಡಿಗರು 1945ರಲ್ಲಿ ಬ್ಯಾಂಕಿನ ನಿರ್ದೇಶಕರಾಗಿ ನೇಮಕಗೊಂಡರು. ಸಹಜವಾಗಿಯೇ ತಮ್ಮ ತಂದೆ ಸ್ಥಾಪಿಸಿದ ಬ್ಯಾಂಕಿನ ಬಗ್ಗೆ ಅಡಿಗರಿಗೆ ವಿಶೇಷ ಅಭಿಮಾನವಿತ್ತು. ಆಗ ಜ್ಯಾರಿಯಲ್ಲಿದ್ದ ಪದ್ಧತಿಯಂತೆ ಶ್ರೀ ಬಿ.ಅರ್. ವ್ಯಾಸರಾಯ ಅಚಾರ್ಯರೇ ಅರೆಕಾಲಿಕ ಅಧ್ಯಕ್ಷರಾಗಿದ್ದರು. 1958ರಲ್ಲಿ ಶ್ರೀ ಬಿ.ಆರ್. ವ್ಯಾಸರಾಯ ಆಚಾರ್ಯರು 34 ವರ್ಷಗಳ ದೀರ್ಘಾವಧಿಯ ಅಧ್ಯಕ್ಷ ಪದವಿಯನ್ನು ತೆರವುಗೊಳಿಸಿದರು. ಈ ಹಿರಿಯರನ್ನು ಅನುಸರಿಸಿ ಅಡಿಗರು ಬ್ಯಾಂಕಿನ ಅರೆಕಾಲಿಕ ಅಧ್ಯಕ್ಷರಾಗಿ ಮುಂದುವರೆದರು. ಅಡಿಗರ ಅವಧಿಯಲ್ಲಿ ಬ್ಯಾಂಕು ಅಭಿವೃದ್ಧಿ ಪಥದಲ್ಲಿ ಸಾಗತೊಡಗಿತು. ‘ಡಿ’ ದರ್ಜೆಯಲ್ಲಿದ್ದ ಬ್ಯಾಂಕು ‘ಸಿ’ ದರ್ಜೆಗೆ ಏರಿತು.

1960ರಲ್ಲಿ ಶೃಂಗೇರಿ ಶಾರದಾ ಬ್ಯಾಂಕ್ ಹಾಗೂ 1961ರಲ್ಲಿ ಚಿತ್ರದುರ್ಗ ಬ್ಯಾಂಕ್ ಹಾಗೂ 1966ರಲ್ಲಿ ಉತ್ತರ ಕರ್ನಾಟಕದಲ್ಲಿದ್ದ ‘ಬ್ಯಾಂಕ್ ಆಫ್ ಕರ್ಣಾಟಕ’  ಎಂಬ ಇನ್ನೊಂದು ಬ್ಯಾಂಕ್ ಬ್ಯಾಂಕಿನಲ್ಲಿ ವಿಲೀನಗೊಂಡು ಬ್ಯಾಂಕಿನ ಗಾತ್ರ ಹೆಚ್ಚುತ್ತಾ ಹೋಯಿತು. ಬ್ಯಾಂಕ್ ‘ಸಿ’ ದರ್ಜೆಯಿಂದ ‘ಎ’ ದರ್ಜೆಗೆ ಏರಿತು. 1971ರಲ್ಲಿ ಅಡಿಗರು ಬ್ಯಾಂಕಿನ ಪೂರ್ಣಾವಧಿ ಅಧ್ಯಕ್ಷರಾಗಿ ಹಾಗೂ ಮುಖ್ಯ ನಿರ್ವಹಣಾಧಿಕಾರಿ ಯಾಗಿ ನೇಮಕಗೊಂಡರು. ಇದರಿಂದಾಗಿ ಬ್ಯಾಂಕ್ ಅಭಿವೃದ್ಧಿಯ ದಾಪುಗಾಲಿಡಲು ಸಾಧ್ಯವಾಯಿತು. ಶಾಖೆಗಳ ಸಂಖ್ಯೆ ನೂರರ ಗಡಿ ದಾಟಿತು. ಬ್ಯಾಂಕಿನ ಪೂರ್ಣಾವಧಿಯ ಅಧ್ಯಕ್ಷರಾಗಿ ನೇಮಕಗೊಳ್ಳಬೇಕಾದ ಸಂದರ್ಭದಲ್ಲಿ ಅಡಿಗರು ತಮ್ಮ ಸಮೃದ್ಧವಾದ ವಕೀಲಿ ವೃತ್ತಿಯನ್ನು ಹಾಗೂ ವಿಧಾನ ಪರಿಷತ್‌ನ ಸದಸ್ಯತ್ವವನ್ನು ತ್ಯಾಗ ಮಾಡಿ ಬ್ಯಾಂಕಿನ ಸರ್ವಾಂಗೀಣ ಏಳ್ಗೆಗಾಗಿ ಶ್ರಮಿಸಿದರು. ಸತತವಾಗಿ ಅಭಿವೃದ್ಧಿ ಪಥದಲ್ಲಿ ಸಾಗಿದ ಬ್ಯಾಂಕಿನ ಶಾಖೆಗಳು ಇನ್ನೂರರ ಸೀಮಾರೇಖೆಯನ್ನು ದಾಟಿತು.

ಹಳ್ಳಿಯಿಂದ ದಿಲ್ಲಿಯ ವರೆಗೆ ಸಂಪರ್ಕದ ಆವಶ್ಯಕತೆಯನ್ನರಿತ ಅಡಿಗರು, 1978ರಲ್ಲಿ ದೆಹಲಿಯ ‘ಕನ್ಹಾಟ್ ಪ್ಲೆಸ್’ನಲ್ಲಿ ಬ್ಯಾಂಕಿನ ಮೊದಲ ಶಾಖೆ ಪ್ರಾರಂಭಿಸುವುದರ ಮೂಲಕ ವಹಿವಾಟನ್ನು ದೇಶದ ರಾಜಧಾನಿಗೂ ವಿಸ್ತರಿಸಿದರು. ಆಗಿನ ಉಪರಾಷ್ಟ್ರಪತಿ – ಶ್ರೀ ಬಿ.ಡಿ. ಜತ್ತಿಯವರು ಈ ಬ್ರ್ಯಾಂಚ್‌ನ ಉದ್ಘಾಟನೆಯನ್ನು ನೆರವೇರಿಸಿದರು.

ಅಡಿಗರು ತಮ್ಮ ಆಡಳಿತಾವಧಿಯಲ್ಲಿ ಹಲವಾರು ಕನಸುಗಳನ್ನು ಕಟ್ಟಿದ್ದರು. ಅವುಗಳನ್ನು ನನಸಾಗಿಸುವಲ್ಲಿ ಹರಸಾಹಸಗೈದರು. ಬ್ಯಾಂಕಿನ ಪ್ರಧಾನ ಕಛೇರಿಗೆ ಒಂದು ಸದೃಢ ಕಟ್ಟಡದ ಆವಶ್ಯಕತೆಯನ್ನು ಮನಗಂಡ ಅವರು 1972ರಲ್ಲಿ ನಾಲ್ಕು ಮಹಡಿಗಳುಳ್ಳ ಸುಮಾರು 35000 ಚದರ ಅಡಿಯ ಸುಂದರ ಕಟ್ಟಡವನ್ನು ನಗರದ ಕೇಂದ್ರ ಭಾಗವಾದ ಕೊಡಿಯಾಲ ಬೈಲಿನಲ್ಲಿ ನಿರ್ಮಿಸಿದರು. ಆಗಿನ ಕೇಂದ್ರಮಂತ್ರಿಯಾಗಿದ್ದ ಶ್ರಿ ಟಿ. ಎ. ಪೈಯವರು ಅದನ್ನು ಉದ್ಘಾಟಿಸಿದ್ದರು.

ಸುಂದರವಾದ ಬ್ಯಾಂಕಿಗೊಂದು ಚಂದದ ಲಾಂಛನವನ್ನು ಬಯಸಿ ನಡೆದಾಡುವ ವಿಶ್ವಕೋಶವೆನಿಸಿದ್ದ ಶಿವರಾಮ ಕಾರಂತರ ಬಳಿ ಲಾಂಛನಕ್ಕಾಗಿ ವಿನಂತಿಸಿದರು. ಅಡಿಗರ ಬಗ್ಗೆ ಅಪಾರ ಅಭಿಮಾನವಿರಿಸಿದ್ದ ಕಾರಂತರು ಒಂದು ಅರ್ಥಪೂರ್ಣವಾದ ಲಾಂಛನವನ್ನು ಬರೆದಿತ್ತರು. ಕಾರಂತರ ಕಲಾಪ್ರೀತಿಯ ಹಾಗೂ ಸಾಹಿತ್ಯಪ್ರಜ್ಞೆಯ ಫಲವಾಗಿ ಮೂಡಿಬಂದ ಲಾಂಛನ  ಹೀಗಿದೆ. ‘    ’. ಇದು ಎರಡು ಸಮಭುಜ ತ್ರಿಕೋನಗಳು ಒಂದಕ್ಕೊಂದು ಅಭಿಮುಖವಾಗಿ ಸಂಧಿಸುವಾಗ ಉಂಟಾಗುವ ನಕ್ಷತ್ರದ  ಮಧ್ಯೆ ಒಂದು ಬಿಂದು. ದೃಢತೆ, ಶಿಸ್ತು, ಸೌಹಾರ್ದ ಹಾಗೂ ವಿಶ್ವಾಸದ ಪ್ರತೀಕವಾದ ಈ ಲಾಂಛನವು ಸಂಪತ್ ಅಭಿವೃದ್ಧಿಯ ಸಂಕೇತವೂ ಹೌದು. ವಿಘ್ನ ನಿವಾರಕ ದೇವ ಶ್ರೀ ಗಣಪತಿಯ ಲಾಂಛನವೂ ಹೌದು. ಈ ಲಾಂಛನ ಒಂದು ವರ್ಣರಂಜಿತ ಸಮಾರಂಭದಲ್ಲಿ ಶೃಂಗೇರಿ ಜಗದ್ಗುರುಗಳಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಶ್ರೀ ಪಾದಂಗಳವರಿಂದ ಪ್ರದಾನವಾಯಿತು. ಇದೇ ಸಮಯದಲ್ಲೇ ಬ್ಯಾಂಕಿನ ಸಿಬ್ಬಂದಿ ತರಬೇತಿಗಾಗಿ ಒಂದು ಕಾಲೇಜನ್ನು ತೆರೆಯಲಾಯಿತು. 1970ರ ದಶಕ ಬ್ಯಾಂಕುಗಳ ಅಸ್ತಿತ್ವಕ್ಕೊಂದು ಒರೆ ಹಚ್ಚುವ ಕಾಲ. ಅನೇಕ ಗೊಂದಲ ವಾತಾವರಣಗಳ ಮಧ್ಯೆಯೂ ಅಡಿಗರು ಮುಂಚೂಣಿಯಲ್ಲಿದ್ದು ಬ್ಯಾಂಕನ್ನು ಮುನ್ನಡೆಸಿದರು. ಕರ್ಣಾಟಕ ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಅಡಿಗರು ಮುಂದುವರೆದ ಹಾಗೆ ಅವರ ಮುಂದೆ ಅನೇಕ ಸವಾಲುಗಳಿದ್ದವು. ಬ್ಯಾಂಕಿನ ಆರ್ಥಿಕ ನೆಲೆಗಟ್ಟನ್ನು ಭದ್ರಗೊಳಿಸಲು ಠೇವಣಿ ಸಂಗ್ರಹಿಸುವುದು, ಸರಿಯಾದ ಸಾಲ ವಿತರಣೆಯನ್ನು ನೋಡಿಕೊಳ್ಳುವುದು, ಬ್ಯಾಂಕನ್ನು ಆರ್ಥಿಕವಾಗಿ ಸದೃಢಗೊಳಿಸಿ ನಿರಂತರ ಲಾಭ ಗಳಿಕೆಯತ್ತ ಕೊಂಡೊಯ್ಯುವುದು ಇತ್ಯಾದಿ ಒಂದೆಡೆಯಾದರೆ, ಇನ್ನೊಂದೆಡೆ ಈ ಎಲ್ಲ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಲು ಸರಿಯಾದ ಮಾನವ ಸಂಪನ್ಮೂಲವನ್ನು ರೂಪಿಸಿ ಬ್ಯಾಂಕಿನ ಏಳಿಗೆಗಾಗಿ ಶ್ರಮಿಸಲಿಚ್ಛಿಸುವ ಮತ್ತು ಅದರೊಂದಿಗೆ ಬೆಳೆಯುವ ಯೋಧ ಪಡೆ ಹುಟ್ಟಹಾಕಬೇಕಿತ್ತು. ಚಿನ್ನವನ್ನು ಪರೀಕ್ಷಿಸುವ ಸ್ವರ್ಣಗಾರನಂತೆ ಅಡಿಗರು ನಿರಂತರ ಪ್ರತಿಭಾ ಶೋಧನೆಯಲ್ಲಿ ತೊಡಗಿರುತ್ತಿದ್ದರು. ಮ್ಯಾಥಸಮ್ಯಾಟಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಶ್ರೀ ಅನಂತಕೃಷ್ಣ (ಈಗಿನ ನಾನ್ ಎಕ್ಸಿಕ್ಯೂಟಿವ್ ಚೇರ್ಮನ್) ಅವರು ಅಡಿಗರ ಕರೆಗೆ ಓಗೊಟ್ಟು ಎಚ್.ಎ.ಎಲ್. ನಲ್ಲಿದ್ದ ನೌಕರಿಯನ್ನು ತೊರೆದು ಕರ್ಣಾಟಕ ಬ್ಯಾಂಕ್‌ನಲ್ಲಿ ತಾನು ಪಡೆಯುತ್ತಿದ್ದ ಸಂಬಳಕ್ಕಿಂತ ಕಡಿಮೆ ಸಂಬಳದ ಕೆಲಸಕ್ಕೆ ಸೇರಿದರು. ಅಡಿಗರೆಂದರೆ ಅನಂತಕೃಷ್ಣರಿಗೆ ಹಾಗೂ ಅನಂತಕೃಷ್ಣರೆಂದರೆ ಅಡಿಗರಿಗೆ ಪರಸ್ಪರವಾದ ಪ್ರೀತಿ. ಎಂ.ಎಸ್ಸಿ. ರಸಾಯನ ಶಾಸ್ತ್ರದಲ್ಲಿ ಬಂಗಾರದ ಪದಕ ಗಳಿಸಿ ಕರ್ಣಾಟಕ ಬ್ಯಾಂಕ್‌ಗೆ ಸೇರಿದ ಶ್ರೀ ಪಿ. ಜಯರಾಮ ಭಟ್ (ಈಗಿನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ) ಅವರು ಅಡಿಗರ ಮಮತೆಯ ಯುವಕ. ಬೆಂಗಳೂರಿಗೆ ತೆರಳಿದಾಗಲೆಲ್ಲ ಶ್ರೀ ಪಿ. ಜಯರಾಮ ಭಟ್ಟರಿಗೆ ಅಡಿಗರು ಫೋನಾಯಿಸುವುದು ಮತ್ತು ಭೇಟಿಯಾಗುವುದು ತಪ್ಪದ ವಾಡಿಕೆ. ಅಡಿಗರಿಂದ ಆಯ್ಕೆಯಾದ ಈ ಉತ್ತಮ ತಂಡದ ಸದಸ್ಯರೆಲ್ಲ ಇಂದು ಬ್ಯಾಂಕಿನ ಉನ್ನತ ಹುದ್ದೆಯಲ್ಲಿದ್ದಾರೆ. ಜನರಲ್ ಮ್ಯಾನೇಜರುಗಳಾದ ಶ್ರೀ ಕೆ. ಎಚ್. ಶಿವಸ್ವಾಮಿ ಐತಾಳ, ಶ್ರೀ ಪಿ. ಜಯರಾಮ ಹಂದೆ, ಶ್ರೀ ಎನ್. ಉಪೇಂದ್ರ ಪ್ರಭು ಹಾಗೂ ಶ್ರೀ ಬಿ. ಅಶೋಕ ಹೆಗಡೆ ಮೊದಲಾದವರೆಲ್ಲ ಇಂಥವರೇ.

ಡಿ.ಜಿ.ಎಮ್.ಗಳಾಗಿರುವ ಶ್ರೀ ಎಮ್.ವಿ.ಸಿ.ಎಸ್. ಕಾರಂತ, ಶ್ರೀ ಪಿ.ಆರ್.ಎಸ್. ಹೊಳ್ಳ, ಶ್ರೀ ವಿ.ಎಮ್. ಸಾಮಗ, ಶ್ರೀ ಬಿ. ವಿಠ್ಠಲ ರಾವ್, ಶ್ರೀ ಕೆ.ಜಿ. ರಮೇಶ ರಾವ್, ಶ್ರೀ ಎಸ್. ರಾಮಚಂದ್ರ ಭಟ್, ಶ್ರೀ ವಿ.ಎನ್. ಮನೋಹರ ಮುಂತಾದವರಿಗೆಲ್ಲ ಶ್ರೀ ಕೆ.ಎಸ್.ಎನ್. ಅಡಿಗರೆಂದರೆ ಪ್ರಾತಃಸ್ಮರಣೀಯರು. ಪ್ರತಿಯೊಬ್ಬರಲ್ಲೂ ನಿಕಟವಾದ ಸಂಪರ್ಕವಿಟ್ಟುಕೊಂಡು ಕುಟುಂಬದ ಸದಸ್ಯರೆಂದೇ ಭಾವಿಸುತ್ತಿದ್ದ ಅಡಿಗರು ಎಲ್ಲರೊಂದಿಗೂ ಅನ್ಯೋನ್ಯವಾಗಿರುತ್ತಿದ್ದರು. ಸಿಬ್ಬಂದಿಯ ನೇಮಕಾತಿಗಾಗಿ ಆಯ್ಕೆ, ಸಂದರ್ಶನ ಇತ್ಯಾದಿ  ಕ್ರಮಗಳಲ್ಲಿ ಅಡಿಗರದ್ದೇ ಒಂದು ವಿಶಿಷ್ಟವಾದ ರೀತಿ. ಅವರೆಂದೂ ಸ್ಥಾಪಿತ ನಿಯಮಗಳಿಗೆ ಗುಲಾಮರಾಗಿದ್ದಿಲ್ಲ. ಸಕ್ಕರೆ ಇದ್ದಲ್ಲಿ ಇರುವೆ ಬರುವಂತೆ ಅಡಿಗರಲ್ಲಿ ಕೆಲಸ ಕೇಳಿಕೊಂಡು ಬರುವ ಜನರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು. ಅಭ್ಯರ್ಥಿಗಳ ಆಯ್ಕೆ ವಿಷಯ ಬಂದಾಗ ಅವರು ಯಾವುದೇ ಪ್ರಭಾವ, ಶಿಫಾರಸ್ಸುಗಳಿಗೆ ಒಳಗಾಗುತ್ತಿರಲಿಲ್ಲ. ನೌಕರಿಗೆ ಅಭ್ಯರ್ಥಿಗಳನ್ನು ಅವರು ಆಯ್ಕೆ ಮಾಡುವಾಗ ಅವರು ಅಭ್ಯರ್ಥಿಯ ಪ್ರತಿಭೆ ಹಾಗೂ ಆರ್ಥಿಕ ಹಿನ್ನೆಲೆಯನ್ನು ಅಭ್ಯಸಿಸುತ್ತಿದ್ದರು. ಅರ್ಜಿ ಅಡಿಗರ ಕೈ ಸೇರುತ್ತಿದ್ದಂತೆಯೇ ಅರ್ಜಿ ತಂದವರಿಗೆ ಪ್ರಶ್ನಾವಳಿ ಎದುರಾಗುತ್ತಿತ್ತು. ಬಂದ ಅಭ್ಯರ್ಥಿಯ ಹಿನ್ನೆಲೆ ಏನು? ನೌಕರಿ ಅವನಿಗೆ ಅತ್ಯಂತ ಅನಿವಾರ್ಯವೆ? ಅವನನ್ನು ಆಧರಿಸಿದ ಕುಟುಂಬದ ಹಿನ್ನೆಲೆ ಎಂತಹದು? ಬಂದವನು ಸಂಸ್ಥೆ ಏಳಿಗೆಗಾಗಿ ಶ್ರಮಿಸಬಲ್ಲನೆ? ಇತ್ಯಾದಿ. ಪ್ರತಿ ಕುಟುಂಬಕ್ಕೊಂದು ನೌಕರಿ. ಅದರಿಂದ ಆ ಕುಟುಂಬದ ಉದರ ಪೋಷಣೆ ಆಗಲಿ ಇತ್ಯಾದಿ ವಿಚಾರಗಳೇ ಅಡಿಗರಲ್ಲಿ ತುಂಬಿತ್ತು. ಮೋಜಿಗಾಗಿ ಬರುವ ಅಭ್ಯರ್ಥಿಗಳನ್ನು ಅವರು ನಯವಾಗಿಯೇ ನಿರಾಕರಿಸುತ್ತಿದ್ದರು.

ಮಾನವೀಯ ಮೌಲ್ಯಗಳಿಗೆ ಬದ್ಧರಾಗಿದ್ದ ಅಡಿಗರಿಗೆ ಬಡತನದಲ್ಲಿರುವವರನ್ನು ಕಂಡರೆ ಅಪಾರ ಅನುಕಂಪ. ಗಾಂಧಿ ಪ್ರಣೀತ ಸಿದ್ಧಾಂತಕ್ಕೆ ಮನಸೋತಿದ್ದ ಅಡಿಗರು ತಮ್ಮ ಕಾರ್ಯಾಚರಣೆಯಲ್ಲೂ ಗಾಂಧಿ ತತ್ವಗಳನ್ನು ಅನುಷ್ಠಾನಕ್ಕೆ ತರುತ್ತಿದ್ದರು. ಇಂಡಿಯಾದ ಬಡತನವನ್ನು ಅನುಭವ ಮಾಡಿಕೊಂಡ ಗಾಂಧಿಗೆ ತುಂಡು ಬಟ್ಟೆಗಿಂತ ಹೆಚ್ಚಿನದನ್ನು ಉಡಲಿಕ್ಕೆ ಆಗಲಿಲ್ಲ. ಅವರಂತೆ ಹುಟ್ಟಿನಿಂದಲೂ ಸಿರಿವಂತರಾಗಿದ್ದ ಅಡಿಗರು ಕೊನೆಯವರೆಗೆ ಖಾದಿಯನ್ನು ಬಿಟ್ಟು ಬೇರೇನೂ ಉಡಲಿಲ್ಲ. ಬ್ಯಾಂಕಿನ ಅಧ್ಯಕ್ಷರಾಗಿ ಆರ್.ಬಿ.ಐ. ಕಛೇರಿ (ಮುಂಬೈ)ಗೆ ಹೋಗಬೇಕಾದಾಗಲೂ ಶುಭ್ರವಾದ ಧೋತಿ ಹಾಗೂ ಜುಬ್ಬಾಗಳನ್ನೇ ಧರಿಸಿ ಹೋಗಿದ್ದರು. ಗ್ರಾಮೀಣ ಜನತೆಯ ಬಡತನವನ್ನು ಕಣ್ಣಾರೆ ಕಂಡ ಅಡಿಗರಿಗೆ ಉಳ್ಳವರಿಗಿಂತ ಇಲ್ಲದವರನ್ನು ಪೋಷಿಸಬೇಕೆಂಬ ಹಂಬಲ. ಹೀಗಾಗಿ ಅಡಿಗರು ಬ್ಯಾಂಕಿಗೆ ಆಯ್ಕೆ ಮಾಡುತ್ತಿದ್ದುದು ಗ್ರಾಮೀಣ ಹಿನ್ನೆಲೆಯುಳ್ಳ ಪ್ರತಿಭಾವಂತ ಅಭ್ಯರ್ಥಿಗಳನ್ನೇ. ಒಂದೊಮ್ಮೆ ಅವರ ನಿಕಟವರ್ತಿಯಾದ ಕಾರ್ಯದರ್ಶಿಯವರು ಅಡಿಗರನ್ನು ‘ಸರ್ ನೀವು ಬಡವರಿಗೆ ಉದ್ಯೋಗ ನೀಡುತ್ತೀರೆಂದು ಎಲ್ಲರೂ ಬಡತನದ ವೇಷ ಧರಿಸಿ ಬರುತ್ತಾರೆ. ಆಗೇನು ಮಾಡುತ್ತೀರಿ?’ ಎಂದು ಪ್ರಶ್ನಿಸಿದ್ದರು. ಅದೇ ಸಮಯಕ್ಕೆ ಕೆಲಸ ಕೇಳಿಕೊಂಡು ಅಡಿಗರ ಅಂಗಳದಲ್ಲಿ ನಿಂತಿದ್ದ ಅಭ್ಯರ್ಥಿಯೊಬ್ಬಳಿಂದ ಮನವಿಯನ್ನು ಸ್ವೀಕರಿಸಿದ ಅಡಿಗರು ಅರ್ಜಿಯನ್ನು ಪರಿಶೀಲಿಸುವುದಾಗಿ ಹೇಳಿ ಕಳುಹಿಸಿದರು. ಅವಳು ಅಡಿಗರ ಅಂಗಳವನ್ನು ದಾಟುತ್ತಿದ್ದಂತೆಯೇ ಪಕ್ಕದಲ್ಲಿದ್ದ ಕಾರ್ಯದರ್ಶಿಗೆ ಅವಳ ನಡೆ, ಕಾಲು ಇತ್ಯಾದಿಗಳನ್ನು ಗಮನಿಸಲು ಹೇಳಿದರು. ನೋಡಿದಿರ ರಾಮಕೃಷ್ಣರಾಯರೆ? ಆ ಹೆಣ್ಣು ಮಗುವಿನ ಕಾಲುಗಳನ್ನು. ಅವಳ ಕಾಲಿನ ಒಡೆದ ಹಿಮ್ಮಡಿಗಳು, ಸವೆದ ಕೈರೇಖೆಗಳೇ ಸೂಚಿಸುತ್ತವೆ ಆ ಮಗು ಶ್ರಮಜೀವಿ ಎಂದು. ಈ ಮಗುವಿಗೆ ಎಲ್ಲರಿಗಿಂತ ನೌಕರಿಯ ಅಗತ್ಯ ಹೆಚ್ಚು. ಆರ್ಡರನ್ನು ಟೈಪು ಮಾಡಿಸಿ ತನ್ನಿ. ಅವಳಿಗೆ ಕೂಡಲೇ ಆದೇಶ ಕಳಿಸೋಣ ಎಂದರು. ಅಡಿಗರ ವಿಚಕ್ಷಣ ಕ್ರಮವನ್ನು ಕಾರ್ಯದರ್ಶಿಗಳು ಮನಸಾರೆ ಮೆಚ್ಚಿದರು. ಇಂತಹ ವಿಚಕ್ಷಣೆಗೆ ಉದಾಹರಣೆ ಎಂಬಂತೆ ಇನ್ನೊಂದು ಘಟನೆಯನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ. ಒಂದು ದಿನ ಹದಿಹರೆಯದ ತರುಣ ಅಡಿಗರ ಬಳಿ ಬಂದಿದ್ದ. ಅವನ ವೇಷ ಭೂಷಣಗಳು ಅವನ ಬಡತನವನ್ನು ಸೂಚಿಸುತ್ತಿದ್ದರೆ ಆತನಲ್ಲಿದ್ದ ಅಂಕಪಟ್ಟಿ ಅವನ ಪ್ರತಿಭೆಯನ್ನು ಸಾರಿ ಹೇಳುತ್ತಿತ್ತು. ಮಾರ್ಕ್ ಕಾರ್ಡನ್ನು ಪರಿಶೀಲಿಸಿದ ಅಡಿಗರು ಅಭ್ಯರ್ಥಿಯನ್ನು ಪ್ರಶ್ನಿಸಲು ತೊಡಗಿದರು.

ನಿಮ್ಮ ತಂದೆ ಏನು ಮಾಡುತ್ತಾರೆ?

ಸರ್ ನಮ್ಮ ತಂದೆಗೆ ಕಣ್ಣು ಕಾಣುವುದಿಲ್ಲ, ತಾಯಿಯೇ ದುಡಿದು ತರುತ್ತಾರೆ. ನಾವು ಮೂರು ಜನ ಮಕ್ಕಳು. ಇಬ್ಬರು ಸೋದರಿಯರು ಹಾಗೂ ನಾನು.

ಏನು? ತಾಯಿಯನ್ನು ಕೂಲಿ ಕೆಲಸಕ್ಕೆ ಕಳುಹಿಸಿ ಓದುವುದೋ? ಅಡಿಗರ ಪ್ರಶ್ನೆ ತೀಕ್ಷ್ಣವಾಗಿತ್ತು. ಅಭ್ಯರ್ಥಿ ಸೌಮ್ಯವಾಗಿ ಉತ್ತರಿಸಿ ಇಲ್ಲ ಸರ್, ಓದಿನ ಬಿಡುವಿನ ವೇಳೆಯಲ್ಲಿ ನಾನು ದುಡಿಯುತ್ತೇನೆ. ಮದುವೆ ಮುಂಜಿಗಳಂತಹ ಸಮಾರಂಭಕ್ಕೆ ಊಟ ಬಡಿಸಲು, ತರಕಾರಿ ಹೇಚ್ಚಲು ಹೋಗುತ್ತೇನೆ. ಅದರಿಂದ ಕೆಲಮಟ್ಟಿಗೆ ಉದರ ಪೋಷಣೆ ಆಗುತ್ತದೆ. ಕಾಲೇಜಿನಲ್ಲಿ ಕಷ್ಟಪಟ್ಟು ಕಲಿಯುತ್ತೇನೆ. ನನಗೆ ನೌಕರಿ ಸಿಕ್ಕ ತಕ್ಷಣ ಅಮ್ಮ ಕೂಲಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸುತ್ತಾಳೆ.

ಆ ಪ್ರತಿಭಾ ಸಂಪನ್ನ ವಿದ್ಯಾರ್ಥಿಯ ಬಡತನದ ಬವಣೆಯನ್ನು ಕಂಡ ಅಡಿಗರ ಕಣ್ಣಿನಲ್ಲಿ ನೀರು ತುಂಬಿತು. ಅಡಿಗರು ಅದನ್ನು ತೋರಗೊಡದೆ ದಿಗಂತವನ್ನು ದಿಟ್ಟಿಸಿದರು. ಅಭ್ಯರ್ಥಿಗೆ ನೌಕರಿಯ ಭರವಸೆ ನೀಡಿ ಬ್ಯಾಂಕ್ ಕೆಲಸಕ್ಕೆ ನೀವು ಹಾಜರಾಗಿ. ಶೀಘ್ರದಲ್ಲಿಯೇ ನೀವು ಅಧಿಕಾರಿಯಾಗುತ್ತೀರಿ ಎಂದು ಹಾರೈಸಿದರು. ಅವರ ಮನದಾಳದ ಆಶಯದಂತೆಯೇ ಆ ಅಭ್ಯರ್ಥಿ ಬ್ಯಾಂಕ್ ಕೆಲಸಕ್ಕೆ ಸೇರಿಕೊಂಡು ಶ್ರಮವಹಿಸಿ ದುಡಿದರು. ಕೆಲ ವರ್ಷಗಳ ನಂತರ ಅಡಿಗರು ಬ್ಯಾಂಕಿನ ಮುಂಬೈ ಬ್ರ್ಯಾಂಚ್ ಒಂದಕ್ಕೆ ಭೇಟಿ ನೀಡಿದಾಗ ಅವರಿಂದ ಉಪಕೃತರಾದ ಈ ಅಭ್ಯರ್ಥಿ ಅಡಿಗರಿಗೆ ವಂದಿಸಿ ಕೆಲಸ ಕೊಟ್ಟಿದ್ದಕ್ಕಾಗಿ ಅವರ ಉಪಕಾರ ಸ್ಮರಣೆ ಮಾಡಿದರು. ಯಾವಾಗಲೂ ಮೊನಚು ಮಾತಿಗೆ ಖ್ಯಾತಿವೆತ್ತ ಅಡಿಗರು ವ್ಯಂಗ್ಯದಿಂದಲೇ ಪ್ರಶ್ನಿಸಿದರು. ‘ಏನು ಯಾರ ಶಿಫಾರಸ್ಸಿನಿಂದ ಕೆಲಸಕ್ಕೆ ಸೇರಿದ್ದೀರಿ?’ ‘ಇಲ್ಲ ಸರ್ ನಾನು ಕೆಲಸಕ್ಕೆ ಸೇರಲು ನನ್ನ ಅಂಕ ಪಟ್ಟಿ ಮತ್ತು ಬಡತನ ಈ ಎರಡೇ ನನಗಿದ್ದ ಶಿಫಾರಸ್ಸು’ ಎಂದರು ಆ ಅಭ್ಯರ್ಥಿ. ಅಡಿಗರು ಮನದುಂಬಿ ಅಭಿನಂದಿಸಿ  ಶುಭ ಹಾರೈಸಿದರು. ಅಂದು ಅಡಿಗರ ಅಗ್ನಿಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೆಲಸಕ್ಕೆ ಸೇರಿದ ಅಭ್ಯರ್ಥಿ ಮತ್ತಿನ್ನಾರೂ ಅಲ್ಲ. ಅಡಿಗರ ಆಶಯದಂತೆ ಶ್ರಮವಹಿಸಿ ದುಡಿದು ಪದೋನ್ನತಿ ಪಡೆದು ಬ್ಯಾಂಕಿನಲ್ಲಿ ಈಗ ಜನರಲ್ ಮೆನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಉಪೇಂದ್ರ ಪ್ರಭು! ಉಪೇಂದ್ರ ಪ್ರಭುಗಳು ಅಡಿಗರ ವಿಷಯ ಪ್ರಸ್ತಾಪಿಸಿದಾಗ ತುಂಬಾ ಭಾವುಕರಾಗಿ ಬಿಡುತ್ತಾರೆ. ಹಿಂದಿನ ದಿನಗಳನ್ನು ನೆನೆಯುತ್ತಾರೆ. ಅವರ ಮಾರ್ಗದರ್ಶನದ ಬಗ್ಗೆ ಕೊಂಡಾಡುತ್ತಾರೆ.

ಅಡಿಗರ ಸಿಬ್ಬಂದಿ ನೇಮಕಾತಿಯ ಕುರಿತಾಗಿ ಭಾರತೀಯ ರಿಜರ್ವ್ ಬ್ಯಾಂಕಿನ ಅಧಿಕಾರಿಯೊಬ್ಬರು ಅಡಿಗರನ್ನು ನಮ್ರವಾಗಿ ವಿನಂತಿಸಿದರು. ಅಡಿಗರೆ, ಇನ್ನು ಮೇಲೆ ಶಾಸನದನ್ವಯ ನೀವು ಸಿಬ್ಬಂದಿಯನ್ನು ನೇಮಕಾತಿ ಮಾಡುವಾಗ ಲಿಖಿತ ಪರೀಕ್ಷೆಯನ್ನಿಟ್ಟು ಕೊಳ್ಳಬೇಕು. ಅದಕ್ಕೆ ಅಡಿಗರ ಉತ್ತರ ಸಿದ್ಧವಾಗಿತ್ತು. ಅಭ್ಯರ್ಥಿಯ ವಿದ್ಯಾರ್ಹತೆ ಹಾಗೂ ಕ್ಷಮತೆ, ಆಯಾ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಿಂದ ಅವರಿಗೆ ಸಿಕ್ಕಿದ ಅಂಕಪಟ್ಟಿಯಿಂದ ಅದೆಲ್ಲ ನಿರ್ಧಾರವಾಗಿರುತ್ತದೆ. ಅದನ್ನು ನಾವೇನೂ ಬೇರೆ ಪರೀಕ್ಷಿಸಬೇಕಿಲ್ಲ. ನಾವು ಅಭ್ಯರ್ಥಿಯಲ್ಲಿ ನಿರೀಕ್ಷಿಸುವುದು ಅವನ ಧನಾತ್ಮಕ ಚಿಂತನೆಯನ್ನು, ದುಡಿಯುವ ಹಂಬಲವನ್ನು ಹಾಗೂ ಆರ್ಥಿಕ ಹಿನ್ನೆಲೆಯನ್ನು. ನಮ್ಮ ಸಂಸ್ಥೆ ನಮಗೆ ಅನ್ನ ನೀಡಿದೆ ಎನ್ನುವ ಕೃತಜ್ಞತಾಭಾವದಿಂದ ಸಂಸ್ಥೆಯ ಏಳಿಗೆಗಾಗಿ ದುಡಿಯುವ ಜನ ನಮಗೆ ಬೇಕು. ಬರಿ ಪುಸ್ತಕದ ಉರು ಹೊಡೆದು ಉತ್ತರಿಸುವವರಲ್ಲ ಎಂದರು.

ಈ ವಿಷಯದಲ್ಲಿ ಆಗಿನ ಸಿಂಡಿಕೇಟ್ ಬ್ಯಾಂಕಿನ ಚೇರ್‌ಮೇನ್ ಆಗಿದ್ದ ಕೆ.ಕೆ.ಪೈಗಳ ನಿಲುವು ಕೂಡಾ ಅಡಿಗರ ನಿಲುವೇ ಆಗಿತ್ತು. ಅಡಿಗರ ಈ ವಾದಮಂಡನೆ ಪರಸ್ಪರರಿಗೆ ಪೂರಕವಾಗಿ ಕೇವಲ ಎಸ್.ಎಸ್.ಎಲ್.ಸಿ. ಪಾಸ್ ಆದವರು ಅವರ ಸಾಮರ್ಥ್ಯದ ಮೇಲೆ ಕೆಲಸಕ್ಕೆ ಆಯ್ಕೆಯಾಗುವಂತಾಯಿತು. ಇದೇ ಸಂಬಂಧದಲ್ಲಿ ಇನ್ನೊಂದು ವಿಷಯವನ್ನೂ ಹೇಳಬೇಕು. ಅಡಿಗರ ಪರಿಚಿತ ಬಡ ಮೇಷ್ಟ್ರೊಬ್ಬರು ಅಡಿಗರಲ್ಲಿಗೆ ತನ್ನ ಮಕ್ಕಳಿಗಾಗಿ ಕೆಲಸ ಕೇಳಿಕೊಂಡು ಬಂದರು. ಮೇಷ್ಟ್ರ ಮಕ್ಕಳಲ್ಲಿ ಹಿರಿಯವಳು ತುಂಬಾ ಚೂಟಿ ಹಾಗೂ ಬುದ್ಧಿವಂತೆ. ಅವಳ ತಮ್ಮ ಕಲಿಕೆಯಲ್ಲಿ ಅಷ್ಟಕಷ್ಟೆ. ಅಡಿಗರಿಗೆ ಯಾರಿಗಾದರೂ ಒಬ್ಬರಿಗೆ ನೌಕರಿ ಕೊಡುವ ಆಯ್ಕೆ ಇತ್ತು. ಅವರು ಗೊಂದಲಕ್ಕೆ ಸಿಕ್ಕಿ ಬಿದ್ದರು. ಜಾಣೆ ಅಕ್ಕನಿಗೆ ಕೆಲಸ ಕೊಡುವುದು ಹೆಚ್ಚು ನ್ಯಾಯಸಮ್ಮತ ಹಾಗೂ ಸಂಸ್ಥೆಗೂ ಉಪಯೋಗ, ಆದರೆ ಮದುವೆಗೆ ಬೆಳೆದು ನಿಂತ ಆ ಹುಡುಗಿಗೆ ನೌಕರಿ ಕೊಟ್ಟರೆ ಒಂದೆರಡು ವರ್ಷಗಳಲ್ಲಿ ಅವಳು ಮದುವೆಯಾಗಿ ಹೋದರೆ ಮೇಷ್ಟ್ರ ಕುಟುಂಬಕ್ಕೆ ಯಾರು ಆಸರೆ? ಎಂಬ ಪ್ರಶ್ನೆ ಅಡಿಗರನ್ನು ಕಾಡಿತು. ಕುಟುಂಬದ ಸಂತುಲನದ ಪ್ರಶ್ನೆಯೇ ಅಧಿಕವಾಗಿ ಕೊನೆಗೆ ಅಡಿಗರು ತಮ್ಮನಿಗೆ ಕೆಲಸವಿತ್ತರು. ಆದರೆ ಜಾಣೆಗೆ ಕೆಲಸ ನೀಡದಿದ್ದ ಕೊರಗು ಅವರನ್ನು ಯಾವಾಗಲೂ ಕಾಡುತ್ತಿತ್ತು.

ಬ್ಯಾಂಕಿಂಗ್ ಎನ್ನುವುದು ಒಂದು ಭಾರೀ ಹಣ ಮಾಡುವ ಸಂಸ್ಥೆ, ಅದರಿಂದ ಹೇಗಾದರೂ ಲಾಭ ಗಳಿಸಬೇಕು. ಲಾಭ ತಂದು ಸಂಸ್ಥೆ ಬೆಳೆಸಬೇಕೆಂಬ ಹಠ ಅಡಿಗರಲ್ಲಿ ಇರಲಿಲ್ಲ. ಬ್ಯಾಂಕಿಂಗ್ ಒಂದು ಸೇವಾ ಸಂಸ್ಥೆ ಎಂದು ಪರಿಭಾವಿಸಿದ ಅವರು ತಮ್ಮ ಆಡಳಿತಾವಧಿಯಲ್ಲಿ ಸಾಧ್ಯವಿದ್ದಷ್ಟು ಜನರಿಗೆ ಉದ್ಯೋಗ ಅವಕಾಶ ನೀಡಿದರು. ಅವರಿಗೆ ಉದ್ಯೋಗ ನೀಡುವುದರ ಹಿಂದೆ ಯಾವುದೇ ಹಿತಾಸಕ್ತಿ ಇರದಿದ್ದುದರಿಂದ ಹಾಗೂ ಮಾನವೀಯ ಗುಣಗಳೇ ಮುಖ್ಯವಾದುದರಿಂದ ಅಡಿಗರು ಜನತೆಗೆ ಉಪಕರಿಸುತ್ತಿರುವಂತೆಯೇ ಅವರ ಕರ್ಣಧಾರತ್ವದ ಸಂಸ್ಥೆಯೂ ಬೆಳೆಯಿತು.

ರ್ಯಾಂಕ್ ಪಡೆದ ಅಭ್ಯರ್ಥಿಯೋರ್ವರು ಅಡಿಗರ ಬಳಿ ಬಂದು ಉದ್ಯೋಗ ಕ್ಕಾಗಿ ವಿನಂತಿಸಿದರು. ಅಂಕಪಟ್ಟಿಯನ್ನು ನೋಡಿ ಕಣ್ಣರಳಿಸಿದ ಅಡಿಗರು ಅಯ್ಯ ನಿನಗೆ ಪ್ರತಿಭೆ ಇದೆ. ಉನ್ನತ ವ್ಯಾಸಂಗ ಮಾಡಬಹುದಲ್ಲ? ನಮ್ಮ ರೂಢಿಯಂತೆ ನಿನಗೆ ಅಧಿಕಾರಿ ಪದವಿಯನ್ನು ಕೊಡಲಾಗುವುದಿಲ್ಲ. ಗುಮಾಸ್ತ ಹುದ್ದೆಯನ್ನು ಮಾತ್ರ ಕೊಡಬಹುದು. ನಿನ್ನ ಯೋಗ್ಯತೆಗೆ ಅದು ಕಿರಿದು ಎಂದರು.

ಬಡತನದ ಬವಣೆಯಲ್ಲಿ ಬಹುವಾಗಿ ನೊಂದಿದ್ದ ಅಭ್ಯರ್ಥಿ ಸರ್, ಈ ಬಡತನದಲ್ಲಿ ಇಷ್ಟು ಅಭ್ಯಾಸ ಮಾಡಿದ್ದೇ ಬಹಳ ಕಷ್ಟದಿಂದ. ಇಂತಹ ಪರಿಸ್ಥಿತಿಯಲ್ಲಿ ನೀವು ಗುಮಾಸ್ತ ಉದ್ಯೋಗ ನೀಡಿದರೂ ಬ್ಯಾಂಕಲ್ಲೇ ಭವಿಷ್ಯವನ್ನು ರೂಪಿಸಿಕೊಳ್ಳಬಲ್ಲೆ ಎಂದರು. ಅಂದು ಅಡಿಗರ ಆಶೀರ್ವಾದದಿಂದ ಬ್ಯಾಂಕ್ ಸೇರಿದ ಯುವಕ ಪರಿಶ್ರಮದ ಏಣಿ ಏರಿ ಪದೋನ್ನತಿ ಹೊಂದಿ ಇಂದು ಬ್ಯಾಂಕಿನ ಉನ್ನತ ಹುದ್ದೆಗಳಲ್ಲೊಂದಾದ ಮಹಾಪ್ರಬಂಧಕರಾಗಿ ಕೆಲಸ ನಿರ್ವಹಿಸುತ್ತಿರುವ ಶ್ರೀ ಪಿ. ಜೈರಾಮ ಹಂದೆಯವರು.

ಅಡಿಗರ ಮನೆಬಾಗಿಲಿಗೆ ಒಬ್ಬ ಯುವಕ ಯಾವಾಗಲೂ ಬರುತ್ತಿದ್ದ. ಉದ್ಯೋಗ ಕೇಳುತ್ತಿದ್ದ. ನೇಮಕಾತಿ ಪ್ರಕ್ರಿಯೆ ಇಲ್ಲವಾಗಿದ್ದರಿಂದ ಅಡಿಗರು ಅವನಿಗೆ ತಮ್ಮಲ್ಲಿ ಕೆಲಸವಿಲ್ಲವೆಂದು ಖಡಾಖಂಡಿತವಾಗಿ ಹೇಳಿದರು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಆ ಯುವಕ ಎಡತಾಕುತ್ತಲೇ ಇದ್ದ. ಕೊನೆಗೊಮ್ಮೆ ಅಡಿಗರು ಇನ್ನು ಬರದಿರುವಂತೆ ಸೂಚಿಸಿದರು. ಮ್ಲಾನವದನನಾಗಿ ಮೌನದಿಂದ ತಲೆತಗ್ಗಿಸಿ ಯುವಕ ಹಿಂತಿರುಗಿದ.

ಕೆಲದಿನಗಳ ನಂತರ ಬ್ಯಾಂಕಿನಲ್ಲಿ ನೇಮಕಾತಿಯ ಪ್ರಕ್ರಿಯೆ ಶುರುವಾಯಿತು. ಅಡಿಗರಿಗೆ ಉದ್ಯೋಗಕ್ಕಾಗಿ ಪದೆ ಪದೇ ಪೀಡಿಸಿದ ಯುವಕ ಕಣ್ಮುಂದೆ ಬಂದ. ಇವರೇ ಖುದ್ದಾಗಿ ಆ ಯುವಕನನ್ನು ಕರೆದು ನೌಕರಿ ಇತ್ತರು. ಇಂತಹ ಅನೇಕ ಘಟನೆಗಳು ಅಡಿಗರು ಬ್ಯಾಂಕಿನ ಚೇರ್‌ಮೇನ್ ಆಗಿದ್ದಾಗ ಸಂಭವಿಸಿವೆ.                   

ನುಡಿಹಾರ

ಬೇಂದ್ರೆಯವರ ಒಂದು ಮಾತಿದೆ. ಉಂಡಿಯನ್ನು ಯಾವ ಕಡಿಯಿಂದ ತಿಂದ್ರೂ ಅದು ಸಿಹೀನ. ಅಂತಹ ಅಪರೂಪದ ಗುಣವನ್ನು ನಾವು ಅಡಿಗರಲ್ಲಿ ಕಾಣಬಹುದು. ಸಾರ್ವಜನಿಕ ರಂಗದಲ್ಲಿ ತೊಡಗಿಸಿಕೊಂಡು ತಮ್ಮ ಸಚ್ಚಾರಿತ್ರ್ಯದ ಪಾರದರ್ಶಕತೆಯಿಂದ ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ ಮೊದಲಾದ ಅನೇಕ ರಂಗದ ದಿಗ್ಗಜರುಗಳಿಂದ ಇವನಾರವ? ಇವನಾರವ? ಇವನಾರವ? ಎಂದೆನ್ನಿಸಿಕೊಳ್ಳದೆ ಇವ ನಮ್ಮವ ಇವ ನಮ್ಮವ ಎಂದೆನಿಸಿಕೊಂಡವರಂತೆ ಬದುಕಿ ಬಾಳಿದರು.

ಕಡಲತೀರದ ಭಾರ್ಗವ ಶ್ರೀ ಶಿವರಾಮ ಕಾರಂತರು ಅಡಿಗರ ಕುರಿತಾಗಿ ಹೇಳಿದ ಮಾತುಗಳಿವು:  ನನ್ನ ಜೀವನದಲ್ಲಿ ಸೂರ್ಯನಾರಾಯಣ ಅಡಿಗರನ್ನು ಸಮೀಪದಿಂದ, ದೂರದಿಂದ ಆಗಾಗ ನೋಡುತ್ತಲೇ ಬಂದಿದ್ದೇನೆ. ಅವರು ಮಂಗಳೂರು ಮುಸ್ಸಿಪಾಲಿಟಿಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡದ್ದನ್ನು ಕಂಡಿದ್ದೇನೆ. ಅನಂತರ ದೀರ್ಘ ಕಾಲ ನಾಡಿನ ರಾಜಕೀಯದಲ್ಲಿ ಉತ್ಸಾಹದಿಂದ ಕೆಲಸ ಮಾಡಿದ್ದನ್ನೂ ಕಂಡಿದ್ದೇನೆ. ಅದರಿಂದ ಅವರ ಪಾಲಿಗೆ ಬೆಲ್ಲದ ಸಿಹಿಗಿಂತ ಬೇವಿನ ಕಹಿ ಹೆಚ್ಚಾಗಿ ಉಣಲು ದೊರಕಿದುದನ್ನು ಅರಿತುಕೊಂಡಿದ್ದೇನೆ. ಅವರ ಉತ್ಸಾಹ ಪ್ರಾಮಾಣಿಕತೆಯ ನೆರವುಗಳನ್ನು ಅವಿರತವಾಗಿ ಪಡೆಯುತ್ತಿದ್ದ ಜನರು ಮುನ್ನುಗ್ಗಿ ಪ್ರಸಿದ್ಧಿಗೆ ಬರುವ ಅವಕಾಶ ದೊರೆತಾಗೆಲ್ಲ – ‘ಅಡಿಗರೆಂದರೆ ಯಾರು?’ ಎಂಬಂತೆ ವರ್ತಿಸಿದುದನ್ನು ಕಂಡಿದ್ದೇನೆ. ಆದರೂ ಕಹಿ ಇಲ್ಲದೇ ತಾನು ಮಾಡುವ ಕರ್ತವ್ಯದಲ್ಲಿ, ಸೇವೆಯಲ್ಲಿ ಚ್ಯುತಿಯಿಲ್ಲದೆ ತನ್ನ ಕೀರ್ತಿಗೆ ಕಲಂಕ ತಂದುಕೊಳ್ಳದೆ ತನ್ನ ನೈತಿಕ ಆರೋಗ್ಯವನ್ನು ಶ್ರೀ ಅಡಿಗರು ಈ ತನಕ ಉಳಿಸಿಕೊಂಡು ಬಂದದ್ದು ನನಗಂತೂ ತುಂಬಾ ಹೆಮ್ಮೆಯ ವಿಷಯವಾಗಿದೆ ಎಂದು ಶ್ಲಾಘಿಸಿದ್ದಾರೆ. ಸಾರ್ವಜನಿಕ ಬದುಕಿನ ಗರಳವನ್ನು ನುಂಗಿ ನೀಲಕಂಠನಾಗಿ ಬದುಕಿದ ಶ್ರೀ ಅಡಿಗರು ಸ್ವಹಿತಾಸಕ್ತಿಯ ವೇದಿಕೆಯ ಮೇಲೆ ವಿಜೃಂಭಿಸಿದವರಲ್ಲ. ಸೇವಾ ಮನೋಭಾವದಿಂದ ದುಡಿಯುತ್ತ ನೇಪಥ್ಯಕ್ಕೆ ಸರಿಯುತ್ತಿದ್ದ ಅಡಿಗರನ್ನು ಕುರಿತು ಅಂದಿನ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆಯವರು ಹೀಗೆ ಅಭಿಪ್ರಾಯ ಪಡುತ್ತಾರೆ. ದಕ್ಷಿಣ ಕನ್ನಡದ ಗೊಂದಲದ ರಾಜಕಾರಣದಲ್ಲಿ ಅಡಿಗರಿಗೆ ಒಂದು ವಿಶಿಷ್ಟ ಸ್ಥಾನ. ಎಲ್ಲರೂ ಮುನ್ನುಗ್ಗುವ ಪೈಪೋಟಿಯಲ್ಲಿದ್ದಾಗ ಹಿಂದೆ ಸರಿದು ನಿಲ್ಲುವುದು ಇವರ ವೈಶಿಷ್ಟ್ಯ. ತಾನಾಗಿ ಬಯಸಿ, ಬೇಡಿ ಯಾವುದನ್ನೂ ಪಡೆದುಕೊಂಡವರಲ್ಲ. ಜವಾಬ್ದಾರಿ ಯನ್ನು ಬಿಟ್ಟು ಓಡಿ ಹೋಗುವವರೂ ಅಲ್ಲ. ಅವರು ಬಯಸಿದ್ದರೆ ಕರ್ನಾಟಕದ ರಾಜ್ಯದ ಮಂತ್ರಿಯಾಗಬಹುದಿತ್ತು. ಆ ಕಾರಣದಿಂದಲೇ ಹೆಗ್ಡೆಯವರು ವಿಧಾನ ಪರಿಷತ್ತಿನ ಅಧ್ಯಕ್ಷ ಸ್ಥಾನವನ್ನು ಇವರು ಒಪ್ಪಿಕೊಳ್ಳಬೇಕೆಂದು ಒತ್ತಾಯ ಮಾಡಿದರು. ಆದರೆ ತಾವು ಹೊತ್ತಿರುವ ಕರ್ಣಾಟಕ ಬ್ಯಾಂಕ್‌ನ ಜವಾಬ್ದಾರಿಗೆ ತೊಂದರೆಯಾದೀತೆಂದು ಅಡಿಗರು ಅದನ್ನು ನಿರಾಕರಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಪೈಪೋಟಿ ವಾತಾವರಣದಲ್ಲಿ ಕರ್ಣಾಟಕ ಬ್ಯಾಂಕ್ ಇಂದಿನ ಸ್ಥಿತಿಗೆ ಮುಟ್ಟಿದ್ದರೆ ಅದಕ್ಕೆ ಶ್ರೀ ಅಡಿಗರ ತ್ರಿಕರಣಪೂರಕವಾದ, ಸ್ವಾರ್ಥರಹಿತವಾದ ದಕ್ಷ ನೇತೃತ್ವವೇ ಕಾರಣ.

ಅಡಿಗರ ಅಂದಿನ ತ್ಯಾಗದ ಫಲಶ್ರುತಿಯೇ ಇಂದು ಬ್ಯಾಂಕಿಂಗ್ ರಂಗದಲ್ಲಿ ದಿಟ್ಟವಾಗಿ, ಸಮೃದ್ಧವಾಗಿ ಬೆಳೆದು ನಿಂತ ಕರ್ಣಾಟಕ ಬ್ಯಾಂಕ್!

ಅಡಿಗರನ್ನು ಕುರಿತು ಅಭಿಮಾನದ ಮಾತುಗಳಿಗೆ ಪಾರವಿಲ್ಲ. ಅಡಿಗರು ಎಲ್ಲರಿಗೂ ಬೇಕಾದವರೇ. ದಕ್ಷಿಣ ಕನ್ನಡಕ್ಕಾಗಿ ಅವರ ಮನ ಮಿಡಿಯುವುದನ್ನು ಖ್ಯಾತ ಸಾಹಿತಿ ದೇಜಗೌ ಅನ್ನುತ್ತಾರೆ; ಅಡಿಗರಿಗೆ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಆ ಜಿಲ್ಲೆಯ ಜನರೆಂದರೆ ಕಟ್ಟಾಭಿಮಾನ. ಆದರೆ ಅನ್ಯಪ್ರದೇಶದ ಜನರ ಬಗ್ಗೆಯೂ ಅಪಾರ ಗೌರವ. ಸಾರ್ವಜನಿಕ ಕ್ಷೇತ್ರದಲ್ಲಿಯೂ, ರಾಜಕೀಯ ಕ್ಷೇತ್ರದಲ್ಲಿಯೂ  ರಾಷ್ಟ್ರ ನಾಯಕರಿಗೆ ಕಡಿಮೆಯಿಲ್ಲವೆಂಬಂತೆ ಅವರು ದುಡಿದವರು. ಅಡಿಗರು ಎಲ್ಲಿಯೇ ಇರಲಿ, ಪದವಿ ಸಿಗಲಿ, ಸಿಗದಿರಲಿ, ಅಂತಹ ಆಶಾವಾದಿಗಳು, ಎತ್ತರದ ವ್ಯಕ್ತಿಗಳು ಕನ್ನಡ ನಾಡಿಗೆ ಮಾತ್ರವಲ್ಲ, ಇಡೀ ಭಾರತಕ್ಕೆ ಬೇಕಾದವರು.

ಅಡಿಗರದು ಯಾರಿಗೂ ಕೇಡೆಣಿಸದ ಸ್ವಭಾವ. ಅದು ಅವರ ಸ್ಥಾಯಿಗುಣ. ತಪ್ಪು ಮಾಡಿದವರನ್ನು ಕ್ಷಮಿಸುವ ಔದಾರ್ಯ ಅವರದು. ತಪ್ಪಿಗೆ ಶಿಕ್ಷೆ ಆಗಲೇಬೇಕೆಂದು ಒಂದು ಸಭೆಯಲ್ಲಿ ಗಟ್ಟಿಯಾಗಿ ಹೇಳುತ್ತಾರೆ. ಮರುಸಭೆಯಲ್ಲಿ ‘ಏನೋ ಆಯಿತು, ಶಿಕ್ಷೆ ಬೇಡಪ್ಪ ಎನ್ನುತ್ತಾರೆ.’ ನಿಯಮ ಪಾಲನೆ ಬಾಳಿನ ಧ್ಯೇಯವಾದರೂ ಅಂತಹ ಸಮಯದಲ್ಲಿ ನಿಯಮದ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಾರೆ.

ಸೆನೆಟ್ ಸಭೆಯಲ್ಲಿ ವಿಶ್ವವಿದ್ಯಾನಿಲಯದ ಆಯವ್ಯಯವನ್ನಾಗಲಿ ವಾರ್ಷಿಕ ವರದಿಯನ್ನಾಗಲಿ ಮಂಡಿಸುವಾಗ ಸದಸ್ಯರು ಎತ್ತಿದ ಆಕ್ಷೇಪ, ಆರೋಪಗಳಿಗೆ ಉತ್ತರ ಕೊಡುವಾಗ ಅವರ ಸೂಕ್ಷ್ಮಗ್ರಹಣ ಸಾಮರ್ಥ್ಯವನ್ನು, ವಾಕ್ ಚಾತುರ್ಯವನ್ನು ಮಾತಿನ ಬೆಡಗು ಬಿನ್ನಾಣಗಳನ್ನು ಗಮನಿಸಬೇಕು. ವ್ಯಂಗ್ಯಕ್ಕೆ ವಿಡಂಬನೆಗೆ ಅಣಕಕ್ಕೆ ಮೊನಚು ಮಾತಿಗೆ ಅವರು ಎತ್ತಿದ ಕೈ. ಭಾಷಣ ಮಾಡುವಾಗ ಉದ್ರೇಕಕ್ಕಾಗಲಿ ಕೋಪಕ್ಕಾಗಲಿ ಬಲಿಯಾಗುವುದಿಲ್ಲ. ನಗುನಗುತ್ತಲೇ ಮಾತಿನ ಈಟಿಯಿಂದ ಇರಿಯುತ್ತಾರೆ. ಅವರ ಮಾತಿನ ಪ್ರಭಾವ ಬಹುಕಾಲ ಕೇಳುಗರ ಮನಸ್ಸಿನ ಮೇಲೆ ನಿಲ್ಲುತ್ತದೆ. ಎದುರಾಳಿಯನ್ನು ನಿರುತ್ತರನನ್ನಾಗಿ ಮಾಡುವ ಮೋಡಿ ನಿಂದಕರನ್ನು ಮನಾಂತರಗೊಳಿಸುವ ಮಾಂತ್ರಿಕ ಶಕ್ತಿ ಅಡಿಗರ ಹುಟ್ಟುಗುಣ. ಒಂದಲ್ಲ ಎರಡು ಗಂಟೆ ಮಾತನಾಡಿದರೂ ಅವರ ಭಾಷಣ ಹೃದಯ ಮತ್ತು ಮನಸ್ಸುಗಳಿಗೆ ಹಬ್ಬವಾಗುತ್ತಿತ್ತು.

ಅಡಿಗರ ಆತ್ಮೀಯ ಸ್ನೇಹಿತರಲ್ಲೊಬ್ಬರಾದ ಡಾ. ಕೆ.ಕೆ. ಪೈಯವರು ಅಡಿಗರನ್ನು ಸ್ಮರಿಸುತ್ತಿದ್ದುದು ಹೀಗೆ: ಸುಮಾರು 1910ರಿಂದಲೇ ಅಡಿಗರ ಮನೆತನದ ಹಿರಿಯರಿಗೂ ನಮಗೂ ನಿಕಟ ಸಂಪರ್ಕ. ಅಡಿಗರ ಕುಟುಂಬದ ಯಜಮಾನರು ಮಳೆಗಾಲ ಕಳೆಯಲಿಕ್ಕೆ ಬೇಕಾದ ಧವಸ ಧಾನ್ಯ, ದಿನಸಿ ವಸ್ತುಗಳನ್ನು ಕೊಂಡುಕೊಳ್ಳಲು ತಮ್ಮ ಗಾಡಿ ಕಟ್ಟಿಕೊಂಡು ಉಡುಪಿಗೆ ನಮ್ಮ ಅಂಗಡಿಗೆ ಬರುತ್ತಿದ್ದರು. ಉಡುಪಿಗೆ ಬಂದವರು ಕೃಷ್ಣದೇವರ ದರ್ಶನ ಮಾಡಿ ನಮ್ಮ ಅಂಗಡಿಯಲ್ಲಿ ವಿಶ್ರಾಂತಿ ಪಡೆದು ಖರೀದಿಸಿದ ವಸ್ತುಗಳನ್ನು ಗಾಡಿಯಲ್ಲಿ ಹೇರಿಕೊಂಡು ಹೋಗುತ್ತಿದ್ದರು. ಹೀಗೆ ಅಡಿಗರ ಕುಟುಂಬಕ್ಕೂ ನಮಗೂ ನಿಡುಗಾಲದ ಸಂಪರ್ಕ. ಹೀಗಾಗಿ ನೀವು ನಮ್ಮ ಅನ್ನದಿಂದ ಬೆಳೆದವರು ಎಂದು ನಾನು ಒಮ್ಮೊಮ್ಮೆ ಅಡಿಗರನ್ನು ಕುಶಾಲು ಮಾಡುತ್ತಿದ್ದುದುಂಟು.

ಅಡಿಗರು ಪರೋಪಕಾರಿಗಳು, ಸ್ವಜನ ಪಕ್ಷಪಾತಿಗಳಲ್ಲ. ಅರ್ಹತೆ ಹಾಗೂ ಯೋಗ್ಯತೆ ಇರುವವರನ್ನು ಗುರುತಿಸಿ ಮನ್ನಣೆ ನೀಡುತ್ತಿದ್ದರು. ರಾಜಕೀಯ ಕ್ಷೇತ್ರದಲ್ಲಿನ ಅನುಭವದಿಂದಾಗಿ ಅವರಿಗೆ ಸಮಾಜದ ಎಲ್ಲ ಸ್ತರದ ಜನರ ಸಂಪರ್ಕವಿದ್ದಿತ್ತು. ಹೀಗಾಗಿ ಅವರು ತಮ್ಮ ಬ್ಯಾಂಕಿನಲ್ಲಿ ವಿವಿಧ ಜಾತಿ ಮತದವರಿಗೆ ಕೆಲಸಕೊಟ್ಟರು.

ಆಗರ್ಭ ಶ್ರೀಮಂತರ ಕುಟುಂಬದಲ್ಲಿ ಜನಿಸಿದ್ದರೂ ಅವರದ್ದು ಸರಳ ನಿರಾಡಂಬರ ವ್ಯಕ್ತಿತ್ವ. ಕಚ್ಚೆ-ಪಂಚೆ, ಜುಬ್ಬ ಹೆಗಲ ಮೇಲೊಂದು ಶಾಲು ಸದಾ ಖಾದಿ ವಸ್ತ್ರಧಾರಣ. ಗಾಂಭೀರ್ಯಕ್ಕೊಪ್ಪುವ ಕನ್ನಡಕ ಇದು ಕೆ.ಕೆ. ಪೈಗಳು ಕಟ್ಟಿಕೊಟ್ಟ ಅಡಿಗರ ವ್ಯಕ್ತಿತ್ವದ ಒಂದು ಚಿತ್ರಣ.

ಅಡಿಗರ ಸಮಕಾಲೀನರಾಗಿದ್ದು ಕೇಂದ್ರ ಸರಕಾರದಲ್ಲಿ ಉದ್ಯಮ ಮತ್ತು ನಾಗರಿಕ ಪೂರೈಕೆಯ ಸಚಿವರಾಗಿದ್ದ ದಿ ಟಿ. ಎ.ಪೈಗಳು ಅಡಿಗರನ್ನು ಕುರಿತಾಗಿ ಹೇಳುವುದು ಹೀಗೆ: ಸ್ವತಃ ವಕೀಲರಾಗಿದ್ದ ಅಡಿಗರಿಗೆ ವಾದ ಮಾಡಲು ಯಾರೂ ಕಲಿಸಬೇಕಾಗಿರಲಿಲ್ಲ. ವಾದಕ್ಕೆ ಮೊದಲು ಯಾವ ವಕೀಲರು ಚೆನ್ನಾಗಿ ಮನೆ ಕೆಲಸ ಮಾಡಬೇಕಾಗುತ್ತದೆ ಎಂಬುದನ್ನು ಗಮನಿಸಿದರೆ ಅಡಿಗರ ಯಶಸ್ಸಿನ ಗುಟ್ಟು ಅವರ ಮನೆಕೆಲಸದಲ್ಲಿ ಅಡಗಿರುವುದು ವ್ಯಕ್ತವಾಗುತ್ತದೆ. ಯಾವುದೋ ಸುದ್ದಿ ಎಲ್ಲಿನದೋ ವರದಿ, ಕೈಗೆ ಸಿಕ್ಕಿದ ಯಾವುದೋ ಪುಸ್ತಕದ ಸಾಲು ಅಡಿಗರಿಗೆ ಸದಾಕಾಲ ಜ್ಞಾಪಕದಲ್ಲಿರುತ್ತದೆ. ಯುಕ್ತ ಪ್ರಸಂಗದಲ್ಲಿ ಅದನ್ನು ಅಡಿಗರು ಬಳಸುತ್ತಾರೆ. ತಮ್ಮ ಭಾಷಣಗಳಲ್ಲಿ, ಮಾತುಗಾರಿಕೆಯಲ್ಲಿ, ಸಂಧಾನ ಅನುಸಂಧಾನಗಳಲ್ಲಿ ಚರ್ಚೆಗಳಲ್ಲಿ ಭಿನ್ನಾಭಿಪ್ರಾಯಗಳೆಂದರೆ ಹೆಚ್ಚಿನವರು ಅಂಜುತ್ತಾರೆ. ತಮಗಿಂತ ಬೇರೆ ಶಿಬಿರದಲ್ಲಿರುವವರ ಜತೆ ಒಡನಾಡಲು ಅಳುಕುತ್ತಾರೆ. ಆಡಿಗರು ಹಾಗಲ್ಲ ಇದಿರಾಳಿಗೆ ಸ್ನೇಹ ಹಸ್ತ. ಅವನ ಸಮಸ್ಯೆಗಳಿಗೆ ಇವರ ಪರಿಹಾರ, ಮಾತಿನ ಮಲ್ಲತನದಿಂದಲೂ ಮನುಷ್ಯತ್ವದ ನೆಲೆಯಲ್ಲಿಯೂ ಎಂಥವರೊಡನೆಯೂ ಸರಸವನ್ನು ಸಾಧ್ಯವೆನಿಸಿಕೊಂಡ ಅಜಾತ ಶತ್ರು. ಅವರು ರಾಜಕೀಯದ ಹಾವಿನೊಡನೆಯೂ ದೀರ್ಘ ಕಾಲ ಸರಸವಾಡಿದ್ದಾರೆ. ಚಕ್ರವ್ಯೆಹವನ್ನು ಪ್ರವೇಶಿಸುವುದರ ಅಪಾಯವನ್ನರಿತು ಅಲ್ಲಿ ದಿಟ್ಟತನದಿಂದ ದುಡಿದ್ದಾರೆ. ಆಳಾಗಿ ದುಡಿದವನೆ ಅರಸಾಗಬಲ್ಲ ಎಂಬ ಮಾತು ಅಡಿಗರ ಚರಿತ್ರೆಯಲ್ಲಿ ದೃಢವಾಗುತ್ತದೆ.

ಅಡಿಗರು ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾಗ ಅವರ ಸಹವರ್ತಿಯಾಗಿದ್ದವರು, ವಿಧಾನ ಸಭೆ ಮತ್ತು ವಿಧಾನ ಪರಿಷತ್ತುಗಳ ಸಭೆಗಳ ಕಾಲದಲ್ಲಿ ಶಾಸಕರ ಭವನದ ಐದನೆ ನಂಬರಿನ ಕೋಣೆಯಲ್ಲಿ ಜೊತೆಯಾಗಿ ಇದ್ದವರೂ ಆಗಿದ ಮಣೇಲ್ ಶ್ರೀನಿವಾಸ ನಾಯಕರು ಕೊಡುವ ಚಿತ್ರಣವಿದು.

ಅಡಿಗರು ಪರಿಷತ್ತಿನ ಮುಂದಿರುವ ಪ್ರಶ್ನೆಗಳನ್ನೂ ಕಾರ್ಯಕಲಾಪಗಳಲ್ಲಿ ಏಳುವ ಸಮಸ್ಯೆಗಳನ್ನು ಅವಿಶ್ರಾಂತವಾಗಿ ಮನನ ಮಾಡಿ ಆ ಎಲ್ಲ ಸಮಸ್ಯೆಗಳ ಮೇಲೆ ವಿಚಾರಪೂರಿತವಾಗಿ  ಮಾತನಾಡುವುದು ಅವರ ಕ್ರಮ. ಪರಿಷತ್ತಿನ ಸಭೆಗಳಲ್ಲಿ ಯಾವಾಗಲೂ ಹಾಜರಿರುವುದು ಅವರ ರೂಢಿ. ಅವರ ವಿಚಾರ ಶಕ್ತಿಗೆ ತಕ್ಕಂತೆ ವಿಚಾರಗಳನ್ನು ಪ್ರಕಟಿಸಲು ಬೇಕಾದ ಭಾಷಣ ಪ್ರಭುತ್ವವೂ ಅವರಿಗಿದೆ. ಇಂಗ್ಲಿಷ್-ಕನ್ನಡ ಎರಡೂ ಭಾಷೆಗಳಲ್ಲಿ ಸಮರ್ಥವಾಗ್ಮಿಗಳೆಂದು ಹೆಸರಾದವರು. ಅವರ ಭಾಷಣಗಳು ವಿಚಾರ ಪ್ರಚೋದಕವಾಗಿರುವಂತೆ ಸ್ಫೂರ್ತಿದಾಯಕವೂ ಆಗಿವೆ. ಅಡಿಗರ ಭಾಷಣ ಕೇಳುವುದಕ್ಕಾಗಿಯೇ ಅನೇಕ ಶಾಸಕರು ಸದನದಲ್ಲಿತ್ತಿರುವುದನ್ನು ನಾವು ಕಾಣುತ್ತಿದ್ದೆವು.

ಮನಸ್ಸಿನಲ್ಲೂ, ಮಾತಿನಲ್ಲೂ, ಕೃತಿಯಲ್ಲೂ ಏಕರೀತಿಯಲ್ಲಿ ವರ್ತಿಸುವುದು ಅವರ ಸಹಜಗುಣ. ಯಾರ ಹಂಗನ್ನೂ ದಾಕ್ಷಿಣ್ಯವನ್ನೂ ಕಟ್ಟಿಕೊಳ್ಳದೆ ಇದ್ದದನ್ನು ಇದ್ದಂತೆ ಹೇಳುವುದು ಅವರ ಸ್ವಭಾವ. ಇಷ್ಟೆಲ್ಲ ಇದ್ದರೂ ಸರಳಜೀವಿ. ಅವರ ವ್ಯಕ್ತಿತ್ವವೂ ಘನತೆಯೂ ಇದರಿಂದ ಎದ್ದು ತೋರುತ್ತದೆ.

ಕರ್ಣಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಶ್ರೀ ಎಂ.ಎಸ್. ಕೃಷ್ಣ ಭಟ್ಟರಿಗೆ ಅಡಿಗರೆಂದರೆ ತುಂಬಾ ಗೌರವ. ಅಡಿಗರಿಂದಲೇ ಬ್ಯಾಂಕಿಗೆ ಸೇರಿದ ಶ್ರೀ ಎಂ.ಎಸ್. ಕೃಷ್ಣ ಭಟ್ಟರು ಅಡಿಗರ ಬಗ್ಗೆ ಮಾತನಾಡುತ್ತಾ ಹೀಗೆ ಹೇಳುತ್ತಾರೆ. ನನಗೆ ಅಡಿಗರ ಪರಿಚಯವಿದ್ದದ್ದು 1959ರಿಂದ. 1969ರಲ್ಲಿ ನಾನು ಸಿ.ಎ. ಮುಗಿಸಿ ಮುಂಬೈನಲ್ಲಿ ಒಬ್ಬ ಖ್ಯಾತ ಆಡಿಟರ ಅಧೀನ ಅನುಭವ ಗಳಿಸಿ ನನ್ನದೇ ಸ್ವಂತ ಪ್ರಾಕ್ಟೀಸ್ ಪ್ರಾರಂಭಿಸ ಬೇಕೆಂದಿದ್ದೆ. ಆ ಸಂದರ್ಭದಲ್ಲಿ ಅಡಿಗರನ್ನು ಭೇಟಿಯಾಗಿ ವಿಷಯ ತಿಳಿಸಿ, ಆಶೀರ್ವಾದ ಬೇಡಿದೆ ಆಗ ಅಡಿಗರು ಹೇಳಿದ ಮಾತು ನೀವು ಉದ್ಯೋಗಕ್ಕಾಗಿ ಮುಂಬೈಗೆ ಏಕೆ ಹೋಗುವುದು? ಇಲ್ಲೇ ನಮ್ಮ ಬ್ಯಾಂಕನ್ನು ಸೇರಿಬಿಡಿ. ಮಂಗಳೂರಿನಲ್ಲಿ ಐದು ರೂಪಾಯಿ ಗಳಿಕೆ ಮುಂಬೈನ ಹತ್ತು ರೂಪಾಯಿಗೆ ಸಮ ಅಲ್ಲವೇ? ಅದಕ್ಕುತ್ತರಿಸಿದ ನಾನು ಹಾಗಲ್ಲ ಸ್ವತಃ ಪ್ರಾಕ್ಟೀಸ್ ಮಾಡಿದರೆ ಒಳ್ಳೆ ಭವಿಷ್ಯ ಇರಬಹುದಲ್ಲವೆ? ಅಡಿಗರಿಂದ ತಕ್ಷಣ ಉತ್ತರ ಬಂತು ಯಾರಿಗ್ಗೊತ್ತು ಇಲ್ಲಿಯೇ ನೀವು ಜನರಲ್ ಮೆನೇಜರ್ ಆಗಬಹುದಲ್ಲ? ಈಗ ಬಾಸ್ರಿಯವರು ಜನರಲ್ ಮೆನೇಜರ್ ಆಗಿಲ್ಲವೆ? ಎಂದವರೇ ಬಾಸ್ರಿಯವರಿಗೆ ಪೋನ್ ಮಾಡಿ ನನ್ನನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಹೇಳಿದರು. ಅಡಿಗರು ಅಂದು ಆಡಿದ ಮಾತು ನನ್ನ ಬಾಳಿನಲ್ಲಿ ಫಲಿಸಿಯೇ ಬಿಟ್ಟಿತು. ನಾನು ಬ್ಯಾಂಕಿನಲ್ಲಿ ಚೇರ್‌ಮನ್ ಹುದ್ದೆಯನ್ನು ಅಲಂಕರಿಸುವಂತಾಯಿತು. ಅಡಿಗರ ಮಾತಿನಂತೆ ನಾನು ಬ್ಯಾಂಕ್ ಕೆಲಸಕ್ಕೆ ಸೇರಿದೆ. ನನ್ನ ವೃತ್ತಿಯ ಪ್ರಾರಂಭ ಬ್ರ್ಯಾಂಚ್‌ಗಳ ಇನ್‌ಸ್ಪೆಕ್ಟರ್ ಆಗಿ ಎಲ್ಲಾ ಶಾಖೆಗಳಿಗೂ ಹೋಗಿ ಲೆಕ್ಕ ಪರಿವೀಕ್ಷಣೆಗೆ ಹೋಗುತ್ತಿದ್ದ ನನ್ನನ್ನು ಒಮ್ಮೆ ಕರೆದು ಅಲ್ಲಯ್ಯ ನೀನು ಬರೀ ಶಾಖೆಗಳಲ್ಲಿಯ ಅಕೌಂಟು ಪುಸ್ತಕಗಳನ್ನು ನೋಡಿ ಲೆಕ್ಕ ವರದಿ ಒಪ್ಪಿಸಿದರೆ ಸಾಲದು, ಕೆಲಸದ ಮಧ್ಯೆಯೇ ನೀವು ಬ್ರಾಂಚ್‌ನಿಂದ ಹೊರಬಂದು ಅಲ್ಲಿಯ ಜನರ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಿ ಜನರ ಮನಸ್ಸನ್ನು ಅಭ್ಯಸಿಸಿ, ವರದಿ ಮಾಡಿ ಅಡಿಗರಿಗೆ ಅವರ ಮಾತೇ ಮೂಲ ಬಂಡವಾಳ. ಅವರ ಮಾನವೀಯ ದೃಷ್ಟಿಕೋನದಿಂದಾಗಿ ಇಂದು ಹಲವಾರು ಮನೆಗಳಲ್ಲಿ ದೀಪ ಬೆಳಗಿದೆ.

ಇನ್ನೊಂದು ವಿಶೇಷ ಕರ್ಣಾಟಕ ಬ್ಯಾಂಕ್ ಪ್ರಾರಂಭವಾದುದೇ ಕೃಷಿಕರಿಗೆ, ಕಾಫಿ, ಕಂಗು ತೋಟ ಮಾಡುವ ರೈತರಿಗೆ, ಚಿಕ್ಕ ಚಿಕ್ಕ ವ್ಯವಹಾರ ಮಾಡುವ ವ್ಯಾಪಾರಿಗಳಿಗೆ ಅನುಕೂಲ ಮಾಡಿ ಕೊಡಲಿಕ್ಕೆ. ಬ್ಯಾಂಕಿನೊಂದಿಗೆ ಅವರೂ ಬೆಳೆದು ದೇಶದ ಸಂಪನ್ಮೂಲ ಹೆಚ್ಚಾಗ ಬೇಕೆಂಬುದು ಅಡಿಗರ ಮನದ ಇಂಗಿತ. ಈ ಜಿಲ್ಲೆಯಲ್ಲೇ ಹುಟ್ಟಿದ ಹೆಚ್ಚಿನ ಬ್ಯಾಂಕುಗಳು ಪಟ್ಟಣ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಶಾಖೆ ತೆರೆದಿದ್ದರೆ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಬಗ್ಗೆ ಅಪಾರ ನಂಬಿಕೆಯಿದ್ದ ಅಡಿಗರು ಶಾಖೆಗಳನ್ನು ಹೆಚ್ಚಾಗಿ ಹಳ್ಳಿಯಲ್ಲೇ ತೆರೆದರು. ಬ್ಯಾಂಕ್ ಲಾಭದ ಬಗ್ಗೆ ಎಂದೂ ತಲೆ ಬಿಸಿ ಮಾಡದ ಅಡಿಗರಿಗೆ ಬ್ಯಾಂಕ್ ನಷ್ಟವಾಗದಂತೆ ಮುನ್ನಡೆದರೆ ಸಾಕು ಎಂಬ ಭಾವನೆ ಇತ್ತು. ಮುಂದೆ ಬ್ಯಾಂಕುಗಳು ರಾಷ್ಟ್ರೀಕರಣಗೊಂಡಾಗ ಆಗಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಬ್ಯಾಂಕುಗಳು ಹಳ್ಳಿಗಳಲ್ಲಿ ಶಾಖೆ ತೆರೆಯುವಂತೆ ಒತ್ತಾಯಿಸಿದರು. ಅಡಿಗರು ಆ ಕೆಲಸವನ್ನು ಬಹು ಮುಂಚೆಯೇ ಮಾಡಿದ್ದರು. ಇದು ಅಡಿಗರ ದೂರದರ್ಶಿತ್ವಕೊಂದು ನಿದರ್ಶನ.

ಯಾವುದೇ ಉದ್ಯಮಕ್ಕೆ ಅಥವಾ ಗ್ರಾಹಕರಿಗೆ ಸಾಲ ವಿತರಿಸಬೇಕಾದ ಸಂದರ್ಭದಲ್ಲಿ ಗ್ರಾಹಕರ ಬ್ಯಾಲೆನ್ಸ್‌ಶೀಟ್ ಅಧ್ಯಯನ ಮಾಡಿಯೇ ಸಾಲ ವಿತರಿಸಬೇಕಾದರೂ ಅಡಿಗರು ಯಾವಾಗಲೂ ಬ್ಯಾಲೆನ್ಸ್‌ಶೀಟ್ ನೋಡಬೇಡಿ. ಅದರ ಹಿಂದಿರುವ ವ್ಯಕ್ತಿಯ ಚಾರಿತ್ರ್ಯ ನೋಡಿ, ಅವರ ಬದ್ಧತೆಯನ್ನು ಗಮನಿಸಿ ಬ್ಯಾಂಕಿನೊಂದಿಗೆ ಇದ್ದ ಸಂಬಂಧವನ್ನು ಗುರುತಿಸಿ ಎಂದು ಹೆಳುತ್ತಿದ್ದರು. ಪಾರದರ್ಶಕ ವ್ಯಕ್ತಿತ್ವ ಹೊಂದಿದ ಅಡಿಗರಿಗೆ ಎಂದೂ ಈ ವಿಧಾನದಿಂದಾಗಿ ತೊಂದರೆಯಾದದ್ದಿಲ್ಲ.

‘ಹ್ಞಾ ಮತ್ತೊಂದು ವಿಷಯ ಆಗ ಲೋನ್ ಮೇಳಾಗಳ ಕಾಲ. ರಾಜಕೀಯದ ವ್ಯಕ್ತಿಗಳು ಬ್ಯಾಂಕುಗಳಿಗೆ ಘೇರಾಯಿಸಿ ಬಡವರಿಗೆ ಸಾಲ ಕೊಡಬೇಕೆಂದು ಒತ್ತಾಯಿಸುತ್ತಿದ್ದ ಸಂದರ್ಭ. ಎಲ್ಲ ಬ್ಯಾಂಕುಗಳು ಒಂದು ದೊಡ್ಡ ಮೈದಾನದಲ್ಲಿ ತಮ್ಮ ಮಳಿಗೆಗಳನ್ನು ಹಾಕಿ ಸಾಲ ವಿತರಿಸುತ್ತಿದ್ದರು. ಎಲ್ಲ ಮಳಿಗೆಗಳ ಬಳಿ ಗಲಾಟೆ ಮಾಡುತ್ತಿದ್ದ ರಾಜಕೀಯ ದವರು ಕರ್ಣಾಟಕ ಬ್ಯಾಂಕ್ ಮಳಿಗೆಯ ಬಳಿ ಬಂದಾಗ ಅವು ಅಡಿಗೆರೆನ ಬ್ಯಾಂಕ್, ಬುಡ್ಲೆ ಮಾರಾಯ (ಅದು ಅಡಿಗರ ಬ್ಯಾಂಕ್. ಬಿಟ್ಟು ಬಿಡಿ ಅದನ್ನು) ಎಂದದ್ದು ಅಡಿಗರ ಬಗ್ಗೆ ಜನರಿಗಿದ್ದ ಗೌರವದ ದ್ಯೋತಕ.’

ಅಡಿಗರಿಂದಲೇ ನೌಕರಿ ಪಡೆದ ಅನೇಕರು ಬ್ಯಾಂಕ್ ಯೂನಿಯನ್‌ಗಳನ್ನು ಸೇರಿ ಅಡಿಗರೊಂದಿಗೆ ವಾದ ಮಾಡುತ್ತಿದ್ದರು. ತುಂಬಾ ಪ್ರಭಾವಶಾಲಿ ವ್ಯಕ್ತಿತ್ವದವರಾದ ಅಡಿಗರಿಗೆ ಯೂನಿಯನ್‌ಗಳನ್ನು ಹತ್ತಿಕ್ಕುವುದು ಸುಲಭದ ಮಾತಾಗಿತ್ತಾದರೂ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇರಿಸಿದ್ದ ಅಡಿಗರು ಎಂದೂ ಹತ್ತಿಕ್ಕುವ ಕೆಲಸವನ್ನು ಮಾಡಲಿಲ್ಲ. ಜನ ಸೇವೆಗಾಗಿ ತನ್ನನ್ನು ಸಮರ್ಪಿಸಿಕೊಂಡ ಅಡಿಗರ ಬಗ್ಗೆ ಎಲ್ಲಿಯೂ ಒಂದು ಸ್ಮಾರಕ ನಿರ್ಮಿಸಿದ ನೆನಪಿಲ್ಲ. ಅದು ಅವರಿಗೆ ಅಪ್ರಿಯವಾದ ವಿಷಯ. ಆದರೆ ಅಡಿಗರ ಮರಣಾನಂತರ ಬ್ಯಾಂಕ್ ಪ್ಲಾಟಿನಂ ವರ್ಧಂತಿ ಉತ್ಸವದ ಸಂದರ್ಭದಲ್ಲಿ ಕೃಷ್ಣ ಭಟ್ಟರು ಚೇರ್‌ಮನ್ ಆಗಿದ್ದಾಗ ನಮ್ಮ ಬ್ಯಾಂಕ್ ಶ್ರೀ ಕೆ.ಎಸ್.ಎನ್. ಅಡಿಗ ಸ್ಮಾರಕ ಭವನವನ್ನು ಕದ್ರಿಯಲ್ಲಿ ನಿರ್ಮಿಸಿತು. ನಾಲ್ಕು ಅಂತಸ್ತಿನ ಈ ಭವನದಲ್ಲಿ ಬ್ಯಾಂಕಿನ ಒಂದು ಶಾಖೆ ಹಾಗೂ ಬ್ಯಾಂಕಿನ ಉನ್ನತ ಅಧಿಕಾರಿಗಳ ವಸತಿ ಸಮುಚ್ಚಯ ವಿದೆ. ಇದು ನಮ್ಮ ಹೆಗ್ಗಳಿಕೆ ಅಲ್ಲ. ಅಡಿಗರ ನೆನಪಿಗಾಗಿ ಒಂದಾದರೂ ಸ್ಮಾರಕವಿರಲಿ ಎಂಬ ಹಂಬಲ ಎಂದು ವಿವರಿಸುತ್ತಾರೆ ಶ್ರೀ ಎಂ.ಎಸ್. ಕೃಷ್ಣ ಭಟ್ಟರು.

ಈಗಿನ ನಾನ್‌ಎಕ್ಸಿಕ್ಯೂಟಿವ್ ಚೆರ್‌ಮನ್ ಶ್ರೀ ಅನಂತಕೃಷ್ಣ ಇವರು ಅಡಿಗರ ಗರಡಿಯಲ್ಲೇ ಪಳಗಿದವರು. ಅಡಿಗರೆಂದರೆ ತುಂಬಾ ಅಭಿಮಾನ ಹೊಂದಿರುವ ಅನಂತಕೃಷ್ಣ ಅವರು ಅಡಿಗರನ್ನು ಕುರಿತಾಗಿ ಹೇಳುವುದು ಹೀಗೆ: ‘ಶ್ರೀಯುತ ಕೆ. ಸೂರ್ಯನಾರಾಯಣ ಅಡಿಗರು ಉತ್ತಮ ಆಡಳಿತಗಾರರಾಗಿದ್ದರು. ರಾಜಕೀಯ, ಆರ್ಥಿಕ, ವಿದ್ಯಾ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ಕಾರ್ಯ ವೈಖರಿ ಆದರ್ಶಪ್ರಾಯವಾಗಿತ್ತು. ಮಾತು ನಿಷ್ಠುರವಾದರೂ ಅವರ ಹೃದಯ ಜನರ ಕಷ್ಟಗಳಿಗೆ ಸ್ಪಂದಿಸುತ್ತಿತ್ತು. ಅವರ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕಿನ ಓರ್ವ ಹಿರಿಯ ಅಧಿಕಾರಿಯ ಮಾತು ಹೀಗಿತ್ತು. Even though his spcech was distructive, the objectives were constructive” ಮಂಗಳೂರು ನಗರಕ್ಕೆ ಅವರ ಕೊಡುಗೆಗಳು ಅನೇಕ. ನಗರ ಸಭೆಯ ಅಧ್ಯಕ್ಷನಾಗಿ ಮಂಗಳೂರಿಗೆ ನಳ್ಳಿ ನೀರು ಒದಗಿಸಿಕೊಟ್ಟು, ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಚೌಕಟ್ಟು ನಿರ್ಮಿಸಿದವರು ಅವರು. ಮಂಗಳೂರು ವಿಶ್ವವಿದ್ಯಾನಿಲಯದ ಸ್ಥಾಪನೆಯಲ್ಲಿ ಅವರ ಪಾತ್ರ ಶ್ಲಾಘನೀಯ. ಬ್ಯಾಂಕನ್ನು ಸೇವಾಕ್ಷೇತ್ರವೆಂದು ಪರಿಗಣಿಸಿ, ಕರ್ಣಾಟಕ ಬ್ಯಾಂಕಿಗೆ ಹಲವು ದಶಕಗಳ ಕಾಲ ಆದರ್ಶ, ಪಾರದರ್ಶಕ ಆಡಳಿತವನ್ನು ನೀಡಿ, ಬ್ಯಾಂಕಿನ ಇಂದಿನ ಏಳಿಗೆಗೆ ಭದ್ರ ಬುನಾದಿ ಹಾಕಿದ ಆರ್ಥಿಕ ತಜ್ಞ ಅವರು. ವೃತ್ತಿ ಜೀವನದಲ್ಲಿ ಅವರು ಫೀಸಿನ ಕಡೆಗೆ ನೋಡದೆ. ತನ್ನ ಕಕ್ಷೀಗಾರರ ಹಿತ ರಕ್ಷಣೆ ಮಾಡಿದ ಹೋಲಿಕೆ ಇಲ್ಲದ ಮೇರು ವಕೀಲರಾಗಿದ್ದರು. ಅಪ್ಪಟ ಗಾಂಧೀವಾದಿಯಾಗಿ ಸರಳ ಜೀವನ ನಡೆಸಿದ, ಕಲ್ಲಿನ ಮೇಲೆ ಹೆಸರು ಬರೆಯದೆ ಜನರ ಹೃದಯದಲ್ಲಿ ಹೆಸರು ಬರೆದ ಶ್ರೀಮಂತ, ಧೀಮಂತ ವ್ಯಕ್ತಿತ್ವ ಅವರದು. ಅವರು ದುಡಿದ ಎಲ್ಲಾ ಕ್ಷೇತ್ರಗಳಲ್ಲಿ ಅಡಿಗರ ಹೆಸರು ಅಡಗದೆ ಶಾಶ್ವತವಾಗಿ ಉಳಿದಿದೆ.

ಕರ್ಣಾಟಕ ಬ್ಯಾಂಕಿನ ಈಗಿನ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿ ಆಡಳಿತದ ಚುಕ್ಕಾಣಿ ಹಿಡಿದಿರುವ ಶ್ರೀ ಪಿ. ಜಯರಾಮ ಭಟ್ ತಮ್ಮ ಪೂರ್ವಸೂರಿಗಳಾದ  ಅಡಿಗರನ್ನು ಕುರಿತು ಆತ್ಮೀಯವಾಗಿ ಹೀಗೆ ಮಾತನಾಡುತ್ತಾರೆ : ಅಡಿಗರನ್ನು ನಾನು ಅವರು ಬ್ಯಾಂಕಿನ ನಿರ್ದೇಶಕ ಆಗಿರುವಾಗ ಹಾಗೂ ಪೂರ್ಣಾವಧಿ ಚೇರ್‌ಮೆನ್‌ರಾದ ದಿನಗಳಿಂದ ಬಲ್ಲೆ. ನನಗೆ ಕರ್ಣಾಟಕ ಬ್ಯಾಂಕಿನಲ್ಲಿ ಕೆಲಸ ಕೊಟ್ಟವರು ಅವರೇ. ನಾನಾಗ ಇನ್ನೂ ಚಿಕ್ಕವ. ಬೆಂಗಳೂರಿನಲ್ಲಿ ಕರ್ಣಾಟಕ ಬ್ಯಾಂಕ್ ಅಧಿಕಾರಿಯಾಗಿದ್ದೆ. ಅವರನ್ನು ತುಂಬಾ ಹತ್ತಿರದಿಂದ ನೋಡುವ ಹಾಗೂ ಪ್ರೀತಿಯ ಸ್ಪರ್ಶದ ಭಾಗ್ಯ ನಮಗೂ ದಕ್ಕಿತ್ತು. ಅಡಿಗರು ಬೆಂಗಳೂರಿಗೆ ಬಂದಾಕ್ಷಣವೆ ತಮ್ಮ ಆಗಮನದ ಬಗ್ಗೆ ತಿಳಿಸುತ್ತಿದ್ದರು. ದರ್ಪದ ಸೋಂಕಿರದ ಅವರ ಪ್ರೀತಿಯ ಮಾತು, ತರತಮದ ಭಾವವಿರದ ನಡವಳಿಕೆ, ಧೀಮಂತ ವ್ಯಕ್ತಿತ್ವ, ಆಡಿದುದನ್ನು ಸಾಧಿಸಲೇಬೇಕೆಂಬ ಛಲ, ಸರಳತೆಯ ಬಗ್ಗೆ ಮಾತನಾಡದೆ ಅದನ್ನು ಆಚರಣೆಯಲ್ಲಿಟ್ಟ ರೀತಿ ಅನನ್ಯ. ಅವರ ಸರಳತೆ ಅಭಾವದಿಂದ ಬಂದದ್ದಲ್ಲ, ಅನುಭಾವದಿಂದ ಬಂದದ್ದು. ನಮ್ಮ ಎಲ್ಲ ಸಮಸ್ಯೆಗಳಿಗೆ ಗುರುವಾಗಿ ಮಾರ್ಗದರ್ಶಿಯಾಗಿ ಉತ್ತರಿಸುತ್ತಿದ್ದರು. ಅವರೊಂದಿಗಿನ ಸಂಭಾಷಣೆ ಒಂದು ಹೃದಯಸ್ಪರ್ಶಿ ಅನುಭವ. ಅವರ ಅನುಭವ ಆಳದಿಂದ ವ್ಯಕ್ತವಾಗುತ್ತಿದ್ದ ವಿಷಯಗಳು ಬೆಳಕು ತುಂಬುವ ಸೊಡರು. ಪ್ರತಿಭೆಗಳನ್ನು ಗುರುತಿಸುವಲ್ಲಿ ಅಡಿಗರು ತುಂಬಾ ತೀಕ್ಷ್ಣಮತಿಗಳು, ಕುಶಾಗ್ರ ಬುದ್ಧಿಯವರು. ಪ್ರತಿಭೆಯನ್ನು ಗುರುತಿಸುವ ಪೋಷಿಸುವ ಅವರ ರೀತಿ ಅನ್ಯಾದೃಶ.

ಕದ್ರಿಯ ಪರಿಸರದಲ್ಲಿದ್ದ ಅವರ ಮನೆಗೆ ನಾವಾಗ ಹೋಗುತ್ತಿದ್ದೆವು. ಅವರ ಮಕ್ಕಳಾದ ಡಾ. ರಘುವೀರ ಅಡಿಗ, ಶ್ರೀ ರವಿಶಂಕರ ಅಡಿಗ, ಮೀರ ಅಡಿಗರ ಪರಿಚಯ ನಮಗಿತ್ತು. ಶ್ರೀ ಕೆ. ಎಸ್. ಎನ್. ಅಡಿಗರ  ಶ್ರೀಮತಿ ಸರೋಜಿನಿ ಅಡಿಗರು ತುಂಬಾ ವಾತ್ಸಲ್ಯಮಯಿ. ಅಡಿಗರ ಮನೆಗೆ ಹೋದಾಗಲೆಲ್ಲ ಅವರ ಆತಿಥ್ಯ ದೊರಕುತ್ತಿತ್ತು. ಅಡಿಗರ ಮನದಂತೆ, ಅವರ ಮನೆಯೂ ತುಂಬಾ ವಿಶಾಲ. ಸರಳವಾದ ಕುರ್ಚಿ ಮೇಜುಗಳೇ ಅಲ್ಲಿಯ ಪೀಠೋಪಕರಣಗಳು. ಮೇಜಿನ ತುಂಬಾ ಪೇರಿಸಿಟ್ಟ ಫೈಲುಗಳು ಅವರ ಕಾರ್ಯ ಬಾಹುಳ್ಯವನ್ನು ಮೌನವಾಗಿ ಹೇಳುತ್ತಿದ್ದವು. ದಣಿವರಿಯದ ಅವರ ದುಡಿಮೆ ನಮಗೆ ಇಂದಿಗೂ ಮಾದರಿಯಾಗಿದೆ.

ಕರ್ಣಾಟಕ ಬ್ಯಾಂಕಿನ ಔನ್ನತ್ಯಕ್ಕೆ ಅಸ್ತಿಭಾರ ಅಡಿಗರದ್ದೇ. ಅಡಿಗರ ಬ್ಯಾಂಕು ಎಂದೇ ಇಂದಿಗೂ ಕರ್ಣಾಟಕ ಬ್ಯಾಂಕು ಗುರುತಿಸಲ್ಪಡುತ್ತಿದೆ. ಅವರು ಹಾಕಿಕೊಟ್ಟ ಆದರ್ಶದ ಪಥದಲ್ಲಿಯೇ ನಾವಿಂದು ಇದ್ದೇವೆ. ಅವರು ನಮಗೆ ದಾರಿದೀಪ, ತೋರುಗಂಬ.

ಡಾ. ವಾಮನ ನಂದಾವರ, ಮಾಜಿ ಅಧ್ಯಕ್ಷರು ಕರ್ನಾಟಕ ತುಳು ಸಾಹಿತ್ಯ  ಅಕಾಡೆಮಿ, ಅಡಿಗರನ್ನು ಕಂಡದ್ದು ಹೀಗೆ: ಮಂಗಳೂರಿನ ಮಲ್ಲಿಕಟ್ಟೆ ಬಸ್ ನಿಲ್ದಾಣದ ಮುಂದುಗಡೆ ಅಡಿಗರ ಮನೆಯಿತ್ತು. 1970ರಲ್ಲಿ ಅವರ ಮನೆಗೆ ಹಲವು ಬಾರಿ ಭೇಟಿ ನೀಡುವ ಅವಕಾಶ ನನಗಿತ್ತು. ಕರೆಗಂಟೆ ಒತ್ತಿದ ಹೊತ್ತು ಅವರೇ ಕದ ತೆರೆದು ಹೊರ ಬಂದು ಬಂದ ವಿಚಾರ, ತಾಳ್ಮೆಯಿಂದ ಮಾತನಾಡಿಸುತ್ತಿದ್ದರು. ಸಮಾರಂಭಗಳ ವೇದಿಕೆ ಗಳಲ್ಲಿ ಅವರ ಭಾಷಣ ಅನೇಕ ಬಾರಿ ನಾನು ಕೇಳಿದ್ದೇನೆ. ಎತ್ತರದ ನಿಲುವು, ಗಂಭೀರ ಮುಗ್ಧ ವ್ಯಕ್ತಿತ್ವ. ಹೆಚ್ಚಾಗಿ ಬಿಳಿ ಕಚ್ಚೆ ಪೈರಾನು ಉಡುಪು. ಮೇಲಕ್ಕೆ ಬಾಚಿದ ತಲೆಕೂದಲು.

ಅಡಿಗರು ವೇದಿಕೆಯಲ್ಲಿ ನಿಂತು ಮಾತನಾಡುವ ಭಂಗಿ ಅವರದ್ದೇ ಆಗಿತ್ತು ಅನಿಸುತ್ತದೆ. ಆಗಾಗ ತಮ್ಮ ಎರಡೂ ಕೈಗಳ ಅಂಗೈಗಳನ್ನು ನೋಡಿಕೊಂಡು ಆಲೋಚಿಸಿ ನಿಧಾನವಾಗಿ ಸ್ಪಷ್ಟವಾಗಿ ಮಾತನಾಡುವುದನ್ನು ಗಮನಿಸಿದರೆ ಇವರೇನೋ ತಮ್ಮ ಅಂಗೈಗಳಲ್ಲಿ ಟಿಪ್ಪಣಿಗಳನ್ನು ಬರೆದು ತಂದು ನೋಡಿ ಮಾತನಾಡುತ್ತಾರೆಯೇ ಎನಿಸುತ್ತಿತ್ತು.

ಗಣಪತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಚಂದ್ರಕಲಾ ನಂದಾವರ ಇವರು ಅಡಿಗರನ್ನು ಹತ್ತಿರದಿಂದ ಕಂಡವರು. ತಮ್ಮ ನೆನಪುಗಳನ್ನು ಹೀಗೆ ಹಂಚಿಕೊಳ್ಳುತ್ತಾರೆ:

ಕೆ.ಎಸ್.ಎನ್. ಅಡಿಗರಿಗೆ ಶಿಕ್ಷಕರ ಬಗ್ಗೆ ಅಪಾರ ಗೌರವವಿತ್ತು. ಅವರು ಪುರಸಭೆಯ ಅಧ್ಯಕ್ಷರಾಗಿದ್ದಾಗಲೂ ಮುನಿಸಿಪಾಲಿಟಿ ಶಾಲೆಗಳಿಗೆ ಭೇಟಿ ನೀಡಿ ಮಾರ್ಗದರ್ಶನ ಮಾಡುತ್ತಿದ್ದರು. ಅಧ್ಯಾಪಕರ ವಿದ್ಯಾರ್ಥಿಗಳ ಕಾರ್ಯಕ್ರಮಗಳಲ್ಲಿ ಪಾಲುಗೊಂಡು ಯೋಗ್ಯ ಮಾರ್ಗದರ್ಶನ ನೀಡುತ್ತಿದ್ದರು.

ಅಧ್ಯಾಪಕರು ಯಕ್ಷಗಾನ, ನಾಟಕ ಮೊದಲಾದ ಲಲಿತಕಲೆಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತರಾಗಿದ್ದರೆ ಮಕ್ಕಳಿಗೂ ಅವುಗಳ ತಿಳುವಳಿಕೆ ನೀಡುತ್ತಾರೆ ಎನ್ನುತ್ತಿದ್ದರು. ಅವರು ಪುರಸಭೆಯ ಅಧ್ಯಕ್ಷರಾಗಿದ್ದಾಗ ಬಿಜೈ ಕಾಪಿಕಾಡು ಶಾಲೆ ಅತ್ಯಂತ ಉತ್ತಮ ಮಾದರಿ ಶಾಲೆಯಾಗಿತ್ತು. ಆಗ ಅಲ್ಲಿ ತನ್ನ ಕುಟುಂಬದ ಹಿರಿಯ ಸ್ನೇಹಿತರಾಗಿದ್ದ ಅಡಿಗರು ನೀನು ಎಂ.ಎ. ಮಾಡುತ್ತೀಯಾ? ಎನ್ನುತ್ತಾ ತನ್ನ ಶೈಕ್ಷಣಿಕ ಸಾಧನೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದುದನ್ನು ಪ್ರೊ. ಚಂದ್ರಕಲಾ ನಂದಾವರ ಈಗಲೂ  ನೆನಪಿಸಿ ಕೊಳ್ಳುತ್ತಿದ್ದಾರೆ. ಮಂಗಳೂರಲ್ಲಿ ಮೈಸೂರಿನ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೊಳ್ಳಲು ಹೆಚ್ಚು ಮುತುವರ್ಜಿ ವಹಿಸಿದವರಲ್ಲಿ ಅಡಿಗರ ಪಾತ್ರ ಮಹತ್ವದ್ದು. ಈ ಬಗ್ಗೆ ಮಾತುಕತೆ ನಡೆಯುತ್ತಿದ್ದಾಗ ವಿಶೇಷ ಆಸಕ್ತಿ ಮತ್ತು ಕಾಳಜಿ ವಹಿಸಿ ಕೆಲಸ ಮಾಡಿದವರು ಅಡಿಗರೇ. ಈಗಿನ ಕೊಣಾಜೆಯ ವಿಶ್ವವಿದ್ಯಾಲಯದ ಕ್ಯಾಂಪಸ್ ಅಡಿಗರ ಪ್ರಯತ್ನದ ಫಲ. ಮಂಗಳೂರು ನಗರದಿಂದ ಅಷ್ಟು ದೂರ ವಿ.ವಿ. ಕೇಂದ್ರ ನಿರ್ಮಾಣಕ್ಕೆ ಅನೇಕರ ವಿರೋಧವಿತ್ತು. ಆದರೆ ಪೇಟೆಯ ಸದ್ದು ಗದ್ದಲಗಳಿಂದ ಇಂತಹ ಪದವು, ಗುಡ್ಡ ಪರಿಸರವೇ ವಿದ್ಯಾರ್ಥಿಗಳಿಗೆ ಅಧ್ಯಯನ ಯೋಗ್ಯ ಎಂಬುದು ಅಡಿಗರ ಕಲ್ಪನೆಯಾಗಿತ್ತು. ಅದು ನಿಜವೂ ಆಯಿತು.

ಈ ವಿ.ವಿ. ಉಡುಪಿಯಲ್ಲಿ ಆಗಬೇಕು ಎಂಬ ಪ್ರಯತ್ನಗಳು ನಡೆಯುತ್ತಿದ್ದಾಗ ಇಲ್ಲೇ ಆಗುವಂತೆ ತನ್ನ ವರ್ಚಸ್ಸು ಬೀರಿದವರು ಅಡಿಗರು.  1967ರಲ್ಲಿ ಅಲೋಶಿಯಸ್ ಕಾಲೇಜಿನಲ್ಲಿ ಮಂಗಳೂರು ಸ್ನಾತಕೋತ್ತರ ಕೇಂದ್ರವನ್ನು ಆಗಿನ ಶಿಕ್ಷಣ ಸಚಿವ ಶ್ರೀ ಮಾಲಿಯವರು ಉದ್ಘಾಟನೆ ಮಾಡಿದಾಗ ಎಲ್ಲರಿಗಿಂತಲೂ ಅತ್ಯಂತ ಸಂತೋಷ ಪಟ್ಟವರು ಅಡಿಗರು. ಆದರೆ ತಾನು ವಿ.ವಿ. ಉಪಕುಲಪತಿ ಆಗಬೇಕು ಎನ್ನುವ ಅವರ ಹಂಬಲ ಮಾತ್ರ ನನಸಾಗಲಿಲ್ಲ.

ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕುಂಬ್ಳೆ ಸುಂದರರಾಯರು ಅಡಿಗರನ್ನು ಹೀಗೆ ವಿವರಿಸುತ್ತಾರೆ:

ಅಡಿಗರು ತುಂಬಾ ಮಾನವ ಪ್ರೇಮಿ. ಬಡವರನ್ನು ಕಂಡರೆ ಎಲ್ಲಿಲ್ಲದ ಅನುಕಂಪ ಅಡಿಗರಿಗೆ. ಅನೇಕ ಬಡವರಿಗೆ ಅನ್ನ ಸಿಕ್ಕಿದ್ದು, ಅವರ ಮನೆ ಜ್ಯೋತಿ ಬೆಳಗಿದ್ದು ಅಡಿಗರಿಂದ ಎಂದರೆ ಅತಿಶಯೋಕ್ತಿ ಏನಲ್ಲ. ಎಲ್ಲ ಕಾಲದಲ್ಲೂ ಇರುವಂತೆ ಅಡಿಗರ ಬ್ಯಾಂಕಿಗೆ ಬ್ರಾಹ್ಮಣರ ಬ್ಯಾಂಕ್ ಎಂಬ ಅಪವಾದದ ಮುದ್ರೆ ಇತ್ತು, ಹಾಗಂತ ಉಳಿದ ಬ್ಯಾಂಕ್‌ಗಳೇನೂ ಅದರಿಂದ ಹೊರತಾಗಿದ್ದಿಲ್ಲ. ಅವಕ್ಕೂ ತಮ್ಮದೇ ಆದ ಜಾತಿ ಮುದ್ರೆ ಇತ್ತು. ಆದರೆ ಅಡಿಗರು ಬಡವರನ್ನರಸಿ ಉಪಕಾರ ಮಾಡುತ್ತಾ ಹೋಗುತ್ತಿದ್ದುದರಿಂದ, ಬಡತನ ಜಾತಿಯನ್ನೇನು ಹುಡುಕಿಕೊಂಡು ಬರುವಂತಹದಲ್ಲವಾದ್ದರಿಂದ ಬಡವರಾದ ಎಲ್ಲ ವರ್ಗಕ್ಕೂ ಅಡಿಗರಿಂದ ಉಪಕಾರವಾಯಿತು.

1973ರಲ್ಲಿ ಅಡಿಗರು ಯುರೋಪ್ ಹಾಗೂ ಬ್ರಿಟನ್ ಪ್ರವಾಸ ಕೈಗೊಂಡರು. ವಿದೇಶಿ ಬ್ಯಾಂಕಿಂಗಿನ ಕಾರ್ಯವೈಖರಿಯನ್ನು ಅಲ್ಲಿಯ ಅರ್ಥಿಕ ಪರಿಸ್ಥಿತಿಯನ್ನು ಸಮಗ್ರವಾಗಿ ಅಭ್ಯಸಿಸಿ ಅಡಿಗರು ಕರ್ಣಾಟಕ ಬ್ಯಾಂಕಿನಲ್ಲಿ ಹತ್ತಾರು ಸೇವಾ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದರು. ವಿದೇಶದಲ್ಲಿದ್ದಾಗಲೂ ಅವರಿಗೆ ಶ್ರೀ ಸಾಮಾನ್ಯನ ಬಗ್ಗೆಯೇ ಒಲವು. ಪರದೇಶದ ನೆಲದಲ್ಲೂ ಅವರು ಹೋಟೇಲಿನಲ್ಲಿ ಕೆಲಸದವರನ್ನೋ ಬೀದಿಬದಿಯ ವ್ಯಾಪಾರಿಗಳನ್ನೋ ನಿಮ್ನ ವರ್ಗದವರನ್ನೋ ಮಾತಿಗೆಳೆದು ವಿಷಯ ಸಂಗ್ರಹಿಸುತ್ತಿದ್ದರು.

ಕರ್ಣಾಟಕ ಬ್ಯಾಂಕಿಗೆ ಅಖಿಲ ಭಾರತ ವಿಸ್ತಾರದ ವ್ಯಾಪ್ತಿಯನ್ನು ಒದಗಿಸಿದ ಕೀರ್ತಿ ಅಡಿಗರದು. ಬ್ಯಾಂಕು ಸರ್ವಾಂಗೀಣ ಪ್ರಗತಿ ಹೊಂದಿ ಸದೃಢವಾಗಿ ಮುನ್ನಡೆಯಲಾರಂಭಿಸಿದ. ಬಳಿಕ, ತಮ್ಮ 65ನೇ ವಯಸ್ಸಿನಲ್ಲಿ 15 ಫೆಬ್ರವರಿ 1979ರಂದು ಅವರು ಅಧ್ಯಕ್ಷ ಪದವಿಯಿಂದ ನಿವೃತ್ತರಾದರು. ಅಡಿಗರ ನಂತರ ಅಧ್ಯಕ್ಷ ಪದವಿಯನ್ನು ವಹಿಸಿಕೊಂಡ ಶ್ರೀ ಕೆ.ಎಸ್. ಬಾಸ್ರಿಯವರು ಅಡಿಗರ ಪಥದಲ್ಲೇ ಬ್ಯಾಂಕನ್ನು ಮುನ್ನಡೆಸಿದರು.

ಅಡಿಗರು ಅಧ್ಯಕ್ಷ ಪದವಿಯಿಂದ ನಿವೃತ್ತರಾದ ನಂತರವೂ ಬ್ಯಾಂಕ್ ಅವರ ಸೇವೆಯನ್ನು ಬಯಸಿತು. ಬ್ಯಾಂಕ್‌ನೊಂದಿಗಿದ್ದ ಭಾವನಾತ್ಮಕ ಸಂಬಂಧದ ದ್ಯೋತಕವಾಗಿ ಮತ್ತೆ ಅಡಿಗರು ಬ್ಯಾಂಕಿನ ಪ್ರೀತಿಯ ಕರೆಗೆ ಓಗೊಟ್ಟು 1980ರ ಮಾರ್ಚ್ 22ರಿಂದ 1988ರ ತನಕವೂ ನಿರ್ದೇಶಕರಾಗಿ ದುಡಿದರು.

ಹೊತ್ತು ಕಂತುವ ಮೊದಲೇ ಸೂರ್ಯ ಕಡಲಿಗಿಳಿದಿದ್ದ!

ಬದುಕಿನುದ್ದಕ್ಕೂ ಅವಿರತವಾಗಿ ದುಡಿದ ಅಡಿಗರು ಕರ್ಣಾಟಕ ಬ್ಯಾಂಕಿನ ನಿರ್ದೇಶಕ ಸ್ಥಾನವನ್ನು ತೆರವುಗೊಳಿಸಿದ ಬಳಿಕವೂ ಸಕ್ರಿಯರಾಗಿದ್ದರು. ಅನಂತರವೂ ಬ್ಯಾಂಕಿನದೇ ಚಿಂತೆ. 1989ರಲ್ಲಿ 75ರ ವಸಂತವನ್ನು ಕಂಡ ಅಡಿಗರನ್ನು ಮಂಗಳೂರು ಹಾಗೂ ಶಿವಮೊಗ್ಗಗಳಲ್ಲಿ ಸನ್ಮಾನಿಸಲಾಯಿತು. ಸನ್ಮಾನಿಸಲು ಬಂದ ಅಭಿಮಾನಿಗಳನ್ನು ಅಡಿಗರು ನಿಮಗೆ ಮಂಡೆ ಸರಿ ಇಲ್ಲಯ್ಯ! ಬೇರೆ ಕಸುಬಿಲ್ಲವಾ? ಎಂದು ಬೈದದ್ದೂ ಉಂಟು. ಆದರೆ ಜನಾದರಕ್ಕೆ ಮಣಿಯದೇ ಅವರಿಗೆ ಗತ್ಯಂತರವಿದ್ದಿಲ್ಲ.

1989ರ ಎಪ್ರಿಲ್ ಕೊನೆಯ ವಾರದಲ್ಲಿ ನಗರದ ಕೆ.ಎಂ.ಸಿ. ಕಾಲೇಜಿನ ವಾರ್ಷಿಕೋತ್ಸವದ ಭಾಷಣವನ್ನು ಮುಗಿಸಿ ಹೊರ ಬಂದ ಅಡಿಗರು ಕೊಂಚ ದಣಿದಂತೆ ಕಂಡರು. ಅವಿರತ ಶ್ರಮದ ನಡುವೆ ದೇಹಕ್ಕೆ ಬಿಡುವೆ ಸಿಕ್ಕಿದ್ದಿಲ್ಲ. ಅಂದು ಅಡಿಗರಿಗೆ ಲಘು ಹೃದಯಾಘಾತವಾಗಿತ್ತು. ಜಗದಳಲನ್ನೆ ನಿವಾರಿಸ ಹೊರಟ ಈ ದಿಗ್ಗಜನ ಗುಂಡಿಗೆ ಅದ್ಯಾವ ನೋವಿಗೆ ಮರುಗಿತೋ ತಿಳಿಯದು. ಅಡಿಗರ ಪುತ್ರ ಡಾ. ರಘುವೀರ ಅಡಿಗರು ಅಪ್ಪಯ್ಯನನ್ನು ನಗರದ ವಿಜಯ ಕ್ಲಿನಿಕ್‌ಗೆ ಸೇರಿಸಿದರು. ಆಸ್ಪತ್ರೆಯಲ್ಲಿದ್ದಾಗಲೂ ಅಡಿಗರಿಗೆ ಸಾವಿನ ಭಯ ಬಾಧಿಸಿದ್ದಿಲ್ಲ. ಡಾಕ್ಟರು ತಮ್ಮ ಕೆಲಸ ಮಾಡಲಿ, ದೇಹ ತನ್ನ ನಿರ್ವಹಣೆಯನ್ನು ತಾನೆ ನೋಡಿಕೊಳ್ಳುತ್ತದೆ ಎನ್ನುವ ಮನೋಬಲ ಅವರದು. ಬಂದ ಡಾಕ್ಟರುಗಳೊಂದಿಗೆ ಸಹಕರಿಸಿ ಇನ್ಟೆನ್ಸಿವ್ ಕೇರ್ ಯೂನಿಟಿನಲ್ಲಿದ್ದರು.

ಅಡಿಗರು ಅಸ್ವಸ್ಥರಾದ ವಿಷಯ ತಿಳಿದು ಜನಸಾಗರವೇ ಆಸ್ಪತ್ರೆಗೆ ಹರಿದು ಬಂತು. ಚಿಕಿತ್ಸೆ ನೀಡುತ್ತಿದ್ದ ಡಾಕ್ಟರುಗಳ ಬಿಗಿ ಆದೇಶದ ನಡುವೆಯೂ ಅಡಿಗರು ಬಂದವರೊಂದಿಗೆ ಮಾತನಾಡುತ್ತಿದ್ದರು.

ಐ.ಸಿ.ಯೂ.ನಲ್ಲಿ ಮಲಗಿದ್ದ ಈ ಕರ್ಣಾಟಕ ಬ್ಯಾಂಕ್ ಭೀಷ್ಮನಿಗೆ ಅಲ್ಲಿಯೂ ಬ್ಯಾಂಕಿನದ್ದೇ ಚಿಂತೆ. ಅವರನ್ನು ಭೇಟಿಯಾಗಲು ಬಂದ ಕರ್ಣಾಟಕ ಬ್ಯಾಂಕಿನ ಓರ್ವ ಹಿರಿಯ ಅಧಿಕಾರಿಯನ್ನು ಅಡಿಗರು ಪ್ರಶ್ನಿಸಿಯೇ ಬಿಟ್ಟರು. ಅಲ್ಲಯ್ಯ ಮೊನ್ನೆಯ  ಗ್ರಾಹಕರ ಆ ಪ್ರೊಪೋಸಲ್ ಏನಾಯ್ತು? ಅವರು ಒಳ್ಳೆಯ ಗ್ರಾಹಕರಯ್ಯ. ಬ್ಯಾಂಕ್ ಅವರಿಗೆ ನೆರವಾಗಬೇಕು ಎಂದರು. ದೇಹ ಮರಣೋನ್ಮುಖಿಯಾಗಿ ಒರಗಿದ್ದರೆ, ಮನಸ್ಸು ಜೀವನ್ಮುಖಿಯಾಗಿ ಒಳಿತನ್ನೇ ಬಯಸುತ್ತಿತ್ತು.

ಪುನರ್ಜನ್ಮದಲ್ಲಿ ನಂಬಿಕೆ ಇರದಿದ್ದ ಅಡಿಗರಿಗೆ  ಒಂದು ವೇಳೆ ಮರುಜನ್ಮ ಇರುವುದಾದರೆ ಮಂಗಳೂರಿನ ಮಣ್ಣಲ್ಲೇ ಜನಿಸಬೇಕೆಂಬ ಅಭಿಲಾಷೆ ಇತ್ತು. ಅದನ್ನು ಅವರು ಹೇಳಿಕೊಂಡಿದ್ದರು.

ಅಡಿಗರ ಅಪಾರ ಸ್ನೇಹಿತ ವರ್ಗ, ಅವರಿಂದ ಉಪಕೃತಗೊಂಡ ಜನ ಸಮೂಹ, ಕರ್ಣಾಟಕ ಬ್ಯಾಂಕಿನ ಸಿಬ್ಬಂದಿ ವರ್ಗ ಹಾಗೂ ಅಪಾರ ಅಭಿಮಾನಿ ಬಳಗ ಅಡಿಗರು ಶೀಘ್ರವಾಗಿ ಗುಣಮುಖರಾಗಿ ಬದುಕಿ ಬರಲೆಂದು ಹಾರೈಸಿ ಹಂಬಲಿಸಿದರು.  ಅವರ 100ನೇ ಹುಟ್ಟುಹಬ್ಬವನ್ನು ಅವರೆದುರೇ ಆಚರಿಸಬೇಕೆಂದು ಬಯಸಿದ್ದರು.

ಅದರೆ ಅವರಿಗೆಲ್ಲಾ ನಿರಾಸೆಗೊಳಿಸಿ 23.05.1989ರ ಬೆಳಗ್ಗೆ ಏನೋ ಧಾವಂತದ ಕೆಲಸವಿದ್ದವರಂತೆ ಅಡಿಗರು ಇಹದ ಬದುಕಿಗೆ ವಿದಾಯ ಹೇಳಿ ನಡೆದೇಬಿಟ್ಟರು! ಯಾರಿಗೆ ಗೊತ್ತು? ಈ ಬಾಹುಬಲಿಗೆ ಪರಲೋಕದಲ್ಲೊಂದು ಬ್ಯಾಂಕ್ ತೆರೆದು ಸೇವೆ ಸಲ್ಲಿಸುವ ಕರೆ ಬಂದಿತ್ತೋ ಏನೋ?….. ಅಂದು ಅರಬ್ಬಿ ಕಡಲು ಕೂಡ ಪ್ರಶಾಂತವಾಗಿತ್ತ್ತು. ಅದು ಮೌನವಾಗಿ ಮೊರೆಯಿತು.  ಅರೆ! ಇದೇನಿಂದು ಹೊತ್ತು ಕಂತುವ ಮೊದಲೆ ಸೂರ್ಯ ಕಡಲಿಗೆ ಇಳಿದೇ ಬಿಟ್ಟ!

ಅಡಿಗರು ನಿರ್ವಾತಗೊಳಿಸಿದ ಸ್ಥಾನವನ್ನು ತುಂಬುವವರೇ ಇಲ್ಲ ಎಂದು ಜನ ಮರುಗಿದರು, ನಿಸ್ತೇಜರಾದರು. ನಿಧನ ವಾರ್ತೆ ಹರಡುತ್ತಿದ್ದಂತೆ ಅವರ ನಿವಾಸದ ಮುಂದೆ, ಅವರು ನಿಧನರಾದ ಆಸ್ಪತ್ರೆಯ ಮುಂದೆ ಅಸಂಖ್ಯಾತ ಜನ ಸಮೂಹ ಶರಣರ ಗುಣ ಮರಣದಲ್ಲಿ ಕಾಣು ಎನ್ನುವಂತೆ. ಈ ಹಿರಿಯ ಚೇತನದ ಬದುಕನ್ನು ನೋಡಿದಾಗ ಕವಿವಾಣಿಯೊಂದು ನೆನಪಿಗೆ ಬರುತ್ತದೆ:

ನಿನ್ನ ಪ್ರತಿಮೆಯ ನಿಲಿಸಿ ನಾವು ಮೆರೆವುದು ವ್ಯರ್ಥ!

ನಮ್ಮ ಹೃದಯದೊಳಿರಲಿ ನಿನ್ನ ಮರಣದ ಅರ್ಥ!

ಜೀವನ ಪಥ

ಜನನ – 1914 ನವೆಂಬರ 5ರಂದು ಮಂಗಳೂರಿನಲ್ಲಿ.

ತಂದೆ ತಾಯಿ – ಶ್ರೀ ಕಕ್ಕುಂಜೆ ಸದಾಶಿವ ಅಡಿಗ/ ಶ್ರೀಮತಿ ಮಹಾಲಕ್ಷ್ಮಿ ಅಮ್ಮ

ವಿದ್ಯಾಭ್ಯಾಸ – ಮಂಗಳೂರಿನ ಸೈಂಟ್ ಸೆಬಾಸ್ಟಿಯನ್ ಹೈಯರ್ ಎಲಿಮೆಂಟರಿ ಶಾಲೆ, ಕೆನರಾ ಹೈಸ್ಕೂಲ್, ಸರಕಾರಿ ಕಾಲೇಜು ಹಾಗೂ ಸೈಂಟ್ ಅಲೋಶಿಯಸ್ ಕಾಲೇಜು, 1935ರಲ್ಲಿ ಬಿ.ಎ. ಪದವಿ ಪ್ರಾಪ್ತಿ ಮೈಸೂರು ವಿಶ್ವವಿದ್ಯಾನಿಲಯದಿಂದ. 1935ರಲ್ಲಿ ಮದರಾಸಿಗೆ ಪಯಣ. 1937ರಲ್ಲಿ ಮದರಾಸು ವಿಶ್ವವಿದ್ಯಾನಿಲಯದ ಬಿ.ಎಲ್. ಪದವಿ ಗಳಿಕೆ.

ವಕೀಲಿ ವೃತ್ತಿ  – 1937ರಿಂದ 1971ರ ವರೆಗೆ 1938ರಲ್ಲಿ ಮದರಾಸಿನ ಬಾರ್  ಕೌನ್ಸಿಲ್ ಪರೀಕ್ಷೆಯಲ್ಲಿ ತೇರ್ಗಡೆ. ಮದರಾಸ್ ಹೈಕೋರ್ಟಿನ  ಎಡ್ವೋಕೇಟ್ ಆಗಿ ನೋಂದಾವಣೆ.

ಗ್ರಂಥರಚನೆ – ಆಕಾಶವಾಣಿ ಕನ್ನಡ ಗ್ರಂಥ ರಚನೆ. 1941-42ರಲ್ಲಿ ಮದರಾಸು ಸರ್ಕಾರದಿಂದ ಬಹುಮಾನ.

ಕರ್ಣಾಟಕ ಬ್ಯಾಂಕ್ ನಿರ್ದೇಶಕ ಸ್ಥಾನ – 1945

ಮಂಗಳೂರು ನಗರ ಸಭಾ ಸದಸ್ಯತ್ವ – 1947

ನಗರ ಸಭೆಯ ಉಪಾಧ್ಯಕ್ಷರಾಗಿ – 1952ರಲ್ಲಿ ಆಯ್ಕೆ

ನಗರ ಸಭೆಯ ಅಧ್ಯಕ್ಷ – 1952ರಿಂದ 1958ರವರೆಗೆ

ಕರ್ಣಾಟಕ ಬ್ಯಾಂಕಿನ ಅಂಶಕಾಲಿಕ ಅಧ್ಯಕ್ಷ – 1958ರಲ್ಲಿ ಅಧಿಕಾರ ಸ್ವೀಕಾರ

ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ – 1958 ರಿಂದ 1962

ಮೈಸೂರು ವಿಶ್ವವಿದ್ಯಾನಿಯದ ಸೆನೆಟ್ ಮೆಂಬರ್ –

ಮೈಸೂರು ವಿಶ್ವವಿದ್ಯಾನಿಯದ ಸಿಂಡಿಕೇಟ್ ಮೆಂಬರ್ – 1965

ಮೈಸೂರು ರಾಜ್ಯ ಅಭಿವೃದ್ಧಿ ಕೌನ್ಸಿಲಿನ ಸದಸ್ಯತ್ವ – 1962-1967ರ ವರೆಗೆ

ವಿಧಾನ ಪರಿಷತ್ ಸದಸ್ಯತ್ವ – 1966ರಿಂದ 1971ರ ವರೆಗೆ

ವಕೀಲಿ ವೃತ್ತಿಗೆ ವಿದಾಯ – 1971

ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಸ್ಥಾನ – 1971ರಿಂದ 1979ರ ವರೆಗೆ

ವಿದೇಶ ಯಾನ – 1973ರಲ್ಲಿ ಯುರೋಪ್ ಹಾಗೂ ಬ್ರಿಟನ್ ಪ್ರವಾಸ

ಕರ್ಣಾಟಕ ಬ್ಯಾಂಕ್ ನಿರ್ದೇಶಕರಾಗಿ – 1980ರಿಂದ 1988ರವರೆಗೆ

ಮತ್ತೊಮ್ಮೆ –

ನಿಧನ – 1989ರ ಏಪ್ರಿಲ್ 23

ಕರ್ಣಾಟಕ ಬ್ಯಾಂಕ್ – ಒಂದು ಪಕ್ಷಿನೋಟ

1924ರಲ್ಲಿ ಸಾಮಾಜಿಕ ಕಳಕಳಿಯ ಬದ್ಧತೆಯೊಂದಿಗೆ ಪ್ರಾರಂಭಗೊಂಡ ಬ್ಯಾಂಕ್ ಪ್ರವರ್ಧಮಾನಕ್ಕೆ ಬಂದದ್ದು ಅಡಿಗರ ಕಾಲದಲ್ಲಿ. ಶ್ರೀಮಾನ್ ಕೆ. ಸೂರ್ಯ ನಾರಾಯಣ ಅಡಿಗರು ತಮ್ಮ ಬುದ್ಧಿಮತ್ತೆ ಮತ್ತು ಶ್ರಮಗಳ ಸಂಯೋಜನೆಯೊಂದಿಗೆ ಬ್ಯಾಂಕನ್ನು ಮತ್ತು ಅದಕ್ಕಾಗಿ ದುಡಿಯುವ ಹಾಗೂ ತುಡಿಯುವ ಸಹೋದ್ಯೋಗಿಗಳನ್ನು ಒಂದು ಕುಟುಂಬದವರಂತೆ ಎಣಿಸಿ ಬೆಳೆಸಿದರು. ಬ್ಯಾಂಕಿನ ಶ್ರೇಯೋಭಿವೃದ್ಧಿಗಾಗಿ ಕೌಟುಂಬಿಕ ನೆಯ್ಗೆಯನ್ನು ಬಳಸಿದರು. ಅವರ ಅಧಿಕಾರ ಅವಧಿಯಲ್ಲಿ ಸದೃಢ ಬುನಾದಿ ಹೊಂದಿದ ಬ್ಯಾಂಕ್ ಇಂದು ಸರ್ವೋತ್ಕೃಷ್ಟ ಸಾಂಸ್ಥಿಕ ಮೌಲ್ಯಗಳನ್ನೊಳಗೊಂಡು ಬೆಳೆದ ಬಲವಾದ ಸಂಸ್ಥೆಯಾಗಿದೆ.

ಸಮಾಜಕ್ಕೆ ಅತ್ಯುತ್ತಮ ಕೊಡುಗೆಯನ್ನು ನೀಡುವಲ್ಲಿ ಬ್ಯಾಂಕಿನ ಸ್ಥಾಪಕ ಸದಸ್ಯರ ನಿಸ್ವಾರ್ಥ ಮತ್ತು ಏಕ ಮನಸ್ಕ ನಿರ್ಧಾರವು ಇಂದು ಫಲ ನೀಡಿದೆ. ಅಂದು ಆ ಮಹನೀಯರು ನೆಟ್ಟ ಬೀಜ ಇಂದು ಒಂದು ವಿಶಾಲ ವಟವೃಕ್ಷವಾಗಿ ದೇಶಾದ್ಯಂತ 450 ಶಾಖೆಗಳೊಂದಿಗೆ ಫಲ ನೀಡುತ್ತಿದೆ.

85 ವರ್ಷಗಳ ಸಾರ್ಥಕ ಅಸ್ತಿತ್ವದೊಂದಿಗೆ ಬ್ಯಾಂಕು ಕಾಲದಿಂದ ಕಾಲಕ್ಕೆ ಎದುರಾದ ಅಗ್ನಿ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ಗೆದ್ದು ಗ್ರಾಹಕ ಸಮುದಾಯಕ್ಕೆ ತನ್ಮೂಲಕ ದೇಶಕ್ಕೆ ತನ್ನದೇ ಆದ ಮಾದರಿ ಸೇವೆಯನ್ನು ನಗುಮೊಗದೊಂದಿಗೆ ಎಲ್ಲರ ಕುಟುಂಬದ ಬ್ಯಾಂಕ್ ಆಗಿ ವೈಯಕ್ತಿಕ ಮಧುರಾನುಭೂತಿಯ ಸ್ಪರ್ಶದೊಂದಿಗೆ ನೀಡುತ್ತಲಿದೆ. ಬ್ಯಾಂಕಿನ ಗ್ರಾಹಕ ವರ್ಗ ತಲೆತಲಾಂತರಗಳಿಂದ ಮುಂದುವರೆದುಕೊಂಡು ಬರುತ್ತಲಿದೆ. ಗ್ರಾಹಕರು ಬ್ಯಾಂಕಿನೊಟ್ಟಿಗೆ ತಾವೂ ಬೆಳೆದು ಹರ್ಷಿತರಾಗಿದ್ದಾರೆ. ಅಡಿಗರ ಬ್ಯಾಂಕ್ ಇಂದು ಮಾಹಿತಿ ಮತ್ತು ಮೌಲ್ಯ ಮಾಪನ ಸಂಸ್ಥೆ (ICRA) ದೇಶದ ಮುಂಚೂಣಿಯಲ್ಲಿರುವ ಠೇವಣಿ ಮಾನದಂಡ ನಿರ್ಣಯಿಸುವ ಸಂಸ್ಥೆಗಳಲ್ಲಿ ಒಂದಾಗಿದ್ದು, ಈ ಸಂಸ್ಥೆ ಬ್ಯಾಂಕಿನ ಠೇವಣಿ ಪತ್ರಗಳ ಯಶಸ್ವಿ ಕಾರ್ಯ ಸರಣಿಗಾಗಿ AI+ಮಾನದಂಡ ನೀಡಿದೆ.

ಪ್ರಗತಿಯ ಪಥದಲ್ಲಿ ದಾಪುಗಾಲಿಕ್ಕುತ್ತ ಸಾಗಿರುವ ಬ್ಯಾಂಕ್, ಸಾಗಿ ಬಂದ ದಾರಿಯಲ್ಲಿ ತನ್ನ ಹೆಗ್ಗುರುತುಗಳನ್ನು ದಾಖಲಿಸುತ್ತಾ ಮುನ್ನಡೆದಿದೆ. ಬ್ಯಾಂಕಿನ ಒಟ್ಟು ವ್ಯವಹಾರವು 32143 ಕೋಟಿಯನ್ನು ದಾಟಿದೆ. ಬ್ಯಾಂಕಿನ ನಿವ್ವಳ ಆದಾಯವು ರೂ. 267 ಕೋಟಿಗೆ ಏರಿದೆ. ಬ್ಯಾಂಕು ನಿರಂತರವಾಗಿ ತನ್ನ ಶೇರುದಾರರಿಗೆ ಡಿವಿಡೆಂಟ್ ನೀಡುತ್ತಾ ಬಂದಿದ್ದು, 2008-09 ಆರ್ಥಿಕ ವರ್ಷಕ್ಕೆ ಶೇ. 60ರಷ್ಟು ಡಿವಿಡೆಂಟ್ ನೀಡಲು ಪ್ರಸ್ತಾಪಿಸಿದೆ. ಬ್ಯಾಂಕು ಸುಮಾರು 69000 ಶೇರುದಾರನ್ನು ಹೊಂದಿದ್ದು 4947ಕ್ಕೂ ಹೆಚ್ಚಿನ ಸಮರ್ಪಣಾ ಮನೋಭಾವದ ಸಿಬ್ಬಂದಿಗಳಿಂದ 7 ಮಿಲಿಯನ್‌ಗೂ ಹೆಚ್ಚಿನ ಗ್ರಾಹಕರಿಗೆ ಸೇವೆ ನೀಡುತ್ತಲಿದೆ.

ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ನೀಡಲು ಬದ್ಧವಾಗಿರುವ ಬ್ಯಾಂಕ್ ತನ್ನ ಅತ್ಯುನ್ನತ ಗುಣಮಟ್ಟದ ಮೌಲ್ಯಾಧಾರಿತ ತತ್ವಗಳಿಂದ ಪ್ರೇರಿತಗೊಂಡಿದೆ. ‘ಆಧುನಿಕ ತಂತ್ರಜ್ಞಾನ’ ಬ್ಯಾಂಕಿನ ಜೀವನಾಡಿಯಾಗಿದೆ. ‘ಇನ್ಫೋಸಿಸ್’ ಸಂಸ್ಥೆ ರೂಪಿಸಿ ಅಭಿವೃದ್ಧಿಗೊಳಿಸಿದ ಕೋರ್ ಬ್ಯಾಂಕಿಂಗ್ ಸೆಲ್ಯೂಶನ್ ಫಿನ್ಯಾಕಲ್ ತಂತ್ರಜ್ಞಾನದಡಿಯಲ್ಲಿ ಬ್ಯಾಂಕಿನ ಎಲ್ಲಾ 450 ಶಾಖೆಗಳು ಮತ್ತು ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಗ್ರಾಹಕ ಸ್ನೇಹಿ ಯೋಜನೆಗಳಾದ ಮಲ್ಟಿಬ್ರ್ಯಾಂಚ್ ಬ್ಯಾಂಕಿಂಗ್, ಎ.ಟಿ.ಎಂ ಹಾಗೂ ಡೆಬಿಟ್ ಕಾರ್ಡ್ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುತ್ತಲಿದೆ.

ಬ್ಯಾಂಕಿಂಗ್‌ನಲ್ಲಿ ತಂತ್ರಜ್ಞಾನ ಆವಿಷ್ಕಾರ ಉತ್ಕೃಷ್ಟತೆಯನ್ನು ಸಾಧಿಸಿ, ಅಂತರಜಾಲ ಸೇವಾಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಬ್ಯಾಂಕ್ ಮನಿಕ್ಲಿಕ್ ಸೇವಾವಾಹಿನಿಯ ಮೂಲಕ ಬಿಲ್ ಪಾವತಿ, ಹಣ ವರ್ಗಾವಣೆ ಎಸ್.ಇ.ಎಫ್.ಟಿ/ಆರ್.ಟಿ.ಜಿ.ಎಸ್ ಸವಲತ್ತುಗಳೊಟ್ಟಿಗೆ ಎನ್.ಎಮ್.ಎಸ್. ಬ್ಯಾಂಕಿಂಗ್ ಸೌಲಭ್ಯವನ್ನು ನೀಡುತ್ತಲಿದೆ. ಈ ಸೌಲಭ್ಯದಿಂದಾಗಿ ಗ್ರಾಹಕರು ತಮ್ಮ ಕಚೇರಿಯಲ್ಲಿ ಅಥವಾ ಮನೆಯಲ್ಲಿ ಕುಳಿತು ಬ್ಯಾಂಕಿಂಗ್ ವ್ಯವಹಾರವನ್ನು ಮಾಡಬಹುದಾಗಿದೆ.

ಆರ್.ಟಿ.ಜಿ.ಎಸ್ ಅಂತೆಯೇ ಎನ್.ಇ.ಎಫ್.ಟಿ ಸೇವಾ ಸೌಲಭ್ಯಗಳಂತಹ ಆಧುನಿಕ ಸೇವೆಗಳನ್ನು ವಿಸ್ತರಿಸುವಲ್ಲಿ ಬ್ಯಾಂಕ್ ಮುಂಚೂಣಿಯಲ್ಲಿದೆ. ಈ ಸೇವೆಗಳು ಮನಿಕ್ಲಿಕ್ ಅಂತರಜಾಲ ಬ್ಯಾಂಕಿಂಗ್ ಸೇವೆಯೊಂದಿಗೆ ಸಂಕೀರ್ಣಗೊಂಡಿದ್ದು ದಿನದ 24 ಗಂಟೆಗಳು ಹಾಗೂ ವಾರದ 7 ದಿನಗಳಲ್ಲೂ ಲಭ್ಯವಿವೆ.

ಪರಸ್ಥಳದ ಚೆಕ್ಕುಗಳ ತ್ವರಿತ ಸಂಗ್ರಹಕ್ಕಾಗಿ ಕ್ಯಾಶ್‌ಟೆಕ್ ಎನ್ನುವ ಮೌಲ್ಯವರ್ಧಿತ ಸೇವೆಯಿದೆ. ಬಹುಶಾಖಾ ಬ್ಯಾಂಕಿಂಗ್ (MBB) ಎನ್ನುವ ಸೌಲಭ್ಯ ಬ್ಯಾಂಕಿನ ಇನ್ನೊಂದು ಸೊಬಗು. ಈ ಯೋಜನೆಯನ್ವಯ ಮೂಲ ಶಾಖೆಯಿಂದ ಹೊರತಾದ ಅನ್ಯಶಾಖೆ ಗಳಿಂದಲೂ ಸ್ವಂತಕ್ಕಾಗಿ ಸೀಮಿತ ಮೊತ್ತದ ತನಕ ಹಣದ ಹಿಂಪಡೆತವು ಸಾಧ್ಯವಿದೆ.

ಬೆಂಗಳೂರು ಮತ್ತು ಮಂಗಳೂರಿನಲ್ಲಿ ಬ್ಯಾಂಕ್ ನಾಣ್ಯ ವಿತರಣಾ ಯಂತ್ರಗಳನ್ನು ಸ್ಥಾಪಿಸಿದೆ. ಡಿಮ್ಯಾಟ್ ಸೇವೆಗಳು, ಮ್ಯೂಚುವಲ್ ಫಂಡ್ ಹಂಚಿಕೆ, ಜೀವವಿಮಾ ವ್ಯವಹಾರಗಳಂತಹ ಸೇವೆಗಳನ್ನು ಬ್ಯಾಂಕ್ ನೀಡುತ್ತಲಿದೆ.

ಜನಸೇವೆಗೆ ಬದ್ಧವಾಗಿರುವ ಬ್ಯಾಂಕ್ ಆಯ್ದ ನಗರಗಳಲ್ಲಿ BSNL ಟೆಲಿಪೋನ್ ಬಿಲ್‌ಗಳನ್ನು ಹಾಗೂ ಸೆಲ್‌ಒನ್ ಮೊಬೈಲ್ ಬಿಲ್‌ಗಳನ್ನು ಸ್ವೀಕರಿಸುತ್ತದೆ. ಬೆಂಗಳೂರಿನ ಶಾಖೆಗಳು ಬಿ.ಎಂ.ಟಿ.ಸಿ ಪಾಸ್ ಗಳನ್ನು ನೀಡುತ್ತದೆ.

ತ್ವರಿತ ಹಣ ವರ್ಗಾವಣೆಗಾಗಿ ವೆಸ್ಟರ್ನ್ ಯೂನಿಯನ್ ಫೈನಾನ್ಸಿಯಲ್ ಸರ್ವೀಸಸ್ ಲಿಮಿಟೆಡ್ ನೊಂದಿಗೆ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದ್ದು, ಇದರಿಂದಾಗಿ ವಿದೇಶಗಳಿಂದ ಬರುವ ನಿಧಿ ವರ್ಗಾವಣೆಯು ಕ್ಷಿಪ್ರ ಹಾಗೂ ಸುರಕ್ಷಿತವಾಗಿ ಪಾವತಿಗೊಳ್ಳುತ್ತದೆ.

ದೇಸೀಯ ಸತ್ವಗಳೊಂದಿಗೆ ಸದೃಢವಾಗಿರುವ ಬ್ಯಾಂಕ್ ಅಂತಾರಾಷ್ಟ್ರೀಯ ಉದ್ಯಮರಂಗಕ್ಕೂ ಲಗ್ಗೆ ಹಾಕಿದೆ. ವಿದೇಶಿ ವಿನಿಮಯ ವ್ಯವಹಾರಕ್ಕಾಗಿ ಪ್ರಮುಖ ಕೇಂದ್ರಗಳಲ್ಲಿ ಬ್ಯಾಂಕಿನ 14 ನಾಮಾಂಕಿತ ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ.

ಬ್ಯಾಂಕಿನ ಅತ್ಯಾಕರ್ಷಕ ಠೇವಣಿ ಯೋಜನೆಗಳು ಬಹಳ ಜನಪ್ರಿಯವಾಗಿವೆ. ಗ್ರಾಹಕ ಸ್ನೇಹಿ ನಿರಖು ಠೇವಣಿ ಯೋಜನೆ ಅಭ್ಯುದಯ ಕ್ಯಾಶ್ ಸರ್ಟಿಫಿಕೆಟ್, ಕ್ಯುಮಿಲೇಟಿವ್ ಡೆಪಾಸಿಟ್, ಸೌಲಭ್ಯ ಠೇವಣಿ ಯೋಜನೆಗಳು ಬಹು ಆಕರ್ಷಕವಾಗಿವೆ.

ಹಿರಿಯ ನಾಗರಿಕರಿಗೆ ನಿರಖು ಠೇವಣಿ ಮತ್ತು ಅಭ್ಯುದಯ ಕ್ಯಾಶ್ ಸರ್ಟಿಫಿಕೇಟ್ ಠೇವಣಿಗಳ ಮೇಲೆ ಶೇ. 0.75 ವಿಶೇಷ ಹೆಚ್ಚುವರಿ ಬಡ್ಡಿದರ ಲಭ್ಯವಿದೆ.

ಬ್ಯಾಂಕು ಖಾತೆ ರಹಿತ ಜನ ಸಾಮಾನ್ಯರಿಗೆ ಬ್ಯಾಂಕಿಂಗ್ ಪರಿಚಯ ಮಾಡುತ್ತಾ ಅವರನ್ನು ದೇಶದ ಆರ್ಥಿಕತೆಯ ಮುಖ್ಯವಾಹಿನಿಯ ಒಳ ತರುವ ಅಂಗವಾಗಿ ಉಳಿತಾಯ ಖಾತೆ ಸುಗಮವನ್ನು ಅನುಷ್ಠಾನಗೊಳಿಸಿದೆ. ರೂ. 50/-ರ ಕನಿಷ್ಠ ಶಿಲ್ಕು ಮಿತಿಯಲ್ಲಿ ಶ್ರೀ ಸಾಮಾನ್ಯರು ಈ ಖಾತೆಯನ್ನು ತೆರೆಯಬಹುದಾಗಿದೆ.

ಅನಿವಾಸಿ ಭಾರತಿಯರಿಗಾಗಿ ಅನೇಕ ಯೋಜನೆಗಳು ಲಭ್ಯವಿವೆ. ಇವುಗಳಲ್ಲಿ ಅನಿವಾಸಿ (ರೂಪಾಯಿ) ಖಾತೆ (NRE) ವಿದೇಶಿ ಕರೆನ್ಸಿ ಅನಿವಾಸಿ ಖಾತೆ (ಬ್ಯಾಂಕ್) [FCNR(B)] ಮತ್ತು ಅನಿವಾಸಿ (ಸಾಮಾನ್ಯ) ಖಾತೆ (NRO) ಖಾತೆಗಳು ಆಕರ್ಷಕವಾಗಿವೆ. ನಿವಾಸಿ ವಿದೇಶಿ ಕರೆನ್ಸಿ (ದೇಶೀಯ) ಖಾತೆ ಸಹ ವಿದೇಶಗಳಿಂದ ಮರಳಲಿಚ್ಛಿಸುವವರಿಗೆ ವರದಾನವಾಗಿದೆ.

ಬ್ಯಾಂಕು ನಿರ್ದಿಷ್ಟ ಉದ್ದೇಶಕ್ಕಾಗಿ ಇರುವ ನಿಯೋಜಿತ ಸಾಲ ಸೌಲಭ್ಯಗಳ ಸರಮಾಲೆಯನ್ನೇ ಕನಿಷ್ಠ ಸಾಧ್ಯ ಬಡ್ಡಿದರಗಳ ಮೇಲೆ ಶ್ರೀ ಸಾಮಾನ್ಯರಿಗಾಗಿ ರೂಪಿಸಿ ಅನುಷ್ಠಾನಿಸಿದೆ. ಈ ಕೆಳಕಂಡ ಯೋಜನೆಗಳು ಮುಖ್ಯವಾಗಿವೆ.

1. ಕೆಬಿಎಲ್ ಕಾರ್ ಪೈನಾನ್ಸ್

2. ಕೆಬಿಎಲ್ ಈಝಿರೈಡ್ -ದ್ವಿಚಕ್ರವಾಹನ ಖರೀದಿಗಾಗಿ

3. ಕೆಬಿಎಲ್ ವರ್ತಕ್ – ವರ್ತಕರಿಗಾಗಿ

4. ಕೆಬಿಎಲ್ ವಾಹನ ಮಿತ್ರ- ಸಾರ್ವಜನಿಕ ಸಾಗಾಟ ವಾಹನ ಖರೀದಿಗಾಗಿ

5. ಕೆಬಿಎಲ್ ಸಾಲ ಯೋಜನೆ – ವೇತನದಾರರಿಗಾಗಿ

6. ಕೆಬಿಎಲ್ ಉದ್ಯೋಗ ಮಿತ್ರ – ವೃತ್ತಿಪರರಿಗಾಗಿ

7. ಕೆಬಿಎಲ್ ವಿದ್ಯಾನಿಧಿ – ವಿದ್ಯಾರ್ಜನೆ ಅಗತ್ಯಕ್ಕಾಗಿ

8. ಅಪ್ನಾಘರ್ – ಗೃಹಸಾಲ ಯೋಜನೆ

9. ಪುನಶ್ಚೇತನ – ಕೃಷಿಕರಿಗಾಗಿ

10. ಕೆಬಿಎಲ್ ರವಿಕಿರಣ್ – ಸೋಲಾರ ಬೆಳಕು ಮತ್ತು ಹೀಟರ್ ಖರೀದಿಗಾಗಿ

11. ಕೆಬಿಎಲ್ ಕೃಷಿಕ್ ಸಾರಥಿ – ತೋಟಗಾರಿಕಾ ಯಾಂತ್ರೀಕರಣಕ್ಕಾಗಿ

12. ಕೆಬಿಎಲ್ ಕೃಷಿಕ್ ಸಿಂಚನ – ನಿರಾವರಿಗಾಗಿ

13. ಕೆಬಿಎಲ್ ಜೈವಿಕ ಮಿತ್ರ – ಸಾವಯವ ಪೂರೈಕೆಗಳ ವಾಣಿಜ್ಯ ಉತ್ಪನ್ನ ಘಟಕಕ್ಕಾಗಿ

14. ಕೆಬಿಎಲ್ ಕ್ರಿಷಿಕ್ ಪುಷ್ಪ – ವಾಣಿಜ್ಯ ಪುಷ್ಪೋದ್ಯಮಕ್ಕಾಗಿ

15. ಕೆಬಿಎಲ್ ಸಸ್ಯಧಾಮ್ – ಹಸಿರು ಮನೆ ನಿರ್ಮಾಣಕ್ಕಾಗಿ

16. ಕೆಬಿಎಲ್ ಕೃಷಿಕ್ ಅಂಕುರ್ – ಟಿಶ್ಯೂಕಲ್ಚರ್ ಪ್ರಯೊಗಾಲಯಕ್ಕಾಗಿ

17. ಕೃಷಿಕ್ ಭಂಡಾರ – ಶೀತಲಗೃಹ ಮತ್ತು ದಾಸ್ತಾನು ಕೊಠಡಿಗಾಗಿ

18. ಗೋಲ್ಡ್ ಕಾರ್ಡ್ – ರಫ್ತುದಾರರಿಗಾಗಿ

ಬ್ಯಾಂಕಿನ ಪ್ರಸ್ತುತ ಆರ್ಥಿಕ ವರ್ಷದ ಗುರಿ (2009-2010) ಒಟ್ಟು ವ್ಯವಹಾರ 325,000 ಕೋಟಿ (ಠೇವಣಿ ರೂ. 24,000 ಕೋಟಿ ಮುಂಗಡ ರೂ. 15,000 ಕೋಟಿ)

ಈ ಎಲ್ಲಾ ಬೃಹತ್ ಸಾಧನೆಗಳು ಅಡಿಗರಂತಹ ಧೀಮಂತ ವ್ಯಕ್ತಿಯ ಚಿಂತನೆಯ ಫಲಗಳು ಎಂದು ಈಗಿನ ನಾನ್ ಎಕ್ಸಿಕ್ಯುಟಿವ್ ಚೇರ್‌ಮನ್ ಶ್ರೀ ಅನಂತಕೃಷ್ಣ ಅವರು ಹಾಗೂ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಳಾದ  ಶ್ರೀ ಪಿ. ಜಯರಾಮ ಭಟ್ ಅವರು ಸ್ಮರಿಸುತ್ತಾರೆ.

ಗ್ರಂಥ ಋಣ

1. ಅಡಿಗ ಅರುವತ್ತು ವಿವಿಧ ಲೇಖಕರಿಂದ

2. ಅಭ್ಯುದಯ ಕರ್ಣಾಟಕ ಬ್ಯಾಂಕ್ ಹೌಸ್ ಮ್ಯಾಗಝಿನ

3. ಪ್ರವರ್ಧಮಾನ ಕರ್ಣಾಟಕ ಬ್ಯಾಂಕ್ ಪ್ಲಾಟಿನಂ ಜ್ಯುಬಿಲಿಯ ಸ್ಮರಣ ಸಂಚಿಕೆ.

ಉಪಕಾರ ಸ್ಮರಣೆ :

ಡಾ. ನಾ. ದಾಮೋದರ ಶೆಟ್ಟಿ, ಡಾ. ನರಸಿಂಹ ಮೂರ್ತಿ

ಮಾಹಿತಿ ನೀಡಿದ ಮಹನೀಯರು:

ಶ್ರೀ ಬಿ.ಕೆ. ರಾಮಕೃಷ್ಣ ರಾವ್ (ನಿವೃತ್ತ ಡಿ.ಜಿ.ಎಮ್)

ಶ್ರೀ ಜಗದೀಶ್ ಭಟ್ ಚೀಫ್ ಮ್ಯಾನೇಜರ್,

ಶ್ರೀ ಬಿ. ರಾಮಚಂದ್ರ ಆಚಾರ್ (ನಿವೃತ್ತ ಸೀನಿಯರ್ ಮ್ಯಾನೇಜರ್)

ಶ್ರೀ  ಕೆ.ವಿ. ಸೀತಾರಾಮ ಸೀನಿಯರ್ ಮ್ಯಾನೇಜರ್

***